ಭಾವಚಿತ್ರ ಫೊಟಾಗ್ರಫಿ ಅದನ್ನು ಸರಿಯಾಗಿ ತೆಗೆಯುವ ವಿಧ
ಪ್ರಿಯ ಮಿತ್ರರ ಹಾಗೂ ಕುಟುಂಬ ಸದಸ್ಯರ ಭಾವಚಿತ್ರ (ಪೋರ್ಟ್ರೆಟ್)ಗಳಿಗಿಂತ ಹೆಚ್ಚು ಬೆಲೆಯುಳ್ಳವುಗಳೆಂದು ಹೇಳಲ್ಪಡುವ ವಸ್ತುಗಳು ಕೇವಲ ಕೆಲವೇ. ಎಷ್ಟೆಂದರೂ, ಗುಣಮಟ್ಟದ ಭಾವಚಿತ್ರವು ಕೇವಲ ಒಂದು ಚಿಟಿಕೆ ಛಾಯಾಚಿತ್ರಕ್ಕಿಂತ ಹೆಚ್ಚಿನದ್ದು; ಅದು ಒಬ್ಬ ವ್ಯಕ್ತಿಯ ವ್ಯಕ್ತಿತ್ವದ ಸಾರವನ್ನೇ ಸೆರೆಹಿಡಿಯುವಂತೆ ಉದ್ದೇಶಿಸಲ್ಪಟ್ಟಿರುವ ಪ್ರತೀಕ!
ಸಮಸ್ಯೆಯೇನಂದರೆ, ವೃತ್ತಿಪರ ಭಾವಚಿತ್ರಗಳು ದುಬಾರಿಯಾಗಿರಬಲ್ಲವು—ನಮ್ಮಲ್ಲಿ ಕೆಲವರಿಗೆ ಅದನ್ನು ತೆಗೆಸುವ ಸಾಮರ್ಥ್ಯವಿರಲಿಕ್ಕಿಲ್ಲ. ಮತ್ತು ನೀವೇ ಭಾವಚಿತ್ರಗಳನ್ನು ತೆಗೆಯಲು ಪ್ರಯತ್ನಿಸುವಲ್ಲಿ, ಕೇವಲ ಎತ್ತಿ ಕ್ಲಿಕ್ಕಿಸುವುದಕ್ಕಿಂತ ಎಷ್ಟೋ ಹೆಚ್ಚಿನದ್ದು ಅದರಲ್ಲಿ ಒಳಗೂಡಿದೆಯೆಂದು ನೀವು ಬೇಗನೆ ಕಂಡುಹಿಡಿಯುವಿರಿ. ಏಕೆಂದರೆ ಒಂದು ಉತ್ತಮ ಭಾವಚಿತ್ರದಲ್ಲಿ ವ್ಯಕ್ತಿ ಮಾತ್ರವಲ್ಲ, ಬೆಳಕು, ಹಿನ್ನೆಲೆ, ಪ್ರದರ್ಶನ ಸನ್ನಿವೇಶ, ಭಂಗಿ, ಮುಖಭಾವ ಮತ್ತು ಬಣ್ಣ ಇವೆಲ್ಲ ಸೇರಿವೆ.
ಹಾಗಿದ್ದರೂ, ನಿಮ್ಮಲ್ಲಿ ಒಂದು ಕ್ಯಾಮರ ಇರುವಲ್ಲಿ ಮತ್ತು ಕೆಲವು ಮೂಲಭೂತ ಪ್ರಯೋಗ ತಂತ್ರಗಳನ್ನು ಕಲಿಯವುದರಲ್ಲಿ ನಿರತರಾಗಲು ನೀವು ಸಿದ್ಧರಿರುವಲ್ಲಿ, ನೀವು ತೃಪ್ತಿಕರವಾದ ಭಾವಚಿತ್ರಗಳನ್ನು ತೆಗೆಯಬಲ್ಲಿರಿ. ಹೇಗೆ? ಉತ್ತರಕ್ಕಾಗಿ, ಈ ಕ್ಷೇತ್ರದಲ್ಲಿ ಹತ್ತಕ್ಕೂ ಹೆಚ್ಚು ವರ್ಷಗಳ ಅನುಭವವಿರುವ ಒಬ್ಬ ವೃತ್ತಿಪರ ಭಾವಚಿತ್ರ ಫೊಟಾಗ್ರಫರ್ನೊಂದಿಗೆ ಕೆಲವು ಪ್ರಶ್ನೆಗಳನ್ನು ನಾವು ಕೇಳುವೆವು.
• ಪ್ರಥಮವಾಗಿ, ಒಬ್ಬನು ಕ್ಯಾಮರ ನೋಡಿ ಮುಗುಳುನಗುವಂತೆ ಮಾಡುವುದರ ರಹಸ್ಯವೇನು? ನಿಮ್ಮ ಗುರಿವ್ಯಕ್ತಿಯು ಫೋಟೊ ತೆಗೆಸಿಕೊಳ್ಳುವ ಮನಸ್ಥಿತಿಯಲ್ಲಿದ್ದಾನೆಂಬುದನ್ನು ಖಚಿತಪಡಿಸಿಕೊಳ್ಳಿರಿ! ಉದಾಹರಣೆಗೆ, ನೀವು ಒಬ್ಬ ಚಿಕ್ಕ ಹುಡುಗಿಯ ಭಾವಚಿತ್ರವನ್ನು ತೆಗೆಯಬೇಕೆಂದಿದ್ದೀರಿ ಎಂದು ಭಾವಿಸೋಣ. ಅವಳು ಆಯಾಸಗೊಂಡಿದ್ದರೆ ಅಥವಾ ಹಸಿದಿರುವುದಾದರೆ, ಅವಳೊಂದಿಗೆ ಕೆಲಸ ಮಾಡುವುದು ಕಷ್ಟಕರವಾಗಿರುವುದು. ಅದಲ್ಲದೆ, ಬಳಲಿಕೆಯು ಅವಳ ಮುಖ ಮತ್ತು ಕಣ್ಣುಗಳಲ್ಲಿ ಉದ್ರಿಕ್ತತೆಯನ್ನು ಉಂಟುಮಾಡುವುದು ಮತ್ತು ಇದು ಚಿತ್ರವನ್ನು ಕುಂದಿಸುವುದು. ಆದಕಾರಣ ಭಾವಚಿತ್ರ ತೆಗೆಯೋಣವು ಆರಂಭವಾಗುವ ಮೊದಲು ತುಸು ನಿದ್ದೆ ಮತ್ತು ತುಸು ಉಪಾಹಾರವನ್ನು ಮಾಡುವಂತೆ ಅವಳನ್ನು ಪ್ರೋತ್ಸಾಹಿಸಿರಿ.
ಆ ವ್ಯಕ್ತಿಯೊಂದಿಗೆ ತುಸು ವಿನೋದವಾಡುವುದೂ ಸಹಾಯಕರ. ಉಲ್ಲಾಸಿಗಳೂ ಹರ್ಷಚಿತ್ತರೂ ಆಗಿರಿ. ಸಂಭಾಷಿಸುವ ಮೂಲಕ ಆಕೆಯನ್ನು ಹಾಯಾಗಿರಿಸಿರಿ, ಆದರೆ ಅತ್ಯುದ್ರೇಕದಿಂದ ನಗಾಡುವಂತೆ ಮಾಡಲು ಪ್ರಯತ್ನಿಸಬೇಡಿರಿ. ಇದು ಕಣ್ಣುಗಳನ್ನು ಮಾಲಿಸಿ, ಮುಖಕ್ಕೆ ರಕ್ತವನ್ನು ತರಿಸುತ್ತದೆ. ವಿವಿಧ ಮುಖಭಾವಗಳ ಫೋಟೊ ತೆಗೆಯಲು ಪ್ರಯತ್ನಿಸಿರಿ. ನೀವು ಎಷ್ಟು ಹೆಚ್ಚು ಫೋಟೋಗಳನ್ನು ತೆಗೆಯುತ್ತೀರೊ, ಆ ವ್ಯಕ್ತಿಯನ್ನು ಅತ್ಯುತ್ತಮವಾಗಿ ಗುಣವಿವರಿಸುವ ಅಷ್ಟು ಉತ್ತಮ ಸಂದರ್ಭಗಳು ನಿಮಗೆ ದೊರೆಯುವುವು.
• ಉಡುಪು ಮತ್ತು ಕೇಶ ಶೈಲಿಯ ಕುರಿತೇನು? ಗುಂಪು ಭಾವಚಿತ್ರಗಳಲ್ಲಿ, ವರ್ಣ ಸಾಮರಸ್ಯವು ಅಪೇಕ್ಷಣೀಯ. ಉದಾಹರಣೆಗೆ, ನೀವು ಕುಟುಂಬವೊಂದರ ಚಿತ್ರವನ್ನು ತೆಗೆಯುತ್ತಿರುವಲ್ಲಿ, ಅವರು ಹೊಂದಿಕೆಯಾದ ಬಣ್ಣಗಳ ಉಡುಪನ್ನು ಧರಿಸುವಂತೆ ಸೂಚಿಸಿರಿ. ಅಥವಾ ಅವರೆಲ್ಲರೂ ಒಂದೇ ಬಣ್ಣದ ಉಡುಪುಗಳನ್ನು ಧರಿಸಲಿ. ಆದರೆ ಸ್ಥೂಲಕಾಯದ ಜನರು ಗಾಢ ವರ್ಣಗಳಲ್ಲಿ ಅತ್ಯುತ್ತಮವಾಗಿ ತೋರುತ್ತಾರೆಂದೂ ತೆಳ್ಳಗಿನ ಜನರು ತೆಳು ಬಣ್ಣಗಳಲ್ಲಿ ಅತ್ಯತ್ತಮವಾಗಿ ತೋರುತ್ತಾರೆಂಬುದನ್ನೂ ನೆನಪಿನಲ್ಲಿಡಿರಿ.
ಸೂಕ್ಷ್ಮಾಂಶಗಳಿಗೂ ನೀವು ಗಮನಕೊಡಬೇಕು: ಬಟ್ಟೆ ನೇರವಾಗಿ, ಅತಿ ಕಡಮೆ ನಿರಿಗೆಗಳಿದ್ದು ತೂಗಾಡುತ್ತದೆಯೆ? ಟೈ ನೆಟ್ಟಗಿದೆಯೆ? ಕೇಶ ಚೊಕ್ಕಟವಾಗಿದೆಯೆ? ನಿಮ್ಮ ಕಣ್ಣು ಸ್ಥಳತಪ್ಪಿರುವ ತಲೆಗೂದಲನ್ನು ಕಂಡುಹಿಡಿಯಲಿಕ್ಕಿಲ್ಲವಾದರೂ, ಕ್ಯಾಮರ ಕಂಡುಹಿಡಿಯುತ್ತದೆ! ಗುರಿವ್ಯಕ್ತಿಯು ಸ್ತ್ರೀಯಾಗಿರುವಲ್ಲಿ ಆಕೆಯ ಪ್ರಸಾಧನ ಸರಿಯಾಗಿ ಹಚ್ಚಲ್ಪಟ್ಟಿದೆಯೆ?
• ಕನ್ನಡಕ ಧರಿಸುವವರ ಕುರಿತೇನು? ಚುಚ್ಚು ಬೆಳಕಿ (ಗ್ಲೇರ್)ನ ಕಾರಣ ಇದೊಂದು ಸಮಸ್ಯೆಯಾಗಿರಬಲ್ಲದು. ಪ್ರಥಮವಾಗಿ, ನಿಮ್ಮ ವ್ಯಾಪ್ತಿದರ್ಶಕ (ವ್ಯೂಫೈಂಡರ್)ದ ಮೂಲಕ, ಅನಪೇಕ್ಷಿತ ಚುಚ್ಚು ಬೆಳಕೇನಾದರೂ ಇದೆಯೊ ಎಂದು ನೋಡಿರಿ. ಹಾಗಿರುವಲ್ಲಿ, ಆ ಗುರಿವ್ಯಕ್ತಿಯು ತನ್ನ ತಲೆಯನ್ನು, ಕಣ್ಣಿನ ಮಧ್ಯದಿಂದ ಆ ಪ್ರತಿಫಲನವು ತೊಲಗುವ ಅಥವಾ ಕಾಣದೆ ಹೋಗುವ ವರೆಗೆ ನಿಧಾನವಾಗಿ ತಿರುಗಿಸುವಂತೆ ಮಾಡಿರಿ. ಕೆಲವು ಬಾರಿ, ಆ ಗುರಿವ್ಯಕ್ತಿಯು ತನ್ನ ಗಲ್ಲವನ್ನು ಕೆಳಗಿಳಿಸುವಂತೆ ಮಾಡುವುದು ಸಹಾಯಕಾರಿಯಾಗಿರುವುದು. ಆದರೆ ಜೋಡಿಗಲ್ಲವನ್ನು ನಿರ್ಮಿಸದಂತೆ ಜಾಗ್ರತೆವಹಿಸಿರಿ!
• ಹಿನ್ನೆಲೆಯಲ್ಲಿ ಏನು ತೋರಿಬರುತ್ತದೆಂಬುದು ಪ್ರಾಮುಖ್ಯವೊ? ನಿಶ್ಚಯವಾಗಿ! ಇಲೆಕ್ಟ್ರಿಕ್ ಸರಿಗೆಗಳು, ರಸ್ತೆಗಳು ಅಥವಾ ವಾಹನಗಳು ತುಂಬಿರುವ ನಿಬಿಡವಾದ ಹಿನ್ನೆಲೆಯು, ನಿಮ್ಮ ಫೋಟೋವನ್ನು ಕೇವಲ ಅಪಕರ್ಷಿಸುವುದು. ಆದಕಾರಣ, ನಿಮ್ಮ ಗುರಿವ್ಯಕ್ತಿಗೆ ಸ್ವಾರಸ್ಯವನ್ನು ವರ್ಧಿಸುವ ಅಥವಾ ಕೂಡಿಸುವ, ಮರ, ಹೂವು ಬಿಡುತ್ತಿರುವ ಪೊದೆ, ಮರದ ಬೇಲಿ, ಅಥವಾ ಹಳೆಯ ಕೊಟ್ಟಿಗೆಯ ಬದಿಯಂತಹ ಹಿನ್ನೆಲೆಯನ್ನು ಹುಡುಕಿರಿ.
• ಮನೆಯೊಳಗಣ ಪ್ರದರ್ಶನ ಸನ್ನಿವೇಶದಲ್ಲಿ ಚಿತ್ರವನ್ನು ತೆಗೆಯುತ್ತೀರಾದರೆ ಆಗೇನು? ಆ ಗುರಿವ್ಯಕ್ತಿಯನ್ನು ಒಂದು ಕುರ್ಚಿಯ ಮೇಲೆ ಅಥವಾ ಸೋಫದ ಮೇಲೆ, ತೆಳು ಬಣ್ಣದ ಗೋಡೆಯ ಅಥವಾ ಮನೆಯೊಳಗಣ ಸಸ್ಯದ ಮುಂದೆ ಕುಳಿತುಕೊಳ್ಳುವಂತೆ ಮಾಡಬಹುದು. ಆ ವ್ಯಕ್ತಿಯು ಉಪಕರಣಗಳಿರುವ ಬೆಂಚೊ, ಮೇಜೊ, ಅಥವಾ ಹೊಲಿಗೆಯ ವಸ್ತುಗಳೊ ಹಿನ್ನೆಲೆಯಲ್ಲಿ ಇದ್ದವನಾಗಿ ಕೆಲಸ ಮಾಡುತ್ತಿರುವುದನ್ನು ಅಥವಾ ಒಂದು ಮೆಚ್ಚಿನ ಹವ್ಯಾಸ ಅಥವಾ ಚಟುವಟಿಕೆಯಲ್ಲಿ ಒಳಗೂಡಿರುವುದನ್ನು ಚಿತ್ರಿಸುವುದು ವಿಶೇಷವಾಗಿ ಆಸಕ್ತಿಕರವಾಗಿದೆ.
• ಆಕರ್ಷಕವಾದೊಂದು ಹಿನ್ನೆಲೆ ನಿಮಗೆ ದೊರೆಯದಿದ್ದರೆ ಆಗೇನು? ಹಿನ್ನೆಲೆಯನ್ನು ನಾಭಿತಪ್ಪಿಸಲು ಪ್ರಯತ್ನಿಸಿರಿ. ಇದು ಹೊರಗೆ ತೆಗೆಯುವ ಭಾವಚಿತ್ರಗಳಲ್ಲಿ, ಗುರಿವ್ಯಕ್ತಿಯನ್ನು ಹಿನ್ನೆಲೆಗಿಂತ ದೂರದಲ್ಲಿ ನಿಮಗೆ ಇಡಸಾಧ್ಯವಿರುವುದರಿಂದ ಅತ್ಯುತ್ತಮವಾಗಿರುತ್ತದೆ. ಏಫ್-ಸ್ಟಾಪ್ (f-stop)ಅನ್ನು ಅಥವಾ ಲೆನ್ಸ್ ಯವರಂಧ್ರವನ್ನು ಸರಿಹೊಂದಿಸುವ ಮೂಲಕ ನೀವಿದನ್ನು ಮಾಡುತ್ತೀರಿ. ಏಫ್-ಸ್ಟಾಪ್ನ ಏಫ್5.6ರಂತಹ ಕೆಳನಂಬ್ರವು ನಿಮ್ಮ ಗುರಿವ್ಯಕ್ತಿಯನ್ನು ಸರಿಯಾದ ನಾಭಿಯಲ್ಲಿಟ್ಟು ಹಿನ್ನೆಲೆಯನ್ನು ಮೊಬ್ಬಾಗಿಸುವುದು.—ಫೋಟೋಗ್ರಾಫ್ 1ನ್ನು ನೋಡಿ.
• ಚಿತ್ರರಚನೆಗೆ (ಕಾಂಪೊಸಿಶನ್) ಯಾವ ಸೂಚನೆಗಳಾದರೂ ಇವೆಯೆ? ಪ್ರಥಮವಾಗಿ, ಒಂದು ತ್ರಿಪಾದಿಯ ಮೇಲೆ ನಿಮ್ಮ ಕ್ಯಾಮರವನ್ನು ಇರಿಸುವುದು ಸಹಾಯಕರ; ಆ ಬಳಿಕ ನೀವು ಚಿತ್ರರಚನೆಯ ಮೇಲೆ ಹೆಚ್ಚು ಕೇಂದ್ರೀಕರಿಸಬಲ್ಲಿರಿ. ಸಾಧಾರಣವಾಗಿ, ಭಾವಚಿತ್ರಗಳು ಒಂದೇ ಪೂರ್ತಿಯಾಕಾರದವುಗಳು, ಇಲ್ಲವೇ ಮುಕ್ಕಾಲು ಉದ್ದದ (ಸೊಂಟದಿಂದ ಮೇಲೆ), ಅಥವಾ ನಿಕಟಚಿತ್ರ (ತಲೆ ಮತ್ತು ಭುಜಗಳು ಅಥವಾ ಕೇವಲ ತಲೆ)ಗಳಾಗಿವೆ. (ಫೋಟೋಗ್ರಾಫ್ 2ನ್ನು ನೋಡಿ.) 105 ಮತ್ತು 150 ಮಿಲಿಮೀಟರ್ಗಳ ಮಧ್ಯೆ ಇರುವ ಯಾವುದೇ ಲೆನ್ಸು, ಭಾವಚಿತ್ರಗಳಿಗೆ ಯೋಗ್ಯವಾಗಿದೆ. ನಿಮ್ಮ ಕ್ಯಾಮರದ ಲೆನ್ಸನ್ನು ನಿಮಗೆ ಸರಿಹೊಂದಿಸಲು ಅಥವಾ ಬದಲಾಯಿಸಲು ಸಾಧ್ಯವಾಗದಿದ್ದರೆ, ನಿಮಗೆ ಬೇಕಾದ ಚಿತ್ರವು ದೊರೆಯುವ ವರೆಗೆ ನಿಮ್ಮ ಗುರಿವ್ಯಕ್ತಿಯ ಹತ್ತಿರಕ್ಕೆ ಬರಲು ಅಥವಾ ದೂರ ಸರಿಯಲು ಪ್ರಯತ್ನಿಸಿರಿ. ಸಂಭವನೀಯವಾಗಿ, ಚಿತ್ರ ತೆಗೆಯುವಾಗ ತಲೆಯ ಮೇಲ್ಭಾಗದಲ್ಲಿ, ಪಕ್ಕಗಳಲ್ಲಿ ಮತ್ತು ಪಾದಗಳ ಕೆಳಗೆ ಸ್ವಲ್ಪ ಸ್ಥಳವನ್ನು ಬಿಡುವುದು ಜ್ಞಾನಪ್ರದವಾಗಿರುತ್ತದೆ. ಈ ರೀತಿಯಲ್ಲಿ, ನೀವು ಚಿತ್ರವಿಸ್ತರಣ ಮಾಡುವುದಾದರೆ, ತಲೆಯನ್ನೊ, ಪಾದಗಳನ್ನೊ, ಮುಂಡವನ್ನೊ ಕತ್ತರಿಸಿಬಿಡುವುದನ್ನು ತಪ್ಪಿಸುವಿರಿ. ನೋಡಿ, ನೀವು ಹೆಚ್ಚು ವಿಸ್ತರಣ ಮಾಡಿದಷ್ಟು, ಆ ಫೋಟೋಗ್ರಾಫ್ನ ಫ್ರೇಮ್ ಗಾತ್ರದ ಮೇಲೆ ಅವಲಂಬಿಸಿ, ಆ ಚಿತ್ರದ ಬಹು ಭಾಗವು ನಷ್ಟವಾಗಬಹುದು.
ಒಂದು ಉಪಯುಕ್ತ ಮಾರ್ಗದರ್ಶನವು, ತೃತೀಯಗಳ ನಿಯಮವೆಂದು ಕರೆಯಲ್ಪಡುತ್ತದೆ. ನಿಮ್ಮ ಗುರಿವ್ಯಕ್ತಿಯ ಮುಖ ಅಥವಾ ಕಣ್ಣುಗಳನ್ನು ಚಿತ್ರದ ಮೇಲ್ಭಾಗ, ಕೆಳಭಾಗ ಮತ್ತು ಪಕ್ಕದಿಂದ ಮೂರನೆಯ ಒಂದಂಶದ ಅಂತರದಲ್ಲಿ ಇಡುವುದು ಇದರಲ್ಲಿ ಸೇರಿದೆ. (ಫೋಟೋಗ್ರಾಫ್ 3ನ್ನು ನೋಡಿ.) ಆದರೂ ಕೆಲವೊಮ್ಮೆ ಕಣ್ಣುಗಳನ್ನು ಚಿತ್ರದ ಮಧ್ಯದಲ್ಲಿಡುವುದು ಕಾರ್ಯಸಾಧಕವಾಗುತ್ತದೆ.
• ಗುರಿವ್ಯಕ್ತಿಯನ್ನು ಭಂಗಿಯಲ್ಲಿರಿಸುವ ಕುರಿತೇನು? ನಿಮ್ಮ ಗುರಿವ್ಯಕ್ತಿಯನ್ನು ಕುಳಿತಾಗಲಿ, ನಿಂತಾಗಲಿ ಅಥವಾ ಒರಗಿಯಾಗಲಿ, ಕ್ಯಾಮರದ ಎದುರು ಆರಾಮದ ಭಂಗಿಯಲ್ಲಿ, ಆದರೆ ತುಸು ಒಂದು ಬದಿಗೆ ತಿರುಗಿಸಿ ನಿಲ್ಲಿಸಿರಿ. ಮುಖವು ತೀರ ಉರುಟಾಗಿರುವುದಾದರೆ, ಆ ರೂಪದರ್ಶಿಯು, ಮುಖದ ಅರ್ಧಾಂಶವು ಮಾತ್ರ ಬೆಳಕಿನಲ್ಲಿರುವಂತೆ, ತಲೆ ಅಥವಾ ದೇಹವನ್ನು ತುಸು ತಿರುಗಿಸಲಿ. ನೆರಳಲ್ಲಿರುವ ಅರ್ಧಾಂಶವು ಕ್ಯಾಮರಕ್ಕೆ ಅತಿ ಹತ್ತಿರದಲ್ಲಿರಬೇಕು. ಇದು ಮುಖವನ್ನು ಬಿಳಿಚಿಕೊಂಡದ್ದಾಗಿ ತೋರುವಂತೆ ಮಾಡುವುದು. ಇನ್ನೊಂದು ಕಡೆಯಲ್ಲಿ, ಮುಖವು ತುಂಬಿರುವಂತೆ ಮಾಡಲು ನೀವು ಇಚ್ಛಿಸುವುದಾದರೆ, ಇಡೀ ಮುಖಕ್ಕೆ ಬೆಳಕು ಬೀಳುವ ತನಕ, ಆ ವ್ಯಕ್ತಿಯು ದೇಹ ಅಥವಾ ತಲೆಯನ್ನು ಆವರ್ತಿಸುವಂತೆ ಮಾಡಿರಿ.
ಕೈಗಳಿಗೆ ವಿಶೇಷ ಗಮನ ಕೊಡಿರಿ. ಅವು ಆರಾಮವಾಗಿವೆಯೆಂದು ತೋರಿಬರಬೇಕು ಮತ್ತು ನಿಮ್ಮ ಗುರಿವ್ಯಕ್ತಿಗೆ ಸ್ವಾಭಾವಿಕವಾದ ಸ್ಥಾನದಲ್ಲಿ, ಅಂದರೆ ಗಲ್ಲದ ಮೇಲೆಯೊ ಮುಖದ ಬದಿಯಲ್ಲಿಯೊ ಮೆತ್ತನೆ ಇಡಲ್ಪಟ್ಟವುಗಳಾಗಿ ಇರಬೇಕು. ಆ ವ್ಯಕ್ತಿಯು ನಿಂತಿರುವುದಾದರೆ, ತೋಳುಗಳು ಪಕ್ಕದಲ್ಲಿ ಕೆಳಗೆ ತೂಗಿದ್ದು ಕೈಗಳು ನೇರವಾಗಿ ಕೆಳಮುಖವಾಗಿರುವ ತೀರ ಸರ್ವಸಾಧಾರಣವಾದ ದೋಷದಿಂದ ದೂರವಿರಿ. ಕೈಗಳು ಏನನ್ನಾದರೂ ಹಿಡಿದುಕೊಂಡಿರುವುದು ಅಥವಾ ಸ್ವಾಭಾವಿಕ ಭಂಗಿಯಲ್ಲಿ ವಿರಮಿಸುವುದು ಹೆಚ್ಚು ಉತ್ತಮ.
• ದಂಪತಿಗಳ ಫೋಟೊ ತೆಗೆಯುವರೆ ಏನಾದರೂ ಸೂಚನೆಗಳಿವೆಯೆ? ಅವರು ತಮ್ಮ ತಲೆಗಳನ್ನು ಒಬ್ಬರ ಕಡೆಗೊಬ್ಬರು ತುಸು ಓಲಿಸಲಿ. ಸಾಮಾನ್ಯವಾಗಿ, ಇಬ್ಬರೂ ಸಮಾನ ಮಟ್ಟದಲ್ಲಿ ನಿಲ್ಲುವುದನ್ನು ತಪ್ಪಿಸುವುದು ಅತ್ಯುತ್ತಮ. ಒಬ್ಬ ವ್ಯಕ್ತಿಯ ಕಣ್ಣುಗಳು ಇನ್ನೊಬ್ಬ ವ್ಯಕ್ತಿಯ ಮೂಗಿನ ಮಟ್ಟದಲ್ಲಿರುವಂತೆ ಅವರನ್ನು ನಿಲ್ಲಿಸಲು ನೀವು ಪ್ರಯತ್ನಿಸಸಾಧ್ಯವಿದೆ.—ಫೋಟೋಗ್ರಾಫ್ 4ನ್ನು ನೋಡಿ.
• ಬೆಳಕಿನ ವಿಷಯವಾಗಿ ನಾವು ಮಾತಾಡೋಣ. ಹೊರಗೆ ಫೋಟೋಗಳನ್ನು ತೆಗೆಯಲು ದಿನದ ಅತ್ಯತ್ತಮ ಸಮಯವಾವುದು? ಅಪರಾಹ್ಣದ ಕೊನೆಯಲ್ಲಿ. ಆಗ ಗಾಳಿ ಸಾಮಾನ್ಯವಾಗಿ ಶಾಂತವಾಗಿಯೂ ಬೆಳಕಿನ ಬಣ್ಣ ಹೆಚ್ಚು ಹಿತವಾಗಿರುತ್ತದೆ. ನಿಮ್ಮ ಮಿತ್ರನನ್ನು ಅವನ ಮುಖದ ಒಂದು ಪಕ್ಕವು ಸೂರ್ಯನ ಪ್ರಕಾಶದಿಂದ ಬೆಳಗುವಂತೆಯೂ ನೆರಳಿನಲ್ಲಿರುವ ಮುಖದ ಪಕ್ಕದ ಮೇಲೆ ಬೆಳಕಿನ ಒಂದು ತ್ರಿಕೋನವು ಮಾತ್ರ ತೋರಿಬರುವಂತೆಯೂ ನಿಲ್ಲಿಸಲು ಪ್ರಯತ್ನಿಸಿರಿ. ಇದು ಆ ವ್ಯಕ್ತಿಯು ಕಿರುಗಣ್ಣು ಮಾಡುವುದನ್ನು ತಡೆಯುತ್ತದೆ. ನೀವು ಪಾರ್ಶ್ವದೃಶ್ಯವನ್ನು ತೆಗೆಯಲಿಚ್ಛಿಸುವಲ್ಲಿ, ನಿಮ್ಮ ಕ್ಯಾಮರದ ಸ್ಥಾನವನ್ನು ಮುಖದ ನೆರಳಿನ ಪಕ್ಕಕ್ಕೆ ಸರಿಸಿರಿ. ಸಂಭವನೀಯವಾಗಿ, ನಿಮ್ಮ ಕ್ಯಾಮರದ ಲೆನ್ಸು, ಸೂರ್ಯನ ಪ್ರಕಾಶದಿಂದ ನೆರಳಲ್ಲಿರುವಂತೆ ಖಚಿತಪಡಿಸಿಕೊಳ್ಳಿರಿ.
• ಬೆಳಕು ತೀರ ತೀಕ್ಷ್ಣವಾಗಿದ್ದರೆ? ನಿಮ್ಮ ಮಿತ್ರನನ್ನು ಸೂರ್ಯನು ಅವನ ಹಿಂದಿರುವಂತೆ ನಿಲ್ಲಿಸಲು ಪ್ರಯತ್ನಿಸಿರಿ.
• ಅದು ಅವನ ಮುಖವನ್ನು ನೆರಳಲ್ಲಿರಿಸುವುದಿಲ್ಲವೆ? ಹೌದು, ಆದರೆ ಆ ನೆರಳಿನ ಭಾಗಗಳನ್ನು ತುಂಬಿಸಲು ನೀವು ನಿಮ್ಮ ಫ್ಲ್ಯಾಷನ್ನು ಬಳಸಬಲ್ಲಿರಿ. ಕೆಲವು ಕ್ಯಾಮರಗಳು ಇದನ್ನು ಸ್ವಯಂಚಾಲಕವಾಗಿ ಮಾಡುತ್ತವೆ. ಒಬ್ಬ ಮಿತ್ರನನ್ನು ಒಬ್ಬ ಸಹಾಯಕನಾಗಿ ಇಡುವುದು ಇನ್ನೊಂದು ಪರಿಹಾರಮಾರ್ಗ. ಅವನು ಅಥವಾ ಅವಳು ಒಂದು ಪ್ರತಿಫಲಕವನ್ನು ಅಥವಾ ದೊಡ್ಡದಾದ ಬಿಳಿಯ ಕಾರ್ಡ್ಬೋರ್ಡಿನ ತುಂಡನ್ನು ಎತ್ತಿಹಿಡಿದು, ಚೆದರಿದ ತುಸು ಸೂರ್ಯನ ಬೆಳಕನ್ನು ಗುರಿವ್ಯಕ್ತಿಯ ಮುಖಕ್ಕೆ ಬೀರಬಲ್ಲರು.
• ಕಟ್ಟಡದೊಳಗಣ ಬೆಳಕಿನ ವಿಷಯದಲ್ಲೇನು? ನಿಮ್ಮ ಗುರಿವ್ಯಕ್ತಿಯನ್ನು ಒಂದು ಕಿಟಕಿಯ ಪಕ್ಕದಲ್ಲಿ ನಿಲ್ಲಿಸಿ ಪ್ರಾಕೃತಿಕ ಬೆಳಕನ್ನು ನೀವು ಬಳಸಬಲ್ಲಿರಿ. ಒಂದು ತೆಳು ಪರದೆಯು ಬೆಳಕನ್ನು ಚೆದರಿಸುವ ಕೆಲಸವನ್ನು ಮಾಡಬಲ್ಲದು. ಅಗತ್ಯವಿರುವಲ್ಲಿ, ತೀರ ಗಾಢವಾಗಿವೆಯೆಂದು ಕಂಡುಬರುವ ಭಾಗಗಳನ್ನು ಬೆಳಗಿಸಲು ನೀವು ಫ್ಲ್ಯಾಷನ್ನೊ ಕಾರ್ಡ್ಬೋರ್ಡ್ ಪ್ರತಿಫಲಕವನ್ನೊ ಉಪಯೋಗಿಸಬಲ್ಲಿರಿ.—ಫೋಟೋಗ್ರಾಫ್ 5ನ್ನು ನೋಡಿ.
• ಸಾಕಷ್ಟು ಬೆಳಕು ದೊರೆಯದೆ ಇರುವಲ್ಲಿ ಆಗೇನು? ಇಂತಹ ಸಂದರ್ಭಗಳಲ್ಲಿ ನೀವು ಫ್ಲ್ಯಾಷನ್ನು ಉಪಯೋಗಿಸಲೇಬೇಕು. ನಿಮ್ಮ ಗುರಿವ್ಯಕ್ತಿಯನ್ನು ಬಿಳೀ ಪಕ್ಕ ಗೋಡೆಯಿರುವ ಸ್ಥಳದಲ್ಲಿ ನಿಲ್ಲಿಸಪ್ರಯತ್ನಿಸಿರಿ. ಬೆಳಕು ಪಕ್ಕಗೋಡೆಯಿಂದ ಹಾರುವಂತೆ ನಿಮ್ಮ ಫ್ಲ್ಯಾಷನ್ನು ಓಲಿಸಿರಿ. ಪಕ್ಕದಿಂದ ಬೆಳಕು ಬರುವುದರಿಂದ, ಮುಖದ ಮೇಲೆ ಎಷ್ಟರ ಮಟ್ಟಿಗೆ ಬೆಳಕು ಬೀಳುತ್ತದೆಂಬುದರ ಕುರಿತು ನಿಮಗೆ ಹೆಚ್ಚು ಹಿಡಿತವಿರುವುದು.
ಉತ್ತಮ ಫಲಿತಾಂಶಗಳನ್ನು ಪಡೆಯುವರೆ ತುಸು ಪರೀಕ್ಷಾಪ್ರಯೋಗಗಳು ಬೇಕಾಗುವುವೆಂಬುದು ಒಪ್ಪತಕ್ಕ ವಿಷಯವೇ. ಆದರೆ ಭಾವಚಿತ್ರ ಫೊಟಾಗ್ರಫಿಯ ಮೂಲಭೂತ ಮೂಲಸೂತ್ರಗಳು ಸರಳ. ಜಾಗರೂಕತೆಯ ಯೋಜನೆ ಮಾಡಿ, ಸೂಕ್ಷ್ಮಾಂಶಗಳಿಗೆ ಗಮನ ಕೊಡುವುದರಿಂದ ನೀವು, ಕ್ಯಾಮರಗಳಲ್ಲಿ ಅತಿ ಸರಳವಾಗಿರುವುದರಿಂದಲೂ ಒಂದು ಉತ್ತಮ ಭಾವಚಿತ್ರವನ್ನು, ಮುಂದಿನ ಅನೇಕ ವರ್ಷಗಳಲ್ಲಿ ನೀವೂ ನಿಮ್ಮ ಪ್ರಿಯರೂ ಬೆಲೆಯುಳ್ಳದ್ದಾಗಿ ಎಣಿಸುವ ಭಾವಚಿತ್ರವನ್ನು ನಿರ್ಮಿಸಬಲ್ಲಿರಿ!