ಲೈಮ್ ರೋಗ ನೀವು ಅಪಾಯದಲ್ಲಿದ್ದೀರೊ?
ಏಯ್ಡ್ಸ್ ತುಂಬ ಪ್ರಚಾರವನ್ನು ಪಡೆಯುತ್ತಿರುವಾಗ, ಲೈಮ್ ರೋಗವು ಪ್ರಸ್ತಾಪಿಸಲ್ಪಡುತ್ತಿರುವುದೇ ವಿರಳ. ಆದರೂ, ಲೈಮ್ ರೋಗವು ಕ್ಷಿಪ್ರವಾಗಿ ಹರಡುತ್ತಿದೆ. ವಾಸ್ತವದಲ್ಲಿ, ಕೆಲವು ವರ್ಷಗಳ ಹಿಂದೆ, ದ ನ್ಯೂ ಯಾರ್ಕ್ ಟೈಮ್ಸ್ ಮ್ಯಾಗಸೀನ್ ಅದನ್ನು “ಏಯ್ಡ್ಸ್ನ ನಂತರ [ಅಮೆರಿಕ]ದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಸೋಂಕುಭರಿತ ರೋಗ” ಎಂದು ಕರೆಯಿತು. ಇತರ ದೇಶಗಳಿಂದ ಬಂದ ವರದಿಗಳು ತೋರಿಸುವುದೇನಂದರೆ, ಈ ರೋಗವು ಏಷಿಯ, ಯೂರೋಪ್ ಮತ್ತು ದಕ್ಷಿಣ ಅಮೆರಿಕದಲ್ಲಿಯೂ ಹರಡುತ್ತಿದೆ.
ಲೈಮ್ ರೋಗ ಏನಾಗಿದೆ? ಅದು ಹೇಗೆ ಹರಡುತ್ತಿದೆ? ನೀವು ಅಪಾಯದಲ್ಲಿದ್ದೀರೊ?
ಉಣ್ಣಿಹುಳುಗಳು, ಜಿಂಕೆ ಮತ್ತು ನೀವು
ಸುಮಾರು 20 ವರ್ಷಗಳ ಹಿಂದೆ, ಅಮೆರಿಕದ ಈಶಾನ್ಯ ಭಾಗದಲ್ಲಿರುವ, ಕಾನೆಕ್ಟಿಕಟ್ನ ಲೈಮ್ ಪಟ್ಟಣದಲ್ಲಿ ಮತ್ತು ಸುತ್ತುಮುತ್ತಲಲ್ಲಿ ಸಂಧಿವಾತ ರೋಗಗಳಲ್ಲಿ ಒಂದು ರಹಸ್ಯಭರಿತ ವೃದ್ಧಿಯು ಸಂಭವಿಸಿತು. ಬಲಿಗಳು ಹೆಚ್ಚಾಗಿ ಮಕ್ಕಳಾಗಿದ್ದರು. ಅವರ ಸಂಧಿವಾತವು ಗುಳ್ಳೆಗಳು, ತಲೆನೋವುಗಳು ಮತ್ತು ಅವರ ಅಸ್ಥಿಸಂಧಿಗಳಲ್ಲಿ ನೋವುಗಳೊಂದಿಗೆ ಆರಂಭಿಸಿತು. ಬೇಗನೆ ತನ್ನ “ಗಂಡನು ಮತ್ತು ಮಕ್ಕಳಲ್ಲಿ ಇಬ್ಬರು ಊರುಗೋಲುಗಳನ್ನು ಉಪಯೋಗಿಸುತ್ತಿದ್ದರು” ಎಂದು ಒಬ್ಬ ನಿವಾಸಿಯು ಹೇಳಿಕೆಯನ್ನಿತ್ತಳು. ಬಲು ಬೇಗನೆ, ಆ ಕ್ಷೇತ್ರದಲ್ಲಿ 50ಕ್ಕಿಂತಲೂ ಹೆಚ್ಚು ಜನರು ಬಾಧಿತರಾಗಿದ್ದರು, ಮತ್ತು ವರ್ಷಗಳೊಳಗೆ, ಸಾವಿರಾರು ಮಂದಿ ಅದೇ ವೇದನಾಭರಿತ ರೋಗಲಕ್ಷಣಗಳಿಂದ ನರಳುತ್ತಿದ್ದರು.
ಈ ಅಸ್ವಸ್ಥತೆಯು ಇತರ ರೋಗಗಳಿಂದ ಭಿನ್ನವಾಗಿರುವುದನ್ನು ಗ್ರಹಿಸುತ್ತಾ, ಸಂಶೋಧಕರು ಅದನ್ನು ಲೈಮ್ ರೋಗವೆಂದು ಹೆಸರಿಸಿದರು. ಅದರ ಕಾರಣ? ಬೊರೆಲ್ಯಾ ಬರ್ಗ್ಡಾರ್ಗ್ಫೆರಿ—ಉಣ್ಣಿಹುಳುಗಳಲ್ಲಿ ಜೀವಿಸುತ್ತಿರುವ ಬಿರಡೆತಿರುಪಿನಂಥ ಒಂದು ಏಕಾಣುಜೀವಿ. ಅದು ಹೇಗೆ ಹರಡಿಸಲ್ಪಡುತ್ತದೆ? ಕಾಡಿನಲ್ಲಿ ಸುತ್ತಾಡುತ್ತಿರುವ ಒಬ್ಬ ವ್ಯಕ್ತಿಗೆ ಒಂದು ಸೋಂಕಿತ ಉಣ್ಣಿಹುಳು ತಾನೇ ಅಂಟಿಕೊಳ್ಳಬಹುದು. ಆ ಉಣ್ಣಿಹುಳು ಆ ವ್ಯಕ್ತಿಯ ಚರ್ಮವನ್ನು ಚುಚ್ಚಿ ರೋಗವನ್ನುಂಟುಮಾಡುವ ಏಕಾಣುಜೀವಿಯನ್ನು ಆ ನಿರ್ಭಾಗ್ಯನಾದ ಸುತ್ತಾಡುವವನೊಳಗೆ ಸೇರಿಸುತ್ತದೆ. ಈ ಸೋಂಕಿತ ಉಣ್ಣಿಹುಳುಗಳು ಹೆಚ್ಚಾಗಿ ಜಿಂಕೆಗಳಲ್ಲಿ ಉಚಿತ ಸವಾರಿಯನ್ನು ಮಾಡುವುದರಿಂದ, ತಿನ್ನುವುದರಿಂದ ಮತ್ತು ಕೂಡುವುದರಿಂದಾಗಿ, ಮತ್ತು ಎಲ್ಲಿ ಜಿಂಕೆಗಳು ಅಭಿವೃದ್ಧಿ ಹೊಂದುತ್ತಿವೆಯೊ, ಆ ಗ್ರಾಮೀಣ ಕ್ಷೇತ್ರಗಳಲ್ಲಿ ಹೆಚ್ಚೆಚ್ಚು ಜನರು ನೆಲೆಸುತ್ತಿರುವುದರಿಂದ, ಲೈಮ್ ರೋಗದ ಸಂಭವವು ಏರುತ್ತಿರುವುದು ಆಶ್ಚರ್ಯಕರ ವಿಷಯವೇನಲ್ಲ.
ರೋಗಲಕ್ಷಣಗಳು ಮತ್ತು ಸಮಸ್ಯೆಗಳು
ಲೈಮ್ ರೋಗದ ಪ್ರಥಮ ರೋಗಲಕ್ಷಣವು ಸಾಮಾನ್ಯವಾಗಿ, ಒಂದು ಚಿಕ್ಕ ಕೆಂಪು ಚುಕ್ಕೆಯಾಗಿ ಆರಂಭಿಸುವ (ಎರಿತೇಮಾ ಮೈಗ್ರಾನ್ಸ್, ಅಥವಾ ಇಎಮ್ ಎಂದು ಜ್ಞಾತವಾದ) ಒಂದು ಚರ್ಮದ ಗುಳ್ಳೆ ಆಗಿದೆ. ಹಲವಾರು ದಿನಗಳ ಮತ್ತು ವಾರಗಳ ಒಂದು ಅವಧಿಯಲ್ಲಿ, ಆ ಸ್ವಯಂಸೂಚಕ ಚುಕ್ಕೆ, ಒಂದು ನಾಣ್ಯದ ಗಾತ್ರದ್ದಾಗಿರಬಹುದಾದ ಅಥವಾ ಒಬ್ಬನ ಬೆನ್ನಿನ ಇಡೀ ವಿಸ್ತಾರ್ಯಕ್ಕೆ ಹರಡಬಹುದಾದ ಒಂದು ವೃತ್ತಾಕಾರದ, ತ್ರಿಕೋನಾಕಾರದ ಅಥವಾ ಅಂಡಾಕಾರದ ಗುಳ್ಳೆಯಾಗಿ ವಿಸ್ತರಿಸುತ್ತದೆ. ಜ್ವರ, ತಲೆನೋವು, ಸೆಡತುಕೊಂಡಿರುವ ಕತ್ತು, ದೇಹದ ನೋವುಗಳು ಮತ್ತು ದಣಿವು, ಗುಳ್ಳೆಯೊಂದಿಗೆ ಹೆಚ್ಚಾಗಿ ಜೊತೆಗೂಡಿರುತ್ತವೆ. ತಕ್ಕ ಸಮಯದಲ್ಲಿ ಚಿಕಿತ್ಸೆ ನೀಡಲ್ಪಡದಿದ್ದಲ್ಲಿ, ಅರ್ಧಕ್ಕಿಂತಲೂ ಹೆಚ್ಚು ಬಲಿಗಳು, ಅನೇಕ ತಿಂಗಳುಗಳ ವರೆಗೆ ಬಾಳಬಹುದಾದ ವೇದನಾಭರಿತ ಮತ್ತು ಬಾತುಕೊಂಡ ಸಂಧಿಗಳ ಹಠಾತ್ತಾದ ತಗುಲಿಕೆಗಳನ್ನು ಅನುಭವಿಸುತ್ತಾರೆ. ಚಿಕಿತ್ಸೆ ನೀಡಲ್ಪಟ್ಟಿರದ ಸುಮಾರು 20 ಶೇಕಡದಷ್ಟು ರೋಗಿಗಳು ಅಸ್ಥಿಗತ ಸಂಧಿವಾತದೊಂದಿಗೆ ಕೊನೆಗಾಣುತ್ತಾರೆ. ಕಡಿಮೆ ಸಾಮಾನ್ಯವಾಗಿದ್ದರೂ, ಈ ರೋಗವು ನರ ವ್ಯವಸ್ಥೆಯನ್ನೂ ಬಾಧಿಸಬಲ್ಲದು ಮತ್ತು ಹೃದಯದ ಸಮಸ್ಯೆಗಳನ್ನು ಉಂಟುಮಾಡಬಲ್ಲದು.—ಜೊತೆಗೂಡಿರುವ ರೇಖಾಚೌಕವನ್ನು ನೋಡಿರಿ.
ಅದರ ಆರಂಭದ ಫ್ಲೂಜ್ವರದಂತಹ ಲಕ್ಷಣಗಳು ಇತರ ಸೋಂಕುಗಳಿಗೆ ತದ್ರೀತಿಯದ್ದಾಗಿರುವುದರಿಂದ ಅನೇಕ ಪರಿಣತರು ಲೈಮ್ ರೋಗವನ್ನು ಪತ್ತೆಹಚ್ಚಲು ಕಷ್ಟಕರವೆಂದು ಪರಿಗಣಿಸುತ್ತಾರೆ. ಇದಕ್ಕೆ ಕೂಡಿಸಿ, ಸೋಂಕಿತರಾದ ಪ್ರತಿ 4 ವ್ಯಕ್ತಿಗಳಲ್ಲಿ ಒಬ್ಬ ವ್ಯಕ್ತಿ ಒಂದು ಗುಳ್ಳೆಯನ್ನು—ಲೈಮ್ ರೋಗದ ಏಕಮಾತ್ರ ವಿಶಿಷ್ಟ ಲಕ್ಷಣ—ವಿಕಸಿಸುವುದಿಲ್ಲ ಮತ್ತು ಅನೇಕ ರೋಗಿಗಳು ತಾವು ಒಂದು ಉಣ್ಣಿಹುಳುವಿನಿಂದ ಕಚ್ಚಲ್ಪಟ್ಟಿದ್ದೇವೊ ಎಂಬುದನ್ನು ಜ್ಞಾಪಿಸಿಕೊಳ್ಳಲು ಶಕ್ತರಾಗಿರುವುದಿಲ್ಲ ಯಾಕಂದರೆ, ಅದರ ಕಚ್ಚುವಿಕೆಯು ಸಾಮಾನ್ಯವಾಗಿ ಬೇನೆರಹಿತವಾಗಿರುತ್ತದೆ.
ರೋಗದ ಪತ್ತೆಹಚ್ಚುವಿಕೆಯು ಇನ್ನೂ ಹೆಚ್ಚು ಅಡ್ಡಗಟ್ಟಲ್ಪಡುತ್ತದೆ ಯಾಕಂದರೆ ಸದ್ಯದಲ್ಲಿ ಲಭ್ಯವಿರುವ ಪ್ರತಿಕಾಯ ರಕ್ತ ಪರೀಕ್ಷೆಗಳು ಭರವಸಾರ್ಹವಲ್ಲದ್ದಾಗಿವೆ. ರೋಗಿಯ ರಕ್ತದಲ್ಲಿನ ಪ್ರತಿಕಾಯಗಳು, ದೇಹದ ರಕ್ಷಣಾ ವ್ಯವಸ್ಥೆಯು ದಾಳಿಕೋರರನ್ನು ಪತ್ತೆಹಚ್ಚಿದೆಯೆಂದು ಹೇಳುತ್ತವೆ, ಆದರೆ ಆ ದಾಳಿಕೋರ ಏಕಾಣುಜೀವಿಗಳು ಲೈಮ್ ರೋಗದ ಏಕಾಣುಜೀವಿಗಳಾಗಿವೆಯೊ ಎಂದು ಕೆಲವು ಪರೀಕ್ಷೆಗಳು ಹೇಳಲಾರವು. ಆದುದರಿಂದ ಒಬ್ಬ ರೋಗಿಯ ರೋಗಲಕ್ಷಣಗಳು ವಾಸ್ತವದಲ್ಲಿ ಇತರ ಏಕಾಣುಜೀವಿಗಳ ಸೋಂಕುಗಳಿಂದಾಗಿ ಇರಬಹುದಾಗಿರುವಾಗ, ಅವನಿಗೆ ಲೈಮ್ ರೋಗವಿದೆಯೆಂದು ಪರೀಕ್ಷೆಯು ತೋರಿಸಬಹುದು. ಆದುದರಿಂದ ಅಮೆರಿಕದಲ್ಲಿನ ನ್ಯಾಷನಲ್ ಇನ್ಸ್ಟಿಟ್ಯೂಟ್ಸ್ ಆಫ್ ಹೆಲ್ತ್ (ಎನ್ಐಎಚ್) ವೈದ್ಯರು ತಮ್ಮ ರೋಗನಿರ್ಣಯವನ್ನು ಒಂದು ಉಣ್ಣಿಹುಳುವಿನ ಕಚ್ಚುವಿಕೆಯ ಇತಿಹಾಸದ ಮೇಲೆ, ರೋಗಿಯ ರೋಗಲಕ್ಷಣಗಳು ಮತ್ತು ಆ ರೋಗಲಕ್ಷಣಗಳನ್ನು ಆರಂಭಿಸಿದ್ದಿರಬಹುದಾದ ಇತರ ರೋಗಗಳನ್ನು ಪೂರ್ತಿಯಾಗಿ ಹೊರಹಾಕಿರುವುದರ ಮೇಲೆ ಆಧರಿಸುವಂತೆ ಸಲಹೆ ನೀಡುತ್ತದೆ.
ಚಿಕಿತ್ಸೆ ಮತ್ತು ತಡೆಗಟ್ಟುವಿಕೆ
ತಕ್ಕ ಸಮಯದಲ್ಲಿ ರೋಗನಿರ್ಣಯಮಾಡಲ್ಪಟ್ಟಲ್ಲಿ, ಹೆಚ್ಚಿನ ರೋಗಿಗಳಿಗೆ ಪ್ರತಿಜೀವಕಗಳೊಂದಿಗೆ ಯಶಸ್ವಿಕರವಾಗಿ ಚಿಕಿತ್ಸೆ ನೀಡಲ್ಪಡಸಾಧ್ಯವಿದೆ. ಚಿಕಿತ್ಸೆಯು ಎಷ್ಟು ಬೇಗ ಆರಂಭವಾಗುತ್ತದೊ, ಗುಣಪಡಿಸುವಿಕೆಯು ಅಷ್ಟೇ ಕ್ಷಿಪ್ರವೂ ಪೂರ್ಣರೀತಿಯದ್ದೂ ಆಗಿರುವುದು. ಚಿಕಿತ್ಸೆಯ ಹಲವಾರು ತಿಂಗಳುಗಳ ಅನಂತರದ ತನಕ, ದಣಿವು ಮತ್ತು ನೋವು ಇರಬಹುದು, ಆದರೆ ಈ ರೋಗಲಕ್ಷಣಗಳು ಹೆಚ್ಚಿನ ಪ್ರತಿಜೀವಕ ಚಿಕಿತ್ಸೆಯ ಅಗತ್ಯವಿಲ್ಲದೆ ಕಡಿಮೆಯಾಗುವವು. ಆದಾಗಲೂ, ಎನ್ಐಎಚ್ ಎಚ್ಚರಿಸುವುದು, “ಲೈಮ್ ರೋಗದ ಒಂದು ಕೆರಳುವಿಕೆಯು, ಆ ಅಸ್ವಸ್ಥತೆಯು ಭವಿಷ್ಯತ್ತಿನಲ್ಲಿ ತಡೆಗಟ್ಟಲ್ಪಡುವುದು ಎಂಬುದಕ್ಕೆ ಯಾವುದೇ ಖಾತರಿಯಾಗಿರುವುದಿಲ್ಲ.”
ಆ ನೆಮ್ಮದಿಗೆಡಿಸುವ ಪ್ರತೀಕ್ಷೆಯು ಎಂದಾದರೂ ಬದಲಾಗುವುದೊ? ಅಮೆರಿಕದಲ್ಲಿನ ಯೇಲ್ ಯ್ಯುನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್ನಿಂದ ಬಂದ ಒಂದು ವಾರ್ತೆಯು ಪ್ರಕಟಿಸಿದ್ದೇನಂದರೆ, ಲೈಮ್ ರೋಗವನ್ನು ತಡೆಯಬಹುದಾದ ಒಂದು ಪ್ರಯೋಗಾತ್ಮಕ ಲಸಿಕೆಯನ್ನು ಸಂಶೋಧಕರು ವಿಕಸಿಸಿದ್ದಾರೆ. ಈ “ದ್ವಿ-ಕ್ರಿಯಾ” ಲಸಿಕೆಯು ದಾಳಿಯಿಡುತ್ತಿರುವ ಲೈಮ್ ಏಕಾಣುಜೀವಿಯನ್ನು ಆಕ್ರಮಿಸಿ, ಕೊಲ್ಲುವ ಪ್ರತಿಕಾಯಗಳನ್ನು ಉತ್ಪಾದಿಸಲು ಮಾನವ ರಕ್ಷಣಾ ವ್ಯವಸ್ಥೆಯನ್ನು ಪ್ರಚೋದಿಸುತ್ತದೆ. ಅದೇ ಸಮಯದಲ್ಲಿ, ಅದು ಲಸಿಕೆಹಾಕಿಸಿಕೊಂಡಿರುವ ಒಬ್ಬ ಬಲಿಯನ್ನು ಕಚ್ಚುವ ಉಣ್ಣಿಹುಳುಗಳಲ್ಲಿ ಜೀವಿಸುತ್ತಿರುವ ಏಕಾಣುಜೀವಿಯನ್ನೂ ನಾಶಪಡಿಸುತ್ತದೆ.
“ಈ ಲಸಿಕೆಯನ್ನು ಪರೀಕ್ಷಿಸುವುದು, ಲೈಮ್ ರೋಗದ ಗಂಭೀರ ಫಲಿತಾಂಶಗಳ ಸಂಭಾವ್ಯತೆಯಿಂದ ಜನರನ್ನು ಸಂರಕ್ಷಿಸುವ ನಮ್ಮ ಪ್ರಯತ್ನಗಳಲ್ಲಿ ಒಂದು ಪ್ರಧಾನ ವಿಕಸನವಾಗಿದೆ” ಎಂದು 1975ರಲ್ಲಿ ಲೈಮ್ ರೋಗವನ್ನು ಕಂಡುಹಿಡಿದ ಸಂಶೋಧಕರಲ್ಲಿ ಒಬ್ಬರಾಗಿರುವ ಡಾಕ್ಟರ್ ಸ್ಟೀಫನ್ ಈ. ಮಾಲೆವಿಸ್ಟಾ ಹೇಳುತ್ತಾರೆ. ರೋಗದ ಭಯವು ಎಲ್ಲಿ ಜನರನ್ನು ಒಳಗಿರುವಂತೆ ಮಾಡಿದೆಯೊ ಆ ಕ್ಷೇತ್ರಗಳಲ್ಲಿ, “ಈ ಲಸಿಕೆಯು ಅರಣ್ಯಗಳನ್ನು ಮಾನವ ಉಪಯೋಗಕ್ಕಾಗಿ ಪುನಃತರುವಂತೆ ಸಹಾಯ ಮಾಡುವುದು” ಎಂದು ವಿಜ್ಞಾನಿಗಳು ಆಶಿಸುತ್ತಾರೆಂಬುದಾಗಿ ದ ನ್ಯೂ ಯಾರ್ಕ್ ಟೈಮ್ಸ್ ಹೇಳಿಕೆಯನ್ನೀಯುತ್ತದೆ.
ಅಷ್ಟರತನಕವಾದರೊ, ನೀವು ನಿಮ್ಮ ಸ್ವಂತ ತಡೆಗಟ್ಟುವಿಕೆಯ ಕ್ರಮಗಳನ್ನು ತೆಗೆದುಕೊಳ್ಳಸಾಧ್ಯವಿದೆ. ಎನ್ಐಎಚ್ ಶಿಫಾರಸ್ಸು ಮಾಡುವುದು: ಉಣ್ಣಿಹುಳುಗಳಿಂದ ತುಂಬಿರುವ ಕ್ಷೇತ್ರಗಳಲ್ಲಿ ನಡಿಯುತ್ತಿರುವುದಾದರೆ, ಹಾದಿಗಳ ಮಧ್ಯದಲ್ಲಿ ನಡೆಯಿರಿ. ಉದ್ದ ಪ್ಯಾಂಟುಗಳನ್ನು, ಉದ್ದ ತೋಳುಗಳುಳ್ಳ ಶರ್ಟ್ ಮತ್ತು ಒಂದು ಟೋಪಿಯನ್ನು ಧರಿಸಿರಿ. ಪ್ಯಾಂಟಿನ ಕೆಳಗಿನ ಅಂಚುಗಳನ್ನು ಕಾಲುಚೀಲಗಳೊಳಗೆ ತುರುಕಿಸಿರಿ, ಮತ್ತು ಪಾದದ ಯಾವುದೇ ಭಾಗವನ್ನು ತೆರೆದಿಡದಂತಹ ಪಾದರಕ್ಷೆಗಳನ್ನು ಧರಿಸಿರಿ. ತೆಳು ಬಣ್ಣದ ತೊಡಿಗೆಯನ್ನು ಧರಿಸುವುದು ಉಣ್ಣಿಹುಳುಗಳನ್ನು ಪತ್ತೆಹಚ್ಚಲು ಸುಲಭವನ್ನಾಗಿ ಮಾಡುತ್ತದೆ. ತೊಡಿಗೆ ಮತ್ತು ಚರ್ಮಕ್ಕೆ ಹಚ್ಚಲ್ಪಟ್ಟ ಕೀಟ ನಿರೋಧಕಗಳು ಪರಿಣಾಮಕಾರಿಯಾಗಿವೆ, ಆದರೆ ಅವು ಗಂಭೀರವಾದ ಅಡ್ಡಪರಿಣಾಮಗಳನ್ನು, ವಿಶೇಷವಾಗಿ ಮಕ್ಕಳಿಗೆ ಉಂಟುಮಾಡಬಲ್ಲವು. “ಗರ್ಭಿಣಿ ಸ್ತ್ರೀಯರು, ಲೈಮ್ ರೋಗದ ಕ್ಷೇತ್ರಗಳಲ್ಲಿ ಉಣ್ಣಿಹುಳುಗಳನ್ನು ವರ್ಜಿಸಲು ವಿಶೇಷವಾಗಿ ಜಾಗರೂಕರಾಗಿರಬೇಕು” ಎಂದು ಏನ್ಐಎಚ್ ಎಚ್ಚರಿಸುತ್ತದೆ, “ಯಾಕಂದರೆ ಸೋಂಕು ಅಜನಿತ ಮಗುವಿಗೆ ವರ್ಗಾಯಿಸಲ್ಪಡಸಾಧ್ಯವಿದೆ” ಮತ್ತು ಒಂದು ಗರ್ಭಸ್ರಾವ ಅಥವಾ ಮೃತ ಶಿಶುವಿನ ಸಂಭಾವ್ಯತೆಯನ್ನು ಹೆಚ್ಚಿಸಬಹುದು.
ಒಮ್ಮೆ ಮನೆ ಸೇರಿದ ನಂತರ, ನಿಮ್ಮನ್ನು ಮತ್ತು ನಿಮ್ಮ ಮಕ್ಕಳನ್ನು ಉಣ್ಣಿಹುಳುಗಳಿಗಾಗಿ, ವಿಶೇಷವಾಗಿ ಕೂದಲಿರುವ ದೇಹದ ಭಾಗಗಳನ್ನು ಪರಿಶೀಲಿಸಿರಿ. ಇದನ್ನು ಜಾಗರೂಕವಾಗಿ ಮಾಡಿರಿ ಯಾಕಂದರೆ ಅಪಕ್ವ ಉಣ್ಣಿಹುಳುಗಳು ಈ ವಾಕ್ಯವನ್ನು ಕೊನೆಗೊಳ್ಳುವ ಪೂರ್ಣವಿರಾಮ ಚಿಹ್ನೆಯಷ್ಟು ಚಿಕ್ಕದ್ದಾಗಿರುತ್ತವೆ ಮತ್ತು ನೀವು ಅವುಗಳನ್ನು ಧೂಳಿನ ಕಣವೆಂದು ಸುಲಭವಾಗಿ ತಪ್ಪೆಣಿಸಬಹುದು. ನಿಮಗೆ ಮುದ್ದು ಪ್ರಾಣಿಗಳಿರುವುದಾದರೆ, ಅವು ಮನೆಯನ್ನು ಪ್ರವೇಶಿಸುವ ಮುಂಚೆ ಅವುಗಳನ್ನು ಪರೀಕ್ಷಿಸಿರಿ—ಅವು ಸಹ ಲೈಮ್ ರೋಗವನ್ನು ತಗುಲಿಸಿಕೊಳ್ಳಬಲ್ಲವು.
ಒಂದು ಉಣ್ಣಿಹುಳುವನ್ನು ನೀವು ಹೇಗೆ ತೆಗೆಯುವಿರಿ? ನಿಮ್ಮ ಬರಿಯ ಬೆರಳುಗಳಿಂದಲ್ಲ ಬದಲಾಗಿ ಹರಿತವಿಲ್ಲದ ಚಿಮುಟಗಳೊಂದಿಗೆ. ಚರ್ಮದ ಮೇಲಿನ ತನ್ನ ಹಿಡಿತವನ್ನು ಅದು ಬಿಡುವ ತನಕ ಉಣ್ಣಿಹುಳುವಿನ ತಲೆಯ ಹತ್ತಿರ ನಯವಾಗಿ ಆದರೆ ದೃಢವಾಗಿ ಎಳೆಯಿರಿ, ಆದರೆ ಅದರ ದೇಹವನ್ನು ಹಿಸುಕದಿರಿ. ಅನಂತರ ಕಚ್ಚಿದ ಕ್ಷೇತ್ರವನ್ನು ಒಂದು ಪೂತಿನಾಶಕ (ಆ್ಯನ್ಟಿಸೆಪ್ಟಿಕ್)ದೊಂದಿಗೆ ತಿಕ್ಕಿರಿ. 24 ತಾಸುಗಳೊಳಗೆ ಉಣ್ಣಿಹುಳುವನ್ನು ತೆಗೆಯುವುದು, ನಿಮ್ಮನ್ನು ಲೈಮ್ ರೋಗದ ಸೋಂಕಿನಿಂದ ರಕ್ಷಿಸಬಲ್ಲದೆಂದು ಸೋಂಕು ರೋಗಗಳಲ್ಲಿ ಒಬ್ಬ ವಿಶೇಷಜ್ಞರಾಗಿರುವ ಅಮೆರಿಕದ ಡಾಕ್ಟರ್ ಗ್ಯಾರಿ ವರ್ಮ್ಸರ್ ಹೇಳುತ್ತಾರೆ.
ವಿಪರೀತ ಸೋಂಕಿರುವ ಕ್ಷೇತ್ರಗಳಲ್ಲಿಯೂ, ಕುಂಠಿತಗೊಳಿಸುವ ಲೈಮ್ ರೋಗವನ್ನು ಪಡೆಯುವ ಸಂಭವವು ತುಂಬ ಕಡಿಮೆಯೆಂಬುದು ಸತ್ಯ. ಆದರೂ ಆ ಸರಳ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಆ ಚಿಕ್ಕ ಸಂಭವವನ್ನು ಇನ್ನೂ ಚಿಕ್ಕದ್ದಾಗಿ ಮಾಡುವುದು. ಈ ರಕ್ಷಣೋಪಾಯಗಳು ಶ್ರಮಕ್ಕೆ ತಕ್ಕ ಪ್ರತಿಫಲವುಳ್ಳದ್ದಾಗಿವೆಯೊ? ಲೈಮ್ ರೋಗದಿಂದ ನರಳುವ ಯಾವುದೇ ವ್ಯಕ್ತಿಯನ್ನು ಕೇಳಿರಿ.
[ಪುಟ 32 ರಲ್ಲಿರುವ ಚೌಕ]
ಲೈಮ್ ರೋಗದ ಚಿಹ್ನೆಗಳು
ಆರಂಭದ ಸೋಂಕು:
○ ಗುಳ್ಳೆ
○ ಸ್ನಾಯು ಮತ್ತು ಸಂಧಿ ನೋವುಗಳು
○ ತಲೆನೋವು
○ ಸೆಡತುಕೊಂಡಿರುವ ಕತ್ತು
○ ಗಮನಾರ್ಹ ದಣಿವು
○ ಜ್ವರ
○ ಮುಖದ ಪಾರ್ಶ್ವವಾಯು
○ ಮಿದುಳಿನ ಉರಿಯೂತ
○ ಸಂಧಿ ನೋವು ಮತ್ತು ಊತದ ಸಂಕ್ಷಿಪ್ತ ಅವಧಿಗಳು
ಕಡಿಮೆ ಸಾಮಾನ್ಯ:
○ ಕಣ್ಣಿನ ಉರಿಯೂತ
○ ತಲೆತಿರುಗುವಿಕೆ
○ ಉಸಿರಿನ ಕಡಿತ
ತಡವಾದ ಸೋಂಕು:
○ ಸಂಧಿವಾತ, ಬಿಟ್ಟುಬಿಟ್ಟು ಬರುವಂತಹದ್ದು ಅಥವಾ ಅಸ್ಥಿಗತವಾದದ್ದು ಕಡಿಮೆ
ಸಾಮಾನ್ಯ:
○ ಜ್ಞಾಪಕಶಕ್ತಿಯ ನಷ್ಟ
○ ಮನಸ್ಸನ್ನು ಕೇಂದ್ರೀಕರಿಸುವುದರಲ್ಲಿ ಕಷ್ಟ
○ ಮನೋಸ್ಥಿತಿ ಅಥವಾ ನಿದ್ರಿಸುವ ಹವ್ಯಾಸಗಳಲ್ಲಿ ಬದಲಾವಣೆ
ಈ ರೋಗಲಕ್ಷಣಗಳಲ್ಲಿ ಒಂದು ಅಥವಾ ಹೆಚ್ಚಿನ್ನದ್ದು ಸೋಂಕಿನ ವಿಭಿನ್ನ ಸಮಯಗಳಲ್ಲಿ ಇರಬಹುದು.—ಲೈಮ್ ಡಿಸೀಸ್—ದ ಫ್ಯಾಕ್ಟ್ಸ್, ದ ಚ್ಯಾಲೆಂಜ್, ನ್ಯಾಷನಲ್ ಇನ್ಸ್ಟಿಟ್ಯೂಟ್ಸ್ ಆಫ್ ಹೆಲ್ತ್ನಿಂದ ಪ್ರಕಾಶಿತ.
[ಪುಟ 33 ರಲ್ಲಿರುವ ಚಿತ್ರ]
ಕಾಡಿನಲ್ಲಿ ಒಂದು ಸುತ್ತಾಡುವಿಕೆಯು ನಿಮ್ಮನ್ನು ಅಪಾಯಕ್ಕೀಡುಮಾಡಸಾಧ್ಯವಿದೆ
[ಪುಟ 34 ರಲ್ಲಿರುವ ಚಿತ್ರ]
ಒಂದು ಉಣ್ಣಿಹುಳು (ಮಹತ್ತರವಾಗಿ ದೊಡ್ಡದಾಗಿ ಕಾಣುವಂತೆ ಮಾಡಲ್ಪಟ್ಟದ್ದು)
[ಕೃಪೆ]
Yale School of Medicine
[ಪುಟ 34 ರಲ್ಲಿರುವ ಚಿತ್ರ]
ಉಣ್ಣಿಹುಳು (ವಾಸ್ತವವಾದ ಗಾತ್ರ)