ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g93 3/8 ಪು. 4-7
  • ಬಿಕ್ಕಟ್ಟಿನಲ್ಲಿರುವ ಮಕ್ಕಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಬಿಕ್ಕಟ್ಟಿನಲ್ಲಿರುವ ಮಕ್ಕಳು
  • ಎಚ್ಚರ!—1993
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ರೋಗ
  • ನ್ಯೂನ ಪೋಷಣೆ
  • ಪರಿಸರೀಯ ಸಮಸ್ಯೆಗಳು
  • ಯುದ್ಧ
  • ಮಕ್ಕಳನ್ನು ಬಳಸಿಕೊಳ್ಳುವುದು
  • ಆದ್ಯತೆಗಳು
  • ಮನುಷ್ಯರ ಕಷ್ಟಸಂಕಟ ಎಂಬ ಸಮಸ್ಯೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
  • ಮಕ್ಕಳ ಬೆವರಿನಿಂದ
    ಎಚ್ಚರ!—1999
  • ಲೋಕಾರೋಗ್ಯ ಪರಿಸ್ಥಿತಿ—ಬೆಳೆಯುತ್ತಿರುವ ಒಂದು ಅಂತರ
    ಎಚ್ಚರ!—1995
  • ನಿಮ್ಮ ಆಹಾರವು ಅದೆಷ್ಟು ಪೌಷ್ಟಿಕ?
    ಎಚ್ಚರ!—1995
ಇನ್ನಷ್ಟು
ಎಚ್ಚರ!—1993
g93 3/8 ಪು. 4-7

ಬಿಕ್ಕಟ್ಟಿನಲ್ಲಿರುವ ಮಕ್ಕಳು

ಭಾರತದಲ್ಲಿ ಒಂದು ಕಲ್ಲುಗಣಿಯಲ್ಲಿ ಹನ್ನೆರಡು ವಯಸ್ಸಿನ ಒಬ್ಬ ಹುಡುಗ ದಿನಕ್ಕೆ 11 ತಾಸು ಕಲ್ಲು ಒಡೆಯುವ ಕೆಲಸ ಮಾಡುತ್ತಾನೆ. ಅವನು ದಿನಕ್ಕೆ ಸುಮಾರು 20 ರೂ. ಸಂಪಾದಿಸುತ್ತಾನೆ.

ಹತ್ತು ವಯಸ್ಸಿನ ಒಬ್ಬ ಹುಡುಗಿ ಬ್ಯಾಂಗ್‌ಕಾಕಿನ ಒಂದು ವೇಶ್ಯಾಗೃಹದಲ್ಲಿ ತನ್ನ ದೇಹವನ್ನು ಮಾರುತ್ತಾಳೆ. ಅವಳು ಅಲ್ಲಿರುವುದು ಸ್ವಂತ ಅಪೇಕ್ಷೆಯ ಕಾರಣದಿಂದಲ್ಲ. ಅವಳ ಅಪ್ಪ ಅವಳನ್ನು ಸುಮಾರು 10,000 ರೂ.ಗೆ ಮಾರಿದನು.

ಹತ್ತು ವಯಸ್ಸಿನ ಒಬ್ಬ ಎಳೆಯ ಸೈನಿಕ ಒಂದು ಆಫ್ರಿಕನ್‌ ದೇಶದಲ್ಲಿ ಒಂದು ರಸ್ತೆ ಪ್ರತಿಬಂಧಕದಲ್ಲಿ ಕಾವಲಿದ್ದಾನೆ. ಅವನ ಹೆಗಲಿಂದ ಒಂದು ಮೆಷೀನ್‌ ಗನ್‌ ತೂಗಾಡುತ್ತಿದೆ; ಅವನು ಮಾರಿವಾನವನ್ನು ಸೇದುತ್ತಾ ತನ್ನ ಸಮಯ ಕಳೆಯುತ್ತಾನೆ.

ವಿಕಾಸಶೀಲ ದೇಶಗಳಲ್ಲಿ ಇಂಥ ಪರಿಸ್ಥಿತಿಗಳು ತೀರಾ ಸಾಮಾನ್ಯ. ಬಿಕ್ಕಟ್ಟಿನಲ್ಲಿರುವ ಮಕ್ಕಳು ಲಕ್ಷಗಟ್ಟಲೆಯಲ್ಲಿದ್ದಾರೆ. ನಿರಾಶ್ರಿತ ಶಿಬಿರಗಳಲ್ಲಿ ಎಪ್ಪತ್ತು ಲಕ್ಷ ಮಕ್ಕಳು ಹೀನ ಸ್ಥಿತಿಯಲ್ಲಿ ಜೀವಿಸುತ್ತಾರೆ. ಮೂರು ಕೋಟಿ ಮನೆಯಿಲ್ಲದವರಾಗಿ ಬೀದಿಯಲ್ಲಿ ಅಲೆದಾಡುತ್ತಾರೆ. ಹತ್ತರಿಂದ 14 ವಯಸ್ಸಿನ ಮಧ್ಯೆ ಇರುವ ಎಂಟು ಕೋಟಿ ಮಕ್ಕಳು, ಅವರ ಸಾಮಾನ್ಯ ಬೆಳವಣಿಗೆಯನ್ನು ಕ್ಷಯಿಸುವ ಕೆಲಸಗಳಲ್ಲಿ ತೊಡಗಿರುತ್ತಾರೆ; ಆಹಾರ, ಶುದ್ಧ ನೀರು, ಮತ್ತು ಆರೋಗ್ಯ ಪರಾಮರಿಕೆ ಇಲ್ಲದ ಕಾರಣ ಹತ್ತು ಕೋಟಿಗೂ ಮಿಕ್ಕಿದ ಮಕ್ಕಳು ಈ ದಶಕದಲ್ಲಿ ಮರಣವನ್ನು ಎದುರು ನೋಡುತ್ತಾರೆ.

ಲೋಕದ ಸುತ್ತ ಮಕ್ಕಳ ಎದುರಿಗಿರುವ ಸಮಸ್ಯೆಗಳಲ್ಲಿ ಕೆಲವನ್ನು ಪರಿಗಣಿಸಿ.

ರೋಗ

ಪ್ರತಿ ದಿನ ಸುಮಾರು 8,000 ಮಕ್ಕಳು, ದಡಾರ ಮತ್ತು ನಾಯಿ ಕೆಮ್ಮುಗಳಂಥ ರೋಗಗಳ ನಂಜು ಚುಚ್ಚಿಸಿಕೊಳ್ಳದೆ ಇರುವ ಕಾರಣ ಸಾಯುತ್ತಾರೆ. ಪ್ರತಿ ದಿವಸ ಇನ್ನು 7,000 ಮಕ್ಕಳು ಸಾಯುವುದು ಅತಿಭೇದಿಯಿಂದಾಗಿ ನಿರ್ಜಲವಾಗುವುದನ್ನು ಹೇಗೆ ನಿಭಾಯಿಸಬೇಕೆಂದು ಅವರ ಹೆತ್ತವರಿಗೆ ಗೊತ್ತಿರದ ಕಾರಣವೆ. ಪ್ರತಿ ದಿನ ಇನ್ನೊಂದು 7,000 ಮಕ್ಕಳು ಸಾಯುವುದು, ಉಸಿರಾಟದ ರೋಗಗಳಿಗೆ ಅವರಿಗೆ ಕೇವಲ ಒಂದು ಡಾಲರ್‌ ಬೆಲೆಯ ಆ್ಯಂಟಿಬಯಾಟಿಕ್‌ ಪ್ರತಿಜೀವಕ ಕೊಡಲ್ಪಡದಿರುವ ಕಾರಣವೆ.

ಮಾನವ ಕುಟುಂಬವನ್ನು ದೀರ್ಘಕಾಲದಿಂದ ಪೀಡಿಸುತ್ತಿರುವ ಅನೇಕ ಕಾಯಿಲೆಗಳನ್ನು ತಡೆಯುವ ಯಾ ಗುಣಪಡಿಸುವ ಔಷಧ ಹಾಗೂ ಚಿಕಿತ್ಸೆಗಳು ಅನೇಕ ವರ್ಷಗಳಿಂದ ದೊರೆಯುತ್ತಿವೆ. ಆದರೆ ಅವಶ್ಯವಿರುವ ಲಕ್ಷಗಟ್ಟಲೆ ಮಂದಿಯನ್ನು ಅವು ಮುಟ್ಟಿಲ್ಲ. ಇದರ ಪರಿಣಾಮವಾಗಿ, ಕಳೆದ ಎರಡು ದಶಕಗಳಲ್ಲಿ, ಸುಮಾರು ಹತ್ತು ಕೋಟಿ ಮಕ್ಕಳು ಅತಿಭೇದಿ ಮತ್ತು ಉಸಿರಾಟದ ಸಂಬಂಧದ ರೋಗಗಳಿಂದಲೇ ಸತ್ತರು. “ಇದು, ಕ್ಯಾನ್ಸರಿಗೆ ಕೊನೆಗೆ ಒಂದು ಚಿಕಿತ್ಸೆ ಕಂಡುಹಿಡಿಯಲ್ಪಟ್ಟರೂ 20 ವರ್ಷಗಳಲ್ಲಿ ಅದನ್ನು ಸ್ವಲ್ಪವೇ ಉಪಯೋಗಿಸಿದಂತೆ,” ಎಂದು ಯೂನಿಸೆಫ್‌ ಸ್ಟೇಟ್‌ ಆಫ್‌ ದ ವರ್ಲ್ಡ್ಸ್‌ ಚಿಲ್ಡ್ರನ್‌ 1990 ಎಂಬ ವರದಿ ಪ್ರಲಾಪಿಸಿತು.

ಈ ಉಗ್ರ ಸ್ಥಿತಿಯ ಎದುರಿನಲ್ಲಿಯೂ ಪ್ರಗತಿಯಾಗಿದೆ. ದೃಷ್ಟಾಂತಕ್ಕೆ, ಯೂನಿಸೆಫ್‌ ಮತ್ತು ಡಬ್ಲುಎಚ್‌ಓ (ಲೋಕಾರೋಗ್ಯ ಸಂಘ) ಇವೆರಡೂ ಸೋಂಕು ರಕ್ಷೆಯ ವಿಷಯದಲ್ಲಿ ಹುರುಪಿನ ಚಳವಳಿಯನ್ನು ಸಾಗಿಸಿವೆ. ಲೋಕದ ಮಕ್ಕಳಲ್ಲಿ 80 ಪ್ರತಿಶತಕ್ಕೆ, ಸೋಂಕುರಕ್ಷೆಯ ಮೂಲಕ ತಡೆಯಸಾಧ್ಯವಿರುವ ದಡಾರ, ಧನುರ್ವಾಯು, ಡಿಫ್ತೀರಿಯ ಗಂಟಲು ಮಾರಿ, ಪೋಲಿಯೊ ಪಾರ್ಶ್ವವಾಯು, ಕ್ಷಯ ರೋಗ ಮತ್ತು ನಾಯಿ ಕೆಮ್ಮಲು ಎಂಬ ಆರು ರೋಗಗಳ ಎದುರಾಗಿ ಸೋಂಕು ರಕ್ಷೆ ಮಾಡಲ್ಪಟ್ಟಿದೆಯೆಂದು 1991ರಲ್ಲಿ ಪ್ರಕಟಿಸಲಾಯಿತು. ಅತಿಭೇದಿ ಸಂಬಂಧದ ರೋಗಗಳ ನಿಯಂತ್ರಣದಲ್ಲಿಯೂ ಸಮಾನ ರೀತಿಯ ಪ್ರಯತ್ನಗಳು ಪ್ರತಿ ವರ್ಷ ಅನೇಕ ಲಕ್ಷ ಎಳೆಯ ಪ್ರಾಣಗಳನ್ನು ಉಳಿಸಿವೆ.

ಆದರೆ ಇತ್ತೀಚಿನ ವರ್ಷಗಳಲ್ಲಿ ಇನ್ನೊಂದು ಕಾಯಿಲೆ—ಏಯ್ಡ್ಸ್‌—ಗತ ದಶಕದಲ್ಲಿ ಆಫ್ರಿಕದ ಮಕ್ಕಳ ಬದುಕಿ ಉಳಿಯುವಿಕೆಯ ಸಂಬಂಧದಲ್ಲಿ ಮಾಡಿರುವ ಸಕಲ ಪ್ರಗತಿಗೆ ಹಾನಿ ತರಲು ಮತ್ತು ಅದನ್ನು ಹಿಮ್ಮೊಗವಾಗಿ ತಿರುಗಿಸಲು ಸಾಧ್ಯತೆ ಇರುವುದಾಗಿ ಎದ್ದು ಬಂದಿದೆ. ಏಯ್ಡ್ಸ್‌ನಿಂದಾಗಿ ಆಫ್ರಿಕದಲ್ಲಿಯೆ 90’ಗಳ ದಶಕದಲ್ಲಿ 27 ಲಕ್ಷದಷ್ಟೂ ಎಳೆಯರು ಸಾಯಬಹುದು. ಇಸವಿ 2000ದೊಳಗೆ, ಹೆತ್ತವರು ಏಯ್ಡ್ಸ್‌ನಿಂದಾಗಿ ಸತ್ತಿರುವ ಕಾರಣ, ಮಧ್ಯ ಮತ್ತು ಪೂರ್ವ ಆಫ್ರಿಕದ ಇನ್ನು 30ರಿಂದ 50 ಲಕ್ಷ ಮಕ್ಕಳು ಅನಾಥರಾಗಬಹುದು.

ನ್ಯೂನ ಪೋಷಣೆ

ಅಸ್ಥಿಪಂಜರಂಥ ದೇಹ, ಉಬ್ಬಿದ ಹೊಟ್ಟೆ, ಪ್ರತ್ಯೇಕವಾಗಿ ಯಾವುದನ್ನೂ ನೋಡದ ನಿಸೇಜ್ತ ಕಣ್ಣುಗಳಿರುವ ಹೊಟ್ಟೆಗಿಲ್ಲದ ಮಕ್ಕಳ ಹೃದಯದ್ರಾವಕ ಚಿತ್ರಗಳು ನಮಗೆಲ್ಲರಿಗೂ ಸಂಕಟಕರವಾಗಿ ಪರಿಚಿತವಾಗಿವೆ. ಈ ಕನಿಕರ ಹುಟ್ಟಿಸುವ ಎಳೆಯರು ಈ ದೊಡ್ಡ ಸಮಸ್ಯೆಯ ತುದಿಯನ್ನು ಮಾತ್ರ ಪ್ರತಿನಿಧೀಕರಿಸುತ್ತಾರೆ. ವಿಕಾಸಶೀಲ ಜಗತ್ತಿನಲ್ಲೆಲ್ಲ, 17.7 ಕೋಟಿ ಮಕ್ಕಳು—ಮೂರರಲ್ಲೊಂದು—ಹಸಿವೆಯುಳ್ಳವರಾಗಿ ನಿದ್ರೆಹೋಗುತ್ತಾರೆ. ಮತ್ತು ಅವರ ಸಂಖ್ಯೆ ಏರುತ್ತಿದೆ.

ಪಟ್ಟು ಹಿಡಿಯುವ ನ್ಯೂನ ಪೋಷಣೆ ಮಕ್ಕಳು ಅವರ ಮಾನಸಿಕ ಮತ್ತು ಶಾರೀರಿಕ ಪೂರ್ಣ ಸಾಮರ್ಥ್ಯಗಳನ್ನು ಮುಟ್ಟದಂತೆ ತಡೆಯುತ್ತದೆ. ನ್ಯೂನ ಪೋಷಣೆಗೊಳಗಾಗಿರುವ ಹೆಚ್ಚಿನ ಮಕ್ಕಳು ಬಲಹೀನರೂ ಜಡಜೀವಿಗಳೂ ಕಳೆಯಿಲ್ಲದ ಕಣ್ಣುಳ್ಳವರೂ ಉದಾಸೀನರೂ ಆಗಿರುತ್ತಾರೆ. ಅವರು ಒಳ್ಳೆಯದಾಗಿ ತಿಂದಿರುವ ಮಕ್ಕಳಿಗಿಂತ ಕಡಮೆ ಆಟವಾಡುವವರೂ ನಿಧಾನವಾಗಿ ಕಲಿಯುವವರೂ ಆಗಿದ್ದಾರೆ. ಅವರಿಗೆ ರೋಗ ಹಿಡಿಯುವುದೂ ಬೇಗ. ಇದು ವಿಕಾಸಶೀಲ ದೇಶಗಳಲ್ಲಿ ಪ್ರತಿ ವರ್ಷ ಆಗುವ 1.4 ಕೋಟಿ ಮಕ್ಕಳ ಮರಣಗಳಲ್ಲಿ ಸುಮಾರು ಮೂರರಲ್ಲಿ ಒಂದು ಪಾಲು ಮರಣಕ್ಕೆ ಒಂದು ಮುಖ್ಯ ಕಾರಣ.

ಆಧುನಿಕ ವಿಜ್ಞಾನ ರೋಗಕ್ಕೆದುರಾಗಿ ಹೋರಾಡಲು ಔಷಧಗಳನ್ನು ತಯಾರಿಸಿರುವಂತೆಯೇ, ಭೂಮಿಯಲ್ಲಿರುವ ಪ್ರತಿಯೊಬ್ಬನಿಗೆ ಉಣಿಸಲು ಸಾಲುವುದಕ್ಕಿಂತಲೂ ಹೆಚ್ಚು ಆಹಾರವನ್ನು ಉತ್ಪನ್ನ ಮಾಡಿ ರವಾನಿಸಲು ಸಾಧ್ಯ ಮಾಡಿದೆ. ಆದರೆ ನ್ಯೂನ ಪೋಷಣೆಗೆ ಒಡನೆ ಗುಣಪಡಿಸುವ ಔಷಧಗಳಿಲ್ಲ. ಆಹಾರ ರವಾನೆ ಮತ್ತು ವಿಟೆಮಿನ್‌ ಗುಳಿಗೆಗಳಿಂದ ಇದನ್ನು ಹೋಗಲಾಡಿಸಸಾಧ್ಯವಿಲ್ಲ. ಅದರ ಬೇರುಗಳು ನಿರ್ದಯತೆಯ ದಾರಿದ್ರ್ಯ, ವ್ಯಾಪಕವಾದ ಅಜ್ಞಾನ, ಅಶುದ್ಧ ನೀರು, ಅನಾರೋಗ್ಯಕರವಾದ ಪರಿಸ್ಥಿತಿಗಳು, ಮತ್ತು ಬಡತನವಿರುವ ಪ್ರದೇಶಗಳಲ್ಲಿ ವ್ಯವಸಾಯದ ಜಮೀನಿನ ಕೊರತೆ—ಇವುಗಳಲ್ಲಿ ನಾಟಿವೆ.

ಪರಿಸರೀಯ ಸಮಸ್ಯೆಗಳು

ಭೌಗೋಲಿಕ ಪರಿಸರ ಬಿಕ್ಕಟ್ಟು ವಿಷಮವಾಗುತ್ತಿರುವಾಗ ಹೆಚ್ಚು ಸುಲಭಭೇದ್ಯರಾಗಿರುವುದು ಮಕ್ಕಳೇ. ವಾಯು ಮಾಲಿನ್ಯದ ಕುರಿತು ಪರ್ಯಾಲೋಚಿಸಿರಿ. ಮೂರು ವರ್ಷ ಪ್ರಾಯದ ಕೆಳಗಿನ ಮಗು ವಿಶ್ರಾಂತಿ ತೆಗೆದುಕೊಳ್ಳುವಾಗ, ವಿಶ್ರಾಂತಿ ತೆಗೆದುಕೊಳ್ಳುವ ವಯಸ್ಕನಿಗಿಂತ ಪ್ರಮಾಣಾನುಗುಣವಾಗಿ ಎರಡರಷ್ಟು ಹೆಚ್ಚು ಗಾಳಿಯನ್ನು ಮತ್ತು ಎರಡರಷ್ಟು ಹೆಚ್ಚು ಮಾಲಿನ್ಯವನ್ನು ಒಳಕ್ಕೆ ಸೇದಿಕೊಳ್ಳುತ್ತದೆ. ಮತ್ತು ಮಕ್ಕಳ ಮೂತ್ರಪಿಂಡ, ಪಿತ್ತಜನಕಾಂಗ, ಮತ್ತು ಕಿಣ್ವ ವ್ಯವಸ್ಥೆಗಳು ಇನ್ನೂ ಪೂರ್ಣ ವಿಕಾಸಗೊಳ್ಳದಿರುವ ಕಾರಣ, ಮಕ್ಕಳು ವಯಸ್ಕರಷ್ಟು ಕಾರ್ಯಸಾಧಕವಾಗಿ ಮಾಲಿನ್ಯಗಳನ್ನು ಸಂಸ್ಕರಿಸಶಕ್ತರಾಗಿರುವುದಿಲ್ಲ.

ಹೀಗೆ ಮಕ್ಕಳು ಪೆಟ್ರೋಲಿನ ಸೀಸ ಸೇರ್ಪಡೆಗಳಿಂದ ಮತ್ತು ಕಾರ್ಬನ್‌ ಮೋನೋಕ್ಸೈಡ್‌, ನೈಟ್ರಿಕ್‌ ಆಕ್ಸೈಡ್‌, ಮತ್ತು ಸಲ್ಫರ್‌ ಡೈಆಕ್ಸೈಡ್‌ಗಳಂತಹ ಅನಿಲಗಳಿಂದ ವಯಸ್ಕರಿಗಿಂತ ಹೆಚ್ಚು ಹಾನಿಯನ್ನು ಅನುಭವಿಸುತ್ತಾರೆ. ಈ ಸುಲಭಭೇದ್ಯತೆ, ವಿಕಾಸಶೀಲ ದೇಶಗಳಲ್ಲಿ, ಉಸಿರಾಟದ ಸಂಬಂಧದ ರೋಗಗಳಿಂದ ಸಾಯುವ ಐದು ವಯಸ್ಸಿನ ಕೆಳಗಿನ 42 ಲಕ್ಷಕ್ಕೂ ಹೆಚ್ಚು ಮಕ್ಕಳ ಮರಣಗಳಿಗೆ ನೇರವಾಗಿ ಸಹಾಯ ಮಾಡುತ್ತದೆ. ಇದರಿಂದ ಬದುಕಿ ಉಳಿಯುವ ಅನೇಕರು ತಮ್ಮ ಉಳಿದಿರುವ ಜೀವಮಾನಕಾಲದಲ್ಲಿ ಈ ಉಸಿರಾಟದ ರೋಗದಿಂದ ಬಳಲುವವರಾಗಿ ಬೆಳೆಯುತ್ತಾರೆ.

ಅವರು ಇನ್ನೂ ಶಾರೀರಿಕವಾಗಿ ಬೆಳೆಯುತ್ತಿರುವುದರಿಂದ ಮಕ್ಕಳು ಅಯೋಗ್ಯ ಆಹಾರಕ್ರಮದ ಪರಿಣಾಮದ ಸಂಬಂಧದಲ್ಲಿ ವಯಸ್ಕರಿಗಿಂತ ಹೆಚ್ಚು ಸುಲಭಭೇದ್ಯರು. ಕಾಡುಗಳು ಕುಗ್ಗುವಾಗ, ಮರುಭೂಮಿ ಹಿಗ್ಗುವಾಗ, ವಿಪರೀತ ವ್ಯವಸಾಯ ಮಾಡಿರುವ ಜಮೀನು ಸವೆದು ಹೋಗಿ, ದಣಿದು, ಕಡಮೆ ಆಹಾರವನ್ನು ಉತ್ಪನ್ನ ಮಾಡುವಾಗ, ದೇಶ ದೇಶಗಳಲ್ಲಿ ದೊಡ್ಡ ನಷ್ಟವಾಗುವುದು ಮಕ್ಕಳಿಗೆ. ನ್ಯೂನ ಪೋಷಣೆಯ ಕಾರಣ ಕೇವಲ ಆಫ್ರಿಕದಲ್ಲಿಯೇ 3.9 ಕೋಟಿ ಮಕ್ಕಳು ಬೆಳವಣಿಗೆಯಲ್ಲಿ ಕುಂಠಿತರಾಗಿದ್ದಾರೆ.

ಈ ಸಮಸ್ಯೆಯನ್ನು ಉತ್ತಮ ನೀರಿನ ತೀವ್ರ ಅಭಾವವು ಹೆಚ್ಚಿಸುತ್ತದೆ. ವಿಕಾಸಶೀಲ ಜಗತ್ತಿನಲ್ಲೆಲ್ಲ, ಅರ್ಧಾಂಶ ಮಕ್ಕಳಿಗೆ ಮಾತ್ರ ಶುದ್ಧ ಕುಡಿಯುವ ನೀರು ದೊರೆಯುತ್ತದೆ. ಇದಕ್ಕಿಂತಲೂ ಕಡಮೆ ಮಕ್ಕಳಿಗೆ ಆರೋಗ್ಯಕರವಾಗಿ ಕಚಡ ತೊಲಗಿಸುವ ಸೌಕರ್ಯಗಳಿವೆ.

ಯುದ್ಧ

ಗತ ಕಾಲಗಳಲ್ಲಿ, ಯುದ್ಧದ ಹೆಚ್ಚಿನ ಬಲಿಗಳು ಸೈನಿಕರು. ಈಗ ಹಾಗಲ್ಲ. ಎರಡನೆಯ ಜಾಗತಿಕ ಯುದ್ಧದಿಂದ ಹಿಡಿದರೆ, ವಿವಿಧ ಹೋರಾಟಗಳಲ್ಲಿ ಸತ್ತ ಎರಡು ಕೋಟಿ ಜನರಲ್ಲಿ ಮತ್ತು ಗಾಯಗೊಂಡ ಆರು ಕೋಟಿ ಜನರಲ್ಲಿ 80 ಪ್ರತಿಶತ ಅಯೋಧರು—ಹೆಚ್ಚಾಗಿ ಸ್ತ್ರೀಯರು ಮತ್ತು ಮಕ್ಕಳು. ಆಫ್ರಿಕದಲ್ಲಿ, 1980ಗಳ ಒಂದು ಹಂತದಲ್ಲಿ, ಇಂಥ ಹೋರಾಟಗಳ ಕಾರಣದಿಂದ ಪ್ರತಿ ತಾಸಿನಲ್ಲಿ 25 ಮಕ್ಕಳು ಸಾಯುತ್ತಿದ್ದರು! ಇನ್ನು ಅಸಂಖ್ಯಾತ ಸಂಖ್ಯೆಯಲ್ಲಿ ಮಕ್ಕಳು ಕೊಲ್ಲಲ್ಪಟ್ಟಿದ್ದಾರೆ, ಗಾಯಗೊಂಡಿದ್ದಾರೆ, ತ್ಯಜಿಸಲ್ಪಟ್ಟಿದ್ದಾರೆ, ಅನಾಥರಾಗಿದ್ದಾರೆ, ಇಲ್ಲವೆ ಒತ್ತೆಯಾಳುಗಳಾಗಿದ್ದಾರೆ.

ಈಗ ನಿರಾಶ್ರಿತ ಶಿಬಿರಗಳಲ್ಲಿ ಬೆಳೆಯುತ್ತಿರುವ ಲಕ್ಷಗಟ್ಟಲೆ ಮಕ್ಕಳಿಗೆ ಗುರುತು ಮತ್ತು ದೇಶೀಯತೆ ನಷ್ಟವಾಗುವುದು ಮಾತ್ರವಲ್ಲ, ಸಾಕಷ್ಟು ಆಹಾರ, ಆರೋಗ್ಯ ಪರಾಮರಿಕೆ ಮತ್ತು ವಿದ್ಯೆಯೂ ನಷ್ಟವಾಗುತ್ತದೆ. ಅನೇಕರಿಗೆ ಸಮಾಜದಲ್ಲಿ ಒಂದು ಸ್ಥಾನವನ್ನು ಗಳಿಸುವ ಕೌಶಲಗಳನ್ನು ಸಂಪಾದಿಸುವುದು ಅಸಾಧ್ಯವಾಗುತ್ತದೆ.

ಆದರೆ ಮಕ್ಕಳು ಯುದ್ಧಕ್ಕೆ ಬಲಿಗಳಾಗುವುದು ಮಾತ್ರವಲ್ಲ; ಅವರು ಯುದ್ಧಗಳನ್ನು ಹೋರಾಡುವವರೂ ಆಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ, 15 ವಯಸ್ಸಿನ ಕೆಳಗಿನ 2,00,000 ಮಕ್ಕಳನ್ನು ಸೈನ್ಯಕ್ಕೆ ಸೇರಿಸಿ, ಶಸ್ತ್ರಧಾರಿಗಳನ್ನಾಗಿ ಮಾಡಿ, ಅವರು ಕೊಲ್ಲುವಂತೆ ತರಬೇತುಗೊಳಿಸಲಾಗಿದೆ. ಇವರಲ್ಲಿ, ಸಿಡಿಮದ್ದು ಪಾತ್ರೆಗಳಿರುವ ಹೊಲಗಳಲ್ಲಿ ದಾರಿಗಳನ್ನು ತೆರೆಯುವ ಆಜ್ಞೆಗಳನ್ನು ಕೈಕೊಂಡಾಗ ಪ್ರಾಣ ತೆತ್ತವರು ಯಾ ಅಂಗಹೀನರಾದವರು ಇದ್ದಾರೆ.

ಮಕ್ಕಳನ್ನು ಬಳಸಿಕೊಳ್ಳುವುದು

ವಿಕಾಶಶೀಲ ಜಗತ್ತಿನಲ್ಲೆಲ್ಲ ಬಡತನವು, ಹೆತ್ತವರು ಮಕ್ಕಳನ್ನು, ಹಸಿವೆಯಿಂದ ತಪ್ಪಿಸಲಿಕ್ಕಾಗಿ ಯಾ ಸಾಲ ತೀರಿಸಲಿಕ್ಕಾಗಿ ಅತ್ಯಲ್ಪ ಕ್ರಯಕ್ಕೆ ಮಾರುವಂತೆ ಮಾಡುತ್ತದೆ. ಈ ಎಳೆಯರಿಗೆ ಏನಾಗುತ್ತದೆ? ಕೆಲವರು ಸೂಳೆಗಾರಿಕೆಗೆ ಬಲಾತ್ಕರಿಸಲ್ಪಡುತ್ತಾರೆ ಯಾ ಹೊಲಸಾದ ಕಾರ್ಖಾನೆಗಳಲ್ಲಿ ಗುಲಾಮರಾಗುತ್ತಾರೆ. ಇತರರು ಮಧ್ಯಸ್ಥಗಾರ ವ್ಯಾಪಾರಿಗಳಿಂದ ಯಾ ಪಾಶ್ಚಾತ್ಯ ದೇಶಗಳಲ್ಲಿರುವ ದತ್ತಸ್ವೀಕಾರ ಏಜನ್ಸಿಗಳಿಂದ 10,000 ಡಾಲರುಗಳಷ್ಟಕ್ಕೂ ಪುನಃ ಮಾರಲ್ಪಡುತ್ತಾರೆ.

ಶಿಶು ವೇಶ್ಯಾವೃತ್ತಿ ಅಭಿವೃದ್ಧಿ ಹೊಂದುತ್ತಿದೆಯೆಂದೂ, ಅದು ಗಂಡು ಮತ್ತು ಹೆಣ್ಣು ಮಕ್ಕಳಲ್ಲಿ ಹೆಚ್ಚು ಸಣ್ಣ ಪ್ರಾಯದವರನ್ನೂ ಒಳಗೊಂಡಿದೆಯೆಂದೂ ಸೂಚನೆಗಳು ತೋರಿಸುತ್ತವೆ. ಕೇವಲ ಬ್ರೆಸೀಲ್‌ನಲ್ಲಿಯೇ, 5,00,000 ಹದಿಪ್ರಾಯದ ವೇಶ್ಯಾವೃತ್ತಿಯವರು ಇದ್ದಾರೆಂದು ಅಭಿಪ್ರಯಿಸಲಾಗುತ್ತದೆ. ಶಿಶು ಅಶ್ಲೀಲ ಸಾಹಿತ್ಯ ಸಹ ಹೇರಳವಾಗುತ್ತಿದೆ ಮತ್ತು ಇದಕ್ಕೆ ಸುಲಭವಾಗಿ ದೊರೆಯುವ ವಿಡಿಯೊ ಸಲಕರಣೆ ಪ್ರೋತ್ಸಾಹನೆ ನೀಡಿದೆ.

ಆದ್ಯತೆಗಳು

ಈ ಸಂಖ್ಯಾಸಂಗ್ರಹಣದ ಹಿಂದಿರುವ ವೇದನೆ ಮತ್ತು ಸಂಕಟವನ್ನು ಗ್ರಹಿಸುವುದು ಕಷ್ಟ. ನಮಗೆ ಒಂದು ಲಕ್ಷ ಜನರ ಯಾ ಒಂದು ಸಾವಿರ ಜನರ ಕಷ್ಟಾನುಭವಗಳನ್ನು ಗ್ರಹಿಸಲಾಗದಿರುವುದು ಅನುಗ್ರಹವೇ ಸರಿ. ಆದರೂ, ಒಬ್ಬ ವ್ಯಕ್ತಿಯಾಗಿದ್ದು ಅವನ ಯಾ ಅವಳದ್ದೇ ಆದ ಅದ್ವಿತೀಯ ವ್ಯಕ್ತಿತ್ವವಿರುವ, ದೇವರಿಗೆ ಅಮೂಲ್ಯವಾದ ಆತ್ಮವಾಗಿರುವ, ಬೆಳೆದು ಏಳಿಗೆ ಹೊಂದಲು ಇತರರಷ್ಟೇ ಹಕ್ಕಿರುವ ಪ್ರತ್ಯೇಕ ವ್ಯಕ್ತಿಯಾಗಿರುವ ಒಂದೇ ಒಂದು ಮಗುವಿನ ನರಳಾಟ ಯಾ ಮರಣವನ್ನು ಅವಲೋಕಿಸುವುದು ಎಷ್ಟು ಭಯಂಕರವೆಂಬುದು ನಮ್ಮಲ್ಲಿ ಅನೇಕರಿಗೆ ತಿಳಿದಿದೆ.

ಮಕ್ಕಳ ಪ್ರಸ್ತುತದ ಪರಿಸ್ಥಿತಿ ಈ ಸ್ಥಿತಿಯಲ್ಲಿ ಇರಲು ಏನು ಕಾರಣವೆಂಬ ಅಹಿತಕರ ಪ್ರಶ್ನೆಯನ್ನು ಪರಿಗಣಿಸಲು ಹೆಚ್ಚು ಸಮಯ ವ್ಯಯಿಸದೆ, ಮಕ್ಕಳ ಲೋಕ ಶೃಂಗ ಸಭೆಗೆ ಬಂದಿದ್ದ ಪ್ರತಿನಿಧಿಗಳು ಭವಿಷ್ಯತ್ತಿನ ಕುರಿತು ಭರವಸೆಯಿಂದ ಮಾತಾಡಿ, ಇನ್ನು ಮುಂದೆ ಇಂಥ ಸ್ಥಿತಿಗತಿಯನ್ನು ಸಹಿಸೆವೆಂದು ಪ್ರತಿಜ್ಞೆ ಮಾಡಿದರು. ಅವರ “ಕಾರ್ಯ ಕ್ರಮ,” ಇತರ ವಿಷಯಗಳೊಂದಿಗೆ ಈ ಕೆಳಗಿನ ಗುರಿಗಳನ್ನು ಇಸವಿ 2000ದೊಳಗೆ ಸಾಧಿಸುವುದಾಗಿ ನಿರ್ಧರಿಸಿತು:

▫ ಇಸವಿ 1990ರಲ್ಲಿ ಸಂಭವಿಸಿದ ಐದರ ಕೆಳಗಿನ ಮಕ್ಕಳ ಸಾವಿನ ಸಂಖ್ಯೆಯನ್ನು ಮೂರನೆಯ ಒಂದಂಶ ಕಡಮೆ ಮಾಡುವುದು.

▫ ಐದರ ಕೆಳಗಿನ ಮಕ್ಕಳ ಕಠಿಣ ಹಾಗೂ ಮಿತವಾದ ನ್ಯೂನ ಪೋಷಣೆಯನ್ನು 1990ರ ಮಟ್ಟದಿಂದ ಅರ್ಧಾಂಶ ಕಡಮೆ ಮಾಡುವುದು.

▫ ಭದ್ರವಾದ ಕುಡಿಯುವ ನೀರು ಮತ್ತು ಆರೋಗ್ಯಕರವಾದ ಮಲ ವಿಸರ್ಜನೆಯನ್ನು ಸಾರ್ವತ್ರಿಕವಾಗಿ ದೊರಕಿಸುವುದು.

▫ ವಿಶೇಷ ಕಷ್ಟ ಪರಿಸ್ಥಿತಿಗಳಲ್ಲಿ, ವಿಶೇಷವಾಗಿ ಸಶಸ್ತ್ರ ಹೋರಾಟಗಳಲ್ಲಿ ಮಕ್ಕಳನ್ನು ಸಂರಕ್ಷಿಸುವುದು.

ಐದು ಕೋಟಿ ಮಕ್ಕಳ ಮರಣವನ್ನು 1990ಗಳಲ್ಲಿ ತಡೆಯಬಲ್ಲ ಗುರಿಗಳನ್ನು ನೆರವೇರಿಸಬಲ್ಲ ಕಾರ್ಯಕ್ರಮದ ಕೂಡಿಸಿದ ಖರ್ಚು ವರ್ಷಕ್ಕೆ 250 ಕೋಟಿ ಡಾಲರುಗಳೆಂದು ಅಂದಾಜು ಮಾಡಲಾಗಿದೆ.

ಭೌಗೋಲಿಕವಾಗಿ ನೋಡುವುದಾದರೆ ಇದು ಹಣದ ದೊಡ್ಡ ಮೊತ್ತವಲ್ಲ. ಒಂದು ವರ್ಷಕ್ಕೆ ಅಮೆರಿಕನ್‌ ಕಂಪೆನಿಗಳು ಸಿಗರೇಟ್‌ ಜಾಹೀರಾತುಗಳಿಗಾಗಿ 250 ಕೋಟಿ ಡಾಲರನ್ನು ಖರ್ಚು ಮಾಡುತ್ತವೆ. ಒಂದೇ ಒಂದು ದಿನದಲ್ಲಿ ಜಗತ್ತು ಮಿಲಿಟರಿಗಾಗಿ 250 ಕೋಟಿ ಡಾಲರು ಖರ್ಚು ಮಾಡುತ್ತದೆ.

ಈಗ, ಮಿಲಿಟರಿ ಖರ್ಚು—ವಾರ್ಷಿಕವಾಗಿ ಒಂದು ಲಕ್ಷ ಕೋಟಿ ಡಾಲರ್‌ ಎಂದು ವಿಶ್ವ ಸಂಸ್ಥೆ ಕಡಮೆಯ ರೀತಿಯಲ್ಲಿ ಅಂದಾಜು ಮಾಡಿಯದೆ—ಮಾನವ ಕುಲದ ಅತಿ ಬಡತನವಿರುವ ಅರ್ಧಾಂಶದ ಒಟ್ಟು ವಾರ್ಷಿಕ ಆದಾಯವನ್ನು ಮಿಕ್ಕಿದೆ. ಈ ದೊಡ್ಡ ಮೊತ್ತದಿಂದ ಕೇವಲ 5 ಪ್ರತಿಶತವನ್ನು ಆ ಕಡೆಗೆ ತಿರುಗಿಸಿದರೂ ಶೃಂಗ ಸಭೆಯ ಗುರಿಗಳನ್ನು ಮುಟ್ಟುವ ಕಡೆಗೆ ಪ್ರಗತಿ ಮಾಡುವಂತೆ ತ್ವರಿತಗೊಳಿಸಲು ಅದು ಸಾಕು. ಉದಾಹರಣೆಗೆ, ಒಂದೇ ಒಂದು ಎಫ್‌⁄ಎ-18 ಫೈಟರ್‌ ಜೆಟ್‌ ವಿಮಾನದ ಕ್ರಯ (3 ಕೋಟಿ ಡಾಲರುಗಳಿಗೂ ಹೆಚ್ಚು), 40 ಕೋಟಿ ಮಕ್ಕಳನ್ನು ಸಾಯಿಸುವ ರೋಗಗಳಿಂದ ರಕ್ಷಿಸಲು ಬೇಕಾಗುವ ನಂಜು ಚುಚ್ಚಿನ ಖರ್ಚಿಗೆ ಸಮಾನ.

ಶೃಂಗ ಸಭೆಯಲ್ಲಿ ಇಟ್ಟ ಹೆಬ್ಬಯಕೆಯ ಗುರಿಗಳನ್ನು ತಲುಪುವುದು ರಾಷ್ಟ್ರಗಳಿಗೆ ಸಾಧ್ಯ. ಅವರಲ್ಲಿ ಜ್ಞಾನ, ಕಲಾತಂತ್ರ, ಮತ್ತು ಹಣವಿದೆ. ಆದರೂ ಉಳಿಯುವ ಪ್ರಶ್ನೆಯು, ಅವರು ತಲುಪುವರೊ? ಎಂಬುದೆ. (g92 12/8)

[ಪುಟ 6 ರಲ್ಲಿರುವ ಚೌಕ/ಚಿತ್ರಗಳು]

ನ್ಯೂನ ಪೋಷಣೆಯ ಎದುರಾಗಿ ಹೋರಾಡುವುದು

ಹೆತ್ತವರು ತಿಳಿದಿರಬೇಕಾದ ಆರು ವಿಷಯಗಳು

1. ಒಂದು ಮಗುವಿಗೆ ಅದರ ಮೊದಲನೆಯ ನಾಲ್ಕರಿಂದ ಆರು ತಿಂಗಳುಗಳಲ್ಲಿ ದೊರೆಯಬಲ್ಲ ಅತ್ಯುತ್ತಮ ಆಹಾರ ಮೊಲೆ ಹಾಲು ಮಾತ್ರ. ಇದು ಮಗುವಿಗೆ ಪೂರ್ತಿ ಪೋಷಣೆ ಕೊಟ್ಟು ಸಾಮಾನ್ಯ ರೋಗಗಳ ಎದುರಾಗಿ ಸೋಂಕುರಕ್ಷೆಯನ್ನು ಒದಗಿಸುತ್ತದೆ.

2. ನಾಲ್ಕರಿಂದ ಆರು ತಿಂಗಳು ವಯಸ್ಸಾಗುವುದರೊಳಗೆ, ಮಗುವಿಗೆ ಇತರ ಆಹಾರಗಳು ಬೇಕಾಗುತ್ತವೆ. ಇದಕ್ಕೆ ಮೊದಲೇ ಗಟ್ಟಿ ಆಹಾರದ ಪರಿಚಯ ಮಾಡಿಸುವುದು ರೋಗಾಪಾಯವನ್ನು ವರ್ಧಿಸುತ್ತದೆ; ಈ ಅವಧಿ ಮುಗಿದ ಮೇಲೆ ಅದರ ಪ್ರಾರಂಭವು ನ್ಯೂನ ಪೋಷಣೆಗೆ ನಡೆಸುತ್ತದೆ.

3. ಮೂರು ವರ್ಷ ವಯಸ್ಸಿನ ಕೆಳಗಿನ ಮಗುವಿಗೆ ವಯಸ್ಕನು ಎಷ್ಟು ಬಾರಿ ಉಣ್ಣುತ್ತಾನೋ ಅದಕ್ಕಿಂತ ಎರಡು ಪಾಲು ಹೆಚ್ಚು ಬಾರಿ, ಸಣ್ಣ ಪ್ರಮಾಣದಲ್ಲಿ ಹೆಚ್ಚು ಶಕ್ತಿಯುತ ಆಹಾರವನ್ನು ಉಣ್ಣಿಸುವುದು ಅವಶ್ಯ.

4. ಮಗುವಿಗೆ ಅತಿಭೇದಿಯಾಗುವಲ್ಲಿ ಆಹಾರ ಮತ್ತು ಪಾನೀಯಗಳನ್ನು ತಡೆಹಿಡಿಯಬಾರದು.

5. ಕಾಯಿಲೆಯ ಬಳಿಕ, ನಷ್ಟವಾದ ಬೆಳವಣಿಗೆಯ ಬೆನ್ನು ಹಿಡಿಯಲು ಒಂದು ಮಗುವಿಗೆ ಒಂದು ವಾರದ ತನಕ ದಿನಕ್ಕೆ ಒಂದು ಹೆಚ್ಚು ಊಟ ಅವಶ್ಯ.

6. ತಾಯಿ ಮತ್ತು ಮಗುವಿನ ಪೋಷಣ ಆರೋಗ್ಯಕ್ಕೆ ಜನನಗಳ ಮಧ್ಯೆ ಕಡಮೆ ಪಕ್ಷ ಎರಡು ವರ್ಷಗಳ ಅಂತರ ಅಗತ್ಯ.

[ಕೃಪೆ]

ಮೂಲ: ಯುನೊಯಿಟೆಡ್‌ ನೇಷನ್ಸ್‌ ಚಿಲ್ಡ್ರನ್‌ ಫಂಡ್‌

UNICEF/C/91/ Roger Lemoyne

[ಪುಟ 5 ರಲ್ಲಿರುವ ಚಿತ್ರ]

ವಿಕಾಸಶೀಲ ಜಗತ್ತಿನ ಮಕ್ಕಳಲ್ಲಿ ಕೇವಲ ಅರ್ಧಾಂಶಕ್ಕೆ ಮಾತ್ರ ಶುದ್ಧ ಕುಡಿಯುವ ನೀರು ದೊರೆಯುತ್ತದೆ

[ಕೃಪೆ]

UNICEF/3893/89/ Maggie Murray-Lee

[ಪುಟ 7 ರಲ್ಲಿರುವ ಚಿತ್ರ]

ಅದ್ವಿತೀಯ ವ್ಯಕ್ತಿತ್ವವಿರುವ ಪ್ರತಿಯೊಂದು ಮಗು ದೇವರಿಗೆ ಅಮೂಲ್ಯ ಮತ್ತು ಅದಕ್ಕೆ ಬೆಳೆಯಲು ಇನ್ನೊಬ್ಬನಷ್ಟೇ ಹಕ್ಕಿದೆ

[ಕೃಪೆ]

Photo: Cristina Solé/Godo-Foto

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ