ಬೈಬಲಿನ ದೃಷ್ಟಿಕೋನ
ವಿರೋಧ ಸೂಚನೆಗಳು ಮತ್ತು ಅಭಿಪ್ರಾಯ ಪ್ರದರ್ಶನಗಳು ಇವು ಜಗತ್ತನ್ನು ಮಾರ್ಪಡಿಸಬಲ್ಲವೊ?
“ನಾವು ಧೈರ್ಯದಿಂದ ಮಾತಾಡಬೇಕು, ನಾವು ಬಹಿರಂಗವಾಗಿ ಅಭಿಪ್ರಾಯ ಪ್ರದರ್ಶನ ಮಾಡಬೇಕು.” ಹೀಗೆಂದು 1991ರ ಪರ್ಶಿಯನ್ ಕೊಲ್ಲಿ ಯುದ್ಧ ಆರಂಭವಾಗುವುದಕ್ಕೆ ತುಸು ಮೊದಲು, ಒಂದು ರೋಮನ್ ಕ್ಯಾಥೊಲಿಕ್ ವಾರ್ತಾಪತ್ರವಾದ ನ್ಯಾಷನಲ್ ಕ್ಯಾಥೊಲಿಕ್ ರಿಪೋರ್ಟರ್, ತನ್ನ ಸಂಪಾದಕೀಯಕ್ಕೆ ಶೀರ್ಷಿಕೆಯನ್ನು ಕೊಟ್ಟಿತು. ಅಮೆರಿಕಾದ್ಯಂತ ಶಾಂತಿ ನಡಗೆಗಳಲ್ಲಿ ಮತ್ತು ಅಭಿಪ್ರಾಯ ಪ್ರದರ್ಶನಗಳಲ್ಲಿ ಓದುಗರು ಭಾಗವಹಿಸುವಂತೆ ಪ್ರೋತ್ಸಾಹಿಸುತ್ತಾ, ಸಂಪಾದಕೀಯವು ಮುಂದುವರಿಸಿದ್ದು: “ಈ ಆಡಳಿತದ ಅಜ್ಞಾನ ಮತ್ತು ದುರಭಿಮಾನವನ್ನು ತೂರಿ ಹೋಗಲು ಲಕ್ಷಗಟ್ಟಲೆ ಜನರೂ ಶಾಂತಿ ಚುಂಗಾಣಿಯ ಸಂತತ ಹೊಡೆಯುವಿಕೆಯೂ ಬೇಕಾಗುವುದು. . . . ಜನರು ಬಹಿರಂಗ ಪ್ರದರ್ಶನವನ್ನು ಮಾಡಬೇಕಾಗುವುದು.”
ಇಂಥ ಕ್ರಮ ಕೈಕೊಳ್ಳುವಂತೆ ಕರೆಗಳು ಇಂದು ಪದೇ ಪದೇ ಕೇಳಿಬರುತ್ತವೆ. ಮಾನವ ಸಂತತಿಯ ಹಿತವನ್ನು ಇಷ್ಟೊಂದು ರಾಜಕೀಯ, ಆರ್ಥಿಕ, ಮತ್ತು ಪರಿಸರೀಯ ವಿಪತ್ತುಗಳು ಬೆದರಿಸುವುದರಿಂದ, ಜನರು ವಿರೋಧ ಸೂಚನೆ, ಜಾಗರಣೆ, ಮತ್ತು ಅಭಿಪ್ರಾಯ ಪ್ರದರ್ಶನಗಳ ಮೂಲಕ “ರಸ್ತೆಗಳಿಗೆ ಇಳಿಯಲು” ಬಲವಂತಕ್ಕೊಳಗಾಗಿದ್ದೇವೆಂದು ಎಣಿಸುತ್ತಿದ್ದಾರೆ. ವಿವಾದಾಂಶಗಳು ನೆರೆಹೊರೆಯ ಪಾತಕಗಳನ್ನು ನಿಲ್ಲಿಸುವುದರಿಂದ ಲೋಕ ಶಾಂತಿಯ ಸ್ಥಾಪನೆಯ ವರೆಗೆ ಹರಡಿರುತ್ತವೆ. ರಸಕರವಾಗಿ, ಈ ಅಭಿಪ್ರಾಯ ಪ್ರದರ್ಶನಗಳು ಅನೇಕ, ಚರ್ಚ್ ಸಂಸ್ಥೆಗಳಿಂದ ಮತ್ತು ಧಾರ್ಮಿಕ ನೇತಾರರಿಂದ ಅನುಮೋದಿಸಲ್ಪಡುತ್ತವೆ.
ಆದರೆ, ಇಂಥ ಅಭಿಪ್ರಾಯ ಪ್ರದರ್ಶನಗಳಲ್ಲಿ ಕ್ರೈಸ್ತರು ಭಾಗವಹಿಸುವುದು ಸರಿಯೊ? ಮತ್ತು ಇಂಥ ವಿರೋಧ ಸೂಚನೆಗಳು—ಶಾಂತಿಭಂಗ ಮಾಡುವ ನಡಗೆಗಳ ಮೂಲಕವಾಗಲಿ, ವಿಷಣ್ಣವಾದ ಮೋಂಬತ್ತಿಗಳ ಜಾಗರಣೆಗಳ ಮೂಲಕವಾಗಲಿ—ಜಗತ್ತನ್ನು ನಿಜವಾಗಿಯೂ ಉತ್ತಮಗೊಳಿಸಬಲವ್ಲೆ?
ಅಭಿಪ್ರಾಯ ಪ್ರದರ್ಶನಗಳು—ಕ್ರೈಸ್ತ ವೀಕ್ಷಣ
ಒಬ್ಬ ಸಮಾಜ ಶಾಸ್ತ್ರಜ್ಞನು ಅಭಿಪ್ರಾಯ ಪ್ರದರ್ಶನಗಳನ್ನು, “ಯಾವ ಕಾರ್ಯವನ್ನೂ ಮಾಡದ ಅಧಿಕಾರಿಗಳು ತಕ್ಕ ಕ್ರಮ ಕೈಕೊಳ್ಳುವಂತೆ ಚುಚ್ಚುವ . . . ಪ್ರತ್ಯೇಕವಾಗಿ ಕಾರ್ಯಸಾಧಕ ರೂಪದ ರಾಜಕೀಯ ಅಭಿವ್ಯಕ್ತಿ,” ಎಂದು ವರ್ಣಿಸಿದ್ದಾನೆ. ಹೌದು, ಪ್ರತಿಭಟನೆಯ ನಡಗೆಗಳನ್ನು ಮಾಡುವವರು ಯಾ ಅಭಿಪ್ರಾಯ ಪ್ರದರ್ಶನಗಳನ್ನು ನಡೆಸುವವರು ಸಾಮಾನ್ಯವಾಗಿ, ತಮ್ಮ ಸೇರಿಕೆಯ ಪ್ರಯತ್ನಗಳು ಇಂದಿನ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಗಳಲ್ಲಿ ಕಂಡುಬರುವ ಅನ್ಯಾಯ ಮತ್ತು ಭ್ರಷ್ಟಾಚಾರಗಳನ್ನು ತಿದ್ದುವವೆಂಬ ನಿರೀಕ್ಷೆಯಿಂದ ಮಾಡುತ್ತಾರೆ.
ಆದರೆ ಯೇಸು ಕ್ರಿಸ್ತನು ತನ್ನ ಹಿಂಬಾಲಕರಿಗೆ ಯಾವ ಮಾದರಿಯನ್ನಿಟ್ಟನು? ಯೆಹೂದಿ ಜನರು ರೋಮನ್ ಸಾಮ್ರಾಜ್ಯದ ದಬ್ಬಾಳಿಕೆಗೊಳಗಾಗಿದ್ದ ಸಮಯದಲ್ಲಿ ಯೇಸು ಜೀವಿಸಿದನು. ಆ ದಬ್ಬಾಳಿಕೆಯ ರೋಮನ್ ನೊಗದಿಂದ ತಮಗೆ ಉಪಶಮನವನ್ನು ಜನರು ಅತಿಯಾಗಿ ಬಯಸುತ್ತಿದ್ದರೆಂಬುದು ನಿಶ್ಚಯ. ಆದರೂ ಯೇಸು ತನ್ನ ಹಿಂಬಾಲಕರಿಗೆ, ಅಭಿಪ್ರಾಯ ಪ್ರದರ್ಶನ, ವಿರೋಧ ಸೂಚಕ ನಡಗೆ, ಯಾ ಇನ್ನಾವ ವಿಧದಲ್ಲಿಯಾದರೂ ಅವರು ರಾಜಕೀಯ ರೀತಿಯಲ್ಲಿ ಭಾಗವಹಿಸಬೇಕೆಂದು ಪ್ರೋತ್ಸಾಹಿಸಲಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ತನ್ನ ಶಿಷ್ಯರು “ಲೋಕದ ಭಾಗ”ವಾಗಿರಬಾರದೆಂದು ಪದೇ ಪದೇ ಹೇಳಿದನು.—ಯೋಹಾನ 15:19; 17:16; ನೋಡಿ ಯೋಹಾನ 6:15 ಸಹ.
ತದ್ರೀತಿ, ಯೇಸುವನ್ನು ಸರಕಾರೀ ಅಧಿಕಾರಿಗಳು ಅನ್ಯಾಯವಾಗಿ ಬಂಧಿಸಿದಾಗ, ಅವನು ಪ್ರತಿಭಟನೆಯನ್ನು ಪ್ರೋತ್ಸಾಹಿಸಲಿಲ್ಲ. ಅವನಿಗೆ ಮನಸ್ಸಿದ್ದಿದ್ದರೆ ನಿಶ್ಚಯವಾಗಿಯೂ ಅವನು ಹಾಗೆ ಮಾಡಸಾಧ್ಯವಿತ್ತು. ಇದಕ್ಕೆ ಬದಲಾಗಿ, ಅವನು ರೋಮನ್ ರಾಜ್ಯಪಾಲನಿಗೆ ಹೇಳಿದ್ದು: “ನನ್ನ ರಾಜ್ಯವು ಈ ಲೋಕದ್ದಲ್ಲ; ನನ್ನ ರಾಜ್ಯವು ಈ ಲೋಕದ್ದಾಗಿದ್ದರೆ ನಾನು ಯೆಹೂದ್ಯರ ಕೈಯಲ್ಲಿ ಬೀಳದಂತೆ ನನ್ನ ಪರಿವಾರದವರು ಕಾದಾಡುತ್ತಿದ್ದರು; ಆದರೆ ನನ್ನ ರಾಜ್ಯವು ಇಲ್ಲಿಯದಲ್ಲ.” (ಯೋಹಾನ 18:33-36) ಈ ವಿವಾದವನ್ನು ಎದುರಿಸಿದ ಯೇಸು, ಪ್ರತಿಭಟನೆಯ ಯಾವುದೇ ಕಾರ್ಯವನ್ನು ಮಾಡದೆ, ರಾಜಕಾರಣದ ವಿಚಾರಗಳಲ್ಲಿ ಯಾವ ಭಾಗವೂ ಆಗದಿರುವ ಆವಶ್ಯಕತೆಯನ್ನು ಮಾನ್ಯ ಮಾಡಿದನು. ತನ್ನ ಹಿಂಬಾಲಕರೂ ಹಾಗೆ ಮಾಡುವಂತೆ ಅವನು ಪ್ರೋತ್ಸಾಹಿಸಿದನು.
ಆದುದರಿಂದ, ಅಭಿಪ್ರಾಯ ಪ್ರದರ್ಶನಗಳಲ್ಲಿ ಭಾಗವಹಿಸುವಿಕೆಯು ಯೇಸು ಬೋಧಿಸಿದ ಕ್ರೈಸ್ತ ತಾಟಸ್ಥ್ಯದ ಮೂಲಸೂತ್ರವನ್ನು ಉಲ್ಲಂಘಿಸುವುದು. ಇದಕ್ಕೂ ಅತೀತವಾಗಿ, ಇಂಥ ಭಾಗವಹಿಸುವಿಕೆ ಇತರ ಅಕ್ರೈಸ್ತ ನಡತೆಯಲ್ಲಿಯೂ ಒಬ್ಬನು ಸಿಕ್ಕಿಕೊಳ್ಳುವಂತೆ ನಡೆಸಬಲ್ಲದು. ಯಾವ ವಿಧದಲ್ಲಿ? ಸದುದ್ದೇಶದಿಂದ ಮಾಡಲ್ಪಡುವ ಅಭಿಪ್ರಾಯ ಪ್ರದರ್ಶನಗಳು ಅನೇಕ ವೇಳೆ ನಿರ್ಣಯಾತ್ಮಕವಾಗಿ ದಂಗೆಯ ಮನೋಭಾವವನ್ನು, ಭಾಗಿಗಳು ಯುದ್ಧಪ್ರಿಯರಾಗುವ, ಶಾಬ್ದಿಕ ದುರುಪಯೋಗ ಮಾಡುವ, ಯಾ ಹಿಂಸಾಚಾರವನ್ನು ಮಾಡುವ ರೂಪವನ್ನು ತೆಗೆದುಕೊಳ್ಳುತ್ತವೆ. ಅಶಾಸನಬದ್ಧತೆ ಮತ್ತು ತಡೆಯೊಡ್ಡುವಿಕೆಯ ಉಪಾಯಗಳು ಗಮನವನ್ನು ಆಕರ್ಷಿಸಬಹುದಾದರೂ, ಅದು “ಮೇಲಿರುವ ಅಧಿಕಾರಿಗಳಿಗೆ ಅಧೀನ”ರಾಗಿರಬೇಕೆಂಬ ಮತ್ತು “ಎಲ್ಲರ ಸಂಗಡ ಸಮಾಧಾನದಿಂದಿರಿ” ಎಂಬ ಬೈಬಲಿನ ಬುದ್ಧಿವಾದಕ್ಕೆ ಹೊಂದಿಕೊಳ್ಳುವುದಿಲ್ಲ. (ರೋಮಾಪುರ 12:18; 13:1) ಸತ್ಯಾಗ್ರಹವನ್ನು ಪ್ರೋತ್ಸಾಹಿಸುವ ಬದಲಿಗೆ ಬೈಬಲು ಕ್ರೈಸ್ತರನ್ನು, ಅವರು ಜನಾಂಗಗಳ ಮಧ್ಯೆ ತಮ್ಮ ಸ್ವದರ್ತನೆಯನ್ನು ಕಾಪಾಡಿಕೊಳ್ಳಬೇಕೆಂತಲೂ, ಅಧಿಕಾರದಲ್ಲಿರುವವರು ಮೆಚ್ಚಿಸಲು ಕಷ್ಟವಾಗಿರುವವರಾದರೂ ವಿಚಾರಹೀನರಾದರೂ ಮಾನವ ಸರಕಾರಗಳಿಗೆ ಅಧೀನರಾಗಬೇಕೆಂತಲೂ ಪ್ರೋತ್ಸಾಹಿಸುತ್ತದೆ.—1 ಪೇತ್ರ 2:12, 13, 18.
‘ಆದರೆ ಎಲ್ಲ ಅಭಿಪ್ರಾಯ ಪ್ರದರ್ಶನಗಳು ಯುದ್ಧಸ್ವಭಾವದ್ದು ಯಾ ಹಿಂಸಾಚಾರದ್ದು ಆಗಿರುವುದಿಲ್ಲ’ ಎಂದು ಕೆಲವರು ಹೇಳಬಹುದು. ಇದು ನಿಜ, ಮತ್ತು ಕೆಲವು ಪ್ರದರ್ಶನಗಳು ಒಳ್ಳೆಯ ಪರಿಣಾಮಗಳನ್ನು ಉತ್ಪಾದಿಸುತ್ತವೆ. ಆದರೆ ವಿರೋಧ ಸೂಚನೆಗಳು—ಅವು ಶಾಂತಿಯದ್ದಾಗಿದ್ದು ಒಳ್ಳೆಯ ಕಾರಣಕ್ಕಾಗಿ ನಡೆದರೂ—ಲೋಕವನ್ನು ನಿಜವಾಗಿಯೂ ಉತ್ತಮಗೊಳಿಬಲ್ಲವೆ?
ಅವು ಜಗತ್ತನ್ನು ಮಾರ್ಪಡಿಸಬಲ್ಲವೆ?
ಕ್ರೈಸ್ತರು ತಮ್ಮ ನೆರೆಯವರ ವಿಷಯದಲ್ಲಿ ತೀರಾ ಚಿಂತಿತರಾಗಿದ್ದು ಅವರಿಗೆ ಸಹಾಯಮಾಡ ಬಯಸುತ್ತಾರೆ. ಆದರೆ ಪ್ರದರ್ಶನಗಳಲ್ಲಿ ಭಾಗವಹಿಸುವಿಕೆಯು ನಿಜವಾಗಿಯೂ ಸಹಾಯ ನೀಡುವ ಅತ್ಯುತ್ತಮ ಮಾರ್ಗವೊ? ಡೆಮೊನ್ಸ್ಟ್ರೇಷನ್ ಡಿಮಾಕ್ರಸಿ ಎಂಬ ಪುಸ್ತಕ ಹೇಳುವುದು: “ಯಾವುದೇ ರಾಜಕೀಯ ಅಭಿವ್ಯಕ್ತಿಯಿಂದ ಸಾಧಿಸಲ್ಪಡುವ ವಿಷಯಗಳಿಗೆ ಮಿತಿಯಿದೆ. ಮಾನವ ಸಂತತಿಯನ್ನು ಎದುರಿಸುವ ದುರ್ಗತಿಗಳನ್ನು ನಿವಾರಿಸಲು ಬೇಕಾಗುವ ಬದಲಾವಣೆಗಳು ಯಾವ ವಿರೋಧ ಸೂಚನೆ ಯಾ ನಡಗೆಯ ವ್ಯಾಪ್ತಿಗೂ ಮೀರಿದೆ ಎಂಬುದು ನಿರ್ವಿವಾದ.”
ತನ್ನ ದಿನಗಳ ಶತಮಾನಗಳಷ್ಟು ಹಳೆಯದಾಗಿದ್ದ ಧಾರ್ಮಿಕ ಪದ್ಧತಿಗಳನ್ನು ಚರ್ಚಿಸುವಾಗ ಯೇಸು ಇದೇ ರೀತಿಯಾಗಿ ಸೂಚಿಸಿದನು. ಫರಿಸಾಯರು ಆಚರಿಸುತ್ತಿದ್ದ ಕಪಟಾಚಾರದ ಆರಾಧನಾ ಪದ್ಧತಿಯ ಕುರಿತು ಅವನಂದದ್ದು: “ಯಾರೂ ಹೊಸ ಬಟ್ಟೆಯ ತುಂಡನ್ನು ಹಳೆಯ ಬಟ್ಟೆಗೆ ತ್ಯಾಪೆ ಹಚ್ಚುವದಿಲ್ಲ; [ಹಚ್ಚಿದರೆ] ಆ ಬಟ್ಟೆಯು ತ್ಯಾಪೆಯನ್ನು ಹಿಂಜುವದರಿಂದ ಹರಕು ಹೆಚ್ಚಾಗುವದು.” (ಮತ್ತಾಯ 9:15, 16) ಯೇಸು ಸೂಚಿಸಿದ ಅರ್ಥವೇನು? ಏನೆಂದರೆ ಸತ್ಯ ಕ್ರೈಸ್ತತ್ವವು ಎಸೆಯಲ್ಪಡಲು ಸಿದ್ಧವಾಗಿರುವ ದುಷ್ಟ ಹಾಗೂ ಸವೆದು ಹೋದ ಪದ್ಧತಿಗೆ ಹೊಂದಿಕೊಳ್ಳಲಾರದು. ನಿಷ್ಪ್ರಯೋಜಕವಾದ ವ್ಯವಸ್ಥೆಗೆ ತೇಪೆ ಹಚ್ಚುವುದು ವ್ಯರ್ಥವೆಂದು ಅವನು ಗುರುತಿಸಿದನು.
ಮಾನವ ಸಂತತಿಯನ್ನು ಶತಮಾನ ಕಾಲಗಳ ಅನ್ಯಾಯ, ಕ್ರೌರ್ಯ, ಮತ್ತು ದಬ್ಬಾಳಿಕೆಗೆ ಅಧೀನ ಪಡಿಸಿರುವ ಲೋಕ ವ್ಯವಸ್ಥೆಯ ಕುರಿತು ಸಹ ಇದು ಸತ್ಯವಾಗಿದೆ. ಪ್ರಸಂಗಿ 1:15 ನಾಟುವಂತೆ ವಿವರಿಸುವುದು: “ವಕ್ರವಾದದನ್ನು ಸರಿಮಾಡುವದು ಅಸಾಧ್ಯ.” ಹೌದು, ಅತಿ ಉದಾತ್ತ ಪ್ರಯತ್ನಗಳು ಮಾಡಲ್ಪಟ್ಟರೂ ಇಂದಿನ ಲೋಕ ವ್ಯವಸ್ಥೆಯನ್ನು ನೆಟ್ಟಗೆ ಮಾಡುವುದು ಅಸಾಧ್ಯ. ಏಕೆಂದರೆ, 1 ಯೋಹಾನ 5:19 ಹೇಳುವಂತೆ, “ಲೋಕವೆಲ್ಲವು ಕೆಡುಕನ,” ಪಿಶಾಚನಾದ ಸೈತಾನನ, “ವಶದಲ್ಲಿ ಬಿದಿದ್ದೆ.” ಯೇಸು ಅವನನ್ನು ಸೂಚಿಸಿ “ಇಹಲೋಕಾಧಿಪತಿ” ಎಂದು ಹೇಳಿದನು. (ಯೋಹಾನ 12:31) ಈ ವ್ಯವಸ್ಥೆ ಸೈತಾನನ ಪ್ರಭಾವದಲ್ಲಿ ಕಾರ್ಯ ನಡೆಸುವ ವರೆಗೆ, ಯಾವುದೇ ಮೊತ್ತದ ತೇಪೆ ಹಚ್ಚುವ ಕಾರ್ಯವೂ ಕಾಯಂ ಉಪಶಮನವನ್ನು ತರಲಾರದು.
ಇದರ ಅರ್ಥವು, ಲೋಕದ ಸಮಸ್ಯೆಗಳ ವಿಷಯದಲ್ಲಿ ಕ್ರೈಸ್ತರು ನಿರಾಸಕ್ತರು ಯಾ ಸಕಾರಾತ್ಮಕ ವರ್ತನೆಯ ಇಚ್ಫೆ ಇಲ್ಲದವರು ಎಂದಾಗುವುದಿಲ್ಲ. ವಾಸ್ತವವಾಗಿ, ಕ್ರೈಸ್ತರಿಗೆ, ಅವರು ತೀರಾ ಕ್ರಿಯಾಶೀಲರಾಗಿರಬೇಕು ಎಂದು ಹೇಳಲಾಗಿದೆ. ಆದರೆ ವಿರೋಧ ಪ್ರದರ್ಶನಗಳಲ್ಲಲ್ಲ, ದೇವರ ರಾಜ್ಯ—ಯೇಸು ತನ್ನ ಹಿಂಬಾಲಕರು ಯಾವುದಕ್ಕಾಗಿ ಪ್ರಾರ್ಥಿಸಲು ಕಲಿಸಿದನೋ ಅದೇ ರಾಜ್ಯ ಸರಕಾರ—ದ ಸುವಾರ್ತೆಯನ್ನು ಸಾರಿ, ಕಲಿಸುವುದರಲ್ಲಿಯೇ. (ಮತ್ತಾಯ 6:10; 24:14) ಈ ರಾಜ್ಯವು ಸುಧಾರಣೆ ಮಾಡಸಾಧ್ಯವಿಲ್ಲದ ಈ ಲೋಕವನ್ನು ರಕ್ಷಿಸಲು ಪ್ರಯತ್ನಿಸುವುದಿಲ್ಲವೆಂದು ಬೈಬಲು ತೋರಿಸುತ್ತದೆ; ಈಗ ಮಾನವಕುಲವನ್ನು ಪೀಡಿಸುತ್ತಿರುವ ದುಷ್ಟ ಸರಕಾರಗಳನ್ನೂ ಸಾಮಾಜಿಕ ವ್ಯವಸ್ಥೆಗಳನ್ನೂ ಅದು ಪೂರ್ತಿಯಾಗಿ ನಿವಾರಿಸಿ ನಿಜ ನ್ಯಾಯ ಮತ್ತು ನೀತಿಯನ್ನು ಭೂವ್ಯಾಪಕವಾಗಿ ಸ್ಥಾಪಿಸಬಲ್ಲ ಒಂದು ವ್ಯವಸ್ಥೆಯಿಂದ ಸ್ಥಾನಭರ್ತಿ ಮಾಡುವುದು. (ದಾನಿಯೇಲ 2:44) ಅಂತಹ ಒಂದು ವ್ಯವಸ್ಥೆಯಲ್ಲಿ, ಯಾರೂ ವಿರೋಧ ಸೂಚಿಸುವ ನಡಗೆಯನ್ನು ಕೈಕೊಳ್ಳಬೇಕೆಂದಿರುವುದಿಲ್ಲ, ಏಕೆಂದರೆ, “ಎಲ್ಲಾ ಜೀವಿಗಳ ಇಷ್ಟವನ್ನು” ನೆರವೇರಿಸುವ ಯೆಹೋವ ದೇವರು ನಮ್ಮ ಸಕಲ ಆವಶ್ಯಕತೆಗಳು ಪೂರ್ತಿಯಾಗಿ ತೃಪ್ತಿಗೊಳ್ಳುವಂತೆ ನೋಡಿಕೊಳ್ಳುವನು.—ಕೀರ್ತನೆ 145:16.
[ಪುಟ 18 ರಲ್ಲಿರುವ ಚಿತ್ರ ಕೃಪೆ]
Labor strike, Leslie’s