ಕ್ಲೇಶಮುಕ್ತ ಪ್ರಮೋದವನ ಕೇವಲ ಸ್ವಪ್ನವೊ?
“ಎಷ್ಟು ಶಾಂತಭರಿತವಾಗಿದೆ!” ಅಮೆರಿಕದ ಐಡಹೋ ರಾಜ್ಯದ ರೆಡ್ಫಿಶ್ ಸರೋವರದ ಮೇಲಿರುವ ಪೈನ್ವನದಿಂದ ಕಾಣಸಿಗುವ ದೃಶ್ಯವು ನಿಶ್ಚಯವಾಗಿಯೂ ಪ್ರಶಾಂತವಾಗಿತ್ತು. “ಇದು ಪ್ರಮೋದವನವು ಹೇಗಿರಬೇಕೆಂದು ನಾನು ಭಾವಿಸುತ್ತೇನೊ ಅದರಂತೆಯೇ ಇದೆ” ಎಂದನು ಪ್ರವಾಸಿ.
ಮೆಡಿಟರೇನಿಯನ್ ದ್ವೀಪವಾದ ಸೈಪ್ರಸ್ನ ದಕ್ಷಿಣ ಕರಾವಳಿಯಲ್ಲಿ ಸೂರ್ಯನು ಪ್ರಜ್ವಲಿಸುತ್ತಿದ್ದನು. ಅಲೆಗಳು ದಡವನ್ನು ಮೃದುವಾಗಿ ಅಪ್ಪಳಿಸುತ್ತಿದ್ದವು. ಈ ದೃಶ್ಯವನ್ನು ಶಿಖರದ ಮೇಲಿನ ಫಲಾಹಾರಗೃಹದಿಂದ ನೋಡುತ್ತ, ಆ ಭೇಟಿಕಾರನು ಹೇಳಿದ್ದು: “ಇದು ಪ್ರಮೋದವನವೇ ಸರಿ!”
ಈ ರೀತಿಯ ದೃಶ್ಯಗಳ ಸ್ಮರಣೆಗಳನ್ನು ನಮ್ಮಲ್ಲಿ ಹೆಚ್ಚಿನವರು ಅತ್ಯಮೂಲ್ಯವಾಗಿ ಕಾಣುತ್ತೇವೆ. ಆದರೆ ಅನೇಕ ವೇಳೆ ದೈನಂದಿನ ಜೀವಿತದ ಕಠಿನ ವಾಸ್ತವಿಕತೆಗಳು—ರಾಕಿ ಪರ್ವತಗಳ ಕಾಡುಗಳಿರುವ ಅಡಿಗುಡ್ಡಗಳಲ್ಲಿ ಸಂಭವಿಸುವ ಕಾಡ್ಗಿಚ್ಚು, ಮೀನು ಮತ್ತು ಕೊನೆಗೆ ಮನುಷ್ಯನ ಮೇಲೆ ಪರಿಣಾಮಬೀರುವ ಸಮುದ್ರ ಮಾಲಿನ್ಯ, ಅಲ್ಲದೆ ಜೀವಾಪಾಯಕರವಾದ ಅಂತಾರಾಷ್ಟ್ರೀಯ ಮತ್ತು ಅಂತರ್ಜಾತೀಯ ಕಲಹಗಳು—ಪ್ರಮೋದವನ್ಯ ಪರಿಸರಗಳನ್ನು ಹುಸಿಗೊಳಿಸುತ್ತವೆಂಬುದು ಸ್ಥಳಿಕ ನಿವಾಸಿಗಳ ಗ್ರಹಿಕೆ.
ಪ್ರಮೋದವನ—ಏನದು?
ಪ್ರಮೋದವನವನ್ನು ನೀವು ಹೇಗೆ ಚಿತ್ರಿಸುತ್ತೀರಿ? ದ ನ್ಯೂ ಶಾರ್ಟರ್ ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನೆರಿಯು, ಅದರ ಪ್ರಥಮ ನಿರೂಪಣೆಯನ್ನು ಹೀಗೆ ಕೊಡುತ್ತದೆ: “ಆದಿ[ಕಾಂಡ] 2, 3ರಲ್ಲಿ ವರ್ಣಿಸಿರುವ ಏದೆನ್ ತೋಟ.” ಬೈಬಲಿನ ಪ್ರಥಮ ಪುಸ್ತಕದಲ್ಲಿ, ದೇವರು ಪ್ರಥಮ ಪುರುಷನಾದ ಆದಾಮನನ್ನು ಇರಿಸಿದ ಪ್ರದೇಶದ ವಿವರಣೆಯನ್ನು ಇದು ಸೂಚಿಸುತ್ತದೆ. ಆ ಆದಿ ಪ್ರಮೋದವನದಲ್ಲಿ, “ನೋಟಕ್ಕೆ ರಮ್ಯವಾಗಿಯೂ ಊಟಕ್ಕೆ ಅನುಕೂಲವಾಗಿಯೂ” ಇರುವ ಮರಗಳು ಸಮೃದ್ಧವಾಗಿ ಬೆಳೆದವು.—ಆದಿಕಾಂಡ 2:9.
ಆ ನಿಘಂಟಿನಲ್ಲಿರುವ ಎರಡನೆಯ ನಿರೂಪಣೆ “ಪ್ರಮೋದವನ”ವನ್ನು “ಕ್ರೈಸ್ತ ಮತ್ತು ಮುಸ್ಲಿಮ್ ದೇವತಾಶಾಸ್ತ್ರದ ಸ್ವರ್ಗ”ದೊಂದಿಗೆ ಸಂಬಂಧಿಸಿ, ಆ ಬಳಿಕ ಕೂಡಿಸುವುದು: “ಈಗ ಮುಖ್ಯವಾಗಿ ಕವಿತಾ[ಯೋಗ್ಯ].” ನಮ್ಮ ಪ್ರವಾಸಿ ಮತ್ತು ಭೇಟಿಕಾರನಿಗಾದರೊ, ಪ್ರಮೋದವನವು ನಿಘಂಟಿನ ನಿರೂಪಣೆಯಲ್ಲಿ ಮೂರನೆಯದಾದ, “ಅತಿಶಯ ಸೌಂದರ್ಯ ಅಥವಾ ಆಹ್ಲಾದದ ಪ್ರದೇಶ”ವಾಗಿತ್ತು.
16ನೆಯ ಶತಮಾನದ ಬ್ರಿಟಿಷ್ ರಾಜನೀತಿಜ್ಞ ಸರ್ ಥಾಮಸ್ ಮೋರ್, ಅಸಾಧ್ಯಾದರ್ಶ (ಇಂಗ್ಲಿಷ್) ಎಂಬ ಶೀರ್ಷಿಕೆಯುಳ್ಳ ಪುಸ್ತಕವನ್ನು ಬರೆದನು. ಅದರಲ್ಲಿ, ಕಾನೂನು, ಸರಕಾರ ಮತ್ತು ಸಾಮಾಜಿಕ ಸ್ಥಿತಿಗಳು ಪರಿಪೂರ್ಣವಾಗಿದ್ದ ಒಂದು ಕಾಲ್ಪನಿಕ ದೇಶವನ್ನು ಅವನು ವರ್ಣಿಸಿದನು. ಅದು ಎಷ್ಟು ಅವಾಸ್ತವವಾಗಿ ಕಂಡುಬಂತೆಂದರೆ, ಇಂದಿನ ವೆಬ್ಸ್ಟರ್ಸ್ ನ್ಯೂ ಕಲೀಜಿಯೇಟ್ ಡಿಕ್ಷನೆರಿ, “ಅಸಾಧ್ಯಾದರ್ಶ”ದ ಒಂದು ನಿರೂಪಣೆಯನ್ನು, “ಸಾಮಾಜಿಕ ಅಭಿವೃದ್ಧಿಗಾಗಿರುವ ಅಪ್ರಾಯೋಗಿಕ ಯೋಜನೆ” ಎಂದು ವಿವರಿಸುತ್ತದೆ.
ಪೀಪ್ಲ್ಸ್ ಟೆಂಪ್ಲ್ ಪಂಥದ ನಾಯಕ ಜಿಮ್ ಜೋನ್ಸ್ನ ಹಿಂಬಾಲಕರಿಗೆ ಅಸಾಧ್ಯಾದರ್ಶವು ಗಯಾನ ದೇಶದ ಕಾಡಿನಲ್ಲಿದ್ದ ಕಡಿದು ಸಿದ್ಧಮಾಡಿದ ಜಮೀನಾಗಿತ್ತು. ದುಃಖಕರವಾಗಿ, 1978ರಲ್ಲಿ ಈ ನಿರೀಕ್ಷಿತ ಪ್ರಮೋದವನವು, ಅವರಲ್ಲಿ 900ಕ್ಕಿಂತಲೂ ಹೆಚ್ಚು ಜನರಿಗೆ ಮರಣದ ದೃಶ್ಯವಾಗಿ ಪರಿಣಮಿಸಿತು—ಘೋರಸ್ವಪ್ನವೇ ಸರಿ! ಇದರ ಪರಿಣಾಮವಾಗಿ, ಜನರು ಕೆಲವೊಮ್ಮೆ ಪ್ರಮೋದವನದ ಕಲ್ಪನೆಯನ್ನು, ಯಾವ ಪಂಥಗಳ ಪದ್ಧತಿಗಳು ತಲ್ಲಣವನ್ನುಂಟುಮಾಡಿ, ಶಾಂತಿಭಂಗಮಾಡುತ್ತವೋ ಆ ವಿಚಿತ್ರ ಪಂಥಗಳೊಂದಿಗೆ ಸಂಬಂಧಿಸುತ್ತಾರೆ.
ಪಾತಕ ಮತ್ತು ಹಿಂಸಾಚಾರವು ಬೆದರಿಕೆ ಹಾಕಿ, ರೋಗವು ವಯಸ್ಕರನ್ನೂ ಮಕ್ಕಳನ್ನೂ ಒಂದೇ ರೀತಿಯಾಗಿ ಬೆನ್ನಟ್ಟಿ, ದ್ವೇಷ ಮತ್ತು ಧಾರ್ಮಿಕ ಭಿನ್ನತೆಗಳು ಸಮಾಜಗಳನ್ನು ವಿಭಾಗಿಸುವ ಒಂದು ಲೋಕದಲ್ಲಿ, ಸುಂದರ ಪರಿಸರಗಳು ಅನೇಕ ವೇಳೆ ಕೇವಲ ತೆಳುಹೊದಿಕೆಯಾಗಿರುತ್ತವೆಯೇ ಹೊರತು ಇನ್ನೇನೂ ಅಲ್ಲ. ಆದುದರಿಂದ ಪ್ರಮೋದವನವು ಸ್ವಪ್ನಕ್ಕಿಂತ ಹೆಚ್ಚಿನದ್ದೇನೂ ಅಲ್ಲವೆಂದು ಜನರು ಯೋಚಿಸುವುದು ಆಶ್ಚರ್ಯವಲ್ಲ! ಆದರೆ ಇದು, ಕೆಲವರನ್ನು ಅವರು ಪ್ರಮೋದವನವನ್ನು ಹುಡುಕುವುದನ್ನು ಪ್ರಯತ್ನಿಸುವುದರಿಂದಾಗಲಿ ಅಥವಾ ತಮಗಾಗಿ ಒಂದು ಪ್ರಮೋದವನವನ್ನು ಮಾಡಿಕೊಳ್ಳುವುದರಿಂದಲೂ ತಡೆದಿರುವುದಿಲ್ಲ. ಇದರಲ್ಲಿ ಅವರು ಎಷ್ಟು ಯಶಸ್ವಿಯಾಗಿದ್ದಾರೆ?