ನಿಮ್ಮ ಟೆಲಿಫೋನ್ ಶಿಷ್ಟಾಚಾರಗಳು ಹೇಗಿವೆ?
“ವಿನಯಪೂರ್ವಕವಾದ ಸಂಭಾಷಣೆಗಳಲ್ಲಿನ ವಿನಿಮಯದಂತೆ, ಕುಟುಂಬ ವಾತ್ಸಲ್ಯ, ಆರೋಗ್ಯ, ಮತ್ತು ದುಡಿಮೆಯ ಪ್ರೀತಿಯೊಂದಿಗೆ, ನಮ್ಮ ಸ್ವಾಭಿಮಾನವನ್ನು ಪುನರುಜ್ಜೀವಿಸುತ್ತಾ ಹಾಗೂ ಹೆಚ್ಚಿಸುತ್ತಾ, ಜೀವನದ ಸುಖಾನುಭವಕ್ಕೆ ಸಹಾಯ ಮಾಡುವ ಇನ್ನಾವ ವಿಷಯವಾದರೂ ಇದೆಯೆ?”
ಆ ಪ್ರಶ್ನೆಯನ್ನು ಕೇಳುವುದರಲ್ಲಿ, ಮಾಜಿ ಅಮೆರಿಕನ್ ಬರಹಗಾರ್ತಿಯೂ ಶಿಕ್ಷಕಿಯೂ ಆದ ಲೂಸಿ ಎಲಿಯಟ್ ಕೀಲರ್, ಮೌಖಿಕ ಸಂವಾದದ ಪರಸ್ಪರ ವಿನಿಮಯದಿಂದ—ಅವನ ಸೃಷ್ಟಿಯ ಸಮಯದಲ್ಲಿ ಮನುಷ್ಯನಿಗೆ ಪ್ರೀತಿಪೂರ್ಣವಾಗಿ ಕೊಡಲ್ಪಟ್ಟಿದ್ದ ಸಾಮರ್ಥ್ಯದಿಂದ—ಪಡೆದುಕೊಳ್ಳಸಾಧ್ಯವಿರುವ ವೈಯಕ್ತಿಕ ಸಂತೋಷ ಮತ್ತು ಸಾಧನೆಯ ಮೇಲೆ ಅಧಿಕ ಮೌಲ್ಯವನ್ನು ಹಾಕುತ್ತಿದ್ದರು.—ವಿಮೋಚನಕಾಂಡ 4:11, 12.
ಕಳೆದ 12 ದಶಕಗಳಿಗಿಂತಲೂ ಹೆಚ್ಚಿನ ಸಮಯದಿಂದ, ಮಾನವರ ಮಾತಿನ ಪ್ರವಹಿಸುವಿಕೆಯಲ್ಲಿನ ಹೆಚ್ಚಳಕ್ಕೆ ಮಹತ್ತರವಾಗಿ ನೆರವನ್ನೀಯುತ್ತಿರುವುದು, ಅಲೆಕ್ಸಾಂಡರ್ ಗ್ರಾಹಾಮ್ ಬೆಲ್ರ ಟೆಲಿಫೋನ್ನ ಕಂಡುಹಿಡಿತವಾಗಿದೆ. ಇಂದು, ಭೂಮಿಯ ನೂರಾರು ಕೋಟಿಗಳಷ್ಟು ನಿವಾಸಿಗಳಿಗೆ, ಟೆಲಿಫೋನ್—ವ್ಯಾಪಾರಕ್ಕಾಗಿ ಉಪಯೋಗಿಸಲ್ಪಡಲಿ ಸುಖಾನುಭವಕ್ಕಾಗಿ ಉಪಯೋಗಿಸಲ್ಪಡಲಿ—ಮಾನವರ ನಡುವೆ ಒಂದು ಅತ್ಯಾವಶ್ಯಕವಾದ ಸಂಬಂಧವನ್ನು ಒದಗಿಸುತ್ತದೆ.
ಟೆಲಿಫೋನ್ ಮತ್ತು ನೀವು
ಟೆಲಿಫೋನಿನ ಉಪಯೋಗವು ಎಷ್ಟರ ಮಟ್ಟಿಗೆ ನಿಮ್ಮ ಜೀವಿತದ ಗುಣಮಟ್ಟವನ್ನು ವರ್ಧಿಸುತ್ತದೆ? ಆ ಪ್ರಶ್ನೆಗೆ ನೀವು ಕೊಡುವ ಉತ್ತರವು, ಸ್ವತಃ ಉಪಕರಣಕ್ಕಿಂತಲೂ ಹೆಚ್ಚಾಗಿ ಅದರಲ್ಲಿ ಒಳಗೂಡಿರುವ ಜನರ ಮೇಲೆ ಆಧಾರಿಸಿದೆ ಎಂಬುದನ್ನು ನೀವು ಸಮ್ಮತಿಸುವುದಿಲ್ಲವೊ? ನಿಜವಾಗಿಯೂ, ನಿಮ್ಮ ಟೆಲಿಫೋನ್ ಶಿಷ್ಟಾಚಾರಗಳು ಹೇಗಿವೆ? ಎಂಬ ಪ್ರಶ್ನೆಯನ್ನು ನಾವು ಕೇಳುವುದು ಸಮಯೋಚಿತವಾದದ್ದಾಗಿದೆ.
ಟೆಲಿಫೋನ್ ಶಿಷ್ಟಾಚಾರಗಳು, ಮಾನಸಿಕ ಮನೋಭಾವ, ಮಾತಿನ ಗುಣಮಟ್ಟ, ಹಾಗೂ ಕಿವಿಗೊಡುವ ಸಾಮರ್ಥ್ಯಗಳಂತಹ ಕ್ಷೇತ್ರಗಳನ್ನು ಆವರಿಸುತ್ತವೆ. ಒಂದು ಟೆಲಿಫೋನನ್ನು ಉಪಯೋಗಿಸುವ ವಿಷಯ ಹಾಗೂ ಅನಿಷ್ಟಕರವಾದ ಕರೆಗಳೊಂದಿಗೆ ವ್ಯವಹರಿಸುವ ವಿಧಾನಗಳು ಸಹ ಸುಸಂಗತವಾಗಿರುವವು.
ಇತರರ ಕುರಿತಾಗಿ ಆಲೋಚನಾಶೀಲ ಪರಿಗಣನೆ
ಎಲ್ಲಾ ಮಾನವ ಪರಸ್ಪರ ವಿನಿಮಯಯದಲ್ಲಿ ಸತ್ಯವಾಗಿರುವಂತೆ, ಒಳ್ಳೆಯ ಟೆಲಿಫೋನ್ ಶಿಷ್ಟಾಚಾರಗಳು ಸಹಾನುಭೂತಿಯಿಂದ ಹೊರಬರುತ್ತವೆ. ಅಪೊಸ್ತಲ ಪೌಲನು ಬರೆದುದು: “ನಿಮ್ಮ ಸ್ವಂತ ಆಸಕ್ತಿಯನ್ನು ಮಾತ್ರವಲ್ಲ, ಪ್ರತಿಯೊಬ್ಬರ ಆಸಕ್ತಿಯನ್ನು ಅವಲೋಕಿಸಿರಿ.”—ಫಿಲಿಪ್ಪಿ 2:4, ದ ನ್ಯೂ ಇಂಗ್ಲಿಷ್ ಬೈಬಲ್.
“ಯಾವುದನ್ನು ನೀವು ನ್ಯೂನ ಟೆಲಿಫೋನ್ ಶಿಷ್ಟಾಚಾರಗಳ ಅತ್ಯಂತ ಸಾಮಾನ್ಯ ಉದಾಹರಣೆಗಳಾಗಿ ಕಂಡುಕೊಂಡಿದ್ದೀರಿ?” ಎಂಬ ಪ್ರಶ್ನೆಯನ್ನು ಕೇಳಿದಾಗ, ತನ್ನ ಪಟ್ಟಿಯಲ್ಲಿ ಮೊತ್ತಮೊದಲಾಗಿರುವ ವಿಷಯವು, “‘ನಾನು ಮೇರಿ’ (ನಿಮಗೆ ಎಷ್ಟು ಜನ ಮೇರಿಯರು ಗೊತ್ತಿದ್ದಾರೆ?) ಅಥವಾ ಇನ್ನೂ ಹೆಚ್ಚು ವಿಪರೀತವೆಂದರೆ, ‘ನಾನು,’ ಅಥವಾ ‘ಯಾರೆಂದು ಊಹಿಸಿ’ ಎಂದು ಹೇಳುತ್ತಾ ಫೋನ್ಮಾಡುವವರು,” ಎಂದು ಅನುಭವಸ್ಥಳಾದ ಒಬ್ಬ ಟೆಲಿಫೋನ್ ಸ್ವಿಚ್ಬೋರ್ಡ್ ಆಪರೇಟರ್ ಉತ್ತರಿಸಿದಳು. ಇಂತಹ ಆಲೋಚನೆರಹಿತವಾದ, ಬಹುಶಃ ಸದ್ಭಾವನೆಯ ಪ್ರಸ್ತಾವನೆಗಳು, ಪೇಚಾಟವನ್ನೂ ಅಸಹನೆಯನ್ನೂ ಉಂಟುಮಾಡಬಲ್ಲವು. ಆ ಆಪರೇಟರ್ ಮುಂದುವರಿಸಿದ್ದು: “ಸ್ವತಃ ನಿಮ್ಮನ್ನು ಸ್ಪಷ್ಟವಾಗಿ ಪರಿಚಯಿಸಿಕೊಳ್ಳುವ ಮೂಲಕ ಮತ್ತು ಇದಕ್ಕೆ ಕೂಡಿಸಿ, ಯಾರಿಗೆ ಫೋನ್ಮಾಡುತ್ತೀರೋ ಅವನ ಪರಿಗಣನಾರ್ಥವಾಗಿ, ಇದು ಮಾತಾಡಲು ಅನುಕೂಲಕರವಾದ ಸಮಯವಾಗಿದೆಯೋ ಎಂಬುದನ್ನು ಕೇಳುತ್ತಾ, ಕರೆಯನ್ನು ಸಂತೋಷವಾಗಿ ಆರಂಭಿಸುವುದು ಉತ್ತಮವಾಗಿರುವುದಿಲ್ಲವೊ?”
ನಿಮ್ಮ ಮುಖಭಾವವನ್ನು ನೋಡಸಾಧ್ಯವಿರುವುದಿಲ್ಲವಾದರೂ, ನಿಮ್ಮ ಮನೋಭಾವವು ಸುವ್ಯಕ್ತವಾಗಿರುವುದು ಎಂಬುದನ್ನು ಜ್ಞಾಪಕದಲ್ಲಿಡಿರಿ. ಅದು ಹೇಗೆ? ನಿಮ್ಮ ಧ್ವನಿಯ ಸ್ವರದ ಮೂಲಕವೇ. ಅಸಹನೆ, ಬೇಸರ, ಕೋಪ, ತಾತ್ಸಾರ, ಪ್ರಾಮಾಣಿಕತೆ, ಪ್ರಸನ್ನತೆ, ಸಹಾಯಪೂರ್ಣತೆ, ಹಾಗೂ ಹೃತ್ಪೂರ್ವಕತೆ—ಇವೆಲ್ಲವೂ ಪ್ರಕಟಿಸಲ್ಪಡುತ್ತವೆ. ಒಬ್ಬನು ಟೆಲಿಫೋನ್ ಕರೆಯೊಂದರಿಂದ ಅಡ್ಡಯಿಸಲ್ಪಡುವಾಗ, ಸಿಟ್ಟುಗೊಳ್ಳುವುದು ಒಂದು ಸ್ವಾಭಾವಿಕ ಪ್ರತಿಕ್ರಿಯೆಯಾಗಿರಸಾಧ್ಯವಿದೆ ನಿಜ. ಒಳ್ಳೆಯ ಶಿಷ್ಟಾಚಾರಗಳ ಅಭಿರುಚಿಯಲ್ಲಿ, ಈ ಸನ್ನಿವೇಶದಲ್ಲಿ ಉತ್ತರಿಸುವುದಕ್ಕೆ ಮೊದಲು ಸ್ವಲ್ಪ ನಿಂತು, ನಿಮ್ಮ ಧ್ವನಿಯೊಳಗೆ “ನಸುನಗು”ವನ್ನು ಸೇರಿಸಲು ಪ್ರಯತ್ನಿಸಿರಿ. ಅಸಮ್ಮತಿಯ ಸ್ವರವನ್ನು ಉಪಯೋಗಿಸದೆ, ಅಸಮ್ಮತಿಯನ್ನು ಸೂಚಿಸಲು ಸಾಧ್ಯವಿದೆ.
ಆಲೋಚನಾಶೀಲ ಪರಿಗಣನೆ ಹಾಗೂ ಧ್ವನಿಯ ಇಂಪಾದ ಸ್ವರದ ಒಂದು ಸಂಯೋಜನೆಯು, “ಭಕ್ತಿಯನ್ನು ವೃದ್ಧಿಮಾಡುವಂಥ ಕಾಲೋಚಿತವಾದ” ಹಾಗೂ “ಕೇಳುವವರ ಹಿತಕ್ಕಾಗಿ” ಕೊಡಲ್ಪಡುವ ಹೇಳಿಕೆಗಳಲ್ಲಿ ಫಲಿಸಸಾಧ್ಯವಿದೆ.—ಎಫೆಸ 4:29.
ಮಾತಿನ ಗುಣಮಟ್ಟ
ಹೌದು, ನಾವು ಉಪಯೋಗಿಸುವ ಮಾತಿನ ವಿಧವು ಪ್ರಾಮುಖ್ಯವಾಗಿದೆ. ನೀವು ಈ ಕೆಳಗಿನ ನಿಯಮಗಳೊಂದಿಗೆ ಸಮ್ಮತಿಸಿ, ಅವುಗಳನ್ನು ರೂಢಿಯಲ್ಲಿ ಹಾಕುತ್ತೀರೊ? ಸಹಜವಾಗಿ, ಸ್ಪಷ್ಟವಾಗಿ, ಮತ್ತು ವಿಶದವಾಗಿ ಮಾತಾಡಿರಿ. ಅಸ್ಪಷ್ಟವಾಗಿ ಗೊಣಗಬೇಡಿರಿ. ಬಹು ದೂರದ ಕರೆಯನ್ನು ಮಾಡುವಾಗಲೂ ಕಿರಿಚಬೇಡಿರಿ. ನಿಮ್ಮ ಮಾತುಗಳನ್ನು ಅಸ್ಪಷ್ಟವಾಗಿ ಉಚ್ಚರಿಸಬೇಡಿರಿ. ಉಚ್ಚಾರಾಂಶಗಳನ್ನು ಮೊಟಕುಗೊಳಿಸುವ ಅಥವಾ ಹಾರಿಸಿಬಿಡುವ ಎಚ್ಚರಗೇಡಿ ಮಾತನ್ನು ದೂರಮಾಡಿರಿ; ಹಾಗೂ “ಪದದೆಳೆತ” ಮತ್ತು ವಕ್ರತೆಗಳನ್ನು ತೊರೆಯಿರಿ; ಇವು ಸ್ಥೈರ್ಯಗೆಡಿಸುವಂತವುಗಳಾಗಿದ್ದು, ಸಿಟ್ಟನ್ನುಂಟುಮಾಡಸಾಧ್ಯವಿದೆ. ಮಂಕಾದ ಏಕ ಶೈಲಿಯಸ್ವರದ ಉಪಯೋಗವನ್ನು ತೊರೆಯಿರಿ. ಸರಿಯಾದ ಅರ್ಥ ಒತ್ತು ಹಾಗೂ ಸ್ವರಬದಲಾವಣೆಗಳು, ಮಾತನ್ನು ಅರ್ಥಭರಿತವೂ, ರಂಜಕವೂ, ಚೈತನ್ಯದಾಯಕವೂ ಆದದ್ದಾಗಿ ಮಾಡುತ್ತವೆ. ಟೆಲಿಫೋನ್ ಸಂಭಾಷಣೆಯೊಂದರಲ್ಲಿ ಒಳಗೂಡಿರುವಾಗ ತಿನ್ನುವುದು, ಮಾತಿನ ಗುಣಮಟ್ಟವನ್ನು ವರ್ಧಿಸುವುದಿಲ್ಲ ಅಥವಾ ಒಳ್ಳೆಯ ಶಿಷ್ಟಾಚಾರಗಳನ್ನು ಪ್ರತಿಫಲಿಸುವುದಿಲ್ಲ ಎಂಬುದನ್ನೂ ಮನಸ್ಸಿನಲ್ಲಿಡಿರಿ.
ಶಬ್ದದ ಆಯ್ಕೆಯು ಸಹ ಪರಿಗಣನೆಗೆ ಅರ್ಹವಾಗಿದೆ. ವಿವೇಚನಾಶಕ್ತಿಯ ಅಗತ್ಯವಿದೆ. ಸುಲಭವಾಗಿ ಅರ್ಥಮಾಡಿಕೊಳ್ಳಸಾಧ್ಯವಿರುವ ಸ್ಫುಟವಾದ, ಸರಳ ಶಬ್ದಗಳನ್ನು ಉಪಯೋಗಿಸಿರಿ. ಶಬ್ದಗಳಿಗೆ ಅಧಿಕಾರ್ಥತೆಯಿದೆ. ಅವು ವಿನಯಪೂರ್ವಕ ಅಥವಾ ಕ್ರೂರ, ಸಂತೈಸುವಂತಹವುಗಳು ಅಥವಾ ಕಟು, ಉತ್ತೇಜನದಾಯಕ ಅಥವಾ ಎದೆಗುಂದಿಸುವಂತಹವುಗಳು ಆಗಿರಸಾಧ್ಯವಿದೆ. ಇದಲ್ಲದೆ, ಒಬ್ಬ ವ್ಯಕ್ತಿಯು ಮನಸ್ಸನ್ನು ನೋಯಿಸುವವನಾಗಿರದೆ ಬುದ್ಧಿವಂತನೂ, ಮೊಂಡ ಅಥವಾ ನಯವಿಲ್ಲದವನಾಗಿರದೆ ನಿಷ್ಕಪಟನೂ, ನುಣುಚಿಕೊಳ್ಳುವವನಾಗಿರದೆ ಚತುರನೂ ಆಗಿರಸಾಧ್ಯವಿದೆ. “ದಯವಿಟ್ಟು” ಮತ್ತು “ನಿಮಗೆ ಉಪಕಾರ” ಎಂಬಂತಹ ಸಭ್ಯ ಅಭಿವ್ಯಕ್ತಿಗಳು ಯಾವಾಗಲೂ ಸ್ವಾಗತಾರ್ಹವಾಗಿವೆ. ವಿನಯಪೂರ್ವಕವಾದ, ದಾಕ್ಷಿಣ್ಯಪರ, ಹಾಗೂ ಸುಸಂಸ್ಕೃತ ಶಬ್ದಗಳು, ಅಪೊಸ್ತಲ ಪೌಲನು ಹೀಗೆ ಬರೆದಾಗ ಅವನ ಮನಸ್ಸಿನಲ್ಲಿದ್ದ ವಿಷಯಗಳಾಗಿದ್ದವು: “ನಿಮ್ಮ ಸಂಭಾಷಣೆ ಯಾವಾಗಲೂ ಇಂಪಾಗಿಯೂ ರಸವತ್ತಾಗಿಯೂ ಇರಲಿ; ಹೀಗೆ ನೀವು ಯಾರಾರಿಗೆ ಯಾವಾವ ರೀತಿಯಲ್ಲಿ ಉತ್ತರಹೇಳಬೇಕೋ ಅದನ್ನು ತಿಳುಕೊಳ್ಳುವಿರಿ.”—ಕೊಲೊಸ್ಸೆ 4:6.
ಒಬ್ಬ ಒಳ್ಳೆಯ ಆಲಿಸುವ ವ್ಯಕ್ತಿಯಾಗಿರಿ
ಒಬ್ಬ ಒಳ್ಳೆಯ ಸಂಭಾಷಣೆಗಾರನಾಗಿರುವುದರ ಗುಟ್ಟನ್ನು ಹೇಳುವಂತೆ ತನ್ನ ತಂದೆಯ ಬಳಿ ಕೇಳಿದ ಒಬ್ಬ ಯುವಕನ ಕುರಿತಾದ ಒಂದು ಕಥೆಯಿದೆ. “ನನ್ನ ಮಗನೇ, ಆಲಿಸು” ಎಂಬುದು ಉತ್ತರವಾಗಿತ್ತು. “ನಾನು ಆಲಿಸುತ್ತಿದ್ದೇನೆ” ಎಂದು ಯುವಕನು ಹೇಳಿದನು. “ಇನ್ನೂ ಹೆಚ್ಚು ವಿಷಯವನ್ನು ಹೇಳು.” “ಹೇಳಲು ಇನ್ನು ಹೆಚ್ಚಿನ ಯಾವ ವಿಷಯವೂ ಇಲ್ಲ” ಎಂದು ತಂದೆಯು ಪ್ರತ್ಯುತ್ತರಿಸಿದನು. ವಾಸ್ತವವಾಗಿ, ಆಸಕ್ತನಾದ, ಸಹಾನುಭೂತಿಯುಳ್ಳ ಆಲಿಸುವ ವ್ಯಕ್ತಿಯಾಗಿರುವುದು, ಒಳ್ಳೆಯ ಟೆಲಿಫೋನ್ ಶಿಷ್ಟಾಚಾರಗಳಿಗಾಗಿರುವ ಯೋಜನೆಯಲ್ಲಿನ ಅತ್ಯಾವಶ್ಯಕವಾದ ಒಂದು ಘಟಕಾಂಶವಾಗಿದೆ.
ಒಂದು ಸರಳವಾದ ನಿಯಮವನ್ನು ರೂಢಿಯಲ್ಲಿ ಹಾಕುವುದರ ವೈಫಲ್ಯವು, ನೀವು ಟೆಲಿಫೋನ್ ಬೇಸರಿಗರಾಗಿ ವೀಕ್ಷಿಸಲ್ಪಡುವುದರಲ್ಲಿ ಫಲಿಸಬಲ್ಲದು. ಅದೇನಾಗಿದೆ? ನಿಮ್ಮ ಸಂಭಾಷಣೆಯನ್ನು ಏಕಸ್ವಾಧೀನವನ್ನಾಗಿ ಮಾಡಬೇಡಿರಿ. ಉದಾಹರಣೆಗಾಗಿ, ನೀವು ಒಳಗೂಡಿದ್ದಂತಹ ಕ್ಷುಲ್ಲಕವಾದ ಯಾವುದೋ ಸಂಭಾಷಣೆಯ ಕೊನೆಯಿಲ್ಲದ, ಶಾಬ್ದಿಕ ವೃತ್ತಾಂತದಲ್ಲಿ ಅಥವಾ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳ ಕುರಿತಾದ ದೀರ್ಘವಾಗಿ ಹೊಸೆದ ವೈಯಕ್ತಿಕ ಇತಿಹಾಸವನ್ನು ಬಣ್ಣಿಸುವುದರಲ್ಲಿ ಮಗ್ನರಾಗಬೇಡಿರಿ. ಪುನಃ ಒಮ್ಮೆ, ನಮಗೆ ಒಂದು ಅನ್ವಯಯೋಗ್ಯವಾದ, ಸಂಕ್ಷಿಪ್ತ ಬೈಬಲ್ ನಿಯಮವು—ಈ ಬಾರಿ ಶಿಷ್ಯನಾದ ಯಾಕೋಬನಿಂದ—ಕೊಡಲ್ಪಟ್ಟಿದೆ. “ಕಿವಿಗೊಡುವದರಲ್ಲಿ ತೀವ್ರವಾಗಿಯೂ ಮಾತಾಡುವದರಲ್ಲಿ ನಿಧಾನವಾಗಿಯೂ” ಇರಿ.—ಯಾಕೋಬ 1:19.
ಮುಕ್ತಾಯದ ಪರಿಗಣನೆಗಳು
ಟೆಲಿಫೋನ್ ಶಿಷ್ಟಾಚಾರಗಳ ಪೂರ್ವಾಪರ ಸಂದರ್ಭದೊಳಗೆ ಬರುವ ಎರಡು ಅಂತಿಮ ಪ್ರಶ್ನೆಗಳನ್ನು ನಾವು ಈಗ ಸಂಬೋಧಿಸೋಣ. ಟೆಲಿಫೋನ್ ಉಪಯೋಗದ ಕೌಶಲಗಳ ಕುರಿತಾಗಿ ಏನು ಹೇಳಸಾಧ್ಯವಿದೆ? ಸ್ವಾಗತಾರ್ಹವಲ್ಲದ ಕರೆಗಳನ್ನು ನಿರ್ವಹಿಸುವುದರಲ್ಲಿ ಕೆಲವು ಸೂಚಿತ ಮಾರ್ಗದರ್ಶನಗಳಿವೆಯೊ?
ಟೆಲಿಫೋನಿನಲ್ಲಿ ಮಾತಾಡುತ್ತಿರುವಾಗ, ಲೈನಿನ ಇನ್ನೊಂದು ಕೊನೆಯ ಧ್ವನಿಯು ಬಹು ದೂರದಲ್ಲಿ ತಡೆತಡೆಯಾಗಿ ಕೇಳದೆಹೋಗುವ ಸ್ಥಿತಿಗೆ ಇಳಿಯುವುದನ್ನು ನೀವೆಂದಾದರೂ ಕಂಡುಕೊಂಡಿದ್ದೀರೊ? ಇದು ನಿಮಗೆ, ಮೌತ್ಪೀಸನ್ನು ನಿಮ್ಮ ತುಟಿಗಳಿಂದ ಸುಮಾರು ಎರಡು ಸೆಂಟಿಮೀಟರ್ಗಳಷ್ಟು ದೂರದಲ್ಲಿಟ್ಟುಕೊಂಡು, ಅದರೊಳಗೆ ಮಾತಾಡುವುದನ್ನು ಜ್ಞಾಪಿಸಬೇಕು. ಇದಕ್ಕೆ ಕೂಡಿಸಿ, ಹಿನ್ನೆಲೆ ಶಬ್ದವನ್ನು ನಿಯಂತ್ರಿಸುವುದು ದಯಾಪರವಾದದ್ದಾಗಿದೆ. ನೀವು ಒಂದು ಕರೆಯನ್ನು ಮಾಡುವಾಗ, ರಾಂಗ್ ನಂಬರ್ ಅನ್ನು ಡಯಲ್ಮಾಡುವುದನ್ನು ತೊರೆಯಲಿಕ್ಕಾಗಿ, ಜಾಗರೂಕತೆಯಿಂದ ಡಯಲ್ಮಾಡಿರಿ; ಮತ್ತು ನೀವು ನಿಮ್ಮ ಕರೆಯನ್ನು ಮುಗಿಸಿದಾಗ, ರಿಸೀವರನ್ನು ಅದರ ಕ್ರೇಡ್ಲ್ನಲ್ಲಿ ನಿಧಾನವಾಗಿ ಇಡಿರಿ.
ನೀವು ಅನಿಷ್ಟಕರವಾದ ಕರೆಗಳಿಗೆ ಎಂದಾದರೂ ಬಲಿಯಾಗಿದ್ದೀರೊ? ವಿಷಾದಕರವಾಗಿ, ಅಂತಹ ಕರೆಗಳು ಹೆಚ್ಚುತ್ತಿರುವಂತೆ ತೋರುತ್ತದೆ. ಅಸಭ್ಯ, ಧ್ವನ್ಯಾತ್ಮಕ, ಅಥವಾ ಅಶ್ಲೀಲ ಭಾಷೆಯು ಒಂದೇ ಒಂದು ಉತ್ತರಕ್ಕೆ ಅರ್ಹವಾಗಿದೆ—ಆ ಕರೆಯನ್ನು ಕೊನೆಗೊಳಿಸುವುದೇ. (ಹೋಲಿಸಿ ಎಫೆಸ 5:3, 4.) ಕರೆಮಾಡುವವನೊಬ್ಬನು ತನ್ನನ್ನು ಪರಿಚಯಿಸಿಕೊಳ್ಳಲು ನಿರಾಕರಿಸುವಾಗಲೂ ಇದು ನಿಜವಾಗಿರುವುದು. ಒಂದು ಕರೆಯ ಕುರಿತಾಗಿ ಸಂದೇಹಿಸಲು ನಿಮಗೆ ಕಾರಣವಿರಬೇಕಾದಲ್ಲಿ, ಹೌ ಟು ರೈಟ್ ಆ್ಯಂಡ್ ಸ್ಪೀಕ್ ಬೆಟರ್ ಎಂಬ ಪ್ರಕಾಶನವು ಶಿಫಾರಸ್ಸುಮಾಡುವುದೇನಂದರೆ, “‘ಯಾರು ಮಾತಾಡುತ್ತಿರುವುದು?’ ಎಂದು ಅಪರಿಚಿತ ಧ್ವನಿಯೊಂದು ಕೇಳುವುದಾದರೆ, ಉತ್ತರಿಸಬೇಡಿರಿ” ಹಾಗೂ ನಿಮ್ಮ ಯೋಜನೆಗಳನ್ನು ಒಬ್ಬ ಅಪರಿಚಿತನೊಂದಿಗೆ ಚರ್ಚಿಸಬೇಡಿರಿ.
ಅಂತಿಮ ವಿಶ್ಲೇಷಣೆಯಲ್ಲಿ, ಒಳ್ಳೆಯ ಟೆಲಿಫೋನ್ ಶಿಷ್ಟಾಚಾರಗಳ ಅಭ್ಯಾಸಿಸುವಿಕೆಯು, ನಿಯಮಗಳು ಅಥವಾ ನಿಬಂಧನೆಗಳ ಉದ್ದವಾದ ಪಟ್ಟಿಯನ್ನು ಅಗತ್ಯಪಡಿಸುವುದಿಲ್ಲ ಎಂಬುದನ್ನು ತಿಳಿದಿರುವುದು ಎಷ್ಟು ಒಳಿತಾಗಿದೆ! ಜನರ ನಡುವಿನ ಎಲ್ಲಾ ವ್ಯವಹಾರಗಳಲ್ಲಿ, ಯಾವುದು ಸರ್ವಸಾಮಾನ್ಯವಾಗಿ ಸುವರ್ಣ ನಿಯಮವೆಂದು ಕರೆಯಲ್ಪಡುತ್ತದೋ ಅದರ ಅನ್ವಯದಿಂದ ಹಿತಕರವಾದ ಹಾಗೂ ಪ್ರತಿಫಲದಾಯಕವಾದ ಸಂಬಂಧಗಳು ಬರುತ್ತವೆ. ಯೇಸು ಕ್ರಿಸ್ತನು ಹೇಳಿದ್ದು; “ಅಂತು ಜನರು ನಿಮಗೆ ಏನೇನು ಮಾಡಬೇಕೆಂದು ಅಪೇಕ್ಷಿಸುತ್ತೀರೋ ಅದನ್ನೇ ನೀವು ಅವರಿಗೆ ಮಾಡಿರಿ.” (ಮತ್ತಾಯ 7:12) ಕ್ರೈಸ್ತನಿಗಾದರೋ, ಮಾನವನಿಗೆ ಮಾತಿನ ವರದಾನವನ್ನು ಕೊಟ್ಟ ಒಬ್ಬಾತನನ್ನು ಮೆಚ್ಚಿಸುವಂತಹ ಬಯಕೆಯೂ ಇದೆ. ಕೀರ್ತನೆಗಾರನು ಪ್ರಾರ್ಥಿಸಿದ್ದು: “ಯೆಹೋವನೇ, ನನ್ನ ಶರಣನೇ, ನನ್ನ ವಿಮೋಚಕನೇ, ನನ್ನ ಮಾತುಗಳೂ ನನ್ನ ಹೃದಯದ ಧ್ಯಾನವೂ ನಿನಗೆ ಸಮರ್ಪಕವಾಗಿರಲಿ.”—ಕೀರ್ತನೆ 19:14.