ಬೈಬಲಿನ ದೃಷ್ಟಿಕೋನ
ನಿಮ್ಮ ಮನಸಾಕ್ಷಿಯು ನಿಮ್ಮ ಮಾರ್ಗದರ್ಶಕನಾಗುವಂತೆ ನೀವು ಬಿಡಬೇಕೋ?
ನೀವೊಂದು ನಿಬಿಡವಾದ ರಸ್ತೆಯಲ್ಲಿ ನಡೆಯುತ್ತಿರುವಾಗ, ಅರಿವಿಲ್ಲದೇ ಒಂದು ಹಣದ ಕಂತೆಯನ್ನು ಬೀಳಿಸಿದ ಅಂದವಾಗಿ ಅಲಂಕರಿಸಿಕೊಂಡ ಸ್ತ್ರೀಯನ್ನು ನೀವು ಹಾದು ಹೋಗುತ್ತೀರಿ. ನೀವು ಅದನ್ನು ಆರಿಸಿಕೊಳ್ಳಲು ಬಗ್ಗುತ್ತಿರುವಾಗ, ಅವಳು ವೇಗವಾಗಿ ಒಂದು ಮೋಟಾರು ಬಂಡಿಯ ಒಳಗೆ ಹೆಜ್ಜೆಗಳನ್ನಿಡುವುದನ್ನು ನೀವು ನೋಡುತ್ತೀರಿ. ನೀವು ಏನು ಮಾಡುತ್ತೀರಿ? ಅವಳ ಗಮನ ಸೆಳೆಯಲು ಗಟ್ಟಿಯಾಗಿ ಕೂಗುವಿರೋ ಅಥವಾ ಕಂತೆಯನ್ನು ನಿಮ್ಮ ಜೇಬಿನೊಳಗೆ ತುಂಬುವಿರೋ?
ಇದಕ್ಕೆ ಉತ್ತರವು ನಿಮ್ಮ ಮನಸ್ಸಾಕ್ಷಿಯ ಮೇಲೆ ಹೊಂದಿಕೊಂಡಿದೆ. ನೀವೇನು ಮಾಡುವಂತೆ ಅದು ಹೇಳಬಹುದು? ಹೆಚ್ಚು ಪ್ರಾಮುಖ್ಯವಾಗಿ, ಅದು ನಿಮಗೆ ಏನನ್ನು ಹೇಳುತ್ತದೋ ಅದನ್ನು ನೀವು ನಂಬುತ್ತೀರೋ? ನಿಮ್ಮ ಮನಸ್ಸಾಕ್ಷಿಯು ನಿಮ್ಮ ಮಾರ್ಗದರ್ಶಕನಾಗುವಂತೆ ನೀವು ಸುರಕ್ಷಿತವಾಗಿ ಬಿಡಬಲ್ಲಿರೋ?
ನಿಮ್ಮ ಮನಸ್ಸಾಕ್ಷಿಯು ಏನಾಗಿದೆ
ಯಾವುದು ಸರಿ ಮತ್ತು ತಪ್ಪು, ಸಮಂಜಸ ಮತ್ತು ಅಸಮಂಜಸ, ನೈತಿಕ ಮತ್ತು ಅನೈತಿಕವಾಗಿದೆ ಎಂಬುದರ ಕುರಿತಾದ ಒಂದು ಸ್ವಾಭಾವಿಕ ಪ್ರಜ್ಞೆಯಾಗಿ ಮನಸ್ಸಾಕ್ಷಿಯು ವರ್ಣಿಸಲ್ಪಟ್ಟಿದೆ. ಮನಸ್ಸಾಕ್ಷಿಯು ಕಾರ್ಯನಡಿಸುವ ರೀತಿಯನ್ನು ಬೈಬಲ್ ರೋಮಾಪುರ 2:14, 15ರಲ್ಲಿ ವಿವರಿಸುತ್ತದೆ: “ಧರ್ಮಶಾಸ್ತ್ರವಿಲ್ಲದ ಅನ್ಯಜನರು ಸ್ವಾಭಾವಿಕವಾಗಿ ಧರ್ಮಶಾಸ್ತ್ರದಲ್ಲಿ ಹೇಳಿದಂತೆ ನಡೆದರೆ ಅವರು ಧರ್ಮಶಾಸ್ತ್ರವಿಲ್ಲದವರಾಗಿದ್ದರೂ ತಾವೇ ತಮಗೆ ಧರ್ಮಪ್ರಮಾಣವಾಗಿದ್ದಾರೆ; ಹೇಗಂದರೆ ಅವರು ಧರ್ಮಶಾಸ್ತ್ರದ ಮುಖ್ಯ ತಾತ್ಪರ್ಯ ತಮ್ಮ ಹೃದಯದಲ್ಲಿ ಬರೆದದೆ ಎಂಬದನ್ನು ತೋರ್ಪಡಿಸುತ್ತಾರೆ. ಇದಕ್ಕೆ ಅವರ ಮನಸ್ಸು ಸಹ ಸಾಕ್ಷಿ ನುಡಿಯುತ್ತದೆ; ಅವರ ಯೋಚನೆಗಳು ವಾದಿಪ್ರತಿವಾದಿಗಳಂತೆ—ಇದು ತಪ್ಪೆಂದು ತಪ್ಪಲ್ಲವೆಂದು ಸೂಚಿಸುತ್ತವೆ.” ಹೀಗೆ, ನೀವು ಪರಿಸ್ಥಿತಿಗಳನ್ನು ಮೌಲ್ಯೀಕರಿಸಲು, ಯೋಗ್ಯವಾದ ಆಯ್ಕೆಗಳನ್ನು ಮಾಡಲು, ಮತ್ತು ನೀವು ಮಾಡಿದ ಆಯ್ಕೆಗಳಿಂದ ಸ್ವತಃ ನಿಮ್ಮನ್ನು ತೀರ್ಪುಮಾಡಿಕೊಳ್ಳಲು ಸಮರ್ಥರನ್ನಾಗಿ ಮಾಡುವಂತೆ ನಿಮ್ಮ ಮನಸ್ಸಾಕ್ಷಿಯು ರಚಿಸಲ್ಪಟ್ಟಿದೆ. ಆದರೆ ನೀವು ಅದನ್ನು ನೆಚ್ಚಸಾಧ್ಯವೋ?
ಉತ್ತರವು ಅವಲಂಬಿತವಾಗಿದೆ. ಕಟ್ಟಕಡೆಗೂ, ಅಪಮಾರ್ಗಿಯಾದ ಮನಸ್ಸಾಕ್ಷಿಯು ಒಬ್ಬನನ್ನು ತಪ್ಪು ನಡತೆಗೆ ಮುನ್ನಡೆಸಬಲ್ಲದು ಎಂಬುದನ್ನು ರುಜುಪಡಿಸಲು ಹೇರಳವಾದ ಪುರಾವೆಯು ಅಲ್ಲಿದೆ. ವಾಸ್ತವವೇನಂದರೆ ಒಬ್ಬನ ಮನಸ್ಸಾಕ್ಷಿಯು ನಿರ್ದಿಷ್ಟವಾದ ನಡತೆಯನ್ನು ಸಮ್ಮತಿಸುವುದಾದರೆ ಆ ನಡತೆಯನ್ನು ದೇವರು ಮನ್ನಿಸುತ್ತಾನೆಂಬದರಲ್ಲಿ ಯಾವುದೇ ಖಾತ್ರಿಯಿಲ್ಲ. ಉದಾಹರಣೆಗೆ, ತಾನು ಒಬ್ಬ ಕ್ರೈಸ್ತನಾಗಿ ಪರಿವರ್ತನೆಯಾಗುವ ಮೊದಲು, ತಾರ್ಸದ ಸೌಲನು ಕ್ರೈಸ್ತರನ್ನು ಹಿಂಸಿಸುವುದರಲ್ಲಿ ಮುಂದಾಳುತನವನ್ನು ವಹಿಸಿದ್ದನು. ಕ್ರೈಸ್ತ ಹುತಾತ್ಮನಾದ ಸೆಫ್ತನನ ಕೊಲೆಯಲ್ಲಿ ಆತನು ಸಮ್ಮತಿಕೊಡುವವನೂ, ಮತ್ತು ಶಾಮೀಲಾಗಿರುವವನೂ ಆಗಿದ್ದನು. ಇದೆಲ್ಲದರಲ್ಲಿಯೂ, ಆತನ ಮನಸ್ಸಾಕ್ಷಿಯು ಆತನನ್ನು ಖಂಡಿಸಲಿಲ್ಲ.—ಅ. ಕೃತ್ಯಗಳು 7:58, 59; ಗಲಾತ್ಯ 1:13, 14; 1 ತಿಮೊಥೆಯ 1:12-16.
ಎರಡನೆಯ ಲೋಕಯುದ್ಧದ ಸಮಯದಲ್ಲಿ ನಾಜಿ ಜರ್ಮನಿಯಲ್ಲಿ, ಅನೇಕ ಎಸ್ಎಸ್ (ನಾಜಿ ಪೊಲೀಸರು) ಸೈನ್ಯದಳಗಳು ಹಿಟ್ಲರನ ಕಾನ್ಸಂಟ್ರೇಷನ್ ಶಿಬಿರಗಳಲ್ಲಿ ಲಕ್ಷಾಂತರ ಮಂದಿಯ ಮೇಲೆ ಚಿತ್ರಹಿಂಸೆ ಮತ್ತು ಮರಣವನ್ನು ಹೇರುವಂತೆ ಆದೇಶಿಸಲ್ಪಟ್ಟಾಗ ಅವರು ಆ ಕ್ಷಣದಲ್ಲಿ ಆಜ್ಞೆಗಳನ್ನು ಪಾಲಿಸುತ್ತಿದ್ದರು. ಅವರು ಅದನ್ನು ಮಾಡುವಂತೆ ಅವರ ಮನಸ್ಸಾಕ್ಷಿಗಳು ಸಮ್ಮತಿಸಿದವು. ಆದರೆ ಲೋಕದ ನ್ಯಾಯತೀರ್ಪು—ಹೆಚ್ಚು ಪ್ರಾಮುಖ್ಯವಾಗಿ ದೇವರ ನ್ಯಾಯತೀರ್ಪು—ಅವರ ಕೃತ್ಯಗಳನ್ನು ಮನ್ನಿಸಲಿಲ್ಲ. ಯುಕ್ತವಾಗಿಯೇ, ಅವರು ಖಂಡಿಸಲ್ಪಟ್ಟರು.
ಅದು ಯಾಕೆ ಯೋಗ್ಯವಾಗಿ ಕೆಲಸಮಾಡುವುದಿಲ್ಲ?
ದೇವರಿಂದ ಸೃಷ್ಟಿಮಾಡಲ್ಪಟ್ಟ ಯಾವುದಾದರೂ ಯಾಕೆ ಯೋಗ್ಯವಾಗಿ ಕೆಲಸ ಮಾಡುವುದಿಲ್ಲ? ಬೈಬಲು ವಿವರಿಸುತ್ತದೆ. ಆದಾಮನ ಅವಿಧೇಯತೆಯ ಮೂಲಕ ಮಾನವನು ಪಾಪದಲ್ಲಿ ಬಿದ್ದಿರುವದರಿಂದ, ಮಾನವರು ಅದರ ಅಭಿಲಾಷೆಗಳಿಗೆ ವಿಧೇಯರಾಗುವಂತೆ ಒತ್ತಾಯಿಸುತ್ತಾ “ಪಾಪವು ರಾಜನಂತೆ ಆಳುತ್ತದೆಂದು” ಹೇಳಲಾಗಿದೆ. (ರೋಮಾಪುರ 5:12; 6:12) ಆರಂಭದಲ್ಲಿ ಪರಿಪೂರ್ಣವಾಗಿದ್ದ ಮನುಷ್ಯನ ಮನಸ್ಸಾಕ್ಷಿಯು, ವಕ್ರವಾಗಿ ಬದಲಾಯಿತು; ಪಾಪದ ಪ್ರೇರಕ ಶಕ್ತಿಯು ಈಗ ಅದರೊಂದಿಗೆ ಸ್ಪರ್ಧಿಸುತ್ತದೆ. (ರೋಮಾಪುರ 7:18-20) ನಮಗೆ ಚೆನ್ನಾಗಿ ತಿಳಿದಿರುವ ಸಂಘರ್ಷಣೆಯನ್ನು ಇದು ಉಂಟುಮಾಡುತ್ತದೆ: “ಹೀಗಿರಲಾಗಿ ಒಳ್ಳೇದನ್ನು ಮಾಡಬೇಕೆಂದಿರುವ ನನಗೆ ಕೆಟ್ಟದ್ದೇ ಸಿದ್ಧವಾಗಿದೆಯೆಂಬ ನಿಯಮ ನನಗೆ ಕಾಣಬರುತ್ತದೆ. . . . ಅದು ನನ್ನ ಮನಸ್ಸಿನಲ್ಲಿರುವ ನಿಯಮಕ್ಕೆ ವಿರುದ್ಧವಾಗಿ ಕಾದಾಡಿ ನನ್ನನ್ನು ಸೆರೆಹಿಡಿದು ನನ್ನ ಅಂಗಗಳಲ್ಲಿರುವ ಪಾಪದ ನಿಯಮಕ್ಕೆ ವಶಮಾಡುವಂಥದಾಗಿದೆ.”—ರೋಮಾಪುರ 7:21-23.
ಬಾಧ್ಯತೆಯಾಗಿ ಬಂದಿರುವ ನ್ಯೂನತೆಗಳೊಂದಿಗೆ, ಬಾಹ್ಯ ಪ್ರಚೋದನೆಗಳಿಂದ ಕೂಡ ನಮ್ಮ ಮನಸ್ಸಾಕ್ಷಿಗಳು ಬಾಧಿಸಲ್ಪಡುತ್ತವೆ. ಉದಾಹರಣೆಗೆ, ಸಮವಯಸ್ಕರ ಒತ್ತಡವು ಈ ಮೊದಲೇ ಪ್ರಸ್ತಾಪಿಸಲಾದ ನಾಜಿ ಎಸ್ಎಸ್ ಸೈನ್ಯದಳಗಳ ಮನಸ್ಸಾಕ್ಷಿಗಳನ್ನು ನಿಗ್ರಹಿಸಿತು ಅಥವಾ ವಿಕೃತಗೊಳಿಸಿತು ಎಂಬುದು ವಿದಿತ. (ಹೋಲಿಸಿ ಜ್ಞಾನೋಕ್ತಿ 29:25.) ಇದಲ್ಲದೆ, ಟೀವೀಯ ಮತ್ತು ಸಾಹಿತ್ಯಗಳ ಹಾಗೂ ಚಲನಚಿತ್ರಗಳ ಮೂಲಕ ಅನೈತಿಕತೆ ಮತ್ತು ಬಲಾತ್ಕಾರಗಳಂತಹ ಅಹಿತಕರವಾದ ವಿಷಯಗಳಿಂದ ಮನಸ್ಸನ್ನು ತುಂಬಿಸುವುದು, ತದ್ರೀತಿಯ ಪರಿಣಾಮವನ್ನು ಉಂಟುಮಾಡಿದೆ. ಅಂತಹ ವಿಷಯಗಳಿಗೆ ನಾವು ಕ್ರಮವಾಗಿ ಆಸ್ಪದ ನೀಡುತ್ತಿರುವುದಾದರೆ, ಅವು ಕ್ರಮೇಣವಾಗಿ ಅಷ್ಟೊಂದು ಕೆಟ್ಟವುಗಳಾಗಿ ಕಂಡುಬರುವುದಿಲ್ಲ, ಮತ್ತು ನಮ್ಮ ಮನಸ್ಸಾಕ್ಷಿಯು ದುರ್ಬಲಗೊಳ್ಳುತ್ತದೆ. ಅದನ್ನು ಭಿನ್ನವಾಗಿ ಹೇಳುವಲ್ಲಿ, “ದುಸ್ಸಹವಾಸವು ಸದಾಚಾರವನ್ನು ಕೆಡಿಸುತ್ತದೆ.”—1 ಕೊರಿಂಥ 15:33.
ದೇವರ ನಿಯಮಗಳ ಕುರಿತು ತಿಳಿಯಲು ಮತ್ತು ಗೌರವಿಸಲು ವ್ಯಕ್ತಿಯೊಬ್ಬನು ಶಿಕ್ಷಿತನಾಗಿದ್ದಲ್ಲಿ, ಅವನ ಮನಸ್ಸಾಕ್ಷಿಯು ಆತನು ಶಿಕ್ಷಿತನಾಗಿರದೆ ಇರುವುದಕ್ಕಿಂತ ಹೆಚ್ಚು ನಂಬಲರ್ಹವಾದ ಮಾರ್ಗದರ್ಶಕವಾಗಿರುವುದು ನಿಸ್ಸಂಶಯ. ಆದರೂ, ದೇವರ ಮಾರ್ಗಗಳ ಕುರಿತು ತಿಳಿವಳಿಕೆಯುಳ್ಳ ಮತ್ತು ಆಳವಾದ ಗಣ್ಯತೆಯುಳ್ಳ ಒಬ್ಬ ವ್ಯಕ್ತಿಯೂ ಸಹ ಬಾಧ್ಯತೆಯಾಗಿ ಬಂದ ಪಾಪ ಮತ್ತು ಅಪರಿಪೂರ್ಣತೆಯಿಂದ ಮತ್ತು, ಪ್ರಾಯಶಃ ಬಾಹ್ಯ ಪ್ರಭಾವಗಳಿಂದ, ಆತನ ಮನಸ್ಸಾಕ್ಷಿಯು ನಂಬಲರ್ಹವಾದ ಮಾರ್ಗದರ್ಶಕವಾಗಿಲ್ಲದೇ ಇರುವುದನ್ನು ಕೆಲವು ಸಂದರ್ಭಗಳಲ್ಲಿ ಇನ್ನೂ ಕಂಡುಕೊಳ್ಳಬಹುದು.
ನಾವು ಏನು ಮಾಡಬಲ್ಲೆವು?
ಯೋಗ್ಯವಾದ ನಿಯಮಗಳಿಗೆ ಹೆಚ್ಚು ಸೂಕ್ಷ್ಮಗ್ರಾಹಿಗಳಾಗುವಂತೆ ಮಾಡಲು, ಮನಸ್ಸಾಕ್ಷಿಯೊಂದನ್ನು ಬದಲಾಯಿಸಲು ಸಾಧ್ಯವೋ? ಹೌದು. “ಜ್ಞಾನೇಂದ್ರಿಯಗಳನ್ನು ಸಾಧನೆಯಿಂದ ಶಿಕ್ಷಿಸಿಕೊಂಡು ಇದು ಒಳ್ಳೇದು ಮತ್ತು ಅದು ಕೆಟ್ಟದ್ದು ಎಂಬ ಬೇಧವನ್ನು,” ಅವರು ತಿಳಿದವರಾಗಿರಬೇಕೆಂದು ಪೌಲನು ಕ್ರೈಸ್ತರಿಗೆ ಸಲಹೆಯನ್ನಿತ್ತನು. (ಇಬ್ರಿಯ 5:11-14) ಅಂಥ ಉಪಯೋಗ ಮತ್ತು ತರಬೇತಿಯಲ್ಲಿ, ಬೈಬಲನ್ನು ಅಭ್ಯಾಸ ಮಾಡುವುದು, ಯೇಸು ಕ್ರಿಸ್ತನಿಂದ ನಮಗಾಗಿ ಇಡಲ್ಪಟ್ಟ ಪರಿಪೂರ್ಣ ಮಾದರಿಗೆ ವಿಶೇಷವಾದ ಗಮನವನ್ನು ನೀಡುವದು ಒಳಗೊಂಡಿದೆ. (1 ಪೇತ್ರ 2:21, 22) ತದನಂತರ, ನಿರ್ಣಯಗಳನ್ನು ಮಾಡುವುದರಲ್ಲಿ ನಮ್ಮ ಗ್ರಹಣ ಶಕ್ತಿಗಳನ್ನು ನಾವು ಉಪಯೋಗಿಸುವಾಗ, ನಮ್ಮ ಮನಸ್ಸಾಕ್ಷಿಗಳು ಹೆಚ್ಚೆಚ್ಚಾಗಿ ನಮ್ಮನ್ನು ಕೆಟ್ಟ ಆಲೋಚನೆಗಳು ಮತ್ತು ಕೃತ್ಯಗಳಿಂದ ದೂರನಡೆಸುತ್ತವೆ ಮತ್ತು ಯಾವುದು ಯೋಗ್ಯ ಮತ್ತು ಗೌರವಾರ್ಹವಾಗಿದೆಯೋ ಅದನ್ನು ಮಾಡುವಂತೆ ನಮ್ಮನ್ನು ಉತ್ತೇಜಿಸುತ್ತದೆ.
ಹಾಗಿದ್ದರೂ, ನಾವು ಎಂದಿಗೂ ಸ್ವನೀತಿಯುಳ್ಳವರಾಗಬಾರದು ಅಥವಾ ಏನಾದರೂ “ನನ್ನ ಮನಸ್ಸಾಕ್ಷಿಯನ್ನು ಆತಂಕಪಡಿಸದಿರುವುದಾದರೆ,” ಅದೆಲ್ಲವೂ ಸರಿಯಾಗಿದೆ ಎಂದು ಹೇಳಬಾರದು. ಅಪರಿಪೂರ್ಣ ಮಾನವರಲ್ಲಿ ಮನಸ್ಸಾಕ್ಷಿಯ ಯೋಗ್ಯವಾದ ಮತ್ತು ಸುರಕ್ಷಿತವಾದ ಉಪಯೋಗವು ಒಬ್ಬ ಕಾರಿನ ಚಾಲಕನ ಜಾಗರೂಕವಾದ ಅಭ್ಯಾಸಗಳ ಮೂಲಕ ದೃಷ್ಟಾಂತಿಸಲ್ಪಟ್ಟಿದೆ. ಚಾಲಕನೊಬ್ಬನು ಕಿರುದಾರಿಗಳನ್ನು ಬದಲಾಯಿಸಲು ಬಯಸುವಾಗ, ಅವನು ಸಹಜ ಪ್ರವೃತ್ತಿಯಿಂದ ಹಿಂಭಾಗದ ಪ್ರತಿಬಿಂಬಿಸುವ ದರ್ಪಣದಿಂದ ಮೊದಲಾಗಿ ದೃಷ್ಟಿ ಹಾಯಿಸುತ್ತಾನೆ. ಅವನು ಕಾರೊಂದನ್ನು ನೋಡುವುದಾದರೆ, ಇನ್ನೊಂದು ಕಿರುದಾರಿಗೆ ಚಲಿಸುವುದು ಸುರಕ್ಷಿತವಾಗಿರುವುದಿಲ್ಲ ಎಂದು ಅವನು ತಿಳಿದಿದ್ದಾನೆ. ಆದರೂ, ಅವನು ಏನನ್ನೂ ನೋಡದಿದ್ದಾಗ್ಯೂ, ನಿರ್ದಿಷ್ಟವಾದ ಕುರುಡುದಾಣಗಳು ಅಲ್ಲಿವೆ ಎಂದು ವಿವೇಕವುಳ್ಳ ಚಾಲಕನು ಗ್ರಹಿಸುತ್ತಾನೆ—ಎಲ್ಲಾ ಸಮಯಗಳಲ್ಲಿ ದರ್ಪಣವನ್ನೇ ಅವಲಂಬಿಸಿಕೊಂಡು ಎಲ್ಲವನ್ನೂ ನೋಡಸಾಧ್ಯವಿಲ್ಲ. ಆದುದರಿಂದ, ಅವನು ಕೇವಲ ದರ್ಪಣಲ್ಲಿಯೇ ನೋಡುವುದಿಲ್ಲ. ಅವನು ಚಾಲನೆಯನ್ನು ಮಾಡುವ ಮುನ್ನ ಕಿರುದಾರಿಯು ಸರಾಗವಾಗಿದೆ ಎಂದು ದೃಢಪಡಿಸಿಕೊಳ್ಳಲು ತನ್ನ ತಲೆಯನ್ನು ತಿರುಗಿಸಿ ನೋಡುತ್ತಾನೆ. ಮನಸ್ಸಾಕ್ಷಿಯ ಕುರಿತು ಇದು ಸತ್ಯವಾಗಿದೆ. ಅದು ನಿಮ್ಮನ್ನು ಎಚ್ಚರಿಸುವುದಾದರೆ, ಅದನ್ನು ಪರಿಪಾಲಿಸಿರಿ! ಆದರೆ ಆರಂಭದಲ್ಲಿ ಅದು ಅಪಾಯದ ಕರೆಯನ್ನು ಬಾರಿಸದಿದ್ದರೂ, ವಿವೇಕವುಳ್ಳ ಮೋಟಾರು ಚಾಲಕನಂತಿರ್ರಿ—ಅಲ್ಲಿ ಯಾವುದೇ ಅಪಾಯವಿಲ್ಲವೆಂದು ದೃಢಪಡಿಸಿಕೊಳ್ಳಲು ಇನ್ನೂ ಪರಿಶೀಲಿಸಿರಿ.
ದೇವರ ಆಲೋಚನೆಯೊಂದಿಗೆ ಅದು ಹೊಂದಿಕೊಳ್ಳುತ್ತದೊ ಇಲ್ಲವೊ ಎಂಬದನ್ನು ನೋಡಲು ನಿಮ್ಮ ಆಲೋಚನೆಯನ್ನು ಪರೀಕ್ಷಿಸಿರಿ. ನಿಮ್ಮ ಮನಸ್ಸಾಕ್ಷಿಯನ್ನು ನಿರ್ಧರಿಸಲು ಆತನ ವಾಕ್ಯವನ್ನು ಒಂದು ಧ್ವನಿ ಫಲಕವಾಗಿ ಉಪಯೋಗಿಸಿರಿ. ಜ್ಞಾನೋಕ್ತಿ 3:5, 6 ವಿವೇಕದಿಂದ ಹೇಳುವುದು: “ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು.”
ಆದುದರಿಂದ ನಿಮ್ಮ ಮನಸ್ಸಾಕ್ಷಿಗೆ ಕಿವಿಗೊಡುವುದು ವಿವೇಕವಾಗಿದೆ. ಆದರೆ ಆತನ ವಾಕ್ಯದಲ್ಲಿ ಪ್ರಕಟಿಸಲ್ಪಟ್ಟಂತೆ ದೇವರ ಚಿತ್ತಾನುಸಾರವಾಗಿ ನಾವು ಮಾಡುವುದೆಲ್ಲವನ್ನೂ ಹೋಲಿಸುವಾಗ ಅದು ಇನ್ನೂ ವಿವೇಕವುಳ್ಳದ್ದಾಗಿದೆ. ಆಗ ಮಾತ್ರ ನಾವು, “ನಮ್ಮ ಮನಸ್ಸಿನಿಂದ ಒಳ್ಳೇ ಸಾಕ್ಷಿಹೊಂದಿದ್ದೇವೆಂದು,” ಭರವಸದಿಂದ ಹೇಳಬಲ್ಲೆವು.—ಇಬ್ರಿಯ 13:18; 2 ಕೊರಿಂಥ 1:12. (g93 7/8)
[ಪುಟ 26 ರಲ್ಲಿರುವ ಚಿತ್ರ]
“ಸೆಯಂಟ್ ಪೌಲನ ಮತಾಂತರ”
[ಕೃಪೆ]
Painting by Caravaggio: Scala/Art Resource, N.Y.