ನಾನು ಪ್ರೀತಿಸಿದ್ದನ್ನು ದ್ವೇಷಿಸಲು ನಾನು ಕಲಿತೆ
ಕಾಳಗವು ನನ್ನ ಜೀವಿತವಾಗಿತ್ತು. ನನ್ನ ಪೂರ್ಣ ಬಲದಿಂದ ನನ್ನ ಎದುರಾಳಿಯನ್ನು ಗುದ್ದಲು ಮತ್ತು ಅವನು ನನ್ನ ಪಾದಗಳ ಬಳಿ ಬೀಳುವುದನ್ನು ಕಾಣಲು ಶಕ್ತನಾಗಿರಲು ನಾನು ಆನಂದಿಸುತ್ತಿದ್ದೆ. ಮುಷ್ಟಿಕಾಳಗ(ಬಾಕ್ಸಿಂಗ್)ದ ಅಖಾಡದ ನಡುವೆ ನಿಂತು, ಬಾಕ್ಸಿಂಗ್ ಪಂದ್ಯದ ವಿಜಯಿಯೋಪಾದಿ ನನ್ನ ಹೆಸರನ್ನು ಪ್ರಸಾರಕನು ಕೂಗುವುದನ್ನು ಕೇಳುವುದು ನನ್ನನ್ನು ರೋಮಾಂಚಗೊಳಿಸುತ್ತಿತ್ತು. ನಾನು ಬಾಕ್ಸಿಂಗನ್ನು ತುಂಬಾ ಇಷ್ಟಪಡುತ್ತಿದ್ದೆ! ಆದರೂ, ಈಗ ಹಿಂಸಾತ್ಮಕ ಆಲೋಚನೆಯೇ ನನ್ನನ್ನು ಕ್ಷೋಭೆಗೊಳಿಸುತ್ತದೆ. ಬಾಕ್ಸಿಂಗ್ ಎಂಬ ಅಪರಾಧದ ಕ್ರೀಡೆಯೆಂದು ಈಗ ನಾನು ಯಾವುದನ್ನು ಕರೆಯುತ್ತೇನೋ ಅದನ್ನು ನಾನು ದ್ವೇಷಿಸಲು ಕಲಿತಿದ್ದೇನೆ.
ಇಸವಿ 1944ರಲ್ಲಿ, ನಾನು ಏಳು ವರ್ಷದವನಿದ್ದಾಗ, ನಾನು ಎಲ್ಲಿ ಜನಿಸಿದ್ದೆನೊ ಆ ಪೋರ್ಟೊ ರಿಕೊದ ಲಾರಸ್ನಲ್ಲಿ ವಾಸಿಸುತ್ತಿದ್ದೆ. ಆಗಲೇ ನನ್ನ ತಾಯಿಯನ್ನು ಮರಣದಲ್ಲಿ ಕಳೆದುಕೊಳ್ಳುವ ಭೀಕರ ಆಘಾತವನ್ನು ನಾನು ಅನುಭವಿಸಿದೆ. ತನ್ನ 32 ವರ್ಷ ವಯಸ್ಸಿನಲ್ಲಿ ಅವಳು ಕ್ಯಾನ್ಸರ್ನಿಂದ ಸತ್ತಳು. ಸ್ವಲ್ಪ ಕಾಲದ ಬಳಿಕ, ನಾನು ಶಾಲೆಯಿಂದ ಮನೆಗೆ ಬಂದೆ ಮತ್ತು ನನ್ನ ತಂದೆಯ ತೊಡೆಯ ಮೇಲೆ ಸ್ತ್ರೀಯೊಬ್ಬಳು ಕುಳಿತಿರುವುದನ್ನು ಕಂಡೆ. ಅವಳು ನನ್ನ ಮಲತಾಯಿಯಾದಳು. ಆ ವೇದನೆಯು ಸಹಿಸಲಸಾಧ್ಯವಾಗಿ ಪರಿಣಮಿಸಿತು.
ನನ್ನ ಅಸಮ್ಮತಿಯನ್ನು ಗ್ರಹಿಸಿ, ನನ್ನ ಮಲತಾಯಿ ನನ್ನೊಂದಿಗೆ ನಿಷ್ಠುರವಾಗಿ ನಡೆದುಕೊಂಡಳು. ಆದುದರಿಂದ ನಾನು ಮನೆಯಿಂದ ಪಲಾಯನಗೈದೆ. ಕಲ್ಲಿದ್ದಲು ಮತ್ತು ಕಿತ್ತಿಳೆಯ ಹಣ್ಣಿನಿಂದ ತುಂಬಿದ ಒಂದು ಟ್ರಕ್ನೊಳಗೆ ನುಸುಳಿದೆ ಮತ್ತು ನಿದ್ರೆಹೋದೆ. ನಾನು ಎಚ್ಚರಗೊಂಡಾಗ ದ್ವೀಪದ ಇನ್ನೊಂದು ಭಾಗದ ಸಾನ್ ವಾನ್ ಪಟ್ಟಣದಲ್ಲಿ ನಾನಿರುವುದನ್ನು ಕಾಣುವುದು ಎಂತಹ ಆಶ್ಚರ್ಯವಾಗಿತ್ತು!
ಬೀದಿ ಕಾದಾಟಗಾರ
ಎಂಟು ತಿಂಗಳುಗಳ ತನಕ ನಾನು ಸಾನ್ ವಾನ್ನ ಬೀದಿಗಳಲ್ಲಿ ವಾಸಿಸಿದೆ. ಇತರ ಯೌವನಸ್ಥರು ಸತತವಾಗಿ ನನ್ನನ್ನು ರೇಗಿಸುತ್ತಿದ್ದರು. ಆದುದರಿಂದ ಬದುಕಿ ಉಳಿಯಲಿಕ್ಕಾಗಿ ನಾನು ಕಾದಾಡಲೇಬೇಕೆಂದು ನಿರ್ಧರಿಸಿದೆ. ಎಂಟು ತಿಂಗಳುಗಳ ಬಳಿಕ ಪೋಲಿಸರು ನನ್ನನ್ನು ಕಂಡುಹಿಡಿದರು ಮತ್ತು ನನ್ನನ್ನು ಮನೆಗೆ ಕಳುಹಿಸಿದರು. ಮಲತಾಯಿಯೊಬ್ಬಳನ್ನು ಪಡೆದಿರುವ ಭಾವನೆಗೆ ನಾನೆಂದೂ ಹೊಂದಿಕೊಳ್ಳಲಿಲ್ಲ ಮತ್ತು ನನ್ನ ಅಧಿಕಾಂಶ ಸಮಯವನ್ನು ಮನೆಯಿಂದ ಹೊರಗೆ ಕಳೆದೆ. ಹೆಚ್ಚು ಕಡಿಮೆ ಪ್ರತಿ ದಿನ ನಾನು ಒಂದು ಕಾದಾಟದಲ್ಲಿ ಒಳಗೂಡುತ್ತಿದ್ದೆ. ನಾನು ಹತ್ತು ವರ್ಷ ಪ್ರಾಯದವನಾದಾಗ, ಪುನಃ ಮನೆಯಿಂದ ಓಡಿಹೋದೆ.
ಕೆಲವೊಂದು ವಾರಗಳ ಬಳಿಕ, ಪೋಲಿಸರು ನನ್ನನ್ನು ಪುನಃ ಹಿಡಿದರು. ಈ ಬಾರಿ ನಾನು ಅವರಿಗೆ ನನ್ನ ಹೆಸರು ಮತ್ತು ನಾನೆಲ್ಲಿಯವನೆಂದು ಹೇಳಲು ನಿರಾಕರಿಸಿದೆ. ನನ್ನ ಕುಟುಂಬವನ್ನು ಗೊತ್ತುಮಾಡಲು ಸೋತುಹೋದ ಬಳಿಕ, ಗ್ವೈನಾಬೊ ಪಟ್ಟಣದಲ್ಲಿ ಸರಕಾರದಿಂದ ನಡೆಸಲ್ಪಡುತ್ತಿದ್ದ ಅನಾಥಾಲಯವೊಂದಕ್ಕೆ ಅವರು ನನ್ನನ್ನು ಕಳುಹಿಸಿದರು. ಅಲ್ಲಿ ನನ್ನ ಬಾಕ್ಸಿಂಗ್ ಕೈಚೀಲಗಳ ಮೊದಲ ಜೊತೆಯನ್ನು ನಾನು ತೊಟ್ಟುಕೊಂಡೆ. ಅಲ್ಲಿಯೇ ನನ್ನ ಜೀವಿತದಲ್ಲಿ ಪ್ರಥಮ ಬಾರಿಗೆ ಒಂದು ಗುರುತು ಹಲಗೆಯ ಮೇಲೆ ಯೆಹೋವ ಎಂಬ ಹೆಸರನ್ನು ನಾನು ನೋಡಿದೆ. ನಾನು ಅದರ ಕುರಿತು ಕೇಳಿದೆ, ಮತ್ತು ಯೆಹೋವನು ಯೆಹೂದ್ಯರ ದೇವರಾಗಿದ್ದನೆಂದು ನನಗೆ ಹೇಳಲಾಯಿತು. ಆ ಹೆಸರನ್ನು ನಾನೆಂದೂ ಮರೆಯಲಿಲ್ಲ.
ನಾನು 15 ವರ್ಷ ಪ್ರಾಯದವನಾದಾಗ, ಎಂದಿಗೂ ಹಿಂದಿರುಗದಂತೆ ನಾನು ಅನಾಥಾಲಯವನ್ನು ಬಿಟ್ಟುಹೊರಟೆ. ನನ್ನನ್ನು ಬೆಂಬಲಿಸಲಿಕ್ಕಾಗಿ ವಾರ್ತಾಪತ್ರಿಕೆಗಳನ್ನು ಮಾರಲು ನಾನು ಆರಂಭಿಸಿದೆ. ಹಾಗಿದ್ದರೂ, ಪ್ರತಿಯೊಂದು ಬೀದಿಯು ಒಬ್ಬ ನಿರ್ದಿಷ್ಟ ವ್ಯಕ್ತಿಗೆ ನೇಮಿಸಲ್ಪಟ್ಟಿತ್ತು. ನನ್ನ ಸ್ವಂತ ಮಾರ್ಗವನ್ನು ಸ್ಥಾಪಿಸಲು ಒಂದೇ ಒಂದು ಮಾರ್ಗವಿತ್ತು: ಕಾದಾಟ! ಮತ್ತು ನಾನು ಕಾದಾಡಿದೆ.
ಎರಡು ವರ್ಷಗಳ ಬಳಿಕ ನಾನು ಅಮೆರಿಕದ ಸೇನಾಪಡೆಯನ್ನು ಸೇರಿದೆ ಮತ್ತು ಅಮೆರಿಕದ ಆರ್ಕನ್ಸಾದಲ್ಲಿ ಮೂಲ ತರಬೇತಿಯನ್ನು ಪಡೆದುಕೊಂಡೆ. ಬೇಗನೆ ಬಾಕ್ಸಿಂಗ್ ತಂಡದ ಒಬ್ಬ ಸದಸ್ಯನಾಗಿ ನಾನು ಪರಿಣಮಿಸಿದೆ. ಬಳಿಕ ವಿಶೇಷ ಸೇವೆಗಳ ತಂಡಕ್ಕೆ ನಾನು ವರ್ಗಾಯಿಸಲ್ಪಟ್ಟೆನು. ನನ್ನ ಕರ್ತವ್ಯಗಳು ವ್ಯಾಯಾಮ ಶಾಲೆಯಲ್ಲಿದ್ದವು ಮತ್ತು ನನ್ನ ದಳದ ಅಧಿಕಾರಿ ಬಾಕ್ಸಿಂಗ್ ಶಿಕ್ಷಕನಾಗಿದ್ದ.
ಒಂದು ಕ್ರೂರ ಕ್ರೀಡೆ
ನನ್ನ ಎದುರಾಳಿಗಳಿಗೆ ಹಾನಿ ಮಾಡಲಿಕ್ಕಾಗಿ ನನ್ನ ಮುಷ್ಟಿಗಳನ್ನು ಉಪಯೋಗಿಸುವುದರ ಕುರಿತಾಗಿ ನಾನು ತರಬೇತಿಯನ್ನು ಪಡೆದೆ. ಅಖಾಡದಲ್ಲಿ ಗೆಳೆತನವನ್ನು ಅಲಕ್ಷಿಸುವಂತೆ ನನಗೆ ತರಬೇತಿ ನೀಡಲಾಗಿತ್ತು. ಬಾಕ್ಸಿಂಗ್ ಆರಂಭವಾಗುವ ಸೂಚನೆಯನ್ನು ಕೊಡುವ ಗಂಟೆಯು ಮೊಳಗಿದಾಗ, ಒಬ್ಬ ಸ್ನೇಹಿತನು ಹೊಡೆದು ನೆಲಕ್ಕುರುಳಿಸಲಿಕ್ಕಿರುವ ಮತ್ತು ಮೇಲೇಳದಂತೆ ಹೊಡೆದು ಕೆಡವುವ ಶತ್ರುವಾಗಿ ಪರಿಣಮಿಸುತ್ತಿದ್ದನು.
ನಾನು ಸೇನೆಯಲ್ಲಿ ಉಳಿಯಲು ಬಯಸುತ್ತಿದ್ದೆ, ಆದರೆ ನನ್ನ ಅಧಿಕಾರಿಯು ನನಗೆ ಹೇಳಿದ್ದು: “ನಿನ್ನಿಂದ ಸಾಧ್ಯವಿರುವಷ್ಟು ಬೇಗನೆ ಸೇನೆಯಿಂದ ನಿವೃತ್ತನಾಗು. ಒಬ್ಬ ವೃತ್ತಿಪರ ಬಾಕ್ಸರನಾಗು, ಮತ್ತು ಕೆಲವು ವರ್ಷಗಳಲ್ಲಿ, ನ್ಯೂ ಯಾರ್ಕ್ ಸಿಟಿಯ ಮ್ಯಾಡಿಸನ್ ಸ್ವ್ಕೇರ್ ಗಾರ್ಡನ್ನಲ್ಲಿ ಬಾಕ್ಸಿಂಗ್ ಮಾಡುತ್ತಿರುವುದನ್ನು ನಾನು ಟೆಲಿವಿಷನ್ನಲ್ಲಿ ನೋಡುವೆನು.” ಇದು ನಂಬಲು ಕಷ್ಟವಾಗಿತ್ತು! ನಾನು—ಬಡವ ಮತ್ತು ಮನೆಮಠವಿಲ್ಲದ ಹುಡುಗ—ಒಬ್ಬ ಪ್ರಸಿದ್ಧ ಬಾಕ್ಸರ್ನಾಗುವುದೋ?
ಎರಡು ವರ್ಷಗಳ ಬಳಿಕ ನಾನು ಸೇನೆಯನ್ನು ಬಿಟ್ಟು ಪೋರ್ಟೊ ರಿಕೊಗೆ ಹಿಂದಿರುಗಿದೆನು. ಒಂದು ದಿನ 1956ರಲ್ಲಿ ಬಾಕ್ಸಿಂಗ್ನ ಹವ್ಯಾಸಿ (ಆ್ಯಮಟ್ಯೂರ್) ಕ್ರೀಡಾಸ್ಪರ್ಧೆ—ಗೋಲ್ಡನ್ ಗ್ಲವ್ಸ್—ಯ ಜಾಹೀರಾತನ್ನು ನಾನು ನೋಡಿದೆ. ನಾನು ಕ್ರೀಡಾಸ್ಪರ್ಧೆಯನ್ನು ಪ್ರವೇಶಿಸಿದೆ ಮತ್ತು ಪೋರ್ಟೊ ರಿಕೊದ ವೆಲರ್ಟ್ವೆಯ್ಟ್ ಚ್ಯಾಂಪಿಯನ್ ಆದೆ. ಬಳಿಕ ಗೋಲ್ಡನ್ ಗ್ಲವ್ಸ್ನ ರಾಷ್ಟ್ರೀಯ ಕ್ರೀಡಾಸ್ಪರ್ಧೆಯಲ್ಲಿ ಸ್ಪರ್ಧಿಸಲಿಕ್ಕಾಗಿ ನಾನು ನ್ಯೂ ಯಾರ್ಕ್ ಸಿಟಿಗೆ ಪ್ರಯಾಣಿಸಿದೆ. ಉಪಾಂತ ಪಂದ್ಯಗಳ ವರೆಗೆ ನಾನು ಕಾಳಗ ಮಾಡಿದೆ ಆದರೆ ಚ್ಯಾಂಪಿಯನ್ ಪಟ್ಟವನ್ನು ಗೆಲ್ಲಲು ನಾನು ಅಶಕ್ತನಾಗಿದ್ದೆ. ಆದರೂ, ಭಾವಿ ವ್ಯವಸ್ಥಾಪಕರು ಮತ್ತು ಶಿಕ್ಷಕರಿಂದ ಅನೇಕ ಅವಕಾಶಗಳು ನೀಡಲ್ಪಟ್ಟವು. ಆದುದರಿಂದ ನ್ಯೂ ಯಾರ್ಕ್ ಪಟ್ಟಣದಲ್ಲಿ ಉಳಿಯಲು ಮತ್ತು ವೃತ್ತಿಪರನಾಗುವಂತೆ ತರಬೇತಿಹೊಂದಲು ಕೊಡಲ್ಪಟ್ಟ ನೀಡಿಕೆಯನ್ನು ನಾನು ಅಂಗೀಕರಿಸಿದೆ.
ಇಸವಿ 1958ರಲ್ಲಿ ನಾನು ಒಬ್ಬ ವೃತ್ತಿಪರ ಬಾಕ್ಸರನಾಗಿ ಪರಿಣಮಿಸಿದೆ. ಮತ್ತು ಅಧಿಕಾರಿ ಹೇಳಿದ್ದು ಸರಿಯಾಗಿತ್ತು. ಸೇನೆಯನ್ನು ಬಿಟ್ಟ ಐದು ವರ್ಷಗಳ ಅನಂತರ, 1961ರಲ್ಲಿ, ಮ್ಯಾಡಿಸನ್ ಸ್ವ್ಕೇರ್ ಗಾರ್ಡನ್ನಲ್ಲಿ ಕಾಳಗ ಮಾಡುತ್ತಿರುವಾಗ ನಾನು ನ್ಯಾಷನಲ್ ಟೀವೀಯಲ್ಲಿ ಕಾಣಿಸಿಕೊಂಡೆ. ನನ್ನ ಅನೇಕ ಬಾಕ್ಸಿಂಗ್ ಸ್ಪರ್ಧೆಗಳು ಪ್ರಸಿದ್ಧವಾದ ಆ ಕ್ರೀಡಾ ಅಖಾಡದಲ್ಲಿ ನಡೆದವು.
ನನ್ನ ಮುಷ್ಟಿಯ ಗುದ್ದುಗಳು ಅನೇಕ ಮಲ್ಲರ ಜೀವನೋಪಾಯಗಳನ್ನು ಕೊನೆಗೊಳಿಸಿದವು. ನನ್ನ ಪಾಶವೀಯ ಗುದ್ದುಗಳ ಫಲಿತಾಂಶವಾಗಿ ಮೆಕ್ಸಿಕೊದ ಒಬ್ಬ ಮಲನ್ಲು ತನ್ನ ದೃಷ್ಟಿಯನ್ನು ಸಂಪೂರ್ಣವಾಗಿ ಕಳೆದುಕೊಂಡನು. ನನ್ನ ಮನಸ್ಸಾಕ್ಷಿಯ ಮೇಲೆ ಒಂದು ಭಾರವಾದ ಹೊರೆಯೋಪಾದಿ ಪರಿಣಮಿಸಿದ ಇನ್ನೊಂದು ಕಾಳಗವು ಡಮಿನಿಕನ್ ರಿಪಬ್ಲಿಕ್ನ ಮಿಡ್ಲ್ ವೆಯ್ಟ್ ಚ್ಯಾಂಪಿಯನ್ನೊಂದಿಗಾಗಿತ್ತು. ಕಾಳಗಕ್ಕೆ ಮುನ್ನ ನಾನು ಅವನಿಗಿಂತಲೂ ಅರ್ಧ ಕಿಲೋಗ್ರಾಂ ಹೆಚ್ಚು ತೂಕವುಳ್ಳವನಾಗಿದ್ದೇನೆಂಬ ಸಂಗತಿಯ ಕುರಿತು ಒಂದು ದೊಡ್ಡ ವಿವಾದವನ್ನು ಅವನು ಮಾಡಿದನು. ಅವನ ಮನೋಭಾವ ನನ್ನನ್ನು ಕೆರಳಿಸಿತು, ಒಬ್ಬ ಎದುರಾಳಿಗೆ ನನ್ನ ಮೇಲೆ ಅಷ್ಟು ನಿಕೃಷ್ಟವಾದ ಭಾರದ ಪ್ರಯೋಜನವಿದ್ದಾಗ ನಾನೆಂದೂ ಆಕ್ಷೇಪವೆತ್ತಿದ್ದಿಲ್ಲ. ನಾನು ಅವನಿಗೆ ಹೇಳಿದ್ದು: “ಸರಿ, ತಯಾರಾಗು ಯಾಕಂದರೆ ಈ ರಾತ್ರಿ ನಾನು ನಿನ್ನನ್ನು ಕೊಂದುಹಾಕುತ್ತೇನೆ!” ನಾನು ಅಖಾಡದೊಳಗೆ ಹೋದಾಗ, ನನಗೆ “ಸೈತಾನನಂತಹ ತೋರಿಕೆ” ಇತ್ತೆಂದು ಒಂದು ವಾರ್ತಾಪತ್ರಿಕೆಯು ದಾಖಲಿಸಿತು. ಎರಡಕ್ಕಿಂತಲೂ ಕಡಿಮೆ ನಿಮಿಷಗಳಲ್ಲಿ ಆ ಮನುಷ್ಯನು ಡೇರೆಯ ಮೇಲೆ ಪ್ರಜ್ಞಾಹೀನನಾಗಿ ಬಿದ್ದನು. ಅವನ ಒಳಕಿವಿಯು ತೀರ ಗಂಭೀರವಾಗಿ ಹಾನಿಗೊಳಗಾಗಿದ್ದರಿಂದ ಅವನು ಪುನಃ ಎಂದಿಗೂ ಕಾದಾಡಲಿಲ್ಲ.
ಬಾಕ್ಸಿಂಗನ್ನು ನಾನು ದ್ವೇಷಿಸಲು ಕಲಿತ ವಿಧ
ನನ್ನ ಜನಪ್ರಿಯತೆಯು ನಟರ ಮತ್ತು ಸಂಗೀತಗಾರರ ಗಮನ ಹಾಗೂ ಸ್ನೇಹವನ್ನು ಆಕರ್ಷಿಸಿತು. ನನ್ನ ಕಾಳಗಗಳಲ್ಲಿ ಒಂದನ್ನು ಪ್ರವರ್ತಿಸುವಂತೆ ಹಿಂದಿನ ವರ್ಲ್ಡ್ ಹೆವಿವೈಯ್ಟ್ ಚ್ಯಾಂಪಿಯನ್ ಜೊ ಲೂಯಿಸ್ ಸಹ ನನ್ನೊಂದಿಗಿದ್ದರು. ನಾನು ಅನೇಕ ಪ್ರಯಾಣಗಳನ್ನು ಮಾಡಿದೆ, ಉತ್ತಮ ಕಾರುಗಳಿದ್ದವು, ಮತ್ತು ಇತರ ಪ್ರಾಪಂಚಿಕ ವಸ್ತುಗಳನ್ನು ನಾನು ಅನುಭೋಗಿಸಿದೆ. ಆದರೂ, ಅಧಿಕಾಂಶ ಮಲ್ಲರಂತೆ ನನ್ನ ಯಶಸ್ವಿಯು ಅಲ್ಪಕಾಲದ್ದಾಗಿತ್ತು. ಇಸವಿ 1963ರಲ್ಲಿ ಅನೇಕ ಕಾಳಗಗಳಲ್ಲಿ ನಾನು ಬಹಳವಾಗಿ ಗಾಯಗೊಂಡಿದ್ದೆ ಮತ್ತು ಪುನಃ ಕಾದಾಡಲಾಗಲಿಲ್ಲ.
ಅದೇ ಸಮಯದಲ್ಲಿ ಒಬ್ಬ ಪ್ರಖ್ಯಾತ ಬಾಕ್ಸರ್ ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿದ್ದಾನೆಂದು ವಾರ್ತಾಪತ್ರಿಕೆಯ ಲೇಖನವೊಂದರಲ್ಲಿ ನಾನು ಓದಿದೆ. ಕೆಲವು ಕಾರಣಗಳಿಗಾಗಿ ಲೇಖನವನ್ನು ಓದಿದ ಬಳಿಕ, ಯೆಹೋವನ ಸಾಕ್ಷಿಗಳ ಧರ್ಮವು ಕೇವಲ ಶ್ರೀಮಂತ ಜನರಿಗೆ ಮಾತ್ರ ಎಂಬ ಅಭಿಪ್ರಾಯವನ್ನು ಭದ್ರವಾಗಿ ಆಶ್ರಯಿಸಿದೆ.
ಅನಂತರದ ಕೆಲವು ವರ್ಷಗಳಲ್ಲಿ ಅನೇಕ ವೈದ್ಯಕೀಯ ಸಮಸ್ಯೆಗಳನ್ನು ನಾನು ಅನುಭವಿಸಿದೆ. ವಿಪರೀತ ಖಿನ್ನತೆಯ ಕಾಲಾವಧಿಗಳನ್ನೂ ನಾನು ಅನುಭವಿಸಿದೆ. ಅಂತಹ ಒಂದು ಸಮಯದಲ್ಲಿ ಒಂದು ಬಂದೂಕನ್ನು ನನ್ನ ಹೃದಯಕ್ಕೆ ಇಟ್ಟು ಸ್ವತಃ ಗುಂಡು ಹಾರಿಸಿಕೊಂಡೆ. ಒಂದು ಪಕ್ಕೆಲುಬಿನ ಮೂಲಕ ಗುಂಡು ಬೇರೆ ಕಡೆಗೆ ತಿರುಗಿ ನನ್ನ ಜೀವವನ್ನು ಉಳಿಸಿತ್ತು. ನಾನು ಬದುಕಿದ್ದೆ, ಆದರೆ ನಾನು ತೀರ ಅಸಂತೋಷಿ ಹಾಗೂ ಅಸ್ವಸ್ಥನಾಗಿದ್ದೆ. ಶ್ರೀಮಂತಿಕೆ, ಯಶಸ್ಸು, ಬಾಕ್ಸಿಂಗ್ ಇನ್ನಿಲ್ಲ!
ಬಳಿಕ, ತಾನು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಸಿಸುತ್ತಿದ್ದೇನೆ ಮತ್ತು ರಾಜ್ಯ ಸಭಾಗೃಹದಲ್ಲಿ ಕೂಟಗಳನ್ನು ಹಾಜರಾಗಲು ತಾನು ಅಪೇಕ್ಷಿಸುತ್ತೇನೆಂದು ಒಂದು ದಿನ ನನ್ನ ಹೆಂಡತಿ ಡಾರಿಸ್ ನನಗೆ ಹೇಳಿದಳು. “ನನಗೆ ಗೊತ್ತಿಲ್ಲ ಡಾರಿಸ್,” ನಾನು ಹೇಳಿದೆ. “ನಾವು ಬಡ ಜನರು, ಮತ್ತು ಯೆಹೋವನ ಸಾಕ್ಷಿಗಳು ಶ್ರೀಮಂತರು ಹಾಗೂ ಪ್ರಮುಖ ಜನರಾಗಿದ್ದಾರೆ.” ಇದು ಸತ್ಯವಲ್ಲ ಮತ್ತು ತನ್ನೊಂದಿಗೆ ಅಭ್ಯಾಸ ಮಾಡುತ್ತಿರುವ ಸಾಕ್ಷಿಯು ನಮ್ಮ ಸ್ವಂತ ನೆರೆಹೊರೆಯಲ್ಲಿ ವಾಸಿಸುತ್ತಾಳೆಂದು ಅವಳು ನನಗೆ ಹೇಳಿದಳು. ಆದುದರಿಂದ ಕೂಟಗಳನ್ನು ಹಾಜರಾಗುವ ಅವಳ ನಿರ್ಧಾರವನ್ನು ನಾನು ಒಪ್ಪಿಕೊಂಡೆ. ಒಂದು ಸಂದರ್ಭದಲ್ಲಿ ನಾನು ಅವಳಿಗಾಗಿ ರಾಜ್ಯ ಸಭಾಗೃಹದ ಹೊರಗೆ ಕಾಯುತ್ತಿದ್ದಾಗ, ಒಬ್ಬ ಸಾಕ್ಷಿಯು ಒಳಗೆ ಬರುವಂತೆ ನನ್ನನ್ನು ಆಹ್ವಾನಿಸಿದನು. ಕೊಳಕಾದ ಕೆಲಸದ ವಸ್ತ್ರಗಳನ್ನು ನಾನು ಧರಿಸಿದ್ದೆ, ಆದರೆ ಅವನು ಒತ್ತಾಯಮಾಡಿದನು. ನನ್ನ ತೋರಿಕೆಯ ಹೊರತೂ ನಾನು ಸ್ವಾಗತಿಸಲ್ಪಟ್ಟೆ. ಸ್ನೇಹಭಾವದ ವಾತಾವರಣವು ನನ್ನ ಮೇಲೆ ಆಳವಾದ ಒಂದು ಪ್ರಭಾವವನ್ನು ಬೀರಿತು.
ಕೂಡಲೆ ನಾನು ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಸಿಸಲು ಆರಂಭಿಸಿದೆ. ನನಗೆ ಹೇಳಲ್ಪಟ್ಟಂತೆ ಯೆಹೋವನು ಕೇವಲ ಯೆಹೂದ್ಯರ ದೇವರಾಗಿಲ್ಲ, ಆದರೆ ಒಬ್ಬನೇ ಸತ್ಯ ದೇವರು, ಸರ್ವಶಕ್ತನು, ಎಲ್ಲಾದರ ಸೃಷ್ಟಿಕರ್ತನು ಆತನಾಗಿದ್ದಾನೆ ಎಂಬುದನ್ನು ನಾನು ಕಲಿತೆ. ಯೆಹೋವ ದೇವರು ಬಲಾತ್ಕಾರವನ್ನು ದ್ವೇಷಿಸುತ್ತಾನೆಂಬುದನ್ನು ಸಹ ನಾನು ಕಲಿತೆ. ಕೀರ್ತನೆ 11:5ರಲ್ಲಿ ಬೈಬಲು ಹೇಳುವುದು: “ಯೆಹೋವನು ನೀತಿವಂತರನ್ನೂ ಅನೀತಿವಂತರನ್ನೂ ಪರೀಕ್ಷಿಸುತ್ತಾನೆ; ಬಲಾತ್ಕಾರಿಗಳನ್ನು ದ್ವೇಷಿಸುತ್ತಾನೆ.” ಆದುದರಿಂದ ಬಾಕ್ಸಿಂಗ್ನೊಂದಿಗೆ ಸಂಬಂಧಿಸಿರುವ ಎಲ್ಲಾ ವಿಷಯಗಳಿಂದ ನಾನು ಬೇರ್ಪಟ್ಟೆ. ಅದು ಎಷ್ಟು ಬಲಾತ್ಕಾರಿ ಕ್ರೀಡೆಯಾಗಿತ್ತು ಎಂಬುದನ್ನು ನಾನು ನೇರವಾಗಿ ತಿಳಿದಿದ್ದೆ. ದೇವರು ಅದನ್ನು ಹೇಗೆ ವೀಕ್ಷಿಸುತ್ತಾನೆಂದು ಕಲಿತ ಬಳಿಕ, ಬಾಕ್ಸಿಂಗ್ ಒಂದು ದುಷ್ಟ, ಅಪರಾಧದ ಕ್ರೀಡೆಯಾಗಿತ್ತು ಎಂಬುದರ ಕುರಿತು ನನ್ನ ಮನಸ್ಸಿನಲ್ಲಿ ಯಾವುದೇ ಸಂಶಯವಿರಲಿಲ್ಲ. ಹೌದು, ನಾನು ಪ್ರೀತಿಸಿದ್ದ ಕ್ರೀಡೆಯನ್ನು ದ್ವೇಷಿಸಲು ನಾನು ಕಲಿತೆ.
ಅತ್ಯಂತ ಮಹಾನ್ ಸುಯೋಗ
ಇಸವಿ 1970ರಲ್ಲಿ ನನ್ನ ಜೀವಿತವನ್ನು ಯೆಹೋವನಿಗೆ ಸಮರ್ಪಿಸುವ ನಿರ್ಧಾರವನ್ನು ನಾನು ಮಾಡಿದೆ. ಡಾರಿಸ್ ಮತ್ತು ನಾನು ಅದೇ ವರ್ಷ ಅಕ್ಟೋಬರದಲ್ಲಿ ದೀಕ್ಷಾಸ್ನಾನ ಪಡಕೊಂಡೆವು. ಅಂದಿನಿಂದ ಇತರರಿಗೆ ಸಾರುವ ಸುಯೋಗದಲ್ಲಿ ನಾನು ಆನಂದಿಸಿದ್ದೇನೆ. ಪೂರ್ಣ ಸಮಯದ ಸೌವಾರ್ತಿಕನೋಪಾದಿ, ಸುಮಾರು 40 ವ್ಯಕ್ತಿಗಳು ಯೆಹೋವನ ಆರಾಧಕರಾಗುವಂತೆ ಸಹಾಯಮಾಡುವುದರಲ್ಲಿ ನಾನು ಪಾಲನ್ನು ಹೊಂದಿರುತ್ತೇನೆ.
ವಿಷಾದಕರವಾಗಿ ನನ್ನ ಬಲಾತ್ಕಾರದ ವರುಷಗಳಲ್ಲಿ ನಾನು ತಾಳಿಕೊಂಡ ಹಾನಿಗಳಿಂದಾಗಿ ನಾನು ಈಗ ಕಷ್ಟಾನುಭವಿಸುತ್ತಿದ್ದೇನೆ. ನೂರಾರು ಗುದ್ದುಗಳನ್ನು ನನ್ನ ತಲೆಗೆ ನಾನು ಹೊಡೆಸಿಕೊಂಡೆ, ನನ್ನ ಮಿದುಳಿಗೆ ಶಾಶ್ವತವಾದ ಹಾನಿಯನ್ನು ಉಂಟುಮಾಡಿದೆ. ನನ್ನ ಅಲ್ಪಾವಧಿಯ ಜ್ಞಾಪಕಶಕ್ತಿ ಮತ್ತು ನನ್ನ ಒಳಕಿವಿಯಿಂದ—ನನ್ನ ಸಮತೆಯ ಮೇಲೆ ಪರಿಣಾಮ ಬೀರುವ ಮೂಲಕ—ಸಮಸ್ಯೆಗಳು ನನಗಿವೆ. ನನ್ನ ತಲೆಯನ್ನು ನಾನು ಹೆಚ್ಚು ವೇಗವಾಗಿ ಅಲ್ಲಾಡಿಸುವುದಾದರೆ, ನನಗೆ ತಲೆತಿರುಗುತ್ತದೆ. ಹಾಗೂ, ಖಿನ್ನತೆಯೊಂದಿಗಿನ ನನ್ನ ಸಮಸ್ಯೆಗಳಿಗೆ ನಾನು ಕ್ರಮವಾಗಿ ಔಷಧದ್ರವ್ಯವನ್ನು ತೆಗೆದುಕೊಳ್ಳಬೇಕು. ಆದರೂ, ನನ್ನ ಜೊತೆ ಕ್ರೈಸ್ತರು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಅದನ್ನು ನಿಭಾಯಿಸಲು ನನಗೆ ಸಹಾಯಮಾಡುತ್ತಾರೆ. ತನ್ನ ನಾಮವನ್ನು ಮತ್ತು ಉದ್ದೇಶಗಳನ್ನು ಇತರರಿಗೆ ತಿಳಿಯಪಡಿಸುವುದರಲ್ಲಿ ಕ್ರಮವಾಗಿ ಭಾಗವಹಿಸಲು ನನಗೆ ಬಲವನ್ನು ಕೊಡುತ್ತಿರುವುದಕ್ಕಾಗಿ ನಾನು ಯೆಹೋವನಿಗೆ ಬಹಳಷ್ಟು ಕೃತಜ್ಞನಾಗಿದ್ದೇನೆ.
ಎಲ್ಲಾ ಸುಯೋಗಗಳಲ್ಲಿ ಅತ್ಯಂತ ಮಹತ್ತಾದುದನ್ನು ನಾನು ಅನುಭವಿಸುತ್ತೇನೆ—ಅದೇನಂದರೆ, ಸರ್ವಶಕ್ತ ದೇವರಾದ ಯೆಹೋವನೊಂದಿಗೆ ಒಂದು ವೈಯಕ್ತಿಕ ಸಂಬಂಧವನ್ನು ಹೊಂದಿರುವುದೆ. ನಾನು ಒಬ್ಬ ಬಾಕ್ಸರಾಗಿದ್ದಾಗ ಪ್ರತಿಯೊಂದು ಕಾಳಗದ ಮೂಲಕ ನಾನು ಯೆಹೋವನ ಹೃದಯವನ್ನು ದುಃಖಪಡಿಸಿದ್ದೆ. ಈಗ ನಾನು ಆತನ ಹೃದಯವನ್ನು ಉಲ್ಲಾಸಗೊಳಿಸಬಲ್ಲಿ. “ಮಗನೇ, ಜ್ಞಾನವನ್ನು ಪಡೆದುಕೊಂಡು ನನ್ನ ಮನಸ್ಸನ್ನು ಸಂತೋಷಪಡಿಸು; ಹಾಗಾದರೆ, ನನ್ನನ್ನು ದೂರುವವನಿಗೆ ನಾನು ಉತ್ತರಕೊಡಲಾಗುವದು,” ಹೀಗೆ ಹೇಳುವಾಗ ಆತನು ವೈಯಕ್ತಿಕವಾಗಿ ನನ್ನೊಂದಿಗೆ ಮಾತಾಡುತ್ತಿದ್ದಾನೊ ಎಂಬಂತೆ ನನಗನಿಸುತ್ತದೆ.—ಜ್ಞಾನೋಕ್ತಿ 27:11.
ಎಲ್ಲಾ ಬಲಾತ್ಕಾರವನ್ನು ಮತ್ತು ಅದನ್ನು ಪ್ರವರ್ತಿಸುವವರನ್ನೂ ಒಳಗೊಂಡು, ಸೈತಾನನ ಕೆಲಸಗಳಿಗೆ ಅತಿ ಬೇಗನೆ ಯೆಹೋವನು ಅಂತ್ಯ ತರುವನು. ನನಗೆ ಒಳ್ಳೇದನ್ನು ಪ್ರೀತಿಸಲಿಕ್ಕಾಗಿ ಮಾತ್ರವಲ್ಲ, ಕೆಟ್ಟದ್ದನ್ನು ದ್ವೇಷಿಸಲೂ ಬೋಧಿಸುತ್ತಿರುವುದಕ್ಕಾಗಿ ನಾನು ಯೆಹೋವನಿಗೆ ಎಷ್ಟು ಅಭಾರಿ! ಅಪರಾಧದ ಕ್ರೀಡೆಯಾದ ಬಾಕ್ಸಿಂಗನ್ನು ದ್ವೇಷಿಸುವುದನ್ನೂ ಅದು ಒಳಗೊಳ್ಳುತ್ತದೆ. (ಕೀರ್ತನೆ 97:10)—ಆಬ್ದೂಲ್ಯೊ ನೂನ್ಯೆಸ್ರಿಂದ ಹೇಳಲ್ಪಟ್ಟಂತೆ. (g94 6/8)
[ಪುಟ 13 ರಲ್ಲಿರುವ ಚಿತ್ರ]
ಆಬ್ದೂಲ್ಯೊ ನೂನ್ಯೆಸ್