ನಿಮ್ಮ ಕೆಲಸದಿಂದ ನಿಮಗೆ ಬೇಸರ ಹಿಡಿದಿದೆಯೆ?
ಬಹುಶಃ ನೀವು ದಿನಕ್ಕೆ ಸುಮಾರು ಎಂಟು ತಾಸುಗಳಷ್ಟು ಕೆಲಸಮಾಡುತ್ತೀರಿ. ಅದು, ಬೇಸರಕ್ಕೆ ಬಲಿಕೊಡಲು ತೀರ ಹೆಚ್ಚು ಸಮಯಾವಧಿ ಮತ್ತು ತೀರ ಹೆಚ್ಚು ಜೀವನಾವಧಿಯಾಗಿದೆ! ಆದರೂ, 20ನೆಯ ಶತಮಾನದಲ್ಲಿನ ಹೆಚ್ಚಿನ ಕೆಲಸವು ವೈವಿಧ್ಯವಿಲ್ಲದ್ದಾಗಿದ್ದು, ಕಾರ್ಮಿಕನಿಗೆ ವೈಯಕ್ತಿಕವಾಗಿ ಹೆಮ್ಮೆಪಡಬಹುದಾದಂತಹ ತೀರ ಕೊಂಚ ಕೆಲಸವನ್ನು ಕೊಡುತ್ತದೆ.
ಆದುದರಿಂದ ನಿಮ್ಮ ಉದ್ಯೋಗವನ್ನು ಆಸಕ್ತಿಕರವನ್ನಾಗಿ ಮಾಡಿಕೊಳ್ಳುವುದರಿಂದ ನಿಮಗೆ ತುಂಬ ಲಾಭವಿದೆ. ಕೆಲಸಮಾಡುವುದರಿಂದ ನಿಮಗೆ ಹೆಚ್ಚಿನ ಆನಂದವು ದೊರಕುತ್ತದೆ, ಮತ್ತು ಭವಿಷ್ಯತ್ತಿನಲ್ಲಿ ಮಾಡುವಂತಹ ಯಾವುದೇ ಕೆಲಸವನ್ನು ಹೆಚ್ಚು ಆಸಕ್ತಿಕರವನ್ನಾಗಿ ಮಾಡುವ ರಹಸ್ಯವನ್ನು ನೀವು ಕಲಿಯುತ್ತೀರಿ. ಆದುದರಿಂದ, ಇದನ್ನು ಸಾಧಿಸುವ ಕೆಲವು ಮಾರ್ಗಗಳನ್ನು ನಾವು ಕಂಡುಹಿಡಿಯೋಣ.
ಹುರುಪುಳ್ಳವರಾಗಿರುವಂತೆ ವರ್ತಿಸಿರಿ
ನೀವು ನಿಮ್ಮ ಕೆಲಸದಲ್ಲಿ ಆನಂದಿಸುತ್ತಿದ್ದೀರೊ ಎಂಬಂತೆ ಕೆಲಸವನ್ನು ಮಾಡಬೇಕೆಂದು ಕೆಲವು ಅಧಿಕಾರಿಗಳು ಶಿಫಾರಸ್ಸುಮಾಡುತ್ತಾರೆ. ನೀವು ಹಾಗೆ ಮಾಡುವಲ್ಲಿ, ಕಟ್ಟಕಡೆಗೆ ನೀವು ನಿಮ್ಮ ಕೆಲಸವು ವಾಸ್ತವವಾಗಿ ಆನಂದಕರವಾಗಿರುವುದನ್ನು ಕಂಡುಕೊಳ್ಳಬಹುದು.
‘ಆದರೆ ನಾನು ನನ್ನ ಉದ್ಯೋಗದ ಕುರಿತು ಎಂದೂ ಹುರುಪುಳ್ಳವನಾಗಿರಲು ಸಾಧ್ಯವಿಲ್ಲ!’ ಎಂದು ನೀವು ಪ್ರತಿಕ್ರಿಯಿಸಬಹುದು. ನಿಮ್ಮ ಉದ್ಯೋಗವು, ಜೋಡಣೆ ಪಂಕ್ತಿ (ಎಸೆಂಬ್ಲಿ ಲೈನ್)ಗಳಲ್ಲಿನ ಕೆಲಸದಂತಹ ಒಂದು ಕಟ್ಟುನಿಟ್ಟಿನ ದಿನಚರಿಯನ್ನು ಒಳಗೊಂಡಿರಬಹುದು. ಅಥವಾ ನೀವು ಆ ಉದ್ಯೋಗವನ್ನು ಎಷ್ಟು ವರ್ಷಗಳಿಂದ ಮಾಡಿದ್ದೀರೆಂದರೆ, ಅದರಲ್ಲಿ ಆಸಕ್ತಿಯನ್ನು ನವೀಕರಿಸುವುದು ಅಸಾಧ್ಯವೆಂದು ನಿಮಗನಿಸಬಹುದು. ಆದರೂ, ನಸುನಗುತ್ತಿರುವಂತಹ ಮತ್ತು ನೆಟ್ಟಗೆ ನಿಲ್ಲುವಂತಹ ಸರಳವಾದ ತಂತ್ರಗಳು, ನೀವು ನಿಮ್ಮ ಕೆಲಸದ ಕುರಿತು ಹೆಚ್ಚು ಹುರುಪುಳ್ಳವರಾಗಿರುವಂತೆ ನಿಮಗೆ ಸಹಾಯಮಾಡಬಹುದು.
ನೀವೇನನ್ನು ಮಾಡುತ್ತಿದ್ದೀರೊ ಅದರ ಮೇಲೆ ನಿಮ್ಮ ಗಮನವನ್ನು ಪೂರ್ತಿಯಾಗಿ ಕೇಂದ್ರೀಕರಿಸುವಲ್ಲಿ, ಅದು ಸಹ ನಿಮಗೆ ಸಹಾಯಮಾಡಬಹುದು. ನಿಮ್ಮ ಕೆಲಸವನ್ನು ಬರಿಯ ಯಾಂತ್ರಿಕ ಶೈಲಿಯಲ್ಲಿ ಮಾಡಬೇಡಿರಿ. ಮತ್ತು ಊಟದ ಸಮಯ, ವಾರಾಂತ್ಯ, ಅಥವಾ ಮಾಡಲ್ಪಡಬೇಕಾದ ಇನ್ನೊಂದು ಕೆಲಸದ ಕುರಿತು ಯೋಚಿಸುತ್ತಾ ನಿಮ್ಮ ಕೆಲಸವನ್ನು ಮಾಡಬೇಡಿರಿ. ಸಾಮಾನ್ಯವಾಗಿ, ನೀವು ಮಾಡುತ್ತಿರುವ ಕೆಲಸದ ಮೇಲೆ ಪೂರ್ಣ ಗಮನವನ್ನು ಕೇಂದ್ರೀಕರಿಸುವುದು ವಿವೇಕಯುತ. ಫಲಿತಾಂಶವೇನು? ನೀವು ಕೆಲಸದಲ್ಲಿ ಆನಂದಿಸಬಹುದು ಮಾತ್ರವಲ್ಲ, ನಿಮಗೆ ಕೆಲಸದ ಸಮಯವು ಬೇಗನೆ ಸರಿಯುತ್ತಿರುವಂತೆ ತೋರಬಹುದು.
ನೀವು ನಿಜವಾಗಿಯೂ ಆನಂದಿಸುವಂತಹ ಒಂದು ಚಟುವಟಿಕೆಯಲ್ಲಿ ತಲ್ಲೀನರಾಗಿರುವಾಗ ಸ್ವಾಭಾವಿಕವಾಗಿ ಸಂಭವಿಸುವಂತಹ ವಿಷಯವು ಇದೇ. ನೀವು ಸಾಧಾರಣವಾಗಿ ಆನಂದಕರವೆಂದು ಕಂಡುಕೊಳ್ಳದಿರುವ ಕೆಲಸಕ್ಕೆ ಪೂರ್ಣ ಗಮನವನ್ನು ಕೊಡಲು ನಿಮ್ಮನ್ನೇ ಒತ್ತಾಯಪಡಿಸಿಕೊಳ್ಳುವಾಗ, ನೀವು ಅದೇ ರೀತಿಯ ಪರಿಣಾಮವನ್ನು ಸಾಧಿಸಲು ಶಕ್ತರಾಗಬಹುದು.
ನಿಮ್ಮಿಂದಾದಷ್ಟನ್ನು ಮಾಡಿರಿ
ನಿಮ್ಮಿಂದಾದಷ್ಟನ್ನು ಮಾಡುವುದು ನಿಮಗೆ ಉದ್ಯೋಗ ತೃಪ್ತಿಯನ್ನು ಪಡೆದುಕೊಳ್ಳುವಂತೆ ಸಹಾಯಮಾಡಸಾಧ್ಯವಿದೆ. ಖಂಡಿತವಾಗಿಯೂ, ಅಂತಹ ಬುದ್ಧಿವಾದವು, ನಿಮ್ಮ ಕೆಲಸವು ನಿಮಗೆ ಅನಾಸಕ್ತಿಕರವಾಗಿ ತೋರುವಾಗ, ಸಾಧ್ಯವಿರುವಷ್ಟು ಕಡಿಮೆ ಪ್ರಯತ್ನದೊಂದಿಗೆ ಮುಂದುವರಿಯಲು ಪ್ರಯತ್ನಿಸಬೇಕೆಂಬ ಜನಪ್ರಿಯ ವಿಚಾರಕ್ಕೆ ತದ್ವಿರುದ್ಧವಾಗಿದೆ. ಆದರೆ ಅಲಕ್ಷ್ಯ, ಕಾಲಹರಣ, ಮತ್ತು ಕನಿಷ್ಠಮಟ್ಟದ ಪ್ರಯತ್ನವು ನಿಮ್ಮ ಶಕ್ತಿಯನ್ನು ಬರಿದುಗೊಳಿಸುವುದು ಮತ್ತು ವ್ಯಾಕುಲತೆ ಹಾಗೂ ಬಳಲಿಕೆಯನ್ನು ಕೂಡಿಸುವುದು. ಕೆಲವು ವಿದ್ಯಮಾನಗಳಲ್ಲಿ, ಕೆಲಸದಿಂದ ಮನೆಗೆ ಬರುವಾಗ, ಒತ್ತಡ, ವ್ಯಾಕುಲತೆ ಮತ್ತು ದಣಿವಿನಿಂದ ನರಳುವ ವ್ಯಕ್ತಿಯು, ಸಂಭವತಃ ಶ್ರದ್ಧೆಯಿಂದ ಕೆಲಸಮಾಡಲು ತಪ್ಪಿರುವ ಕಾರಣದಿಂದ ಹಾಗೆ ನರಳಾಡುತ್ತಿರಬಹುದು.
ಬೈಬಲಿಗನುಸಾರ, ಒಂದು ಕಾರ್ಯಯೋಜನೆಗಾಗಿ ಕಷ್ಟಪಟ್ಟು ದುಡಿಯುವುದು, ವಿಶ್ರಮದ ತಾಸುಗಳನ್ನು ಹೆಚ್ಚು ಆನಂದಕರವನ್ನಾಗಿಯೂ ಮಾಡುತ್ತದೆ. “ಅನ್ನಪಾನಗಳನ್ನು ತೆಗೆದುಕೊಂಡು ತನ್ನ ಪ್ರಯಾಸದಲ್ಲಿಯೂ ಸುಖವನ್ನನುಭವಿಸುವದಕ್ಕಿಂತ ಇನ್ನೇನೂ ಮನುಷ್ಯನಿಗೆ ಮೇಲಿಲ್ಲ.” (ಪ್ರಸಂಗಿ 2:24) ಇದು ಕೆಲವರಿಗೆ ಬಳಕೆಯಲ್ಲಿಲ್ಲದ ಧ್ಯೇಯಮಂತ್ರವಾಗಿ ಧ್ವನಿಸಬಹುದಾದರೂ ಇತರರು ಈ ನಿತ್ಯ ಸೂತ್ರವನ್ನು ಅನ್ವಯಿಸುತ್ತಿದ್ದಾರೆ. ತಮ್ಮ ಕಷ್ಟದ ದುಡಿಮೆಯ ಫಲವನ್ನು ಅನುಭವಿಸುವುದಕ್ಕಿಂತಲೂ, ಖಂಡಿತವಾಗಿಯೂ ‘ಇನ್ನೇನೂ ಮೇಲಿಲ್ಲ’ ಎಂದು ಅವರು ಸಮ್ಮತಿಸುತ್ತಾರೆ. ಕೆಲಸಮಾಡುವುದರ ಆನಂದ (ಇಂಗ್ಲಿಷ್) ಎಂಬ ಪುಸ್ತಕವು ಒಪ್ಪಿಕೊಳ್ಳುವುದು: “ಚೆನ್ನಾಗಿ ಮಾಡಲ್ಪಟ್ಟಿರುವ ಒಂದು ಕೆಲಸವು, ತೃಪ್ತಿಯ ಆಂತರಿಕ ಕಾಂತಿಯನ್ನು ಬಿಟ್ಟುಹೋಗುತ್ತದೆ.”
ಆದುದರಿಂದ, ನಿಮ್ಮಿಂದ ಸಾಧ್ಯವಿರುವಷ್ಟು ಉತ್ತಮ ಕೆಲಸವನ್ನು ಮಾಡಿರಿ ಮತ್ತು ಆಗ ಬಹುಶಃ ನಿಮಗೆ ಚೈತನ್ಯದ ಅನಿಸಿಕೆಯಾಗುವುದು. ಕೇವಲ ಕನಿಷ್ಠವಾದ ಕೆಲಸಕ್ಕಿಂತ ಹೆಚ್ಚನ್ನು ಮಾಡಿರಿ ಮತ್ತು ಆಗ ನಿಮಗೆ ಹೆಚ್ಚು ಸಂತೋಷವಾಗಬಹುದು. ಪ್ರಾಮುಖ್ಯ ಕೆಲಸಗಳನ್ನು ಮೊದಲು ಮಾಡಿರಿ ಮತ್ತು ಆಗ ನೀವು, ಕಾಲಹರಣದಲ್ಲಿ ತನ್ನನ್ನು ದಣಿಸಿಕೊಳ್ಳುವ ವ್ಯಕ್ತಿಗಿಂತಲೂ ಹೆಚ್ಚಾಗಿ, ಊಟದ ವಿರಾಮಗಳಲ್ಲಿ ಮತ್ತು ವಾರಾಂತ್ಯಗಳಲ್ಲಿ ಆನಂದಿಸುವಿರಿ.—ಎಸ್ತೇರಳು 10:2ನ್ನು ಹೋಲಿಸಿರಿ; ರೋಮಾಪುರ 12:11; 2 ತಿಮೊಥೆಯ 2:15.
ಇತರರೊಂದಿಗೆ ಸ್ಪರ್ಧಿಸುವ ಬದಲಿಗೆ, ನಿಮ್ಮನ್ನು ಅತಿಶಯಿಸಲು ಪ್ರಯತ್ನಿಸಿರಿ. (ಗಲಾತ್ಯ 6:4) ಹೊಸ ಮಟ್ಟಗಳನ್ನು, ಹೊಸ ಗುರಿಗಳನ್ನಿಡಿರಿ. ಹೆಚ್ಚು ಉತ್ತಮ ಕೆಲಸವನ್ನು ಮಾಡಲು ಶ್ರಮಿಸಿರಿ. ಕೆಲವರು ನಿರಾಶಾದಾಯಕವಾಗಿ ಬೇಸರವನ್ನುಂಟುಮಾಡುವ ಕೆಲಸವೆಂದು ಎಣಿಸಬಹುದೊ ಆ ಸತತವಾಗಿ ಹೊಲಿಯುವುದನ್ನು ಒಳಗೂಡಿರುವ ಕೆಲಸವುಳ್ಳ ಒಬ್ಬ ಸ್ತ್ರೀಯು, ತನ್ನ ಕೆಲಸಕ್ಕೆ ಕಾಲನಿಯಮಿಸಿಕೊಳ್ಳುವ ಒಂದು ಆಟವನ್ನು ರಚಿಸಿದಳು. ತನ್ನ ಪ್ರತಿ ತಾಸಿನ ಉತ್ಪನ್ನದ ಮೇಲೆ ನಿಗವಿಟ್ಟು, ಅದನ್ನು ಹೆಚ್ಚಿಸಲು ಪ್ರಯತ್ನಿಸಿದಳು. ಅವಳು ತನ್ನ ಉದ್ಯೋಗದಲ್ಲಿ ನಿಜವಾಗಿಯೂ ಆನಂದಿಸುತ್ತಾಳೆ, ಯಾಕಂದರೆ ಅವಳು ತನ್ನಿಂದ ಸಾಧ್ಯವಿರುವಷ್ಟು ಉತ್ಪನ್ನಕರವಾಗಿರಲು ಶ್ರಮಿಸುತ್ತಾಳೆ.—ಜ್ಞಾನೋಕ್ತಿ 31:31.
ನಿಮ್ಮ ಕೆಲಸವನ್ನು “ಅಲಂಕರಿಸಿರಿ”
ಡೆನಿಸ್ ಟಿ. ಜ್ಯಾಫಿ ಮತ್ತು ಸಿಂಥ್ಯ ಡಿ. ಸ್ಕಾಟ್ ಎಂಬ ತಜ್ಞರು ಶಿಫಾರಸ್ಸುಮಾಡುವುದು: “ನಿಮ್ಮ ಕೆಲಸವು ಒಂದು ಖಾಲಿ ಮನೆಯಂತಿರುವುದಾಗಿ ನೆನಸಿರಿ. ನೀವು ಒಳಸೇರಿ, ಅದರ ರಚನೆ ಮತ್ತು ವಿನ್ಯಾಸವನ್ನು ನೋಡುತ್ತೀರಿ. ಅನಂತರ ನಿಮ್ಮ ಸ್ವಂತ ಸೃಜನಶೀಲತೆಯು ಕೆರಳಿಸಲ್ಪಡುತ್ತದೆ. ನೀವು ನಿಮ್ಮ ಆ ಕ್ಷೇತ್ರವನ್ನು ಹೇಗೆ ಬಳಸಲು, ಅಲಂಕರಿಸಲು ಬಯಸುತ್ತೀರೆಂದು ನಿರ್ಧರಿಸುತ್ತೀರಿ, ಮತ್ತು ಆ ಮನೆಯನ್ನು ನಿಮ್ಮ ಬೀಡನ್ನಾಗಿ ಮಾಡಿಕೊಳ್ಳುತ್ತೀರಿ. ಅದಕ್ಕೆ ನಿಮ್ಮ ವ್ಯಕ್ತಿಗತ ಶೈಲಿಯನ್ನು ಕೊಟ್ಟು ನೀವದನ್ನು ನಿಮ್ಮದಾಗಿ ಮಾಡಿಕೊಳ್ಳುತ್ತೀರಿ.”
ನಿಮಗೆ ಕೊಡಲ್ಪಡುವ ಹೆಚ್ಚಿನ ಕೆಲಸಗಳು, ನಿಯಮಗಳು ಮತ್ತು ನಿರ್ದೇಶನಗಳ ಒಂದು ಸಾಮಾನ್ಯ ವರ್ಣನೆಯೊಂದಿಗೆ ಕೊಡಲ್ಪಡುತ್ತವೆ. ಏನು ನಿರೀಕ್ಷಿಸಲ್ಪಟ್ಟಿದೆಯೊ ಅದನ್ನು ಮಾತ್ರವೇ ಮಾಡುವುದು, ಒಂದು ಬರಿದಾದ ಮನೆಯಲ್ಲಿ ವಾಸಿಸುವಂತಿದೆ. ಅದರಲ್ಲಿ ಯಾವುದೇ ವೈಶಿಷ್ಟ್ಯವಿಲ್ಲ. ಆದರೆ ನೀವು ನಿಮ್ಮ ಸ್ವಂತ ವೈಯಕ್ತಿಕ ಶೈಲಿಯನ್ನು ಕೂಡಿಸುವಲ್ಲಿ, ನಿಮ್ಮ ಕೆಲಸವು ಇನ್ನೂ ಹೆಚ್ಚು ಆಸಕ್ತಿಕರವಾಗಿರಬಲ್ಲದು. ಯಾವುದೇ ಇಬ್ಬರು ವ್ಯಕ್ತಿಗಳು ಒಂದೇ ವಿಧದಲ್ಲಿ ಒಂದು ಕೆಲಸವನ್ನು “ಅಲಂಕರಿಸು”ವುದಿಲ್ಲ. ಒಬ್ಬ ಪರಿಚಾರಕನು, ನಿತ್ಯದ ಗಿರಾಕಿಗಳ ಆರ್ಡರ್ಗಳನ್ನು ನೆನಪಿನಲ್ಲಿಡುವನು. ಇನ್ನೊಬ್ಬನು ವಿಶೇಷವಾಗಿ ದಯೆಯುಳ್ಳವನು ಮತ್ತು ಸೌಜನ್ಯಪರನೂ ಆಗಿರುವನು. ಇಬ್ಬರೂ ತಮ್ಮ ಕೆಲಸದಲ್ಲಿ ಆನಂದಿಸುತ್ತಾರೆ ಯಾಕಂದರೆ ಅವರು ತಾವೇನನ್ನು ಮಾಡುತ್ತಾರೊ ಅದರಲ್ಲಿ ತಮ್ಮನ್ನು ಒಳಗೂಡಿಸಿಕೊಳ್ಳುತ್ತಾರೆ.
ಕಲಿಯುತ್ತಾ ಇರಿ
ಕೆಲಸದಲ್ಲಿ ಆನಂದವನ್ನು ಕಂಡುಕೊಳ್ಳುವ ಇನ್ನೊಂದು ವಿಧವು, ಕಲಿಯುವುದಾಗಿದೆ. ಉದ್ವೇಗದ ಪರಿವರ್ತನೆ (ಇಂಗ್ಲಿಷ್) ಎಂಬ ಪುಸ್ತಕವು ವಿವರಿಸುವುದೇನೆಂದರೆ, ನಾವು ಬೆಳೆದಂತೆ ನಮ್ಮ ಮಿದುಳು ಮಾಹಿತಿಯನ್ನು ಸಾಗಿಸುವ ತನ್ನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಗತಕಾಲದಲ್ಲಿ ನಮ್ಮನ್ನು ಉದ್ರೇಕಿಸಿದಂತಹ ಸಂಗತಿಗಳು, ಈಗ ನಮಗೆ ಏಕೆ ಬೇಸರಹಿಡಿಸುತ್ತವೆ ಎಂಬುದನ್ನು ಇದು ವಿವರಿಸುತ್ತದೆ. ಹೊಸ ವಿಷಯಗಳನ್ನು ಕಲಿಯುವ ಮೂಲಕ ಹೊಸ ಮಾಹಿತಿಗಾಗಿರುವ ಮಿದುಳಿನ ಹಸಿವನ್ನು ತಣಿಸುವುದೇ ಇದಕ್ಕಿರುವ ಪರಿಹಾರ.
ನಿಮ್ಮ ಉದ್ಯೋಗದ ಕುರಿತಾಗಿ ಹೆಚ್ಚನ್ನು ಕಲಿಯುವುದು, ಸಕಾಲದಲ್ಲಿ ಹೆಚ್ಚು ಆಕರ್ಷಕವಾಗಿರುವ ಕೆಲಸವು ನಿಮಗೆ ಕೊಡಲ್ಪಡುವುದಕ್ಕೆ ನಡಿಸಬಹುದು. ಆದರೆ ಅದು ಸಂಭವಿಸದಿರುವಲ್ಲಿಯೂ, ಕಲಿಯುವ ಕಾರ್ಯಗತಿ ತಾನೇ, ನಿಮ್ಮ ಕೆಲಸವನ್ನು ಹೆಚ್ಚು ಆಸಕ್ತಿಕರವೂ, ತೃಪ್ತಿದಾಯಕವೂ ಆಗಿ ಮಾಡುವುದು. ಚಾರ್ಲ್ಸ್ ಕ್ಯಾಮೆರನ್ ಮತ್ತು ಸೂಸ್ಯಾನ್ ಎಲ್ಯೂಸರ್ ಎಂಬ ಲೇಖಕರು ತಿಳಿಸುವುದು: “ನಿಮ್ಮ ಸಾಮರ್ಥ್ಯಗಳನ್ನು ಹೆಚ್ಚಿಸುವ ಮೂಲಕ, ಕಲಿಯುವಿಕೆಯು ನಿಮ್ಮ ಭರವಸೆಯನ್ನು ಹೆಚ್ಚಿಸುತ್ತದೆ ಮಾತ್ರವಲ್ಲ, ಅದು ಜೀವನದ ಕಡೆಗಿನ ನಿಮ್ಮ ಮನೋಭಾವವನ್ನೂ ಪ್ರಭಾವಿಸುತ್ತದೆ: ಅಂದರೆ ಸಮಸ್ಯೆಗಳನ್ನು ಬಗೆಹರಿಸಸಾಧ್ಯವಿದೆ, ಕಷ್ಟಗಳನ್ನು ಜಯಿಸಸಾಧ್ಯವಿದೆ, ಭಯಗಳನ್ನು ಕುಂದಿಸಸಾಧ್ಯವಿದೆ, ಮತ್ತು ನೀವು ಊಹಿಸಿರುವುದಕ್ಕಿಂತಲೂ ಹೆಚ್ಚು ಸಂಗತಿಗಳು ಸಾಧ್ಯ.”
‘ಆದರೆ, ನನ್ನ ಕೆಲಸದ ಕುರಿತಾಗಿ ಎಲ್ಲವನ್ನೂ ನಾನು ತುಂಬ ಸಮಯದ ಹಿಂದೆಯೇ ಕಲಿತಿದ್ದೇನೆ!’ ಎಂದು ನೀವು ಆಕ್ಷೇಪಿಸಬಹುದು. ಹಾಗಿರುವಲ್ಲಿ, ನಿಮ್ಮ ಕೆಲಸಕ್ಕೆ ಪರೋಕ್ಷವಾಗಿ ಸಂಬಂಧಿಸಿರುವ ವಿಷಯಗಳನ್ನು ನೀವು ಕಲಿಯಸಾಧ್ಯವಿದೆಯೊ? ಉದಾಹರಣೆಗಾಗಿ, ಮಾನವ ಸ್ವಭಾವಗಳು ಅಥವಾ ನಿಮ್ಮ ಸಲಕರಣೆಯ ಕುರಿತಾಗಿ ನೀವು ಹೆಚ್ಚನ್ನು ಕಲಿಯಲು ನಿರ್ಧರಿಸಬಹುದು. ಹೆಚ್ಚು ಉತ್ತಮವಾದ ಒಂದು ಆಫೀಸ್ ಮೆಮೊ (ಸುತ್ತೋಲೆ)ವನ್ನು ಬರೆಯುವ ವಿಧ ಅಥವಾ ಒಂದು ಹೆಚ್ಚು ಉತ್ತಮ ಕೂಟವನ್ನು ನಡಿಸುವ ವಿಧವನ್ನು ನೀವು ಬಹುಶಃ ಕಲಿಯಸಾಧ್ಯವಿದೆ. ಸೂಪರ್ವೈಸರ್ಗಳೊಂದಿಗೆ ವ್ಯವಹರಿಸುವ ಹೆಚ್ಚು ಪರಿಣಾಮಕಾರಿ ವಿಧಗಳನ್ನು ನೀವು ಕಲಿಯಸಾಧ್ಯವಿದೆ.
ನೀವು ಈ ಸಂಗತಿಗಳನ್ನು ಹೇಗೆ ಕಲಿಯುವಿರಿ? ನೀವು ಯಾವ ಪಾಠಕ್ರಮಗಳಿಂದ ಪ್ರಯೋಜನ ಪಡೆಯುವ ಸ್ಥಾನದಲ್ಲಿರಬಹುದೊ ಅವುಗಳನ್ನು ನಿಮ್ಮ ಕಂಪೆನಿಯು ನೀಡುತ್ತಿರಬಹುದು. ಅಥವಾ ನಿಮಗೆ ಬೇಕಾಗಿರುವಂತಹ ಪುಸ್ತಕಗಳೇ ಒಂದು ಲೈಬ್ರರಿಯಲ್ಲಿರಬಹುದು. ಆದರೆ ಮಾಹಿತಿಯ ಅಸ್ಫುಟ ಮೂಲಗಳನ್ನು ಕಡೆಗಣಿಸದಿರಿ. ಜನರು ಕೆಲಸಮಾಡುತ್ತಿರುವುದನ್ನು ಗಮನಿಸುವುದು ಮತ್ತು ಅವರ ತಾಕತ್ತುಗಳನ್ನು ಹಾಗೂ ಬಲಹೀನತೆಗಳನ್ನು ನೋಡುವುದು, ಒಂದು ಶಿಕ್ಷಣ ಕ್ರಮವಾಗಿರಬಲ್ಲದು. ನೀವು ನಿಮ್ಮ ಸ್ವಂತ ತಪ್ಪುಗಳಿಂದ, ಮತ್ತು ನೀವೇನನ್ನು ಸರಿಯಾಗಿ ಮಾಡಿದ್ದೀರಿ ಎಂಬುದನ್ನು ವಿಶ್ಲೇಷಿಸುವ ಮೂಲಕ ನಿಮ್ಮ ಯಶಸ್ಸುಗಳಿಂದಲೂ ನೀವು ಕಲಿಯಸಾಧ್ಯವಿದೆ. ನಿಮ್ಮ ಸ್ವಂತ ಅನುಭವಗಳಿಂದ ಮತ್ತು ಇತರರನ್ನು ಗಮನಿಸುವುದರಿಂದ ನೀವೇನನ್ನು ಕಲಿಯುತ್ತೀರೋ ಅದು, ನೀವು ಪುಸ್ತಕಗಳಲ್ಲಿ ಎಂದೂ ಓದಿರದ ಅಥವಾ ಒಂದು ತರಗತಿಯಲ್ಲಿ ಎಂದೂ ಕೇಳಿರದ ಸಂಗತಿಯನ್ನು ಕಲಿಸಬಲ್ಲದು.
ಕೆಲವು ಕೊನೆಯ ಸಲಹೆಗಳು
ನೀವು ನಿಮ್ಮ ಕೆಲಸವನ್ನು ಪರಿಗಣಿಸಸಾಧ್ಯವಿರುವ ಇನ್ನೊಂದು ವಿಧವಿದೆ. ನೀವು ಹೆಚ್ಚು ಉತ್ತಮವಾದ ವಿಷಯಕ್ಕೆ ಅರ್ಹರಾಗಿದ್ದೀರಿ—ಇತರರೆಲ್ಲರಿಗೆ ಅನುಕೂಲವಾದ ಸನ್ನಿವೇಶಗಳು, ಮತ್ತು ನೀವು ನಿಜವಾಗಿಯೂ ಬಯಸುವಂತಹ ಕೆಲಸವನ್ನು ಮಾಡಲಿಕ್ಕೆ ನಿಮಗೆ ಎಂದೂ ಒಂದು ಅವಕಾಶವು ಕೊಡಲ್ಪಡುವುದಿಲ್ಲವೆಂದು ನೀವು ನಿರ್ಣಯಿಸಸಾಧ್ಯವಿದೆ. ನಿಮ್ಮೊಂದಿಗೆ ಸಮ್ಮತಿಸುವ ಇತರರೊಂದಿಗೆ ನೀವು ಅಂತ್ಯವಿಲ್ಲದೆ ಸಂಭಾಷಿಸಸಾಧ್ಯವಿದೆ, ಮತ್ತು ಇದೆಲ್ಲವೂ ಸತ್ಯವೆಂದು ನಿಮಗೆ ಮನವರಿಕೆಯಾಗಬಹುದು.
ಆದರೆ ಅದು ಸತ್ಯವಾಗಿರಲಿಕ್ಕಿಲ್ಲ. ತಮ್ಮ ಕೆಲಸದಲ್ಲಿ ಆನಂದಿಸುವ ಅನೇಕರು, ಹಾಗೆ ಮಾಡಲು ಕಲಿತಿದ್ದಾರೆ. ಮನೆಗಳನ್ನು ವಿನ್ಯಾಸಿಸುವುದರಲ್ಲಿ ಆನಂದಿಸುವ ಒಬ್ಬ ವ್ಯಕ್ತಿಯು, ಒಂದು ಬಸ್ಸನ್ನು ಚಲಾಯಿಸುವುದರಲ್ಲಿಯೂ ಆನಂದಿಸಲಾರಂಭಿಸಬಹುದು. ಏಕೆ? ಏಕೆಂದರೆ ಕೆಲಸದ ಕಡೆಗಿನ ಅವನ ಸೃಜನಶೀಲತೆಯು ಅವನಿಗೆ ಆನಂದ ಮತ್ತು ತೃಪ್ತಿಯನ್ನು ಕೊಡುತ್ತದೆ.
ಆದುದರಿಂದ, ವಾರಾಂತ್ಯಕ್ಕೆ ಹೋಲಿಸುವಾಗ ಕೆಲಸದ ವಾರವನ್ನು ಕರಾಳವನ್ನಾಗಿ ಮಾಡುವಂತಹ ನಕಾರಾತ್ಮಕ ಆಲೋಚನೆಯನ್ನು ತೊಲಗಿಸಿರಿ. ಮುಂದೆ ಏನು ತಪ್ಪಾಗುವುದು ಮತ್ತು ಇತರರು ನಿಮ್ಮ ಕುರಿತಾಗಿ ಏನು ಯೋಚಿಸುವರೆಂಬುದನ್ನು ಊಹಿಸಿಕೊಂಡು, ನಿಮ್ಮ ಗತಕಾಲದ ವಿಫಲತೆಗಳನ್ನು ಪುನರ್ವಿಮರ್ಶಿಸುತ್ತಾ ಸಮಯವನ್ನು ಹಾಳುಮಾಡಬೇಡಿರಿ. ನಿಮ್ಮ ಮುಂದಿರುವ ಕೆಲಸವನ್ನು ನೋಡಿರಿ. ಅದಕ್ಕೆ ನಿಮ್ಮ ಪೂರ್ಣ ಗಮನವನ್ನು ಕೊಡಿರಿ. ನಿಮ್ಮ ಅಚ್ಚುಮೆಚ್ಚಿನ ಹವ್ಯಾಸದಲ್ಲಿ ನೀವು ಎಷ್ಟು ತಲ್ಲೀನರಾಗುವಿರೊ, ಅಷ್ಟೇ ಇದರಲ್ಲಿಯೂ ತಲ್ಲೀನರಾಗಿರಲು ಪ್ರಯತ್ನಿಸಿರಿ. ಅದನ್ನು ನಿಮ್ಮ ಅತ್ಯುತ್ತಮ ಪ್ರಯತ್ನವನ್ನಾಗಿ ಮಾಡಿರಿ, ಮತ್ತು ಚೆನ್ನಾಗಿ ಮಾಡಲ್ಪಟ್ಟ ಒಂದು ಕೆಲಸದಲ್ಲಿ ಆನಂದವನ್ನು ಪಡೆದುಕೊಳ್ಳಿರಿ.
[ಪುಟ 11 ರಲ್ಲಿರುವ ಚೌಕ/ಚಿತ್ರಗಳು]
ನಿಮ್ಮ ಕೆಲಸವನ್ನು ಅಲಕ್ಷಿಸಬೇಡಿರಿ
ಜ್ಞಾನೋಕ್ತಿ 27:23, 24ರಲ್ಲಿ ಬೈಬಲ್ ಹೇಳುವುದು: “ನಿನ್ನ ಹಿಂಡುಗಳ ಸ್ಥಿತಿಯನ್ನು ಚೆನ್ನಾಗಿ ತಿಳಿದುಕೊಂಡಿರು; ನಿನ್ನ ಮಂದೆಗಳ ಮೇಲೆ ಮನಸ್ಸಿಡು. ಸಂಪತ್ತು ಶಾಶ್ವತವಾಗಿರುವದಿಲ್ಲವಷ್ಟೆ; ಕಿರೀಟವು ತಲತಲಾಂತರಗಳ ವರೆಗೆ ನಿಂತೀತೋ?” ಅದರ ಅರ್ಥವೇನು?
ಧನ (ಸಂಪತ್ತು) ಮತ್ತು ಪ್ರಧಾನ ಸ್ಥಾನಗಳು (ಕಿರೀಟ) ಗಳಿಸಲ್ಪಟ್ಟರೂ, ಅವು ಅನೇಕವೇಳೆ ತಾತ್ಕಾಲಿಕವಾಗಿರುವವು ಎಂಬುದು ಅದರರ್ಥ. ಆದುದರಿಂದ, ಬೈಬಲ್ ಸಮಯಗಳಲ್ಲಿನ ಒಬ್ಬ ಕುರುಬನು, ತನ್ನ ಕುರಿಗಳನ್ನು ಪರಾಮರಿಸುವುದರಲ್ಲಿ ಶ್ರದ್ಧಾಪೂರ್ವಕ ಗಮನವನ್ನು ಕೊಟ್ಟಲ್ಲಿ, ಅಂದರೆ ತನ್ನ ‘ಮಂದೆಗಳ ಮೇಲೆ ತನ್ನ ಮನಸ್ಸನ್ನಿಡು’ತ್ತಿದ್ದಲ್ಲಿ ವಿವೇಕವನ್ನು ತೋರಿಸುತ್ತಿದ್ದನು. ಫಲಿತಾಂಶವೇನೆಂದರೆ, ಮುಂದಿನ ಮೂರು ವಚನಗಳು ತೋರಿಸುವಂತೆ, ಕಾರ್ಮಿಕನಿಗೆ ಹಾಗೂ ಅವನ ಕುಟುಂಬಕ್ಕೆ ಪ್ರಾಪಂಚಿಕ ಸುರಕ್ಷತೆಯೇ.—ಜ್ಞಾನೋಕ್ತಿ 27:25-27.
ಇಂದಿನ ಕುರಿತಾಗಿ ಏನು? ಅನೇಕವೇಳೆ ಜನರು ತಮ್ಮ ಸದ್ಯದ ಉದ್ಯೋಗಗಳನ್ನು ಬಿಡುವಂತೆ ಅವರನ್ನು ಶಕ್ತಗೊಳಿಸುವುದೆಂದು ಅವರು ನಿರೀಕ್ಷಿಸುವ ಸಂಪತ್ತು ಅಥವಾ ಒಂದು ಪ್ರಧಾನ ಸ್ಥಾನವನ್ನು ಗಳಿಸುವುದರ ಮೇಲೆ ತಮ್ಮ ಮನಸ್ಸುಗಳನ್ನಿಡುತ್ತಾರೆ. ಕೆಲವರಿಗೆ ವಾಸ್ತವಿಕವಾದ ಯೋಜನೆಗಳಿವೆ; ಇತರರು ಕನಸುಕಾಣುತ್ತಾರಷ್ಟೇ. ಈ ಎರಡೂ ವಿದ್ಯಮಾನಗಳಲ್ಲಿ, ಒಬ್ಬನ ಸದ್ಯದ ಉದ್ಯೋಗವನ್ನು ಕಡೆಗಣಿಸುವುದು ಅಥವಾ ಅಲಕ್ಷಿಸುವುದು ಅವಿವೇಕಯುತವಾಗಿದೆ. ಅದು, ಆದಾಯದ ಅತಿ ವಿಶ್ವಾಸಾರ್ಹ ಮೂಲವಾಗಿದೆ ಮತ್ತು ಆಗಿರುವುದು. ತನ್ನ ‘ಮಂದೆಗಳ’ ಮೇಲೆ ತನ್ನ ಮನಸ್ಸನ್ನಿಡುವುದು, ತನ್ನ ಉದ್ಯೋಗದ ವಿಶ್ವಾಸಾರ್ಹ ಕ್ಷೇತ್ರಕ್ಕೆ ಪೂರ್ಣ ಗಮನವನ್ನು ಕೊಡುವುದು, ಒಬ್ಬ ವ್ಯಕ್ತಿಗೆ ಹೆಚ್ಚು ವಿವೇಕಯುತವಾದದ್ದಾಗಿದೆ. ಅವನು ಹಾಗೆ ಮಾಡುವುದು, ಸಂಭವತಃ ಸದ್ಯದ ಮತ್ತು ಭವಿಷ್ಯತ್ತಿನ ಪ್ರಾಪಂಚಿಕ ಸುರಕ್ಷೆಯಲ್ಲಿ ಫಲಿಸಲಿದೆ.