ಇಂಟರ್ನೆಟ್ ಏಕೆ ಎಚ್ಚರಿಕೆಯಿಂದಿರಬೇಕು?
ಶೈಕ್ಷಣಿಕ ಉಪಯೋಗಕ್ಕಾಗಿ ಮತ್ತು ದಿನನಿತ್ಯದ ಸಂವಾದಕ್ಕಾಗಿ ಉಪಯೋಗಿಸಲ್ಪಡುವ ಸಾಮರ್ಥ್ಯ ಇಂಟರ್ನೆಟ್ಗೆ ನಿಶ್ಚಯವಾಗಿಯೂ ಇದೆ. ಆದರೂ, ಅದರ ಉಚ್ಚ ತಂತ್ರವಿಜ್ಞಾನದ ಆಕರ್ಷಣೆಯನ್ನು ಕಳಚಿಹಾಕುವಲ್ಲಿ, ಟೆಲಿವಿಷನ್, ಟೆಲಿಫೋನ್ಗಳು, ವಾರ್ತಾಪತ್ರಗಳು ಮತ್ತು ಲೈಬ್ರೆರಿಗಳನ್ನು ದೀರ್ಘಕಾಲದಿಂದ ಪೀಡಿಸಿರುವ ಅವೇ ಸಮಸ್ಯೆಗಳು ಇಂಟರ್ನೆಟ್ ಅನ್ನು ಆವರಿಸಿವೆ. ಆದಕಾರಣ, ಒಂದು ಯುಕ್ತವಾದ ಪ್ರಶ್ನೆಯು, ಇಂಟರ್ನೆಟ್ನ ಒಳವಿಷಯವು ನನ್ನ ಕುಟುಂಬಕ್ಕೂ ನನಗೂ ಯೋಗ್ಯವಾಗಿದೆಯೆ? ಎಂದಾಗಿದೆ.
ಇಂಟರ್ನೆಟ್ನಲ್ಲಿ ಅಶ್ಲೀಲ ವಿಷಯಗಳ ಲಭ್ಯತೆಯ ಕುರಿತಾಗಿ ಅನೇಕಾನೇಕ ವರದಿಗಳು ಹೇಳಿಕೆಯನ್ನು ನೀಡಿವೆ. ಅಂದಮಾತ್ರಕ್ಕೆ, ಇಂಟರ್ನೆಟ್ ಲೈಂಗಿಕವಾಗಿ ವಿಕೃತವರ್ತನೆಯ ವ್ಯಕ್ತಿಗಳಿಂದ ತುಂಬಿರುವ ಚರಂಡಿಯೆಂಬುದನ್ನು ಇದು ಅರ್ಥೈಸುತ್ತದೊ? ಇದು ಮಹಾ ಅತಿಶಯೋಕ್ತಿಯೆಂಬುದು ಕೆಲವರ ವಾದ. ಆಕ್ಷೇಪಣೀಯ ವಿಷಯಗಳನ್ನು ಕಂಡುಹಿಡಿಯಲು ಒಬ್ಬನು ಪ್ರಜ್ಞಾಪೂರ್ವಕವೂ ಉದ್ದೇಶಪೂರ್ವಕವೂ ಆದ ಪ್ರಯತ್ನವನ್ನು ಮಾಡಬೇಕೆಂದು ಅವರು ವಾದಿಸುತ್ತಾರೆ.
ಅಹಿತಕರವಾದ ವಿಷಯವನ್ನು ಕಂಡುಹಿಡಿಯಲು ಒಬ್ಬನು ಉದ್ದೇಶಪೂರ್ವಕವಾದ ಪ್ರಯತ್ನವನ್ನು ಮಾಡಬೇಕೆಂಬುದು ನಿಜವಾದರೂ, ಬೇರೆಲ್ಲಿಗಿಂತಲೂ ಹೆಚ್ಚಾಗಿ ಇಂಟರ್ನೆಟ್ನಲ್ಲಿ ಅದನ್ನು ಹೆಚ್ಚು ಸುಲಭವಾಗಿ ಕಂಡುಹಿಡಿಯಸಾಧ್ಯವಿದೆಯೆಂದು ಇತರರು ವಾದಿಸುತ್ತಾರೆ. ಕೆಲವೇ ಗುಂಡಿಗಳನ್ನು ಒತ್ತಿ, ಒಬ್ಬ ಬಳಕೆದಾರನು, ಆಡಿಯೋ ಮತ್ತು ವಿಡಿಯೊ ಚಿತ್ರಗಳು ಸೇರಿರುವ ಲೈಂಗಿಕವಾಗಿ ಸುಸ್ಪಷ್ಟವಾಗಿರುವ ಕಾಮಸಂಬಂಧವಾದ ವಿಷಯಗಳನ್ನು ಕಂಡುಹಿಡಿಯಬಲ್ಲನು.
ಇಂಟರ್ನೆಟ್ನಲ್ಲಿ ಎಷ್ಟು ಅಶ್ಲೀಲ ವಿಷಯವು ಲಭ್ಯವಿದೆಯೆಂಬ ವಿವಾದಾಂಶವು ಪ್ರಚಲಿತವಾಗಿ ಆವೇಶಪೂರ್ವಕವಾಗಿ ವಾಗ್ವಾದಿಸಲ್ಪಡುತ್ತಿರುವ ಸಂಗತಿಯಾಗಿದೆ. ಅದೊಂದು ವ್ಯಾಪಕವಾಗಿರುವ ಸಮಸ್ಯೆಯೆಂದು ಸೂಚಿಸುವ ವರದಿಗಳು ಅತಿಶಯೋಕ್ತಿಯಾಗಿರಬಹುದೆಂಬುದು ಕೆಲವರ ಅನಿಸಿಕೆ. ಆದರೂ, ನಿಮ್ಮ ಹಿತ್ತಿಲಲ್ಲಿ ನೂರಲ್ಲ, ಕೇವಲ ಕೆಲವೇ ವಿಷದ ಹಾವುಗಳಿವೆಯೆಂದು ನಿಮಗೆ ತಿಳಿದುಬಂದರೆ, ನಿಮ್ಮ ಕುಟುಂಬದ ಸುರಕ್ಷೆಯ ಕುರಿತು ನೀವು ಕಡಮೆ ಚಿಂತಿತರಾಗುವಿರೊ? ಇಂಟರ್ನೆಟ್ಗೆ ಪ್ರವೇಶವಿರುವವರು ಎಚ್ಚರಿಕೆ ವಹಿಸುವುದು ವಿವೇಕಪ್ರದ.
ಮಕ್ಕಳನ್ನು ಬಲಿತೆಗೆದುಕೊಳ್ಳುವವರ ವಿಷಯದಲ್ಲಿ ಎಚ್ಚರಿಕೆ!
ಇತ್ತೀಚಿನ ವಾರ್ತಾಪ್ರಸಾರವು, ಕೆಲವು ಶಿಶುಗಾಮಿಗಳು ಯುವ ಜನರೊಂದಿಗೆ ಅವರ ಪರಸ್ಪರ ಇಂಟರ್ನೆಟ್ ಹರಟೆಗಳಲ್ಲಿ ಸೇರಿಕೊಳ್ಳುತ್ತಾರೆಂದು ತೋರಿಸಿದೆ. ಚಿಕ್ಕ ಮಕ್ಕಳಂತೆ ನಟಿಸುತ್ತ, ಈ ವಯಸ್ಕರು ಕಪಟೋಪಾಯದಿಂದ ಸಂದೇಹಪಡದ ಯುವ ಜನರಿಂದ ಹೆಸರುಗಳನ್ನೂ ವಿಳಾಸಗಳನ್ನೂ ಪಡೆದುಕೊಂಡಿದ್ದಾರೆ.
ಕಾಣೆಯಾಗಿರುವ ಮತ್ತು ಶೋಷಿತ ಮಕ್ಕಳ ರಾಷ್ಟ್ರೀಯ ಕೇಂದ್ರ (ಎನ್ಸಿಎಮ್ಇಸಿ)ವು ಈ ಚಟುವಟಿಕೆಯಲ್ಲಿ ಕೆಲವನ್ನು ದಾಖಲಿಸಿದೆ. ದೃಷ್ಟಾಂತಕ್ಕೆ, 1996ರಲ್ಲಿ ಅಮೆರಿಕದ ಸೌತ್ ಕ್ಯಾರೊಲೈನದ 13 ಮತ್ತು 15 ವರ್ಷ ಪ್ರಾಯದ ಇಬ್ಬರು ಹುಡುಗಿಯರು ಒಂದು ವಾರದ ತನಕ ಕಾಣೆಯಾಗಿದ್ದರು ಎಂದು ಪೊಲೀಸರು ಕಂಡುಕೊಂಡರು. ತಾವು ಇಂಟರ್ನೆಟ್ನಲ್ಲಿ ಭೇಟಿಯಾಗಿದ್ದ 18 ವರ್ಷ ಪ್ರಾಯದ ಪುರುಷನೊಂದಿಗೆ ಅವರು ಇನ್ನೊಂದು ರಾಜ್ಯಕ್ಕೆ ಹೋಗಿದ್ದರು. 35 ವಯಸ್ಸಿನ ಒಬ್ಬ ಮನುಷ್ಯನು, ಹೆತ್ತವರು ಮನೆಯಲ್ಲಿಲ್ಲದಿದ್ದಾಗ 14 ವಯಸ್ಸಿನ ಹುಡುಗನೊಬ್ಬನನ್ನು ನಿಷಿದ್ಧ ಲೈಂಗಿಕ ಮಿಲನಕ್ಕೆ ಸೆಳೆದ ಆಪಾದನೆಗೆ ಒಳಗಾದನು. ಇವೆರಡು ಪ್ರಕರಣಗಳೂ ಇಂಟರ್ನೆಟ್ ಚ್ಯಾಟ್ ರೂಮ್ನಲ್ಲಿ ನಡೆದ ಸಂಭಾಷಣೆಯ ಕಾರಣ ಆರಂಭಗೊಂಡವು. ಇನ್ನೊಬ್ಬ ವಯಸ್ಕನು 1995ರಲ್ಲಿ 15 ವರ್ಷ ಪ್ರಾಯದವನನ್ನು ಇಂಟರ್ನೆಟ್ನಲ್ಲಿ ಭೇಟಿಯಾಗಿ, ಅವನನ್ನು ಭೇಟಿಮಾಡಲು ಧೈರ್ಯದಿಂದ ಅವನ ಶಾಲೆಗೆ ಹೋದನು. ಮತ್ತೊಬ್ಬ ವಯಸ್ಕನು 14 ವಯಸ್ಸಿನ ಹುಡುಗಿಯೊಬ್ಬಳೊಂದಿಗೆ ತಾನು ಸಂಭೋಗಮಾಡಿರುವುದನ್ನು ಒಪ್ಪಿಕೊಂಡನು. ಅವಳು ಇಂಟರ್ನೆಟ್ನ ಬುಲೆಟಿನ್ ಬೋರ್ಡಿನ ಮೂಲಕ ಹದಿವಯಸ್ಕರನ್ನು ಸಂಪರ್ಕಿಸಲು ತನ್ನ ತಂದೆಯ ಕಂಪ್ಯೂಟರನ್ನು ಉಪಯೋಗಿಸಿದ್ದಳು. ಆಕೆಯೂ ಈ ವಯಸ್ಕನನ್ನು ಇಂಟರ್ನೆಟ್ ಮೂಲಕ ಭೇಟಿಯಾಗಿದ್ದಳು. ಈ ಯುವ ಜನರೆಲ್ಲರೂ ಅಂತಿಮವಾಗಿ ಅವರು ತಮ್ಮನ್ನು ಗುರುತಿಸಿಕೊಳ್ಳುವಂತೆ ಒತ್ತಾಯಿಸಲ್ಪಟ್ಟಿದ್ದರು.
ಹೆತ್ತವರ ಮಾರ್ಗದರ್ಶನೆಯ ಆವಶ್ಯಕತೆ
ಮೇಲಿನಂತಹ ಸಂಭವಗಳು ಸಾಪೇಕ್ಷವಾಗಿ ವಿರಳವಾದರೂ, ಹೆತ್ತವರು ಈ ವಿಷಯವನ್ನು ಜಾಗರೂಕತೆಯಿಂದ ಪರೀಕ್ಷಿಸಬೇಕು. ತಮ್ಮ ಮಕ್ಕಳು ಪಾತಕ ಮತ್ತು ಶೋಷಣೆಗಳ ಗುರಿಹಲಗೆಗಳಾಗುವುದರಿಂದ ಸಂರಕ್ಷಿಸಲು ಹೆತ್ತವರಿಗೆ ಯಾವ ಸಾಧನೋಪಾಯಗಳು ಲಭ್ಯವಿವೆ?
ಕಂಪನಿಗಳು, ಚಲನ ಚಿತ್ರಗಳನ್ನು ವರ್ಗೀಕರಿಸುವುದಕ್ಕೆ ಸಮಾನವಾದ ಪದ್ಧತಿಗಳಿಂದ ಹಿಡಿದು, ಅನಪೇಕ್ಷಣೀಯ ವಿಷಯಗಳನ್ನು ಸೋಸುವ ವರ್ಡ್ ಡಿಟೆಕ್ಷನ್ ಸಾಫ್ಟ್ವೇರ್ ಮತ್ತು ವಯಸ್ಸಿನ ರುಜುವಾತು (ಪ್ರೂಫ್-ಆಫ್-ಏಜ್) ಪದ್ಧತಿಗಳ ವರೆಗಿನ ಉಪಕರಣಗಳನ್ನು ನೀಡಲು ಆರಂಭವನ್ನು ಮಾಡುತ್ತಿದ್ದಾರೆ. ಕೆಲವು ಉಪಕರಣಗಳು ಒಂದು ವಿಷಯವು ಕುಟುಂಬದ ಕಂಪ್ಯೂಟರಿಗೆ ಮುಟ್ಟುವ ಮೊದಲೇ ಅದನ್ನು ತಡೆಯುತ್ತವೆ. ಆದರೆ ಈ ಪದ್ಧತಿಗಳಲ್ಲಿ ಹೆಚ್ಚಿನವು ಮೌಢ್ಯರೋಧಕವಲ್ಲ; ವಿವಿಧ ವಿಧಾನಗಳಿಂದ ಅವುಗಳನ್ನು ಸುತ್ತುವರಿದು ಹೋಗಸಾಧ್ಯವಿದೆ. ಇಂಟರ್ನೆಟ್ನ ಮೂಲ ವಿನ್ಯಾಸವು ತಡೆಯೊಡ್ಡುವಿಕೆಗಳನ್ನು ತಡೆಹಿಡಿಯುವುದೇ ಆಗಿದ್ದುದರಿಂದ, ಸೆನ್ಸರ್ ವ್ಯವಸ್ಥೆ ಕಷ್ಟಕರವಾಗಿರುತ್ತದೆ.
ಎಚ್ಚರ! ಪತ್ರಿಕೆಯೊಂದಿಗಿನ ಒಂದು ಪತ್ರಿಕಾಭೇಟಿಯಲ್ಲಿ, ಕ್ಯಾಲಿಫಾರ್ನಿಯದ ಮಕ್ಕಳ ಶೋಷಣೆಯ ತನಿಖಾ ಗುಂಪೊಂದನ್ನು ನೋಡಿಕೊಳ್ಳುವ ಒಬ್ಬ ಪೊಲೀಸ್ ಸಾರ್ಜೆಂಟ್ ಈ ಬುದ್ಧಿವಾದವನ್ನು ನೀಡಿದನು: “ಹೆತ್ತವರ ಮಾರ್ಗದರ್ಶನೆಗೆ ಯಾವುದೇ ಬದಲಿಯಿಲ್ಲ. ನನಗೆ 12 ವರ್ಷ ವಯಸ್ಸಿನ ಹುಡುಗನೊಬ್ಬನಿದ್ದಾನೆ. ಅವನು ಇಂಟರ್ನೆಟ್ ಅನ್ನು ಉಪಯೋಗಿಸುವಂತೆ ನನ್ನ ಹೆಂಡತಿಯೂ ನಾನೂ ಅನುಮತಿಸಿದರೂ, ನಾವು ಅದನ್ನು ಒಂದು ಕೌಟುಂಬಿಕ ವಿಚಾರವನ್ನಾಗಿ ಮಾಡಿ ಅದರಲ್ಲಿ ಕಳೆಯುವ ಸಮಯದ ಮೊತ್ತದ ಮೇಲೆ ಜಾಗರೂಕತೆಯ ಷರತ್ತುಗಳನ್ನು ಇಡುತ್ತೇವೆ.” ಈ ತಂದೆಯು ಚ್ಯಾಟ್ ರೂಮ್ಗಳ ವಿಷಯದಲ್ಲಿ ವಿಶೇಷವಾಗಿ ಎಚ್ಚರಿಕೆಯಿಂದಿದ್ದು, ಅವುಗಳ ಉಪಯೋಗದ ಮೇಲೆ ದೃಢವಾದ ನಿರ್ಬಂಧಗಳನ್ನು ಹಾಕುತ್ತಾನೆ. ಅವನು ಕೂಡಿಸಿ ಹೇಳುವುದು: “ಆ ಪರ್ಸನಲ್ ಕಂಪ್ಯೂಟರ್ ನನ್ನ ಮಗನ ಕೋಣೆಯಲ್ಲಿಲ್ಲ, ಬದಲಿಗೆ ಮನೆಯ ಬಹಿರಂಗವಾದ ಸ್ಥಳದಲ್ಲಿದೆ.”
ಒಂದು ವೇಳೆ ಹೆತ್ತವರು ತಮ್ಮ ಮಕ್ಕಳಿಗಾಗಿ ಇಂಟರ್ನೆಟ್ನ ಉಪಯೋಗವನ್ನು ಅನುಮತಿಸುವುದಾದರೆ, ತಾವು ಯಾವ ಕಾರ್ಯಕ್ರಮವನ್ನು ಅನುಮತಿಸುವೆವೆಂದು ನಿರ್ಣಯಿಸುವುದರಲ್ಲಿ ಅವರು ಕ್ರಿಯಾಶೀಲ ಆಸಕ್ತಿಯನ್ನು ವಹಿಸುವುದು ಅವಶ್ಯ. ಯಾವ ಪ್ರಾಯೋಗಿಕ ಮತ್ತು ನ್ಯಾಯೋಚಿತ ಮುನ್ನೆಚ್ಚರಿಕೆಗಳನ್ನು ಪರಿಗಣಿಸಬೇಕು?
ಸಾನ್ ಹೋಸೆ ಮರ್ಕ್ಯುರಿ ನ್ಯೂಸ್ನ ಸಿಬಂದಿ ಲೇಖಕ ಡೇವಿಡ್ ಪ್ಲಾಟ್ನಕಾಫ್, ಮನೆಯಲ್ಲಿ ಇಂಟರ್ನೆಟ್ ಪ್ರವೇಶದ ಪರವಾಗಿ ನಿರ್ಧರಿಸುವ ಹೆತ್ತವರಿಗೆ ಕೆಲವು ಉಪಯುಕ್ತ ಹೇಳಿಕೆಗಳನ್ನು ಕೊಡುತ್ತಾನೆ.
• ನಿಮ್ಮ ಎಳೆಯರು ನಿಮ್ಮೊಂದಿಗೆ ಕೆಲಸಮಾಡುವಾಗ, ನಿಮ್ಮ ನಿರ್ಣಯ ಮತ್ತು ಮಾರ್ಗದರ್ಶನದ ಬೆಲೆಯನ್ನು ಅವರು ಕಲಿತುಕೊಂಡಂತೆ, ಅವರಿಗಾಗುವ ಇಂಟರ್ನೆಟ್ ಅನುಭವ ಅತಿ ಸಕಾರಾತ್ಮಕವಾದುದಾಗಿದೆ. ನಿಮ್ಮ ಮಾರ್ಗದರ್ಶನೆಯಿಲ್ಲದೆ, “ನೆಟ್ನಲ್ಲಿರುವ ಎಲ್ಲ ಸಮಾಚಾರವು ತುಂಬಿಸಲು ಲೋಟವಿಲ್ಲದ ನೀರಿನಂತಿದೆ” ಎಂದು ಅವರು ಎಚ್ಚರಿಸುತ್ತಾರೆ. ಅವರು ವಿಧೇಯರಾಗಬೇಕೆಂದು ನೀವು ಪಟ್ಟುಹಿಡಿಯುವ ನಿಯಮಗಳು, “ನೀವು ನಿಮ್ಮ ಮಕ್ಕಳಿಗೆ ಸದಾ ಹೇಳಿರುವ ಸಾಮಾನ್ಯ ಪರಿಜ್ಞಾನದ ವಿಸ್ತರಣೆಯಾಗಿವೆ.” ಅಪರಿಚಿತರೊಡನೆ ಮಾತಾಡುವ ಕುರಿತ ನಿಮ್ಮ ನಿಯಮಗಳು ಇದರ ಒಂದು ದೃಷ್ಟಾಂತ.
• ಇಂಟರ್ನೆಟ್ ಒಂದು ಸಾರ್ವಜನಿಕ ಸ್ಥಳ ಮತ್ತು ಇದನ್ನು ಶಿಶುಪಾಲನೆಯ ಸೇವೆಯಾಗಿ ಉಪಯೋಗಿಸಬಾರದು. “ಎಷ್ಟೆಂದರೂ, ನೀವು ನಿಮ್ಮ 10 ವರ್ಷ ಪ್ರಾಯದ ಹುಡುಗನನ್ನೊ ಹುಡುಗಿಯನ್ನೊ ಒಂದು ದೊಡ್ಡ ನಗರದಲ್ಲಿ ಬಿಟ್ಟು, ಕೆಲವು ತಾಸುಗಳ ಕಾಲ ಮಜಾಮಾಡು ಎಂದು ಹೇಳಲಾರಿರಿ, ಅಲ್ಲವೆ?”
• ಇಂಟರ್ನೆಟ್ನಲ್ಲಿ ಆಟವಾಡುವ ಅಥವಾ ಚ್ಯಾಟ್ ಮಾಡುವ ಸ್ಥಳಗಳು ಮತ್ತು ಶಾಲಾ ಮನೆಗೆಲಸಕ್ಕಾಗಿ ಸಹಾಯ ಪಡೆಯುವ ಸ್ಥಳಗಳ ಮಧ್ಯೆ ವ್ಯತ್ಯಾಸವನ್ನು ಗುರುತಿಸಲು ಕಲಿಯಿರಿ.
ಮಾಹಿತಿಯ ಹೆದ್ದಾರಿಯಲ್ಲಿ ಮಗುವಿನ ಸುರಕ್ಷೆ (ಇಂಗ್ಲಿಷ್) ಎಂಬ ಎನ್ಸಿಎಮ್ಇಸಿ ಪುಸ್ತಿಕೆಯು, ಯುವ ಜನರಿಗೆ ಅನೇಕ ಮಾರ್ಗದರ್ಶನೆಗಳನ್ನು ನೀಡುತ್ತದೆ:
• ನಿಮ್ಮ ವಿಳಾಸ, ಮನೆಯ ಟೆಲಿಫೋನ್ ನಂಬರ್, ನಿಮ್ಮ ಶಾಲೆಯ ಹೆಸರು ಮತ್ತು ಸ್ಥಳದಂತಹ ವೈಯಕ್ತಿಕ ಮಾಹಿತಿಯನ್ನು ತಿಳಿಸಬೇಡಿ. ಹೆತ್ತವರ ಅನುಮತಿಯಿಲ್ಲದೆ ನಿಮ್ಮ ಫೋಟೋಗಳನ್ನು ಕಳುಹಿಸಬೇಡಿ.
• ನಿಮ್ಮನ್ನು ಕಳವಳಗೊಳಿಸುವ ಯಾವ ಮಾಹಿತಿಯನ್ನಾದರೂ ನೀವು ಪಡೆಯುವುದಾದರೆ, ಒಡನೆ ನಿಮ್ಮ ಹೆತ್ತವರಿಗೆ ಅದನ್ನು ತಿಳಿಸಿ. ದಯಾರಹಿತವಾದ ಅಥವಾ ಆಕ್ರಮಣ ಪ್ರವೃತ್ತಿಯ ಸಂದೇಶಗಳಿಗೆ ಎಂದೂ ಪ್ರತ್ಯುತ್ತರಿಸಬೇಡಿ. ನಿಮ್ಮ ಹೆತ್ತವರು ಇಂಟರ್ನೆಟ್ ಅನ್ನು ಸಂಪರ್ಕಿಸಸಾಧ್ಯವಾಗುವಂತೆ ಒಡನೆ ಅವರಿಗೆ ಹೇಳಿ.
• ಇಂಟರ್ನೆಟ್ ಪ್ರವೇಶದ ಸಂಬಂಧದಲ್ಲಿ, ದಿನದಲ್ಲಿ ಯಾವ ಸಮಯ ಪ್ರವೇಶಿಸಬೇಕು, ಎಷ್ಟು ಹೊತ್ತು ಕಳೆಯಬೇಕು ಮತ್ತು ಭೇಟಿಯ ಯೋಗ್ಯ ಸ್ಥಳಗಳು ಯಾವುವು ಎಂಬವುಗಳು ಸೇರಿರುವ ನಿಯಮಗಳನ್ನು ಮಾಡುವುದರಲ್ಲಿ ನಿಮ್ಮ ಹೆತ್ತವರೊಂದಿಗೆ ಸಹಕರಿಸಿರಿ; ಅವರ ನಿರ್ಣಯಗಳಿಗೆ ಅಂಟಿಕೊಳ್ಳಿ.
ವಯಸ್ಕರಿಗೂ ಮುನ್ನೆಚ್ಚರಿಕೆಗಳು ಪ್ರಯೋಜನಕರವೆಂಬುದನ್ನು ಮನಸ್ಸಿನಲ್ಲಿಡಿ. ಕೆಲವು ಮಂದಿ ವಯಸ್ಕರು ಅಜಾಗ್ರತೆಯ ಕಾರಣ ಆಗಲೇ ಅನಪೇಕ್ಷಿತ ಸಂಬಂಧಗಳಲ್ಲಿ ಮತ್ತು ಗಂಭೀರವಾದ ಸಮಸ್ಯೆಗಳಲ್ಲಿ ಸಿಕ್ಕಿಕೊಂಡಿದ್ದಾರೆ. ಚ್ಯಾಟ್ ರೂಮ್ಗಳ ನಿಗೂಢತೆ, ಕಣ್ಣುಸಂಪರ್ಕರಾಹಿತ್ಯ, ಅಡ್ಡಹೆಸರುಗಳ ಅನಾಮಕತ್ವ—ಇವು ಕೆಲವರ ಹಿಂಜರಿಕೆಗಳನ್ನು ಕಡಮೆಮಾಡಿ, ಅವರಲ್ಲಿ ಭದ್ರತೆಯ ಸುಳ್ಳು ಪ್ರಜ್ಞೆಯನ್ನು ಹುಟ್ಟಿಸಿವೆ. ವಯಸ್ಕರೇ, ಎಚ್ಚರಿಕೆ!
ಸಮತೆಯ ದೃಷ್ಟಿಕೋನವನ್ನಿಟ್ಟುಕೊಳ್ಳುವುದು
ಇಂಟರ್ನೆಟ್ನಲ್ಲಿ ಕಂಡುಕೊಳ್ಳುವ ವಿಷಯಗಳಲ್ಲಿ ಕೆಲವು ವಿಷಯಗಳಿಗೆ ಮತ್ತು ಅನೇಕ ಸೇವೆಗಳಿಗೆ ಶೈಕ್ಷಣಿಕ ಬೆಲೆಯಿದ್ದು, ಅವು ಉಪಯುಕ್ತ ಉದ್ದೇಶವನ್ನು ಸಾಧಿಸಬಲ್ಲವು. ಸಂಸ್ಥೆಗಳು ಹೆಚ್ಚುತ್ತಿರುವ ಸಂಖ್ಯೆಯಲ್ಲಿ ತಮ್ಮ ಆಂತರಿಕ ಜಾಲಗಳಲ್ಲಿ ಅಥವಾ ಇಂಟ್ರಾನೆಟ್ಗಳಲ್ಲಿ ಅಂತಸ್ಥ ಪ್ರಮಾಣೀಕರಣಗಳನ್ನು ಶೇಖರಿಸಿಡುತ್ತಿವೆ. ಹೊರಬರುತ್ತಿರುವ ಇಂಟರ್ನೆಟ್-ಆಧಾರಿತ ವಿಡಿಯೋ ಮತ್ತು ಆಡಿಯೋ ಸಹಾಲೋಚನೆಗೆ, ನಮ್ಮ ಪ್ರಯಾಣ ಮತ್ತು ವ್ಯಾಪಾರಕೂಟಗಳ ನಮೂನೆಗಳನ್ನು ಖಾಯಂ ಆಗಿ ಬದಲಾಯಿಸುವ ಸಾಮರ್ಥ್ಯವಿದೆ. ಕಂಪನಿಗಳು ತಮ್ಮ ಕಂಪ್ಯೂಟರ್ ಸಾಫ್ಟ್ವೇರನ್ನು ವಿತರಣೆಮಾಡಲು ಇಂಟರ್ನೆಟ್ ಅನ್ನು ಉಪಯೋಗಿಸಿ, ಹೀಗೆ ಖರ್ಚನ್ನು ಕಡಮೆಮಾಡುತ್ತವೆ. ವ್ಯಾಪಾರ ವಹಿವಾಟುಗಳನ್ನು ನಿರ್ವಹಿಸಲು ಸದ್ಯಕ್ಕೆ ಸಿಬಂದಿಗಳನ್ನು ಉಪಯೋಗಿಸುವ, ಪ್ರಯಾಣ ಮತ್ತು ಷೇರು ವ್ಯಾಪಾರದಂತಹ ಅನೇಕ ಖಾತೆಗಳು, ಇಂಟರ್ನೆಟ್ ಬಳಕೆದಾರರು ತಮ್ಮ ಏರ್ಪಾಡುಗಳಲ್ಲಿ ಕೆಲವನ್ನು ಇಲ್ಲವೆ ಎಲ್ಲವನ್ನು ನಿರ್ವಹಿಸಲು ಅಧಿಕಾರ ನೀಡಲ್ಪಡುವಾಗ ಬಾಧಿಸಲ್ಪಡುವುದು ಸಂಭವನೀಯ. ಹೌದು, ಇಂಟರ್ನೆಟ್ನ ಪ್ರಭಾವವು ಗಹನವಾಗಿದೆ ಮತ್ತು ಅದು, ಮಾಹಿತಿ ಹಂಚಿಕೊಳ್ಳುವಿಕೆ, ವ್ಯಾಪಾರ ನಡೆಸುವಿಕೆ ಮತ್ತು ಸಂಪರ್ಕ ಮಾಡುವಿಕೆಗೆ ಪ್ರಮುಖ ಮಾಧ್ಯಮವಾಗಿರುತ್ತ ಮುಂದುವರಿಯುವುದು ಸಂಭವನೀಯ.
ಹೆಚ್ಚಿನ ಉಪಕರಣಗಳ ಹಾಗೆ, ಇಂಟರ್ನೆಟ್ಗೆ ಪ್ರಯೋಜನಕರವಾದ ಉಪಯೋಗಗಳಿವೆ. ಆದರೂ, ಅದನ್ನು ದುರುಪಯೋಗಕ್ಕೊಳಪಡಿಸುವ ಸಾಧ್ಯತೆಗಳೂ ಅಸ್ತಿತ್ವದಲ್ಲಿವೆ. ಕೆಲವರು ಇಂಟರ್ನೆಟ್ನ ಇತ್ಯಾತ್ಮಕ ವೈಶಿಷ್ಟ್ಯಗಳನ್ನು ಇನ್ನೂ ಹೆಚ್ಚಾಗಿ ಅನ್ವೇಷಿಸಲು ಆರಿಸಿಕೊಳ್ಳಬಹುದು, ಇತರರು ಹಾಗೆ ಆರಿಸಿಕೊಳ್ಳದಿರಬಹುದು. ವೈಯಕ್ತಿಕ ವಿಷಯಗಳಲ್ಲಿ ಇನ್ನೊಬ್ಬನ ನಿರ್ಣಯಗಳಿಗೆ ತೀರ್ಪುಮಾಡುವ ಅಧಿಕಾರ ಒಬ್ಬ ಕ್ರೈಸ್ತನಿಗಿರುವುದಿಲ್ಲ.—ರೋಮಾಪುರ 14:4.
ಇಂಟರ್ನೆಟ್ ಅನ್ನು ಉಪಯೋಗಿಸುವುದು, ಅನೇಕ ಹೊಸ ವಿಷಯಗಳನ್ನು ನೋಡಲು ಮತ್ತು ಕೇಳಲು ಸಂದರ್ಭವಿರುವ ಒಂದು ಹೊಸ ದೇಶಕ್ಕೆ ಪ್ರಯಾಣಮಾಡುವಂತಿರಸಾಧ್ಯವಿದೆ. ಪ್ರಯಾಣವು ನೀವು ಸಭ್ಯ ನಡತೆಯನ್ನು ತೋರಿಸುವುದನ್ನೂ ವಿವೇಚನಾಯುಕ್ತವಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದನ್ನೂ ಅಗತ್ಯಪಡಿಸುತ್ತದೆ. ನೀವು ಇಂಟರ್ನೆಟ್—ಮಾಹಿತಿಯ ಅತ್ಯುತ್ಕೃಷ್ಟ ಹೆದ್ದಾರಿ—ಒಳಗೆ ಪ್ರವೇಶಿಸಲು ನಿರ್ಣಯಿಸುವಲ್ಲಿ ಅದಕ್ಕಿಂತ ಕಡಮೆಯೇನೂ ಅಗತ್ಯಪಡಿಸಲ್ಪಡುವುದಿಲ್ಲ.
[ಪುಟ 23 ರಲ್ಲಿರುವ ಸಂಕ್ಷಿಪ್ತ ವಿವರಣೆ]
“ಆ ಪರ್ಸನಲ್ ಕಂಪ್ಯುಟರ್, ನನ್ನ ಮಗನ ಕೋಣೆಯಲ್ಲಿಲ್ಲ, ಮನೆಯ ಬಹಿರಂಗವಾದ ಸ್ಥಳದಲ್ಲಿದೆ”
[ಪುಟ 24 ರಲ್ಲಿರುವ ಸಂಕ್ಷಿಪ್ತ ವಿವರಣೆ]
ಇಂಟರ್ನೆಟ್ ಒಂದು ಸಾರ್ವಜನಿಕ ಸ್ಥಳ, ಅದನ್ನು ಶಿಶುಪಾಲಕ ಸೇವೆಯಾಗಿ ಉಪಯೋಗಿಸಬಾರದು
[ಪುಟ 22 ರಲ್ಲಿರುವ ಚೌಕ/ಚಿತ್ರಗಳು]
ಸೌಜನ್ಯ ಮತ್ತು ಎಚ್ಚರಿಕೆಯ ಆವಶ್ಯಕತೆ
ಸೌಜನ್ಯ
ಸೌಜನ್ಯ ಮತ್ತು ಕ್ರಮವಿಹಿತ ನಡವಳಿಕೆಯ ನಿಯಮಗಳನ್ನು ಕಲಿಯಿರಿ. ಇಂಟರ್ನೆಟ್ ಸೇವೆ ಒದಗಿಸುವವರಲ್ಲಿ ಹೆಚ್ಚಿನವರು ನಡತೆಯ ಕುರಿತು ಆಲೋಚನಾಭರಿತ ಮತ್ತು ಅಂಗೀಕಾರಯೋಗ್ಯ ನಡವಳಿಕೆಯ ಮಾರ್ಗದರ್ಶನೆಗಳನ್ನು ಪ್ರಕಟಪಡಿಸುತ್ತಾರೆ. ಬೇರೆ ಬಳಕೆದಾರರು ನಿಮ್ಮ ಹೊಂದಿಕೊಳ್ಳುವಿಕೆಯನ್ನೂ ಶಿಷ್ಟಾಚಾರಗಳನ್ನೂ ಮೆಚ್ಚುವರು.
ಎಚ್ಚರಿಕೆ
ಕೆಲವು ಚರ್ಚಾಗುಂಪುಗಳು ಧಾರ್ಮಿಕ ಇಲ್ಲವೆ ವಿವಾದಾತ್ಮಕ ವಿಷಯಗಳನ್ನು ಚರ್ಚಿಸುತ್ತಾರೆ. ಅಂತಹ ಚರ್ಚೆಗಳಿಗೆ ನಿಮ್ಮ ಹೇಳಿಕೆಗಳನ್ನು ನೀಡುವ ಕುರಿತು ಎಚ್ಚರಿಕೆಯಿಂದಿರಿ; ಬಹುಶಃ ನಿಮ್ಮ ಇ-ಮೆಯ್ಲ್ ವಿಳಾಸ ಮತ್ತು ಹೆಸರು, ಗುಂಪಿನಲ್ಲಿರುವ ಎಲ್ಲರಿಗೂ ಪ್ರಸಾರಮಾಡಲ್ಪಡುವುದು. ಇದು ಅನೇಕ ವೇಳೆ ಸಮಯವನ್ನು ಕಬಳಿಸುತ್ತದೆ ಮತ್ತು ಅನಪೇಕ್ಷಿತ ಪತ್ರವ್ಯವಹಾರಗಳಲ್ಲಿ ಫಲಿಸುತ್ತವೆ. ಕೆಲವು ನ್ಯೂಸ್ಗ್ರೂಪ್ಗಳ ವಿಷಯದಲ್ಲಿಯಾದರೊ, ಪರಸ್ಪರ ಸಂಬಂಧವಂತೂ ಇರಲಿ, ಅವು ಓದಲೂ ಅಯೋಗ್ಯವಾಗಿವೆ ನಿಶ್ಚಯ.
ಹಾಗಾದರೆ ಜೊತೆಕ್ರೈಸ್ತರಿಗಾಗಿ ಒಂದು ಚರ್ಚಾಗುಂಪನ್ನು ಅಥವಾ ನ್ಯೂಸ್ಗ್ರೂಪನ್ನು ನಿರ್ಮಿಸುವ ಕುರಿತೇನು? ಆರಂಭದಲ್ಲಿ ನಿರೀಕ್ಷಿಸಿದ್ದುದಕ್ಕಿಂತ ಹೆಚ್ಚಿನ ಸಮಸ್ಯೆಗಳನ್ನು ಮತ್ತು ಅಪಾಯಗಳನ್ನು ಇದು ತರಬಹುದು. ದೃಷ್ಟಾಂತಕ್ಕೆ, ಅವ್ಯಕ್ತ ಉದ್ದೇಶಗಳಿರುವ ವ್ಯಕ್ತಿಗಳು ಇಂಟರ್ನೆಟ್ನಲ್ಲಿ ತಮ್ಮನ್ನು ತಪ್ಪಾಗಿ ಪ್ರತಿನಿಧಿಸಿಕೊಳ್ಳುತ್ತಾರೆಂಬುದು ಜ್ಞಾತವಾಗಿದೆ. ಪ್ರಸ್ತುತದಲ್ಲಿ, ಇಂಟರ್ನೆಟ್ ತಾನೇ ಅದರಲ್ಲಿ ಕಂಡುಬರುವ ವ್ಯಕ್ತಿಗಳು ತಮ್ಮ ಗುರುತುಗಳನ್ನು ದೃಢೀಕರಿಸುವಂತೆ ಸಾಧ್ಯಗೊಳಿಸುವುದಿಲ್ಲ. ಅದಲ್ಲದೆ, ಇಂತಹ ಗುಂಪನ್ನು ಒಂದು ದೊಡ್ಡ, ಮುಂದುವರಿಯುತ್ತಿರುವ ಸಾಮಾಜಿಕ ಗೋಷ್ಠಿಗೆ ಹೋಲಿಸಸಾಧ್ಯವಿದೆ. ಅದರ ಆತಿಥೇಯನು ಅಗತ್ಯವಿರುವ ಮತ್ತು ಜವಾಬ್ದಾರಿಯ ಮೇಲ್ವಿಚಾರಣೆಯನ್ನು ಒದಗಿಸಲು ಅವನ ಸಮಯ ಮತ್ತು ಸಾಮರ್ಥ್ಯದ ಮೇಲೆ ಭಾರ ಹೇರುತ್ತದೆ.—ಜ್ಞಾನೋಕ್ತಿ 27:12ನ್ನು ಹೋಲಿಸಿರಿ.
[ಪುಟ 24 ರಲ್ಲಿರುವ ಚೌಕ/ಚಿತ್ರಗಳು]
ನಿಮ್ಮ ಸಮಯವು ಎಷ್ಟು ಅಮೂಲ್ಯ?
ಈ 20ನೆಯ ಶತಮಾನದಲ್ಲಿ, ಜೀವನವು ಪ್ರಗತಿಪರವಾಗಿ ಹೆಚ್ಚು ಜಟಿಲವಾದದ್ದಾಗಿ ಪರಿಣಮಿಸಿದೆ. ಕೆಲವರಿಗೆ ಪ್ರಯೋಜನಕರವಾಗಿ ಪರಿಣಮಿಸಿರುವ ಸಂಶೋಧನೆಗಳು ಅನೇಕರಿಗೆ ಕಾಲವ್ಯಯಮಾಡುವ ವಸ್ತುಗಳಾಗಿವೆ. ಅಲ್ಲದೆ, ದುರಾಚಾರ ಮತ್ತು ಹಿಂಸಾಚಾರದ ಟಿವಿ ಕಾರ್ಯಕ್ರಮಗಳು, ಅಶ್ಲೀಲ ಪುಸ್ತಕಗಳು, ನೀತಿಭ್ರಷ್ಟ ಮಾಡುವ ಸಂಗೀತ ರೆಕಾರ್ಡಿಂಗ್ಗಳು, ಇತ್ಯಾದಿ, ದುರುಪಯೋಗಿಸಲ್ಪಟ್ಟಿರುವ ಯಂತ್ರಕಲಾವಸ್ತುಗಳಾಗಿವೆ. ಅವು ಅಮೂಲ್ಯವಾದ ಸಮಯವನ್ನು ಕಬಳಿಸುವುದಷ್ಟೇ ಅಲ್ಲ, ಜನರನ್ನು ಆತ್ಮಿಕವಾಗಿಯೂ ಹಾನಿಗೊಳಿಸುತ್ತವೆ.
ಒಬ್ಬ ಕ್ರೈಸ್ತನ ಪ್ರಥಮ ಆದ್ಯತೆಗಳು, ಬೈಬಲನ್ನು ದಿನಾಲೂ ಓದುವುದು ಮತ್ತು ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳಲ್ಲಿ ಹಾಗೂ ವಾಚ್ ಟವರ್ ಸೊಸೈಟಿಯ ಇತರ ಪ್ರಕಾಶನಗಳಲ್ಲಿ ಚರ್ಚಿಸಲ್ಪಡುವ ಅಮೂಲ್ಯ ಶಾಸ್ತ್ರೀಯ ಸತ್ಯಗಳ ಸುಪರಿಚಯ ಮಾಡಿಕೊಳ್ಳುವಿಕೆಯಂತಹ ಆತ್ಮಿಕ ವಿಷಯಗಳಾಗಿವೆ. ನಿತ್ಯ ಪ್ರಯೋಜನಗಳು ಇಂಟರ್ನೆಟ್ ತೆರೆನೊರೆ ಸವಾರಿಯಿಂದಲ್ಲ, ಒಬ್ಬನೇ ಸತ್ಯದೇವರ ಮತ್ತು ಆತನ ಪುತ್ರನಾದ ಯೇಸು ಕ್ರಿಸ್ತನ ಕುರಿತ ಜ್ಞಾನವನ್ನು ಪಡೆದುಕೊಂಡು, ಅದನ್ನು ಹುರುಪಿನಿಂದ ಅನ್ವಯಿಸಿಕೊಳ್ಳುವುದರಿಂದ ಬರುತ್ತವೆ.—ಯೋಹಾನ 17:3; ಎಫೆಸ 5:15-17ನ್ನು ಸಹ ನೋಡಿ.