ಭೂಮಿ ನಮಗಾಗಿ ದೇವರ ಕೊಡುಗೆ
“ಆದಿಯಲ್ಲಿ ದೇವರು ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದನು.” ಭೂಮಿಯು “ಬಹು ಒಳ್ಳೇದಾಗಿ” ಇತ್ತೆಂದೂ ಆತನು ಘೋಷಿಸಿದನು. (ಆದಿಕಾಂಡ 1:1, 31) ಯಾವ ಕಸದ ರಾಶಿಗಳೂ ಅದರ ರೂಪವನ್ನು ಕೆಡಿಸಲಿಲ್ಲ; ಯಾವ ಕಚಡ ಕೊಂಪೆಗಳೂ ಅದನ್ನು ಮಲಿನಗೊಳಿಸಲಿಲ್ಲ. ಒಂದು ಸುಂದರವಾದ ಕೊಡುಗೆಯು ಮಾನವ ಕುಲಕ್ಕಾಗಿ ಬಿಡಲ್ಪಟ್ಟಿತ್ತು: “ಪರಲೋಕವು ಯೆಹೋವನದು; ಭೂಲೋಕವನ್ನು ನರಸಂತಾನಕ್ಕೆ ಕೊಟ್ಟಿದ್ದಾನೆ.”—ಕೀರ್ತನೆ 115:16.
ಯೆಶಾಯ 45:18ರಲ್ಲಿ, ಭೂಮಿಗಾಗಿ ತನ್ನ ಉದ್ದೇಶವು ಏನೆಂದು ಆತನು ತಿಳಿಸುತ್ತಾನೆ: “ಆಕಾಶಮಂಡಲವನ್ನು ಸೃಷ್ಟಿಸಿದ ಯೆಹೋವನ ಮಾತನ್ನು ಕೇಳಿರಿ; ಆತನೇ ದೇವರು, ಭೂಲೋಕವನ್ನು ನಿರ್ಮಿಸಿ ರೂಪಿಸಿ ಸ್ಥಾಪಿಸಿದನು; ಅದನ್ನು ಶೂನ್ಯಸ್ಥಾನವಾಗಿರಲೆಂದು ಸೃಷ್ಟಿಸದೆ ಜನನಿವಾಸಕ್ಕಾಗಿಯೇ ರೂಪಿಸಿದನು. ಈತನು ಹೀಗನ್ನುತ್ತಾನೆ—ನಾನೇ ಯೆಹೋವನು, ಇನ್ನು ಯಾವನೂ ಅಲ್ಲ.”
ಭೂಮಿಯ ಕಡೆಗೆ ಮನುಷ್ಯನ ಜವಾಬ್ದಾರಿ ಏನೆಂದು ಆತನು ವಿಶಿಷ್ಟವಾಗಿ ತೋರಿಸುತ್ತಾನೆ—“ವ್ಯವಸಾಯ ಮಾಡುವುದು ಮತ್ತು ಅದರ ಪರಾಮರಿಕೆ ಮಾಡುವುದು.”—ಆದಿಕಾಂಡ 2:15, NW.
ಯೆಹೋವನು ಮಾದರಿಯನ್ನು ಇಡುತ್ತಾನೆ. ಭೂಮಿಯ ಪರಾಮರಿಕೆಯನ್ನು ಆತನು ಮಾಡುತ್ತಾನೆ. ಒಂದು ವಿಧಾನವು ಭೂಮಿಯ ಪ್ರಧಾನ ಒದಗಿಸುವಿಕೆಗಳನ್ನು, ಯಾವುದರ ಮೇಲೆ ಭೂಮಿಯ ಸಕಲ ಜೀವವು ಅವಲಂಬಿಸಿದೆಯೇ ಅವುಗಳನ್ನು ಪುನರುಪಯೋಗಕ್ಕೆ ತರುವ ಮೂಲಕ. ಸೈಎನ್‌ಟಿಫಿಕ್ ಅಮೆರಿಕನ್‌ನ ಒಂದು ವಿಶೇಷ ಸಂಚಿಕೆಯಲ್ಲಿ ಈ ಚಕ್ರಗತಿಗಳಲ್ಲಿ ಅನೇಕವುಗಳ ಕುರಿತಾಗಿ ಹಲವಾರು ಲೇಖನಗಳಿದ್ದವು, ಅವುಗಳಲ್ಲಿ ಈ ಕೆಳಗಿನವು ಸೇರಿವೆ—ಭೂಮಿಯ ಕ್ರಿಯಾತ್ಮಕ ಚಕ್ರ, ಜೀವವಿಜ್ಞಾನದ ಚಕ್ರ, ಜಲ ಚಕ್ರ, ಆಮ್ಲಜನಕ ಚಕ್ರ, ಇಂಗಾರಾಮ್ಲ ಚಕ್ರ, ಸಾರಜನಕ ಚಕ್ರ, ಮತ್ತು ಖನಿಜ ಚಕ್ರಗಳೇ.
ಭೂಮಿ—ಅಚ್ಚರಿಯದ್ದು ಮತ್ತು ಸುಂದರವಾದದ್ದು
ವಿಸ್ತಾರ ಪ್ರಸಿದ್ಧಿಯನ್ನು ಪಡೆದ ಜೀವ ವಿಜ್ಞಾನಿ ಲೂವಿಸ್ ಥಾಮಸ್, ಡಿಸ್‌ಕವರ್ ಎಂಬ ವಿಜ್ಞಾನ ಪತ್ರಿಕೆಯಲ್ಲಿ, ಭೂಮಿಯ ಈ ನಿರ್ವಿವಾದದ ಸುತ್ತಿಯನ್ನು ಬರೆದರು:
“ಇಡೀ ವಿಶ್ವದಲ್ಲಿ ನಾವು ಇಷ್ಟರ ತನಕ ತಿಳಿದಿರುವ ಕಂಗೆಡಿಸುವ ವಿಸ್ಮಯಗಳಲ್ಲಿ, ವಿಲಕ್ಷಣ ರಚನೆಗಳಲ್ಲಿ, ಅತ್ಯಂತ ಮಹಾನ್ ವಿಶ್ವಶಾಸ್ತ್ರದ ವೈಜ್ಞಾನಿಕ ಒಗಟುಗಳಲ್ಲಿ, ಗ್ರಹಿಸಿಕೊಳ್ಳಲು ನಮ್ಮೆಲ್ಲ ಪ್ರಯತ್ನಗಳನ್ನು ದಿಗ್ಭಮ್ರೆಗೊಳಿಸುವಂಥದ್ದು ಭೂಮಿಯೇ ಆಗಿದೆ. ಅದೆಷ್ಟು ಸೋಜಿಗವೂ ಭವ್ಯವೂ ಆಗಿದೆ, ಎಷ್ಟು ಬೆರಗುಗೊಳಿಸುತ್ತದೆ, ವಾತಾವರಣದ ತನ್ನ ಸ್ವಂತ ನೀಲ ಗಾಳಿಗುಳ್ಳೆಗಳಿಂದಾವೃತವಾಗಿ ಸೂರ್ಯನ ಸುತ್ತಲೂ ತೇಲುವ ಅತಿ ಮನೋಹರ ವಸ್ತುವಾದ ಇದು ತನ್ನ ಸ್ವಂತ ಆಮ್ಲಜನಕವನ್ನು ಉತ್ಪಾದಿಸುತ್ತಾ, ಸೇವಿಸುತ್ತಾ, ಗಾಳಿಯಿಂದ ತನ್ನ ಸ್ವಂತ ಸಾರಜನಕವನ್ನು ತನ್ನ ಸ್ವಂತ ಮಣ್ಣಿನೊಳಗೆ ಸೇರಿಸುತ್ತಾ, ತನ್ನ ಮಳೆಕಾಡುಗಳ ಮೇಲ್ಮೈಯಿಂದ ತನ್ನ ಸ್ವಂತ ಹವಾಮಾನವನ್ನು ಉತ್ಪಾದಿಸುತ್ತಾ, ಸಜೀವ ಭಾಗಗಳಿಂದ ತನ್ನ ಸ್ವಂತ ಮೇಲ್ಚಿಪ್ಪನ್ನು ರಚಿಸುತ್ತಾ, ಸುಣ್ಣಗಲ್ಲು ಪ್ರಪಾತಗಳನ್ನು, ಹವಳದ ದಿಬ್ಬಗಳನ್ನು, ಮತ್ತು ಭೂಗೋಳದಾದ್ಯಂತ ಒಂದಾಗಿ ಹೆಣೆಯಲ್ಪಟ್ಟ ಹೊಸ ಜೀವದ ಪದರಗಳಿಂದ ಈಗ ಆವರಿಸಲ್ಪಟ್ಟ ಆರಂಭದ ಜೀವಿಗಳ ಜೀವ್ಯವಶೇಷಗಳನ್ನು ರಚಿಸಿರುವುದನ್ನು ನಾವು ಇದೀಗಲೇ ಗಣ್ಯಮಾಡಲು ತೊಡಗಿದ್ದೇವೆ.”
ಮಾನವ ಕುಲಕ್ಕೆ ಒಂದು ಸುಂದರವಾದ ಕೊಡುಗೆಯಾಗಿ, ಜನರಿಗಾಗಿ ಮತ್ತು ಅಗಣಿತ ಕೋಟಿ ಇತರ ಸಜೀವ ಜೀವಿಗಳಿಗಾಗಿ ಸದಾ ಬಾಳುವಂತೆ ನಿರ್ಮಿಸಲಾದ ಒಂದು ಬೀಡಾಗಿ, ಈ ಭೂಮಿಯು ಕಾರ್ಯನಡಿಸುತ್ತಾ ಇರುವಂತೆ ಯೆಹೋವನು ಅದರಲ್ಲಿಟ್ಟಿರುವ ಕೇವಲ ಕೆಲವು ಒದಗಿಸುವಿಕೆಗಳಿವು. ಕೀರ್ತನೆ 104:5 ಹೇಳುವುದು: “ಭೂಮಿಯು ಯುಗಯುಗಾಂತರಕ್ಕೂ ಕದಲದ ಹಾಗೆ ಅದನ್ನು ದೃಢವಾದ ಅಸ್ತಿವಾರದ ಮೇಲೆ ಸ್ಥಾಪಿಸಿದ್ದೀ.” ಇನ್ನೊಬ್ಬ ಪ್ರೇರಿತ ಸಾಕ್ಷಿಯು ಭೂಮಿಯ ಇದೇ ಶಾಶ್ವತತೆಗೆ ಸಾಕ್ಷಿನುಡಿದದ್ದು: “ಒಂದು ತಲಾಂತರವು ಗತಿಸುವದು, ಇನ್ನೊಂದು ತಲಾಂತರವು ಬರುವದು. ಭೂಮಿಯಾದರೋ ಶಾಶ್ವತವಾಗಿ ನಿಲ್ಲುವದು.”—ಪ್ರಸಂಗಿ 1:4.
ಭೂಮಿಯನ್ನು ಸುತ್ತುವ ಗಗನ ಯಾತ್ರಿಗಳು, ಸೂರ್ಯನ ಸುತ್ತಲೂ ತನ್ನ ಕಕ್ಷೆಯಲ್ಲಿ ಉದ್ದಕ್ಕೂ ವಿಹಾರಮಾಡುವ ಈ ಸುಂದರವಾದ, ಕೋಮಲ ಗೋಳದ ಕುರಿತು ಅಲಂಕಾರಿಕವಾಗಿ ಮಾತಾಡಿದ್ದಾರೆ ಮತ್ತು ಮಾನವ ಕುಲವು ಅದರ ಸೌಂದರ್ಯವನ್ನು ಗಣ್ಯಮಾಡಿ ಅದರ ಪರಾಮರಿಕೆ ಮಾಡುವ ಅಗತ್ಯವನ್ನು ವ್ಯಕ್ತಪಡಿಸಿದ್ದಾರೆ. ಗಗನ ಯಾತ್ರಿ ಎಡ್ಗರ್ ಮಿಚಲ್, ಅಂತರಾಳದಿಂದ ಭೂಮಿಯೆಡೆಗೆ ತನ್ನ ಮೊದಲ ನಸುನೋಟ ಬೀರಿದಾಗ, ಹ್ಯೂಸ್ಟನ್ ಅಂತರಾಳ ಕೇಂದ್ರಕ್ಕೆ ರೇಡಿಯೋ ಮೂಲಕ ತಿಳಿಸಿದ್ದು: “ಅದು ಕಡು ಕಪ್ಪಿನ ನಿಗೂಢ ಸಮುದ್ರದಲ್ಲಿ ಒಂದು ಚಿಕ್ಕ ಮುತ್ತಿನಂತಿದ್ದು . . . ನಿಧಾನವಾಗಿ ಸುಳಿಯುವ ಬೆಳ್ಳಗಿನ ತೆರೆಗಳಿಂದ ಬಿಗಿದ . . . ನೀಲ ಮತ್ತು ಬಿಳಿಯ ಹೊಳಪಿನ ಮಣಿಯಂತೆ ಕಾಣುತ್ತದೆ.” ಗಗನ ಯಾತ್ರಿ ಫ್ರ್ಯಾಂಕ್ ಬಾರ್ಮೆನ್‌ನ ಹೇಳಿಕೆ ಹೀಗಿತ್ತು: “ಎಷ್ಟೊಂದು ಮನೋಹರ ಗ್ರಹದಲ್ಲಿ ನಾವು ಪಾಲಿಗರು. . . . ನಮಗೆ ಏನಿದೆಯೋ ಅದನ್ನು ನಾವೇಕೆ ಗಣ್ಯಮಾಡಲಾರೆವೆಂಬುದೇ ಕಂಗೆಡಿಸುವ ಸೋಜಿಗ.” ಅಪಾಲೊ 8 ಚಂದ್ರಯಾನದ ಗಗನ ಯಾತ್ರಿಕರಲ್ಲಿ ಒಬ್ಬನು ಹೇಳಿದ್ದು: “ಇಡೀ ವಿಶ್ವದಲ್ಲಿ ನಾವೆಲ್ಲಿ ನೋಡಿದರೂ, ಸ್ವಲ್ಪ ಬಣ್ಣವು ತೋರುತ್ತಿದ್ದುದು ಭೂಮಿಯ ಮೇಲೆಯೇ. ಸಮುದ್ರಗಳ ಕಡು ನೀಲಿಯನ್ನು, ನೆಲದ ಬಿಸಿಲುಗಂದು ಮತ್ತು ಕಂದು ಬಣ್ಣವನ್ನು, ಮತ್ತು ಮುಗಿಲುಗಳ ಶ್ವೇತ ವರ್ಣವನ್ನು ನಾವು ಕಾಣಶಕ್ತರಾದದ್ದು ಅಲ್ಲಿಯೇ. . . . ಅದು ಗಗನದಲ್ಲೆಲ್ಲ ನೋಡಲು ಅತ್ಯಂತ ಸುಂದರವಾದ ವಸ್ತುವಾಗಿತ್ತು. ಕೆಳಗೆ ಭೂಮಿಯಲ್ಲಿರುವ ಜನರು ತಮಗೇನಿದೆಯೋ ಅದನ್ನು ಗ್ರಹಿಸಿಕೊಳ್ಳುವುದಿಲ್ಲ.”
ತಮಗಿರುವ ನಿಧಿಯನ್ನು ಜನರು ಎಣಿಕೆಗೆ ತರುವುದಿಲ್ಲ ಎಂಬ ಆ ಹೇಳಿಕೆಯು ಸತ್ಯವಾಗಿದೆಯೆಂದು ನಿಜತ್ವಗಳು ತೋರಿಸುತ್ತವೆ. ದೇವರ ಈ ಕೊಡುಗೆಯನ್ನು ಪರಾಮರಿಕೆ ಮಾಡುವ ಬದಲಿಗೆ ಮಾನವ ಕುಲವು ಅದನ್ನು ಮಲಿನಗೊಳಿಸುತ್ತಾ, ನಾಶಗೊಳಿಸುತ್ತಿದೆ. ಗಗನ ಯಾತ್ರಿಗಳು ಇದನ್ನು ಸಹ ಕಂಡಿದ್ದಾರೆ. ಸ್ಪೇಸ್ ಷಟ್‌ಲ್ ಚ್ಯಾಲೆಂಜರ್‌ನ ಮೊದಲನೆಯ ಆಕಾಶಯಾನದ ನೌಕಾಧಿಪತಿ ಪಾಲ್ ವೈಟ್ಸ್ ಹೇಳಿದ್ದೇನಂದರೆ, ಅಂತರಾಳದಿಂದ ವೀಕ್ಷಿಸುವಾಗ, ಭೂಮಿಯ ಪರಿಸರಕ್ಕೆ ಮನುಷ್ಯನು ಮಾಡಿರುವ ಹಾನಿಯು “ಎದೆಗುಂದಿಸು”ವಂಥದು. “ದೌರ್ಭಾಗ್ಯದಿಂದ, ಈ ಭೂಮಿಯು ತೀವ್ರವಾಗಿ ಬೂದು ಬಣ್ಣದ ಒಂದು ಗ್ರಹವಾಗುತ್ತಿದೆ.” ಅವರು ಮತ್ತೂ ಕೂಡಿಸಿದ್ದು: “ನಮಗಾಗಿ ಯಾವ ಸಂದೇಶವಿದೆ? ನಾವು ನಮ್ಮ ಸ್ವಂತ ಗೂಡನ್ನು ಹೊಲೆಮಾಡುತ್ತಿದ್ದೇವೆ.” ಮತ್ತು ವಿಶೇಷವಾಗಿ ಈ ವಿಧ್ವಂಸಕತೆಯು ಈ “ಕಡೇ ದಿವಸಗಳಲ್ಲಿ” ಅಪಾಯಕರವಾಗಿ ಏರಿರುತ್ತದೆ. ಭೂಮಿಯನ್ನು ಹಾಳುಗೆಡಹುವವರ ವಿರುದ್ಧವಾಗಿ ಯೆಹೋವನು ತೀರ್ಪನ್ನು ಘೋಷಿಸಿದ್ದಾನೆ, ಅದೇನಂದರೆ, ಆತನು “ಲೋಕನಾಶಕರನ್ನು ನಾಶ” ಮಾಡುವನು.—ಪ್ರಕಟನೆ 11:18.
ದೇವರ ಕೊಡುಗೆಗೆ ಅಪಾತ್ರವಾದ ಒಂದು ಕೃತಘ್ನ ಸಮಾಜ
ಒಂದು ಪ್ರಾಪಂಚಿಕ ಸಮಾಜವು ಶರೀರದಾಶೆಯನ್ನು ಸ್ವೇಚ್ಛೆಯಾಗಿ ನಡಿಸಲಿಕ್ಕಾಗಿ ಆತ್ಮಿಕ ಮೌಲ್ಯಗಳನ್ನು ಧಿಕ್ಕಾರಮಾಡಿದೆ. ಒಂದು ಸಂತೋಷ ಮತ್ತು ಸಂತೃಪ್ತಿಯ ಜೀವನಕ್ಕಾಗಿ ಮಾನವ ಕುಲಕ್ಕೆ ಯೆಹೋವನು ಕೊಟ್ಟ ಪ್ರಾಯೋಗಿಕ ಮಾರ್ಗದರ್ಶಕಗಳನ್ನು, ನಮ್ಮ ಕಾಲದ ಗುಣಲಕ್ಷಣವಾಗಿರುವ ಸ್ವಾರ್ಥಪರ ಅಹಂ ವಾದದ ವೃದ್ಧಿಯು, ಪಕ್ಕಕ್ಕೆ ತಳ್ಳಿಹಾಕಿದೆ.
ನಾವು ಜೀವಿಸುತ್ತಿರುವ ಗಂಡಾಂತರದ ಸಮಯವನ್ನು ಎರಡನೆಯ ತಿಮೊಥೆಯ 3:1-5 ಸರಿಯಾಗಿ ಬಣ್ಣಿಸುತ್ತದೆ: “ಕಡೇ ದಿವಸಗಳಲ್ಲಿ ಕಠಿನಕಾಲಗಳು ಬರುವವೆಂಬದನ್ನು ತಿಳಿದುಕೋ. ಮನುಷ್ಯರು ಸ್ವಾರ್ಥಚಿಂತಕರೂ ಹಣದಾಸೆಯವರೂ ಬಡಾಯಿಕೊಚ್ಚುವವರೂ ಅಹಂಕಾರಿಗಳೂ ದೂಷಕರೂ ತಂದೆತಾಯಿಗಳಿಗೆ ಅವಿಧೇಯರೂ ಉಪಕಾರನೆನಸದವರೂ ದೇವಭಯವಿಲ್ಲದವರೂ ಮಮತೆಯಿಲ್ಲದವರೂ ಸಮಾಧಾನವಾಗದವರೂ ಚಾಡಿಹೇಳುವವರೂ ದಮೆಯಿಲ್ಲದವರೂ ಉಗ್ರತೆಯುಳ್ಳವರೂ ಒಳ್ಳೇದನ್ನು ಪ್ರೀತಿಸದವರೂ ದ್ರೋಹಿಗಳೂ ದುಡುಕಿನವರೂ ಉಬ್ಬಿಕೊಂಡವರೂ ದೇವರನ್ನು ಪ್ರೀತಿಸದೆ ಭೋಗಗಳನ್ನೇ ಪ್ರೀತಿಸುವವರೂ ಭಕ್ತಿಯ ವೇಷವಿದ್ದು ಅದರ ಬಲವನ್ನು ಬೇಡವೆನ್ನುವವರೂ ಆಗಿರುವರು; ಇಂಥವರ ಸಹವಾಸವನ್ನೂ ಮಾಡದಿರು.”
ವಾಣಿಜ್ಯವಾದವು ಗ್ರಾಹಕವಾದವನ್ನು ಪ್ರೋತ್ಸಾಹಿಸುತ್ತದೆ, ಮತ್ತು ಜಾಹೀರಾತು ಅದರ ಕೈಕೆಳಗಿನ ದಾಸಿಯಾಗಿದೆ. ಬಹಳಷ್ಟು ಜಾಹೀರಾತು ಸೂಕ್ತವಾಗಿದೆ, ಬಹಳಷ್ಟು ಜಾಹೀರಾತು ಸೂಕ್ತವಾಗಿಲ್ಲ. ಈ ಎರಡನೆಯದು, ದ ವಾಂಟ್ ಮೇಕರ್ಸ್‌ನಲ್ಲಿ ಎರಿಕ್ ಕಾರ್ಕ್ಲ್ ಇವರ ಅವಲೋಕನೆಗೆ ಒಪ್ಪುತ್ತದೆ: “ಜಾಹೀರಾತು, ಅಯೋಗ್ಯ ವಸ್ತುಗಳನ್ನು ಅವನ್ನು ಖರೀದಿಸಲಾಗದ ಜನರಿಗೆ ಮಾರಲು ಸಹಾಯ ಮಾಡುತ್ತದೆ ಮಾತ್ರವಲ್ಲ, ಅನೇಕ ಸಲ ಅವುಗಳನ್ನು ಅಸಂಗತವಾದ ಹೆಚ್ಚು ಬೆಲೆಗೆ ವಿಕ್ರಯಿಸುತ್ತದೆ.” ವರ್ಲ್ಡ್ ವಾಚ್‌ನ ಆ್ಯಲನ್ ಡರ್ನಿಂಗ್ ಹೇಳುವುದು: “ಜಾಹೀರಾತುದಾರರು ಮಾರುವುದು ಮನುಷ್ಯ ನಿರ್ಮಿತ ವಸ್ತುಗಳನ್ನಲ್ಲ, ಬದಲಿಗೆ ವ್ಯಕ್ತಿತ್ವದ ಅನಿರ್ದಿಷ್ಟ ಹಂಬಲಗಳಿಗೆ ತಮ್ಮ ಸರಕುಗಳನ್ನು ಸಿಲುಕಿಸುತ್ತಾ, ಜೀವನ ಶೈಲಿಗಳನ್ನು, ಮನೋಭಾವಗಳನ್ನು, ಮತ್ತು ಭ್ರಮೆಗಳನ್ನು ಮಾರುತ್ತಾರೆ.” ನಮ್ಮಲ್ಲಿ ಇರುವ ವಸ್ತುಗಳಲ್ಲಿ ನಮ್ಮನ್ನು ಅಸಂತುಷ್ಟರನ್ನಾಗಿ ಮಾಡಿ, ನಮಗೇನು ಬೇಡವೋ ಅದನ್ನು ಅಪೇಕ್ಷಿಸುವಂತೆ ಮಾಡುವ ಗುರಿಯಿಡುತ್ತದೆ ಜಾಹೀರಾತು. ಅದು ಒಂದು ತಣಿಸಲಾಗದ ಹಂಬಲವನ್ನು ಉಂಟುಮಾಡುತ್ತದೆ; ಅದು ಅಧಿಕ ಅನುಭೋಗದ ದೌರ್ಬಲ್ಯಕ್ಕೆ ನಡಿಸುತ್ತದೆ; ಭೂಮಿಯನ್ನು ಮಲಿನಗೊಳಿಸುವ ಕೊಂಪೆಗಳು ಹೆಚ್ಚುತ್ತಾ ಹೋಗುವಂತೆ ಮಾಡುತ್ತದೆ. ಅದರ ಮೋಸದ ಮನವೊಪ್ಪಿಸುವಿಕೆಯು ಕ್ರಮೇಣ ಹತಾಶ ದಾರಿದ್ರ್ಯದಲ್ಲಿ ಜೀವಿಸುತ್ತಿರುವವರ ಬಳಲಿದ ಹೃದಯಗಳನ್ನೂ ಹೊಕ್ಕುತ್ತದೆ. ಜನರನ್ನು ಕೊಲ್ಲುತ್ತವೆ ಅಥವಾ ಕಾಯಿಲೆ ಬೀಳಿಸುತ್ತವೆಂದು ತಿಳಿದಿರುವ ಸರಕುಗಳನ್ನು ಸಹ ಅನೇಕ ಜಾಹೀರಾತುದಾರರು ಆಕ್ರಮಣಶೀಲರಾಗಿ ಮಾರಾಟಕ್ಕಿಡುತ್ತಾರೆ.
ಪ್ರಸಂಗಿ 12:13 ಹೇಳುವ ಪ್ರಕಾರ, ಪ್ರಾಮುಖ್ಯವಾದದ್ದು ಏನೆಂದರೆ ದೇವರೊಂದಿಗೆ ನಮ್ಮ ನಿಲುವು: “ವಿಷಯವು ತೀರಿತು; ಎಲ್ಲವೂ ಕೇಳಿ ಮುಗಿಯಿತು; ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳು; ಮನುಷ್ಯರೆಲ್ಲರ [ಕರ್ತವ್ಯವು] ಇದೇ.” ಯಾರು ಹೀಗೆ ಮಾಡುತ್ತಾರೋ ಅವರು ಯೆಹೋವನ ಶುದ್ಧವಾದ ಪ್ರಮೋದವನದಲ್ಲಿ ಜೀವಕ್ಕೆ ಅರ್ಹತೆ ಪಡೆಯುವರು! ಯೇಸು ವಚನವಿತ್ತದ್ದು: “ಅದಕ್ಕೆ ಆಶ್ಚರ್ಯಪಡಬೇಡಿರಿ; ಸಮಾಧಿಗಳಲ್ಲಿರುವವರೆಲ್ಲರು ಆತನ ಧ್ವನಿಯನ್ನು ಕೇಳಿ ಎದ್ದು ಹೊರಗೆ ಬರುವ ಕಾಲ ಬರುತ್ತದೆ. ಒಳ್ಳೇದನ್ನು ಮಾಡಿದವರಿಗೆ ಜೀವಕ್ಕಾಗಿ ಪುನರುತ್ಥಾನವಾಗುವದು; ಕೆಟ್ಟದ್ದನ್ನು ನಡಿಸಿದವರಿಗೆ ತೀರ್ಪಿಗಾಗಿ ಪುನರುತ್ಥಾನವಾಗುವದು.”—ಯೋಹಾನ 5:28, 29.
ದೇವರ ಕೊಡುಗೆಯು ಗಣ್ಯಮಾಡಲ್ಪಡುವಾಗ
ಮತ್ತು ಎಂತಹ ನಂಬಲಾಗದ ಆಶ್ಚರ್ಯಭರಿತ ಭೂಮಿಯು ಅದಾಗಿರುವುದು! ಯೆಹೋವನು ಅದರ ಈ ಬೆರಗುಗೊಳಿಸುವ ವರ್ಣನೆಯನ್ನು ನಮಗೆ ಕೊಟ್ಟಿದ್ದಾನೆ: “ತರುವಾಯ ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ [ಯೋಹಾನನಾದ ನಾನು] ಕಂಡೆನು. ಮೊದಲಿದ್ದ ಆಕಾಶಮಂಡಲವೂ ಮೊದಲಿದ್ದ ಭೂಮಂಡಲವೂ ಇಲ್ಲದೆ ಹೋದವು; ಇನ್ನು ಸಮುದ್ರವೂ ಇಲ್ಲ. [ದೇವರು] ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.”—ಪ್ರಕಟನೆ 21:1, 4.
ಮೊದಲಿದ್ದಂಥ ವಿಷಯಗಳಾದ ಕಚಡ ಕೊಂಪೆಗಳು, ವಿಷಭರಿತ ಹಿಪ್ಪೆಗಳು, ಮತ್ತು ತಮ್ಮ ಕಸವನ್ನು ಇತರರ ಮೇಲೆ ಎಸೆದುಬಿಡುವವರು ಸಹ ಇಲ್ಲದೆ ಹೋಗುವರು. ಯಾರು ತಮ್ಮ ನೆರೆಯವರನ್ನು ತಮ್ಮಂತೆಯೇ ಪ್ರೀತಿಸುತ್ತಾರೋ, ಯೆಹೋವನ ಕೊಡುಗೆಯಾದ ಭೂಮಿಗಾಗಿ ಆತನನ್ನು ಸುತ್ತಿಸುತ್ತಾರೋ, ಮತ್ತು ಅದನ್ನು ಪರಾಮರಿಕೆ ಮಾಡುತ್ತಾ ಅದನ್ನು ಪ್ರಮೋದವನ್ಯ ಸ್ಥಿತಿಯಲ್ಲಿಡಲು ಹರ್ಷಿಸುತ್ತಾರೋ ಅವರು ಮಾತ್ರ ಆಗ ಭೂಮಿಯಲ್ಲಿ ಜೀವಂತರಾಗಿ ಇರುವರು.—ಮತ್ತಾಯ 22:37, 38; 2 ಪೇತ್ರ 3:13.
[ಪುಟ 22 ರಲ್ಲಿರುವ ಚೌಕ]
ಪ್ರಾಪಂಚಿಕತೆಯ ವ್ಯರ್ಥತೆ
ಯೇಸು ಹೀಗೆಂದು ಎಚ್ಚರಿಸಿದಾಗ ಒಂದು ನಾಟುವ ಸತ್ಯವನ್ನು ಹೇಳಿದನು: “ಎಲ್ಲಾ ಲೋಭಕ್ಕೂ ಎಚ್ಚರಿಕೆಯಾಗಿದ್ದು ನಿಮ್ಮನ್ನು ಕಾಪಾಡಿಕೊಳ್ಳಿರಿ. ಒಬ್ಬನಿಗೆ ಎಷ್ಟು ಆಸ್ತಿಯಿದ್ದರೂ ಅದು ಅವನಿಗೆ ಜೀವಾಧಾರವಾಗುವದಿಲ್ಲ.” (ಲೂಕ 12:15) ನಮ್ಮಲ್ಲಿ ಏನಿದೆಯೋ ಅದು ಮಹತ್ವದಲ್ಲ; ನಾವು ಏನಾಗಿದ್ದೇವೋ ಅದು ಮಹತ್ವದ್ದು. ಜೀವನವು ನೀಡಬೇಕಾಗಿರುವ ಅತ್ಯುತ್ತಮವಾದುದನ್ನು ನಾವು ಪಡೆಯಲು ತಪ್ಪುತ್ತಿರಬಹುದಾಗಿರುವಾಗ, ಜೀವನದ ಸಡಗರಗಳಲ್ಲಿ—ಹಣ ಮಾಡುವಿಕೆ, ಸೊತ್ತುಗಳನ್ನು ಕೂಡಿಸಿ ಹಾಕುವಿಕೆ, ಶರೀರವು ಆಶಿಸುವ ಸುಖಭೋಗಗಳೆಲವ್ಲನ್ನು ಕಸಿದುಕೊಳ್ಳಲು ಮೈಮರೆತ ಮುನ್ನುಗ್ಗುವಿಕೆ—ತಲ್ಲೀನರಾಗಿ, ನಾವು ಜೀವನವನ್ನು ಪೂರ್ಣವಾಗಿ ಅನುಭೋಗಿಸುತ್ತಿದ್ದೇವೆ, ಯಾವುದನ್ನೂ ಪಡೆಯಲು ತಪ್ಪುತ್ತಿಲ್ಲವೆಂದು ಯೋಚಿಸುವುದು ಸುಲಭ.
ಜೀವಮಾನವು ಗತಿಸಿಹೋಗುತ್ತಾ ಬರುವಾಗ ಮಾತ್ರ ನಾವೇನು ಕಳೆದುಕೊಂಡೆವೆಂಬ ಮನವರಿಕೆ ನಮಗಾಗುತ್ತದೆ. ಬೈಬಲು ಏನನ್ನುತ್ತದೋ ಅದರ ಸತ್ಯವನ್ನು ನಾವು ಮನಗಾಣುತ್ತೇವೆ: ಜೀವಮಾನವು ಅಲ್ಪಾಯುಷ್ಯದ್ದು, ಅದು ಮಾಯವಾಗುವ ಒಂದು ಇಬ್ಬನಿ, ಹೊಗೆಯ ಒಂದು ಊದಿಕೆ, ಊದಿಬಿಡುವ ಉಸಿರು, ದಾಟಿಹೋಗುವ ಒಂದು ನೆರಳು, ಒಣಗಿಹೋಗುವ ಹಸುರು ಹುಲ್ಲು, ಬಾಡಿಹೋಗುವ ಹೂವು ಆಗಿದೆ. ಅದು ಹೋಯಿತೆಲ್ಲಿಗೆ? ನಾವು ಏನು ಮಾಡಿದ್ದೇವೆ? ಇಲ್ಲಿ ನಾವು ಏಕಿದೆವ್ದು? ಇರುವುದೆಲ್ಲವು ಇಷ್ಟೆಯೋ? ಬರೇ ವ್ಯರ್ಥತೆಗಳ ವ್ಯರ್ಥತೆಯೆ, ಗಾಳಿಯ ಹಿಂದಟ್ಟುವಿಕೆಯೋ?—ಯೋಬ 14:2; ಕೀರ್ತನೆ 102:3, 11; 103:15, 16; 144:4; ಯೆಶಾಯ 40:7; ಯಾಕೋಬ 4:14.
ಆಸ್ಪತ್ರೆಯಲ್ಲಿ ಒಬ್ಬ ಮನುಷ್ಯನು ಸಾಯುತ್ತಾ ಇರುವಾಗ, ಬೆಚ್ಚನೆಯ ಬಿಸಿಲು ಗುಡ್ಡದ ಪಕ್ಕವೊಂದನ್ನು ತೋಯಿಸುವುದನ್ನು ಕಾಣುವುದು, ಹುಲ್ಲಿನ ಮತ್ತು ಕಳೆಗಳ ಕಲಬೆರಿಕೆ, ಕೆಲವೇ ಚಿಕ್ಕದಾಗಿರುವ ಹೆಣಗಾಡುವ ಹೂವುಗಳು, ಕೊಂಚ ಕಾಳುಗಳಿಗಾಗಿ ಮಣ್ಣನ್ನು ಕೆದಕುವ ಒಂದು ಗುಬ್ಬಚ್ಚಿ—ಅದು ಅಷ್ಟೊಂದು ಭಾವಾವೇಶಗೊಳ್ಳುವ ದೃಶ್ಯವಲ್ಲ. ಆದರೆ ಸಾಯುತ್ತಿರುವ ಮನುಷ್ಯನಿಗೆ ಅದು ಸುಮನೋಹರ. ಒಂದು ದುಃಖದ ಹಂಬಲವು ಅವನನ್ನು ಸ್ಪರ್ಶಿಸುತ್ತದೆ, ಎಂತಹ ಸರಳ ಸಂತಸಗಳನ್ನು ತಾನು ಕಳೆದುಕೊಂಡನೆಂಬ ಭಾವನೆ, ಬಹಳಷ್ಟು ಅರ್ಥವಿರುವ ಆ ಚಿಕ್ಕ ಪುಟ್ಟ ವಿಷಯಗಳು. ಎಷ್ಟೊಂದು ಬೇಗ ಎಲ್ಲವು ಮಾಯ!
ಬೈಬಲಿನ ಗ್ರೀಕ್ ಶಾಸ್ತ್ರಗಳು ಅದನ್ನು ಸರಳವಾಗಿ ಹೇಳುತ್ತದೆ: “ನಾವು ಲೋಕದೊಳಕ್ಕೆ ಏನೂ ತಕ್ಕೊಂಡು ಬರಲಿಲ್ಲವಷ್ಟೆ; ಅದರೊಳಗಿಂದ ಏನೂ ತಕ್ಕೊಂಡು ಹೋಗಲಾರೆವು. ನಮಗೆ ಅನ್ನವಸ್ತ್ರಗಳಿದ್ದರೆ ಸಾಕು.” (1 ತಿಮೊಥೆಯ 6:7, 8) ಹೀಬ್ರು ಶಾಸ್ತ್ರವು ಅದನ್ನು ಹೆಚ್ಚು ನೇರವಾಗಿ ನುಡಿದುಬಿಟ್ಟಿದೆ: “ತಾಯಿಯ ಗರ್ಭದಿಂದ ಹೇಗೆ ಬಂದನೋ ಹಾಗೆಯೇ ಏನೂ ಇಲ್ಲದವನಾಗಿ ಗತಿಸಿಹೋಗುವನು; ಅವನು ಪ್ರಯಾಸಪಟ್ಟದ್ದಕ್ಕೆಲ್ಲಾ ತನ್ನ ಕೈಯಲ್ಲಿ ಏನೂ ತೆಗೆದುಕೊಂಡು ಹೋಗನು. ಬಂದಂತೆಯೇ ಗತಿಸುವನು.”—ಪ್ರಸಂಗಿ 5:15.
[ಪುಟ 9 ರಲ್ಲಿರುವ ಚಿತ್ರ ಕೃಪೆ]
NASA photo