ಯುವ ಜನರು ಪ್ರಶ್ನಿಸುವುದು . . .
ನನ್ನ ಹೆತ್ತವರು ನನ್ನಲ್ಲಿ ಹೆಚ್ಚು ಆಸಕ್ತಿಯನ್ನು ಏಕೆ ತೋರಿಸುವುದಿಲ್ಲ?
“ನಾನು ಎಂದಾದರೂ ನನ್ನ ತಾಯಿಯೊಡನೆ ಅವಳ ಸಮಯದಲ್ಲಿ ಐದು ನಿಮಿಷಗಳನ್ನು ಕೇಳುವಲ್ಲಿ ಅವಳು ಸದಾ ತೀರಾ ಕಾರ್ಯಮಗ್ನಳಾಗಿರುತ್ತಾಳೆ,” ಎಂದು ಪ್ರಲಾಪಿಸುತ್ತಾಳೆ, ಒಬ್ಬ ಹದಿ ಹರೆಯದ ಹುಡುಗಿ.
ಕ್ರಿಸ್ತೀನಗೆ ಹದಿನಾರು ವಯಸ್ಸಾಗಿತ್ತು. ಆಕೆ ಅವಿವಾಹಿತಳು, ಆದರೆ ಗರ್ಭಿಣಿ. ಅವಳ ಸಂಕಟದ ನಿಮಿತ್ತ ಅವಳಿಗೆ ಮನದಳುಕು ಇದ್ದರೂ ಅವಳು ನಿಷ್ಠುರಳೂ ಆಗಿದ್ದಳು. “ನನ್ನ ತಾಯಿ ಈ ವಿಷಯಗಳನ್ನು ವಿವರಿಸುವ ಗೊಡವೆಗೇ ಹೋಗಲಿಲ್ಲ. ನಾನು ಮಾಡುತ್ತಿದ್ದ ವಿಷಯಗಳಲ್ಲಿ ಆಸಕ್ತಿ ತೋರಿಸಲು ಅವರಿಗೆ ಸಮಯವೇ ಇರಲಿಲ್ಲ,” ಎಂದು ಅವಳು ಬಿಕ್ಕಿ ಬಿಕ್ಕಿ ಅತ್ತು ಹೇಳಿದಳು.
ನಿಮಗೂ ಕೆಲವು ಬಾರಿ ಹೀಗನಿಸುತ್ತದೆಯೆ—ನಿಮ್ಮ ಹೆತ್ತವರಿಗೆ ನಿಮ್ಮಲ್ಲಿ ಏನೂ ಆಸಕ್ತಿ ಇಲ್ಲವೆಂದು ಅನಿಸುತ್ತದೆಯೆ? ನಿಮ್ಮ ಹತಾಶೆಗಳನ್ನು ಕ್ರಿಸ್ತೀನಳಂತೆ ವ್ಯಕ್ತ ಪಡಿಸುವ ಪ್ರವೃತ್ತಿಯವರು ನೀವಾಗಿರಲಿಕ್ಕಿಲ್ಲ. ಮತ್ತು ಅಸಡ್ಡಾಭಾವದ ಹೆತ್ತವರಿರುವುದು ದುರ್ನಡತೆಗೆ ಸ್ವಾತಂತ್ರ್ಯವಲ್ಲವೆಂಬುದು ನಿಮಗೆ ಗೊತ್ತು. ಆದರೂ ಅವರು ಅಸಡ್ಡೆ ಮಾಡುವುದರಿಂದ ನಿಮಗೆ ಆಳವಾಗಿ ನೋವಾಗಬಹುದು. ನೀವು ಪ್ರಾಪ್ತ ವಯಸ್ಸನ್ನು ಸಮೀಪಿಸುತ್ತಿದ್ದರೂ ನಿಮಗಿನ್ನೂ ಹೆತ್ತವರ ಪ್ರೀತಿ ಮತ್ತು ಬೆಂಬಲದ ಬಲವಾದ ಅವಶ್ಯವಿರಬಹುದು. ನಿಮ್ಮ ಹೆತ್ತವರ ಅಲಕ್ಷ್ಯವು ನಿಮಗೆ ತ್ಯಜಿಸಲ್ಪಟ್ಟ ಅನಿಸಿಕೆಯನ್ನು ತರಬಲ್ಲದು. “ನಾನು ಎಂದಾದರೂ ನನ್ನ ತಾಯಿಯೊಡನೆ ಅವಳ ಸಮಯದಲ್ಲಿ ಐದು ನಿಮಿಷಗಳನ್ನು ಕೇಳುವಲ್ಲಿ, ಅವಳು ಸದಾ ತೀರಾ ಕಾರ್ಯಮಗ್ನಳಾಗಿರುತ್ತಾಳೆ” ಎಂದು ಪ್ರಲಾಪಿಸುತ್ತಾಳೆ, ಒಬ್ಬ ಹದಿಪ್ರಾಯದ ಹುಡುಗಿ.
ಹೀಗಿರುವಾಗ, ಒಂದು ಸಮೀಕ್ಷೆ, ಯುವಜನರಲ್ಲಿ 25 ಪ್ರತಿಶತ, “ಅವರಿಗೆ ಹೆತ್ತವರೊಂದಿಗೆ ಸಾಕಷ್ಟು ಸಮಯವಿರುವುದಿಲ್ಲ ಎಂದು ಭಾವಿಸುವುದು” ಆಶ್ಚರ್ಯವಲ್ಲ. ಒಬ್ಬ ಯುವಕನಂದದ್ದು: “ನನ್ನ ಹೆತ್ತವರೊಂದಿಗೆ ನಾನು ಹೆಚ್ಚು ನಿಕಟವೂ ಹೆಚ್ಚು ಪ್ರಾಮಾಣಿಕನೂ ಆಗಿರುತ್ತಿದ್ದರೆ ಒಳ್ಳೆಯದಾಗುತ್ತಿತ್ತು.” ಯುವಜನರು ಮತ್ತು ಹೆತ್ತವರು ಶಾರೀರಿಕವಾಗಿ ಒಟ್ಟಿಗಿದ್ದರೂ ಭಾವಾತ್ಮಕವಾಗಿ ಅಗಲಬಹುದು. ಗಮನಾರ್ಹವಾದ ಮಾತು ಸಂಪರ್ಕ ಅಲ್ಲಿರಲಿಕ್ಕಿಲ್ಲ.
ಅವರು ನಿಮ್ಮನ್ನು ಅಲಕ್ಷ್ಯ ಮಾಡುವಂತೆ ತೋರಲು ಕಾರಣ
ಭಾವಿಸಿ: ನಿಮ್ಮ ಅಮ್ಮನೊಡನೆ ಯಾವುದೋ ಸಮಸ್ಯೆಯ ವಿಷಯ ಮಾತಾಡಲು ನೀವು ಇಡೀ ದಿನ ಕಾದಿದ್ದೀರಿ. ಆದರೆ ಅವಳು ಕೆಲಸದಿಂದ ಮನೆಗೆ ಬಂದೊಡನೆ ಕುರ್ಚಿಯಲ್ಲಿ ದೊಪ್ಪೆಂದು ಕುಳಿತು ಸಂಜೆಯ ಟೀವೀ ವರ್ತಮಾನದಲ್ಲಿ ತಲ್ಲೀನಳಾಗುತ್ತಾಳೆ. ಆಕೆಯನ್ನು ಸಂಭಾಷಣೆಗೆ ಎಳೆಯಲು ಪ್ರಯತ್ನಿಸಿದಾಗ, ಆಕೆ ನಿಮ್ಮನ್ನು ಉಪೇಕ್ಷಿಸಿ ಕೋಪದಿಂದ, “ನಾನು ವಿಶ್ರಮಿಸಲು ಪ್ರಯತ್ನಿಸುವುದು ನಿನಗೆ ಕಾಣುವುದಿಲ್ಲವೆ?” ಎಂದು ಹೇಳುತ್ತಾಳೆ.
ಅನಾದರದ, ಪ್ರೀತಿಯಿಲ್ಲದ ತಾಯಿಯೊ? ಅಲ್ಲ, ಹೆತ್ತವರು ತಮ್ಮ ಮಕ್ಕಳನ್ನು ಉದ್ದೇಶಪೂರ್ವಕವಾಗಿ ಅಸಡ್ಡೆ ಮಾಡುವುದು ವಿರಳ. ಆದರೆ ನಾವು “ನಿಭಾಯಿಸಲು ಕಷ್ಟಕರವಾದ ಕಠಿಣ ಕಾಲಗಳಲ್ಲಿ” ಜೀವಿಸುತ್ತಿದ್ದೇವೆ. (2 ತಿಮೊಥೆಯ 3:1-3, NW) ಮತ್ತು ನಿಮ್ಮ ಹೆತ್ತವರು ಹಿಂದೆಂದಿಗಿಂತಲೂ ಹೆಚ್ಚು ಒತ್ತಡಕ್ಕೆ ಒಳಗಾಗಿರಬಹುದು. ಅವರು ಎಷ್ಟು ಬಿಗುಪು, ಹತಾಶೆ, ಯಾ ಬಳಲಿದವರಾಗಿರಬಹುದೆಂದರೆ ಗುಣಮಟ್ಟದ ಸಮಯವನ್ನು ನಿಮ್ಮೊಂದಿಗೆ ಕಳೆಯಲು ಅವರಲ್ಲಿ ತ್ರಾಣವೇ ಇರಲಿಕ್ಕಿಲ್ಲ. ನೀವು ಒಂಟಿಗ ಹೆತ್ತವರಿರುವ ಕುಟುಂಬದಲ್ಲಿ ಜೀವಿಸುವವರಾದರೆ ಇದು ವಿಶೇಷ ರೀತಿಯಲ್ಲಿ ಸತ್ಯವಾಗಿರಬಹುದು. ಆದುದರಿಂದ ನಿಮ್ಮ ಹೆತ್ತವರು ನಿಮ್ಮಿಂದ ದೂರನ್ನು ಕೇಳದಿರುವಲ್ಲಿ ಎಲ್ಲವೂ ತೃಪ್ತಿಕರವಾಗಿದೆಯೆಂದು ಅವರು ಭಾವಿಸಬಹುದು.
ಹೆತ್ತವರು ಇತರ ಚಿಂತೆಗಳಲ್ಲಿಯೂ ಪೂರ್ವಮಗ್ನರಾಗಿರಬಹುದು. ನಿಮ್ಮ ತಂದೆ ಕಾರ್ಯಶೀಲ ಕ್ರೈಸ್ತನಾಗಿರುವಲ್ಲಿ, ಅವನಿಗೆ ಸಭಾ ಜವಾಬ್ದಾರಿಗಳ ಭಾರವಾದ ಹೊರೆಯಿರಬಹುದು. (2 ಕೊರಿಂಥ 11:28, 29, ಹೋಲಿಸಿ.) ಮತ್ತು ನಿಮ್ಮ ತಾಯಿ ಅನಾರೋಗ್ಯದ ವಿಷಯ ಮಾತಾಡುವುದು ವಿರಳವಾದರೂ, ಆಕೆ ತನ್ನ ಹೆಚ್ಚುತ್ತಿರುವ ಅನಾರೋಗ್ಯದಿಂದ ಅಪಕರ್ಷಿತಳಾಗಬಹುದು. ನಿಮಗೆ ಸೋದರ, ಸೋದರಿಯರು ಇದ್ದಾರೊ? ಹಾಗಿರುವಲ್ಲಿ, ನಿಮ್ಮ ಹೆತ್ತವರು ಅವರ ಆವಶ್ಯಕತೆಗಳನ್ನು ಪೂರೈಸುವುದರಲ್ಲಿ ಸಹ ಕಾರ್ಯಮಗ್ನರಾಗಿರಬಹುದು.
ಕೆಲವು ಹೆತ್ತವರು ಮದ್ಯ ರೋಗಾವಸ್ಥೆಯಂಥ ಗುರುತರವಾದ ಸಮಸ್ಯೆಗಳ ವಿರುದ್ಧ ಹೋರಾಡುತ್ತಿರುವುದರಿಂದ, ತಮ್ಮ ಮಕ್ಕಳ ಆವಶ್ಯಕತೆಗಳಿಗೆ ಓಗೊಡಲು ಅಶಕ್ತರಾಗುತ್ತಾರೆ ಎಂದು ಒಪ್ಪಿಕೊಳ್ಳಬೇಕು. ಇನ್ನಿತರರಿಗೆ ತಮ್ಮ ಮಕ್ಕಳಲ್ಲಿ ಆಸಕ್ತಿ ತೋರಿಸುವುದು ಹೇಗೆಂದೇ ತಿಳಿದಿರಲಿಕ್ಕಿಲ್ಲ. ಹೇಗೆಂದರೂ ಮಕ್ಕಳು ಪ್ರೀತಿಸುವುದನ್ನು ಕಲಿಯುವುದು ತಮ್ಮ ಹೆತ್ತವರಿಂದ. (1 ಯೋಹಾನ 4:19 ಹೋಲಿಸಿ.) ಪ್ರಾಯಶಃ ನಿಮ್ಮ ಹೆತ್ತವರು ಅವರಲ್ಲಿ ಆಸಕ್ತಿ ತೋರಿಸಲು ತಪ್ಪಿದ್ದ ಹೆತ್ತವರಿಂದ ಬೆಳೆಸಲ್ಪಟ್ಟವರಾಗಿರಬಹುದು.
ಕೆಲವು ಸಂಸ್ಕೃತಿಗಳು ಎಳೆಯರ ಆವಶ್ಯಕತೆಗಳನ್ನು ತೀರಾ ಅಸಡ್ಡೆ ಮಾಡುವ ನಿಜತ್ವವೂ ಇದೆ. ಆಫ್ರಿಕದ ಕೆಲವೆಡೆಗಳಲ್ಲಿ, ಊಟದ ಸಮಯದಲ್ಲಿ ತಂದೆಗಳು ತಾಯಂದಿರು, ಮತ್ತು ಮಕ್ಕಳು ಪ್ರತ್ಯೇಕವಾಗಿ ಊಟಮಾಡಬೇಕೆಂದು ವಾಡಿಕೆಯು ಕೇಳಿಕೊಳ್ಳುತ್ತದೆ. ಇದರ ಪರಿಣಾಮವೇನು? ಕಾಲಿನ್ ಎಂಬ 14 ವಯಸ್ಸಿನ ಆಫ್ರಿಕದ ಹುಡುಗನು ನೆನಪಿಸಿಕೊಳ್ಳುವುದು: “ನನ್ನ ಹೆತ್ತವರಿಗೆ ಭಾವಾತ್ಮಕವಾಗಿ ನಿಕಟವಾಗಿರುವುದು ಕಷ್ಟಕರವಾಯಿತು. ನಾನು ಜೀವನದಲ್ಲಿ ನನ್ನಷ್ಟಕ್ಕೇ ತಡಕಾಡುತ್ತಿರುವಂತೆ ಭಾಸವಾಯಿತು.”
ತಪ್ಪಿಸಬೇಕಾದ ಕುಳಿಗಳು
ಹೆತ್ತವರು ನಿಮ್ಮನ್ನು ಅಸಡ್ಡೆ ಮಾಡುವುದಕ್ಕೆ ಯಾವುದೇ ಕಾರಣವಿರಲಿ, ಅದು ನಿಮ್ಮನ್ನು ನೋವು ಮತ್ತು ಕೋಪವುಳ್ಳವರಾಗಿ ಮಾಡಬಹುದು. ಇದಕ್ಕೆ ಕೆಲವು ಯುವಜನರು ಅಸಹಕಾರ ಯಾ ಅವಿಧೇಯತೆ ತೋರಿಸಿ ಪ್ರತಿವರ್ತನೆ ತೋರಿಸುತ್ತಾರೆ. ಇತರರು ತಮ್ಮ ಪೇಚಾಟಕ್ಕೆ ಗಮನ ಸೆಳೆಯುವ ಒಂದೇ ಮಾರ್ಗವು ದಂಗೆ ಏಳುವ ಮೂಲಕವೆಂದು ನಿರ್ಣಯಿಸುತ್ತಾರೆ. ಆದರೆ ಅರಂಭದಲ್ಲಿ ಹೇಳಲಾದ ಕ್ರಿಸ್ತೀನಳಂತೆ, ಹೀಗೆ ಮಾಡುವ ಅವಿಧೇಯ ಯುವಜನರು ಅನೇಕ ವೇಳೆ ತಮ್ಮನ್ನು ತಾವೇ ನೋಯಿಸಿಕೊಳ್ಳುವುದಕ್ಕಿಂತ ಹೆಚ್ಚಿಗೆ ಇನ್ನೇನನ್ನೂ ಮಾಡುವುದಿಲ್ಲ. “ಜ್ಞಾನಹೀನರು ತಮ್ಮ ನಿಶ್ಚಿಂತೆಯಿಂದಲೇ ನಾಶವಾಗುವರು,” ಎಂದು ಬೈಬಲು ಜ್ಞಾನೋಕ್ತಿ 1:32ರಲ್ಲಿ ಎಚ್ಚರಿಸುತ್ತದೆ.
ಇನ್ನೊಂದು ಪಕ್ಕದಲ್ಲಿ, ವಿಶೇಷವಾಗಿ ಅದು ನಿಮಗೆ ಆಳವಾದ ನೋವನ್ನು ಮಾಡುತ್ತಿರುವಲ್ಲಿ ಈ ಪರಿಸ್ಥಿತಿಯನ್ನು ಅಲಕ್ಷ್ಯಮಾಡುವುದರಿಂದ ಏನೂ ಸಾಧಿಸಲ್ಪಡುವುದಿಲ್ಲ. “ಸಂಕಟದ ದಿನದಲ್ಲಿ ನೀನು ಎದೆಗುಂದಿದವನೆಂದು ತೋರಿಸಿಕೊಟ್ಟಿದ್ದಿಯೊ?” ಎಂದು ಜ್ಞಾನೋಕ್ತಿ 24:10, (NW) ಕೇಳುತ್ತದೆ. ಹಾಗಿರುವಲ್ಲಿ, “ನಿನ್ನ ಬಲವು ಅಲ್ಪವಾಗಿರುವುದು.” ಭಾವಾವೇಶದ ಗಾಯಗಳು ಶಾರೀರಿಕ ಗಾಯಗಳಿಗಿಂತಲೂ ಹೆಚ್ಚು ನೈಜವೂ ಅವುಗಳಷ್ಟೇ ವೇದನೆ ಕೊಡುವಂಥವುಗಳೂ ಆಗಿರಬಲ್ಲವು. (ಜ್ಞಾನೋಕ್ತಿ 18:14) ಮತ್ತು ಅವನ್ನು ಕೀವುಗಟ್ಟುವಂತೆ ಬಿಟ್ಟಾಗ, ಅವು ಪ್ರಾಪ್ತ ವಯಸ್ಸಿನಲ್ಲಿ ನೋವು ಕೊಡುತ್ತಾ ಹೋಗುವುವು. ಯೋಹಾನ್ ಎಂಬ ಯುವಕನ ಕುರಿತು ಪರ್ಯಾಲೋಚಿಸಿರಿ. “ನಾನು ಬೆಳೆಯುತ್ತಿದ್ದಾಗ” ಯೋಹಾನ್ ಜ್ಞಾಪಿಸಿಕೊಳ್ಳುವುದು, “ನನ್ನ ಮದ್ಯವ್ಯಸನಿ ತಂದೆ ನನಗೆ ಅತ್ಯಗತ್ಯವಿರುವಾಗ ಎಂದಿಗೂ ದೊರೆಯುತ್ತಿರಲಿಲ್ಲ.” ಅವನು ಕೂಡಿಸಿ ನುಡಿಯುವುದು: “ತನ್ನ ಸ್ವಂತ ಸಮಸ್ಯೆಗಳಲ್ಲೇ ಅವನು ತುಂಬ ಮುಳುಗಿದ್ದುದರಿಂದ ನನಗೆ ಹೆಚ್ಚು ಗಮನ ಕೊಡುತ್ತಿರಲಿಲ್ಲ.” ಪ್ರಾಪ್ತ ವಯಸ್ಸಿನಲ್ಲಿ ಯೋಹಾನ್ ವ್ಯಾಕುಲ ವ್ಯಾಧಿಯ ದೀರ್ಘಾವಧಿಗಳನ್ನು ಮತ್ತು ಅಪರಾಧ ಪ್ರಜ್ಞೆಯನ್ನು ಅನುಭವಿಸಿದನು.
ಕೆಲವು ಉತ್ತಮ ಮಿತ್ರರ ಸಹಾಯದಿಂದ, ಯೋಹಾನ್ ತನ್ನ ಆತ್ಮಗೌರವವನ್ನು ಪುನಃ ಕಟ್ಟಲಾರಂಭಿಸಲು ಶಕ್ತನಾದನು. ಆದರೂ, ಮನೆಯಲ್ಲಿ ನೀವು ಎದುರಿಸುವ ಪರಿಸ್ಥಿತಿಯನ್ನು ನಿಭಾಯಿಸಲು ಸಕಾರಾತ್ಮಕ ಮಾರ್ಗಗಳನ್ನು ಕಂಡುಹಿಡಿಯಲು ಪ್ರಯತ್ನಿಸುವ ಬೆಲೆಯನ್ನು ಅವನ ಅನುಭವವು ಒತ್ತಿಹೇಳುತ್ತದೆ.
ಅವರಿಗೆ ನಿಮ್ಮಲ್ಲಿರಬೇಕಾದ ಆಸಕ್ತಿಯನ್ನು ವಿಕಾಸಗೊಳಿಸಿರಿ
ನಿಮ್ಮ ತಂದೆತಾಯಿಗಳು ಸಂಭಾಷಣೆಯನ್ನು ಆರಂಭಿಸುವುದೇ ವಿರಳವಾದರೆ? ಆಗ ನೀವು ಅವರಲ್ಲಿ ಆಸಕ್ತಿ ತೋರಿಸುತ್ತಾ ಆ ತೊಡಕಿನ ನಿಶ್ಶಬ್ದವನ್ನು ಅಂತ್ಯಗೊಳಿಸಬಲ್ಲಿರಿ. (ಮತ್ತಾಯ 7:12; ಫಿಲಿಪ್ಪಿ 2:4) ಅವರು ಏನಾದರೂ ತರಲು ಹೋಗುವಲ್ಲಿ, ಅವರೊಂದಿಗೆ ಹೋಗಲು ನೀವು ಸಿದ್ಧರಾಗಿದ್ದೀರೆಂದು ಹೇಳಿರಿ. ಯಾವ ವಿಧದಲ್ಲಾದರೂ, ಪ್ರಾಯಶಃ ಒಂದು ಊಟ ತಯಾರಿಸಿಯೊ ಇಲ್ಲವೆ ಆ ಬಳಿಕ ಶುಚಿ ಮಾಡಿಯೊ, ನೀವು ಅವರಿಗೆ ಸಹಾಯ ಮಾಡಬಹುದೋ ಎಂದು ಕೇಳಿರಿ. ಬಳಿಕ, ಸಕಾಲದಲ್ಲಿ, ಶಾಲೆಯಲ್ಲಿ ನಡೆಯುತ್ತಿರುವ ವಿಷಯಗಳಂಥ ನಿಮ್ಮ ಚಿಂತೆಗಳಲ್ಲಿ ಅವರೊಂದಿಗೆ ಪಾಲಿಗರಾಗಲು ಮೊದಲುಮಾಡಬಲ್ಲಿರಿ.
ಆದರೆ ಕೆಲವು ಬಾರಿ, ನಿಮಗೆ ಗುರುತರವಾದ ಸಮಸ್ಯೆಗಳನ್ನು ಚರ್ಚಿಸಲಿಕ್ಕಿದ್ದೀತು. ಆಗ ನೀವು, ಕಠಿಣವಾಗಿದ್ದ ದಿನದ ಕೆಲಸ ಮಾಡಿ ಸೋಫದ ಮೇಲೆ ಒಡ್ಡೊಡ್ಡಾಗಿ ಮಲಗಿದ್ದು ವಿಶ್ರಮಿಸುತ್ತಿರುವ ಅಪ್ಪನನ್ನು ಸಮೀಪಿಸುವುದು ಕಾರ್ಯಸಾಧಕವಾಗಲಿಕ್ಕಿಲ್ಲ. ವಿಷಯಗಳನ್ನು ಚರ್ಚಿಸಲು ‘ಉಚಿತ ಸಮಯ’ವನ್ನು—ತಕ್ಕಮಟ್ಟಿಗೆ ವಿಶ್ರಮ ಹೊಂದಿದ್ದು ಉಲ್ಲಾಸದಿಂದಿರುವ ಸಮಯವನ್ನು—ಕಂಡುಹಿಡಿಯಲು ಪ್ರಯತ್ನಿಸಿರಿ. (ಜ್ಞಾನೋಕ್ತಿ 15:23) ಆಗ ಅವನು ನಿಮ್ಮ ಸಮಸ್ಯೆಗಳಲ್ಲಿ ಆಸಕ್ತಿ ವಹಿಸುವುದು ಹೆಚ್ಚು ಸಂಭಾವ್ಯ.
ಆದರೂ, ನಿಮ್ಮ ಅತ್ಯುತ್ತಮ ಪ್ರಯತ್ನಗಳಿಗೂ ಹೆತ್ತವರು ಪ್ರತಿಕ್ರಿಯೆ ತೋರಿಸಲು ತಪ್ಪುವಲ್ಲಿ ಏನು?a “ಯೋಚನೆ ಹೇಳುವವರಿಲ್ಲದೆ ಉದ್ದೇಶಗಳು ನೆರವೇರವು,” ಎಂದು ನೆನಪಿಸುತ್ತದೆ ಜ್ಞಾನೋಕ್ತಿ 15:22. ಹೌದು, ನೀವು ನಿಮ್ಮ ಹೆತ್ತವರಿಗೆ (ದಯೆ ಮತ್ತು ಸಮಯೋಚಿತ ನಯದಿಂದ) ಅವರು ನಿಮ್ಮಲ್ಲಿ ಸಾಕಷ್ಟು ಆಸಕ್ತಿಯನ್ನು ತೋರಿಸುವುದಿಲ್ಲವೆಂದೂ, ಇದರಿಂದಾಗಿ ನಿಮಗೆ ಬೇನೆಯ ಮತ್ತು ಪ್ರೀತಿಸಲ್ಪಡದ ಅನಿಸಿಕೆಯಾಗುತ್ತದೆಂದೂ ಹೇಳುವ ಅವಶ್ಯವಿರಬಹುದು. ಒಮ್ಮೊಮ್ಮೆಯಾದರೂ ನಿಮಗೆ ಪ್ರಶಂಸೆ ಬೇಕಾದೀತು, ಇಲ್ಲವೆ ನಿಮ್ಮ ಮನೆಗೆಲಸದಲ್ಲಿ ತುಸು ಸಹಾಯವನ್ನು ನೀವು ಗಣ್ಯ ಮಾಡೀರಿ.
ನಿಮಗೆ ಹೀಗೆ ಅನಿಸುತ್ತದೆಂದು ತಿಳಿಯಲು ನಿಮ್ಮ ಹೆತ್ತವರು ಆಶ್ಚರ್ಯಪಟ್ಟಾರು. ಅವರು ನಿಮ್ಮ ಕಡೆಗೆ ಅವರಿಗಿರುವ ಪ್ರೀತಿಯ ಆಶ್ವಾಸನೆಯನ್ನು ಒಡನೆ ಕೊಟ್ಟು, ತಪ್ಪಭಿಪ್ರಾಯವನ್ನು ಕೊಟ್ಟದ್ದಕ್ಕೆ ಪ್ರಾಯಶಃ ಕ್ಷಮೆಯನ್ನೂ ಕೇಳಾರು. ಅನೇಕ ವೇಳೆ, ಸಮಸ್ಯೆಗಳನ್ನು ಅವರ ಗಮನಕ್ಕೆ ತರುವಲ್ಲಿ, ಹೆತ್ತವರು ಬದಲಾವಣೆ ಮಾಡಿಕೊಳ್ಳಲು ನಿಜ ಪ್ರಯತ್ನವನ್ನು ಮಾಡುವರು.
ಮತ್ತೊಂದು ಕಡೆಯಲ್ಲಿ, ನಿಮ್ಮ ಚರ್ಚೆಯು ನೀವೇ ತಪ್ಪು ತಿಳಿದಿದ್ದೀರೆಂದು ತೋರಿಸೀತು. ಅವರು ನಿಮ್ಮ ಕಡೆ ತೋರಿಸಿದ ವಿವಿಧ ರೀತಿಯ ಅಭಿರುಚಿಗಳಲ್ಲಿ ಕೆಲವನ್ನು ನೀವು ಒಂದು ವೇಳೆ ಗಮನಿಸಿಯೇ ಇರಲಿಕ್ಕಿಲ್ಲ. ಕಾರಣವು ಯಾವುದೇ ಇರಲಿ, ವಿಷಯಗಳನ್ನು ಚರ್ಚಿಸುವುದು, ಮನೆಯಲ್ಲಿ ಸುಧಾರಣೆ ತರುವ ಒಂದು ಪ್ರಾಮುಖ್ಯ ಹೆಜ್ಜೆಯಾಗಿದೆ.
ಶೂನ್ಯತೆಯನ್ನು ತುಂಬುವುದು
ನಿಮಗೆ ನಿಮ್ಮ ಹೆತ್ತವರಿಂದ ಅನುಕೂಲ ಪ್ರತಿಕ್ರಿಯೆ ಇನ್ನೂ ದೊರೆಯದಿರುವಲ್ಲಿ ಏನು? ಇದರಿಂದ ತೀರಾ ನೋವಾಗುವುದು ಗ್ರಾಹ್ಯ. ಆದರೂ, ಅನ್ಯಮಾರ್ಗಗಳು ನಿಮಗಿವೆ.
ಉದಾಹರಣೆಗೆ, ನಿಮ್ಮ ಗಮನ ಕೊಡದ ಹೆತ್ತವರು ಬಿಟ್ಟಿರುವ ಶೂನ್ಯತೆಯನ್ನು ತುಂಬಿಸಲು ಸಹಾಯಮಾಡಸಾಧ್ಯವಿರುವ ಯಾವನನ್ನಾದರೂ—ನಿಮಗಿಂತ ಹೆಚ್ಚು ವಯಸ್ಸಿನ ವ್ಯಕ್ತಿ ಹೆಚ್ಚು ಇಷ್ಟಕರ—ಕಂಡುಹಿಡಿಯಲು ಪ್ರಯತ್ನಿಸಿರಿ. ಜ್ಞಾನೋಕ್ತಿ ನುಡಿಯುವಂತೆ, “ಸಂಕಟದ ಸಮಯಕ್ಕಾಗಿ ಹುಟ್ಟಿದ” ಮಿತ್ರನೊಬ್ಬನಿದ್ದಾನೆ. (ಜ್ಞಾನೋಕ್ತಿ 17:17) ಇಂಥ ಬಗೆಯ ಮಿತ್ರನನ್ನು ಹುಡುಕಿರಿ. ಆದರೆ ಯಾವ ಸಲಹೆಯನ್ನು ಅಂಗೀಕರಿಸಬೇಕೆಂಬ ವಿಷಯದಲ್ಲಿ ಆಯ್ಕೆ ಮಾಡುವವರಾಗಿರಿ. ಅದು ನಿಮ್ಮ ಸರ್ವೋತ್ತಮ ಅಭಿರುಚಿಗಾಗಿದೆ ಮತ್ತು ದೇವರ ವಾಕ್ಯಕ್ಕೆ ಹೊಂದಿಕೆಯಾಗಿದೆಯೆಂಬುದನ್ನು ಖಚಿತ ಮಾಡಿಕೊಳ್ಳಿರಿ.
ಸಹಾಯ ಮತ್ತು ಬೆಂಬಲದ ಇನ್ನೊಂದು ಮೂಲವು ಯೆಹೋವನ ಸಾಕ್ಷಿಗಳ ಸ್ಥಳೀಕ ಸಭೆಯೇ. ಅಲ್ಲಿ ನಿಮ್ಮಲ್ಲಿ ನಿಜಾಸಕ್ತಿ ವಹಿಸುವ ಮತ್ತು ನೀವು ಅಧ್ಯಾತ್ಮಿಕವಾಗಿಯೂ ಭಾವಾತ್ಮಕವಾಗಿಯೂ ಉತ್ತಮವಾಗಿ ಬೆಳೆಯುವಂತೆ ನಿಮಗೆ ಸಹಾಯ ಮಾಡುವ ಆತ್ಮಿಕ ಸೋದರ, ಸೋದರಿಯರನ್ನು ಮತ್ತು ತಂದೆತಾಯಿಗಳನ್ನು ನೀವು ಕಂಡುಕೊಳ್ಳುವಿರಿ. (ಮಾರ್ಕ 10:30) ಈ ಮೊದಲು ಹೇಳಲ್ಪಟ್ಟಿರುವ ಆಫ್ರಿಕನ್ ಹುಡುಗ ಕಾಲಿನ್ ಎಂಬವನಿಗೆ ಇಂಥ ಸ್ನೇಹಿತರು ದೊರೆತರು. ಮಾರ್ಗದರ್ಶನ ಅವಶ್ಯವೆಂದು ಕಂಡ ಅವನು, ಯೆಹೋವನ ಸಾಕ್ಷಿಗಳ ಕೂಟಗಳಿಗೆ ಹಾಜರಾಗಲು ಆರಂಭಿಸಿದನು. ತಡವಿಲ್ಲದೆ, ಸಭೆಯ ಸದಸ್ಯರು ಅವನನ್ನು ಮಿತ್ರನಾಗಿ ಮಾಡಿಕೊಂಡು ಅವನು ಪ್ರೀತಿಸಲ್ಪಟ್ಟವನೂ ಅಪೇಕ್ಷಿತನೂ ಎಂಬ ಅನಿಸಿಕೆಯನ್ನು ಅವನಿಗೆ ಕೊಟ್ಟರು. ಸಮಯಾನಂತರ, ಅವನ ಹೆತ್ತವರು ಮತ್ತು ಒಡಹುಟ್ಟಿದವರು ಸಹ ಕ್ರೈಸ್ತ ಕೂಟಗಳಿಗೆ ಹಾಜರಾಗಲಾರಂಭಿಸಿದರು.
ನಿಮ್ಮ ಹೆತ್ತವರು ನಿಜವಾಗಿಯೂ ನಿಮ್ಮ ವಿಷಯ ಚಿಂತಿತರಾಗಿರುವುದು ಹೆಚ್ಚು ಸಂಭಾವ್ಯ. ಆದರೆ ನಿಮ್ಮ ಆವಶ್ಯಕತೆಗಳ ಕುರಿತ ಹೆಚ್ಚಿನ ಪ್ರಜ್ಞೆ ನಿಮಗಿರತಕ್ಕದ್ದು: ನೀವೇ ಆರಂಭದ ಹೆಜ್ಜೆ ತೆಗೆದುಕೊಂಡು ಆ ಆವಶ್ಯಕತೆಗಳು ಯಾವುವೆಂದು ಅವರಿಗೆ ತಿಳಿಯಪಡಿಸಿರಿ! ಯಾರಿಗೆ ಗೊತ್ತು? ಅವರಿಗೆ ನಿಮ್ಮಲ್ಲಿ ನೀವೆಂದಿಗೂ ಭಾವಿಸಿದ್ದುದಕ್ಕಿಂತ ಎಷ್ಟೋ ಹೆಚ್ಚು ಆಸಕ್ತಿಯಿದೆಯೆಂದು ನೀವು ಒಂದು ವೇಳೆ ಕಂಡುಹಿಡಿಯುವಿರಿ. (g92 11/8)
[ಅಧ್ಯಯನ ಪ್ರಶ್ನೆಗಳು]
a ಮಾದಕ ಪದಾರ್ಥ ಯಾ ಮದ್ಯ ವ್ಯಸನಗಳಂಥ ಗುರುತರವಾದ ಸಮಸ್ಯೆಗಳೊಂದಿಗೆ ಹೋರಾಡುತ್ತಿರುವ ಹೆತ್ತವರು ಅವರ ಮಕ್ಕಳ ಆವಶ್ಯಕತೆಗಳಿಗೆ ಪ್ರತಿವರ್ತನೆ ತೋರಿಸುವ ಮುನ್ನ ಅವರಿಗೆ ವೃತ್ತಿಪರ ಸಹಾಯ ಬೇಕಾದೀತು.
[ಪುಟ 24 ರಲ್ಲಿರುವ ಚಿತ್ರ]
ಇಂದು ಹೆತ್ತವರು ಅನೇಕ ವೇಳೆ ತಮ್ಮ ಮಕ್ಕಳ ಸಮಸ್ಯೆಗಳನ್ನು ನಿಭಾಯಿಸಲು ತೀರಾ ಒತ್ತಡವುಳ್ಳವರೂ ದಣಿದವರೂ ಆಗಿರುತ್ತಾರೆ