ಮೂತ್ರಪಿಂಡ ಕಲ್ಲುಗಳು ಒಂದು ಪ್ರಾಚೀನ ರೋಗದ ಚಿಕಿತ್ಸೆ ನಡಸುವುದು
ಮೂತ್ರಪಿಂಡ ಕಲ್ಲುಗಳ ಮೂಲಕ ಬಾಧಿತನಾದವನೊಬ್ಬನ ಬಗ್ಗೆ ನೀವು ಕೇಳಿರುವುದು ಸಂಭವನೀಯ. ಅಮೆರಿಕದಲ್ಲಿ, ಪ್ರತಿ ವರ್ಷ ಸಾಧಾರಣ 3,00,000 ಮೂತ್ರಪಿಂಡ ಕಲ್ಲು ಬಾಧಿತರು ಆಸ್ಪತ್ರೆಗಳಿಗೆ ದಾಖಲಿಸಲ್ಪಡುತ್ತಾರೆ. ಮಗುವಿನ ಜನನಕ್ಕೆ ತುಲನಾತ್ಮಕವಾಗಿ, ಅದರ ನೋವು ಅತಿ ಯಾತನೆ ಕೊಡುವಂಥಾದ್ದಾಗಿರಬಲ್ಲುದು.
ಆಧುನಿಕ ಆಹಾರಕ್ರಮ ಯಾ ಜೀವನ ಶೈಲಿಯೊಂದಿಗೆ ಜತೆಗೂಡಿರಬಹುದಾದ, ಸಾಪೇಕ್ಷವಾಗಿ ಇತ್ತೀಚಿನ ಆರೋಗ್ಯ ಸಮಸ್ಯೆ ಎಂದು ಮೂತ್ರಪಿಂಡ ಕಲ್ಲುಗಳ ಬಗ್ಗೆ ಕೆಲವರು ಆಲೋಚಿಸುತ್ತಾರೆ. ಆದರೂ, ನಿಜತ್ವದಲ್ಲಿ, ಮೂತ್ರಾಂಗಗಳಲ್ಲಿನ ಕಲ್ಲುಗಳು ಶತಮಾನಗಳಿಂದ ಮಾನವಕುಲವನ್ನು ಬಾಧಿಸಿವೆ. ಸಾವಿರಾರು ವರುಷ ಪುರಾತನ ಐಗುಪ್ತದ ರಕ್ಷಿತ ಶವಗಳಲ್ಲಿಯೂ ಅವು ಕಂಡುಬಂದಿರುತ್ತವೆ.
ಮೂತ್ರದಲ್ಲಿನ ಖನಿಜ ಪದಾರ್ಥಗಳು ದ್ರವೀಕರಿಸಲ್ಪಟ್ಟು, ದೇಹದಿಂದ ಹೊರಹೋಗುವುದರ ಬದಲು, ಒತ್ತಾಗಿ ಸೇರುವ ಮತ್ತು ಬೆಳೆಯುವುದರ ಮೂಲಕ ಈ ಕಲ್ಲುಗಳು ವಿಕಸಿಸುತ್ತವೆ. ಅವು ವಿವಿಧ ಆಕಾರವನ್ನು ತಾಳುತ್ತವೆ ಮತ್ತು ಅನೇಕ ದ್ರವ್ಯಗಳಿಂದ ರಚಿತವಾಗಿರುತ್ತವೆ. ಕಿನ್ಲಿಕಲ್ ಸಿಂಪೋಜಿಯ ಹೇಳುವುದು: “ಅಮೆರಿಕದಲ್ಲಿ, ಎಲ್ಲಾ [ಮೂತ್ರಪಿಂಡ] ಕಲ್ಲುಗಳಲ್ಲಿನ ಸರಿಸುಮಾರಾಗಿ 75%ದಷ್ಟು ಕಲ್ಲುಗಳು ಮೂಲತಃ ಕ್ಯಾಲ್ಸಿಯಂ ಆಕ್ಸ್ಯಾಲೇಟ್ನಿಂದ ಮತ್ತು 5% ಶುದ್ಧ ಕ್ಯಾಲ್ಸಿಯಂ ಫಾಸ್ಫೇಟಿನಿಂದ ಸೇರಿ ನಿರ್ಮಿತಗೊಂಡಿವೆ.”
ಚಾಲ್ತಿಯಲ್ಲಿರುವಿಕೆ ಮತ್ತು ಕಾರಣಗಳು
ಒಂದು ವರದಿಗನುಸಾರ, ಉತ್ತರ ಅಮೆರಿಕದಲ್ಲಿ 10 ಸೇಕಡದಷ್ಟು ಪುರುಷರು ಮತ್ತು 5 ಸೇಕಡದಷ್ಟು ಹೆಂಗಸರು ಅವರ ಜೀವಮಾನದಲ್ಲಿ ಮೂತ್ರಪಿಂಡ ಕಲ್ಲನ್ನು ವಿಕಸಿಸುವರು. ಮತ್ತು ಪುನಃ ತಲೆದೋರುವ ಪ್ರಮಾಣವು ಹೆಚ್ಚಾಗಿದೆ. ಮೂತ್ರಪಿಂಡ ಕಲ್ಲುಗಳಿರುವ ಐವರಲ್ಲಿ ಒಬ್ಬ ವ್ಯಕ್ತಿಯು ಐದು ವರ್ಷದೊಳಗೆ ಮತ್ತೊಂದು ಕಲ್ಲನ್ನು ವಿಕಸಿಸುವನು.
ಕೆಲವರು ಮೂತ್ರಪಿಂಡ ಕಲ್ಲುಗಳನ್ನು ಪಡೆಯುವುದು ಮತ್ತು ಇತರರು ಪಡೆಯದೆ ಇರುವುದರ ಕಾರಣವು ಅನೇಕ ವರುಷಗಳಿಂದ ವೈದ್ಯರನ್ನು ಕಂಗೆಡಿಸಿದೆ. ಅನೇಕ ಕಾರಣಗಳಿಂದ ಕಲ್ಲುಗಳು ಉಂಟಾಗಬಲ್ಲವು. ಇವುಗಳಲ್ಲಿ ದೇಹದ ಜೀವದ್ರವ್ಯ ಪರಿಣಾಮದ ಅಸ್ವಸ್ಥತೆಗಳು, ರೋಗದ ಸೋಂಕು, ವಂಶೀಯ ಅಸ್ವಸ್ಥತೆಗಳು, ತೀವ್ರ ನಿರ್ಜಲತೆ, ಮತ್ತು ಪಥ್ಯ ಒಳಗೂಡಿವೆ.
ಎಂಬತ್ತು ಸೇಕಡದಷ್ಟು ಮೂತ್ರಪಿಂಡ ಕಲ್ಲುಗಳು ಮೂತ್ರ ವಿಸರ್ಜನೆಯ ಸಮಯದಲ್ಲಿ ಸಹಜವಾಗಿ ವರ್ಜಿಸಲ್ಪಡುತ್ತವೆ. ಅವುಗಳನ್ನು ವರ್ಜಿಸಲು ಸಹಾಯಿಸುವಂತೆ, ಬಹಳಷ್ಟು ನೀರನ್ನು ಕುಡಿಯುವಂತೆ ರೋಗಿಗಳು ಉತ್ತೇಜಿಸಲ್ಪಡುತ್ತಾರೆ. ಅಂಥ ಕಲ್ಲುಗಳು ಅನೇಕಬಾರಿ ಕಾಣಲಸಾಧ್ಯವಾದಷ್ಟು, ಸಾಪೇಕ್ಷವಾಗಿ ಸಣ್ಣದಾಗಿರುವುದಾದರೂ, ನೋವಾದರೋ ಮಹತ್ತಾಗಿರಬಹುದು. ಮೂತ್ರಾಂಗ ಪಥದ ಅಡಚಣೆ ಸಂಭವಿಸುವಲ್ಲಿ ಯಾ ಕಲ್ಲು ವಿಸರ್ಜಿಸಲ್ಪಡಲು ಅತಿ ದೊಡ್ಡದಾಗಿರುವಲ್ಲಿ (ಅವುಗಳು ಗಾಲ್ಫ್ ಚೆಂಡಿನಷ್ಟು ದೊಡ್ಡದಾಗಬಲ್ಲವು), ರೋಗಿಯ ಆರೋಗ್ಯವನ್ನು ಕಾಪಾಡಲು ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದೆ.
ಹೊಸ ಚಿಕಿತ್ಸೆಗಳು
ಸಾಧಾರಣ 1980ರ ವರೆಗೆ, ತಮ್ಮಷ್ಟಕ್ಕೆ ವಿಸರ್ಜಿಸಲ್ಪಡಲಾರದ ಮೂತ್ರಪಿಂಡ ಕಲ್ಲುಗಳನ್ನು ತೆಗೆಯಲು ದೊಡ್ಡ ಶಸ್ತ್ರಚಿಕಿತ್ಸೆಯ ಅಗತ್ಯವಿತ್ತು. ಮೂತ್ರಪಿಂಡದಲ್ಲಿ ಯಾ ಮೂತ್ರಾಂಗ ಪಥದಲ್ಲಿ ಸಿಕ್ಕಿಕೊಂಡ ಕಲ್ಲನ್ನು ತಲಪಲು, ಪಕ್ಕೆಯಲ್ಲಿ 30 ಸೆಂಟಿಮೀಟರ್ಗಳಷ್ಟು ವೇದನಮಯ ಕತ್ತರಿಕೆಯು ಮಾಡಲ್ಪಡುತ್ತಿತ್ತು. ಆಸ್ಪತ್ರೆಯಲ್ಲಿ ಎರಡು ವಾರಗಳ ಗುಣ ಹೊಂದುವ ಮತ್ತು ಮನೆಯಲ್ಲಿ ಸಾಧಾರಣ ಎರಡು ತಿಂಗಳ ಚೇತರಿಸಿಕೊಳ್ಳುವ ಅವಧಿಯು ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆಯನ್ನು ಅನುಸರಿಸುತ್ತಿತ್ತು. ಆದರೆ “ಇತ್ತೀಚಿನ ಯಂತ್ರಕಲಾಶಾಸ್ತ್ರದ ಪ್ರಗತಿಯೊಂದಿಗೆ, ತೆರೆದ ಶಸ್ತ್ರಚಿಕಿತ್ಸಾ ತೆಗೆಯುವಿಕೆಯ ಅಗತ್ಯವು ವಿರಳ,” ಎಂದು ವೈದ್ಯಕೀಯ ಪಠ್ಯಪುಸ್ತಕ ಕಾನ್ಸ್ ಕರೆಂಟ್ ತೆರಪಿ (1989) ಗಮನಿಸುತ್ತದೆ.
ಈಗ, ಜಟಿಲ ಕಲ್ಲುಗಳನ್ನು ಅಲ್ಪವೇ ಶಸ್ತ್ರಚಿಕಿತ್ಸೆಯ ಶಾಸ್ತ್ರತಂತ್ರವನ್ನು ಬಳಸುವ ಮೂಲಕ ತೆಗೆಯಬಹುದು. ಇಂದು ಹೆಚ್ಚು ಸಾಮಾನ್ಯವಾಗಿ ಬಳಸಲ್ಪಡುವ, ಎಕ್ಸ್ಟ್ರಕೊರ್ಪೊರಿಯಲ್ ಶಾಕ್ ವೇವ್ ಲಿತಾಟ್ರಿಪ್ಸಿ (ESWL) ಎಂದು ಕರೆಯಲ್ಪಡುವ ಇನ್ನೊಂದು ಶಾಸ್ತ್ರತಂತ್ರಕ್ಕೆ ಯಾವುದೇ ಶಸ್ತ್ರಚಿಕಿತ್ಸೆಯು ಬೇಕಾಗಿಲ್ಲ. ಈ ಹೊಸ ವೈದ್ಯಕೀಯ ನವೀನತೆಗಳನ್ನು ಉದಾಹರಿಸುತ್ತಾ ಕಾನ್ಸ್ ಕರೆಂಟ್ ತೆರಪಿ ಹೇಳುವುದು, ದೊಡ್ಡ ಶಸ್ತ್ರಚಿಕಿತ್ಸೆಯು “ಪ್ರಾಯಶಃ ಇಂದು ಎಲ್ಲ [ಮೂತ್ರಪಿಂಡ ಕಲ್ಲುಗಳಲ್ಲಿ] ಕೇವಲ ಒಂದು ಪ್ರತಿಶತದಷ್ಟನ್ನು ಮಾತ್ರ ತೆಗೆಯಲು ಕಾರಣವಾಗಿರುತ್ತದೆ.”
ಕನಿಷ್ಠ ಶಸ್ತ್ರಚಿಕಿತ್ಸೆಯ ತಂತ್ರ
ಕೇವಲ ಕನಿಷ್ಠ ಶಸ್ತ್ರಚಿಕಿತ್ಸೆಯನ್ನು ತೊಡಗಿಸುವ ತಂತ್ರವನ್ನು ಕೆಲವೊಮ್ಮೆ ಪರ್ಕ್ಯುಟೇನಿಯಸ್ ಅಲ್ಟಾಸ್ರೋನಿಕ್ ಲಿತಾಟ್ರಿಪ್ಸಿ ಎಂದು ಕರೆಯಲಾಗಿದೆ. “ಪರ್ಕ್ಯುಟೇನಿಯಸ್” ಅಂದರೆ “ಚರ್ಮದ ಮೂಲಕ” ಎಂದರ್ಥ, ಮತ್ತು “ಲಿತಾಟ್ರಿಪ್ಸಿ”ಯ ಅಕ್ಷರಶಃ ಅರ್ಥವು “ಸಣ್ಣ ಸಣ್ಣ ಚೂರುಗಳಾಗಿ ಒಡೆಯುವುದು” ಎಂದಾಗಿದೆ. ಅಗತ್ಯವಿರುವ ಒಂದೇ ಶಸ್ತ್ರಚಿಕಿತ್ಸೆಯು ಪಕ್ಕೆಯಲ್ಲಿ ಒಂದು ಸೆಂಟಿಮೀಟರಿನ ಕೊಯ್ತವಾಗಿದೆ. ಈ ತೆರೆಯುವಿಕೆಯ ಮೂಲಕ ಮೂತ್ರ ಪಿಂಡ ದರ್ಶಕ (ನೆಫ್ರೊಸ್ಕೋಪ್) ಎಂದು ಕರೆಯಲ್ಪಡುವ ಮೂತ್ರ ಕೋಶ ದರ್ಶಕದಂತಹ (ಸಿಸ್ಟೋಸ್ಕೋಪ್) ಉಪಕರಣವು ಒಳಸೇರಿಸಲ್ಪಡುತ್ತದೆ. ಮೂತ್ರಪಿಂಡದ ಒಳಭಾಗ ಮತ್ತು ನೋಯಿಸುವ ಕಲ್ಲನ್ನು ದರ್ಶಕದೊಳಗಿಂದ ನೋಡಬಹುದು.
ಕಲ್ಲು ಮೂತ್ರ ಪಿಂಡ ದರ್ಶಕದ ಮೂಲಕ ಹೊರತೆಗೆಯಲು ಅತಿ ದೊಡ್ಡದ್ದಾಗಿರುವಲ್ಲಿ, ಒಂದು ಅಲಸ್ಟ್ರೋನಿಕ್ ಅನ್ವೇಷಕವನ್ನು ದರ್ಶಕದ ದ್ವಾರದೊಳಗಿಂದ, ಹೀಗೆ ಮೂತ್ರಪಿಂಡದೊಳಗೆ ಹಾಯಿಸಲಾಗುತ್ತದೆ. ಅನಂತರ, ಕಲ್ಲನ್ನು ಯಾ ಕಲ್ಲುಗಳನ್ನು ಚೂರುಗೊಳಿಸಲು, ಅನ್ವೇಷಕವನ್ನು ಸೆಕಂಡಿಗೆ ಸರಿಸುಮಾರು 23,000ದಿಂದ 25,000ದಷ್ಟು ಕಂಪಿಸುವಂತೆ ಮಾಡುವ ಒಂದು ಅತೀವ ಶಬ್ದ ಉತ್ಪಾದಕ ಯಂತ್ರಕ್ಕೆ ಟೊಳ್ಳಾದ ಅನ್ವೇಷಕವು ಜೋಡಿಸಲ್ಪಡುತ್ತದೆ. ಅತೀವ ಶಬ್ದ ತರಂಗಗಳು ಅನ್ವೇಷಕವನ್ನು, ಅದು ಸಂಪರ್ಕಿಸುವ ಅತಿ ಗಟ್ಟಿಯಾದುದನ್ನು ಬಿಟ್ಟು ಎಲ್ಲಾ ಕಲ್ಲುಗಳನ್ನು ಚೂರಾಗಿಸುತ್ತಾ ಊರೆಸುತ್ತಿಗೆಯ ಹಾಗೆ ವರ್ತಿಸುವಂತೆ ಮಾಡುತ್ತದೆ.
ದರ್ಶಕದ ಮೂಲಕ ಸತತ ಹೀರುವಿಕೆಯು ಮೂತ್ರಪಿಂಡದ ಒಳಭಾಗವನ್ನು ಅಕ್ಷರಶಃ ತೆರಪಾಗಿಸುತ್ತದೆ, ಹೀಗೆ ಸಣ್ಣ ಕಲ್ಲು ಅವಶೇಷಗಳನ್ನು ಅದರಿಂದ ತೊಲಗಿಸುತ್ತದೆ. ಅನ್ವೇಷಣೆಯ ಮೂಲಕ ಎಲ್ಲಾ ಕಲ್ಲು ಚೂರುಗಳ ರಾಶಿಯು ತೆಗೆಯಲ್ಪಟ್ಟದ್ದನ್ನು ಜಾಗ್ರತೆಯ ಪರಿಶೀಲನೆಯು ತೋರಿಸಿಕೊಡುವವರೆಗೆ ಚೂರಾಗಿಸುವ ಮತ್ತು ಹೀರಿಕೊಳ್ಳುವ ಪ್ರಕ್ರಿಯೆಯು ಮುಂದುವರಿಯುತ್ತದೆ.
ಆದಾಗ್ಯೂ, ಆಗಾಗ ಕದಲಲು ನಿರಾಕರಿಸುವ ಕಲ್ಲು ಚೂರುಗಳು ಇರುತ್ತವೆ. ಆ ಸಂದರ್ಭದಲ್ಲಿ ವೈದ್ಯನು ಪುಟ್ಟ ಇಕ್ಕುಳಗಳ ಸಲಕರಣೆಯು ಜೋಡಿಸಲ್ಪಟ್ಟ ಒಂದು ತೆಳು ನಾಳವನ್ನು ಮೂತ್ರ ಕೋಶ ದರ್ಶಕದ ಮೂಲಕ ತುರುಕಬಲ್ಲನು. ಅನಂತರ ವೈದ್ಯನು ಇಕ್ಕುಳಗಳನ್ನು ತೆರೆದು, ಕಲ್ಲನ್ನು ಹಿಡಿಯಬಲ್ಲನು, ಮತ್ತು ಅದನ್ನು ಹೊರಕ್ಕೆ ಎಳೆಯಬಲ್ಲನು.
ಪರ್ಕ್ಯುಟೇನಿಯಸ್ ಶಸ್ತ್ರಚಿಕಿತ್ಸೆಯು ವಿಕಸಿಸಿದಂತೆ, ಅನೇಕ ವಿಧಾನಗಳನ್ನು ಪ್ರಯತ್ನಿಸಲಾಯಿತು. ಕೆಲವು ವರ್ಷಗಳ ಹಿಂದೆ, ಯೂರೊಲಾಜಿಕ್ ಕಿನ್ಲಿಕ್ಸ್ ಆಫ್ ನಾರ್ತ್ ಅಮೆರಿಕ ಹೇಳಿದ್ದು: “ವೈದ್ಯಕೀಯ ಪತ್ರಿಕೆಗಳ ಪ್ರತೀ ತಿಂಗಳ ಹೊಸ ಸಂಚಿಕೆಗಳಲ್ಲಿ ಪರ್ಕ್ಯುಟೇನಿಯಸ್ ಕಲ್ಲು ತೆಗೆಯಲ್ಪಡುವಿಕೆಯ ಹೊಸ ವಿಧಾನಗಳು ಕಂಡುಬರುತ್ತವೆ.” ಆ ಪತ್ರಿಕೆಯು ಅವಲೋಕಿಸಿದ್ದು, ಆ ಕಾರ್ಯವಿಧಾನದ ಯಶಸ್ವಿಯ ಸಾಧ್ಯತೆಯು, “ಕಲ್ಲಿನ ಗಾತ್ರ ಮತ್ತು ಇರುವ ಸ್ಥಾನದೊಂದಿಗೆ ಬದಲಾಗುತ್ತದೆ.” ಆದರೆ ಅತಿ ಪ್ರಾಮುಖ್ಯ ಅಂಶವು, “ನಿರ್ವಾಹಕನ ಕೌಶಲ ಮತ್ತು ಅನುಭವವಾಗಿದೆ,” ಎಂದು ಆ ಪತ್ರಿಕೆಯು ವಿವರಿಸಿತು.
ಕಲ್ಲನ್ನು ಪುಡಿ ಪುಡಿಗೊಳಿಸಲು ಸಾಕಷ್ಟು ಶಕ್ತಿಯು ಉತ್ಪಾದಿಸಲ್ಪಟ್ಟರೂ, ಆ ಪ್ರಕ್ರಿಯೆಯು ಸಾಪೇಕ್ಷವಾಗಿ ಸುರಕ್ಷಿತವಾದದ್ದಾಗಿದೆ. “ರಕ್ತ ಸ್ರಾವವು ಗುರುತರ ಸಮಸ್ಯೆಯಾಗಿರುವುದಿಲ್ಲ,” ಎಂದು ಕಿನ್ಲಿಕಲ್ ಸಿಂಪೋಜಿಯ ಹೇಳುತ್ತದೆ. ಆದಾಗ್ಯೂ, ಸಾಧಾರಣ 4 ಪ್ರತಿಶತ ರೋಗಿಗಳಲ್ಲಿ ಅತಿ ರಕ್ತ ಸ್ರಾವವಿತ್ತು ಎಂದು ಒಂದು ವರದಿಯು ತಿಳಿಸುತ್ತದೆ.
ಈ ಕಾರ್ಯವಿಧಾನದ ಮೇಲ್ಮೆಗಳಲ್ಲಿ, ಕನಿಷ್ಠ ಅಹಿತ ಮತ್ತು ಮೊಟಕುಗೊಳಿಸಲ್ಪಟ್ಟ ಚೇತರಿಕೆಯ ಅವಧಿಯು ಒಳಗೊಂಡಿದೆ. ಕೆಲವು ರೋಗಿಗಳು ಮೂರೇ ದಿನಗಳಾನಂತರ ಮನೆಗೆ ಹೋಗುವುದಾದರೆ, ಹೆಚ್ಚಿನ ಸಂದರ್ಭಗಳಲ್ಲಿ ಕೇವಲ ಐದು ಯಾ ಆರು ದಿನಗಳು ಮಾತ್ರ ಆಸ್ಪತ್ರೆಯಲ್ಲಿ ಕಳೆಯಲಾಗುತ್ತವೆ. ಆಸ್ಪತ್ರೆಯನ್ನು ಬಿಟ್ಟ ಕೂಡಲೆ ಕೆಲಸಕ್ಕೆ ತೆರಳಲು ಸಿದ್ಧರಾಗಿರಬಹುದಾದ, ದಿನಗೂಲಿ ಸಂಬಳದವರಿಗೆ ಈ ಅನುಕೂಲತೆಯು ವಿಶೇಷವಾಗಿ ಗುರುತರವಾಗಿದೆ.
ಶಸ್ತ್ರಚಿಕಿತ್ಸೆ ಇಲ್ಲದೆ ಚಿಕಿತ್ಸೆ ನಡಸುವುದು
ಎಕ್ಸ್ಟ್ರಕಾರ್ಪೋರಿಯಲ್ ಷಾಕ್ ವೇವ್ ಲಿತಾಟ್ರಿಪ್ಸಿ ಎಂದು ಕರೆಯಲ್ಪಟ್ಟ, ಒಂದು ಗಮನಾರ್ಹವಾದ ಚಿಕಿತ್ಸೆಯು ಜರ್ಮನಿಯ ಮ್ಯುನಿಕ್ನಲ್ಲಿ 1980ರಲ್ಲಿ ಪರಿಚಯಿಸಲಾಯಿತು. ಯಾವುದೇ ರೀತಿಯ ಕೊಯ್ತವು ಮಾಡಲ್ಪಡದೆ ಕಲ್ಲುಗಳನ್ನು ಚೂರುಗೊಳಿಸುವ ಅದು ಹೆಚ್ಚು ಶಕ್ತಿಯ ಧಕ್ಕಾ ತರಂಗಗಳನ್ನು ತೊಡಗಿಸುತ್ತದೆ.
ಬೆಚ್ಚಗೆನ ನೀರು ಅರ್ಧ ತುಂಬಿದಂಥ ತುಕ್ಕು ಹಿಡಿಯಲಾರದ ಉಕ್ಕಿನ ತೊಟ್ಟಿಯಲ್ಲಿ ರೋಗಿಯನ್ನು ಇಳಿಸಲಾಗುತ್ತದೆ. ನೀರೊಳಗಿನ ಒಂದು ಕಿಡಿ ಬಿಡುಗಡೆಯ ಮೂಲಕ ಉತ್ಪಾದಿಸಲಾದ ಧಕ್ಕಾ ತರಂಗಗಳ ನಾಭಿಯ ಬಿಂದುವಿನಲ್ಲಿ ಚಿಕಿತ್ಸಿಸಲ್ಪಡುವ ಮೂತ್ರಪಿಂಡವು ಇರುವಂತೆ ಅವನನ್ನು ಜಾಗ್ರತೆಯಿಂದ ತಕ್ಕ ಸ್ಥಾನದಲ್ಲಿಡುತ್ತಾರೆ. ತರಂಗಗಳು ಮಾನವನ ಮೆತು ಅಂಗಸ್ತತ್ವವನ್ನು ಸುಲಭವಾಗಿ ಹಾದುಹೋಗುತ್ತವೆ ಮತ್ತು ಅವುಗಳ ಯಾವುದೆ ಶಕ್ತಿಯನ್ನು ಕಳಕೊಳ್ಳದೆ ಕಲ್ಲನ್ನು ತಲಪುತ್ತವೆ. ಕಲ್ಲು ಭಾಗಗಳಾಗಿ ಒಡೆಯುವವರೆಗೆ ಅವು ಸಂತತವಾಗಿ ಕಲ್ಲನ್ನು ಹೊಡೆಯುತ್ತವೆ. ಅನಂತರ ಹೆಚ್ಚಿನ ರೋಗಿಗಳು ಆ ಕಲ್ಲಿನ ಚೂರುಗಳನ್ನು ಅನಾಯಾಸವಾಗಿ ವಿಸರ್ಜಿಸುತ್ತಾರೆ.
ಇಸವಿ 1990ರೊಳಗೆ, ಎಲ್ಲಾ ಕಲ್ಲು ತೆಗೆತದ 80 ಪ್ರತಿಶತದಲ್ಲಿ ESWL ಬಳಸಲ್ಪಟ್ಟಿತ್ತು. ಈ ತಂತ್ರದ ಪರಿಚಯಿಸುವಿಕೆಯಂದಿನಿಂದ, “ಲೋಕವ್ಯಾಪಕವಾಗಿ 30 ಲಕ್ಷಕ್ಕಿಂತಲೂ ಮೇಲ್ಪಟ್ಟ ರೋಗಿಗಳು 1,100ಕ್ಕಿಂತಲೂ ಹೆಚ್ಚು ಯಂತ್ರಗಳ ಮೇಲೆ, ಮೂತ್ರಪಿಂಡ ಕಲ್ಲುಗಳನ್ನು ಭಾಗಗಳಾಗಿ ಒಡೆಯಲು ಧಕ್ಕಾ ತರಂಗ ಉತ್ಪಾದಕಗಳ ವೈವಿಧ್ಯತೆಯನ್ನು ಬಳಸುವುದರ ಮೂಲಕ ಚಿಕಿತ್ಸೆಗೊಳಪಟ್ಟಿರುತ್ತಾರೆ,” ಎಂದು ಆಸ್ಟ್ರೇಲಿಯನ್ ಫ್ಯಾಮಿಲಿ ಫಿಜಿಷನ್ ಕಳೆದ ವರ್ಷ ವರದಿಸಿತು.
ಮೂತ್ರಪಿಂಡದ ಕ್ಷೇತ್ರಕ್ಕೆ ESWL ಸ್ವಲ್ಪ ಪೆಟ್ಟನ್ನುಂಟು ಮಾಡುವುದಾದರೂ, ಆಸ್ಟ್ರೇಲಿಯನ್ ಫ್ಯಾಮಿಲಿ ಫಿಜಿಷನ್ ವಿವರಿಸುವುದು: “ಪೀಹ್ಲ, ಯಕೃತ್ತು, ಮೇದೋಜೀರಕ ಗ್ರಂಥಿ ಮತ್ತು ಕರುಳಿನಂಥ ಪಕ್ಕದಲ್ಲಿರುವ ಅಂಗಾಂಗಗಳಿಗೆ ಅದು ಕೆಡುಕನ್ನುಂಟು ಮಾಡುವುದು ವಿರಳವೇ. ಅಲ್ಪಾವಧಿಯ ಪೆಟ್ಟಿನ ಪರಿಣಾಮವು ರೋಗಿಗಳು ಸುಲಭವಾಗಿ ಸಹಿಸಿಕೊಳ್ಳುವ ಅತಿ ಸ್ವಲ್ಪವೇ ಹಾನಿಯದ್ದಾಗಿದೆ ಮತ್ತು ಹೆಚ್ಚಿನ ರೋಗಿಗಳು 24ರಿಂದ 48 ತಾಸುಗಳಿಗೆ ಕೇವಲ ಉದರದ ಗೋಡೆಯಲ್ಲಿ [ಸ್ನಾಯು ಮತ್ತು ಎಲುಬುಗೂಡಿನ] ಲಘು [ನೋವು] ಮತ್ತು [ಮೂತ್ರದಲ್ಲಿ ರಕ್ತ]ದ ಬಗ್ಗೆ ಸ್ವಲ್ಪ ದೂರುತ್ತಾರೆ.” ಮಕ್ಕಳು ಕೂಡ ಯಶಸ್ವಿಯಾಗಿ ಚಿಕಿತ್ಸಿಸಲ್ಪಟ್ಟಿರುತ್ತಾರೆ. ಈ ಆಸ್ಟ್ರೇಲಿಯದ ಪತ್ರಿಕೆಯು ಮುಕ್ತಾಯಗೊಳಿಸಿದ್ದು: “ಹತ್ತು ವರುಷಗಳ ಮೌಲ್ಯೀಕರಣ ಮಾಡಿದ ಮೇಲೆ ESWL ಒಂದು ಅತೀವ ಸುರಕ್ಷಿತ ಚಿಕಿತ್ಸೆಯಾಗಿರುತ್ತದೆಂದು ಕಾಣುತ್ತದೆ.”
ನಿಜಕ್ಕೂ, ಆ ಚಿಕಿತ್ಸೆಯು ಎಷ್ಟು ಪರಿಣಾಮಕಾರಿಯಾಗಿದೆ ಎಂದರೆ ಕಳೆದ ವರ್ಷದ ಕಾನ್ಸ್ ಕರೆಂಟ್ ತೆರಪಿಯು ವಿವರಿಸಿದ್ದು: “ರೋಗಲಕ್ಷಣಾ ಕಲ್ಲುಗಳನ್ನು ಅತಿ ಸುಲಭವಾಗಿ ಮತ್ತು ಕಡಮೆ ರೋಗ ವ್ಯಾಪನೆಯೊಂದಿಗೆ ತೆಗೆಯುವಂತೆ (ESWL) ಅವಕಾಶಕೊಟ್ಟಿದೆ ಎಂದರೆ ರೋಗಿಗಳು ಮತ್ತು ವೈದ್ಯರು ಮೂತ್ರ ಕಲ್ಲಿನ ರೋಗವನ್ನು ತಡೆಗಟ್ಟುವ ಜಾಗ್ರತೆ ಮತ್ತು ಚಿಕಿತ್ಸೆಯಲ್ಲಿ ಕಡಮೆ ಕಟ್ಟುನಿಟ್ಟಿನವರಾಗಿರುತ್ತಾರೆ.”
ಆದರೂ, ಮೂತ್ರಪಿಂಡ ಕಲ್ಲುಗಳು ನಿಮಗೆ ಖಂಡಿತವಾಗಿ ಬೇಡವಾದ ಒಂದು ನೋವುಭರಿತ ವ್ಯಾಧಿಯಾಗಿದೆ. ಅವುಗಳನ್ನು ತಡೆಯಲು ನೀವೇನನ್ನು ಮಾಡಬಲ್ಲಿರಿ?
ತಡೆಗಟ್ಟುವಿಕೆ
ಮೂತ್ರಪಿಂಡ ಕಲ್ಲುಗಳು ಅನೇಕಬಾರಿ ಮರಳುವುದರಿಂದ, ನಿಮಗೆ ಒಂದು ಇದ್ದಿರುವಲ್ಲಿ, ಬಹಳಷ್ಟು ನೀರನ್ನು ಕುಡಿಯಲು ಹೇಳುವ ಬುದಿಮ್ಧಾತನ್ನು ವಿವೇಕದಿಂದ ನೀವು ಅನುಸರಿಸುವಿರಿ. ದಿನಕ್ಕೆ 2 ಲೀಟರ್ಗಿಂತ ಹೆಚ್ಚಿನ ಮೂತ್ರ ವಿಸರ್ಜನೆಯು ಶಿಫಾರಸ್ಸು ಮಾಡಲಾಗಿದೆ, ಮತ್ತು ಅದರ ಅರ್ಥವು ಬಹಳಷ್ಟು ನೀರನ್ನು ಕುಡಿಯುವುದು ಎಂದಾಗಿದೆ!
ಅದಕ್ಕೆ ಕೂಡಿಸಿ, ನಿಮ್ಮ ಪಥ್ಯವನ್ನು ಏರ್ಪಡಿಸುವುದು ವಿವೇಕಪ್ರದವಾಗಿದೆ. ಕಲ್ಲುಗಳಾಗುವಂತೆ ಸಹಾಯಿಸುವವೆಂದು ನಂಬಲಾದ ಕೆಂಪು ಮಾಂಸ, ಉಪ್ಪು, ಮತ್ತು ಹುಳಿ ಆಮ್ಲವು ಹೆಚ್ಚಿರುವ ಆಹಾರಗಳ ನಿಮ್ಮ ಬಳಕೆಯನ್ನು ಮಿತಗೊಳಿಸುವಂತೆ ವೈದ್ಯರು ಸೂಚಿಸುತ್ತಾರೆ. ಈ ಆಹಾರಗಳಲ್ಲಿ ಕರಟಕಾಯಿಗಳು, ಚಾಕೊಲೆಟ್, ಕರಿ ಮೆಣಸು, ಮತ್ತು ಬಚ್ಚಲೆ ಸೊಪ್ಪಿನಂತಹ ಎಲೆಗಳುಳ್ಳ ಪಚ್ಚೆ ತರಕಾರಿಗಳು ಸೇರಿವೆ. ವೈದ್ಯರು ಒಮ್ಮೆ ಕ್ಯಾಲ್ಸಿಯಂ ತೆಗೆದುಕೊಳ್ಳುವಿಕೆಯನ್ನು ಕಡಮೆ ಮಾಡುವಂತೆಯೂ ಶಿಫಾರಸ್ಸು ಮಾಡಿದ್ದರು, ಆದರೆ ಇತ್ತೀಚಿನ ಸಂಶೋಧನೆಯು ಪಥ್ಯದ ಕ್ಯಾಲ್ಸಿಯಂನ ಹೆಚ್ಚಳವು ಕಲ್ಲುಗಳನ್ನುಂಟುಮಾಡುವ ಪ್ರವೃತ್ತಿಯನ್ನು ಕಡಮೆಗೊಳಿಸುವ ಕಡೆಗೆ ಒಲುತ್ತದೆಂದು ಸೂಚಿಸುತ್ತದೆ.
ಆದರೂ, ಎಲ್ಲ ಮುಂಜಾಗ್ರತೆಗಳನ್ನು ನೀವು ತೆಗೆದುಕೊಂಡರೂ ಕೂಡ, ನೀವು ಇನ್ನೊಂದು ಮೂತ್ರಪಿಂಡ ಕಲ್ಲನ್ನು ಹೊಂದುವಲ್ಲಿ, ಅವುಗಳನ್ನು ಚಿಕಿತ್ಸಿಸುವ ಉತ್ತಮಗೊಳಿಸಲ್ಪಟ್ಟ ವಿಧಾನಗಳು ಇವೆ ಎಂಬುದನ್ನು ತಿಳಿಯಲು ಕೊಂಚಮಟ್ಟಿಗೆ ಸಾಂತ್ವನಕಾರಿಯಾಗಿರಬಲ್ಲದು. (g93 8/22)
[ಪುಟ 15 ರಲ್ಲಿರುವ ಚಿತ್ರ ಕೃಪೆ]
Leonardo On The Human Body/Dover Publications, Inc.
[ಪುಟ 16 ರಲ್ಲಿರುವ ಚಿತ್ರ]
ಲಿತಾಟ್ರಿಪ್ಟರ್ ಎಂದು ಕರೆಯಲ್ಪಡುವ ಒಂದು ಯಂತ್ರವನ್ನು ಬಳಸಿ ಮೂತ್ರಪಿಂಡ ಕಲ್ಲುಗಳ ಶಸ್ತ್ರಚಿಕಿತ್ಸಾರಹಿತ ಚಿಕಿತ್ಸೆ
[ಕೃಪೆ]
S.I.U./Science Source/PR