ಸಕಲರಿಗೂ ಸಾಕಷ್ಟು ಆಹಾರ!
ಬ್ರೆಸಿಲ್‌ನ ಎಚ್ಚರ! ಸುದ್ದಿಗಾರರಿಂದ
ಯಥೇಷ್ಟವಾದ, ಅತ್ಯುತ್ತಮ ಊಟದಲ್ಲಿ ಆನಂದಿಸಲು ಶಕ್ಯವಾದರೂ ಅಸಂತೋಷಿತರಾಗಿರಲು ಸಾಧ್ಯವಿದೆ. ನೈಜವೂ ಸ್ಥಿರವೂ ಆದ ಸಂತೋಷವನ್ನು ಪಡೆಯಲಿಕ್ಕಾಗಿ ಬೇರೊಂದು ವಿಷಯವು—ಆತ್ಮಿಕ ಆಹಾರ—ಬೇಕಾಗಿದೆ. ಯೇಸು ಹೇಳಿದ್ದು: “ಮನುಷ್ಯನು ರೊಟ್ಟಿತಿಂದ ಮಾತ್ರದಿಂದ ಬದುಕುವದಿಲ್ಲ, ದೇವರ [“ಯೆಹೋವನ,” NW] ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕುವನು.”—ಮತ್ತಾಯ 4:4.
ಇನ್ನೊಂದು ಕಡೆ, ದೇವರ ವಾಕ್ಯವನ್ನು ತಿರಸ್ಕರಿಸುವುದು, ಆಮೋಸ 8:11ರಲ್ಲಿ ತಿಳಿಸಿದ ಪ್ರಕಾರ, ಆತ್ಮಿಕ ಹಸಿವೆಗೆ ನಡಿಸುತ್ತದೆ: “ನಾನು ದೇಶಕ್ಕೆ ಕ್ಷಾಮವನ್ನು ಉಂಟುಮಾಡುವ ದಿನಗಳು ಬರುತ್ತಿವೆ; ಅದು ಅನ್ನದ ಕ್ಷಾಮವಲ್ಲ, ನೀರಿನ ಕ್ಷಾಮವಲ್ಲ, ಯೆಹೋವನ ವಾಕ್ಯಗಳ ಕ್ಷಾಮವೇ.” ಆದರೂ, ಆತ್ಮಿಕ ನ್ಯೂನ ಪೋಷಣೆಯನ್ನು ವರ್ಜಿಸಲು ಸಾಧ್ಯವಿದೆ. ಯೇಸು ಘೋಷಿಸಿದ್ದು: “ತಮ್ಮ ಆತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರು ಧನ್ಯರು . . . ನೀತಿಗಾಗಿ ಹಸಿಯುತ್ತಾ ಬಾಯಾರುತ್ತಾ ಇರುವವರು ಧನ್ಯರು; ಅವರಿಗೆ ತೃಪ್ತಿಯಾಗುವುದು.” (ಮತ್ತಾಯ 5:3, 6, NW) ಯೋಗ್ಯ ಪ್ರಮಾಣಗಳಲ್ಲಿ ಪೌಷ್ಟಿಕ ಆಹಾರವು ನಮ್ಮ ದೇಹಗಳನ್ನು ತೃಪ್ತಿಗೊಳಿಸುವಂತೆ, ಹಿತಕರವಾದ ಆತ್ಮಿಕ ಆಹಾರವು ನಮ್ಮ ನಂಬಿಕೆಯನ್ನು ಮತ್ತು ಭವಿಷ್ಯತ್ತಿನ ನಮ್ಮ ನಿರೀಕ್ಷೆಯನ್ನು ಬಲಗೊಳಿಸುತ್ತದೆ. ಯಾವ ವಿಧದ ಲೋಕಕ್ಕಾಗಿ ನಾವು ನಿರೀಕ್ಷಿಸಬಲ್ಲೆವು?
ಎಲ್ಲರಿಗೆ ಯಥೇಷ್ಟ ಆಹಾರ
ರುಚಿಕರವೂ ಪುಷ್ಟಿಕರವೂ ಆದ ಸಮೃದ್ಧ ಆಹಾರವಿರುವ ಒಂದು ಲೋಕವನ್ನು ಊಹಿಸಿಕೊಳ್ಳಿರಿ. ಹಸಿವು ಮತ್ತು ನ್ಯೂನ ಪೋಷಣೆಯನ್ನು ಉಂಟುಮಾಡಿ ಜನರನ್ನು ದುರ್ಬಲರೂ ಹತಾಶರೂ ಆಗಿ ಮಾಡುವ ಯುದ್ಧಗಳು, ವಿಪತ್ತುಗಳು, ಅಥವಾ ದುರ್ಘಟನೆಗಳು ಇರದ ಒಂದು ಲೋಕ. ತಿಳಿಸಾರಿನ ವಿತರಣೆ ಅಥವಾ ಕೈಭಿಕ್ಷೆಯ ಮೇಲೆ ಆತುಕೊಳ್ಳುವ ನಿರ್ಗತಿಕರೂ ನಿರುದ್ಯೋಗಿಗಳೂ ಆದ ಜನರು ಇನ್ನಿರರು, ಹೊಟ್ಟೆತುಂಬಿಸಲಿಕ್ಕಾಗಿ ಏನನ್ನಾದರೂ ತಿನ್ನುವಂತೆ ಜನರನ್ನು ಬಲಾತ್ಕರಿಸುವ ಆಹಾರ ಧಾನ್ಯಗಳ ಬೆಲೆಯುಬ್ಬರಗಳೂ ಇರಲಾರವು. “ಭೂಮಿಯ ಮೇಲೆ ಧಾನ್ಯವು ಯಥೇಷ್ಟವಾಗಿರುವುದು; ಬೆಟ್ಟಗಳು ಸಮೃದ್ಧಿಯಿಂದ ತುಂಬಿ ತುಳುಕುವುವು.” (ಕೀರ್ತನೆ 72:16, NW) ಆದರೆ ಇದು ಹೇಗೆ ಸಂಭವಿಸುವುದು? ನ್ಯೂನ ಪೋಷಣೆಯ ಸಮಸ್ಯೆಯನ್ನು ಪರಿಹರಿಸುವವನಾರು?
ಸಾಕಷ್ಟು ಆಹಾರಕ್ಕಾಗಿ ಮನುಷ್ಯನ ಅಗತ್ಯದೆಡೆಗೆ ನಮ್ಮ ನಿರ್ಮಾಣಿಕನು ಪ್ರೀತಿಯುಳ್ಳ ಗಮನವನ್ನು ಕೊಡುವನು. ಭೂಮಿಯ ಹವಾಮಾನವು ಸಹ ನಿಯಂತ್ರಣದ ಕೆಳಗಿರುವುದು, ಹೀಗೆ ಯಾವ ಬೆಳೆ ನಷ್ಟಗಳೂ ಇನ್ನಿರವೆಂಬುದಕ್ಕೆ ಖಾತರಿ ನೀಡುತ್ತದೆ. “ನಿಜವಾಗಿ ಯೆಹೋವನು ಒಳ್ಳೆಯದನ್ನು ಅನುಗ್ರಹಿಸುವನು; ನಮ್ಮ ದೇಶವು ತನ್ನ ಬೆಳೆ ಕೊಡುವದು.” (ಕೀರ್ತನೆ 85:12) ಅಷ್ಟಲ್ಲದೆ, ಭೂಮಿಯು ಸಾಕಷ್ಟು ಆಹಾರವನ್ನು ಉತ್ಪಾದಿಸಲು ಶಕ್ತನಾದರೂ, ಅಯೋಗ್ಯ ಆಹಾರ ವಿತರಣೆ, ನ್ಯೂನ ಪೋಷಣೆ, ಮತ್ತು ದುರವಸ್ಥೆಗೆ ನಡಿಸುವ ಲೋಭ ಮತ್ತು ದಬ್ಬಾಳಿಕೆಯನ್ನು ದೇವರ ರಾಜ್ಯವೊಂದೇ ಅಂತ್ಯಗೊಳಿಸುವುದು.
ಹೌದು, ದೊರೆಯುವ ಯಾವುದೇ ವ್ಯಾವಸಾಯಿಕ ಮತ್ತು ಸಾಗಣೆ ವ್ಯವಸ್ಥೆಗಳು, ಎಲ್ಲಿ ಅಗತ್ಯವೂ ಅಲ್ಲಿ, ಹಿತಕರವಾದ ಆಹಾರವನ್ನು ಒದಗಿಸುವಂತೆ ಯೆಹೋವನ ಸ್ವರ್ಗೀಯ ಸರಕಾರವು ನಿಶ್ಚಿತವಾಗಿ ನೋಡಿಕೊಳ್ಳುವುದು. ರಾಜ್ಯ ಆಡಳಿತವು ಕೆಲವರನ್ನು ಮಾತ್ರ ಸಂಪನ್ನರಾಗಿ ಮಾಡಿ ಅಧಿಕ ಸಂಖ್ಯಾತರನ್ನು ಹೊಟ್ಟೆಹೊರೆಯುವ ಜೀವನಕ್ಕೆ ಬಿಟ್ಟುಬಿಡದು. ನಿರಾಶೆ ಮತ್ತು ಆಶಾಹೀನತೆಯ ಬದಲಿಗೆ ರಾಜ್ಯ ಆಶೀರ್ವಾದಗಳು ಯೆಶಾಯ 25:6ರಲ್ಲಿ ಮುಂತಿಳಿಸಲಾದ ಸುವಸ್ತುಗಳ ಮಹಾ ಔತಣದಲ್ಲಿ ಪ್ರದರ್ಶಿತವಾದ ಸಂತೋಷವನ್ನು ತರುವುವು: “ಸೇನಾಧೀಶ್ವರನಾದ ಯೆಹೋವನು ಈ ಪರ್ವತದಲ್ಲಿ ಸಕಲಜನಾಂಗಗಳಿಗೂ ಸಾರವತಾದ್ತ ಮೃಷ್ಟಾನ್ನದಿಂದಲೂ ಮಡ್ಡಿಗಟ್ಟಿದ ಮೇಲೆ ಶೋಧಿಸಿದ ದ್ರಾಕ್ಷಾರಸದಿಂದಲೂ ಕೂಡಿದ ಔತಣವನ್ನು ಅಣಿಮಾಡುವನು.”
ಇಂದಿನ ಸ್ಪರ್ಧಾತ್ಮಕ, ಒತ್ತಡಭರಿತ, ಸಂವೇದನೆರಹಿತ ಜೀವನ ಶೈಲಿಯು ಶಾಶ್ವತವಾಗಿ ಇಲ್ಲದೆ ಹೋಗಿರುವುದನ್ನು ಈಗ ಊಹಿಸಿಕೊಳ್ಳಿ. ಯಾರೊಬ್ಬನೂ ನ್ಯೂನ ಪೋಷಣೆ ಯಾ ರೋಗಕ್ಕೆ ಗುರಿಯಾಗನು. ಆದುದರಿಂದ, ಆ ನೂತನ ಲೋಕದಲ್ಲಿ ಜೀವನವನ್ನು ನೀವು ನಿಜವಾಗಿಯೂ ಅನುಭೋಗಿಸಲು ಬಯಸುವುದಾದರೆ, ಯೇಸುವಿನ ಈ ಮಾತುಗಳನ್ನು ಪಾಲಿಸಿರಿ: “ದುಡಿಯಿರಿ; ಕೆಟ್ಟುಹೋಗುವ ಆಹಾರಕ್ಕಾಗಿ ದುಡಿಯಬೇಡಿರಿ, ನಿತ್ಯಜೀವಕ್ಕೆ ಉಳಿಯುವ ಆಹಾರಕ್ಕಾಗಿ ದುಡಿಯಿರಿ.”—ಯೋಹಾನ 6:27.