ಜಗತ್ತನ್ನು ಗಮನಿಸುವುದು
ಹೃದ್ರೋಗದ ಜೀವನಷ್ಟ
ಹೃದಯ ನಾಳ ಸಂಬಂಧಿತ ರೋಗಗಳು (CVD) ಲೋಕವ್ಯಾಪಕವಾಗಿ ಆಗುವ ಎಲ್ಲ ಮರಣಗಳಲ್ಲಿ ಸುಮಾರು ಕಾಲು ಅಂಶಕ್ಕೆ ಕಾರಣಭೂತವಾಗಿರುವ ಮಾನವಕುಲದ ಅತಿ ದೊಡ್ಡ ಕೊಲೆಗಾರರು. ಹೀಗೆಂದು 1992ರಲ್ಲಿ ಡಬ್ಲ್ಯೂಎಚ್‌ಓ (ಲೋಕಾರೋಗ್ಯ ಸಂಸ್ಥೆ) ಪ್ರಕಟಿಸಿದ 1991 ವರ್ಲ್ಡ್ ಹೆಲ್ತ್ ಸೆಟ್ಟಿಸಿಕ್ಟ್ಸ್ ಆ್ಯನ್ಯುಅಲ್ ಹೇಳುತ್ತದೆ. ಆಸ್ಟ್ರೇಲಿಯ, ಕೆನಡ, ಜಪಾನ್ ಮತ್ತು ಅಮೆರಿಕದಂತಹ ವಿಕಾಸಗೊಂಡಿರುವ ದೇಶಗಳಲ್ಲಿ, 1980ರುಗಳು ಗಮನಾರ್ಹ ಕಮ್ಮಿಯನ್ನು ತೋರಿಸಿದರೂ, ಸಿವಿಡಿ ಎಲ್ಲಾ ಮರಣಗಳಲ್ಲಿ ಸುಮಾರು ಅರ್ಧಕ್ಕೆ ಕಾರಣಭೂತವಾಗಿವೆ. ವಿಕಾಸಶೀಲ ದೇಶಗಳಲ್ಲಿ, ಎಲ್ಲ ಮರಣಗಳಲ್ಲಿ ಕೇವಲ 16 ಸೇಕಡ ಮರಣಗಳಿಗೆ ಸಿವಿಡಿ ಕಾರಣ. ಆದರೆ ಡಬ್ಲ್ಯೂಎಚ್‌ಓ ಸಂಸ್ಥೆಗನುಸಾರ, “ತಲೆದೋರಲಿರುವ ಸಾಂಕ್ರಾಮಿಕ ರೋಗದ ಸೂಚನೆಗಳಿವೆ. . . . ಸಿವಿಡಿ ರೋಗಗಳು ವಿಕಾಸಶೀಲ ಲೋಕಾದ್ಯಂತ ಹೆಚ್ಚಾಗುತ್ತಿವೆ.” (g92 12/22)
ಸಹಿಷ್ಣುತೆಯಿಲ್ಲದ ನೆರೆಯವರು
ನಿಮ್ಮ ಪಕ್ಕದಲ್ಲಿ ಯಾರು ಜೀವಿಸುವುದು ನಿಮಗೆ ಅತಿ ಕಡಮೆ ಇಷ್ಟ? ಯೂರೋಪಿಯನ್ ಮೌಲ್ಯ ಪದ್ಧತಿ ಅಧ್ಯಯನ ತಂಡ, ಈ ಪ್ರಶ್ನೆಯನ್ನು 14 ದೇಶಗಳ 20,000 ವ್ಯಕ್ತಿಗಳಿಗೆ, ಸಾಮಾನ್ಯ ಭಯ ಮತ್ತು ಅವಿಚಾರಾಭಿಪ್ರಾಯಗಳನ್ನು ಕಂಡುಹಿಡಿಯುವ ಪ್ರಯತ್ನದಿಂದ ಹಾಕಿತು. “ಎಷ್ಟೋ ಹೆಚ್ಚು ಸಹಿಷ್ಣುವಾದ ದೇಶ ಡೆನ್ಮಾರ್ಕ್” ಎಂದು ಗಮನಿಸುತ್ತದೆ ದಿ ಯೂರೋಪಿಯನ್. ಅತಿ ಕಡಮೆ ಸಹಿಷ್ಣು ಪೋರ್ಚುಗಲ್ ಅಂತೆ. ಏಯ್ಡ್ಸ್ ಇರುವ ನೆರೆಯವರ ಸಂಬಂಧದಲ್ಲಿ, ಇಟೆಲಿ, ಸ್ಪೆಯ್ನ್ ಮತ್ತು ಐರ್ಲೆಂಡ್‌ನಂತಹ ಅಧಿಕಾಂಶ ಕ್ಯಾಥೊಲಿಕ್ ದೇಶಗಳು ಅತಿ ಹೆಚ್ಚು ವಿರೋಧವನ್ನು ತೋರಿಸಿದಾಗ ಬೆಲ್ಚಿಯನರು ಹೆಚ್ಚು ವಂಶೀಯ ಮತ್ತು ಧಾರ್ಮಿಕ ಅಸಹಿಷ್ಣುತೆಯನ್ನು ತೋರಿಸಿದರು. ಜರ್ಮನರಿಗೆ ರಾಜಕೀಯ ಉಗ್ರವಾದಿಗಳು ನೆರೆಯವರಾಗಿರುವುದು ಇಷ್ಟವಿರಲಿಲ್ಲ. ಅಸಹಿಷ್ಣುತೆಯ ಸಂಬಂಧದಲ್ಲಿ ಪುರುಷರು ಮತ್ತು ಸ್ತ್ರೀಯರು ಹೆಚ್ಚು ಭೇದ ತೋರಿಸಲಿಲ್ಲ. ಆದರೆ ಒಂದು ಸಂಗತಿ ಎಲ್ಲ ದೇಶಗಳ ಅಸಹಿಷ್ಣುತೆಯಲ್ಲಿ ಕೂಡಿಕೊಂಡಿತ್ತು—ವಯಸ್ಸು. ಸಾಮಾನ್ಯವಾಗಿ ಹೆಚ್ಚು ವಯಸ್ಸಾದವರು ತಮಗೆ ಯಾರು ನೆರೆಯವರಾಗಿರಬೇಕೆಂಬ ವಿಷಯದಲ್ಲಿ ಹೆಚ್ಚು ಆಯ್ಕೆ ಮಾಡುವವರಾಗಿದ್ದರು. (g93 1/8)
ಹುಲಿಗಳ ಸಂಖ್ಯೆ ಕಡಮೆಯಾಗುತ್ತಿದೆ
ಭಾರತದ ಉತ್ತಮ ಅಭಯಾರಣ್ಯಗಳಲ್ಲಿ ಒಂದು ತನ್ನ ವಿರಳವಾದ ಬೆಂಗಾಲ್ ಹುಲಿಗಳನ್ನು ಕಳೆದುಕೊಳ್ಳುತ್ತಿದೆ, ಎಂದು ನ್ಯೂ ಸೈಂಟಿಸ್ಟ್ ಪತ್ರಿಕೆ ವರದಿ ಮಾಡುತ್ತದೆ. ರಂತಂಬರ್ ಅಭಯಾರಣ್ಯದಲ್ಲಿ ಇತ್ತೀಚೆಗೆ ಮಾಡಿದ ಗಣತಿ ಕೇವಲ 15 ಹುಲಿಗಳನ್ನು ಮಾತ್ರ ಕಂಡುಹಿಡಿಯಿತು. ಇದು ಮೂರು ವರ್ಷಗಳ ಹಿಂದೆ ಇದ್ದ 44ಕ್ಕಿಂತ ಕಡಮೆ. ಇರುವ ಸಮಸ್ಯೆ, ಬೆರಗಿಲ್ಲದೆ, ಕಳ್ಳಬೇಟೆಯೇ. ಆದರೆ ಕಳ್ಳಬೇಟೆಗಾರರು ಈ ದಿವಸಗಳಲ್ಲಿ, ಅವುಗಳ ಸುಂದರ ಚರ್ಮದ ತಲಾಷಿನಲ್ಲಿ ಮಾತ್ರ ಇರುವುದಲ್ಲ. ಹುಲಿಯ ಎಲುಬುಗಳನ್ನು “ಹುಲಿ ಎಲುಬಿನ ಮದ್ಯ”ವನ್ನು ಮಾಡಲು ಉಪಯೋಗಿಸಲಾಗುತ್ತದೆ. ಇದು ಏಷಿಯದ ಕೆಲವು ದೇಶಗಳಲ್ಲಿ ಬಲವರ್ಧಕ ಔಷಧವಾಗಿ ಜನಪ್ರಿಯವಾಗಿದೆ. ಕಳ್ಳಬೇಟೆಗಾರರು ಸಾಮಾನ್ಯವಾಗಿ ಹುಲಿಯನ್ನು ವಿಷದ ಆಹಾರವನ್ನು ಕೊಟ್ಟು, ಕೆಲವು ಬಾರಿ ತಾಯಿ ಹುಲಿಯನ್ನು ಮರಿಗಳೊಂದಿಗೆ ಕೊಲ್ಲುತ್ತಾರೆ. ಹಾಸ್ಯವ್ಯಂಗ್ಯವಾಗಿ, ಈ ರಂತಂಬರ್ ಅಭಯಾರಣ್ಯ ಆದಿಯಲ್ಲಿ ಪ್ರಾಜೆಕ್ಟ್ ಟೈಗರ್ ಎಂಬ ಬೆಂಗಾಲ್ ಹುಲಿಯನ್ನು ಅಳಿವಿನಿಂದ ತಪ್ಪಿಸುವ ರಕ್ಷಣಾ ಪ್ರಯತ್ನದ ಪ್ರದರ್ಶಕ ಸ್ಥಳವಾಗಿತ್ತು. ಒಟ್ಟಿಗೆ, ಈಗ ಈ ಉತ್ಕೃಷ್ಟ ಪ್ರಾಣಿಗಳಲ್ಲಿ 6,000 ದಿಂದ 9,000 ಪ್ರಾಣಿಗಳು ಲೋಕದಲ್ಲಿ ಉಳಿದಿವೆಯೆಂದು ಅಂದಾಜು ಮಾಡಲಾಗುತ್ತದೆ. (g93 1/8)
ಸೇದುವುದು ಮತ್ತು ಮುರಿದ ಮೂಳೆಗಳು
“ಮೂಳೆ ವೈದ್ಯರು ಸಹ ತಮ್ಮ ಚಿಕಿತ್ಸಾರ್ಥಿಗಳು ಸೇದುವುದನ್ನು ನಿಲ್ಲಿಸಬೇಕೆಂಬ ಹೇಳುವ ದಿನ ಬಂದಿದೆ,” ಎಂದು ಫೋಲ್ಯ ಡಿ ಎಸ್. ಪೌಲೊ ವರದಿ ಮಾಡುತ್ತದೆ. ಅಸ್ಥಿಭಂಗವಾಗಿರುವ 29 ವ್ಯಕ್ತಿಗಳಲ್ಲಿ ಮಾಡಿದ ಅಧ್ಯಯನವೊಂದು, ತಂಬಾಕು ಹೊಗೆಯಲ್ಲಿರುವ ನಿಕೊಟೀನ್, ಅಸ್ಥಿಗತ ಧೂಮಪಾಯಿಗಳ ರಕ್ತನಾಳಗಳನ್ನು ಹೆಚ್ಚು ಗಡುಸಾಗಿ ಮಾಡಿತೆಂದು ತೋರಿಸಿತು. ಇದಕ್ಕೆ ವ್ಯತಿರಿಕ್ತವಾಗಿ, ಸೇದದಿರುವವರಿಗೆ ಮತ್ತು ಎರಡು ವರ್ಷಗಳಿಗಿಂತ ಕಡಮೆ ಕಾಲ ಸೇದಿರುವವರಿಗೆ ಹೆಚ್ಚು ಉತ್ತಮವಾಗಿ ಕುಗ್ಗಿ, ಹಿಗ್ಗುವ ರಕ್ತನಾಳಗಳಿದ್ದವು. ಇದು ಮೂಳೆ ಮುರಿತವನ್ನು ಹೆಚ್ಚು ವೇಗವಾಗಿ ಗುಣಪಡಿಸಲು ಸಹಾಯ ಮಾಡುತ್ತದೆ. ಸರಾಸರಿಯಾಗಿ, ಸೇದದಿರುವವರ ಮುರಿದ ಮೂಳೆಗಳು, ಬಹುಕಾಲದಿಂದ ಸೇದುತ್ತಿದ್ದವರ ಮೂಳೆಗಳಿಗಿಂತ 28 ಪ್ರತಿಶತ ವೇಗವಾಗಿ ಸ್ವಸ್ಥವಾಯಿತು. ಅಲ್ಲದೆ, ಸೇದುವಾಗ ಕಾರ್ಬನ್ ಮಾನೊಕ್ಸೈಡನ್ನು ಒಳಗೆ ತಕ್ಕೊಳ್ಳುವುದು, ಆಮ್ಲಜನಕವು ಪ್ರವಹಿಸುವುದನ್ನು ಕಡಮೆ ಮಾಡುವುದರಿಂದ, ಮುರಿದ ಮೂಳೆ ಕಡಮೆ ಪೋಷಣೆಯನ್ನು ಪಡೆಯುತ್ತದೆ. (g93 1/8)
ಕೊಳೆಯಾದ ಕೈಗಳು
ಅಮೆರಿಕದ ಅಧಿಕಾಂಶ ಆರೋಗ್ಯ ಪಾಲನೆಯ ಕೆಲಸಗಾರರು, ತಮ್ಮ ಚಿಕಿತ್ಸಾರ್ಥಿಗಳನ್ನು ಪರೀಕ್ಷಿಸುವ ಮೊದಲು ಕೈ ತೊಳೆಯಲು ಅಸಡ್ಡೆ ಮಾಡುತ್ತಾರೆಂದು ಇತ್ತೀಚಿನ ಒಂದು ಅಧ್ಯಯನ ತೋರಿಸಿತು. ಅಲ್ಲದೆ, ದ ವಾಷಿಂಗ್ಟನ್ ಪೋಸ್ಟ್ ಪತ್ರಿಕೆಗನುಸಾರ, “ಇತರ ಅಧ್ಯಯನಗಳು, ಡಾಕ್ಟರರು ಕೈಚೀಲಗಳನ್ನು ಬದಲಾಯಿಸಬೇಕಾದ ಸಮಯದಲ್ಲಿ ಬದಲಾಯಿಸುವುದಿಲ್ಲವೆಂದು ಸೂಚಿಸಿತು.” ಈ ಸಮಸ್ಯೆ ರೋಗದ ಹರಡಿಕೆಗೆ ಸಹಾಯ ಮಾಡಿದೆಯೆಂಬುದು ನಿಸ್ಸಂಶಯ. ದ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ ಇದಕ್ಕನುಸಾರ, ಡಾಕ್ಟರರು ಮತ್ತು ನರ್ಸ್‌ಗಳ ತೊಳೆಯದ ಕೈಗಳು “ಪ್ರತಿ ವರ್ಷ ಗುಣಪಡಿಸಲು 1,000 ಕೋಟಿ ಡಾಲರುಗಳಷ್ಟು ವೆಚ್ಚ ತಗಲುವ ಸೋಂಕನ್ನು ಆಸ್ಪತ್ರೆಯ ರೋಗಿಗಳು ಏಕೆ ಪಡೆಯುತ್ತಾರೆಂದು ವಿವರಿಸಲು ಸಹಾಯ ಮಾಡಬಹುದು,” ಎಂದು ಪೋಸ್ಟ್ ವರದಿ ಮಾಡುತ್ತದೆ. (g92 12/22)
ಅಪಾಯಕ್ಕೊಳಗಾಗಿರುವ ಪಕ್ಷಿಗಳು
ಜರ್ಮನಿಯಲ್ಲಿ ಮರಿಮಾಡುವ 273 ಪಕ್ಷಿಜಾತಿಗಳಲ್ಲಿ 166 ಜಾತಿಗಳು ಅಪಾಯಕ್ಕೊಳಗಾಗಿವೆ, ಎಂದು ಜರ್ಮನ್ ಕನ್ಸರ್ವೇಶನ್ ಸೊಸೈಟಿ ಹೇಳುತ್ತದೆ. ಇರುವ ಜಮೀನನ್ನು ರಸ್ತೆಗಳು, ಉದ್ಯಮ, ತೀವ್ರ ಬೇಸಾಯ, ಮತ್ತು ಪ್ರವಾಸಿ ಉದ್ಯಮ ಅತಿಕ್ರಮಿಸುವುದೇ ಇದಕ್ಕೆ ಕಾರಣವೆಂದು ಹೇಳಲಾಗುತ್ತದೆ. ಫ್ರ್ಯಾಂಕ್‌ಫರ್ಟರ್ ಆಲಿಮ್ಗೈನ್ ಸೈಟಂಗ್ ವೃತ್ತಪತ್ರಕೆ, ಜರ್ಮನಿಯಲ್ಲಿ ಅನೇಕ ಸರೋವರಗಳು, ನದಿಮಾರ್ಗಗಳು, ಮತ್ತು ಒದ್ದೆ ಜಮೀನುಗಳು ರಕ್ಷಿತ ಸ್ಥಳಗಳೆಂದು ಪ್ರಕಟಿಸಲ್ಪಟ್ಟಿರುವುದಾದರೂ, ಇಂಥ ಕ್ರಮಗಳು ಬ್ಲ್ಯಾಕ್ ಟರ್ನ್, ಲಿಟ್‌ಲ್ ಬಿಟರ್ನ್, ಮತ್ತು ಬಿಳಿ ಬಾಲದ ಕಡಲಹದ್ದುಗಳಿಗೆ ಸಹಾಯ ಮಾಡಲು ಸಾಕಾಗುವುದಿಲ್ಲ. ಆಫ್ರಿಕದಂತಹ, ಪಕ್ಷಿಗಳ ಚಳಿಗಾಲದ ಆಶ್ರಯಸ್ಥಾನಗಳನ್ನು ಸಹ ಸಂರಕ್ಷಿಸದಿರುವಲ್ಲಿ ಮರಿಮಾಡುವ ಸ್ಥಳಗಳ ರಕ್ಷಣೆಯಿಂದ ಕೇವಲ ಕಿಂಚಿತ್ತೇ ಸಾಧಿಸಲಾಗುತ್ತದೆ. ಹೀಗೆ, ಪತ್ರಿಕೆ ಗಮನಿಸುವುದು: “ಅನೇಕ ಸಂದರ್ಭಗಳಲ್ಲಿ, ಇವುಗಳ ರಕ್ಷಣೆಯು ಅಂತಾರಾಷ್ಟ್ರೀಯ ಸಹಕಾರವಿರುವಲ್ಲಿ ಮಾತ್ರ ಫಲಿತಾಂಶವನ್ನು ತರಬಲ್ಲದು.” (g93 1/8)
ಶಿಶು ಸಂದೇಶದಿಂದ ಪ್ರಯೋಜನಗಳು
“ಸಹಜ ಜ್ಞಾನ ಮತ್ತು ವ್ಯಕ್ತಿಗತ ಅನುಭವ, ವ್ಯಕ್ತಿ ವ್ಯಕ್ತಿಯನ್ನು ಸ್ಪರ್ಶಿಸುವುದು ಆರೋಗ್ಯಕರವೆಂದು ಹೇಳುತ್ತದೆ,” ಎನ್ನುತ್ತದೆ ಸೆಸ್ಟ್ರ್ ಆ್ಯಂಡ್ ಹೆಲ್ತ್ ರಿಪೋರ್ಟ್. ಈ ಮೂಲಸೂತ್ರವನ್ನು ಸಮಯಕ್ಕೆ ಮೊದಲಾಗಿ ಹುಟ್ಟಿದ ಮಕ್ಕಳ ಒಂದು ಗುಂಪಿನ ಆರೈಕೆಗೆ ಅನ್ವಯಿಸಲಾಯಿತು, ಮತ್ತು ಕ್ಯಾಲಿಫೋರ್ನಿಯ ಎನ್ಲೊ ಹಾಸ್ಪಿಟಲ್ ಪ್ರಕಟಿಸಿದ ವಾರ್ತಾಪತ್ರವು ಇಂತಹ 40 ಶಿಶುಗಳ ಒಂದು ವೈಜ್ಞಾನಿಕ ಅಧ್ಯಯನವನ್ನು ಉಲ್ಲೇಖಿಸುತ್ತದೆ. ಇವುಗಳಲ್ಲಿ 20ಕ್ಕೆ ದಿನಕ್ಕೆ ಮೂರು 15 ನಿಮಿಷಗಳ ಮೃದುವಾದ ನೀವುವಿಕೆ ಕೊಡಲ್ಪಟ್ಟಿತು. ಉಳಿದ ಇಪ್ಪತ್ತು ಸಮಯಕ್ಕೆ ಮೊದಲಾಗಿ ಹುಟ್ಟಿದ ಶಿಶುಗಳಿಗೆ ಸಾಮಾನ್ಯ ಆರೈಕೆಯನ್ನು ಕೊಡಲಾಯಿತು. ನೀವಲ್ಪಟ್ಟಿದ್ದ 20 ಶಿಶುಗಳು ಉಳಿದ ಇಪ್ಪತ್ತಕ್ಕಿಂತ ಅನೇಕ ಸಂಗತಿಗಳಲ್ಲಿ ಒಳ್ಳೆಯದಾಗಿ ಬೆಳೆದುವು. ಅವುಗಳ ದೈನಂದಿನ ಸರಾಸರಿ ಭಾರ 47 ಪ್ರತಿಶತ ಹೆಚ್ಚಾಗಿತ್ತು, ಅವುಗಳ ಚರ್ಯೆ ಪರೀಕ್ಷೆಗಳ ಅಂಕಗಳು ಹೆಚ್ಚು ಉತ್ತಮವಾಗಿದ್ದವು, ಮತ್ತು ಅವು ಹೆಚ್ಚು ಕ್ರಿಯಾಶೀಲವೂ ಜಾಗರೂಕವೂ ಆಗಿದ್ದವು. ಸೆಸ್ಟ್ರ್ ಆ್ಯಂಡ್ ಹೆಲ್ತ್ ರಿಪೋರ್ಟ್ ಅಂತ್ಯಗೊಳಿಸುವುದು: “ಅತಿ ಚಿಕ್ಕ ಶಿಶುಗಳಿಗೆ ಯಾವುದು ಒಳ್ಳೆಯದೋ ಅದು ಪ್ರಾಯಶಃ ನಮಗೆಲ್ಲರಿಗೂ ಒಳ್ಳೆಯದು.” (g93 1/8)
ಉಸಿರು ಕಟ್ಟಿಸುವ ಸರೋವರ
ಜಗತ್ತಿನ ಅತಿದೊಡ್ಡ ಸಿಹಿನೀರಿನ ಸರೋವರಗಳಲ್ಲಿ ಎರಡನೆಯದಾದ ವಿಕ್ಟೋರಿಯ ಸರೋವರ, ಶ್ವಾಸಬಂಧನದಿಂದ ಭಯಂಕರ ಮರಣವನ್ನು ಎದುರಿಸುತ್ತದೆ ಎಂದು ಕೆಲವು ವಿಜ್ಞಾನಿಗಳ ನಂಬಿಕೆ. ಪಾಚಿಗಳು ಸರೋವರ ತಳದಲ್ಲಿ ಹೇರಳವಾಗಿ ಬೆಳೆದು ನೀರಿನಿಂದ ಆಮ್ಲಜನಕವನ್ನು ಹೀರಿಕೊಳ್ಳುತ್ತಿದೆಯೆಂದು ತೋರುತ್ತದೆ. ಕಾರಣ? ಒಂದು ಶಬ್ದದಲ್ಲಿ ಹೇಳುವುದಾದರೆ, ಮನುಷ್ಯ. ಅವನು ಇದನ್ನು ಕಾಡುನಾಶ, ಬೇಸಾಯ, ಮತ್ತು ಮಿತಿಮೀರಿದ ಜನಸಂಖ್ಯೆಯ ಮೂಲಕ ಮಾಡುತ್ತಾನೆ. ಹರಿದು ಹೋಗುವ ಮಣ್ಣು, ರೊಚ್ಚು, ಮತ್ತು ಮರದ ಹೊಗೆಯಲ್ಲಿರುವ ಉನ್ನತ ಪ್ರಮಾಣದ ಪೋಷಕ ಪದಾರ್ಥಗಳು ಪಾಚಿಯನ್ನು ಪೋಷಿಸುತ್ತವೆ. ಅಲ್ಲದೆ, 30 ವರ್ಷಗಳ ಹಿಂದೆ ಮೀನುಗಾರಿಕೆಯ ಅಧಿಕಾರಿಗಳು ನೈಲ್ ಪರ್ಚ್ ಮೀನನ್ನು ಸರೋವರಕ್ಕೆ ಪರಿಚಯಿಸಿ ಮೀನುಗಾರಿಕೆಯ ಉದ್ಯಮವನ್ನು ಬಲಪಡಿಸಲು ನಿಶ್ಚಯಿಸಿದರು. ಈ ಹೊಸಬ ಮೀನುಗಳು ಹುಲುಸಾಗಿ ಬೆಳೆದವು, ಮತ್ತು ಯೋಜಿಸಿದಂತೆ ಮೀನಿನ ವ್ಯಾಪಾರದಲ್ಲಿ ಏರಿಕೆಯಾಯಿತು. ಆದರೆ ನೈಲ್ ಪರ್ಚ್ ಮೀನುಗಳು, ಪಾಚಿಯನ್ನು ತಿಂದು ಸಮತೆಯನ್ನು ಕಾಪಾಡಿಕೊಳ್ಳುತ್ತಿದ್ದ ಚಿಕ್ಕ ಮೀನುಗಳನ್ನು ತಿಂದು ಬಿಟ್ಟವು. ಇಂತಹ ಮೀನುಜಾತಿಯಲ್ಲಿ ಅರ್ಧಕ್ಕೂ ಹೆಚ್ಚು ಜಾತಿಗಳು ಈಗ ಕಣ್ಮರೆಯಾಗಿವೆ. ಈಗ, ಮಿತಿಮೀರಿ ಮೀನು ಹಿಡಿಯುವುದರಿಂದ ಮತ್ತು ಆಮ್ಲಜನಕದ ಕಮ್ಮಿಯಿಂದ, ಪರ್ಚ್ ಮೀನು ಸಹ ಅಪಾಯಕ್ಕೊಳಗಾಗಬಹುದು. ಸುಮಾರು 3 ಕೋಟಿ ಜನರು ವಿಕ್ಟೋರಿಯ ಸರೋವರದ ಮೀನು ವ್ಯಾಪಾರದ ಮೇಲೆ ಹೊಂದಿಕೊಂಡಿದ್ದಾರೆ. (g93 1/8)
ಮಿದುಳು ವ್ಯಾಯಾಮ
“ಸೌಂಡ್ ಬ್ರೆಯ್ನ್ಸ್.” ಇದು ಮಿದುಳನ್ನು ಉಪಯೋಗಕ್ಕೆ ಹಾಕುವುದನ್ನು ಒತ್ತಿಹೇಳುವ ಒಂದು ಫಿನ್ನಿಶ್ ಕಾರ್ಯಾಚರಣೆಯ ಹೆಸರು. ಹೇತು ಸರಳ. ನಮ್ಮ ಮಿದುಳನ್ನು ನಾವು ಎಷ್ಟು ಹೆಚ್ಚು ಉಪಯೋಗಿಸುತ್ತೇವೋ—ಚಿಂತನೆ ಮಾಡಿ, ಹಂಚಿಕೆ ಹೂಡಿ, ಹೊಸ ಸಂಗತಿಗಳನ್ನು ಕಲಿತು—ಅಷ್ಟು ಹೆಚ್ಚು ಅದು ಕೆಲಸ ನಡೆಸುತ್ತದೆ. “ನಮ್ಮ ಮಿದುಳಲ್ಲಿ ಸಮಸ್ಯೆಗಳನ್ನು ಬಗೆಹರಿಸುವರೆ ಅನಂತ ಸಾಮರ್ಥ್ಯವಿದೆ, ಆದರೆ ಅಸಂತೋಷಕರವಾಗಿ, ಮನುಷ್ಯನು ಅವನ ಮಿದುಳಿನ ಸಾಮರ್ಥ್ಯದಲ್ಲಿ ಕೇವಲ ಹತ್ತನೆಯ ಒಂದಂಶವನ್ನು ಉಪಯೋಗಿಸುತ್ತಾನೆ,” ಎಂದು ಮಿದುಳು ಸಂಶೋಧಕರೂ ಆಸ್ಪತ್ರೆಯ ಆಡಳಿತಗಾರರೂ ಆಗಿದ್ದು ಈ ಕಾರ್ಯಾಚರಣೆಯ ಪ್ರಾಜೆಕ್ಟ್ ಮ್ಯಾನೆಜರ್ ಆಗಿರುವ ಯುಹನಿ ಯುಂಟುನೆನ್ ಹೇಳುತ್ತಾರೆ. “ನಿಮ್ಮ ಮಿದುಳನ್ನು ಸುಸ್ಥಿತಿಗೆ ತನ್ನಿ, ಹೊಸ ವಿಷಯಗಳನ್ನು ಕಲಿಯಿರಿ, ಮತ್ತು ಆಗ ನಿಮ್ಮ ವಶದಲ್ಲಿ ಹೆಚ್ಚು ಸಾಮರ್ಥ್ಯವಿರುವುದು,” ಎಂದು ಅವರು ಪ್ರೋತ್ಸಾಹಿಸುತ್ತಾರೆ. ಎಷ್ಟೋ ಜನರು ತಾರುಣ್ಯವನ್ನು ಮೂರ್ತೀಕರಿಸಿ ವಯಸ್ಕರ ಮಿದುಳಿನ ಸಾಮರ್ಥ್ಯವನ್ನು ಕಡಮೆ ಬೆಲೆಕಟ್ಟುವುದು ಅವರನ್ನು ರೇಗಿಸುತ್ತದೆ, ಏಕೆಂದರೆ ಕೆಲವು ಸಂಗತಿಗಳಲ್ಲಿ ಹಳೆಯ ಮಿದುಳುಗಳು ಚಿಕ್ಕವರದ್ದಕ್ಕಿಂತಲೂ ಹೆಚ್ಚು ಉತ್ತಮವಾಗಿ ಕೆಲಸ ಮಾಡುತ್ತವೆಂದು ಅವರ ನಂಬಿಕೆ. “ದೊಡ್ಡ ಕೆಲಸಗಳಲ್ಲಿ ಹಳಬರಿರುವುದು ಸಹಸಂಭವವಲ್ಲ,” ಎನ್ನುತ್ತಾರೆ ಯುಂಟುನೆನ್. “ಮಿದುಳು ಕ್ಷಯಿಸುತ್ತಿರುವ ಉಪಕರಣವಾಗಿರಬಹುದು, ಆದರೆ ಪ್ರಾಯಸ್ಥರು ಅದನ್ನು ಎಳೆಯರಿಗಿಂತ ಹೆಚ್ಚು ಕೌಶಲದಿಂದ ಉಪಯೋಗಿಸುತ್ತಾರೆ.” (g93 1/8)
ಕಮ್ಮಿಯಾಗುತ್ತಿರುವ ವಿವಿಧತೆ
ಸೂಪರಿಂಟರೆಸಾಂಟೆ ಎಂಬ ಬ್ರೆಸೀಲಿಯನ್ ಪತ್ರಿಕೆಗನುಸಾರ, ಸ್ಪೆಯ್ನ್‌ನಲ್ಲಿ ಅನೇಕ ವಿಧದ ಕಲ್ಲಂಗಡಿ ಹಣ್ಣುಗಳು ಮತ್ತು ಮಧ್ಯ ಆಫ್ರಿಕದಲ್ಲಿ ವಿವಿಧ ಈರುಳ್ಳಿಗಳು ಕಣ್ಮರೆಯಾಗುತ್ತಿವೆ, ಮತ್ತು ಬ್ರೆಸೀಲಿನಲ್ಲಿ ಆಗಲೆ ಅಳಿದು ಹೋಗಿರುವ ಕಬ್ಬು ಮತ್ತು ಜೋಳದ ಜಾತಿಗಳಿವೆ. “ದೋಷ ಉದ್ಯಮ ಮತ್ತು ಬಳಕೆದಾರರದ್ದು, ಏಕೆಂದರೆ ಅವರು ಯಾವಾಗಲೂ ಒಂದೇ ಜಾತಿಯನ್ನು ಇಷ್ಟಪಡುತ್ತಾರೆ,” ಎಂದು ಯೂಎನ್ ಆಹಾರ ಮತ್ತು ವ್ಯವಸಾಯ ಸಂಸ್ಥೆಯ ಡೈರೆಕ್ಟರ್ ಜನರಲ್ ಏಡರ್ವ್ ಸೆಊಮೆ ಹೇಳಿದರೆಂದು ಉಲ್ಲೇಖಿಸಲಾಯಿತು. ಪತ್ರಿಕೆ ಮುಂದುವರಿಸುವುದು: “ರೈತರು ಮಾರುಕಟ್ಟೆಯನ್ನು ತೃಪ್ತಿಪಡಿಸಲು ಪ್ರಯತ್ನಿಸುವುದರಿಂದ, ಜಾತಿಗಳ ಕಮ್ಮಿ ದಿನದಿಂದ ದಿನ ಕಷ್ಟಕರವಾಗುತ್ತಾ ಬರುತ್ತದೆ.” ಇಂಥ ಪ್ರಮಾಣೀಕರಣದ ಕಾರಣ, ಮಾನವಕುಲ ಮುಂದಿನ ದಶಕಗಳಲ್ಲಿ 40,000 ವಿಧದ ತರಕಾರಿಗಳನ್ನು ಕಳೆದುಕೊಳ್ಳಬಹುದು, ಎಂದು ಸೆಊಮೆ ಎಚ್ಚರಿಸುತ್ತಾರೆ. ಇಂಥ ಜೀವಶಾಸ್ತ್ರೀಯ ವಿವಿಧತೆ ಇಲ್ಲದಿರುವಲ್ಲಿ, ಕ್ಲೊಯುಗಳು ವ್ಯಾಧಿಗಳಿಗೆ ಸುಲಭಭೇದ್ಯವಾಗಬಹುದೆಂದು ವಿಜ್ಞಾನಿಗಳು ಭಯಪಡುತ್ತಾರೆ. (g93 1/8)
ಅತಿ ಮಾರಕವಾದ ಚಟ ಹಿಡಿಸುವ ವಸ್ತು
ಸಿಗರೇಟುಗಳು ದುರುಪಯೋಗಕ್ಕೊಳಗಾಗುವ ಅತಿ ಚಟ ಹಿಡಿಸುವ ಮಾದಕೌಷಧಗಳಲ್ಲಿ ಒಂದಾಗಿರುವುದು ಮಾತ್ರವಲ್ಲ ಅವು “[ಇತರ ಚಟದ ವಸ್ತುಗಳಿಗಿಂತ] ಅತಿ ಹೆಚ್ಚು ಮಾರಕವಾಗಿವೆ,” ಎಂದು ಧೂಮಪಾನ ಚರ್ಯೆ ಮತ್ತು ಕಾರ್ಯನೀತಿ ಅಧ್ಯಯನ ಸಂಸ್ಥೆಯ ಮಾಜಿ ಡೈರೆಕ್ಟರ್, ಥಾಮಸ್ ಸಿ. ಶೆಲಿಂಗ್ ಗಮನಿಸುತ್ತಾರೆ. ಇದನ್ನು ಬಿಟ್ಟು ಬಿಡುವುದು ಕಷ್ಟ ಎಂದು ಅವರು ಸೈಎನ್ಸ್ ಪತ್ರಿಕೆಯ ಜನವರಿ 24, 1992 ಸಂಚಿಕೆಯಲ್ಲಿ ಹೇಳುತ್ತಾರೆ. ಎರಡು ವರ್ಷ ಯಾ ಹೆಚ್ಚು ಸಮಯ ಇದನ್ನು ಬಿಟ್ಟು ಬಿಡುವುದರ ಸಾಫಲ್ಯದ ಪ್ರಮಾಣ ಪ್ರತಿ ಪ್ರಯತ್ನಕ್ಕೆ 5ರಲ್ಲಿ 1. ಬಿಟ್ಟು ಬಿಡುವುದು ಇಷ್ಟು ಕಷ್ಟವೇಕೆ? ಶೆಲಿಂಗ್ ಈ ಕಾರಣಗಳನ್ನು ಕೊಡುತ್ತಾರೆ: ಸಿಗರೇಟುಗಳು ಅಗ್ಗ, ಬೇಗನೆ ದೊರೆಯುತ್ತವೆ, ಸುಲಭವಾಗಿ ರವಾನಿಸಬಹುದು, ಮತ್ತು ಶೇಖರಿಸಿಡಬಹುದು; ಅವು ಸಾಮರ್ಥ್ಯದ ಯಾವ ದುರ್ಬಲತೆಯನ್ನೂ ಉಂಟುಮಾಡುವುದಿಲ್ಲ; ಮತ್ತು ಸೇದಲು ಯಾವ ಉಪಕರಣಗಳೂ ಬೇಡ. “ಹಾನಿ ಬರುವುದು ನಿಧಾನವಾಗಿ,” ಎಂದು ಅವರು ಹೇಳುತ್ತಾರೆ. “ಸೇದುವುದರಿಂದಾಗಿ ಕ್ಯಾನ್ಸರ್ ಮತ್ತು ಶ್ವಾಸಕೋಶ ಮತ್ತು ಹೃದಯದ ರೋಗವನ್ನು ಪಡೆಯುವವರು ಪ್ರತಿನಿಧಿರೂಪವಾಗಿ, ರೋಗಸೂಚನೆ ತೋರಿ ಬರುವ ಮೊದಲು ಮೂರು ಯಾ ಹೆಚ್ಚು ದಶಕಗಳಲ್ಲಿ ಧೂಮಪಾನ ಮಾಡಿದ್ದಾರೆ.” ಸಿಗರೇಟ್ ಹೊಗೆಯಲ್ಲಿ ಪ್ರಧಾನ ಚಟ ಹಿಡಿಸುವ ಪದಾರ್ಥ ನಿಕೊಟೀನ್ ಆದರೂ, ತಂಬಾಕು ಹೊಗೆಯ ರುಚಿ ಮತ್ತು ಸೇದುವುದರಿಂದಾಗುವ ಭಾವ ನಿಯಂತ್ರಣ ಚಟವನ್ನು ವರ್ಧಿಸಬಹುದೆಂದೂ ಶೆಲಿಂಗ್ ಅನುಮಾನಿಸುತ್ತಾರೆ. ಮರುಕೊಳಿಸುವಿಕೆ ಅಷ್ಟು ಸಾಮಾನ್ಯವೇಕೆ? “ಇದನ್ನು ಬಿಟ್ಟು ಬಿಟ್ಟಿರುವ ಅಧಿಕಾಂಶ ಜನರು ಮುಂದಿನ ಸಿಗರೇಟಿಗಿಂತ 5 ನಿಮಿಷ ದೂರವೂ ಇರುವುದಿಲ್ಲ. ಮತ್ತು ಸೇದುವ ಬಯಕೆಯನ್ನು ತೃಪ್ತಿಪಡಿಸಲು ಒಂದು ಕ್ಷಣದ ನಿಯಂತ್ರಣ ನಷ್ಟ ಸಾಕು,” ಎಂದು ಹೇಳುತ್ತಾರೆ ಅವರು. (g93 1/8)