ಜಗತ್ತನ್ನು ಗಮನಿಸುವುದು
ಹತ್ತು ಲಕ್ಷ ಪ್ರತಿಶತ ಬೆಲೆಯೇರಿಕೆ
ದೇಶದ ಸಂಯುಕ್ತ ಸಂಖ್ಯಾಸಂಗ್ರಹಣ ಇಲಾಖೆಗನುಸಾರ, ಫೆಡರಲ್ ರಿಪಬ್ಲಿಕ್ ಆಫ್ ಯುಗೊಸ್ಲಾವಿಯದಲ್ಲಿ ಬೆಲೆಯೇರಿಕೆಯ ಪ್ರಮಾಣವು 1993ರ ದಶಂಬರದಲ್ಲಿ ಹತ್ತು ಲಕ್ಷ ಪ್ರತಿಶತಕ್ಕೇರಿತು. ಜೀವನವೆಚ್ಚವು ಕಳೆದ ತಿಂಗಳಿನಲ್ಲಿ ಇದ್ದುದಕ್ಕಿಂತಲೂ 2,839 ಬಾರಿ ಹೆಚ್ಚಾಗಿತ್ತು, ಮತ್ತು ವರ್ಷದ ಆರಂಭದಲ್ಲಿ ಇದ್ದುದಕ್ಕಿಂತಲೂ 6 ಲಕ್ಷ ಕೋಟಿ ಬಾರಿ ಅಧಿಕವಾಗಿತ್ತು. ಫಲಿತಾಂಶವಾಗಿ ಮುದ್ರಿಸಲ್ಪಟ್ಟ ಚಲಾವಣೆಯಲ್ಲಿರುವ ಹಣವು ಎರಡು ದಿನಗಳಲ್ಲಿ ಬೆಲೆಯಿಲ್ಲದ್ದಾಗುತ್ತದೆ. ಅದನ್ನು ನಿಭಾಯಿಸಲಿಕ್ಕಾಗಿ, ಕೇಂದ್ರಬ್ಯಾಂಕು ದಿನಾರಿನಿಂದ ಸೊನ್ನೆಗಳನ್ನು ತೆಗೆಯುತ್ತಿದೆ. ಮೂರು ತಿಂಗಳುಗಳಲ್ಲಿ, 5 ಲಕ್ಷ ಕೋಟಿ ದಿನಾರುಗಳು, ಕೇವಲ 5 ದಿನಾರುಗಳಾಗಿ ಅಪಮೌಲ್ಯನಗೊಳಿಸಲ್ಪಟ್ಟವು. (g94 7/22)
ಮದ್ಯಸಾರ-ಸಂಬಂಧಿತ ಶಸ್ತ್ರಚಿಕಿತ್ಸೆಯ ಅಪಾಯ
ಡೇನಿಷ್ ಮುಖ್ಯ ಶಸ್ತ್ರಚಿಕಿತ್ಸಕರಾದ ಡಾ. ಫಿನ್ ಹಾರ್ಟ್‌ಗನುಸಾರ, ಸ್ವಲ್ಪ ಕುಡಿಯುವ ರೋಗಿಗಳಿಗಿಂತಲೂ ಪ್ರತಿದಿನ ಮದ್ಯಸಾರದ ಐದಕ್ಕಿಂತಲೂ ಹೆಚ್ಚು ಕುಡಿತಗಳನ್ನು ಮಾಡುವ ರೋಗಿಗಳು ಶಸ್ತ್ರಚಿಕಿತ್ಸೆಯ ತರುವಾಯದ ತೊಡಕುಗಳನ್ನು ಅನುಭವಿಸುತ್ತಾರೆ. ಡೇನಿಷ್ ವೈದ್ಯಕೀಯ ಸಂಘದ ಪತ್ರಿಕೆಯು ಇತ್ತೀಚೆಗೆ ವರದಿಮಾಡಿದಂತೆ, ಮದ್ಯಸಾರದ ದುರುಪಯೋಗವು ಪ್ರಾಯೋಗಿಕವಾಗಿ ಎಲ್ಲಾ ಅಂಗವ್ಯೂಹಗಳ ಮೇಲೆ ಒಂದು ವಿಷಕಾರಿ ಪ್ರಭಾವವನ್ನು ಹೊಂದಿದೆ; ಇದು ರಕ್ತವನ್ನು ಸ್ರವಿಸುವ ಅಧಿಕ ಪ್ರವೃತ್ತಿಯನ್ನು ಹಾಗೂ ಹೃದಯದ ಮತ್ತು ಶ್ವಾಸಕೋಶದ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅಂತಹ ಪರಿಸ್ಥಿತಿಗಳು ಸಾಮಾನ್ಯವಾಗಿ ದೀರ್ಘಕಾಲದ ವರೆಗೆ ಆಸ್ಪತ್ರೆಯಲ್ಲಿ ಉಳಿಯುವುದನ್ನು ಮತ್ತು ಅಧಿಕ ರಕ್ತ ಪೂರಣಗಳನ್ನು ಅಗತ್ಯಪಡಿಸುವಂತೆ ವೈದ್ಯರನ್ನು ಪ್ರಚೋದಿಸುತ್ತವೆ. ಪ್ರತಿದಿನ ಅಧಿಕ ಪ್ರಮಾಣಗಳಲ್ಲಿ ಮದ್ಯಸಾರವನ್ನು ಕುಡಿಯುವವರು ತಮ್ಮ ಸೋಂಕು ರಕ್ಷಾ ವ್ಯವಸ್ಥೆಯನ್ನು—ಸೋಂಕಿನ ಅಪಾಯವನ್ನು ಎಬ್ಬಿಸುವ ಮೂಲಕ—ದುರ್ಬಲಪಡಿಸಿಕೊಳ್ಳುವ ಅಪಾಯವನ್ನು ಸಹ ಎದುರಿಸುತ್ತಾರೆ. ಆದಾಗ್ಯೂ, ಅನೇಕ ವಾರಗಳ ವರ್ಜಿಸುವಿಕೆಯ ಬಳಿಕ ಸೋಂಕು ರಕ್ಷಾ ವ್ಯವಸ್ಥೆಯ ಹೆಚ್ಚು ಪ್ರಗತಿಗೊಂಡಿದೆ ಎಂದು ಪರೀಕ್ಷೆಗಳು ರುಜುಪಡಿಸಿವೆ. ಯಾವುದೇ ಶಸ್ತ್ರಚಿಕಿತ್ಸೆಯ ಮೊದಲು ರೋಗಿಗಳು ಅನೇಕ ವಾರಗಳ ವರೆಗೆ ಮದ್ಯಸಾರದಿಂದ ದೂರವಿರಬೇಕು ಎಂದು ಡಾ. ಹಾರ್ಟ್ ಶಿಫಾರಸ್ಸು ಮಾಡುತ್ತಾರೆ. (g94 8/8)
ನೀರಿನ ಅಭಾವಗಳು ಕಾಣಿಸಿಕೊಳ್ಳುತ್ತಿವೆ
“ಹಿಮ ಮತ್ತು ಮಳೆಸುರಿತಗಳು ಸಂಬಂಧಸೂಚಕವಾಗಿ ಸಂತತವಾಗಿರುವುದರಿಂದ, ನವೀಕರಿಸುವ ನೀರು ಅಗತ್ಯವಾಗಿ ಪರಿಮಿತವಾಗಿರಬೇಕು” ಎಂದು ಸೈಎನ್ಸ್ ಪತ್ರಿಕೆಯು ದಾಖಲಿಸುತ್ತದೆ. “ವರ್ಷ 2025ರಷ್ಟಕ್ಕೆ, ನೀರಿನ ಅಭಾವವಿರುವ ದೇಶಗಳಲ್ಲಿ ಜೀವಿಸುತ್ತಿರುವ ಜನರ ಸಂಖ್ಯೆಯು 300 ಕೋಟಿ ಗಡಿಯನ್ನು ಸಮೀಪಿಸುವುದು” ಮತ್ತು ಈಗಾಗಲೆ “2000 ವರ್ಷದಷ್ಟಕ್ಕೆ, ಆಫ್ರಿಕದ ದೇಶಗಳು ಮತ್ತು ಮಧ್ಯಪೂರ್ವವು ವಿಶೇಷವಾಗಿ ಗಂಭೀರವಾದ ಪರಿಣಾಮಕ್ಕೊಳಗಾಗಲಿದೆ.” ಪಾಪ್ಯುಲೇಷನ್ ಆ್ಯಕ್‌ಷನ್ ಇಂಟರ್‌ನ್ಯಾಷನಲ್‌ನ ಒಂದು ವರದಿಗನುಸಾರ, ಅನೇಕ ದೇಶಗಳು ಈಗಾಗಲೆ ನೆಲಮಟ್ಟದ ನೀರಿನ ಸರಬರಾಯಿಯನ್ನು ವಿರೇಚಿಸುತ್ತಿದ್ದಾರೆ, ಮತ್ತು ತಮ್ಮ ದೀರ್ಘಾವಧಿಯ ಯೋಜನೆಯಲ್ಲಿ ನವೀಕರಿಸದಿರುವ ಹಾಗೂ ನವೀಕರಿಸುವ ನೀರಿನ ವ್ಯತ್ಯಾಸ ತಿಳಿಯಲು ಅನೇಕ ದೇಶಗಳು ತಪ್ಪಿಹೋಗುತ್ತಿವೆ. ನೀರಿನ ಸರಬರಾಯಿಗಳನ್ನು ಉತ್ತಮಗೊಳಿಸಲು ಪ್ರಯತ್ನಗಳು ಮಾಡಲ್ಪಟ್ಟಿರುವುದಾದರೂ, ಇಷ್ಟರ ವರೆಗೆ ಆ ಪ್ರಯತ್ನಗಳು ಜನಸಂಖ್ಯೆಯ ಬೆಳವಣಿಗೆಯಿಂದ ಪರಿಣಾಮಶೂನ್ಯಮಾಡಲ್ಪಟ್ಟಿವೆ. (g94 8/8)
ಸರಿಯಾಗಿ ಕೇಂದ್ರ ಬಿಂದುವಿಗೆ ತರುವುದು
ಪೇಚಾಟವನ್ನುಂಟುಮಾಡುವ ಅನೇಕ ಅಪಜಯಗಳ ಬಳಿಕ, ಅಮೆರಿಕದ ಬಾಹ್ಯಾಕಾಶ ಏಜೆನ್ಸಿಯಾದ NASA (ನ್ಯಾಷನಲ್ ಏರನಾಟಿಕ್ಸ್ ಆ್ಯಂಡ್ ಸ್ಪೇಸ್ ಆ್ಯಡ್ಮಿನಿಸ್ಟ್ರೇಷನ್) ಒಂದು ಆಭಾಸವನ್ನು ಒಂದು ವಿಜಯವಾಗಿ ಬದಲಾಯಿಸುವಂತೆ ತೋರಿಬಂತು. ಏಜೆನ್ಸಿಯು 1990ರಲ್ಲಿ ಕಕ್ಷೆಯೊಳಗೆ ಉಡಾಯಿಸಿದ ಹಬ್‌ಲ್ ಸ್ಪೇಸ್ ಟೆಲಿಸ್ಕೋಪ್‌ಗೆ ಒಂದು ದೋಷಯುಕ್ತವಾದ ಮುಖ್ಯ ದರ್ಪಣವಿದೆ, ಅದು ಟೆಲಿಸ್ಕೋಪನ್ನು ಸರಿಯಾಗಿ ಕೇಂದ್ರ ಬಿಂದುವಿಗೆ ತರುವುದರಿಂದ ತಡೆಗಟ್ಟಿದೆ. ಆದರೂ, ದಶಂಬರ 1993ರಲ್ಲಿ ವಾಹನಾತೀತ ಅಂತರಿಕ್ಷಯಾನಿಗಳು, ದೋಷಯುಕ್ತವಾದ ಟೆಲಿಸ್ಕೋಪ್‌ನ ಮೇಲೆ ದೋಷಪರಿಹಾರಕ ದೃಗ್ಯಂತ್ರವನ್ನು ಅಳವಡಿಸುತ್ತಾ, ಹಾಗೂ ಹಳತಾಗಿ ಹೋದ ಉಪಕರಣಗಳನ್ನು ಪುನಃ ಸ್ಥಾಪಿಸುತ್ತಾ 30 ತಾಸುಗಳನ್ನು ಕಳೆದರು. ಫಲಿತಾಂಶವೇನು? ನ್ಯೂ ಸೈಎನ್‌ಟಿಸ್ಟ್ ಪತ್ರಿಕೆಯು ವರದಿಮಾಡುವುದು: “ಕೆಲವೊಂದು ವಿಧಾನಗಳಲ್ಲಿ ಮೂಲತಃ ಮುಂಭಾವಿಸಿದ್ದಕ್ಕಿಂತಲೂ ಹೆಚ್ಚು ಉತ್ತಮವಾಗಿ ಹಬ್‌ಲ್ ಕೆಲಸಮಾಡುತ್ತಿದೆ.” ನ್ಯೂಸ್‌ವೀಕ್ ಪತ್ರಿಕೆಗನುಸಾರ, “ಹಬ್‌ಲ್‌ನ ತೀಕ್ಷೈತೆಯು ಈಗ ಎಷ್ಟು ವಿಸ್ತಾರವಾಗಿದೆಯೆಂದರೆ, ಅದು ಒಂದು ಮಿಣುಕು ಹುಳುವನ್ನು 14,000 ಕಿಲೊಮೀಟರುಗಳಷ್ಟು ದೂರದಿಂದ ನೋಡಲು ಸಮರ್ಥವಾಗಿದೆ.” ಈಗ ಉತ್ತಮಗೊಂಡ ಟೆಲಿಸ್ಕೋಪ್‌ನ ಮೂಲಕ ಚಿತ್ರಗಳನ್ನು ನೋಡಿದ ಬಳಿಕ, ಯೂರೋಪಿನ ಬಾಹ್ಯಾಕಾಶ ಏಜೆನ್ಸಿಯ ಡೂಕೊ ಮಾಚೆಟೊ ವರದಿಗನುಸಾರ ಉದ್ಗರಿಸಿದ್ದು: “ಓ ಎಂದಷ್ಟೇ ನಾನು ಹೇಳಬಲ್ಲೆ.” (g94 8/8)
ಮಾನಸಿಕ ಅವ್ಯವಸ್ಥೆಗಳ ಇರುವಿಕೆ
ಇಸವಿ 1994ರ ಆರಂಭದಲ್ಲಿ ದ ನ್ಯೂ ಯಾರ್ಕ್ ಟೈಮ್ಸ್ ವರದಿಸಿದ್ದು: “ಅಮೆರಿಕದ ಇಬ್ಬರಲ್ಲಿ ಬಹುಮಟ್ಟಿಗೆ ಒಬ್ಬರು—48 ಪ್ರತಿಶತ—ತಮ್ಮ ಜೀವಿತಗಳ ಯಾವುದೋ ಹಂತದಲ್ಲಿ ಒಂದು ಮಾನಸಿಕ ಅವ್ಯವಸ್ಥೆಯನ್ನು ಅನುಭವಿಸಿದ್ದಾರೆ.” ಮುಖಾಮುಖಿ ನಿರೂಪಣಾತ್ಮಕ ಸಂದರ್ಶನಗಳನ್ನು ಉಪಯೋಗಿಸಿ 8,000ಕ್ಕಿಂತಲೂ ಹೆಚ್ಚು ಪುರುಷರು ಮತ್ತು ಸ್ತ್ರೀಯರ ಕುರಿತು ಒಬ್ಬ ಸಮಾಜ ಶಾಸ್ತ್ರಜ್ಞನಿಂದ ನಡೆಸಲ್ಪಟ್ಟ ಒಂದು ಸಂಶೋಧನಾ ಅಧ್ಯಯನವು, ಪ್ರಮುಖ ಖಿನ್ನತೆಯು ಅತ್ಯಂತ ಹೆಚ್ಚು ಸಾಮಾನ್ಯವಾದ ಅವ್ಯವಸ್ಥೆಯಾಗಿತ್ತೆಂದು ಕಂಡುಕೊಂಡಿತು; ತಮ್ಮ ಜೀವಿತಾವಧಿಯಲ್ಲಿ 17 ಪ್ರತಿಶತ ಮಂದಿ ಅದನ್ನು ಅನುಭವಿಸಿದ್ದರು. ಹದಿನಾಲ್ಕು ಪ್ರತಿಶತ ಮಂದಿ ಯಾವುದೋ ಹಂತದಲ್ಲಿ ಮದ್ಯಸಾರದ ಮೇಲೆ ಅವಲಂಬಿಸಿದ್ದರು. ಟೈಮ್ಸ್ ಗಮನಿಸಿದ್ದೇನೆಂದರೆ, ಸ್ತ್ರೀಯರಲ್ಲಿ 12 ಪ್ರತಿಶತ ಮಂದಿ ಆಘಾತದ ತರುವಾಯದ ಒತ್ತಡದ ಅವ್ಯವಸ್ಥೆಯನ್ನು ಅನುಭವಿಸಿದ್ದರು, ಅವರಲ್ಲಿ ಅರ್ಧದಷ್ಟು “ಬಲಾತ್ಕಾರ ಸಂಭೋಗ ಮಾಡಲ್ಪಟ್ಟದರ್ದಿಂದ ಅಥವಾ ಲೈಂಗಿಕವಾಗಿ ಹಿಂಸಿಸಲ್ಪಟ್ಟ ಕಾರಣದಿಂದ ಆಗಿರುವುದು” ಅಧ್ಯಯನದ ಆಶ್ಚರ್ಯಗಳಲ್ಲಿ ಒಂದಾಗಿತ್ತು. ಮಾನಸಿಕ ಅವ್ಯವಸ್ಥೆಯನ್ನು ಅನುಭವಿಸಿರುವವರಲ್ಲಿ, ನಾಲ್ಕನೇ ಒಂದು ಭಾಗದಷ್ಟು ಜನರು ಮಾತ್ರ ತಜ್ಞರ ಸಹಾಯವನ್ನು ಪಡೆದುಕೊಂಡಿದ್ದಾರೆ. ಅಧ್ಯಯನವನ್ನು ನಡೆಸಿದ ಸಮಾಜ ಶಾಸ್ತ್ರಜ್ಞರಾದ ಡಾ. ರಾನಲ್ಡ್ ಕೆ. ಕೆಸರ್ಲ್ ಹೀಗೆ ಹೇಳಿದರೆಂದು ಉದ್ಧರಿಸಲಾಯಿತು: “ನಾವು ಆಲೋಚಿಸಿರುವುದಕ್ಕಿಂತಲೂ ಇನ್ನೂ ಹೆಚ್ಚು ಮಾನಸಿಕ ಅವ್ಯವಸ್ಥೆಯ ಅಸ್ತಿತ್ವದಲ್ಲಿದೆ ಎಂಬುದು ಒಂದು ಅಶುಭ ವಾರ್ತೆಯಾಗಿದೆ. ನೀವು ಆಲೋಚಿಸುವುದಕ್ಕಿಂತಲೂ ಇನ್ನೂ ಅನೇಕ ಜನರು ಗುಣಹೊಂದುವುದು—ಅಧಿಕಾಂಶ ಮಂದಿ ತಜ್ಞರ ಸಹಾಯವಿಲ್ಲದೆ—ಶುಭವಾರ್ತೆಯಾಗಿದೆ.” (g94 8/8)
ರಷ್ಯದಲ್ಲಿ ಜೀವಿಪರಿಸ್ಥಿತಿ ವಿಪತ್ತು
“ರಷ್ಯದ ಪರಿಸರ ಮಂತ್ರಿಯಾದ ವಿಕ್ಟರ್ ಡಾನೀಲಾಫ್-ಡಾನ್ಯಿಲ್ಯನ್, ರಷ್ಯದ 15 ಪ್ರತಿಶತ ಮೇಲ್ಮೈ ಕ್ಷೇತ್ರವು ಜೀವಿಪರಿಸ್ಥಿತಿ ವಿಪತ್ತಿನ ಕ್ಷೇತ್ರವಾಗಿರುವಂತೆ ಪ್ರಕಟನೆಯನ್ನು ಹೊರಡಿಸಿದರು” ಎಂದು ಜರ್ಮನ್ ವಾರ್ತಾಪತ್ರಿಕೆಯಾದ ಫ್ರಾಂಕ್‌ಫುರ್ಟರ್ ಆಲೆಮ್ಜೈನ್ ಟ್ಸೈಟ್ಸುಂಗ್ ವರದಿಸುತ್ತದೆ. ವರದಿಗನುಸಾರ, ರಷ್ಯದಲ್ಲಿ ವ್ಯಾವಸಾಯಿಕ ಪ್ರದೇಶದ ಅರ್ಧಭಾಗವು ವ್ಯವಸಾಯದ ಜಮೀನಾಗಿ ಉಪಯೋಗಿಸಲು ಅಯೋಗ್ಯವಾಗಿದೆ, ಮತ್ತು ಎಲ್ಲಿ ತೀರ ಹೆಚ್ಚು ವಿಕಿರಣವಿದೆಯೋ ಆ ಸ್ಥಳಗಳಲ್ಲಿ 1,00,000ಕ್ಕಿಂತಲೂ ಹೆಚ್ಚು ವ್ಯಕ್ತಿಗಳು ಜೀವಿಸುತ್ತಿದ್ದಾರೆ. ಇನ್ನೂ ಹೆಚ್ಚಾಗಿ, ರಾಸಾಯನಿಕ ಶಸ್ತ್ರಗಳು ತಯಾರಿಸಲ್ಪಡುತ್ತಿರುವ ಫ್ಯಾಕ್ಟರಿಗಳಲ್ಲಿ ವಿಷದಿಂದ ಸಾವಿರಗಟ್ಟಲೆ ಜನರು ಮರಣಪಟ್ಟರೆಂದು ವರದಿಯಾಗಿದೆ. ರಾಸಾಯನಿಕ ಸುರಕ್ಷೆಯ ಸಂಘದ ಅಧ್ಯಕ್ಷರಾದ, ಜೆಫ್ ಫ್ಯಾಡರಾಫ್ ಹೇಳಿಕೆ ನೀಡಿದ್ದು: “ವೈದ್ಯಕೀಯ ದೃಷ್ಟಿಕೋನದಿಂದ ವೀಕ್ಷಿಸುವುದಾದರೆ, ರಾಸಾಯನಿಕ ಯುದ್ಧವೊಂದಕ್ಕಾಗಿ ನಾವು ಮಾಡುತ್ತಿರುವ ತಯಾರಿಯು ವಿನಾಶಕರ ಪರಿಣಾಮಗಳನ್ನು ಹೊಂದಿದೆ.” (g94 7/22)
ಹಿಂಸಾಚಾರದ ಮಕ್ಕಳು
ಕೊಲೆ, ಸುಲಿಗೆ, ಬಲಾತ್ಕಾರ ಸಂಭೋಗ, ಮತ್ತು ಚಿತ್ರಹಿಂಸೆಮಾಡುವ ಮಕ್ಕಳು ಅನೇಕ ದೇಶಗಳಲ್ಲಿ ಕಂಡುಬರುತ್ತಿದ್ದಾರೆ, ಮತ್ತು ಹಿಂಸಾಚಾರ ಹಾಗೂ ಪಾಶವೀಯತೆಯ ಸಂಭವಿಸುವಿಕೆಯು ಅಧಿಕಗೊಳ್ಳುತ್ತಿದೆ. ಅಮೆರಿಕದಲ್ಲಿ 18 ವರ್ಷಗಳಿಗಿಂತಲೂ ಕಡಿಮೆ ಪ್ರಾಯದ ಯುವಜನರಿಂದ ನಡೆಸಲ್ಪಟ್ಟ ಕೊಲೆಗಳ ಸಂಖ್ಯೆಯು, ಕಳೆದ ಐದು ವರ್ಷಗಳಲ್ಲಿ ಇದ್ದುದಕ್ಕಿಂತ 85 ಪ್ರತಿಶತಕ್ಕೇರಿದೆ. ಅಪರಾಧಿಗಳಲ್ಲಿ ಅನೇಕರಿಂದ ಪ್ರದರ್ಶಿಸಲ್ಪಟ್ಟಿರುವ ಅಸಡ್ಡೆಯ ಮನೋಭಾವವು ಸಂಪೂರ್ಣವಾಗಿ ತೊಡಕನ್ನುಂಟುಮಾಡುವಂಥದಾಗಿದೆ. ಈ ಬದಲಾವಣೆಗಳಿಗೆ ಯಾವುದು ಕಾರಣವಾಗಿದೆ? “ಅದರ ಸವೆದ ಮಟ್ಟಗಳೊಂದಿಗೆ, ನಮ್ಮ ಆಕ್ರಮಣಶೀಲ ಸಮಾಜವು ಹಿಂಸಾಚಾರವನ್ನು ಅಂಗೀಕಾರಾರ್ಹವಾಗಿ ಮಾಡಿದೆ” ಎಂದು ಜರ್ಮನ್ ವಾರ್ತಾಪತ್ರಿಕೆಯಾದ ಡೇರ್ ಶ್ಪೀಗೆಲ್ ಹೇಳುತ್ತದೆ. “ಸರಿ ಮತ್ತು ತಪ್ಪಿನ, ಒಳ್ಳೆಯ ಮತ್ತು ಕೆಟ್ಟದ್ದರ ಸ್ಪಷ್ಟವಾಗಿದ ಮಟ್ಟಗಳನ್ನು . . . ಇನ್ನುಮುಂದೆ ಗುರುತಿಸಲಾಗುವುದಿಲ್ಲ.” ಅದು ಕೂಡಿಸುವುದು: “ಎಳೆಯ ಅಪರಾಧಿಗಳು ಸಹ ಬಲಿಪಶುಗಳಾಗಿದ್ದಾರೆ. ಅವರು ಎಲ್ಲಿ ಬೆಳೆಯುತ್ತಿದ್ದಾರೊ ಆ ವಯಸ್ಕ ಪ್ರಪಂಚದ ಪ್ರತಿಬಿಂಬಗಳಾಗಿದ್ದಾರೆ . . . ಹಿಂಸಾಚಾರದಿಂದ ವರ್ತಿಸುವ ಪ್ರತಿಯೊಂದು ಮಗುವು, ನಂಬಲಸಾಧ್ಯವಾದ ಪ್ರಮಾಣಗಳಲ್ಲಿ ಹಿಂಸಾಚಾರವನ್ನು ಅವಲೋಕಿಸಿದೆ ಮತ್ತು ಅಂತಸ್ಥಪಡಿಸಿಕೊಂಡಿದೆ.” ಟೀವೀಯ ಮೂಲಕ ಮಕ್ಕಳು “ಇಡೀ ಲೋಕದ ಹಿಂಸಾಚಾರವನ್ನು” ನೋಡುತ್ತಾರೆ. ಹಿಂಸಾತ್ಮಕ ವಿಡಿಯೋಗಳು, ಕಂಪ್ಯೂಟರ್ ಆಟಗಳು, ಮತ್ತು ಕೊಲ್ಲುವಿಕೆ ಹಾಗೂ ಇತರ ಹಿಂಸಾತ್ಮಕ ಕ್ರಿಯೆಗಳನ್ನು ಸ್ತುತಿಸುವ ಗೀತೆಗಳ ಮೂಲಕ ಅವರು ಪ್ರಭಾವಿಸಲ್ಪಡುತ್ತಾರೆ. ಸಮಸ್ಯೆಗಳನ್ನು ಬಗೆಹರಿಸಲು ಮತ್ತು ವಾಗ್ವಾದಗಳನ್ನು ಸರಿಪಡಿಸಲಿಕ್ಕಾಗಿ ಒಂದು ಗಮನಾರ್ಹವಾದ ಮಾರ್ಗದೋಪಾದಿ ಹಿಂಸಾಚಾರವನ್ನು ಟೀವೀ ಕಾರ್ಯಕ್ರಮಗಳು ಪ್ರಚೋದಿಸುತ್ತವೆ. “ನಾವು ಒಂದು ಅಮಾನುಷ ಸಮಾಜವಾಗಿ ಪರಿಣಮಿಸಿದ್ದೇವೆ” ಎಂದು ಹ್ಯಾಂಬರ್ಗ್‌ನ ಮನಶ್ಶಾಸ್ತ್ರದ ಪ್ರೊಫೆಸರರಾದ ಶೆಫ್ಟಾನ್ ಶ್ಮಿಟ್‌ಚೆನ್ ಹೇಳುತ್ತಾರೆ, “ಮತ್ತು ನಮ್ಮ ಮಕ್ಕಳು ಅದೇ ಮಾರ್ಗದಲ್ಲಿ ವಿಕಸನ ಹೊಂದುತ್ತಿದ್ದಾರೆ.” (g94 7/22)
ಮಗುವಿನೊಂದಿಗೆ ಮಲಗುವುದು
“ತಾಯಂದಿರು ಕೇವಲ ಒಂದು ಕೆಲಸವನ್ನು ಮಾಡುವುದಾದರೆ ನಾವು ಸಿಡ್ಸ್ (ಸಡನ್ ಇನ್‌ಫಂಟ್ ಡೆತ್ ಸಿಂಡ್ರೋಮ್)ಅನ್ನು ಕಡಿಮೆಗೊಳಿಸುವುದು ಮಾತ್ರವಲ್ಲ, ಆರೋಗ್ಯಕರವಾದ, ಸಂತೋಷಭರಿತ ಶಿಶುಗಳನ್ನು ಬೆಳೆಸುವೆವು: ಅವುಗಳ ಸ್ವಂತ ಗೋದಲಿಯಲ್ಲಿ ಅವುಗಳನ್ನು ಪ್ರತ್ಯೇಕಿಸುವುದಕ್ಕೆ ಬದಲಾಗಿ, ಮೊದಲ ಒಂದು ವರ್ಷದ ವರೆಗೆ ತಮ್ಮ ಶಿಶುಗಳನ್ನು ತಮ್ಮೊಂದಿಗೆ ಮಲಗಿಸಿಕೊಳ್ಳುವುದೆ” ಎಂದು ಕ್ಯಾಲಿಫೋರ್ನಿಯದ ಪಮೋನ ಕಾಲೇಜಿನ ಒಬ್ಬ ಪ್ರೊಫೆಸರರಾದ ಜೇಮ್ಸ್ ಮೆಕೆನ ಹೇಳುತ್ತಾರೆ. ಹೆತ್ತವರೊಂದಿಗೆ ಸಂಪರ್ಕವನ್ನು ಹೊಂದುತ್ತಾ ಮಲಗುವುದು “ರಾತ್ರಿಯೆಲ್ಲಾ ಮಗುವಿನ ಮನೋವಿಜ್ಞಾನವನ್ನು ನಿಯಂತ್ರಿಸಲು ಸಹಾಯಿಸುತ್ತದೆ” ಎಂದು ದ ಡಾಲಸ್ ಮಾರ್ನಿಂಗ್ ನ್ಯೂಸ್ ವರದಿಸುತ್ತದೆ. ಒಂದು ಶಿಶುವು ತನ್ನ ತಾಯಿಯ ಪಕ್ಕದಲ್ಲಿ ಮಲಗುವಾಗ, ಶಿಶುವಿನ “ಉಸಿರಾಟದ ವಿಧಾನಗಳು, ಹೃದಯ ಪ್ರಮಾಣಗಳು ಮತ್ತು ನಿದ್ರೆಯ ಹಂತಗಳು ಅದರ ತಾಯಿಯನ್ನು ಅನುಸರಿಸುತ್ತವೆ” ಎಂದು ಪರೀಕ್ಷೆಗಳು ದೃಢಪಡಿಸಿವೆ. ಮತ್ತು ತಾಯಿ ಹಾಗೂ ಮಗುವು ಸಾಮಾನ್ಯವಾಗಿ ಒಬ್ಬರಿಗೊಬ್ಬರು ಎದುರಾಗಿ ಮಲಗುವಾಗ, ಅದಕ್ಕೆ ಬೇಕೆನಿಸಿದಾಗ ಮಗುವು ಸುಲಭವಾಗಿ ಮೊಲೆಹಾಲನ್ನು ಸೇವಿಸಬಲ್ಲದು. “ಗೋದಲಿಯಲ್ಲಿ ಒಂಟಿಯಾಗಿರುವ ಶಿಶುಗಳು ಜ್ಞಾನೇಂದ್ರಿಯ ವ್ಯೂಹದ ಹಾನಿಯನ್ನು ಅನುಭವಿಸುತ್ತವೆ” ಎಂದು ಮೆಕೆನ ಹೇಳುತ್ತಾರೆ. “ಇದು ನಿರ್ಣಾಯಕ ಬುದ್ಧಿಗ್ರಾಹ್ಯ ವಿಕಸನದ ಕೊರತೆ ಮತ್ತು ಬಹುಶಃ ಸಿಡ್ಸ್‌ನ ಅಪಾಯದ ಪರಿಣಾಮಕ್ಕೆ ಒಯ್ಯುವ ಪರಿಸ್ಥಿತಿಗಳಿಗೆ ಮುನ್ನಡೆಸಬಲ್ಲದೆಂದು ನಾವು ಆಲೋಚಿಸುತ್ತೇವೆ.” ಯಾವ ದೇಶಗಳಲ್ಲಿ ಸಾಂಪ್ರದಾಯಿಕವಾಗಿ ಶಿಶುಗಳು ಅವುಗಳ ತಾಯಂದಿರೊಂದಿಗೆ ಮಲಗುತ್ತವೆಯೋ ಅಲ್ಲಿ ಸಿಡ್ಸ್‌ನ ಪ್ರಮಾಣಗಳು ತೀರ ಕಡಿಮೆ ಎಂದು ಸಂಖ್ಯಾಸಂಗ್ರಹಣಗಳು ತೋರಿಸುತ್ತವೆ. (g94 7/22)
ಕ್ಯಾಫೀನ್ ಮತ್ತು ಗರ್ಭಧಾರಣೆ
ಗರ್ಭಿಣಿ ಸ್ತ್ರೀಯರು ತಮ್ಮ ಕ್ಯಾಫೀನ್—ಕಾಫಿ, ಚಹಾ, ಕೋಕೋ, ಮತ್ತು ಕೋಲ ಪಾನೀಯಗಳಲ್ಲಿ ಇರುವ ಒಂದು ರಾಸಾಯನಿಕ ವಸ್ತು—ಬಳಕೆಯನ್ನು ಮಿತಗೊಳಿಸುವಂತೆ, 1980ರಲ್ಲಿ ಅಮೆರಿಕದ ಆಹಾರ ಮತ್ತು ಅಮಲೌಷಧ ಆಡಳಿತವು ಶಿಫಾರಸ್ಸು ಮಾಡಿತು. ಪ್ರಾಣಿಗಳ ಮೇಲಿನ ಪ್ರಯೋಗಗಳ ಆಧಾರದ ಮೇಲೆ ಮೊದಲಾಗಿ ಆ ಶಿಫಾರಸ್ಸು ಮಾಡಲ್ಪಟ್ಟಿತು. ಆದಾಗ್ಯೂ, ಅಂದಿನಿಂದ ಕ್ಯಾಫೀನ್‌ನ ಉಪಯೋಗದಲ್ಲಿ ಎಚ್ಚರದಿಂದಿರುವ ಅಗತ್ಯವನ್ನು ಗರ್ಭಿಣಿ ಸ್ತ್ರೀಯರ ಕುರಿತಾದ ಅಧ್ಯಯನಗಳು ಹೆಚ್ಚು ನಿರ್ಣಾಯಕವಾಗಿ ಪ್ರಕಟಪಡಿಸಿವೆ. ದಿನವೊಂದಕ್ಕೆ 300 ಮಿಲಿಗ್ರ್ಯಾಮ್‌ಗಳಿಗಿಂತ ಹೆಚ್ಚು ಕ್ಯಾಫೀನನ್ನು (ಸುಮಾರು ಮೂರು ಕಪ್‌ಗಳಷ್ಟು ಕಾಫಿ) ಕುಡಿಯುವುದು ಭ್ರೂಣವನ್ನು ಹಾನಿಮಾಡಬಲ್ಲದು ಎಂದು ಅಧಿಕಾಂಶ ಅಧ್ಯಯನಗಳು ತೋರಿಸಿರುವುದಾದರೂ, 75 ಪ್ರತಿಶತ ಗರ್ಭಿಣಿ ಸ್ತ್ರೀಯರು ಕ್ಯಾಫೀನನ್ನು ಬಳಸುತ್ತಾರೆ ಎಂದು ದ ಜರ್ನಲ್ ಆಫ್ ದಿ ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್ ಇತ್ತೀಚೆಗೆ ವರದಿಮಾಡಿತು. ಆದರೂ, ಇತ್ತೀಚಿಗಿನ ಒಂದು ಅಧ್ಯಯನವು ಸಲಹೆ ನೀಡುವುದೇನಂದರೆ, ಕ್ಯಾಫೀನ್‌ನ ಕಡಿಮೆ ಪ್ರಮಾಣಗಳು ಸಹ—ದಿನವೊಂದಕ್ಕೆ 163 ಮಿಲಿಗ್ರ್ಯಾಮ್‌ಗಳು—ಕೆಲವು ಸ್ತ್ರೀಯರಲ್ಲಿ ಸ್ವಾಭಾವಿಕವಾದ ಗರ್ಭಪಾತಗಳ ಅಪಾಯವನ್ನು ಹೆಚ್ಚಿಸಬಹುದು. ಅಧ್ಯಯನದ ಲೇಖಕರು ಬರೆಯುವುದು: “ಗರ್ಭಧಾರಣೆಯ ಸಮಯದಲ್ಲಿ ಕ್ಯಾಫೀನ್ ಪಾನೀಯಗಳ ಬಳಕೆಯನ್ನು ಕಡಿಮೆಗೊಳಿಸುವುದು ಒಂದು ನ್ಯಾಯಸಮ್ಮತವಾದ ಶಿಫಾರಸ್ಸಾಗಿರುವುದು.” (g94 8/8)
ಜೀವಿವಿಜ್ಞಾನದ ಒಪ್ಪಂದವು ನಿಯಮವಾಗಿ ಪರಿಣಮಿಸುತ್ತದೆ
ಜೂನ್ 1992ರಲ್ಲಿ ಬ್ರೆಜಿಲ್‌ನಲ್ಲಿ 167 ರಾಷ್ಟ್ರಗಳಿಂದ ಸಹಿಮಾಡಲ್ಪಟ್ಟ ಒಂದು ಒಪ್ಪಂದವು ಈ ವರ್ಷದ ಆರಂಭದಲ್ಲಿ ಅಂತಾರಾಷ್ಟ್ರೀಯ ನಿಯಮವಾಗಿ ಪರಿಣಮಿಸಿದೆ. ಕನ್ವೆನ್ಷನ್ ಆನ್ ಬಯೋಲಾಜಿಕಲ್ ಡೈವರ್ಸಿಟಿ (ಜೀವಿವಿಜ್ಞಾನದ ವಿವಿಧತೆಯ ಕುರಿತು ಅಧಿವೇಶನ) ಎಂದು ಕರೆಯಲ್ಪಟ್ಟು, ಒಪ್ಪಂದವು ಸಹಿ ಮಾಡಿದ ರಾಷ್ಟ್ರಗಳನ್ನು ತಮ್ಮ ಗಡಿರೇಖೆಗಳೊಳಗಿರುವ ಪ್ರಾಣಿಗಳನ್ನು, ಸಸ್ಯಗಳನ್ನು, ಮತ್ತು ಸೂಕ್ಷ್ಮಜೀವಿಗಳನ್ನು ಹಾಗೂ ಅಗತ್ಯವಾದ ಇರುನೆಲೆಗಳನ್ನು ಸಂರಕ್ಷಿಸಲಿಕ್ಕಾಗಿ ಮಾರ್ಗಗಳನ್ನು ನಿರ್ಮಿಸುವಂತೆ ಬದ್ಧರನ್ನಾಗಿ ಮಾಡುತ್ತದೆ. ಅಪಾಯದಲ್ಲಿ ಸಿಕ್ಕಿರುವ ಜಾತಿಗಳನ್ನು ರಕ್ಷಿಸಲಿಕ್ಕಾಗಿ ಮತ್ತು ಜೀವಿವಿಜ್ಞಾನದ ಸಂಪನ್ಮೂಲಗಳ ಯೋಗ್ಯ ಉಪಯೋಗದ ಕುರಿತು ಸಾರ್ವಜನಿಕವಾಗಿ ಎಚ್ಚರಿಕೆಯನ್ನು ಪ್ರಚೋದಿಸಲಿಕ್ಕಾಗಿ ಹಾಗೂ ಸಂರಕ್ಷಣೆಯ ಅಗತ್ಯಕ್ಕಾಗಿ, ಸಹಿಮಾಡಿದ ರಾಷ್ಟ್ರಗಳು ನಿಯಮಗಳನ್ನು ವಿಧಿಸುವ ಅಗತ್ಯವಿದೆ. ನಿರ್ಮೂಲಗೊಳಿಸುವಿಕೆಯು ಅಪಾಯವನ್ನುಂಟುಮಾಡುವ ಪ್ರಮಾಣದಲ್ಲಿ ಅಧಿಕಗೊಳ್ಳುತ್ತಿದೆ—ಮತ್ತು ವರ್ಷ 2050ರಷ್ಟರಲ್ಲಿ ಉಳಿದ ಎಲ್ಲಾ ಜಾತಿಗಳಲ್ಲಿ ಅರ್ಧದಷ್ಟು ಅಳಿಸಿಹೋಗಬಹುದು ಎಂಬ ಭಯ—ಎಂಬ ತಿಳಿವಳಿಕೆಯ ಮೂಲಕ ಒಪ್ಪಂದವು ಪ್ರೇರಿಸಲ್ಪಟ್ಟಿತು. ಒಪ್ಪಂದವು ವಾಸ್ತವವಾಗಿ ಹೇಗೆ ಕಾರ್ಯನಡಿಸುವುದು ಎಂಬುದನ್ನು ನಿರ್ಧರಿಸಲು ಸಹಿಮಾಡಿದವರು ಈ ವರ್ಷ ಸಂಧಿಸಬೇಕಾಗಿದೆ. (g94 7/22)