ನಿಸರ್ಗದ ಬಾಷ್ಪ
ಮುಂಜಾನೆಯ ಸಮಯ, ಗಾಳಿ ತಂಪಾಗಿಯೂ ಪ್ರಶಾಂತವಾಗಿಯೂ ಇದೆ. ದಿನದ ಪ್ರಥಮ ಪ್ರಭೆಯಲ್ಲಿ, ಸಣ್ಣ ಹನಿಗಳಿಂದ ಪ್ರತಿಯೊಂದು ಎಲೆಯೂ ಹುಲ್ಲಿನ ಗರಿಕೆಯೂ ಮಿರುಗುತ್ತಿದೆ. ಒಂದು ವಿಧದಲ್ಲಿ, ಹಚ್ಚಹಸಿರಾದ ಸಸ್ಯಗಳು ಸೂರ್ಯೋದಯದ ಅಭಿವಂದಿಸುವಿಕೆಯಲ್ಲಿ ಆನಂದದ ಬಾಷ್ಪವನ್ನು ಸುರಿಸಿದೆಯೋ ಎಂಬಂತೆ ಭಾಸವಾಗುತ್ತದೆ. ಆ ಇಬ್ಬನಿಯು ಕವಿಗಳನ್ನು ಮತ್ತು ಛಾಯಾಚಿತ್ರಗಾರರನ್ನು ಪ್ರೇರಿಸಿದೆ ಎಂಬುದರಲ್ಲಿ ಆಶ್ಚರ್ಯವೇನೂ ಇಲ್ಲ.
ಹಾಗಿದ್ದರೂ, ಇಬ್ಬನಿಯು ಮನುಷ್ಯನ ಮನಸ್ಥಿತಿಯನ್ನು ಉಲ್ಲಾಸಗೊಳಿಸುವುದಕ್ಕಿಂತ ಹೆಚ್ಚಿನದನ್ನು ಮಾಡುತ್ತದೆ. ಈ ವಾಯುಮಂಡಲದ ಅದ್ಭುತವು, ಜೀವನಾಸರೆಯ ತೇವದ ಹೊದಿಕೆಯಾಗಿ, ಧ್ರುವ ಪ್ರದೇಶಗಳಲ್ಲಿ ಬಿಟ್ಟು ಗ್ರಹದಲ್ಲೆಲ್ಲಾ ಸರ್ವ ಸಾಮಾನ್ಯವಾಗಿದೆ. ಯೆಹೋವ ದೇವರು ವಾಯುಮಂಡಲವನ್ನು ಎಷ್ಟು ಚೆನ್ನಾಗಿ ಸಂಕಲ್ಪಿಸಿದ್ದಾನೆಂದರೆ, ನಿರ್ದಿಷ್ಟ ಸ್ಥಿತಿಗಳ ಕೆಳಗೆ ಇರುಳಿನ ಸಮಯದಲ್ಲಿ ತಂಪಾದಾಗ, ಅದು ಇಬ್ಬನಿಬಿಂದು ಎಂಬುದಾಗಿ ಯಾವುದನ್ನು ಕರೆಯಲಾಗುತ್ತದೋ ಅದನ್ನು ತಲಪುತ್ತದೆ. ಈ ಶಾಖಮಟ್ಟದಲ್ಲಿ, ಗಾಳಿಯು ತನ್ನ ತೇವವನ್ನು ಇನ್ನು ಮುಂದೆ ಹಿಡಿದಿಟ್ಟುಕೊಳ್ಳಲಾರದೆ, ಸುತ್ತುವರಿದ ಗಾಳಿಗಿಂತ ಹೆಚ್ಚು ತಂಪಾಗಿರುವ ಮೇಲ್ಮೈಗಳಲ್ಲಿ ಅದನ್ನು ಇರಿಸುತ್ತದೆ. ಬಾಯಾರಿದ ಸಸ್ಯಗಳು ತಮ್ಮ ಎಲೆಗಳ ಮೂಲಕ, ತಮ್ಮ ಸ್ವಂತ ಭಾರದಷ್ಟೇ ಇರುವ ಹಿಮಮಣಿಯ ಜಲವನ್ನು ಹೀರಿಕೊಳ್ಳುತ್ತವೆ ಎಂದು ತಿಳಿದುಬಂದಿದೆ. ಅದರ ಹೆಚ್ಚಿನ ಅಂಶವನ್ನು ಮಣ್ಣಿನಲ್ಲಿ ಸಂಗ್ರಹಿಸುವುದಕ್ಕಾಗಿ ತಮ್ಮ ಬೇರುಗಳ ಮೂಲಕ ಅವು ಹೊರ ಹಾಕುತ್ತವೆ.
ನಿಡಿದಾದ ಒಂದು ಶುಷ್ಕ ಕಾಲವು ಎಲ್ಲಿದೆಯೋ, ಆ ಬೈಬಲಿನ ದೇಶಗಳಲ್ಲಿ ಕಾರ್ಯತಃ ಇಬ್ಬನಿಯು ಕೆಲವೊಮ್ಮೆ ಸಸ್ಯಗಳಿಗೆ ಜಲದ ಏಕಮಾತ್ರ ಆಕರವಾಗಿರಬಹುದು. ಹೀಗೆ ಬೈಬಲಿನಲ್ಲಿ, ಅನೇಕ ಸಲ ಇಬ್ಬನಿಯು ಬೆಳೆಗಳ ಉತ್ಪನ್ನದೊಂದಿಗೆ—ಮತ್ತು ಇಬ್ಬನಿಯ ಕೊರತೆಯು, ಕ್ಷಾಮದೊಂದಿಗೆ ಜತೆಗೂಡಿಸಲ್ಪಟ್ಟಿದೆ.
ಇಬ್ಬನಿಯು ಹೆಚ್ಚಿನ ವೈಯಕ್ತಿಕ ಅರ್ಥವನ್ನು ಸಹ ಹೊಂದಿರಬಲ್ಲದು. ದೇವಜನರನ್ನು ಬೀಳ್ಕೊಡುವ ತನ್ನ ಗೀತೆಯಲ್ಲಿ, ಮೋಶೆಯು ಬರೆದದ್ದು: “ನನ್ನ ಉಪದೇಶವು ಹಸಿಹುಲ್ಲಿನ ಮೇಲೆ ಮೆಲ್ಲಗೆ ಸುರಿಯುವ ಮಳೆಯ ತುಂತುರುಗಳಂತೆ [ತಣ್ಣಗಿರುವುದು;] ನನ್ನ ಬೋಧನೆಯು ಮಂಜಿನಂತೆಯೂ ಕಾಯಿ ಪಲ್ಯಗಳ ಮೇಲೆ ಬೀಳುವ ಹದಮಳೆಯಂತೆಯೂ [ಹಿತವಾಗಿರುವದು].” (ಧರ್ಮೋಪದೇಶಕಾಂಡ 32:2) ಇಬ್ಬನಿಯಂತೆ ಜೀವದಾಯಕವಾಗಿದ್ದ ಮಾತುಗಳನ್ನು ಮೋಶೆಯು ನುಡಿದನು. ಅವನು ಮನುಷ್ಯರಲ್ಲೇ ಬಹು ವಿನೀತನಾಗಿದ್ದ ಕಾರಣದಿಂದ, ರೂಢಿಯಾಗಿಯೇ ಅವನು ಸೌಮ್ಯವುಳ್ಳವನಾಗಿದ್ದನು ಮತ್ತು ತನ್ನ ಉಕ್ತಿಯಲ್ಲಿ ಕೂಡ ವಿಚಾರಪೂರ್ಣನಾಗಿದ್ದನು ಎಂಬುದು ನಿಸ್ಸಂಶಯ. (ಅರಣ್ಯಕಾಂಡ 12:3) ಇಬ್ಬನಿಯಂತೆ ಅಥವಾ ಮೆತ್ತನೆಯ ಸುರಿಮಳೆಯಂತೆ, ಅವನ ಮಾತುಗಳು ಹಾನಿಯನ್ನುಂಟು ಮಾಡದೆ ಪೋಷಿಸಿದವು.
ಮುಂದಿನ ಸಲ ಪ್ರಾತಃಕಾಲದ ಇಬ್ಬನಿಯ ಸೌಮ್ಯ ಸೊಬಗಿನ, ನಿಸರ್ಗದ ಸ್ವಬಾಷ್ಪದ ಕುರಿತು ನೀವು ಕೌತುಕಗೊಳ್ಳುವಾಗ, ಇಬ್ಬನಿಯ ನಿರ್ಮಾಣಿಕನ ವಿಸ್ಮಯಕಾರಿ ಜ್ಞಾನದ ಕುರಿತು ಚಿಂತನೆ ಮಾಡಲು ನೀವು ಬಯಸಬಹುದು.