ಪ್ರೀತಿಸುವಂತೆ ಕಲಿಸಲ್ಪಟ್ಟಿರುವ ಒಂದು ಜನಾಂಗ
ಪ್ರೀತಿಯು, ಮೆಚ್ಚಿಕೆ, ದಯಾಪರತೆ, ಅಥವಾ ಸರ್ವಸಾಮಾನ್ಯ ಅಭಿರುಚಿಗಳ ಮೇಲಾಧಾರಿತವಾದ ಮಮತೆಯಾಗಿದೆ. ಪ್ರೀತಿಯು ಆದರಣೀಯ ಒಲವಾಗಿದೆ. ಅದು ನಿಸ್ವಾರ್ಥಪರವಾದದ್ದೂ, ನಿಷ್ಠೆಯುಳ್ಳದ್ದೂ, ಇತರರ ಒಳಿತಿಗಾಗಿ ದಯಾಪರವಾದ ಚಿಂತೆಯನ್ನು ತೋರಿಸುವಂತಹದ್ದೂ ಆಗಿದೆ. ದ್ವೇಷದ ತದ್ವಿರುದ್ಧವಾದ ಗುಣವೇ ಪ್ರೀತಿಯಾಗಿದೆ. ದ್ವೇಷದಿಂದ ಪ್ರಚೋದಿತನಾದ ವ್ಯಕ್ತಿಯೊಬ್ಬನು, ತನ್ನದೇ ಆದ ಭಾವೋದ್ರೇಕದಲ್ಲಿ ತಲ್ಲೀನನಾಗಿರುತ್ತಾನೆ; ಪ್ರೀತಿಯಿಂದ ಪ್ರಚೋದಿತನಾದ ಒಬ್ಬನು, ಇತರರ ಕುರಿತಾಗಿ ಚಿಂತಿಸುತ್ತಾನೆ.
ಪ್ರೀತಿ ಅಥವಾ ದ್ವೇಷ—ನಿಮ್ಮ ಜೀವಿತದಲ್ಲಿ ಯಾವುದು ಮೇಲುಗೈ ಸಾಧಿಸಿದೆ? ಇದು ಕೇವಲ ವಿದ್ವತ್ಪೂರ್ಣ ಪ್ರಶ್ನೆಯಾಗಿರುವುದಕ್ಕಿಂತಲೂ ಹೆಚ್ಚಿನದ್ದಾಗಿದೆ. ಏಕೆಂದರೆ ಉತ್ತರದ ಮೇಲೆ ನಿಮ್ಮ ಅನಂತಕಾಲದ ಭವಿಷ್ಯತ್ತು ಅವಲಂಬಿಸಿದೆ. ದ್ವೇಷಿಸಲು ಕಲಿಸಲ್ಪಡುತ್ತಿರುವ ಒಂದು ಲೋಕದಲ್ಲಿ ಜೀವಿಸುತ್ತಿರುವಾಗ, ಲಕ್ಷಾಂತರ ಜನರು ಪ್ರೀತಿಸಲು ಕಲಿಯುತ್ತಿದ್ದಾರೆ. ಒಂದು ಹೊಸ ವ್ಯಕ್ತಿತ್ವವನ್ನು ಧರಿಸಿಕೊಳ್ಳುವ ಮೂಲಕ ಅವರು ಇದನ್ನು ಮಾಡುತ್ತಿದ್ದಾರೆ. ಅವರು ಪ್ರೀತಿಯ ಕುರಿತಾಗಿ ಕೇವಲ ಮಾತಾಡುತ್ತಿಲ್ಲ; ಅದನ್ನು ಆಚರಣೆಗೆ ತರಲಿಕ್ಕಾಗಿ ಅವರು ಕಷ್ಟಪಟ್ಟು ಶ್ರಮಿಸುತ್ತಿದ್ದಾರೆ.
ನೀವೆಂದಾದರೂ ಯೆಹೋವನ ಸಾಕ್ಷಿಗಳ ಕೂಟವೊಂದಕ್ಕೆ ಹಾಜರಾಗಿರುವಲ್ಲಿ, ನೀವು ಏನನ್ನು ನೋಡಿದಿರೋ ಅದರಿಂದ ಪ್ರಚೋದಿತರಾಗಿದ್ದಿರಬಹುದು. ರಾಷ್ಟ್ರೀಯತೆಯು ಯಾವುದೇ ಆಗಿರಲಿ, ಯೆಹೋವನ ಸಾಕ್ಷಿಗಳು ಆರಾಧನೆಯಲ್ಲಿ ಐಕ್ಯರಾಗಿದ್ದಾರೆ. ಅವರು ನಿಜವಾಗಿಯೂ ಅಂತಾರಾಷ್ಟ್ರೀಯವಾಗಿರುವ ಒಂದು ಸಹೋದರತ್ವವನ್ನು ರೂಪಿಸುತ್ತಾರೆ. ಇದನ್ನು ಅವರ ಸ್ಥಳಿಕ ಸಭೆಗಳಲ್ಲಿ ಹಾಗೂ ಅವರ ಅಧಿವೇಶನಗಳಲ್ಲಿ—ಆದರೆ ಎಲ್ಲಕ್ಕಿಂತಲೂ ಹೆಚ್ಚು ಉತ್ತಮವಾಗಿ, ಅವರು ಬೆತೆಲ್ ಕುಟುಂಬಗಳೆಂದು ಕರೆಯಲ್ಪಡುವ ಸ್ಥಳಗಳಲ್ಲಿ—ಇದನ್ನು ಗಮನಿಸಸಾಧ್ಯವಿದೆ. ಈ ಬೆತೆಲ್ ಕುಟುಂಬಗಳು, ಸ್ವಯಂಸೇವಕ ಸಾಕ್ಷಿಗಳ ಗುಂಪುಗಳಾಗಿದ್ದು, ಒಂದು ಕುಟುಂಬದೋಪಾದಿ ಒಟ್ಟಿಗೆ ಜೀವಿಸುತ್ತವೆ ಮತ್ತು ಬೈಬಲ್ ಸಾಹಿತ್ಯವನ್ನು ಉತ್ಪಾದಿಸಿ, ವಿತರಣೆಮಾಡುವ ಕಾರ್ಯದಲ್ಲಿ ಒಟ್ಟಿಗೆ ಕಾರ್ಯನಡಿಸುತ್ತವೆ. ಪ್ರತಿಯೊಂದು ದೇಶದಲ್ಲಿ, ಅಲ್ಲಿನ ಯೆಹೋವನ ಸಾಕ್ಷಿಗಳಿಂದ ಮಾಡಲ್ಪಡುವ ಕೆಲಸದ ಮೇಲ್ವಿಚಾರಣೆಯನ್ನು ಅವರಲ್ಲಿ ಕೆಲವರು ನೋಡಿಕೊಳ್ಳುತ್ತಾರೆ. ಇದೊಂದು ಚಿಕ್ಕ ಕೆಲಸವಾಗಿರುವುದಿಲ್ಲ, ಏಕೆಂದರೆ ಅದು 1997ರ ವರೆಗೆ, 233 ದೇಶಗಳಲ್ಲಿರುವ 82,000ಕ್ಕಿಂತಲೂ ಹೆಚ್ಚಿನ ಸಭೆಗಳನ್ನು ಒಳಗೊಂಡಿದೆ. ಈ ಅಗತ್ಯವನ್ನು ಪೂರೈಸಲಿಕ್ಕಾಗಿ, ಲೋಕ ಮುಖ್ಯಕಾರ್ಯಾಲಯ ಹಾಗೂ 103 ದೇಶಗಳಲ್ಲಿರುವ ಹಲವಾರು ಚಿಕ್ಕ ಚಿಕ್ಕ ಬ್ರಾಂಚ್ ಸೌಕರ್ಯಗಳನ್ನು ಸೇರಿಸಿ, ಲೋಕದಾದ್ಯಂತವಿರುವ ಬೆತೆಲ್ ಕುಟುಂಬಗಳಲ್ಲಿ 16,000ಕ್ಕಿಂತಲೂ ಹೆಚ್ಚು ಜನರು ಸೇವೆಸಲ್ಲಿಸುತ್ತಾರೆ.
ಅಧಿಕಾಂಶ ಬೆತೆಲ್ ಕುಟುಂಬಗಳು, ಬಹುತೇಕವಾಗಿ ನಿರ್ದಿಷ್ಟವಾದ ಬ್ರಾಂಚ್ ಆಫೀಸು ಎಲ್ಲಿ ಇದೆಯೋ ಆ ದೇಶದ ಪ್ರಜೆಗಳಿಂದ ರಚಿತವಾಗಿವೆ. ಆದರೆ ಸಂಪೂರ್ಣವಾಗಿ ಅಲ್ಲ. ಕೆಲವು ಬೆತೆಲ್ ಕುಟುಂಬಗಳು, ವಿವಿಧ ರಾಷ್ಟ್ರೀಯ, ಕುಲಸಂಬಂಧವಾದ, ಅಥವಾ ಜಾತಿಸಂಬಂಧವಾದ ಮೂಲಗಳಿಂದ ಹಾಗೂ ಈ ಹಿಂದೆ ವಿಭಿನ್ನ ಧಾರ್ಮಿಕ ಹಿನ್ನೆಲೆಗಳವರಾಗಿದ್ದ ಸಾಕ್ಷಿಗಳಿಂದ ರಚಿತವಾಗಿವೆ. ಉದಾಹರಣೆಗಾಗಿ, ಜರ್ಮನಿಯ ಸೆಲ್ಟರ್ಸ್ನಲ್ಲಿ ನೆಲೆಸಿರುವ, ಬಹುಮಟ್ಟಿಗೆ 1,200 ಜನರಿರುವ ಬೆತೆಲ್ ಕುಟುಂಬದಲ್ಲಿ, ಸುಮಾರು 30 ರಾಷ್ಟ್ರಗಳವರು ಪ್ರತಿನಿಧಿಸಲ್ಪಟ್ಟಿದ್ದಾರೆ. ದ್ವೇಷರಹಿತವಾದ ಒಂದು ವಾತಾವರಣದಲ್ಲಿ, ಶಾಂತಿ ಮತ್ತು ಐಕ್ಯದಿಂದ ಒಟ್ಟಾಗಿ ಜೀವಿಸಲು, ಕೆಲಸಮಾಡಲು, ಹಾಗೂ ಆರಾಧಿಸಲು, ಯಾವುದು ಅವರನ್ನು ಶಕ್ತರನ್ನಾಗಿ ಮಾಡುತ್ತದೆ? ಕೊಲೊಸ್ಸೆ 3:14ರಲ್ಲಿರುವ ಬೈಬಲ್ ಸಲಹೆಯನ್ನು ಅವರು ಅನುಸರಿಸುತ್ತಿದ್ದಾರೆ. ಅದು ಹೀಗನ್ನುತ್ತದೆ:
“ಪ್ರೀತಿಯನ್ನು ಧರಿಸಿಕೊಳ್ಳಿರಿ”
ಯಾರೊಬ್ಬರೂ ಜನ್ಮತಃ ಪೂರ್ತಿ ಬಟ್ಟೆ ಧರಿಸಿ ಬಂದಿರುವುದಿಲ್ಲ, ಅಥವಾ ಕೇವಲ ಅದರ ಕುರಿತಾಗಿ ಮಾತಾಡುವ ಮೂಲಕ ಯಾರೊಬ್ಬರೂ ಬಟ್ಟೆ ಧರಿಸಿದವರಾಗಿ ಪರಿಣಮಿಸುವುದಿಲ್ಲ. ಒಬ್ಬನು ವಸ್ತ್ರಧಾರಣೆಮಾಡುವುದು, ನಿರ್ದಿಷ್ಟ ನಿರ್ಧಾರಗಳನ್ನು ಮಾಡಿಕೊಂಡು, ತದನಂತರ ಅವುಗಳನ್ನು ಅನುಸರಿಸಿಕೊಂಡು ಹೋಗುವುದರಲ್ಲಿ ಪ್ರಯತ್ನವನ್ನು ಪ್ರಯೋಗಿಸುವುದನ್ನು ಅವಶ್ಯಪಡಿಸುತ್ತದೆ. ತದ್ರೀತಿಯಲ್ಲಿ, ಯಾರೊಬ್ಬರೂ ಪ್ರೀತಿಯನ್ನು ಧರಿಸಿಕೊಂಡು ಜನಿಸಿರುವುದಿಲ್ಲ. ಕೇವಲ ಅದರ ಕುರಿತಾಗಿ ಮಾತಾಡುವುದು ಮಾತ್ರವೇ ಸಾಲದು. ಪ್ರಯತ್ನದ ಅಗತ್ಯವಿದೆ.
ಬಟ್ಟೆ ಧರಿಸುವುದು ಅನೇಕ ಉದ್ದೇಶಗಳನ್ನು ಪೂರೈಸುತ್ತದೆ. ಅದು ದೇಹವನ್ನು ಸಂರಕ್ಷಿಸುತ್ತದೆ, ನೋಡಲು ಅನುಚಿತವಾದ ದೇಹದ ಅಂಗಾಂಗಗಳನ್ನು ಅಥವಾ ಅಪರಿಪೂರ್ಣತೆಗಳನ್ನು ಮುಚ್ಚುತ್ತದೆ, ಮತ್ತು ಸ್ವಲ್ಪ ಮಟ್ಟಿಗೆ ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಹೊರಪಡಿಸುತ್ತದೆ. ಪ್ರೀತಿಯೂ ತದ್ರೀತಿಯಲ್ಲಿದೆ. ಅದು ಒಂದು ಸಂರಕ್ಷಣೆಯೋಪಾದಿ ಕಾರ್ಯನಡಿಸುತ್ತದೆ, ಏಕೆಂದರೆ ನೀತಿಯ ಮೂಲತತ್ವಗಳು ಹಾಗೂ ಸೂಕ್ತವಾದ ಸಹವಾಸಕ್ಕಾಗಿರುವ ಪ್ರೀತಿಯು ಒಬ್ಬನನ್ನು, ಸಂಭವನೀಯವಾಗಿ ಅಪಾಯಕರವಾಗಿರುವ ಸಹವಾಸಗಳು ಅಥವಾ ಸ್ಥಳಗಳಿಂದ ದೂರವಿರುವಂತೆ ಪ್ರಚೋದಿಸುತ್ತದೆ. ನಮಗೆ ಅಮೂಲ್ಯವಾಗಿರಬೇಕಾದ ವೈಯಕ್ತಿಕ ಸಂಬಂಧಗಳನ್ನು ಸಂರಕ್ಷಿಸಲು ಇದು ಕಾರ್ಯನಡಿಸುತ್ತದೆ. ಯಾವನು ಪ್ರೀತಿಸುತ್ತಾನೋ ಅವನು, ಪ್ರತಿಯಾಗಿ ಇತರರಿಂದ ಪ್ರೀತಿಸಲ್ಪಡುವುದು ಹೆಚ್ಚು ಸಂಭವನೀಯ, ಮತ್ತು ಇತರರಿಗೆ ಹಾನಿಮಾಡುವುದರಿಂದ ಯಾರು ದೂರವಿರುತ್ತಾನೋ ಅವನು, ಸ್ವತಃ ಹಾನಿತಂದುಕೊಳ್ಳದಿರುವುದು ಹೆಚ್ಚು ಸಂಭವನೀಯ.
ಪ್ರೀತಿಯು, ಜೊತೆ ಮಾನವರಿಗೆ ತೊಂದರೆದಾಯಕವಾಗಿ ಪರಿಣಮಿಸಬಹುದಾದಂತಹ, ನಮ್ಮ ವ್ಯಕ್ತಿತ್ವದ ಹೆಚ್ಚು ವಿಕಾರವಾದ ಭಾಗಗಳನ್ನು ಸಹ ಮುಚ್ಚುತ್ತದೆ. ಅಹಂಕಾರಿಗಳೂ, ದುರಭಿಮಾನಿಗಳೂ, ಸ್ವವಿಚಾರಾಸಕ್ತರೂ, ಪ್ರೀತಿಯ ಕೊರತೆಯುಳ್ಳವರೂ ಆಗಿರುವ ವ್ಯಕ್ತಿಗಳಿಗಿಂತಲೂ, ಪ್ರೀತಿಪೂರ್ಣರಾಗಿರುವ ಜನರಲ್ಲಿರುವ ಚಿಕ್ಕಪುಟ್ಟ ಕುಂದುಕೊರತೆಗಳನ್ನು ಅಲಕ್ಷಿಸಲು ನಾವು ಹೆಚ್ಚು ಪ್ರವೃತ್ತರಾಗಿರುವುದಿಲ್ಲವೊ?
ಪ್ರೀತಿಯನ್ನು ಧರಿಸಿಕೊಳ್ಳುವ ಜನರು, ಕ್ರಿಸ್ತಸದೃಶ ವ್ಯಕ್ತಿತ್ವದ ಸೌಂದರ್ಯವನ್ನು ಹೊರಪಡಿಸುತ್ತಾರೆ. ಅವರ ಶಾರೀರಿಕ ಸೌಂದರ್ಯವು ಕೇವಲ ಮೇಲ್ಮೈಯದ್ದಾಗಿರುವಾಗ, ಆತ್ಮಿಕ ಸೌಂದರ್ಯವು ಇಡೀ ವ್ಯಕ್ತಿಯನ್ನು ವ್ಯಾಪಿಸುತ್ತದೆ. ಸುಂದರರಾಗಿದ್ದಾರೆಂದು—ಶಾರೀರಿಕ ಹೊರತೋರಿಕೆಯ ಕಾರಣದಿಂದಾಗಿ ಅಲ್ಲ, ಬದಲಾಗಿ ನಿಜವಾಗಿಯೂ ಆದರಣೀಯವಾದ ವ್ಯಕ್ತಿತ್ವದ ಕಾರಣದಿಂದಲೇ—ನೀವು ಪರಿಗಣಿಸುವ ಜನರು ನಿಮಗೆ ಗೊತ್ತಿರಬಹುದು. ಇನ್ನೊಂದು ಕಡೆಯಲ್ಲಿ, ಸೌಂದರ್ಯವತಿಯರಾದ ಸ್ತ್ರೀಯರು ಹಾಗೂ ಚೆಲುವಾದ ಪುರುಷರ ನೈಜ ವ್ಯಕ್ತಿತ್ವವು ಗೋಚರವಾದ ಕೂಡಲೆ, ನಮ್ಮ ದೃಷ್ಟಿಯಲ್ಲಿ ಸೊಬಗಿನ ಪ್ರತಿಯೊಂದು ಗುರುತನ್ನೂ ಕಳೆದುಕೊಂಡ ಜನರನ್ನು ನಮ್ಮಲ್ಲಿ ಹೆಚ್ಚಿನವರು ಸಂಧಿಸಿದ್ದೇವೆ. ಪ್ರೀತಿಯನ್ನು ಧರಿಸಿಕೊಂಡಿರುವ ಜನರೊಂದಿಗಿರುವುದು ಎಷ್ಟೊಂದು ಹಿತಕರವಾದದ್ದಾಗಿದೆ!
ದ್ವೇಷವನ್ನು ಪ್ರೀತಿಯಿಂದ ಸ್ಥಾನಾಂತರಿಸುವುದು
ದ್ವೇಷವನ್ನು ಪ್ರೀತಿಯಿಂದ ಸ್ಥಾನಾಂತರಿಸಸಾಧ್ಯವಿದೆ ಎಂಬುದನ್ನು, 1994ರಲ್ಲಿ ಜರ್ಮನಿಯಲ್ಲಿರುವ 1,45,958 ಮಂದಿ ಯೆಹೋವನ ಸಾಕ್ಷಿಗಳ ವಿಷಯದಲ್ಲಿ ನಡೆಸಲ್ಪಟ್ಟ ಸಮೀಕ್ಷೆಯಿಂದ ದೃಷ್ಟಾಂತಿಸಲಾಗಿದೆ.
ಒಂದಲ್ಲ ಒಂದು ವಿಧದಲ್ಲಿ, ವಿಪರೀತ ಕುಡಿತ, ಅಮಲೌಷಧ ದುರುಪಯೋಗ, ದುಷ್ಕೃತ್ಯ, ಜೂಜಾಟ, ಮತ್ತು ಸಮಾಜ ಕಂಟಕ ಅಥವಾ ಹಿಂಸಾತ್ಮಕ ನಡವಳಿಕೆ—ಇವೆಲ್ಲವೂ, ಸುಲಭವಾಗಿಯೇ ದ್ವೇಷವನ್ನು ಉತ್ತೇಜಿಸಸಾಧ್ಯವಿರುವ ಸ್ವಾರ್ಥಪರತೆಯ ಅಭಿವ್ಯಕ್ತಿಗಳಾಗಿವೆ. ಆದರೆ ಇಂಟರ್ವ್ಯೂ ಮಾಡಲ್ಪಟ್ಟವರಲ್ಲಿ 38.7 ಪ್ರತಿಶತ ಮಂದಿ ಹೇಳಿದ್ದೇನೆಂದರೆ, ಸಾಕ್ಷಿಗಳಿಂದ ಸಮರ್ಥಿಸಲ್ಪಟ್ಟ ಅತ್ಯುಚ್ಚ ಬೈಬಲ್ ಮಟ್ಟಗಳನ್ನು ತಲಪುವ ಸಲುವಾಗಿ, ಅವರು ಈ ಸಮಸ್ಯೆಗಳಲ್ಲಿ ಒಂದು ಅಥವಾ ಅದಕ್ಕಿಂತ ಹೆಚ್ಚು ಸಮಸ್ಯೆಗಳನ್ನು ಜಯಿಸಿದ್ದರು. ದೇವರಿಗಾಗಿ ಹಾಗೂ ಆತನ ನೀತಿಯ ನಡವಳಿಕೆಯ ಮಟ್ಟಗಳಿಗಾಗಿರುವ ಪ್ರೀತಿಯು, ಹಾಗೆ ಮಾಡುವಂತೆ ಅವರನ್ನು ಪ್ರಚೋದಿಸಿತು. ಅನೇಕವೇಳೆ ಒಬ್ಬೊಬ್ಬರಿಗೂ ವೈಯಕ್ತಿಕವಾಗಿ ಯೆಹೋವನ ಸಾಕ್ಷಿಗಳಿಂದ ಪ್ರೀತಿಪೂರ್ಣ ನೆರವು ಒದಗಿಸಲ್ಪಟ್ಟಿತು. ಕಳೆದ ಐದು ವರ್ಷಗಳಲ್ಲಿ (1992-1996), 233 ದೇಶಗಳಲ್ಲಿರುವ 16,16,894 ವ್ಯಕ್ತಿಗಳಿಗೆ, ಬದಲಾವಣೆಗಳನ್ನು ಮಾಡುವಂತೆ—ಸರ್ವವನ್ನೂ ಜಯಿಸುವ ಪ್ರೀತಿಯಿಂದ ದ್ವೇಷವನ್ನು ಸೋಲಿಸುವ ಮೂಲಕ—ಸಹಾಯ ಮಾಡಲಾಯಿತು.
ತಮ್ಮ ವಿವಾಹಗಳಲ್ಲಿ ನಿಸ್ವಾರ್ಥ ಪ್ರೀತಿಯನ್ನು ಅನ್ವಯಿಸಿಕೊಳ್ಳುವ ಮೂಲಕ, ಯೆಹೋವನ ಸಾಕ್ಷಿಗಳು ಸ್ಥಿರವಾದ ಸಂಬಂಧಗಳನ್ನು ಸಾಧಿಸುತ್ತಾರೆ. ಕೆಲವು ದೇಶಗಳಲ್ಲಿ ಪ್ರತಿ ಎರಡು ಅಥವಾ ಮೂರು ವಿವಾಹಗಳಲ್ಲಿ ಒಂದು ವಿವಾಹವು, ವಿಚ್ಛೇದದಲ್ಲಿ ಕೊನೆಗೊಳ್ಳುತ್ತದೆ. ಆದರೆ ಮೇಲೆ ಉಲ್ಲೇಖಿಸಲ್ಪಟ್ಟ ಸಮೀಕ್ಷೆಯು ಸೂಚಿಸಿದ್ದೇನೆಂದರೆ, ಪ್ರಸ್ತುತದಲ್ಲಿ ಕೇವಲ 4.9 ಪ್ರತಿಶತ ಸಾಕ್ಷಿಗಳು ತಮ್ಮ ಸಂಗಾತಿಗಳಿಂದ ವಿಚ್ಛೇದ ಪಡೆದುಕೊಂಡಿದ್ದಾರೆ ಅಥವಾ ಪ್ರತ್ಯೇಕರಾಗಿದ್ದಾರೆ. ಆದರೂ, ಇವರಲ್ಲಿ ಗಮನಾರ್ಹ ಸಂಖ್ಯೆಯ ಜನರು, ತಾವು ಯೆಹೋವನ ಸಾಕ್ಷಿಗಳಾಗುವುದಕ್ಕೆ ಮೊದಲು ವಿಚ್ಛೇದ ಪಡೆದುಕೊಂಡಿದ್ದರೆಂಬುದನ್ನು ಮರೆಯಬಾರದಾಗಿದೆ.
ಪ್ರೀತಿಯ ದೇವರು, ತನ್ನನ್ನು ಪ್ರೀತಿಸುವವರಿಗೆ ತನ್ನ ಮಾರ್ಗಗಳನ್ನು ಬೋಧಿಸುವ ಒಬ್ಬ ಮಹಾನ್ ಶಿಕ್ಷಕನಾಗಿರುವುದರಿಂದ, ಯೆಹೋವನ ಸಾಕ್ಷಿಗಳು ತಮ್ಮ ಪ್ರೀತಿಯನ್ನು ಎಲ್ಲಕ್ಕಿಂತಲೂ ಮೊದಲಾಗಿ ಆತನಿಗೇ ನಿರ್ದೇಶಿಸುತ್ತಾರೆ. “ದೇವರನ್ನು ಪ್ರೀತಿಸದೆ ಭೋಗಗಳನ್ನೇ ಪ್ರೀತಿಸುವ” ಬೇರೆ ಜನರಿಗೆ ಅಸದೃಶವಾಗಿ, ಯೆಹೋವನ ಸಾಕ್ಷಿಗಳು ದೇವರಿಗೆ ಪ್ರಥಮ ಸ್ಥಾನವನ್ನು ಕೊಡುತ್ತಾರೆ. (2 ತಿಮೊಥೆಯ 3:4) ನೀತಿನೇಮಗಳಿಲ್ಲದ ಈ ಲೋಕದ ಮಾರ್ಗಗಳಿಗೆ ವ್ಯತಿರಿಕ್ತವಾಗಿ, ಜರ್ಮನಿಯಲ್ಲಿರುವ ಸರಾಸರಿ ಸಾಕ್ಷಿಯು, ಧಾರ್ಮಿಕ ಚಟುವಟಿಕೆಗಳಿಗಾಗಿ ಪ್ರತಿ ವಾರ 17.5 ತಾಸುಗಳನ್ನು ವ್ಯಯಿಸುತ್ತಾನೆ. ಸಾಕ್ಷಿಗಳು ಆತ್ಮಿಕ ಮನೋಭಾವವುಳ್ಳವರು ಎಂಬುದು ಸುವ್ಯಕ್ತ. ಅದು ತಾನೇ ಅವರನ್ನು ಸಂತೋಷಗೊಳಿಸುತ್ತದೆ. ಯೇಸು ಹೇಳಿದ್ದು: “ತಮ್ಮ ಆತ್ಮಿಕ ಆವಶ್ಯಕತೆಗಳ ಪ್ರಜ್ಞೆಯುಳ್ಳವರು ಸಂತೋಷಿತರು, ಏಕೆಂದರೆ ಪರಲೋಕರಾಜ್ಯವು ಅವರಿಗೆ ಸೇರಿದ್ದಾಗಿದೆ.”—ಮತ್ತಾಯ 5:3, NW.
ದೇವರ ನಿಜ ಸೇವಕನು ಮಾನವರಿಗೆ ಭಯಪಡುವ ಅಗತ್ಯವಿಲ್ಲ ಎಂದು 118ನೆಯ ಕೀರ್ತನೆಯ ಬರಹಗಾರನು ಹೇಳುತ್ತಾನೆ. “ಯೆಹೋವನು ನನಗಿದ್ದಾನೆ; ಭಯಪಡೆನು. ಮನುಷ್ಯನು ನನಗೆ ಏನು ಮಾಡಾನು?” (6ನೆಯ ವಚನ) ದೇವರ ಮೇಲೆ ಸಂಪೂರ್ಣವಾಗಿ ಭರವಸೆಯಿಡುವುದು, ಇತರ ಮಾನವರ ಕಡೆಗಿರುವ ದ್ವೇಷ ಮತ್ತು ಭಯದ ಕಾರಣಗಳಲ್ಲಿ ಒಂದನ್ನು ಹೋಗಲಾಡಿಸುತ್ತದೆ.
ದೇವರು “ಕೋಪಕ್ಕೆ ನಿಧಾನಿಯೂ ಪ್ರೀತಿ-ದಯೆ ಹಾಗೂ ಸತ್ಯತೆಯಲ್ಲಿ ಸಮೃದ್ಧನೂ” (NW) ಆಗಿದ್ದಾನೆ ಎಂಬುದನ್ನು ತಿಳಿದವನಾಗಿದ್ದು, ಕ್ರೈಸ್ತನೊಬ್ಬನು ತನ್ನ ಜೀವಿತದಿಂದ ಕೋಪವನ್ನು ತೊಡೆದುಹಾಕಲು ಶ್ರಮಿಸುತ್ತಾನೆ. ಏಕೆಂದರೆ ಕೋಪವು ದ್ವೇಷವನ್ನು ಹೆಚ್ಚಿಸಲು ಇನ್ನೊಂದು ಕಾರಣವಾಗಿರಸಾಧ್ಯವಿದೆ. ಸೌಮ್ಯಭಾವ ಹಾಗೂ ಸ್ವನಿಯಂತ್ರಣವನ್ನೂ ಸೇರಿಸಿ, ದೇವರಾತ್ಮದ ಫಲಗಳನ್ನು ಬೆಳೆಸಿಕೊಳ್ಳುವುದು, ಇದನ್ನು ಸಾಧಿಸಲು ಅವನಿಗೆ ಸಹಾಯ ಮಾಡುವುದು.—ಕೀರ್ತನೆ 86:15; ಗಲಾತ್ಯ 5:22, 23.
ಸತ್ಕ್ರೈಸ್ತನೊಬ್ಬನು ದೀನಭಾವದವನಾಗಿರುತ್ತಾನೆ ಮತ್ತು ತನ್ನ ಕುರಿತು ಅಗತ್ಯವಿರುವುದಕ್ಕಿಂತಲೂ ಹೆಚ್ಚು ಶ್ರೇಷ್ಠನೆಂದು ಪರಿಗಣಿಸಿಕೊಳ್ಳುವುದಿಲ್ಲ. (ರೋಮಾಪುರ 12:3) ಇತರರೊಂದಿಗಿನ ತನ್ನ ವ್ಯವಹಾರಗಳಲ್ಲಿ ಅವನು ಪ್ರೀತಿಯನ್ನು ರೂಢಿಸಿಕೊಳ್ಳುತ್ತಾನೆ. ದ್ವೇಷಕ್ಕೆ ವ್ಯತಿರಿಕ್ತವಾಗಿ, ಪ್ರೀತಿಯು “ಸಿಟ್ಟುಗೊಳ್ಳುವದಿಲ್ಲ, ಅಪಕಾರವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವದಿಲ್ಲ.”—1 ಕೊರಿಂಥ 13:5.
ಹೌದು, ಭಯ, ಕೋಪ, ಅಥವಾ ಕೆಡುಕಿನ ಪರಿಜ್ಞಾನವು, ಜನರು ದ್ವೇಷಿಸುವಂತೆ ಮಾಡಬಲ್ಲದು. ಆದರೆ ದ್ವೇಷದ ಮೂಲವನ್ನೇ ಇಲ್ಲದಂತೆ ಮಾಡುವ ಮೂಲಕ, ಪ್ರೀತಿಯು ಅದನ್ನು ಜಯಿಸುತ್ತದೆ. ನಿಜವಾಗಿಯೂ, “ದೇವರು ಪ್ರೀತಿಸ್ವರೂಪಿ”ಯಾಗಿರುವುದರಿಂದ, ವಿಶ್ವದಲ್ಲಿ ಪ್ರೀತಿಯೇ ಅತ್ಯಂತ ಬಲವಾದ ಶಕ್ತಿಯಾಗಿದೆ.—1 ಯೋಹಾನ 4:8.
ಬೇಗನೆ ದ್ವೇಷವು ಎಂದೆಂದಿಗೂ ಇಲ್ಲವಾಗುತ್ತದೆ
ಸ್ವಾರ್ಥಪರತೆ ಹಾಗೂ ದ್ವೇಷಗಳು ಯೆಹೋವ ದೇವರ ವ್ಯಕ್ತಿತ್ವದ ಭಾಗವಾಗಿಲ್ಲದೆ ಇರುವುದರಿಂದ, ಅವು ಸದಾಕಾಲ ಬಾಳಲಾರವು. ಅತ್ಯಗತ್ಯವಾಗಿ ಅವು ತೆಗೆದುಹಾಕಲ್ಪಡಲೇಬೇಕು, ಸದಾಕಾಲ ಬಾಳುವ ಪ್ರೀತಿಯಿಂದ ಸ್ಥಾನಾಂತರಿಸಲ್ಪಡಲೇಬೇಕು. ದ್ವೇಷರಹಿತವಾದ ಆದರೆ ಪ್ರೀತಿಭರಿತವಾದ ಒಂದು ಲೋಕಕ್ಕಾಗಿ ನೀವು ಹಂಬಲಿಸುತ್ತಿರುವಲ್ಲಿ, ಅದನ್ನು ನೋಡಲು ಜೀವಿಸಲಿಕ್ಕಾಗಿರುವ ಆವಶ್ಯಕತೆಗಳನ್ನು ಯೆಹೋವನ ಸಾಕ್ಷಿಗಳು ನಿಮಗೆ ಬೈಬಲಿನಿಂದ ವಿವರಿಸುವಂತೆ ಅನುಮತಿಸಿರಿ.
ಹೌದು, ‘ನನ್ನ ಜೀವಿತದಲ್ಲಿ ಯಾವ ಗುಣವು ಮೇಲುಗೈ ಸಾಧಿಸಿದೆ—ಪ್ರೀತಿಯೊ ದ್ವೇಷವೊ?’ ಎಂದು ನಮ್ಮಲ್ಲಿ ಪ್ರತಿಯೊಬ್ಬರೂ ಪ್ರಶ್ನಿಸಿಕೊಳ್ಳುವುದು ಒಳಿತಾಗಿರುವುದು. ಇದು ಕೇವಲ ವಿದ್ವತ್ಪೂರ್ಣ ಪ್ರಶ್ನೆಯಾಗಿರುವುದಕ್ಕಿಂತಲೂ ಹೆಚ್ಚಿನದ್ದಾಗಿದೆ. ದೇವರ ವಿರೋಧಿಯನ್ನು, ದ್ವೇಷದ ದೇವರನ್ನು ಅನುಸರಿಸುವ ಒಬ್ಬ ವ್ಯಕ್ತಿಯು, ಹೆಚ್ಚು ಕಾಲ ಬದುಕುವುದಿಲ್ಲ. ಪ್ರೀತಿಯ ದೇವರಾದ ಯೆಹೋವನನ್ನು ಅನುಸರಿಸುವ ಒಬ್ಬ ವ್ಯಕ್ತಿಯು ಸದಾಕಾಲ ಬದುಕುವನು!—1 ಯೋಹಾನ 2:15-17.
[ಪುಟ 21 ರಲ್ಲಿರುವ ಚಿತ್ರ]
ಇಂದು ಕೂಡ ಜನರು ಪ್ರೀತಿಯನ್ನು ಧರಿಸಿಕೊಳ್ಳಬಲ್ಲರು