ಬೆಚ್ಚನೆಯ ನೀರಿನ ಸೀಲ್ ಪ್ರಾಣಿಯೊ?
ಸೀಲ್ಗಳು ಅನೇಕ ವೇಳೆ ಹಿಮಮಯವಾದ, ಉತ್ತರ ಧ್ರುವ ಯಾ ದಕ್ಷಿಣ ಧ್ರುವದ ಬಿಳುಪಾದ ವಿಸ್ತಾರ ಕ್ಷೇತ್ರದಲ್ಲಿ ಚಿತ್ರಿಸಲ್ಪಡುತ್ತವೆ. ಆದರೆ ಕೆಲವು ಸೀಲ್ಗಳು ಶುಷ್ಕವಾದ ಸಮುದ್ರ ಕರೆಯ ಮರಳಿನಲ್ಲಿ ಬಿಸಿಲು ಕಾಯಿಸಿಕೊಂಡು, ಸಮಶೀತೋಷ್ಣ ಹವಾಮಾನದಲ್ಲಿ ಅಭಿವೃದ್ಧಿ ಹೊಂದಸಾಧ್ಯವೆಂದು ನಿಮಗೆ ತಿಳಿದಿದೆಯೊ?
ನೀಳದಲ್ಲಿ 12 ಅಡಿಗಳಷ್ಟಿರುವ ಭೂಮಧ್ಯ ಸಮುದ್ರದ ಮಂಕ್ (ಸಂನ್ಯಾಸಿ) ಸೀಲನ್ನು ಸಂಧಿಸಿರಿ, ಈ ಬೆಚ್ಚನೆಯ ನೀರಿನ ಸೀಲ್ ಬಿಳುಪಾದ ಹೊಟ್ಟೆ ಮತ್ತು ಎದೆಯ ಭಾಗದೊಂದಿಗೆ, ಚಿಕ್ಕ ಕಂದುಬಣ್ಣದ ಮಚ್ಚೆಗಳಿಂದ ಕೂಡಿದ ದಟ್ಟವಾದ ಕೂದಲನ್ನು ಹೊಂದಿದೆ. ಕೆಲವು ಧಾರ್ಮಿಕ ಪಂಗಡಗಳ ತೊಡಿಗೆಗೆ ಸದೃಶವಾದ ಈ ಪ್ರತ್ಯೇಕ ಬಣ್ಣಗಳು, ಅದರ ಹೆಸರನ್ನು ವಿವರಿಸಬಹುದು.
ಹಲವು ಬೈಬಲಿನ ಭಾಗಗಳು ದೇವಾಲಯದಲ್ಲಿ ಗುಡಾರ ಮತ್ತು ಪಾತ್ರೆಗಳನ್ನು ಮುಚ್ಚುತ್ತಿದ್ದ, ಟಾಕಾಷ್ (ಹೀಬ್ರೂವಿನಲ್ಲಿ) ಎಂದು ಕರೆಯಲ್ಪಡುವ ಒಂದು ಚರ್ಮದ ಕುರಿತಾಗಿ ಉಲ್ಲೇಖಿಸುತ್ತವೆ. (ವಿಮೋಚನಾಕಾಂಡ 25:5; 26:14; ಅರಣ್ಯಕಾಂಡ 4:8) ಟಾಕಾಷ್ ಎಂಬುದು ಸೀಲ್ಚರ್ಮಕ್ಕೆ ಸೂಚಿಸುತ್ತದೆಂದು ಕೆಲವು ಪ್ರವೀಣರು ಹೇಳುತ್ತಾರೆ. ಇದು ಭೂಮಧ್ಯ ಸಮುದ್ರದ ಮಂಕ್ ಸೀಲ್ನ ಚರ್ಮವಾಗಿರಬಹುದಿತ್ತೋ? ಪ್ರಾಚೀನ ಭೂಮಧ್ಯ ಸಮುದ್ರದಲ್ಲಿ ಈ ಪ್ರಾಣಿಯ ಇರುವಿಕೆಯು ಈ ಊಹೆಯನ್ನು ಸಮಂಜಸಗೊಳಿಸುತ್ತದೆ.
ಪ್ರಾಚೀನ ಕಥೆಗಳು ಮಂಕ್ ಸೀಲ್ಗೆ ವಿಶೇಷ ಸಾಮರ್ಥ್ಯಗಳು ಇವೆಯೆಂದು ಹೇಳಿದವು. ಅದರ ಚರ್ಮವು ಮಿಂಚಿನ ಹೊಡೆತಗಳನ್ನು ತಪ್ಪಿಸಬಲ್ಲದು ಮತ್ತು ಕೃಷಿಮಾಡಲ್ಪಟ್ಟ ಹೊಲದಲ್ಲಿ ಆನೆಕಲ್ಲು ಬೀಳುವುದನ್ನು ತಡೆಯಬಲ್ಲದೆಂದು ಕೆಲವರು ನಂಬಿದ್ದರು. ಸೀಲ್ನ ಚರ್ಮದ ಕೂದಲುಗಳು ನಿಂತಾಗ ಅದು ಸಿಡಿಲು ಮಳೆಯ ಬರುವಿಕೆಯನ್ನು ಸೂಚಿಸುತ್ತದೆಂದೂ, ಸಮತಲವಾಗಿರುವಾಗ ಸಿಡಿಲು ಮಳೆಯ ಸಮಾಪ್ತಿಯು ಸನ್ನಿಹಿತವೆಂಬುದನ್ನು ಸೂಚಿಸುತ್ತದೆಂದೂ ಹೇಳಲಾಗುತ್ತಿತ್ತು.
ಅದರ ಈ ಊಹಿತ ಸಾಮರ್ಥ್ಯದ ಕಾರಣ, ದಯಾರಹಿತ ಬೇಟೆಗಾರರು ಅದು ಬಹುಮಟ್ಟಿಗೆ ಇಲ್ಲದೆ ಹೋಗುವಂತೆ ಮಾಡಿದರು. ಹಾಗಿದ್ದರೂ, ಇತ್ತೀಚೆಗೆ, ಸಾರ್ಡಿನಿಯದ ಪೂರ್ವಮಧ್ಯ ಭಾಗದ ಕಡಲಿನಲ್ಲಿ ಇದು ಕಂಡುಹಿಡಿಯಲ್ಪಟ್ಟಿದೆ. ದೇವರ ಹೊಸ ಲೋಕದಲ್ಲಿ ಯಾವಾಗ ಮನುಷ್ಯನ ಮತ್ತು ಪ್ರಾಣಿಯ ನಡುವೆ ಸಾಮರಸ್ಯವು ಪುನಃಸ್ಥಾಪಿಸಲ್ಪಡುತ್ತದೋ ಆಗ, ಭೂಮಧ್ಯ ಸಮುದ್ರದ ಮಂಕ್ ಸೀಲ್ ನಿಸ್ಸಂದೇಹವಾಗಿ ನೆಮ್ಮದಿಯ ಮತ್ತು ಶಾಂತವಾದ ತೀರಗಳನ್ನು ಪುನಃ ಸಂಪಾದಿಸುವುದು, ಅಲ್ಲಿ ಲೋಭಿ ಮಾನವರಿಂದ ಬೆದರಿಕೆಯಿಲ್ಲದೆ ಅದು ಬಿಸಿಲು ಕಾಯಿಸಿಕೊಳ್ಳಲು ಶಕ್ತವಾಗುವುದು.—ಯೆಶಾಯ 11:6-9.
[ಪುಟ 31 ರಲ್ಲಿರುವ ಚಿತ್ರ ಕೃಪೆ]
Panos Dendrinos/HSSPMS