ಹುಲ್ಲು ಹಸುರಾಗಿರಲು ಕಾರಣ ದ್ಯುತಿಸಂಶ್ಲೇಷಣೆಯ ಕಡೆಗೆ ಹೆಚ್ಚು ನಿಕಟವಾದ ಒಂದು ನೋಟ
“ಹುಲ್ಲು ಹಸುರಾಗಿರುವುದೇಕೆ?” ನೀವು ಮಗುವಾಗಿದ್ದಾಗ ಪ್ರಾಯಶಃ ಆ ಪ್ರಶ್ನೆಯನ್ನು ಕೇಳಿದ್ದೀರಿ. ಉತ್ತರದಿಂದ ನಿಮಗೆ ಸಂತೃಪ್ತಿಯಾಗಿತ್ತೊ? ಮಕ್ಕಳ ಇಂತಹ ಪ್ರಶ್ನೆಗಳು ಅತಿ ಅಗಾಧವಾಗಿರಬಲ್ಲವು. ಅವು ನಾವು ಮಾಮೂಲಿಯೆಂದು ಪರಿಗಣಿಸುವ ದಿನನಿತ್ಯದ ವಿಷಯಗಳನ್ನು ಹೆಚ್ಚು ಗಾಢವಾಗಿ ಪರೀಕ್ಷಿಸುವಂತೆ ಮಾಡಿ, ನಾವು ಎಂದಿಗೂ ಸಂಶಯಪಟ್ಟಿದ್ದಿರದ, ಮರೆಯಾಗಿದ್ದ ಅದ್ಭುತಗಳನ್ನು ಅವು ಬಯಲುಮಾಡಸಾಧ್ಯವಿದೆ.
ಹುಲ್ಲು ಹಸುರಾಗಿರಲು ಕಾರಣವೇನೆಂಬುದನ್ನು ಅರ್ಥಮಾಡಿಕೊಳ್ಳಲು, ಹುಲ್ಲಿಗೆ ಯಾವ ಸಂಬಂಧವೂ ಇಲ್ಲವೆಂದು ತೋರುವ ಒಂದು ಸಂಗತಿಯನ್ನು ಭಾವಿಸಿಕೊಳ್ಳಿರಿ. ಒಂದು ಪರಿಪೂರ್ಣ ಕಾರ್ಖಾನೆಯನ್ನು ಮನಸ್ಸಿನಲ್ಲಿ ಕಲ್ಪಿಸಿಕೊಳ್ಳಿರಿ. ಆ ಪರಿಪೂರ್ಣ ಕಾರ್ಖಾನೆಯು, ಸದ್ದಿಲ್ಲದೆ ನಡೆಯುವಂತಹದ್ದೂ ಆಕರ್ಷಣೀಯವಾಗಿಯೂ ಇರುತ್ತದೆ, ಅಲ್ಲವೆ? ಆ ಪರಿಪೂರ್ಣ ಕಾರ್ಖಾನೆಯು, ಮಲಿನಗೊಳಿಸುವುದಕ್ಕೆ ಬದಲಾಗಿ, ಅದರ ಕ್ರಿಯಾಗತಿಯ ಮೂಲಕವೇ ಪರಿಸರವನ್ನು ಕಾರ್ಯತಃ ಸುಧಾರಿಸುವುದು. ಅದು ಸರ್ವರಿಗೂ ಉಪಯುಕ್ತವಾದ, ಹೌದು ಜೀವದಾಯಕವಾದ ಯಾವುದನ್ನಾದರೂ ಉತ್ಪಾದಿಸುವುದು. ಅಂತಹ ಒಂದು ಕಾರ್ಖಾನೆಯು ಸೌರಶಕ್ತಿಯಿಂದ ನಡೆಯಬೇಕೆಂದು ನೀವು ಯೋಚಿಸುವುದಿಲ್ಲವೆ? ಆ ವಿಧದಲ್ಲಿ, ಅದನ್ನು ನಡೆಸಲು ಅದಕ್ಕೆ ವಿದ್ಯುಚ್ಫಕ್ತಿ ಜೋಡಣೆಯಾಗಲಿ, ಇಂಧನ ಅಥವಾ ತೈಲದ ವಿತರಣೆಯಾಗಲಿ ಅಗತ್ಯವಿರದು.
ಆ ಪರಿಪೂರ್ಣ ಸೌರಶಕ್ತಿಯಿಂದ ನಡೆಯುವ ಕಾರ್ಖಾನೆಯು, ಮಾನವನ ಪ್ರಚಲಿತ ಯಂತ್ರಕಲಾ ಕೌಶಲಕ್ಕಿಂತ ಎಷ್ಟೊ ಹೆಚ್ಚು ಶ್ರೇಷ್ಠವಾಗಿರುವ, ಸೌರ ವಿದ್ಯುತ್ಕೋಶಗಳನ್ನು ಉಪಯೋಗಿಸುವುದು ಎಂಬುದರಲ್ಲಿ ಸಂಶಯವಿಲ್ಲ. ಅವು ಬಹಳ ಪರಿಣಾಮಕಾರಿಯೂ, ಅಗ್ಗವಾದವುಗಳೂ ಆಗಿರುವುದಲ್ಲದೆ, ರಚಿಸುವುದು ಮತ್ತು ನಡೆಸುವುದು—ಇವೆರಡರಲ್ಲಿಯೂ ಮಲಿನಕಾರಕವಾಗಿರುವುದಿಲ್ಲ. ಅದು ಭಾವಿಸಸಾಧ್ಯವಿರುವುದರಲ್ಲಿ ಅತಿ ಮುಂದುವರಿದ ಯಂತ್ರಕಲಾ ವಿಜ್ಞಾನವನ್ನು ಉಪಯೋಗಿಸುವುದಾದರೂ, ಆ ಪರಿಪೂರ್ಣ ಕಾರ್ಖಾನೆಯು, ಅದನ್ನು ಅನಿರೀಕ್ಷಿತ ಕೆಲಸಲೋಪಗಳು, ಕೆಟ್ಟುಹೋಗುವಿಕೆಗಳು ಅಥವಾ ಅತ್ಯಾಧುನಿಕ ಯಂತ್ರಕಲಾ ವಿಜ್ಞಾನಕ್ಕೆ ಈ ದಿನಗಳಲ್ಲಿ ಅಗತ್ಯವೆಂದು ತೋರುವಂತಹ ನಿರಂತರವಾದ ಹೊಂದಿಸಿಕೊಳ್ಳುವಿಕೆಗಳಿಲ್ಲದೆ, ತನ್ನ ಕಡೆಗೆ ಗಮನ ಸೆಳೆದುಕೊಳ್ಳದ ರೀತಿಯಲ್ಲಿ ಮಾಡುವುದು. ಆ ಪರಿಪೂರ್ಣ ಕಾರ್ಖಾನೆಯು ಪೂರ್ತಿ ಸ್ವಯಂಚಲಿಯಾಗಿದ್ದು, ಅದನ್ನು ನಡೆಸಲು ಮನುಷ್ಯನ ಗಮನದ ಯಾವ ಅಗತ್ಯವೂ ಇರಬಾರದೆಂದು ನಾವು ನಿರೀಕ್ಷಿಸುವೆವು. ನಿಜವಾಗಿಯೂ, ಅದು ತನ್ನನ್ನು ತಾನೇ ದುರಸ್ತುಪಡಿಸಿಕೊಂಡು, ಸ್ವಯಂಪೋಷಿತವಾಗಿರುವುದಲ್ಲದೆ, ಸ್ವಯಂಪ್ರತಿರೂಪಿತವೂ ಆಗಿರುವುದು.
ಆ ಪರಿಪೂರ್ಣ ಕಾರ್ಖಾನೆಯು ವಿಜ್ಞಾನದ ಬರಿಯ ಕಲ್ಪನಾಕಥೆಯಾಗಿದೆಯೊ? ಸಾಧಿಸಸಾಧ್ಯವಿಲ್ಲದ ಬರಿಯ ಮನಃಕಲ್ಪನೆಯಾಗಿದೆಯೊ? ಇಲ್ಲ, ಆ ಪರಿಪೂರ್ಣ ಕಾರ್ಖಾನೆಯು, ನಿಮ್ಮ ಕಾಲ ಕೆಳಗಿರುವ ಹುಲ್ಲಿನಷ್ಟೇ ವಾಸ್ತವವಾಗಿದೆ. ವಾಸ್ತವಾಂಶವೇನಂದರೆ, ನಿಮ್ಮ ಕಾಲಕೆಳಗಿರುವ ಹುಲ್ಲು, ನಿಮ್ಮ ಆಫೀಸಿನಲ್ಲಿರುವ ಜರೀಗಿಡ, ನಿಮ್ಮ ಕಿಟಿಕಿಯಾಚೆ ಇರುವ ಮರವೇ ಇದಾಗಿದೆ. ನಿಜವಾಗಿಯೂ ಆ ಪರಿಪೂರ್ಣ ಕಾರ್ಖಾನೆಯು ಯಾವುದೇ ಹಸುರು ಸಸ್ಯವಾಗಿದೆ! ಸೂರ್ಯಪ್ರಕಾಶದಿಂದ ಉರಿಸಲ್ಪಟ್ಟು, ಹಸುರು ಸಸಿಗಳು ಇಂಗಾಲಾಮ್ಲ (ಕಾರ್ಬನ್ ಡೈಆಕ್ಸೈಡ್), ನೀರು ಮತ್ತು ಖನಿಜ ಪದಾರ್ಥಗಳನ್ನು ಉಪಯೋಗಿಸುತ್ತ, ಭೂಮಿಯ ಹೆಚ್ಚು ಕಡಮೆ ಎಲ್ಲ ಜೀವಗಳಿಗಾಗಿ, ಪ್ರತ್ಯಕ್ಷವಾಗಿಯಾಗಲಿ, ಪರೋಕ್ಷವಾಗಿಯಾಗಲಿ ಆಹಾರವನ್ನು ಉತ್ಪಾದಿಸುತ್ತವೆ. ಈ ಕಾರ್ಯವಿಧಾನದಲ್ಲಿ, ಕಾರ್ಬನ್ ಡೈಆಕ್ಸೈಡನ್ನು ತೆಗೆಯುತ್ತ, ಶುದ್ಧ ಆಮ್ಲಜನಕವನ್ನು ಬಿಡುಗಡೆಮಾಡುತ್ತ, ಅವು ವಾತಾವರಣವನ್ನು ಭರ್ತಿಮಾಡುತ್ತವೆ.
ಒಟ್ಟಿನಲ್ಲಿ, ಭೂಮಿಯ ಹಸುರು ಗಿಡಗಳು, ಪ್ರತಿ ವರ್ಷ 15,000 ಕೋಟಿಯಿಂದ 40,000 ಕೋಟಿ ಟನ್ನುಗಳಷ್ಟು ಸಕ್ಕರೆಯನ್ನು ಉತ್ಪಾದಿಸುತ್ತವೆಂದು ಅಂದಾಜುಮಾಡಲಾಗುತ್ತದೆ. ಇದು ಮಾನವಕುಲದ ಕಬ್ಬಿಣ, ಉಕ್ಕು, ಮೋಟಾರು ವಾಹನಗಳು ಮತ್ತು ವಿಮಾನ ಕಾರ್ಖಾನೆಗಳು ಒಟ್ಟುಗೂಡಿ ಮಾಡುವ ಉತ್ಪನ್ನಕ್ಕಿಂತ ಎಷ್ಟೋ ಹೆಚ್ಚು. ಅವು ಸೂರ್ಯನ ಶಕ್ತಿಯನ್ನು ಬಳಸುತ್ತ, ನೀರಿನ ಸೂಕ್ಷ್ಮ ಕಣ (ವಾಟರ್ ಮಾಲಿಕ್ಯೂಲ್)ಗಳಿಂದ ಜಲಜನಕ ಅಣು (ಹೈಡ್ರೋಜನ್ ಆ್ಯಟಂ)ಗಳನ್ನು ತೊಲಗಿಸುವ ಮೂಲಕ ಇದನ್ನು ಮಾಡುತ್ತವೆ, ಮತ್ತು ಬಳಿಕ ಆ ಜಲಜನಕ ಅಣುಗಳನ್ನು ಗಾಳಿಯಲ್ಲಿರುವ ಕಾರ್ಬನ್ ಡೈಆಕ್ಸೈಡ್ ಸೂಕ್ಷ್ಮ ಕಣಗಳಿಗೆ ಜೋಡಿಸುತ್ತ, ಕಾರ್ಬನ್ ಡೈಆಕ್ಸೈಡನ್ನು ಸಕ್ಕರೆಯೆಂದು ಪ್ರಸಿದ್ಧವಾಗಿರುವ ಕಾರ್ಬೋಹೈಡ್ರೇಟ್ (ಶರ್ಕರ ಪಿಷ್ಟ) ಆಗಿ ಪರಿವರ್ತಿಸುತ್ತವೆ. ಈ ಗಮನಾರ್ಹವಾದ ಕಾರ್ಯಗತಿಯನ್ನು ದ್ಯುತಿಸಂಶ್ಲೇಷಣೆ (ಫೋಟೋಸಿಂತಸಿಸ್) ಎಂದು ಕರೆಯಲಾಗುತ್ತದೆ. ಸಸ್ಯಗಳು ಆ ಬಳಿಕ ತಮ್ಮ ಹೊಸ ಸಕ್ಕರೆಯ ಸೂಕ್ಷ್ಮ ಕಣಗಳನ್ನು ಶಕ್ತಿಗಾಗಿ ಉಪಯೋಗಿಸಬಲ್ಲವು ಅಥವಾ ಆಹಾರ ಶೇಖರಣೆಗಾಗಿ ಅವನ್ನು ಪಿಷ್ಟವಾಗಿ ಸಂಯೋಜಿಸಬಲ್ಲವು ಅಥವಾ ಸಸ್ಯನಾರನ್ನು ರಚಿಸುವ ಗಡುಸಾದ ಮತ್ತು ನಾರು ಪದಾರ್ಥವಾದ ಸೆಲ್ಯುಲೋಸ್ ಆಗಿ ಸಂಯೋಜಿಸಬಲ್ಲವು. ಅದನ್ನು ಕಲ್ಪಿಸಿಕೊಳ್ಳಿರಿ! ಬೆಳೆದಾಗ ನಿಮ್ಮ ಮೇಲೇರಿರುವ ಆ 90 ಮೀಟರುಗಳಷ್ಟು ಎತ್ತರದ ಸಿಕ್ವಾಯ ವೃಕ್ಷವು, ಬಹುತೇಕ ಗಾಳಿಯಿಂದಲೇ—ಒಮ್ಮೆಗೆ ಒಂದು ಕಾರ್ಬನ್ ಡೈಆಕ್ಸೈಡ್ ಸೂಕ್ಷ್ಮ ಕಣ ಮತ್ತು ಒಂದು ನೀರಿನ ಸೂಕ್ಷ್ಮ ಕಣ, ಹೀಗೆ ಕ್ಲೋರಪ್ಲ್ಯಾಸ್ಟ್ಗಳೆಂದು ಕರೆಯಲ್ಪಡುವ ಅಸಂಖ್ಯಾತ ಕೋಟಿ ಸೂಕ್ಷ್ಮದರ್ಶಕೀಯ ‘ಜೋಡನೆ ಸಾಲುಗಳ’ಲ್ಲಿ—ಮಾಡಲ್ಪಟ್ಟದ್ದಾಗಿದೆ. ಆದರೆ ಹೇಗೆ?
ಆ “ಯಂತ್ರರಚನೆ”ಯನ್ನು ಪರೀಕ್ಷಿಸುವುದು
ಒಂದು ಸಿಕ್ವಾಯವನ್ನು ಗಾಳಿ (ನೀರು ಮತ್ತು ಕೆಲವು ಖನಿಜ ಪದಾರ್ಥಗಳ ಸಹಿತ)ಯಿಂದ ಮಾಡುವುದು ನಿಜವಾಗಿಯೂ ಆಶ್ಚರ್ಯಕರವಾಗಿರುವುದಾದರೂ, ಅದೊಂದು ಮಾಯಾವಿದ್ಯೆಯಲ್ಲ. ಅದೊಂದು ಬುದ್ಧಿಶಕ್ತಿಯ ವಿನ್ಯಾಸ ಹಾಗೂ ಯಂತ್ರಕಲಾ ಶಾಸ್ತ್ರದ—ಯಾವನೇ ಮನುಷ್ಯನಲ್ಲಿ ಇರುವುದಕ್ಕಿಂತಲೂ ಎಷ್ಟೋ ಹೆಚ್ಚು ನವನಾಜೂಕಾದದ್ದು—ಪರಿಣಾಮವಾಗಿದೆ. ವಿಜ್ಞಾನಿಗಳು ದ್ಯುತಿಸಂಶ್ಲೇಷಣೆಯ ಜಟಿಲ ವಿನ್ಯಾಸದ ಕಪ್ಪು ಪೆಟ್ಟಿಗೆಯ ಮುಚ್ಚಳವನ್ನು ಕೊಂಚ ಕೊಂಚವಾಗಿ ತೆರೆದು, ಅದರೊಳಗೆ ನಡೆಯುತ್ತಿರುವ ನಯನಾಜೂಕಾತೀತವಾದ ಜೀವರಸಾಯನ ವಿಜ್ಞಾನದ ಬೆರಗಾಗಿಸುವ ವಿಷಯಗಳ ಕಡೆಗೆ ಇಣಿಕಿ ನೋಡುತ್ತಿದ್ದಾರೆ. ನಾವೂ ಭೂಮಿಯ ಹೆಚ್ಚು ಕಡಮೆ ಸಕಲ ಜೀವಕ್ಕೆ ಕಾರಣಭೂತವಾಗಿರುವ ಆ “ಯಂತ್ರರಚನೆ”ಯನ್ನು, ಅವರೊಂದಿಗೆ ತುಸು ಇಣಿಕಿ ನೋಡೋಣ. ಪ್ರಾಯಶಃ ಆಗ ನಾವು, “ಹುಲ್ಲು ಹಸುರಾಗಿರುವುದೇಕೆ?” ಎಂಬ ನಮ್ಮ ಪ್ರಶ್ನೆಗೆ ಉತ್ತರವನ್ನು ಪಡೆದುಕೊಳ್ಳಲಾರಂಭಿಸುವೆವು.
ನಮ್ಮ ವಿಶ್ವಾಸಾರ್ಹವಾದ ಸೂಕ್ಷ್ಮದರ್ಶಕ (ಮೈಕ್ರೋಸ್ಕೋಪ್)ವನ್ನು ತೆಗೆದುಕೊಂಡು, ಒಂದು ಪ್ರಾತಿನಿಧಿಕ ಎಲೆಯನ್ನು ನಾವು ಪರೀಕ್ಷಿಸೋಣ. ಬರಿಯ ಕಣ್ಣಿಗೆ ಇಡೀ ಎಲೆಯು ಹಸುರಾಗಿ ಕಾಣುತ್ತದಾದರೂ ಅದೊಂದು ಭ್ರಮೆಯಾಗಿದೆ. ನಾವು ಸೂಕ್ಷ್ಮದರ್ಶಕದಲ್ಲಿ ನೋಡುವ ಒಂದೊಂದು ಸಸ್ಯ ಕಣಗಳು ಹಸುರಾಗಿರುವುದಿಲ್ಲ. ಬದಲಿಗೆ ಅವು ಬಹುತೇಕ ಪಾರದರ್ಶಕಗಳಾಗಿವೆಯಾದರೂ, ಪ್ರತಿಯೊಂದು ಕಣದಲ್ಲಿ ಪ್ರಾಯಶಃ 50ರಿಂದ 100 ಪುಟ್ಟ ಹಸುರು ಚುಕ್ಕೆಗಳು ಅಡಕವಾಗಿವೆ. ಈ ಚುಕ್ಕೆಗಳೇ ಬೆಳಕಿಗೆ ಪ್ರತಿಕ್ರಿಯಿಸುವ ಹಸುರು ಹರಿತ್ತು (ಕ್ಲೋರಫಿಲ್) ಕಂಡುಬರುವ ಮತ್ತು ದ್ಯುತಿಸಂಶ್ಲೇಷಣೆಯು ನಡೆಯುವ ಕ್ಲೋರಪ್ಲ್ಯಾಸ್ಟ್ಗಳು. ಈ ಕ್ಲೋರಪ್ಲ್ಯಾಸ್ಟ್ಗಳೊಳಗೆ ಏನು ನಡೆಯುತ್ತಿದೆ?
ಆ ಕ್ಲೋರಪ್ಲ್ಯಾಸ್ಟ್ ಒಂದು ಚಿಕ್ಕ ಚೀಲದಂತಿದೆ. ಅದರೊಳಗೆ ಇನ್ನೂ ಚಿಕ್ಕದಾಗಿರುವ ತೈಲಕಾಯ್ಡ್ (“ಚೀಲಸದೃಶ”ವೆಂದು ಅರ್ಥವಿರುವ ಗ್ರೀಕ್ ಪದದಿಂದ ಬಂದಿದೆ)ಗಳೆಂದು ಕರೆಯಲ್ಪಡುವ ಚಪ್ಪಟೆಯಾದ ಚೀಲಗಳಿವೆ. ಕೊನೆಯದಾಗಿ, ನಾವು ಹುಲ್ಲಿನಲ್ಲಿರುವ ಹಸುರನ್ನು ಕಂಡುಹಿಡಿದಿದ್ದೇವೆ. ಹಸುರು ಕ್ಲೋರಫಿಲ್ ಸೂಕ್ಷ್ಮ ಕಣಗಳು, ತೈಲಕಾಯ್ಡ್ಗಳ ಮೇಲ್ಮೈಯಲ್ಲಿ ನಾಟಿಸಲ್ಪಟ್ಟಿವೆ. ಆದರೆ ಸಿಕ್ಕಾಬಟ್ಟೆಯಲ್ಲ, ಬದಲಿಗೆ ಜಾಗರೂಕತೆಯಿಂದ ಸಂಘಟಿಸಲ್ಪಟ್ಟ ಫೋಟೋಸಿಸ್ಟಮ್ಸ್ ಎಂದು ಕರೆಯಲ್ಪಡುವ ಗುಂಪುಗಳಾಗಿ. ಹೆಚ್ಚಿನ ಹಸುರು ಸಸ್ಯಗಳಲ್ಲಿ ಎರಡು ವಿಧದ—ಪಿಎಸ್I (ಫೋಟೋಸಿಸ್ಟಮ್ I) ಮತ್ತು ಪಿಎಸ್II (ಫೋಟೋಸಿಸ್ಟಮ್ II) ಎಂದು ಕರೆಯಲ್ಪಡುವ ಫೋಟೋಸಿಸ್ಟಮ್ಗಳಿವೆ. ಈ ಫೋಟೋಸಿಸ್ಟಮ್ಗಳು, ಒಂದು ಕಾರ್ಖಾನೆಯಲ್ಲಿ ಕೆಲಸಮಾಡುವ, ಪ್ರತಿಯೊಂದೂ ದ್ಯುತಿಸಂಶ್ಲೇಷಣೆಯಲ್ಲಿ ಹಂತಗಳ ನಿರ್ದಿಷ್ಟ ಶ್ರೇಣಿಗಳ ಜಾಗ್ರತೆ ವಹಿಸುವ, ವಿಶೇಷ ಉತ್ಪಾದಕ ತಂಡಗಳಂತೆ ವರ್ತಿಸುತ್ತವೆ.
ತ್ಯಜಿಸಲ್ಪಡದ “ತ್ಯಾಜ್ಯ ವಸ್ತು”
ತೈಲಕಾಯ್ಡ್ನ ಮೇಲ್ಮೈಗೆ ಸೂರ್ಯಪ್ರಕಾಶವು ಬಡಿದಾಗ, ಕ್ಲೋರಫಿಲ್ ಸೂಕ್ಷ್ಮ ಕಣಗಳ, ಬೆಳಕು ಕೊಯ್ಲಿನ ಸಂಕೀರ್ಣಗಳು (ಲೈಟ್-ಹಾರ್ವೆಸ್ಟಿಂಗ್ ಕಾಂಪ್ಲೆಕ್ಸಸ್) ಎಂದು ಕರೆಯಲ್ಪಡುವ ಪಿಎಸ್II ಪಂಕ್ತಿಗಳು, ಆ ಬೆಳಕನ್ನು ಹಿಡಿಯಲು ಕಾಯುತ್ತಿರುತ್ತವೆ. ಈ ಸೂಕ್ಷ್ಮ ಕಣಗಳು, ಒಂದು ನಿರ್ದಿಷ್ಟ ತರಂಗಮಾನದ ಕೆಂಪು ಬೆಳಕನ್ನು ಹೀರಿಕೊಳ್ಳುವುದರಲ್ಲಿ ಮಾತ್ರ ವಿಶೇಷವಾಗಿ ಆಸಕ್ತಿಯುಳ್ಳವುಗಳಾಗಿವೆ. ತೈಲಕಾಯ್ಡ್ನ ವಿವಿಧ ನೆಲೆಗಳಲ್ಲಿ ಪಿಎಸ್I ಪಂಕ್ತಿಗಳು ಹೆಚ್ಚು ಉದ್ದ ತರಂಗಮಾನದ ಬೆಳಕಿಗಾಗಿ ಕಾಯುತ್ತಿವೆ. ಈ ಮಧ್ಯೆ, ಕ್ಲೋರಫಿಲ್ ಮತ್ತು ಕರಾಟಿನೊಯಿಡ್ಗಳಂತಹ ಇತರ ಕೆಲವು ಸೂಕ್ಷ್ಮ ಕಣಗಳು, ನೀಲ ಮತ್ತು ನೀಲಲೋಹಿತ (ವೈಲೆಟ್) ಬೆಳಕನ್ನು ಹೀರುತ್ತಿವೆ.
ಹಾಗಾದರೆ, ಹುಲ್ಲು ಹಸುರಾಗಿರುವುದೇಕೆ? ಸಸ್ಯಗಳ ಮೇಲೆ ಬೀಳುವ ಬೆಳಕಿನ ಎಲ್ಲ ತರಂಗಮಾನಗಳಲ್ಲಿ, ಹಸುರು ಬೆಳಕು ಮಾತ್ರ ಅವುಗಳಿಗೆ ನಿರರ್ಥಕವಾಗಿರುವುದರಿಂದ, ಅದನ್ನು ನಮ್ಮ ವೀಕ್ಷಕ ಕಣ್ಣುಗಳಿಗೆ ಮತ್ತು ಕ್ಯಾಮರಗಳಿಗೆ ಪ್ರತಿಬಿಂಬಿಸಿ ಬಿಡಲಾಗುತ್ತದೆ, ಅಷ್ಟೆ. ಅದರ ಕುರಿತಾಗಿ ಯೋಚಿಸಿ! ವಸಂತ ಕಾಲದ ಲಘು ಹಸುರುಗಳು, ಹಾಗೂ ಬೇಸಗೆಯ ಉಜ್ವಲ ಹಸುರುಗಳು, ಸಸ್ಯಗಳು ಗಣ್ಯಮಾಡದ, ಆದರೆ ಮನುಷ್ಯರಾದ ನಾವು ಅಮೂಲ್ಯವೆಂದೆಣಿಸುವ, ತರಂಗಮಾನಗಳಿಂದ ಪರಿಣಮಿಸುತ್ತವೆ! ಮಾನವನ ಕಾರ್ಖಾನೆಯ ಮಾಲಿನ್ಯ ಹಾಗೂ ತ್ಯಾಜ್ಯಗಳಿಗೆ ಅಸದೃಶವಾಗಿ, ಈ “ತ್ಯಾಜ್ಯ” ಬೆಳಕು, ನಾವು ಅದನ್ನು ಸುಂದರವಾದ ಹುಲ್ಲುಗಾವಲಿನಲ್ಲಿ ಅಥವಾ ಕಾಡಿನಲ್ಲಿ ನೋಡಿ, ನಮ್ಮ ಪ್ರಾಣಗಳನ್ನು ಆ ಹಿತಕರವಾದ ಜೀವವರ್ಣದಿಂದ ಚೈತನ್ಯಗೊಳಿಸಿಕೊಳ್ಳುವಾಗ ತ್ಯಜಿಸಲ್ಪಡುವುದಿಲ್ಲ.
ಕ್ಲೋರಪ್ಲ್ಯಾಸ್ಟ್ನಲ್ಲಿ, ಪಿಎಸ್II ಪಂಕ್ತಿಗಳಲ್ಲಿ, ಸೂರ್ಯನ ಬೆಳಕಿನ ಕೆಂಪು ಭಾಗದಿಂದ ಬಂದ ಶಕ್ತಿಯು, ಕ್ಲೋರಫಿಲ್ ಸೂಕ್ಷ್ಮ ಕಣಗಳಲ್ಲಿರುವ ಇಲೆಕ್ಟ್ರಾನ್ಗಳಿಗೆ ವರ್ಗಾಯಿಸಲ್ಪಟ್ಟಿರುತ್ತದೆ. ಅಲ್ಲಿ ಕೊನೆಗೆ, ಇಲೆಕ್ಟ್ರಾನ್ ಎಷ್ಟು ಪ್ರಬಲಿಸಲ್ಪಡುತ್ತದೆ ಅಥವಾ “ಉದ್ರೇಕಿಸಲ್ಪಡುತ್ತದೆ” ಎಂದರೆ, ಅದು ಒಟ್ಟಿನಲ್ಲಿ ಪಂಕ್ತಿಯಿಂದ, ತೈಲಕಾಯ್ಡ್ ಪೊರೆಯಲ್ಲಿರುವ ಕಾಯುತ್ತಿರುವ ವಾಹಕ ಸೂಕ್ಷ್ಮ ಕಣದ ತೋಳುಗಳೊಳಗೆ ಹಾರುತ್ತದೆ. ಜೊತೆಗಾರನಿಂದ ಜೊತೆಗಾರನಿಗೆ ದಾಟಿಸಲ್ಪಡುವ ನೃತ್ಯಗಾತಿಯಂತೆ, ಆ ಇಲೆಕ್ಟ್ರಾನ್, ಕ್ರಮೇಣ ಶಕ್ತಿಯನ್ನು ಕಳೆದುಕೊಳ್ಳುತ್ತ, ಒಂದು ವಾಹಕ ಸೂಕ್ಷ್ಮ ಕಣದಿಂದ ಇನ್ನೊಂದಕ್ಕೆ ದಾಟಿಸಲ್ಪಡುತ್ತದೆ. ಅದರ ಶಕ್ತಿ ಸಾಕಷ್ಟು ಕಡಮೆಯಾಗಿರುವಾಗ, ಇನ್ನೊಂದು ಫೋಟೋಸಿಸ್ಟಮ್ನಲ್ಲಿ, ಪಿಎಸ್Iನಲ್ಲಿ, ಇನ್ನೊಂದು ಇಲೆಕ್ಟ್ರಾನನ್ನು ಭರ್ತಿಮಾಡಲು ಅದನ್ನು ಸುರಕ್ಷಿತವಾಗಿ ಉಪಯೋಗಿಸಸಾಧ್ಯವಿದೆ.—ರೇಖಾಚಿತ್ರ 1ನ್ನು ನೋಡಿ.
ಈ ನಡುವೆ, ಪಿಎಸ್II ಪಂಕ್ತಿಯು ತನ್ನ ಒಂದು ಇಲೆಕ್ಟ್ರಾನ್ ಕಾಣೆಯಾಗಿರುವುದರಿಂದ ವಿದ್ಯುದಾವೇಶಗೊಂಡು, ಕಾಣೆಯಾದುದರ ಬದಲಿಗೆ ಇನ್ನೊಂದನ್ನು ಭರ್ತಿಮಾಡಲು ಸಿದ್ಧವಾಗಿರುತ್ತದೆ. ತನ್ನ ಕಿಸೆಯಿಂದ ಹಣವನ್ನು ಕದಿಯಲಾಗಿದೆಯೆಂದು ಈಗ ತಾನೆ ಕಂಡುಕೊಂಡ ಒಬ್ಬ ಮನುಷ್ಯನಂತೆ, ಪಿಎಸ್IIರ ಆಮ್ಲಜನಕ ವಿಕಾಸಕ ಸಂಕೀರ್ಣ (ಆಕ್ಸಿಜನ್ ಇವಾಲ್ವಿಂಗ್ ಕಾಂಪ್ಲೆಕ್ಸ್)ವೆಂದು ಕರೆಯಲ್ಪಡುವ ಕ್ಷೇತ್ರವು ಉದ್ರೇಕಗೊಳ್ಳುತ್ತದೆ. ಇಲೆಕ್ಟ್ರಾನನ್ನು ಎಲ್ಲಿ ಕಂಡುಕೊಳ್ಳಬಹುದು? ಆಹಾ! ನೀರಿನ ಒಂದು ನಿರ್ಭಾಗ್ಯ ಸೂಕ್ಷ್ಮ ಕಣವು ಹತ್ತಿರ ಅಲೆದಾಡುತ್ತಿದೆ. ಅಹಿತಕರವಾದ ಆಶ್ಚರ್ಯವು ಅದಕ್ಕಾಗಿ ಕಾದಿದೆ.
ನೀರಿನ ಸೂಕ್ಷ್ಮ ಕಣಗಳನ್ನು ಸೀಳಿಹಾಕುವುದು
ಒಂದು ನೀರಿನ ಸೂಕ್ಷ್ಮ ಕಣದಲ್ಲಿ, ಸಾಪೇಕ್ಷವಾಗಿ ದೊಡ್ಡ ಆಮ್ಲಜನಕ ಅಣುವೂ ಎರಡು ಹೆಚ್ಚು ಚಿಕ್ಕದಾದ ಜಲಜನಕ ಅಣುಗಳೂ ಸೇರಿವೆ. ಪಿಎಸ್IIನ ಆಮ್ಲಜನಕ ವಿಕಾಸಕ ಸಂಕೀರ್ಣದಲ್ಲಿ, ಮ್ಯಾಂಗನೀಸ್ ಲೋಹದ ನಾಲ್ಕು ವಿದ್ಯುದ್ವಾಹಿ ಕಣ (ಐಆನ್)ಗಳಿವೆ. ಅವು ನೀರಿನ ಸೂಕ್ಷ್ಮ ಕಣದಲ್ಲಿರುವ ಜಲಜನಕ ಅಣುಗಳಿಂದ ಇಲೆಕ್ಟ್ರಾನ್ಗಳನ್ನು ತೊಲಗಿಸುತ್ತವೆ. ಇದರ ಪರಿಣಾಮವಾಗಿ, ನೀರಿನ ಸೂಕ್ಷ್ಮ ಕಣವು ಎರಡು ಧನಾತ್ಮಕ ಜಲಜನಕ ವಿದ್ಯುದ್ವಾಹಿ ಕಣ (ಪ್ರೋಟಾನ್)ಗಳಾಗಿ, ಒಂದು ಆಮ್ಲಜನಕ ಅಣುವಾಗಿ ಮತ್ತು ಎರಡು ಇಲೆಕ್ಟ್ರಾನ್ಗಳಾಗಿ ಒಡೆಯಲ್ಪಡುತ್ತದೆ. ಹೆಚ್ಚು ನೀರಿನ ಸೂಕ್ಷ್ಮ ಕಣಗಳು ಒಡೆಯಲ್ಪಟ್ಟಾಗ, ಆಮ್ಲಜನಕದ ಅಣುಗಳು ಆಮ್ಲಜನಕ ಅನಿಲದ ಸೂಕ್ಷ್ಮ ಕಣಗಳಾಗಿ ಜೊತೆಗೊಳ್ಳುತ್ತವೆ. ಅವನ್ನು ಸಸ್ಯವು ನಮ್ಮ ಉಪಯೋಗಕ್ಕಾಗಿ ಗಾಳಿಗೆ ಹಿಂದಿರುಗಿಸುತ್ತದೆ. ಜಲಜನಕ ವಿದ್ಯುದ್ವಾಹಿ ಕಣಗಳು, ತೈಲಕಾಯ್ಡ್ “ಚೀಲ”ದೊಳಗೆ ಶೇಖರಗೊಳ್ಳಲಾರಂಭಿಸುತ್ತವೆ. ಅಲ್ಲಿ ಸಸ್ಯವು ಅದನ್ನು ಉಪಯೋಗಿಸಿಕೊಳ್ಳಲು ಸಾಧ್ಯವಾಗುತ್ತದೆ. ಮತ್ತು ಇಲೆಕ್ಟ್ರಾನ್ಗಳನ್ನು, ಪಿಎಸ್II ಸಂಕೀರ್ಣಕ್ಕೆ ಪುನಃ ಸರಬರಾಯಿಮಾಡಲು ಉಪಯೋಗಿಸಲಾಗುತ್ತದೆ. ಈಗ ಅದು ಆ ಚಕ್ರವನ್ನು ಸೆಕೆಂಡಿಗೆ ಅನೇಕ ಬಾರಿ ಪುನರಾವೃತ್ತಿಸಲು ಸಿದ್ಧವಾಗಿರುತ್ತದೆ.—ರೇಖಾಚಿತ್ರ 2ನ್ನು ನೋಡಿ.
ತೈಲಕಾಯ್ಡ್ ಚೀಲದಲ್ಲಿ, ನಿಬಿಡವಾಗಿರುವ ಜಲಜನಕ ವಿದ್ಯುದ್ವಾಹಿ ಕಣಗಳು ಹೊರಕ್ಕೆ ಹೋಗುವ ದಾರಿಗಾಗಿ ಕಾಯುತ್ತವೆ. ಪ್ರತಿ ಬಾರಿ ನೀರಿನ ಒಂದು ಸೂಕ್ಷ್ಮ ಕಣವು ಒಡೆಯಲ್ಪಟ್ಟಾಗ, ಜಲಜನಕದ ಎರಡು ವಿದ್ಯುದ್ವಾಹಿ ಕಣಗಳು ಕೂಡಿಸಲ್ಪಡುವುದಷ್ಟೇಯಲ್ಲ, ಪಿಎಸ್II ಇಲೆಕ್ಟ್ರಾನ್ಗಳು, ಅವು ಪಿಎಸ್I ಸಂಕೀರ್ಣಕ್ಕೆ ದಾಟಿಸಲ್ಪಡುವಾಗ, ಇತರ ಜಲಜನಕ ವಿದ್ಯುದ್ವಾಹಿ ಕಣಗಳನ್ನು ತೈಲಕಾಯ್ಡ್ ಚೀಲದೊಳಕ್ಕೆ ಬರುವಂತೆ ಆಕರ್ಷಿಸುತ್ತವೆ. ಅತಿ ಬೇಗನೆ, ಜಲಜನಕ ವಿದ್ಯುದ್ವಾಹಿ ಕಣಗಳು ನೊಣನಿಬಿಡವಾದ ಗೂಡಿನೊಳಗೆ ರೇಗಿದ ಜೇನುನೊಣಗಳಂತೆ ಝೇಂಕರಿಸುತ್ತವೆ. ಅವು ಹೇಗೆ ಹೊರಗೆ ಬರಬಲ್ಲವು?
ದ್ಯುತಿಸಂಶ್ಲೇಷಣೆಯ ತೀಕ್ಷ್ಣಬುದ್ಧಿಯ ವಿನ್ಯಾಸಕಾರನು, ಹೊರಕ್ಕೆ ಹೋಗಲು ಒಂದೇ ದಾರಿಯಿರುವ ತಿರುಗು ಬಾಗಿಲೊಂದನ್ನು, ಎಟಿಪಿ (ಅಡನಸೀನ್ ಟ್ರೈಫಾಸ್ಫೇಟ್) ಎಂದು ಕರೆಯಲ್ಪಡುವ ಅತಿ ಪ್ರಾಮುಖ್ಯವಾದ ಕೋಶೀಯ ಇಂಧನವನ್ನು ಮಾಡಲು ಉಪಯೋಗಿಸಲ್ಪಡುವ ವಿಶೇಷ ಎನ್ಸೈಮ್ (ಅಜೈವಿಕ ಕಿಣ್ವ)ನ ರೂಪದಲ್ಲಿ ಒದಗಿಸಿದ್ದಾನೆ. ಆ ಜಲಜನಕ ವಿದ್ಯುದ್ವಾಹಿ ಕಣಗಳು, ತಿರುಗು ಬಾಗಿಲನ್ನು ದೂಡಿ ಹೊರಹೋಗುವಾಗ, ಬರಿದಾಗಿರುವ ಎಟಿಪಿ ಸೂಕ್ಷ್ಮ ಕಣಗಳು ಪರಿಪೂರಣಗೊಳ್ಳುವಂತೆ ಬೇಕಾದ ಶಕ್ತಿಯನ್ನು ಅವು ಒದಗಿಸುತ್ತವೆ. (ರೇಖಾಚಿತ್ರ 3ನ್ನು ನೋಡಿ.) ಎಟಿಪಿ ಸೂಕ್ಷ್ಮ ಕಣಗಳು ಪುಟ್ಟ ಕೋಶೀಯ ಬ್ಯಾಟರಿಗಳಂತಿವೆ. ಅವು ಕೋಶದಲ್ಲಾಗುವ ಸಕಲ ರೀತಿಯ ರಾಸಾಯನಿಕ ಕ್ರಿಯೆಗಳಿಗೆ ಅದರೊಳಗೇ ಶಕ್ತಿಯ ಚಿಕ್ಕ ಪ್ರಮಾಣದ ಹೊರಹೊಮ್ಮುವಿಕೆಗಳನ್ನು ಒದಗಿಸುತ್ತವೆ. ತರುವಾಯ ಈ ಎಟಿಪಿ ಸೂಕ್ಷ್ಮ ಕಣಗಳು, ದ್ಯುತಿಸಂಶ್ಲೇಷಣಾ ಶರ್ಕರ ಜೋಡನೆ ಸಾಲುಗಳಲ್ಲಿ ಆವಶ್ಯಕವಾಗಿರುವುವು.
ಎಟಿಪಿ ಅಲ್ಲದೆ, ಇನ್ನೊಂದು ಚಿಕ್ಕ ಸೂಕ್ಷ್ಮ ಕಣವು ಶರ್ಕರ ಜೋಡನೆಗೆ ಅವಶ್ಯವಾಗಿ ಬೇಕಾಗುತ್ತದೆ. ಅದು ಎನ್ಎಡಿಪಿಏಚ್ (ನಿಕಟೀನಮೈಡ್ ಆ್ಯಡನೀನ್ ಡೈನ್ಯೂಕ್ಲಿಯಟೈಡ್ ಫಾಸ್ಫೇಟ್ನ ಸಂಕ್ಷಿಪ್ತ ರೂಪ) ಎಂದು ಕರೆಯಲ್ಪಡುತ್ತದೆ. ಎನ್ಎಡಿಪಿಏಚ್ ಸೂಕ್ಷ್ಮ ಕಣಗಳು, ಬಟವಾಡೆಮಾಡುವ ಚಿಕ್ಕ ಟ್ರಕ್ಕುಗಳಂತಿವೆ. ಪ್ರತಿಯೊಂದು ಸೂಕ್ಷ್ಮ ಕಣವು, ಒಂದೊಂದು ಜಲಜನಕ ಅಣುವನ್ನು, ಸಕ್ಕರೆಯ ಸೂಕ್ಷ್ಮ ಕಣವನ್ನು ಕಟ್ಟಲು ಜಲಜನಕ ಅಣು ಬೇಕಾಗಿರುವ ಆ ಕಾಯುತ್ತಿರುವ ಎನ್ಸೈಮಿಗೆ ಸಾಗಿಸುತ್ತದೆ. ಎನ್ಎಡಿಪಿಏಚ್ಅನ್ನು ಉಂಟುಮಾಡುವುದು ಪಿಎಸ್I ಸಂಕೀರ್ಣದ ಕೆಲಸ. ಒಂದು ಫೋಟೋಸಿಸ್ಟಮ್ (ಪಿಎಸ್II) ನೀರಿನ ಸೂಕ್ಷ್ಮ ಕಣಗಳನ್ನು ಸೀಳಿಹಾಕಿ, ಅವುಗಳನ್ನು ಎಟಿಪಿಯನ್ನು ಉಂಟುಮಾಡಲು ಉಪಯೋಗಿಸುವುದರಲ್ಲಿ ಮಗ್ನವಾಗಿರುವಾಗ, ಇನ್ನೊಂದು ಫೋಟೋಸಿಸ್ಟಮ್ (ಪಿಎಸ್I) ಬೆಳಕನ್ನು ಹೀರಿಕೊಂಡು, ಕ್ರಮೇಣ ಎನ್ಎಡಿಪಿಏಚ್ಅನ್ನು ಉಂಟುಮಾಡಲು ಬಳಸಲ್ಪಡುವ ಇಲೆಕ್ಟ್ರಾನ್ಗಳನ್ನು ಹೊರದಬ್ಬುತ್ತಿರುತ್ತದೆ. ಎಟಿಪಿ ಮತ್ತು ಎನ್ಎಡಿಪಿಏಚ್ ಸೂಕ್ಷ್ಮ ಕಣಗಳು—ಇವೆರಡೂ ಶರ್ಕರ ಜೋಡನೆ ಸಾಲಿನಲ್ಲಿ ಭಾವೀ ಉಪಯೋಗಕ್ಕಾಗಿ ತೈಲಕಾಯ್ಡ್ನ ಹೊರಗಣ ಸ್ಥಳದಲ್ಲಿ ಸಂಗ್ರಹಿಸಿಡಲ್ಪಡುತ್ತವೆ.
ರಾತ್ರಿ ಸರದಿ
ದ್ಯುತಿಸಂಶ್ಲೇಷಣೆಯು ಪ್ರತಿ ವರುಷ ಕೋಟಿಗಟ್ಟಲೆ ಟನ್ನುಗಳಷ್ಟು ಸಕ್ಕರೆಯನ್ನು ಸೃಷ್ಟಿಸುತ್ತದಾದರೂ, ದ್ಯುತಿಸಂಶ್ಲೇಷಣೆಯಲ್ಲಿ ಬೆಳಕು ಶಕ್ತಿಯಿಂದಾಗುವ ರಾಸಾಯನಿಕ ಕ್ರಿಯೆಗಳು, ವಾಸ್ತವವಾಗಿ ಯಾವುದೇ ಸಕ್ಕರೆಯನ್ನು ಉಂಟುಮಾಡುವುದಿಲ್ಲ. ಅವುಗಳು ನಿರ್ಮಿಸುವುದು ಎಟಿಪಿ (“ಬ್ಯಾಟರಿಗಳು”) ಮತ್ತು ಎನ್ಎಡಿಪಿಏಚ್ (“ಬಟವಾಡೆಮಾಡುವ ಟ್ರಕ್ಕುಗಳು”)ಗಳನ್ನು ಮಾತ್ರ. ಈ ಬಿಂದುವಿನಿಂದ, ಸ್ಟ್ರೋಮ ಚೌಕಟ್ಟು ಅಥವಾ ತೈಲಕಾಯ್ಡ್ಗಳ ಹೊರಗಣ ಕ್ಷೇತ್ರವು, ಸಕ್ಕರೆಯನ್ನು ಮಾಡಲು ಎಟಿಪಿ ಮತ್ತು ಎನ್ಎಡಿಪಿಏಚ್ಅನ್ನು ಉಪಯೋಗಿಸುತ್ತದೆ. ಕಾರ್ಯತಃ, ಸಸ್ಯವು ಪೂರ್ತಿ ಕತ್ತಲೆಯಲ್ಲಿ ಸಕ್ಕರೆಯನ್ನು ಮಾಡಬಲ್ಲದು! ಕ್ಲೋರಪ್ಲ್ಯಾಸ್ಟನ್ನು ನೀವು, ತೈಲಕಾಯ್ಡ್ಗಳೊಳಗೆ ಬ್ಯಾಟರಿಗಳು ಮತ್ತು ಬಟವಾಡೆಮಾಡುವ ಟ್ರಕ್ಕುಗಳನ್ನು (ಎಟಿಪಿ ಮತ್ತು ಎನ್ಎಡಿಪಿಏಚ್) ಮಾಡುವ ಎರಡು ಕಾರ್ಮಿಕ ತಂಡ (ಪಿಎಸ್I ಮತ್ತು ಪಿಎಸ್II)ಗಳಿರುವ ಒಂದು ಕಾರ್ಖಾನೆಗೆ ಹೋಲಿಸಬಲ್ಲಿರಿ. ಇವು ಸ್ಟ್ರೋಮದಲ್ಲಿರುವ ವಿಶೇಷ ಎನ್ಸೈಮ್ಗಳ ಮೂರನೆಯ ಕಾರ್ಮಿಕ ತಂಡ (ವಿಶೇಷ ಎನ್ಸೈಮ್ಗಳು)ದಿಂದ ಉಪಯೋಗಿಸಲ್ಪಡುತ್ತವೆ. (ರೇಖಾಚಿತ್ರ 4ನ್ನು ನೋಡಿ.) ಆ ಮೂರನೆಯ ಕಾರ್ಮಿಕ ತಂಡವು, ಸ್ಟ್ರೋಮದಲ್ಲಿರುವ ಎನ್ಸೈಮ್ಗಳನ್ನು ಉಪಯೋಗಿಸುತ್ತ, ರಾಸಾಯನಿಕ ಕ್ರಿಯೆಗಳ ನಿಷ್ಕೃಷ್ಟ ಅನುಕ್ರಮದಲ್ಲಿ ಜಲಜನಕ ಅಣುಗಳನ್ನು ಮತ್ತು ಕಾರ್ಬನ್ ಡೈಆಕ್ಸೈಡ್ ಸೂಕ್ಷ್ಮ ಕಣಗಳನ್ನು ಕೂಡಿಸುವ ಮೂಲಕ, ಸಕ್ಕರೆಯನ್ನು ಮಾಡುತ್ತದೆ. ಈ ಮೂರೂ ಕಾರ್ಮಿಕ ತಂಡಗಳು, ಹಗಲಿನಲ್ಲಿ ಕೆಲಸಮಾಡಬಲ್ಲವು. ಮತ್ತು ಸಕ್ಕರೆಯ ಕಾರ್ಮಿಕ ತಂಡವು ಒಂದು ರಾತ್ರಿ ಸರದಿಯನ್ನೂ—ಕಡಮೆ ಪಕ್ಷ ದಿನ ಸರದಿ ಮಾಡಿರುವ ಎಟಿಪಿ ಮತ್ತು ಎನ್ಎಡಿಪಿಏಚ್ ಸರಬರಾಯಿಗಳು ಉಪಯೋಗಿಸಲ್ಪಡುವ ತನಕ—ಮಾಡುತ್ತದೆ.
ಆ ಸ್ಟ್ರೋಮವನ್ನು ನೀವು ಒಂದು ರೀತಿಯ ಕೋಶೀಯ ವಿವಾಹ ಸಂಬಂಧ ಕಟ್ಟುವ ಏಜನ್ಸಿಯೆಂದೆಣಿಸಬಹುದು. ಅದು ಅಣುಗಳಿಂದ ಮತ್ತು ಸೂಕ್ಷ್ಮ ಕಣಗಳಿಂದ ತುಂಬಿದೆ. ಅವುಗಳನ್ನು ಪರಸ್ಪರ “ವಿವಾಹ ಮಾಡಿಸ”ಬೇಕಾಗುತ್ತದೆ, ಏಕೆಂದರೆ ತಾವೇ ಮಾಡಿಕೊಳ್ಳುವ ಧೈರ್ಯ ಅವುಗಳಿಗಿಲ್ಲ. ಕೆಲವು ನಿರ್ದಿಷ್ಟ ಎನ್ಸೈಮ್ಗಳು ತೀರ ಒತ್ತಾಯ ಮಾಡುವ ವಿವಾಹ ಘಟನಕಾರರು.a ಇವು ವಿಶೇಷ ಆಕಾರಗಳುಳ್ಳ ಸಸಾರಜನಕ (ಪ್ರೋಟೀನ್) ಸೂಕ್ಷ್ಮ ಕಣಗಳು. ಈ ಆಕಾರಗಳು, ಅವು ತಕ್ಕದಾದ ಅಣುಗಳನ್ನು ಅಥವಾ ಸೂಕ್ಷ್ಮ ಕಣಗಳನ್ನು ಒಂದು ನಿರ್ದಿಷ್ಟ ರಾಸಾಯನಿಕ ಕ್ರಿಯೆಗಾಗಿ ಹಿಡಿಯುವಂತೆ ಅನುಮತಿಸುತ್ತವೆ. ಆದರೂ, ಭಾವೀ ಸೂಕ್ಷ್ಮ ಕಣೀಯ ವಿವಾಹ ಸಂಗಾತಿಗಳನ್ನು ಕೇವಲ ಪರಿಚಯಮಾಡಿಸುವುದರಲ್ಲಿ ಮಾತ್ರವೇ ಅವು ತೃಪ್ತಿಹೊಂದುವುದಿಲ್ಲ. ವಿವಾಹವು ಜರುಗುವುದನ್ನು ನೋಡುವ ತನಕ ಈ ಎನ್ಸೈಮ್ಗಳಿಗೆ ತೃಪ್ತಿಯಾಗದ ಕಾರಣ, ಅವು ಭಾವೀ ಜೊತೆಗಳನ್ನು ಹಿಡಿದು, ಈ ಪ್ರವೃತ್ತಿಯಿಲ್ಲದ ಸಂಗಾತಿಗಳನ್ನು ಪರಸ್ಪರ ನೇರವಾದ ಸಂಪರ್ಕಕ್ಕೆ ತಂದು, ಅವುಗಳನ್ನು ಒಂದು ವಿಧದ ಜೀವರಾಸಾಯನಿಕ ನಿರ್ಬಂಧ ವಿವಾಹಕ್ಕೆ ಒತ್ತಾಯಿಸುತ್ತವೆ. ಸಂಸ್ಕಾರಾನಂತರ, ಆ ಎನ್ಸೈಮ್ಗಳು ಹೊಸ ಸೂಕ್ಷ್ಮ ಕಣವನ್ನು ಬಿಡುಗಡೆಮಾಡಿ, ಈ ಕಾರ್ಯಗತಿಯನ್ನು ಮತ್ತೆ ಮತ್ತೆ ಪುನರಾವೃತ್ತಿಸುತ್ತವೆ. ಸ್ಟ್ರೋಮದಲ್ಲಿ ಆ ಎನ್ಸೈಮ್ಗಳು ಆಂಶಿಕವಾಗಿ ಪೂರ್ಣಗೊಂಡಿರುವ ಸಕ್ಕರೆಯ ಸೂಕ್ಷ್ಮ ಕಣಗಳನ್ನು ಪುನರೇರ್ಪಡಿಸುತ್ತ, ಎಟಿಪಿಯಿಂದ ಅವನ್ನು ಶಕ್ತೀಕರಿಸುತ್ತ, ಕಾರ್ಬನ್ ಡೈಆಕ್ಸೈಡನ್ನು ಕೂಡಿಸುತ್ತ, ಜಲಜನಕವನ್ನು ಜೋಡಿಸುತ್ತ, ನಂಬಲಾಗದ ವೇಗದಲ್ಲಿ ದಾಟಿಸಿ, ಕೊನೆಗೆ ಕೋಶದೊಳಗೆ ಇನ್ನೆಲ್ಲಿಯೊ ಗ್ಲೂಕೋಸ್ ಮತ್ತು ಇತರ ಅನೇಕ ಪರಿವರ್ತನೆಗಳಾಗಿ ನವೀಕರಿಸಲ್ಪಡುವಂತೆ ಒಂದು ಮೂರು-ಇಂಗಾಲ ಸಕ್ಕರೆಯನ್ನು ರವಾನಿಸುತ್ತವೆ.—ರೇಖಾಚಿತ್ರ 5ನ್ನು ನೋಡಿ.
ಹುಲ್ಲು ಹಸುರಾಗಿರುವುದೇಕೆ?
ದ್ಯುತಿಸಂಶ್ಲೇಷಣೆಯು ಮೂಲ ರಾಸಾಯನಿಕ ಕ್ರಿಯೆಗಿಂತ ಎಷ್ಟೋ ಹೆಚ್ಚು ಮಹತ್ವದ್ದಾಗಿದೆ. ಅದು ಬೆರಗುಗೊಳಿಸುವ ಸಂಕೀರ್ಣತೆ ಮತ್ತು ಸೂಕ್ಷ್ಮತೆಯ ಜೀವರಾಸಾಯನಿಕ ಸಾಮರಸ್ಯವಾಗಿದೆ. ಸಸ್ಯಗಳ ಜೀವ ಕಾರ್ಯಗತಿಗಳು (ಇಂಗ್ಲಿಷ್) ಎಂಬ ಪುಸ್ತಕವು ಅದನ್ನು ಈ ರೀತಿಯಲ್ಲಿ ಹೇಳುತ್ತದೆ: “ದ್ಯುತಿಸಂಶ್ಲೇಷಣೆಯು, ಸೂರ್ಯನ ಫೋಟಾನ್ಗಳ ಶಕ್ತಿಯನ್ನು ಉಪಯೋಗಿಸಲಿಕ್ಕಾಗಿರುವ ಗಮನಾರ್ಹವೂ ಅತಿಯಾಗಿ ನಿಯಂತ್ರಿತವೂ ಆದ ಕಾರ್ಯವಿಧಾನವಾಗಿದೆ. ಸಸ್ಯದ ಜಟಿಲ ವಾಸ್ತುಶಿಲ್ಪ ಮತ್ತು ದ್ಯುತಿಸಂಶ್ಲೇಷಣಾ ಕ್ರಿಯೆಯನ್ನು ನಿಯಂತ್ರಿಸುವ, ನಂಬಲಾಗದಷ್ಟು ನವಿರಾದ ಜೀವರಾಸಾಯನಿಕ ಮತ್ತು ತಳಿಶಾಸ್ತ್ರೀಯ ಚಾಲನ ಶಕ್ತಿಗಳನ್ನು, ಫೋಟಾನನ್ನು ಹಿಡಿದು ಅದರ ಶಕ್ತಿಯನ್ನು ರಾಸಾಯನಿಕ ರೂಪಕ್ಕೆ ಪರಿವರ್ತಿಸುವ ಮೂಲ ಕಾರ್ಯವಿಧಾನದ ಸಂಸ್ಕರಣಗಳೆಂದು ವೀಕ್ಷಿಸಬಹುದು.”
ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಹುಲ್ಲು ಹಸುರಾಗಿರುವುದೇಕೆ ಎಂಬುದನ್ನು ಕಂಡುಹಿಡಿಯುವುದು, ಯಾವುದು ಮಾನವಕುಲವು ಕಂಡುಹಿಡಿದಿರುವ ಯಾವುದೇ ವಸ್ತುವಿಗಿಂತಲೂ ವಿನ್ಯಾಸ ಹಾಗೂ ಯಂತ್ರ ಕಲಾಶಾಸ್ತ್ರದಲ್ಲಿ ಎಷ್ಟೋ ಶ್ರೇಷ್ಠ—ಸ್ವಯಂ ನಿಯಂತ್ರಕ, ಸ್ವಯಂ ಪೋಷಕ, ಒಂದು ಸೆಕೆಂಡಿಗೆ ಸಾವಿರಗಟ್ಟಲೆ, ಲಕ್ಷಗಟ್ಟಲೆ ಆವರ್ತನಗಳಷ್ಟು (ಸದ್ದು, ಮಾಲಿನ್ಯ ಇಲ್ಲವೆ ವಿಕಾರರಹಿತ) ಕಾರ್ಯನಡೆಸುತ್ತ, ಸೂರ್ಯಪ್ರಕಾಶವನ್ನು ಸಕ್ಕರೆಯಾಗಿ ಮಾರ್ಪಡಿಸುವ ಅತಿ ಸೂಕ್ಷ್ಮದರ್ಶಕೀಯ “ಯಂತ್ರಗಳು”—ವಾಗಿದೆಯೊ, ಅದರ ಕಡೆಗೆ ಬೆರಗಾಗಿ ನೋಡುವುದು ಎಂದಾಗಿದೆ. ನಮಗಾದರೊ ಇದು, ಒಬ್ಬ ಸರ್ವೋತ್ಕೃಷ್ಟ ವಿನ್ಯಾಸಕಾರನೂ ಯಂತ್ರಶಿಲ್ಪಿಯೂ ಆಗಿರುವ, ನಮ್ಮ ಸೃಷ್ಟಿಕರ್ತನಾದ ಯೆಹೋವ ದೇವರ ಮನಸ್ಸಿಗೆ ನಸುನೋಟವನ್ನು ಬೀರುವುದು ಎಂಬರ್ಥದಲ್ಲಿದೆ. ಮುಂದಿನ ಬಾರಿ ನೀವು, ಯೆಹೋವನ ಸುಂದರವಾದ, ಜೀವಪೋಷಕ, ಪರಿಪೂರ್ಣ ಕಾರ್ಖಾನೆಗಳಲ್ಲಿ ಒಂದನ್ನು ಪ್ರಶಂಸಿಸುವಾಗ, ಅಥವಾ ಮುಂದಿನ ಬಾರಿ ನೀವು ಆ ಸುಂದರವಾದ ಹಸುರು ಹುಲ್ಲಿನ ಮೇಲೆ ಕೇವಲ ನಡೆಯುವಾಗ, ಇದರ ಕುರಿತು ಯೋಚಿಸಿರಿ.
[ಅಧ್ಯಯನ ಪ್ರಶ್ನೆಗಳು]
a ಬೇರೆ ರೀತಿಯ ಕೆಲವು ಎನ್ಸೈಮ್ಗಳು ಒತ್ತಾಯಿಸುವ ಪುಟ್ಟ ವಿವಾಹ ವಿಚ್ಫೇದನಾ ವಕೀಲರಂತಿವೆ; ಸೂಕ್ಷ್ಮ ಕಣಗಳನ್ನು ಒಡೆಯುವುದೇ ಅವುಗಳ ಕೆಲಸ.
[ಪುಟ 36 ರಲ್ಲಿರುವ ಚಿತ್ರ]
ಒಳಚಿತ್ರ: Colorpix, Godo-Foto
[ಪುಟ 37 ರಲ್ಲಿರುವ ಚಿತ್ರ]
ದ್ಯುತಿಸಂಶ್ಲೇಷಣೆಯು ಈ ಮರವನ್ನು ಹೇಗೆ ಬೆಳೆಯುವಂತೆ ಮಾಡಿತು?
[Diagram on page 27]
ರೇಖಾಚಿತ್ರ 1
[Diagram on page 27]
ರೇಖಾಚಿತ್ರ 2
[Diagram on page 28]
ರೇಖಾಚಿತ್ರ 3
[Diagram on page 28]
ರೇಖಾಚಿತ್ರ 4
[Diagram on page 29]
ರೇಖಾಚಿತ್ರ 5