ನಿಮ್ಮ ಆರೋಗ್ಯವನ್ನು ಕಾಪಾಡುವ ಆರು ವಿಧಗಳು
ನೈಜೀರಿಯದ ಎಚ್ಚರ! ಸುದ್ದಿಗಾರರಿಂದ
ಲೋಕಾರೋಗ್ಯ ಸಂಸ್ಥೆ (ಡಬ್ಲ್ಯೂಏಚ್ಓ)ಗನುಸಾರ, ವರ್ಧಿಷ್ಣು ಲೋಕದಲ್ಲಿ ವಾಸಿಸುತ್ತಿರುವವರಲ್ಲಿ ಸುಮಾರು 25 ಪ್ರತಿಶತದಷ್ಟು ಜನರಿಗೆ ಸುರಕ್ಷಿತವಾದ ನೀರು ದೊರಕುವುದಿಲ್ಲ. 66 ಪ್ರತಿಶತಕ್ಕಿಂತಲೂ ಹೆಚ್ಚು, ಅಂದರೆ ಕಡಿಮೆಪಕ್ಷ 250 ಕೋಟಿ ಜನರಿಗೆ ಸಾಕಷ್ಟು ನೈರ್ಮಲ್ಯದ ವ್ಯವಸ್ಥೆಯಿರುವುದಿಲ್ಲ. ಅನೇಕರಿಗೆ ಇದರ ಪರಿಣಾಮಗಳು, ರೋಗ ಮತ್ತು ಮರಣವಾಗಿವೆ.
ಇಂತಹ ಪರಿಸ್ಥಿತಿಗಳಲ್ಲಿ, ಒಳ್ಳೆಯ ಆರೋಗ್ಯಸೂತ್ರವನ್ನು ಕಾಪಾಡಿಕೊಳ್ಳುವುದು ಒಂದು ಪಂಥಾಹ್ವಾನವಾಗಿದೆ. ಆದರೂ, ನೀವು ವೈಯಕ್ತಿಕ ಆರೋಗ್ಯಸೂತ್ರವನ್ನು ಜೀವನರೀತಿಯಾಗಿ ಮಾಡಿಕೊಳ್ಳುವಲ್ಲಿ, ನಿಮ್ಮನ್ನು ಅನೇಕ ರೋಗಗಳಿಂದ ಕಾಪಾಡಿಕೊಳ್ಳುವಿರಿ. ನಿಮ್ಮ ದೇಹವನ್ನು ಪ್ರವೇಶಿಸಿ, ಅನಾರೋಗ್ಯವನ್ನು ಉಂಟುಮಾಡಬಲ್ಲ ಕ್ರಿಮಿಗಳಿಂದ ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಕಾಪಾಡಲು ನೀವು ತೆಗೆದುಕೊಳ್ಳಸಾಧ್ಯವಿರುವ ಆರು ಹೆಜ್ಜೆಗಳು ಇಲ್ಲಿವೆ.
1. ಮಲದೊಂದಿಗಿನ ಸಂಪರ್ಕದ ತರುವಾಯ ಮತ್ತು ಆಹಾರವನ್ನು ಸ್ಪರ್ಶಿಸುವ ಮುಂಚೆ, ನಿಮ್ಮ ಕೈಗಳನ್ನು ಸೋಪು ಮತ್ತು ನೀರಿನಿಂದ ತೊಳೆದುಕೊಳ್ಳಿರಿ.
ಕಾಯಿಲೆಯನ್ನು ತಡೆಗಟ್ಟುವ ಒಂದು ಪ್ರಾಮುಖ್ಯ ವಿಧವು, ನಿಮ್ಮ ಕುಟುಂಬದಲ್ಲಿರುವ ಪ್ರತಿಯೊಬ್ಬರೂ ತಮ್ಮ ಕೈಗಳನ್ನು ತೊಳೆದುಕೊಳ್ಳಸಾಧ್ಯವಾಗುವಂತೆ ಸೋಪು ಮತ್ತು ನೀರು ಯಾವಾಗಲೂ ಲಭ್ಯವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದೇ ಆಗಿದೆ. ಸೋಪು ಮತ್ತು ನೀರು, ಕೈಗಳಿಂದ ಕ್ರಿಮಿಗಳನ್ನು—ಆಹಾರದೊಳಗೆ ಇಲ್ಲವೆ ಬಾಯಿಯೊಳಗೆ ಸೇರಬಹುದಾದ ಕ್ರಿಮಿಗಳನ್ನು—ತೆಗೆದುಹಾಕುತ್ತದೆ. ಚಿಕ್ಕ ಮಕ್ಕಳು ಅನೇಕಾವರ್ತಿ ತಮ್ಮ ಬೆರಳುಗಳನ್ನು ತಮ್ಮ ಬಾಯಿಯೊಳಗೆ ಹಾಕಿಕೊಳ್ಳುವುದರಿಂದ, ಅವರ ಕೈಗಳನ್ನು ಪದೇ ಪದೇ ತೊಳೆಯುವುದು ಪ್ರಾಮುಖ್ಯ, ವಿಶೇಷವಾಗಿ ಅವರಿಗೆ ಊಟವನ್ನು ನೀಡುವ ಮೊದಲು.
ಪಾಯಿಖಾನೆಗೆ ಹೋಗಿಬಂದ ಮೇಲೆ, ಆಹಾರವನ್ನು ಸ್ಪರ್ಶಿಸುವ ಮುಂಚೆ, ಮತ್ತು ಆಗ ತಾನೇ ಮಲವಿಸರ್ಜನೆಮಾಡಿರುವ ಒಂದು ಶಿಶು ಇಲ್ಲವೆ ಮಗುವಿನ ಕುಂಡಿಯನ್ನು ತೊಳೆದ ಅನಂತರ, ನಿಮ್ಮ ಕೈಗಳನ್ನು ಸೋಪಿನಿಂದ ತೊಳೆದುಕೊಳ್ಳುವುದು ವಿಶೇಷವಾಗಿ ಪ್ರಾಮುಖ್ಯವಾಗಿದೆ.
2. ಒಂದು ಪಾಯಿಖಾನೆಯನ್ನು ಉಪಯೋಗಿಸಿರಿ.
ಕ್ರಿಮಿಗಳ ಹರಡುವಿಕೆಯನ್ನು ತಡೆಗಟ್ಟಲು, ಮಲವನ್ನು ಯೋಗ್ಯವಾಗಿ ತೊಲಗಿಸಿಬಿಡುವುದು ಅತ್ಯಾವಶ್ಯಕ. ಅನೇಕ ಕಾಯಿಲೆಗಳು, ವಿಶೇಷವಾಗಿ ಅತಿಭೇದಿಯು ಮಾನವ ಮಲದಲ್ಲಿರುವ ಕ್ರಿಮಿಗಳಿಂದ ಬರುತ್ತದೆ. ಈ ಕ್ರಿಮಿಗಳು, ಕುಡಿಯುವ ನೀರು ಇಲ್ಲವೆ ಆಹಾರದಲ್ಲಿ, ಕೈಗಳಿಗೆ, ಇಲ್ಲವೆ ಆಹಾರವನ್ನು ತಯಾರಿಸಲು ಇಲ್ಲವೆ ಬಡಿಸಲು ಬಳಸಿದ ಪಾತ್ರೆಗಳಿಗೆ ಮತ್ತು ಸ್ಥಳಗಳಿಗೆ ಹತ್ತಿಕೊಳ್ಳಸಾಧ್ಯವಿದೆ. ಅದು ಸಂಭವಿಸುವಾಗ, ಜನರು ಕ್ರಿಮಿಗಳನ್ನು ಸೇವಿಸಿ ಅಸ್ವಸ್ಥರಾಗಬಲ್ಲರು.
ಇದನ್ನು ತಡೆಗಟ್ಟಲಿಕ್ಕಾಗಿ, ಒಂದು ಪಾಯಿಖಾನೆಯನ್ನು ಉಪಯೋಗಿಸಿರಿ. ಪ್ರಾಣಿಗಳ ಮಲವು, ಮನೆಗಳಿಂದ ಮತ್ತು ನೀರಿನ ಮೂಲಗಳಿಂದ ದೂರ ಇಡಲ್ಪಡಬೇಕು. ವಯಸ್ಕರ ಮಲಕ್ಕಿಂತಲೂ ಶಿಶುಗಳ ಹಾಗೂ ಚಿಕ್ಕ ಮಕ್ಕಳ ಮಲವು ಹೆಚ್ಚು ಅಪಾಯಕಾರಿಯಾಗಿದೆ ಎಂಬುದನ್ನು ತಿಳಿದು ನೀವು ಆಶ್ಚರ್ಯಪಡಬಹುದು. ಆದುದರಿಂದ ಚಿಕ್ಕವರಿಗೂ ಪಾಯಿಖಾನೆಯ ಉಪಯೋಗವನ್ನು ಕಲಿಸಬೇಕು. ಮಕ್ಕಳು ಬೇರೆಲ್ಲಿಯಾದರೂ ಮಲವಿಸರ್ಜಿಸುವಾಗ, ಅದನ್ನು ಕೂಡಲೇ ಶುಚಿಮಾಡಿ, ಪಾಯಿಖಾನೆಯಲ್ಲಿ ಹಾಕಬೇಕು ಇಲ್ಲವೆ ಹೂತಿಡಬೇಕು.
ಪಾಯಿಖಾನೆಗಳನ್ನು ಶುಚಿಯಾಗಿಡಬೇಕು ಮತ್ತು ಮುಚ್ಚಿಡಬೇಕು.
3. ಶುದ್ಧವಾದ ನೀರನ್ನು ಬಳಸಿರಿ.
ಯಾವ ಕುಟುಂಬಗಳಿಗೆ ಶುದ್ಧವಾದ, ಕೊಳಾಯಿ ನೀರಿನ ಹೇರಳವಾದ ಸರಬರಾಯಿ ಇರುತ್ತದೊ ಅವರು, ಅಂತಹ ಸರಬರಾಯಿ ಇಲ್ಲದವರಿಗಿಂತ ಕಡಮೆ ಬಾರಿ ಅಸ್ವಸ್ಥರಾಗುತ್ತಾರೆ. ಯಾರಲ್ಲಿ ಕೊಳಾಯಿ ನೀರಿನ ವ್ಯವಸ್ಥೆಯಿಲ್ಲವೊ ಅವರು, ಬಾವಿಗಳನ್ನು ಮುಚ್ಚಿಡುವ ಮೂಲಕ ಮತ್ತು ಕುಡಿಯಲು, ಸ್ನಾನಮಾಡಲು, ಇಲ್ಲವೆ ತೊಳೆಯಲಿಕ್ಕಾಗಿ ಬಳಸಲ್ಪಡುವ ನೀರಿನಿಂದ ಹೊಲಸು ನೀರನ್ನು ದೂರವಿಡುವ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಸಾಧ್ಯವಿದೆ. ಪ್ರಾಣಿಗಳನ್ನು ಮನೆಯಿಂದ ಮತ್ತು ಕುಡಿಯುವ ನೀರಿನಿಂದ ದೂರವಿಡುವುದೂ ಪ್ರಾಮುಖ್ಯವಾಗಿದೆ.
ರೋಗದಿಂದ ನಿಮ್ಮನ್ನು ಕಾಪಾಡಿಕೊಳ್ಳುವ ಮತ್ತೊಂದು ವಿಧವು, ನೀರನ್ನು ತುಂಬಿಡಲು ಮತ್ತು ಶೇಖರಿಸಿಡಲು ಬಳಸಲ್ಪಡುವ ಬಕೆಟ್ಗಳು, ಹಗ್ಗಗಳು, ಮತ್ತು ಹಂಡೆಗಳನ್ನು ಸಾಧ್ಯವಾದಷ್ಟು ಶುದ್ಧವಾಗಿಡುವುದೇ ಆಗಿದೆ. ಉದಾಹರಣೆಗೆ, ಒಂದು ಬಕೆಟನ್ನು ನೆಲದ ಮೇಲೆ ಬಿಡುವ ಬದಲಿಗೆ ಅದನ್ನು ಮೇಲೆ ತೂಗುಹಾಕುವುದು ಒಳ್ಳೆಯದು.
ಮನೆಯಲ್ಲಿಡುವ ಕುಡಿಯುವ ನೀರನ್ನು, ಶುದ್ಧವಾದ, ಮುಚ್ಚಳವಿರುವ ಪಾತ್ರೆಯಲ್ಲಿಡತಕ್ಕದ್ದು. ಆ ಪಾತ್ರೆಯಿಂದ ನೀರನ್ನು ತೆಗೆಯುವಾಗ, ಒಂದು ಶುದ್ಧವಾದ ಸೌಟು ಇಲ್ಲವೆ ಬಟ್ಟಲಿನಿಂದ ತೆಗೆಯತಕ್ಕದ್ದು. ಕುಡಿಯುವ ನೀರಿನಲ್ಲಿ ಜನರು ತಮ್ಮ ಕೈಗಳನ್ನು ಹಾಕುವಂತೆ ಅಥವಾ ನೀರನ್ನು ಶೇಖರಿಸಿಟ್ಟ ಪಾತ್ರೆಯಿಂದ ನೀರನ್ನು ನೇರವಾಗಿ ಕುಡಿಯುವಂತೆ ಅನುಮತಿಸದಿರಿ.
4. ಕುಡಿಯುವ ನೀರು ಸುರಕ್ಷಿತವಾದ ಕೊಳಾಯಿಯ ಸರಬರಾಯಿಯಿಂದ ಬರದಿದ್ದಲ್ಲಿ, ಅದನ್ನು ಕುದಿಸಿರಿ.
ಅತ್ಯಂತ ಸುರಕ್ಷಿತವಾದ ಕುಡಿಯುವ ನೀರು ಸಾಮಾನ್ಯವಾಗಿ ಕೊಳಾಯಿಯ ಸರಬರಾಯಿಯಿಂದ ಬರುತ್ತದೆ. ಬೇರೆ ಮೂಲಗಳಿಂದ ಬರುವ ನೀರು ಶುದ್ಧವಾಗಿ ಕಂಡರೂ, ಅದರಲ್ಲಿ ಕ್ರಿಮಿಗಳಿರುವ ಸಾಧ್ಯತೆ ಹೆಚ್ಚಾಗಿರುತ್ತದೆ.
ನೀರನ್ನು ಕುದಿಸಿದಾಗ ಅದು ಕ್ರಿಮಿಗಳನ್ನು ಕೊಲ್ಲುತ್ತದೆ. ಆದುದರಿಂದ ನೀವು ನೀರನ್ನು ಕೊಳಗಳು, ಒರತೆಗಳು, ಇಲ್ಲವೆ ಟ್ಯಾಂಕ್ಗಳಿಂದ ತರುವಲ್ಲಿ, ಅದನ್ನು ಕುದಿಸಿ, ಕುಡಿಯುವ ಮೊದಲು ಅದು ತಣ್ಣಗಾಗುವಂತೆ ಬಿಡುವುದು ವಿವೇಕಪ್ರದವು. ಕ್ರಿಮಿರಹಿತ ಕುಡಿಯುವ ನೀರು, ವಿಶೇಷವಾಗಿ ಶಿಶುಗಳಿಗೆ ಮತ್ತು ಚಿಕ್ಕ ಮಕ್ಕಳಿಗೆ ಪ್ರಾಮುಖ್ಯವಾಗಿದೆ, ಏಕೆಂದರೆ ಕ್ರಿಮಿಗಳ ವಿರುದ್ಧ ಅವರಿಗೆ ವಯಸ್ಕರಿಗಿಂತ ಕಡಮೆ ನಿರೋಧಕ ಶಕ್ತಿಯಿರುತ್ತದೆ.
ಕುಡಿಯುವ ನೀರನ್ನು ಕುದಿಸಲು ಸಾಧ್ಯವಿಲ್ಲದಿದ್ದಲ್ಲಿ, ಪಾರದರ್ಶಕವಾದ ಪ್ಲಾಸ್ಟಿಕ್ ಇಲ್ಲವೆ ಗಾಜಿನಿಂದ ತಯಾರಿಸಲ್ಪಟ್ಟಿರುವ, ಮುಚ್ಚಳವಿರುವ ಪಾತ್ರೆಯಲ್ಲಿ ಅದನ್ನು ಶೇಖರಿಸಿಡಿರಿ. ತದನಂತರ, ನೀರನ್ನು ಬಳಸುವ ಮೊದಲು ಆ ಪಾತ್ರೆಯನ್ನು ಎರಡು ದಿನಗಳ ಮಟ್ಟಿಗೆ ಬಿಸಿಲಿನಲ್ಲಿಡಿರಿ.
5. ನಿಮ್ಮ ಆಹಾರವನ್ನು ಶುದ್ಧವಾಗಿಡಿರಿ.
ಹಸಿಯಾಗಿ ತಿನ್ನಲ್ಪಡಬೇಕಾದ ಆಹಾರಗಳನ್ನು ಚೆನ್ನಾಗಿ ಶುಚಿಮಾಡಬೇಕು. ಇತರ ಆಹಾರಗಳು, ವಿಶೇಷವಾಗಿ ಮಾಂಸ ಮತ್ತು ಪಕ್ಷಿಮಾಂಸವು ಚೆನ್ನಾಗಿ ಬೇಯಿಸಲ್ಪಡಬೇಕು.
ಆಹಾರವನ್ನು ಬೇಯಿಸಿದ ಕೂಡಲೆ ತಿನ್ನುವುದು ಬಹಳ ಒಳ್ಳೆಯದು, ಆ ರೀತಿಯಲ್ಲಿ ಕೆಟ್ಟುಹೋಗಲಿಕ್ಕೆ ಅದಕ್ಕೆ ಸಮಯವಿರದು. ಬೇಯಿಸಿದ ಆಹಾರವನ್ನು ಐದು ತಾಸುಗಳಿಗಿಂತಲೂ ಹೆಚ್ಚಿನ ಸಮಯದ ವರೆಗೆ ಇಡಬೇಕಾದಲ್ಲಿ, ನೀವು ಅದನ್ನು ಬಿಸಿಯಾಗಿ ಆಗಲಿ ಇಲ್ಲವೆ ಫ್ರಿಜ್ನಲ್ಲಾಗಲಿ ಇಡಬೇಕು. ಅದನ್ನು ಸೇವಿಸುವ ಮೊದಲು ನೀವು ಮತ್ತೊಮ್ಮೆ ಚೆನ್ನಾಗಿ ಬಿಸಿಮಾಡಬೇಕು.
ಹಸಿಮಾಂಸದಲ್ಲಿ ಸಾಮಾನ್ಯವಾಗಿ ಕ್ರಿಮಿಗಳಿರುತ್ತವೆ, ಆದುದರಿಂದ ನೀವು ಬೇಯಿಸಿರುವ ಆಹಾರವನ್ನು ಅದು ತಗಲುವಂತೆ ನೀವು ಬಿಡಬಾರದು. ಹಸಿಮಾಂಸವನ್ನು ಸಿದ್ಧಪಡಿಸಿದ ಮೇಲೆ, ಅದಕ್ಕೆ ತಾಗಿರುವ ಪಾತ್ರೆಗಳನ್ನು ಮತ್ತು ಅಡುಗೆಕೋಣೆಯ ಯಾವುದೇ ಸ್ಥಳಗಳನ್ನು ಶುಚಿಗೊಳಿಸಿರಿ.
ಆಹಾರವನ್ನು ತಯಾರಿಸಲಿಕ್ಕಾಗಿರುವ ಸ್ಥಳಗಳು ಯಾವಾಗಲೂ ಶುದ್ಧವಾಗಿಡಲ್ಪಡಬೇಕು. ಆಹಾರವನ್ನು ಮುಚ್ಚಿಡಬೇಕು ಮತ್ತು ನೊಣಗಳು, ಇಲಿಗಳು, ಹೆಗ್ಗಣಗಳು, ಮತ್ತು ಇತರ ಪ್ರಾಣಿಗಳಿಗೆ ಎಟುಕದಂತೆ ಇಡಬೇಕು.
6. ಮನೆಯ ಕಸವನ್ನು ಸುಟ್ಟುಹಾಕಿ ಇಲ್ಲವೆ ಹೂತಿಡಿ.
ಕ್ರಿಮಿಗಳನ್ನು ಹರಡಿಸುವ ನೊಣಗಳು, ಆಹಾರದ ಕಸದಲ್ಲಿ ಸಂತಾನಾಭಿವೃದ್ಧಿಮಾಡಲು ಇಷ್ಟಪಡುತ್ತವೆ. ಆದುದರಿಂದ ಮನೆಯ ಕಸವನ್ನು ನೆಲದ ಮೇಲೆ ಬಿಸಾಡಬಾರದು. ಪ್ರತಿದಿನ ಅದನ್ನು ಹೂತಿಡಬೇಕು, ಸುಟ್ಟುಹಾಕಬೇಕು, ಇಲ್ಲವೆ ಬೇರೆ ಯಾವುದೇ ವಿಧದಲ್ಲಿ ವಿಸರ್ಜಿಸಬೇಕು.
ಈ ಮಾರ್ಗದರ್ಶನಗಳನ್ನು ಅನ್ವಯಿಸುವ ಮೂಲಕ, ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ನೀವು ಅತಿಭೇದಿ, ಕಾಲರ, ಟೈಫೈಡ್, ಜಂತುಗಳ ಸೋಂಕುಗಳು, ಆಹಾರವಿಷ, ಮತ್ತು ಇತರ ಅನೇಕ ಕಾಯಿಲೆಗಳಿಂದ ಕಾಪಾಡಲು ಸಹಾಯ ಮಾಡಬಲ್ಲಿರಿ.
[ಕೃಪೆ]
ಮೂಲ: ಜೀವಿತಕ್ಕಾಗಿ ನಿಜಾಂಶಗಳು (ಇಂಗ್ಲಿಷ್), ವಿಶ್ವ ಸಂಸ್ಥೆಯ ಮಕ್ಕಳ ನಿಧಿ, ವಿಶ್ವ ಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ, ಮತ್ತು ಸಾಂಸ್ಕೃತಿಕ ಸಂಸ್ಥೆ, ಮತ್ತು ಡಬ್ಲ್ಯೂಏಚ್ಓ ಸಂಸ್ಥೆಯಿಂದ ಜಂಟಿಯಾಗಿ ಪ್ರಕಾಶಿಸಲ್ಪಟ್ಟದ್ದು.