ನಾನು ತೂಕ ಕಳೆದುಕೊಂಡರೆ, ಯಾವನೂ ಕಳೆದುಕೊಳ್ಳ ಬಲ್ಲನು!
ನಿಮ್ಮ ಸ್ನಾನದ ಕೋಣೆಯ ತಕ್ಕಡಿಯನ್ನು ನೀವು ದ್ವೇಷಿಸುತ್ತೀರೊ? ನಾನು ಹಾಗೆ ದ್ವೇಷಿಸುತ್ತಿದ್ದೆ. ಕಳೆದ ವರ್ಷ, ಅದರ ಮುಖಫಲಕ ಇನ್ನೊಂದು ಉನ್ನತ ಸಂಖ್ಯೆಯನ್ನು—ಸುಮಾರು 110 ಕಿಲೊಗ್ರಾಮ್ಗಳು—ತೋರಿಸಿದಾಗ ನಾನು ಜುಗುಪ್ಸೆಯಿಂದ ಅದನ್ನು ಎವೆಯಿಕ್ಕದೆ ನೋಡಿದ ಜ್ಞಾಪಕ ನನಗಿದೆ. ‘ನಾನು ಜಾಗತಿಕ ಹೆವಿವೆಯ್ಟ್ ಬಾಕ್ಸಿಂಗ್ ಚ್ಯಾಂಪಿಯನ್ಗಿಂತ ಮತ್ತು ಅಮೆರಿಕದ ವೃತ್ತಿಪರ ಫುಟ್ಬಾಲ್ ಆಟಗಾರರಲ್ಲಿ ಅನೇಕ ಮಂದಿಗಿಂತ ಹೆಚ್ಚು ಭಾರವುಳ್ಳವನು. ಇದು ಹಾಸ್ಯಾಸ್ಪದಕ್ಕಿಂತಲೂ ಕೀಳಾದದ್ದು. ಇದು ಅಪಾಯಕರವಾಗುತ್ತಿದೆ!’ ಎಂದು ನನ್ನೊಳಗೆ ನಾನೇ ಯೋಚಿಸಿದೆ.
ನನ್ನಂತೆ—ಆದಿ ಮಧ್ಯಪ್ರಾಯದ ಪುರುಷ ಆಫೀಸ್ ಕೆಲಸಗಾರ—ಯೌವನದಲ್ಲಿ ಶಾರೀರಿಕವಾಗಿ ಕ್ರಿಯಾಶೀಲನಾಗಿದ್ದರೂ, ಈಗ ವಾರ್ತಾಪತ್ರಿಕೆಯನ್ನು ಓದುವ ಮಧ್ಯೆ ಬಿಟ್ಟು ಬಿಟ್ಟು ವ್ಯಾಯಾಮ ಮಾಡುವುದಕ್ಕೆ ಸಮರ್ಪಿತನಾಗಿರುವ ಒಬ್ಬನ ಪರಿಚಯ ನಿಮಗಿರಬಹುದು. ನನ್ನ ರಕ್ತದೊತ್ತಡ ಮೇಲ್ಮೇರೆಯಲ್ಲಿದೆ, ಸೀರಮ್ ಕೊಲೆಸ್ಟರಾಲ್ “ತುಸು” ಉಚ್ಚಮಟ್ಟದಲ್ಲಿದೆ, ತೂಕ ಬೇಕಾಗಿರುವುದಕ್ಕಿಂತ 20 ಕಿಲೊಗ್ರಾಮ್ ಜಾಸ್ತಿ, ಆದರೂ ನನ್ನ ಸಮಸ್ಯೆ ಇನ್ನೂ ಅಷ್ಟು ಅಪಾಯಕರವಲ್ಲವೆಂದು ನೆನಸುವವನು ನಾನು.
ಸಮಸ್ಯೆ ಗಂಭೀರವಾಗಿ ಇದೆ ಎಂಬುದು ನಿಜ. ನನ್ನಂತಿರುವ ಜನರು—ಎಷ್ಟೋ ಜನರು ಪ್ರತಿ ದಿನ ಹೃದಯಾಘಾತದಿಂದ ಸಾಯುತ್ತಿದ್ದಾರೆ. ಬೇಕಾಗಿರುವುದಕ್ಕಿಂತ ಹೆಚ್ಚಿಗಿರುವ ಪ್ರತಿಯೊಂದು ಕಿಲೊಗ್ರಾಮಿನ ಅಪಾಯದ ಕುರಿತ ಸಂಖ್ಯಾಸಂಗ್ರಹಣವನ್ನು ನಾನು ಉಲ್ಲೇಖಿಸಬಲ್ಲೆ, ಆದರೆ ಸಮಸ್ಯೆ ಸಂಖ್ಯಾಸಂಗ್ರಹಣವಲ್ಲ. ಸಮಸ್ಯೆಯು, ಇದ್ದದ್ದದ್ದಂತೆ ಹೇಳುವುದಾದರೆ, ವಿಧವೆಯರು ಮತ್ತು ಅನಾಥರೇ. ಸಮಸ್ಯೆಯು ಮಕ್ಕಳು, ನನ್ನ ಇಬ್ಬರು ಚಿಕ್ಕ ಹುಡುಗಿಯರಂತೆ, ಅಪ್ಪನಿಲ್ಲದೆ ಬೆಳೆಯುತ್ತಿರುವ ಮಕ್ಕಳು.
ಅಪ್ಪಂದಿರೇ, ಈ ವಿಷಯ ಯೋಚಿಸಿ.
ನಾನು ಯಾವಾಗ ತೂಕ ಕಳೆದುಕೊಳ್ಳಲು ಮನಸ್ಸುಮಾಡಿದೆನೋ ಆವಾಗ, ಮೇ 22, 1989ರ ಇಂಗ್ಲಿಷ್ ಎಚ್ಚರ!ದಲ್ಲಿ ಬಂದಿದ್ದ “ತೂಕ ನಷ್ಟವು ಪರಾಜಯಗೊಳ್ಳುವ ಹೋರಾಟವೆ?” ಎಂಬ ಲೇಖನ ಮಾಲೆಯ—ವಿಶೇಷವಾಗಿ, ಉಬ್ಬನ್ನು “ಜಯಿಸುವ ನಾಲ್ಕು ವಿಧಗಳು” ಎಂಬುದರಲ್ಲಿದ್ದ ಅತ್ಯುತ್ತಮ ಮಾಹಿತಿಯನ್ನು ಜ್ಞಾಪಿಸಿಕೊಂಡೆ. ಅಲ್ಲಿ ಸೂಚಿಸಿರುವ ನಾಲ್ಕು ಮಾರ್ಗಗಳು ಯಾವುವೆಂದರೆ: (1) ಸರಿಯಾದ ಆಹಾರ, (2) ಸರಿಯಾದ ಸಮಯದಲ್ಲಿ, (3) ಸರಿಯಾದ ಪ್ರಮಾಣದಲ್ಲಿ, (4) ಸರಿಯಾದ ವ್ಯಾಯಾಮದೊಂದಿಗೆ.
ಈ ಮಾರ್ಗದರ್ಶನಗಳು ಕಾರ್ಯಸಾಧಕ! ಅವುಗಳನ್ನು ಅನುಸರಿಸಿದ ಮೂಲಕ ನಾನು 30 ಕಿಲೊಗ್ರಾಮ್ ತೂಕ ಕಳೆದುಕೊಂಡೆ. ನೀವೂ ಕಳೆದುಕೊಳ್ಳಬಲ್ಲಿರಿ. ಇದನ್ನು ಮಾಡುವಾಗ, ನಿಮಗೆ ಸಹಾಯಕರವಾಗಿರಬಹುದಾದ ಕೆಲವು ವಿಷಯಗಳನ್ನು ನಾನು ಕಲಿತೆ.
ತೂಕ ನಷ್ಟದ ಪ್ರಾರಂಭ ಕಿವಿಗಳ ಮಧ್ಯೆ
ನಮ್ಮಲ್ಲಿ ಭಾರಾಧಿಕ್ಯವುಳ್ಳ ಅನೇಕರು ನಮ್ಮ ತೂಕವನ್ನು ನಿಧಾನವಾಗಿ, ವರ್ಷಕ್ಕೆ ಕೆಲವೇ ಕಿಲೊಗ್ರಾಮ್ಗಳಂತೆ, ಅನೇಕ ವೇಳೆ ನಮ್ಮ ಮೂವತ್ತುಗಳ ಪ್ರಾಯದಿಂದ ಪ್ರಾರಂಭಿಸಿ ಹೆಚ್ಚಿಸಿಕೊಂಡೆವು. ಆಗಾಗ ನಾವು ಪಥ್ಯ ಮಾಡಿ ಕೆಲವು ಕಿಲೊಗ್ರಾಮ್ಗಳನ್ನು ಕಳೆದುಕೊಳ್ಳುತ್ತಿದ್ದರೂ, ಅದನ್ನು ಬಡ್ಡಿ ಸಮೇತ ಪುನಃ ಸಂಪಾದಿಸುತ್ತಿದ್ದೆವು. ಇದು ನನಗೆ ಸಂಭವಿಸಿದಾಗ, ಒಂದು ವಿಧದ ಪಾಂಡಿತ್ಯದ ಸಹಾಯಶೂನ್ಯತೆ—ಯಾವುದೂ ಸಫಲಗೊಳ್ಳುವುದಿಲ್ಲವಾದುದರಿಂದ ಪ್ರಯತ್ನಿಸುವುದೇಕೆ ಎಂಬ ಅನಿಸಿಕೆಯನ್ನು ಫಲಿಸಿತು.
ಈ ಪಾಂಡಿತ್ಯದ ಸಹಾಯಶೂನ್ಯತೆಯ ಚಕ್ರವನ್ನು ಮುರಿಯಬೇಕಾದರೆ, ನಿಮ್ಮ ಪಥ್ಯವನ್ನು ಸೊಂಟದಲ್ಲಿ ಅಲ್ಲ, ಕಿವಿಗಳ ಮಧ್ಯೆ, ಆಹಾರದ ಸಂಬಂಧದಲ್ಲಿ ನೀವು ಯೋಚಿಸುವ ವಿಧವನ್ನು ಬದಲಾಯಿಸಿ ಆರಂಭಿಸಬೇಕು. ಇದು ತುಸು ಒರಟಾದ ಪ್ರಾಮಾಣಿಕತೆಯನ್ನು ಕೇಳಿಕೊಳ್ಳಬಹುದಾದರೂ, ಇದಿಲ್ಲದಿರುವಲ್ಲಿ ನಿಮ್ಮ ಪಥ್ಯ ಆರಂಭದಿಂದಲೇ ದಂಡಾಜ್ಞೆಗೊಳಗಾಗಿರುವುದು.
ನನ್ನ ಸಂಬಂಧದಲ್ಲಾದರೊ, ನಾನು ತಿಂದು ಕುಡಿದ ಪ್ರತಿಯೊಂದು ವಸ್ತುವನ್ನು ಒಂದು ವಾರದ ತನಕ ಪತ್ತೆಹಚ್ಚಿ ಇಡುವುದೇ ತಿಳಿವು ಕೊಡುವ ಸಂಗತಿಯಾಗಿತ್ತು. ನಾನು ಊಟದ ಸಮಯದಲ್ಲಿ ಸ್ವಲ್ಪ ತಿನ್ನುತ್ತಿದ್ದೆನೆಂಬುದು ನಿಜವಾಗಿತ್ತು. ಆದರೆ ಸಾಯಂಕಾಲದಲ್ಲಿ ಎಡೆಬಿಡದೆ ತಿನ್ನುವ ಉಪಾಹಾರದ ಅಭ್ಯಾಸವು ದಿನದಲ್ಲಿ ಆತ್ಮನಿಯಂತ್ರಣವು ಸಾಧಿಸುತ್ತಿದ್ದ ಯಾವುದೇ ಒಳ್ಳಿತನ್ನು ರದ್ದು ಮಾಡುತ್ತಿತ್ತು. ರಾತ್ರಿಯೂಟದ ಬಳಿಕ ಹೊಟ್ಟೆಯೊಳಗೆ ಹೋದ ಚೀಸ್, ತಿರುಳಿನ ಕಾಯಿಗಳು, ನೆಲಗಡಲೆ ಬೆಣ್ಣೆ, ಮತ್ತು ಬಿಸ್ಕಿಟ್ಗಳ ಕ್ಯಾಲೊರಿ ಶಾಖವನ್ನು ಕೂಡಿಸಿದಾಗ ನನಗೆ ಅಚ್ಚರಿಯಾಯಿತು. ಇದಕ್ಕೂ ಕೆಡುಕಾಗಿ, ಆ ಉಪಾಹಾರಗಳಲ್ಲಿ ಕೊಬ್ಬು ಮತ್ತು ಸಕ್ಕರೆ ತುಂಬಿತ್ತು. ನನ್ನ ಮಟ್ಟಿಗೆ, ಈ ಸಾಯಂಕಾಲದ ಉಪಾಹಾರಗಳು ತೊಲಗಿಸಲ್ಪಡದಿರುವಲ್ಲಿ ಯಾವ ಪಥ್ಯವೂ ಸಫಲಗೊಳ್ಳುವಂತಿರಲಿಲ್ಲ. ನಿಮಗೂ ಇದೇ ಸಮಸ್ಯೆ ಇದೆಯೆ?
ನನಗೆ ದೊರೆತ ಮುಂದಿನ ವೇದನಾಮಯ ಪರಿಜ್ಞಾನವೇನಂದರೆ, ಎಲ್ಲ ಮದ್ಯಪಾನೀಯಗಳನ್ನು ನನ್ನ ಆಹಾರಕ್ರಮದಿಂದ ನಾನು ತೊಲಗಿಸದಿದ್ದರೆ ನನ್ನ ತೂಕ ಹಿಂದೆ ಬಾರದ ರೀತಿಯಲ್ಲಿ ಕಡಮೆಯಾಗುವುದಿಲ್ಲ. ಮದ್ಯದಲ್ಲಿ ಅಧಿಕ ಕ್ಯಾಲೊರಿ ಇದ್ದು ಅದು ಸುಲಭವಾಗಿ ಕೊಬ್ಬಾಗುವುದು ಮಾತ್ರವಲ್ಲ, ಸಾಯಂಕಾಲದಲ್ಲಿ ನನ್ನ ಆತ್ಮನಿಯಂತ್ರಣಮ್ನ ದುರ್ಬಲಗೊಳಿಸಿ, ಉಪಾಹಾರ ತಿನ್ನಬಾರದೆಂಬ ನನ್ನ ನಿರ್ಧಾರವನ್ನು ಬಲಹೀನ ಮಾಡಲು ಒಂದು ಗ್ಲಾಸ್ ದ್ರಾಕ್ಷಾಮದ್ಯವಷ್ಟೇ ಸಾಕಾಗುತ್ತಿತ್ತು. ಒಂದು ಗ್ಲಾಸ್ ವೈನ್ ಒಂದು ಗ್ಲಾಸ್ ವೈನ್ ಮಾತ್ರವಲ್ಲ. ನನ್ನ ಮಟ್ಟಿಗೆ, ಅದು ಆರು ಬಿಸ್ಕಿಟ್ಗಳೂ ಒಂದು ಪಾತ್ರೆ ತಿರುಳು ಕಾಯಿಯೂ ಆಗಿತ್ತು! ಮೂಲಿಕೆಯ ಚಹಾ ಇದಕ್ಕೆ ಉತ್ತಮ ಬದಲಿಯೆಂದು ನಾನು ಕಂಡುಹಿಡಿದೆ. ಈಗ, ಗುರಿಯ ತೂಕವನ್ನು ಮುಟ್ಟಿದ ಬಳಿಕವೂ, ನಾನು ಹಿಂದಿಗಿಂತ ಕಡಮೆ ಮದ್ಯಪಾನ ಮಾಡುತ್ತೇನೆ.
ಈ ಪ್ರಾಮಾಣಿಕ ಮೌಲ್ಯಮಾಪನಗಳು, ನನ್ನ ಪಥ್ಯದ ತೂಕನಷ್ಟ ಸಮಯಾವಧಿಯಲ್ಲಿ ಎರಡು ಸ್ಥಿರ ಮಾರ್ಗದರ್ಶನಗಳ ಬೆಲೆಯನ್ನು ಮಂದಟ್ಟು ಮಾಡಿದವು.
1. ಸಾಯಂಕಾಲದ ಸಕಲ ಉಪಾಹಾರಗಳನ್ನು ತ್ಯಜಿಸಿರಿ.
2. ಎಲ್ಲ ಮದ್ಯ ಪಾನೀಯಗಳನ್ನು ತ್ಯಜಿಸಿರಿ.
ನಿಮ್ಮ ಪಥ್ಯ ಘಾತುಕರನ್ನು ತಿಳಿಯಿರಿ!
ಫ್ರೆಂಚರಲ್ಲಿ, ಎನ್ ಮಂಸಾನ್, ಲಪೆಟಿ ವ್ಯಾನ್ ಎಂಬ ಒಂದು ನಾಣ್ಣುಡಿಯಿದೆ. ನೀವು ಎಷ್ಟು ಹೆಚ್ಚು ತಿನ್ನುತ್ತೀರೋ ಅಷ್ಟು ಹೆಚ್ಚು ಹಸಿವೆ ನಿಮಗಾಗುತ್ತದೆ ಎಂದು ಇದರ ಅರ್ಥ. ನಮ್ಮಲ್ಲಿ ಅನೇಕರಿಗೆ ಇದು ಅಕ್ಷರಾರ್ಥವಾಗಿ ಸತ್ಯ. ನಾವು ನಮಗೆ ಪ್ರಿಯವಾಗಿರುವ ಊಟಕ್ಕೆ ಕುಳಿತುಕೊಳ್ಳುವಾಗ ನಮಗೆ ಹಸಿವೆಯಿದಿರ್ದಲಿಕ್ಕಿಲ್ಲ. ಆದರೆ ಊಟಕ್ಕೆ ತೊಡಗಿದಾಗ ಒಳಗಿನಿಂದ ಏನೋ ನಡೆಯಲಾಗಿ, ಥಟ್ಟನೆ ನಾವು ತೀರಾ ಹಸಿಯುತ್ತೇವೆ. ಆಗ ನಾವು ಅಲ್ಲಿರುವ ಆಹಾರ ಕಾಣೆಯಾಗುವ ತನಕ, ಯಾ ನಾಲ್ಕು ಬಾರಿ ತೆಗೆದುಕೊಂಡ ಬಳಿಕ ನಮ್ಮ ನೋಯುವ ಹೊಟ್ಟೆ ಕೊನೆಗೆ ಕರುಣೆ ತೋರಿಸುವಂತೆ ಬೇಡುವ ತನಕ, ನಮ್ಮನ್ನು ವಿಪರೀತ ತುಂಬಿಸಿಕೊಳ್ಳುತ್ತೇವೆ. ಏನಾಯಿತು?
ನನ್ನ ಸಂಬಂಧದಲ್ಲಿ ರೊಟ್ಟಿ, ವಿಶೇಷವಾಗಿ ಮನೆಯಲ್ಲಿ ಮಾಡಿದ ರೊಟ್ಟಿಯೇ ಇದ್ದ ಸಮಸ್ಯೆಯಾಗಿತ್ತು. ರುಚಿಯಾದ ರೊಟ್ಟಿಯನ್ನು ಮಾಡುವ ನನ್ನ ಸೈರಣೆಯುಳ್ಳ ಹೆಂಡತಿ, ರೊಟ್ಟಿ ಮಾಡುವುದನ್ನು ಸ್ವಲ್ಪ ಕಾಲ ಬಿಡಬೇಕಾಯಿತು. ಒಬ್ಬ ಪುರುಷನು ಅಷ್ಟು ಶೋಧನೆಯನ್ನು ಮಾತ್ರ ತಡೆಯಬಲ್ಲನು! ನಿಮ್ಮ ಸಮಸ್ಯೆ ಚಾಕಲೇಟ್ ಯಾ ಇನ್ನೊಂದು ವಸ್ತುವಾಗಿರಬಹುದು. ಮುಖ್ಯ ವಿಷಯವೇನಂದರೆ, ನಿಮ್ಮ ಶತ್ರುವನ್ನು ತಿಳಿಯಿರಿ. ತಿನ್ನುವಾಗ ನಿಮಗೆ ಹಸಿವೆಯನ್ನುಂಟುಮಾಡುವ ಆಹಾರಗಳ ಒಂದು ಪಟ್ಟಿಯನ್ನು ಮಾಡಿ, ಅವುಗಳಿಂದ ದೂರವಿರ್ರಿ. ಇತರ ಆಯ್ಕೆಗಳು ಧಾರಾಳವಿವೆ. ಸ್ಯಾಲಡ್ಗಳು ಮತ್ತು ಆವಿಯಲ್ಲಿ ಬೇಯಿಸಿದ ತರಕಾರಿಗಳಿಗೆ ಒಳ್ಳೆಯ ರುಚಿ ಇದೆಯೆಂದೂ ಅವು ಹಸಿವೆಯನ್ನುಂಟುಮಾಡದೆ ನನ್ನ ಹೊಟ್ಟೆಯನ್ನು ತುಂಬಿಸುತ್ತದೆಂದೂ ನಾನು ಕಂಡುಕೊಂಡೆ.
ಗೂನನ್ನು ದಾಟುವುದು
ಯೋ-ಯೋ ಪಥ್ಯ, ಮತ್ತೆ ಪಡೆಯಲಿಕ್ಕಾಗಿಯೇ ತೂಕವನ್ನು ಕಳೆದುಕೊಳ್ಳುವ ಪಥ್ಯ ಮುಗ್ಧರ ಆಟ. ಇದು ಪಾಶ್ಚಾತ್ಯ ವಿಕಾಸಗೊಂಡಿರುವ ದೇಶಗಳಲ್ಲಿ ಹೇರಳವಾಗಿರುವ ಪಥ್ಯ ಕಾರ್ಯಕ್ರಮಗಳ ಪ್ರವರ್ತಕರನ್ನು ಹಣವಂತರಾಗಿ ಮಾಡುತ್ತದಲ್ಲದೆ ಇನ್ನಾವ ಉದ್ದೇಶವನ್ನೂ ನೆರವೇರಿಸುವುದಿಲ್ಲ. ಯೋ-ಯೋ ಪಥ್ಯವನ್ನು ಮಾಡಿರುವ ನಾನು, ಈ ಬಾರಿ ಇದು ಭಿನ್ನವಾಗಿರುವುದೆಂದು ದೃಢ ಮನಸ್ಸು ಮಾಡಿದೆ. ಆದರೆ ಹೇಗೆ?
ಸಹಾಯ ಕೇಳಲು ನಾಚಿಕೆ ಪಡಬೇಡಿ. ನಿಮ್ಮ ಡಾಕ್ಟರರೊಂದಿಗೆ ಮಾತಾಡಿರಿ. ಆ ಕಿಲೊಗ್ರಾಮ್ಗಳು ಪ್ರತಿ ವಾರ ಬಿದ್ದುಹೋಗುವಾಗ ನಿಮ್ಮನ್ನು ಪ್ರಶಂಸಿಸಿ ಬಹುಮಾನಿಸುವ ಜನರನ್ನು ಕಂಡುಹಿಡಿಯಿರಿ. ಇದು ಪಥ್ಯ ಮಾಡುತ್ತಿರುವ ನಿಮ್ಮ ಮಿತ್ರನಾಗಿರಬಹುದು, ಯಾ ಕುಟುಂಬದ ಸದಸ್ಯನಾಗಿರಬಹುದು, ಯಾ ಒಂದು ಗಣ್ಯತೆಯ ತೂಕ ನಷ್ಟದ ಚಿಕಿತ್ಸಾಲಯದಲ್ಲಿರುವ ಜನರಾಗಿರಬಹುದು. ಒಕ್ಕೂಟದ ಕೆಲಸ ಮತ್ತು ಬಲಪಡಿಸುವಿಕೆಯು, ನೀವು ಈ ಹಿಂದೆ ತೂಕ ನಷ್ಟದ ಪ್ರಯತ್ನಗಳಲ್ಲಿ ಎಲ್ಲಿ ಅಸಫಲರಾಗಿದ್ದಿರೋ ಆ ಗೂನನ್ನು ದಾಟುವಂತೆ ಸಹಾಯ ನೀಡುವುದು. ಇಷ್ಟರೊಳಗೆ ನೀವು ಹೆಚ್ಚು ಸುಧಾರಿಸಿಕೊಂಡಿರುವಿರಿ, ಮತ್ತು ಜನರು ನಿಮ್ಮ ತೋರಿಕೆಯ ಸಂಬಂಧದಲ್ಲಿ ನಿಮ್ಮನ್ನು ಅಭಿನಂದಿಸುವರು. ಅಂದಿನಿಂದ, ಮನೋವೈಜ್ಞಾನಿಕ ಸಂಗತಿಗಳು ನಿಮಗೆ ವಿರುದ್ಧವಾಗಿರುವ ಬದಲಿಗೆ ನಿಮ್ಮ ಪರವಾಗಿ ಕಾರ್ಯ ನಡೆಸುವುವು.
ಆ ಗೂನನ್ನು ದಾಟಲು ಇರುವ ಇನ್ನೊಂದು ಕೀಲಿ ಕೈಯು, ನ್ಯಾಯಸಮ್ಮತವಾದ ಮತ್ತು ನಿಮ್ಮನ್ನು ಉಪವಾಸ ಬಿದ್ದವರಂತೆ ಮತ್ತು ಅಪಹರಿಸಲ್ಪಟ್ಟವರಂತೆ ಮಾಡದ ಒಂದು ಪಥ್ಯವೇ. ನನಗೆ ದೊರೆತ ಅತ್ಯುತ್ತಮ ಪಥ್ಯ ಸಲಹೆಯು, ಸರಿಯಾದ ಆಹಾರಗಳ ಕುರಿತ ಮೇ 22, 1989ರ ಇಂಗ್ಲಿಷ್ ಎಚ್ಚರ!ದಲ್ಲಿ ಹೇಳಿದ ವಿಷಯಗಳನ್ನು ಕೇವಲ ವಿವರಿಸಿತು ಎಂದು ನಾನು ಕಂಡುಕೊಂಡೆ. ನನ್ನ ತೂಕ ನಷ್ಟ ಪಥ್ಯದಲ್ಲಿ ಕಡಮೆ ಕೊಬ್ಬಿರುವ ಧಾನ್ಯ ಯಾ ಕಡಮೆ ಕ್ಯಾಲೊರಿ ಇರುವ ಮಫಿನ್ ದೋಸೆ, ಬೆಳಗ್ಗಿನ ಊಟಕ್ಕೆ ಒಂದು ಅರ್ಧ ಗ್ರೇಪ್ಫ್ರುಟ್, ಮಧ್ಯಾಹ್ನಕ್ಕೆ ಕಡಮೆ ಕೊಬ್ಬಿನ ಡ್ರೆಸಿಂಗ್ ಇರುವ ಯಥೇಷ್ಟ ಹಸಿ ತರಕಾರಿಯ ಸ್ಯಾಲಡ್, ಆವಿಯಲ್ಲಿ ಬೇಯಿಸಿದ ಕಾಯಿಪಲ್ಯ, ಮತ್ತು ಸಂಜೆಯೂಟಕ್ಕೆ ರೊಟ್ಟಿಯಾಗಲಿ ಸೀಭಕ್ಷ್ಯವಾಗಲಿ ಇಲ್ಲದ, ಕಡಮೆ ಕೊಬ್ಬಿರುವ ಮಾಂಸ ಸೇರಿವೆ. ದಿನಕ್ಕೆ 1,200ರಿಂದ 1500 ಕ್ಯಾಲೊರಿ ಇರುವ ಈ ಪಥ್ಯ ಕಟ್ಟುನಿಟ್ಟಾದರೂ ನಿರ್ದಯೆಯದ್ದಲ್ಲ. ಒಂದು ಆ್ಯಪ್ಲ್ ಹಣ್ಣು ತಕ್ಕ ರೀತಿಯ ಮಧ್ಯಾಹ್ನದ ಉಪಾಹಾರವಾಗುತ್ತದೆ, ಮತ್ತು ವಿರಳ ಸಂದರ್ಭಗಳಲ್ಲಿ, ಹಸಿವೆಯನ್ನು ಅಸಡ್ಡೆ ಮಾಡಲು ಸಾಧ್ಯವಾಗದಿರುವಾಗ, ನಾನು ಯಾವಾಗಲೂ ನನ್ನ ರಹಸ್ಯಾಯುಧಗಳಲ್ಲಿ ಒಂದನ್ನು, ನೀವೂ ತಿಳಿದಿರಬೇಕಾದ ಪಥ್ಯಗಾರನ ಆಶ್ಚರ್ಯಕರವಾದ ರಹಸ್ಯವನ್ನು ಉಪಯೋಗಿಸುತ್ತೇನೆ.
ರಹಸ್ಯಾಯುಧಗಳು
ಗುಟ್ಟೇನು? ಅದು ನಿಮಗೆ ಒಳ್ಳೆಯದಾಗಿದೆ, ನಿಮ್ಮನ್ನು ಸುಮಾರು ಒಂದು ಕ್ಷಣದಲ್ಲಿ ತುಂಬಿಸುತ್ತದೆ, ಅದರಲ್ಲಿ ಕ್ಯಾಲೊರಿಗಳೇ ಇಲ್ಲ, ಮತ್ತು ಅದು ಅಗ್ಗ! ನೀರು. ಪ್ರತಿ ದಿನ ಆರರಿಂದ ಎಂಟು ಗ್ಲಾಸು ನೀರು ನಿಮ್ಮ ಪಥ್ಯವನ್ನು ಸಫಲಮಾಡಲು ಮಾಡುವ ಸಹಾಯ ಆಶ್ಚರ್ಯಕರವಾದದ್ದು. ಹೊಟ್ಟೆಯ ಹಸಿವೆಗೆ ನಿಮ್ಮ ನಿರ್ಣಾಯಕ ಪ್ರತ್ಯುತ್ತರವು ನೀರೆಂದು ನಿಮ್ಮ ದೇಹಕ್ಕೆ ಒಮ್ಮೆ ಗೊತ್ತಾಯಿತೆಂದರೆ, ಹಸಿವೆ ಮಾಸಿ ಹೋಗುತ್ತದೆ. ಇನ್ನಾವುದಕ್ಕಿಂತಲೂ ಹೆಚ್ಚಾಗಿ ನೀರು, ನನ್ನ ಸಾಯಂಕಾಲದ ಉಪಾಹಾರವೆಂಬ ಜೀವಾವಧಿಯ ಅಭ್ಯಾಸವನ್ನು ಜಯಿಸಲು ಸಹಾಯ ಮಾಡಿತು.
ಧೀರ್ಘಾವಧಿಯ ತೂಕ ನಿಯಂತ್ರಣಕ್ಕೆ ಇರುವ ಇನ್ನೊಂದು ರಹಸ್ಯಾಯುಧವು ಕ್ರಮದ ವ್ಯಾಯಾಮವೇ. ವ್ಯಾಯಾಮ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆಂದು ಎಲ್ಲರೂ ಬಲ್ಲರು. ಈ ಬಾರಿ, ಉತ್ತಮ ಅನಿಸಿಕೆ ಮತ್ತು ಉತ್ತಮ ತೋರಿಕೆಯಿಂದ ನಿಮಗೆ ದೊರೆಯುವ ಭಾರಿ ಮನೋವೈಜ್ಞಾನಿಕ ಆತ್ಮೋನ್ನತಿಯೇ ಇರುವ ಗುಟ್ಟು. ಈ ಪ್ರತಿಫಲವು ನಿರ್ದಿಷ್ಟ ಆಹಾರಗಳ ಕೊರತೆಯ ಅನಿಸಿಕೆಯ ಹೋಗಲಾಡಿಸುವಿಕೆಗೂ ಹೆಚ್ಚಿನದನ್ನು ಮಾಡುತ್ತದೆ. ಇದು ನೀವು ಮುಂದುವರಿಯುವಂತೆ ಸಹಾಯ ಮಾಡುತ್ತದೆ. ನಿಮ್ಮ ಸುತ್ತಲಿರುವವರು ಚಾಕೊಲೇಟ್ ಮೂಸ್ ಸೀಭಕ್ಷ್ಯವನ್ನು ತಿನ್ನುತ್ತಿರುವಾಗ ನೀವು ಘನೀಭವಿಸಿರುವ ದ್ರಾಕ್ಷಿಯನ್ನು ಮಾತ್ರ ತಿನ್ನುತ್ತೀರೆಂದು ಅದು ನಿಮ್ಮಲ್ಲಿ ಅಸೂಯೆಯನ್ನೂ ಹುಟ್ಟಿಸುವುದಿಲ್ಲ.
ಪಥ್ಯ ಮತ್ತು ವ್ಯಾಯಾಮ ಪರಸ್ಪರವಾಗಿ ಪರಿಪೂರ್ಣ ರೀತಿಯಲ್ಲಿ ಪೂರಕವಾಗಿವೆ. ತೂಕ ನಷ್ಟವಾಗುವಾಗ ಒಬ್ಬನು ರೋಗಿಯಂತೆ ಕಾಣಬೇಕೆಂದು ಅರ್ಥವಲ್ಲ. ನಿಯತ ಕ್ರಮದ ವ್ಯಾಯಾಮವು ನಿಮ್ಮ ಮುಖಭಾವಕ್ಕೆ ಕಾಂತಿಯನ್ನು ತಂದು, ನಿಮ್ಮ ಸ್ನಾಯುಗಳನ್ನು ಬಲಪಡಿಸುವುದು. ವಾಸ್ತವವೇನಂದರೆ, ನನ್ನ ಸ್ನಾಯುಗಳ ಉತ್ತಮಗೊಂಡ ಆಕಾರವು ಇತರರಿಗೆ, ನಾನು ವಾಸ್ತವವಾಗಿರುವುದಕ್ಕಿಂತಲೂ ಹೆಚ್ಚು ವೇಗವಾಗಿ ತೂಕನಷ್ಟವನ್ನು ಹೊಂದುತ್ತಿದ್ದೇನೆಂಬ ಭ್ರಮೆಯನ್ನು ಕೊಟ್ಟಿತು! ನಾನು ಇನ್ನೊಬ್ಬನೊಂದಿಗೆ ಆಡಲು ಸಂತೋಷಿಸುವ ಟೆನಿಸ್ನಂತಹ ಕ್ರೀಡೆ ಮತ್ತು ಒಬ್ಬನೇ ಯಾವಾಗಲಾದರೂ ಮಾಡಸಾಧ್ಯವಿರುವ ವೆಯ್ಟ್ ಲಿಫ್ಟಿಂಗ್ನಂತಹ ವ್ಯಾಯಾಮಗಳು ನನಗೆ ಅಗತ್ಯವಿತ್ತೆಂದು ಕಂಡುಕೊಂಡೆ. ವ್ಯಾಯಾಮವು ಪಥ್ಯವನ್ನು ಹೆಚ್ಚು ಕಾರ್ಯಸಾಧಕವಾಗಿ ತೋರುವಂತೆ ಮಾಡಿದಂತೆಯೇ, ಹತ್ತು ವರ್ಷಗಳ ಬೊಜ್ಜಿನ ಕೆಳಗೆ ಅಡಗಿದ್ದ ಸ್ನಾಯುಗಳನ್ನು ಹೊರಗೆಡಹುವ ಮೂಲಕ, ಪಥ್ಯವು ವ್ಯಾಯಾಮವನ್ನು ಹೆಚ್ಚು ಕಾರ್ಯಸಾಧಕವಾಗಿ ತೋರುವಂತೆ ಮಾಡಿತು. ನನ್ನ ತೂಕ 110 ಕಿಲೊಗ್ರಾಮ್ಗಳಿಂದ 80ಕ್ಕೆ ಇಳಿದಾಗ, ಆರೋಗ್ಯವುಳ್ಳ ಕೆಲವು ಸ್ಥಳೀಕ ಹದಿಪ್ರಾಯದವರು ನನ್ನ ವೇಗದಲ್ಲಿ ಹೋಗಶಕ್ತರೋ ಎಂದು ನೋಡಲು ನಾನು ಅವರೊಂದಿಗೆ ವ್ಯಾಯಾಮ ಮಾಡುವುದನ್ನು ಮುನ್ನೋಡುತ್ತಿದ್ದೇನೆಂದು ಕಂಡುಕೊಂಡೆ.
ನನ್ನಷ್ಟು ದೀರ್ಘಕಾಲ ನೀವು ಭಾರಾಧಿಕ್ಯರಾಗಿದ್ದಲ್ಲಿ, ದೊಡ್ಡ ಹೊರೆ ಹೊತ್ತಿರುವ, ಬೆಳಗ್ಗೆ ಏಳುವಾಗ ಪೂರ್ತಿ ದಣಿದಿರುವ, ದಿನವಿಡೀ ನಿಧಾನವಾಗಿ ಚಲಿಸುವ, ಮತ್ತು ಆರಾಮ ಕುರ್ಚಿಯಲ್ಲಿ ರಾತ್ರಿ ನಿದ್ದೆ ಹೋಗುವ ಅನಿಸಿಕೆಯ ರೂಢಿ ನಿಮಗಾಗಬಹುದಿತ್ತು. ಇಪ್ಪತ್ತು ಯಾ 30 ಕಿಲೊಗ್ರಾಮ್ ಭಾರವನ್ನು ಹೊತ್ತಿರುವುದು ಜೀವನವಿಡೀ ಭಾರವಾದ ಲೋಹದ ಗುಂಡನ್ನು ಸರಪಣಿಯಿಂದ ಕಾಲಿಗೆ ಕಟ್ಟಿ ಬಂದಿಯಂತೆ ಚಲಿಸುವುದಕ್ಕೆ ಸಮಾನ! ಬೆಳಗ್ಗೆ ಮಂಚದಿಂದ ಹಾತೊರೆಯುತ್ತ ಥಟ್ಟನೆ ಎದ್ದು, ದಿನವಿಡೀ ಬೇಕಾಗುವುದಕ್ಕಿಂತ ಜಾಸ್ತಿ ಶಕ್ತಿ ಇರುವುದು ಏನೆಂಬುದನ್ನು ನಾನು ಅಕ್ಷರಶಃ ಮರೆತು ಬಿಟ್ಟಿದ್ದೆ. ಈಗ ನನಗೆ ಅದು ಗೊತ್ತಿದೆ.
ಎಂದಿಗೂ ಮುಗಿಯದ ಯುದ್ಧ
ನಿಮ್ಮ ತೂಕದ ಗುರಿಯನ್ನು ಮುಟ್ಟುವುದು ಒಂದು ಲಂಬಿಸಿದ ಹೋರಾಟವನ್ನು ಜಯಿಸುವುದಕ್ಕೆ ಸಮಾನ. ಆದರೆ ಪ್ರಥಮ ಹೋರಾಟ ಮುಗಿದರೂ ನಿಜ ಯುದ್ಧ ಈಗಲೇ ಆರಂಭಗೊಂಡಿದೆ. ನಮ್ಮಲ್ಲಿ ಮಧ್ಯ ವಯಸ್ಸಿನವರಾಗಿದ್ದು, ಕುಳಿತುಕೊಂಡು ಮಾಡುವ ಕೆಲಸದಲ್ಲಿರುವವರು, ನಾವು ಕಳೆದುಕೊಳ್ಳಲು ಹೋರಾಡಿದ ತೂಕದಿಂದ ದೂರವಿರುವಂತೆ, ಏನು ತಿನ್ನುತ್ತೇವೆಂಬುದನ್ನು ಸದಾ ಗಮನಿಸಬೇಕು. ನಿಮ್ಮ ಪಥ್ಯ ಜೀವಾವಧಿಯ ಯೋಜನೆ ಎಂದು ಯೋಚಿಸುವುದೇ ಇರುವ ಕೀಲಿ ಕೈ. ಅದನ್ನು ತೂಕ ನಷ್ಟದ ಬದಲು ತೂಕವನ್ನು ದುರುಸ್ತಾಗಿಟ್ಟಿರುವುದು ಎಂಬುದಕ್ಕೆ ಮಿತಗೊಳಿಸಬಹುದಾದರೂ, ಇದು ನಿಜವಾಗಿಯೂ ಎಂದಿಗೂ ಅಂತ್ಯಗೊಳ್ಳುವುದಿಲ್ಲ. ನೀವು ನಿಮ್ಮ ಹಳೆಯ ತಿನ್ನುವ ಅಭ್ಯಾಸಕ್ಕೆ ಹಿಂದಿರುಗುವಲ್ಲಿ, ನಿಮ್ಮ ತೂಕ ನಿಮಗೆ ಹಿಂದೆ ಬರುವುದು.
ನಿಮ್ಮ ತೂಕದ ಗುರಿಯನ್ನು ಮುಟ್ಟಿದಾಗ, ಅದನ್ನು ಕೆಲವು ಹೊಸ ಬಟ್ಟೆಗೆಳನ್ನು ಕೊಂಡು ಏಕೆ ಆಚರಣೆ ಮಾಡಬಾರದು? ಆ ಬಳಿಕ ಹಳೆಯ ಬಟ್ಟೆಗೆಳನ್ನು ತೊಲಗಿಸಿ ಬಿಡಲು ಯೋಚಿಸಿರಿ. ಆ ಹಳೆಯ, ಸಡಿಲವಾದ ಬಟ್ಟೆಗೆಳನ್ನು ಇಟ್ಟುಕೊಳ್ಳುವುದು ವೈಫಲ್ಯಕ್ಕಾಗಿ ಯೋಜಿಸಿದಂತೆ. ತೀರಾ ಸಡಿಲವಲ್ಲದ ಬಟ್ಟೆಗೆಳನ್ನು ಧರಿಸಿರಿ; ಅವು ಅನಿಚ್ಫಿತ ಸೆಂಟಿಮೀಟರುಗಳು ಹಿಂದಿರುಗುವಲ್ಲಿ ನಿಮ್ಮನ್ನು ಒಡನೆ ಎಚ್ಚರಿಸುವುವು. ನಿಮ್ಮ ದುರುಸ್ತಾಗಿಡುವ ಪಥ್ಯದಲ್ಲಿ ತೂಕ ನಷ್ಟದ ಪಥ್ಯಕ್ಕಿಂತ ಹೆಚ್ಚಿನ ವೈವಿಧ್ಯವಿರುವುದಾದರೂ, ಕಡಮೆ ಕೊಬ್ಬಿನ, ಕಡಮೆ ಸಕ್ಕರೆಯ ಆಹಾರಕ್ಕೆ ಕಾಯಂ, ಜೀವಾವಧಿಯ ಬದಲಾವಣೆ ಮಾಡಲು ನಿಶ್ಚಯ ಮಾಡಿಕೊಳ್ಳಿರಿ. ನಿಮ್ಮ ನಿಯತ ಕ್ರಮದ ವ್ಯಾಯಾಮವನ್ನೂ ಬಿಟ್ಟು ಬಿಡಬೇಡಿ. ಇದು ಒಳ್ಳೆಯ ಅನಿಸಿಕೆಗಿರುವ ಒಂದು ಕೀಲಿ ಕೈ.—ದತ್ತ ಲೇಖನ.