ನ್ಯೂ ಸೀಲೆಂಡ್ನ ಪುಟ್ಟ ಜ್ಯೋತಿರ್ವಾಹಕಗಳು
ನ್ಯೂ ಸೀಲೆಂಡ್ನ ಎಚ್ಚರ! ಸುದ್ದಿಗಾರರಿಂದ
ರಾತ್ರಿಯು—ಚಂದ್ರನಿಲ್ಲದೆಯೂ ಮೋಡಗಳಿಲ್ಲದೆಯೂ—ಗಾಢವಾದ ಕತ್ತಲೆಯಿಂದ ತುಂಬಿತ್ತು. ಶಿಬಿರದ ದೀಪಗಳು ಆರಿಹೋದ ಮೇಲೆ, ಉಜ್ವಲವಾದ ನಕ್ಷತ್ರಗಳ ವಿಶ್ವದಲ್ಲಿ ನಾವಿರುವಂತೆ ಭಾಸವಾಯಿತು. ಒಂದು ಕಿರಿದಾದ ಕಮರಿಯ ತಳದಲ್ಲಿದ್ದ ಬಿಸಿನೀರಿನ ಕೊಳಕ್ಕೆ ನಡೆಸುವ, ಒಂದು ಕಡಿದಾದ ಹಾದಿಯ ಮುಖಾಂತರ ನಾವು ಮುಂದುವರಿದೆವು. ಹಬೆಯಾಡುತ್ತಿರುವ ನೀರಿನ ಎರಡೂ ಪಕ್ಕಗಳಲ್ಲಿಯೂ ಗಿಡಗಳು ಬೆಳೆಯುತ್ತಿದ್ದವು. ನಾವು ನೀರಿನಲ್ಲಿ ಇಳಿದು, ಪ್ರಯಾಣದ ಒಂದು ದೀರ್ಘ ದಿನದ ತರುವಾಯ ವಿಶ್ರಮಿಸಿದೆವು. ನೆಲದಿಂದ ನೈಸರ್ಗಿಕವಾಗಿ ಉಕ್ಕಿಹರಿಯುವ ಬಿಸಿನೀರಿನ ಈ ಕೊಳವು, ಒಂದು ಮೋಟಾರು ಶಿಬಿರದಲ್ಲಿ ನಮ್ಮ ರಾತ್ರಿಯ ವಸತಿಗಳ ಬಳಿಯಿತ್ತು.
ಆಕಾಶದ ಆಚೆ ನಕ್ಷತ್ರವೊಂದು ರಭಸವಾಗಿ ಚಲಿಸುವುದನ್ನು ನಾನು ವೀಕ್ಷಿಸಿದೆ. ಅದರ ಬಗ್ಗೆ ನನ್ನ ಹೆಂಡತಿಗೆ ಹೇಳಲು ನಾನು ತಿರುಗಿದಾಗ, ನಾನು ನೀರಿನಲ್ಲಿ ಮುಗ್ಗರಿಸಿ ಬಿದ್ದೆ. ನನ್ನ ಆಶ್ಚರ್ಯಕ್ಕೆ, ಹಲವಾರು ನಕ್ಷತ್ರಗಳು ಹಠಾತ್ತನೆ ನಂದಿಹೋದವು—ಇಲ್ಲವಾದವು! ನಾನು ಆಶ್ಚರ್ಯಗೊಂಡು ಮಾತಾಡಿದಂತೆ, ನಕ್ಷತ್ರಗಳ ಒಂದು ಇಡೀ ಹಿಂಡು ಮಾಯವಾಯಿತು. ವಿಶ್ವದಲ್ಲಿ ನಾನೊಂದು ತೂತನ್ನು ಉಂಟುಮಾಡಿದೆನೋ ಎಂಬಂತೆ ತೋರಿತು!
ಏನು ಸಂಭವಿಸಿತ್ತೆಂಬುದನ್ನು ನಾನು ಊಹಿಸಲು ಪ್ರಯತ್ನಿಸಿದಂತೆ, ನಕ್ಷತ್ರಗಳು ಒಂದೊಂದಾಗಿ ಪುನಃ ಕಾಣಿಸಿಕೊಂಡವು, ಮತ್ತು ನಕ್ಷತ್ರಗಳ ಮುಖ್ಯ ಗುಂಪಿಗಿಂತ ಒಂದು ಗೊಂಚಲು ನನಗೆ ಬಹಳ ಹತ್ತಿರವಿತ್ತೆಂಬುದನ್ನು ನಾನು ಈಗ ನೋಡಿದೆ. ವಾಸ್ತವದಲ್ಲಿ, ಕೆಲವು ಸ್ಪರ್ಶಿಸುವಷ್ಟು ಹತ್ತಿರವಿದ್ದವು. ನಾವು ನ್ಯೂ ಸೀಲೆಂಡ್ನ ಮಿಂಚುಹುಳುಗಳನ್ನು ಮೊದಲ ಬಾರಿಗೆ ಸಂಧಿಸಿದ್ದೆವು. ನಮ್ಮ ಮೇಲಿದ್ದ ಹಸುರು ಸಸ್ಯಗಳ ಅದೃಶ್ಯ ಗೋಡೆಗಳಿಂದ ಅವು ತೂಗುತ್ತಿದ್ದವು, ಮತ್ತು ಅವುಗಳ ಮಂದವಾದ ಬೆಳಕುಗಳು ನಕ್ಷತ್ರಮಯ ಹಿನ್ನೆಲೆಯೊಂದಿಗೆ ಬೆರೆತುಹೋದವು.
ನ್ಯೂ ಸೀಲೆಂಡ್ನ ಮಿಂಚುಹುಳು ಒಂದು ಹುಳುವಲ್ಲ, ಬದಲಾಗಿ ಒಂದು ಕೀಟವಾಗಿದೆ. ಇದು ಲೋಕದ ಬೇರೆ ಭಾಗಗಳಲ್ಲಿರುವ ಮಿಂಚುಹುಳುಗಳು ಹಾಗೂ ಹಾರುಹುಳುಗಳಿಗಿಂತ ಭಿನ್ನವಾಗಿದೆ. ಅರಾಕ್ನೊಕಾಂಪ ಲೂಮಿನೋಸ ಎಂಬ ಅದರ ಹೆಸರು, ಅದು ಒಂದು ಬಗೆಯ ಬೆಳಕುಸೂಸುವ ಜೇಡರಹುಳುವಾಗಿದೆ ಎಂಬ ಕಲ್ಪನೆಯನ್ನು ನಿಮಗೆ ನೀಡಬಲ್ಲದು. ಆದರೆ ಅದು ಕೂಡ ನಿಜವಾಗಿರುವುದಿಲ್ಲ.
ನಮ್ಮ ಪ್ರಥಮ ಭೇಟಿಯಾದ ಸ್ವಲ್ಪದರಲ್ಲಿಯೇ, ನಾವು ಮಿಂಚುಹುಳುಗಳನ್ನು ಮತ್ತೆ ಸಂಧಿಸಿದೆವು—ನ್ಯೂ ಸೀಲೆಂಡ್ನ ಉತ್ತರ ದ್ವೀಪದಲ್ಲಿರುವ ವೈಟೋಮೋ ಗುಹೆಗಳಲ್ಲಿ. ಮಿಂಚುಹುಳುವಿನ ಗವಿಕೋಣೆಗೆ ನಾವು ಬೆಳೆಸಿದ ಪ್ರಯಾಣವನ್ನು ನಾನು ವಿವರಿಸುತ್ತೇನೆ. ಆ ಪುಟ್ಟ ಜೀವಿಗಳನ್ನು ನೋಡಲು ಒಂದು ದೋಣಿಯು ನಮ್ಮನ್ನು ಅಲ್ಲಿಗೆ ಕೊಂಡೊಯ್ದಿತು.
ವೈಟೋಮೋ ಗವಿಕೋಣೆ
ಮಿಂಚುಹುಳುವಿನ ಗುಹೆಯು—ಅನೇಕ ಸಾವಿರಾರು ವರ್ಷಗಳಿಂದ ರೂಪುಗೊಂಡಿರುವ ಸುಣ್ಣಕಲ್ಲು ತೊಂಗಲು ಮತ್ತು ಸುಣ್ಣಕಲ್ಲ ಹೆಪ್ಪಿನ ರಚನೆಗಳ ಶೋಭಾಯಮಾನವಾದ ಕಲಾನೈಪುಣ್ಯವನ್ನು ತೋರಿಸಲು ಸುಂದರವಾಗಿ ಬೆಳಗಿಸಲ್ಪಟ್ಟ—ಒಂದು ಅದ್ಭುತವಾಗಿದೆ. ನಾವು ಪ್ರತಿಯೊಂದು ಕ್ಷೇತ್ರವನ್ನು ಸಮೀಪಿಸಿದಂತೆ ನಮ್ಮ ಮಾರ್ಗದರ್ಶಿಯು ಲೈಟ್ಗಳನ್ನು ಆನ್ ಮಾಡಿದನು, ಮತ್ತು ನಾವು ಆಕರ್ಷಕವಾದ ರಚನೆಗಳು ಮತ್ತು ಸುರಂಗಮಾರ್ಗಗಳು, ನೆಲದ ಕೆಳಗೆ ಅದ್ಭುತಗಳ ಒಂದು ಅನಿರೀಕ್ಷಿತವೂ ವಿಚಿತ್ರವೂ ಆದ ಲೋಕದಿಂದ ಬೆರಗುಗೊಂಡೆವು. ಅಂಧಕಾರದೊಳಗೆ ಅವರೋಹಿಸಿದ ಮೆಟ್ಟಲುಗಳ ಮೇಲೆ ನಾವು ಒಟ್ಟುಸೇರಿದಾಗ, ನಮ್ಮ ಹೆಜ್ಜೆಗಳು ಭಯಹುಟ್ಟಿಸುವ ರೀತಿಯಲ್ಲಿ ಮಾರ್ದನಿಸಿದವು. ಕತ್ತಲೆಗೆ ನಮ್ಮ ಕಣ್ಣುಗಳು ಹೊಂದಿಕೊಂಡಂತೆ, ಮೇಲೆ ಹಸಿರುಛಾಯೆಯ ಬೆಳಕಿನ ಪುಟ್ಟ ಮಿನುಗುಗಳನ್ನು ನಾವು ನೋಡಲಾರಂಭಿಸಿದೆವು. ಮಿಂಚುಹುಳುಗಳು!
ನಾವು ಬಂದರು ಕಾಪನ್ನು ಸಮೀಪಿಸಿ, ಒಂದು ದೋಣಿಯನ್ನು ಹತ್ತಿದೆವು. ಬಂದರಿನಿಂದ ಮುಂದೆ ಸಾಗುತ್ತಾ, ನಾವು ಅಂಧಕಾರದೊಳಗೆ ಪ್ರಯಾಣಮಾಡಿದೆವು. ಅನಂತರ, ನಾವು ಒಂದು ಮೂಲೆಯ ಸುತ್ತಲೂ ಬಂದಾಗ, ನಮ್ಮ ಮೇಲೆ—ಯಾವುದನ್ನು ನಾನು ಇಡೀ ಕ್ಷೀರಪಥದ ಸಂಕುಚಿತಗೊಳಿಸಲ್ಪಟ್ಟ ರೂಪವೆಂದು ಮಾತ್ರ ವರ್ಣಿಸಸಾಧ್ಯವಿತ್ತೊ ಅದು—ಕಾಣಿಸಿಕೊಂಡಿತು. ಗುಹೆಯ ಚಾವಣಿಯು ಪೂರ್ಣವಾಗಿ ಮಿಂಚುಹುಳುಗಳಿಂದ ತುಂಬಿತ್ತು. ಗ್ರಂಥಕರ್ತ ಜಾರ್ಜ್ ಬರ್ನಡ್ ಷಾ, ಈ ಸ್ಥಳವನ್ನು “ಲೋಕದ ಎಂಟನೆಯ ಅದ್ಭುತ” ಎಂದು ಕರೆದನು.
ಆಕರ್ಷಕವಾದ ಮಿಂಚುಹುಳು
ಪ್ರವಾಸವು ಕೊನೆಗೊಂಡಾಗ, ಮಿಂಚುಹುಳುವಿನ ವಿಷಯದಲ್ಲಿ ನಾವು ವ್ಯಕ್ತಪಡಿಸಿದ ಆಶ್ಚರ್ಯವು, ಅದರ ಕುರಿತು ಹೆಚ್ಚನ್ನು ಕಲಿಯುವಂತೆ ನಮ್ಮನ್ನು ಉತ್ತೇಜಿಸಿತು. ಮತ್ತು ನಾವು ಕಲಿತಂಥ ವಿಷಯವು ನಾವು ನೋಡಿದ್ದ ವಿಷಯದಷ್ಟೇ ಆಕರ್ಷಕವಾಗಿತ್ತು. ಹಿಂದೀಪವು ಈಗಾಗಲೇ ಮಿನುಗುತ್ತಿರುವುದರೊಂದಿಗೆ, ಒಂದು ಪುಟ್ಟ ಮರಿಹುಳುವಾಗಿ ಜೀವನವನ್ನು ಆರಂಭಿಸುವ ನ್ಯೂ ಸೀಲೆಂಡ್ನ ಮಿಂಚುಹುಳು, ತನ್ನ ಬಾಯಿಯಲ್ಲಿರುವ ಬೇರೆ ಬೇರೆಯಾದ ರಸಗ್ರಂಥಿಗಳಿಂದ ಲೋಳೆಪದಾರ್ಥ ಮತ್ತು ರೇಶ್ಮೆಯ ಬಲೆಯನ್ನು ಕಟ್ಟುತ್ತದೆ ಮತ್ತು ಆ ಬಲೆಯನ್ನು ಗವಿಕೋಣೆಯ ಒಳಮೈಗೆ ಜೋಡಿಸುತ್ತದೆ. ಬಲೆಯು ವಾಸ್ತವವಾಗಿ ಒಂದು ನಾಳದಂತಿದ್ದು, ಅದರಲ್ಲಿ ಮರಿಹುಳು ಹಿಂದಕ್ಕೂ ಮುಂದಕ್ಕೂ ಚಲಿಸಸಾಧ್ಯವಿದೆ.
ಜೀವಿಸಬೇಕಾದರೆ ಮಿಂಚುಹುಳುವಿಗೆ ಆಹಾರದ ಅಗತ್ಯವಿದೆ, ಆದುದರಿಂದ ಆರರಿಂದ ಒಂಬತ್ತು ತಿಂಗಳುಗಳ ವರೆಗೆ ಅದು ಆಹಾರವನ್ನು ಹಿಡಿಯುವ ಕೆಲಸವನ್ನು ವಹಿಸಿಕೊಳ್ಳುತ್ತದೆ. ಅದರ ಆಹಾರವು ನೀರಿನ ಮುಖಾಂತರ ಬರುವುದಾದರೂ, ಅದು ಆಹಾರವನ್ನು ಹಿಡಿಯುವುದು ಗಾಳಿಯಲ್ಲಿಯೇ. ಅತ್ಯಾವಶ್ಯಕವಾಗಿರುವ ಪ್ರವಾಹವು ಬೆಳಕಿನಿಂದ ಆಕರ್ಷಿಸಲ್ಪಡುವ ಚಿಗಟೆಗಳು, ಸೊಳ್ಳೆಗಳು, ಕಲ್ನೊಣಗಳು, ಮತ್ತು ಮೇ-ನೊಣಗಳ ಸರಬರಾಯಿಯನ್ನು ಒಳತರುತ್ತದೆ. ಅವುಗಳನ್ನು ಹಿಡಿಯಲು, ಮಿಂಚುಹುಳು ತನ್ನ ಬಲೆಯಿಂದ ರೇಶ್ಮೆ ಹುರಿಗಳ (ಕೆಲವೊಮ್ಮೆ 70ರಷ್ಟು ಹೆಚ್ಚು) ಸರಣಿಯನ್ನು ಇಳಿಬಿಡುತ್ತದೆ. ಪ್ರತಿಯೊಂದು ಹುರಿಯ ಮೇಲೆ ಲೋಳೆಪದಾರ್ಥದ ಅಂಟುಳ್ಳ ಸಣ್ಣಹನಿಗಳ ಸರಣಿಯು ಸಮಾನಂತರದಲ್ಲಿ ಇರಿಸಲ್ಪಟ್ಟಿದ್ದು, ಹುರಿಗಳು ನೇರವಾಗಿ ಇಳಿಬಿಟ್ಟಿರುವ ಪುಟ್ಟ ಮುತ್ತಿನ ಕಂಠಾಭರಣಗಳನ್ನು ಹೋಲುತ್ತವೆ.
ಮಿಂಚುಹುಳುವಿನ ಅತ್ಯಂತ ಆಕರ್ಷಕವಾದ ಭಾಗವು, ಆಹಾರವನ್ನು ಹಿಡಿಯುವ ಹುರಿಗಳನ್ನು ಅದು ಯಾವುದರಿಂದ ಪ್ರಜ್ವಲಿಸುತ್ತದೊ ಆ ಬೆಳಕಾಗಿದೆ. ನ್ಯೂ ಸೀಲೆಂಡಿನ ಮಿಂಚುಹುಳು, ಯಾವುದರ ಮಿಂಚು ನರವ್ಯೂಹ ವ್ಯವಸ್ಥೆಗೆ ಸಂಬಂಧಿಸಿಲ್ಲವೊ ಆ ಕೀಟಗಳ ಗುಂಪಿನಲ್ಲಿ ಒಂದಾಗಿದೆ. ಆದರೂ, ಬೇಕಾದಾಗ ಅದು ಬೆಳಕನ್ನು ಆಫ್ ಮಾಡಶಕ್ತವಾಗಿದೆ. ಬೆಳಕಿನ ಅಂಗವು ಅದರ ವಿಸರ್ಜನ ನಾಳಗಳ ತುದಿಯಲ್ಲಿದೆ, ಮತ್ತು ಮರಿಹುಳುವಿನ ಉಸಿರಾಡುವ ವ್ಯವಸ್ಥೆಯ ಒಂದು ಭಾಗವು, ಬೆಳಕನ್ನು ಕೆಳಮುಖವಾಗಿ ಕಳುಹಿಸುತ್ತಾ, ಪ್ರತಿಬಿಂಬಕದಂತೆ ಕಾರ್ಯಮಾಡುತ್ತದೆ. ಬೆಳಕನ್ನು ಉತ್ಪಾದಿಸಲು ಬೇಕಾದ ಆಮ್ಲಜನಕ ಇಲ್ಲವೆ ರಾಸಾಯನಿಕ ದ್ರವ್ಯಗಳನ್ನು ತಡೆಗಟ್ಟುವ ಮೂಲಕ ಅದು ಬೆಳಕನ್ನು ಆಫ್ ಮಾಡುತ್ತದೆ.
ಹಾಗಿದ್ದರೂ, ಮಿಂಚುಹುಳುವಿನ ನಾಳದ ತುದಿಯಲ್ಲಿರುವ ಬೆಳಕು, ಒಂದು ಕೀಟವು ಅಪೇಕ್ಷಿಸುವ ಆಶಾಜನಕ ಸೂಚನೆಯಲ್ಲ. ಅದು ರೇಶ್ಮೆಯಂತಹ ಹುರಿಯ ಮೂಲಕ ಸರಣಿಯೊಳಗೆ ಹಾರಿಹೋಗುತ್ತದೆ. ಅಲ್ಲಿ ಒಂದು ರಾಸಾಯನಿಕ ದ್ರವ್ಯವು—ಹಾಗೆಂದು ಸೂಚಿಸಲ್ಪಟ್ಟಿದೆ—ಅದನ್ನು ಕ್ರಮೇಣ ಅಸಂವೇದನಗೊಳಿಸಬಹುದು. ಹೋರಾಡುತ್ತಿರುವ ಆಹುತಿಯ ಕಂಪನಗಳನ್ನು ಗ್ರಹಿಸುತ್ತಾ, ಮರಿಹುಳು ಬಲೆಯ ಹೊರಗೆ ಅಪಾಯಕರವಾಗಿ ತೂಗಿ, ತನ್ನ ದೇಹದ ಸಂಕೋಚನಗಳನ್ನು ಬಳಸುತ್ತಾ, ಬಾಯಿಯಿಂದ ಆ ಹುರಿಯನ್ನು ಮೇಲೆ ಎಳೆದುಕೊಳ್ಳುತ್ತದೆ.
ಆರರಿಂದ ಒಂಬತ್ತು ತಿಂಗಳುಗಳ ವರೆಗೆ ಆಹಾರಹಿಡಿದು, ತಿಂದ ಬಳಿಕ, ಮರಿಹುಳು ಪೊರೆಹುಳುವಾಗುತ್ತದೆ ಮತ್ತು ಪೂರ್ಣವಾಗಿ ಬೆಳೆದ ಹುಳುವಿನಂತೆ ಜೀವನವನ್ನು ಅನುಭವಿಸುತ್ತದೆ. ಪೂರ್ಣವಾಗಿ ಬೆಳೆದ ನೊಣವು ನಿಜವಾಗಿಯೂ ಜೀವನದಲ್ಲಿ ಆನಂದಿಸುತ್ತದೊ ಇಲ್ಲವೊ ಎಂಬುದು ಸಂಶಯಾಸ್ಪದ. ಅದು ಕೇವಲ ಎರಡು ಅಥವಾ ಮೂರು ದಿನಗಳ ವರೆಗೆ ಜೀವಿಸುವುದು, ಏಕೆಂದರೆ ಪೂರ್ಣವಾಗಿ ಬೆಳೆದ ನೊಣಕ್ಕೆ ಬಾಯಿಯಿರುವುದಿಲ್ಲ, ಆದಕಾರಣ ಅದಕ್ಕೆ ತಿನ್ನಲಿಕ್ಕಾಗುವುದಿಲ್ಲ. ಅದರ ಉಳಿದ ಸಮಯವು ಪುನರುತ್ಪತ್ತಿಗೆ ಮೀಸಲಾಗಿಡಲ್ಪಟ್ಟಿರುತ್ತದೆ. ಹೆಣ್ಣು ನೊಣಗಳು ತಮ್ಮ ಕವಚಗಳಿಂದ ಹೊರಬಂದ ಕೂಡಲೆ, ಪೂರ್ಣವಾಗಿ ಬೆಳೆದ ಗಂಡು ನೊಣಗಳು ಅವುಗಳಿಗೆ ಗರ್ಭಾದಾನ ಮಾಡುತ್ತವೆ. ತನ್ನ ಮೊಟ್ಟೆಗಳನ್ನು ಒಂದೊಂದಾಗಿ ಹಾಕಲು ಹೆಣ್ಣು ನೊಣವು ಒಂದು ಇಡೀ ದಿನವನ್ನು ತೆಗೆದುಕೊಳ್ಳಬಹುದು, ಅದರ ತರುವಾಯ ಅದು ಸತ್ತುಹೋಗುತ್ತದೆ. ಮಾನವರಿಗೆ ಅಪಾರ ಸಂತೋಷವನ್ನು ಕೊಡುವ ಮಿನುಗುವ ಆಕಾಶಗಂಗೆಗೆ ನೆರವನ್ನು ನೀಡಿರಲಾಗಿ, ನ್ಯೂ ಸೀಲೆಂಡ್ ಪುಟ್ಟ ಜ್ಯೋತಿರ್ವಾಹಕ ಹುಳುವಿನ 10ರಿಂದ 11 ತಿಂಗಳುಗಳ ಜೀವನ ಚಕ್ರವು ಕೊನೆಗೊಂಡಿರುತ್ತದೆ.
[ಪುಟ 27 ರಲ್ಲಿರುವ ಚಿತ್ರ]
ಎದುರು ಪುಟ: ಮಿಂಚುಹುಳು ಗವಿಕೋಣೆಯನ್ನು ಪ್ರವೇಶಿಸುತ್ತಿರುವುದು
[ಪುಟ 28 ರಲ್ಲಿರುವ ಚಿತ್ರ]
ಬಲಪಕ್ಕ: ಮಿಂಚುಹುಳುವಿನ ಆಹಾರವನ್ನು ಹಿಡಿಯುವ ಹುರಿಗಳು
[ಪುಟ 28 ರಲ್ಲಿರುವ ಚಿತ್ರ]
ಮೇಲೆ: ಗವಿಕೋಣೆಯ ಚಾವಣಿಯ ಮೇಲೆ ಮಿಂಚುಹುಳುಗಳಿಂದ ತೋರಿಸಲ್ಪಡುವ ಬೆಳಕು ಪ್ರದರ್ಶನ
[ಪುಟ 27 ರಲ್ಲಿರುವ ಚಿತ್ರ ಕೃಪೆ]
16-17ನೆಯ ಪುಟಗಳಲ್ಲಿರುವ ಚಿತ್ರಗಳು: Waitomo Caves Museum Society Inc.