ಬೈಬಲಿನ ದೃಷ್ಟಿಕೋನ
ಸಕಲ ಧರ್ಮೋತ್ಸವಗಳು ದೇವರನ್ನು ಮೆಚ್ಚಿಸುತ್ತವೆಯೆ?
ನಿಜವಾಗಿ ನಂಬುವ 20,000 ಮಂದಿ ಜನರ ಗುಂಪು ನಗರ ಚೌಕದಲ್ಲಿ ಒಂದು ವಿಶೇಷ ಪೂಜೆಯನ್ನು ಆಚರಿಸುತ್ತದೆ. ಪೂಜೆ ಮುಗಿದಾಗ ಮೆರೆವಣಿಗೆ ಆರಂಭವಾಗುತ್ತದೆ. ಈಗ ಆರಾಧಕರ ಗುಂಪು 60,000 ಮಂದಿಗೆ ಏರಿ, ಅವರೆಲ್ಲ ನೋಸ ಸನ್ಯೋರ ಆಪಾರೆಸೀಡ ಎಂಬ ಬ್ರೆಸೀಲಿನ ರಕ್ಷಕ “ಸಂತ”ನ ಮೂರ್ತಿಯ ಹಿಂದಿನಿಂದ ಬೀದಿಗಳಲ್ಲಿ ನಡೆದು ಹೋಗುತ್ತಾರೆ. ನಡು ಮಧ್ಯಾಹ್ನದಲ್ಲಿ, ಯಾತ್ರಿಕರು ಸುಡುಮದ್ದಿನ ಕಣ್ಣುಕೋರೈಸುವ ಪ್ರದರ್ಶನವನ್ನು ನಡೆಸುವಾಗ ದೇವಾಲಯದ ಸಮೀಪ ದೊಡ್ಡ ಸಿಡಿತದ ಸದ್ದು ಕೇಳಿಬರುತ್ತದೆ.
ಇಂಥ ಮೆರೆವಣಿಗೆಯ ಧಾರ್ಮಿಕ ಉತ್ಸವಗಳು ಅನೇಕ ದೇಶಗಳಲ್ಲಿ ಸಾಮಾನ್ಯ. ಆದರೆ ಈ ಮೆರೆವಣಿಗೆಗಳಲ್ಲಿ ಸೇರುವಂತೆ ಜನಸಂದಣಿಯನ್ನು ಯಾವುದು ಪ್ರೇರೇಪಿಸುತ್ತದೆ? ಕ್ಯಾಥೊಲಿಕರಿಗೆ, ಬೌದ್ಧರಿಗೆ ಮತಿತ್ತರ ಧರ್ಮಗಳಿಗಿರುವ ಎರಡು ಮುಖ್ಯ ಪ್ರೇರಕ ವಸ್ತುಗಳು ಸಂಪ್ರದಾಯ ಮತ್ತು ಭಕ್ತಿ. ಇದಲ್ಲದೆ, ಹಿಂದಿನಂತೆಯೇ ವಿನೋದಾವಳಿ ಇನ್ನೊಂದು ಪ್ರಾಮುಖ್ಯ ಸಂಗತಿಯಾಗಿರಬಹುದು. ಮಧ್ಯ ಯುಗಗಳಲ್ಲಿ “ಅನೇಕ ಧಾರ್ಮಿಕ ಉತ್ಸವಗಳು ವಿನೋದ ವಿಹಾರಗಳಿಗೆ ಪ್ರಮುಖತೆಯನ್ನು ಕೊಟ್ಟವು. ಜನರು ತಮ್ಮ ದೈನಂದಿನ ಜೀವಿತದ ಕಷ್ಟಗಳನ್ನು ಮರೆಯುವಂತೆ ಅವು ಅವಕಾಶ ಕೊಟ್ಟವು.” ಎಂದು ದ ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯ ಹೇಳುತ್ತದೆ. ಇದು ಅನೇಕ ವೇಳೆ ಇಂದೂ ಸತ್ಯವಾಗಿದೆ. ದೃಷ್ಟಾಂತಕ್ಕೆ, ಬ್ರೆಸೀಲ್ನ ಸಾಲ್ವೆಡೋರ್, ಕಾರ್ನಿವಲ್ ಸ್ವೇಚ್ಛಾ ವಿಹಾರೋತ್ಸವದಲ್ಲಿ ಉಚ್ಚದೆಸೆಗೇರುವ ಅನೇಕ ಆಚರಣೆ ಮತ್ತು ಪಾನವಿಲಾಸಗಳಲ್ಲಿ ರಹಸ್ಯ ಸಂಸ್ಕಾರ ಮತ್ತು ವಿನೋದಗಳ ಮಿಶ್ರಣವಿರುವ ಧಾರ್ಮಿಕ ಹಾಗೂ ಜನಪ್ರಿಯ ಉತ್ಸವಗಳಿಗೆ ಪ್ರಸಿದ್ಧ. ಆದರೂ, ಕೆಲವು ಧಾರ್ಮಿಕ ಮೆರೆವಣಿಗೆಗಳು ಉಲ್ಲಾಸಶೀಲದ್ದಾಗಿರುವಾಗ, ಇನ್ನು ಕೆಲವು ಪವಿತ್ರ ಗಂಭೀರ ರೀತಿಯದ್ದಾಗಿವೆ.
“ಮೂರ್ತಿ ಮತ್ತು ಪುರೋಹಿತರೊಡಗೂಡಿ, ಕೆಲವರು ಗೀತ ಹಾಡುತ್ತಿದ್ದಾಗ ಇತರರು ಮೌನವಾಗಿ ಅವರನ್ನು ಹಿಂಬಾಲಿಸುತ್ತಿದ್ದರು,” ಎಂದು ಬ್ರೆಸೀಲಿನ ಪ್ರತಿನಿಧಿರೂಪದ ಒಂದು ಮೆರೆವಣಿಗೆಯನ್ನು ಭೇಟಿ ಮಾಡಿದವನೊಬ್ಬನು ಗಮನಿಸುತ್ತಾನೆ. “ಆದರೆ ಈ ದೃಶ್ಯದಲ್ಲಿ ಎದ್ದು ಕಂಡುಬಂದದ್ದು, ಜನರು ಒಂದು ಶವಸಂಸ್ಕಾರಕ್ಕೆ ಹಾಜರಾಗುತ್ತಿದ್ದಾರೊ ಎಂಬಂತಿದ್ದ ಗಾಂಭೀರ್ಯ ಯಾ ದುಃಖ.” ಮತ್ತು ಬ್ರೆಸೀಲಿನ ಉತ್ತರ ಭಾಗದಲ್ಲಿ ಜೀವಿಸುವ ಲೂಸೀಯೊ ಹೇಳುವುದು: “ನಾನು ಒಂದೊಮ್ಮೆ ಮಾಡಿದಂತೆ, ಜನರು ಹತಾಶೆಯಿಂದ ಚಿಕಿತ್ಸೆಯನ್ನು ಯಾ ಕುಟುಂಬದ ಯಾ ಆರ್ಥಿಕ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕುತ್ತಾರೆ. ಅನೇಕ ವೇಳೆ ರಕ್ಷಕ ‘ಸಂತ’ನಿಗೆ ತೋರಿಸುವ ಭಕ್ತಿಯಲ್ಲಿ ಮೂರ್ತಿಗೆ ಮುದ್ದಿಡುವುದು, ಒಬ್ಬನ ಮೊಣಕಾಲುಗಳಿಂದ ಮೆಟ್ಟಲು ಹತ್ತುವುದು, ಯಾ ಒದು ಕಲ್ಲು ಹೊತ್ತುಕೊಂಡು ಬಹು ದೂರದ ತನಕ ನಡೆಯುವುದು ಸೇರಿವೆ.”
ಇಂಥ ಆತ್ಮ ಹೇರಿಕೆಯ ತ್ಯಾಗಗಳು ಅವಿಶ್ವಾಸಿಗಳಿಗೆ ವಿಚಿತ್ರವಾಗಿ ಕಾಣಬಹುದು. ಆದರೂ ಇದರಲ್ಲಿ ಭಾಗಿಗಳು ತಾವು ದೇವರನ್ನು ಮೆಚ್ಚಿಸುತ್ತೇವೆಂದು ಎಣಿಸುತ್ತಾರೆ. ಆದರೆ ಮೆಚ್ಚಿಸುವುದು ನಿಜವೊ? ಇಂಥ ಧಾರ್ಮಿಕ ಉತ್ಸವಗಳು ಮತ್ತು ಮೆರೆವಣಿಗೆಗಳು ದೇವರನ್ನು ಮೆಚ್ಚಿಸುತ್ತವೋ ಇಲ್ಲವೋ ಎಂಬುದನ್ನು ನೋಡಲು ಬೈಬಲು ನಮಗೆ ಸಹಾಯ ಮಾಡುತ್ತ.
ಅವು ದೇವರ ಅನುಗ್ರಹವನ್ನು ತರುತ್ತವೆಯೆ?
ಪುರಾತನದ ಇಸ್ರಾಯೇಲು ವಾರ್ಷಿಕ ಹಾಗೂ ನಿಯತಕಾಲಿಕ ಹಬ್ಬಗಳನ್ನು ಉಲ್ಲಾಸದಿಂದ ಆಚರಿಸುತ್ತಿತ್ತೆಂದು ಇತಿಹಾಸ ನಮಗೆ ತಿಳಿಸುತ್ತದೆ. ಇಂಥ ಉತ್ಸವಗಳು ಯೆಹೋವ ದೇವರನ್ನು ಘನಪಡಿಸಿದವು. (ಧರ್ಮೋಪದೇಶಕಾಂಡ 16:14, 15) ಬೈಬಲಿನ ಹಬ್ಬಗಳ ಕುರಿತು ದಿ ಇಲಸ್ಟ್ರೇಟೆಡ್ ಬೈಬಲ್ ಡಿಕ್ಷನೆರಿ ಹೇಳುವುದು: “ಇಲ್ಲಿ ವ್ಯಕ್ತಪಡಿಸಿದ ಆನಂದ ಹೃತ್ಪೂರ್ವಕವಾದುದಾಗಿತ್ತು. ಧಾರ್ಮಿಕ ಕಟ್ಟುಪಾಡ, ದೇವರ ಕೊಡುಗೆಗಳೆಂದು ಭಾವಿಸಲ್ಪಡುತ್ತಿದ್ದ ಲೌಕಿಕ ವಸ್ತುಗಳಲ್ಲಿ ಸುಖಾನುಭವಕ್ಕೆ ಹೊಂದಿಕೆಯಿಲ್ಲದ್ದಾಗಿರಲಿಲ್ಲ.” ಧರ್ಮೋತ್ಸವಗಳಿದ್ದರೂ ಇಸ್ರಾಯೇಲಿನ ಯಾಜಕರೂ ಜನರೂ ತಮ್ಮ ಅಧ್ಯಾತ್ಮಿಕತೆಯನ್ನು ಅಲಕ್ಷ್ಯ ಮಾಡಿದರು. (ಯೆಶಾಯ 1:15-17; ಮತ್ತಾಯ 23:23) ಆದರೂ, ಈಗ ಏಳುವ ಪ್ರಶೆಯು, ಧಾರ್ಮಿಕ ಮೆರೆವಣಿಗೆಗಳು ಒಂದನೆಯ ಶತಮಾನದ ಕ್ರೈಸ್ತತ್ವದ ಭಾಗವಾಗಿದ್ದವೊ?
ಯೇಸು ಕ್ರಿಸ್ತನು ಕೆಲವು ಯೆಹೂದಿ ಉತ್ಸವಗಳನ್ನು ಆಚರಿಸಿದನಾದರೂ, ಯೇಸುವಾಗಲಿ, ಅವನ ಅಪೊಸ್ತಲರಾಗಲಿ ಧಾರ್ಮಿಕ ಮೆರೆವಣಿಗೆಗಳನ್ನು ಆರಂಭಿಸಲಿಲ್ಲ. ದಿ ಎನ್ಸೈಕ್ಲೊಪೀಡಿಯ ಬ್ರಿಟ್ಯಾನಿಕ ಹೇಳುವುದು: “ಮೆರೆವಣಿಗೆಗಳು 4ನೆಯ ಶತಮಾನದಲ್ಲಿ ಕಾನ್ಸೆಂಟೀನನು ಕ್ರೈಸ್ತತ್ವಕ್ಕೆ ಸಾಮ್ರಾಜ್ಯದ ಧರ್ಮವಾಗಿ ಮನ್ನಣೆ ಕೊಟ್ಟ ಸ್ವಲ್ಪದರಲ್ಲಿಯೆ ರೂಢಿಗೆ ಬಂದುವೆಂದು ತೋರಿಬರುತ್ತದೆ.” ಮತ್ತು ದ ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯ ಹೇಳುವುದು: “ಚರ್ಚ್ ಉತ್ಸವಗಳು [ಅವುಗಳ ಮೆರೆವಣಿಗೆಗಳೊಂದಿಗೆ] ಅನೇಕ ವಿಧರ್ಮಿ ವಾಡಿಕೆಗಳನ್ನು ವಶಪಡಿಸಿಕೊಂಡು ಅವುಗಳಿಗೆ ಹೊಸ ಅರ್ಥವನ್ನು ಕೊಟ್ಟವು.”
ಇಂಥ ಧರ್ಮೋತ್ಸವ ಮತ್ತು ಮೆರೆವಣಿಗೆಗಳಲ್ಲಿ ಸೇರಲು ಕ್ರೈಸ್ತರಿಗೆ ಯಾವ ಹಂಗೂ ಇಲ್ಲ. ದೇವರ ನಿಯಮವು ಇಸ್ರಾಯೇಲ್ಯರಿಂದ ಕೇಳಿಕೊಂಡ ಉತ್ಸವಗಳನ್ನು ಸೂಚಿಸುವಾಗ ಅಪೊಸ್ತಲ ಪೌಲನು ಬರೆದುದು: “ಹೀಗಿರುವದರಿಂದ ತಿಂದು ಕುಡಿಯುವ ವಿಷಯದಲ್ಲಿಯೂ ಹಬ್ಬ ಅಮಾವಾಸ್ಯೆ ಸಬ್ಬತು ಎಂಬಿವುಗಳ ವಿಷಯದಲ್ಲಿಯೂ ನಿಮ್ಮನ್ನು ದೋಷಿಗಳೆಂದು ಯಾರೂ ಎಣಿಸಬಾರದು. ಇವು ಮುಂದೆ ಬರಬೇಕಾಗಿದ್ದ ಕಾರ್ಯಗಳ ಛಾಯೆಯಾಗಿವೆ; ಇವುಗಳ ನಿಜ ಸ್ವರೂಪವು ಕ್ರಿಸ್ತನೇ.” (ಕೊಲೊಸ್ಸೆ 2:16, 17) ದೇವರ ಮುಂದೆ ಕ್ರೈಸ್ತರಿಗಿದ್ದ ನೆಲೆಯನ್ನು ಮೋಶೆಯ ಧರ್ಮಶಾಸ್ತ್ರದಲ್ಲಿದ್ದ ಉತ್ಸವಗಳ ಆಚರಣೆಯ ಆಧಾರದಲ್ಲಿ ಯಾರೂ ತೀರ್ಮಾನ ಮಾಡಲು ಕೊಲೊಸ್ಸೆಯ ಕ್ರೈಸ್ತರು ಬಿಡಬಾರದಾಗಿತ್ತು.
ಮೆರೆವಣಿಗೆಗಳಿಗಿಂತಲೂ ಹೆಚ್ಚು ಉತ್ತಮವಾದುದು
ಕೊಲೊಸ್ಸೆಯವರು ತಮ್ಮ ಕ್ರೈಸ್ತ ನಂಬಿಕೆಯನ್ನು ಒಂದು ಸಂಸ್ಕಾರದೊಂದಿಗೆ ಗುರುತಿಸುತ್ತಿದ್ದಲ್ಲಿ ಅದು ಅವರ ನಂಬಿಕೆಯ ತಿರೋಗತಿಯಾಗುತ್ತಿತ್ತು. ಸತ್ಯದ ಕೇವಲ ಒಂದು ಛಾಯೆಯನ್ನು ಏಕೆ ಅನುಸರಿಸಬೇಕೆಂಬುದೇ ಪೌಲನ ನ್ಯಾಯವಾದವಾಗಿತ್ತು. ನಿಜ ಸತ್ಯವು ಕ್ರಿಸ್ತನೇ. ಆದುದರಿಂದ, ಪ್ರವಾದನಾ ಛಾಯೆಯನ್ನು ಹಿಡಿದುಕೊಳ್ಳುವುದೆಂದರೆ, ಅವು ಯಾವುದನ್ನು ತೋರಿಸುತ್ತವೆಯೋ ಆ ಆತ್ಮಿಕ ನಿಜತ್ವವನ್ನು ಮಬ್ಬಾಗಿಸುವುದೆಂದರ್ಥ. ಏಕೆ? ಏಕೆಂದರೆ, ಪೌಲನು ಹೇಳಿದಂತೆ, “ಇವುಗಳ ನಿಜ ಸ್ವರೂಪವು ಕ್ರಿಸ್ತನೇ.” ಹೀಗೆ, ಇಂದು ಇಂಥ ಧಾರ್ಮಿಕ ಆಚರಣೆಗಳು ನಿಜ ಕ್ರೈಸ್ತಾರಾಧನೆಯ ಭಾಗವಾಗಿರುವುದಿಲ್ಲ.
ಹಾಗಾದರೆ, ಕ್ರೈಸ್ತರು ಈ ದೈವಿಕ ಮೂಲದಿಂದ ಬಂದ ಪದ್ಧತಿಗಳನ್ನು ಆಚರಿಸುವ ಆವಶ್ಯಕತೆಯೊಳಗಿಲ್ಲ, ಮತ್ತು ವಿಧರ್ಮಿ ಮೂಲದ, ಮೂರ್ತಿ, ಪಾನವಿಲಾಸಗಳು ಕೂಡಿರಬಹುದಾದ ಉತ್ಸವಗಳನ್ನು ಅವರು ನಿಶ್ಚಯವಾಗಿ ತ್ಯಜಿಸಬೇಕು. (ಕೀರ್ತನೆ 115:4-8) ಅಪೊಸ್ತಲ ಪೌಲನು ಎಚ್ಚರಿಸಿದ್ದು: “ನೀವು ಕ್ರಿಸ್ತನಂಬಿಕೆಯಿಲ್ಲದವರೊಂದಿಗೆ ಸೇರಿ ಇಜ್ಜೋಡಾಗಬೇಡಿರಿ. ಧರ್ಮಕ್ಕೂ ಅಧರ್ಮಕ್ಕೂ ಜೊತೆಯೇನು? ಬೆಳಕಿಗೂ ಕತ್ತಲೆಗೂ ಐಕ್ಯವೇನು? ಕ್ರಿಸ್ತನಿಗೂ ಸೈತಾನನಿಗೂ ಒಡನಾಟವೇನು?” (2 ಕೊರಿಂಥ 6:14, 15) ಇನ್ನೊಂದು ಮಾತಿನಲ್ಲಿ, ನಾವು ದೇವರನ್ನು ಮೆಚ್ಚಿಸಬಯಸುವಲ್ಲಿ, ಸತ್ಯಾರಾಧನೆಯನ್ನು ಸುಳ್ಳಿನೊಂದಿಗೆ ಬೆರಕೆಮಾಡಸಾಧ್ಯವಿಲ್ಲ. ನಾವು ದೇವರ ಚಿತ್ತವನ್ನು ಅಲಕ್ಷ್ಯಮಾಡುತ್ತಾ ಆತನನ್ನು ಹೇಗೆ ಮೆಚ್ಚಿಸಬಲ್ಲೆವು?—ಮತ್ತಾಯ 7:21.
ಇಲ್ಲ, ಮೆರೆವಣಿಗೆಗಳು ಕೂಡಿರುವ ವಿಧರ್ಮಿ ಉತ್ಸವಗಳಿಗೆ ದೇವರು ಒಪ್ಪಿಗೆ ಕೊಡುವುದಿಲ್ಲ. ವಾಸ್ತವವೇನಂದರೆ, ಅವುಗಳು ದೇವರ ವಾಕ್ಯ ಮುಂತಿಳಿಸಿರುವಂತೆ, ಯೆಹೋವನನ್ನು ಅವಮಾನಪಡಿಸುವ ಸಕಲ ವಾಡಿಕೆಗಳೊಂದಿಗೆ ಕಾಣದೆ ಹೋಗುವುವು. ಪ್ರಕಟನೆ 18:21, 22ರಲ್ಲಿ, ಸುಳ್ಳು ಧರ್ಮ ಮತ್ತು ಅದರ ಆಚರಣೆಗಳು ವಿಧರ್ಮಿ ನಗರವಾದ ಬಾಬೆಲಿಗೆ ಸಂಬಂಧಿಸಲ್ಪಟ್ಟಿವೆ. ಅಲ್ಲಿ ಓದುವುದು: “ಆಗ ಬಲಿಷ್ಠನಾದ ಒಬ್ಬ ದೇವದೂತನು ದೊಡ್ಡ ಬೀಸುವ ಕಲ್ಲಿನಂತಿರುವ ಒಂದು ಕಲ್ಲನ್ನು ಎತ್ತಿ ಸಮುದ್ರದೊಳಗೆ ಹಾಕಿ—ಮಹಾ ಪಟ್ಟಣವಾದ ಬಾಬೆಲು ಹೀಗೆಯೇ ದಡದಡನೆ ಕೆಡವಲ್ಪಟ್ಟು ಇನ್ನೆಂದಿಗೂ ಕಾಣಿಸುವದಿಲ್ಲ. ಬಾಬೆಲೇ, ನಿನ್ನಲ್ಲಿ ವೀಣೆಗಾರರೂ ವಾದ್ಯಗಾರರೂ ಕೊಳಲೂದುವವರೂ ತುತೂರಿಯವರೂ ಮಾಡುವ ಧ್ವನಿಯು ಇನ್ನೆಂದಿಗೂ ಕೇಳಿಸುವದಿಲ್ಲ.” ಬಾಬೆಲಿನ ಧಾರ್ಮಿಕ ಉತ್ಸವಗಳು ದೇವರನ್ನು ಅಸಮಾಧಾನಗೊಳಿಸುತ್ತವೆಂದು ಕಂಡುಕೊಂಡಿರುವ ನೀವು ಏನು ಮಾಡುವಿರಿ?
ನೀವು ಒಂದು ಪ್ರಾಮುಖ್ಯ ಗಮ್ಯ ಸ್ಥಾನಕ್ಕೆ ಪ್ರವಾಸ ಮಾಡುತ್ತೀರೆಂದೂ, ಆದರೆ ನಿಮಗೆ ದಾರಿ ತಪ್ಪಿದೆಯೆಂದೂ ಭಾವಿಸಿರಿ. ಯಾವನಾದರೂ ನಿಮಗೆ ದಯೆಯಿಂದ ನಿಮ್ಮ ಗಮ್ಯ ಸ್ಥಾನಕ್ಕೆ ಭದ್ರವಾಗಿ ಹೋಗಿ ಮುಟ್ಟುವ ಮಾರ್ಗವನ್ನು ತೋರಿಸುವಲ್ಲಿ, ಸರಿಯಾದ ಮಾರ್ಗವನ್ನು ಕಂಡುಹಿಡಿದ ಕಾರಣ ನೀವು ಕೃತಜ್ಞರಾಗುವುದಿಲ್ಲವೆ? ತದ್ರೀತಿ, ದೇವರು ಧಾರ್ಮಿಕ ಮೆರೆವಣಿಗೆಗಳನ್ನು ಹೇಗೆ ವೀಕ್ಷಿಸುತ್ತಾನೆಂದು ಕಲಿತಿರುವ ನೀವು, ಆತನನ್ನು ಯಾವುದು ಮೆಚ್ಚಿಸುತ್ತದೆಂದು ನೋಡಲು ಆತನ ವಾಕ್ಯವನ್ನು ಏಕೆ ಇನ್ನೂ ಹೆಚ್ಚು ಪರೀಕ್ಷಿಸಬಾರದು? ಬೈಬಲಿನಿಂದ ನೀವು ಕಲಿಯುವ ವಿಷಯಕ್ಕನುಸಾರವಾಗಿ ವರ್ತಿಸುವುದು ದೇವರೊಂದಿಗೆ ಉತ್ತಮ ಸಂಬಂಧವಿರುವಂತೆ ಸಹಾಯ ಮಾಡುವುದು. ಮತ್ತು ಇದು ಧರ್ಮೋತ್ಸವ ಮತ್ತು ಮೆರೆವಣಿಗೆಗಳನ್ನು ಆಚರಿಸುವುದಕ್ಕಿಂತ ಎಷ್ಟೋ ಮೇಲು.—ಯೋಹಾನ 17:3. (g92 11/8)
[ಪುಟ 26 ರಲ್ಲಿರುವ ಚಿತ್ರ ಕೃಪೆ]
Dutch Easter procession, Harper’s, 19th century