ನಿಮ್ಮ ಆರೋಗ್ಯವನ್ನು ರೂಪಿಸುವ ಸಂಗತಿ—ನೀವು ಮಾಡಬಲ್ಲ ವಿಷಯ
ಅಕ್ಕಿ ಅಥವಾ ಹಿಟ್ಟಿಗೆ ಅಸದೃಶವಾಗಿ, ಆರೋಗ್ಯವನ್ನು ಪರಿಹಾರ ಕಾರ್ಮಿಕನೊಬ್ಬನು ವಿತರಿಸಲಾರನು. ಅದು ಒಂದು ಚೀಲದಲ್ಲಿ ದೊರಕುವುದಿಲ್ಲ ಯಾಕಂದರೆ, ಅದು ಒಂದು ಪದಾರ್ಥವಲ್ಲ, ಬದಲಾಗಿ ಒಂದು ಸ್ಥಿತಿಯಾಗಿದೆ. “ಆರೋಗ್ಯವು, ಸಂಪೂರ್ಣ ಶಾರೀರಿಕ, ಮಾನಸಿಕ ಮತ್ತು ಸಾಮಾಜಿಕ ಕ್ಷೇಮದ ಒಂದು ಸ್ಥಿತಿಯಾಗಿದೆ” ಎಂದು ಡಬ್ಲ್ಯುಏಚ್ಓ (ಲೋಕಾರೋಗ್ಯ ಸಂಸ್ಥೆ) ಅರ್ಥ ನಿರೂಪಿಸುತ್ತದೆ. ಆದರೂ, ಆ ಕ್ಷೇಮದ ಮಟ್ಟವನ್ನು ಯಾವುದು ನಿರ್ಧರಿಸುತ್ತದೆ?
ಸಾಧಾರಣವಾದ ಒಂದು ಮನೆಯನ್ನು ಹಲಗೆಗಳು, ಮೊಳೆಗಳು, ಮತ್ತು ಜಿಂಕ್ ಷೀಟನ್ನು ಉಪಯೋಗಿಸಿ ಕಟ್ಟಬಹುದಾದರೂ, ಬೇರೆ ಬೇರೆ ಭಾಗಗಳು ಅನೇಕವೇಳೆ ನಾಲ್ಕು ಮೂಲೆ ಕಂಬಗಳಿಂದ ಆಧರಿಸಲ್ಪಡುತ್ತವೆ. ತದ್ರೀತಿಯಲ್ಲಿ, ನಮ್ಮ ಆರೋಗ್ಯವು ಅನೇಕ ಪ್ರಭಾವಗಳಿಂದ ರೂಪಿಸಲ್ಪಡುತ್ತದಾದರೂ, ಎಲ್ಲವೂ ನಾಲ್ಕು “ಮೂಲೆ” ಪ್ರಭಾವಗಳಿಗೆ ಸಂಬಂಧಪಟ್ಟವುಗಳಾಗಿವೆ. ಅವುಗಳು ಯಾವುವೆಂದರೆ (1) ನಡವಳಿಕೆ, (2) ಪರಿಸರ, (3) ವೈದ್ಯಕೀಯ ಪರಾಮರಿಕೆ, ಮತ್ತು (4) ಜೀವಶಾಸ್ತ್ರೀಯ ರಚನೆ. ಕಂಬಗಳ ಗುಣಮಟ್ಟವನ್ನು ಉತ್ತಮಗೊಳಿಸುವ ಮೂಲಕ ನೀವು ನಿಮ್ಮ ಮನೆಯನ್ನು ಬಲಗೊಳಿಸುವಂತೆಯೇ, ಈ ಪ್ರಭಾವಶಾಲಿ ಅಂಶಗಳ ಗುಣಮಟ್ಟವನ್ನು ಅಭಿವೃದ್ಧಿಪಡಿಸುವ ಮೂಲಕ ನೀವು ನಿಮ್ಮ ಆರೋಗ್ಯವನ್ನು ಹೆಚ್ಚು ಉತ್ತಮವಾಗಿ ಮಾಡಬಲ್ಲಿರಿ. ಪ್ರಶ್ನೆಯೇನಂದರೆ, ಪರಿಮಿತ ಸಾಧನಗಳಿಂದ ಅದನ್ನು ಹೇಗೆ ಮಾಡಸಾಧ್ಯವಿದೆ?
ನಿಮ್ಮ ನಡವಳಿಕೆ ಮತ್ತು ನಿಮ್ಮ ಆರೋಗ್ಯ
ನಾಲ್ಕು ಅಂಶಗಳಲ್ಲಿ, ಬಹುಮಟ್ಟಿಗೆ ನಿಮ್ಮ ಹತೋಟಿಯಲ್ಲಿರುವ ಒಂದು ಅಂಶವು ನಿಮ್ಮ ನಡವಳಿಕೆಯಾಗಿದೆ. ಅದನ್ನು ಹೆಚ್ಚು ಉತ್ತಮವಾಗುವಂತೆ ಬದಲಾಯಿಸುವುದು ಸಹಾಯ ಮಾಡಬಲ್ಲದು. ನಿಮ್ಮ ಆಹಾರ ಪಥ್ಯ ಮತ್ತು ಹವ್ಯಾಸಗಳಲ್ಲಿ ನೀವು ಮಾಡಬಲ್ಲ ಬದಲಾವಣೆಗಳನ್ನು ಬಡತನವು ಮಿತಗೊಳಿಸುತ್ತದೆ ಎಂಬುದು ಒಪ್ಪಿಕೊಳ್ಳುವಂತಹ ವಿಷಯವಾಗಿರುವುದಾದರೂ, ಲಭ್ಯವಿರುವ ಆಯ್ಕೆಗಳನ್ನು ಉಪಯೋಗಿಸುವ ಮೂಲಕ ನೀವು ವಾಸ್ತವವಾದ ಒಂದು ವ್ಯತ್ಯಾಸವನ್ನು ಮಾಡಬಲ್ಲಿರಿ. ಮುಂದಿನ ಉದಾಹರಣೆಯನ್ನು ಗಮನಿಸಿ.
ತಾಯಿಯೊಬ್ಬಳಿಗೆ ಸಾಮಾನ್ಯವಾಗಿ ತನ್ನ ಮಗುವಿಗೆ ಮೊಲೆಯೂಡಿಕೆ ಮತ್ತು ಸೀಸೆಹಾಲುಣಿತದ ನಡುವೆ ಆಯ್ಕೆಯಿದೆ. ಮೊಲೆಯೂಡಿಕೆಯು, “ಶಾರೀರಿಕವಾಗಿ ಮತ್ತು ಆರ್ಥಿಕವಾಗಿ ಎರಡೂ ರೀತಿಯಲ್ಲಿ ಉತ್ಕೃಷ್ಟವಾದ ಆಯ್ಕೆ”ಯಾಗಿದೆ ಎಂದು ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಮಕ್ಕಳ ತುರ್ತುನಿಧಿ ಹೇಳುತ್ತದೆ. ತಾಯಿಯ ಹಾಲು, ಮಗುವಿಗೆ “ನಿಖರವಾಗಿ ಸಸಾರಜನಕ (ಪ್ರೋಟೀನ್), ಕೊಬ್ಬು, ಲ್ಯಾಕ್ಟೋಸ್, ಜೀವಸತ್ವಗಳು, ಖನಿಜಗಳು ಮತ್ತು ಸುಸಂಗತವಾದ ಬೆಳವಣಿಗೆಗಾಗಿ ಆವಶ್ಯಕವಾಗಿರುವ ಸೂಕ್ಷ್ಮ ಪರಿಮಾಣಗಳಲ್ಲಿರುವ ರಾಸಾಯನಿಕ ಘಟಕಾಂಶಗಳನ್ನು ಸೂಕ್ತವಾದ ಪ್ರಮಾಣಗಳಲ್ಲಿ” ಕೊಡುತ್ತಾ, “ಮೂಲಭೂತವಾದ ಆರೋಗ್ಯಾಹಾರ”ವಾಗಿದೆ ಎಂದು ಪರಿಣತರು ಹೇಳುತ್ತಾರೆ. ರೋಗಗಳನ್ನು ಎದುರಿಸುವುದರಲ್ಲಿ ಶಿಶುವಿಗೆ ಅನುಕೂಲಕರ ಆರಂಭವನ್ನು ಕೊಡುತ್ತಾ, ಮೊಲೆ ಹಾಲು, ತಾಯಿಯಿಂದ ಮಗುವಿಗೆ ರೋಗ ನಿರೋಧಕ ಪ್ರೋಟೀನ್ಗಳು, ಅಥವಾ ಪ್ರತಿವಿಷ ಜೀವಾಣುಗಳನ್ನು ಕೂಡ ಸಾಗಿಸುತ್ತದೆ.
ವಿಶೇಷವಾಗಿ ಉಷ್ಣವಲಯದ ದೇಶಗಳಲ್ಲಿ ನೈರ್ಮಲ್ಯ ಪರಿಸ್ಥಿತಿಗಳ ಕೊರತೆಯಿರುವುದರಿಂದ, ಮೊಲೆಯೂಡಿಕೆಯು ಅತ್ಯುತ್ತಮವಾಗಿದೆ. ಸೀಸೆ ಹಾಲಿಗೆ ಅಸದೃಶವಾಗಿ, ಹಣವನ್ನು ಉಳಿಸಲಿಕ್ಕಾಗಿ ಮೊಲೆ ಹಾಲನ್ನು ಹೆಚ್ಚು ತೆಳುವಾಗಿಸಲು ಸಾಧ್ಯವಿರುವುದಿಲ್ಲ, ಅದರ ತಯಾರಿಕೆಯ ಸಮಯದಲ್ಲಿ ತಪ್ಪುಗಳನ್ನು ಮಾಡಲು ಸಾಧ್ಯವಿರುವುದಿಲ್ಲ, ಮತ್ತು ಅದು ಯಾವಾಗಲೂ ಒಂದು ಸ್ವಚ್ಛವಾದ ಪಾತ್ರೆಯಿಂದ ಒದಗಿಸಲ್ಪಡುತ್ತದೆ. ವ್ಯತಿರಿಕ್ತವಾಗಿ, “ಬಹಳವಾಗಿ ಮೊಲೆಯೂಡಿಸಲ್ಪಟ್ಟ ಒಂದು ಮಗುವಿಗಿಂತ, ಒಂದು ಬಡ ಸಮಾಜದಲ್ಲಿ ಸೀಸೆ ಹಾಲುಣಿಸಲ್ಪಟ್ಟ ಒಂದು ಮಗುವು, ಅತಿಭೇದಿ ರೋಗದಿಂದ ಸಾಯುವ ಸಂಭವನೀಯತೆಯು ಹೆಚ್ಚುಕಡಿಮೆ 15 ಪಾಲು ಹೆಚ್ಚು ಮತ್ತು ನ್ಯುಮೋನಿಯದಿಂದ ಸಾಯುವ ಸಂಭವನೀಯತೆಯು ನಾಲ್ಕು ಪಾಲು ಹೆಚ್ಚು” ಎಂದು ಕೆನೇಡಿಯನ್ ಸೊಸೈಟಿ ಫಾರ್ ಇಂಟರ್ನ್ಯಾಷನಲ್ ಹೆಲ್ತ್ನ ಸಿನರ್ಜಿ ಎಂಬ ವಾರ್ತಾಪತ್ರವು ದಾಖಲಿಸುತ್ತದೆ.
ಇದಲ್ಲದೆ ಆರ್ಥಿಕ ಪ್ರಯೋಜನವಿದೆ. ವರ್ಧಿಷ್ಣು ಲೋಕದಲ್ಲಿ, ಪುಡಿ ಮಾಡಲ್ಪಟ್ಟ ಹಾಲು ದುಬಾರಿಯಾಗಿದೆ. ಉದಾಹರಣೆಗೆ, ಬ್ರೆಸಿಲ್ನಲ್ಲಿ ಒಂದು ಮಗುವಿಗೆ ಸೀಸೆ ಹಾಲುಣಿಸುವುದು, ಬಡ ಕುಟುಂಬದ ಮಾಸಿಕ ಆದಾಯದ ಐದನೇ ಒಂದು ಭಾಗವನ್ನು ತೆಗೆದುಕೊಳ್ಳಬಹುದು. ಮೊಲೆಯೂಡಿಸುವ ಮೂಲಕ ಉಳಿಸಲ್ಪಡುವ ಹಣವು, ತಾಯಿಯನ್ನು ಒಳಗೊಂಡು ಇಡೀ ಕುಟುಂಬಕ್ಕೆ ಹೆಚ್ಚು ಆರೋಗ್ಯಕರವಾದ ಊಟಗಳನ್ನು ಒದಗಿಸಬಲ್ಲದು.
ಈ ಎಲ್ಲ ಪ್ರಯೋಜನಗಳಿರುವಾಗ, ಮೊಲೆಯೂಡಿಕೆಯಲ್ಲಿ ಏರಿಕೆಯನ್ನು ನೀವು ನಿರೀಕ್ಷಿಸುವಿರಿ. ಆದರೂ, ಫಿಲಿಪ್ಪೀನ್ಸ್ನಲ್ಲಿ ಮೊಲೆಯೂಡಿಕೆಯು “ನಿರ್ನಾಮವಾಗುವ ಉಗ್ರ ಭಯ ಸೂಚನೆಯಿದೆ” ಎಂದು ಫಿಲಿಪ್ಪೀನ್ಸ್ನ ಆರೋಗ್ಯ ಕಾರ್ಯಕರ್ತರು ವರದಿಮಾಡುತ್ತಾರೆ, ಮತ್ತು ಉಸಿರಾಟದ ಸೋಂಕಿನಿಂದ ಶಿಶುಗಳ ಸಾಯುವಿಕೆಯೊಂದಿಗೆ ಸಂಬಂಧಿಸಿರುವ ಪ್ರಧಾನ ಅಂಶಗಳಲ್ಲಿ ಒಂದು “ಮೊಲೆಯೂಡಿಕೆಯ ಕೊರತೆ”ಯೇ ಆಗಿದೆ ಎಂದು ಬ್ರೆಸಿಲ್ನ ಅಧ್ಯಯನವೊಂದು ತೋರಿಸಿತು. ಆದಾಗಲೂ, ನಿಮ್ಮ ಶಿಶುವು ಆ ಗತಿಯನ್ನು ತಪ್ಪಿಸಿಕೊಳ್ಳಬಹುದು. ನಿಮಗೆ ಒಂದು ಆಯ್ಕೆಯಿದೆ.
ಆದರೂ, ಕುಟುಂಬದ ಇತರ ಸದಸ್ಯರ ಅನಾರೋಗ್ಯಕರವಾದ ನಡವಳಿಕೆಯಿಂದ, ಮಗುವಿನ ಆರೋಗ್ಯವನ್ನು ಸಂರಕ್ಷಿಸುವ ತಾಯಿಯ ಪ್ರಯತ್ನಗಳು ಅನೇಕವೇಳೆ ಕೆಡಿಸಲ್ಪಡುತ್ತವೆ. ನೇಪಾಲದ ಒಬ್ಬ ತಾಯಿಯನ್ನು ಒಂದು ಉದಾಹರಣೆಯಾಗಿ ತೆಗೆದುಕೊಳ್ಳಿರಿ. ಅವಳು ತೇವ ತುಂಬಿದ ಒಂದು ಕೊಠಡಿಯಲ್ಲಿ ತನ್ನ ಗಂಡ ಮತ್ತು ಮೂರು ವರ್ಷ ಪ್ರಾಯದ ಮಗಳೊಂದಿಗೆ ಪಾಲಿಗಳಾಗುತ್ತಾಳೆ. ಸಣ್ಣ ಕೊಠಡಿಯು ಅಡಿಗೆ ಮನೆಯ ಹೊಗೆ ಮತ್ತು ಹೊಗೆಸೊಪ್ಪಿನ ಹೊಗೆಯಿಂದ ತುಂಬಿರುತ್ತದೆ ಎಂದು ಪಾನ್ಅಸ್ಕೋಪ್ ಪತ್ರಿಕೆಯು ಬರೆಯುತ್ತದೆ. ಉಸಿರಾಟದ ಸೋಂಕಿನಿಂದ ಆ ಮಗುವು ಕಷ್ಟಾನುಭವಿಸುತ್ತದೆ. “ಧೂಮಪಾನ ಮಾಡುವುದರಿಂದ ನನ್ನ ಗಂಡನನ್ನು ನಾನು ತಡೆಯಲಾಗುವುದಿಲ್ಲ” ಎಂದು ತಾಯಿ ನಿಟ್ಟುಸಿರುಬಿಡುತ್ತಾಳೆ. “ಈಗ ನಾನು ನನ್ನ ಗಂಡನಿಗಾಗಿ ಸಿಗರೇಟ್ಗಳನ್ನು ಮತ್ತು ನನ್ನ ಮಗುವಿಗಾಗಿ ಔಷಧವನ್ನು ಕೊಂಡುಕೊಳ್ಳುತ್ತೇನೆ.”
ವಿಷಾದಕರವಾಗಿಯೇ, ವರ್ಧಿಷ್ಣು ದೇಶಗಳಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಜನರು ಅತ್ಯಧಿಕವಾಗಿ ಅಗತ್ಯವಾದ ಆದಾಯವನ್ನು, ಧೂಮಪಾನವನ್ನು ರೂಢಿಸಿಕೊಳ್ಳುವ ಮೂಲಕ ವ್ಯರ್ಥಮಾಡುವುದರಿಂದ, ಅವಳ ಸಂದಿಗ್ಧತೆಯು ಅಧಿಕವಾಗಿ ಸಾಮಾನ್ಯವಾಗುತ್ತಾ ಇದೆ. ವಾಸ್ತವವಾಗಿ, ಯೂರೋಪ್ ಅಥವಾ ಅಮೆರಿಕದಲ್ಲಿ ಧೂಮಪಾನವನ್ನು ನಿಲ್ಲಿಸುವ ಪ್ರತಿಯೊಬ್ಬ ಸೇದುಗನಿಗೆ ಬದಲಾಗಿ, ಲ್ಯಾಟಿನ್ ಅಮೆರಿಕ ಅಥವಾ ಆಫ್ರಿಕದಲ್ಲಿ ಇಬ್ಬರು ಜನರು ಧೂಮಪಾನ ಮಾಡಲಾರಂಭಿಸುತ್ತಾರೆ. ತಪ್ಪು ದಾರಿಗೆ ಎಳೆಯುವ ಜಾಹೀರಾತುಗಳು ಹೆಚ್ಚು ದೂಷಣೆಗೆ ಅರ್ಹವಾಗಿವೆ ಎಂದು ರೂಅಕನ್ ವೆಲ್ಬೆಸ್ಕೋಡ್ ಎಂಬ ಡಚ್ ಪುಸ್ತಕವು ದಾಖಲಿಸುತ್ತದೆ. “ವರ್ಸಿಟಿ: ಒಳ್ಳೆಯ ಸೂಕ್ಷ್ಮಗ್ರಾಹಿ ಭಾವನೆಗಾಗಿ” ಮತ್ತು “ಗೋಲ್ಡ್ ಲೀಫ್: ಅತ್ಯಂತ ಪ್ರಮುಖರಾದ ಜನರಿಗಾಗಿ ಅತ್ಯಂತ ಪ್ರಮುಖವಾದ ಸಿಗರೇಟ್ಗಳು” ಎಂಬಂತಹ ಘೋಷಣೆಗಳು, ಧೂಮಪಾನವು ಪ್ರಗತಿ ಮತ್ತು ಸಮೃದ್ಧಿಗೆ ಸಂಬಂಧಿಸಿದ್ದಾಗಿದೆ ಎಂದು ಬಡವರಿಗೆ ಮನಗಾಣಿಸುತ್ತವೆ. ಆದರೆ ಅದಕ್ಕೆ ವಿರುದ್ಧವಾದದ್ದು ಸತ್ಯವಾಗಿದೆ. ಅದು ನಿಮ್ಮ ಹಣವನ್ನು ಭಸ್ಮಮಾಡುತ್ತದೆ ಮತ್ತು ನಿಮ್ಮ ಆರೋಗ್ಯವನ್ನು ಹಾಳುಮಾಡುತ್ತದೆ.
ಇದನ್ನು ಪರಿಗಣಿಸಿರಿ. ವ್ಯಕ್ತಿಯೊಬ್ಬನು ಪ್ರತಿಸಲವೂ ಒಂದು ಸಿಗರೇಟನ್ನು ಸೇದುವಾಗ, ಅವನು ತನ್ನ ಜೀವನ ನಿರೀಕ್ಷೆಯನ್ನು ಹತ್ತು ನಿಮಿಷಗಳಷ್ಟು ಕಡಿಮೆ ಮಾಡಿಕೊಳ್ಳುತ್ತಾನೆ ಮತ್ತು ಹೃದಯಾಘಾತ ಹಾಗೂ ಸ್ಟ್ರೋಕ್, ಹಾಗೂ ಶ್ವಾಸ ಕೋಶ, ಗಂಟಲು, ಮತ್ತು ಬಾಯಿಯ ಕ್ಯಾನ್ಸರ್ಗಳು ಮತ್ತು ಇತರ ರೋಗಗಳ ಕುರಿತಾದ ತನ್ನ ಅಪಾಯವನ್ನು ಹೆಚ್ಚಿಸಿಕೊಳ್ಳುತ್ತಾನೆ. ಯುಎನ್ ಕ್ರಾನಿಕ್ಲ್ ಪತ್ರಿಕೆಯು ಹೇಳುವುದು: “ಲೋಕದಲ್ಲಿ ಅಪ್ರಾಪ್ತ ಮರಣ ಮತ್ತು ದೌರ್ಬಲ್ಯದ ಏಕೈಕ ಅತ್ಯಂತ ಮಹಾನ್, ತಡೆಗಟ್ಟಸಾಧ್ಯವಿರುವ ಕಾರಣವು ಹೊಗೆಸೊಪ್ಪಿನ ಬಳಕೆಯಾಗಿದೆ.” “ತಡೆಗಟ್ಟಸಾಧ್ಯವಿರುವ ಕಾರಣ” ಎಂದು ಅದು ಹೇಳುತ್ತದೆಂಬುದನ್ನು ದಯವಿಟ್ಟು ಗಮನಿಸಿರಿ. ನಿಮ್ಮ ಕೊನೆಯ ಸಿಗರೇಟನ್ನು ನೀವು ನಂದಿಸಬಲ್ಲಿರಿ.
ನಿಮ್ಮ ಆರೋಗ್ಯವನ್ನು ಪ್ರಭಾವಿಸುವ, ನಡವಳಿಕೆಗೆ ಸಂಬಂಧಿಸಿದ ಇನ್ನೂ ಅನೇಕ ಆಯ್ಕೆಗಳು ಇವೆ ನಿಶ್ಚಯ. ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹವೊಂದರ ಗ್ರಂಥಾಲಯದಲ್ಲಿ ನೀವು ಓದಬಲ್ಲ ಕೆಲವು ವಿಷಯಗಳನ್ನು ಈ ಲೇಖನದ ಪುಟ 11ರಲ್ಲಿರುವ ರೇಖಾಚೌಕವು ಪಟ್ಟಿಮಾಡುತ್ತದೆ. ನಿಮಗೆ ಮಾಹಿತಿಯನ್ನು ಕೊಟ್ಟುಕೊಳ್ಳುವುದು ಪ್ರಯತ್ನವನ್ನು ತೆಗೆದುಕೊಳ್ಳುತ್ತದೆ ನಿಜ. ಆದರೂ, ಡಬ್ಲ್ಯುಏಚ್ಓ ಉದ್ಯೋಗಸ್ಥನೊಬ್ಬನು ಹೇಳಿದ್ದು: “ತಮ್ಮ ಆರೋಗ್ಯ ಪರಿಸ್ಥಿತಿಯ ಕುರಿತು ತಿಳಿದಿರುವ ಮತ್ತು ಶಿಕ್ಷಿತರಾಗಿರುವ ತಿಳಿವಳಿಕೆ ಪಡೆದುಕೊಂಡ ಜನರ ಒಳಗೂಡುವಿಕೆಯಿಲ್ಲದೆ, ನೀವು ಆರೋಗ್ಯವನ್ನು ಹೊಂದಲು ಸಾಧ್ಯವಿಲ್ಲ.” ಆದುದರಿಂದ ಆರೋಗ್ಯವನ್ನು ಪ್ರವರ್ಧಿಸುವ ಈ ಉಚಿತವಾದ ಹೆಜ್ಜೆಯನ್ನು ತೆಗೆದುಕೊಳ್ಳಿರಿ: ನಿಮ್ಮನ್ನು ಶಿಕ್ಷಣಕ್ಕೊಳಪಡಿಸಿಕೊಳ್ಳಿರಿ.
ಆರೋಗ್ಯ ಮತ್ತು ಮನೆಯ ಪರಿಸರ
ನಿಮ್ಮ ಆರೋಗ್ಯವನ್ನು ಅತ್ಯಧಿಕವಾಗಿ ಪ್ರಭಾವಿಸುವ ಪರಿಸರವು, ನಿಮ್ಮ ಮನೆ ಮತ್ತು ನೆರೆಹೊರೆಯಾಗಿದೆ ಎಂದು ದ ಪೂಅರ್ ಡೈ ಯಂಗ್ ಎಂಬ ಪುಸ್ತಕವು ಹೇಳುತ್ತದೆ. ನೀರಿನ ಕಾರಣದಿಂದ ನಿಮ್ಮ ಪರಿಸರವು ಒಂದು ಆರೋಗ್ಯ ಅಪಾಯವಾಗಿರಸಾಧ್ಯವಿದೆ. ಸೋಂಕುಗಳು, ಚರ್ಮ ರೋಗಗಳು, ಅತಿಭೇದಿ, ಕಾಲರ, ಆಮಶಂಕೆ, ವಿಷಮಶೀತ ಜ್ವರ (ಟೈಫಾಯ್ಡ್), ಮತ್ತು ಇತರ ಬೇಗುದಿಗಳು, ಸಾಕಷ್ಟಿಲ್ಲದ ಮತ್ತು ಅಸುರಕ್ಷಿತ ನೀರಿನಿಂದ ಉಂಟಾಗುತ್ತವೆ.
ನಿಮ್ಮ ಕೈಗಳನ್ನು ತೊಳೆಯುವುದು ಒಂದು ಹರಿಗೊಳವೆಯನ್ನು ತೆರೆಯುವುದಕ್ಕಿಂತ ಹೆಚ್ಚಿನದ್ದನ್ನು ಅಗತ್ಯಪಡಿಸದಿರುವಲ್ಲಿ, ತಮ್ಮ ಮನೆಗಳಲ್ಲಿ ಕೊಳಾಯಿಯ ನೀರಿನ ಕೊರತೆಯುಳ್ಳ ಜನರು ಪ್ರತಿ ದಿನ ನೀರನ್ನು ಪಡೆದುಕೊಳ್ಳಲು ಎಷ್ಟು ಹೆಚ್ಚು ಸಮಯವನ್ನು ವ್ಯಯಿಸುತ್ತಾರೆ ಎಂಬುದನ್ನು ಊಹಿಸುವುದು ನಿಮಗೆ ಕಷ್ಟಕರವಾಗಿರಬಹುದು. ಅನೇಕವೇಳೆ 500ಕ್ಕಿಂತಲೂ ಹೆಚ್ಚು ಜನರು ಒಂದು ನಲ್ಲಿಯನ್ನು ಉಪಯೋಗಿಸುತ್ತಾರೆ. ಅದು ಕಾಯುವುದನ್ನು ಅಗತ್ಯಪಡಿಸುತ್ತದೆ. ಆದರೆ ಕಡಿಮೆ ಆದಾಯದ ಜನರು ದೀರ್ಘ ತಾಸುಗಳ ವರೆಗೆ ಕೆಲಸ ಮಾಡುತ್ತಾರೆ, ಮತ್ತು ಕಾಯುವುದು “ಆದಾಯವನ್ನು ಸಂಪಾದಿಸುವುದರಲ್ಲಿ ಉಪಯೋಗಿಸಸಾಧ್ಯವಿರುವ ಸಮಯವನ್ನು ಕಡಿಮೆ ಮಾಡುತ್ತದೆ” ಎಂದು ಎನ್ವೈರನ್ಮೆಂಟಲ್ ಪ್ರಾಬಮ್ಲ್ಸ್ ಇನ್ ತರ್ಡ್ ವರ್ಲ್ಡ್ ಸಿಟೀಸ್ ಎಂಬ ಪುಸ್ತಕವು ದಾಖಲಿಸುತ್ತದೆ. ಸಮಯವನ್ನು ಉಳಿಸಲಿಕ್ಕಾಗಿ, ಆರು ಮಂದಿಯ ಕುಟುಂಬವೊಂದು, ಆ ಗಾತ್ರದ ಕುಟುಂಬಕ್ಕೆ ಪ್ರತಿ ದಿನ ಅಗತ್ಯವಾಗಿರುವ 30 ಬಕೆಟ್ಗಳಷ್ಟು ನೀರಿಗಿಂತಲೂ ಕಡಿಮೆ ನೀರನ್ನು ಅನೇಕವೇಳೆ ಮನೆಗೆ ಕೊಂಡೊಯ್ಯುತ್ತದೆ ಎಂಬುದರಲ್ಲಿ ಆಶ್ಚರ್ಯವಿಲ್ಲ. ಆದರೆ ಆಗ, ಆಹಾರ, ಪಾತ್ರೆಗಳು, ಮತ್ತು ಬಟ್ಟೆಗೆಳನ್ನು ತೊಳೆಯಲಿಕ್ಕಾಗಿ ಹಾಗೂ ವೈಯಕ್ತಿಕ ಆರೋಗ್ಯ ಶುದ್ಧತೆಗಾಗಿ ಬಹಳ ಕಡಿಮೆ ನೀರು ಇರುತ್ತದೆ. ಪ್ರತಿಯಾಗಿ ಇದು, ಕುಟುಂಬದ ಆರೋಗ್ಯವನ್ನು ಅಪಾಯಕ್ಕೆ ಸಿಕ್ಕಿಸುವ ಹೇನುಗಳು ಮತ್ತು ನೊಣಗಳನ್ನು ಆಕರ್ಷಿಸುವ ಪರಿಸ್ಥಿತಿಗಳಿಗೆ ನಡೆಸುತ್ತದೆ.
ಈ ಸನ್ನಿವೇಶದ ಕುರಿತು ಪರ್ಯಾಲೋಚಿಸಿರಿ. ಬಹುದೂರದ ನಿಮ್ಮ ಕೆಲಸವನ್ನು ತಲಪಲಿಕ್ಕಾಗಿ ನೀವು ಒಂದು ಸೈಕಲಿನ ಮೇಲೆ ಅವಲಂಬಿಸಿಕೊಂಡಿರುವುದಾದರೆ, ಚೈನಿಗೆ ಎಣ್ಣೆ ಹಚ್ಚಲು, ಬ್ರೇಕ್ಗಳನ್ನು ಸರಿಪಡಿಸಲು, ಅಥವಾ ಚಕ್ರದ ಸ್ಪೋಕ್ ಕಡ್ಡಿಯನ್ನು ಬದಲಾಯಿಸಲು, ಪ್ರತಿ ವಾರ ಸ್ವಲ್ಪ ಸಮಯವನ್ನು ಕಳೆಯುವುದು ಒಂದು ನಷ್ಟವೆಂದು ನೀವು ಪರಿಗಣಿಸುವಿರೊ? ಇಲ್ಲ, ಏಕಂದರೆ ದುರಸ್ತಾಗಿಡುವಿಕೆಯನ್ನು ಅಲಕ್ಷ್ಯ ಮಾಡುವ ಮೂಲಕ ಈಗ ಕೆಲವು ತಾಸುಗಳನ್ನು ನೀವು ಗಳಿಸುವುದಾದರೂ, ತದನಂತರ ನಿಮ್ಮ ಸೈಕಲ್ ಮುರಿದು ಬೀಳುವಾಗ ನೀವು ಇಡೀ ದಿನದ ಕೆಲಸವನ್ನು ಕಳೆದುಕೊಳ್ಳಬೇಕಾಗಬಹುದು ಎಂದು ನೀವು ಗ್ರಹಿಸುವುದರಿಂದಲೇ. ತದ್ರೀತಿಯಲ್ಲಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಕಾಗುವಷ್ಟು ನೀರನ್ನು ನೀವು ಸಾಗಿಸದಿರುವಲ್ಲಿ ಪ್ರತಿ ವಾರ ನೀವು ಕೆಲವು ತಾಸುಗಳನ್ನು ಮತ್ತು ಸ್ವಲ್ಪ ಹಣವನ್ನು ಗಳಿಸಬಹುದು, ಆದರೆ ತದನಂತರ ನ್ಯೂನ ಸಂರಕ್ಷಣೆಯ ಕಾರಣದಿಂದ ನಿಮ್ಮ ಆರೋಗ್ಯನಾಶವಾಗುವಾಗ, ನೀವು ಅನೇಕ ದಿನಗಳನ್ನು ಮತ್ತು ಹಣವನ್ನು ಕಳೆದುಕೊಳ್ಳಬಹುದು.
ಸಾಕಷ್ಟು ನೀರು ತರುವುದನ್ನು ಕುಟುಂಬದ ಒಂದು ಕಾರ್ಯಯೋಜನೆಯನ್ನಾಗಿ ಮಾಡಸಾಧ್ಯವಿದೆ. ತಾಯಿ ಮತ್ತು ಮಕ್ಕಳು ನೀರಿನ ವಾಹಕರಾಗಿ ಕಾರ್ಯನಡಿಸುವಂತೆ ಸ್ಥಳೀಯ ಸಂಸ್ಕೃತಿಯು ಆದೇಶಿಸುವುದಾದರೂ, ಕಾಳಜಿ ವಹಿಸುವ ಒಬ್ಬ ತಂದೆಯು ಸ್ವತಃ ನೀರನ್ನು ಸಾಗಿಸಲು ತನ್ನ ಸ್ನಾಯು ಬಲವನ್ನು ಒದಗಿಸುವುದನ್ನು ವರ್ಜಿಸುವದಿಲ್ಲ.
ಆದರೂ, ನೀರು ಮನೆಯನ್ನು ತಲಪಿದ ಬಳಿಕ, ಅದನ್ನು ಹೇಗೆ ಶುದ್ಧವಾಗಿಡುವುದು ಎಂಬ ದ್ವಿತೀಯ ಸಮಸ್ಯೆಯು ಏಳುತ್ತದೆ. ಆರೋಗ್ಯ ಪರಿಣತರು ಸಲಹೆ ನೀಡುವುದು: ಇತರ ಉದ್ದೇಶಗಳಿಗಾಗಿ ಉಪಯೋಗಿಸಲ್ಪಡುವ ನೀರು ಮತ್ತು ಕುಡಿಯುವ ನೀರನ್ನು ಒಂದೇ ಸ್ಥಳದಲ್ಲಿ ಶೇಖರಿಸಿಡಬೇಡಿರಿ. ಶೇಖರಣೆಯ ಪಾತ್ರೆಯನ್ನು ಯಾವಾಗಲೂ ಬಿಗಿಯಾಗಿರುವ ಮುಚ್ಚಳದಿಂದ ಮುಚ್ಚಿರಿ. ಸ್ವಲ್ಪ ಸಮಯದ ವರೆಗೆ ನೀರು ನಿಲ್ಲುವಂತೆ ಬಿಡಿರಿ, ಇದರಿಂದ ಅಶುದ್ಧ ಪದಾರ್ಥಗಳು ಪಾತ್ರೆಯ ತಳದಲ್ಲಿ ನಿಲ್ಲುತ್ತವೆ. ನೀರನ್ನು ತೋಡುವಾಗ ಅದನ್ನು ನಿಮ್ಮ ಬೆರಳುಗಳಿಂದ ಮುಟ್ಟಬೇಡಿರಿ, ಬದಲಾಗಿ ಉದ್ದವಾದ ಹಿಡಿಯಿರುವ ಒಂದು ಸ್ವಚ್ಛವಾದ ಕಪ್ ಅನ್ನು ಉಪಯೋಗಿಸಿರಿ. ನೀರಿನ ಪಾತ್ರೆಗಳನ್ನು ಚೆಲುವೆಕಾರಿ ದ್ರಾವಣವೊಂದರಿಂದ ಕ್ರಮವಾಗಿ ಸ್ವಚ್ಛ ಮಾಡಿರಿ, ಮತ್ತು ತದನಂತರ ಅವುಗಳನ್ನು ಸುರಕ್ಷಿತವಾದ ನೀರಿನಿಂದ ಜಾಲಿಸಿ ತೊಳೆಯಿರಿ. ಮತ್ತು ಮಳೆನೀರು? ನಿಶ್ಚಯವಾಗಿಯೂ (ಮಳೆ ಬೀಳುವುದಾದರೆ ಮಾತ್ರ!) ಅದು ಅನುಕೂಲಕರವಾಗಿದೆ, ಮತ್ತು ಕೀಟಗಳು ಮತ್ತು ದಂಶಕಗಳು ಹಾಗೂ ಇತರ ಪ್ರಾಣಿಗಳಿಂದ ತೊಟ್ಟಿಯು ಸಂರಕ್ಷಿಸಲ್ಪಡುವುದಾದರೆ ಮತ್ತು ಮಳೆನೀರಿನೊಂದಿಗೆ ಯಾವುದೇ ಕಶ್ಮಲವು ಶೇಖರಣೆಯ ತೊಟ್ಟಿಯೊಳಗೆ ಕೊಚ್ಚಿಕೊಂಡು ಹೋಗದಿರುವುದಾದರೆ ಅದು ಸುರಕ್ಷಿತವಾಗಿರಸಾಧ್ಯವಿದೆ.
ನೀರು ಸುರಕ್ಷಿತವಾಗಿದೆಯೊ ಇಲ್ಲವೊ ಎಂಬುದರ ಕುರಿತು ನಿಮಗೆ ಸಂದೇಹವಿರುವಾಗ, ಸೋಡಿಯಂ ಹೈಪೋಕ್ಲೋರೈಟ್ ಅಥವಾ ಕ್ಯಾಲ್ಸಿಯಂ ಹೈಪೋಕ್ಲೋರೈಟ್ನಂತಹ ಕ್ಲೋರಿನ್ ಬಿಡುಗಡೆ ಮಾಡುವ ವಸ್ತುವನ್ನು ನೀವು ಸೇರಿಸುವಂತೆ ಡಬ್ಲ್ಯುಏಚ್ಓ ಸಲಹೆ ಕೊಡುತ್ತದೆ. ಅದು ಪರಿಣಾಮಕಾರಿಯಾಗಿದೆ, ಮತ್ತು ಅಗವ್ಗಾಗಿದೆ. ಉದಾಹರಣೆಗಾಗಿ, ಪೆರುವಿನಲ್ಲಿ ಈ ವಿಧಾನವು ಸರಾಸರಿ ಕುಟುಂಬಕ್ಕೆ ವರ್ಷವೊಂದಕ್ಕೆ ಎರಡು ಡಾಲರ್ಗಳಿಗಿಂತಲೂ ಕಡಿಮೆ ಖರ್ಚಾಗಿಸುತ್ತದೆ.
ಆರೋಗ್ಯ ಮತ್ತು ಆರೋಗ್ಯಾರೈಕೆ
ಅನೇಕವೇಳೆ ಬಡವರು ಕೇವಲ ಎರಡು ವಿಧದ ಆರೋಗ್ಯಾರೈಕೆಗಳನ್ನು ಅವಲೋಕಿಸುತ್ತಾರೆ: (1) ಲಭ್ಯವಿದೆ ಆದರೆ ದೊರಕಿಸಲು ಸಾಧ್ಯವಿಲ್ಲ ಮತ್ತು (2) ದೊರಕಿಸಲು ಸಾಧ್ಯವಿದೆ ಆದರೆ ಲಭ್ಯವಿಲ್ಲ. ಸಾವ್ ಪೌಲೂನ ಸುಮಾರು 6,50,000 ಹೊಲಸು ಕೇರಿ ನಿವಾಸಿಗಳಲ್ಲಿ ಒಬ್ಬಳಾದ ಡಾನ ಮಾರೀಯ ಒಂದನೆಯ ವಿಧವನ್ನು ವಿವರಿಸುವುದು: “ನಮಗೆ, ಒಳ್ಳೆಯ ಆರೋಗ್ಯಾರೈಕೆಯು, ಒಂದು ಬಹುಬೆಲೆಯ ವ್ಯಾಪಾರ ಕ್ಷೇತ್ರದಲ್ಲಿ ಕಿಟಕಿ ಪ್ರದರ್ಶನದಲ್ಲಿರುವ ಒಂದು ವಸ್ತುವಿನಂತಿದೆ. ನಾವು ಅದನ್ನು ನೋಡಬಲ್ಲೆವು, ಆದರೆ ಅದು ನಮ್ಮ ಕೈಗೆ ನಿಲುಕದ್ದಾಗಿದೆ.” (ವಂಡಾರ್ ಪತ್ರಿಕೆ) ವಾಸ್ತವವಾಗಿ, ಹೃದಯ-ಉಪಕೊಳವಿ ಶಸ್ತ್ರಚಿಕಿತ್ಸೆ, ಅಂಗಾಂಶ ಕಸಿಮಾಡುವಿಕೆ, ಸಿಎಟಿ ಸ್ಕ್ಯಾನ್ಗಳು, ಮತ್ತು ಇತರ ಉನ್ನತ ಔದ್ಯೋಗಿಕ ಔಷಧಗಳನ್ನು ಒದಗಿಸುವ ಆಸ್ಪತ್ರೆಗಳಿರುವ ಒಂದು ನಗರದಲ್ಲಿ ಡಾನ ಮಾರೀಯ ವಾಸಿಸುತ್ತಾಳೆ. ಆದರೂ ಅವಳಿಗೆ, ಈ ವಿಷಯಗಳು ದೊರಕಿಸಿಕೊಳ್ಳಲು ಸಾಧ್ಯವಿಲ್ಲದವುಗಳಾಗಿವೆ.
ದೊರಕಿಸಿಕೊಳ್ಳಲು ಅಸಾಧ್ಯವಾದ ಆರೋಗ್ಯಾರೈಕೆಯು, ಒಂದು ವ್ಯಾಪಾರ ಕ್ಷೇತ್ರದಲ್ಲಿರುವ ಬಹುಬೆಲೆಯ ವಸ್ತುವಿನಂತೆ ಇರುವುದಾದರೆ, ಅದೇ ಸಮಯದಲ್ಲಿ ದೊರಕಿಸಿಕೊಳ್ಳಲು ಸಾಧ್ಯವಿರುವ ಆರೋಗ್ಯಾರೈಕೆಯು, ತಳ್ಳಿಕೊಂಡು ಒಳನುಗ್ಗುತ್ತಿರುವ ನೂರಾರು ಗಿರಾಕಿಗಳು ಕೊಳ್ಳಲು ಪ್ರಯತ್ನಿಸುತ್ತಿರುವ ಕಡಿಮೆ ಬೆಲೆಯ ಒಂದು ವಸ್ತುವಿಗೆ ಹೆಚ್ಚು ಸದೃಶವಾಗಿದೆ. ದಕ್ಷಿಣ ಅಮೆರಿಕದ ದೇಶವೊಂದರಲ್ಲಿ ಇತ್ತೀಚೆಗಿನ ವಾರ್ತಾ ವರದಿಯೊಂದು ದಾಖಲಿಸಿದ್ದು: ‘ಒಬ್ಬ ವೈದ್ಯನ ಸಲಹೆ ಪಡೆಯಲಿಕ್ಕಾಗಿ ರೋಗಿಗಳು ಎರಡು ದಿನಗಳ ವರೆಗೆ ಸಾಲಿನಲ್ಲಿ ನಿಂತಿದ್ದಾರೆ. ಖಾಲಿ ಜಾಗಗಳಿಲ್ಲ. ಸಾರ್ವಜನಿಕ ಆಸ್ಪತ್ರೆಗಳಲ್ಲಿ ಹಣ, ಔಷಧ, ಮತ್ತು ಆಹಾರದ ಕೊರತೆ ಇದೆ. ಆರೋಗ್ಯಾರೈಕೆಯ ವ್ಯವಸ್ಥೆಯ ಅಸ್ವಸ್ಥವಾಗಿದೆ.
ಅಧಿಕ ಸಂಖ್ಯೆಯ ಜನರಿಗಾಗಿ ಅಂತಹ ದುಸ್ಥಿತಿಯಲ್ಲಿರುವ ಆರೋಗ್ಯಾರೈಕೆಯನ್ನು ಅಭಿವೃದ್ಧಿ ಮಾಡಲಿಕ್ಕಾಗಿ, ಡಬ್ಲ್ಯುಏಚ್ಓ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣದಲ್ಲಿ ಜನರನ್ನು ತರಬೇತು ಮಾಡುವ ಮೂಲಕವಾಗಿ, ರೋಗ ನಿಯಂತ್ರಣದಿಂದ ಆರೋಗ್ಯ ಪ್ರವರ್ಧನೆಗೆ ಕ್ರಮೇಣವಾಗಿ ತನ್ನ ಕೆಲಸವನ್ನು ಬದಲಾಯಿಸಿದೆ. ಸರಿಯಾದ ಪೋಷಣೆ, ಸುರಕ್ಷಿತ ನೀರು, ಮತ್ತು ಮೂಲ ನೈರ್ಮಲ್ಯದಂತಹ ಪ್ರಾಥಮಿಕ ಆರೋಗ್ಯಾರೈಕೆಯನ್ನು ಪ್ರವರ್ಧಿಸುವ ಕಾರ್ಯಕ್ರಮಗಳು “ಭೌಗೋಲಿಕ ಆರೋಗ್ಯದಲ್ಲಿ ಒಂದು ವಾಸ್ತವವಾದ ಅಭಿವೃದ್ಧಿ”ಯಲ್ಲಿ ಫಲಿಸಿವೆ ಎಂದು ಯುಎನ್ ಕ್ರಾನಿಕಲ್ ಬರೆಯುತ್ತದೆ. ಈ ಕಾರ್ಯಕ್ರಮಗಳು ನಿಮಗೆ ಪ್ರಯೋಜನಗಳನ್ನು ತರುತ್ತವೋ? ಅವುಗಳಲ್ಲಿ ಒಂದು ಪ್ರಯೋಜನವನ್ನು ತರಬಹುದು. ಅದಾವುದು? ಇಪಿಐ (ಸೋಂಕು ರಕ್ಷೆಯ ಮೇಲೆ ವಿಸ್ತೃತ ಕಾರ್ಯಕ್ರಮ).
“ಮನೆಗೆ ಮತ್ತು ಹಳ್ಳಿಗೆ ಅತ್ಯಂತ ಪರಿಚಿತನೋಪಾದಿ ಅಂಚೆಯವನ ಸ್ಥಾನವನ್ನು ಲಸಿಕೆಹಾಕುವವನು ಪುನರ್ಭರ್ತಿ ಮಾಡಿದ್ದಾನೆ” ಎಂದು ಇಪಿಐ ಕುರಿತಾದ ಒಂದು ವರದಿಯು ದಾಖಲಿಸುತ್ತದೆ. ಕಳೆದ ದಶಕದಲ್ಲಿ, ಆ್ಯಮಸಾನ್ನಿಂದ ಹಿಮಾಲಯದ ವರೆಗೆ ಲಸಿಕೆಹಾಕಣೆಗಳು ನಡೆಸಲ್ಪಟ್ಟವು, ಮತ್ತು 1990ರಷ್ಟಕ್ಕೆ, ಲೋಕದ ಶಿಶುಗಳಲ್ಲಿ 80 ಪ್ರತಿಶತ ಶಿಶುಗಳಿಗೆ ಆರು ಮಾರಕ ರೋಗಗಳ ವಿರುದ್ಧವಾಗಿ ರೋಗವಿಷವನ್ನು ಒಳಸೇರಿಸಲಾಗಿತ್ತು.a ವಾರ್ಷಿಕವಾಗಿ, ಇಪಿಐ 30 ಲಕ್ಷಕ್ಕಿಂತಲೂ ಹೆಚ್ಚು ಮಕ್ಕಳ ಜೀವಗಳನ್ನು ಕಾಪಾಡುತ್ತಿದೆ. ರೋಗದಿಂದ ಅಂಗವಿಕಲಗೊಂಡಿರಬಹುದಾದ ಇನ್ನು 4,50,000 ಮಕ್ಕಳು ನಡೆಯಲು, ಓಡಲು, ಮತ್ತು ಆಡಲು ಶಕ್ತರಾಗಿದ್ದಾರೆ. ಹೀಗೆ ರೋಗಗಳನ್ನು ತಡೆಗಟ್ಟಲಿಕ್ಕಾಗಿ, ತಮ್ಮ ಮಕ್ಕಳಿಗೆ ರೋಗವಿಷವನ್ನು ಒಳಸೇರಿಸುವಂತೆ ಅನೇಕ ಹೆತ್ತವರು ವೈಯಕ್ತಿಕ ನಿರ್ಣಯವನ್ನು ಮಾಡುತ್ತಾರೆ.
ಆಗಾಗ ನೀವು ಒಂದು ಅಸ್ವಸ್ಥತೆಯನ್ನು ತಡೆಗಟ್ಟಲು ಸಾಧ್ಯವಿಲ್ಲದ್ದಿದರೂ, ನೀವಿನ್ನೂ ಅದನ್ನು ನಿಯಂತ್ರಿಸಲು ಶಕ್ತರಾಗಿರಬಹುದು. “ಎಲ್ಲ ಆರೋಗ್ಯಾರೈಕೆಯಲ್ಲಿ ಅರ್ಧಕ್ಕಿಂತ ಹೆಚ್ಚು ಸ್ವಆರೈಕೆಯಾಗಿದೆ ಅಥವಾ ಕುಟುಂಬದಿಂದ ಒದಗಿಸಲ್ಪಡುವ ಆರೈಕೆಯಾಗಿದೆ ಎಂದು ಅಂದಾಜು ಮಾಡಲ್ಪಟ್ಟಿದೆ” ಎಂದು ವರ್ಲ್ಡ್ ಹೆಲ್ತ್ ಪತ್ರಿಕೆ ಹೇಳುತ್ತದೆ. ಅಂತಹ ಸ್ವಆರೈಕೆಯ ಒಂದು ವಿಧವು, ಒಂದು ಸರಳವಾದ, ಅಲ್ಪ ವ್ಯಯದ, ಬಾಯಿಯ ಪುನರ್ಜಲ ಸಂಯೋಗ ದ್ರಾವಣ (ಓಆರ್ಎಸ್)ವೆಂದು ಕರೆಯಲ್ಪಡುವ, ಉಪ್ಪು, ಸಕ್ಕರೆ, ಮತ್ತು ಶುದ್ಧವಾದ ನೀರಿನ ಮಿಶ್ರಣವಾಗಿದೆ.
ಅನೇಕ ಆರೋಗ್ಯ ವೃತ್ತಿಗಾರರು, ಅತಿಭೇದಿಯ ಕಾರಣದಿಂದ ಉಂಟಾಗುವ ನಿರ್ಜಲೀಕರಣಕ್ಕೆ ಓಆರ್ಎಸ್ನ ಉಪಯೋಗವನ್ನೂ ಒಳಗೊಂಡು ಬಾಯಿಯ ಪುನರ್ಜಲ ಸಂಯೋಗ ಚಿಕಿತ್ಸೆಯನ್ನು ಅತ್ಯಂತ ಪರಿಣಾಮಕಾರಿ ಚಿಕಿತ್ಸೆಯಾಗಿ ಪರಿಗಣಿಸುತ್ತಾರೆ. ವರ್ಧಿಷ್ಣು ದೇಶಗಳಲ್ಲಿ ವಾರ್ಷಿಕವಾಗಿ ಸಂಭವಿಸುವ 150 ಕೋಟಿ ಅತಿಭೇದಿ ಸಂಭವಗಳನ್ನು ನಿಯಂತ್ರಿಸಲಿಕ್ಕಾಗಿ ಲೋಕವ್ಯಾಪಕವಾಗಿ ಅದನ್ನು ಉಪಯೋಗಿಸುವುದಾದಲ್ಲಿ, ಕೇವಲ ಹತ್ತು ಸೆಂಟ್ಸ್ ಬೆಲೆಬಾಳುವ ಓಆರ್ಎಸ್ ಲವಣಗಳ ಒಂದು ಚಿಕ್ಕ ಪೊಟ್ಟಣವು, ಪ್ರತಿ ವರ್ಷ ಅತಿಭೇದಿ ರೋಗಗಳಿಂದ ಸಾಯುವ 32 ಲಕ್ಷ ಮಕ್ಕಳಲ್ಲಿ ಅನೇಕರ ಜೀವಗಳನ್ನು ಕಾಪಾಡಸಾಧ್ಯವಿದೆ.
ಅದು ಕಾಪಾಡಬಲ್ಲದು, ಆದರೆ ಕೆಲವು ದೇಶಗಳಲ್ಲಿ ಪ್ರತಿಅತಿಭೇದಿ ಔಷಧಗಳ ಉಪಯೋಗವು, ಇನ್ನೂ “ಓಆರ್ಎಸ್ನ ಉಪಯೋಗಕ್ಕಿಂತಲೂ ಬಹಳ ಹೆಚ್ಚು ಸಾಮಾನ್ಯ”ವಾಗಿದೆ ಎಂದು ಡಬ್ಲ್ಯುಏಚ್ಓನ ಒಂದು ವಾರ್ತಾಪತ್ರವಾದ ಎಸೆನಲ್ಷ್ ಡ್ರಗ್ಸ್ ಮಾನಿಟರ್ ಹೇಳುತ್ತದೆ. ಉದಾಹರಣೆಗಾಗಿ, ಕೆಲವು ವರ್ಧಿಷ್ಣು ದೇಶಗಳಲ್ಲಿ ಅತಿಭೇದಿಗೆ ಚಿಕಿತ್ಸೆ ನೀಡಲಿಕ್ಕಾಗಿ ಓಆರ್ಎಸ್ ಉಪಯೋಗಿಸಲ್ಪಡುವುದಕ್ಕಿಂತಲೂ ಔಷಧಗಳು ಮೂರು ಬಾರಿ ಹೆಚ್ಚು ಅಧಿಕವಾಗಿ ಉಪಯೋಗಿಸಲ್ಪಡುತ್ತವೆ. “ಔಷಧಗಳ ಈ ಅನಗತ್ಯ ಉಪಯೋಗವು ವಿಪರೀತ ದುಬಾರಿಯಾಗಿದೆ” ಎಂದು ವಾರ್ತಾಪತ್ರವು ಗಮನಿಸುತ್ತದೆ. ಬಡ ಕುಟುಂಬಗಳು ಈ ಉದ್ದೇಶಕ್ಕಾಗಿ ಆಹಾರವನ್ನೂ ಮಾರಾಟ ಮಾಡಬೇಕಾಗಬಹುದು. ಅಲ್ಲದೆ, ಪ್ರತಿಅತಿಭೇದಿ ಔಷಧಗಳಿಗೆ ಸಿದ್ಧವಾದ ಪ್ರಾಯೋಗಿಕ ಮೌಲ್ಯವಿಲ್ಲ, ಮತ್ತು ಕೆಲವು ಔಷಧಗಳು ಅಪಾಯಕಾರಿಯಾಗಿವೆ ಎಂದು ಅದು ಎಚ್ಚರಿಸುತ್ತದೆ. “ವ್ಯೆದ್ಯರು ಅಂತಹ ಔಷಧಗಳನ್ನು ಸೂಚಿಸಬಾರದು, . . . ಮತ್ತು ಕುಟುಂಬಗಳು ಅವುಗಳನ್ನು ಖರೀದಿಸಬಾರದು.”
ಔಷಧಗಳನ್ನು ಸೂಚಿಸುವುದಕ್ಕೆ ಬದಲಾಗಿ, ಅತಿಭೇದಿಗೆ ಚಿಕಿತ್ಸೆ ನೀಡಲಿಕ್ಕಾಗಿ ಡಬ್ಲ್ಯುಏಚ್ಓ ಈ ಕೆಳಗಿನ ವಿಷಯಗಳನ್ನು ಒದಗಿಸುತ್ತದೆ. (1) ಗಂಜಿನೀರು ಅಥವಾ ಚಹದಂತಹ ಹೆಚ್ಚಿನ ದ್ರವಗಳನ್ನು ಮಗುವಿಗೆ ಕೊಡುವ ಮೂಲಕ ನಿರ್ಜಲೀಕರಣವನ್ನು ತಡೆಗಟ್ಟಿರಿ. (2) ಮಗುವು ಇನ್ನೂ ನಿರ್ಜಲೀಕರಿಸುವುದಾದರೆ, ಗೊತ್ತುಪಡಿಸುವಿಕೆಗಾಗಿ ಒಬ್ಬ ಆರೋಗ್ಯ ಕಾರ್ಮಿಕನನ್ನು ಭೇಟಿ ಮಾಡಿರಿ, ಮತ್ತು ಓಆರ್ಎಸ್ನಿಂದ ಮಗುವನ್ನು ಉಪಚರಿಸಿರಿ. (3) ಅತಿಭೇದಿಯ ಸಂಭವದ ಸಮಯದಲ್ಲಿ ಮತ್ತು ಬಳಿಕ ಮಗುವಿಗೆ ಸಹಜವಾಗಿ ಆಹಾರ ಕೊಡಿರಿ. (4) ಮಗುವು ತೀವ್ರವಾಗಿ ನಿರ್ಜಲೀಕರಿಸುವುದಾದರೆ, ಅವನಿಗೆ ರಕ್ತವಾಹದ ಮೂಲಕ ಪುನರ್ಜಲ ಸಂಯೋಗ ಮಾಡಲ್ಪಡಬೇಕು.b
ಮೊದಲೇ ಪ್ಯಾಕ್ ಮಾಡಲ್ಪಟ್ಟ ಓಆರ್ಎಸ್ಅನ್ನು ನೀವು ಪಡೆದುಕೊಳ್ಳಲು ಸಾಧ್ಯವಿಲ್ಲದಿರುವಲ್ಲಿ, ಈ ಸರಳ ಪಾಕ ವಿಧಾನವನ್ನು ಜಾಗರೂಕತೆಯಿಂದ ಅನುಸರಿಸಿರಿ: ಒಂದು ಟೀಸ್ಪೂನ್ ಸಮತಲದಷ್ಟು ಬಿಳಿಯ ಪುಡಿಯುಪ್ಪು, ಎಂಟು ಟೀಸ್ಪೂನ್ ತುಂಬ ಸಮತಲದಷ್ಟು ಸಕ್ಕರೆ, ಮತ್ತು ಒಂದು ಲೀಟರ್ (ಪ್ರತಿಯೊಂದರಲ್ಲಿ 200 ಮಿಲಿಲೀಟರ್ನಂತೆ ಐದು ಕಪ್ ತುಂಬ)ನಷ್ಟು ಶುದ್ಧವಾದ ನೀರನ್ನು ಬೆರಸಿರಿ. ಪ್ರತಿ ಬಾರಿ ಭೇದಿಯಾದಾಗ ಒಂದು ಕಪ್ ತುಂಬ ಕೊಡಿರಿ, ಸಣ್ಣ ಮಕ್ಕಳಿಗೆ ಅದರಲ್ಲಿ ಅರ್ಧ ಕೊಡಿರಿ. ಈ ವಿಷಯದ ಕುರಿತಾದ ಹೆಚ್ಚಿನ ಸಮಾಚಾರಕ್ಕಾಗಿ ಪುಟ 10ರಲ್ಲಿರುವ ರೇಖಾಚೌಕವನ್ನು ನೋಡಿರಿ.
ಆದರೂ, ನಾಲ್ಕನೆಯ ಅಂಶ, ನಮ್ಮ ಜೀವಶಾಸ್ತ್ರೀಯ ರಚನೆಯ ಕುರಿತೇನು? ಅದು ಹೇಗೆ ಪ್ರಭಾವಿಸಲ್ಪಡಸಾಧ್ಯವಿದೆ? ಆ ಪ್ರಶ್ನೆಯನ್ನು ಮುಂದಿನ ಲೇಖನವು ಚರ್ಚಿಸುತ್ತದೆ.
[ಅಧ್ಯಯನ ಪ್ರಶ್ನೆಗಳು]
a ಆರು ರೋಗಗಳು ಯಾವುವೆಂದರೆ, ಡಿಪ್ತೀರಿಯ (ಗಳಚರ್ಮರೋಗ), ದಡಾರ, ನರೆಮಜ್ಜೆಯುರಿತ, ಧನುರ್ವಾಯು, ಕ್ಷಯ, ಮತ್ತು ನಾಯಿಕೆಮ್ಮು. ಈಗ ಏಯ್ಡ್ಸ್ ಕೊಲ್ಲುವುದಕ್ಕಿಂತಲೂ ಅತ್ಯಧಿಕ ಜನರನ್ನು ಕೊಲ್ಲುವ ಹೆಪಟೈಟಿಸ್ ಬಿ ಸಹ ಸೋಂಕು ರಕ್ಷೆಯ ಕಾರ್ಯಕ್ರಮಗಳಲ್ಲಿ ಒಳಗೂಡಿಸಲ್ಪಡಬೇಕೆಂದು ಡಬ್ಲ್ಯುಏಚ್ಓ ಶಿಫಾರಸ್ಸು ಮಾಡುತ್ತದೆ.
b ಮಗುವಿನ ಹೊಟ್ಟೆಯ ಚರ್ಮವನ್ನು ಚಿವುಟಿರಿ. ಚರ್ಮವು ಸಾಮಾನ್ಯ ಸ್ಥಿತಿಗೆ ಹಿಂದಿರುಗಲು ಎರಡು ಸೆಕಂಡುಗಳಿಗಿಂತ ಹೆಚ್ಚು ಸಮಯವನ್ನು ತೆಗೆದುಕೊಳ್ಳುವುದಾದರೆ, ಮಗುವು ತೀವ್ರವಾಗಿ ನಿರ್ಜಲೀಕರಿಸಿರಬಹುದು.
[Box on page 8, 9]
ಮೂಲ ಆರೋಗ್ಯಾರೈಕೆ—ಅದು ಹೇಗೆ ಕಾರ್ಯನಡಿಸುತ್ತದೆ?
ಈ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳಲಿಕ್ಕಾಗಿ, ದಕ್ಷಿಣ ಅಮೆರಿಕದಲ್ಲಿನ ಡಬ್ಲ್ಯುಏಚ್ಓ ಪ್ರತಿನಿಧಿಯಾದ ಡಾ. ಮೈಕಲ್ ಒಕ್ಯಾರಲ್ರೊಂದಿಗೆ ಎಚ್ಚರ!ವು ಮಾತಾಡಿತು. ಕೆಲವು ಉದ್ಧರಣಗಳು ಮುಂದೆ ಕೊಡಲ್ಪಟ್ಟಿವೆ.
‘ಆರೋಗ್ಯದ ವೈದ್ಯಕೀಯ ಪ್ರಸ್ತಾಪದ ಮೇಲೆ ಆಧರಿಸಿದ ಒಂದು ಆರೋಗ್ಯಾರೈಕೆಯ ವ್ಯವಸ್ಥೆಯನ್ನು ನಾವು ವಂಶಾನುಕ್ರಮವಾಗಿ ಪಡೆದಿದ್ದೇವೆ. ನೀವು ಅಸ್ವಸ್ಥರಾಗಿರುವುದಾದರೆ, ಒಬ್ಬ ವೈದ್ಯನಲ್ಲಿಗೆ ಹೋಗುತ್ತೀರಿ. ನೀವು ಎರಡು ಸೀಸೆಗಳಷ್ಟು ವಿಸ್ಕಿಯನ್ನು ಕುಡಿದಿರೆಂಬ ವಾಸ್ತವಾಂಶಕ್ಕೆ ಪರಿಗಣನೆಯು ಕೊಡಲ್ಪಡುವುದಿಲ್ಲ. ನೀವು ಎಂದೂ ವ್ಯಾಯಾಮವನ್ನು ಮಾಡುವುದಿಲ್ಲ ಎಂಬುದನ್ನು ಅಲಕ್ಷ್ಯ ಮಾಡುತ್ತೀರಿ. ನೀವು ವ್ಯೆದ್ಯನನ್ನು ಕಂಡು, “ವೈದ್ಯರೇ, ನನಗೆ ಗುಣಪಡಿಸಿ” ಎಂದು ಹೇಳುತ್ತೀರಿ. ಆಗ ಬಾಯಿಯ ಮೂಲಕ ತೆಗೆದುಕೊಳ್ಳಲಿಕ್ಕಾಗಿ ವೈದ್ಯನು ನಿಮಗೆ ಒಂದು ಔಷಧವನ್ನು ಕೊಡುತ್ತಾನೆ, ಒಂದು ಚುಚ್ಚುಮದ್ದನ್ನು ಕೊಡುತ್ತಾನೆ, ಶಸ್ತ್ರಚಿಕಿತ್ಸೆಯ ಮೂಲಕ ಒಂದು ಭಾಗವನ್ನು ತೆಗೆದುಹಾಕುತ್ತಾನೆ, ಅಥವಾ ನ್ಯೂನಪೂರಕ ಚಿಕಿತ್ಸೆಯ ಮೂಲಕ ನಿಮ್ಮನ್ನು ಸರಿಪಡಿಸುತ್ತಾನೆ. ಈಗ, ನೀವು ಗ್ರಹಿಸುವಂತೆ, ಈ ಅಂಶವನ್ನು ನಿಮಗೆ ಅರ್ಥವಾಗುವಂತೆ ಮಾಡಲಿಕ್ಕಾಗಿಯಷ್ಟೇ ನಾನು ಇಲ್ಲಿ ಸಾಮಾನ್ಯವಾಗಿ ಮಾತಾಡುತ್ತಿದ್ದೇನೆ, ಆದರೆ ಈ ರೀತಿಯ ವೈದ್ಯಕೀಯ ಪ್ರಸ್ತಾಪವು ಹೆಚ್ಚು ಪ್ರಾಧಾನ್ಯವುಳ್ಳದ್ದಾಗಿದೆ. ಸಮಾಜದ ಸಮಸ್ಯೆಗಳನ್ನು ನಾವು ವೈದ್ಯಕೀಯ ಸಮಸ್ಯೆಗಳೆಂದು ತಪ್ಪಾಗಿ ಪರಿಗಣಿಸಿದ್ದೇವೆ. ಆತ್ಮಹತ್ಯೆ, ನ್ಯೂನ ಪೋಷಣೆ, ಮತ್ತು ಅಮಲೌಷಧ ದುರುಪಯೋಗಗಳು ವೈದ್ಯಕೀಯ ಸಮಸ್ಯೆಗಳಾಗಿ ಪರಿಣಮಿಸಿವೆ. ಆದರೆ ಅವು ವೈದ್ಯಕೀಯ ಸಮಸ್ಯೆಗಳಲ್ಲ. ಅವು ಆರೋಗ್ಯ ಸಮಸ್ಯೆಗಳಾಗಿಯೂ ಇರುವುದಿಲ್ಲ. ಅವು ಆರೋಗ್ಯ ಮತ್ತು ವೈದ್ಯಕೀಯ ಪರಿಣಾಮಗಳಿರುವ ಸಾಮಾಜಿಕ ಸಮಸ್ಯೆಗಳಾಗಿವೆ.
‘ಅನಂತರ, ಕಳೆದ 20 ವರ್ಷಗಳಲ್ಲಿ, ಜನರು ಹೇಳಿದ್ದು, “ನಾವು ನಿಂತು, ಪುನಃ ಪರಿಗಣಿಸೋಣ. ನಾವು ವಿಷಯಗಳನ್ನು ತಪ್ಪಾದ ರೀತಿಯಲ್ಲಿ ಮಾಡುತ್ತಿದ್ದೇವೆ. ಆರೋಗ್ಯದ ಕುರಿತಾದ ನಮ್ಮ ದೃಷ್ಟಿಯನ್ನು ನಾವು ಪುನಃ ವಿಶದೀಕರಿಸುವ ಅಗತ್ಯವಿದೆ.” ಪ್ರಾಥಮಿಕ ಆರೋಗ್ಯಾರೈಕೆಯ ಪ್ರಸ್ತಾಪಕ್ಕೆ ಮೂಲಭೂತವಾದ ಈ ಕೆಳಗಿನಂತಹ ಕೆಲವು ಮೂಲತತ್ವಗಳು ವಿಕಾಸಗೊಂಡವು:
‘ಕಟ್ಟಕಡೆಯಲ್ಲಿ ರೋಗಕ್ಕೆ ಚಿಕಿತ್ಸೆ ನಡೆಸುವುದಕ್ಕೆ ಬದಲಾಗಿ ಅದನ್ನು ತಡೆಗಟ್ಟುವುದು ಹೆಚ್ಚು ದಯಾಪರವೂ ಹೆಚ್ಚು ಮಿತ ವ್ಯಯದ್ದೂ ಆಗಿದೆ. ಉದಾಹರಣೆಗಾಗಿ, ಕಾರಣಗಳ ಕುರಿತು ನೀವು ಏನನ್ನೂ ಮಾಡದಿರುವಾಗ, ತೆರೆದ ಹೃದಯ ಶಸ್ತ್ರಚಿಕಿತ್ಸೆಯನ್ನು ನಿರ್ವಹಿಸಲಿಕ್ಕಾಗಿ ಒಂದು ಚಿಕಿತ್ಸಾಲಯವನ್ನು ನಿರ್ಮಿಸುವುದು ಈ ಮೂಲತತ್ವಕ್ಕೆ ವಿರುದ್ಧವಾದದ್ದಾಗಿದೆ. ರೋಗಗಳು ಸಂಭವಿಸುವುದಾದರೆ ನೀವು ಅವುಗಳಿಗೆ ಚಿಕಿತ್ಸೆ ನಡೆಸುವುದಿಲ್ಲವೆಂದು ಅದರ ಅರ್ಥವಾಗಿರುವುದಿಲ್ಲ. ಅವಶ್ಯವಾಗಿ ನೀವು ಚಿಕಿತ್ಸೆ ನಡೆಸಬೇಕು. ವಾರದ ಪ್ರತಿ ದಿನ ಅಪಘಾತಗಳನ್ನು ಉಂಟುಮಾಡುತ್ತಿರುವ ಒಂದು ಗುಂಡಿಯು ರಸ್ತೆಯಲ್ಲಿರುವುದಾದರೆ, ಅಲ್ಲಿ ಬಿದ್ದು ತನ್ನ ಕಾಲುಗಳನ್ನು ಮುರಿದುಕೊಳ್ಳುವ ಪಾಪದ ಆಸಾಮಿಗೆ ನೀವು ಚಿಕಿತ್ಸೆ ನಡೆಸುವಿರಿ, ಆದರೆ ಮಾಡಬೇಕಾಗಿರುವ ಹೆಚ್ಚು ದಯಾಪರವೂ ಮಿತ ವ್ಯಯದ್ದೂ ಆದ ವಿಷಯ: ಗುಂಡಿಯನ್ನು ಮುಚ್ಚುವುದೇ.
‘ನಿಮ್ಮ ಆರೋಗ್ಯ ಸಂಪನ್ಮೂಲಗಳನ್ನು ಕಾರ್ಯ ಸಾಧಕವಾಗಿ ಉಪಯೋಗಿಸುವುದು ಇನ್ನೊಂದು ಮೂಲತತ್ವವಾಗಿದೆ. ಮನೆಯಲ್ಲಿ ನಿರ್ವಹಿಸಲ್ಪಡಸಾಧ್ಯವಿರುವ ಸಮಸ್ಯೆಯೊಂದಕ್ಕಾಗಿ ಯಾರನ್ನಾದರೂ ಒಂದು ಚಿಕಿತ್ಸಾಲಯಕ್ಕೆ ಕಳುಹಿಸುವುದು. ಅಥವಾ ಚಿಕಿತ್ಸಾಲಯವೊಂದರಲ್ಲಿ ಆರೈಕೆ ಮಾಡಸಾಧ್ಯವಿದ್ದಿರುವ ಒಂದು ಸಮಸ್ಯೆಯೊಂದಿಗೆ ವ್ಯವಹರಿಸಲಿಕ್ಕಾಗಿ ಯಾರನ್ನಾದರೂ ನಯನಾಜೂಕಿನ ಆಸ್ಪತ್ರೆಗೆ ಕಳುಹಿಸುವುದು ಈ ಮೂಲತತ್ವಕ್ಕೆ ವಿರುದ್ಧವಾದದ್ದಾಗಿದೆ. ಅಥವಾ ಆರು ತಿಂಗಳುಗಳ ವರೆಗೆ ತರಬೇತುಮಾಡಲ್ಪಟ್ಟಿರುವ ಯಾರಾದರೊಬ್ಬರು ಅದೇ ಕೆಲಸವನ್ನು ಮಾಡಶಕ್ತರಾಗಿರುವಾಗ, ಒಂದು ವಿಶ್ವವಿದ್ಯಾನಿಲಯದಲ್ಲಿ ಹತ್ತು ವರ್ಷಗಳ ವರೆಗೆ ತರಬೇತಿ ಪಡೆದುಕೊಂಡಿರುವ ಒಬ್ಬ ವೈದ್ಯನನ್ನು ಹೊರಗೆಹೋಗಿ ಲಸಿಕೆಹಾಕಣೆಗಳನ್ನು ಕೊಡುವಂತೆ ಕಳುಹಿಸುವುದು ಸಹ ಈ ಮೂಲತತ್ವಕ್ಕೆ ವಿರುದ್ಧವಾದದ್ದಾಗಿದೆ. ಆ ವೈದ್ಯನು ಯಾವುದಕ್ಕಾಗಿ ತರಬೇತುಮಾಡಲ್ಪಟ್ಟಿರುವನೋ ಆ ಕೆಲಸವನ್ನು ತಾನು ನಿರ್ವಹಿಸಬೇಕಾದ ಅಗತ್ಯವಿರುವಾಗ, ಅವನು ಲಭ್ಯವಿರತಕ್ಕದ್ದು. ಇದನ್ನು ತಾನೇ ಪ್ರಾಥಮಿಕ ಆರೋಗ್ಯಾರೈಕೆಯು ನಮಗೆ ಹೇಳುತ್ತಿದೆ: ಜನರಿಗೆ ಶಿಕ್ಷಣ ಕೊಡಿರಿ, ರೋಗಗಳನ್ನು ತಡೆಗಟ್ಟಿರಿ, ಮತ್ತು ನಿಮ್ಮ ಆರೋಗ್ಯ ಸಂಪನ್ಮೂಲಗಳನ್ನು ವಿವೇಕದಿಂದ ಉಪಯೋಗಿಸಿರಿ.’
[ಪುಟ 21 ರಲ್ಲಿರುವ ಚೌಕ]
ಕಾಲರಕ್ಕಾಗಿ ಇನ್ನೊಂದು ಓಆರ್ಎಸ್
ಪ್ರಮಾಣಭೂತವಾದ ಗೂಕ್ಲೋಸ್ ಆಧಾರಿತ ಓಆರ್ಎಸ್ಗೆ ಬದಲಾಗಿ, ಕಾಲರ ರೋಗಿಗಳಿಗೆ ಚಿಕಿತ್ಸೆ ನಡೆಸಲು ಅಕ್ಕಿ ಆಧಾರಿತ ಓಆರ್ಎಸ್ ಉಪಯೋಗಿಸಲ್ಪಡಬೇಕೆಂದು ಡಬ್ಲ್ಯುಏಚ್ಓ ಈಗ ಶಿಫಾರಸ್ಸು ಮಾಡುತ್ತದೆ. ಪ್ರಮಾಣಭೂತವಾದ ಓಆರ್ಎಸ್ ಕೊಡಲ್ಪಟ್ಟ ಕಾಲರ ರೋಗಿಗಳಿಗಿಂತಲೂ, ಅಕ್ಕಿ ಆಧಾರಿತ ಓಆರ್ಎಸ್ನಿಂದ ಚಿಕಿತ್ಸೆ ನಡೆಸಲ್ಪಟ್ಟ ಕಾಲರ ರೋಗಿಗಳು 33 ಪ್ರತಿಶತ ಕಡಿಮೆ ಮಲವಿಸರ್ಜನೆ ಮಾಡುತ್ತಾರೆಂದು ಮತ್ತು ಅತಿಭೇದಿಯ ಬಹಳ ಕಡಿಮೆ ಸಂಭವಗಳನ್ನು ಹೊಂದಿದ್ದರೆಂದು ಅಧ್ಯಯನಗಳು ತೋರಿಸುತ್ತವೆ. ಒಂದು ಔನ್ಸ್ನಷ್ಟು ಸಕ್ಕರೆಯನ್ನು, ಎರಡರಿಂದ ಮೂರು ಔನ್ಸ್ಗಳಷ್ಟು ಬೇಯಿಸಲ್ಪಟ್ಟ ಅಕ್ಕಿಹಿಟಿನ್ಟೊಂದಿಗೆ ಪುನರ್ಭರ್ತಿ ಮಾಡುವ ಮೂಲಕವಾಗಿ ಒಂದು ಲೀಟರ್ ಅಕ್ಕಿ ಆಧಾರಿತ ಓಆರ್ಎಸ್ ಮಾಡಲ್ಪಡುತ್ತದೆ.—ಎಸೆನಲ್ಷ್ ಡ್ರಗ್ಸ್ ಮಾನಿಟರ್.
[ಪುಟ 22 ರಲ್ಲಿರುವ ಚೌಕ]
ಮುಂದಿನ ವಿಷಯಗಳ ಮೇಲೆ ಹೆಚ್ಚಿನ ವಾಚನ . . .
ನಡವಳಿಕೆ: “ಒಳ್ಳೆಯ ಆರೋಗ್ಯ—ಅದರ ಕುರಿತು ನೀವೇನು ಮಾಡಬಲ್ಲಿರಿ?” (ಅವೇಕ್!, ದಶಂಬರ 8, 1989) “ಹೊಗೆಸೊಪ್ಪು ಮತ್ತು ನಿಮ್ಮ ಆರೋಗ್ಯ—ನಿಜವಾಗಿಯೂ ಒಂದು ಸಂಬಂಧವಿದೆಯೊ?” (ಅವೇಕ್!, ಜುಲೈ 8, 1989) “ಸಜೀವವಾಗಿ ಉಳಿಯುವಂತೆ ಮಕ್ಕಳಿಗೆ ಸಹಾಯ ಮಾಡುವುದು!” (ಅವೇಕ್!, ಸಪ್ಟಂಬರ 22, 1988) “ಮದ್ಯಪಾನವು ನಿಮ್ಮ ದೇಹಕ್ಕೆ ಮಾಡುವ ವಿಷಯ”—ಅವೇಕ್!, ಮಾರ್ಚ್ 8, 1980.
ಪರಿಸರ: “ಶುಚಿತ್ವದ ಪಂಥಾಹ್ವಾನವನ್ನು ತಲಪುವುದು” (ಅವೇಕ್!, ಸಪ್ಟಂಬರ 22, 1988) “ಶುದ್ಧರಾಗಿರಿ, ಆರೋಗ್ಯವಾಗಿರಿ!”—ಅವೇಕ್!, ಸಪ್ಟಂಬರ 22, 1977.
ಆರೋಗ್ಯಾರೈಕೆ: “ಜೀವಸಂರಕ್ಷಕವಾದ ಇತರ ಸೂಕ್ತಕ್ರಮಗಳು” (ಅವೇಕ್!, ಸಪ್ಟಂಬರ 22, 1988) “ಜೀವಗಳನ್ನು ಸಂರಕ್ಷಿಸುವ ಒಂದು ಉಪ್ಪಾದ ಪಾನೀಯ!”—ಅವೇಕ್!, ಸಪ್ಟಂಬರ 22, 1985.
[ಪುಟ 8 ರಲ್ಲಿರುವ ಚಿತ್ರ]
ನೀರನ್ನು ಸಂಗ್ರಹಿಸುವುದು ಕಾಯುವಿಕೆ ಮತ್ತು ಕೆಲಸವನ್ನು ಕೇಳಿಕೊಳ್ಳುತ್ತದೆ
[ಕೃಪೆ]
Mark Peters/Sipa Press
[ಪುಟ 0 ರಲ್ಲಿರುವ ಚಿತ್ರ]
ಸುರಕ್ಷಿತವಾದ ಸಾಕಷ್ಟು ನೀರು—ಒಳ್ಳೆಯ ಆರೋಗ್ಯಕ್ಕಾಗಿ ಅತ್ಯಗತ್ಯ
[ಕೃಪೆ]
Mark Peters/Sipa Press