ಯುವ ಜನರು ಪ್ರಶ್ನಿಸುವುದು . . .
ನಾನು ಅಕ್ಷಮ್ಯ ಪಾಪವನ್ನು ಮಾಡಿದ್ದೇನೊ?
“ನಾನು ಎಂದಿಗೂ ಅಷ್ಟು ಎದೆಗುಂದಿರಲಿಲ್ಲ. ಇನ್ನು ಮುಂದೆ ಯಾವುದೇ ಆತ್ಮಗೌರವವು ನನಗಿರಲಿಲ್ಲ ಮತ್ತು ದೇವರು ನನ್ನನ್ನು ಎಂದಿಗೂ ಕ್ಷಮಿಸುವುದಿಲ್ಲವೆಂದು ನಾನು ನೆನಸಿದೆ.”—ಮಾರ್ಕೋ.a
“ನಾನು ತುಂಬಾ ಎದೆಗುಂದಿದ್ದೆ. ಅಪರಾಧಿತನವು ನನ್ನ ಹೃದಯವನ್ನು ಮಬ್ಬುಗವಿಸಿತು. ನಾನು ಕೆಲವು ಅಕ್ಷಮ್ಯ ದೋಷಗಳನ್ನು ಮಾಡಿದ್ದೆನೆಂದು ನೆನಸಿದೆ.”—ಆಲ್ಬರ್ಟೋ.
“ಪಾಪಮಾಡದ ಮನುಷ್ಯನು ಒಬ್ಬನೂ ಇಲ್ಲವಲ್ಲಾ,” ಎಂದು ಬೈಬಲು ಹೇಳುತ್ತದೆ. (1 ಅರಸು 8:46) ಆದರೆ ಕೆಲವೊಂದು ವೇಳೆ ಒಬ್ಬ ಯೌವನಸ್ಥನು ಒಂದು ಸಾಮಾನ್ಯ ತಪ್ಪಿಗಿಂತ ಹೆಚ್ಚನ್ನು ಮಾಡಿದ್ದೇನೆಂದು ನೆನಸಬಹುದು. ಮಾರ್ಕೋ ಮತ್ತು ಆಲ್ಬರ್ಟೋವಿನಂತೆ, ಆತನು ದಯೆಯಿಲ್ಲದ ಅಪರಾಧಿಭಾವದಿಂದ ಅದುಮಿಸಲ್ಪಡಬಹುದು. ತಾನು ಮಾಡಿರುವುದು ಎಷ್ಟು ತುಚ್ಛವೂ, ಕೆಟ್ಟದ್ದೂ ಆಗಿದೆಯೆಂದರೆ ದೇವರು ತನ್ನನ್ನು ಎಂದಿಗೂ ಕ್ಷಮಿಸಲಾರನೆಂದು ಅವನು ನೆನಸಬಹುದು.
ಈ ರೀತಿಯ ಅನಿಸಿಕೆಗಳು ನಿಮ್ಮನ್ನು ವ್ಯಥೆಗೊಳಿಸಿದರೆ ಆಗೇನು? ಧೈರ್ಯವುಳ್ಳವರಾಗಿರಿ. ನಿಮ್ಮ ಪರಿಸ್ಥಿತಿ ಆಶಾರಹಿತವಲ್ಲವೇ ಅಲ್ಲ.
ನಮ್ಮ ಮನಸ್ಸಾಕ್ಷಿ ನಮ್ಮನ್ನು ನೋಯಿಸುವ ಕಾರಣ
ಒಂದು ಅವಿವೇಕದ ತಪ್ಪನ್ನು ನೀವು ಮಾಡಿರುವುದಾದರೆ ಕೆಟ್ಟದಾಗಿ ಅನಿಸುವುದು ಸ್ವಾಭಾವಿಕ ಮಾತ್ರವೇ. ನಾವೆಲ್ಲರೂ ಬೈಬಲು “ಮನಸ್ಸಾಕ್ಷಿ” ಎಂದು ಕರೆಯುವ ಸಹಜಶಕ್ತಿಯೊಂದಿಗೆ ಹುಟ್ಟಿದ್ದೇವೆ. ಇದು ಒಳ್ಳೇದರ ಮತ್ತು ಕೆಟ್ಟದರ ಒಂದು ಅಂತಸ್ಥ ಪ್ರಜ್ಞೆಯಾಗಿದೆ, ಸಾಮಾನ್ಯವಾಗಿ ಯಾವುದಾದರೊಂದು ಕೆಟ್ಟದ್ದನ್ನು ಮಾಡುವಾಗ ಬಾರಿಸುವ ಒಂದು ಆಂತರಿಕ ಸೂಚಕ ಧ್ವನಿಯಾಗಿದೆ. (ರೋಮಾಪುರ 2:14, 15) ಉದಾಹರಣೆಗಾಗಿ, ರಾಜ ದಾವೀದನನ್ನು ಪರಿಗಣಿಸಿರಿ. ಆತನು ಬೇರೊಬ್ಬ ವ್ಯಕ್ತಿಯ ಹೆಂಡತಿಯೊಡನೆ ವ್ಯಭಿಚಾರ ಮಾಡಿದನು. ತದನಂತರ, ಅವಳ ಗಂಡನಾದ ಊರೀಯನು ನಿಶ್ಚಿತ ಮರಣಕ್ಕೆ ಕಳುಹಿಸಲ್ಪಡುವಂತೆ ಮಾಡಿದನು. (2 ಸಮುವೇಲ 11:2-17) ದಾವೀದನ ಮೇಲೆ ಆದ ಪರಿಣಾಮ?
“ಹಗಲಿರುಳು [ದೇವರ] ಶಿಕ್ಷಾಹಸ್ತವು ನನ್ನ ಮೇಲೆ ಭಾರವಾಗಿತ್ತು,” ಎಂದು ದಾವೀದನು ಒಪ್ಪಿಕೊಂಡನು. ಹೌದು, ದೈವಿಕ ಅಸಮ್ಮತಿಯ ಭಾರವನ್ನು ಆತನು ಅನುಭವಿಸಿದನು. ದಾವೀದನು ಮತ್ತೂ ಹೇಳಿದ್ದು: “ನನ್ನ ಪಾಪದಿಂದ ನನ್ನ ಎಲುಬುಗಳಲ್ಲಿ ಸ್ವಲ್ಪವೂ ಕ್ಷೇಮವಿಲ್ಲ. ನನ್ನ ಅಪರಾಧಗಳು ನನ್ನನ್ನು ಮುಣುಗಿಸಿಬಿಟ್ಟವೆ; ಅವು ಹೊರಲಾರದಷ್ಟು ಭಾರವಾದ ಹೊರೆಯಂತೆ ನನ್ನನ್ನು ಅದಿಮಿಬಿಟವ್ಟೆ. . . . ಯಾವಾಗಲೂ ದುಃಖದಿಂದ ವಿಕಾರಿಯಾಗಿ ಅಲೆಯುತ್ತೇನೆ.” (ಕೀರ್ತನೆ 32:4; 38:3-6) ದಾವೀದನ ಮನಸ್ಸಾಕ್ಷಿಯು ಆತನು ಸಕಾರಾತ್ಮಕ ಕ್ರಿಯೆಯನ್ನು ತೆಗೆದುಕೊಳ್ಳುವಂತೆ ಮತ್ತು ಆತನ ತಪ್ಪಿಗೆ ಪಶ್ಚಾತ್ತಾಪ ಪಡುವಂತೆ ನಡೆಸುವ ತನಕವೂ ವ್ಯಥೆಗೊಳಿಸುವದನ್ನು ಮುಂದುವರಿಸಿತು.
ತದ್ರೀತಿಯಲ್ಲಿ, ನೀವು ಕ್ರಿಸ್ತೀಯ ಹೆತ್ತವರಿಂದ ಶಿಕ್ಷಿತರಾಗಿದ್ದರೆ ಮತ್ತು ನೀವು ಬೈಬಲಿನ ಮಟ್ಟಗಳನ್ನು ಬಿಟ್ಟುಹೋಗುವುದಾದರೆ ನಿಮಗೆ ಕೆಟ್ಟದಾಗಿ ಅನಿಸಬಹುದು. ಈ ಪರಿತಾಪದ ಅನಿಸಿಕೆ ಸಹಜವಾದದ್ದೂ, ಆರೋಗ್ಯಕರವೂ ಆಗಿದೆ. ಇದು ಒಬ್ಬ ವ್ಯಕ್ತಿಯು ತನ್ನನ್ನು ಸರಿಪಡಿಸಿಕೊಳ್ಳಲು ಅಥವಾ ಒಂದು ತಪ್ಪು, ಸುದೃಢ ಚಟವಾಗುವ ಮುಂಚೆ ಸಹಾಯವನ್ನು ಪಡೆದುಕೊಳ್ಳಲು ಪ್ರೇರಿಸಬಲ್ಲದು. ಮತ್ತೊಂದು ಕಡೆ, ಯಾವ ಒಬ್ಬ ವ್ಯಕ್ತಿ ಪಾಪದಲ್ಲಿ ಪಟ್ಟುಹಿಡಿಯುವನೋ ಅವನು ತನ್ನ ಮನಸ್ಸಾಕ್ಷಿಯನ್ನು ಹಾನಿಪಡಿಸುವನು. ಸಕಾಲದಲ್ಲಿ ಅದು ಜಡವಾದ, ಬತ್ತಿಹೋದ ಚರ್ಮದಂತೆ ಆಗುವುದು. (1 ತಿಮೊಥೆಯ 4:2) ನಿಶ್ಚಯವಾಗಿ ನೀತಿ ಭ್ರಷ್ಟತೆಯು ಹಿಂಬಾಲಿಸುವುದು.—ಗಲಾತ್ಯ 6:7, 8.
ದಿವ್ಯ ವಿಷಣ್ಣತೆ
ತರುವಾಯ, “ಮರಣಕರವಾದ ಒಂದು ಪಾಪವನ್ನು” ಕುರಿತು ಬೈಬಲು ಮಾತಾಡುವುದು ಆಶ್ಚರ್ಯಕರವಲ್ಲ. (1 ಯೋಹಾನ 5:16; ಹೋಲಿಸಿ ಮತ್ತಾಯ 12:31.) ಅಂಥ ಒಂದು ಪಾಪವು ಕೇವಲ ಒಂದು ಶಾರೀರಿಕ ಬಲಹೀನತೆಯಲ್ಲ. ಅದನ್ನು ಉದ್ದೇಶಪೂರ್ವಕವಾಗಿ, ಹಟಮಾರಿತನದಿಂದ, ಮೊಂಡುತನದಿಂದ ಮಾಡಲಾಗುತ್ತದೆ. ಒಂದು ಪಾಪವನ್ನು ಅಕ್ಷಮ್ಯವಾಗಿ ಮಾಡುವುದು ಪಾಪಿಷ್ಠಿನ ಹೃದಯದ ಸ್ಥಿತಿಯಾಗಿದೆ, ಪಾಪವು ತಾನೇ ಅಲ್ಲ.
ನಿಮ್ಮ ಅಯೋಗ್ಯ ನಡತೆಯಿಂದ ನೀವು ಘಾಸಿ ಮತ್ತು ನೋವನ್ನು ಅನುಭವಿಸುವ ನಿಜತ್ವವು, ನೀವು ಒಂದು ಅಕ್ಷಮ್ಯ ಪಾಪವನ್ನು ಮಾಡಿರುವುದಿಲ್ಲ ಎಂದು ತೋರಿಸುತ್ತದೆ. “ದಿವ್ಯ ರೀತಿಯ ದುಃಖವು ರಕ್ಷಣೆಗೆ ನಡೆಸುವ ಪಶ್ಚಾತ್ತಾಪಕ್ಕೆ ಅನುಕೂಲವಾಗಿದೆ” ಎಂದು ಬೈಬಲು ಹೇಳುತ್ತದೆ. (2 ಕೊರಿಂಥ 7:10, NW) ನಿಶ್ಚಯವಾಗಿ, ಯಾಕೋಬ 4:8-10ರಲ್ಲಿ ಕೊಟ್ಟಿರುವ ಪ್ರಬೋಧನೆಯನ್ನು ಗಮನಿಸಿರಿ: “ಪಾಪಿಗಳೇ, ನಿಮ್ಮ ಕೈಗಳನ್ನು ಶುಚಿಮಾಡಿಕೊಳ್ಳಿರಿ; ಎರಡು ಮನಸ್ಸುಳ್ಳವರೇ, ನಿಮ್ಮ ಹೃದಯಗಳನ್ನು ನಿರ್ಮಲಮಾಡಿಕೊಳ್ಳಿರಿ. ದುಃಖಿಸಿರಿ, ಗೋಳಾಡಿರಿ, ಕಣ್ಣೀರಿಡಿರಿ; ನಗುವದನ್ನು ಬಿಟ್ಟು ಗೋಳಾಡಿರಿ; ಸಂತೋಷವನ್ನು ಬಿಟ್ಟು ಮನಗುಂದಿದವರಾಗಿರಿ. ಕರ್ತನ [ಯೆಹೋವನ, NW] ಮುಂದೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ; ಆಗಲಾತನು ನಿಮ್ಮನ್ನು ಮೇಲಕ್ಕೆ ತರುವನು.”
ಒಂದು ತಪ್ಪು ಗಂಭೀರವಾದದ್ದಾಗಿರಬಹುದು ನಿಜ. ಉದಾಹರಣೆಗಾಗಿ, ಯುವತಿ ಜೂಲಿ, ಒಬ್ಬ ಪ್ರಣಯಸ್ನೇಹಿತನೊಂದಿಗೆ ಮುದ್ದಿಸುವುದು ಮತ್ತು ಆಲಂಗಿಸುವುದರಲ್ಲಿ ಒಳಗೊಂಡಳು. ಅವಳು ನಿವೇದಿಸುವುದು “ಮೊದಲು ನನಗೆ ತುಂಬ ಅಪರಾಧಿಭಾವನೆ ಆಯಿತು, ಆದರೆ ಸಮಯ ಹೋದ ಹಾಗೆ ನಾನು ಅದಕ್ಕೆ ಹೊಂದಿಕೊಂಡೆ. ಅದು ನನ್ನ ಮನಸ್ಸಾಕ್ಷಿಯನ್ನು ಅಷ್ಟೊಂದು ಕ್ಲೇಶಗೊಳಿಸಲಿಲ್ಲ.” ಸಕಾಲದಲ್ಲಿ, ಅಶುದ್ಧ ಕ್ರಿಯೆಯು ಲೈಂಗಿಕ ಸಂಭೋಗವನ್ನು ಮಾಡುವ ತನಕ ನಡೆಸಿತು. “ನನಗೆ ಸಂಕಟವಾಯಿತು” ಅನ್ನುತ್ತಾಳೆ ಜೂಲಿ. “ನನ್ನ ಮನಸ್ಸಾಕ್ಷಿಯು ಎಷ್ಟು ದುರ್ಬಲವಾಯಿತೆಂದರೆ ಅದು ಅನೇಕ ಬಾರಿ ಸಂಭವಿಸಿತು.”
ಅಂಥ ಒಂದು ಪರಿಸ್ಥಿತಿಯು ಆಶಾರಹಿತವೊ? ಅನಿವಾರ್ಯವಾಗಿ ಇಲ್ಲ. ಯೆಹೂದದ ರಾಜರಲ್ಲಿ ಒಬ್ಬನಾದ ಮನಸ್ಸೆಯ ಕುರಿತೇನು? ಪ್ರೇತವ್ಯವಹಾರ ಮತ್ತು ಶಿಶು ಆಹುತಿಯನ್ನು ಒಳಗೊಂಡು, ಅತಿ ಗಂಭೀರವಾದ ಪಾಪವನ್ನು ಆತನು ಮಾಡಿದನು. ಆದರೂ, ಆತನ ಪ್ರಾಮಾಣಿಕ ಪಶ್ಚಾತ್ತಾಪದ ಕಾರಣ ದೇವರು ಆತನನ್ನು ಕ್ಷಮಿಸಿದನು. (2 ಪೂರ್ವಕಾಲವೃತ್ತಾಂತ 33:10-13) ರಾಜ ದಾವೀದನ ಕುರಿತಾಗಿ ಏನು? ಆತನ ಕುತ್ಸಿತ ಕ್ರಿಯೆಗಳಿಂದ ಪಶ್ಚಾತ್ತಾಪಪಟ್ಟು, ಯೆಹೋವನು “ಒಳ್ಳೆಯವನೂ ಕ್ಷಮಿಸುವವನೂ” ಆದ ದೇವರೆಂದು ಆತನು ಕಂಡುಕೊಂಡನು.—ಕೀರ್ತನೆ 86:5.
ಇಂದು ಕ್ರೈಸ್ತರಿಗೆ ಈ ಭರವಸೆ ಇದೆ: “ನಮ್ಮ ಪಾಪಗಳನ್ನು ಒಪ್ಪಿಕೊಂಡು ಅರಿಕೆ ಮಾಡಿದರೆ ಆತನು ನಂಬಿಗಸ್ತನೂ ನೀತಿವಂತನೂ ಆಗಿರುವದರಿಂದ ನಮ್ಮ ಪಾಪಗಳನ್ನು ಕ್ಷಮಿಸಿಬಿಟ್ಟು ಸಕಲ ಅನೀತಿಯನ್ನು ಪರಿಹರಿಸಿ ನಮ್ಮನ್ನು ಶುದ್ಧಿ ಮಾಡುವನು.” (1 ಯೋಹಾನ 1:9) ಈ ಪಾಪನಿವೇದನೆಯನ್ನು ಒಬ್ಬನು ಯಾರಿಗೆ ಮಾಡಬೇಕು? ಪ್ರಧಾನವಾಗಿ, ಯೆಹೋವ ದೇವರಿಗೆ. “ನಿಮ್ಮ ಹೃದಯವನ್ನು ಆತನ ಮುಂದೆ ಬಿಚ್ಚಿರಿ.” (ಕೀರ್ತನೆ 32:5; 62:8) ದಾವೀದನ ಪಶ್ಚಾತ್ತಾಪದ ಪಾಪನಿವೇದನೆಯನ್ನು ಕೀರ್ತನೆ 51ರಲ್ಲಿ ಓದುವುದು ನಿಮಗೆ ಸಹಾಯಕರವಾಗಬಹುದು.
ಇದಕ್ಕೆ ಕೂಡಿಸಿ, ಯಾರು ಗಂಭೀರವಾದ ಪಾಪದಲ್ಲಿ ಬಿದ್ದಿದ್ದಾರೊ ಅವರು ಸಭೆಯ ಹಿರಿಯರೊಡನೆ ಮಾತಾಡುವಂತೆ ಬೈಬಲು ಕ್ರೈಸ್ತರನ್ನು ಪ್ರಚೋದಿಸುತ್ತದೆ. (ಯಾಕೋಬ 5:14, 15) ಅವರ ಮನಃಪೂರ್ವಕವಾದ ಸಲಹೆ ಮತ್ತು ಪ್ರಾರ್ಥನೆಗಳು ದೇವರೊಂದಿಗಿನ ಸಂಬಂಧವನ್ನು ಪುನಃಸ್ಥಾಪಿಸಲು ಮತ್ತು ಒಂದು ಶುದ್ಧ ಮನಸ್ಸಾಕ್ಷಿಯನ್ನು ಪುನಃಸಂಪಾದಿಸಲು ನಿಮಗೆ ಸಹಾಯ ಮಾಡಬಲ್ಲವು. ಅವರು ದುರ್ಬಲತೆ ಮತ್ತು ದುರುಳುತನದ ನಡುವೆ ಇರುವ ವ್ಯತ್ಯಾಸವನ್ನು ವಿವೇಚಿಸಬಲ್ಲರು. ನಿಮ್ಮ ತಪ್ಪುಗಳು ಪುನರಾವೃತ್ತಿಯಾಗುವದನ್ನು ತೊರೆಯಲು, ಆವಶ್ಯಕವಾದ ಸಹಾಯವು ನಿಮಗೆ ದೊರಕುವಂತೆ ಅವರು ನೋಡತಕ್ಕದ್ದು. ಜೂಲಿ, ಸ್ವತಃ ಧೈರ್ಯವಾದ ಹೆಜ್ಜೆಯನ್ನು ತೆಗೆದುಕೊಂಡ ಮೇಲೆ ಶಿಫಾರಸ್ಸು ಮಾಡುವುದು: “ನಾನು ‘ನನ್ನನ್ನು ಸರಿಪಡಿಸಿಕೊಳ್ಳಲು’ ಪ್ರಯತ್ನಿಸಿದೆ, ಮತ್ತು ಬಹು ಮಟ್ಟಿಗೆ ಅದು ಕಾರ್ಯಸಾಧ್ಯವಾಯಿತೆಂದು ನೆನಸಿದೆ. ಆದರೆ ಒಂದು ವರ್ಷದ ಬಳಿಕ ನಾನು ಎಷ್ಟು ತಪ್ಪಭಿಪ್ರಾಯವನ್ನು ಹೊಂದಿದ್ದೆನೆಂದು ತಿಳಿದುಕೊಂಡೆ. ಹಿರಿಯರ ಸಹಾಯವಿಲ್ಲದೆ ಗಂಭೀರವಾದ ಸಮಸ್ಯೆಗಳನ್ನು ನಿಮಗೆ ಪರಿಹರಿಸಲು ಸಾಧ್ಯವಿಲ್ಲ.”
ಅಮುಖ್ಯ ಪಾಪಗಳ ಮೇಲಿನ ಅಪರಾಧಿಭಾವ
ಆದರೂ, ಕೆಲವೊಮ್ಮೆ, ಒಬ್ಬ ಯೌವನಸ್ಥನು “ಯಾವುದಾದರೂ ತಪ್ಪು ಹೆಜ್ಜೆಯನ್ನು ಅವನಿಗೆ ಅದು ತಿಳಿಯುವ ಮುನ್ನ ತೆಗೆದುಕೊಳ್ಳಬಹುದು.” (ಗಲಾತ್ಯ 6:1, NW) ಅಥವಾ, ಅವನು ಯಾ ಅವಳು ಶಾರೀರಿಕ ಪ್ರಚೋದನೆಯು ಸಂಭವಿಸುವಂತೆ ಅನುಮತಿಸುತ್ತಾರೆ. ಇಂಥ ಪರಿಸ್ಥಿತಿಯಲ್ಲಿ ಒಬ್ಬ ಯೌವನಸ್ಥನು ಆಳವಾದ ಅಪರಾಧಿಭಾವವನ್ನು ಅನುಭವಿಸಬಹುದು—ಪ್ರಾಯಶಃ ತಪ್ಪು ಅವಶ್ಯಪಡುವುದಕ್ಕಿಂತ ಹೆಚ್ಚಾದ ಅಪರಾಧ ಪ್ರಜ್ಞೆ. ಅನಾವಶ್ಯಕವಾದ ಸಂಕಟವು ಫಲಿಸುತ್ತದೆ. ಅಂಥ ಗಾಢವಾದ ಅಪರಾಧಿಭಾವವು ಆರೋಗ್ಯಕರವಾದ ಆದರೆ ಅತೀ ಸೂಕ್ಷ್ಮಗ್ರಾಹಿ ಮನಸ್ಸಾಕ್ಷಿಯ ಫಲವಾಗಿರಬಲ್ಲದು. (ರೋಮಾಪುರ 14:1, 2) ನಾವು ಪಾಪ ಮಾಡುವಾಗ “ತಂದೆಯ ಬಳಿಯಲ್ಲಿ ನೀತಿವಂತನಾದ ಯೇಸು ಕ್ರಿಸ್ತನೆಂಬ ಸಹಾಯಕನು ನಮಗಿದ್ದಾನೆ” ಎಂದು ಜ್ಞಾಪಿಸಿಕೊಳ್ಳಿರಿ.—1 ಯೋಹಾನ 2:1, 2.
ನಮ್ಮ ಪೀಠಿಕೆಯಲ್ಲಿ ತಿಳಿಸಿದಂತೆ, ಯುವ ಮಾರ್ಕೋವಿನ ವಿಷಯವನ್ನು ಪುನಃ ಪರಿಗಣಿಸಿರಿ. ಈ ಯುವ ಕ್ರೈಸ್ತನು ತಾನು ಒಂದು ಅಕ್ಷಮ್ಯ ಪಾಪವನ್ನು ಮಾಡಿದ್ದೇನೆಂದು ಮನಗಂಡನು. ಆತನು ತನ್ನಲ್ಲಿಯೇ ಹೇಳಿಕೊಳ್ಳುತ್ತಿದ್ದದ್ದು: ‘ನನಗೆ ಬೈಬಲಿನ ತತ್ವಗಳು ಚೆನ್ನಾಗಿ ಗೊತ್ತು, ಆದರೂ ಪಾಪ ಮಾಡುವುದನ್ನು ನನಗೆ ತಡೆಯಲು ಸಾಧ್ಯವಿಲ್ಲ!’ ಆತನ ಪಾಪವು ಏನಾಗಿತ್ತು? ಹಸ್ತಮೈಥುನದ ಸಮಸ್ಯೆ. ‘ನಾನು ಅಭ್ಯಾಸವನ್ನು ಮುರಿಯದಿದ್ದರೆ ದೇವರು ಹೇಗೆ ನನ್ನನ್ನು ಕ್ಷಮಿಸಲು ಸಾಧ್ಯ?’ ಎಂದು ಮಾರ್ಕೋ ತರ್ಕಿಸುತ್ತಿದ್ದನು. ಆಲ್ಬರ್ಟೋ, ಅದೇ ರೀತಿಯಲ್ಲಿ ಹಸ್ತಮೈಥುನದ ಚಾಳಿಯನ್ನು ಹೊಂದಿದ್ದನು, ಆತನು ಹೇಳುವುದು; “ಒಳಗೆ ಆಳವಾದ ಅಪರಾಧಭಾವವು ನನಗನಿಸಿತು ಏಕಂದರೆ ಪಾಪದಿಂದ ನನ್ನನ್ನು ಸ್ವತಂತ್ರಿಸಲು ನನಗಾಗಲಿಲ್ಲ.”
ಹಸ್ತಮೈಥುನ ಒಂದು ಅಶುದ್ಧ ಅಭ್ಯಾಸವಾಗಿದೆ. (2 ಕೊರಿಂಥ 7:1) ಆದಾಗ್ಯೂ, ಬೈಬಲು ಇದನ್ನು ಗಂಭೀರವಾದ ಪಾಪ ಅಂದರೆ ವ್ಯಭಿಚಾರದ ದರ್ಜೆಗೆ ಸೇರಿಸುವದಿಲ್ಲ. ವಾಸ್ತವವಾಗಿ, ಅದು ಅದರ ಕುರಿತು ಪ್ರಸ್ತಾಪಿಸುವದೇ ಇಲ್ಲ. ಆದುದರಿಂದ, ಹಸ್ತಮೈಥುನದ ಪೂರ್ವಸ್ಥಿತಿಗೆ ಹಿಂದಿರುಗುವ ಒಂದು ಸಣ್ಣತಪ್ಪು ಅಕ್ಷಮ್ಯವಲ್ಲ. ಅದು ಕ್ಷಮಾಪಣೆಗೆ ಮೀರಿದ್ದೆಂಬಂತೆ ವೀಕ್ಷಿಸುವುದು ನಿಜವಾಗಿ ಅಪಾಯಕರವಾಗಿರಸಾಧ್ಯವಿದೆ; ಒಬ್ಬ ಯೌವನಸ್ಥನು ಸಮಸ್ಯೆಯನ್ನು ಜಯಿಸುವುದರಲ್ಲಿ ಯಾವುದೇ ಉದ್ದೇಶವಿಲ್ಲವೆಂದು ನೆನಸಬಹುದು. ಆದರೆ ಒಬ್ಬ ಕ್ರೈಸ್ತನು ಈ ಅಭ್ಯಾಸವನ್ನು ಹೋರಾಡಲು ಸತತ ಪ್ರಯತ್ನವನ್ನು ಮುಂದಿಡಬೇಕೆಂದು ಬೈಬಲಿನ ತತ್ವಗಳು ತೋರಿಸುತ್ತವೆ.b (ಕೊಲೊಸ್ಸೆ 3:5) “ಅನೇಕ ವಿಷಯಗಳಲ್ಲಿ ನಾವೆಲ್ಲರೂ ತಪ್ಪುವದುಂಟು” ಎಂದು ಯೆಹೋವನಿಗೆ ತಿಳಿದಿದೆ. (ಯಾಕೋಬ 3:2) ಮರುಕೊಳಿಸುವಿಕೆಯಾಗುವುದಾದರೆ, ಒಬ್ಬ ಯೌವನಸ್ಥನು ಖಂಡಿಸಲ್ಪಡುತ್ತಾನೆಂದು ನೆನಸುವ ಅವಶ್ಯವಿಲ್ಲ.
ಇತರ ತಪ್ಪಾದ ಹೆಜ್ಜೆಗಳು ಮತ್ತು ದೋಷಗಳ ಕುರಿತು ಇದು ಸತ್ಯವಾಗಿದೆ. ನಮ್ಮನ್ನು ಸ್ವತಃ ಅತಿಯಾದ ಅಪರಾಧಿಭಾವದಿಂದ ದಂಡಿಸುವಂತೆ ಯೆಹೋವನು ಅಪೇಕ್ಷಿಸುವದಿಲ್ಲ. ಬದಲಾಗಿ, ನಾವು ಸಮಸ್ಯೆಯನ್ನು ಸರಿಪಡಿಸಲು ಹೆಜ್ಜೆಗಳನ್ನು ತೆಗೆದುಕೊಳ್ಳುವಾಗ ಆತನು ಸಂತೋಷವುಳ್ಳವನಾಗುತ್ತಾನೆ.—2 ಕೊರಿಂಥ 7:11; 1 ಯೋಹಾನ 3:19, 20.
ಸಹಾಯ ಮತ್ತು ಸಾಂತ್ವನದ ಮೂಲಗಳು
ಆದಾಗ್ಯೂ, ಅದನ್ನು ಮಾಡಲು ನಿಮಗೆ ವೈಯಕ್ತಿಕ ಸಹಾಯವು ಆವಶ್ಯಕವಾಗಿರುವುದು. ತಮ್ಮ ಮಕ್ಕಳಿಗೆ ನೆರವಾಗುವಂತೆ ಮತ್ತು ಬೆಂಬಲವಾಗಿರುವಂತೆ ದಿವ್ಯಭಯವುಳ್ಳ ಹೆತ್ತವರು ಹೆಚ್ಚನ್ನು ಮಾಡಸಾಧ್ಯವಿದೆ. ಮತ್ತು ಕ್ರೈಸ್ತ ಸಭೆಯು ಬೆಂಬಲದ ಇತರ ವಿಧಾನಗಳನ್ನು ನೀಡುತ್ತದೆ. ಮಾರ್ಕೋ ಜ್ಞಾಪಿಸಿಕೊಳ್ಳುವುದು: “ಒಬ್ಬ ಹಿರಿಯನೊಡನೆ ಒಂದು ಸಂಭಾಷಣೆ ನಿಜವಾಗಿ ಸಹಾಯ ಮಾಡಿತು. ನನ್ನ ಅತ್ಯಂತ ನಿಕಟ ಆಲೋಚನೆಗಳನ್ನು ಆತನೊಡನೆ ಹೇಳಲು ನನಗೆ ಧೈರ್ಯವು ಬೇಕಾಗಿತ್ತು. ಆದರೆ ಆತನು ದೃಢವಿಶ್ವಾಸವನ್ನು ಪ್ರೇರಿಸಿದನು, ಆದುದರಿಂದ ನಾನು ಆತನ ಸಲಹೆಯನ್ನು ಕೇಳಿದೆ.” ಆಲ್ಬರ್ಟೋ ಸಹ, ಒಬ್ಬ ಹಿರಿಯನಿಂದ ಸಲಹೆಯನ್ನು ಪಡೆದನು. ಆಲ್ಬರ್ಟೋ ಹೇಳುವುದು, “ಆತನ ಹುರಿದುಂಬಿಸುವ ಸಲಹೆಯನ್ನು ನಾನು ಮರೆಯಲು ಸಾಧ್ಯವಿಲ್ಲ. ಆತನು ಯುವಕನಾಗಿದ್ದಾಗ, ಆತನಿಗೂ ಇದೇ ರೀತಿಯ ಸಮಸ್ಯೆಯಿತ್ತೆಂದು ನನಗೆ ಹೇಳಿದನು. ನಾನು ಎಂದಿಗೂ ಅದನ್ನು ನಂಬುತ್ತಿರಲಿಲ್ಲ. ಆತನ ಪ್ರಾಮಾಣಿಕತೆಗಾಗಿ ಅತ್ಯಂತ ಗಣ್ಯತೆಯೊಂದಿಗೆ ನಾನು ಆತನಿಗೆ ಕಿವಿಗೊಟ್ಟೆ.” ಅಂಥ ಸಹಾಯ ಮತ್ತು ಬೆಂಬಲದಿಂದ, ಮಾರ್ಕೋ ಮತ್ತು ಆಲ್ಬರ್ಟೋ ತಮ್ಮ ಸಮಸ್ಯೆಗಳಿಂದ ಜಯಹೊಂದಿದರು. ಈಗ ಇಬ್ಬರು ಅವರವರ ಸಭೆಯಲ್ಲಿ ಜವಾಬ್ದಾರಿಯುತ ಸ್ಥಾನಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಉತ್ಸಾಹದ ಪ್ರಾರ್ಥನೆಯು ಇನ್ನೊಂದು ನೆರವಾಗಿದೆ. ದಾವೀದನಂತೆ, ನೀವು “ಒಂದು ಶುದ್ಧ ಹೃದಯವನ್ನು” ಮತ್ತು “ಒಂದು ಹೊಸ ಆತ್ಮವನ್ನು, ಒಂದು ಸ್ಥಿರಚಿತ್ತವಾದಂಥದ್ದನ್ನು” ಪಡೆಯುವಂತೆ ಪ್ರಾರ್ಥಿಸಲು ಸಾಧ್ಯ. (ಕೀರ್ತನೆ 51:10, NW) ಸಾಂತ್ವನದ ಇನ್ನೊಂದು ಮೂಲವು ದೇವರ ವಾಕ್ಯವನ್ನು ಓದುವುದೇ ಆಗಿದೆ. ಉದಾಹರಣೆಗಾಗಿ, ಅಪೊಸ್ತಲ ಪೌಲನು ಸಹ ಆಂತರಿಕ ಘರ್ಷಣೆಗಳನ್ನು ಹೊಂದಿದ್ದನೆಂದು ಕಲಿಯುವುದರಲ್ಲಿ ನೀವು ಉತ್ತೇಜನವನ್ನು ಕಂಡುಕೊಳ್ಳಬಹುದು. ಆತನು ಒಪ್ಪಿಕೊಳ್ಳುವುದು: “ನಾನು ಒಳ್ಳೆಯದನ್ನು ಮಾಡಲು ಬಯಸುವಾಗ ಕೆಟ್ಟದ್ದು ನನ್ನೊಂದಿಗಿದೆ.” (ರೋಮಾಪುರ 7:21, NW) ಪೌಲನು ತನ್ನ ತಪ್ಪಾದ ಪ್ರವೃತ್ತಿಗಳನ್ನು ಹತೋಟಿಯಲ್ಲಿಡುವುದರಲ್ಲಿ ಯಶಸ್ವಿಯಾದನು. ನಿಮಗೂ ಇದು ಸಾಧ್ಯ. ವಿಶೇಷವಾಗಿ ಕೀರ್ತನೆಗಳನ್ನು ಓದುವುದು ಸಾಂತ್ವನದಾಯಕವೆಂದು ನೀವು ಕಂಡುಕೊಳ್ಳಬಹುದು; ವಿಶೇಷವಾಗಿ ದೇವರ ಕ್ಷಮಾಪಣೆಯ ಕುರಿತಾಗಿರುವಂಥ, ಕೀರ್ತನೆಗಳು 25, 86, ಮತ್ತು 103.
ಏನೇ ಆಗಲಿ, ನಿಮ್ಮನ್ನು ಪ್ರತ್ಯೇಕಿಸಿಕೊಳ್ಳಬೇಡಿ ಮತ್ತು ನಿರಾಶಾವಾದವು ನಿಮ್ಮನ್ನು ಆಳುವಂತೆ ಬಿಟ್ಟುಕೊಡಬೇಡಿ. (ಜ್ಞಾನೋಕ್ತಿ 18:1) ಯೆಹೋವನ ದಯೆಯ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಿರಿ. ಆತನು ಯೇಸುವಿನ ಪ್ರಾಯಶ್ಚಿತ ಯಜ್ಞದ ಆಧಾರದ ಮೇಲೆ ‘ಮಹಾಕೃಪೆಯಿಂದ ಕ್ಷಮಿಸುವನು’ ಎಂದು ಜ್ಞಾಪಿಸಿಕೊಳ್ಳಿರಿ. (ಯೆಶಾಯ 55:7; ಮತ್ತಾಯ 20:28) ನಿಮ್ಮ ದೋಷಗಳನ್ನು ನಿಕೃಷ್ಟಮಾಡಬೇಡಿರಿ, ಆದರೆ ದೇವರು ಕ್ಷಮಿಸುವುದಿಲ್ಲವೆಂಬ ತೀರ್ಮಾನಕ್ಕೂ ಬರಬೇಡಿರಿ. ಆತನನ್ನು ಸೇವಿಸಲು ನಿಮ್ಮ ನಂಬಿಕೆಯನ್ನು ಮತ್ತು ನಿಮ್ಮ ದೃಢವಿಶ್ವಾಸವನ್ನು ಬಲಪಡಿಸಿರಿ. (ಫಿಲಿಪ್ಪಿ 4:13) ಸಕಾಲದಲ್ಲಿ ನಿಮ್ಮ ತಪ್ಪುಗಳು ಕ್ಷಮಿಸಲ್ಪಟ್ಟಿವೆ ಎಂದು ತಿಳಿಯುವುದರಿಂದ ಮನಶ್ಶಾಂತಿ ಮತ್ತು ಆಳವಾದ ಆಂತರಿಕ ಸಂತೋಷವು ನಿಮ್ಮದಾಗುವುದು.—ಹೋಲಿಸಿ ಕೀರ್ತನೆ 32:1.
[ಅಧ್ಯಯನ ಪ್ರಶ್ನೆಗಳು]
a ಹೆಸರುಗಳಲ್ಲಿ ಕೆಲವು ಬದಲಾಯಿಸಲ್ಪಟ್ಟಿವೆ.
b ಸಹಾಯಕಾರಿ ಸಲಹೆಗಳು ಅಧ್ಯಾಯ 25 ಮತ್ತು 26, ಯುವಜನರು ಕೇಳುವಂಥ ಪ್ರಶ್ನೆಗಳು: ಕಾರ್ಯಸಾಧ್ಯ ಉತ್ತರಗಳು, (ಇಂಗ್ಲಿಷ್) ಎಂಬ ಪುಸ್ತಕದಲ್ಲಿ ಕೊಡಲ್ಪಟ್ಟಿವೆ. ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ನ್ಯೂ ಯಾರ್ಕ್, ಇನ್ಕ್. ಇವರ ಪ್ರಕಾಶನ.
[ಪುಟ 20 ರಲ್ಲಿರುವ ಚಿತ್ರ]
ಒಬ್ಬ ಅರ್ಹ ಕ್ರೈಸ್ತನೊಡನೆ ವಿಷಯಗಳನ್ನು ಮಾತಾಡುವುದು ವಿಷಯದ ಮೇಲೆ ಒಂದು ಹೊಸ ನೋಟವನ್ನು ನಿಮಗೆ ಕೊಡಬಲ್ಲದು