ಜೋಪಡಿ ಪಟ್ಟಣಗಳು ನಗರರಣ್ಯದಲ್ಲಿ ಕಷ್ಟಕಾಲಗಳು
ಆಫ್ರಿಕದ ಎಚ್ಚರ! ಸುದ್ದಿಗಾರರಿಂದ
ಜೋಪಡಿಯ ಪುಟ್ಟ ಹುಡುಗಿಯೊಬ್ಬಳು ಪಶ್ಚಿಮ ಆಫ್ರಿಕದ ಒಂದು ನಗರದಲ್ಲಿ ಬರಿಯ ಕಾಲಿನಲ್ಲಿ ನಡೆಯುತ್ತಿದ್ದಾಳೆ. ತಲೆಯ ಮೇಲೆ ಒಂದು ಚಪ್ಪಟೆಯಾದ ಉರುಟು ತಟ್ಟೆಯ ಮೇಲೆ ಎರಡು ಡಜನ್ ಕಿತ್ತಿಳೆ ಹಣ್ಣುಗಳನ್ನು ಹೊತ್ತಿದ್ದಾಳೆ. ಅವಳ ತೆಳ್ಳಗಿನ ದೇಹದ ಮೇಲೆ ಯಾರೋ ಕೊಟ್ಟಿರುವ ಹಳದಿ ಅಂಗಿಯೊಂದಿದೆ. ಬೆವರು ಸುರಿಯುತ್ತಾ ಇದೆ.
ಬಡ ಕುಟುಂಬಗಳ ಇತರ ಎಳೆಯರೊಂದಿಗೆ ಸ್ಪರ್ಧಿಸುತ್ತಾ, ಆಕೆ ರಸ್ತೆಯಲ್ಲಿ ತಿರುಗುವುದು ಮಾರಲಿಕ್ಕಾಗಿ. “ಕಿತ್ತಿಳೆ ಕೊಳ್ಳಿ!” ಎಂಬುದು ಸಾಧಾರಣ ಕೇಳಿಬರುವ ಕೂಗು. ಆದರೆ ಈ ಹುಡುಗಿ ಸುಮ್ಮಗಿದ್ದಾಳೆ; ಬಹುಶಃ ಆಕೆ ಹಸಿದಿರಬಹುದು, ಯಾ ಅಸ್ವಸ್ಥಳಾಗಿರಬಹುದು, ಯಾ ಕೇವಲ ಬಳಲಿರಬಹುದು.
ಇನ್ನೊಂದು ದಿಕ್ಕಿನಿಂದ ಕಡುನೀಲಿ ಸಮವಸ್ತ್ರ ಧರಿಸಿದವರಾಗಿ ಇಬ್ಬರು ಶಾಲಾಹುಡುಗಿಯರು ಬರುತ್ತಾರೆ. ಅವರು ಬಿಳಿಯ ಕಾಲುಚೀಲ ಮತ್ತು ಬಿಳಿಯ ಪಾದರಕ್ಷೆ ಧರಿಸಿದ್ದಾರೆ. ಪ್ರತಿಯೊಬ್ಬಳೊಡನೆ ಪುಸ್ತಕ ತುಂಬಿದ ಚೀಲವಿದೆ. ಈ ಹುಡುಗಿಯರು ಚುರುಕಾಗಿ ಸಂತೋಷದಿಂದ ಮಾತಾಡುತ್ತಾ ನಡೆಯುತ್ತಾರೆ. ಇವರು ಆ ಹುಡುಗಿಯನ್ನು ಗಮನಿಸದಿದ್ದರೂ ಆ ಹುಡುಗಿ ಇವರನ್ನು ಗಮನಿಸುತ್ತಾಳೆ. ಭಾವಶೂನ್ಯ ಕಣ್ಣುಗಳಿಂದ ಆ ಹುಡುಗಿ ಅವರನ್ನು ಪ್ರೇಕ್ಷಿಸುತ್ತಾಳೆ.
ಶಾಲಾಮಕ್ಕಳು ಕ್ರಮೇಣ ತಮ್ಮ ಅನುಕೂಲತೆಗಳ ಭದ್ರ ಮನೆಯನ್ನು ಸೇರುತ್ತಾರೆ. ಆದರೆ ಈ ಹುಡುಗಿ ತಡವಾಗಿ ಮನೆಯನ್ನು ತಲುಪುವಾಗ, ಅವಳಿರುವುದು ಒಂದು ಪ್ರತ್ಯೇಕ ಲೋಕದಲ್ಲಿ. ಮರ, ಟಿನ್ನುಗಳಿಂದ ಮಾಡಿದ ಕಿಕ್ಕಿರಿದ ವಸತಿಯೇ ಅವಳ ಮನೆ.
ಜೋಪಡಿ ಪಟ್ಟಣ
ಇಲ್ಲಿಯ ಮುಖ್ಯ ಬೀದಿ, ಹೊಡೆದು ಗಟ್ಟಿಮಾಡಿದ ಮಣ್ಣಿನ ರಸ್ತೆ. ಮಳೆಗಾಲದಲ್ಲಿ ಇದು ಕೆಸರಾಗಿ ಬಿಡುತ್ತದೆ. ಕಾರು ಸಂಚಾರಕ್ಕೆ ತೀರಾ ಇಕ್ಕಟ್ಟಾದ ರಸ್ತೆಯಿದು. ಈ ರಸ್ತೆಯಲ್ಲಿ, ಪೊಲೀಸ್ ಚೌಕಿಯಾಗಲಿ, ಅಗ್ನಿಶಾಮಕ ಇಲಾಖೆಯಾಗಲಿ, ಆರೋಗ್ಯ ಕೇಂದ್ರವಾಗಲಿ ನಿಮಗೆ ದೊರೆಯದು. ಒಂದೇ ಒಂದು ಮರ ಇಲ್ಲಿಲ್ಲ. ಮೇಲಿನಿಂದ ವಿದ್ಯುಚ್ಫಕ್ತಿಯ ಯಾ ಟೆಲಿಫೋನ್ ತಂತಿಗಳಿಲ್ಲ. ನೆಲದಡಿಯಲ್ಲಿ ಒಳಚರಂಡಿಯಾಗಲಿ, ಜಲವಾಹಕ ಕೊಳವೆಗಳಾಗಲಿ ಇಲ್ಲ.
ಜನ ಕಿಕ್ಕಿರಿದಿದೆ. ಗಾಳಿ ಕೂಗಾಟದಿಂದ ತುಂಬಿದೆ. ಮಾತುಕತೆಗಳಲ್ಲಿ ನಗು, ವಾದ ವಿವಾದ, ಕೂಗಾಟ ಮತ್ತು ಹಾಡು ಬೆರೆತಿದೆ. ಬಿಳಿ ಮೇಲಂಗಿಯ ಜನರು ಉದ್ದ ಬೆಂಚುಗಳ ಮೇಲೆ ಕುಳಿತು ಮಾತಾಡುತ್ತಿದ್ದಾರೆ. ಸೌದೆಯ ಬೆಂಕಿಯ ಮೇಲಿನ ಪಾತ್ರೆಗಳಲ್ಲಿ ಬೇಯುತ್ತಿರುವ ಅನ್ನವನ್ನು ಹೆಂಗುಸರು ಕಲಕುತ್ತಿದ್ದಾರೆ. ಎಲ್ಲೆಲ್ಲಿಯೂ ಮಕ್ಕಳು—ಆಡುತ್ತಾ, ನಿದ್ರೆ ಹೋಗುತ್ತಾ, ಕೆಲಸ ಮಾಡುತ್ತಾ, ಮಾತಾಡುತ್ತಾ, ಮಾರುತ್ತಾ ಇದ್ದಾರೆ. ಇವರಲ್ಲಿ ಅಧಿಕಾಂಶ, ಆ ಕಿತ್ತಿಳೆ ಮಾರುವ ಹುಡುಗಿಯಂತೆ, ಮೃಗಾಲಯವನ್ನು ಎಂದಿಗೂ ನೋಡರು; ಅವರು ಎಂದಿಗೂ ಸೈಕಲ್ ಸವಾರಿ ಮಾಡರು, ಎಂದಿಗೂ ಶಾಲೆಯ ಒಳಗಡೆ ನೋಡರು.
ಜನನದಲ್ಲಿ ಸರಾಸರಿ ಜೀವ ನಿರೀಕ್ಷಣೆ ಕೇವಲ 42 ವರ್ಷಗಳಾಗಿರುವ ಈ ದೇಶದ ಈ ವಠಾರದ ಜನರು ಚಿಕ್ಕ ಪ್ರಾಯದಲ್ಲಿ ಸಾಯುತ್ತಾರೆ. ಒಂಬತ್ತನೆಯ ವರ್ಷ ಪ್ರಾಯದಲ್ಲಿ, ಮೊದಲನೆಯ ನಾಲ್ಕು ವರ್ಷಗಳನ್ನು ದಾಟಿ ಬದುಕಿ ಉಳಿಯುವ ಸಂಭವನೀಯತೆ ಲೋಕದ ಅತಿ ಕೆಳಗಣ ಸಂಖ್ಯೆಯಲ್ಲಿ ಒಂದಾದರೂ, ಈ ಹುಡುಗಿ ಅದನ್ನು ಆಗಲೇ ಪಾರಾಗಿ ಬಂದಿದ್ದಾಳೆ. ಆ ಸಮಯದಲ್ಲಿ, ಅವಳ ಸಾವಿನ ಸಂಭವನೀಯತೆ, ಅವಳು ಬೆಳೆವಣಿಗೆ ಹೊಂದಿದ ರಾಷ್ಟ್ರದಲ್ಲಿ ಹುಟ್ಟುತ್ತಿದ್ದರೆ ಇರಬಹುದಾದುದಕ್ಕಿಂತ 40 ಯಾ 50 ಪಾಲು ಹೆಚ್ಚು. ಅವಳ ಸಮಕಾಲೀನರಲ್ಲಿ ಅನೇಕರು ಐದು ವಯಸ್ಸಾಗುವ ತನಕ ಬದುಕಿ ಉಳಿಯಲಿಲ್ಲ. ಒಂದು ವೇಳೆ ಅವಳು ಹೆಚ್ಚು ಕಾಲ ಬದುಕುವಲ್ಲಿ, ಅವಳು ಗರ್ಭಧಾರಣೆ ಯಾ ಮಗು ಹುಟ್ಟುವ ಸಮಯದಲ್ಲಿ ಸಾಯುವ ಸಂಭವನೀಯತೆ, ಯೂರೋಪಿನ ಯಾ ಉತ್ತರ ಅಮೆರಿಕದ ಸ್ತ್ರೀಯರಿಗಿಂತ 150 ಪಾಲು ಹೆಚ್ಚು.
ಕೋಟಿಗಟ್ಟಲೆ ಜನರು ಶೀಘ್ರ ವೃದ್ಧಿಯಾಗುತ್ತಿರುವ ಹೊಲಸುಗೇರಿಗಳಲ್ಲಿ ಮತ್ತು ಇಂತಹ ಜೋಪಡಿ ಪಟ್ಟಣಗಳಲ್ಲಿ ವಾಸಿಸುತ್ತಾರೆ. ಸಂಯುಕ್ತ ರಾಷ್ಟ್ರ ಸಂಘದ ಸಂಖ್ಯಾ ಸಂಗ್ರಹಣಕ್ಕನುಸಾರ, ಕಡಮೆ ಬೆಳವಣಿಗೆಯ ಲೋಕದ ನಗರಗಳಲ್ಲಿ 130 ಕೋಟಿ ಜನರು ಕಿಕ್ಕಿರಿದು ತುಂಬಿರುತ್ತಾರೆ ಮತ್ತು ಪ್ರತಿ ವರ್ಷ 5 ಕೋಟಿ ಜನರು ಹೆಚ್ಚಾಗುತ್ತಿದ್ದಾರೆ.
ಪ್ರಗತಿಶೀಲ ದೇಶಗಳಲ್ಲಿ ಜೀವನ
ನಿಮ್ಮ ಮನೆಯಲ್ಲಿ ತುಸು ಏಕಾಂತತೆ, ನಳ್ಳಿಯ ನೀರು, ಒಂದು ಕಕ್ಕಸು ಇದೆಯೆ? ನಿಮ್ಮ ಕಚಡವನ್ನು ಕೊಂಡೊಯ್ಯುವವರಿದ್ದಾರೆಯೆ? ಪ್ರಗತಿಶೀಲ ದೇಶಗಳಲ್ಲಿ ಕೋಟಿಗಟ್ಟಲೆ ಜನರಿಗೆ ಈ ಅನುಕೂಲತೆಗಳಿಲ್ಲ.
ಅನೇಕ ನಗರಗಳಲ್ಲಿ ಬಡ ವಠಾರಗಳಲ್ಲಿ ಎಷ್ಟೊಂದು ಜನಸಂದಣಿಯಿದೆಯೆಂದರೆ, ಒಂದೇ ಒಂದು ಕೋಣೆಯಲ್ಲಿ ಹತ್ತು ಜನರ ಕುಟುಂಬ ಜೀವಿಸುವುದು ಸಾಮಾನ್ಯ. ಪದೇ ಪದೇ ಜನರಿಗೆ ಬದುಕಲು ಒಂದು ಚದರ ಮೀಟರಿಗೂ ಕಡಮೆ ಸ್ಥಳವಿದೆ. ಒಂದು ಪೌರಸ್ತ್ಯ ನಗರದ ಕೆಲವು ಭಾಗಗಳಲ್ಲಿ, ಚಿಕ್ಕ ಕೋಣೆಗಳೂ ಬಹುಜನರ ವಾಸಕ್ಕಾಗಿ ವಿಭಾಗಿಸಲ್ಪಡುತ್ತವೆ. ಏಕಾಂತತೆ ಮತ್ತು ಕಳ್ಳರಿಂದ ರಕ್ಷಣೆಗಾಗಿ ಪಂಜರದಂತಹ ಅಟ್ಟಶಯ್ಯೆಗಳು ಇವುಗಳಲ್ಲಿರುತ್ತವೆ. ಇನ್ನೊಂದು ದೇಶದಲ್ಲಿ, ಒಂದು “ಬಿಸಿ ಮಂಚ” ಪದ್ಧತಿಯು, ಜನರು ತಾಸಿನ ಲೆಕ್ಕದಲ್ಲಿ ಮಂಚಗಳನ್ನು ಬಾಡಿಗೆಗೆ ಪಡೆದು ಇಬ್ಬರು ಯಾ ಮೂವರು ಸರದಿಯಾಗಿ ಅದರಲ್ಲಿ ನಿದ್ದೆ ಹೋಗುವಂತೆ ಸಾಧ್ಯ ಮಾಡುತ್ತದೆ.
ಯೂನಿಸೆಫ್ (UNICEF) ಸಂಘದ 1991ರ ವಾರ್ಷಿಕ ವರದಿಗನುಸಾರ, ಲೋಕಾದ್ಯಂತ 120 ಕೋಟಿ ಜನರಿಗೆ ಇರುವ ನೀರಿನ ಸರಬರಾಯಿ ಅಭದ್ರ. ಲಕ್ಷಗಟ್ಟಲೆ ಜನರು ನೀರನ್ನು ಮಾರುವವರಿಂದ ಪಡೆಯಬೇಕಾಗುತ್ತದೆ ಇಲ್ಲವೆ ತೊರೆ ಯಾ ಇತರ ತೆರೆದಿರುವ ಸ್ಥಳಗಳಿಂದ ಶೇಖರಿಸಬೇಕಾಗುತ್ತದೆ. ನಳ್ಳಿಯ ನೀರು ದೊರೆಯುವಲ್ಲಿ, ಕೆಲವು ಸಲ ಒಂದೇ ನಿಲುಗೊಳವೆಯಲ್ಲಿ ಪಾಲಿಗರಾಗಲು ಒಂದು ಸಾವಿರಕ್ಕೂ ಹೆಚ್ಚು ಜನ ಹೋರಾಡುತ್ತಾರೆ.
ನೂರ ಎಪ್ಪತ್ತು ಕೋಟಿ ಜನರಿಗೆ ಮಾನವ ಮಲ ತೊಲಗಿಸುವಿಕೆಯ ನಿರ್ಮಲ ವಿಧಾನದ ಅನುಕೂಲತೆಯಿಲ್ಲವೆಂದೂ ಯೂನಿಸೆಫ್ ಅಂದಾಜು ಮಾಡುತ್ತದೆ. ಜೋಪಡಿಗಳ 85 ಪ್ರತಿಶತ ಜನರಿಗೆ ಕಕ್ಕಸಿನ ಸೌಕರ್ಯಕ್ಕೆ ಪ್ರವೇಶವಿಲ್ಲದಿರುವುದು ಅಸಾಮಾನ್ಯವಲ್ಲ. ಆಫ್ರಿಕ ಮತ್ತು ಏಸ್ಯಾದ ಹೆಚ್ಚಿನ ನಗರಗಳಲ್ಲಿ—ಜನಸಂಖ್ಯೆ ಹತ್ತು ಲಕ್ಷಕ್ಕೂ ಹೆಚ್ಚಿರುವ ನಗರಗಳನ್ನು ಸೇರಿಸಿ—ಯಾವ ಒಳಚರಂಡಿಯ ವ್ಯವಸ್ಥೆಯೂ ಇಲ್ಲ. ಮಾನವ ಮಲ ತೊರೆ, ನದಿ, ಹೊಂಡ, ಕಾಲುವೆ, ಮತ್ತು ಹಳ್ಳಗಳನ್ನು ಸೇರುತ್ತದೆ.
ಇನ್ನೊಂದು ಸಮಸ್ಯೆಯು ಕಚಡ. ಪ್ರಗತಿಶೀಲ ದೇಶಗಳಲ್ಲಿ ಕಚಡದಲ್ಲಿ 30ರಿಂದ 50 ಸೇಕಡವನ್ನು ಸಂಗ್ರಹಿಸಲಾಗುವುದಿಲ್ಲ. ಬಡ ಪ್ರದೇಶಗಳನ್ನು ತೀರಾ ಅಸಡ್ಡೆ ಮಾಡಲಾಗುತ್ತದೆ. ಇದಕ್ಕೆ ಒಂದು ಕಾರಣವು, ಕಚಡ ಸಂಗ್ರಹಕಾರರು ಯಾ ಪುನಃಪರಿವರ್ತನ ವ್ಯಾಪಾರಗಳು ಲಾಭದಾಯಕವಾಗಿ ಉಪಯೋಗಿಸಬಹುದಾದ ಯಾ ಪುನಃ ಉಪಯೋಗಕ್ಕೆ ತರಬಹುದಾದ ಕಡಮೆ ಕಚಡವನ್ನು ಬಡವರು ಬಿಸಾಡುವುದೆ. ಎರಡನೆಯ ಕಾರಣವು, ಅನೇಕ ಬಡ ನೆಲಸುಸ್ಥಳಗಳನ್ನು ಶಾಸನಬದ್ಧವಾಗಿ ಸ್ಥಾಪಿಸಲ್ಪಟ್ಟವುಗಳೆಂದು ಅಂಗೀಕರಿಸದಿರುವ ಕಾರಣ, ಸರಕಾರಗಳು ಅವುಗಳಿಗೆ ಸಾರ್ವಜನಿಕ ಸೇವೆಯನ್ನು ಅಲ್ಲಗಳೆಯುತ್ತವೆ. ಮೂರನೆಯ ಸಮಸ್ಯೆ ಏನಂದರೆ, ಅನೇಕ ಬಡ ವಠಾರಗಳ ನೆಲೆ ಮತ್ತು ಜನಸಂದಣಿಯ ಕಾರಣ ಅವುಗಳಿಗೆ ಈ ಸೇವೆಯನ್ನು ಒದಗಿಸುವುದು ಕಷ್ಟಕರ ಮತ್ತು ಜಾಸ್ತಿ ವೆಚ್ಚ ತಗಲುವ ವಿಷಯವಾಗಿದೆ.
ಕಚಡಕ್ಕೆ ಏನು ಸಂಭವಿಸುತ್ತದೆ? ಅದನ್ನು ಕೊಳೆಯುವಂತೆ ರಸ್ತೆಯ ಮೇಲೆ, ತೆರೆದ ಪ್ರದೇಶದಲ್ಲಿ, ಮತ್ತು ನದಿ, ಸರೋವರಗಳಲ್ಲಿ ಎಸೆಯಲಾಗುತ್ತದೆ.
ಆರೋಗ್ಯಕ್ಕೆ ಅಪಾಯಗಳು
ನಗರದಲ್ಲಿರುವ ಬಡವರ ಅವಸ್ಥೆಯಲ್ಲಿ ಸ್ಥಳದಿಂದ ಸ್ಥಳಕ್ಕೆ ವ್ಯತ್ಯಾಸವಿದೆ. ಆದರೂ, ಮೂರು ಸಂಗತಿಗಳು ಬಹುಮಟ್ಟಿಗೆ ಸಾರ್ವತ್ರಿಕ. ಒಂದನೆಯದ್ದೇನಂದರೆ, ಅವರ ಮನೆಗಳು ಕೇವಲ ಅನನುಕೂಲ ಮಾತ್ರವಲ್ಲ, ಅವು ಅಪಾಯಕರವೂ ಆಗಿವೆ. ದ ಪೂರ್ ಡೈ ಯಂಗ್ ಎಂಬ ಪುಸ್ತಕ ಹೇಳುವುದು: “ತೃತೀಯ ಜಗತ್ತಿನ ನಗರ ಪ್ರದೇಶಗಳಲ್ಲಿ ಜೀವಿಸುವ ಕಡಮೆ ಪಕ್ಷ 60 ಕೋಟಿ ಜನರಾದರೂ ಜೀವ ಮತ್ತು ಆರೋಗ್ಯಕ್ಕೆ ಅಪಾಯ ತರುತ್ತದೆ ಎಂದು ಹೇಳಬಹುದಾದ ಮನೆ ಮತ್ತು ನೆರೆಹೊರೆಗಳಲ್ಲಿ ಜೀವಿಸುತ್ತಾರೆ.”
ಅಯೋಗ್ಯ ವಸತಿಯು ಯಾವ ವಿಧದಲ್ಲಿ ಅನಾರೋಗ್ಯವನ್ನು ವರ್ಧಿಸಬಲ್ಲದು? ಬಡ ನಗರ ಪ್ರದೇಶಗಳಲ್ಲಿರುವ ಕಿಕ್ಕಿರಿದ ಪರಿಸ್ಥಿತಿಗಳು, ಕ್ಷಯ ರೋಗ, ಇನ್ಫ್ಲುಯೆನ್ಸ, ಮಿದುಳು ಬಳ್ಳಿಯ ಉರಿಯೂತ, ಮೊದಲಾದ ರೋಗಗಳನ್ನು ಹರಡಿಸುವಂತೆ ಸಹಾಯ ಮಾಡುತ್ತವೆ. ವಿಪರೀತ ಜನಸಂದಣಿ ಮನೆಯ ಅಪಘಾತಗಳ ಅಪಾಯವನ್ನೂ ಹೆಚ್ಚಿಸುತ್ತದೆ.
ಸಾಕಷ್ಟು ಶುದ್ಧ ನೀರಿನ ಕೊರತೆಯು, ವಿಷಜ್ವರ, ಯಕೃತ್ತಿನ ಊತ ಮತ್ತು ಆಮಶಂಕೆಯಂಥ ಜಲ ರವಾನಿತ ರೋಗಗಳ ಹರಡುವಿಕೆಯನ್ನು ಹೆಚ್ಚಿಸುತ್ತದೆ. ಇದು, ಕಡಮೆ ಬೆಳವಣಿಗೆಯ ದೇಶಗಳಲ್ಲಿ ಸರಾಸರಿ ಪ್ರತಿ ಇಪ್ಪತ್ತು ಸೆಕೆಂಡುಗಳಿಗೆ ಒಂದು ಮಗುವನ್ನು ಕೊಲ್ಲುವ ಅತಿಭೇದಿ ರೋಗವನ್ನೂ ತರುತ್ತದೆ. ತೊಳೆಯಲು ಮತ್ತು ಸ್ನಾನ ಮಾಡಲು ಸಾಕಷ್ಟು ನೀರಿಲ್ಲದಿರುವಿಕೆಯು ಜನರು ಕಣ್ಣಿನ ಮತ್ತು ಚರ್ಮ ರೋಗಗಳ ಹೆಚ್ಚಿನ ಪ್ರವೃತ್ತಿಯವರಾಗುವಂತೆ ಮಾಡುತ್ತದೆ. ಮತ್ತು ಜನರು ನೀರಿಗೆ ಹೆಚ್ಚು ಹಣ ತೆರಬೇಕಾಗಿರುವಾಗ, ಆಹಾರಕ್ಕೆ ಅವರಲ್ಲಿ ಹಣ ಕಡಮೆ ಇರುತ್ತದೆ.
ನೀರು ಮತ್ತು ಆಹಾರದ ಮಾಲಿನ್ಯವು ಮಲ-ಬಾಯಿ ರೋಗಗಳು ಮತ್ತು ಕೊಕ್ಕೆ ಹುಳು, ದುಂಡು ಹುಳು ಮತ್ತು ಲಾಡಿಹುಳುಗಳಂಥ ಕರುಳಿನ ಹುಳುಗಳನ್ನು ಫಲಿಸುತ್ತದೆ. ಸಂಗ್ರಹಿಸದ ಕಚಡ ಇಲಿ, ನೊಣ, ಮತ್ತು ಜಿರಲೆಗಳನ್ನು ಆಕರ್ಷಿಸುತ್ತದೆ. ನಿಂತು ನಾರುವ ನೀರು ಮಲೇರಿಯ ಮತ್ತು ಫಿಲೇರಿಯಾಸಿಸ್ ರೋಗವಾಹಕ ಸೊಳ್ಳೆಗಳನ್ನು ಹುಟ್ಟಿಸುವ ಸ್ಥಳವಾಗುತ್ತದೆ.
ದಾರಿದ್ರ್ಯ ಕೆಸರು
ಜೋಪಡಿ ಜೀವನದ ಎರಡನೆಯ ಲಕ್ಷಣವೇನಂದರೆ ನಿವಾಸಿಗಳಿಗೆ ಈ ಜೀವನವನ್ನು ಬಿಟ್ಟು ಹೊರಬರುವುದು ವಿಪರೀತ ಕಷ್ಟ. ನಗರಕ್ಕೆ ಬರುವವರಲ್ಲಿ ಹೆಚ್ಚಿನವರು ಗ್ರಾಮೀಣ ಪ್ರದೇಶಗಳಿಂದ ಬಡತನದ ಕಾರಣ ವಲಸೆ ಬಂದವರು. ಯೋಗ್ಯ ವಸತಿಯನ್ನು ಪಡೆಯುವ ಸಾಮರ್ಥ್ಯವಿಲ್ಲದ ಕಾರಣ ಅವರು ತಮ್ಮ ನಗರ ಜೀವನವನ್ನು ಹೊಲಸುಕೇರಿ ಮತ್ತು ಜೋಪಡಿಗಳಲ್ಲಿ ಆರಂಭಿಸಿ ಅನೇಕ ವೇಳೆ ಅಲ್ಲಿಯೇ ಅಂತ್ಯಗೊಳಿಸುತ್ತಾರೆ.
ಈ ಜನರಲ್ಲಿ ಅನೇಕರು ಉದ್ಯೋಗಶೀಲರಾಗಿದ್ದು ಶ್ರಮಪಟ್ಟು ಕೆಲಸಮಾಡಲು ಬಯಸಿದರೂ, ದೀರ್ಘ ತಾಸುಗಳ ಮತ್ತು ಕಡಮೆ ಸಂಬಳದ ಕೆಲಸವಲ್ಲದೆ ಇನ್ನಾವುದನ್ನೂ ಪಡೆಯುವ ಮಾರ್ಗ ಅವರಿಗಿರುವುದಿಲ್ಲ. ತೊಂದರೆಗೊಳಗಾಗಿರುವ ಹೆತ್ತವರು ಅನೇಕ ವೇಳೆ ತಮ್ಮ ಮಕ್ಕಳನ್ನು ಶಾಲೆಯ ಬದಲಿಗೆ ಕೆಲಸಕ್ಕೆ ಕಳುಹಿಸುತ್ತಾರೆ, ಮತ್ತು ತುಸು ವಿದ್ಯೆ ಇರುವ ಯಾ ವಿದ್ಯೆಯೇ ಇಲ್ಲದ ಮಕ್ಕಳಿಗೆ ಅವರ ಹೆತ್ತವರ ಸನ್ನಿವೇಶದಿಂದ ಮೇಲೆದ್ದು ಹೊರಗೆ ಬರುವ ಪ್ರತೀಕ್ಷೆಯು ಕೊಂಚ. ಈ ಎಳೆಯರು ಗಳಿಸುವ ಹಣ ಅತಿ ಕೊಂಚವಾದರೂ, ಅವರ ಸಂಪಾದನೆ ಅನೇಕ ವೇಳೆ ಅವರ ಕುಟುಂಬಕ್ಕೆ ನಿರ್ಣಯಾತ್ಮಕವಾಗಿರುತ್ತದೆ. ಹೀಗೆ, ನಗರದಲ್ಲಿರುವ ಬಡವರಲ್ಲಿ ಬಹುತೇಕ ಜನರಿಗೆ, ತಮ್ಮ ಜೀವನವನ್ನು ಸುಧಾರಿಸುವ ನಿರೀಕ್ಷೆ ಕಡಮೆ; ದಿನದಿಂದ ದಿನಕ್ಕೆ ಪಾರಾಗಿ ಉಳಿಯುವುದೇ ಅವರ ಗುರಿ.
ಪ್ರೀತಿಸಲ್ಪಡದವರು, ಬೇಡವಾದವರು
ಇವರ ಜೀವನದ ಮೂರನೆಯ ಸಂಗತಿಯು ಅವರ ಗೇಣಿ ಹಕ್ಕು ಅನಿಶ್ಚಿತ. ಅನೇಕ ಸರಕಾರಗಳಿಗೆ, ಜೋಪಡಿ ಪಟ್ಟಣಗಳು ಮತ್ತು ಹೊಲಸುಗೇರಿಗಳು ನಾಚಿಕೆ ಹುಟ್ಟಿಸುವ ವಿಷಯಗಳು. ಇಂಥ ಜೋಪಡಿ ಪಟ್ಟಣಗಳನ್ನು ಸುಧಾರಿಸಲು ಕೆಲಸ ನಡೆಸುವ ಬದಲಿಗೆ—ಯಾವಾಗಲೂ ಪ್ರಾಯೋಗಿಕವಲ್ಲ—ಸರಕಾರಗಳು ಅನೇಕ ವೇಳೆ ಇದನ್ನು ಕೆಡವಲು ಬುಲ್ಡೋಸರ್ಗಳನ್ನು ಕಳುಹಿಸುತ್ತವೆ.
ನಗರವನ್ನು ಸುಂದರಗೊಳಿಸಲು, ಪಾತಕಗಳನ್ನು ನಿರ್ಮೂಲಮಾಡಲು ಯಾ ಪ್ರದೇಶವನ್ನು ವಿಕಾಸ ಮಾಡಲು ಇದು ಅಗತ್ಯವೆಂದು ಹೇಳಿ ಸರಕಾರಗಳು ಜೋಪಡಿ ಪಟ್ಟಣಗಳ ನಿರ್ಮೂಲವನ್ನು ನ್ಯಾಯೀಕರಿಸಬಹುದು. ಕಾರಣವು ಯಾವುದೇ ಇದ್ದರೂ ಕಷ್ಟಪಡುವವರು ಬಡವರೇ. ಸಾಮಾನ್ಯವಾಗಿ ಇವರಿಗೆ ಹೋಗಲು ಬೇರೆ ಸ್ಥಳವೇ ಇರುವುದಿಲ್ಲ ಮತ್ತು ಸಿಗುವ ಪರಿಹಾರಧನ ಕೊಂಚ ಇಲ್ಲವೆ ಏನೂ ಇಲ್ಲ. ಆದರೆ ಬುಲ್ಡೋಸರ್ಗಳು ಬರುವಾಗ ಅವರು ಅಲ್ಲಿಂದ ಹೋಗಲೇಬೇಕಲ್ಲದೆ ಇನ್ನಾವ ಆಯ್ಕೆಯೂ ಅವರಿಗಿಲ್ಲ.
ಸರಕಾರದ ಪಾತ್ರ
ನೀರು, ಒಳಚರಂಡಿ ಮತ್ತು ಕಚಡ ತೊಲಗಿಸುವ ಸೇವೆಯಿರುವ ವಸತಿಯನ್ನು ಸರಕಾರ ಸರ್ವರಿಗೂ ಏಕೆ ಒದಗಿಸಿಕೊಡುವುದಿಲ್ಲ? ಸ್ಕಾಟರ್ ಸಿಟಿಸನ್ ಎಂಬ ಪುಸ್ತಕ ಉತ್ತರಿಸುವುದು: “ತೃತೀಯ ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಸಂಪನ್ಮೂಲಗಳ ಕಮ್ಮಿ ಮತ್ತು ಲೋಕ ಮಾರ್ಕೆಟಿನಲ್ಲಿ ಸ್ಥಿರತೆಯ ಮತ್ತು ಸಮೃದ್ಧಿಯ ಪಾತ್ರವನ್ನು ವಿಕಸಿಸುವ ಸಂದರ್ಭವು ಎಷ್ಟು ಕಡಮೆಯಿದೆಯೆಂದರೆ, ರಾಷ್ಟ್ರ ಸರಕಾರಗಳಾಗಿ ಅವುಗಳಿಗಿರುವ ಜೀವನ ಸಾಮರ್ಥ್ಯವನ್ನೇ ಗುರುತರವಾಗಿ ಪ್ರಶ್ನಿಸುವುದು ಸಾಧ್ಯ. ಈಗಿನ ಪರಿಸ್ಥಿತಿಗಳಲ್ಲಿ ಜನರ ಮೂಲ ಆವಶ್ಯಕತೆಗಳನ್ನು ಪೂರೈಸಲು ಸಾಧ್ಯವಿಲ್ಲದಷ್ಟು ಕಡಮೆ ಸಂಪನ್ಮೂಲಗಳು ಇಡಿಯ ರಾಷ್ಟ್ರದಲ್ಲಿರುವಾಗ ಅದರ ಪ್ರಜೆಗಳ ಆವಶ್ಯಕತೆಗಳನ್ನು ಪೂರೈಸಲು ತಪ್ಪುವುದಕ್ಕೆ ಒಬ್ಬನು ಸರಕಾರವನ್ನು ದಂಡಿಸಲು ಸಾಧ್ಯವಿಲ್ಲ.”
ಅನೇಕ ದೇಶಗಳಲ್ಲಿ ಆರ್ಥಿಕ ಸ್ಥಿತಿಗತಿ ಕೆಡುತ್ತಾ ಇದೆ. ಕಳೆದ ವರ್ಷ, ವಿಶ್ವ ಸಂಸ್ಥೆಯ ನಿವೃತ್ತರಾಗುತ್ತಿದ್ದ ಸೆಕ್ರಿಟೆರಿ ಜನರಲ್ ವರದಿ ಮಾಡಿದ್ದು: “ಲೋಕ ಆರ್ಥಿಕತೆಯೊಳಗೆ ಕಡಮೆ ಬೆಳವಣಿಗೆಯ ಹೆಚ್ಚಿನ ದೇಶಗಳ ಸ್ಥಿತಿಯು ಕೆಲವು ಸಮಯದಿಂದ ಕೆಡುತ್ತಾ ಇದೆ. . . . ನೂರು ಕೋಟಿಗೂ ಹೆಚ್ಚು ಜನರು ಈಗ ತೀರಾ ಬಡತನದಲ್ಲಿ ಜೀವಿಸುತ್ತಾರೆ.”
ವಿದೇಶೀ ಸಹಾಯದ ವಿಷಯದಲ್ಲೇನು?
ಸಮೃದ್ಧ ರಾಷ್ಟ್ರಗಳು ಸಹಾಯ ನೀಡಲು ಹೆಚ್ಚಿನದನ್ನು ಏಕೆ ಮಾಡುವುದಿಲ್ಲ? ಬಡತನಕ್ಕೆ ನೀಡುವ ಸಹಾಯದ ಸಂಘಟ್ಟನೆಯನ್ನು ಚರ್ಚಿಸುತ್ತಾ ಲೋಕ ನಿಧಿ ವಿಕಾಸ ವರದಿಯು ಒಪ್ಪಿಕೊಳ್ಳುವುದು: “ದಿಪ್ವಾರ್ಶ್ವಕ ದಾನಿಗಳು [ಎಲ್ಲ ವಿದೇಶೀ ಸಹಾಯದಲ್ಲಿ 64 ಪ್ರತಿಶತವನ್ನು ಕೊಡುತ್ತಾರೆ] . . . ಅನೇಕ ಕಾರಣಗಳಿಗೆ—ರಾಜಕೀಯ, ಸಂಚಾಲನ ವಿವೇಕ ಸಂಬಂಧ, ವಾಣಿಜ್ಯ, ಮತ್ತು ಮಾನವ ಹಿತ—ಸಹಾಯ ನೀಡುತ್ತಾರೆ. ಬಡತನವನ್ನು ಕಡಮೆ ಮಾಡುವುದು ಇದರ ಒಂದು—ಅತಿ ಪ್ರಾಮುಖ್ಯವಾಗಿರುವುದಕ್ಕಿಂತ ತೀರಾ ಕೆಳಗಿರುವ—ಉದ್ದೇಶ.”
ಇನ್ನೊಂದು ಪಕ್ಕದಲ್ಲಿ, ಬಡವರ ಕಷ್ಟಾವಸ್ಥೆಯನ್ನು ಸುಧಾರಿಸಲು ಸಾಕಷ್ಟು ಸಂಪತ್ತು ಇದ್ದರೂ, ಸರಕಾರಗಳು ಯಾವಾಗಲೂ ಹಾಗೆ ಮಾಡುವುದಿಲ್ಲ. ಅನೇಕ ರಾಷ್ಟ್ರಗಳಲ್ಲಿರುವ ಸಮಸ್ಯೆ ಏನಂದರೆ ಸ್ಥಳೀಕ ಸರಕಾರ ವಸತಿ ಮತ್ತು ಸೇವೆಗಳನ್ನು ಒದಗಿಸಬೇಕಾದರೂ ಮೇಲ್ಮಟ್ಟದ ಸರಕಾರಗಳು ಅವುಗಳಿಗೆ ಆ ಕೆಲಸವನ್ನು ಮಾಡುವ ಸಲುವಾಗಿ ಅಧಿಕಾರವನ್ನಾಗಲಿ ನಿಧಿಯನ್ನಾಗಲಿ ಕೊಡುವುದಿಲ್ಲ.
ಭವಿಷ್ಯತ್ತಿನ ನಗರಗಳು
ನಿಪುಣರು ಇತ್ತೀಚಿನ ದಶಕಗಳ ಪ್ರವೃತ್ತಿಗಳ ಮೇಲೆ ಆಧಾರ ಮಾಡಿಕೊಂಡು, ಕಡಮೆ ಬೆಳವಣಿಗೆಯ ದೇಶಗಳ ನಗರಗಳ ಬಡವರಿಗೆ ನಿರಾಶಾದಾಯಕ ಭವಿಷ್ಯವನ್ನು ಕಲ್ಪಿಸುತ್ತಾರೆ. ಶೀಘ್ರ ನಗರ ಬೆಳವಣಿಗೆಯು ನಡೆಯುತ್ತಾ ಹೋಗುವುದೆಂದೂ ಹೆಚ್ಚಿನ ನಗರ ನಿವಾಸಿಗಳಿಗೆ ನಳ್ಳಿಯ ನೀರು, ಒಳಚರಂಡಿ, ನೀರ್ಗಾಲುವೆ, ಹದಿಸಿದ ರಸ್ತೆ, ಆರೋಗ್ಯಾರೈಕೆ, ಮತ್ತು ತುರ್ತು ಸೇವೆಗಳನ್ನು ಸರಕಾರವು ಒದಗಿಸಲಾರದೆಂದೂ ಅವರ ಹೇಳಿಕೆ.
ಇಂಥ ನೆಲಸುಸ್ಥಳಗಳನ್ನು ಹೆಚ್ಚೆಚ್ಚಾಗಿ ಬೆಟ್ಟದ ಬದಿಗಳಲ್ಲಿ, ನೆರೆ ಬರುವ ಬಯಲುಗಳಲ್ಲಿ, ಯಾ ಮಲಿನ ಜಮೀನಿನಲ್ಲಿ ಕಟ್ಟಲಾಗುವುದು. ಮತ್ತು ಜನರು ಕಿಕ್ಕಿರಿದ, ಅನಾರೋಗ್ಯಕರವಾದ ಪರಿಸ್ಥಿತಿಗಳ ಕಾರಣ ಹೆಚ್ಚೆಚ್ಚಾಗಿ ರೋಗಪೀಡಿತರಾಗುವರು. ನಗರದ ಬಡವರು ಹೆಚ್ಚೆಚ್ಚಾಗಿ ಬಲಾತ್ಕಾರದಿಂದ ಹೊರಡಿಸಿ ಬಿಡುವ ಎಡೆಬಿಡದ ಬೆದರಿಕೆಯಿಂದ ಜೀವಿಸುವರು.
ಹಾಗಾದರೆ ಈ ಚರ್ಚೆಯ ಮೊದಲಲ್ಲಿ ವರ್ಣಿಸಿದ ಆ ಕಿತ್ತಿಳೆ ಹೊತ್ತಿದ್ದ ಹುಡುಗಿಯಂತಹ ಜೋಪಡಿ ನಿವಾಸಿಗಳಿಗೆ ಯಾವ ನಿರೀಕ್ಷೆಯೂ ಇಲ್ಲವೆಂದು ಇದರ ಅರ್ಥವೆ? ನಿಶ್ಚಯವಾಗಿ ಅಲ್ಲ!
ನಾಟಕೀಯ ಬದಲಾವಣೆ ಆಗಮಿಸುತ್ತಿದೆ
ದೇವರ ವಾಕ್ಯವಾದ ಬೈಬಲು, ಉತ್ತಮಗೊಳಿಸುವ ನಾಟಕೀಯ ಬದಲಾವಣೆಯೊಂದು ಬರಲಿದೆ—ಬೇಗನೆ—ಎಂದು ತೋರಿಸುತ್ತದೆ. ಈ ಪರಿವರ್ತನೆ ಮಾನವ ಸರಕಾರಗಳ ಪ್ರಯತ್ನದಿಂದಲ್ಲ, ಪೂರ್ತಿ ಭೂಮಿಯನ್ನು ಬೇಗನೆ ನಿಯಂತ್ರಿಸಲಿರುವ ಒಂದು ಸ್ವರ್ಗೀಯ ಸರಕಾರವಾದ ದೇವರ ರಾಜ್ಯದ ಮೂಲಕ ಬರಲಿದೆ.—ಮತ್ತಾಯ 6:10.
ದೇವರ ರಾಜ್ಯದ ಕೆಳಗೆ, ಹೊಲಸಾದ ಕೇರಿ ಮತ್ತು ಜೋಪಡಿಗಳಲ್ಲಿ ಸಿಕ್ಕಿಬೀಳುವ ಬದಲಿಗೆ, ದೇವಭಕ್ತಿಯ ಕುಟುಂಬಗಳು ಒಂದು ಪ್ರಮೋದವನದಲ್ಲಿ ಜೀವಿಸುವುವು. (ಲೂಕ 23:43) ಹೊರಡಿಸಿ ಬಿಡುವರೆಂಬ ಎಡೆಬಿಡದ ಭಯದ ಬದಲಿಗೆ, “ಒಬ್ಬೊಬ್ಬನು ತನ್ನ ತನ್ನ ದ್ರಾಕ್ಷಾಲತೆ, ಅಂಜೂರ ಗಿಡ, ಇವುಗಳ ನೆರಳಿನಲ್ಲಿ ಕೂತುಕೊಳ್ಳುವನು; ಅವರನ್ನು ಯಾರೂ ಹೆದರಿಸರು,” ಎಂದು ಬೈಬಲು ಹೇಳುತ್ತದೆ.—ಮೀಕ 4:4.
ದೇವರ ರಾಜ್ಯದ ಕೆಳಗೆ, ಕೂಡೊಕ್ಕಲಿನ ಕೊಟಡಿಗಳಲ್ಲಿ ಚಿಕ್ಕಂದಿನಲ್ಲೇ ಸಾಯುವ ಬದಲಿಗೆ ಜನರು “ತಾವು ಕಟ್ಟಿದ ಮನೆಗಳಲ್ಲಿ ತಾವೇ ವಾಸಿಸುವರು, ತಾವು ಮಾಡಿದ ತೋಟಗಳ ಫಲವನ್ನು ತಾವೇ ಅನುಭವಿಸುವರು. . . . ನನ್ನ ಜನರ ಆಯುಸ್ಸು ವೃಕ್ಷದ ಆಯುಸ್ಸಿನಂತಿರುವುದು.”—ಯೆಶಾಯ 65:21, 22.
ಈ ವಾಗ್ದಾನಗಳನ್ನು ನಂಬಲು ನಿಮಗೆ ಕಷ್ಟವಾಗಬಹುದು ನಿಜ, ಆದರೆ ಅವು ನಿಜವಾಗುವುದು ನಿಶ್ಚಯ. ಏಕೆ? ಏಕೆಂದರೆ ದೇವರು ಸುಳ್ಳಾಡನು, ಮತ್ತು “ದೇವರಿಂದ ಬರುವ ಯಾವ ಮಾತಾದರೂ ನಿಷ್ಫಲವಾಗುವದಿಲ್ಲ.”—ಲೂಕ 1:37; ಅರಣ್ಯಕಾಂಡ 23:19. (g92 10/8)
[ಪುಟ 14 ರಲ್ಲಿರುವ ಚಿತ್ರ]
ದೇವರ ರಾಜ್ಯದ ಕೆಳಗೆ ಬಡತನ ಮತ್ತು ಜೋಪಡಿ ಪಟ್ಟಣಗಳು ಪ್ರಮೋದ ವನದಂಥ ಪರಿಸ್ಥಿತಿಗಳಿಂದ ಭರ್ತಿಯಾಗುವುವು