ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g97 10/8 ಪು. 12-14
  • ಹಣ ಸಂಪಾದಿಸುವುದರಲ್ಲಿ ತಪ್ಪೇನಿದೆ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಹಣ ಸಂಪಾದಿಸುವುದರಲ್ಲಿ ತಪ್ಪೇನಿದೆ?
  • ಎಚ್ಚರ!—1997
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • “ಪ್ರಾಪಂಚಿಕತೆಯ ಭರತದ ಅಲೆ”
  • ‘ಐಶ್ವರ್ಯವಂತರಾಗಬೇಕೆಂಬ ದೃಢಸಂಕಲ್ಪಮಾಡುವುದು’
  • ‘ನಾಶನದಲ್ಲಿ ಮುಳುಗುವುದು’
  • ಸಮತೆಯನ್ನು ಕಂಡುಕೊಳ್ಳುವುದು
  • ದುಡ್ಡೇ ಎಲ್ಲಾ ದುಷ್ಟತನಕ್ಕೆ ಕಾರಣನಾ?
    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
  • ಹಣಾನೇ ಸರ್ವಸ್ವನಾ?
    ಎಚ್ಚರ!—2015
  • ಹಣದ ಕುರಿತು ಬುದ್ಧಿವಂತಿಕೆಯ ನೋಟ ಯಾವುದು?
    ಎಚ್ಚರ!—2007
  • ಹಣ ನಿರ್ವಹಣೆಗೆ ಹೆಜ್ಜೆಗಳು
    ಸುಖೀ ಸಂಸಾರ ಸಾಧ್ಯ!
ಇನ್ನಷ್ಟು
ಎಚ್ಚರ!—1997
g97 10/8 ಪು. 12-14

ಯುವ ಜನರು ಪ್ರಶ್ನಿಸುವುದು . . .

ಹಣ ಸಂಪಾದಿಸುವುದರಲ್ಲಿ ತಪ್ಪೇನಿದೆ?

“ಹಣವು ಖಂಡಿತವಾಗಿಯೂ ಲೋಕದಲ್ಲಿನ ಅತಿ ಪ್ರಾಮುಖ್ಯ ಸಂಗತಿಯಾಗಿದೆ.” ಹೀಗೆಂದು ಪ್ರತಿಪಾದಿಸಿದರು ಬ್ರಿಟಿಷ್‌ ನಾಟಕಕಾರ ಜಾರ್ಜ್‌ ಬರ್ನಾರ್ಡ್‌ ಷಾ. ನೀವು ಅವರೊಂದಿಗೆ ಸಮ್ಮತಿಸುತ್ತೀರೊ? “ನಾನು ಐಶ್ವರ್ಯವಂತಳಾಗಿರಲು ಬಯಸುವುದಿಲ್ಲ, ಕೇವಲ ಹಣಕಾಸಿನ ಭದ್ರತೆಯನ್ನು ಬಯಸುತ್ತೇನಷ್ಟೇ” ಎಂದು ಹೇಳುವ ಟಾನ್ಯಳಂತೆ ನಿಮಗೆ ಅನಿಸುತ್ತಿರಬಹುದು. ತದ್ರೀತಿಯಲ್ಲಿ ಯುವ ಆವ್ಯನ್‌, ಹಣವನ್ನು ಲೋಕದಲ್ಲಿನ ಅತಿ ಪ್ರಾಮುಖ್ಯ ಸಂಗತಿಯನ್ನಾಗಿ ಅಲ್ಲ, ಬದಲಾಗಿ ನಿರ್ದಿಷ್ಟ ಗುರಿಗಳನ್ನು ಸಾಧಿಸಲು ಉಪಯುಕ್ತವಾಗಿರುವ ಒಂದು ಮಾಧ್ಯಮವಾಗಿ ಪರಿಗಣಿಸುತ್ತಾನೆ. ಅವನು ಹೇಳುವುದು: “ಬಟ್ಟೆಬರೆ ಮತ್ತು ಸಾರಿಗೆಯಂತಹ ನನ್ನ ಅಗತ್ಯಗಳಿಗಾಗಿ ಹಣವು ಅತ್ಯಾವಶ್ಯಕ.”

ಬೈಬಲ್‌ ಕೂಡ ತದ್ರೀತಿಯ ವಿಷಯವನ್ನು ಹೇಳುತ್ತದೆಂದು ನಿಮಗೆ ತಿಳಿದಿತ್ತೊ? ‘ಧನವು ಸಂರಕ್ಷಣೆಗಾಗಿ ಇದೆ’ (NW) ಎಂದು ಅದು ಪ್ರಸಂಗಿ 7:12ರಲ್ಲಿ ಹೇಳುತ್ತದೆ. ಬಡತನವನ್ನು “ಮಾನವ ಸಂತೋಷದ ಒಂದು ದೊಡ್ಡ ಶತ್ರು” ಎಂದು ವರ್ಣಿಸಲಾಗಿದೆ. ಮತ್ತು ಸಾಕಷ್ಟು ಹಣವನ್ನು ಪಡೆದಿರುವುದು—ಕಡಿಮೆಪಕ್ಷ ಸ್ವಲ್ಪ ಮಟ್ಟಿಗೆ—ಬಡತನವು ಅನೇಕ ವೇಳೆ ತರುವಂತಹ ಸಮಸ್ಯೆಗಳಿಂದ ನಿಮ್ಮನ್ನು ಸಂರಕ್ಷಿಸಬಲ್ಲದು. ಹಣವು ಅನಿರೀಕ್ಷಿತ ವಿಪತ್ತುಗಳ ಪರಿಣಾಮಗಳನ್ನೂ ತಗ್ಗಿಸಬಲ್ಲದು. “‘ಕಾಲವೂ ಪ್ರಾಪ್ತಿಯೂ ಯಾರಿಗೂ ತಪ್ಪಿದ್ದಲ್ಲ’ ಎಂದು ಬೈಬಲ್‌ ಹೇಳುತ್ತದೆ” ಅನ್ನುತ್ತಾಳೆ ಯುವ ಫಿಲಿಸ್‌. “ಕಷ್ಟಗಳು ಯಾವಾಗ ನಮ್ಮ ಮೇಲೆ ಎರಗುವವು ಎಂದು ನಮಗೆ ತಿಳಿದಿಲ್ಲ, ಆದುದರಿಂದ ನಾವು ಹಣವನ್ನು ಉಳಿತಾಯ ಮಾಡುವ ಅಗತ್ಯವಿದೆ.” (ಪ್ರಸಂಗಿ 9:11) ಮತ್ತು ಹಣವು ನಿಮಗೆ ಈಗ ಪ್ರಾಮುಖ್ಯವಾಗಿ ತೋರಬಹುದಾದರೂ, ಅದು ನಿಮ್ಮ ಭವಿಷ್ಯತ್ತಿನಲ್ಲಿ ಇನ್ನೂ ಹೆಚ್ಚು ಮಹತ್ವದ ಪಾತ್ರವನ್ನು ವಹಿಸಬಹುದು.

“ಪ್ರಾಪಂಚಿಕತೆಯ ಭರತದ ಅಲೆ”

ಸಾಕಷ್ಟು ಹಣವನ್ನು ಹೊಂದಿರುವುದರ ಕುರಿತಾದ ಸ್ವಲ್ಪ ಚಿಂತೆಯು ಸಹಜವಾದದ್ದೂ ಸ್ವಸ್ಥಕರವಾದದ್ದೂ ಆಗಿರುವಾಗ, ಕೆಲವು ಯುವ ಜನರಿಗೆ ಹಣವು ಬಹುಮಟ್ಟಿಗೆ ಒಂದು ಗೀಳಾಗಿಬಿಟ್ಟಿದೆ. “ನೀವು ಜೀವಿತದಲ್ಲಿ ಏನನ್ನು ಅತಿ ಹೆಚ್ಚಾಗಿ ಬಯಸುತ್ತೀರಿ?” ಎಂದು 1,60,000ಕ್ಕಿಂತಲೂ ಹೆಚ್ಚು ಯುವ ಜನರಿಗೆ ಕೇಳಿದಾಗ, 22 ಪ್ರತಿಶತ ಮಂದಿ “ಐಶ್ವರ್ಯವಂತರಾಗಲು ಬಯಸುತ್ತೇವೆ” ಎಂದು ಹೇಳಿದರು.

ಹಣಕ್ಕಾಗಿರುವ ಈ ಹಂಬಲವು, ನ್ಯೂಸ್‌ವೀಕ್‌ ಪತ್ರಿಕೆಯು ಯಾವುದನ್ನು, ಈ ಲೋಕವನ್ನು ಪಸರಿಸಿರುವ “ಪ್ರಾಪಂಚಿಕತೆಯ ಭರತದ ಅಲೆ”ಯೆಂದು ಕರೆಯುತ್ತದೊ ಅದರಿಂದ ಪೋಷಿಸಲ್ಪಟ್ಟಿದೆ ಎಂಬುದು ನಿಸ್ಸಂದೇಹ. “ನಾನೊಬ್ಬ ತೀರ ಪ್ರಾಪಂಚಿಕ ವ್ಯಕ್ತಿಯಾಗಿದ್ದೇನೆ ಮತ್ತು ವಿಶೇಷ ಉತ್ಪಾದಕರು ಮತ್ತು ವಿನ್ಯಾಸಕಾರರಿಂದ ತಯಾರಿಸಲ್ಪಟ್ಟಿರುವ ವಸ್ತುಗಳನ್ನು ಖರೀದಿಸುವುದು ನನಗೆ ಪ್ರಾಮುಖ್ಯ ಸಂಗತಿಯಾಗಿದೆ” ಎಂದು 18 ವರ್ಷ ಪ್ರಾಯದ ಮಾರ್ಟಿನ್‌ ಹೇಳುತ್ತಾನೆ. “ನೀವು ಖರೀದಿಸುವ ಐಟಮ್‌ನ ಗುಣಮಟ್ಟವು, ನೀವು ಖರ್ಚುಮಾಡುವ ಹಣದ ಮೇಲೆ ಅವಲಂಬಿಸಿರುತ್ತದೆಂದು ನಾನು ದೃಢವಾಗಿ ನಂಬುತ್ತೇನೆ. ಆದುದರಿಂದ ನಾನು ಬಯಸುವಂತಹ ವಸ್ತುಗಳಿಗಾಗಿ ತುಂಬ ಹಣವನ್ನು ಖರ್ಚುಮಾಡುತ್ತೇನೆ.” ‘ತುಂಬ ಹಣವನ್ನು ಖರ್ಚುಮಾಡು’ವವರಲ್ಲಿ ಮಾರ್ಟಿನ್‌ ಏಕಮಾತ್ರ ಯುವ ವ್ಯಕ್ತಿಯಲ್ಲ. ಯು.ಎಸ್‌.ನ್ಯೂಸ್‌ ಆ್ಯಂಡ್‌ ವರ್ಲ್ಡ್‌ ರಿಪೋರ್ಟ್‌ ವರದಿಸುವುದು: “ಕಳೆದ ವರ್ಷ, [ಅಮೆರಿಕದಲ್ಲಿ] 12ರಿಂದ 19 ವರ್ಷ ವಯಸ್ಸಿನವರು, ಖರೀದಿಮಾಡುವುದರಲ್ಲಿ ಒಟ್ಟು 10,900 ಕೋಟಿ ಡಾಲರುಗಳನ್ನು ಖರ್ಚುಮಾಡುತ್ತಾ, ಎಂದಿಗಿಂತಲೂ ಅತಿ ದೊಡ್ಡದಾದ ಖರೀದಿಮಾಡುವ ಕೇಳಿಯಲ್ಲಿ ತೊಡಗಿದರು. ಇದು 1990ಕ್ಕಿಂತಲೂ 38 ಪ್ರತಿಶತ ಹೆಚ್ಚಳವಾಗಿದೆ.”

ಆ ಎಲ್ಲ ಹೊಸ ಬಟ್ಟೆಗಳು, ಕಾಂಪ್ಯಾಕ್ಟ್‌ ಡಿಸ್ಕ್‌ಗಳು ಮತ್ತು ಕಂಪ್ಯೂಟರ್‌ ಸಾಧನಗಳಿಗಾಗಿ ಯುವ ಜನರು ಅಷ್ಟೊಂದು ಹಣವನ್ನು ಎಲ್ಲಿಂದ ಪಡೆದುಕೊಳ್ಳುತ್ತಾರೆ? ಯು.ಎಸ್‌.ನ್ಯೂಸ್‌ ಆ್ಯಂಡ್‌ ವರ್ಲ್ಡ್‌ ರಿಪೋರ್ಟ್‌ಗನುಸಾರ: “16ರಿಂದ 19 ವರ್ಷ ವಯಸ್ಸಿನವರಲ್ಲಿ ಸುಮಾರು ಅರ್ಧದಷ್ಟು ಮಂದಿಗೆ ಅಂಶಕಾಲಿಕ ಉದ್ಯೋಗಗಳಿವೆ.” ಸಮತೆಯಿಡಲ್ಪಡುವಲ್ಲಿ, ಶಾಲೆಯ ನಂತರದ ಒಂದು ಉದ್ಯೋಗವು, ಒಬ್ಬ ಯುವ ವ್ಯಕ್ತಿಗೆ ಜವಾಬ್ದಾರಿಯನ್ನು ಕಲಿಸುವುದರಂತಹ, ತನ್ನದೇ ಆದ ಪ್ರಯೋಜನಗಳನ್ನು ಹೊಂದಿರಬಲ್ಲದು. ಆದಾಗಲೂ, ಕೆಲವು ಯುವ ಜನರು ಈ ವಿಷಯದಲ್ಲಿ ಸ್ಪಷ್ಟವಾಗಿ ತೀರ ವಿಪರೀತಕ್ಕೆ ಹೋಗುತ್ತಾರೆ. ನ್ಯೂಸ್‌ವೀಕ್‌ ಪತ್ರಿಕೆಯು ಅವಲೋಕಿಸುವುದು: “ಮನಶ್ಶಾಸ್ತ್ರಜ್ಞರು ಮತ್ತು ಶಿಕ್ಷಕರು [ಕೆಲಸಮಾಡುತ್ತಿರುವ] ವಿದ್ಯಾರ್ಥಿಗಳ ಮೇಲಿನ ಒತ್ತಡವನ್ನು ನೋಡುತ್ತಾರೆ. ಶಾಲಾ ಮನೆಕೆಲಸಕ್ಕಾಗಿ ಅವರಲ್ಲಿ ಸ್ವಲ್ಪ ಸಮಯವಿರುತ್ತದೆ, ಮತ್ತು ಎಚ್ಚರವಾಗಿರಲು ಹೋರಾಡುತ್ತಿರುವ ದಣಿದಿರುವ ವಿದ್ಯಾರ್ಥಿಗಳನ್ನು ಕ್ರಮವಾಗಿ ನೋಡುವ ಶಿಕ್ಷಕರು, ವಿಷಾದಕರವಾಗಿ ಅನೇಕವೇಳೆ, ಪರೀಕ್ಷಾ ಸಾಧನೆಯಲ್ಲಿ ನಿರೀಕ್ಷಿಸಲಾಗುವ ಮಟ್ಟಗಳನ್ನು ಇಳಿಸುವ ಮೂಲಕ ಪ್ರತಿಕ್ರಿಯಿಸುತ್ತಾರೆ.”

ಹಾಗಿದ್ದರೂ, ಕೆಲಸಮಾಡುತ್ತಿರುವ ಕೆಲವೇ ಯುವ ಜನರು ತಮ್ಮ ಸಂಪಾದನೆಯ ಮೂಲಗಳನ್ನು ಬಿಟ್ಟುಕೊಡಲು ಸಿದ್ಧರಿರುತ್ತಾರೆ. “ಶಾಲೆಯು ಪ್ರಾಮುಖ್ಯ, ಆದರೆ ಹಣವೂ ಅಷ್ಟೇ ಪ್ರಾಮುಖ್ಯ. ಶಾಲಾ ಮನೆಕೆಲಸ ಹಣವನ್ನು ತರುವುದಿಲ್ಲ” ಅನ್ನುತ್ತಾಳೆ ಯುವ ವನೆಸಾ. ಹಣವನ್ನು ಸಂಪಾದಿಸುವುದು ನಿಮಗೆ ಎಷ್ಟು ಪ್ರಾಮುಖ್ಯವಾದದ್ದಾಗಿದೆ? ತುಂಬ ಹಣವನ್ನು ಸಂಪಾದಿಸುವುದು ಜೀವಿತದಲ್ಲಿನ ನಿಮ್ಮ ಮುಖ್ಯ ಗುರಿಯಾಗಿದೆಯೊ?

‘ಐಶ್ವರ್ಯವಂತರಾಗಬೇಕೆಂಬ ದೃಢಸಂಕಲ್ಪಮಾಡುವುದು’

ಬೈಬಲ್‌ ಈ ಪ್ರಶ್ನೆಗಳೊಂದಿಗೇ ವ್ಯವಹರಿಸುತ್ತದೆ. ಅಪೊಸ್ತಲ ಪೌಲನು ಬರೆದುದು: “ಐಶ್ವರ್ಯವಂತರಾಗಬೇಕೆಂದು ಮನಸ್ಸು ಮಾಡುವವರು [“ದೃಢಸಂಕಲ್ಪಮಾಡಿರುವವರು,” NW] ದುಷ್ಪ್ರೇರಣೆಯೆಂಬ ಉರ್ಲಿನಲ್ಲಿ ಸಿಕ್ಕಿಕೊಂಡು ಬುದ್ಧಿವಿರುದ್ಧವಾಗಿಯೂ ಹಾನಿಕರವಾಗಿಯೂ ಇರುವ ಅನೇಕ ಆಶೆಗಳಲ್ಲಿ ಬೀಳುತ್ತಾರೆ. ಇಂಥ ಆಶೆಗಳು ಮನುಷ್ಯರನ್ನು ಸಂಹಾರನಾಶನಗಳಲ್ಲಿ ಮುಳುಗಿಸುತ್ತವೆ. ಹಣದಾಸೆಯು ಸಕಲವಿಧವಾದ ಕೆಟ್ಟತನಕ್ಕೆ ಮೂಲವಾಗಿದೆ. ಕೆಲವರು ಅದಕ್ಕಾಗಿ ಆತುರಪಟ್ಟು ಅದರಿಂದ ಕ್ರಿಸ್ತನಂಬಿಕೆಯನ್ನು ಬಿಟ್ಟು ಅಲೆದಾಡಿ ಅನೇಕ ವೇದನೆಗಳಿಂದ ತಮ್ಮನ್ನು ತಿವಿಸಿಕೊಳ್ಳುತ್ತಾರೆ.”—1 ತಿಮೊಥೆಯ 6:9, 10.

ಪೌಲನಿಗೆ ನಿಶ್ಚಯವಾಗಿಯೂ ಆ ಮಾತುಗಳ ಸೂಚಿತಾರ್ಥವು ತಿಳಿದಿತ್ತು. ಒಬ್ಬ ಕ್ರೈಸ್ತನಾಗುವ ಮುಂಚೆ, ಅವನು “ಫರಿಸಾಯರು” ಎಂದು ಜ್ಞಾತರಾಗಿದ್ದ ಧಾರ್ಮಿಕ ಮುಖಂಡರಲ್ಲಿ ಒಬ್ಬನಾಗಿದ್ದನು. ಬೈಬಲ್‌ ಇವರನ್ನು ‘ಹಣದಾಸೆಯುಳ್ಳವರು’ ಎಂದು ವರ್ಣಿಸುತ್ತದೆ. (ಲೂಕ 16:14) ಆದರೂ, ಅಪೊಸ್ತಲನು ಹಣ ಸಂಪಾದಿಸುವುದನ್ನೇ ಖಂಡಿಸಲಿಲ್ಲ. ಬದಲಿಗೆ, ‘ಐಶ್ವರ್ಯವಂತರಾಗಲು ದೃಢಸಂಕಲ್ಪಮಾಡಿರುವವ’ರಿಗೆ ಅಥವಾ ಇನ್ನೊಂದು ಭಾಷಾಂತರವು ಅದನ್ನು ತಿಳಿಸುವಂತೆ “ಧನಿಕರಾಗುವುದರ ಮೇಲೆ ತಮ್ಮ ಮನಸ್ಸುಗಳನ್ನು ನೆಟ್ಟಿರುವ” (ಫಿಲಿಪ್ಸ್‌) ಜನರಿಗೆ ಅವನು ಎಚ್ಚರಿಕೆಯನ್ನು ಕೊಟ್ಟನು. ಆದರೆ ಅದನ್ನು ಮಾಡುವುದರಲ್ಲಿ ಅಷ್ಟು ಕೆಟ್ಟದ್ದೇನಿದೆ?

ಪೌಲನು ವಿವರಿಸಿದಂತೆ, ಅಂತಹವರು ‘ದುಷ್ಪ್ರೇರಣೆಯೆಂಬ ಉರ್ಲಿನಲ್ಲಿ ಸಿಕ್ಕಿಕೊಳ್ಳುತ್ತಾರೆ.’ “ಐಶ್ವರ್ಯವನ್ನು ಗಳಿಸಲು ಆತುರಪಡುವವನು ನಿರ್ದೋಷಿಯಾಗಿ ಉಳಿಯುವುದಿಲ್ಲ” (NW) ಎಂದು ಹೇಳುವಾಗ, ಜ್ಞಾನೋಕ್ತಿ 28:20 ತದ್ರೀತಿಯ ವಿಷಯವನ್ನು ಹೇಳುತ್ತದೆ. ತಮ್ಮಲ್ಲಿ ಸಾಕಷ್ಟಿಲ್ಲವೆಂದು ನೆನಸುತ್ತಾ, ಕೆಲವು ಯುವ ಜನರು ಕಳ್ಳತನಕ್ಕೆ ಮೊರೆಹೋಗಿದ್ದಾರೆ.

ಹೆಚ್ಚಿನ ಯುವ ಜನರು ಕದಿಯುವುದರ ಕುರಿತಾಗಿ ಯೋಚಿಸಲಿಕ್ಕಿಲ್ಲ ನಿಜ. ಆದರೆ ಕೆಲವರು ಅದರಷ್ಟೇ ಅಪಾಯಕಾರಿಯಾದ ನಡವಳಿಕೆಯಲ್ಲಿ ಒಳಗೂಡಬಹುದು. ಇಂದು ಕ್ರೈಸ್ತತ್ವ (ಇಂಗ್ಲಿಷ್‌) ಎಂಬ ಪತ್ರಿಕೆಯು ವರದಿಸುವುದು: “ವಿಪರೀತ ಜೂಜಾಟವು, ತೀರ ವೇಗವಾಗಿ ಬೆಳೆಯುತ್ತಿರುವ ಹದಿವಯಸ್ಕ ಚಟವಾಗಿ ಪರಿಣಮಿಸಿದೆಯೆಂದು ಕೆಲವು ಪರಿಣತರು ನಂಬುತ್ತಾರೆ.” ಅಮೆರಿಕದ ಒಂದು ಸ್ಥಳದಲ್ಲಿ “ಹದಿವಯಸ್ಕರಲ್ಲಿ ಬಹುಮಟ್ಟಿಗೆ 90 ಪ್ರತಿಶತ ಮಂದಿ, ಪ್ರೌಢಶಾಲೆಯ ತಮ್ಮ ಕೊನೆಯ ವರ್ಷದೊಳಗೆ ಕಾನೂನುವಿರುದ್ಧವಾಗಿ ಲಾಟರಿ ಟಿಕೆಟ್‌ಗಳನ್ನು ಖರೀದಿಸಿದ್ದರು.” ಕೆಲವು ಯುವ ಜನರು ಇನ್ನೂ ಹೆಚ್ಚು ಹತಾಶ ಕ್ರಮಗಳಿಗೆ ಮೊರೆಹೋಗುತ್ತಾರೆ. “ತೃಪ್ತಿದಾಯಕ ಉದ್ಯೋಗಗಳನ್ನು ಪಡೆದುಕೊಳ್ಳುವುದು ಕಷ್ಟಕರ” ಎಂದು 16 ವರ್ಷದ ಮ್ಯಾಥ್ಯೂ ಹೇಳುತ್ತಾನೆ. “ಆದುದರಿಂದ ನನ್ನ ಹಣದಲ್ಲಿ ಹೆಚ್ಚಿನದ್ದನ್ನು, ವಸ್ತುಗಳನ್ನು ಸಾಗಿಸುವ ಮತ್ತು ಮಾರುವ ಮೂಲಕ ಸಂಪಾದಿಸುತ್ತೇನೆ. . . . ಆಗಾಗ್ಗೆ ನಾನು [ಅಮಲೌಷಧಗಳನ್ನು] ಮಾರುತ್ತಿದ್ದೆ.”

‘ನಾಶನದಲ್ಲಿ ಮುಳುಗುವುದು’

ಹಣವಿರುವುದು, ಒಬ್ಬನಿಗೆ ಸ್ವಾತಂತ್ರ್ಯದ ಪ್ರಜ್ಞೆಯನ್ನು ಕೊಡಬಹುದು. ಆದರೆ ಪೌಲನು ವಿವರಿಸುವಂತೆ, ಹಣವನ್ನು ಬೆನ್ನಟ್ಟುವುದು ಒಬ್ಬನನ್ನು ವಾಸ್ತವವಾಗಿ “ಬುದ್ಧಿವಿರುದ್ಧವಾಗಿಯೂ ಹಾನಿಕರವಾಗಿಯೂ ಇರುವ ಅನೇಕ ಆಶೆ”ಗಳಿಗೆ ದಾಸನನ್ನಾಗಿ ಮಾಡಬಲ್ಲದು. “ಇಂಥ ಆಶೆಗಳು ಮನುಷ್ಯರನ್ನು ಸಂಹಾರನಾಶನಗಳಲ್ಲಿ ಮುಳುಗಿಸುತ್ತವೆ.” ಹೌದು, ಹಣದಾಸೆಯು ಒಮ್ಮೆ ನಿಮ್ಮ ಮೇಲೆ ನಿಯಂತ್ರಣವನ್ನು ಪಡೆದುಕೊಳ್ಳುವಲ್ಲಿ, ದುರಾಶೆ, ಕೊಲೆದಾಯಕ ಈರ್ಷ್ಯೆ ಮತ್ತು ಇತರ ಹಾನಿಕಾರಕ ಆಶೆಗಳು ಪ್ರಬಲವಾಗಿರಬಲ್ಲವು. (ಕೊಲೊಸ್ಸೆ 3:5ನ್ನು ಹೋಲಿಸಿರಿ.) ಟೀನ್‌ ಪತ್ರಿಕೆಯಲ್ಲಿನ ಒಂದು ಲೇಖನವು ಗಮನಿಸಿದ್ದೇನೆಂದರೆ, ಹದಿವಯಸ್ಕರು ಇತರ ಯುವ ಜನರು ಹೊಂದಿರುವಂತಹ ಕಾರುಗಳು ಮತ್ತು ಬಟ್ಟೆಬರೆಗಳ ಕುರಿತಾಗಿ ಎಷ್ಟು ಅಸೂಯೆಯುಳ್ಳವರಾಗಬಲ್ಲರೆಂದರೆ, “ಅವರು ಭಾವಪರವಶರಾಗುತ್ತಾರೆ.” ಕೆಲವೊಮ್ಮೆ, ಅಂತಹ ಅಸೂಯೆಯು “ಸ್ವಜುಗುಪ್ಸೆಯಾಗಿ ಪ್ರಬಲಗೊಳ್ಳುತ್ತದೆ ಮತ್ತು ಒಬ್ಬ ಹದಿವಯಸ್ಕನು, ತಾನು ಹೊಂದಿರದ ವಿಷಯವನ್ನು ಬಿಟ್ಟು ಬೇರೆ ಯಾವುದೇ ವಿಷಯದ ಕುರಿತಾಗಿ ಯೋಚಿಸಲು ಅಶಕ್ತನಾಗುತ್ತಾನೆ” ಎಂದು ಆ ಲೇಖನವು ಕೂಡಿಸುತ್ತದೆ.

ಹಾಗಾದರೆ, ಸಂಪತ್ತಿಗಾಗಿರುವ ಆಶೆಯು, ಒಬ್ಬನು ‘ದುಷ್ಪ್ರೇರಣೆಯಲ್ಲಿ ಸಿಕ್ಕಿಕೊಳ್ಳಲು’ ಕಾರಣವಾಗಬಲ್ಲದು ಮಾತ್ರವಲ್ಲ, ಅದು ಒಬ್ಬನನ್ನು ‘ಸಂಹಾರನಾಶನಗಳಲ್ಲಿ ಮುಳುಗಿಸಲೂ’ (ಓರೆಅಕ್ಷರಗಳು ನಮ್ಮವು.) ಕಾರಣವಾಗಬಲ್ಲದೆಂಬುದನ್ನು ಗಮನಿಸಿರಿ. ಬೈಬಲ್‌ ವ್ಯಾಖ್ಯಾನಕಾರನಾದ ಆಲ್ಬರ್ಟ್‌ ಬಾರ್ನ್‌ಸ್‌ ಅವಲೋಕಿಸುವುದು: “ಈ ಚಿತ್ರಣವು, ಒಂದು ನೌಕೆ ಮತ್ತು ಅದರಲ್ಲಿರುವ ಎಲ್ಲವೂ ಒಟ್ಟಿಗೆ ಕೆಳಗೆ ಹೋಗುವ ನೌಕಾಭಂಗದ್ದಾಗಿದೆ. ನಾಶನವು ಸಂಪೂರ್ಣವಾಗಿದೆ. ಸಂತೋಷ, ಸದ್ಗುಣ, ಖ್ಯಾತಿ ಮತ್ತು ಪ್ರಾಣವು ಸಂಪೂರ್ಣವಾಗಿ ನಾಶವಾಗಿಹೋಗುತ್ತದೆ.”—1 ತಿಮೊಥೆಯ 1:19ನ್ನು ಹೋಲಿಸಿರಿ.

ಹಾಗಾದರೆ, ಸರ್ವವನ್ನೂ ಕಬಳಿಸುವ “ಹಣದಾಸೆಯು ಸಕಲವಿಧವಾದ ಕೆಟ್ಟತನಕ್ಕೆ ಮೂಲವಾಗಿದೆ” ಎಂದು ಪೌಲನು ಸೂಕ್ತವಾಗಿಯೇ ಹೇಳುತ್ತಾನೆ. ಅದರ ಪರಿಣಾಮವಾಗಿ, ಅನೇಕರು “ಕ್ರಿಸ್ತನಂಬಿಕೆಯನ್ನು ಬಿಟ್ಟು ಅಲೆದಾಡಿ ಅನೇಕ ವೇದನೆಗಳಿಂದ ತಮ್ಮನ್ನು ತಿವಿಸಿ”ಕೊಂಡಿದ್ದಾರೆ. ಉದಾಹರಣೆಗಾಗಿ, ನಾವು ರೋರಿ ಎಂದು ಕರೆಯುವ ಯುವಕನನ್ನು ತೆಗೆದುಕೊಳ್ಳಿರಿ. 12ನೆಯ ವಯಸ್ಸಿನಲ್ಲಿ ಅವನು ಜೂಜಾಡಲು ಆರಂಭಿಸಿದನು. “ಏನನ್ನೂ ಮಾಡದೆ ಹಣವನ್ನು ಪಡೆದುಕೊಳ್ಳುವ ಒಂದು ವಿಧ ಅದಾಗಿತ್ತು” ಎಂದು ಅವನು ಜ್ಞಾಪಿಸಿಕೊಳ್ಳುತ್ತಾನೆ. ಸ್ವಲ್ಪ ಸಮಯದಲ್ಲೇ, ಅವನು ನೂರಾರು ಡಾಲರುಗಳಷ್ಟು ಸಾಲಮಾಡಿದ್ದನು ಮತ್ತು ಸ್ನೇಹಿತರು, ಕುಟುಂಬ, ಮತ್ತು ಶಾಲಾ ಮನೆಕೆಲಸವನ್ನು ಅಲಕ್ಷಿಸಿದ್ದನು. “ನಾನು ನಿಲ್ಲಿಸಲು ಪ್ರಯತ್ನಿಸಿದೆ” ಎಂದು ಅವನು ಒಪ್ಪಿಕೊಳ್ಳುತ್ತಾನೆ, ಆದರೆ ಅವನು ಪದೇಪದೇ ತಪ್ಪಿಬಿದ್ದನು. 19ನೆಯ ವಯಸ್ಸಿನಲ್ಲಿ ಸಹಾಯವನ್ನು ಪಡೆದುಕೊಳ್ಳುವ ತನಕ ಅವನು ‘ಅನೇಕ ವೇದನೆಗಳಿಂದ ತನ್ನನ್ನು ತಿವಿಸಿಕೊಳ್ಳುವುದನ್ನು’ ಮುಂದುವರಿಸಿದನು. ಡಗ್ಲಸ್‌ ಕೆನಡಿ ಎಂಬ ಬರಹಗಾರನು, ಐಶ್ವರ್ಯವನ್ನಟ್ಟುವುದು (ಇಂಗ್ಲಿಷ್‌) ಎಂಬ ತನ್ನ ಪುಸ್ತಕದಲ್ಲಿ, ಹಣದ ಬೆನ್ನಟ್ಟುವಿಕೆಯನ್ನು “ಒಂದು ಆಘಾತಗೊಳಿಸುವ ಅನುಭವ” ಎಂದು ಕರೆಯುವಾಗ ಅದನ್ನು ಅತಿಶಯಿಸಿ ಹೇಳುತ್ತಿಲ್ಲ.

ಸಮತೆಯನ್ನು ಕಂಡುಕೊಳ್ಳುವುದು

ಹೀಗೆ ಸೊಲೊಮೋನನ ಬುದ್ಧಿವಾದವು, ಶತಮಾನಗಳ ಹಿಂದೆ ಅದು ಇದ್ದಷ್ಟೇ ಕಾರ್ಯೋಚಿತವಾಗಿದೆ: “ದುಡ್ಡಿನಾಸೆಯಿಂದ ದುಡಿಯಬೇಡ; ಸ್ವಬುದ್ಧಿಯನ್ನೇ ಆಶ್ರಯಿಸಬೇಡ. ನಿನ್ನ ದೃಷ್ಟಿಯು ಧನದ ಮೇಲೆ ಎರಗುತ್ತದೋ? ಧನವು ಅಷ್ಟರೊಳಗೆ ಮಾಯವಾಗುವದು; ಆಕಾಶದ ಕಡೆಗೆ ಹಾರುವ ಹದ್ದಿನಂತೆ ಅದು ರೆಕ್ಕೆಗಳನ್ನು ಕಟ್ಟಿಕೊಂಡಿದೆ.” (ಜ್ಞಾನೋಕ್ತಿ 23:4, 5) ಪ್ರಾಪಂಚಿಕ ಐಶ್ವರ್ಯಗಳು ತಾತ್ಕಾಲಿಕವಾಗಿವೆ. ಆದುದರಿಂದ ಸಂಪತ್ತಿನ ಬೆನ್ನಟ್ಟುವಿಕೆಯನ್ನು ಜೀವಿತದಲ್ಲಿನ ನಿಮ್ಮ ಮುಖ್ಯ ಗುರಿಯನ್ನಾಗಿ ಮಾಡಿಕೊಳ್ಳುವುದು ಮೂರ್ಖತನವಾಗಿದೆ. “ಸಂಪೂರ್ಣ ರೀತಿಯಲ್ಲಿ ಪ್ರಾಪಂಚಿಕವಾಗಿರುವ ಗುರಿಗಳಲ್ಲಿ ನಾನು ಸಿಕ್ಕಿಬೀಳಲು ಬಯಸುವುದಿಲ್ಲ” ಎಂದು ಮಾರೀನ್‌ ಎಂಬ ಹೆಸರಿನ ಒಬ್ಬ ಕ್ರೈಸ್ತ ಯುವತಿಯು ಹೇಳುತ್ತಾಳೆ. “ಕೇವಲ ಹಣವನ್ನು ಸಂಪಾದಿಸುವುದರಲ್ಲಿ ನಾನು ತಲ್ಲೀನಳಾದರೆ, ನಾನು ತೆರಬೇಕಾದ ಬೆಲೆಯು ನನ್ನ ಆತ್ಮಿಕತೆಯಾಗಿರುವುದೆಂದು ನನಗೆ ಚೆನ್ನಾಗಿ ತಿಳಿದಿದೆ” ಎಂದು ಅವಳು ಹೇಳುತ್ತಾಳೆ.

ನಿಜ, ಹಣವು ಒಂದು ಆವಶ್ಯಕತೆಯಾಗಿದೆ. ಮತ್ತು ಸಾಕಷ್ಟು ಸಂಬಳವನ್ನು ಹೊಂದಿರುವುದು, ನೀವು ನಿಮ್ಮ ಸ್ವಂತ ಅಗತ್ಯಗಳ ಕಾಳಜಿ ವಹಿಸಲು ಮತ್ತು ಪ್ರಾಯಶಃ ಆಗಿಂದಾಗ್ಗೆ ಇತರರಿಗೂ ಪ್ರಾಪಂಚಿಕವಾಗಿ ನೆರವು ನೀಡುವಂತೆ ನಿಮ್ಮನ್ನು ಅನುಮತಿಸುವುದು. (ಎಫೆಸ 4:28) ಹಣವನ್ನು ಪ್ರಾಮಾಣಿಕವಾಗಿ ಸಂಪಾದಿಸಲು ಶಕ್ತರಾಗುವಂತೆ, ಶ್ರದ್ಧಾಪೂರ್ವಕವಾಗಿ ಕೆಲಸಮಾಡಲು ಕಲಿತುಕೊಳ್ಳಿರಿ. ಅಲ್ಲದೆ, ನಿಮ್ಮ ಹಣವನ್ನು ಉಳಿತಾಯ ಮಾಡುವ, ಬಡ್ಜೆಟ್‌ ಮಾಡುವ ಮತ್ತು ಬುದ್ಧಿವಂತಿಕೆಯಿಂದ ಖರ್ಚುಮಾಡುವ ವಿಧವನ್ನೂ ಕಲಿಯಿರಿ. ಆದರೆ ಹಣವನ್ನು ಎಂದಿಗೂ ಜೀವಿತದಲ್ಲಿನ ಅತಿ ಪ್ರಾಮುಖ್ಯ ಸಂಗತಿಯನ್ನಾಗಿ ಮಾಡದಿರಿ. ಹೀಗೆ ಪ್ರಾರ್ಥಿಸಿದಂತಹ ಜ್ಞಾನೋಕ್ತಿ 30:8ರ ಬರಹಗಾರನಿಂದ ವ್ಯಕ್ತಪಡಿಸಲ್ಪಟ್ಟ ಸಮತೆಯ ನೋಟವನ್ನು ಹೊಂದಿರಲು ಪ್ರಯತ್ನಿಸಿರಿ: ‘ನನಗೆ ಬಡತನವನ್ನಾಗಲಿ ಐಶ್ವರ್ಯವನ್ನಾಗಲಿ ಕೊಡದಿರು.’ ಆತ್ಮಿಕ ಅಭಿರುಚಿಗಳನ್ನು ಪ್ರಥಮವಾಗಿಡುವ ಮೂಲಕ, ನೀವು ಅತ್ಯುತ್ತಮ ವಿಧದ ಐಶ್ವರ್ಯವನ್ನು ಗಳಿಸಲು ಶಕ್ತರಾಗುವಿರಿ. ಜ್ಞಾನೋಕ್ತಿ 10:22 (NW) ಹೇಳುವಂತೆ “ಯೆಹೋವನ ಆಶೀರ್ವಾದವು—ಅದು ತಾನೇ ಐಶ್ವರ್ಯವಂತನನ್ನಾಗಿ ಮಾಡುತ್ತದೆ ಮತ್ತು ಆತನು ಅದರೊಂದಿಗೆ ಯಾವ ನೋವನ್ನೂ ಸೇರಿಸನು.”

[ಪುಟ 24 ರಲ್ಲಿರುವ ಚಿತ್ರ]

ತಮ್ಮ ಸಮಾನಸ್ಥರಿಗಿರುವಂತಹದ್ದೇ ಅಂತಸ್ತನ್ನು ಕಾಪಾಡಿಕೊಳ್ಳಶಕ್ತರಾಗುವುದಕ್ಕಾಗಿ ಅನೇಕ ಯುವ ಜನರು ಹಣವನ್ನು ಬಯಸುತ್ತಾರೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ