ಯೆಹೋವನ ಬಲದಿಂದ ದುರಂತವನ್ನು ಜಯಿಸುವುದು
ಸ್ಪೆಯ್ನ್ನ ಎಚ್ಚರ! ಸುದ್ದಿಗಾರರಿಂದ
ಈ ವರ್ಷದ ಫೆಬ್ರವರಿ ತಿಂಗಳಿನಲ್ಲಿ, ಸ್ಪೆಯ್ನ್ನಲ್ಲಿನ ಬೈಲೆ ಸಭೆಯಿಂದ ಅನೇಕ ಮಂದಿ, ಹತ್ತಿರದಲ್ಲಿದ್ದ ಸೀಯೆರಾ ನೆವಾಡಾ ಪರ್ವತಗಳಲ್ಲಿ ಜೊತೆಯಾಗಿ ಒಂದು ಮನೋಹರವಾದ ದಿನವನ್ನು ಆನಂದಿಸಿದ್ದರು. ಆದರೆ ಮನೆಯಿಂದ ಕೇವಲ ಐದು ಕಿಲೊಮೀಟರುಗಳ ದೂರದಲ್ಲಿ, ಸಮೀಪಿಸುತ್ತಿದ್ದ ಒಂದು ಕಾರ್, ಅವರ ಬಸ್ ಪ್ರಯಾಣಿಸುತ್ತಿದ್ದ ಬೀದಿಯೊಳಗೆ ಅಡ್ಡಲಾಗಿ ಬಂದು, ಗಾಡಿಗಳ ಮೂತಿಗಳು ಒಂದಕ್ಕೊಂದು ಡಿಕ್ಕಿಹೊಡೆದವು. ಒಂದು ಸ್ಫೋಟನವಾಯಿತು, ಮತ್ತು ಬಸ್ ಜ್ವಾಲೆಗಳಿಂದ ಆವರಿಸಲ್ಪಟ್ಟಿತು. ಕೆಲವು ಪ್ರಯಾಣಿಕರು ಸರಿಯಾದ ಸಮಯದಲ್ಲಿ ಹೊರಬರಲು ಶಕ್ತರಾದರು, ಆದರೆ ಬಸ್ಸಿನಲ್ಲಿ ಹಿಂದೆಯಿದ್ದವರು ಹೊಗೆಯಿಂದ ಆವರಿಸಲ್ಪಟ್ಟು, ಸತ್ತರು.
ಒಟ್ಟಿನಲ್ಲಿ, 26 ಸಾಕ್ಷಿಗಳು ತಮ್ಮ ಜೀವಗಳನ್ನು ಕಳೆದುಕೊಂಡರು, ಇವರಲ್ಲಿ ನಾಲ್ಕು ಮಂದಿ ಪೂರ್ಣ ಸಮಯದ ಶುಶ್ರೂಷಕರು ಮತ್ತು ಹಲವಾರು ಮಕ್ಕಳು—ಬೈಲೆ ಸಭೆಯ ಸುಮಾರು ಕಾಲು ಭಾಗ—ಒಳಗೂಡಿದ್ದರು. ಬೈಲೆಯ ಪೌರ ಸಭಾಧ್ಯಕ್ಷರಿಗೆ ಕಳುಹಿಸಿದ ತನ್ನ ತಂತಿಯಲ್ಲಿ ಹೀಗೆ ಬರೆದಾಗ, ಸ್ಪೆಯ್ನ್ನ ರಾಜನಾದ ಕ್ವಾನ್ ಕಾರ್ಲೊಸ್, ಸ್ಪೆಯ್ನ್ ದೇಶೀಯರಲ್ಲಿ ಹೆಚ್ಚಿನವರ ಭಾವಾತಿರೇಕಗಳನ್ನು ಪ್ರತಿಧ್ವನಿಸಿದನು: “ದುರಂತಮಯ ಅಪಘಾತದಿಂದ ಮಹತ್ತಾಗಿ ತಲ್ಲಣಗೊಂಡಿರುವೆ. ನಮ್ಮ ಹೃತ್ಪೂರ್ವಕ ಅನುತಾಪದ ವಿಷಯದಲ್ಲಿ ಖಾತರಿಯಿಂದಿರ್ರಿ. ಈ ವೇದನಾಮಯ ಕ್ಷಣಗಳಲ್ಲಿ ಬಲಿಯಾದವರ ಕುಟುಂಬಗಳಿಗೆ ನಮ್ಮ ಅತ್ಯಂತ ಗಾಢವಾದ ಅನುಕಂಪ ಮತ್ತು ಬೆಂಬಲವನ್ನು ದಯವಿಟ್ಟು ದಾಟಿಸಿರಿ.”
ಶವಸಂಸ್ಕಾರಕ್ಕೆ ಹಾಜರಾದ ಸಾವಿರಾರು ಮಂದಿಯಲ್ಲಿ ಕೆಲವರ ಮನಸ್ಸುಗಳಲ್ಲಿ, ಇಂತಹ ದುರಂತಗಳು ಏಕೆ ಸಂಭವಿಸುತ್ತವೆ? ಎಂಬ ಪ್ರಶ್ನೆಯಿತ್ತು. ಸ್ಪಷ್ಟವಾಗಿ, ‘ಕಾಲ ಮತ್ತು ಪ್ರಾಪ್ತಿ’ಯಿಂದಾದ ಅಪಘಾತಗಳು ಇತರರಂತೆ ಯೆಹೋವನ ಜನರನ್ನು ಬಾಧಿಸಸಾಧ್ಯವಿದೆ. (ಪ್ರಸಂಗಿ 9:11, 12) ಹಾಗಿದ್ದರೂ, ಅಂತಹ ದುರಂತಗಳು ಬಲು ಬೇಗನೆ ತೆಗೆಯಲ್ಪಡುವವು ಎಂದು ಯೆಹೋವನು ವಾಗ್ದಾನಿಸುತ್ತಾನೆ.—ಪ್ರಕಟನೆ 21:4, 5.
ಸ್ಪೆಯ್ನ್ನಲ್ಲಿರುವ ಯೆಹೋವನ ಸಾಕ್ಷಿಗಳ ಬೆತೆಲ್ ಕುಟುಂಬದ ಅನೇಕ ಸದಸ್ಯರು ಮತ್ತು ದೇಶದ ಇತರ ಭಾಗಗಳಿಂದ ಸಾವಿರಾರು ಸಾಕ್ಷಿಗಳು, ಸ್ಥಳಿಕ ಸಹೋದರರಿಗೆ ಸಾಂತ್ವನ ಮತ್ತು ಬೆಂಬಲವನ್ನು ನೀಡಲು ಬೈಲೆಗೆ ಪ್ರಯಾಣಿಸಿದರು. ಸ್ಥಳಿಕ ಮತ್ತು ಪ್ರಾಂತೀಯ ಅಧಿಕಾರಿಗಳೊಂದಿಗೆ ಬೈಲೆ ನಗರದ ಜನರು ಕೂಡ ಸಾಕ್ಷಿ ಕುಟುಂಬಗಳ ದುಃಖದಲ್ಲಿ ಪಾಲಿಗರಾದರು. ಅನೇಕ ಪ್ರೇಕ್ಷಕರು ವಿಯೋಗಿಗಳಾದ ಸಾಕ್ಷಿಗಳ ಸ್ಥೈರ್ಯದಿಂದ ಪ್ರಭಾವಿತರಾದರು.
“ನನಗೆ ಅನೇಕ ವರ್ಷಗಳಿಂದ ಸಾಕ್ಷಿಗಳ ಪರಿಚಯವಿದೆ, ಮತ್ತು ವೈಯಕ್ತಿಕವಾಗಿ ನಾನೊಬ್ಬ ಅಜ್ಞೇಯತಾವಾದಿಯಾಗಿರುವುದಾದರೂ, ನಾನು ನಿಮ್ಮ ನಂಬಿಕೆಯನ್ನು ಮೆಚ್ಚುತ್ತೇನೆ. ಆ ಅಪಘಾತವು ಸಂಭವಿಸಿದಾಗ, ನಿಮ್ಮ ಧಾರ್ಮಿಕ ಮತ್ತು ಮಾನವೀಯ ಅಂಟಿಕೆಯು, ಇತರ ಗುಂಪುಗಳಿಗಿಂತ ಉತ್ತಮವಾಗಿ ಆ ದುರಂತವನ್ನು ಜಯಿಸಲು ನಿಮಗೆ ಸಹಾಯ ಮಾಡುವುದೆಂದು ನಾನು ತತ್ಕ್ಷಣವೇ ನೆನಸಿದೆ. ಇಡೀ ಪಟ್ಟಣವು ದುಃಖಿಸುತ್ತಿರುವ ಕುಟುಂಬಗಳಿಗೆ ಹೇಗೆ ಬೆಂಬಲವನ್ನು ಕೊಟ್ಟಿದೆಯೆಂಬುದನ್ನು ನಾನು ನೋಡಿದ್ದೇನೆ. ಪ್ರಾಯಶಃ ಈ ಮುಂಚೆ, ನೀವು ನಿಜವಾಗಿ ಯಾವ ರೀತಿಯ ಜನರಾಗಿದ್ದೀರಿ ಮತ್ತು ಯಾವ ಸೂತ್ರಗಳನ್ನು ಅನುಸರಿಸುತ್ತೀರಿ ಎಂಬುದರ ಕುರಿತಾಗಿ ಜನರಿಗೆ ತಪ್ಪುತಿಳಿವಳಿಕೆಗಳು ಇದ್ದಿರಬಹುದು, ಆದರೆ ಈಗ ಇವು ಕಣ್ಮರೆಯಾಗಿವೆಯೆಂದು ನಾನು ಹೇಳಲು ಸಂತೋಷಿಸುತ್ತೇನೆ. ಸಾಕ್ಷಿಯಾಗಿರದ ಒಬ್ಬ ವ್ಯಕ್ತಿಗೆ ತಿಳಿಯಲು ಕಷ್ಟವಾಗುವ ಒಂದು ಆಂತರಿಕ ಬಲವು ನಿಮ್ಮಲ್ಲಿದೆ,” ಎಂದು ಬೈಲೆಯ ಪೌರ ಸಭಾಧ್ಯಕ್ಷರಾದ ಆ್ಯಂಟೋನಿಯೊ ಗೊಮೆಸ್ ಹೇಳಿಕೆಯನ್ನಿತ್ತರು.
ಸ್ಪ್ಯಾನಿಷ್ ಸರಕಾರದ ಪ್ರತಿನಿಧಿಯಾಗಿ ಶವಸಂಸ್ಕಾರಕ್ಕೆ ಹಾಜರಾದ, ಸಾರ್ವಜನಿಕ ಕೆಲಸಗಳ ಸಚಿವರಾದ ಹೋಸೆ ಬೊರೆಲ್ ಒಪ್ಪಿಕೊಂಡದ್ದು: “ಒಂದೇ ಹೊಡೆತದಲ್ಲಿ ಕಾರ್ಯತಃ ತಮ್ಮ ಇಡೀ ಕುಟುಂಬವನ್ನು ಕಳೆದುಕೊಂಡಿರುವವರಿಗೆ ನೀವು ಏನು ಹೇಳಸಾಧ್ಯವಿದೆ? ಅವರು ಸ್ವತಃ ತಮ್ಮ ನಂಬಿಕೆಯಲ್ಲಿ ಕಂಡುಕೊಳ್ಳಸಾಧ್ಯವಿರದ ವಿಷಯವು ಯಾವುದೂ ಇಲ್ಲ. . . . ನಿಮಗೆ ಒಂದು ಅದ್ಭುತಕರವಾದ ನಂಬಿಕೆಯಿದೆ.”
“ಒಬ್ಬರನ್ನೊಬ್ಬರು ಸಂತೈಸಿಕೊಳ್ಳುತ್ತಾ . . . ಇರ್ರಿ”
ಅವರು “ತಮ್ಮ ನಂಬಿಕೆಯಲ್ಲಿ” ಏನನ್ನು ‘ಕಂಡುಕೊಂಡರು’? ಎಲ್ಲಕ್ಕಿಂತಲೂ ಮಿಗಿಲಾಗಿ, ‘ನಮಗೆ ಸಂಭವಿಸುವ ಎಲ್ಲಾ ಸಂಕಟಗಳಲ್ಲಿ ನಮ್ಮನ್ನು ಸಂತೈಸುವ, ಸಕಲವಿಧವಾಗಿ ಸಂತೈಸುವ ದೇವರು’ ಆದ ಯೆಹೋವನಲ್ಲಿ ಅವರು ಸಾಂತ್ವನವನ್ನು ಕಂಡುಕೊಂಡರು. (2 ಕೊರಿಂಥ 1:3, 4) ಥೆಸಲೊನೀಕದವರಿಗೆ ಪೌಲನು ಬರೆದ ಮಾತುಗಳನ್ನು ಪಾಲಿಸುತ್ತಾ, ತಮ್ಮ ದುಃಖದ ಹೊರತೂ, ಅವರು ಒಬ್ಬರನ್ನೊಬ್ಬರು ಸಂತೈಸಿಕೊಳ್ಳುವ ಬಲವನ್ನು ಕಂಡುಕೊಂಡರು: “ಒಬ್ಬರನ್ನೊಬ್ಬರು ಸಂತೈಸಿಕೊಳ್ಳುತ್ತಾ ಒಬ್ಬರ ಭಕ್ತಿಯನ್ನೊಬ್ಬರು ವೃದ್ಧಿಪಡಿಸುತ್ತಾ ಇರ್ರಿ.”—1 ಥೆಸಲೊನೀಕ 5:11.
ಕ್ರೈಸ್ತ ಸಹೋದರರು ಮತ್ತು ಸಹೋದರಿಯರು, ಕೆಲವರು ಎಂಟು ಮಂದಿಯಷ್ಟು ಸಂಬಂಧಿಗಳನ್ನು ಕಳೆದುಕೊಂಡಿದ್ದವರು, ಸಭೆಯ ಇತರ ವಿಯೋಗಿ ಸದಸ್ಯರಿಗೆ ಭೇಟಿನೀಡುವುದನ್ನು ಕಾಣುವುದು ಒಂದು ಮನಕರಗಿಸುವ ಅನುಭವವಾಗಿತ್ತು. “ನಾವು ಒಬ್ಬರನ್ನೊಬ್ಬರು ನೋಡಿದಾಗ, ನಾವು ಅತ್ತೆವು. ಆದರೆ ಕಣ್ಣೀರಿನಲ್ಲಿ ನಾವು ಸ್ವತಃ ಪುನರುತ್ಥಾನದ ನಿರೀಕ್ಷೆಯ ಕುರಿತಾಗಿ ಜ್ಞಾಪಿಸಿಕೊಂಡೆವು, ಮತ್ತು ನಮಗೆ ಸಾಂತ್ವನಗೊಳಿಸಲ್ಪಟ್ಟಿರುವ ಅನಿಸಿಕೆಯಾಯಿತು,” ಎಂದು ತಮಗಿದ್ದ ಇಬ್ಬರೇ ಮಕ್ಕಳನ್ನು ಸ್ವತಃ ಕಳೆದುಕೊಂಡಿದ್ದ, ಅಧ್ಯಕ್ಷ ಮೇಲ್ವಿಚಾರಕರಾದ ಫ್ರಾನ್ಸಿಸ್ಕೊ ಸಾಈಸ್ ವಿವರಿಸಿದರು.
“ನಾವು ನಮ್ಮ ಸಾರುವ ಚಟುವಟಿಕೆಯನ್ನು ಅಲಕ್ಷಿಸಿಲ್ಲ, ಮತ್ತು ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ ಎಂಬ ಬ್ರೋಷರನ್ನು ಉಪಯೋಗಿಸುತ್ತಾ, ನಾವು ಸತ್ತಿರುವವರ ಸಾಕ್ಷಿಗಳಾಗಿರದ ಸಂಬಂಧಿಗಳಿಗೆ ಭೇಟಿನೀಡಲು ಒಂದು ವಿಶೇಷ ಪ್ರಯತ್ನವನ್ನು ಮಾಡಿದ್ದೇವೆ.” ಫ್ರಾನ್ಸಿಸ್ಕೊ ಮುಂದುವರಿಸಿದ್ದು: “ವೈಯಕ್ತಿಕವಾಗಿ, ನಾನು ಸಾರಲು ಬಯಸಿದೆ, ಯಾಕಂದರೆ ಇತರರಿಗೆ ಸಾರುವ ಮೂಲಕ ನನಗೆ ಸ್ವಲ್ಪ ಹಾಯೆನಿಸುವುದೆಂದು ನನಗೆ ತಿಳಿದಿತ್ತು. ಮತ್ತು ನಿಶ್ಚಯವಾಗಿಯೂ, ನಾನು ಅಳುತ್ತಾ ಹೊರಹೋದರೂ, ನಾನು ಸಾಂತ್ವನಗೊಂಡು ಮನೆಗೆ ಹಿಂದಿರುಗುತ್ತಿದ್ದೆ.”
ಬೈಲೆಯಲ್ಲಿನ ಜನರು ಈ ಸಾಕ್ಷಿ ಕಾರ್ಯಕ್ಕೆ ತುಂಬ ಪ್ರಸನ್ನತೆಯಿಂದ ಪ್ರತಿಕ್ರಿಯಿಸಿದರು. ಅಪಘಾತದ ಒಂದು ವಾರದ ಬಳಿಕ, ಇಬ್ಬರು ಪುತ್ರಿಯರು ಮತ್ತು ನಾಲ್ಕು ಮೊಮ್ಮಕ್ಕಳ ನಷ್ಟಕ್ಕಾಗಿ ದುಃಖಿಸುತ್ತಿದ್ದ ಎನ್ಕಾರ್ನಾ, ಯಾರೊಂದಿಗೆ ಅವರು ಇತ್ತೀಚೆಗೆ ಒಂದು ಬೈಬಲಭ್ಯಾಸವನ್ನು ಆರಂಭಿಸಿದ್ದರೊ ಆ ಹೆಂಗಸಿಗೆ ಭೇಟಿಯನ್ನಿತ್ತರು. ನಾಲ್ಕು ತಿಂಗಳುಗಳ ಹಿಂದೆ ತನ್ನ ಗಂಡನನ್ನು ಕಳೆದುಕೊಂಡಿದ್ದ ಈ ಹೆಂಗಸಿಗೆ, ಎನ್ಕಾರ್ನ ಶಾಸ್ತ್ರೀಯ ಸಾಂತ್ವನವನ್ನು ಕೊಡುತ್ತಿದ್ದರು. ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ ಎಂಬ ಬ್ರೋಷರಿನ ಪರಿಗಣನೆಯನ್ನು ಅವರು ಮುಂದುವರಿಸಿದಂತೆ, “ಈಗ ನಾವು ಒಬ್ಬರನ್ನೊಬ್ಬರು ಸಂತೈಸಿಕೊಳ್ಳಬೇಕು,” ಎಂದು ಅವರು ಹೇಳಿದರು.
ಲೋಕವ್ಯಾಪಕ ಸಹೋದರತ್ವದಿಂದ ನೀಡಲ್ಪಡುವ ಬೆಂಬಲವು ಸಹ ತತ್ಕ್ಷಣವೇ ಬರಲಿತ್ತು. “ನಾವು ಪಡೆದುಕೊಂಡಿರುವ ಸಾವಿರಾರು ಪತ್ರಗಳು ಮತ್ತು ತಂತಿಗಳಿಂದ ಇಡೀ ಸಭೆಯು ತುಂಬ ಉತ್ತೇಜಿಸಲ್ಪಟ್ಟಿದೆ,” ಎಂದು ಸಭೆಯ ಸೆಕ್ರಿಟರಿಯಾದ ಫ್ರಾನ್ಸಿಸ್ಕೊ ಕ್ಯಾಪಿಯಾ ವಿವರಿಸಿದರು. “ಅಂಚೆ ಇಲಾಖೆಯು ಪ್ರತಿ ದಿನ ಅವುಗಳೆಲ್ಲವನ್ನು ರವಾನಿಸಲು ನೇರವಾಗಿ ನಮ್ಮ ಮನೆಗೆ ಒಂದು ವ್ಯಾನ್ ಅನ್ನು ಕಳುಹಿಸಬೇಕಾಗುತ್ತದೆ. ಸಹೋದರರ ಪ್ರೀತಿಯ ಚಿಂತೆಗಾಗಿ ನಾವು ತುಂಬ ಆಭಾರಿಗಳಾಗಿದ್ದೇವೆ.”
ದುರಂತವು ನಿರೀಕ್ಷೆಯನ್ನು ಉತ್ಪಾದಿಸುತ್ತದೆ
ಇಂತಹ ಒಂದು ದುರಂತದಿಂದ ಏನಾದರೂ ಒಳಿತು ಬರಬಲ್ಲದೊ? “ದುಃಖದ ಮನೆಯು ಜ್ಞಾನಿಗಳ ಮನಸ್ಸಿಗೆ ನೆಲೆ” ಎಂದು ಪುರಾತನ ಅರಸನಾದ ಸೊಲೊಮೋನನು ಬರೆದನು. (ಪ್ರಸಂಗಿ 7:4) ಈ ಮೂಲಸೂತ್ರಕ್ಕೆ ಹೊಂದಿಕೆಯಲ್ಲಿ, ಬೈಲೆಯಲ್ಲಿನ ದುರಂತವು, ಕೆಲವು ಜನರಿಗೆ ದೇವರೊಂದಿಗಿನ ತಮ್ಮ ಸಂಬಂಧದ ಕುರಿತಾಗಿ ಹೆಚ್ಚು ಗಂಭೀರವಾಗಿ ಯೋಚಿಸುವಂತೆ ಮಾಡಿದೆ. ಅಪಘಾತದಲ್ಲಿ ತನ್ನ ಆರು ಮಕ್ಕಳಲ್ಲಿ ಇಬ್ಬರನ್ನು ಕಳೆದುಕೊಂಡ ಒಬ್ಬ ಅವಿಶ್ವಾಸಿ ಗಂಡನಾದ ಫೌಸ್ಟೀನೊ, ತನ್ನ ಪತ್ನಿಯಾದ ಡಾಲೊರಸ್ಗೆ ಹೇಳಿದ್ದು: “ನಿನಗೆ ಹೇಳಲು ನನ್ನಲ್ಲಿ ಸ್ವಲ್ಪ ಒಳ್ಳೇ ಸುದ್ದಿಯಿದೆ. ನಾನು ನನ್ನ ಮಕ್ಕಳನ್ನು ಹೊಸ ಲೋಕದಲ್ಲಿ ನೋಡಬಯಸುತ್ತೇನಾದುದರಿಂದ, ನಾನು ಬೈಬಲನ್ನು ಅಭ್ಯಾಸಿಸಲು ಆರಂಭಿಸಲಿದ್ದೇನೆ.”
ಬೈಲೆಯಲ್ಲಿರುವ ನಮ್ಮ ಸಹೋದರ ಸಹೋದರಿಯರು, ತಮ್ಮ ದುಃಖವನ್ನು ಒಡನೆ ಜಯಿಸದಿರುವುದಾದರೂ, ಅವರು ಇತರರನ್ನು ಸಂತೈಸುತ್ತಿದ್ದಾರೆ ಮತ್ತು ಸಾಂತ್ವನಗೊಳಿಸಲ್ಪಡುತ್ತಿದ್ದಾರೆ. ಯೆಹೋವನು ಅವರನ್ನು ತನ್ನ ಆತ್ಮದೊಂದಿಗೆ ಮತ್ತು ಅನೇಕ ಪ್ರೀತಿಯ ಸಹೋದರ ಸಹೋದರಿಯರ ಬೆಂಬಲದೊಂದಿಗೆ ಬಲಪಡಿಸುತ್ತಿದ್ದಾನೆ. ಅವರ ಪರವಾಗಿ, ನಮ್ಮ ಸ್ವರ್ಗೀಯ ತಂದೆಗೆ ನಮ್ಮ ಪ್ರಾರ್ಥನೆಗಳು ಮುಂದುವರಿಯುತ್ತಾ ಇವೆ.
[ಪುಟ 37 ರಲ್ಲಿರುವ ಚಿತ್ರಗಳು]
ಸತ್ತವರಲ್ಲಿ ನಾಲ್ವರು