ಶಿಕ್ಷಣವನ್ನು ಅದರ ಸ್ಥಾನದಲ್ಲಿಡುವುದು
ಒಬ್ಬ ಕುಶಲ ಕಲಾಕಾರನು ಗಹನತೆಯ ಭ್ರಾಂತಿಯನ್ನು ಹೇಗೆ ಸೃಷ್ಟಿಸಬೇಕೆಂಬುದನ್ನು ತಿಳಿದಿದ್ದಾನೆ. ನಡುನೆಲೆ ಮತ್ತು ಹಿನ್ನೆಲೆಯಲ್ಲಿ ಇರುವವುಗಳಿಗಿಂತಲೂ ಮುನ್ನೆಲೆಯಲ್ಲಿರುವ ವಿವರಣೆಗಳಿಗೆ ಹೆಚ್ಚು ಮಹತ್ತಾದ ಪ್ರಮುಖತೆಯು ಕೊಡಲ್ಪಡುತ್ತದೆ. ಜೀವಿತದಲ್ಲಿ ನಮ್ಮ ಆದ್ಯತೆಗಳ ವಿಷಯದಲ್ಲೂ ಅದು ತದ್ರೀತಿಯದ್ದಾಗಿದೆ. ಅವುಗಳಲ್ಲಿ ಕೆಲವು ಬೇರೆಯವುಗಳಿಗಿಂತ ಹೆಚ್ಚು ಪ್ರಮುಖತೆಗೆ ಅರ್ಹವಾಗಿವೆ.
ಯೇಸು ಕ್ರಿಸ್ತನು ಹೇಳಿದ್ದು: “ತಮ್ಮ ಆತ್ಮಿಕ ಆವಶ್ಯಕತೆಯ ಅರುಹುಳ್ಳವರು ಸಂತೋಷಿತರು, ಪರಲೋಕರಾಜ್ಯವು ಅವರದು.” (ಮತ್ತಾಯ 5:3, NW) ಹೀಗೆ, ಆತ್ಮಿಕ ಮೌಲ್ಯಗಳು ಅತ್ಯಂತ ಹೆಚ್ಚು ಪ್ರಾಮುಖ್ಯವಾದವುಗಳೆಂದು ಎಣಿಸಲ್ಪಡಬೇಕು. ಅದಕ್ಕೆ ಪ್ರತಿಯಾಗಿ, ಪ್ರಾಪಂಚಿಕ ಸಂಪತ್ತುಗಳು ಕಡಿಮೆ ಮಹತ್ವವುಳ್ಳವುಗಳಾಗಿರಬೇಕು.
ಜೀವಿತದಲ್ಲಿ ಇತರ ವಿಚಾರಗಳಿಗೆ ಸಂಬಂಧಿಸಿ, ಶಿಕ್ಷಣವು ಎಷ್ಟು ಪ್ರಾಮುಖ್ಯವಾದದ್ದಾಗಿದೆ? ಖಂಡಿತವಾಗಿಯೂ ಅದು ಕ್ರೈಸ್ತನೊಬ್ಬನಿಗೆ ಅಪ್ರಾಮುಖ್ಯವಾದ ವಿವರಣೆಯಾಗಿ ಇರುವುದಿಲ್ಲ. ಅಪೊಸ್ತಲ ಪೌಲನಿಂದ ಕೊಡಲ್ಪಟ್ಟ ಶಾಸ್ತ್ರೀಯ ಹಂಗನ್ನು ನೆರವೇರಿಸಲಿಕ್ಕಾಗಿ ಸ್ವಲ್ಪ ಪ್ರಮಾಣದ ಸ್ಥಳೀಯ ಶಿಕ್ಷಣವು ಸಾಮಾನ್ಯವಾಗಿ ಅಗತ್ಯವಾಗಿದೆ: “ಯಾವನಾದರೂ ಸ್ವಂತ ಜನರನ್ನು, ವಿಶೇಷವಾಗಿ ತನ್ನ ಮನೆಯವರನ್ನು ಸಂರಕ್ಷಿಸದೆಹೋದರೆ ಅವನು ಕ್ರಿಸ್ತನಂಬಿಕೆಯನ್ನು ತಿರಸ್ಕರಿಸಿದವನೂ ನಂಬದವನಿಗಿಂತ ಕಡೆಯಾದವನೂ ಆಗಿದ್ದಾನೆ.” (1 ತಿಮೊಥೆಯ 5:8) ಇನ್ನೂ ಹೆಚ್ಚಾಗಿ, “[ಅವನು] ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ” ಮಾಡಿ, ಶಿಷ್ಯರನ್ನಾಗಿ ಮಾಡಲು ತನ್ನ ಹಿಂಬಾಲಕರಿಗೆ ಯೇಸು ಕೊಟ್ಟ ಆಜ್ಞೆಯು, ಒಬ್ಬನು ‘ಜ್ಞಾನವನ್ನು ಸ್ವೀಕರಿಸುವುದನ್ನು’ ಮತ್ತು ಬಳಿಕ ಇತರರಿಗೆ ಪರಿಣಾಮಕಾರಿಯಾಗಿ ಬೋಧಿಸುವುದನ್ನು ಅಗತ್ಯಪಡಿಸುತ್ತದೆ.—ಮತ್ತಾಯ 28:19, 20; ಯೋಹಾನ 17:3; ಅ. ಕೃತ್ಯಗಳು 17:11; 1 ತಿಮೊಥೆಯ 4:13.
ಆದರೂ, ಶಿಕ್ಷಣವನ್ನು ಅದರ ಸ್ಥಾನದಲ್ಲಿ ಇಡಬೇಕು. ಕೇವಲ ಅತಿಪಾಂಡಿತ್ಯದಿಂದ ಉತ್ಕೃಷ್ಟತೆಯನ್ನು ಪಡೆಯಲಿಕ್ಕಾಗಿ ಅಥವಾ ಪರಿಣಾಮಕಾರಕ ಡಿಗ್ರಿಗಳನ್ನು ಗಳಿಸಲಿಕ್ಕಾಗಿ ಮಾತ್ರವೇ ಅದನ್ನು ಬೆನ್ನಟ್ಟಬಾರದು. ಶಿಕ್ಷಣದ ಬೆನ್ನಟ್ಟುವಿಕೆಗೆ ಮಿತಿಮೀರಿದ ಪ್ರಮುಖತೆಯನ್ನು ಕೊಡುವುದು ಆಶಾಭಂಗವಾಗಿ ಫಲಿಸುತ್ತದೆ. ಅದು ಕೆಲವು ತಾತ್ಕಾಲಿಕ ಪ್ರಾಪಂಚಿಕ ಪ್ರಯೋಜನಗಳನ್ನು ಒದಗಿಸಬಹುದು ನಿಜ. ಆದರೆ ಜ್ಞಾನಿಯಾದ ಅರಸ ಸೊಲೊಮೋನನು ಅವಲೋಕಿಸಿದ್ದು: “ನಿಮ್ಮ ಎಲ್ಲಾ ವಿವೇಕದಿಂದಲೂ ತಿಳಿವಳಿಕೆಯಿಂದಲೂ ಮತ್ತು ಕೌಶಲದಿಂದಲೂ ಯಾವುದಾದರೂ ಕೆಲಸವನ್ನು ನೀವು ಮಾಡುತ್ತೀರಿ, ಮತ್ತು ಬಳಿಕ ಅದಕ್ಕಾಗಿ ಪ್ರಯಾಸಪಡದವನಿಗೆ ಅದೆಲ್ಲವನ್ನೂ ಬಾಧ್ಯತೆಯಾಗಿ ಬಿಡಬೇಕಾಗುವದು.”—ಪ್ರಸಂಗಿ 2:21, ಟುಡೇಸ್ ಇಂಗ್ಲಿಷ್ ವರ್ಷನ್.
ಯೆಹೋವನ ಸಾಕ್ಷಿಗಳು ಶಿಕ್ಷಣದಲ್ಲಿ ಆಸಕ್ತರಾಗಿದ್ದಾರೆ, ಕೇವಲ ಶಿಕ್ಷಣವನ್ನು ಪಡೆದುಕೊಳ್ಳಲಿಕ್ಕಾಗಿ ಅಲ್ಲ, ಆದರೆ ದೇವರ ಸೇವೆಯಲ್ಲಿ ತಮ್ಮ ಉಪಯುಕ್ತತೆಯನ್ನು ವರ್ಧಿಸಲಿಕ್ಕಾಗಿ ಮತ್ತು ತಮ್ಮನ್ನು ಬೆಂಬಲಿಸಲಿಕ್ಕಾಗಿಯೆ. ಅವರ ಶುಶ್ರೂಷೆಯು ಒಂದು ಲಾಭರಹಿತ ಕೆಲಸವಾಗಿರುವುದರಿಂದ, ಅನೇಕರು ತಮ್ಮ ಜೀವನೋಪಾಯಕ್ಕಾಗಿ ಸ್ಥಳೀಯ ಉದ್ಯೋಗವನ್ನು ಅವಲಂಬಿಸಬೇಕಾಗಿದೆ. ಪಯನೀಯರರೆಂದು ಕರೆಯಲ್ಪಡುವ, ಯೆಹೋವನ ಸಾಕ್ಷಿಗಳ ಪೂರ್ಣ ಸಮಯದ ಶುಶ್ರೂಷಕರಿಗೆ ಇದು ವಿಶೇಷವಾಗಿ ಸವಾಲೊಡ್ಡುವಂಥಾದ್ದಾಗಿರಸಾಧ್ಯವಿದೆ. ತಮಗೆ ಮತ್ತು ವಿವಾಹವಾಗಿದ್ದಲ್ಲಿ ತಮ್ಮ ಕುಟುಂಬಗಳಿಗೆ ಹಣಕಾಸಿನ ಒದಗಿಸುವಿಕೆಯನ್ನು ಮಾಡುತ್ತಾ, ಅವರು ಶುಶ್ರೂಷೆಯಲ್ಲಿ ಬಲವತ್ತಾದ ಕಾಲತಖ್ತೆಯನ್ನು ಕಾಪಾಡಿಕೊಳ್ಳಬೇಕು.a—ಜ್ಞಾನೋಕ್ತಿ 10:4.
ಒಳಗೂಡಿರುವ ವಿವಿಧ ಅಂಶಗಳನ್ನು ಪರಿಶೀಲಿಸಿದ ಬಳಿಕ, ಕೆಲವು ಯೆಹೋವನ ಸಾಕ್ಷಿಗಳು ಹೆಚ್ಚಿಗೆಯ ಶಿಕ್ಷಣವನ್ನು ಕೈಕೊಳ್ಳಲು ಆರಿಸಿಕೊಂಡಿದ್ದಾರೆ. ಶಿಕ್ಷಣವನ್ನು ಅದರ ಸ್ಥಾನದಲ್ಲಿಡಲಿಕ್ಕಾಗಿ ಅವರು ಎಚ್ಚರಿಕೆಯನ್ನು ಅಭ್ಯಸಿಸಬೇಕಾಗಿರುವುದು ನಿಶ್ಚಯ. ಇದನ್ನು ಮಾಡುವುದರಲ್ಲಿ ಅವರಿಗೆ ಯಾವುದು ಸಹಾಯ ಮಾಡಿದೆ? “ಅನೇಕ ಅಂಶಗಳು ನನಗೆ ಸಹಾಯ ಮಾಡಿವೆ” ಎಂದು ಬ್ರೆಜಿಲ್ನ ಜಾನ್ ಎಂಬ ಹೆಸರುಳ್ಳ ಯುವಕನೊಬ್ಬನು ಹೇಳುತ್ತಾನೆ. “ನಾನು ರಾತ್ರಿ ಅಭ್ಯಾಸ ಮಾಡಬೇಕಿದ್ದಾಗಲೂ, ಕ್ರೈಸ್ತ ಕೂಟಗಳನ್ನು ನಾನು ತಪ್ಪಿಸುವುದಿಲ್ಲ. ಹಾಗೂ ನಾನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿದ್ದೇನೆಂದು ಆರಂಭದಿಂದಲೂ ನನ್ನ ಸಹಪಾಠಿಗಳಿಗೆ ಸ್ಪಷ್ಟವಾಗಿಗಿ ತಿಳಿಸಿದ್ದೇನೆ.”
ತನ್ನ ಶಿಕ್ಷಣವನ್ನು ವಿಸ್ತರಿಸುವಾಗ ತನ್ನ ನಂಬಿಕೆಗಳ ಕುರಿತು ಇತರರೊಂದಿಗೆ ಮಾತಾಡುವ ಸಂದರ್ಭಗಳನ್ನು ಎರಿಕ್—ಅವನು ಸಹ ಬ್ರೆಜಿಲ್ನವನು—ಉಪಯೋಗಿಸಿಕೊಂಡನು. “ಶಾಲೆಯನ್ನು ನನ್ನ ವಿಶೇಷ ಟೆರಿಟೊರಿಯನ್ನಾಗಿ ಪರಿಗಣಿಸಿದೆನು” ಎಂದು ಅವನನ್ನುತ್ತಾನೆ. “ಅನೇಕ ಶಿಕ್ಷಕರು ಮತ್ತು ವಿದ್ಯಾರ್ಥಿಗಳೊಂದಿಗೆ ಬೈಬಲ್ ಅಧ್ಯಯನಗಳನ್ನು ನಡೆಸಲು ನಾನು ಶಕ್ತನಾಗಿದ್ದೆ, ಅವರಲ್ಲಿ ಐದು ಮಂದಿ ಈಗ ದೀಕ್ಷಾಸ್ನಾನವನ್ನು ಪಡೆದುಕೊಂಡಿದ್ದಾರೆ, ಅವರಲ್ಲಿ ಇಬ್ಬರು ಹಿರಿಯರಾಗಿ ಸೇವೆಮಾಡುತ್ತಿದ್ದಾರೆ.”
ಕರಡುಪ್ರತಿ ಮಾಡುವುದರಲ್ಲಿ ಡಿಗ್ರಿಯನ್ನು ಪಡೆದುಕೊಳ್ಳಲಿಕ್ಕಾಗಿ ರಿಚರ್ಡ್ ಅಂಶಕಾಲಿಕವಾಗಿ ಮತ್ತೆ ಶಾಲೆಗೆ ಹೋದನು. “ನನ್ನನ್ನು ಮತ್ತು ನನ್ನ ಹೆಂಡತಿಯನ್ನು ಸಂರಕ್ಷಿಸಲಿಕ್ಕಾಗಿ ಕೆಲಸವನ್ನು ಕಂಡುಕೊಳ್ಳಲು ನನ್ನ ಶಿಕ್ಷಣವು ನನಗೆ ಸಹಾಯ ಮಾಡಿತು” ಎಂದು ಅವನು ಹೇಳುತ್ತಾನೆ. “ಆದರೆ ಅದು ಒಂದು ಸುಯೋಗಕ್ಕೆ ದ್ವಾರವನ್ನೂ ತೆರೆಯಿತು. ಕ್ಷಿಪ್ರವಾಗಿ ಕಟ್ಟಲ್ಪಟ್ಟ ರಾಜ್ಯ ಸಭಾಗೃಹದ ನಿರ್ಮಾಣ ಯೋಜನೆಗಳಿಗಾಗಿ ನಾನು ಪ್ರಯಾಣಿಸಿದ್ದರಿಂದ ಮತ್ತು ಮೇಲ್ವಿಚಾರಕರೊಂದಿಗೆ ಮಾತಾಡಿದರ್ದಿಂದ, ನಕ್ಷೆಗಾರನ ಆವಶ್ಯಕತೆ ಅಲ್ಲಿತ್ತು ಎಂಬುದನ್ನು ನಾನು ತಿಳಿದುಕೊಂಡೆ. ಈಗ ನನ್ನ ವಿದ್ಯಾಭ್ಯಾಸವು ಈ ಕಾರ್ಯ ಯೋಜನೆಗಳಲ್ಲಿ ಉತ್ಪನ್ನಕಾರಿ ವಿಧಾನದಲ್ಲಿ ಉಪಯೋಗಿಸಲ್ಪಡುತ್ತಿದೆ.b ಇದಕ್ಕೆ ಕೂಡಿಸಿ, ಕೊನೆಗೆ ನನ್ನ ಹೆಂಡತಿ ಮತ್ತು ನಾನು, ಯೆಹೋವನ ಸಾಕ್ಷಿಗಳ ಜಾಗತಿಕ ಮುಖ್ಯ ಕಾರ್ಯಾಲಯದಲ್ಲಿಯಾಗಲಿ ಅಂತಾರಾಷ್ಟ್ರೀಯ ನಿರ್ಮಾಣ ಯೋಜನೆಗಳಲ್ಲಿಯಾಗಲಿ ಸೇವೆ ಮಾಡಲು ನಿರೀಕ್ಷಿಸುತ್ತೇವೆ.”
ಅದೇ ಸಮಯದಲ್ಲಿ, ಅನೇಕ ಯೆಹೋವನ ಸಾಕ್ಷಿಗಳು ಹೆಚ್ಚಿನ ಶಿಕ್ಷಣವಿಲ್ಲದೆ ತಮಗಾಗಿ ಮತ್ತು ತಮ್ಮ ಕುಟುಂಬಗಳಿಗಾಗಿ ಒದಗಿಸುವ ಸವಾಲನ್ನು ಎದುರಿಸಿದ್ದಾರೆ. “ಒಂದು ವಾರಕ್ಕೆ ಎರಡು ದಿನ ಮನೆಗೆಲಸ ಮಾಡುವ ಮೂಲಕ ನಾನು ನನ್ನನ್ನು ಪೋಷಿಸಿಕೊಳ್ಳುತ್ತೇನೆ” ಎಂದು ಮೇರಿ ವಿವರಿಸುತ್ತಾಳೆ. “ಹಾಸ್ಯವ್ಯಂಗ್ಯವಾಗಿ, ನಾನು ಯಾರಲ್ಲಿ ಕೆಲಸ ಮಾಡುತ್ತಿದ್ದೇನೋ ಅವರಲ್ಲಿ ಕೆಲವು ಜನರಿಗಿಂತಲೂ ನಾನು ಒಂದು ತಾಸಿಗೆ ಹೆಚ್ಚು ಹಣವನ್ನು ಸಂಪಾದಿಸುತ್ತೇನೆ. ಆದರೆ ನಾನು ನನ್ನ ಕೆಲಸವನ್ನು, ಆದಾಯವನ್ನು ಒದಗಿಸುವ ಒಂದು ಮಾರ್ಗವಾಗಿ ವೀಕ್ಷಿಸುತ್ತೇನೆ. ಪಯನೀಯರ್ ಕೆಲಸದಲ್ಲಿ ಮುಂದುವರಿಯುವಂತೆ ಅದು ನನ್ನನ್ನು ಶಕ್ತಳನ್ನಾಗಿ ಮಾಡುತ್ತದೆ, ಮತ್ತು ನನ್ನ ನಿರ್ಧಾರದ ಕುರಿತು ನನಗೆ ನಿರಾಶೆಯ ಭಾವನೆಗಳಿಲ್ಲ.”
ಸೀವ್ಟ್ ತದ್ರೀತಿ ಭಾವಿಸುತ್ತಾನೆ. “ನಾನು ಪಯನೀಯರ್ ಸೇವೆಯನ್ನು ಆರಂಭಿಸಿದಾಗ” ಅವನು ಹೇಳುವುದು, “ಕೆಲವರು ನನಗೆ ಹೇಳಿದ್ದು: ‘ನೀನು ವಿವಾಹವಾಗುವುದಾದರೆ ಮತ್ತು ಒಂದು ಕುಟುಂಬವನ್ನು ಹೊಂದುವುದಾದರೆ ನೀನೇನು ಮಾಡಲಿದ್ದಿ? ಜೀವಿಸಲು ಸಾಕಷ್ಟು ಹಣವನ್ನು ಸಂಪಾದಿಸಲು ನೀನು ಶಕ್ತನಾಗುವಿಯೊ?’ ಫಲಸ್ವರೂಪವಾಗಿ, ನಾನು ವಿವಿಧ ರೀತಿಯ ಎಷ್ಟೋ ಕೆಲಸಗಳನ್ನು ಮಾಡಿರುವುದರಿಂದ, ಅನೇಕ ಬೇರೆ ಬೇರೆ ಉದ್ಯೋಗಗಳಲ್ಲಿ ನನಗೆ ಅನುಭವವಾಗಿದೆ. ಈಗ ನನಗೆ ಬೆಂಬಲಿಸಲಿಕ್ಕಾಗಿ ಹೆಂಡತಿ ಇದ್ದಾಳೆ, ನಮ್ಮ ಏಜೆನ್ಸಿಯಲ್ಲಿ ಕೆಲಸ ಮಾಡುವ ಕೆಲವು ಕಾಲೇಜು ಪದವೀಧರರಿಗಿಂತಲೂ ಹೆಚ್ಚು ಹಣವನ್ನು ನಾನು ಸಂಪಾದಿಸುತ್ತಿದ್ದೇನೆಂದು ಗ್ರಹಿಸುತ್ತೇನೆ.”
ಅವಿಶ್ವಾಸಿ ತಂದೆಗಳು ಕಿರಿಯ ಮಕ್ಕಳು ಹೆಚ್ಚಿಗೆಯ ಶಿಕ್ಷಣವನ್ನು ಪಡೆದುಕೊಳ್ಳುವಂತೆ ಅಗತ್ಯಪಡಿಸಿರಬಹುದು, ಮತ್ತು ಇದನ್ನು ಮಾಡಲು ಅವರಿಗೆ ಶಾಸ್ತ್ರೀಯ ಅಧಿಕಾರವಿದೆ. ಹಾಗಿದ್ದರೂ, ಅಂತಹ ಸಂದರ್ಭಗಳಲ್ಲಿ, ಮತ್ತಾಯ 6:33ಕ್ಕನುಗುಣವಾಗಿ, ಶಾಲೆಯೊಂದಕ್ಕೆ ಹಾಜರಾಗುತ್ತಿರುವಾಗಲೇ ಪೂರ್ಣ ಸಮಯದ ಶುಶ್ರೂಷೆಯಲ್ಲಿ ಒಳಗೂಡಲಿಕ್ಕಾಗಿ ಅವರನ್ನು ಅನುಮತಿಸುವ ಅಥವಾ ಯೆಹೋವನ ಸೇವೆಯಲ್ಲಿ ಹೆಚ್ಚು ಉಪಯುಕ್ತವಾಗಿ ಪರಿಣಮಿಸುವಂತೆ ಅವರನ್ನು ಸಹಾಯಿಸುವ ಕೋರ್ಸುಗಳನ್ನು ಯುವ ಜನರು ನಿರ್ವಹಿಸಬಹುದು.
ಅತ್ಯಂತ ಮಹಾನ್ ಶಿಕ್ಷಣ
ತಮ್ಮ ಶೈಕ್ಷಣಿಕ ಸ್ಥಾನಮಾನಗಳ ಹೊರತೂ ಯೆಹೋವನ ಸಾಕ್ಷಿಗಳೆಲ್ಲರೂ ಯಾವುದನ್ನೋ ಸಮಾನವಾಗಿ ಹೊಂದಿದ್ದಾರೆ. ಇಂದು ದೊರೆಯುವ ಅತ್ಯಂತ ಪ್ರಾಮುಖ್ಯವಾದ ಶಿಕ್ಷಣದ ಮೂಲವು ದೇವರ ವಾಕ್ಯವಾದ ಬೈಬಲಿನಲ್ಲಿದೆ ಎಂದು ಅವರು ಅಂಗೀಕರಿಸುತ್ತಾರೆ. ಯೋಹಾನ 17:3 ಹೇಳುವುದು: “ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯ ಜೀವವು.” ಕ್ರೈಸ್ತನೊಬ್ಬನು ಯಾವುದೇ ರೀತಿಯ ಸ್ಥಳೀಯ ಶಿಕ್ಷಣವನ್ನು ಪಡೆದಿರಲಿ, ಯೆಹೋವನ ಮತ್ತು ಆತನ ಮಗನಾದ ಯೇಸುವಿನ ಕುರಿತಾದ ಜ್ಞಾನವನ್ನು ಪಡೆದುಕೊಳ್ಳುವುದು ಪ್ರಮುಖವಾಗಿರಬೇಕು.
ಈ ಮಾದರಿಯು ಪ್ರಥಮ ಶತಮಾನದ ಕ್ರೈಸ್ತರಿಂದ ಇಡಲ್ಪಟ್ಟಿತು. ಮೆನಹೇನನು ‘ದೇಶದ ಅಧಿಕಾರಿಯಾದ ಹೆರೋದನೊಂದಿಗೆ ಶಿಕ್ಷಣವನ್ನು ಪಡೆದುಕೊಂಡಿದ್ದನು,’ ಆದರೂ ಅಂತಿಯೋಕ್ಯ ಸಭೆಯಲ್ಲಿ ಕ್ರಿಯಾಶೀಲರಾಗಿದ್ದ ಪ್ರವಾದಿಗಳು ಮತ್ತು ಬೋಧಕರ ನಡುವೆ ಅವನು ಹಾಜರಿದ್ದನು. (ಅ. ಕೃತ್ಯಗಳು 13:1) ತದ್ರೀತಿಯಲ್ಲಿ, ಇಂದು ವಿಶ್ವವಿದ್ಯಾನಿಲಯದ ಶಿಕ್ಷಣಕ್ಕೆ ಹೋಲಿಸಸಾಧ್ಯವಿರುವ ವಿದ್ಯಾಭ್ಯಾಸವನ್ನು ಪೌಲನು ಪಡೆದುಕೊಂಡಿದ್ದನು. ಆದರೂ, ಒಬ್ಬ ಕ್ರೈಸ್ತನಾಗಿ ಪರಿಣಮಿಸಿದ ಬಳಿಕ, ಅವನು ತನ್ನ ತರಬೇತಿಯನ್ನು ಅದರ ಸ್ಥಾನದಲ್ಲಿಟ್ಟನು. ಇತರರನ್ನು ಭಯಚಕಿತಗೊಳಿಸಲಿಕ್ಕಾಗಿ ಅದನ್ನು ಉಪಯೋಗಿಸುವುದಕ್ಕೆ ಬದಲಾಗಿ, ಸಮಾಜಶಾಸ್ತ್ರ, ಕಾನೂನು ಮತ್ತು ಇತಿಹಾಸದ ಕುರಿತಾದ ತನ್ನ ಜ್ಞಾನವನ್ನು ಎಲ್ಲಾ ರೀತಿಯ ಜನರಿಗೆ ಸಾರಲಿಕ್ಕಾಗಿ ಉಪಯೋಗಿಸಿದನು.—ಅ. ಕೃತ್ಯಗಳು 16:37-40; 22:3; 25:11, 12; 1 ಕೊರಿಂಥ 9:19-23; ಫಿಲಿಪ್ಪಿ 1:7.
ಪ್ರಥಮ ಶತಮಾನದ ಕ್ರೈಸ್ತರು ಮೂಲತಃ ತಮ್ಮ ಶೈಕ್ಷಣಿಕ ಅಂತಸ್ತಿಗಾಗಿ ಹೆಸರುವಾಸಿಯಾಗಿರಲಿಲ್ಲ. ಅನೇಕರು ‘ಅಕ್ಷರಜ್ಞಾನವಿಲ್ಲದವರೂ ಸಾಧಾರಣರೂ” ರಬ್ಬಿಯ ಶಾಲೆಗಳಲ್ಲಿ ತರಬೇತಿಯನ್ನು ಪಡೆದುಕೊಳ್ಳದಿದವ್ದರೂ ಆಗಿದ್ದರು. ಆದರೆ ಅವರು ವಿದ್ಯಾಭ್ಯಾಸವಿಲ್ಲದವರಾಗಿದ್ದರು ಎಂದು ಇದು ಅರ್ಥೈಸುವುದಿಲ್ಲ. ಇದಕ್ಕೆ ಬದಲಾಗಿ, ಈ ಪುರುಷರು ಮತ್ತು ಸ್ತ್ರೀಯರು ತಮ್ಮ ನಂಬಿಕೆಯನ್ನು ಸಮರ್ಥಿಸಲು—ದೃಢತೆಯಿಂದಾಧಾರಿತ ಕಲಿಯುವಿಕೆಯ ಕುರಿತಾದ ಸಾಕ್ಷ್ಯವನ್ನು ಒದಗಿಸಿದ ಸಾಮರ್ಥ್ಯ ಸಿದ್ಧರಾಗಿದ್ದರು.—ಅ. ಕೃತ್ಯಗಳು 4:13.
ಆದುದರಿಂದ, ಎಲ್ಲಾ ಕ್ರೈಸ್ತರು ಶಿಕ್ಷಣದಲ್ಲಿ ಆಳವಾದ ಅಭಿರುಚಿಯುಳ್ಳವರಾಗಿದ್ದಾರೆ. ಅದೇ ಸಮಯದಲ್ಲಿ, ಶಿಕ್ಷಣವನ್ನು—ಮತ್ತು ಯಾವುದೇ ರೀತಿಯ ಉದ್ಯಮವನ್ನು—ಅದರ ಸೂಕ್ತವಾದ ಸ್ಥಾನದಲ್ಲಿಡುವ ಮೂಲಕ ‘ಹೆಚ್ಚು ಪ್ರಾಮುಖ್ಯವಾದ ವಿಷಯಗಳನ್ನು ದೃಢಪಡಿಸಿಕೊಳ್ಳಲು’ ಅವರು ಪ್ರಯತ್ನಿಸುತ್ತಾರೆ.—ಫಿಲಿಪ್ಪಿ 1:9, 10. (g94 8/22)
[ಅಧ್ಯಯನ ಪ್ರಶ್ನೆಗಳು]
a ಉನ್ನತ ಶಿಕ್ಷಣ ಪಡೆದ ಅಪೊಸ್ತಲ ಪೌಲನು ಗುಡಾರಮಾಡುವ—ಆ ಉದ್ಯೋಗವನ್ನು ಅವನು ತನ್ನ ತಂದೆಯಿಂದ ಕಲಿತಿರುವುದು ಸಂಭವನೀಯ—ಕೆಲಸದ ಮೂಲಕ ಶುಶ್ರೂಷೆಯಲ್ಲಿ ತನ್ನನ್ನು ಬೆಂಬಲಿಸಿಕೊಳ್ಳಲು ಆರಿಸಿಕೊಂಡನು ಎಂಬುದು ಗಮನಾರ್ಹ. ಗುಡಾರಮಾಡುವುದು ಸುಲಭವಾದ ಕೆಲಸವಾಗಿರಲಿಲ್ಲ. ಸಿಲಿಸ್ಯುಮ್ ಎಂದು ಕರೆಯಲ್ಪಡುವ ಆಡಿನ ಕೂದಲಿನ ವಸ್ತ್ರವನ್ನು ಉಪಯೋಗಿಸಲಾಗುತ್ತಿತ್ತು, ಅದು ಕಠಿನವೂ ಮತ್ತು ಒರಟಾದದ್ದೂ ಆಗಿದ್ದು ಕತ್ತರಿಸಲು ಮತ್ತು ಹೊಲಿಯಲು ಕಷ್ಟವಾಗಿ ಮಾಡುತ್ತಿತ್ತು.—ಅ. ಕೃತ್ಯಗಳು 18:1-3; 22:3; ಫಿಲಿಪ್ಪಿ 3:7, 8.
b “ಕ್ಷಿಪ್ರವಾಗಿ ಕಟ್ಟಲ್ಪಟ್ಟ” ಎಂಬ ಅಭಿವ್ಯಕ್ತಿಯು, ಯೆಹೋವನ ಸಾಕ್ಷಿಗಳಿಂದ ವಿಕಸಿಸಲ್ಪಟ್ಟು ಅತ್ಯುತ್ತಮವಾಗಿ ವ್ಯವಸ್ಥಾಪಿಸಲ್ಪಟ್ಟ ನಿರ್ಮಾಣ ವಿಧಾನಕ್ಕೆ ನಿರ್ದೇಶಿಸುತ್ತದೆ. ಈ ಕಾರ್ಯಯೋಜನೆಗಳಲ್ಲಿ ಕೆಲಸ ಮಾಡುವ ಸ್ವಯಂಸೇವಕರಿಗೆ ಸಂಬಳವು ಕೊಡಲ್ಪಡುವುದಿಲ್ಲ; ತಮ್ಮ ಸಮಯ ಮತ್ತು ಸಂಪನ್ಮೂಲಗಳನ್ನು ಅವರು ಉಚಿತವಾಗಿ ಕೊಡುತ್ತಾರೆ. ಪ್ರತಿ ವರ್ಷ ಅಮೆರಿಕದಲ್ಲಿ ಸುಮಾರು 200 ರಾಜ್ಯ ಸಭಾಗೃಹಗಳು ಕಟ್ಟಲ್ಪಡುತ್ತವೆ, ಮತ್ತು ಈ ವಿಧಾನವನ್ನುಪಯೋಗಿಸಿ ಇತರ 200 ರಾಜ್ಯ ಸಭಾಗೃಹಗಳು ಪುನರ್ರೂಪಿಸಲ್ಪಡುತ್ತವೆ.
[ಪುಟ 7 ರಲ್ಲಿರುವ ಚೌಕ]
ಒಂದು ಸುಸಂಪಾದಿತ ಶಿಫಾರಸ್ಸು
ಪ್ರೌಢ ಶಾಲೆಯಿಂದ ಪದವಿಯನ್ನು ಪಡೆಯುವ ಒಂದು ವರ್ಷಕ್ಕೆ ಮೊದಲು, ಮ್ಯಾತ್ಯೂ, ಯೆಹೋವನ ಸಾಕ್ಷಿಗಳ ಒಬ್ಬ ಪೂರ್ಣ ಸಮಯದ ಶುಶ್ರೂಷಕನೋಪಾದಿ ಒಂದು ಜೀವನ ಮಾರ್ಗವನ್ನು ಹಿಂಬಾಲಿಸುತ್ತಿರುವಾಗ, ಅವನು ತನ್ನನ್ನು ಹೇಗೆ ಬೆಂಬಲಿಸಿಕೊಳ್ಳಸಾಧ್ಯವಿದೆ ಎಂಬುದರ ಕುರಿತು ಗಂಭೀರವಾಗಿ ಆಲೋಚಿಸಿದನು. ವಿಷಯವನ್ನು ಪ್ರಾರ್ಥನಾಪೂರ್ವಕವಾಗಿ ಪರಿಗಣಿಸಿದ ಬಳಿಕ, ಅವನ ಗುರಿಯನ್ನು ತಲಪುವುದರಲ್ಲಿ ಹೆಚ್ಚಿನ ವಿದ್ಯಾಭ್ಯಾಸವು ಸಂಪತ್ತಾಗಬಹುದೆಂದು ಮ್ಯಾತ್ಯೂ ಮತ್ತು ಅವನ ಹೆತ್ತವರು ಭಾವಿಸಿದರು. ಹೀಗೆ ಅವನು ಒಂದು ವಿದ್ಯಾರ್ಥಿವೇತನಕ್ಕಾಗಿ ಅರ್ಜಿಹಾಕಿದನು. ಮ್ಯಾತ್ಯೂವಿನ ಶಾಲೆಯ ಸಲಹೆಗಾರನು ಹೀಗೆ ನಿರೂಪಿಸುವ ಒಂದು ಶಿಫಾರಸ್ಸು ಪತ್ರವನ್ನು ಅದಕ್ಕೆ ಕೂಡಿಸಿದನು:
“ಕಳೆದ ಎರಡೂವರೆ ವರ್ಷಗಳಲ್ಲಿ, ಮ್ಯಾಟ್ನ ಸಲಹೆಗಾರನು ಮತ್ತು ಸ್ನೇಹಿತನು ಆಗಿರುವ ಸಂತೋಷ ನನಗಿದೆ. ಮ್ಯಾಟ್ ಒಬ್ಬ ಸುಪ್ರತಿಷ್ಠಿತ ವ್ಯಕ್ತಿ . . . ಅವನು ನಂಬಿಕೆಯಲ್ಲಿ ಗಾಢನೂ ಮತ್ತು ಮನಗಾಣಿಸುವುದರಲ್ಲಿ ಬಲಾಢ್ಯನೂ ಆಗಿದ್ದಾನೆ, ಅದು ಅವನ ಸಂಬಂಧಗಳನ್ನು ಮತ್ತು ಚಟುವಟಿಕೆಗಳನ್ನು ವ್ಯಾಪಿಸುವಂತೆ ಮಾಡುತ್ತದೆ.
“ಕಳೆದ ವರ್ಷಗಳಲ್ಲಿ, ಮ್ಯಾತ್ಯೂ ಶುಶ್ರೂಷೆಗಾಗಿ ತರಬೇತಿ ಪಡೆಯುತ್ತಿದ್ದಾನೆ. ಅವನ ಧರ್ಮದ ಒಬ್ಬ ಶುಶ್ರೂಷಕನು ಹಣಕಾಸಿನ ಯಾವುದೇ ವೇತನವನ್ನು ಪಡೆದುಕೊಳ್ಳುವುದಿಲ್ಲ. ಸತ್ಯವಾಗಿಯೂ ಅದು ಪ್ರೀತಿಯ ಒಂದು ದುಡಿಮೆಯಾಗಿದೆ. ಒಬ್ಬ ನಿಸ್ವಾರ್ಥ ಯುವಕನಾದ ಮ್ಯಾಟ್ ಆಲೋಚನಾ ಶೀಲನೂ ವಿಚಾರಪೂರ್ಣನೂ ಆಗಿದ್ದಾನೆ. ಈ ವಿಶ್ವಾಸಿ ವ್ಯಕ್ತಿಗೆ ತನ್ನ ತರಬೇತಿಯನ್ನು ಮತ್ತು ಸ್ವಯಂಸೇವೆಯನ್ನು ಮುಂದುವರಿಸಲು ಈ ವಿದ್ಯಾರ್ಥಿವೇತನವು ಬೆಂಬಲದ ಒಂದು ಸಾಧನವನ್ನು ಒದಗಿಸಬಲ್ಲದು.
“ಸ್ವಯಂಸೇವೆ ಮತ್ತು ಸಮಾಜ ಸೇವೆಯ ವಿಷಯಕ್ಕೆ ಸಂಬಂಧಿಸಿ ಮಾತಾಡುವಾಗ, ಮ್ಯಾಟ್ ವಾರಾಂತ್ಯಗಳಲ್ಲಿ ಮತ್ತು ಶಾಲೆಯ ಬಳಿಕ ಹಾಗೂ ಬೇಸಿಗೆಯಲ್ಲಿ ಮನೆಯಿಂದ ಮನೆಗೆ ಸಾರುವ ಕಾರ್ಯದಲ್ಲಿ ಅಸಂಖ್ಯಾತ ತಾಸುಗಳನ್ನು ವ್ಯಯಿಸಿದ್ದಾನೆ. ಅವನು ಸಮಾಜದೊಳಗೆ ಮತ್ತು ವಿಸ್ತಾರವಾದ ಪ್ರಭೇಧವಿರುವ ಜನರೊಂದಿಗೆ ಕೆಲಸ ಮಾಡುತ್ತಾನೆ. ಎಳೆಯರು ಹಾಗೆಯೇ ವೃದ್ಧರು, ಇಬ್ಬರೊಂದಿಗೂ ಬೈಬಲ್ ಅಭ್ಯಾಸಗಳನ್ನು ನಡೆಸುವ ಮೂಲಕ ಮ್ಯಾಟ್ ತನ್ನ ಮುಂದಾಳುತನದ ಸಾಮರ್ಥ್ಯಗಳನ್ನು ಮತ್ತು ಕೌಶಲಗಳನ್ನು ಪ್ರದರ್ಶಿಸಿದ್ದಾನೆ. . . . ಜನರನ್ನು ಪ್ರಚೋದಿಸಲು ಮತ್ತು ಅವರು ತಮ್ಮ ನೈಜ ಸಾಧ್ಯತೆಯನ್ನು ಗ್ರಹಿಸುವಂತೆ ಸಹಾಯ ಮಾಡಲು ಅವನು ಶಕ್ತನಾಗಿದ್ದಾನೆ. ತರಗತಿಕೋಣೆಯಲ್ಲಿ, ಅವನು ಯಾವಾಗಲೂ ಸಕಾರಾತ್ಮಕವಾದ ಪ್ರಭಾವವಾಗಿದ್ದಾನೆಂದು ಶಿಕ್ಷಕರು ಹೇಳಿಕೆ ನೀಡಿದ್ದಾರೆ. ಅವನು ಕ್ಲಾಸಿನ ಚರ್ಚೆಗಳನ್ನು ಮಾರ್ಗದರ್ಶಿಸುತ್ತಾನೆ ಮತ್ತು ಒಬ್ಬ ಸಮರ್ಥ ಚರ್ಚಾಸ್ಪರ್ಧಿಯಾಗಿದ್ದಾನೆ. . . .
“ನನಗೆ ಸಲಹೆ ನೀಡಲು ಮನಸ್ಸಂತೋಷವಿದ್ದ ಅತ್ಯುತ್ತಮ ಯುವಕರಲ್ಲಿ ಮ್ಯಾಟ್ ಒಬ್ಬನಾಗಿದ್ದಾನೆ. ಅವನನ್ನು ಅವನ ಸಮಾನಸ್ಥರು ಮತ್ತು ಶಿಕ್ಷಕರು ಹೆಚ್ಚು ಮೆಚ್ಚುತ್ತಾರೆ ಮತ್ತು ಗೌರವಿಸುತ್ತಾರೆ. ಅವನ ಸಮಗ್ರತೆಯು ಅತಿ ಹೆಚ್ಚು ಉತ್ಕೃಷ್ಟತೆಯದ್ದಾಗಿದೆ.”
[ಪುಟ 9 ರಲ್ಲಿರುವ ಚಿತ್ರಗಳು]
ಪ್ರಥಮವಾಗಿ ದೇವರ ಅಧಿಕ ಪರಿಣಾಮಕಾರಿ ಸೇವಕರಾಗಲಿಕ್ಕಾಗಿ, ಯೆಹೋವನ ಸಾಕ್ಷಿಗಳು ಶಿಕ್ಷಣದಲ್ಲಿ ಆಸಕ್ತರಾಗಿದ್ದಾರೆ