ಯುವ ಜನರು ಪ್ರಶ್ನಿಸುವುದು . . .
ಜೂಜಾಡುವುದು ನಿಜವಾಗಿಯೂ ಅಷ್ಟು ಕೆಟ್ಟದ್ದೆ?
ಹನ್ನೆರಡು ವರ್ಷ ಪ್ರಾಯದ ಆ್ಯಂಡ್ರು ಮತ್ತು ಹತ್ತು ವರ್ಷ ವಯಸ್ಸಿನ ಜೂಲ್ಯನ್ ಹೇಗೊ ಕೊನೆಗೆ ಅವರ ತಂದೆತಾಯಿಗಳ ನೋಟಕ್ಕೆ ಮರೆಯಾದರು. ಅವರ ಕುಟುಂಬ ಒಂದು ಜಹಜು ಪ್ರಯಾಣವನ್ನು ಕೈಕೊಂಡಿತ್ತು, ಮತ್ತು ಈ ಹುಡುಗರು ಜಹಜಿನಲ್ಲಿದ್ದ ವಿವಿಧ ಜೂಜು ಯಂತ್ರಗಳಿಂದ ಮೋಹಿತರಾಗಿದ್ದರು. ಅವರ ಕುತೂಹಲತೆಯನ್ನು ಗಮನಿಸಿದ ಒಬ್ಬ ಆಟಗಾರನು, ಅವರೇ ಆಟವಾಡುವಂತೆ, ಅವರಲ್ಲಿ ಒಬ್ಬೊಬ್ಬನಿಗೆ ಒಂದೊಂದು ನಾಣ್ಯವನ್ನು ಕೊಟ್ಟನು. ಸಮಸ್ಯೆಯೊ? ಅವರ ಹೆತ್ತವರು ಆ ಯಂತ್ರಗಳ ಬಳಿ ಹೋಗುವುದನ್ನು ನಿಷೇಧಿಸಿದ್ದರು.
ಆದರೂ, ಆ್ಯಂಡ್ರು ಮತ್ತು ಜೂಲ್ಯನ್ ಈ ಗಂಡಾಂತರವನ್ನು ಎದುರಿಸಲು ನಿರ್ಣಯಿಸಿದರು. ಅವರ ಹೆತ್ತವರ ಎಚ್ಚರಿಕೆ ಅವರ ಕಿವಿಗಳಲ್ಲಿ ಘಣಘಣಿಸುತ್ತಿರುವಾಗಲೆ ಅವರು ಆ ಯಂತ್ರದಲ್ಲಿ ಜೂಜಾಡಿ ಇಮ್ಮಡಿ ಹಣ ಗಳಿಸಿದರು! ಆ ಮೇಲೆ ಪುನ: ಆಡಿದರು. ಈ ಬಾರಿ, ತಾವು ಗೆಲ್ಲುತ್ತಿದ್ದ ಮತ್ತು ಹೊರಗೆ ಸುರಿಯುತ್ತಿದ್ದ ಹಣದ ಮೊತ್ತವನ್ನು ಕಂಡು ಅವರು ಬೆರಗಾದರು! ‘ಇದು ಹೇಗೆ ಅಷ್ಟು ಅಪಾಯಕಾರಿಯಾಗಿದ್ದೀತು? ಹಣ ಮಾಡುವುದು ಎಷ್ಟು ಸುಲಭ! ಜೂಜಾಟ ನಿಜವಾಗಿಯೂ ಅಷ್ಟು ಕೆಟ್ಟದ್ದೆ?’ ಎಂದು ಅವರು ಯೋಚಿಸಿದರು.
ಜೂಜಾಟ ಸಾಮಾನ್ಯವಾಗಿರುವ ದೇಶಗಳ ಇತರ ಯುವಕರಂತೆ, ಆ್ಯಂಡ್ರು ಮತ್ತು ಜೂಲ್ಯನ್ ಸಹ ಇದರಲ್ಲಿ ಹಾನಿಯಿದೆಯೆಂದು ತಿಳಿಯಲಿಲ್ಲ. ಕೆಲವು ವಯಸ್ಕರೇ ಈ ವಿಷಯದಲ್ಲಿ ಇಟ್ಟಿರುವಂಥ ಮಾದರಿಯನ್ನು ಪರಿಗಣಿಸುವಲ್ಲಿ ಇದನ್ನು ಗ್ರಹಿಸುವುದು ಸುಲಭ. ಅನೇಕರು ಜೂಜಾಡುವುದು ಮಾತ್ರವಲ್ಲ, ತಮ್ಮ ಚಟವನ್ನು ನ್ಯಾಯೀಕರಿಸಲು ಯೋಗ್ಯವೆಂದು ಕಾಣುವ ನೆವಗಳನ್ನೂ ಕೊಡುತ್ತಾರೆ. ಉದಾಹರಣೆಗೆ, ಅವರು ಲಾಟರಿಗಳಿಂದ ಕೆಲವು ಪ್ರಶಂಸಾರ್ಹ ಕಾರ್ಯಗಳಿಗೆ ಕೊಡಲ್ಪಡುವ ಸಹಾಯಗಳನ್ನು ತೋರಿಸಿ, ಜೂಜಾಟ ತುಂಬ ಒಳ್ಳೆಯದನ್ನು ಮಾಡುತ್ತದೆಂದು ಹೇಳುವರು. (ಒಬ್ಬ ದೊಡ್ಡ ಮಾದಕೌಷದದ ಕಳ್ಳ ವ್ಯಾಪಾರಿ ಧರ್ಮಕಾರ್ಯಗಳಿಗೆ ಕೊಡುವ ದಾನ ಅಮಲೌಷಧ ವ್ಯಾಪಾರವನ್ನು ನ್ಯಾಯೀಕರಿಸುತ್ತದೆ ಎಂದು ಹೇಳುವುದಕ್ಕಿಂತ ಹೆಚ್ಚಿನ ಜ್ಞಾನೋದಯವನ್ನು ಇದು ಒದಗಿಸುವುದಿಲ್ಲ!) ಇನ್ನಿತರರು, ಜೂಜು ಹಾನಿರಹಿತ ವಿನೋದ ಮತ್ತು ಮನೋರಂಜನೆಯೆಂದೂ, ಜೀವನಕ್ಕೆ ತುಸು ಅಪೇಕ್ಷಿತ ಸ್ವಾರಸ್ಯವನ್ನು ಸೇರಿಸುತ್ತದೆಂದೂ ವಾದಿಸುತ್ತಾರೆ.
ಹೇಗಿದ್ದರೂ, ಇತರ ದೇಶಗಳಂತೆ, ಬ್ರಿಟನ್ ಮತ್ತು ಐರ್ಲೆಂಡಿನಲ್ಲಿ ಸಾವಿರಾರು ಯುವಜನರು ಜೂದಾಳಿಗಳಾಗಿದ್ದಾರೆ. ಮತ್ತು ಕೊಂಚ ಪ್ರಯತ್ನದಿಂದ ಹೆಚ್ಚು ಹಣ ಗಳಿಸುವ ಪ್ರತೀಕ್ಷೆಯು ನಿಮಗೆ ತುಸು ಹಿಡಿಸಬಹುದು.
ಜೂಜು—ಅಡಗಿರುವ ಅಪಾಯಗಳು
ಆದರೂ, ಜೂಜು ಯುವಜನರ ಮುಂದೆ ಕೆಲವು ಅತಿ ವಾಸ್ತವ ಅಪಾಯಗಳನ್ನು ಇಡುತ್ತದೆ. “ಜೂಜು ವ್ಯಸನಿಗಳ” ಮತ್ತು “ಹಾನಿರಹಿತ ಆಟವು ನಿರ್ಬಂಧಕ್ಕೆ ನಡಿಸಿ, ಒಬ್ಬ ವ್ಯಕ್ತಿಯನ್ನು ಲಂಪಟನಾಗಿ ಮಾಡುವ ಮೂಲಕ ಜೂಜು ತರುವ ಭಯಂಕರಾವಸ್ಥೆ” ಯ ಕುರಿತು ವರದಿಗಳು ಹೇಳುತ್ತವೆ. ದ ಬಸ್ (ಬ್ರಿಟಿಷ್ ಟೆಲಿವಿಷನಿನ ಒಂದು ಸಾಕ್ಷ್ಯಚಿತ್ರ) ಗನುಸಾರ, ಮಕ್ಕಳು ಆಡುವ ಜೂಜು, “ಶಾಲೆ ತಪ್ಪಿಸುವಿಕೆ, ಹಿಂಸಾಕೃತ್ಯ, ಸುಲಿಗೆ, ಕಳ್ಳತನ, ಒತ್ತಾಯಕ್ಕೊಳಗಾಗುವ ಜೂಜಾಟ ಮತ್ತು ವೇಶ್ಯಾವೃತ್ತಿ ಮತ್ತು, ವಿಪರೀತ ಸಂದರ್ಭಗಳಲ್ಲಿ ಆತ್ಮಹತ್ಯ ಅಥವಾ ಆತ್ಮಹತ್ಯೆಯ ಪ್ರಯತ್ನಕ್ಕೆ ನಡೆಸಬಹುದು.” ಜೂಜಿಗೆ ಇಂಥ ವಿಪತ್ತನ್ನು ತರುವ ಸಾಮರ್ಥ್ಯವಿದೆಯೆಂಬುದು ನಿಜ ಜೀವನಾನುಭವಗಳಿಂದ ರುಜುವಾಗುತ್ತದೆ.
ಏಡ್ರಿಯನ್ ಹೇಳುವುದು: “ನಾನು ಸುಮಾರು 11 ವರ್ಷ ಪ್ರಾಯದಲ್ಲಿ ಜೂಜಾಡಲಾರಂಭಿಸಿದೆ. ನಾನು ನನ್ನ ಮಾವ ಮತ್ತು ಸೋದರ ಬಂಧುವಿನೊಡನೆ ಬೇಟೆನಾಯಿ ಓಟದ ಜೂಜಿಗೆ ಹೋದೆ. ಆರಂಭದಲ್ಲಿ ನನ್ನ ಭಾಗ್ಯ ಒಳ್ಳೆಯದಾಗಿದ್ದು, ನಾನು ಅನೇಕ ವೇಳೆ ಗೆಲ್ಲುತ್ತಿದ್ದೆ.” ಏಡ್ರಿಯನ್ ಮೇಲೆ ಇದರಿಂದಾದ ಪರಿಣಾಮ? “ಹಣ ಪಡೆಯುವ ಕಾರಣದಿಂದ ನನ್ನ ತಂದೆಗೆ ಒಂದು ಕಥೆ ಕಟ್ಟುವುದಕ್ಕೆ—ಸುಳ್ಳು ಹೇಳುವುದಕ್ಕೆ—ನನಗೆ ಯಾವ ಶಂಕೆಯೂ ಇರಲಿಲ್ಲ. ಮತ್ತು ನನಗೆ ಹದಿಪ್ರಾಯ ಮೀರುವುದರೊಳಗೆ, ನನ್ನ ಜೂಜಿನ ಚಟಕ್ಕೆ ಹಣವನ್ನೊದಗಿಸಲು ತಂದೆಯ ಅಂಗಡಿಯ ಗಲ್ಲದಿಂದ ಹಣವನ್ನು ಕದಿಯುವುದರಲ್ಲಿ ನನಗೆ ಅನುತಾಪವೇ ಇರಲಿಲ್ಲ,” ಎಂದು ಅವನು ವಿವರಿಸುತ್ತಾನೆ.
ಇನ್ನೊಂದು ಅನಪೇಕ್ಷಣೀಯ ಪರಿಣಾಮವನ್ನು ಏಡ್ರಿಯನ್ ಸೂಚಿಸುತ್ತಾನೆ. “ನೀವು ಸುಲಭವಾಗಿ ಮೈಗಳ್ಳರಾಗಬಲ್ಲಿರಿ. ಏಕೆಂದರೆ ನೀವು ಪ್ರಾಮಾಣಿಕ ರೀತಿಯ ಕೆಲಸಮಾಡಿ ಗಳಿಸುವ ಹಣವು, ನೀವು ಜೂಜಾಡಿ ಗೆಲ್ಲಬಲ್ಲಿರಿ ಎಂದೆಣಿಸುವ ಹಣಕ್ಕೆ ಹೋಲಿಸುವಾಗ ಕ್ಷುಲ್ಲಕವಾಗಿ ಕಾಣಬಹುದು.”—ಜ್ಞಾನೋಕ್ತಿ 13:4; ಪ್ರಸಂಗಿ 2:24.
ರಾಬರ್ಟ್ (ನಿಜ ಹೆಸರಲ್ಲ) 12ನೆಯ ವರ್ಷ ಪ್ರಾಯದಲ್ಲಿ ಜೂಜಾಡತೊಡಗಿದನು. ಅವನು ಇನ್ನೊಂದು ಅಪಾಯವನ್ನು ತೋರಿಸುತ್ತಾನೆ: “ನೀವು ತುಂಬ ಮೂಢ ನಂಬಿಕೆ ತೋರಿಸಬಲ್ಲಿರಿ.” ಅವನು ವಿವರಿಸುವುದು: “ನನ್ನ ತಂದೆ ಅಂಗಡಿಯಲ್ಲಿ ಗ್ಯಾಂಬ್ಲಿಂಗ್ ಯಂತ್ರಗಳನ್ನಿಟ್ಟಿದ್ದರು. ಅವುಗಳ ಕೆಲಸದ ರೀತಿ ನನಗೆ ನಿಷ್ಕೃಷ್ಟವಾಗಿ ತಿಳಿದಿತ್ತು. ಆದರೂ ಪರಿಣಾಮವನ್ನು ತರಿಸಲು ನಾನು ಮೂಢಭಕ್ತಿಯಿಂದ ಅದರ ಸ್ವಿಚ್ಚನ್ನು ಒಂದು ನಿರ್ದಿಷ್ಟ ರೀತಿಯಲ್ಲಿ ಒತ್ತುತ್ತಿದ್ದೆ, ಮತ್ತು ಗೆದ್ದ ಹಣವನ್ನು ತುಸು ಹೊತ್ತು ಅದರ ತಟ್ಟೆಯಲ್ಲೇ ಇಡುತ್ತಿದ್ದೆ. ಕೆಲವರು ಆ ಯಂತ್ರದೊಡನೆ ನಿಜವಾಗಿ ಮಾತಾಡುವುದೂ ಇತ್ತು.” ಹೌದು, ಅನೇಕ ಜೂದಾಳಿಗಳು ಉದ್ದೇಶಪೂರ್ವಕವಾಗಿಯಲ್ಲದೆನೇ ಶುಭದಾಯಕ ದೇವತೆಯ ಮೂಢ ನಂಬಿಕೆಯ—ದೇವರು ಖಂಡಿಸಿರುವ ಒಂದು ಆಚಾರ—ಆರಾಧಕರು ಆಗುತ್ತಾರೆ.—ಯೆಶಾಯ 65:11.
ಒತ್ತಾಯಕ್ಕೆ ಒಳಗಾದ ಜೂದಾಳಿ
ಅಡಗಿರುವ ಇನ್ನೊಂದು ಅಪಾಯವು ಈ ಜೂಜಾಟ ಒಂದು ಭ್ರಾಂತಿಯಾಗಿ ಪರಿಣಮಿಸುವ ಪ್ರವೃತ್ತಿ ಇರುವುದೇ. “ಪ್ರತಿ ವರ್ಷ, 2,000ಕ್ಕೂ ಹೆಚ್ಚು, 16ಕ್ಕೆ ಕೆಳಗಿನ ವಯಸ್ಸಿನ ಮಕ್ಕಳನ್ನು ಅವರ ಹೆತ್ತವರು ಗ್ಯಾಂಬರ್ಲ್ಸ್ ಎನಾನಿಮಸ್ ಎಂಬ ಚಟ ನಿವಾರಣ ಸಂಘಕ್ಕೆ ಕೊಂಡೊಯ್ಯುತ್ತಾರೆ, ಮತ್ತು ಬ್ರಿಟನಿನಲ್ಲಿ . . . ಇವರ ಪರಿಚಯ ಮಾಡಿಸುವ ಪ್ರಮಾಣ ಹೆಚ್ಚಿನ ಭಾಗವು ಅಡಗಿರುವ ನೀರ್ಗಲ್ಲಗುಡ್ಡೆಯ ತುದಿ ಎಂದೆಣಿಸಲಾಗುತ್ತದೆ.” (ದ ಬಸ್) ಅವರೆಷ್ಟು ವ್ಯಸನಿಗಳಾಗಬಲ್ಲರು? ಒಂದು ವರದಿ ಹೇಳಿದ್ದು: “ಒಮ್ಮೆ ಆ ಚಟ ಹಿಡಿದರೆ, ಗೆಲ್ಲಲಿ ಸೋಲಲಿ, ಅವರು ಜೂಜಾಡಲೇ ಬೇಕು.”
ಒಬ್ಬ ಸ್ತ್ರೀ ಪ್ರತಿ ದಿನ ಸುಮಾರು 3,500 ರೂ. ಜೂಜಾಡುವುದನ್ನು ನೋಡಿದ್ದನ್ನು ರಾಬರ್ಟ್ ನೆನಪಿಸುತ್ತಾನೆ. ಒಬ್ಬ ಯುವ ಜೂದಾಳಿ ಫ್ರೂಟ್ ಸೀಳುಗಂಡಿ ಯಂತ್ರಕ್ಕೆ ತಿನ್ನಿಸುವ ಹಣದ ತನ್ನ ಭ್ರಾಂತಿಯ ವಿಷಯದಲ್ಲಿ ಎಷ್ಟು ಉಗ್ರನಾಗಿ ವರ್ತಿಸಿದನೆಂದರೆ, ತನ್ನ ತಾಯಿಯನ್ನೇ ಕೊಲ್ಲಲು ಪ್ರಯತ್ನಿಸಿದನು! ಅತಿ ಚಿಕ್ಕ ಪ್ರಾಯದಲ್ಲಿ ಜೂಜಾಟಕ್ಕೆ ತೊಡಗಿದ ಪ್ಯಾಡಿಗೆ ಸಹ ತನ್ನ ಜೂಜಿನ ಚಟವನ್ನು ನಿಯಂತ್ರಿಸುವ ಅಸಮರ್ಥತೆಯಿತ್ತು. ಅವನು ಜ್ಞಾಪಿಸಿಕೊಳ್ಳುವುದು: “ನಾನು ಜೂಜಾಡುವ ಒಂದು ಕುಟುಂಬದಲ್ಲಿ ಬೆಳೆದು ಬಂದೆ. ಪ್ರತಿಯೊಂದು ವಸ್ತುವಿನ ಮೇಲೂ ಜೂಜಾಡುತ್ತಿದ್ದೆ. ದೊಡ್ಡವನಾಗಿ ಮದುವೆಯಾದ ಬಳಿಕ ನನ್ನ ಜೂಜಾಟ, ಹೆಂಡತಿ, ಮಕ್ಕಳ ಆಹಾರದ ಹಣವನ್ನೂ ಅವರಿಂದ ತೆಗೆದುಕೊಂಡಿತು, ಮತ್ತು ಕಡೆಗೆ ಅದು ನನ್ನನ್ನು ಆತ್ಮಹತ್ಯವನ್ನು ಚಿಂತಿಸುವಂತೆ ನಡೆಸಿತು.”
ಸೀಳುಗಂಡಿ ಯಂತ್ರಗಳ ಆಕರ್ಷಣೆ
ಜೂಜಿನ ಯಾವುದೇ ವಿಧವು ಇಂಥ ದುಷ್ಪರಿಣಾಮವನ್ನು ತರಬಲ್ಲದು, ಆದರೆ ಇಂದು ಯುವಜನರಿಗಿರುವ ಅತ್ಯಂತ ದೊಡ್ಡ ಅಪಾಯಗಳಲ್ಲಿ ಒಂದು ಸ್ಲಾಟ್ ಮೆಷೀನ್ ಎಂಬ ಸೀಳುಗಂಡಿ ಯಂತ್ರ. ಇದು “ಈಗ ಯುವ ಜೂದಾಳಿಗಳ ಅತಿ ದೊಡ್ಡ ಸಮಸ್ಯೆಯೆಂದು ಎಣಿಸಲ್ಪಡುತ್ತದೆ,” ಎನ್ನುತ್ತದೆ, 1989ನೆಯ ವಸಂತಕಾಲದ ಜರ್ನಲ್ ಆಫ್ ಗ್ಯಾಂಬ್ಲಿಂಗ್ ಬಿಹೇವ್ಯರ್. ಒಕ್ಕೈ ಡಕಾಯಿತರೆಂದು ಉತ್ತಮವಾಗಿಯೇ ವರ್ಣಿಸಲ್ಪಟ್ಟಿರುವ ಈ ಯಂತ್ರಗಳು, “ಚಳಕವಿರುವ ಮತ್ತು ಆಕರ್ಷಕ ಸಾಧನಗಳು,” ಎನ್ನುತ್ತದೆ ದ ಬಸ್. “ಎಷ್ಟು ಹೆಚ್ಚು ಆಡುತ್ತೀರೊ, ಅಷ್ಟು ಹೆಚ್ಚು ಇನ್ನೂ ಆಡಲು ಬಯಸುವುದು ಸಂಭಾವ್ಯ.”
ಒಂದು ಆಟವನ್ನು, ಅದೆಷ್ಟೇ ಆಕರ್ಷಕವಾಗಿರಲಿ, ನೀವು ಸದಾ ಗೆಲ್ಲುವುದಕ್ಕಿಂತ ಹೆಚ್ಚು ಸೋಲುವುದು ಖಾತ್ರಿ ಎಂಬಂತೆ ಏರ್ಪಡಿಸಿರುವಲ್ಲಿ, ಅದನ್ನು ಆಡುವುದರಲ್ಲಿ ಅರ್ಥವಿದೆಯೆ? ಯಂಗ್ ಪೀಪ್ಲ್ ನೌ ನಿಮ್ಮ ಗೆಲ್ಲುವ ಸಂಭವವನ್ನು ಹೀಗೆ ವರ್ಣಿಸಿತು: “ಒಬ್ಬ ಮುಗ್ಧನಿಗೆ ಗೆಲ್ಲುವ ಯಾವ ಸಂದರ್ಭವನ್ನೂ ಕೊಡಬೇಡಿ, ಎನ್ನುತ್ತದೆ ಒಂದು ಹೇಳಿಕೆ. ಸೀಳುಗಂಡಿ ಯಂತ್ರಗಳು ಕೊಡುವುದಿಲ್ಲ . . . ನೀವು 10 ಪೌಂಡು [ಸುಮಾರು ರೂ.420] ಗಳನ್ನು ಯಂತ್ರದಲ್ಲಿ ಹಾಕುವಲ್ಲಿ, ಅದು ಸರಾಸರಿ, 7 ಪೌಂಡುಗಳನ್ನು ಇಟ್ಟುಕೊಂಡು 3 ಪೌಂಡುಗಳನ್ನು ಹಿಂದೆ ಕೊಡುವುದು.”
ಜೂಜಾಟದಿಂದ ಯುವಜನರ ಮೇಲಾಗುವ ಪರಿಣಾಮದ ಸಂಶೋಧಕ ಮಾರ್ಕ್ ಗ್ರಿಫಿತ್ಸ್, ಹೀಗೆ ಹೇಳುವುದು ಆಶ್ಚರ್ಯವಲ್ಲ: “ಫ್ರೂಟ್ ಸೀಳುಗಂಡಿ ಯಂತ್ರದಿಂದ ಹಣ ಗಳಿಸುವ ಒಂದೇ ವಿಧವು ನೀವು ಅದರ ಧಣಿಯಾಗಿರುವುದೇ.” ಹಾಗಾದರೆ ಇಂಥ ವ್ಯರ್ಥ ಚಟುವಟಿಕೆಯಲ್ಲಿ ಸಿಕ್ಕಿಕೊಳ್ಳುವುದು ನ್ಯಾಯವೆಂದು ನಿಮಗೆ ತೋರುತ್ತದೆಯೆ?
ಆದರೂ ನಿಮಗೆ ಹೆಚ್ಚು ಆಡುವ ಚಟ ಹಿಡಿಯುವಂತೆ ಈ ಯಂತ್ರಗಳನ್ನು ಜಾಣತನದಿಂದ ರಚಿಸಲಾಗಿವೆ. ಹೇಗೆ? ಕೇವಲ ಗೆಲ್ಲುವ ರೇಖೆಯ ಬದಲಿಗೆ ಮೂರು ರೇಖೆಗಳಲ್ಲಿ ಹಣ್ಣಿನ (ಫ್ರೂಟ್) ಚಿಹ್ನೆಗಳನ್ನು ತೋರಿಸಿಯೆ! ಯಂಗ್ ಪೀಪ್ಲ್ ನೌ ವಿವರಿಸುವುದು: “ಹಣ ಕೊಡುವ ಗೆರೆಗಳ ಮೇಲಿನ ಮತ್ತು ಕೆಳಗಿನ ಗೆರೆಗಳು ಆಟಗಾರರಿಗೆ, ಅವರು ‘ಸ್ವಲ್ಪ ತಪ್ಪಿದರು’ ಎಂಬ ಭ್ರಮೆಯನ್ನು ಕೊಟ್ಟು ಅವರು ಪುನಃ ಆಡುವಂತೆ ಮಾಡಲಿಕ್ಕಾಗಿ ತೋರಿಸಲ್ಪಟ್ಟಿವೆ.” ಸ್ವಲ್ಪ ತಪ್ಪಿತೆಂದು ಹೇಳಲಾಗುವ ಈ ಎರಡು ಗೆಲ್ಲುವ ಮತ್ತು ಮೂರನೆಯ ಸೋಲುವ ಚಿಹ್ನೆಗಳನ್ನು ಜೂದಾಳಿಯು ಅನೇಕ ವೇಳೆ “ಹೆಚ್ಚು ಕಡಮೆ ಗೆದ್ದೆ” ಎಂಬಂತೆ ನೋಡುವುದರಿಂದ ಅವನು ಪುನಃ ಪುನಃ ಪ್ರಯತ್ನಿಸುವಂತೆ ಪ್ರೋತ್ಸಾಹಿಸಲ್ಪಡುತ್ತಾನೆ.
ಆದರೆ ಇದು ಜೂಜು ವ್ಯಾಪಾರದ ಲಕ್ಷಣವಾಗಿದೆ. ತಯಾರಕರು ಯಂತ್ರಗಳನ್ನು ಮತ್ತು ಜೂಜಾಟಗಳನ್ನು, ನೀವು ಸೋತಿರಿ ಎಂದು ಹೇಳುವ ಬದಲಿಗೆ ಸ್ವಲ್ಪ ತಪ್ಪಿದಿರಿ ಎಂಬ ಭ್ರಮೆ ಬರುವಂತೆ ರಚಿಸುತ್ತಾರೆ! ನೀವು ಹೆಚ್ಚು ಕಡಮೆ ಗೆದ್ದಿರಿ! ಮತ್ತು “ಗೆಲ್ಲಲು” ಅಷ್ಟು ಹತ್ತಿರ ಬಂದಿರುವ ನಿಮ್ಮ ಅನುಭವದ ಉತ್ತೇಜನವು, ನೀವು ಆಡುತ್ತಾ ಮುಂದುವರಿಯುವ ಮನೋಸ್ಥಿತಿಯನ್ನು ಉಂಟುಮಾಡುತ್ತದೆ. ಇದಕ್ಕೆ ಹೊಳೆಯುವ ಬೆಳಕುಗಳು, ವಶೀಕರಿಸುವ ನಾದಗಳನ್ನು ಕೂಡಿಸುವಲ್ಲಿ, ನೀವು ಆಡುವಂತೆ—ಆಡುತ್ತಾ ಮುಂದುವರಿಯುವಂತೆ—ಮತ್ತು ಸೋಲುತ್ತಾ ಹೋಗುವಂತೆ ಮಾಡಲು ನಿಮ್ಮ ಮೇಲೆ ಹಾಕಲ್ಪಡುವ ಬಲಾಢ್ಯವಾದ ಭಾವಾವೇಶದ ಒತ್ತಡಗಳ ತುಸು ಅರಿವು ನಿಮಗಾಗುತ್ತದೆ.
ಸರಿಯಾದ ನಿರ್ಧಾರವನ್ನು ಮಾಡುವುದು
ಹಾಗಾದರೆ, ಒತ್ತಾಯಕ್ಕೊಳಗಾಗುವ ಜೂದಾಳಿಯಾಗದಿರುವ ಸರ್ವೋತ್ತಮ ಮಾರ್ಗವು ಮೊದಲು ಜೂಜಾಡುವುದನ್ನು ತಪ್ಪಿಸಿಯೆ. ಅದರ ಸಕಲ ವಿಧಗಳನ್ನೂ—ಸ್ವಲ್ಪ ಹಣದ ಜೂಜಾಟ ಸಹ—ತ್ಯಜಿಸಿರಿ. ಅನೇಕ ಜೀವಾವಧಿ ಜೂಜಾಟದ ಅಭ್ಯಾಸಗಳು ಕೆಲವೇ ಪೈಸಗಳನ್ನು ಪಣಕಟ್ಟಿ ಆರಂಭವಾಗಿವೆ. ಮತ್ತು ಜೂಜಾಡುವ ಸಂದರ್ಭ ತಾನಾಗಿಯೇ ತೋರಿಬರುವಲ್ಲಿ, ಯೇಸು ಮತ್ತಾಯ 7:17ರಲ್ಲಿ ಹೇಳಿದ ಮೂಲಸೂತ್ರವನ್ನು ಪರಿಗಣಿಸಿರಿ: “ಒಳ್ಳೇ ಮರಗಳೆಲ್ಲಾ ಒಳ್ಳೇ ಫಲವನ್ನು ಕೊಡುವವು. ಹುಳುಕು ಮರವು ಕೆಟ್ಟ ಫಲವನ್ನು ಕೊಡುವದು.”
ಯೋಚಿಸಿರಿ: ಜೂಜಾಟ ಜನರ ಜೀವನದಲ್ಲಿ ನಿಜವಾಗಿ ಯಾವುದನ್ನು ಹುಟ್ಟಿಸುತ್ತದೆ? ಸಂತೋಷ, ಶಾಂತಿ, ಮತ್ತು ಆತ್ಮ ನಿಯಂತ್ರಣದಂಥ ದೇವರಾತ್ಮದ ಫಲಗಳನ್ನು ವಿಕಸಿಸುವಂತೆ ಅದು ಸಹಾಯ ಮಾಡುತ್ತದೆಯೆ, ಯಾ ಕಲಹ, ಕೋಪದ ಕೆರಳು, ಮತ್ತು ಲೋಭವನ್ನು ಹುಟ್ಟಿಸುತ್ತದೆಯೆ? (ಗಲಾತ್ಯ 5:19-23) ದೇವರು ಲೋಭವನ್ನು ಖಂಡಿಸಿದ್ದಾನೆಂಬುದು ಜ್ಞಾಪಕದಲ್ಲಿರಲಿ. ಕೇವಲ ಒಂದೇ ಲೋಭಕೃತ್ಯ ಆತನ ದೃಷ್ಟಿಯಲ್ಲಿ ನೀವು ನಿಂದಾರ್ಹರಾಗುವಂತೆ ಮಾಡಬಲ್ಲದು. ಕ್ರೈಸ್ತ ಯುವಜನರಿಗೆ ಜೂದಾಳಿಗಳು ಯೋಗ್ಯ ಒಡನಾಡಿಗಳೊ ಎಂದು ನಿಮ್ಮನ್ನು ನೀವೇ ಪ್ರಶ್ನಿಸಿಕೊಳ್ಳಿ. (1 ಕೊರಿಂಥ 15:33) “ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದಿದ್ದೆ” ಎಂಬುದನ್ನು ನೆನಪು ಮಾಡಿಕೊಳ್ಳಿರಿ. (1 ಯೋಹಾನ 5:19) ಈ ಜೂಜಾಟ ಪಿಶಾಚನಾದ ಸೈತಾನನ ಉದ್ದೇಶವನ್ನು ಸ್ಪಷ್ಟವಾಗಿಗಿ ಮುಂದುವರಿಸುವುದಿಲ್ಲವೆ? ಹಾಗಾದರೆ ಅದರಲ್ಲಿ ತೊಡರಿಸಿಕೊಳ್ಳುವಂತೆ ಏಕೆ ದುಷ್ಪ್ರೇರಣೆಗೊಳಗಾಗಬೇಕು?
ಐರ್ಲೆಂಡಿನ ರಾಷ್ಟ್ರೀಯ ಲಾಟರಿ ಮೊದಲು ಬಳಕೆಗೆ ಬಂದಾಗ ಅದನ್ನು ಮತಿ ಹೀನರ ಮೇಲಿನ ತೆರಿಗೆ ಎಂದು ಒಡನೆ ಕರೆಯಲಾಯಿತು! ಇದು ಸುಮಾರಾಗಿ ಜೂಜನ್ನು ವಿವರಿಸುತ್ತದೆ. ತನ್ನನ್ನು ಮತಿ ಹೀನನೆಂದೆಣಿಸಿ, ಜೂದಾಳಿಯ ಸ್ವಪ್ನಲೋಕಕ್ಕೆ ಎಳೆಯಲ್ಪಡುವುದರ ಮೂಲಕ ಅವಶ್ಯವಿರುವ ಸಂಪತ್ತನ್ನು ಕಳೆದುಕೊಳ್ಳುವ ಅಪೇಕ್ಷೆ ಯಾರಿಗಿದೆ? ಈ ಮೊದಲು ಹೇಳಿರುವ, ಆ್ಯಂಡ್ರು ಮತ್ತು ಜೂಲ್ಯನ್, ಶುಭಸೂಚಕವಾಗಿ, ಇನ್ನೂ ಸಮಯವಿರುವಾಗಲೆ ಜೂಜಾಟ ಮೂರ್ಖರ ಆಟವೆಂದು ನೋಡಿದರು. ಅವರು ಅದರ ಅಪಾಯವನ್ನು ಸ್ಪಷ್ಟವಾಗಿಗಿ ನೋಡಿ ಅದರಿಂದ ದೂರವಿರುತ್ತಾರೆ. “ಹೇಗೂ, ಜೂಜಾಡಿ ಹಣ ವೆಚ್ಚಮಾಡುವುದಕ್ಕೂ ಹೆಚ್ಚು ಪ್ರಯೋಜನಕಾರಿಯಾದ ಸಂಗತಿಗಳು ಜೀವನದಲ್ಲಿವೆ,” ಎನ್ನುತ್ತಾರೆ ಅವರು. (g91 11/8)
[ಪುಟ 26 ರಲ್ಲಿರುವ ಚಿತ್ರ]
ಚಿಕ್ಕ ಮೊತ್ತದ ಹಣದಲ್ಲಿ ಜೂಜಾಡುವುದೂ ಒಬ್ಬನಿಗೆ ಚಟ ಹಿಡಿಸಬಲ್ಲದು