ಯುವ ಜನರು ಪ್ರಶ್ನಿಸುವುದು . . .
ನಾನು ನನ್ನ ಪಾಪವನ್ನು ಒಪ್ಪಿಕೊಳ್ಳಬೇಕೊ?
“ನಾನು ಎಷ್ಟು ಲಜ್ಜಿತಳಾಗಿದ್ದೇನೆಂದರೆ, ನನಗೆ ಏನು ಮಾಡಬೇಕು ಎಂದು ತಿಳಿಯದು. ನನ್ನ ಹೆತ್ತವರ ಬಳಿಗೆ ಹೋಗಲು ಬಯಸುತ್ತೇನೆ, ಆದರೆ ನಾನು ಬಹಳ ಲಜ್ಜಿತಳಾಗಿದ್ದೇನೆ.”—ಲೀಸ.a
ಕ್ಷೋಭೆಗೊಂಡ ಒಬ್ಬ ಯುವ ಸ್ತ್ರೀಯು ಹಾಗೆ ಬರೆದಳು. ಅವಳು ಕೆಲವು ವರುಷಗಳ ಕಾಲಾವಧಿಯ ವರೆಗೆ ಒಬ್ಬ ಅವಿಶ್ವಾಸಿಯೊಂದಿಗೆ ಪ್ರಣಯವ್ಯವಹಾರದಲ್ಲಿ ಒಳಗೂಡಿದ್ದಳು. ಒಂದು ದಿನ, ಮದ್ಯದ ಪ್ರಭಾವದ ಕೆಳಗೆ, ಅವಳು ಅವನೊಂದಿಗೆ ಲೈಂಗಿಕ ಸಂಭೋಗ ಮಾಡಿದಳು.
ದುಃಖಕರವಾಗಿ, ಇಂತಹ ಸಂಗತಿಗಳು ಆಗಿಂದಾಗ್ಗೆ ಕ್ರೈಸ್ತ ಯುವ ಜನರ ಮಧ್ಯದಲ್ಲಿಯೂ ಸಂಭವಿಸುತ್ತವೆ. ನಾವು ಎಳೆಯವರೂ, ಹೆಚ್ಚು ಅನನುಭವಿಗಳೂ ಆಗಿರುವಾಗ, ಸ್ವಾಭಾವಿಕವಾಗಿ ಹೆಚ್ಚು ತಪ್ಪುಗಳನ್ನು ಮಾಡುತ್ತೇವೆ. ಆದರೆ ಚಿಕ್ಕ ತಪ್ಪನ್ನು ಮಾಡುವುದು ಒಂದು ವಿಷಯವಾಗಿರುವಾಗ, ಲೈಂಗಿಕ ಅನೈತಿಕತೆಯಂತಹ ಗಂಭೀರವಾದ ತಪ್ಪನ್ನು ಮಾಡುವುದರಲ್ಲಿ ಸೇರಿಕೊಳ್ಳುವುದು ಸಂಪೂರ್ಣವಾಗಿ ಬೇರೆ ವಿಷಯವಾಗಿದೆ. (1 ಕೊರಿಂಥ 6:9, 10) ಅದು ಸಂಭವಿಸುವಾಗ, ಒಬ್ಬ ಯುವ ವ್ಯಕ್ತಿಯು ಸಹಾಯವನ್ನು ಪಡೆದುಕೊಳ್ಳುವ ಅಗತ್ಯವಿದೆ. ಸಮಸ್ಯೆ ಏನಂದರೆ, ಒಬ್ಬನ ದೋಷಗಳನ್ನು ಒಪ್ಪಿಕೊಳ್ಳುವುದು ಸುಲಭಸಾಧ್ಯವಲ್ಲ.
ಒಬ್ಬ ಕ್ರೈಸ್ತ ಹುಡುಗಿಯು ವಿವಾಹಪೂರ್ವದ ಸಂಭೋಗದಲ್ಲಿ ಒಳಗೂಡಿದಳು. ಅವಳ ಸಭೆಯ ಹಿರಿಯರ ಬಳಿ ತಪ್ಪನ್ನು ಒಪ್ಪಿಕೊಳ್ಳಲು ಅವಳು ನಿರ್ಧರಿಸಿದಳು. ಹಾಗೆ ಮಾಡಲು ಅವಳು ಒಂದು ತಾರೀಖನ್ನೂ ಗೊತ್ತುಮಾಡಿಕೊಂಡಳು. ಆದರೆ ಅವಳು ಆ ತಾರೀಖನ್ನು ಮುಂದಕ್ಕೆ ಹಾಕಿದಳು. ಆಮೇಲೆ, ಅವಳು ಆ ತಾರೀಖನ್ನು ಪುನಃ ಮುಂದಕ್ಕೆ ಹಾಕಿದಳು. ಬೇಗನೆ, ಪೂರ್ತಿ ಒಂದು ವರುಷ ಕಳೆದುಹೋಗಿತ್ತು!
“ಯಾವುದೂ ರಹಸ್ಯವಾಗಿಲ್ಲ”
ನೀವು ಗಂಭೀರವಾದ ಪಾಪಕ್ಕೆ ವಶವಾಗಿರುವುದಾದರೆ, ಮೌನವಾಗಿರುವುದು ತೀರ ಅವಿವೇಕದ ವಿಚಾರವಾಗಿದೆ ಎಂಬುದನ್ನು ನೀವು ಗ್ರಹಿಸಿಕೊಳ್ಳಲೇಬೇಕು. ಒಂದು ವಿಷಯವೇನಂದರೆ, ಸಾಮಾನ್ಯವಾಗಿ ಸತ್ಯವು ಹೇಗಾದರೂ ಬಯಲಾಗುತ್ತದೆ. ಚಿಕ್ಕ ಮಗುವಾಗಿದ್ದಾಗ ಮಾರ್ಕ್, ಗೋಡೆಯ ಅಲಂಕಾರಕ್ಕಾಗಿದ್ದ ಪಿಂಗಾಣಿಯ ವಸ್ತುವೊಂದನ್ನು ಮುರಿದನು. ಅವನು ಜ್ಞಾಪಿಸಿಕೊಳ್ಳುವುದು, “ನಾನು ಅದನ್ನು ಜಾಗರೂಕತೆಯಿಂದ ಪುನಃ ಒಂದಾಗಿ ಅಂಟಿಸಲು ಪ್ರಯತ್ನಿಸಿದೆ. ಆದರೆ, ನನ್ನ ಹೆತ್ತವರು ಬೇಗನೆ ಆ ಬಿರುಕುಗಳನ್ನು ಗುರುತಿಸಿದರು.” ನಿಜ, ನೀವು ಈಗ ಒಂದು ಮಗುವಾಗಿಲ್ಲ. ಆದರೂ ಹೆಚ್ಚಿನ ಹೆತ್ತವರು ತಮ್ಮ ಮಕ್ಕಳಲ್ಲಿ ಏನಾದರೂ ತಪ್ಪಿರುವುದಾದರೆ, ಅದನ್ನು ಸಾಮಾನ್ಯವಾಗಿ ತಿಳಿದುಕೊಳ್ಳಬಲ್ಲರು.
“ನನ್ನ ಸಮಸ್ಯೆಗಳನ್ನು ಸುಳ್ಳುಗಳ ಮೂಲಕ ಮುಚ್ಚಲು ನಾನು ಪ್ರಯತ್ನಿಸಿದೆ. ಆದರೆ, ನಾನು ವಿಷಯಗಳನ್ನು ಇನ್ನೂ ಕೆಟ್ಟದ್ದಾಗಿಸಿ ಕೊನೆಗಾಣಿಸಿದೆ,” ಎಂದು 15 ವರುಷ ಪ್ರಾಯದ ಆ್ಯನ್ ಒಪ್ಪಿಕೊಳ್ಳುತ್ತಾಳೆ. ಆಗದಿರುವುದಕ್ಕಿಂತ ಹೆಚ್ಚು ಬಾರಿ ಸುಳ್ಳುಗಳು ಬಯಲಾಗುತ್ತವೆ. ಮತ್ತು ನೀವು ಸುಳ್ಳು ಹೇಳಿದ್ದೀರೆಂದು ನಿಮ್ಮ ಹೆತ್ತವರು ಕಂಡುಕೊಳ್ಳುವಾಗ, ನೀವು ಅವರ ಬಳಿಗೆ ನೇರವಾಗಿ ಬಂದು ತಪ್ಪನ್ನು ಒಪ್ಪಿಕೊಂಡಿದ್ದರೆ ಆಗಬಹುದಾಗಿದ್ದ ಕಳವಳಕ್ಕಿಂತಲೂ ಹೆಚ್ಚಾಗಿ ಅವರು ಕಳವಳಗೊಳ್ಳುವುದು ಸಂಭವನೀಯ.
ಅದಕ್ಕಿಂತಲೂ ಮುಖ್ಯವಾಗಿ, ಬೈಬಲ್ ಹೇಳುವುದು: “ಪ್ರಕಾಶಕ್ಕೆ ಬಾರದ ಯಾವ ರಹಸ್ಯವೂ ಇಲ್ಲ; [“ಯಾವುದೂ ರಹಸ್ಯವಾಗಿಲ್ಲ,” NW] ಮತ್ತು ಗೊತ್ತಾಗದೆ ಬೈಲಿಗೆ ಬಾರದೆ ಇರುವಂಥ ಗುಟ್ಟು ಒಂದೂ ಇಲ್ಲ.” (ಲೂಕ 8:17) ನಾವು ಏನು ಮಾಡಿದ್ದೇವೆ ಹಾಗೂ ಏನು ಮಾಡುತ್ತಿದ್ದೇವೆ ಎಂದು ಯೆಹೋವನು ತಿಳಿದಿದ್ದಾನೆ. ಆದಾಮನಿಗೆ ಸಾಧ್ಯವಾಗಿರದಿದ್ದಂತೆಯೇ ನೀವೂ ಏನನ್ನೂ ಆತನಿಂದ ರಹಸ್ಯವಾಗಿಡಲಾರಿರಿ. (ಆದಿಕಾಂಡ 3:8-11) ತಕ್ಕ ಸಮಯದಲ್ಲಿ, ನಿಮ್ಮ ಪಾಪಗಳೂ ಇತರರಿಗೆ ಬಯಲಾಗಬಹುದು.—1 ತಿಮೊಥೆಯ 5:24.
ಮೌನವಾಗಿರುವುದು ನಿಮ್ಮನ್ನು ಬೇರೆ ರೀತಿಗಳಲ್ಲಿಯೂ ಹಾನಿಗೊಳಿಸಸಾಧ್ಯವಿದೆ. ಕೀರ್ತನೆಗಾರನಾದ ದಾವೀದನು ಬರೆದದ್ದು: “ನಾನು ಮೌನವಾಗಿದ್ದಾಗ ದಿನವೆಲ್ಲಾ ನರಳುವದರಿಂದ ನನ್ನ ಎಲುಬುಗಳು ಸವೆದುಹೋದವು. ಹಗಲಿರುಳು ನಿನ್ನ ಹಸ್ತವು ನನ್ನ ಮೇಲೆ ಭಾರವಾಗಿತ್ತು.” (ಕೀರ್ತನೆ 32:3, 4, NW) ಹೌದು, ರಹಸ್ಯವನ್ನು ಉಳಿಸಿಕೊಳ್ಳುವ ಒತ್ತಡವು, ಮಾನಸಿಕವಾಗಿ ಒಂದು ಭಾರವಾದ ಹೊರೆಯಂತಿರಸಾಧ್ಯವಿದೆ. ವ್ಯಾಕುಲತೆ, ದೋಷಿಭಾವ ಹಾಗೂ ಗುಟ್ಟು ಬಯಲಾಗಬಹುದೆಂಬ ಭಯವೂ ನಿಮ್ಮ ಮನಸ್ಸಿಗೆ ನೆಮ್ಮದಿಯಿಲ್ಲದಂತೆ ಮಾಡಸಾಧ್ಯವಿದೆ. ನೀವು ಸ್ನೇಹಿತರಿಂದಲೂ, ಕುಟುಂಬದಿಂದಲೂ ನಿಮ್ಮನ್ನು ದೂರವಿರಿಸಿಕೊಳ್ಳಲು ಪ್ರಾರಂಭಿಸಬಹುದು. ನೀವು ದೇವರಿಂದಲೂ ಪ್ರತ್ಯೇಕಿಸಲ್ಪಟ್ಟಿದ್ದೀರೆಂಬ ಅನಿಸಿಕೆಯೂ ನಿಮಗೆ ಆಗಬಹುದು! “ನಾನು ಯೆಹೋವನನ್ನು ದುಃಖಗೊಳಿಸಿದ್ದಕ್ಕಾಗಿ ಒಂದು ದೋಷಯುಕ್ತ ಮನಸ್ಸಾಕ್ಷಿಯೊಂದಿಗೆ ವ್ಯವಹರಿಸುತ್ತಿದ್ದೆ. ಅದು ನನ್ನನ್ನು ಬಾಧಿಸುತ್ತಾ ಇತ್ತು,” ಎಂಬುದಾಗಿ ಆ್ಯಂಡ್ರೂ ಎಂಬ ಹೆಸರಿನ ಒಬ್ಬ ಯುವಕನು ಬರೆದನು.
ಮೌನವನ್ನು ಮುರಿಯುವುದು
ಈ ಭಾವಾವೇಶದ ಗಲಭೆಯಿಂದ ಬಿಡುಗಡೆಹೊಂದಲು ಯಾವುದಾದರೂ ಮಾರ್ಗವಿದೆಯೊ? ಹೌದು, ಇದೆ! ಕೀರ್ತನೆಗಾರನು ಹೇಳಿದ್ದು: “ನನ್ನ ಪಾಪವನ್ನು ಮರೆಮಾಡದೆ ನಿನಗೆ ನನ್ನ ದೋಷವನ್ನು ತಿಳಿಸಿದೆನು. ನೀನು ನನ್ನ ಅಪರಾಧಪಾಪಗಳನ್ನು ಪರಿಹರಿಸಿಬಿಟ್ಟಿ.” (ಕೀರ್ತನೆ 32:5; 1 ಯೋಹಾನ 1:9ನ್ನು ಹೋಲಿಸಿರಿ.) ಅಂತೆಯೇ ಆ್ಯಂಡ್ರೂ ತನ್ನ ಪಾಪವನ್ನು ಒಪ್ಪಿಕೊಳ್ಳುವುದರಲ್ಲಿ ನಿಜವಾದ ಬಿಡುಗಡೆಯನ್ನು ಕಂಡುಕೊಂಡನು. ಅವನು ಜ್ಞಾಪಿಸಿಕೊಳ್ಳುವುದು: “ನಾನು ಯೆಹೋವನನ್ನು ಸಮೀಪಿಸಿ ಆತನ ಕ್ಷಮಾಪಣೆಗಾಗಿ ಮನಃಪೂರ್ವಕವಾಗಿ ಪ್ರಾರ್ಥಿಸಿದೆ.”
ನೀವೂ ಅದನ್ನೇ ಮಾಡಸಾಧ್ಯವಿದೆ. ಯೆಹೋವನಿಗೆ ಪ್ರಾರ್ಥಿಸಿರಿ. ನೀವು ಏನು ಮಾಡಿದ್ದೀರೆಂಬುದು ಆತನಿಗೆ ತಿಳಿದಿದೆ, ಆದರೂ ದೀನತೆಯಿಂದ ಪ್ರಾರ್ಥನೆಯಲ್ಲಿ ಅದನ್ನು ಒಪ್ಪಿಕೊಳ್ಳಿರಿ. ನೀವು ಸಹಾಯವನ್ನು ಪಡೆದುಕೊಳ್ಳಲು ತೀರ ದುಷ್ಟರೆಂದು ಭಾವಿಸುವ ಕಾರಣದಿಂದಾಗಿ ಹಿಂಜರಿಯದೆ, ಕ್ಷಮಾಪಣೆಗಾಗಿ ಕೇಳಿಕೊಳ್ಳಿರಿ. ನಮ್ಮ ಅಪರಿಪೂರ್ಣತೆಯ ಹೊರತಾಗಿಯೂ, ನಾವು ಯೆಹೋವನೊಂದಿಗೆ ಒಂದು ಒಳ್ಳೆಯ ನಿಲುವಿನಲ್ಲಿ ಆನಂದಿಸಸಾಧ್ಯವಾಗುವಂತೆ ಯೇಸು ಸತ್ತನು. (1 ಯೋಹಾನ 2:1, 2) ಅಗತ್ಯವಿರುವ ಬದಲಾವಣೆಗಳನ್ನು ಮಾಡಲು, ಬಲಕ್ಕಾಗಿಯೂ ನೀವು ಕೇಳಿಕೊಳ್ಳಸಾಧ್ಯವಿದೆ. ಈ ರೀತಿಯಲ್ಲಿ ದೇವರನ್ನು ಸಮೀಪಿಸಲು ಕೀರ್ತನೆ 51ನ್ನು ಓದುವುದೂ ನಿಮಗೆ ವಿಶೇಷ ಸಹಾಯವಾಗಿ ಪರಿಣಮಿಸಬಹುದು.
ನಿಮ್ಮ ಹೆತ್ತವರಿಗೆ ಹೇಳುವುದು
ಹಾಗಿದ್ದರೂ, ದೇವರ ಬಳಿ ತಪ್ಪನ್ನು ಒಪ್ಪಿಕೊಳ್ಳುವುದಕ್ಕಿಂತಲೂ ಹೆಚ್ಚಿನದ್ದು ಅಗತ್ಯವಿದೆ. ನಿಮ್ಮ ಹೆತ್ತವರಿಗೂ ಹೇಳಲು ನೀವು ಹಂಗಿಗರಾಗಿದ್ದೀರಿ. “ಕರ್ತನಿಗೆ [“ಯೆಹೋವನಿಗೆ,” NW] ಮೆಚ್ಚಿಗೆಯಾಗಿರುವ ಬಾಲಶಿಕ್ಷೆಯನ್ನೂ ಬಾಲೋಪದೇಶವನ್ನೂ ಮಾಡುತ್ತಾ” ನಿಮ್ಮನ್ನು ಬೆಳೆಸುವಂತೆ ಅವರು ದೇವರಿಂದ ಆಜ್ಞಾಪಿಸಲ್ಪಟ್ಟಿದ್ದಾರೆ. (ಎಫೆಸ 6:4) ನಿಮ್ಮ ಸಮಸ್ಯೆಗಳನ್ನು ಅವರು ತಿಳಿದಿದ್ದರೆ ಮಾತ್ರ ಅವರು ಇದನ್ನು ಮಾಡಸಾಧ್ಯವಿದೆ. ನಿಮ್ಮ ಹೆತ್ತವರಿಗೆ ಹೇಳುವುದು ಸುಲಭವಾಗಿಯೂ, ಹಿತಕರವಾಗಿಯೂ ಇಲ್ಲದಿರಬಹುದು. ಆದರೆ ಅವರ ಆರಂಭದ ಪ್ರತಿಕ್ರಿಯೆಯ ನಂತರ, ಅವರು ತಮ್ಮ ಭಾವಾವೇಶಗಳನ್ನು ಹತೋಟಿಯಲ್ಲಿಟ್ಟುಕೊಳ್ಳಬಹುದು. ನೀವು ನಿಮ್ಮ ಸಮಸ್ಯೆಯನ್ನು ಅವರ ಬಳಿ ತಿಳಿಸುವಷ್ಟರ ಮಟ್ಟಿಗೆ, ಅವರಲ್ಲಿ ಭರವಸೆಯನ್ನಿಟ್ಟಿದ್ದೀರೆಂದು ಸಹ ಅವರು ಸಂತೋಷಪಡಬಹುದು. ಯೇಸುವಿನ ಪೋಲಿ ಹೋದ ಮಗನ ಸಾಮ್ಯವು, ಲೈಂಗಿಕ ಅನೈತಿಕತೆಗೆ ಬಲಿಬಿದ್ದ ಒಬ್ಬ ಯುವಕನ ಕುರಿತು ಹೇಳುತ್ತದೆ. ಆದರೆ ಅವನು ಕೊನೆಗೆ ತಪ್ಪನ್ನು ಒಪ್ಪಿಕೊಂಡಾಗ, ಅವನ ತಂದೆಯು ಅವನನ್ನು ಅತ್ಯಾದರದಿಂದ ಸ್ವಾಗತಿಸಿದನು! (ಲೂಕ 15:11-24) ಖಂಡಿತವಾಗಿಯೂ, ನಿಮ್ಮ ಹೆತ್ತವರು ಅಂತೆಯೇ ನಿಮ್ಮ ಸಹಾಯಕ್ಕೆ ಬರುವರು ಎಂಬುದರಲ್ಲಿ ಸಂಶಯವಿಲ್ಲ. ಎಷ್ಟೆಂದರೂ, ಅವರು ನಿಮ್ಮನ್ನು ಇನ್ನೂ ಪ್ರೀತಿಸುತ್ತಾರೆ.
ನಿಜ, ನಿಮ್ಮ ಹೆತ್ತವರನ್ನು ನೋಯಿಸುವಿರೆಂದು ನೀವು ಭಯಪಡಬಹುದು. ಆದರೆ ಪಾಪವನ್ನು ಒಪ್ಪಿಕೊಳ್ಳುವುದಲ್ಲ, ಪಾಪವನ್ನು ಮಾಡುವುದು ತಾನೇ ನಿಮ್ಮ ಹೆತ್ತವರನ್ನು ನೋಯಿಸುವಂತಹದ್ದಾಗಿದೆ! ಅಂತಹ ನೋವನ್ನು ಶಮನಗೊಳಿಸುವುದಕ್ಕೆ, ತಪ್ಪನ್ನು ಒಪ್ಪಿಕೊಳ್ಳುವುದು ಮೊದಲ ಹೆಜ್ಜೆಯಾಗಿದೆ. ಈ ಮುಂಚೆ ಉಲ್ಲೇಖಿಸಲ್ಪಟ್ಟ ಆ್ಯನ್, ತನ್ನ ಹೆತ್ತವರಿಗೆ ತಿಳಿಸಿದಳು ಮತ್ತು ಆಮೇಲೆ ಅವಳಿಗೆ ಮಹತ್ತರವಾದ ಬಿಡುಗಡೆಯಾದಂತೆ ಅನಿಸಿತು.b
ಪಾಪವನ್ನು ಒಪ್ಪಿಕೊಳ್ಳುವುದಕ್ಕೆ ಇನ್ನೊಂದು ತಡೆಯು, ನಾಚಿಕೆ ಹಾಗೂ ಮುಜುಗರವಾಗಿದೆ. ನಂಬಿಗಸ್ತ ಶಾಸ್ತ್ರಿಯಾದ ಎಜ್ರನು ತಾನಾಗಿ ಆ ಪಾಪಗಳನ್ನು ಮಾಡಿರಲಿಲ್ಲ, ಆದರೂ ಅವನ ಸಹ ಯೆಹೂದ್ಯರ ಪಾಪಗಳನ್ನು ಅವನು ಒಪ್ಪಿಕೊಂಡಾಗ, ಅವನು ಹೇಳಿದ್ದು: “ನನ್ನ ದೇವರೇ, ನಾನು ಮನಗುಂದಿದವನಾಗಿದ್ದೇನೆ; ನಿನ್ನ ಕಡೆಗೆ ಮುಖವನ್ನೆತ್ತುವದಕ್ಕೆ ನಾಚಿಕೊಳ್ಳುತ್ತೇನೆ.” (ಎಜ್ರ 9:6) ನಿಜವಾಗಿಯೂ, ನೀವು ತಪ್ಪುಮಾಡಿರುವಾಗ ನಾಚಿಕೊಳ್ಳುವುದು ಯೋಗ್ಯವಾಗಿದೆ. ನಿಮ್ಮ ಮನಸ್ಸಾಕ್ಷಿಯು ಇನ್ನೂ ಕೆಲಸಮಾಡುತ್ತಿದೆ ಎಂದು ಇದು ಸೂಚಿಸುತ್ತದೆ. ಸಮಯ ಹೋದಂತೆ ಆ ನಾಚಿಕೆಯ ಅನಿಸಿಕೆಗಳು ಶಮನವಾಗುತ್ತವೆ. ಆ್ಯಂಡ್ರೂ ಇದನ್ನು ಹೀಗೆ ವ್ಯಕ್ತಪಡಿಸಿದನು: “ಒಪ್ಪಿಕೊಳ್ಳುವುದು ಬಹಳ ಕಷ್ಟದ ಹಾಗೂ ಮುಜಗರದ ವಿಷಯವಾಗಿದೆ. ಆದರೆ ಯೆಹೋವನು ಮಹಾಕೃಪೆಯಿಂದ ಕ್ಷಮಿಸುವನು ಎಂದು ತಿಳಿಯುವುದು ಒಂದು ಬಿಡುಗಡೆಯಾಗಿದೆ.”
ಹಿರಿಯರ ಬಳಿಗೆ ಹೋಗುವುದು
ನೀವು ಒಬ್ಬ ಕ್ರೈಸ್ತರಾಗಿರುವುದಾದರೆ, ನಿಮ್ಮ ಹೆತ್ತವರೊಂದಿಗೆ ಹೇಳಿದ ಮಾತ್ರಕ್ಕೆ ವಿಷಯವು ಮುಕ್ತಾಯವಾಗುವುದಿಲ್ಲ. ಆ್ಯಂಡ್ರೂ ಹೇಳುವುದು: “ನನ್ನ ಸಮಸ್ಯೆಯನ್ನು ಸಭೆಯ ಹಿರಿಯರ ಬಳಿಗೆ ತೆಗೆದುಕೊಂಡುಹೋಗಬೇಕೆಂದು ನನಗೆ ತಿಳಿದಿತ್ತು. ನನಗೆ ಸಹಾಯ ಮಾಡಲು ಅವರು ಸಿದ್ಧರಿದ್ದರೆಂಬುದನ್ನು ತಿಳಿಯುವುದು ಎಂತಹ ಒಂದು ಬಿಡುಗಡೆಯಾಗಿತ್ತು!” ಹೌದು, ಯೆಹೋವನ ಸಾಕ್ಷಿಗಳಲ್ಲಿನ ಯುವ ಜನರು, ಸಹಾಯ ಹಾಗೂ ಪ್ರೋತ್ಸಾಹನೆಗಾಗಿ ಸಭೆಯ ಹಿರಿಯರ ಬಳಿ ಹೋಗಸಾಧ್ಯವಿದೆ ಮತ್ತು ಹೋಗಬೇಕು. ಆದರೆ ನೀವು ಯೆಹೋವನಿಗೆ ಕೇವಲ ಪ್ರಾರ್ಥಿಸಿ, ವಿಷಯವನ್ನು ಅಲ್ಲಿಗೇ ಬಿಟ್ಟುಬಿಡಸಾಧ್ಯವಿಲ್ಲವೇಕೆ? ಏಕೆಂದರೆ ಯೆಹೋವನು ಹಿರಿಯರಿಗೆ “ನಿಮ್ಮ ಆತ್ಮಗಳನ್ನು ಕಾಯುವ” ಜವಾಬ್ದಾರಿಯನ್ನು ಕೊಟ್ಟಿದ್ದಾನೆ. (ಇಬ್ರಿಯ 13:17, NW) ನೀವು ಪುನಃ ಪಾಪದಲ್ಲಿ ಬೀಳದಂತೆ ಅವರು ನಿಮಗೆ ಸಹಾಯಮಾಡಸಾಧ್ಯವಿದೆ.—ಯಾಕೋಬ 5:14-16ನ್ನು ಹೋಲಿಸಿರಿ.
ನಿಮಗೆ ನೀವೇ ಸಹಾಯಮಾಡಿಕೊಳ್ಳಸಾಧ್ಯವಿದೆ ಎಂದು ಸಮರ್ಥಿಸುತ್ತಾ, ನಿಮ್ಮನ್ನು ನೀವೇ ಮೋಸಗೊಳಿಸಿಕೊಳ್ಳಬೇಡಿ. ನೀವು ನಿಜವಾಗಿಯೂ ಅದನ್ನು ಮಾಡಲು ಸಾಕಷ್ಟು ಬಲವುಳ್ಳವರಾಗಿದ್ದರೆ, ಮೊದಲಾಗಿ ನೀವು ಪಾಪದಲ್ಲಿ ಬೀಳುತ್ತಿದ್ದಿರೋ? ಸ್ಪಷ್ಟವಾಗಿ, ನೀವು ಬೇರೆಯವರಿಂದ ಸಹಾಯವನ್ನು ಪಡೆದುಕೊಳ್ಳಲೇಬೇಕು. ಆ್ಯಂಡ್ರೂ ಧೈರ್ಯದಿಂದ ಅದನ್ನು ಮಾಡಿದನು. ಅವನ ಬುದ್ಧಿವಾದವೇನು? “ಗಂಭೀರವಾದ ಪಾಪದಲ್ಲಿ ಒಳಗೊಂಡಿರುವ, ಅಥವಾ ಈ ಹಿಂದೆ ಒಳಗೊಂಡಿದ್ದಂತಹ ಯಾವನೇ ಆಗಲಿ, ತನ್ನ ಹೃದಯವನ್ನು ಯೆಹೋವನ ಬಳಿ ಹಾಗೂ ಆತನ ಕುರುಬರಲ್ಲೊಬ್ಬನ ಬಳಿ ಬಿಚ್ಚುವಂತೆ ನಾನು ಪ್ರೋತ್ಸಾಹಿಸುತ್ತೇನೆ.”
ಆದರೆ ನೀವು ಹಿರಿಯನೊಬ್ಬನನ್ನು ಹೇಗೆ ಸಮೀಪಿಸುತ್ತೀರಿ? ಯಾರೊಂದಿಗೆ ನೀವು ಸಾಧಾರಣವಾಗಿ ಹಾಯಾಗಿದ್ದೀರೊ ಅಂತಹ ಒಬ್ಬರನ್ನು ಆರಿಸಿಕೊಳ್ಳಿರಿ. ನೀವು ಈ ರೀತಿ ಹೇಳುವ ಮೂಲಕ ಪ್ರಾರಂಭಿಸಸಾಧ್ಯವಿದೆ: “ನನಗೆ ಯಾವುದೋ ವಿಷಯದ ಕುರಿತಾಗಿ ಮಾತಾಡಲಿಕ್ಕಿದೆ” ಅಥವಾ “ನನಗೆ ಒಂದು ಸಮಸ್ಯೆಯಿದೆ” ಅಥವಾ “ನನಗೆ ಒಂದು ಸಮಸ್ಯೆಯಿದೆ ಮತ್ತು ನಿಮ್ಮ ಸಹಾಯ ಬೇಕಾಗಿದೆ.” ನೀವು ಪ್ರಾಮಾಣಿಕರಾಗಿಯೂ, ಮುಚ್ಚುಮರೆಯಿಲ್ಲದವರಾಗಿಯೂ ಇರುವುದು, ನಿಮ್ಮ ಪಶ್ಚಾತ್ತಾಪ ಹಾಗೂ ಬದಲಾಗಬೇಕೆಂಬ ಆಶೆಯನ್ನು ಖಂಡಿತವಾಗಿಯೂ ಪ್ರದರ್ಶಿಸುವುದು.
‘ನನಗೆ ಬಹಿಷ್ಕರಿಸಲ್ಪಡುವ ಭಯವಿದೆ’
ಆ ಸಾಧ್ಯತೆಯ ಕುರಿತೇನು? ಗಂಭೀರವಾದ ಪಾಪವನ್ನು ಮಾಡುವುದು ಒಬ್ಬನನ್ನು ಬಹಿಷ್ಕಾರಕ್ಕೆ ಬದ್ಧನನ್ನಾಗಿ ಮಾಡುತ್ತದೆಂಬುದು ಸತ್ಯ, ಆದರೆ ಯಾಂತ್ರಿಕವಾಗಿ ಅಲ್ಲ. ಬಹಿಷ್ಕಾರವು ಪಶ್ಚಾತ್ತಾಪಪಡಲು ನಿರಾಕರಿಸಿದವರಿಗಾಗಿ, ಯಾರು ಹಟಮಾರಿತನದಿಂದ ಬದಲಾಗಲು ನಿರಾಕರಿಸುತ್ತಾರೋ ಅವರಿಗಾಗಿದೆ. ಜ್ಞಾನೋಕ್ತಿ 28:13 ಹೇಳುವುದು: “ದೋಷಗಳನ್ನು ಮುಚ್ಚಿಕೊಳ್ಳುವವನಿಗೆ ಶುಭವಾಗದು; ಅವುಗಳನ್ನು ಒಪ್ಪಿಕೊಂಡು ಬಿಟ್ಟುಬಿಡುವವನಿಗೆ ಕರುಣೆ ದೊರೆಯುವದು.” ನೀವು ಸಹಾಯಕ್ಕಾಗಿ ಹಿರಿಯರನ್ನು ಸಂಪರ್ಕಿಸಿದ್ದೀರೆಂಬ ಸಂಗತಿಯೇ, ಬದಲಾಗಬೇಕೆಂಬ ನಿಮ್ಮ ಇಚ್ಛೆಗೆ ಪುರಾವೆಯಾಗಿದೆ. ಹಿರಿಯರು ಮೂಲತಃ ವಾಸಿಮಾಡುವವರು, ಶಿಕ್ಷಿಸುವವರಲ್ಲ. ದೇವಜನರನ್ನು ಕರುಣೆಯಿಂದಲೂ, ಗೌರವದಿಂದಲೂ ಉಪಚರಿಸಲು ಅವರು ಬದ್ಧರಾಗಿದ್ದಾರೆ. “ನಿಮ್ಮ ಕಾಲುಗಳಿಗೆ ನೆಟ್ಟನೆಯ ಹಾದಿಯನ್ನು” (NW) ಮಾಡಲು ಅವರು ನಿಮಗೆ ಸಹಾಯಮಾಡಲು ಬಯಸುತ್ತಾರೆ.—ಇಬ್ರಿಯ 12:13.
ಎಲ್ಲಿ ಮೋಸಗಾರಿಕೆ ಅಥವಾ ಬಹಳ ಸಮಯದ ಗಂಭೀರವಾದ ತಪ್ಪಿನ ರೂಢಿಯು ಸೇರಿಕೊಂಡಿದೆಯೊ ಅಲ್ಲಿ, ಮನಗಾಣಿಸುವ, “ಮಾನಸಾಂತರಕ್ಕೆ ಯೋಗ್ಯವಾದ ಕೃತ್ಯಗಳ” ಕೊರತೆಯಿರಬಹುದು ಎಂಬುದು ಒಪ್ಪತಕ್ಕ ವಿಷಯವೇ. (ಅ. ಕೃತ್ಯಗಳು 26:20) ಕೆಲವೊಮ್ಮೆ ಬಹಿಷ್ಕಾರವು ಖಂಡಿತವಾಗಿ ಫಲಿಸುತ್ತದೆ. ಮತ್ತು ತಪ್ಪಿತಸ್ಥನು ಪಶ್ಚಾತ್ತಾಪ ತೋರಿಸಿದಲ್ಲಿಯೂ, ಕೆಲವು ರೀತಿಯ ಶಿಕ್ಷೆ ವಿಧಿಸಲು ಹಿರಿಯರು ಬದ್ಧರಾಗಿದ್ದಾರೆ. ನೀವು ಅವರ ನಿರ್ಣಯದ ಕುರಿತು ಕೋಪಿಸಿಕೊಳ್ಳಬೇಕೋ ಅಥವಾ ಉದ್ರೇಕಗೊಳ್ಳಬೇಕೋ? ಇಬ್ರಿಯ 12:5, 6,ರಲ್ಲಿ ಪೌಲನು ಪ್ರಚೋದಿಸುವುದು: “ಮಗನೇ, ಕರ್ತನ [“ಯೆಹೋವನ,” NW] ಶಿಕ್ಷೆಯನ್ನು ತಾತ್ಸಾರಮಾಡಬೇಡ; ಆತನು ನಿನ್ನನ್ನು ಗದರಿಸುವಾಗ ಬೇಸರಗೊಳ್ಳಬೇಡ; ಕರ್ತನು [“ಯೆಹೋವನು,” NW] ತಾನು ಪ್ರೀತಿಸುವವನನ್ನೇ ಶಿಕ್ಷಿಸುತ್ತಾನೆ; ತಾನು ಸೇರಿಸಿಕೊಳ್ಳುವ ಪ್ರತಿಯೊಬ್ಬ ಮಗನನ್ನು ಹೊಡೆಯುತ್ತಾನೆ.” ನೀವು ಯಾವುದೇ ಶಿಕ್ಷೆಯನ್ನು ಪಡೆದರೂ, ಅದನ್ನು ದೇವರು ನಿಮ್ಮನ್ನು ಪ್ರೀತಿಸುತ್ತಾನೆಂಬ ಪುರಾವೆಯಾಗಿ ದೃಷ್ಟಿಸಿರಿ. ನೆನಪಿನಲ್ಲಿಡಿರಿ, ನಿಜವಾದ ಪಶ್ಚಾತ್ತಾಪವು, ನಮ್ಮ ಕರುಣಾಮಯಿ ತಂದೆಯಾದ ಯೆಹೋವ ದೇವರೊಂದಿಗೆ ಒಂದು ಒಳ್ಳೆಯ ಸಂಬಂಧಕ್ಕೆ ನಿಮ್ಮನ್ನು ಪುನಸ್ಸ್ಥಾಪಿಸುವುದು.
ನಿಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವುದು, ಧೈರ್ಯವನ್ನು ಕೇಳಿಕೊಳ್ಳುತ್ತದೆ. ಆದರೆ ಹಾಗೆ ಮಾಡುವ ಮೂಲಕ, ನೀವು ವಿಷಯಗಳನ್ನು ನಿಮ್ಮ ಹೆತ್ತವರೊಂದಿಗೆ ಮಾತ್ರವಲ್ಲ, ಯೆಹೋವ ದೇವರೊಂದಿಗೂ ಸರಿಪಡಿಸಸಾಧ್ಯವಿದೆ. ಭಯ, ಹೆಮ್ಮೆ, ಅಥವಾ ಮುಜಗರವು ಸಹಾಯ ಪಡೆಯುವುದರಿಂದ ನಿಮ್ಮನ್ನು ತಡೆಯುವಂತೆ ಬಿಡಬೇಡಿ. ನೆನಪಿನಲ್ಲಿಡಿರಿ: ಯೆಹೋವನು “ಮಹಾಕೃಪೆಯಿಂದ ಕ್ಷಮಿಸುವನು.”—ಯೆಶಾಯ 55:7.
[ಅಧ್ಯಯನ ಪ್ರಶ್ನೆಗಳು]
a ಹೆಸರುಗಳಲ್ಲಿ ಕೆಲವು ಬದಲಾಯಿಸಲ್ಪಟ್ಟಿವೆ.
b ನಿಮ್ಮ ಹೆತ್ತವರನ್ನು ಸಮೀಪಿಸುವುದರ ಕುರಿತಾದ ಮಾಹಿತಿಗಾಗಿ, ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತವಾದ, ಯುವ ಜನರ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳು (ಇಂಗ್ಲಿಷ್) ಪುಸ್ತಕದ 2ನೆಯ ಅಧ್ಯಾಯವನ್ನು ನೋಡಿರಿ.
[ಪುಟ 23 ರಲ್ಲಿರುವ ಸಂಕ್ಷಿಪ್ತ ವಿವರಣೆ]
‘ಪಾಪಮಾಡಿರುವವರೆಲ್ಲರೂ ತಮ್ಮ ಹೃದಯವನ್ನು ಯೆಹೋವನಿಗೆ ಬಿಚ್ಚುವಂತೆ ನಾನು ಪ್ರೋತ್ಸಾಹಿಸುತ್ತೇನೆ.’—ಆ್ಯಂಡ್ರೂ
[ಪುಟ 22 ರಲ್ಲಿರುವ ಚಿತ್ರ]
ನಿಮ್ಮ ಹೆತ್ತವರಿಗೆ ತಪ್ಪನ್ನು ಒಪ್ಪಿಕೊಳ್ಳುವುದು, ಆತ್ಮಿಕ ವಾಸಿಗೆ ನಡೆಸಸಾಧ್ಯವಿದೆ