ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g93 9/8 ಪು. 6-9
  • ಗರ್ಭಪಾತದ ದುಃಖಕರವಾದ ಬೆಲೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಗರ್ಭಪಾತದ ದುಃಖಕರವಾದ ಬೆಲೆ
  • ಎಚ್ಚರ!—1993
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ತಾಯಿಯೊಬ್ಬಳ ಅನಿಸಿಕೆ
  • ಅಜಾತ ಮಗುವಿನ ಅನುಭವ
  • ವೈದ್ಯರ ಅನುಭವ
  • ಗರ್ಭಪಾತ ಉಭಯಸಂಕಟ ಆರು ಕೋಟಿ ವಧೆಗಳು ಪರಿಹಾರವಾಗಿದೆಯೋ?
    ಎಚ್ಚರ!—1993
  • ಈ ಧರ್ಮಗಳಲ್ಲಿ ಉತ್ತರವಿದೆಯೋ?
    ಎಚ್ಚರ!—1993
  • ಗರ್ಭಪಾತದ ಬಗ್ಗೆ ಬೈಬಲ್‌ ಏನು ಹೇಳುತ್ತೆ?
    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
ಎಚ್ಚರ!—1993
g93 9/8 ಪು. 6-9

ಗರ್ಭಪಾತದ ದುಃಖಕರವಾದ ಬೆಲೆ

ಗರ್ಭಪಾತದ ಮೂಲಕ ಪ್ರತಿ ವರ್ಷ 5ರಿಂದ 6 ಕೋಟಿ ಅಜಾತ ಶಿಶುಗಳು ನಾಶವಾಗುತ್ತವೆ. ಆ ಸಂಖ್ಯೆಯನ್ನು ನೀವು ಗ್ರಹಿಸಬಲ್ಲಿರೊ? ಹವಾಯಿ ದ್ವೀಪಗಳ ಇಡೀ ಜನಸಂಖ್ಯೆಯನ್ನು ಪ್ರತಿ ವಾರ ಸಂಹಾರಮಾಡುವ ಅರ್ಥದಲ್ಲಿ ಇದಿರುವುದು!

ನಿಷ್ಕೃಷ್ಟ ಸಂಖ್ಯೆಗಳನ್ನು ಒಟ್ಟುಗೂಡಿಸುವುದು ಕಷ್ಟ, ಏಕೆಂದರೆ ಅಧಿಕಾಂಶ ಸರಕಾರಗಳು ಗರ್ಭಪಾತಗಳ ಜಾಗರೂಕ ದಾಖಲೆಗಳನ್ನಿಡುವುದಿಲ್ಲ. ಮತ್ತು ಗರ್ಭಪಾತವು ನಿರ್ಬಂಧಕ್ಕೊಳಪಟ್ಟಿರುವಲ್ಲಿ ಯಾ ನ್ಯಾಯವಿರುದ್ಧವಾಗಿರುವಲ್ಲಿ, ಪರಿಣತರು ಕೇವಲ ಒಂದು ಅಂದಾಜನ್ನು ಹಿಡಿಯಬಹುದು, ಅಷ್ಟೇ. ಆದರೆ ಗರ್ಭಪಾತದ ಭೌಗೋಳಿಕ ಪಾರ್ಶ್ವದೃಶ್ಯ ಸುಮಾರಾಗಿ ಈ ಕೆಳಗಿನಂತೆ ಕಂಡುಬರುತ್ತದೆ:

ಅಮೆರಿಕದಲ್ಲಿ ಗರ್ಭಪಾತವು, ಗಲಗ್ರಂಥಿ (ಟಾನ್ಸಿಲೆಕಮ್ಟಿ)ಗೆ ಎರಡನೆಯದಾಗಿ ಬರುವ ಅತಿ ಸಾಮಾನ್ಯ ಶಸ್ತ್ರಚಿಕಿತ್ಸಾ ವಿಧಾನವಾಗಿದೆ. ವಾರ್ಷಿಕವಾಗಿ, 15 ಲಕ್ಷಗಳಿಗೂ ಹೆಚ್ಚು ಗರ್ಭಪಾತಗಳನ್ನು ಮಾಡಲಾಗುತ್ತದೆ. ಸ್ತ್ರೀಯರಲ್ಲಿ ಸ್ಪಷ್ಟವಾಗಿದ ಬಹುಸಂಖ್ಯಾತರು ಅವಿವಾಹಿತೆಯರು—5ರಲ್ಲಿ 4 ಮಂದಿ. ಅವಿವಾಹಿತೆಯರು ಹೆರುವುದಕ್ಕಿಂತ ಇಮ್ಮಡಿಯಾಗಿ ಗರ್ಭಧಾರಣೆಯನ್ನು ಕೊನೆಗಾಣಿಸಿಕೊಂಡರು. ಅದೇ ಸಮಯದಲ್ಲಿ, ವಿವಾಹಿತೆಯರು, ಸರಾಸರಿ, ಗರ್ಭಪಾತ ಮಾಡಿಸಿಕೊಂಡದ್ದಕ್ಕಿಂತ ಹತ್ತು ಪಾಲು ಹೆಚ್ಚಾಗಿ ಹೆತ್ತರು.

ಮಧ್ಯ ಮತ್ತು ದಕ್ಷಿಣ ಅಮೆರಿಕ—ಅಧಿಕಾಂಶ ಕ್ಯಾತೊಲಿಕ್‌—ದೇಶಗಳಲ್ಲಿ ಗರ್ಭಪಾತ ನಿಯಮಗಳು ಲೋಕದಲ್ಲಿಯೇ ಅತಿ ನಿರ್ಬಂಧಕ್ಕೊಳಪಡಿಸುವುವುಗಳು. ಹೀಗಿದ್ದರೂ, ನ್ಯಾಯವಿರುದ್ಧವಾದ ಗರ್ಭಪಾತ ಹೇರಳವಾಗಿದ್ದು, ಸ್ತ್ರೀಯರಿಗೆ ಗುರುತರವಾದ ಆರೋಗ್ಯಾಪಾಯಗಳನ್ನು ತಂದೊಡ್ಡುತ್ತಿವೆ. ಉದಾಹರಣೆಗೆ, ಬ್ರೆಜೀಲ್‌ನ ಸ್ತ್ರೀಯರು ಕಳೆದ ವರುಷದಲ್ಲಿ ನಾಲ್ವತ್ತು ಲಕ್ಷ ಗರ್ಭಪಾತಗಳನ್ನು ಮಾಡಿಸಿಕೊಂಡರು. ಅವರಲ್ಲಿ 4,00,000ಕ್ಕೂ ಹೆಚ್ಚು ಮಂದಿ ಜಟಿಲತೆಯ ಕಾರಣ ವೈದ್ಯಕೀಯ ಚಿಕಿತ್ಸೆಯನ್ನು ಕೋರಬೇಕಾಗಿ ಬಂತು. ಲ್ಯಾಟಿನ್‌ ಅಮೆರಿಕದಲ್ಲಿ ಎಲ್ಲ ಗರ್ಭಧಾರಣೆಗಳಲ್ಲಿ ಸುಮಾರು ಕಾಲು ಭಾಗ ಕೊನೆಗಾಣಿಸಲ್ಪಡುತ್ತವೆ.

ಅಟ್ಲ್ಯಾಂಟಿಕ್‌ನ ಆಚೆಗಿರುವ ಆಫ್ರಿಕ ಭೂಖಂಡದಲ್ಲಿ ಸಹ ನಿಯಮಗಳು ಕಠಿನ. ಹಾನಿಗಳು ಮತ್ತು ಮರಣಗಳು ಸಾಮಾನ್ಯ, ವಿಶೇಷವಾಗಿ ನ್ಯಾಯವಿರುದ್ಧವಾದ ವೈದ್ಯರ ಸಹಾಯವನ್ನು ಕೋರುವ ಬಡ ಸ್ತ್ರೀಯರ ಮಧ್ಯೆ.

ಮಧ್ಯ ಪೂರ್ವದಲ್ಲಿಲ್ಲಾ, ಅನೇಕ ದೇಶಗಳಲ್ಲಿ ಕಟುವಾದ ಲಿಖಿತ ನಿಯಮಗಳಿವೆ. ಆದರೂ ದೊಡ್ಡ ಖರ್ಚನ್ನು ಕೊಡಸಾಧ್ಯವಿರುವ ಸ್ತ್ರೀಯರಿಂದ ಗರ್ಭಪಾತಗಳು ಇನ್ನೂ ಕೋರಲ್ಪಟ್ಟು ಮಾಡಿಸಿಕೊಳ್ಳಲ್ಪಡುತ್ತವೆ.

ಪಶ್ಚಿಮ ಯೂರೋಪಿನ ಅಧಿಕಾಂಶ ದೇಶಗಳಲ್ಲಿ ಗರ್ಭಪಾತಕ್ಕೆ ಸ್ವಲ್ಪ ಅನುಮತಿಯಿದೆ. ಸ್ಕ್ಯಾಂಡಿನೇವಿಯ ಇದರಲ್ಲಿ ಹೆಚ್ಚು ಮುಕ್ತ ಹಸ್ತದ್ದಾಗಿದೆ. ಇಸವಿ 1967ರಲ್ಲಿ ಆ ವಿಧಾನ ಶಾಸನಬದ್ಧವಾದಂದಿನಿಂದ, ಬ್ರಿಟನ್ನಿನ ರಾಷ್ಟ್ರೀಯ ಆರೋಗ್ಯ ಖಾತೆ ಗರ್ಭಪಾತಗಳ ದಾಖಲೆಯನ್ನಿಟ್ಟಿದೆ. ಹಾದರದ ಜನನಗಳು, ರತಿ ರವಾನಿತ ರೋಗಗಳು, ವೇಶ್ಯಾವೃತ್ತಿ, ಮತ್ತು ಸಂತಾನೋತ್ಪತ್ತಿ ಸಂಬಂಧದ ಅನೇಕ ವ್ಯಾಧಿಗಳಲ್ಲಿ, ಗರ್ಭಪಾತಗಳ ಸಂಖ್ಯೆಯ ಇಮ್ಮಡಿಯಾಗುವಿಕೆಯನ್ನು ಅದು ಅವಲೋಕಿಸಿತು.

ಪೂರ್ವ ಯೂರೋಪ್‌ ಪ್ರಚಲಿತವಾಗಿ ಬದಲಾವಣೆಗಳನ್ನು ಅನುಭವಿಸುತ್ತಿದೆ, ಮತ್ತು ಹಾಗೆಯೆ ಗರ್ಭಪಾತದ ನಿಯಮಗಳು ಸಹ ಬದಲಾಗುತ್ತಿವೆ. ಯಾವುದನ್ನು ಸೋವಿಯೆಟ್‌ ಯೂನಿಯನ್‌ ಎಂದು ಕರೆಯಲಾಗುತ್ತಿತ್ತೋ ಅಲ್ಲಿ ವಾರ್ಷಿಕವಾಗಿ, 1.1 ಕೋಟಿ ಗರ್ಭಪಾತಗಳು ಮಾಡಲ್ಪಡುತ್ತವೆ ಎಂದು ಅಂದಾಜಿಸಲಾಗುತ್ತದೆ, ಇದು ಲೋಕವ್ಯಾಪಕವಾಗಿ ಅತಿ ಹೆಚ್ಚು ಸಂಖ್ಯೆಗಳಲ್ಲೊಂದು. ಗರ್ಭ ನಿರೋಧಕಗಳ ವಿರಳತೆ ಮತ್ತು ಬಡ ಆರ್ಥಿಕ ಪರಿಸ್ಥಿತಿಗಳ ಕಾರಣ, ಆ ಪ್ರದೇಶದ ಒಬ್ಬ ಸಾಮಾನ್ಯ ಸ್ತ್ರೀ ಆಕೆಯ ಆಯುಷ್ಕಾಲದಲ್ಲಿ ಆರರಿಂದ ಒಂಭತ್ತು ಗರ್ಭಪಾತಗಳನ್ನು ಮಾಡಿಸಿಕೊಳ್ಳಬಹುದು.

ಪೂರ್ವ ಯೂರೋಪಿನಲ್ಲೆಲ್ಲ ಉದಾರೀಕರಣವೇ ಸಾಮಾನ್ಯವಾಗಿರುವ ಪ್ರವಣತೆ. ಇದರ ಒಂದು ನಾಟಕೀಯ ಉದಾಹರಣೆ ರೊಮೇನಿಯ. ಅಲ್ಲಿ ಮೊದಲಿದ್ದ ಸರಕಾರವು ಜನಸಂಖ್ಯೆಯ ವೃದ್ಧಿಯನ್ನು ಪ್ರೋತ್ಸಾಹಿಸುವರೆ ಗರ್ಭಪಾತಗಳನ್ನು ಮತ್ತು ಗರ್ಭನಿರೋಧವನ್ನು ಕ್ರಿಯಾಶೀಲವಾಗಿ ನಿಷೇಧಿಸಿತು. ಸ್ತ್ರೀಯರು ಕಡಿಮೆ ಪಕ್ಷ ನಾಲ್ಕು ಮಕ್ಕಳನ್ನಾದರೂ ಹೆರುವ ನಿರ್ಬಂಧಕ್ಕೊಳಗಾದರು, ಮತ್ತು 1988ರೊಳಗೆ, ರೊಮೇನಿಯದ ಅನಾಥಾಲಯಗಳು ತ್ಯಜಿಸಲ್ಪಟ್ಟಿದ್ದ ಮಕ್ಕಳಿಂದ ತುಂಬಿತುಳುಕುತ್ತಿದ್ದವು. ಹೀಗೆ, 1989ರ ಕ್ರಾಂತಿಕಾರಿ ಸರಕಾರ ಗರ್ಭಪಾತದ ಮೇಲಿನ ಈ ನಿರ್ಬಂಧಗಳನ್ನು ರದ್ದುಮಾಡಿದಂದಿನಿಂದ, ನಾಲ್ಕು ಶಿಶುಗಳಲ್ಲಿ ಮೂರು ಗರ್ಭಪಾತಕ್ಕೊಳಗಾಗುತ್ತಿವೆ. ಇದು ಯೂರೋಪಿನ ಅತ್ಯುನ್ನತ ಪ್ರಮಾಣ.

ಗರ್ಭಪಾತಗಳ ಅತ್ಯುನ್ನತ ಸಂಖ್ಯೆ ಏಷ್ಯದಲ್ಲಿದೆ. ಏಕ-ಮಗು ಧೋರಣೆ ಮತ್ತು ಕಡ್ಡಾಯ ಗರ್ಭಪಾತಗಳಿರುವ ಚೀನಾ ಗಣರಾಜ್ಯ ವರ್ಷಕ್ಕೆ 1.4 ಕೋಟಿ ಗರ್ಭಪಾತಗಳಿಂದಾಗಿ ಈ ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಜಪಾನಿನಲ್ಲಿ ಸ್ತ್ರೀಯರು ತಮ್ಮ ಸ್ರವಿಸಲ್ಪಟ್ಟ ಮಕ್ಕಳ ಸ್ಮರಣಾರ್ಥವಾಗಿ, ಗಲ್ಲಪಟ್ಟಿಗಳು ಮತ್ತು ಆಟದ ಸಾಮಾನುಗಳಿಂದ ಕಲ್ಲಿನ ಚಿಕ್ಕ ಮೂರ್ತಿಗಳನ್ನು ಅಲಂಕರಿಸುತ್ತಾರೆ. ಸಂತಾನ ನಿರೋಧ ಗುಳಿಗೆಗಳ ಕುರಿತು ಸಾರ್ವಜನಿಕರಿಗೆ ತೀರಾ ಚಿಂತೆಯಿದೆ, ಮತ್ತು ಕುಟುಂಬ ಯೋಜನೆಯ ಪ್ರಧಾನ ವಿಧಾನವು ಗರ್ಭಪಾತವಾಗಿದೆ.

ಏಷ್ಯದಲ್ಲೆಲ್ಲ, ಮತ್ತು ಪ್ರತ್ಯೇಕವಾಗಿ ಭಾರತದಲ್ಲಿ, ವೈದ್ಯಕೀಯ ಯಂತ್ರಕಲಾ ವಿಜ್ಞಾನವು ಸ್ತ್ರೀಹಕ್ಕುಗಳ ಕ್ರಿಯಾವಾದಿಗಳಿಗೆ ತೊಡಕಿನ ಬಿಕ್ಕಟ್ಟನ್ನುಂಟುಮಾಡಿದೆ. ಭ್ರೂಣ ಪರೀಕ್ಷೆ (ಆ್ಯಮ್ನೀಯೊಸೆಂಟೀಸಿಸ್‌) ಮತ್ತು ಅಲ್ಟ್ರಸೌಂಡ್‌ ವಿಧಾನಗಳನ್ನು, ಗರ್ಭಧಾರಣೆಯ ಹೆಚ್ಚೆಚ್ಚು ಆದಿಹಂತಗಳಲ್ಲಿ ಮಗುವಿನ ಲಿಂಗನಿರ್ಣಯಕ್ಕಾಗಿ ಉಪಯೋಗಿಸಸಾಧ್ಯವಿದೆ. ಪ್ರಾಚ್ಯ ಸಂಸ್ಕೃತಿ ದೀರ್ಘಕಾಲದಿಂದ ಹೆಣ್ಣು ಮಕ್ಕಳಿಗಿಂತ ಗಂಡು ಮಕ್ಕಳನ್ನು ಬೆಲೆಯುಳ್ಳವರಾಗಿ ನೋಡಿಯದೆ. ಆದುದರಿಂದ ಲಿಂಗನಿರ್ಣಯ ಮತ್ತು ಗರ್ಭಪಾತ ಸುಲಭವಾಗಿ ಲಭ್ಯವಾಗುವಲ್ಲಿ, ಹೆಣ್ಣು ಭ್ರೂಣಗಳು ದೊಡ್ಡ ಸಂಖ್ಯೆಗಳಲ್ಲಿ ಸ್ರವಿಸಲ್ಪಟ್ಟು ಗಂಡು⁄ಹೆಣ್ಣು ಜನನ ಪ್ರಮಾಣಗಳ ಸಮತೆ ತಪ್ಪಿಸುತ್ತಿದೆ. ಸ್ತ್ರೀ ಚಳುವಳಿ ಈಗ ಒಂದು ವಿರೋಧಾಭಾಸದ ಸ್ಥಾನದಲ್ಲಿ, ಕಾರ್ಯತಃ, ಹೆಣ್ಣು ಭ್ರೂಣವನ್ನು ಸ್ರವಿಸುವ ಸ್ತ್ರೀಯ ಹಕ್ಕನ್ನು ಕೇಳುವ ಸ್ಥಾನದಲ್ಲಿದೆ.

ತಾಯಿಯೊಬ್ಬಳ ಅನಿಸಿಕೆ

ಇತರ ವೈದ್ಯಕೀಯ ವಿಧಾನಗಳಂತೆಯೇ, ಗರ್ಭಪಾತವೂ ಅದರೊಂದಿಗೆ ಸ್ವಲ್ಪ ಮಟ್ಟಿಗಿನ ಅಪಾಯ ಮತ್ತು ವೇದನೆಗಳನ್ನು ತರುತ್ತದೆ. ಗರ್ಭಧಾರಣೆಯ ಸಮಯದಲ್ಲಿ ಗರ್ಭಕೋಶದ ದ್ವಾರ ಯಾ ಕಂಠ, ಶಿಶುವನ್ನು ಭದ್ರವಾಗಿಡುವ ಕಾರಣದಿಂದ ಬಿಗಿಯಾಗಿ ಮುಚ್ಚಿರುತ್ತದೆ. ವಿಸ್ತೃತಿ ಮತ್ತು ಉಪಕರಣಗಳ ಒಳಹೊಗಿಸುವಿಕೆ ವೇದನೆ ಮತ್ತು ಗಾಯದ ಸ್ಥಿತಿಯನ್ನು ತರಬಲ್ಲದು. ಹೀರಿ ಗರ್ಭಪಾತ ಮಾಡುವಿಕೆಗೆ 30 ನಿಮಿಷ ಅಥವಾ ಹೆಚ್ಚು ಹಿಡಿಯಬಹುದು, ಮತ್ತು ಆ ಸಮಯದಲ್ಲಿ ಕೆಲವು ಸ್ತ್ರೀಯರು ಮಿತವಾದ ನೋವಿನಿಂದ ಹಿಡಿದು ತೀವ್ರ ನೋವು ಮತ್ತು ಸೆಳೆತವನ್ನು ಅನುಭವಿಸಬಹುದು. ಲವಣಯುಕ್ತ ಗರ್ಭಪಾತದಲ್ಲಿ, ಸಮಯಕ್ಕೆ ಮೊದಲಿನ ಹೆರಿಗೆಯ ಬೇನೆಯನ್ನು, ಕೆಲವು ಸಲ ಪ್ರಸವವನ್ನು ಆರಂಭಿಸುವ ಪ್ರಾಸ್ಟಗ್ಲ್ಯಾಂಡಿನ್‌ ಎಂಬ ಪದಾರ್ಥದ ಸಹಾಯದಿಂದ ಪ್ರಚೋದಿಸಲಾಗುತ್ತದೆ. ಸಂಕೋಚನಗಳು ಎಷ್ಟೋ ತಾಸುಗಳ ಅಥವಾ ದಿನಗಳ ತನಕವೂ ಇರಬಹುದು, ಮತ್ತು ಇದು ವೇದನಾಮಯವೂ, ಭಾವಾತ್ಮಕವಾಗಿ ಬತ್ತಿಸುವಂತಹದ್ದೂ ಆಗಬಹುದು.

ಗರ್ಭಪಾತವಾದೊಡನೆ ಬರುವ ಜಟಿಲತೆಗಳಲ್ಲಿ ರಕ್ತಸ್ರಾವ, ಗರ್ಭಕಂಠದ ಹಾನಿ ಯಾ ಸೀಳುವಿಕೆಗಳು, ಗರ್ಭಾಶಯದಲ್ಲಿ ತೂತು ಬೀಳುವಿಕೆ, ರಕ್ತ ಹೆಪ್ಪುಗಟ್ಟುವಿಕೆಗಳು, ಅರಿವಳಿಕೆಯ ಪ್ರತಿಕ್ರಿಯೆ, ಅಪಸ್ಮಾರಗಳು, ಜ್ವರ, ನಡುಕಗಳು, ಮತ್ತು ಕಾರುವಿಕೆ ಸೇರಿರುತ್ತವೆ. ಶಿಶುವಿನ ಅಂಶಗಳು ಅಥವಾ ಗರ್ಭವೇಷ್ಟನ ಗರ್ಭದಲ್ಲಿ ಉಳಿಯುವಲ್ಲಿ ರೋಗಸೋಂಕಿನ ಅಪಾಯವು ವಿಶೇಷವಾಗಿ ಹೆಚ್ಚಾಗಿರುತ್ತದೆ. ಅಪೂರ್ಣ ಗರ್ಭಪಾತ ಸಾಮಾನ್ಯ ಸಂಗತಿ, ಮತ್ತು ಆಗ, ಒಳಗೆ ಬಿಡಲ್ಪಟ್ಟ ಕೊಳೆಯುತ್ತಿರುವ ಅಂಗಾಂಶವನ್ನು ಅಥವಾ ಗರ್ಭಕೋಶವನ್ನೇ ತೆಗೆಯಲು ಶಸ್ತ್ರ ಚಿಕಿತ್ಸೆಯು ಬೇಕಾದೀತು. ಅಮೆರಿಕ, ಬ್ರಿಟನ್‌ ಮತ್ತು ಹಿಂದಿನ ಚೆಕಸ್ಲೊವಾಕಿಯದಲ್ಲಿ ನಡೆಸಿದ ಸರಕಾರೀ ಅಧ್ಯಯನಗಳು, ಗರ್ಭಪಾತವು ಬಂಜೆತನ, ನಾಳದ ಗರ್ಭಧಾರಣೆ, ಗರ್ಭಸ್ರಾವಗಳು, ಅಪಕ್ವ ಜನನ, ಮತ್ತು ಜನ್ಮ ನ್ಯೂನತೆಗಳ ಭಾವೀ ಸಾಧ್ಯತೆಗಳನ್ನು ಮಹತ್ತಾಗಿ ವೃದ್ಧಿಸುತ್ತದೆಂದು ಸೂಚಿಸುತ್ತವೆ.

ಅಮೆರಿಕದ ಮಾಜಿ ಸರ್ಜನ್‌ ಜನರಲ್‌ ಸಿ. ಎವೆರೆಟ್‌ ಕೂಪ್‌ ಎಂಬವರು, “ಗರ್ಭಪಾತ ಮಾಡಿಸಿರುವ ಮತ್ತು ಈಗ ಆಕೆಗೆ ಪಡೆಯಲು ಸಾಧ್ಯವಿಲ್ಲದ ಶಿಶುವನ್ನು ಅಪೇಕ್ಷಿಸುವ ಸ್ತ್ರೀಯ ಭಾವಾತ್ಮಕ ಪ್ರತಿಕ್ರಿಯೆ ಮತ್ತು ಅಪರಾಧ ಪ್ರಜ್ಞೆಯ ಕುರಿತ ಅಧ್ಯಯನವನ್ನು” ಯಾರೂ ಮಾಡಿರುವುದಿಲ್ಲ ಎಂದು ಅವಲೋಕಿಸಿದರು.

ಗರ್ಭಪಾತದ ಅಧ್ಯಯನಗಳು ಅವರ ಜೀವಕ್ಕೆ ಮತ್ತು ದೇವರ ನಿಯಮಗಳಿಗೆ ಗೌರವದ ಕಾರಣದಿಂದ ಅವಿವಾಹಿತಾವಸ್ಥೆಯಲ್ಲಿ ಉಳಿಯುವ ನಿಷ್ಕಳಂಕರಾದ ಯುವ ಕ್ರೈಸ್ತರನ್ನು ನಿಯಂತ್ರಕ ಗುಂಪುಗಳಲ್ಲಿ ಒಳಗೂಡಿಸಬೇಕಿತ್ತು. ಅಂತಹ ಅಧ್ಯಯನಗಳು, ಇವರು ಹೆಚ್ಚು ಆರೋಗ್ಯಕರವಾದ ಸಂಬಂಧಗಳನ್ನು, ಹೆಚ್ಚು ಸ್ವಪ್ರತಿಷ್ಠೆ, ಮತ್ತು ಬಾಳಿಕೆ ಬರುವ ಮನಶ್ಶಾಂತಿಯನ್ನು ಅನುಭವಿಸುತ್ತಿದ್ದಾರೆಂದು ಕಂಡುಕೊಳ್ಳುತ್ತಿತ್ತು.

ಅಜಾತ ಮಗುವಿನ ಅನುಭವ

ತನ್ನ ತಾಯಿಯ ಗರ್ಭಕೋಶದ ಸುಖೋಷ್ಣದಲ್ಲಿ ಭದ್ರವಾಗಿ ಲಾಲನೆ ಮಾಡಲ್ಪಟ್ಟು, ಆ ಬಳಿಕ ದಿಢೀರನೆ ಮಾರಕ ಬಲದಿಂದ ಆಕ್ರಮಿಸಲ್ಪಡುವಾಗ ಅಜನಿತ ಮಗುವಿಗೆ ಹೇಗೆನಿಸುತ್ತದೆ? ನಾವು ಕೇವಲ ಭಾವಿಸಬಲ್ಲೆವು, ಏಕೆಂದರೆ ಆ ಕಥೆಯು ನೇರವಾಗಿ ಎಂದೂ ಹೇಳಲ್ಪಡದು.

ಅಧಿಕಾಂಶ ಗರ್ಭಪಾತಗಳು ಜೀವದ ಪ್ರಥಮ 12 ವಾರಗಳಲ್ಲಿ ಮಾಡಲ್ಪಡುತ್ತವೆ. ಈ ಹಂತದೊಳಗೆ, ಆ ಚಿಕ್ಕ ಭ್ರೂಣವು ಉಸಿರಾಟವನ್ನು ಮತ್ತು ನುಂಗುವುದನ್ನು ಅಭ್ಯಾಸಿಸುತ್ತದೆ, ಮತ್ತು ಅದರ ಹೃದಯ ಸ್ಪಂದಿಸುತ್ತಿರುತ್ತದೆ. ಅದರ ಪುಟ್ಟ ಕಾಲ್ಬೆರಳುಗಳನ್ನು ಅದು ಸುರುಳಿಸಬಲ್ಲದು, ಮುಷ್ಟಿ ಬಿಗಿಯಬಲ್ಲದು, ತನ್ನ ಜಲಮಯ ಲೋಕದಲ್ಲಿ ಮಿಡಿದು ತಿರುಗಬಲ್ಲದು—ಮತ್ತು ನೋವನ್ನು ಅನುಭವಿಸಬಲ್ಲದು.

ಅನೇಕ ಭ್ರೂಣಗಳನ್ನು ಗರ್ಭಕೋಶದಿಂದ ತಿರುಚಿ ತೆಗೆದು, ಒಂದು ಹರಿತವಾದ ಬಾಯಿಯಿರುವ ನಿರ್ವಾತ ನಳಿಗೆಯ ಮೂಲಕ ಒಂದು ಪಾತ್ರೆಯೊಳಗೆ ಹೀರಲ್ಪಡುತ್ತವೆ. ಈ ವಿಧಾನವನ್ನು ನಿರ್ವಾತ ಚೂಷಣೆ ಎಂದು ಕರೆಯಲಾಗುತ್ತದೆ. ಈ ಬಲಾಢ್ಯ ಚೂಷಣೆ (ಮನೆಯ ವ್ಯಾಕ್ಯೂಮ್‌ ಕೀನ್ಲರ್‌ಗಿಂತ 29 ಪಾಲು ಹೆಚ್ಚು ಬಲಾಢ್ಯ) ಆ ಪುಟ್ಟ ದೇಹವನ್ನು ಹರಿದು ಬೇರ್ಪಡಿಸುತ್ತದೆ. ಬೇರೆ ಶಿಶುಗಳನ್ನು ವಿಸ್ತೃತಿ ಮತ್ತು ಹೆರೆತದ ಮೂಲಕ, ಒಂದು ಕುಣಿಕೆಯಾಕಾರದ ಚಾಕು ಗರ್ಭಾಶಯದ ಪದರವನ್ನು ಕೆರೆದು ಶಿಶುವನ್ನು ತುಂಡು ತುಂಡಾಗಿ ಕತ್ತರಿಸುವ ಮೂಲಕ ಸ್ರವಿಸಲಾಗುತ್ತದೆ.

ಹದಿನಾರು ವಾರಗಳಿಗಿಂತ ಹೆಚ್ಚು ವಯಸ್ಸಾಗಿರುವ ಭ್ರೂಣಗಳು ಲವಣಯುಕ್ತ ಗರ್ಭಪಾತ ಯಾ ಉಪ್ಪು ವಿಷ ವಿಧಾನದ ಮೂಲಕ ಸಾಯಬಹುದು. ಒಂದು ಉದ್ದ ಸೂಜಿಯು ಜಲಚೀಲವನ್ನು ತೂರಿ, ಸ್ವಲ್ಪ ಆ್ಯಮ್ನಿಯಾಟಿಕ್‌ ದ್ರವವನ್ನು ಹೊರತೆಗೆದು, ಅದನ್ನು ಸಾಂದ್ರೀಕರಿಸಿದ ಉಪ್ಪಿನ ದ್ರವದಿಂದ ಭರ್ತಿಮಾಡುತ್ತದೆ. ಶಿಶು ಅದನ್ನು ಸೇವಿಸಿ ಉಸಿರಾಡುತ್ತಾ ಅದರ ಕೋಮಲ ಶ್ವಾಸಕೋಶಗಳನ್ನು ಆ ವಿಷದ್ರವದಿಂದ ತುಂಬಿಸಿದಾಗ, ಅದು ಒದ್ದಾಡುತ್ತಾ ಕಂಪಿಸುತ್ತದೆ. ಆ ವಿಷದ ಕಟು ಪರಿಣಾಮವು ಚರ್ಮದ ಮೇಲ್ಮೈಯನ್ನು ಸುಟ್ಟು, ಉಜ್ಜುಹುಣ್ಣಾಗಿಸಿ ಮುದುಡಿಸುತ್ತದೆ. ಅದರ ಮಿದುಳು ರಕ್ತಸ್ರಾವವನ್ನಾರಂಭಿಸಬಹುದು. ಒಂದು ವೇದನಾಮಯ ಮರಣವು ಕೆಲವೇ ತಾಸುಗಳಲ್ಲಿ ಬರಬಹುದು. ಆದರೆ ಕೆಲವು ಸಂದರ್ಭಗಳಲ್ಲಿ, ಪ್ರಸವ ವೇದನೆಯು ಒಂದು ದಿನದಲ್ಲಿ ಅಥವಾ ಅನಂತರ ಬರುವಾಗ ಒಂದು ಜೀವಂತ, ಆದರೆ ಸಾಯುತ್ತಿರುವ ಶಿಶುವಿನ ಹೆರಿಗೆಯಾಗುತ್ತದೆ.

ಶಿಶುವು ಇವುಗಳಿಂದ ಅಥವಾ ತದ್ರೀತಿಯ ಇತರ ವಿಧಾನಗಳಿಂದ ಕೊಲ್ಲಲ್ಪಡಲು ತೀರಾ ಬೆಳೆದಿರುವಲ್ಲಿ, ಒಂದು ಅನ್ಯಮಾರ್ಗ—ಗರ್ಭಕೋಶ ಶಸ್ತ್ರಚಿಕಿತ್ಸೆ, ಭಿನ್ನ ಉದ್ದೇಶವಿರುವ ಸೇಳುಹೊಟ್ಟೆಹೆರಿಗೆಯ ವಿಭಾಗ, ಜೀವವನ್ನು ರಕ್ಷಿಸುವ ಬದಲಿಗೆ ಅಂತ್ಯಗೊಳಿಸುವುದು—ಉಳಿದಿರುತ್ತದೆ. ತಾಯಿಯ ಹೊಟ್ಟೆಯನ್ನು ಶಸ್ತ್ರ ವಿಧಾನದಲ್ಲಿ ತೆರೆಯಲಾಗುತ್ತದೆ, ಮತ್ತು ಹೆಚ್ಚುಕಡಿಮೆ ಸದಾ ಒಂದು ಜೀವಂತ ಶಿಶುವನ್ನು ಹೊರಗೆ ಎಳೆಯಲಾಗುತ್ತದೆ. ಅದು ಅಳಬಹುದು ಸಹ. ಆದರೆ ಅದನ್ನು ಸಾಯುವಂತೆ ಬಿಡತಕ್ಕದ್ದು. ಕೆಲವನ್ನು ಉದ್ದೇಶಪೂರ್ವಕವಾಗಿ ಉಸಿರು ಕಟ್ಟಿಸಿಯೊ, ನೀರಲ್ಲಿ ಮುಳುಗಿಸಿಯೊ, ಇತರ ರೀತಿಗಳಲ್ಲಿ ಕೊಲಲ್ಲಾಗುತ್ತದೆ.

ವೈದ್ಯರ ಅನುಭವ

ಶತಮಾನಗಳಲ್ಲಿ ವೈದ್ಯರು ಸನ್ಮಾನ್ಯ ಹಿಪೊಕ್ರ್ಯಾಟಿಕ್‌ ಪ್ರತಿಜ್ಞೆಯಲ್ಲಿ ಹೇಳಲ್ಪಟ್ಟಿರುವ ಮೌಲ್ಯಗಳನ್ನು ಅವಲಂಬಿಸಿದ್ದಾರೆ. ಅದು ಅಂಶಿಕವಾಗಿ ಹೇಳುವುದು: “ನಾನು ಯಾರಿಗೂ, ಅವನು ಬೇಡಿಕೊಂಡರೂ ಮಾರಕ ಔಷಧಿಯನ್ನು ಕೊಡೆನು, ಆ ಉದ್ದೇಶಕ್ಕಾಗಿ ಸಲಹೆಯನ್ನೂ ನೀಡೆನು, ಮತ್ತು ಯಾವ ಸ್ತ್ರೀಗೂ ನಾಶಕಾರಕವಾದ ಔಷಧ ಉರುಳೆಯನ್ನು ನಾನು ಕೊಡೆನು, ಆದರೆ ನಾನು ನನ್ನ ಕಲೆಯನ್ನು ನಿರ್ದೋಷವಾಗಿ ಮತ್ತು ಪವಿತ್ರವಾಗಿ ಇಡುವೆನು.”

ಗರ್ಭದಲ್ಲಿರುವ ಜೀವವನ್ನು ಕೊನೆಗಾಣಿಸುವ ವೈದ್ಯರನ್ನು ಯಾವ ನೈತಿಕ ಹೋರಾಟಗಳು ಎದುರಿಸುತ್ತವೆ? ಡಾ. ಜಾರ್ಜ್‌ ಫ್ಲೆಷ್‌, ಅದನ್ನು ಹೀಗೆ ವರ್ಣಿಸುತ್ತಾರೆ: “ಹೊಸ ಪದವೀಧರ ಮತ್ತು ಸ್ಥಳವಾಸಿ ವೈದ್ಯನ ರೂಪದಲ್ಲಿ ನಾನು ಮಾಡಿದ ಪ್ರಥಮ ಗರ್ಭಪಾತಗಳು ನನಗೆ ಯಾವ ಭಾವಾತ್ಮಕ ವ್ಯಥೆಯನ್ನೂ ತರಲಿಲ್ಲ. . . . ನನ್ನ ಅಸಂತೃಪ್ತಿ, ನಾನು ನೂರಾರು ಗರ್ಭಪಾತಗಳನ್ನು ಮಾಡಿದ ಬಳಿಕ ಆರಂಭವಾಯಿತು. . . . ನಾನೇಕೆ ಬದಲಾದೆನು? ನನ್ನ ವೈದ್ಯಕೀಯ ವೃತ್ತಿಯ ಆರಂಭದಲ್ಲಿ, ಒಂದು ವಿವಾಹಿತ ಜೋಡಿ ನನ್ನ ಬಳಿಗೆ ಬಂದು ಒಂದು ಗರ್ಭಪಾತ ಮಾಡಬೇಕೆಂದು ಕೇಳಿಕೊಂಡಿತು. ರೋಗಿಯ ಗರ್ಭಕಂಠವು ಗಡುಸಾಗಿದ್ದುದರಿಂದ, ಅದನ್ನು ವಿಸ್ತರಿಸಿ ಗರ್ಭಪಾತಮಾಡಲು ಅಶಕ್ತನಾದೆ. ಆಕೆ ಒಂದು ವಾರಾನಂತರ, ಆಕೆಯ ಗರ್ಭಕಂಠವು ಹೆಚ್ಚು ಮೃದುವಾಗಿರುವಾಗ ಬರುವಂತೆ ಕೇಳಿಕೊಂಡೆ. ಆ ದಂಪತಿಗಳು ಬಂದು ತಾವು ಮನಸ್ಸು ಬದಲಾಯಿಸಿದ್ದೇವೆಂದು ಹೇಳಿದರು. ಏಳು ತಿಂಗಳುಗಳ ಬಳಿಕ ನಾನು ಅವರ ಮಗುವಿನ ಹೆರಿಗೆ ಮಾಡಿಸಿದೆ.

“ವರ್ಷಗಳಾನಂತರ, ನಾನು ಪುಟ್ಟ ಜೆಫ್ರಿಯೊಂದಿಗೆ ಟೆನಿಸ್‌ ಕ್ಲಬ್ಬಿನ ಈಜುಕೊಳದಲ್ಲಿ ಆಡಿದೆ. ಅವನ ಹೆತ್ತವರೂ ನಾನು ಅದರ ಸದಸ್ಯರಾಗಿದ್ದೆವು. ಅವನು ಸಂತುಷ್ಟನೂ ಸುಂದರನೂ ಆಗಿದ್ದ. ಜೆಫ್ರಿಯ ಜೀವ ಸಾಧ್ಯತೆಯನ್ನು ಕೊನೆಗಾಣಿಸಲು ಕೇವಲ ಒಂದು ಲಾಕ್ಷಣಿಕ ವಿಘ್ನವು ನನ್ನನ್ನು ತಡೆಯಿತೆಂಬ ಯೋಚನೆಯಿಂದ ನಾನು ಗಾಬರಿಗೊಂಡೆ. . . . ಬೆಳೆದಿರುವ ಒಂದು ಭ್ರೂಣವನ್ನು, ಕೇವಲ ತಾಯಿಯ ಬೇಡಿಕೆಯಿಂದ ಹರಿದು ಬಿಡುವುದು, ಸಮಾಜವು ಅನುಮತಿಸಬಾರದಾದ ನೀತಿಭ್ರಷ್ಟತೆಯ ಒಂದು ವರ್ತನೆಯಾಗಿದೆ ಎಂದು ನಂಬುತ್ತೇನೆ.”

ಗರ್ಭಪಾತದಲ್ಲಿ ನೆರವಾಗುವುದನ್ನು ನಿಲ್ಲಿಸಿದ ಒಬ್ಬಾಕೆ ನರ್ಸ್‌, ಒಂದು ಗರ್ಭಪಾತ ಚಿಕಿತ್ಸಾಲಯದಲ್ಲಿ ತನ್ನ ಕೆಲಸದ ಕುರಿತು ಹೇಳಿದ್ದು: “ನಮ್ಮ ಕೆಲಸಗಳಲ್ಲಿ ಒಂದು, ಅಂಗಗಳನ್ನು ಲೆಕ್ಕ ಮಾಡುವುದು ಆಗಿತ್ತು. . . . ಒಬ್ಬ ಹುಡುಗಿ ತನ್ನ ಗರ್ಭಕೋಶದಲ್ಲಿ ಮಗುವಿನ ತುಂಡುಗಳುಳ್ಳವಳಾಗಿ ಮನೆಗೆ ಹೋಗುವಲ್ಲಿ, ಗುರುತರವಾದ ಸಮಸ್ಯೆಗಳು ಬರಸಾಧ್ಯವಿದೆ. ನಾನು ಆ ಅಂಗಗಳನ್ನು ತೆಗೆದುಕೊಂಡು, ಎರಡು ತೋಳುಗಳು, ಎರಡು ಕಾಲುಗಳು, ಒಂದು ಮುಂಡ, ಒಂದು ರುಂಡ ಇದೆಯೊ ಎಂದು ಖಾತ್ರಿಮಾಡಲು ಪರೀಕ್ಷಿಸುತ್ತಿದ್ದೆ. . . . ನನಗೆ ನಾಲ್ಕು ಮಕ್ಕಳಿದ್ದಾರೆ. . . . ನನ್ನ ವೃತ್ತಿಪರ ಜೀವನ ಮತ್ತು ವ್ಯಕ್ತಿಪರ ಜೀವನದ ಮಧ್ಯೆ ನನಗೆ ಸಂಧಾನ ಮಾಡಲು ಸಾಧ್ಯವಾಗದಷ್ಟು ದೊಡ್ಡ ತಿಕ್ಕಾಟವಿತ್ತು. . . .ಗರ್ಭಪಾತ ಒಂದು ಕಷ್ಟಕರವಾದ ವ್ಯಾಪಾರ.”

[ಪುಟ 7 ರಲ್ಲಿರುವ ಚಿತ್ರ]

ಗಂಡು ಮಕ್ಕಳು ಇಷ್ಟವಾಗಿರುವ ಏಷ್ಯದಲ್ಲಿ ವೈದ್ಯರು ಸಾವಿರಾರು ಹೆಣ್ಣುಭ್ರೂಣಗಳ ಗರ್ಭಪಾತಗಳನ್ನು ಮಾಡುತ್ತಾರೆ

[ಕೃಪೆ]

Photo: Jean-Luc Bitton/Sipa Press

[ಪುಟ 8 ರಲ್ಲಿರುವ ಚಿತ್ರ]

ಗರ್ಭಪಾತ ವಿರುದ್ಧ ಪ್ರದರ್ಶನದಲ್ಲಿ ವಾರ್ತಾ ವರದಿಗಾರನು ಶಾಸನಬದ್ಧವಾಗಿ ಗರ್ಭಪಾತ ಮಾಡಿಸಿದ 20-ವಾರಗಳ ಭ್ರೂಣದ ಫೋಟೊ ಹಿಡಿಯುತ್ತಾನೆ

[ಕೃಪೆ]

Photo: Nina Berman/Sipa Press

[ಪುಟ 8 ರಲ್ಲಿರುವ ಚಿತ್ರ]

ಅಮೆರಿಕದ ವಾಷಿಂಗ್ಟನ್‌ ಡಿ.ಸಿ., ಯಲ್ಲಿ ಗರ್ಭಪಾತದ ಪರವಾದ ಪ್ರದರ್ಶನ

[ಕೃಪೆ]

Photo: Rose Marston/Sipa Press

[ಪುಟ 9 ರಲ್ಲಿರುವ ಚಿತ್ರ]

ಅಮೆರಿಕದಲ್ಲಿ, ಗರ್ಭಪಾತವನ್ನು ಕೋರುವ 5ರಲ್ಲಿ 4 ಸ್ತ್ರೀಯರು ಅವಿವಾಹಿತೆಯರು

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ