ಒಂದು ಸೂರ್ಯ ಗ್ರಹಣ ಮತ್ತು ಖಗೋಳ ವಿಜ್ಞಾನದ ಆಕರ್ಷಣೆ
ಮೇ 10, 1994, ಉತ್ತರ ಅಮೆರಿಕದ ಕೆಲವು ಜನರಿಗೆ ಒಂದು ಅಪೂರ್ವ ದಿನವಾಗಿತ್ತು. ಅದು ಚಂದ್ರನಿಂದಾಗಿ ಸೂರ್ಯನು ಅಗೋಚರವಾಗುವ ಕಂಕಣ ಗ್ರಹಣದ ಸಂದರ್ಭವಾಗಿತ್ತು.a ಕೆಲವು ಸಂಕ್ಷಿಪ್ತ ತಾಸುಗಳ ಸಮಯ, ಮೋಹಕವಾದ ಖಗೋಳ ವಿಜ್ಞಾನದ ಅರಿವು ಲಕ್ಷಾಂತರ ಮಂದಿಗಾಯಿತು. ಆದರೆ ನಿಖರವಾಗಿ ಗ್ರಹಣವೆಂದರೇನು?
“ಒಬ್ಬ ನಿಯಮಿತ ಪ್ರೇಕ್ಷಕನ ಸಂಬಂಧದಲ್ಲಿ, ಒಂದು ಆಕಾಶಸ್ಥ ಕಾಯವು ಇನ್ನೊಂದರಿಂದಾಗಿ ಪಾರ್ಶ್ವ ಅಥವಾ ಪೂರ್ಣ ಅಗೋಚರ” ಆಗುವಾಗ ಒಂದು ಗ್ರಹಣ ಸಂಭವಿಸುತ್ತದೆ. (ದಿ ಅಮೆರಿಕನ್ ಹೆರಿಟೆಜ್ ಡಿಕ್ಷನರಿ ಆಫ್ ದಿ ಇಂಗ್ಲಿಷ್ ಲ್ಯಾಂಗೆಜ್ವ್) ಭೂಮಿ, ಸೂರ್ಯ ಮತ್ತು ಚಂದ್ರ, ಹೆಚ್ಚು ಕಡಮೆ ಒಂದು ನೆಟ್ಟಗಿನ ಸಾಲಿನಲ್ಲಿರುವಾಗ ಮಾತ್ರ ಒಂದು ಸೂರ್ಯ ಅಥವಾ ಚಂದ್ರ ಗ್ರಹಣ ಸಂಭವಿಸಬಲ್ಲದು. ಸೂರ್ಯ ಗ್ರಹಣವಾಗುತ್ತದೊ ಚಂದ್ರ ಗ್ರಹಣವೊ ಎಂಬುದು ಯಾವ ಆಕಾಶಸ್ಥ ಕಾಯವು ಅಗೋಚರವಾಗುತ್ತದೆ ಎಂಬುದರ ಮೇಲೆ ಹೊಂದಿಕೊಂಡಿದೆ. ಕೆಲವು ಬಾರಿ, ಭೂಮಿ ತನ್ನ ನೆರಳನ್ನು ಚಂದ್ರನ ಮೇಲೆ ಹಾಕುವುದರ ಫಲವಾಗಿ ಚಂದ್ರ ಗ್ರಹಣವಾಗುತ್ತದೆ. ಇನ್ನೊಂದು ಕಡೆಯಲ್ಲಿ, ಕಳೆದ ವರ್ಷ ಮೇ ತಿಂಗಳಲ್ಲಿ, ಚಂದ್ರ ತನ್ನ ನೆರಳನ್ನು 230ರಿಂದ 310 ಕಿಲೊಮೀಟರ್ ವ್ಯಾಪಕವಾದ ವೈವಿಧ್ಯವುಳ್ಳ ಒಂದು ಕಿರಿದಾದ ಪಟ್ಟೆಯಲ್ಲಿ ಭೂಮಿಯ ಮೇಲೆ ಹಾಕಿತು. ಚಂದ್ರ ಕ್ರಮೇಣ ಭೂಮಿ ಮತ್ತು ಸೂರ್ಯನ ಮಧ್ಯೆ ದಾಟಿದಾಗ, ಅದು ಸೂರ್ಯನನ್ನು ಹೆಚ್ಚು ಕಡಮೆ ಪೂರ್ತಿ ಮರೆಮಾಡಿತು. ಅದರ ಛಾಯಾಪಥವು ಶಾಂತ ಸಾಗರವನ್ನು, ಬಳಿಕ ನೈರುತ್ಯದಿಂದ ಈಶಾನ್ಯಕ್ಕೆ ಉತ್ತರ ಅಮೆರಿಕವನ್ನು ದಾಟಿಹೋಯಿತು. ಚಂದ್ರನು ಸೂರ್ಯನನ್ನು ಎದುರಿನಿಂದ ನಿಧಾನವಾಗಿ ದಾಟಿದಂತೆ ಕಂಡಿತು. ವಾಸ್ತವವೇನಂದರೆ, ಈ ನೆರಳು ತಾಸಿಗೆ ಸುಮಾರು 3,200 ಕಿಲೊಮೀಟರುಗಳ ವೇಗದಲ್ಲಿ ಭೂಮಿಯನ್ನು ದಾಟಿತು.
ಕಣ್ಣುಗಳಿಗೆ ಹಾನಿಯಾಗದಂತೆ ಗ್ರಹಣವನ್ನು ಪ್ರೇಕ್ಷಿಸಲಿಕ್ಕಾಗಿ ಸಕಲ ರೀತಿಯ ವಿಧಾನಗಳನ್ನು ಉಪಯೋಗಿಸಲಾಯಿತು. ಕೆಲವರು ವೆಲರ್ಡನ ಕನ್ನಡಕದ ಮೂಲಕ ನೋಡಿದರು. ಇತರರು ಒಂದು ಬಲವಾದ ಬಣ್ಣ ಶೋಧಕವನ್ನು ಬಳಸಿದರು. ಇನ್ನಿತರರು ಗ್ರಹಣದ ಬಿಂಬವನ್ನು ಒಂದು ಸೂಜಿ ರಂಧ್ರದ ಮೂಲಕ ಒಂದು ಕಾಗದದ ಮೇಲೆ ಬೀಳಿಸಿದರು. ಒಬ್ಬಾಕೆ ಛಾಯಾಚಿತ್ರಗ್ರಾಹಕಿಯು ಒಂದು ಜರಡಿಪಾತ್ರೆಯನ್ನು ಯಾರೊ ಎತ್ತಿಹಿಡಿಯುವಂತೆ ಮಾಡಿದಳು, ಮತ್ತು ಬೆಳಕು ರಂಧ್ರಗಳ ಮೂಲಕ ದಾಟಿಹೋದಾಗ, ಅದು ನೆಲದ ಮೇಲೆ ಗ್ರಹಣದ ವಿವಿಧ ಪ್ರತಿಬಿಂಬಗಳನ್ನು ಸೃಷ್ಟಿಸಿತು. ಬೆಳಕು ಮರಗಳ ಎಲೆಗಳನ್ನು ಹಾದುಹೋದಾಗಲೂ ತದ್ರೀತಿಯ ಪರಿಣಾಮಗಳನ್ನು ನೋಡಲಾಯಿತು. ಕಪ್ಪಾದ ಹೊರಮೈಯ ಮೇಲೆ ದ್ವಿಬಿಂಬವನ್ನು ಪಡೆಯಲಿಕ್ಕಾಗಿ ದುರ್ಬೀನುಗಳ ಮೂಲಕ ಬೆಳಕು ಹಾದುಹೋಗುವಂತೆ ಮಾಡುವುದು ಇನ್ನೊಂದು ವಿಧಾನವಾಗಿತ್ತು.
ಒಂದು ವರ್ಷದಲ್ಲಿ ಐದರಷ್ಟು ಸೂರ್ಯ ಗ್ರಹಣಗಳು ಮತ್ತು ಮೂರರಷ್ಟು ಚಂದ್ರ ಗ್ರಹಣಗಳು ಸಂಭವಿಸಬಲ್ಲವು. “ಕಡಿಮೆಪಕ್ಷ ಯಾವುದೊ ರೀತಿಯ ಎರಡು ಸೂರ್ಯ ಗ್ರಹಣಗಳು ಪ್ರತಿ ವರ್ಷ ಸಂಭವಿಸಲೇಬೇಕು” ಎನ್ನುತ್ತದೆ ದಿ ಇಂಟರ್ನ್ಯಾಷನಲ್ ಎನ್ಸೈಕ್ಲೊಪೀಡಿಯ ಆಫ್ ಆಸ್ಟ್ರಾನೊಮಿ. ಆದರೂ ಪ್ರತಿಯೊಂದು ಗ್ರಹಣವು ವಿವಿಧ ಸ್ಥಳಗಳಿಂದ ಗೋಚರವಾಗುತ್ತದೆ. ಆದುದರಿಂದ, 1994ರಲ್ಲಿ ಗ್ರಹಣವನ್ನು ನೋಡಲು ತಪ್ಪಿದ ಅಮೆರಿಕದ ಮಗ್ಗುಲಲ್ಲಿರುವ ಯಾವನಿಗಾದರೂ ಇನ್ನೊಮ್ಮೆ ನೋಡುವ ಸಂದರ್ಭಕ್ಕಾಗಿ 2012 ವರ್ಷದ ವರೆಗೆ ಕಾಯಬೇಕಾಗುವುದು, ಅಥವಾ ಅದಕ್ಕಿಂತ ಮೊದಲೇ ನಡೆಯುವ ಗ್ರಹಣಕ್ಕಾಗಿ ಪೆರು, ಬ್ರೆಜಿಲ್ ಅಥವಾ ಸೈಬೀರಿಯಕ್ಕೆ ಪ್ರಯಾಣಿಸಬೇಕಾಗುವುದು.b
ಪೂರ್ಣ ಗ್ರಹಣದ ರಹಸ್ಯ
ಚಂದ್ರನು ಸೂರ್ಯನನ್ನು ಪೂರ್ತಿಯಾಗಿ ಅಗೋಚರ ಮಾಡುವ ಪೂರ್ಣ ಸೂರ್ಯ ಗ್ರಹಣವು, ಗತ ಶತಮಾನಗಳಲ್ಲಿ ಭಯ ಮತ್ತು ತೀವ್ರ ಗಾಬರಿಯನ್ನು ಉಂಟುಮಾಡಿತು. ಅದೇಕೆ? ದಿ ಇಂಟರ್ನ್ಯಾಷನಲ್ ಎನ್ಸೈಕ್ಲೊಪೀಡಿಯ ಆಫ್ ಆಸ್ಟ್ರಾನೊಮಿ ಗಮನಿಸುವುದು: “ಚಂದ್ರನು ಸೂರ್ಯನನ್ನು ಸಮೀಪಿಸುವುದನ್ನು ನೋಡುವುದು ಅಸಾಧ್ಯವಾಗಿರುವುದರಿಂದ, ಆಸನ್ನವಾಗಿರುವ ಮನೋಹರ ದೃಶ್ಯದ ಯಾವ ಮುನ್ನೆಚ್ಚರಿಕೆಯೂ ಅನನುಭವಿಗಳಿಗೆ ಇಲ್ಲದಿರುವ ಕಾರಣದಿಂದ ಪೂರ್ಣ ಗ್ರಹಣದ ರಹಸ್ಯವು ವರ್ಧಿಸಲ್ಪಡುತ್ತದೆ.” ಆ ದೃಶ್ಯದಲ್ಲಿ ಈ ವೈಶಿಷ್ಟ್ಯಗಳಿವೆ: “ಆಕಾಶವು ಅನೇಕ ವೇಳೆ ತೀರ ಅವರ್ಣನೀಯವಾದ ಭಯ ಹುಟ್ಟಿಸುವ ಹಸಿರು ಛಾಯೆಯದ್ದಾಗಿ ಮತ್ತು ಮೋಡಗಳ ಕಪ್ಪಿಗಿಂತ ತೀರ ಅಸದೃಶವಾದ ಕಡುಕಪ್ಪಾಗಿ ಪರಿಣಮಿಸುತ್ತದೆ. . . . ಪಾರ್ಶ್ವ ಗ್ರಹಣದ ಕೊನೆಯ ಕೆಲವು ಸೆಕೆಂಡುಗಳಲ್ಲಿ ಬೆಳಕು ಶೀಘ್ರವಾಗಿ ಕಡಮೆಯಾಗುತ್ತದೆ, ಮತ್ತು ಹವೆಯು ಗಮನಾರ್ಹವಾಗಿ ಶೀತಲವಾಗುತ್ತದೆ, ಹಕ್ಕಿಗಳು ತಮ್ಮ ಗೂಡುಗಳನ್ನು ಸೇರುತ್ತವೆ, ಕೆಲವು ಪುಷ್ಪದ ಎಸಳುಗಳು ಮುಚ್ಚುತ್ತವೆ ಮತ್ತು ಗಾಳಿ ಕಮ್ಮಿಯಾಗುವ ಪ್ರವೃತ್ತಿಯಿರುತ್ತದೆ. . . . ಕತ್ತಲೆ ಹೊರಪ್ರದೇಶವನ್ನು ಕವಿಯುತ್ತದೆ.”
ದ ಸ್ಟೋರಿ ಆಫ್ ಇಕ್ಲಿಪ್ಸೆಸ್ ಎಂಬ ತನ್ನ ಪುಸ್ತಕದಲ್ಲಿ, ಜಾರ್ಜ್ ಚೇಂಬರ್ಸ್, ಆಗಸ್ಟ್ 2, 1133ರಲ್ಲಿ ನಡೆದ, “ಸ್ಕಾಟ್ಲೆಂಡ್ನಲ್ಲಿ ಪೂರ್ಣ ಗ್ರಹಣವಾಗಿ ಕಂಡುಬಂದ . . . ಮಧ್ಯಯುಗಗಳ ಅತಿ ಪ್ರಸಿದ್ಧ ಗ್ರಹಣಗಳಲ್ಲಿ ಒಂದರ” ಕುರಿತು ವರದಿಸುತ್ತಾನೆ. ವಿಲ್ಯಮ್ ಆಫ್ ಮಾಮ್ಸ್ಬೆರಿ ಬರೆದುದು: “ಆ ದಿನದ ಸೂರ್ಯನು 6ನೆಯ ತಾಸಿನಲ್ಲಿ, ತನ್ನ ಮಹಿಮಾಭರಿತ ಮುಖವನ್ನು . . . ಭೀಕರ ಕತ್ತಲೆಯಲ್ಲಿ ಮರೆಮಾಡಿ, . . . ಒಂದು ಗ್ರಹಣದ ಮೂಲಕ ಜನರ ಹೃದಯಗಳನ್ನು ಕಲುಕಿದನು.” ಪುರಾತನದ ಆ್ಯಂಗ್ಲೋ-ಸ್ಯಾಕ್ಸನ್ ಕ್ರಾನಿಕ್ಲ್, “ಜನರು ತುಂಬ ಆಶ್ಚರ್ಯಚಕಿತರೂ ಭಯಭೀತರೂ ಆದರು,” ಎಂದು ಹೇಳಿತು.
ಸಪ್ಟಂಬರ 2, 1830ರಲ್ಲಿ ನಡೆದ ಮತ್ತು ಆಫ್ರಿಕದಲ್ಲಿ ಇಬ್ಬರು ಪ್ರಯಾಣಿಕರಿಂದ ವರದಿಯಾದ ಒಂದು ಚಂದ್ರ ಗ್ರಹಣದ ಸುಸ್ಪಷ್ಟ ವರ್ಣನೆಯನ್ನೂ ಚೇಂಬರ್ಸ್ ದಾಖಲಿಸಿದನು: “ಚಂದ್ರನು ಕ್ರಮೇಣ ಅಗೋಚರನಾದಾಗ, ಪ್ರತಿಯೊಬ್ಬನೂ ಭಯಚಕಿತನಾದನು. ಗ್ರಹಣವು ಅಧಿಕಗೊಂಡಂತೆ ಅವರು ಹೆಚ್ಚು ಭಯಗೊಂಡರು. ಎಲ್ಲರೂ ತಮ್ಮ ಅರಸನಿಗೆ ಪರಿಸ್ಥಿತಿಯನ್ನು ತಿಳಿಸಲು ಬಲು ಸಂಕಟದಿಂದ ಓಡಿದರು. ಏಕೆಂದರೆ ಅಂತಹ ಕಡು ನೆರಳನ್ನು ಬೀರಲು ಒಂದೇ ಒಂದು ಮೋಡವಾಗಲಿ ಇರಲಿಲ್ಲ, ಮತ್ತು ಒಂದು ಗ್ರಹಣದ ಲಕ್ಷಣ ಅಥವಾ ಅರ್ಥವನ್ನು ಅವರು ಗ್ರಹಿಸಶಕ್ತರಾಗಿರಲಿಲ್ಲ.”
ಇತ್ತೀಚಿನ ಸಮಯಗಳಲ್ಲಿ, ಖಗೋಳ ವಿಜ್ಞಾನದ ಅಧ್ಯಯನವು ಸೂರ್ಯ ಗ್ರಹಣದ ಬಗೆಗೆ ಮಾನವಕುಲಕ್ಕಿರುವ ಭಯವನ್ನು ಉಪಶಮನ ಮಾಡಿಯದೆ—ಸೂರ್ಯನು ಪುನಃ ತೋರಿಬರುವನೆಂದು ನಾವು ಬಲ್ಲೆವು.
ಜೆಸ್ಯುಯಿಟರು ಒಂದು ಸೂರ್ಯ ಗ್ರಹಣವನ್ನು ಉಪಯೋಗಿಸಿದ ವಿಧ
1629ರಲ್ಲಿ, ಚೈನದಲ್ಲಿದ್ದ ಜೆಸ್ಯುಯಿಟ್ ಮಿಷನೆರಿಗಳು ಒಂದು ಸೂರ್ಯ ಗ್ರಹಣದ ಮೂಲಕ ಚಕ್ರವರ್ತಿಯ ಅನುಗ್ರಹವನ್ನು ಪಡೆಯಶಕ್ತರಾದರು. ಅವರು ಅದನ್ನು ಹೇಗೆ ಮಾಡಿದರು?
ಜೆಸ್ಯುಯಿಟರು, “ಚೈನೀಸ್ ಚಂದ್ರಮಾನ ಪಂಚಾಂಗದಲ್ಲಿ, ಶತಮಾನಗಳಲ್ಲಿ ಇದ್ದಂತೆ ತಪ್ಪುಗಳಿದ್ದವು” ಎಂದು ಗಮನಿಸಿದ್ದರು. “ಚಕ್ರಾಧಿಪತ್ಯದ ಖಗೋಳ ವಿಜ್ಞಾನಿಗಳು ಸೂರ್ಯ ಗ್ರಹಣವನ್ನು ಮುಂತಿಳಿಸುವುದರಲ್ಲಿ ಪದೇ ಪದೇ ತಪ್ಪುಮಾಡಿದ್ದರು . . . ಒಂದು ಗ್ರಹಣವು ಜೂನ್ 21, 1629ರ ಬೆಳಗ್ಗೆ ನಿರೀಕ್ಷಿಸಲ್ಪಟ್ಟಾಗ, ಜೆಸ್ಯುಯಿಟರಿಗೆ ಒಂದು ಮಹಾ ಸಂದರ್ಭವು ಒದಗಿಬಂತು. ಚಕ್ರಾಧಿಪತ್ಯದ ಖಗೋಳ ವಿಜ್ಞಾನಿಗಳು, ಗ್ರಹಣವು 10:30ಕ್ಕೆ ಸಂಭವಿಸಿ ಎರಡು ತಾಸು ಉಳಿಯುವುದು ಎಂದು ಮುಂತಿಳಿಸಿದರು. ಜೆಸ್ಯುಯಿಟರಾದರೊ, 11:30ರ ತನಕ ಗ್ರಹಣವಾಗುವುದಿಲ್ಲ ಮತ್ತು ಅದು ಎರಡು ನಿಮಿಷ ಮಾತ್ರ ಉಳಿಯುವುದೆಂದು ಮುಂತಿಳಿಸಿದರು.” ಏನು ಸಂಭವಿಸಿತು?
“ಆ ನಿರ್ಧಾರಕ ದಿನದಲ್ಲಿ, 10:30 ಬಂದು ದಾಟಿಹೋದರೂ ಸೂರ್ಯನು ಪ್ರಕಾಶಮಾನವಾಗಿ ಹೊಳೆದನು. ಚಕ್ರಾಧಿಪತ್ಯದ ಖಗೋಳ ವಿಜ್ಞಾನಿಗಳು ಹೇಳಿದ್ದು ತಪ್ಪಾಗಿತ್ತು, ಆದರೆ ಜೆಸ್ಯುಯಿಟರು ಹೇಳಿದ್ದು ಸರಿಯಾಗಿತ್ತೊ? ಆಗ, ಜೆಸ್ಯುಯಿಟರು ಭವಿಷ್ಯ ನುಡಿದಿದ್ದಂತೆಯೇ, ಸರಿ 11:30ಕ್ಕೆ ಗ್ರಹಣ ಆರಂಭವಾಗಿ ಎರಡು ನಿಮಿಷಗಳಷ್ಟು ಕೊಂಚಕಾಲ ಮಾತ್ರ ಉಳಿಯಿತು. ಚಕ್ರವರ್ತಿಯ ಭರವಸೆಯಲ್ಲಿ ಅವರ ಸ್ಥಾನವು ಈಗ ಸುರಕ್ಷಿತವಾಗಿತ್ತು.”—ದ ಡಿಸ್ಕವರರ್ಸ್, ಡ್ಯಾನಿಯೆಲ್ ಜೆ. ಬೋರ್ಸ್ಟಿನ್ ಅವರಿಂದ.
ಬೈಬಲಿನಲ್ಲಿ ಖಗೋಳ ವಿಜ್ಞಾನ
ಖಗೋಳ ವಿಜ್ಞಾನದ ಮಾಹಿತಿಯು ಬೈಬಲಿನಲ್ಲಿ ಸಹ ಒದಗಿಸಲ್ಪಡುತ್ತದೆ. ಅನೇಕ ನಕ್ಷತ್ರ ಪುಂಜಗಳು ಯೋಬನ ಪುಸ್ತಕದಲ್ಲಿ ಪ್ರಸ್ತಾಪಿಸಲ್ಪಡುತ್ತವೆ. ಇದಲ್ಲದೆ, ಯೆಹೋವನು ತನ್ನ ಸೇವಕರನ್ನು, ಅವರು ಆಕಾಶವನ್ನು ಪರೀಕ್ಷಿಸುವಂತೆ ಆಮಂತ್ರಿಸಿದನು, ಜ್ಯೋತಿಷದ ಅಧ್ಯಯನ ಅಥವಾ ಇತರ ಸುಳ್ಳು ಆರಾಧನೆಗಾಗಿ ಅಲ್ಲ, ಬದಲಾಗಿ ತನ್ನ ಸೃಷ್ಟಿಗಳ ಮಹಿಮೆಯನ್ನು ಗಣ್ಯಮಾಡಲಿಕ್ಕಾಗಿಯೆ. ಯೆಶಾಯನು ಬರೆಯುವಂತೆ ಪ್ರೇರಿಸಲ್ಪಟ್ಟದ್ದು: “ನಿಮ್ಮ ಕಣ್ಣುಗಳನ್ನು ಮೇಲಕ್ಕೆತ್ತಿಕೊಂಡು ನೋಡಿರಿ! ಈ ನಕ್ಷತ್ರಗಳನ್ನು ಸೃಪ್ಟಿಸಿದಾತನು ಯಾರು? ಈ ಸೈನ್ಯವನ್ನು ಲೆಕ್ಕಕ್ಕೆ ಸರಿಯಾಗಿ ಮುಂದರಿಸುತ್ತಾನಲ್ಲಾ; ಎಲ್ಲವನ್ನೂ ಹೆಸರೆತ್ತಿ ಕರೆಯುತ್ತಾನೆ; ಆತನು ಅತಿ ಬಲಾಢ್ಯನೂ ಮಹಾಶಕ್ತನೂ ಆಗಿರುವದರಿಂದ ಅವುಗಳೊಳಗೆ ಒಂದೂ ಕಡಿಮೆಯಾಗದು.”—ಯೆಶಾಯ 40:26.
ಯೋಬನು ಹೀಗೆ ಹೇಳಿದಾಗ ಸೃಷ್ಟಿಕರ್ತನ ಪರಮಾಧಿಕಾರವನ್ನು ಒಪ್ಪಿಕೊಂಡನು: “ಆತನು . . . ಆ್ಯಷ್ ನಕ್ಷತ್ರ ಪುಂಜವನ್ನೂ [ಅರ್ಸ ಮೇಜರ್, ಅಥವಾ ಸಪ್ತರ್ಷಿ ಆಗಿರಬಹುದು], ಕೆಸಿಲ್ ನಕ್ಷತ್ರ ಪುಂಜವನ್ನೂ [ಒರೈಅನ್, ಅಥವಾ ಮೃಗಶಿರ ಆಗಿರಬಹುದು], ಕೈಮ ನಕ್ಷತ್ರ ಪುಂಜವನ್ನೂ [ಟಾರಸ್, ಅಥವಾ ವೃಷಭ ನಕ್ಷತ್ರ ಪುಂಜದಲ್ಲಿರುವ ಪ್ಲೈಅಡೀಸ್ ಕೃತ್ತಿಕೆ ಪುಂಜ ಆಗಿರಬಹುದು] ಮತ್ತು ದಕ್ಷಿಣದ ಒಳಗಣ ಕೊಠಡಿಗಳನ್ನು [ದಕ್ಷಿಣ ಗೋಲಾರ್ಧದಲ್ಲಿರುವ ನಕ್ಷತ್ರ ಪುಂಜಗಳೆಂದು ತಿಳಿಯಲಾಗುತ್ತದೆ] ಮಾಡುತ್ತಿದ್ದಾನೆ.”—ಯೋಬ 9:7-9, NW.
ಯೆಹೋವನು ವಿಧೇಯ ಮಾನವಕುಲಕ್ಕೆ ನಿತ್ಯಜೀವವನ್ನು ನೀಡುವಾಗ ಖಗೋಳ ವಿಜ್ಞಾನದ ಅಧ್ಯಯನವು ಅದೆಷ್ಟು ಆಕರ್ಷಕವಾಗಿರಲಿಕ್ಕಿರುವುದು! ಆಗ, ಬಹು ವಿಸ್ತಾರವಾದ ವಿಶ್ವದ ಸಂಬಂಧದಲ್ಲಿ ದೇವರ ಉದ್ದೇಶಗಳನ್ನು ನಾವು ಅರ್ಥೈಸುವಂತಾಗುವಾಗ, ವಿಶ್ವದ ರಹಸ್ಯಗಳನ್ನು ಪ್ರಗತಿಪರವಾಗಿ ತಿಳಿಸಲಾಗುವುದು. ಹೀಗೆ, ದಾವೀದನ ಮಾತುಗಳನ್ನು ನಾವು ಇನ್ನೂ ಹೆಚ್ಚು ಅನಿಸಿಕೆಯಿಂದ ಪ್ರತಿಧ್ವನಿಸಲು ಶಕ್ತರಾಗುವೆವು: “ನಿನ್ನ ಕೈಕೆಲಸವಾಗಿರುವ ಆಕಾಶಮಂಡಲವನ್ನೂ ನೀನು ಉಂಟುಮಾಡಿದ ಚಂದ್ರನಕ್ಷತ್ರಗಳನ್ನೂ ನಾನು ನೋಡುವಾಗ—ಮನುಷ್ಯನು ಎಷ್ಟು ಮಾತ್ರದವನು, ಅವನನ್ನು ನೀನು ಯಾಕೆ ನೆನಸಬೇಕು? ಮಾನವನು ಎಷ್ಟರವನು, ಅವನಲ್ಲಿ ಯಾಕೆ ಲಕ್ಷ್ಯವಿಡಬೇಕು?”—ಕೀರ್ತನೆ 8:3, 4.
[ಅಧ್ಯಯನ ಪ್ರಶ್ನೆಗಳು]
a “ಗ್ರಹಣ” (ಇಕ್ಲಿಪ್ಸ್) ಎಂಬ ಪದವು, ಎಕ್ಲೀಪೊದಿಂದ ಬರುವ ಗ್ರೀಕ್ನ ಎಕ್ಲೀಪ್ಸಿಸ್ನಿಂದ ಬಂದದ್ದಾಗಿದ್ದು, “ತೋರಿಬರಲು ತಪ್ಪುವುದು,” ಎಂಬುದು ಇದರ ಅರ್ಥವಾಗಿದೆ.—ದ ಕನ್ಸೈಸ್ ಆಕ್ಸ್ಫರ್ಡ್ ಡಿಕ್ಷನರಿ.
b ನವಂಬರ 3, 1994ರಲ್ಲಿ, ದಕ್ಷಿಣ ಅಮೆರಿಕದ ಆಚೆಕಡೆಯ ಭಾಗಗಳಲ್ಲಿ ಗೋಚರವಾದ ಒಂದು ಪೂರ್ಣ ಸೂರ್ಯ ಗ್ರಹಣವಿತ್ತು.
[ಪುಟ 9 ರಲ್ಲಿರುವ ಚಿತ್ರ ಕೃಪೆ]
Photo courtesy of NASA/Finley-Holiday Film Corporation