ಬೈಬಲಿನ ದೃಷ್ಟಿಕೋನ
ದೇವರು ಪ್ರತಿಫಲಗಳನ್ನು ಕೊಡುತ್ತಾನೊ?
ಹೌದು, ದೇವರು ಪ್ರತಿಫಲಗಳನ್ನು ಕೊಡುತ್ತಾನೆ. ಆದುದರಿಂದ, ಪ್ರತಿಫಲವೊಂದನ್ನು ದೃಷ್ಟಿಯಲ್ಲಿಟ್ಟುಕೊಂಡು ದೇವರ ಸೇವೆಯನ್ನು ಮಾಡುವುದು ಸ್ವಾರ್ಥವಾಗಿದೆಯೆ? ಇಲ್ಲ, ಏಕೆಂದರೆ ಆತನು ತಾನೇ ತನ್ನ ನಂಬಿಗಸ್ತ ಸೇವಕರ ಮುಂದೆ ಪ್ರತಿಫಲಗಳನ್ನು ಇಟ್ಟಿರುತ್ತಾನೆ. ವಾಸ್ತವವಾಗಿ, ನ್ಯಾಯ ಮತ್ತು ಪ್ರೀತಿಯ ದೇವರೋಪಾದಿ ಯೆಹೋವನು, ಆತನನ್ನು ಸೇವಿಸುವವರಿಗೆ ಪ್ರತಿಫಲವನ್ನೀಯಲು ಸ್ವತಃ ಬದ್ಧನನ್ನಾಗಿ ಮಾಡಿಕೊಳ್ಳುತ್ತಾನೆ. ಆತನ ವಾಕ್ಯವು, ಇಬ್ರಿಯ 11:6ರ ಒಂದು ಭಾಗದಲ್ಲಿ ಹೇಳುವುದು: “ದೇವರನ್ನು ಸಮೀಪಿಸುವ ಒಬ್ಬ ಮನುಷ್ಯನು ಎರಡು ಸಂಗತಿಗಳಲ್ಲಿ ನಂಬಿಕೆಯನ್ನು ಹೊಂದಿರಬೇಕು, ಮೊದಲನೆಯದಾಗಿ ದೇವರು ಅಸ್ತಿತ್ವದಲ್ಲಿದ್ದಾನೆ ಎಂದು ಮತ್ತು ಎರಡನೆಯದಾಗಿ ತನ್ನನ್ನು ಹುಡುಕುವವರಿಗೆ ದೇವರು ಪ್ರತಿಫಲವನ್ನು ಕೊಡುತ್ತಾನೆ ಎಂದು.”—ಫಿಲಿಪ್ಸ್.
ದೇವರಲ್ಲಿ ನೈಜವಾದ ನಂಬಿಕೆಯನ್ನು ಪ್ರದರ್ಶಿಸುವುದು ಆತನ ಸ್ನೇಹವನ್ನು ಗಳಿಸುತ್ತದೆ, ಮತ್ತು ಈ ಸ್ನೇಹವು ಪ್ರತಿಫಲವೊಂದಕ್ಕೆ ನಡಿಸುತ್ತದೆ. ಶೃದ್ಧಾಪೂರ್ವಕವಾಗಿ ಆತನ ಕೃಪೆಯನ್ನು ಹುಡುಕುವವರನ್ನು ದೇವರು ಆಶೀರ್ವದಿಸುತ್ತಾನೆ.
ಪ್ರತಿಫಲಗಳು ಪ್ರೀತಿಯ ಕೃತ್ಯಗಳಾಗಿವೆ
ಆತನನ್ನು ಪ್ರೀತಿಸುವವರಿಗೆ ಪ್ರತಿಫಲವನ್ನೀಯುವಂತಹ ರೀತಿಯ ದೇವರು ಆತನಾಗಿದ್ದಾನೆ ಎಂಬುದನ್ನು ನಾವು ತಿಳಿಯುವಂತೆ ಯೆಹೋವನು ಬಯಸುತ್ತಾನೆ. ಉದಾಹರಣೆಗೆ, ಹೆತ್ತವರ ಕಡೆಗಿನ ಪ್ರೀತಿಯಿಂದ ಪ್ರಚೋದಿಸಲ್ಪಟ್ಟು ಮನೆಯ ಸುತ್ತಲಿನ ಕೆಲಸಗಳನ್ನು ಮನಃಪೂರ್ವಕವಾಗಿ ಮಾಡುವ ತಮ್ಮ ಮಗುವಿಗೆ ಪ್ರತಿಫಲವನ್ನು ಕೊಡಲಿಕ್ಕಾಗಿ ವಿಚಾರಪೂರ್ಣ ಹೆತ್ತವರು ಅನೇಕ ಮಾರ್ಗಗಳನ್ನು ಹುಡುಕುತ್ತಾರೆ. ಮಗುವಿಗೆ ವಿಶೇಷವಾದೊಂದು ಕೊಡುಗೆಯನ್ನು ಪ್ರತಿಫಲವಾಗಿ ಕೊಡುವ ಮೂಲಕ ಹೆತ್ತವರು ಕೇವಲ ಜೀವನದ ಆವಶ್ಯಕತೆಗಳಿಗಿಂತಲೂ ಹೆಚ್ಚಾದುದನ್ನು ಒದಗಿಸಬಹುದು. ಆಗಾಗ ಕೊಡುಗೆಯು, ಮಗುವಿಗೆ ಭವಿಷ್ಯತ್ತಿನ ಭದ್ರತೆಯನ್ನು ಒದಗಿಸಲು ಬ್ಯಾಂಕ್ನಲ್ಲಿ ಇಡಲಿಕ್ಕಾಗಿ ಕೊಡುವ ಹಣವೂ ಆಗಿರಬಹುದು. ಹೀಗೆ, ಪ್ರೀತಿ ಮತ್ತು ನಿಷ್ಠೆಯಿಂದ ಕೆಲಸಗಳನ್ನು ಮಾಡುವವರಿಗಾಗಿ ಮೆಚ್ಚುಗೆ ಮತ್ತು ಪರಿಗಣನೆಯನ್ನು ಹೊಂದಿರದ ಜನರಂತೆ ದೇವರು ಇರುವುದಿಲ್ಲ. ದೇವರು ಹೃತ್ಪೂರ್ವಕನಾಗಿದ್ದಾನೆ ಮತ್ತು ತನ್ನ ಸ್ನೇಹಿತರಿಗೆ ಆಪ್ತನಾಗುತ್ತಾನೆ. ನೀವು ಆತನಲ್ಲಿ ನಂಬಿಕೆಯಿಂದ ದೃಢವಾಗಿ ಅಂಟಿಕೊಳ್ಳುವುದಾದರೆ, ಆತನು ‘ನಿಮ್ಮನ್ನು ಎಂದಿಗೂ ಕೈಬಿಡುವುದಿಲ್ಲ, ಎಂದಿಗೂ ತೊರೆಯುವುದಿಲ್ಲ.’—ಇಬ್ರಿಯ 13:5.
ತನ್ನನ್ನು ತಿಳಿಯಲಿಕ್ಕಾಗಿ ಇನ್ನೂ ಹೆಚ್ಚಿನ ಸಂದರ್ಭಗಳನ್ನು ಕೊಡುವ ಮೂಲಕ ಆತನಿಗೆ ಅತ್ಯಂತ ಸಣ್ಣ ಪ್ರಮಾಣದ ಸೇವೆ ಮಾಡುವವರೆಲ್ಲರನ್ನು ದೇವರು ಗಣ್ಯಮಾಡುತ್ತಾನೆ ಮತ್ತು ಕೃಪೆಯನ್ನು ತೋರಿಸುತ್ತಾನೆ. ಮತ್ತಾಯ 10:40-42ರಲ್ಲಿ ಹೀಗೆ ಹೇಳುವ ಮೂಲಕ ಯೇಸುವಿನ ಮಾತುಗಳು ಈ ಅಂಶವನ್ನು ದೃಷ್ಟಾಂತಿಸುತ್ತವೆ: “ನಿಮ್ಮನ್ನು ಸೇರಿಸಿಕೊಳ್ಳುವವನು ನನ್ನನ್ನು ಸೇರಿಸಿಕೊಳ್ಳುವವನಾಗಿದ್ದಾನೆ; ನನ್ನನ್ನು ಸೇರಿಸಿಕೊಳ್ಳುವವನು ನನ್ನನ್ನು ಕಳುಹಿಸಿಕೊಟ್ಟಾತನನ್ನೇ ಸೇರಿಸಿಕೊಳ್ಳುವವನಾಗಿದ್ದಾನೆ. ಪ್ರವಾದಿಯನ್ನು ಪ್ರವಾದಿಯೆಂದು ಸೇರಿಸಿಕೊಳ್ಳುವವನು ಪ್ರವಾದಿಗೆ ಬರತಕ್ಕ ಪ್ರತಿಫಲವನ್ನು ಹೊಂದುವನು; ನೀತಿವಂತನನ್ನು ನೀತಿವಂತನೆಂದು ಸೇರಿಸಿಕೊಳ್ಳುವವನು ನೀತಿವಂತನಿಗೆ ಬರತಕ್ಕ ಪ್ರತಿಫಲವನ್ನು ಹೊಂದುವನು. ಮತ್ತು ಈ ಚಿಕ್ಕವರಲ್ಲಿ ಒಬ್ಬನಿಗೆ ಯೇಸುವಿನ ಶಿಷ್ಯನೆಂದು ಯಾವನಾದರೂ ಒಂದು ತಂಬಿಗೆ ತಣ್ಣೀರನ್ನಾದರೂ ಕುಡಿಯುವದಕ್ಕೆ ಕೊಟ್ಟರೆ ಬರತಕ್ಕ ಪ್ರತಿಫಲವು ಅವನಿಗೆ ತಪ್ಪುವದೇ ಇಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.”
ತನ್ನ ತಂದೆಯಾದ ಯೆಹೋವನಿಂದ ಯೇಸುವು ಕಳುಹಿಸಲ್ಪಟ್ಟನು. ಆದುದರಿಂದ, ಕ್ರಿಸ್ತನ ಶಿಷ್ಯರನ್ನು—ಅವರು ಪ್ರವಾದಿಗಳಾಗಿರಲಿ ನೀತಿವಂತ ಪುರುಷರಾಗಿರಲಿ ಅಥವಾ ಚಿಕ್ಕವರಾಗಿರಲಿ—ಪ್ರೀತಿಯಿಂದ ಸ್ವೀಕರಿಸುವ ವ್ಯಕ್ತಿಯೊಬ್ಬನು, ಕ್ರಿಸ್ತನನ್ನು ಹಾಗೂ ಕ್ರಿಸ್ತನನ್ನು ಕಳುಹಿಸಿದ ದೇವರನ್ನು ಸ್ವೀಕರಿಸುವವನಾಗಿದ್ದಾನೆ. ಖಂಡಿತವಾಗಿಯೂ ಆ ವ್ಯಕ್ತಿಯು ಆಶೀರ್ವದಿಸಲ್ಪಡುವನು; ಅವನು ಪ್ರತಿಫಲಕೊಡಲ್ಪಡದೆ ಬಿಡಲ್ಪಡುವುದಿಲ್ಲ. ಅವನ ಆತ್ಮಿಕ ಸಂಪತ್ತುಗಳ ನಿಕ್ಷೇಪದ ಪೆಟ್ಟಿಗೆಯು ಹೆಚ್ಚು ಭರ್ತಿಯಾಗುವುದು. ಏಕೆ? ಏಕೆಂದರೆ ತನ್ನ ರಾಜ್ಯದ ಬೆಂಬಲಕ್ಕಾಗಿ ಸಲ್ಲಿಸಲ್ಪಡುವ ಅತ್ಯಂತ ಸಣ್ಣ ಸೇವಾಕಾರ್ಯವನ್ನೂ ಯೆಹೋವನು ಜ್ಞಾಪಿಸಿಕೊಳ್ಳುತ್ತಾನೆ, ಮತ್ತು ಆ ಕಾರ್ಯವು ಪ್ರತಿಫಲವನ್ನು ಹೊಂದದೇ ಹೋಗುವುದಿಲ್ಲ.—ಇಬ್ರಿಯ 6:10.
ಆಸಕ್ತಿಕರವಾಗಿಯೆ, “ಇಗೋ, ನಾವು ಎಲ್ಲಾ ಬಿಟ್ಟುಬಿಟ್ಟು ನಿನ್ನನ್ನು ಹಿಂಬಾಲಿಸಿದೆವು; ನಮಗೆ ಏನು ದೊರಕುವದು?” ಎಂದು ಯೇಸುವಿನ ಶಿಷ್ಯನಾದ ಪೇತ್ರನು, ತನಗಾಗಿ ಮತ್ತು ತನ್ನ ಜೊತೆ ಅಪೊಸ್ತಲರಿಗಾಗಿ ಪ್ರತಿಫಲದ ಕುರಿತು ಯೇಸುವನ್ನು ನೇರವಾಗಿ ಕೇಳಿದನು. (ಮತ್ತಾಯ 19:27) ಆ ಪ್ರಶ್ನೆಯನ್ನು ಯೇಸು ಅಸಮಂಜಸವಾದದ್ದೆಂದು ಪರಿಗಣಿಸಲಿಲ್ಲ, ಆದರೆ ಹೀಗೆ ಹೇಳುವ ಮೂಲಕ ಸಕಾರಾತ್ಮಕವಾದ ಒಂದು ಉತ್ತರವನ್ನು ಕೊಟ್ಟನು: “ನನ್ನ ಹೆಸರಿನ ನಿಮಿತ್ತ ಮನೆಗಳನ್ನಾಗಲಿ ಅಣತ್ಣಮ್ಮಂದಿರನ್ನಾಗಲಿ ಅಕ್ಕತಂಗಿಯರನ್ನಾಗಲಿ ತಂದೆಯನ್ನಾಗಲಿ ತಾಯಿಯನ್ನಾಗಲಿ ಮಕ್ಕಳನ್ನಾಗಲಿ ಭೂಮಿಯನ್ನಾಗಲಿ ಬಿಟ್ಟುಬಿಟ್ಟಿರುವವರೆಲ್ಲರಿಗೆ ಅನೇಕ ಪಾಲು ಹೆಚ್ಚಾಗಿ ಸಿಕ್ಕುವದು; ಮತ್ತು ಅವರು ನಿತ್ಯಜೀವಕ್ಕೆ ಬಾಧ್ಯರಾಗುವರು.”—ಮತ್ತಾಯ 19:29.
ಪ್ರಸ್ತುತ ಮತ್ತು ಭವಿಷ್ಯತ್ತಿನ ಪ್ರತಿಫಲಗಳು
ಆತನ ಹಿಂಬಾಲಕರು ಈಗಲೂ ಭವಿಷ್ಯತ್ತಿನಲ್ಲೂ ಬಹುಮಾನಿಸಲ್ಪಡುವರೆಂದು ಯೇಸು ಕೊಟ್ಟ ಉತ್ತರವು ತೋರಿಸುತ್ತದೆ. ಒಂದು ಪ್ರಸ್ತುತ ಪ್ರತಿಫಲವೇನಂದರೆ, ವಿಸ್ತರಿಸುತ್ತಿರುವ ಆತ್ಮಿಕ ಸಹೋದರರ ಮತ್ತು ಸಹೋದರಿಯರ ಅಂತಾರಾಷ್ಟ್ರೀಯ ಕುಟುಂಬದ ಭಾಗವಾಗಿ ಅವರು ಪರಿಣಮಿಸುವುದೇ ಆಗಿದೆ. ಕುಗ್ಗುತ್ತಿರುವ ಸದಸ್ಯತನ ಮತ್ತು ಬೆಂಬಲದ ಕೊರತೆಯ ಕಾರಣ ಕ್ರೈಸ್ತಪ್ರಪಂಚದ ಚರ್ಚುಗಳು ನರಳಾಡುತ್ತಿರುವಾಗ, ಯೆಹೋವನ ಸಾಕ್ಷಿಗಳ ಕೂಟದ ಹಾಲ್ಗಳು ಸಾಂಕೇತಿಕವಾಗಿ ತುಂಬಿತುಳುಕುತ್ತಿವೆ. ಲಕ್ಷೋಪಲಕ್ಷ ಹೊಸ ಸಾಕ್ಷಿಗಳು ಪ್ರತಿ ವರ್ಷ ದೀಕ್ಷಾಸ್ನಾನ ಪಡೆದುಕೊಳ್ಳುತ್ತಿದ್ದಾರೆ.
ದೇವರೊಂದಿಗೆ ಸ್ನೇಹ ಮತ್ತು ಆತನ ಕುರಿತಾದ ಜ್ಞಾನವು ತರುವ ಸಂತೋಷ ಮತ್ತು ತೃಪ್ತಿಯೊಂದಿಗೆ ಮನಶ್ಶಾಂತಿಯು ಇನ್ನೂ ಒಂದು ಪ್ರತಿಫಲವಾಗಿದೆ. ಹೌದು, “ಸಂತುಷ್ಟಿಸಹಿತವಾದ [ದಿವ್ಯ, NW] ಭಕ್ತಿಯು” ದೊಡ್ಡ ಲಾಭವಾಗಿದೆ. (1 ತಿಮೊಥೆಯ 6:6) ವಾಸ್ತವವಾಗಿ, “ನಾನಂತೂ ಇದ್ದ ಸ್ಥಿತಿಯಲ್ಲಿಯೇ ಸಂತುಷ್ಟನಾಗಿರುವದನ್ನು ಕಲಿತುಕೊಂಡಿದ್ದೇನೆ” ಎಂದು ಹೇಳಿದ ಅಪೊಸ್ತಲ ಪೌಲನಂತೆ ಒಬ್ಬನು ಹೇಳಲು ಶಕ್ತನಾಗುವಾಗ, ಅದು ಒಂದು ಸಂತೋಷಕರವಾದ ಮನಃಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ.—ಫಿಲಿಪ್ಪಿ 4:11.
ತನ್ನ ಮರಣಕ್ಕೆ ಸ್ವಲ್ಪ ಮುಂಚೆ, ಯೇಸುವಿನ ಅಭಿಷಿಕ್ತ ಹಿಂಬಾಲಕರಾದ “ಚಿಕ್ಕ ಹಿಂಡಿ”ಗಾಗಿ ಭವಿಷ್ಯತ್ತಿನ ಒಂದು ಪ್ರತಿಫಲ—ಪರಲೋಕ ಜೀವಿತಕ್ಕೆ ಪುನರುತ್ಥಾನವಾಗುವ ಆ ಪ್ರತಿಫಲ—ವನ್ನು ಕುರಿತು ಪೌಲನು ಬರೆದನು: “ನೀತಿವಂತರಿಗೆ ದೊರಕುವ ಜಯಮಾಲೆಯು ಮುಂದೆ ನನಗೆ ಸಿದ್ಧವಾಗಿದೆ; ಅದನ್ನು ನೀತಿಯುಳ್ಳ ನ್ಯಾಯಾಧಿಪತಿಯಾಗಿರುವ ಕರ್ತನು ಆ ದಿನದಲ್ಲಿ ನನಗೆ ಕೊಡುವನು; ನನಗೆ ಮಾತ್ರವಲ್ಲದೆ ತನ್ನ ಪ್ರತ್ಯಕ್ಷತೆಯನ್ನು ಪ್ರೀತಿಸುವವರೆಲ್ಲರಿಗೂ ಕೊಡುವನು.”—ಲೂಕ 12:32; 2 ತಿಮೊಥೆಯ 4:7, 8.
ಆತನ “ಬೇರೆ ಕುರಿ”ಗಳಾಗಿರುವ ಯೇಸುವಿನ ಹಿಂಬಾಲಕರಾದ ಲಕ್ಷಾಂತರ ಮಂದಿ ಪ್ರಮೋದವನವಾಗಿ ಮಾರ್ಪಡಲಿರುವ ಭೂಮಿಯ ಮೇಲೆ ನಿತ್ಯವಾಗಿ ಜೀವಿಸುವ ಭವಿಷ್ಯತ್ತಿನ ಪ್ರತಿಫಲಕ್ಕಾಗಿ ಎದುರುನೋಡುತ್ತಾರೆ. (ಯೋಹಾನ 10:16) ಮತ್ತು ಮರಣ ಹೊಂದುವ ತನ್ನ ಹಿಂಬಾಲಕರು ‘ನೀತಿವಂತರ ಪುನರುತ್ಥಾನದಲ್ಲಿ ಪ್ರತಿಫಲ ನೀಡಲ್ಪಡುವರು’ ಎಂದು ಯೇಸು ಭರವಸೆಯನ್ನಿತ್ತನು.—ಲೂಕ 14:14.
ಪ್ರತಿಫಲವನ್ನು ಚಿತ್ರಿಸಿಕೊಳ್ಳಿರಿ
ಅವು ಹೇಗಿರುವವು ಎಂದು ಯಾರಿಗೂ ನಿರ್ದಿಷ್ಟವಾಗಿ ತಿಳಿಯದಿರುವಾಗಲೂ, ಅಂತಹ ಆಶೀರ್ವಾದಗಳನ್ನು ಚಿತ್ರಿಸಿಕೊಳ್ಳಲು ಪ್ರಯತ್ನಿಸುವುದು ಸೂಕ್ತವಾದದ್ದಾಗಿದೆ. “ಮರಣವನ್ನು ಶಾಶ್ವತವಾಗಿ ನಿರ್ನಾಮಮಾಡುವನು; ಕರ್ತನಾದ ಯೆಹೋವನು ಎಲ್ಲರ ಮುಖದಲ್ಲಿನ ಕಣ್ಣೀರನ್ನು ಒರಸಿಬಿಡುವನು” ಎಂದು ಯೆಶಾಯ 25:8ರಲ್ಲಿ ವಿವರಿಸಲ್ಪಟ್ಟಿರುವ ಸಂತೋಷವನ್ನು ಅನುಭವಿಸಲು ನೀವು ಶಕ್ತರಾಗಿರುವುದಿಲ್ಲವೊ? ಯೆಶಾಯ 32:17ರ ಮಾತುಗಳನ್ನು ಚಿತ್ರಿಸಿಕೊಳ್ಳಲು ಪ್ರಯತ್ನಿಸಿ: “ಧರ್ಮದಿಂದ ಸಮಾಧಾನವು ಫಲಿಸುವದು, ಶಾಂತಿ ನಿರ್ಭಯಗಳು ಧರ್ಮದ ನಿತ್ಯಪರಿಣಾಮವಾಗಿರುವವು.” ಹೌದು, ಎಲ್ಲಾ ಮಾನವರು ನಿಜ ಸ್ನೇಹದಲ್ಲಿ ಒಟ್ಟಿಗೆ ಕೆಲಸ ಮಾಡಲಿರುವರು. (ಯೆಶಾಯ 65:21-25) ಇಂದು ಕೂಡ, ಕಾರ್ಯನಿಷ್ಠ ಕೆಲಸವು ಒಳ್ಳೆಯ ಮನೆಗಳಲ್ಲಿ ಮತ್ತು ಅತ್ಯುತ್ತಮ ಮಟ್ಟದ ಉತ್ಪನ್ನಗಳನ್ನು ಫಲಿಸುತ್ತದೆ. ತದನಂತರ, ದೇವರ ಹೊಸ ಲೋಕದಲ್ಲಿ, ಪರಿಪೂರ್ಣ ಪರಿಸ್ಥಿತಿಗಳ ಕೆಳಗೆ ಸ್ವಸ್ಥ ಜನರು ಜೀವಿತವನ್ನು ಆನಂದಕರವಾದದ್ದಾಗಿ ಮಾಡಲು ಅಗತ್ಯವಾಗಿರುವುದೆಲ್ಲವನ್ನು ಉತ್ಪಾದಿಸಲು ಶಕ್ತರಾಗುವರು.—ಕೀರ್ತನೆ 37:4.
ದೇವರು ಕೊಡುವ ಪ್ರತಿಫಲಗಳು, ನಮ್ಮಿಂದ ಮಾಡಲ್ಪಡುವ ಯಾವುದೇ ಸದುದ್ದೇಶದ ಕಾರ್ಯಗಳ ಕಾರಣದಿಂದಲ್ಲ, ಆದರೆ ಬಾಧ್ಯತೆಯಾಗಿ ಪಡೆದ ಪಾಪಪೂರ್ಣ ಸ್ಥಿತಿಯ ಹೊರತಾಗಿಯೂ ಆತನ ಪ್ರೀತಿಯ ಕೊಡುಗೆಯಾಗಿದೆ. (ರೋಮಾಪುರ 5:8-10) ಆದರೂ, ನಿರೀಕ್ಷಿಸಿದ ಪ್ರತಿಫಲ ಮತ್ತು ನಮ್ಮ ನಡವಳಿಕೆಯ ನಡುವೆ ಸಂಬಂಧವಿದೆ. ದೃಢ ನಂಬಿಕೆಯಿಂದ ಮತ್ತು ತಾಳ್ಮೆಯಿಂದ ನಾವು ಯೆಹೋವನನ್ನು ಶೃದ್ಧಾಪೂರ್ವಕವಾಗಿ ಹುಡುಕಬೇಕು. (ಇಬ್ರಿಯ 10:35-39) ಬೇರೆ ಮಾತುಗಳಲ್ಲಿ, “ನೀವು ಯಾವ ಕೆಲಸವನ್ನು ಮಾಡಿದರೂ ಅದನ್ನು ಮನುಷ್ಯರಿಗೋಸ್ಕರವೆಂದು ಮಾಡದೆ ಯೆಹೋವನಿಗೋಸ್ಕರ ಎಂದು ಮನಃಪೂರ್ವಕವಾಗಿ ಮಾಡಿರಿ, ಏಕೆಂದರೆ ಯೆಹೋವನಿಂದ ನೀವು ಬಾಧ್ಯತೆಯ ತಕ್ಕ ಪ್ರತಿಫಲವನ್ನು ಹೊಂದುವಿರೆಂದು ತಿಳಿದಿದ್ದೀರಲ್ಲಾ.” ಹೌದು, ಆತನು ಪ್ರತಿಫಲಗಳನ್ನು ಕೊಡುತ್ತಾನೆ.—ಕೊಲೊಸ್ಸೆ 3:23, 24, NW.