ಏಕೆ “ಪ್ರಾಪಗ್ಯಾಂಡ”?
ಒಂದು ಸಾವಿರದ ಆರ್ನೂರ ಇಪ್ಪತ್ತೆರಡರಲ್ಲಿ, XVನೆಯ ಪೋಪ್ ಗ್ರೆಗರಿ, ರೋಮನ್ ಕ್ಯಾತೊಲಿಕ್ ಚರ್ಚಿನ ಮಿಶನೆರಿಗಳ ಮೇಲ್ವಿಚಾರಣೆಗಾಗಿ 13 ಕಾರ್ಡಿನಲರು, 2 ಪ್ರೆಲೆಟ್ ಗುರುಗಳು, ಮತ್ತು ಒಬ್ಬ ಕಾರ್ಯದರ್ಶಿಯಿದ್ದ ಒಂದು ಸಭೆ ಯಾ ಸಮಿತಿಯನ್ನು ಸ್ಥಾಪಿಸಿದನು. ಅವನು ಅದನ್ನು ಕಾಂಗ್ರೆಗೇಟೀಓ ಡೆ ಪ್ರೊಪಗಾಂಡ ಫೀಡೆ—ನಂಬಿಕೆ ಪ್ರಚಾರ ಸಭೆ—ಅಥವಾ ಚುಟುಕಾಗಿ, ಪ್ರಾಪಗ್ಯಾಂಡ ಎಂದು ಕರೆದನು. ಸಮಯ ಹೋದಂತೆ ಈ ಪದಕ್ಕೆ, ಮತಾಂತರದ ಉದ್ದೇಶದಿಂದ ವಿಚಾರ ಯಾ ನಂಬಿಕೆಗಳನ್ನು ಹರಡಿಸುವ ಯಾವುದೇ ಪ್ರಯತ್ನ ಎಂಬ ಅರ್ಥ ಬಂತು.
ಇಂದು, ಈ “ಪ್ರಾಪಗ್ಯಾಂಡ”ವನ್ನು ಅನೇಕ ವೇಳೆ, ನಿಜತ್ವಗಳ ಕೊಂಕಿಸುವಿಕೆಯೊಂದಿಗೆ, ಉದಾಹರಣೆಗೆ, ಯುದ್ಧ ಸಮಯದಲ್ಲಾಗುವಂತೆ, ಜನರ ಮನಗಳನ್ನು ವಂಚನೆಯಿಂದ ಪ್ರಭಾವಿಸುವುದರೊಂದಿಗೆ ಜೊತೆ ಸೇರಿಸಲಾಗುತ್ತದೆ. ಆದರೆ ಕೆಲವು ಪಂಡಿತರು, ಜಾಹೀರಾತುಗಳಲ್ಲಿ ಅತ್ಯುತ್ತಮವಾದುದನ್ನು ಸಹ, ವಿಶೇಷವಾಗಿ ಅದರಲ್ಲಿ ಮನವೊಪ್ಪಿಸುವ ವಿಷಯ ಸೇರಿರುವಲ್ಲಿ, ಪ್ರಾಪಗ್ಯಾಂಡ ಎಂದು ವರ್ಣಿಸಬಹುದು ಎಂದು ಅಭಿಪ್ರಯಿಸುತ್ತಾರೆ. ದ ವರ್ಲ್ಡ್ ಬುಕ್ ಎನ್‌ಸೈಕ್ಲೊಪೀಡಿಯ ಹೇಳುವುದು: “ಪ್ರಜಾಪ್ರಭುತ್ವ ಸಮಾಜಗಳಲ್ಲಿ ಶಿಕ್ಷಕರು ಜನರಿಗೆ ಆಲೋಚಿಸುವುದು ಹೇಗೆಂದು ಕಲಿಸುತ್ತಾರೆ, ಆದರೆ ಪ್ರಾಪಗ್ಯಾಂಡ ಮಾಡುವವರು ಅವರು ಏನು ಯೋಚಿಸಬೇಕೆಂದು ಹೇಳುತ್ತಾರೆ.” (g91 11/8)