‘ಮಕ್ಕಳು ಅಮೂಲ್ಯ, ಆದರೆ ಗಂಡುಮಕ್ಕಳು ಆವಶ್ಯಕ’
ಎಂಬತ್ತೈದು ಕೋಟಿಗಿಂತಲೂ ಹೆಚ್ಚು ಜನರು ಮತ್ತು 1,000ಕ್ಕೆ 31ರಂತಿರುವ ಜನನ ಸಂಖ್ಯೆಯಿರುವ ಭಾರತ ಪ್ರತಿ ವರ್ಷ 2 ಕೋಟಿ 60 ಲಕ್ಷ ಹೊಸ ಶಿಶುಗಳು—ಕೆನಡದ ಜನಸಂಖ್ಯೆಯಷ್ಟು—ಹುಟ್ಟುವುದನ್ನು ನೋಡುತ್ತದೆ. ಹೀಗಿರುವಾಗ, ಸರಕಾರದ ಯೋಜನೆಗಳಲ್ಲಿ ಅತ್ಯಂತ ತುರ್ತಿನದ್ದು, ಜನಸಂಖ್ಯೆಯ ಈ ಶೀಘ್ರ ವೃದ್ಧಿಯನ್ನು ನಿಯಂತ್ರಿಸುವುದೇ ಆಗಿದೆ ಎಂಬುದು ಆಶ್ಚರ್ಯದ ಸಂಗತಿಯಲ್ಲ. ಅದು ಎಷ್ಟು ಸಾಫಲ್ಯ ಹೊಂದಿದೆ? ಅದು ಎದುರಿಸುವ ತಡೆಗಳಲ್ಲಿ ಕೆಲವು ಯಾವುವು?
“ಇಪ್ಪತ್ತಕ್ಕೆ ಮೊದಲು, ಬೇಡ! ಮೂವತ್ತರ ಬಳಿಕ, ಬೇಡವೇ ಬೇಡ! ಕೇವಲ ಇಬ್ಬರು ಮಕ್ಕಳು—ಒಳ್ಳೆಯದು!”—ಈ ಬುದ್ಧಿವಾದ, ಬಾಂಬೆಯ ಕುಟುಂಬ ಯೋಜನಾ ಪ್ರಧಾನ ಕಾರ್ಯಾಲಯದ ಮುನ್ನಂಗಳದ ಎರಡು ಪಕ್ಕಗಳಲ್ಲಿರುವ ಕಳಕಳಿಸುವ ಜಾಹೀರಾತು ಚೀಟಿಗಳಲ್ಲಿ ಒಂದರಲ್ಲಿದೆ. ಇನ್ನೊಂದು, ಐದು ಮಕ್ಕಳಿಂದ ಸುತ್ತಲ್ಪಟ್ಟಿರುವ ಪೀಡಿತಳಾಗಿರುವ ತಾಯಿಯನ್ನು ಚಿತ್ರಿಸುತ್ತದೆ. “ಮುಂದಕ್ಕೆ ವಿಷಾದಿಸಬೇಡಿ!” ಎಂದು ಅದು ಎಚ್ಚರಿಸುತ್ತದೆ. ಎದ್ದು ತೋರಿಬರುವ ಸಂದೇಶ: ಒಂದು ಕುಟುಂಬಕ್ಕೆ ಇಬ್ಬರು ಮಕ್ಕಳು ಸಾಕು. ಆದರೆ ಸರಕಾರದ, ಪ್ರತಿ ಕುಟುಂಬಕ್ಕೆ ಇಬ್ಬರು ಮಕ್ಕಳ ಈ ಶಿಫಾರಸನ್ನು ಜನರು ಅಂಗೀಕರಿಸುವಂತೆ ಮತ್ತು ಅದರಂತೆ ವರ್ತಿಸುವಂತೆ ಮಾಡುವುದು ಸುಲಭವಲ್ಲ.
“ಒಬ್ಬ ಪುರುಷನ ಸಂತೋಷವು ಅವನಿಗಿರುವ ಮಕ್ಕಳ ಸಂಖ್ಯೆಗೆ ಅನುಗುಣವಾಗಿದೆ ಎಂದು ಹಿಂದುಗಳು ಅಭಿಪ್ರಯಿಸುತ್ತಾರೆ. ಹಿಂದುಗಳಲ್ಲಿ, ಮಕ್ಕಳು ಮನೆಗೆ ಆಶೀರ್ವಾದವೆಂದೆಣಿಸಲಾಗುತ್ತದೆ. ಒಬ್ಬ ಮನುಷ್ಯನ ಕುಟುಂಬ ಎಷ್ಟೇ ಸಂಖ್ಯೆಯದ್ದಾಗಿರಲಿ, ಅದು ಹೆಚ್ಚುವಂತೆ ಅವನು ಪ್ರಾರ್ಥಿಸುವುದನ್ನು ನಿಲ್ಲಿಸುವುದಿಲ್ಲ,” ಎನ್ನುತ್ತದೆ, ಹಿಂದು ಮ್ಯಾನರ್ಸ್, ಕಸ್ಟಮ್ಸ್ ಆ್ಯಂಡ್ ಸೆರಿಮನಿಸ್ ಎಂಬ ಪುಸ್ತಕ. ಆದರೆ ಧಾರ್ಮಿಕ ದೃಷ್ಟಿಯಲ್ಲಿ ಕುಟುಂಬದ ಪಾಲಕನಿಗೆ ಗಂಡುಮಗು ಹೆಚ್ಚು ಮೌಲ್ಯದ್ದು. “ಒಬ್ಬನ ಶವಸಂಸ್ಕಾರದ ಕೊನೆಯ ಕರ್ತವ್ಯಗಳನ್ನು ನಡೆಸಲು ಒಬ್ಬ ಮಗನನ್ನೋ ಮೊಮ್ಮಗನನ್ನೋ ಬಿಟ್ಟುಹೋಗದಿರುವುದಕ್ಕೆ ಸಮಾನವಾದ ದುರದೃಷ್ಟವೇ ಇಲ್ಲ. ಇಂಥ ಇಲ್ಲಮೆಯು ಮರಣಾನಂತರ ಪರಮಸುಖ ನಿವಾಸಕ್ಕೆ ಪ್ರವೇಶವನ್ನೇ ತಡೆಯುವ ಸಾಮರ್ಥ್ಯವುಳ್ಳದ್ದೆಂದು ಎಣಿಸಲಾಗುತ್ತದೆ,” ಎಂದು ಆ ಪುಸ್ತಕ ಮುಂದುವರಿಸಿ ಹೇಳುತ್ತದೆ.
ಪೂರ್ವಿಕರ ಆರಾಧನೆ ಯಾ ಶ್ರಾದ್ಧ ಸಂಸ್ಕಾರವನ್ನು ಪೂರೈಸಲು ಸಹ ಗಂಡುಮಕ್ಕಳು ಅಗತ್ಯ. ಎ. ಎಲ್. ಬಷಾಮ್, ಎಂಬವರು ದ ವಂಡರ್ ದ್ಯಾಟ್ ವಾಸ್ ಇಂಡಿಯದಲ್ಲಿ ಬರೆಯುವುದು: “ಹಿಂದೂ ಭಾರತದ ತೀವ್ರ ಕುಟುಂಬ ಮನೋಭಾವವು ಗಂಡುಮಕ್ಕಳನ್ನು ಪಡೆಯುವ ಅಪೇಕ್ಷೆಯನ್ನು ವೃದ್ಧಿಸಿತು. ಅವುಗಳಿಲ್ಲದಿರುವಲ್ಲಿ ಸಂತತಿಯೇ ಕಣ್ಮರೆಯಾಗಲಿತ್ತು.”
ಈ ಧಾರ್ಮಿಕ ನಂಬಿಕೆಗಳೊಂದಿಗೆ, ಪುತ್ರರಿರಬೇಕೆಂಬ ಅಪೇಕ್ಷೆಯನ್ನು ಪ್ರಭಾವಿಸಿದ ಒಂದು ಸಾಂಸ್ಕೃತಿಕ ಸಂಗತಿಯು ಭಾರತದ ಕೂಡುಕುಟುಂಬ ಯಾ ವಿಸ್ತರಿಸಲ್ಪಟ್ಟ ಕುಟುಂಬ ವ್ಯವಸ್ಥೆಯೆ. ಇದರಲ್ಲಿ ವೈವಾಹಿತ ಪುತ್ರರು ತಮ್ಮ ತಂದೆತಾಯಿಗಳೊಂದಿಗೆ ಜೀವಿಸುತ್ತಾ ಮುಂದುವರಿಯುತ್ತಾರೆ. “ಹೆಣ್ಣುಮಕ್ಕಳು ಮದುವೆಯಾಗಿ ಅವರ ಅತ್ತೆ ಮಾವನ ಮನೆಗೆ ಹೋಗಿ ಜೀವಿಸುತ್ತಾರೆ, ಆದರೆ ಗಂಡು ಮಕ್ಕಳು ತಮ್ಮ ಹೆತ್ತವರೊಂದಿಗೆ ಮನೆಯಲ್ಲೇ ಉಳಿಯುತ್ತಾರೆ; ಮತ್ತು ತಮ್ಮ ವೃದ್ಧಾಪ್ಯದಲ್ಲಿ ಗಂಡುಮಕ್ಕಳು ತಮ್ಮನ್ನು ನೋಡಿಕೊಳ್ಳುವರೆಂದು ಹೆತ್ತವರು ಹಾರೈಸುತ್ತಾರೆ,” ಎಂದು ಬಾಂಬೆ ಮ್ಯುನಿಸಿಪಲ್ ಕಾರ್ಪೊರೇಷನ್ ಹೆಲ್ತ್ ಆ್ಯಂಡ್ ಫ್ಯಾಮಿಲಿ ವೆಲ್ಫ್ಯಾರ್ ಡಿವಿಷನಿನ ಡಾ. ಲಲಿತ ಎಸ್. ಚೋಪ್ರ ವಿವರಿಸುತ್ತಾರೆ. “ಇದೇ ಅವರ ಭದ್ರತೆ. ಇಬ್ಬರು ಗಂಡು ಮಕ್ಕಳಿದ್ದರೆ ಹೆತ್ತವರಿಗೆ ಸುಭದ್ರ ಅನಿಸಿಕೆಯಿರುತ್ತದೆ. ಹಾಗಾದರೆ ನ್ಯಾಯಸಮ್ಮತವಾಗಿ, ಒಂದು ವಿವಾಹಜೊತೆ, ಸೂಚಿಸಲ್ಪಟ್ಟಿರುವ ಇಬ್ಬರು ಮಕ್ಕಳ ಮಿತಿಯನ್ನು ತಲುಪಿರುವಲ್ಲಿ ಮತ್ತು ಇಬ್ಬರೂ ಹೆಣ್ಣು ಮಕ್ಕಳಾಗಿರುವಲ್ಲಿ, ಅವರು ಗಂಡು ಮಗುವಿಗಾಗಿ ಪ್ರಯತ್ನಿಸುವ ಒಳ್ಳೆಯ ಸಾಧ್ಯತೆಯಿದೆ.”
ಊಹಾತ್ಮಕವಾಗಿ, ಎಲ್ಲ ಮಕ್ಕಳೂ ದೇವದತ್ತವೆಂದು ವೀಕ್ಷಿಸಲ್ಪಡುವುದಾದರೂ, ದಿನದಿನದ ಜೀವನ ವಾಸ್ತವಿಕತೆಯು ಇದಕ್ಕೆ ವ್ಯತಿರಿಕ್ತವಾದುದನ್ನು ವಿಧಿಸುತ್ತದೆ. “ಹುಡುಗಿಯರನ್ನು ವೈದ್ಯಕೀಯವಾಗಿ ಅಸಡ್ಡೆ ಮಾಡುವುದು ಸುವ್ಯಕ್ತ. ಅವರು ಬದುಕಿ ಉಳಿಯುವುದು ಕುಟುಂಬದ ಪಾರಾಗುವಿಕೆಗೆ ನಿಜವಾಗಿ ಪ್ರಾಮುಖ್ಯವಲ್ಲ ಎಂದೆಣಿಸಲ್ಪಡುತ್ತದೆ,” ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡುತ್ತದೆ. ಬಾಂಬೆಯಲ್ಲಿ ನಡೆದ ಒಂದು ಸಮೀಕ್ಷೆಯನ್ನು ಉದ್ಧರಿಸಿ ಆ ವರದಿ ತಿಳಿಸುವುದೇನಂದರೆ ಲಿಂಗ ನಿರ್ಧಾರ ಪರೀಕ್ಷೆಯ ತರುವಾಯ ಗರ್ಭಪಾತ ಮಾಡಲ್ಪಟ್ಟ 8,000 ಭ್ರೂಣಗಳಲ್ಲಿ 7,999 ಭ್ರೂಣಗಳು ಹೆಣ್ಣು ಮಕ್ಕಳದ್ದಾಗಿದ್ದುವು.
ಪ್ರಯಾಸದ ಹೋರಾಟ
“ಒಂದು ಕುಟುಂಬದಲ್ಲಿ ಎಷ್ಟು ಮಕ್ಕಳಿರಬೇಕು ಮತ್ತು ಕುಟುಂಬ ಎಷ್ಟು ದೊಡ್ಡದಿರಬೇಕು ಎಂದು ಸಾಮಾನ್ಯವಾಗಿ ನಿರ್ಣಯಿಸುವವನು ಗಂಡಸು” ಎಂದು ಬಾಂಬೆ ಮ್ಯುನಿಸಿಪಲ್ ಕಾರ್ಪೊರೇಷನಿನ ನಿರ್ವಾಹಕ ಆರೋಗ್ಯಾಧಿಕಾರಿ ಡಾ. ಎಸ್. ಎಸ್. ಸಬ್ನಿಸ್, ಒಂದು ಭೇಟಿಯಲ್ಲಿ ವಿವರಿಸುತ್ತಾರೆ. ಒಬ್ಬ ಸ್ತ್ರೀ, ತನಗೆ ಸ್ವಲ್ಪ ಸಮಯ ಬಿಟ್ಟು ಮಕ್ಕಳಾಗಬೇಕು ಯಾ ತನ್ನ ಕುಟುಂಬವನ್ನು ಸಣ್ಣದಾಗಿರಿಸಬೇಕು ಎಂದು ಬಯಸಿದರೂ, ಇದಕ್ಕೆ ವಿರೋಧವನ್ನು ಪ್ರದರ್ಶಿಸುವ ಗಂಡನಿಂದ ಅವಳು ಒತ್ತಡಕ್ಕೊಳಗಾಗುತ್ತಾಳೆ. “ಈ ಕಾರಣದಿಂದಲೇ ನಾವು ಪುರುಷ-ಸ್ತ್ರೀ ಇರುವ ತಂಡಗಳನ್ನು ಗಲೀಜು ಗಲ್ಲಿಗಳಲ್ಲಿರುವ ಮನೆಗಳಿಗೆ, ಆ ಪುರುಷ ಆರೋಗ್ಯ ಸೇವಕನು ಮನೆಯ ತಂದೆಯೊಂದಿಗೆ ಮಾತನಾಡಿ, ಅವನು ಕುಟುಂಬದ ಗಾತ್ರವನ್ನು ನಿಯಂತ್ರಿಸುವಂತೆ ಪ್ರೋತ್ಸಾಹಿಸಿ, ಸ್ವಲ್ಪ ಮಕ್ಕಳಿರುವಲ್ಲಿ ಹೆಚ್ಚು ಉತ್ತಮ ಆರೈಕೆ ನೀಡಲು ಸಾಧ್ಯವಾಗುತ್ತದೆಂದು ಅವನು ನೋಡುವಂತೆ ಸಹಾಯ ಮಾಡುವ ನಿರೀಕ್ಷೆಯಿಂದ ಕಳುಹಿಸುತ್ತೇವೆ.” ಆದರೆ ನಾವು ನೋಡಿರುವಂತೆ ತಡೆಗಳು ಬಹಳ.
“ಹೆಚ್ಚು ಬಡವರಾಗಿರುವ ಜನರ ಮಧ್ಯೆ, ಜೀವಿಸುವ ಕೆಳಮಟ್ಟದ ಪರಿಸ್ಥಿತಿಗಳ ಕಾರಣ ಶಿಶುಮರಣದ ಸಂಖ್ಯೆ ಉನ್ನತವಾಗಿದೆ. ಮತ್ತು ಕೆಲವು ಮಕ್ಕಳು ಸಾಯುವರೆಂದು ಅವರು ತಿಳಿದಿರುವುದರಿಂದ ಹೆಚ್ಚು ಮಕ್ಕಳನ್ನು ಪಡೆಯುವ ಅಪೇಕ್ಷೆ ನಿಶ್ಚಯವಾಗಿಯೂ ಅವರಲ್ಲಿದೆ,” ಎನ್ನುತ್ತಾರೆ, ಡಾ. ಸಬ್ನಿಸ್. ಆದರೆ ಮಕ್ಕಳನ್ನು ಪರಾಮರಿಸಲು ಮಾಡುವ ಪ್ರಯತ್ನ ಕೊಂಚವೇ. ಅವರು ಒಂಟಿಗರಾಗಿ, ಭಿಕ್ಷೆ ಬೇಡುತ್ತಾ ಯಾ ಪ್ರಾಯಶಃ ಕಸಗುಪ್ಪೆಯಲ್ಲಿ ಆಹಾರವನ್ನು ಹುಡುಕುತ್ತಾ ಅಲೆದಾಡುತ್ತಾರೆ. ಮತ್ತು ಅವರ ಹೆತ್ತವರೊ? “ತಮ್ಮ ಮಕ್ಕಳು ಎಲ್ಲಿದ್ದಾರೆಂದು ಅವರಿಗೆ ತಿಳಿದಿಲ್ಲ,” ಎಂದು ಡಾ. ಸಬ್ನಿಸ್ ಪ್ರಲಾಪಿಸುತ್ತಾರೆ.
ಭಾರತದಲ್ಲಿ ಜಾಹೀರಾತುಗಳು ಅನೇಕ ವೇಳೆ, ಒಳ್ಳೆಯದಾಗಿ ಪರಾಮರಿಸಲ್ಪಟ್ಟವರೆಂದು ಸ್ಪಷ್ಟವಾಗಿಗಿ ಕಾಣುವ, ಸಾಮಾನ್ಯವಾಗಿ ಒಂದು ಗಂಡು, ಒಂದು ಹೆಣ್ಣು, ಹೀಗೆ ಎರಡು ಮಕ್ಕಳಿರುವ ಅನುಕೂಲತೆಯವರೆಂದು ತೋರಿಬರುವ ದಂಪತಿಗಳು ಜೀವನದಲ್ಲಿ ಆನಂದಿಸುವುದನ್ನು ಚಿತ್ರಿಸುತ್ತವೆ. ಸಮಾಜದ ಈ ಭಾಗ—ಮಧ್ಯಮ ವರ್ಗ—ದಲ್ಲಿ ಈ ಇಬ್ಬರು ಮಕ್ಕಳ ವಿಚಾರವನ್ನು ಸಾಮಾನ್ಯವಾಗಿ ಒಳ್ಳೇದಾಗಿ ಅಂಗೀಕರಿಸುತ್ತದೆ. ಆದರೆ ಈ ವಿಚಾರ ಬಡವರ ಮನಸ್ಸಿನಿಂದ ಬಲು ದೂರದಲ್ಲಿದೆ. ಅವರ ತರ್ಕವೇನಂದರೆ, ‘ನಮ್ಮ ಹೆತ್ತವರಿಗೆ ಯಾ ಅಜ್ಜಅಜಿಗ್ಜೆ 10 ಯಾ 12 ಮಕ್ಕಳಿದ್ದುದಾದರೆ, ನಮಗೆ ಏಕಿರಬಾರದು? ನಮಗೆ ಏಕೆ ಅದು ಎರಡಕ್ಕೆ ಸೀಮಿತವಾಗಿರಬೇಕು?’ ಭಾರತದ ಈ ಅಧಿಕಾಂಶವಾಗಿರುವ ಬಡಜನರ ಮಧ್ಯೆ, ಜನಸಂಖ್ಯಾ ನಿಯಂತ್ರಣದ ವಿರುದ್ಧ ನಡೆಯುವ ಯುದ್ಧ ಪ್ರಯಾಸದ್ದಾಗಿದೆ. ಡಾ. ಚೋಪ್ರ ಜ್ಞಾಪಿಸಿಕೊಳ್ಳುವುದು: “ಜನಸಂಖ್ಯೆ ಈಗ ಎಳೆಯದು ಮತ್ತು ಮಕ್ಕಳನ್ನು ಪಡೆಯುವ ವಯಸ್ಸಿನದ್ದು. ಇದು ಸೋಲುವ ಹೋರಾಟವೆಂದು ಕಾಣುತ್ತದೆ. ನಮ್ಮ ಮುಂದೆ ಭಾರೀ ಕೆಲಸವಿದೆ.” (g91 11/8)