ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g97 9/8 ಪು. 18-20
  • ಮಾಂಸ ತಿನ್ನುವುದು ತಪ್ಪಾಗಿದೆಯೋ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಾಂಸ ತಿನ್ನುವುದು ತಪ್ಪಾಗಿದೆಯೋ?
  • ಎಚ್ಚರ!—1997
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಕೆಲವರು ಏಕೆ ಮಾಂಸ ತಿನ್ನುವುದಿಲ್ಲ?
  • ಪ್ರಾಣಿಗಳನ್ನು ಕೊಲ್ಲುವುದು ತಪ್ಪಾಗಿದೆಯೋ?
  • ಆಹಾರಕ್ಕಾಗಿ ಪ್ರಾಣಿಗಳನ್ನು ಉಪಯೋಗಿಸುವುದು
  • ಪ್ರಾಣಿಯ ಜೀವಕ್ಕಾಗಿ ಗೌರವವನ್ನು ತೋರಿಸುವುದು
  • ಪ್ರಾಣಿಗಳ ಕಡೆಗೆ ಕನಿಕರವುಳ್ಳವರಾಗಿರುವುದು
  • ಕ್ರೈಸ್ತನೊಬ್ಬನು ಸಸ್ಯಾಹಾರಿಯಾಗಿರಬೇಕೋ?
  • ಪ್ರಾಣಿ ಹಿಂಸೆ—ತಪ್ಪೊ?
    ಎಚ್ಚರ!—1998
  • ವಾಚಕರಿಂದ ಪ್ರಶ್ನೆಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
  • ಪ್ರಾಣಿಗಳು ಸತ್ತ ಮೇಲೆ ಸ್ವರ್ಗಕ್ಕೆ ಹೋಗುತ್ತಾ?
    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
  • ವಾಚಕರಿಂದ ಪ್ರಶ್ನೆಗಳು
    ಕಾವಲಿನಬುರುಜು—1993
ಇನ್ನಷ್ಟು
ಎಚ್ಚರ!—1997
g97 9/8 ಪು. 18-20

ಬೈಬಲಿನ ದೃಷ್ಟಿಕೋನ

ಮಾಂಸ ತಿನ್ನುವುದು ತಪ್ಪಾಗಿದೆಯೋ?

“ಇಗೋ, ಸಮಸ್ತಭೂಮಿಯ ಮೇಲೆ ಬೀಜವುಳ್ಳ ಎಲ್ಲಾ ಪೈರುಗಳನ್ನೂ ಬೀಜವುಳ್ಳ ಎಲ್ಲಾ ಹಣ್ಣಿನ ಮರಗಳನ್ನೂ ನಿಮಗೆ ಆಹಾರಕ್ಕಾಗಿ ಕೊಟ್ಟಿದ್ದೇನೆ.” —ಆದಿಕಾಂಡ 1:29.

ಒಂದು ಸಸ್ಯಾಹಾರಿ ಹಿಂದೂ ಕುಟುಂಬದಿಂದ ಬಂದಂತಹ ಹದಿನೆಂಟು ವರ್ಷ ಪ್ರಾಯದ ಸುಜಾತ, ಮೊದಲನೆಯ ಮಾನವನಾದ ಆದಾಮನಿಗೆ ದೇವರು ಕೊಟ್ಟ ಆಹಾರಪಥ್ಯ ಆದೇಶವನ್ನು ಇಷ್ಟಪೂರ್ವಕವಾಗಿ ಒಪ್ಪಿಕೊಂಡಳು. ಆದರೆ ಅವಳು ಕೂಡಲೇ ಕೇಳಿದ್ದು: “ಹಾಗಾದರೆ, ತಿನ್ನಲು ಬಹಳಷ್ಟು ಇತರ ವಿಷಯಗಳಿರುವಾಗ ಆಹಾರಕ್ಕಾಗಿ ಜನರು ಪ್ರಾಣಿಗಳನ್ನು ಏಕೆ ಕೊಲ್ಲುತ್ತಾರೆ?”

ಲೋಕವ್ಯಾಪಕವಾಗಿ ಅನೇಕ ಜನರು ಈ ಭಾವೋದ್ವೇಗಗಳನ್ನು ಪ್ರತಿಧ್ವನಿಸುತ್ತಾರೆ. ಪೂರ್ವ ದೇಶಗಳಲ್ಲಿ ಕೋಟ್ಯಂತರ ಜನರು ಮಾಂಸರಹಿತ ಆಹಾರಪಥ್ಯವನ್ನು ಅನುಸರಿಸುತ್ತಾರೆ. ಇದಕ್ಕೆ ಕೂಡಿಸಿ, ಪಶ್ಚಿಮ ದೇಶಗಳಲ್ಲಿ ಸಸ್ಯಾಹಾರಿಗಳ ಸಂಖ್ಯೆಯು ವೃದ್ಧಿಯಾಗುತ್ತಿದೆ. ಅಮೆರಿಕ ಒಂದರಲ್ಲಿಯೇ, ಸುಮಾರು 1.24 ಕೋಟಿ ಜನರು ಸಸ್ಯಾಹಾರಿಗಳೆಂದು ಹೇಳಿಕೊಳ್ಳುತ್ತಾರೆ. ಇದು, ಹತ್ತು ವರ್ಷ ಹಿಂದಿಗಿಂತಲೂ ಸುಮಾರು 30 ಲಕ್ಷಗಳಷ್ಟು ಹೆಚ್ಚಾಗಿದೆ.

ಏಕೆ ಇಷ್ಟೊಂದು ಜನರು ಮಾಂಸರಹಿತ ಆಹಾರವನ್ನು ಇಷ್ಟಪಡುತ್ತಾರೆ? ಪ್ರಾಣಿ ಜೀವದ ಸರಿಯಾದ ವೀಕ್ಷಣೆ ಏನಾಗಿದೆ? ಮಾಂಸ ತಿನ್ನುವುದು ಜೀವಕ್ಕೆ ಅಗೌರವವನ್ನು ತೋರಿಸುತ್ತದೋ? ಆದಿಕಾಂಡ 1:29ರಲ್ಲಿ ಏನು ತಿಳಿಸಲ್ಪಟ್ಟಿದೆಯೊ ಅದರ ವೀಕ್ಷಣೆಯಲ್ಲಿ, ಮಾಂಸ ತಿನ್ನುವುದು ತಪ್ಪಾಗಿದೆಯೊ? ಮೊದಲಾಗಿ, ಕೆಲವರು ಮಾಂಸ ತಿನ್ನದಿರುವ ಕಾರಣವನ್ನು ಪರಿಗಣಿಸಿರಿ.

ಕೆಲವರು ಏಕೆ ಮಾಂಸ ತಿನ್ನುವುದಿಲ್ಲ?

ಸುಜಾತಳಿಗೆ, ಅವಳ ಆಹಾರಪಥ್ಯವು ಅವಳ ಧಾರ್ಮಿಕ ನಂಬಿಕೆಗಳನ್ನು ಒಳಗೊಂಡಿದೆ. ಅವಳು ವಿವರಿಸುವುದು: “ಪುನರ್ಜನ್ಮದ ಸಿದ್ಧಾಂತದಲ್ಲಿ ನಂಬಿಕೆಯನ್ನಿಡುತ್ತಾ, ನಾನು ಒಬ್ಬಾಕೆ ಹಿಂದೂವಾಗಿ ಬೆಳೆದೆ. ಮಾನವ ಪ್ರಾಣವು ಒಂದು ಪ್ರಾಣಿಯಾಗಿ ಹಿಂದೆ ಬರಸಾಧ್ಯವಿದ್ದಕಾರಣ, ನಾನು ಪ್ರಾಣಿಗಳನ್ನು ನನಗೆ ಸಮಾನವಾಗಿ ಪರಿಗಣಿಸಿದೆ. ಆದುದರಿಂದ ಅವುಗಳನ್ನು ಆಹಾರಕ್ಕಾಗಿ ಕೊಲ್ಲುವುದು ತಪ್ಪೆಂದು ಕಾಣುತ್ತದೆ.” ಇತರ ಧರ್ಮಗಳೂ ಸಸ್ಯಾಹಾರಿ ಆಹಾರವನ್ನು ಶಿಫಾರಸ್ಸು ಮಾಡುತ್ತವೆ.

ಧಾರ್ಮಿಕ ನಂಬಿಕೆಗಳಲ್ಲದೆ ಇತರ ಅಂಶಗಳು ಸಹ ಜನರ ತಿನ್ನುವ ಆಯ್ಕೆಗಳನ್ನು ಪ್ರಭಾವಿಸುತ್ತವೆ. ಉದಾಹರಣೆಗಾಗಿ, ಡಾ. ನೀಲ್‌ ಬಾರ್ನರ್ಡ್‌ ಸ್ಪಷ್ಟವಾಗಿ ಉದ್ಘೋಷಿಸುವುದು: “ಮಾಂಸ ತಿನ್ನಲಿಕ್ಕಾಗಿರುವ ಏಕಮಾತ್ರ ಕಾರಣಗಳಾವುವೆಂದರೆ ರೂಢಿ ಅಥವಾ ಅಜ್ಞಾನ.” ಅವನ ದೃಢವಾದ ಅಭಿಪ್ರಾಯವು, ಮಾಂಸ ಸೇವನೆಯಿಂದಾಗುವ ಆರೋಗ್ಯ ಅಪಾಯಗಳಿಗೆ—ಹೃದ್ರೋಗ ಮತ್ತು ಕ್ಯಾನ್ಸರ್‌ನಂತಹ—ಸಂಬಂಧಿಸಿದ ವೀಕ್ಷಣೆಗಳ ಮೇಲೆ ಆಧಾರಿತವಾಗಿದೆ.a

ಅಮೆರಿಕದಲ್ಲಿ, ಹದಿಹರೆಯದವರು ಸಸ್ಯಾಹಾರಿಗಳಲ್ಲಿ ಅತಿ ಶೀಘ್ರವಾಗಿ ಬೆಳೆಯುತ್ತಿರುವ ಭಾಗವಾಗಿದ್ದಾರೆ ಎಂದು ಹೇಳಲಾಗುತ್ತದೆ. ಮತ್ತು ಪ್ರಾಣಿಗಳಿಗಾಗಿರುವ ಚಿಂತೆಯು ಒಂದು ಕಾರಣವಾಗಿದೆ. ಪ್ರಾಣಿಗಳ ನೀತಿಶಾಸ್ತ್ರದ ಚಿಕಿತ್ಸೆಗಾಗಿ ಜನರು ಎಂಬ ಸಂಸ್ಥಾಪನೆಯ ಟ್ರೇಸೀ ರೈಮನ್‌ ಹೇಳುವುದು: “ಮಕ್ಕಳು ಪ್ರಾಣಿಗಳನ್ನು ಪ್ರೀತಿಸುತ್ತಾರೆ. ಆಹಾರಕ್ಕಾಗಿ ಪ್ರಾಣಿಗಳನ್ನು ಕೊಲ್ಲುವ ಮುಂಚೆ ಅವುಗಳಿಗೆ ಏನು ಸಂಭವಿಸುತ್ತದೆ ಎಂಬುದರ ಕುರಿತು ಅವರು ಕಲಿಯಲಾರಂಭಿಸುವಾಗ, ಅವರಿಗನಿಸುವ ಕನಿಕರವನ್ನು ಅದು ಕೇವಲ ಬಲಪಡಿಸುತ್ತದೆ.”

ಪರಿಸರ ಪ್ರಜ್ಞೆಯುಳ್ಳ ಅನೇಕ ವ್ಯಕ್ತಿಗಳು, ತವಖ್ಮ ಆಹಾರಪಥ್ಯ ಮತ್ತು ಪ್ರಾಣಿಗಳನ್ನು ಆಹಾರಕ್ಕಾಗಿ ಬೆಳೆಸಲು ನೈಸರ್ಗಿಕ ಸಂಪನ್ಮೂಲಗಳ ವಿಷಯದಲ್ಲಿ ಮಾಡಲ್ಪಟ್ಟ ಪ್ರಚಂಡ ಬೇಡಿಕೆಯ ಮಧ್ಯ ಇರುವ ಸಂಬಂಧವನ್ನೂ ಅರ್ಥಮಾಡಿಕೊಳ್ಳುತ್ತಾರೆ. ಉದಾಹರಣೆಗಾಗಿ, ಕೇವಲ ಒಂದು ಕಿಲೋಗ್ರಾಮ್‌ ದನದ ಮಾಂಸವನ್ನು ಉತ್ಪಾದಿಸಲು ಸುಮಾರು 3,300 ಲೀಟರ್‌ಗಳಷ್ಟು ನೀರು ಮತ್ತು ಒಂದು ಕಿಲೋಗ್ರಾಮ್‌ ಕೋಳಿ ಮಾಂಸವನ್ನು ತಯಾರಿಸಲು 3,100 ಲೀಟರ್‌ಗಳಷ್ಟು ನೀರು ಬೇಕಾಗುತ್ತದೆ. ಕೆಲವರಿಗೆ, ಮಾಂಸವನ್ನು ತ್ಯಜಿಸಲು ಇದು ಒಂದು ಕಾರಣವಾಗುತ್ತದೆ.

ನಿಮ್ಮ ಕುರಿತಾಗಿ ಏನು? ನೀವು ಮಾಂಸ ತಿನ್ನುವುದನ್ನು ವರ್ಜಿಸಬೇಕೋ? ಈ ಪ್ರಶ್ನೆಯನ್ನು ಉತ್ತರಿಸುವ ಮೊದಲು, ಇನ್ನೊಂದು ದೃಷ್ಟಿಕೋನವನ್ನು ಪರಿಗಣಿಸಿರಿ. ಕೀರ್ತನೆ 50:10, 11ರಲ್ಲಿ ಕಂಡುಬರುವಂತೆ, ಎಲ್ಲ ವಿಷಯಗಳ ರಚಕನಾದ ಯೆಹೋವ ದೇವರು ತಿಳಿಸುವುದು: “ಕಾಡಿನಲ್ಲಿರುವ ಸರ್ವಮೃಗಗಳೂ ಗುಡ್ಡಗಳಲ್ಲಿರುವ ಸಾವಿರಾರು ಪಶುಗಳೂ ನನ್ನವೇ. ಬೆಟ್ಟಗಳ ಪಕ್ಷಿಗಳನ್ನೆಲ್ಲಾ ಬಲ್ಲೆ; ಅಡವಿಯ ಜೀವಜಂತುಗಳೆಲ್ಲಾ ನನಗೆ ಗೊತ್ತುಂಟು.” ಎಲ್ಲ ಪ್ರಾಣಿಗಳು ನಿಜವಾಗಿಯೂ ದೇವರಿಗೆ ಸೇರಿದವುಗಳಾಗಿರುವುದರಿಂದ ಪ್ರಾಣಿಯ ಜೀವ ಹಾಗೂ ಆಹಾರಕ್ಕಾಗಿ ಮಾನವನು ಅದನ್ನು ಉಪಯೋಗಿಸುವುದರ ಕುರಿತು ಸೃಷ್ಟಿಕರ್ತನಿಗೆ ಹೇಗನಿಸುತ್ತದೆಂಬುದನ್ನು ತಿಳಿದುಕೊಳ್ಳುವುದು ಅತ್ಯಾವಶ್ಯಕವಾಗಿದೆ.

ಪ್ರಾಣಿಗಳನ್ನು ಕೊಲ್ಲುವುದು ತಪ್ಪಾಗಿದೆಯೋ?

ಪ್ರಾಣಿಗಳು ಮಾನವನಿಗೆ ಸಮಾನವೆಂದು ಪರಿಗಣಿಸುವ ಸುಜಾತಳಂತಹ ಕೆಲವರು, ಯಾವುದೇ ಉದ್ದೇಶಕ್ಕಾಗಿ ಪ್ರಾಣಿಯ ಜೀವವನ್ನು ತೆಗೆಯುವುದು ತಪ್ಪಾಗಿದೆ, ಅದರಲ್ಲೂ ಆಹಾರಕ್ಕಾಗಿ ಅವುಗಳನ್ನು ಕೊಲ್ಲುವುದು ಇನ್ನೂ ಹೆಚ್ಚಾಗಿ ತಪ್ಪಾಗಿದೆ—ಎಂಬುದಾಗಿ ದೃಢವಾಗಿ ಭಾವಿಸುತ್ತಾರೆ. ಆದರೂ, ದೇವರು ಪ್ರಾಣಿಯ ಜೀವವನ್ನು ಹಾಗೂ ಮಾನವನ ಜೀವವನ್ನು ಭಿನ್ನವಾಗಿ ನೋಡುತ್ತಾನೆ ಮತ್ತು ವಿವಿಧ ಕಾರಣಗಳಿಗಾಗಿ ಪ್ರಾಣಿಗಳನ್ನು ಕೊಲ್ಲುವುದನ್ನು ಅನುಮತಿಸುತ್ತಾನೆ ಎಂಬುದಾಗಿ ಶಾಸ್ತ್ರಗಳು ಸೂಚಿಸುತ್ತವೆ. ಉದಾಹರಣೆಗಾಗಿ, ಇಸ್ರಾಯೇಲಿನಲ್ಲಿ ಒಂದು ಪ್ರಾಣಿಯು ಮಾನವನ ಜೀವಕ್ಕೆ ಅಥವಾ ಒಬ್ಬನ ಜಾನುವಾರುಗಳಿಗೆ ಬೆದರಿಕೆಯನ್ನು ಒಡ್ಡಿದಾಗ ಅದನ್ನು ಕೊಲ್ಲಸಾಧ್ಯವಿತ್ತು.—ವಿಮೋಚನಕಾಂಡ 21:28, 29; 1 ಸಮುವೇಲ 17:34-36.

ಬಹು ಆದಿಯ ಸಮಯಗಳಿಂದಲೇ, ಆರಾಧನೆಯಲ್ಲಿ ಪ್ರಾಣಿಗಳನ್ನು ಯಜ್ಞಗಳಾಗಿ ಅರ್ಪಿಸುವುದನ್ನು ದೇವರು ಸಮ್ಮತಿಸಿದನು. (ಆದಿಕಾಂಡ 4:2-5; 8:20, 21) ಒಂದು ಕುರಿಮರಿ ಅಥವಾ ಒಂದು ಆಡನ್ನು ಯಜ್ಞವಾಗಿ ಅರ್ಪಿಸುವುದು ಹಾಗೂ ಅದರ ಮಾಂಸವನ್ನು ತಿನ್ನುವುದನ್ನು ಒಳಗೊಂಡಿದ್ದ, ಪಸ್ಕಹಬ್ಬವನ್ನು ವಾರ್ಷಿಕವಾಗಿ ಆಚರಿಸುವ ಮೂಲಕ ಐಗುಪ್ತದಿಂದ ಅವರ ಬಿಡುಗಡೆಯನ್ನು ಜ್ಞಾಪಿಸಿಕೊಳ್ಳುವಂತೆಯೂ ಆತನು ಇಸ್ರಾಯೇಲ್ಯರಿಗೆ ಉಪದೇಶಿಸಿದನು. (ವಿಮೋಚನಕಾಂಡ 12:3-9) ಮತ್ತು ಮೋಶೆಯ ನಿಯಮದ ಕೆಳಗೆ, ಪ್ರಾಣಿ ಬಲಿಗಳಿಗಾಗಿ ಇತರ ಸಂದರ್ಭಗಳಿದ್ದವು.

ಮೊದಲ ಬಾರಿ ಬೈಬಲನ್ನು ಓದಿದ, 70 ವರ್ಷ ಪ್ರಾಯದ ಒಬ್ಬಾಕೆ ಹಿಂದೂ ಸ್ತ್ರೀಯು ಪ್ರಾಣಿ ಯಜ್ಞಗಳ ವಿಚಾರವನ್ನು ಅಹಿತಕರವಾಗಿ ಕಂಡುಕೊಂಡಳು. ಆದರೆ ಶಾಸ್ತ್ರಗಳ ಅವಳ ಜ್ಞಾನದಲ್ಲಿ ಅವಳು ಪ್ರಗತಿಹೊಂದಿದಂತೆ, ದೇವರಿಂದ ಆಜ್ಞಾಪಿಸಲ್ಪಟ್ಟ ಯಜ್ಞಗಳಿಗೆ ಒಂದು ಉದ್ದೇಶವಿತ್ತೆಂಬುದಾಗಿ ಅವಳು ನೋಡಶಕ್ತಳಾದಳು. ಅವು, ಪಾಪಗಳ ಕ್ಷಮಾಪಣೆಗಾಗಿ ಶಾಸನಬದ್ಧವಾದ ಆವಶ್ಯಕತೆಯನ್ನು ಪೂರೈಸುವ, ಯೇಸು ಕ್ರಿಸ್ತನ ಯಜ್ಞವನ್ನು ಮುನ್‌ಸೂಚಿಸಿದವು. (ಇಬ್ರಿಯ 8:3-5; 10:1-10; 1 ಯೋಹಾನ 2:1, 2) ಅನೇಕ ವಿದ್ಯಮಾನಗಳಲ್ಲಿ, ಬಲಿಗಳು ಯಾಜಕರಿಗೆ ಮತ್ತು ಕೆಲವೊಮ್ಮೆ ಆರಾಧಕರಿಗೆ ಆಹಾರವಾಗಿಯೂ ಕಾರ್ಯನಡಿಸಿದವು. (ಯಾಜಕಕಾಂಡ 7:11-21; 19:5-8) ಎಲ್ಲ ಬದುಕುವ ಜೀವಿಗಳು ಯಾರಿಗೆ ಸೇರಿದವುಗಳಾಗಿವೆಯೋ ಆ ದೇವರು, ಒಂದು ಉದ್ದೇಶಕ್ಕಾಗಿ ಇಂತಹ ವ್ಯವಸ್ಥೆಯನ್ನು ಸೂಕ್ತವಾಗಿಯೇ ಸ್ಥಾಪಿಸಸಾಧ್ಯವಿತ್ತು. ನಿಶ್ಚಯವಾಗಿಯೂ, ಒಮ್ಮೆ ಯೇಸು ಸತ್ತನಂತರ, ಆರಾಧನೆಯಲ್ಲಿ ಪ್ರಾಣಿ ಯಜ್ಞಗಳು ಇನ್ನೆಂದಿಗೂ ಅವಶ್ಯವಾಗಿರಲಿಲ್ಲ.—ಕೊಲೊಸ್ಸೆ 2:13-17; ಇಬ್ರಿಯ 10:1-12.

ಆಹಾರಕ್ಕಾಗಿ ಪ್ರಾಣಿಗಳನ್ನು ಉಪಯೋಗಿಸುವುದು

ಆದರೂ, ಆಹಾರಕ್ಕಾಗಿ ಪ್ರಾಣಿಗಳನ್ನು ಕೊಲ್ಲುವ ವಿಷಯದಲ್ಲೇನು? ಮಾನವನ ಆದಿಯ ಆಹಾರಪಥ್ಯವು ಸಸ್ಯಾಹಾರವಾಗಿತ್ತೆಂಬುದು ನಿಜವಾಗಿದೆ. ಆದರೆ ಯೆಹೋವನು ತದನಂತರ ಪ್ರಾಣಿಯ ಮಾಂಸವನ್ನು ಅದಕ್ಕೆ ಸೇರಿಸುವ ಮೂಲಕ ಅದನ್ನು ವಿಸ್ತರಿಸಿದನು. ಸುಮಾರು 4,000 ವರ್ಷಗಳ ಹಿಂದೆ—ನೀತಿವಂತನಾದ ನೋಹನ ದಿನಗಳಲ್ಲಿ—ಯೆಹೋವನು ಭೌಗೋಲಿಕ ಜಲಪ್ರಳಯವನ್ನು ಬರಮಾಡಿ, ಭೂಮಿಯ ಮೇಲೆ ಆಗ ಅಸ್ತಿತ್ವದಲ್ಲಿದ್ದ ದುಷ್ಟತನಕ್ಕೆ ಅಂತ್ಯವನ್ನು ತಂದನು. ನೋಹ, ಅವನ ಕುಟುಂಬ, ಮತ್ತು ಅವನು ನಾವೆಯೊಳಗೆ ತೆಗೆದುಕೊಂಡು ಹೋದ ಸಜೀವ ಜೀವಿಗಳು ಜಲಪ್ರಳಯವನ್ನು ಪಾರಾದವು. ಅವರು ನಾವೆಯಿಂದ ಹೊರಗೆ ಬಂದ ಅನಂತರ, ಯೆಹೋವನು ಮೊದಲ ಬಾರಿ ತಿಳಿಸಿದ್ದು: “ಭೂಮಿಯ ಮೇಲೆ ತಿರುಗುವ ಎಲ್ಲಾ ಜೀವ ಜಂತುಗಳೂ ನಿಮಗೆ ಆಹಾರವಾಗಿರುವವು. ನಾನು ನಿಮ್ಮ ಆಹಾರಕ್ಕೆ ಪೈರುಗಳನ್ನು ಕೊಟ್ಟಂತೆ ಇವುಗಳನ್ನೂ ಕೊಟ್ಟಿದ್ದೇನೆ.” (ಆದಿಕಾಂಡ 9:3) ಹಾಗಿದ್ದರೂ, ಅದೇ ಸಮಯದಲ್ಲಿ, “ದೇವರು ಮನುಷ್ಯರನ್ನು ತನ್ನ ಸ್ವರೂಪದಲ್ಲಿಯೇ ಉಂಟುಮಾಡಿದನಾದ್ದರಿಂದ ಯಾರು ಮನುಷ್ಯನ ರಕ್ತವನ್ನು ಸುರಿಸುತ್ತಾರೋ ಅವರ ರಕ್ತವನ್ನು ಮನುಷ್ಯರೇ ಸುರಿಸುವರು” ಎಂಬ ನಿಯಮವನ್ನು ದೇವರು ಕೊಟ್ಟನು. (ಆದಿಕಾಂಡ 9:6) ಸ್ಪಷ್ಟವಾಗಿ, ದೇವರು ಪ್ರಾಣಿಗಳು ಮಾನವರಿಗೆ ಸಮಾನವಾಗಿವೆಯೆಂದು ವೀಕ್ಷಿಸಲಿಲ್ಲ.

ನಿಜವಾಗಿಯೂ, ಪ್ರಾಣಿಗಳ ಕುರಿತಾಗಿ ಸುಜಾತಳ ನಿಶ್ಚಿತಾಭಿಪ್ರಾಯವು ಪುನರ್ಜನ್ಮದ ಸಿದ್ಧಾಂತದಲ್ಲಿನ ಅವಳ ನಂಬಿಕೆಯ ಮೇಲೆ ಆಧಾರಿಸಲ್ಪಟ್ಟಿತ್ತು. ಮಾನವರು ಮತ್ತು ಪ್ರಾಣಿಗಳು ಪ್ರಾಣಗಳಾಗಿದ್ದರೂ, ಪ್ರಾಣವು ಅಮರವಲ್ಲ ಎಂಬುದಾಗಿ ಬೈಬಲ್‌ ವಿವರಿಸುತ್ತದೆ. (ಆದಿಕಾಂಡ 2:7; ಯೆಹೆಜ್ಕೇಲ 18:4, 20; ಅ. ಕೃತ್ಯಗಳು 3:23; ಪ್ರಕಟನೆ 16:3) ಪ್ರಾಣಗಳೋಪಾದಿ, ಮಾನವರೂ ಸಾಯುತ್ತಾರೆ, ಪ್ರಾಣಿಗಳೂ ಸಾಯುತ್ತವೆ ಮತ್ತು ಅಸ್ತಿತ್ವದಲ್ಲಿಲ್ಲದೇ ಹೋಗುತ್ತವೆ. (ಪ್ರಸಂಗಿ 3:19, 20) ಆದರೂ, ಮಾನವರಿಗೆ ದೇವರ ನೂತನ ಲೋಕದಲ್ಲಿ ಪುನರುತ್ಥಾನದ ಒಂದು ಅದ್ಭುತಕರ ನಿರೀಕ್ಷೆಯಿದೆ.b (ಲೂಕ 23:43; ಅ. ಕೃತ್ಯಗಳು 24:15) ಇದು ಸಹ, ಪ್ರಾಣಿಗಳು ಮಾನವನಿಗೆ ಸಮಾನವಾಗಿಲ್ಲ ಎಂಬುದನ್ನು ಸೂಚಿಸುತ್ತದೆ.

“ಆದರೂ, ಆಹಾರಪಥ್ಯದಲ್ಲಿ ಈ ಬದಲಾವಣೆ ಏಕೆ?” ಎಂಬುದನ್ನು ಸುಜಾತ ತಿಳಿಯಬಯಸಿದಳು. ಜಲಪ್ರಳಯದ ಕಾರಣದಿಂದಾಗಿ ಭೂಮಿಯ ವಾತಾವರಣವು ಪ್ರಚಂಡ ಬದಲಾವಣೆಗಳಿಗೆ ಒಳಗಾಗಿತ್ತೆಂಬುದು ವ್ಯಕ್ತ. ಮನುಷ್ಯನ ಆಹಾರಪಥ್ಯಕ್ಕೆ ಮಾಂಸದ ಕೂಡಿಕೆಯನ್ನು ಯೆಹೋವನು ಒಳಸೇರಿಸಿದ್ದು, ಕಾಯಿಪಲ್ಯದ ಕೊರತೆ ಇರಬಹುದಾದ ಸ್ಥಳಗಳಲ್ಲಿ ಜೀವಿಸುವ ಭಾವೀ ಸಂತತಿಗಳ ಅಗತ್ಯಗಳನ್ನು ಆತನು ಎದುರು ನೋಡಿದ ಕಾರಣದಿಂದಲೋ ಎಂಬುದನ್ನು ಬೈಬಲ್‌ ತಿಳಿಸುವುದಿಲ್ಲ. ಆದರೆ, ಎಲ್ಲ ಬದುಕುವ ವಿಷಯಗಳ ಯಜಮಾನನಿಗೆ ಬದಲಾವಣೆಯನ್ನು ಒಳಸೇರಿಸುವ ಹಕ್ಕಿತ್ತೆಂಬುದನ್ನು ಸುಜಾತ ಅಂಗೀಕರಿಸಶಕ್ತಳಾದಳು.

ಪ್ರಾಣಿಯ ಜೀವಕ್ಕಾಗಿ ಗೌರವವನ್ನು ತೋರಿಸುವುದು

ಆದರೂ, ‘ಕಡಿಮೆಪಕ್ಷ ಪ್ರಾಣಿಯ ಜೀವಕ್ಕಾಗಿ ಕೊಂಚ ಗೌರವವನ್ನಾದರೂ ನಾವು ತೋರಿಸಬಾರದೊ?’ ಎಂದು ಸುಜಾತ ಕುತೂಹಲಪಟ್ಟಳು. ಹೌದು, ನಾವು ತೋರಿಸಬೇಕು. ಮತ್ತು ಇದನ್ನು ನಾವು ಯಾವ ರೀತಿಯಲ್ಲಿ ಮಾಡಬಹುದೆಂಬುದನ್ನು, ಎಲ್ಲ ವಿಷಯಗಳ ಸೃಷ್ಟಿಕರ್ತನು ನಮಗೆ ತಿಳಿಸಿದ್ದಾನೆ. “ರಕ್ತದಿಂದ ಕೂಡಿರುವ ಮಾಂಸವನ್ನು ನೀವು ತಿನ್ನಬಾರದು,” ಎಂದು ಆದಿಕಾಂಡ 9:4ರಲ್ಲಿರುವ ಆತನ ಕಟ್ಟಳೆಯು ತಿಳಿಸುತ್ತದೆ. ರಕ್ತವನ್ನು ತಿನ್ನುವುದರ ಕುರಿತು ನಿರ್ಬಂಧವೇಕೆ? “ಪ್ರತಿದೇಹಿಗೂ ರಕ್ತವೇ ಪ್ರಾಣಾಧಾರ,” ಎಂಬುದಾಗಿ ಬೈಬಲ್‌ ಹೇಳುತ್ತದೆ. (ಯಾಜಕಕಾಂಡ 17:10, 11) ಯೆಹೋವನು ವಿಧಿಸಿದ್ದು: ‘ಕಡಿದುಹಾಕಲಾದ ಪ್ರಾಣಿಯ ರಕ್ತವನ್ನು ನೀರಿನಂತೆ ಭೂಮಿಯ ಮೇಲೆ ಸುರಿದುಬಿಡಬೇಕು.’—ಧರ್ಮೋಪದೇಶಕಾಂಡ 12:16, 24.

ಇದು, ಮಾಂಸವನ್ನು ತಿನ್ನುವ ಏರ್ಪಾಡು, ಕೇವಲ ಬೇಟೆಯಾಡುವ ಮೋಜಿಗಾಗಿ ಅಥವಾ ವೈಯಕ್ತಿಕ ಪರಾಕ್ರಮವನ್ನು ಪ್ರದರ್ಶಿಸಲಿಕ್ಕಾಗಿ ಪ್ರಾಣಿಯ ರಕ್ತವನ್ನು ಅನಾವಶ್ಯಕವಾಗಿ ಚೆಲ್ಲುವುದರಲ್ಲಿ ಒಳಗೂಡಲು ಒಂದು ಪರವಾನೆಯಾಗಿದೆಯೆಂದು ಹೇಳಲಿಕ್ಕಾಗಿ ಅಲ್ಲ. ನಿಮ್ರೋದನು ಇದನ್ನು ಮಾಡಿದನೆಂಬುದು ವ್ಯಕ್ತ. ಬೈಬಲ್‌ ಅವನನ್ನು “ಯೆಹೋವನಿಗೆ ವಿರೋಧವಾಗಿ ಬಲಿಷ್ಠನಾಗಿದ್ದ ಬೇಟೆಗಾರನು” ಎಂಬುದಾಗಿ ಗುರುತಿಸುತ್ತದೆ. (ಆದಿಕಾಂಡ 10:9, NW) ಇಂದು ಸಹ, ಬೇಟೆಯಾಡುವುದು ಮತ್ತು ಪ್ರಾಣಿಗಳನ್ನು ಕೊಲ್ಲುವುದರ ಉದ್ರೇಕವು ಸುಲಭವಾಗಿ ಕೆಲವರಲ್ಲಿ ಬೆಳೆಯಸಾಧ್ಯವಿದೆ. ಆದರೆ ಇಂತಹ ಮನೋವೃತ್ತಿಯು, ಪ್ರಾಣಿಯ ಜೀವಕ್ಕಾಗಿ ನಿಷ್ಕಾರಣವಾದ ಉಪೇಕ್ಷೆಯೊಂದಿಗೆ ಒಟ್ಟಾಗಿ ಹೋಗುತ್ತದೆ.c

ಪ್ರಾಣಿಗಳ ಕಡೆಗೆ ಕನಿಕರವುಳ್ಳವರಾಗಿರುವುದು

ಇಂದು, ಕೆಲವು ಸಸ್ಯಾಹಾರಿಗಳಿಗೆ ಆಧುನಿಕ ಮಾಂಸ ಉದ್ಯಮದಿಂದ ಪ್ರಾಣಿಗಳ ಉಪಚಾರದ ಕಡೆಗೆ ನೈಜವಾದ ಚಿಂತನೆಯೂ ಇದೆ. “ಪ್ರಾಣಿಗಳ ಸ್ವಾಭಾವಿಕ ಪ್ರವೃತ್ತಿಗಳಲ್ಲಿ ಕೃಷಿ ಉದ್ಯಮಕ್ಕೆ ಕೊಂಚವೇ ಆಸಕ್ತಿಯಿದೆ” ಎಂದು ಸಸ್ಯಾಹಾರಿ ಕೈಪಿಡಿ (ಇಂಗ್ಲಿಷ್‌) ಎಂಬ ಪುಸ್ತಕವು ಹೇಳಿಕೆನೀಡುತ್ತದೆ. “ಭೀಕರವಾದ ವಸತಿ ಮತ್ತು ಅಸ್ವಾಭಾವಿಕವಾದ ವಾತಾವರಣಗಳಲ್ಲಿ ಬೆಳೆಸಲ್ಪಟ್ಟ ಆಧುನಿಕ ದಿನದ ಪ್ರಾಣಿಗಳು ಹಿಂದೆಂದಿಗಿಂತಲೂ ಹೆಚ್ಚು ಪೂರ್ಣವಾಗಿ ಶೋಷಣೆಗೊಳಪಡಿಸಲ್ಪಟ್ಟಿವೆ” ಎಂದು ಆ ಪುಸ್ತಕವು ಅವಲೋಕಿಸುತ್ತದೆ.

ಆಹಾರಕ್ಕಾಗಿ ಪ್ರಾಣಿಗಳ ಉಪಯೋಗವು ದೇವರ ಚಿತ್ತಕ್ಕೆ ವಿರೋಧವಾಗಿಲ್ಲದಿದ್ದರೂ, ಅವುಗಳ ಕ್ರೂರ ಉಪಚಾರವು ಅದಕ್ಕೆ ವಿರೋಧವಾಗಿದೆ. ಬೈಬಲ್‌, ಜ್ಞಾನೋಕ್ತಿ 12:10ರಲ್ಲಿ ಹೇಳುವುದು: “ಶಿಷ್ಟನು ತನ್ನ ದನದ [“ಸಾಕು ಪ್ರಾಣಿಯ,” NW] ಕ್ಷೇಮವನ್ನು ಲಕ್ಷಿಸುತ್ತಾನೆ.” ಮತ್ತು ಸಾಕು ಪ್ರಾಣಿಗಳ ಸೂಕ್ತ ಆರೈಕೆಯನ್ನು ಮೋಶೆಯ ನಿಯಮವು ಆಜ್ಞಾಪಿಸಿತ್ತು.—ವಿಮೋಚನಕಾಂಡ 23:4, 5; ಧರ್ಮೋಪದೇಶಕಾಂಡ 22:10; 25:4.

ಕ್ರೈಸ್ತನೊಬ್ಬನು ಸಸ್ಯಾಹಾರಿಯಾಗಿರಬೇಕೋ?

ಮೊದಲೇ ಹೇಳಿದ ವಿಷಯದಲ್ಲಿ ತೋರಿಸಲ್ಪಟ್ಟಂತೆ, ಒಬ್ಬನು ಸಸ್ಯಾಹಾರಿಯಾಗುವ—ಅಥವಾ ಸಸ್ಯಾಹಾರಿಯಾಗಿಯೇ ಮುಂದುವರಿಯುವ—ಪ್ರಶ್ನೆಯು, ಕಡಾಖಂಡಿತವಾಗಿ ವೈಯಕ್ತಿಕ ನಿರ್ಣಯಕ್ಕೆ ಸಂಬಂಧಪಟ್ಟ ವಿಷಯವಾಗಿದೆ. ಆರೋಗ್ಯ, ಹಣ, ಜೀವಿ ಪರಿಸ್ಥಿತಿ ಶಾಸ್ತ್ರ, ಅಥವಾ ಪ್ರಾಣಿಗಳಿಗಾಗಿ ಕನಿಕರ ಮೊದಲಾದ ಕಾರಣದಿಂದ ಒಬ್ಬ ವ್ಯಕ್ತಿ ಸಸ್ಯಾಹಾರಿ ಆಹಾರ ಪದ್ಧತಿಯನ್ನು ಅನುಸರಿಸಲು ಆರಿಸಿಕೊಳ್ಳಬಹುದು. ಆದರೆ ಅನುಸರಿಸಲಿಕ್ಕಾಗಿರುವ ಅನೇಕ ಸಂಭಾವ್ಯ ಆಹಾರ ಪಥ್ಯಗಳಲ್ಲಿ ಇದು ಒಂದೆಂಬುದನ್ನು ಅವನು ಅಂಗೀಕರಿಸಬೇಕು. ಮಾಂಸ ತಿನ್ನುವ ಒಬ್ಬನು ಸಸ್ಯಾಹಾರಿಯನ್ನು ಖಂಡಿಸಬಾರದಾಗಿರುವ ಪ್ರಕಾರವೇ, ಅವನು ಮಾಂಸ ತಿನ್ನಲು ಆರಿಸಿಕೊಳ್ಳುವವರನ್ನು ಟೀಕಿಸಬಾರದು. ಮಾಂಸ ತಿನ್ನುವುದು ಅಥವಾ ಅದರಿಂದ ದೂರವಿರುವುದು ಒಬ್ಬನನ್ನು ಉತ್ತಮ ವ್ಯಕ್ತಿಯನ್ನಾಗಿ ಮಾಡಲಾರದು. (ರೋಮಾಪುರ 14:1-17) ಒಬ್ಬನ ಜೀವಿತದಲ್ಲಿ ಆಹಾರವು ಚಿಂತೆಯ ಪ್ರಮುಖ ವಿಷಯವಾಗಿ ಪರಿಣಮಿಸಬಾರದು. ಯೇಸು ಹೇಳಿದ್ದು: “ಮನುಷ್ಯನು ರೊಟ್ಟಿತಿಂದ ಮಾತ್ರದಿಂದ ಬದುಕುವದಿಲ್ಲ, ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕುವನು.”—ಮತ್ತಾಯ 4:4.

ಪ್ರಾಣಿಗಳ ಹಿಂಸೆ ಹಾಗೂ ಭೂಮಿಯ ಸಂಪನ್ಮೂಲಗಳ ದುರುಪಯೋಗದ ಕುರಿತಾಗಿ, ಯೆಹೋವನು ಈ ಭ್ರಷ್ಟ ಹಾಗೂ ಲೋಭಿ ವ್ಯವಸ್ಥೆಗೆ ಅಂತ್ಯವನ್ನು ತಂದು, ಆತನು ನಿರ್ಮಿಸುವ ಹೊಸ ಲೋಕದಿಂದ ಅದನ್ನು ಸ್ಥಾನಪಲ್ಲಟ ಮಾಡುವುದಾಗಿ ವಾಗ್ದಾನಿಸಿದ್ದಾನೆ. (ಕೀರ್ತನೆ 37:10, 11; ಮತ್ತಾಯ 6:9, 10; 2 ಪೇತ್ರ 3:13) ಆ ಹೊಸ ಲೋಕದಲ್ಲಿ, ಮಾನವನು ಹಾಗೂ ಪ್ರಾಣಿಗಳು ಸದಾಕಾಲ ಒಬ್ಬರೊಂದಿಗೊಬ್ಬರು ಶಾಂತಿಯಿಂದಿರುವರು, ಮತ್ತು ಯೆಹೋವನು “ಎಲ್ಲಾ ಜೀವಿಗಳ ಇಷ್ಟವನ್ನು ನೆರವೇರಿಸು”ವನು.—ಕೀರ್ತನೆ 145:16; ಯೆಶಾಯ 65:25.

[ಅಧ್ಯಯನ ಪ್ರಶ್ನೆಗಳು]

a ಜೂನ್‌ 22, 1997ರ ಅವೇಕ್‌!, ಪುಟಗಳು 3-13ನ್ನು ನೋಡಿರಿ.

b ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ, ಮೇ 15, 1997ರ ಕಾವಲಿನಬುರುಜು, ಪುಟಗಳು 3-8ನ್ನು ನೋಡಿರಿ.

c ಮೇ 15, 1990ರ ದ ವಾಚ್‌ಟವರ್‌, ಪುಟಗಳು 30-1ನ್ನು ನೋಡಿರಿ.

[ಪುಟ 29 ರಲ್ಲಿರುವ ಚಿತ್ರ ಕೃಪೆ]

Punch

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ