ಯೆಹೋವನು ನಮ್ಮ ಮಾರ್ಗವನ್ನು ಸುಗಮಗೊಳಿಸಿದನು
ನಾನು 1924ರಲ್ಲಿ, ಸ್ವಿಟ್ಸರ್ಲೆಂಡ್ನ ಸೂಕ್ ಜಿಲ್ಲೆಯ ಕಾಮ್ ನಗರದ ಹತ್ತಿರ ಜನಿಸಿದೆ. ನನ್ನ ಹೆತ್ತವರಿಗೆ 13 ಮಂದಿ ಮಕ್ಕಳಿದ್ದರು—10 ಹುಡುಗರು ಮತ್ತು 3 ಹುಡುಗಿಯರು. ನಾನು ಜ್ಯೇಷ್ಠಪುತ್ರನಾಗಿದ್ದೆ. ಇಬ್ಬರು ಹುಡುಗರು ತುಂಬ ಎಳೆಯರಾಗಿದ್ದಾಗಲೇ ಸತ್ತುಹೋದರು. ನಮ್ಮಲ್ಲಿ ಉಳಿದವರು, ಮಹಾ ಆರ್ಥಿಕ ಕುಸಿತದ ಸಮಯದಲ್ಲಿ, ಒಂದು ಹೊಲದ ಮನೆಯಲ್ಲಿ ಕಟ್ಟುನಿಟ್ಟಿನ ಕ್ಯಾಥೊಲಿಕ್ ತರಬೇತಿಯನ್ನು ಪಡೆದೆವು.
ಅಪ್ಪ ಒಬ್ಬ ಪ್ರಾಮಾಣಿಕ, ಉಪಕಾರ ಬುದ್ಧಿಯ ವ್ಯಕ್ತಿಯಾಗಿದ್ದರು, ಆಗಾಗ ಅವರು ಕೋಪದ ಕೆರಳಿಕೆಗಳಿಗೊಳಗಾಗುತ್ತಿದ್ದರು. ಒಮ್ಮೊಮ್ಮೆ ಅವರು, ಅಮ್ಮ ಅನುಮಾನ ಪ್ರಕೃತಿಯಿಂದ ಅವರನ್ನು ಅನ್ಯಾಯವಾಗಿ ನಿಂದಿಸುತ್ತಿದ್ದಾಗ ಅಮ್ಮನ್ನನ್ನು ಹೊಡೆಯುತ್ತಲೂ ಇದ್ದರು. ಅವರ ದಾಂಪತ್ಯನಿಷ್ಠೆಯನ್ನು ಸಂದೇಹಿಸಲು ಅಮ್ಮನಿಗೆ ಯಾವುದೇ ಕಾರಣ ಇರಲಿಲ್ಲವಾದರೂ, ನಮ್ಮ ನೆರೆಹೊರೆಯ ಸ್ತ್ರೀಯರೊಂದಿಗೆ ಅವರು ಹರಟುವುದನ್ನು ಅಮ್ಮನಿಗೆ ಸಹಿಸಲಾಗುತ್ತಿರಲಿಲ್ಲ. ಇದು ನನ್ನನ್ನು ತುಂಬ ಸಂಕಟಗೊಳಿಸುತ್ತಿತ್ತು.
ಅಮ್ಮ ತೀರ ಮೂಢನಂಬಿಕೆಯವರಾಗಿದ್ದರು. ಅವರು ಚಿಕ್ಕಪುಟ್ಟ ಘಟನೆಗಳನ್ನೂ, “ಪರ್ಗಟರಿಯಲ್ಲಿರುವ ದರಿದ್ರ ಪ್ರಾಣಗಳಿಂದ” ಬರುವ ಚಿಹ್ನೆಯೆಂದು ಅರ್ಥೈಸುತ್ತಿದ್ದರು. ನಾನು ಅಂತಹ ಅವಿಚಾರಿತ ನಂಬಿಕೆಯನ್ನು ದ್ವೇಷಿಸುತ್ತಿದ್ದೆ. ಆದರೆ ಪಾದ್ರಿಗಳು, ಅವರ ಸುಳ್ಳು ಧಾರ್ಮಿಕ ವಿಚಾರವನ್ನು ಬೆಂಬಲಿಸುತ್ತಿದ್ದ ವಾಚನ ಸಾಮಗ್ರಿಯೊಂದಿಗೆ ಅವರ ಮೂಢನಂಬಿಕೆಗಳನ್ನು ಪ್ರೋತ್ಸಾಹಿಸುತ್ತಿದ್ದರು.
ನನಗೆ ಪ್ರಶ್ನೆಗಳಿದ್ದವು
ನನ್ನ ಬಾಲ್ಯಾವಸ್ಥೆಯಿಂದಲೂ, ದೇವರ ಕುರಿತ ಮತ್ತು ಮನುಷ್ಯನ ಅಂತ್ಯಫಲದ ಕುರಿತಾದ ಪ್ರಶ್ನೆಗಳು ನನ್ನ ಮನಸ್ಸನ್ನು ತುಂಬಿದ್ದವು. ನಾನು ತರ್ಕಬದ್ಧವಾದ ತೀರ್ಮಾನಗಳನ್ನು ಮಾಡಲು ಪ್ರಯತ್ನಿಸಿದೆ, ಆದರೆ ಇದ್ದ ವಿರೋಧೋಕ್ತಿಗಳೊ ಅತಿರೇಕ! ಸಂತರು, ಅದ್ಭುತಗಳು ಮತ್ತು ಇನ್ನು ಮುಂತಾದವುಗಳ ಕುರಿತಾದ ಕ್ಯಾಥೊಲಿಕ್ ಪ್ರಕಾಶನಗಳನ್ನು ನಾನು ಓದಿದೆ. ಆದರೆ ಈ ಪ್ರಕಾಶನಗಳು ನನ್ನ ತರ್ಕಪ್ರಜ್ಞೆಯನ್ನು ತೃಪ್ತಿಗೊಳಿಸಲಿಲ್ಲ. ನಾನು ಕತ್ತಲೆಯಲ್ಲಿ ತಡಕಾಡುತ್ತಿದ್ದೆನೊ ಎಂಬಂತೆ ನನಗನಿಸಿತು.
ನನಗಿದ್ದ ಪ್ರಶ್ನೆಗಳ ಕುರಿತಾಗಿ ಚಿಂತನೆಮಾಡಬಾರದೆಂದು ಸ್ಥಳಿಕ ಪಾದ್ರಿಯು ನನಗೆ ಬುದ್ಧಿಹೇಳಿದನು. ಎಲ್ಲವನ್ನು ತಿಳಿದುಕೊಳ್ಳಲು ಬಯಸುವುದು ಅಹಂಕಾರದ ಒಂದು ಚಿಹ್ನೆ, ಮತ್ತು ದೇವರು ಅಹಂಕಾರಿಗಳನ್ನು ವಿರೋಧಿಸುತ್ತಾನೆಂದು ಅವನು ಹೇಳಿದನು. ತಮ್ಮ ಪಾಪಗಳನ್ನು ನಿವೇದಿಸದೆ ಸಾಯುವ ಯಾರನ್ನೇ ಆಗಲಿ ದೇವರು ಒಂದು ಉರಿಯುತ್ತಿರುವ ನರಕದಲ್ಲಿ ನಿತ್ಯವಾಗಿ ಹಿಂಸಿಸುವನೆಂಬ ವಿಷಯವು ನನಗೆ ವಿಶೇಷವಾಗಿ ಅಸಹ್ಯಕರವಾದ ಬೋಧನೆಯಾಗಿತ್ತು. ಭೂಮಿಯ ಮೇಲಿರುವ ಹೆಚ್ಚಿನ ಮಾನವರು ನಿತ್ಯಕ್ಕೂ ಹಿಂಸಿಸಲ್ಪಡುವರೆಂಬುದನ್ನು ಇದು ಅರ್ಥೈಸಿತ್ತಾದುದರಿಂದ, ‘ಇದನ್ನು ದೇವರ ಪ್ರೀತಿಯೊಂದಿಗೆ ಹೇಗೆ ಹೊಂದಿಸಸಾಧ್ಯವಿದೆ?’ ಎಂದು ನಾನು ಅನೇಕವೇಳೆ ಕುತೂಹಲಪಟ್ಟೆ.
ಪಾಪನಿವೇದನೆಯ ಕ್ಯಾಥೊಲಿಕ್ ಆಚರಣೆಯ ಕುರಿತೂ ನಾನು ಪ್ರಶ್ನಿಸಿದೆ. ಅಶುದ್ಧವಾದ ಯೋಚನೆಗಳು, ಒಬ್ಬ ಪಾದ್ರಿಯ ಬಳಿ ಪಾಪನಿವೇದಿಸುವುದನ್ನು ಅವಶ್ಯಪಡಿಸುವ ಗಂಭೀರ ಪಾಪವಾಗಿತ್ತೆಂದು ಕ್ಯಾಥೊಲಿಕ್ ಶಾಲೆಯಲ್ಲಿ ನಮಗೆ ಹೇಳಲ್ಪಟ್ಟಾಗ, ನಾನು ಹೆದರಿಹೋದೆ. ನಾನು ಹೀಗೆ ಯೋಚಿಸುತ್ತಿದ್ದೆ, ‘ನಾನು ಎಲ್ಲವನ್ನೂ ಮರೆಯದೆ ನಿವೇದಿಸಿದೆನೊ? ಅಥವಾ, ನನ್ನ ನಿವೇದನೆಯನ್ನು ನಿರರ್ಥಕಗೊಳಿಸುತ್ತಾ, ನನ್ನ ಪಾಪಗಳು ಕ್ಷಮಿಸಲ್ಪಡದೆ ಹೋಗುವಂತೆ ಮಾಡುತ್ತಾ, ನಾನು ಏನನ್ನಾದರೂ ಮರೆತುಬಿಟ್ಟೆನೊ?’ ಹೀಗೆ, ದೇವರ ಕರುಣೆ ಮತ್ತು ಕ್ಷಮಿಸಲಿಕ್ಕಾಗಿರುವ ಆತನ ಸಿದ್ಧತೆಯ ಕುರಿತಾಗಿ ಸಂದೇಹಗಳು ನನ್ನ ಹೃದಯದಲ್ಲಿ ಬಿತ್ತಲ್ಪಟ್ಟವು.
ಸುಮಾರು ಮೂರು ನಾಲ್ಕು ವರ್ಷಗಳ ವರೆಗೆ, ನನ್ನನ್ನು ದಣಿಸಿದಂತಹ ಖಿನ್ನಗೊಳಿಸುವ ಯೋಚನೆಗಳ ವಿರುದ್ಧ ನಾನು ಹೋರಾಡಿದೆ. ದೇವರಲ್ಲಿ ಎಲ್ಲ ನಂಬಿಕೆಯನ್ನು ತೊರೆಯುವುದರ ಕುರಿತಾಗಿ ನಾನು ಯೋಚಿಸಿದೆ. ಆದರೆ ಆಗ, ‘ನಾನು ಪಟ್ಟುಹಿಡಿದರೆ, ನಿಸ್ಸಂದೇಹವಾಗಿ ನಾನು ಸರಿಯಾದ ಮಾರ್ಗವನ್ನು ಕಂಡುಕೊಳ್ಳುವೆ’ ಎಂಬುದಾಗಿ ನೆನಸುತ್ತಿದ್ದೆ. ಸಕಾಲದಲ್ಲಿ, ನಾನು ದೇವರ ಅಸ್ತಿತ್ವದಲ್ಲಿ ಭರವಸೆಯನ್ನು ವಿಕಸಿಸಿಕೊಂಡೆ, ಆದರೆ ನನ್ನ ಧಾರ್ಮಿಕ ನಂಬಿಕೆಗಳ ಕುರಿತಾಗಿ ಅನಿಶ್ಚಿತತೆಯು ನನ್ನನ್ನು ಕಾಡುತ್ತಿತ್ತು.
ನನಗೆ ಆರಂಭದಲ್ಲಿ ಸಿಕ್ಕಿದಂತಹ ಉಪದೇಶದ ಫಲಿತಾಂಶವಾಗಿ, ಯೇಸು ಕ್ರಿಸ್ತನು ಅಪೊಸ್ತಲ ಪೇತ್ರನಿಗೆ, “ಈ ಬಂಡೆಯ ಮೇಲೆ ನಾನು ನನ್ನ ಚರ್ಚನ್ನು ಕಟ್ಟುವೆನು” ಎಂದು ಹೇಳಿದಾಗ ಅವನ ಮನಸ್ಸಿನಲ್ಲಿ ರೋಮನ್ ಕ್ಯಾಥೊಲಿಕ್ ಚರ್ಚ್ ಇತ್ತೆಂದು ನಾನು ನಂಬಿದೆ. (ಮತ್ತಾಯ 16:18, ಕ್ಯಾಥೊಲಿಕ್ ಡೂಯೇ ವರ್ಷನ್) ಚರ್ಚಿನಲ್ಲಿದ್ದ ಒಳ್ಳೆಯ ವೈಶಿಷ್ಟ್ಯಗಳು ಕಟ್ಟಕಡೆಗೆ ಜಯಹೊಂದುವವು ಎಂದು ನಾನು ನಂಬಲಾರಂಭಿಸಿದೆ, ಮತ್ತು ಆ ಉದ್ದೇಶವನ್ನು ಸಾಧಿಸಲಿಕ್ಕೋಸ್ಕರ ನಾನು ಚರ್ಚಿನೊಂದಿಗೆ ಸಹಕರಿಸಲು ಬಯಸಿದೆ.
ವಿವಾಹ ಮತ್ತು ಕುಟುಂಬ
ಕುಟುಂಬದಲ್ಲಿನ ಹಿರಿಯ ಮಗನಾಗಿದ್ದುದರಿಂದ, ನನ್ನ ಅನಂತರದ ತಮ್ಮನು ನನ್ನ ಜಾಗವನ್ನು ತೆಗೆದುಕೊಳ್ಳಲು ಶಕ್ತನಾಗುವ ತನಕ ನಾನು ತಂದೆಯೊಂದಿಗೆ ಹೊಲದಲ್ಲಿ ಕೆಲಸಮಾಡಿದೆ. ಅನಂತರ ನಾನು ಒಂದು ಕ್ಯಾಥೊಲಿಕ್ ಕೃಷಿ ಶಾಲೆಗೆ ಹೋಗಿ, ಸ್ನಾತಕೋತ್ತರ ಪದವಿಯನ್ನು ಪಡೆದೆ. ತದನಂತರ, ನಾನು ಒಬ್ಬ ವಿವಾಹ ಸಂಗಾತಿಗಾಗಿ ಹುಡುಕಲಾರಂಭಿಸಿದೆ.
ನನ್ನ ತಂಗಿಯರಲ್ಲಿ ಒಬ್ಬಳ ಮೂಲಕ ನನಗೆ ಮಾರಿಯಳ ಪರಿಚಯವಾಯಿತು. ನಿತ್ಯಜೀವಕ್ಕಾಗಿ ತಾನು ಯಾರೊಂದಿಗೆ ಶ್ರಮಿಸಸಾಧ್ಯವಿದೆಯೊ ಅಂತಹ ಒಬ್ಬ ಗಂಡನಿಗಾಗಿ ಅವಳು ಪ್ರಾರ್ಥಿಸಿದ್ದಳೆಂದು ನನಗೆ ತಿಳಿದುಬಂತು. ನಮ್ಮ ವಿವಾಹದ ಪ್ರಕಟನೆ ಪತ್ರದಲ್ಲಿ ನಾವು ಬರೆದುದು: “ಪ್ರೀತಿಯಿಂದ ಐಕ್ಯರಾಗಿ ನಾವು ಸಂತೋಷವನ್ನು ಹುಡುಕುತ್ತೇವೆ, ನಮ್ಮ ದೃಷ್ಟಿಯನ್ನು ದೇವರ ಮೇಲೆ ನೆಡುತ್ತೇವೆ. ನಮ್ಮ ಮಾರ್ಗವು ಜೀವಿತವಾಗಿದೆ ಮತ್ತು ನಮ್ಮ ಗುರಿ ನಿತ್ಯ ಪರಮ ಸುಖ.” ನಾವು ಸೂರಿಕ್ನ ಬಳಿಯ ಕಾನ್ವೆಂಟ್ ಫಾರ್ನಲ್ಲಿ, 1958ರ ಜೂನ್ 26ರಂದು ವಿವಾಹಿತರಾದೆವು.
ಮಾರಿಯ ಮತ್ತು ನನಗೆ ಸಮಾನವಾದ ಹಿನ್ನೆಲೆಗಳಿದ್ದವು. ತುಂಬ ಧರ್ಮಶ್ರದ್ಧೆಯುಳ್ಳ ಒಂದು ಕುಟುಂಬಕ್ಕೆ ಸೇರಿದವಳಾಗಿದ್ದ ಆಕೆ, ಏಳು ಮಕ್ಕಳಲ್ಲಿ ಹಿರಿಯವಳಾಗಿದ್ದಳು. ಅವರಲ್ಲಿ ಎಲ್ಲರನ್ನು ಹೊಲದ ಕೆಲಸಗಳಲ್ಲಿ, ಶಾಲಾ ಕೆಲಸದಲ್ಲಿ, ಮತ್ತು ಚರ್ಚಿಗೆ ಹಾಜರಾಗುವುದರಲ್ಲಿ ಕಾರ್ಯಮಗ್ನರನ್ನಾಗಿ ಇರಿಸಲಾಯಿತು. ಹೀಗಿರುವುದರಿಂದ ಆಟವಾಡಲು ಕೊಂಚವೇ ಸಮಯವಿತ್ತು. ನಮ್ಮ ವಿವಾಹದ ಆರಂಭದ ವರ್ಷಗಳು ಸುಲಭವಾಗಿರಲಿಲ್ಲ. ಧಾರ್ಮಿಕ ವಿಷಯಗಳ ಕುರಿತಾದ ನನ್ನ ಅನೇಕ ಪ್ರಶ್ನೆಗಳ ಕಾರಣದಿಂದ, ತಾನು ಸರಿಯಾದ ಪುರುಷನನ್ನು ಮದುವೆಯಾಗಿದ್ದೆನೊ ಇಲ್ಲವೊ ಎಂದು ಮಾರಿಯ ಸಂದೇಹಿಸಲಾರಂಭಿಸಿದಳು. ಆಕೆ ಚರ್ಚಿನ ಬೋಧನೆಗಳು ಅಥವಾ ಯುದ್ಧಗಳು, ದಂಡಯಾತ್ರೆಗಳು ಮತ್ತು ವಿಚಾರಣಾ ತನಿಖೆಗಳನ್ನು ಬೆಂಬಲಿಸುವ ಅದರ ಆಚರಣೆಯನ್ನು ಸಂದೇಹಿಸಲು ನಿರಾಕರಿಸಿದಳು. ಆದಾಗಲೂ, ನಾವಿಬ್ಬರೂ ನಮ್ಮ ಭರವಸೆಯನ್ನು ದೇವರಲ್ಲಿಟ್ಟೆವು ಮತ್ತು ನಾವು ಆತನ ಚಿತ್ತವನ್ನು ನಮ್ಮಿಂದಾದಷ್ಟನ್ನು ಮಾಡಲು ಪ್ರಯತ್ನಿಸುವಷ್ಟು ಸಮಯ ಆತನು ನಮ್ಮನ್ನೆಂದೂ ಬಿಟ್ಟುಬಿಡನೆಂಬ ಮನವರಿಕೆಯುಳ್ಳವರಾಗಿದ್ದೆವು.
1959ರಲ್ಲಿ ನಾವು ಪೂರ್ವ ಸ್ವಿಟ್ಸರ್ಲೆಂಡ್ನಲ್ಲಿ ಹಾಮ್ಬರ್ಗ್ನ ಹತ್ತಿರ ಒಂದು ಫಾರ್ಮನ್ನು ಗುತ್ತಿಗೆಗೆ ಪಡೆದೆವು. 31 ವರ್ಷಗಳ ತನಕ ಇದು ನಮ್ಮ ಮನೆಯಾಗಿತ್ತು. 1960ರ ಮಾರ್ಚ್ 6ರಂದು, ನಮ್ಮ ಮೊದಲ ಮಗನಾದ ಯೋಸೆಫ್ ಹುಟ್ಟಿದನು. ಅವನ ಹಿಂದೆ ಆರು ತಮ್ಮಂದಿರು ಮತ್ತು ಒಬ್ಬ ತಂಗಿ ರಾಯೆಲ್ ಹುಟ್ಟಿದರು. ಮಾರಿಯ, ಆಳವಾಗಿ ಬೇರೂರಿರುವ ತತ್ತ್ವಗಳಿಗೆ ನಂಬಿಗಸ್ತಳಾಗಿರುವ ಒಬ್ಬ ನ್ಯಾಯಯುಕ್ತ ಮತ್ತು ನಿಷ್ಪಕ್ಷಪಾತಿ ತಾಯಿಯಾಗಿ ತನ್ನನ್ನು ರುಜುಪಡಿಸಿಕೊಂಡಿದ್ದಾಳೆ. ಆಕೆಯು ಕುಟುಂಬಕ್ಕೆ ನಿಜವಾದ ಆಶೀರ್ವಾದವಾಗಿ ಪರಿಣಮಿಸಿದ್ದಾಳೆ.
ಬೈಬಲ್ ಸತ್ಯವನ್ನು ಹುಡುಕುವುದು
ಕ್ರಮೇಣವಾಗಿ, ನಮ್ಮ ಧಾರ್ಮಿಕ ಅಜ್ಞಾನವು ಹೆಚ್ಚೆಚ್ಚು ಅಸಹನೀಯವಾಗಿ ಪರಿಣಮಿಸಿತು. 1960ರ ಕೊನೆಯ ಭಾಗದಲ್ಲಿ, ನಾವು ಕ್ಯಾಥೊಲಿಕ್ ಜನರ ಪ್ರೌಢ ಶಾಲೆಯಲ್ಲಿ ಉಪನ್ಯಾಸಗಳಿಗೆ ಹಾಜರಾಗಲಾರಂಭಿಸಿದೆವು, ಆದರೆ ನಾವು ಮನೆಗೆ ಹಿಂದಿರುಗುತ್ತಿದ್ದಾಗ ಹಿಂದೆಂದಿಗಿಂತಲೂ ಹೆಚ್ಚು ಗಲಿಬಿಲಿಗೊಂಡವರಾಗಿರುತ್ತಿದ್ದೆವು. ಭಾಷಣಕರ್ತರು, ಶಾಸ್ತ್ರೀಯ ಪುರಾವೆಯಿಲ್ಲದೆ ತಮ್ಮ ಸ್ವಂತ ದೃಷ್ಟಿಕೋನಗಳನ್ನು ವಿವರಿಸುತ್ತಿದ್ದರು. 1970ರ ಆದಿ ಭಾಗದಲ್ಲಿ, ನಾನು ಯೇಸುವಿನ ಮಾತುಗಳ ಕುರಿತು ಪರ್ಯಾಲೋಚಿಸಿದೆ: “ನೀವು ತಂದೆಯನ್ನು ಏನಾದರೂ ಬೇಡಿಕೊಂಡರೆ ಅದನ್ನು ಆತನು ನನ್ನ ಹೆಸರಿನ ಮೇಲೆ ನಿಮಗೆ ಕೊಡುವನು. . . . ಬೇಡಿಕೊಳ್ಳಿರಿ, ನಿಮಗೆ ಸಿಕ್ಕುವದು.”—ಯೋಹಾನ 16:23, 24.
ದೇವರ ವಾಕ್ಯದ ಈ ಮೇಲಿನ ಆಶ್ವಾಸನೆಯು, ನಾನು ಪದೇ ಪದೇ ಹೀಗೆ ಪ್ರಾರ್ಥಿಸುವಂತೆ ಮಾಡಿತು: “ತಂದೆಯೇ, ಕ್ಯಾಥೊಲಿಕ್ ಚರ್ಚ್ ನಿಜ ಧರ್ಮವಾಗಿರುವಲ್ಲಿ, ದಯವಿಟ್ಟು ಅದನ್ನು ನನಗೆ ಸುಸ್ಪಷ್ಟ ರೀತಿಯಲ್ಲಿ ತೋರಿಸು. ಆದರೆ ಅದು ಸುಳ್ಳು ಧರ್ಮವಾಗಿರುವಲ್ಲಿ, ಅದನ್ನು ನನಗೆ ಅಷ್ಟೇ ಸ್ಪಷ್ಟವಾಗಿ ತೋರಿಸು ಮತ್ತು ನಾನು ಅದನ್ನು ಎಲ್ಲರಿಗೆ ಉದ್ಘೋಷಿಸುವೆನು.” “ಬೇಡಿಕೊಳ್ಳುತ್ತಾ ಇರ್ರಿ” (NW) ಎಂದು ಯೇಸು ಪರ್ವತ ಪ್ರಸಂಗದಲ್ಲಿ ಕೊಟ್ಟ ಉಪದೇಶಕ್ಕೆ ಹೊಂದಿಕೆಯಲ್ಲಿ ನಾನು ಪುನಃ ಪುನಃ ಬೇಡಿಕೊಂಡೆ.—ಮತ್ತಾಯ 7:7, 8.
ಮಾರಿಯಳೊಂದಿಗಿನ ನನ್ನ ಸಂಭಾಷಣೆಗಳು—ವಿಶೇಷವಾಗಿ, 1960ಗಳಲ್ಲಿ “ಸಂತರ” ಆರಾಧನೆ, ಶುಕ್ರವಾರಗಳಂದು ಮಾಂಸದ ತಿನ್ನುವಿಕೆ, ಇನ್ನು ಮುಂತಾದ ವಿಷಯಗಳ ಕುರಿತಾದ ಕ್ಯಾಥೊಲಿಕ್ ಬೋಧನೆಗಳಲ್ಲಿನ ಬದಲಾವಣೆಗಳ ಸಂಭಾಷಣೆಗಳು—ಕೊನೆಗೆ ಅವಳಿಗೂ ಸಂದೇಹಗಳು ಉಂಟಾಗುವಂತೆ ಮಾಡಿದವು. ಒಮ್ಮೆ, 1970ರ ವಸಂತಋತುವಿನಲ್ಲಿ ಮಾಸ್ಗೆ ಹಾಜರಾಗುತ್ತಿದ್ದಾಗ, ಆಕೆ ಪ್ರಾರ್ಥಿಸಿದ್ದು: “ದೇವರೇ, ನಿತ್ಯಜೀವಕ್ಕೆ ನಡಿಸುವ ಮಾರ್ಗವನ್ನು ನಮಗೆ ತೋರಿಸು. ಯಾವುದು ಸರಿಯಾದ ಮಾರ್ಗವೆಂದು ನಮಗೆ ಈಗ ತಿಳಿದಿಲ್ಲ. ನಾನು ಯಾವುದಕ್ಕೂ ತಲೆಬಾಗಲು ಸಿದ್ಧಳಿದ್ದೇನೆ, ಆದರೆ ನಮ್ಮ ಇಡೀ ಕುಟುಂಬಕ್ಕೆ ಸರಿಯಾದ ಮಾರ್ಗವನ್ನು ಖಂಡಿತವಾಗಿ ತೋರಿಸು.” ನಮ್ಮ ಪ್ರಾರ್ಥನೆಗಳು ಆಲಿಸಲ್ಪಟ್ಟಿವೆಯೆಂದು ನಾವು ಗ್ರಹಿಸುವ ಸಮಯದ ತನಕ, ನನಗೆ ಆಕೆಯ ಪ್ರಾರ್ಥನೆಯ ಕುರಿತಾಗಿ ಮತ್ತು ಅವಳಿಗೆ ನನ್ನ ಪ್ರಾರ್ಥನೆಯ ಕುರಿತಾಗಿ ತಿಳಿದಿರಲಿಲ್ಲ.
ಬೈಬಲ್ ಸತ್ಯವನ್ನು ಕಂಡುಕೊಳ್ಳುವುದು
1970ರ ಆದಿ ಭಾಗದಲ್ಲಿ, ಒಂದು ಆದಿತ್ಯವಾರ ಬೆಳಗ್ಗೆ ನಾವು ಚರ್ಚ್ನಿಂದ ಹಿಂದಿರುಗಿದ ಬಳಿಕ, ಯಾರೋ ಬಾಗಿಲನ್ನು ತಟ್ಟಿದರು. ತನ್ನ ಹತ್ತು ವರ್ಷ ಪ್ರಾಯದ ಮಗನೊಂದಿಗಿದ್ದ ಒಬ್ಬ ಪುರುಷನು ತನ್ನನ್ನು ಒಬ್ಬ ಯೆಹೋವನ ಸಾಕ್ಷಿಯಾಗಿ ಪರಿಚಯಿಸಿಕೊಂಡನು. ನಾನು ಒಂದು ಬೈಬಲ್ ಚರ್ಚೆಗೆ ಒಪ್ಪಿಕೊಂಡೆ. ಯೆಹೋವನ ಸಾಕ್ಷಿಗಳ ಕುರಿತಾಗಿ ನನಗೆ ಏನು ಹೇಳಲ್ಪಟ್ಟಿತ್ತೋ ಅದರಿಂದಾಗಿ ಅವರಿಗೆ ಅತಿ ಒಳ್ಳೆಯ ಜ್ಞಾನವಿತ್ತೆಂದು ನಾನು ನಂಬದಿದ್ದ ಕಾರಣ, ಅವನು ಏನು ಹೇಳುವನೊ ಅದನ್ನು ನಾನು ಸುಲಭವಾಗಿ ತಪ್ಪೆಂದು ರುಜುಪಡಿಸಸಾಧ್ಯವಿದೆಯೆಂದು ನೆನಸಿದೆ.
ನಮ್ಮ ಚರ್ಚೆಯು ಯಾವುದೇ ಸಕಾರಾತ್ಮಕ ಫಲಿತಾಂಶಗಳಿಲ್ಲದೆ ಎರಡು ತಾಸುಗಳ ವರೆಗೆ ಮುಂದುವರಿಯಿತು ಮತ್ತು ಮುಂದಿನ ಆದಿತ್ಯವಾರವೂ ಹೀಗೆಯೇ ನಡೆಯಿತು. ನಾನು ಮೂರನೆಯ ಚರ್ಚೆಗೆ ಎದುರುನೋಡುತ್ತಾ ಇದ್ದೆ, ಆದರೆ ಆ ಸಾಕ್ಷಿ ಬರಲಿಲ್ಲ. ಅದು ಸಾರ್ಥಕವಲ್ಲವೆಂದು ಅವನು ಗ್ರಹಿಸಿಕೊಂಡಿರಬೇಕೆಂದು ಮಾರಿಯ ಹೇಳಿದಳು. ಎರಡು ವಾರಗಳ ಬಳಿಕ ಅವನು ಹಿಂದಿರುಗಿದಾಗ ನಾನು ಸಂತೋಷಪಟ್ಟೆ. ತತ್ಕ್ಷಣವೇ ನಾನು ಹೇಳಿದೆ: “35 ವರ್ಷಗಳಿಂದ ನಾನು ನರಕದ ಕುರಿತಾಗಿ ಯೋಚಿಸುತ್ತಿದ್ದೆ. ಪ್ರೀತಿಪರನಾಗಿರುವ ದೇವರು, ಸೃಷ್ಟಿಜೀವಿಗಳನ್ನು ಅಂತಹ ಒಂದು ಕ್ರೂರ ವಿಧದಲ್ಲಿ ಹಿಂಸಿಸುವನೆಂಬುದನ್ನು ನನಗೆ ಅಂಗೀಕರಿಸಲಾಗುವುದೇ ಇಲ್ಲ.”
“ನೀನು ಹೇಳಿದ್ದು ಸರಿ. ನರಕವು ಹಿಂಸೆಯ ಒಂದು ಸ್ಥಳವಾಗಿದೆಯೆಂದು ಬೈಬಲ್ ಕಲಿಸುವುದಿಲ್ಲ” ಎಂದು ಆ ಸಾಕ್ಷಿಯು ಉತ್ತರಿಸಿದನು. ಕ್ಯಾಥೊಲಿಕ್ ಬೈಬಲ್ನಲ್ಲಿ ಅನೇಕ ವೇಳೆ “ನರಕ” ಎಂದು ಭಾಷಾಂತರಿಸಲ್ಪಟ್ಟಿರುವ, ಶೀಯೋಲ್ ಮತ್ತು ಹೇಡೀಸ್ ಎಂಬ ಹೀಬ್ರು ಮತ್ತು ಗ್ರೀಕ್ ಪದಗಳು, ಕೇವಲ ಸಾಮಾನ್ಯವಾದ ಸಮಾಧಿಗೆ ಸೂಚಿಸುತ್ತವೆಂದು ಅವನು ನನಗೆ ತೋರಿಸಿದನು. (ಆದಿಕಾಂಡ 37:35; ಯೋಬ 14:13; ಅ. ಕೃತ್ಯಗಳು 2:31) ಅಲ್ಲದೆ, ಮಾನವ ಪ್ರಾಣವು ಮರ್ತ್ಯ ಮತ್ತು ಪಾಪಕ್ಕಾಗಿರುವ ಶಿಕ್ಷೆಯು ಮರಣವಾಗಿದೆ ಹೊರತು ಹಿಂಸೆಯಲ್ಲವೆಂಬುದನ್ನು ರುಜುಪಡಿಸುವ ವಚನಗಳನ್ನು ಅವನು ಓದಿಹೇಳಿದನು. (ಯೆಹೆಜ್ಕೇಲ 18:4; ರೋಮಾಪುರ 6:23) ಆಗ, ನನ್ನ ಇಡೀ ಜೀವಿತದಲ್ಲಿ ನಾನು ಧಾರ್ಮಿಕ ಸುಳ್ಳುಗಳಿಂದ ಕುರುಡುಗೊಳಿಸಲ್ಪಟ್ಟಿದ್ದೆ ಎಂಬುದನ್ನು ಸ್ಪಷ್ಟವಾಗಿ ನೋಡಲಾರಂಭಿಸಿದೆ. ಚರ್ಚಿನ ಇತರ ಬೋಧನೆಗಳು ತಪ್ಪಾಗಿದ್ದವೊ ಎಂದು ನಾನು ಈಗ ಕುತೂಹಲಪಡಲಾರಂಭಿಸಿದೆ.
ನಾನು ಇನ್ನು ಮುಂದೆ ವಂಚಿಸಲ್ಪಡಲು ಬಯಸಲಿಲ್ಲ, ಆದುದರಿಂದ ನಾನು ಒಂದು ಕ್ಯಾಥೊಲಿಕ್ ಬೈಬಲಿನ ಶಬ್ದಕೋಶವನ್ನು ಮತ್ತು ಪೋಪರ ಕುರಿತಾದ ಇತಿಹಾಸದ ಐದು ಸಂಪುಟಗಳನ್ನು ಕೊಂಡುಕೊಂಡೆ. ಈ ಪ್ರಕಾಶನಗಳಲ್ಲಿ ಮಂಜೂರಾತಿ ಇತ್ತು, ಅಂದರೆ ರೋಮನ್ ಕ್ಯಾಥೊಲಿಕ್ ಬಿಷಪರುಗಳ ಅಧಿಕಾರವು ಅವುಗಳ ಮುದ್ರಣಕ್ಕಾಗಿ ಸಮ್ಮತಿಯನ್ನಿತ್ತಿತ್ತು. ಪೋಪರುಗಳ ಇತಿಹಾಸವನ್ನು ಓದುವುದರಿಂದ, ಅವರಲ್ಲಿ ಕೆಲವರು ಲೋಕದ ಅತ್ಯಂತ ನೀಚ ಪಾತಕಿಗಳಲ್ಲಿ ಒಬ್ಬರಾಗಿದ್ದರೆಂಬುದನ್ನು ನಾನು ತಿಳಿದುಕೊಂಡೆ! ಮತ್ತು ಬೈಬಲ್ ಶಬ್ದಕೋಶವನ್ನು ಪರಿಶೀಲಿಸುವ ಮೂಲಕ, ತ್ರಯೈಕ್ಯ, ನರಕಾಗ್ನಿ, ಪರ್ಗಟರಿ, ಹಾಗೂ ಚರ್ಚಿನ ಇತರ ಅನೇಕ ಬೋಧನೆಗಳು ಬೈಬಲಿನ ಮೇಲೆ ಆಧಾರಿತವಾಗಿರಲಿಲ್ಲವೆಂಬುದನ್ನು ನಾನು ಕಲಿತೆ.
ಈಗ ನಾನು ಸಾಕ್ಷಿಗಳೊಂದಿಗಿನ ಒಂದು ಬೈಬಲ್ ಅಭ್ಯಾಸಕ್ಕಾಗಿ ಸಿದ್ಧನಾಗಿದ್ದೆ. ಆರಂಭದಲ್ಲಿ, ಮಾರಿಯ ಕೇವಲ ಸಭ್ಯಳಾಗಿರಲಿಕ್ಕಾಗಿ ಅಭ್ಯಾಸಕ್ಕಾಗಿ ಕುಳಿತುಕೊಳ್ಳುತ್ತಿದ್ದಳು, ಆದರೆ ಬೇಗನೆ ಆಕೆಯು ತಾನು ಏನನ್ನು ಕಲಿತಳೊ ಅದನ್ನು ಅಂಗೀಕರಿಸಿದಳು. ನಾಲ್ಕು ತಿಂಗಳುಗಳ ಬಳಿಕ ನಾನು ಕ್ಯಾಥೊಲಿಕ್ ಚರ್ಚನ್ನು ಬಿಟ್ಟೆ ಮತ್ತು ನನ್ನ ಮಕ್ಕಳು ಇನ್ನು ಮುಂದೆ ಧಾರ್ಮಿಕ ತರಗತಿಗಳಿಗೆ ಹಾಜರಾಗುವುದಿಲ್ಲವೆಂಬುದನ್ನು ಪಾದ್ರಿಗೆ ತಿಳಿಸಿದೆ. ಮುಂದಿನ ಆದಿತ್ಯವಾರ ಪಾದ್ರಿಯು, ತನ್ನ ಚರ್ಚಿನ ಸದಸ್ಯರಿಗೆ ಯೆಹೋವನ ಸಾಕ್ಷಿಗಳ ಕುರಿತಾಗಿ ಎಚ್ಚರಿಸಿದನು. ಬೈಬಲನ್ನು ಉಪಯೋಗಿಸುತ್ತಾ, ನನ್ನ ನಂಬಿಕೆಗಳನ್ನು ಸಮರ್ಥಿಸಲು ಸಿದ್ಧನಾಗಿದ್ದೇನೆಂದು ಹೇಳಿದರೂ ಪಾದ್ರಿಯು ಅಂತಹ ಒಂದು ಚರ್ಚೆಗೆ ಒಪ್ಪಿಕೊಳ್ಳಲಿಲ್ಲ.
ತದನಂತರ, ನಾವು ತೀವ್ರ ಪ್ರಗತಿಯನ್ನು ಮಾಡಿದೆವು. ಕೊನೆಗೆ, ನನ್ನ ಹೆಂಡತಿಯೂ ನಾನೂ, ಯೆಹೋವನಿಗೆ ನಾವು ಮಾಡಿದ ಸಮರ್ಪಣೆಯನ್ನು 1970ರ ಡಿಸೆಂಬರ್ 13ರಂದು ನೀರಿನ ದೀಕ್ಷಾಸ್ನಾನದ ಮೂಲಕ ಸಂಕೇತಿಸಿದೆವು. ಒಂದು ವರ್ಷದ ಬಳಿಕ, ಕ್ರೈಸ್ತ ತಾಟಸ್ಥ್ಯದ ವಿವಾದಾಂಶದ ಕುರಿತಾಗಿ ನಾನು ಸೆರೆಮನೆಯಲ್ಲಿ ಎರಡು ತಿಂಗಳುಗಳನ್ನು ಕಳೆಯಬೇಕಾಯಿತು. (ಯೆಶಾಯ 2:4) ಆ ಅಲ್ಪಾವಧಿಗಾಗಿಯೂ ನನ್ನ ಹೆಂಡತಿಯನ್ನು ಎಂಟು ಮಕ್ಕಳೊಂದಿಗೆ ಬಿಡುವುದು ಸುಲಭವಾಗಿರಲಿಲ್ಲ. ಮಕ್ಕಳು, ಕೇವಲ 4 ತಿಂಗಳುಗಳ ವಯಸ್ಸಿನಿಂದ ಹಿಡಿದು 12 ವರ್ಷಗಳ ವರೆಗಿನ ಪ್ರಾಯದವರಾಗಿದ್ದರು. ಅದಲ್ಲದೆ, ಜಾಗ್ರತೆವಹಿಸಲಿಕ್ಕಾಗಿ ನಮಗೆ ಒಂದು ಹೊಲ ಮತ್ತು ಜಾನುವಾರುಗಳಿದ್ದವು. ಆದರೆ ಯೆಹೋವನ ಸಹಾಯದಿಂದ, ಅವರು ನಾನಿಲ್ಲದಿದ್ದಾಗ ನಿಭಾಯಿಸಿಕೊಂಡು ಹೋಗಲು ಶಕ್ತರಾದರು.
ರಾಜ್ಯಾಭಿರುಚಿಗಳನ್ನು ಪ್ರಥಮವಾಗಿಡುವುದು
ನಮ್ಮ ಕುಟುಂಬದಲ್ಲಿ ಯಾರೊಬ್ಬರೂ ಅಸ್ವಸ್ಥರಾದ ಹೊರತು, ಒಂದೇ ಒಂದು ಸಭಾ ಕೂಟವನ್ನು ತಪ್ಪಿಸುತ್ತಿರಲಿಲ್ಲ. ಮತ್ತು ನಾವು ನಮ್ಮ ಕೆಲಸವನ್ನು, ದೊಡ್ಡ ಅಧಿವೇಶನಗಳಲ್ಲಿ ಒಂದನ್ನೂ ತಪ್ಪಿಸದಂತಹ ರೀತಿಯಲ್ಲಿ ವ್ಯವಸ್ಥಾಪಿಸಿದೆವು. ಬೇಗನೆ ಅಟ್ಟದಲ್ಲಿ ಆಡಲ್ಪಡುತ್ತಿದ್ದ ಮಕ್ಕಳ ಆಟಗಳು, ಅವರು ನಮ್ಮ ಕ್ರೈಸ್ತ ಕೂಟಗಳಲ್ಲಿ ಏನನ್ನು ಅವಲೋಕಿಸಿದರೊ ಅದನ್ನು ನಟಿಸುವುದರ ಮೇಲೆ ಕೇಂದ್ರೀಕರಿಸಿದವು. ಉದಾಹರಣೆಗಾಗಿ, ಅವರು ಒಬ್ಬರಿಗೊಬ್ಬರು ವಿದ್ಯಾರ್ಥಿ ಭಾಷಣಗಳನ್ನು ನೇಮಿಸಿಕೊಳ್ಳುತ್ತಿದ್ದರು ಮತ್ತು ನಿರೂಪಣೆಗಳನ್ನು ಅಭ್ಯಾಸಮಾಡಿಕೊಳ್ಳುತ್ತಿದ್ದರು. ಸಂತೋಷಕರವಾಗಿಯೇ, ಅವರು ನಮ್ಮ ಆತ್ಮಿಕ ಉಪದೇಶಕ್ಕೆ ಪ್ರತಿಕ್ರಿಯೆ ತೋರಿಸಿದರು. ನಮ್ಮ ಎಂಟು ಮಂದಿ ಮಕ್ಕಳು—ಹಿರಿಯವನಿಂದ ಹಿಡಿದು ಕೊನೆಯವಳ ತನಕ—ಒಂದು ಸಾಲಿನಲ್ಲಿ ಕುಳಿತುಕೊಂಡು ಗಮನಕೊಟ್ಟು ಆಲಿಸುತ್ತಿದ್ದಾಗ, ಒಂದು ಸರ್ಕಿಟ್ ಸಮ್ಮೇಳನದಲ್ಲಿ ನನ್ನ ಹೆಂಡತಿ ಮತ್ತು ನನ್ನ ಇಂಟರ್ವ್ಯೂ ಮಾಡಲ್ಪಟ್ಟಿರುವ ಸ್ಮರಣೆಯು ನನಗೆ ಅತಿ ಪ್ರಿಯ.
“ಯೆಹೋವನ ನೀತಿಶಿಕ್ಷೆ ಮತ್ತು ಮಾನಸಿಕ ಕ್ರಮಪಡಿಸುವಿಕೆಯಲ್ಲಿ” (NW) ನಮ್ಮ ಮಕ್ಕಳ ಬೆಳೆಸುವಿಕೆಯು, ನಮ್ಮ ಮುಖ್ಯ ಚಿಂತೆಯಾಗಿ ಪರಿಣಮಿಸಿತು. (ಎಫೆಸ 6:4) ನಾವು ನಮ್ಮ ಟೆಲಿವಿಷನ್ ಅನ್ನು ತೊಲಗಿಸಲು ನಿರ್ಣಯಿಸಿದೆವು. ಹುರುಪುಳ್ಳ ಜೊತೆ ಕ್ರೈಸ್ತರ ಅನುಭವಗಳು ಮತ್ತು ಉತ್ಸಾಹದಿಂದ ನಮ್ಮ ಮಕ್ಕಳು ಲಾಭವನ್ನು ಪಡೆದುಕೊಳ್ಳಲು ಸಾಧ್ಯವಾಗುವಂತೆ ನಾವು ಅನೇಕವೇಳೆ ಅವರನ್ನು ನಮ್ಮ ಮನೆಗೆ ಆಮಂತ್ರಿಸುತ್ತಿದ್ದೆವು. ನಾವು ದುಡುಕಿನ ಮಾತುಕತೆ ಮತ್ತು ಇತರರ ಕುರಿತಾಗಿ ಟೀಕಾತ್ಮಕರಾಗಿರುವುದರ ಕುರಿತಾಗಿ ಜಾಗರೂಕರಾಗಿದ್ದೆವು. ಯಾರಾದರೂ ತಪ್ಪುಮಾಡುತ್ತಿದ್ದಲ್ಲಿ, ನಾವು ಆ ವಿಷಯವನ್ನು ಚರ್ಚಿಸುತ್ತಿದ್ದೆವು ಮತ್ತು ಯಾವ ಪರಿಸ್ಥಿತಿಗಳಿಂದಾಗಿ ಅವರು ಆ ತಪ್ಪನ್ನು ಮಾಡಿದ್ದರೆಂಬುದನ್ನು ನೋಡುತ್ತಿದ್ದೆವು. ನಮ್ಮ ಮಕ್ಕಳು ಒಂದು ಸನ್ನಿವೇಶವನ್ನು ತರ್ಕಬದ್ಧವಾಗಿ ಮತ್ತು ನ್ಯಾಯಯುತವಾಗಿ ವಿಮರ್ಶಿಸುವಂತೆ ಸಹಾಯಮಾಡಲು ಪ್ರಯತ್ನಿಸಿದೆವು. ಇತರ ಯುವ ಜನರೊಂದಿಗೆ ಹೋಲಿಸುವುದನ್ನು ನಾವು ಜಾಗರೂಕತೆಯಿಂದ ದೂರಮಾಡಿದೆವು. ಮತ್ತು ಹೆತ್ತವರು ತಮ್ಮ ಮಕ್ಕಳನ್ನು ಅತಿ ಮುದ್ದುಮಾಡುವ ಅಥವಾ ತಮ್ಮ ಕ್ರಿಯೆಗಳ ಫಲಿತಾಂಶಗಳಿಂದ ಅವರನ್ನು ಸಂರಕ್ಷಿಸದಿರುವ ಮಹತ್ವವನ್ನು ನಾವು ಅಂಗೀಕರಿಸಿದೆವು.—ಜ್ಞಾನೋಕ್ತಿ 29:21.
ಆದರೂ, ನಮ್ಮ ಮಕ್ಕಳ ಬೆಳೆಸುವಿಕೆಯು ಸಮಸ್ಯೆಗಳಿಲ್ಲದೆ ಇರಲಿಲ್ಲ. ಉದಾಹರಣೆಗಾಗಿ, ಒಂದು ಸಲ ಶಾಲಾಸಂಗಾತಿಗಳು, ಅವರು ಒಂದು ಅಂಗಡಿಯಿಂದ ಹಣವನ್ನು ಕೊಡದೆ ಮಿಠಾಯಿಗಳನ್ನು ತೆಗೆದುಕೊಳ್ಳುವಂತೆ ಪ್ರೇರಿಸಿದರು. ಸಂಭವಿಸಿರುವ ಸಂಗತಿಯ ಕುರಿತಾಗಿ ನಮಗೆ ತಿಳಿದುಬಂದಾಗ, ನಮ್ಮ ಮಕ್ಕಳು ಅಂಗಡಿಗೆ ಹಿಂದಿರುಗಿ ಅದಕ್ಕೆ ಹಣಕೊಟ್ಟು, ಕ್ಷಮೆಯನ್ನು ಬೇಡುವಂತೆ ಮಾಡಿದೆವು. ಅದು ಅವರಿಗೆ ಪೇಚಾಟವನ್ನುಂಟುಮಾಡಿತ್ತಾದರೂ, ಪ್ರಾಮಾಣಿಕತೆಯ ಕುರಿತ ಒಂದು ಪಾಠವನ್ನು ಅವರು ಕಲಿತರು.
ಸಾರುವ ಚಟುವಟಿಕೆಯಲ್ಲಿ ನಮ್ಮೊಂದಿಗೆ ಜೊತೆಗೂಡಲು ನಮ್ಮ ಮಕ್ಕಳನ್ನು ಕೇವಲ ಬಲವಂತಪಡಿಸುವ ಬದಲಿಗೆ, ಅಂತಹ ಚಟುವಟಿಕೆಗೆ ಆದ್ಯತೆಯನ್ನು ಕೊಡುವ ಮೂಲಕ ನಾವು ಮಾದರಿಯನ್ನಿಟ್ಟೆವು. ನಾವು ಹೊಲದಲ್ಲಿ ಮಾಡಬೇಕಾಗಿದ್ದ ಕೆಲಸಕ್ಕಿಂತ ಕೂಟಗಳನ್ನು ಮತ್ತು ಕ್ಷೇತ್ರ ಸೇವೆಯನ್ನು ಪ್ರಥಮವಾಗಿಟ್ಟೆವೆಂಬುದನ್ನು ಮಕ್ಕಳು ನೋಡಿದರು. ಯೆಹೋವನ ಮಾರ್ಗದಲ್ಲಿ ನಮ್ಮ ಎಂಟು ಮಕ್ಕಳನ್ನು ಬೆಳೆಸುವ ನಮ್ಮ ಪ್ರಯತ್ನಗಳು ನಿಶ್ಚಯವಾಗಿಯೂ ಆಶೀರ್ವದಿಸಲ್ಪಟ್ಟವು.
ನಮ್ಮ ಹಿರಿಯ ಮಗ ಯೋಸೆಫ್, ಒಬ್ಬ ಕ್ರೈಸ್ತ ಹಿರಿಯನಾಗಿದ್ದಾನೆ ಮತ್ತು ಅವನು ತನ್ನ ಪತ್ನಿಯೊಂದಿಗೆ ಸ್ವಿಟ್ಸರ್ಲೆಂಡ್ನಲ್ಲಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್ ಆಫೀಸಿನಲ್ಲಿ ಹಲವಾರು ವರ್ಷಗಳ ವರೆಗೆ ಸೇವೆ ಸಲ್ಲಿಸಿದ್ದಾನೆ. ಟೋಮಾಸ್ ಒಬ್ಬ ಹಿರಿಯನಾಗಿದ್ದಾನೆ, ಮತ್ತು ಅವನು ಹಾಗೂ ಅವನ ಹೆಂಡತಿ, ಪಯನೀಯರರೆಂದು ಕರೆಯಲ್ಪಡುವ ಪೂರ್ಣ ಸಮಯದ ಶುಶ್ರೂಷಕರಾಗಿದ್ದಾರೆ. ಚಾಂಪಿಯನ್ ಸೈಕಲ್ ಸವಾರನಾಗಿ ತನ್ನ ಜೀವನೋದ್ಯೋಗವನ್ನು ಬಿಟ್ಟುಕೊಟ್ಟ ಡಾನೀಲ್, ಒಬ್ಬ ಹಿರಿಯನಾಗಿದ್ದಾನೆ ಮತ್ತು ಅವನೂ ಅವನ ಹೆಂಡತಿಯೂ ಇನ್ನೊಂದು ಸಭೆಯಲ್ಲಿ ಪಯನೀಯರರಾಗಿದ್ದಾರೆ. ಬೆನೊ ಮತ್ತು ಅವನ ಹೆಂಡತಿ, ಮಧ್ಯ ಸ್ವಿಟ್ಸರ್ಲೆಂಡ್ನಲ್ಲಿ ಸಕ್ರಿಯ ಶುಶ್ರೂಷಕರಾಗಿದ್ದಾರೆ. ನಮ್ಮ ಐದನೆಯ ಮಗನಾದ ಕ್ರಿಸ್ಟ್ಯಾನ್, ನಾವು ಹಾಜರಾಗುತ್ತಿರುವ ಸಭೆಯಲ್ಲಿ ಒಬ್ಬ ಹಿರಿಯನಾಗಿದ್ದಾನೆ. ಅವನು ವಿವಾಹಿತನಾಗಿದ್ದು, ಅವನಿಗೆ ಇಬ್ಬರು ಮಕ್ಕಳಿದ್ದಾರೆ. ಫ್ರಾಂಟ್ಸ್ ಒಬ್ಬ ಪಯನೀಯರನಾಗಿದ್ದಾನೆ ಮತ್ತು ಬರ್ನ್ನಲ್ಲಿರುವ ಒಂದು ಸಭೆಯಲ್ಲಿ ಹಿರಿಯನಾಗಿದ್ದಾನೆ, ಮತ್ತು ಒಂದು ಸಮಯದಲ್ಲಿ ಸ್ವಿಟ್ಸರ್ಲೆಂಡ್ನ ಬ್ರಾಂಚ್ ಆಫೀಸಿನಲ್ಲಿ ಸೇವೆಸಲ್ಲಿಸಿದ ಉರ್ಸ್, ವಿವಾಹಿತನಾಗಿದ್ದು, ಒಬ್ಬ ಪಯನೀಯರನಾಗಿ ಸೇವೆಸಲ್ಲಿಸುತ್ತಿದ್ದಾನೆ. ನಮ್ಮ ಏಕಮಾತ್ರ ಮಗಳು ರಾಯೆಲ್, ಮತ್ತು ಆಕೆಯ ಗಂಡ ಕೂಡ ಹಲವಾರು ವರ್ಷಗಳ ವರೆಗೆ ಪಯನೀಯರರಾಗಿದ್ದರು.
ನನ್ನ ಮಕ್ಕಳ ಮಾದರಿಯನ್ನು ಅನುಸರಿಸುತ್ತಾ, ನಾನು 1990ರ ಜೂನ್ನಲ್ಲಿ ಐಹಿಕ ಕೆಲಸದಿಂದ ನಿವೃತ್ತಿಪಡೆದಾಗ, ನಾನೂ ಒಬ್ಬ ಪಯನೀಯರನಾದೆ. ನನ್ನ ಮತ್ತು ನನ್ನ ಕೌಟುಂಬಿಕ ಜೀವಿತದ ಮೇಲೆ ಹಿನ್ನೋಟವನ್ನು ಬೀರುವಾಗ, ಯೆಹೋವನು ನಮ್ಮ ಮಾರ್ಗವನ್ನು ಸುಗಮಗೊಳಿಸಿ, “ಸ್ಥಳಹಿಡಿಯಲಾಗದಷ್ಟು” ಆಶೀರ್ವಾದಗಳನ್ನು ನಮಗೆ ದಯಪಾಲಿಸಿದ್ದಾನೆಂಬುದನ್ನು ನಾನು ನಿಶ್ಚಯವಾಗಿಯೂ ಹೇಳಬಲ್ಲೆ.—ಮಲಾಕಿಯ 3:10.
ನನ್ನ ಪ್ರಿಯ ಹೆಂಡತಿಯ ಅಚ್ಚುಮೆಚ್ಚಿನ ಬೈಬಲ್ ವಚನ ಇದಾಗಿದೆ: “ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು; ಆತನು ನಿನ್ನನ್ನು ಉದ್ಧಾರಮಾಡುವನು. ನೀತಿವಂತನನ್ನು ಎಂದಿಗೂ ಕದಲಗೊಡಿಸನು.” (ಕೀರ್ತನೆ 55:22) ಮತ್ತು ನನ್ನದು ಇದಾಗಿದೆ: “ಯೆಹೋವನಲ್ಲಿ ಸಂತೋಷಿಸುವಿ; ಮತ್ತು ಆತನು ನಿನ್ನ ಇಷ್ಟಾರ್ಥಗಳನ್ನು ನೆರವೇರಿಸುವನು.” (ಕೀರ್ತನೆ 37:4) ಈ ಮನೋಹರವಾದ ಅಭಿವ್ಯಕ್ತಿಗಳ ಸತ್ಯತೆಯನ್ನು ನಾವಿಬ್ಬರೂ ಅನುಭವಿಸಿದ್ದೇವೆ. ನಮ್ಮ ಮಕ್ಕಳು ಮತ್ತು ಅವರ ಕುಟುಂಬಗಳೊಂದಿಗೆ ನಮ್ಮ ದೇವರಾದ ಯೆಹೋವನನ್ನು ನಿತ್ಯವಾಗಿ ಸ್ತುತಿಸುವುದೇ ನಮ್ಮ ಗುರಿಯಾಗಿದೆ.—ಯೋಸೆಫ್ ಹೆಗ್ಲೀ ಹೇಳಿರುವಂತೆ.