ಆಪತ್ತಿನ ಉತ್ಪಾದನೆ
ನಿರಾಶ್ರಿತನಾಗಿರುವುದು ಹೇಗಿರುತ್ತದೆ? ನೀವು ಶಾಂತಿಯಲ್ಲಿ ಜೀವಿಸುತ್ತಿದ್ದೀರೆಂದು ಭಾವಿಸಿಕೊಳ್ಳಲು ಪ್ರಯತ್ನಿಸಿರಿ, ಆದರೆ ಥಟ್ಟನೆ ನಿಮ್ಮ ಸನ್ನಿವೇಶವೆಲ್ಲ ಬದಲಾವಣೆ ಹೊಂದುತ್ತದೆ. ರಾತ್ರಿ ಹಗಲಾಗುವುದರೊಳಗೆ, ನೆರೆಯವರು ವೈರಿಗಳಾಗುತ್ತಾರೆ. ನಿಮ್ಮ ಮನೆಯನ್ನು ಲೂಟಿಮಾಡಿ ಸುಟ್ಟುಬಿಡುವ ಸೈನಿಕರು ಬರುತ್ತಿದ್ದಾರೆ. ಗಂಟು ಕಟ್ಟಿ ನಿಮ್ಮ ಜೀವಕ್ಕಾಗಿ ಪಲಾಯನಮಾಡಲು ನಿಮಗೆ ಹತ್ತೇ ನಿಮಿಷಗಳಿವೆ. ಅನೇಕ ಕಿಲೊಮೀಟರುಗಳ ವರೆಗೆ ಹೊರಲಿರುವುದರಿಂದ, ನೀವು ಚಿಕ್ಕ ಚೀಲವೊಂದನ್ನು ಮಾತ್ರ ಒಯ್ಯಬಲ್ಲಿರಿ. ಅದರಲ್ಲಿ ಏನೆಲ್ಲ ಹಾಕುವಿರಿ?
ಬಂದೂಕು ಮತ್ತು ಫಿರಂಗಿಗಳ ಶಬ್ದದ ಮಧ್ಯೆ ನೀವು ಬಿಟ್ಟುಹೋಗುತ್ತೀರಿ. ಪಲಾಯನಮಾಡುತ್ತಿರುವ ಇತರರನ್ನು ನೀವು ಜೊತೆಗೂಡುತ್ತೀರಿ. ದಿನಗಳು ದಾಟುತ್ತವೆ; ನೀವು ಹಸಿದು, ಬಾಯಾರಿ, ನಂಬಲಾಗದಷ್ಟು ಬಳಲುತ್ತ ಕಾಲೆಳೆದುಕೊಂಡು ಹೋಗುತ್ತೀರಿ. ಬದುಕಿ ಉಳಿಯಬೇಕಾದರೆ, ತೀವ್ರಾಯಾಸವಾಗಿದ್ದರೂ ನೀವು ನಿಮ್ಮ ದೇಹವನ್ನು ಬಲಾತ್ಕರಿಸಿಕೊಂಡು ಮುಂದೆ ಸಾಗಬೇಕು. ನೀವು ನೆಲದ ಮೇಲೆ ಮಲಗುತ್ತೀರಿ. ಏನನ್ನಾದರೂ ತಿನ್ನಲು ಹೊಲದಲ್ಲಿ ಹುಡುಕುತ್ತೀರಿ.
ನೀವು ಭದ್ರತೆಯಿರುವ ದೇಶವೊಂದನ್ನು ಸಮೀಪಿಸುತ್ತೀರಾದರೂ ಗಡಿರಕ್ಷಕರು ನಿಮ್ಮನ್ನು ದಾಟಲು ಬಿಡುವುದಿಲ್ಲ. ಅವರು ನಿಮ್ಮ ಚೀಲವನ್ನು ಝಡತಿಮಾಡಿ, ಬೆಲೆಬಾಳುವ ಪ್ರತಿಯೊಂದನ್ನೂ ಸುಲಿಗೆಮಾಡುತ್ತಾರೆ. ನೀವು ಇನ್ನೊಂದು ತನಿಖೆಕಟ್ಟೆಯನ್ನು ಕಂಡುಹಿಡಿದು, ಗಡಿಯನ್ನು ದಾಟುತ್ತೀರಿ. ನಿಮ್ಮನ್ನು ಹೊಲಸಾದ, ಮುಳ್ಳುತಂತಿ ಬೇಲಿಯಿರುವ ನಿರಾಶ್ರಿತ ಶಿಬಿರದಲ್ಲಿ ಹಾಕಲಾಗುತ್ತದೆ. ನಿಮ್ಮ ಬಿಕ್ಕಟ್ಟಿನಲ್ಲಿ ಪಾಲಿಗರಾಗಿರುವ ಇತರರು ಸುತ್ತಲಿದ್ದರೂ, ನಿಮಗೆ ಒಂಟಿಯಾಗಿಯೂ ತಬ್ಬಿಬ್ಬಾಗಿಯೂ ಇರುವ ಅನಿಸಿಕೆಯಾಗುತ್ತದೆ.
ನಿಮ್ಮ ಕುಟುಂಬ ಮತ್ತು ಮಿತ್ರರ ಸಾಹಚರ್ಯ ಇಲ್ಲದಿರುವುದಕ್ಕೆ ನೀವು ವಿಷಾದಪಡುತ್ತೀರಿ. ತೀರ ಬಾಹ್ಯ ಸಹಾಯಾವಲಂಬಿಗಳಾಗಿದ್ದೀರೆಂದು ನೀವು ಕಂಡುಕೊಳ್ಳುತ್ತೀರಿ. ಕೆಲಸವಿಲ್ಲ ಮತ್ತು ಮಾಡಲಿಕ್ಕೆ ಏನೂ ಇಲ್ಲ. ನಿರೀಕ್ಷಾರಾಹಿತ್ಯ, ಹತಾಶೆ ಮತ್ತು ಕೋಪದ ಅನಿಸಿಕೆಗಳೊಂದಿಗೆ ನೀವು ಹೋರಾಡುತ್ತೀರಿ. ನಿಮ್ಮ ಶಿಬಿರವಾಸವು ಪ್ರಾಯಶಃ ತಾತ್ಕಾಲಿಕವೆಂದು ತಿಳಿದವರಾಗಿ, ನೀವು ನಿಮ್ಮ ಭವಿಷ್ಯತ್ತಿನ ವಿಷಯವಾಗಿ ಚಿಂತಿಸುತ್ತೀರಿ. ಎಷ್ಟೆಂದರೂ, ಶಿಬಿರವು ಮನೆಯಲ್ಲ, ಅದು ಯಾರಿಗೂ ಬೇಡವಾಗಿರುವ ಒಂದು ನಿರೀಕ್ಷಣಾಲಯ ಅಥವಾ ಜನರ ದಾಸ್ತಾನು ಮಳಿಗೆಯಂತಿದೆ. ನೀವು ಎಲ್ಲಿಂದ ಬಂದಿರೊ ಅಲ್ಲಿಗೆ ಬಲಾತ್ಕಾರದಿಂದ ಹಿಂದೆ ಕಳುಹಿಸಲ್ಪಡುವಿರೊ ಎಂದು ನೀವು ಕುತೂಹಲಪಡುತ್ತೀರಿ.
ಇದು ಇಂದಿನ ಕೋಟ್ಯಂತರ ಜನರ ಅನುಭವ. ನಿರಾಶ್ರಿತರಿಗಾಗಿರುವ ವಿಶ್ವ ಸಂಸ್ಥೆಯ ಹೈ ಕಮಿಷನರ್ (ಯುಎನ್‌ಏಚ್‌ಸಿಆರ್) ಇವರಿಗನುಸಾರ, ಲೋಕವ್ಯಾಪಕವಾಗಿ ಎರಡು ಕೋಟಿ ಎಪ್ಪತ್ತು ಲಕ್ಷ ಜನರು, ಯುದ್ಧ ಅಥವಾ ಹಿಂಸೆಯನ್ನು ಬಿಟ್ಟು ಪಲಾಯನಮಾಡಿದ್ದಾರೆ. ಇನ್ನೂ ಎರಡು ಕೋಟಿ ಮೂವತ್ತು ಲಕ್ಷ ಹೆಚ್ಚು ಜನರು ತಮ್ಮ ಸ್ವಂತ ದೇಶಗಳೊಳಗೇ ಸ್ಥಳಾಂತರಿಸಲ್ಪಟ್ಟಿದ್ದಾರೆ. ಮೊತ್ತದಲ್ಲಿ, ಭೂಮಿಯ ಪ್ರತಿ 115 ಜನರಲ್ಲಿ ಒಬ್ಬನು ಪಲಾಯನಮಾಡುವಂತೆ ಬಲಾತ್ಕರಿಸಲ್ಪಟ್ಟಿದ್ದಾನೆ. ಹೆಚ್ಚಿನವರು ಸ್ತ್ರೀಯರು ಮತ್ತು ಮಕ್ಕಳು. ಯುದ್ಧ ಮತ್ತು ಆಪತ್ತಿನ ಉತ್ಪಾದನೆಯಾಗಿರುವ ನಿರಾಶ್ರಿತರು, ಯಾವ ಲೋಕಕ್ಕೆ ತಾವು ಬೇಡವೊ, ಯಾವ ಲೋಕವು ತಾವು ಯಾರು ಎಂಬ ಕಾರಣದಿಂದಲ್ಲ, ತಾವು ಏನು ಎಂಬ ಕಾರಣದಿಂದ ತಮ್ಮನ್ನು ತಳ್ಳಿಹಾಕುತ್ತದೊ ಅದರಲ್ಲಿ ಗೊತ್ತುಗುರಿಯಿಲ್ಲದೆ ತೇಲಾಡುತ್ತಿದ್ದಾರೆ.
ಅವರ ಸಮ್ಮುಖವು ಜಗತ್ತಿನಲ್ಲೆಲ್ಲ ಆಗಿರುವ ಭಾರಿ ಬದಲಾವಣೆಯ ಒಂದು ಸೂಚನೆಯಾಗಿದೆ. ಯುಎನ್‌ಏಚ್‌ಸಿಆರ್ ಹೇಳುವುದು: “ನಿರಾಶ್ರಿತರು ಸಾಮಾಜಿಕ ಶಿಥಿಲತೆಯ ಅಂತಿಮ ರೋಗಸೂಚನೆಯಾಗಿದ್ದಾರೆ. ಒಂದು ದೇಶದ ಸಾಮಾಜಿಕ ಮತ್ತು ರಾಜಕೀಯ ಕುಸಿತವು ಎಷ್ಟರ ಮಟ್ಟಿಗಿದೆ ಎಂಬುದನ್ನು ನಿರೂಪಿಸುವ ಕಾರಣಗಳ ಮತ್ತು ಕಾರ್ಯಭಾವಗಳ ಒಂದು ಸರಪಣಿಯಲ್ಲಿ ಅವರು ಕೊನೆಯ ಮತ್ತು ಅತಿ ಸುಲಭಗ್ರಾಹ್ಯ ಕೊಂಡಿಯಾಗಿದ್ದಾರೆ. ಭೌಗೋಲಿಕವಾಗಿ ನೋಡುವಾಗ, ಅವರು ಮಾನವ ನಾಗರಿಕತೆಯ ಪ್ರಚಲಿತ ಸ್ಥಿತಿಯ ಒಂದು ವಾಯುಭಾರಮಾಪಕವಾಗಿದ್ದಾರೆ.”
ಆ ಸಮಸ್ಯೆಯ ಪ್ರಮಾಣವು ಅಭೂತಪೂರ್ವವಾಗಿದೆಯೆಂದೂ ಅದು ಅಂತ್ಯವು ಕಾಣದಿರುವಷ್ಟು ಬೆಳೆಯುತ್ತಿದೆಯೆಂದೂ ಪರಿಣತರು ಹೇಳುತ್ತಾರೆ. ಇಂತಹ ಪರಿಸ್ಥಿತಿಗೆ ಯಾವುದು ನಡೆಸಿದೆ? ಯಾವ ಪರಿಹಾರವಾದರೂ ಇದೆಯೆ? ಮುಂದಿನ ಲೇಖನಗಳು ಈ ಪ್ರಶ್ನೆಗಳನ್ನು ಪರೀಕ್ಷಿಸುವುವು.
[Picture Credit Lines on page 3]
Boy on left: UN PHOTO 159243/J. Isaac
U.S. Navy photo