ಹೋಗಲು ಬಿಡುವುದನ್ನು ಕಲಿಯುವುದು
“ಯೌವನದಲ್ಲಿ ಹುಟ್ಟಿದ ಮಕ್ಕಳು ಯುದ್ಧವೀರನ ಕೈಯಲ್ಲಿರುವ ಅಂಬು [“ಬಾಣ,” NW]ಗಳಂತಿದ್ದಾರೆ.” (ಕೀರ್ತನೆ 127:4) ಒಂದು ಬಾಣವು ತನ್ನ ಗುರಿಯನ್ನು ಅಕಸ್ಮಾತ್ತಾಗಿ ತಲಪುವುದಿಲ್ಲ. ಅದನ್ನು ಜಾಗರೂಕತೆಯಿಂದ ಗುರಿಯಿಡಬೇಕು. ತದ್ರೀತಿಯಲ್ಲಿ, ಹೆತ್ತವರ ಮಾರ್ಗದರ್ಶನವಿಲ್ಲದೆ ಮಕ್ಕಳು ಜವಾಬ್ದಾರಿಯುತ ವಯಸ್ಕರಾಗುವ ಗುರಿಯನ್ನು ತಲಪದಿರಬಹುದು. “ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಹುಡುಗನನ್ನು ಶಿಕ್ಷಿಸು; ಮುಪ್ಪಿನಲ್ಲಿಯೂ ಓರೆಯಾಗನು” ಎಂದು ಬೈಬಲು ಬುದ್ಧಿಹೇಳುತ್ತದೆ.—ಜ್ಞಾನೋಕ್ತಿ 22:6.
ಬಾಲ್ಯಾವಸ್ಥೆಯಲ್ಲಿನ ಅವಲಂಬನೆಯಿಂದ, ಪ್ರೌಢಾವಸ್ಥೆಯಲ್ಲಿನ ಸ್ವಾತಂತ್ರ್ಯದ ಬದಲಾವಣೆಯನ್ನು ರಾತ್ರಿಬೆಳಗಾಗುವುದರೊಳಗೆ ಮಾಡಸಾಧ್ಯವಿಲ್ಲ. ಆದುದರಿಂದ, ತಮ್ಮ ಮಕ್ಕಳು ಸ್ವತಂತ್ರರಾಗುವಂತೆ ಹೆತ್ತವರು ಅವರನ್ನು ಯಾವಾಗ ತರಬೇತುಗೊಳಿಸಲು ಆರಂಭಿಸಬೇಕು? ತಿಮೊಥೆಯನೆಂಬ ಹೆಸರಿನ ಒಬ್ಬ ಯುವ ಪುರುಷನಿಗೆ ಅಪೊಸ್ತಲ ಪೌಲನು ನೆನಪು ಹುಟ್ಟಿಸಿದ್ದು: “ಚಿಕ್ಕಂದಿನಿಂದಲೂ ನಿನಗೆ ಪರಿಶುದ್ಧಗ್ರಂಥಗಳ ಪರಿಚಯವಾಯಿತಲ್ಲಾ. ಆ ಗ್ರಂಥಗಳು ಕ್ರಿಸ್ತ ಯೇಸುವಿನಲ್ಲಿರುವ ನಂಬಿಕೆಯ ಮೂಲಕ ರಕ್ಷಣೆಹೊಂದಿಸುವ ಜ್ಞಾನವನ್ನು ಕೊಡುವದಕ್ಕೆ ಶಕ್ತವಾಗಿವೆ.” (2 ತಿಮೊಥೆಯ 3:14, 15) ತಿಮೊಥೆಯು ಇನ್ನೂ ಚಿಕ್ಕ ಶಿಶುವಾಗಿದ್ದಾಗಲೇ, ಅವನ ತಾಯಿಯು ಅವನಿಗೆ ಆತ್ಮಿಕ ತರಬೇತಿಯನ್ನು ಕೊಡಲು ಆರಂಭಿಸಿದಳೆಂಬುದನ್ನು ಊಹಿಸಿಕೊಳ್ಳಿರಿ!
ಚಿಕ್ಕ ಶಿಶುಗಳು ಆತ್ಮಿಕ ತರಬೇತಿಯಿಂದಾಗಿ ಪ್ರಯೋಜನವನ್ನು ಪಡೆದುಕೊಳ್ಳಸಾಧ್ಯವಿರುವಲ್ಲಿ, ಪ್ರೌಢಾವಸ್ಥೆಗಾಗಿ ಮಕ್ಕಳಿಗೆ ಸಾಧ್ಯವಿರುವಷ್ಟು ಬೇಗನೆ ತರಬೇತಿಯು ನೀಡಲ್ಪಡಬೇಕೆಂಬುದು ಸಮಂಜಸವಾದುದಲ್ಲವೊ? ಇದನ್ನು ಮಾಡುವ ಒಂದು ವಿಧವು, ಅವರು ಜವಾಬ್ದಾರಿಯುತರಾಗಿರುವಂತೆ, ತಮ್ಮ ಸ್ವಂತ ನಿರ್ಣಯಗಳನ್ನು ಮಾಡುವಂತೆ ಅವರಿಗೆ ಕಲಿಸುವುದೇ ಆಗಿದೆ.
ಮಕ್ಕಳಿಗೆ ಜವಾಬ್ದಾರಿಯುತರಾಗಿರಲು ಕಲಿಸುವುದು
ನೀವು ನಿಮ್ಮ ಮಕ್ಕಳಿಗೆ ಜವಾಬ್ದಾರಿಯುತರಾಗಿರಲು ಹೇಗೆ ಪ್ರೋತ್ಸಾಹಿಸಸಾಧ್ಯವಿದೆ? ಜ್ಯಾಕ್ ಮತ್ತು ನೋರ ಎಂಬ ಹೆಸರಿನ ವಿವಾಹಿತ ದಂಪತಿಗಳು, ತಮ್ಮ ಮಗಳ ಕುರಿತು ಜ್ಞಾಪಿಸಿಕೊಂಡದ್ದು: “ಇನ್ನೂ ಅವಳಿಗೆ ನಡೆಯಲು ಬರದಿರುವಾಗಲೇ, ಅವಳು ಕಾಲುಚೀಲಗಳನ್ನು ಅಥವಾ ಚಿಕ್ಕಪುಟ್ಟ ವಸ್ತುಗಳನ್ನು ತನ್ನ ಬೆಡ್ರೂಮಿಗೆ ಕೊಂಡೊಯ್ದು, ಸರಿಯಾದ ಪೆಟ್ಟಿಗೆಯಲ್ಲಿ ಅವನ್ನು ಹಾಕಲು ಕಲಿತಳು. ಆಟಿಕೆಗಳನ್ನು ಹಾಗೂ ಪುಸ್ತಕಗಳನ್ನು ಅವುಗಳ ನಿಗದಿತ ಸ್ಥಳದಲ್ಲಿಡಲು ಸಹ ಅವಳು ಕಲಿತಳು.” ಇವು ಚಿಕ್ಕಪುಟ್ಟ ಆರಂಭಗಳಾಗಿದ್ದವಾದರೂ, ಈಗಾಗಲೇ ಆ ಮಗುವು ಜವಾಬ್ದಾರಿಯುತವಾದ ನಿರ್ಣಯಗಳನ್ನು ಮಾಡಲು ಕಲಿಯುತ್ತಿತ್ತು.
ಒಂದು ಮಗುವು ದೊಡ್ಡದಾಗುತ್ತಾ ಹೋಗುವಾಗ, ಅವನಿಗೆ ಅಥವಾ ಅವಳಿಗೆ ಇನ್ನೂ ಹೆಚ್ಚು ಪ್ರಮುಖವಾದ ಜವಾಬ್ದಾರಿಗಳನ್ನು ಒಪ್ಪಿಸಿಕೊಡಸಾಧ್ಯವಿರಬಹುದು. ಹೀಗೆ ಆಬ್ರ ಮತ್ತು ಆನೀಟಾ, ತಮ್ಮ ಮಗಳಿಗೆ ಒಂದು ಸಾಕು ನಾಯಿಯನ್ನು ತಂದುಕೊಟ್ಟರು. ಈ ಚಿಕ್ಕ ಹುಡುಗಿಯು ಆ ನಾಯಿಯನ್ನು ನೋಡಿಕೊಳ್ಳುವ ಹೊಣೆಹೊತ್ತಿದ್ದಳು, ಮತ್ತು ಅದರ ಸಂರಕ್ಷಣೆಗಾಗಿ ಅವಳು ತನ್ನ ಸ್ವಂತ ಭತ್ಯದಿಂದ ಹಣವನ್ನು ಸಹ ಕೊಟ್ಟಳು. ತಮ್ಮ ಜವಾಬ್ದಾರಿಗಳಿಗನುಸಾರ ಜೀವಿಸುವಂತೆ ಮಕ್ಕಳಿಗೆ ತರಬೇತಿ ನೀಡುವುದು, ತಾಳ್ಮೆಯನ್ನು ಅವಶ್ಯಪಡಿಸುತ್ತದೆ. ಆದರೆ ಅದು ಸಾರ್ಥಕವಾಗಿದ್ದು, ಅವರ ಭಾವನಾತ್ಮಕ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಮನೆವಾರ್ತೆಯ ಕೆಲಸಗಳು, ಮಕ್ಕಳಿಗೆ ಜವಾಬ್ದಾರಿಯನ್ನು ಕಲಿಸಲು ಇನ್ನೊಂದು ಸದವಕಾಶವನ್ನು ಒದಗಿಸುತ್ತವೆ. ಕೆಲವು ಹೆತ್ತವರು ತಮ್ಮ ಮಕ್ಕಳ ಒಳಗೂಡುವಿಕೆಯನ್ನು, ಒಂದು ಸಹಾಯವಾಗಿ ಪರಿಗಣಿಸುವುದಕ್ಕಿಂತಲೂ ಹೆಚ್ಚಾಗಿ ಉಪದ್ರವವಾಗಿ ಪರಿಗಣಿಸುವ ಮೂಲಕ, ಕಾರ್ಯತಃ ಕೌಟುಂಬಿಕ ಕರ್ತವ್ಯಗಳಲ್ಲಿ ಪಾಲ್ಗೊಳ್ಳಲು ಅವರನ್ನು ಬಿಡುವುದಿಲ್ಲ. ಇನ್ನಿತರರು, ‘ಮಕ್ಕಳಾಗಿದ್ದಾಗ ತಮಗಿದ್ದ ಜೀವಿತಕ್ಕಿಂತಲೂ ಹೆಚ್ಚು ಉತ್ತಮವಾದ ಜೀವಿತವನ್ನು ತಮ್ಮ ಮಕ್ಕಳು ಪಡೆಯ’ಬೇಕೆಂದು ನಿರ್ಧರಿಸುತ್ತಾರೆ. ಇದು ದೋಷಭರಿತ ತರ್ಕವಾಗಿದೆ. ಶಾಸ್ತ್ರಗಳು ಹೇಳುವುದು: “ಆಳನ್ನು ಚಿಕ್ಕತನದಿಂದ ಕೋಮಲವಾಗಿ ಸಾಕಿದರೆ ತರುವಾಯ ಅವನು ಎದುರುಬೀಳುವನು [“ಕೃತಘ್ನನಾಗುವನು,” NW].” (ಜ್ಞಾನೋಕ್ತಿ 29:21) ಈ ವಚನದ ಮೂಲತತ್ವವು ನಿಶ್ಚಯವಾಗಿಯೂ ಮಕ್ಕಳಿಗೆ ಅನ್ವಯವಾಗುತ್ತದೆ. ಒಬ್ಬ ಯೌವನಸ್ಥನು, “ಕೃತಘ್ನ”ನಾಗಿ ಮಾತ್ರವಲ್ಲ, ಗೃಹಕೃತ್ಯದ ಅತಿ ಚಿಕ್ಕ ಕೆಲಸಗಳನ್ನು ನಿರ್ವಹಿಸಲೂ ಅಸಮರ್ಥನಾಗಿ ಪ್ರೌಢಾವಸ್ಥೆಯನ್ನು ಪ್ರವೇಶಿಸುವುದು, ದುಃಖಕರವಾದ ಸಂಗತಿಯಾಗಿದೆ.
ಬೈಬಲ್ ಸಮಯಗಳಲ್ಲಿನ ಯುವ ಜನರಿಗೆ, ಸರ್ವಸಾಮಾನ್ಯವಾಗಿ ಮನೆವಾರ್ತೆಯ ಕೆಲಸಗಳನ್ನು ನೇಮಿಸಲಾಗುತ್ತಿತ್ತು. ಉದಾಹರಣೆಗಾಗಿ, 17ರ—ಚಿಕ್ಕ—ಪ್ರಾಯದಲ್ಲಿ, ಯುವಕನಾದ ಯೋಸೇಫನು ಕುಟುಂಬದ ಆಡುಕುರಿಗಳ ಮಂದೆಯನ್ನು ನೋಡಿಕೊಳ್ಳುವ ಜವಾಬ್ದಾರಿಯಲ್ಲಿ ಪಾಲ್ಗೊಂಡನು. (ಆದಿಕಾಂಡ 37:2) ಇದು ಒಂದು ಚಿಕ್ಕ ನೇಮಕವಾಗಿರಲಿಲ್ಲ, ಏಕೆಂದರೆ ಅವನ ತಂದೆಯ ಆಡುಕುರಿಗಳ ಮಂದೆಯು ಬಹು ದೊಡ್ಡದಾಗಿತ್ತು. (ಆದಿಕಾಂಡ 32:13-15) ಯೋಸೇಫನು ಒಬ್ಬ ಪ್ರಬಲನಾದ ಮುಂದಾಳಾಗಿ ಬೆಳೆದನೆಂಬ ನಿಜಾಂಶದ ನೋಟದಲ್ಲಿ, ಈ ಆರಂಭದ ತರಬೇತು ಅವನ ವ್ಯಕ್ತಿತ್ವವನ್ನು ಒಂದು ಸಕಾರಾತ್ಮಕವಾದ ವಿಧದಲ್ಲಿ ರೂಪಿಸಲು ತುಂಬ ಸಹಾಯ ಮಾಡಿತೆಂಬುದನ್ನು ನಂಬುವುದು ಕಷ್ಟಕರವಲ್ಲ. ತದ್ರೀತಿಯಲ್ಲಿ, ಇಸ್ರಾಯೇಲ್ನ ಭಾವಿ ಅರಸನಾದ ದಾವೀದನು ಯುವಕನಾಗಿದ್ದಾಗ, ತನ್ನ ಕುಟುಂಬದ ಆಡುಕುರಿಗಳ ಮಂದೆಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊತ್ತಿದ್ದನು.—1 ಸಮುವೇಲ 16:11.
ಇಂದು ಹೆತ್ತವರಿಗಾಗಿ ಯಾವ ಪಾಠವಿದೆ? ನಿಮ್ಮ ಮಕ್ಕಳಿಗೆ ಅರ್ಥವತ್ತಾದ ಮನೆವಾರ್ತೆಯ ಕೆಲಸಗಳನ್ನು ನೇಮಿಸಿರಿ. ಸಮಯ, ಪ್ರಯತ್ನ, ಹಾಗೂ ತಾಳ್ಮೆಯಿಂದ, ನೀವು ನಿಮ್ಮ ಎಳೆಯರಿಗೆ, ಸ್ವಚ್ಛಮಾಡುವುದು, ಅಡಿಗೆಮಾಡುವುದು, ಅಂಗಳವನ್ನು ದುರಸ್ತಾಗಿಡುವುದು, ಮತ್ತು ಮನೆಯನ್ನು ಹಾಗೂ ವಾಹನವನ್ನು ರಿಪೇರಿ ಮಾಡುವ ಕೆಲಸಗಳಲ್ಲಿ ಪಾಲ್ಗೊಳ್ಳುವಂತೆ ಕಲಿಸಸಾಧ್ಯವಿದೆ. ಮಗುವಿನ ವಯಸ್ಸು ಹಾಗೂ ಸಾಮರ್ಥ್ಯದ ಮೇಲೆ ಹೆಚ್ಚಿನದ್ದು ಹೊಂದಿಕೊಂಡಿದೆಯೆಂಬುದು ನಿಜ. ಆದರೆ ಚಿಕ್ಕ ಮಕ್ಕಳು ಸಹ, ಸಾಮಾನ್ಯವಾಗಿ ‘ತಂದೆಯವರ ಸ್ಕೂಟರನ್ನು ರಿಪೇರಿ ಮಾಡಲು ಅವರಿಗೆ ಸಹಾಯ ಮಾಡುವುದರಲ್ಲಿ’ ಅಥವಾ ‘ಊಟವನ್ನು ತಯಾರಿಸಲು ತಾಯಿಗೆ ಸಹಾಯ ಮಾಡುವುದರಲ್ಲಿ’ ಏನನ್ನಾದರೂ ಮಾಡಸಾಧ್ಯವಿದೆ.
ಮನೆವಾರ್ತೆಯ ಕೆಲಸಗಳನ್ನು ಕಲಿಸುವುದು, ಹೆತ್ತವರು ತಮ್ಮ ಮಕ್ಕಳಿಗೆ ಒಂದು ಅತ್ಯುತ್ತಮವಾದ ಉಡುಗೊರೆಯನ್ನು—ತಮ್ಮ ಸಮಯವನ್ನು—ಕೊಡುವುದನ್ನು ಸಹ ಅಗತ್ಯಪಡಿಸುತ್ತದೆ. ಇಬ್ಬರು ಮಕ್ಕಳಿರುವ ಒಬ್ಬ ವಿವಾಹಿತ ದಂಪತಿಗಳ ಬಳಿ, ಯಶಸ್ವಿಕರವಾದ ಮಕ್ಕಳ ತರಬೇತಿಯ ರಹಸ್ಯದ ಕುರಿತು ಕೇಳಲಾಯಿತು. ಅವರು ಉತ್ತರಿಸಿದ್ದು: “ಸಮಯ, ಸಮಯ, ಸಮಯ!”
ಪ್ರೀತಿಪೂರ್ಣ ತಿದ್ದುಪಾಟು
ಮಕ್ಕಳು ತಮ್ಮ ಕೆಲಸಗಳನ್ನು ಚೆನ್ನಾಗಿ ಮಾಡುವಾಗ, ಅಥವಾ ಕಡಿಮೆಪಕ್ಷ ಹಾಗೆ ಮಾಡಲು ಪ್ರಯತ್ನಿಸುವಾಗ, ಉದಾರವಾದ ಹಾಗೂ ನಿಷ್ಕಪಟವಾದ ಹೊಗಳಿಕೆಯಿಂದ ಅವರನ್ನು ಪ್ರೋತ್ಸಾಹಿಸಿರಿ! (ಮತ್ತಾಯ 25:21ನ್ನು ಹೋಲಿಸಿರಿ.) ನಿಶ್ಚಯವಾಗಿಯೂ, ವಯಸ್ಕನೊಬ್ಬನ ಸಾಮರ್ಥ್ಯದಿಂದ ಮಕ್ಕಳು ಕೆಲಸಗಳನ್ನು ಮಾಡುವುದಿಲ್ಲ. ಮತ್ತು ತಮ್ಮ ಸ್ವಂತ ನಿರ್ಣಯಗಳನ್ನು ಮಾಡುವಂತೆ ಮಕ್ಕಳನ್ನು ಬಿಡುವಾಗ, ಅನೇಕವೇಳೆ ಅವರು ತಪ್ಪುಗಳನ್ನು ಮಾಡುತ್ತಾರೆ. ಆದರೆ ತೀರ ವಿಪರೀತವಾಗಿ ಪ್ರತಿಕ್ರಿಯಿಸುವುದರಿಂದ ದೂರವಿರಿ! ಒಬ್ಬ ವಯಸ್ಕರೋಪಾದಿ ನೀವೇ ತಪ್ಪುಗಳನ್ನು ಮಾಡಿರುವುದಿಲ್ಲವೊ? ಆದುದರಿಂದ ನಿಮ್ಮ ಮಗು ತಪ್ಪುಗಳನ್ನು ಮಾಡುವಾಗ, ನೀವು ಏಕೆ ತಾಳ್ಮೆಯನ್ನು ತೋರಿಸಬಾರದು? (ಕೀರ್ತನೆ 103:13ನ್ನು ಹೋಲಿಸಿರಿ.) ತಪ್ಪುಗಳಿಗೆ ಆಸ್ಪದ ಕೊಡಿರಿ. ಆ ತಪ್ಪುಗಳನ್ನು, ಕಲಿಯುವ ಕಾರ್ಯವಿಧಾನದ ಒಂದು ಭಾಗದೋಪಾದಿ ಪರಿಗಣಿಸಿರಿ.
ಲೇಖಕರಾದ ಮೈಕಲ್ ಶೂಲ್ಮನ್ ಹಾಗೂ ಈವ ಮೆಕ್ಲರ್ ಗಮನಿಸುವುದು: “ಸ್ನೇಹಪರವಾದ ರೀತಿಯಲ್ಲಿ ಉಪಚರಿಸಲ್ಪಡುವ ಮಕ್ಕಳು, ಒಂದು ಸ್ವತಂತ್ರವಾದ ಕ್ರಿಯೆಯನ್ನು ನಡಿಸಿರುವುದಕ್ಕಾಗಿ ತಮ್ಮನ್ನು ಶಿಕ್ಷಿಸಲಾಗುತ್ತದೆಂಬ ಭಯವುಳ್ಳವರಾಗಿರುವುದಿಲ್ಲ.” ಆದರೆ, “ಭಾವನಾರಹಿತರಾದ ಅಥವಾ ಒರಟಾದ ಹೆತ್ತವರ ಮಕ್ಕಳು, ಸಹಾಯಕರವಾದ ಕೆಲಸಗಳನ್ನೂ ಒಳಗೊಂಡು, ಯಾವುದೇ ರೀತಿಯ ಸ್ವಯಂಪ್ರೇರಿತ ಕ್ರಿಯೆಯನ್ನು ಕೈಕೊಳ್ಳಲು ಕಾರ್ಯತಃ ಭಯಪಡುತ್ತಾರೆ. ಏಕೆಂದರೆ ಹೆತ್ತವರು ನಾವು ಮಾಡಿರುವ ಕೆಲಸದಲ್ಲಿ ಯಾವುದೋ ತಪ್ಪನ್ನು ಕಂಡುಹಿಡಿದು, ನಮ್ಮನ್ನು ಟೀಕಿಸುತ್ತಾರೆ ಅಥವಾ ನಮಗೆ ಶಿಕ್ಷೆಕೊಡುತ್ತಾರೆಂದು ಅವರು ಭಯಪಡುತ್ತಾರೆ.” ಈ ಹೇಳಿಕೆಯು, ಹೆತ್ತವರಿಗೆ ಬೈಬಲ್ ಕೊಡುವ ಎಚ್ಚರಿಕೆಯೊಂದಿಗೆ ಹೊಂದಿಕೆಯಲ್ಲಿದೆ: “ನಿಮ್ಮ ಮಕ್ಕಳನ್ನು ಕೆಣಕಿ ಅವರಿಗೆ ಮನಗುಂದಿಸಬೇಡಿರಿ.” (ಕೊಲೊಸ್ಸೆ 3:21) ಆದುದರಿಂದ, ಒಂದು ಮಗುವಿನ ಪ್ರಯತ್ನಗಳು ನಿರೀಕ್ಷಣೆಗಳ ಗುರಿಮುಟ್ಟದಿರುವಾಗ, ಅವನು ಅದನ್ನು ಮಾಡಲು ಪ್ರಯತ್ನಿಸಿರುವುದಕ್ಕಾದರೂ ನೀವು ಅವನನ್ನು ಏಕೆ ಹೊಗಳಬಾರದು? ಮುಂದಿನ ಬಾರಿ ಹೆಚ್ಚು ಉತ್ತಮವಾಗಿ ಮಾಡುವಂತೆ ಅವನನ್ನು ಉತ್ತೇಜಿಸಿರಿ. ಅವನ ಪ್ರಗತಿಯು ನಿಮಗೆ ಸಂತೋಷದ ಮೂಲವಾಗಿದೆ ಎಂಬುದನ್ನು ಅವನಿಗೆ ತಿಳಿಯಪಡಿಸಿರಿ. ಅವನಿಗೆ ನಿಮ್ಮ ಪ್ರೀತಿಯ ಬಗ್ಗೆ ಖಾತ್ರಿ ಕೊಡಿರಿ.
ಕೆಲವೊಮ್ಮೆ ತಿದ್ದುಪಾಟಿನ ಅಗತ್ಯವಿದೆಯೆಂಬುದು ನಿಶ್ಚಯ. ತರುಣಾವಸ್ಥೆಯ ವರ್ಷಗಳಲ್ಲಿ, ಯುವ ಜನರು ತಮ್ಮ ಸ್ವಂತ ವ್ಯಕ್ತಿತ್ವವನ್ನು ಸ್ಥಾಪಿಸಿಕೊಳ್ಳಲು, ತಮ್ಮ ಸ್ವಂತ ಅರ್ಹತೆಗಳ ಆಧಾರದ ಮೇಲೆ ವ್ಯಕ್ತಿಗಳೋಪಾದಿ ಅಂಗೀಕರಿಸಲ್ಪಡಲು ಹೋರಾಡುತ್ತಿರುವ ಸಮಯದಲ್ಲಿ, ಇದು ವಿಶೇಷವಾಗಿ ವ್ಯಕ್ತವಾಗಬಹುದು. ಆದುದರಿಂದ, ಸ್ವತಂತ್ರಭಾವವನ್ನು ಪಡೆಯಲಿಕ್ಕಾಗಿರುವ ಅಂತಹ ಪ್ರಯತ್ನಗಳನ್ನು ಹೆತ್ತವರು, ಯಾವಾಗಲೂ ದಂಗೆಕೋರಸ್ವಭಾವವೆಂದು ಅರ್ಥೈಸಿಕೊಳ್ಳುವುದಕ್ಕೆ ಬದಲಾಗಿ, ಅವುಗಳನ್ನು ತಿಳುವಳಿಕೆಯಿಂದ ದೃಷ್ಟಿಸುವುದು ವಿವೇಕಯುತವಾದದ್ದಾಗಿದೆ.
ಎಳೆಯರು ಯೋಚನೆ ಮಾಡದೆ ಕಾರ್ಯನಡಿಸುವ ಅಥವಾ “ಯೌವನದ ಇಚ್ಛೆಗಳಿಗೆ” ಬಲಿಬೀಳುವ ಪ್ರವೃತ್ತಿಯವರಾಗಿರುತ್ತಾರೆಂಬುದು ನಿಜ. (2 ತಿಮೊಥೆಯ 2:22) ಆದುದರಿಂದ, ಹರೆಯದ ನಡವಳಿಕೆಯ ವಿಷಯದಲ್ಲಿ ಮಿತಿಗಳನ್ನಿಡಲು ತಪ್ಪಿಹೋಗುವುದು, ಒಂದು ಮಗುವನ್ನು ಭಾವನಾತ್ಮಕವಾಗಿ ಹಾನಿಗೊಳಿಸಬಲ್ಲದು; ಅವನು ಸ್ವನಿಯಂತ್ರಣ ಅಥವಾ ಸ್ವಶಿಸ್ತನ್ನು ಕಲಿಯಲು ತಪ್ಪಿಹೋಗುವನು. ಬೈಬಲು ಎಚ್ಚರಿಸುವುದು: “ಶಿಕ್ಷಿಸದೆ ಬಿಟ್ಟ ಹುಡುಗನು ತಾಯಿಯ ಮಾನವನ್ನು ಕಳೆಯುವನು.” (ಜ್ಞಾನೋಕ್ತಿ 29:15) ಆದರೆ ಪ್ರೀತಿಯಿಂದ ಕೊಡಲ್ಪಡುವ ಸೂಕ್ತವಾದ ಶಿಸ್ತು ಪ್ರಯೋಜನಕರವಾಗಿರುತ್ತದೆ ಮತ್ತು ಅದು ಪ್ರೌಢಾವಸ್ಥೆಯ ತಗಾದೆಗಳು ಹಾಗೂ ಒತ್ತಡಗಳಿಗಾಗಿ ಒಬ್ಬ ಯುವ ವ್ಯಕ್ತಿಯನ್ನು ಸಿದ್ಧಗೊಳಿಸುತ್ತದೆ. ಬೈಬಲು ಬುದ್ಧಿ ಹೇಳುವುದು: “ಬೆತ್ತಹಿಡಿಯದ ಪಿತ ಪುತ್ರನಿಗೆ ಶತ್ರು; ಚೆನ್ನಾಗಿ ಶಿಕ್ಷಿಸುವ ಪಿತ ಪುತ್ರನಿಗೆ ಮಿತ್ರ.” (ಜ್ಞಾನೋಕ್ತಿ 13:24) ಆದರೂ, ಶಿಸ್ತಿನ ಸಾರವು, ಶಿಕ್ಷೆಕೊಡುವುದಲ್ಲ, ಬದಲಾಗಿ ಕಲಿಸುವುದು ಹಾಗೂ ತರಬೇತಿ ನೀಡುವುದಾಗಿದೆ ಎಂಬುದನ್ನು ಜ್ಞಾಪಕದಲ್ಲಿಡಿ. ಇಲ್ಲಿ “ಬೆತ್ತ” ಎಂಬುದು, ತಮ್ಮ ಮಂದೆಗಳನ್ನು ನಡೆಸಲಿಕ್ಕಾಗಿ ಕುರುಬರಿಂದ ಉಪಯೋಗಿಸಲ್ಪಡುವ ಕೋಲಿಗೆ ಸೂಚಿಸಿರುವುದು ಸಂಭವನೀಯ. (ಕೀರ್ತನೆ 23:4) ಅದು ಒರಟಾದ ಪಾಶವೀಯತೆಯ ಸಂಕೇತವಲ್ಲ, ಬದಲಾಗಿ ಪ್ರೀತಿಪರ ಮಾರ್ಗದರ್ಶನದ ಒಂದು ಸಂಕೇತವಾಗಿದೆ.
ಜೀವಿತಕ್ಕಾಗಿರುವ ಶಿಕ್ಷಣ
ಒಂದು ಮಗುವಿನ ಶಿಕ್ಷಣದ ವಿಷಯಕ್ಕೆ ಬರುವಾಗ, ಹೆತ್ತವರ ಮಾರ್ಗದರ್ಶನೆಯು ವಿಶೇಷವಾಗಿ ಅಗತ್ಯವಾಗಿದೆ. ನಿಮ್ಮ ಮಗುವಿನ ಶಿಕ್ಷಣದ ವಿಷಯದಲ್ಲಿ ಆಸಕ್ತಿವಹಿಸಿರಿ. ಸೂಕ್ತವಾದ ಶಾಲಾ ಕೋರ್ಸ್ಗಳನ್ನು ಆಯ್ದುಕೊಳ್ಳಲು ಮತ್ತು ಯಾವುದೇ ಹೆಚ್ಚಿನ ಶಿಕ್ಷಣವು ಅಗತ್ಯವಿರುವುದೋ ಎಂಬುದರ ಕುರಿತು ಜವಾಬ್ದಾರಿಯುತವಾದ ನಿರ್ಣಯವನ್ನು ಮಾಡಲು ಅವನಿಗೆ ಸಹಾಯ ಮಾಡಿರಿ.a
ಎಲ್ಲಕ್ಕಿಂತಲೂ ಅತಿ ಪ್ರಾಮುಖ್ಯವಾದ ಶಿಕ್ಷಣವು, ಆತ್ಮಿಕ ಶಿಕ್ಷಣವಾಗಿದೆ ಎಂಬುದು ನಿಶ್ಚಯ. (ಯೆಶಾಯ 54:13) ವಯಸ್ಕ ಲೋಕದಲ್ಲಿ ಬದುಕಿ ಉಳಿಯಲಿಕ್ಕಾಗಿ ಮಕ್ಕಳಿಗೆ ದೈವಿಕ ಮೌಲ್ಯಗಳ ಅಗತ್ಯವಿದೆ. ಅವರ “ಜ್ಞಾನೇಂದ್ರಿಯಗಳು” ತರಬೇತುಗೊಳಿಸಲ್ಪಡಬೇಕು. (ಇಬ್ರಿಯ 5:14) ಈ ವಿಷಯದಲ್ಲಿ ಅವರಿಗೆ ಸಹಾಯ ಮಾಡಲಿಕ್ಕಾಗಿ ಹೆತ್ತವರು ಹೆಚ್ಚನ್ನು ಮಾಡಬಲ್ಲರು. ಯೆಹೋವನ ಸಾಕ್ಷಿಗಳ ನಡುವೆಯಿರುವ ಕುಟುಂಬಗಳು, ತಮ್ಮ ಮಕ್ಕಳೊಂದಿಗೆ ಬೈಬಲಿನ ಕ್ರಮವಾದ ಅಭ್ಯಾಸವನ್ನು ನಡೆಸುವಂತೆ ಪ್ರೋತ್ಸಾಹಿಸಲ್ಪಡುತ್ತವೆ. ಶೈಶವಾವಸ್ಥೆಯಿಂದ ತಿಮೊಥೆಯನಿಗೆ ಶಾಸ್ತ್ರಗಳನ್ನು ಕಲಿಸಿದ ಅವನ ತಾಯಿಯ ಮಾದರಿಯನ್ನು ಅನುಸರಿಸುತ್ತಾ, ಸಾಕ್ಷಿ ಹೆತ್ತವರು ತದ್ರೀತಿಯಲ್ಲಿ ತಮ್ಮ ಚಿಕ್ಕ ಮಕ್ಕಳಿಗೆ ಕಲಿಸುತ್ತಾರೆ.
ಬಾರ್ಬ್ರ ಎಂಬ ಹೆಸರಿನ ಏಕ ಹೆತ್ತವಳೊಬ್ಬಳು, ಕುಟುಂಬದ ಬೈಬಲ್ ಅಭ್ಯಾಸವನ್ನು, ತನ್ನ ಮಕ್ಕಳಿಗೆ ಒಂದು ಅತ್ಯಂತ ಹಿತಕರವಾದ ಅನುಭವವಾಗಿ ಮಾಡುತ್ತಾಳೆ. “ಆ ಸಾಯಂಕಾಲ ನಾನು ಮಕ್ಕಳಿಗೆ ಒಂದು ಒಳ್ಳೆಯ ಊಟವನ್ನು, ಅದರೊಂದಿಗೆ ಅವರು ತುಂಬ ಇಷ್ಟಪಡುವಂತಹ ಸಿಹಿಭಕ್ಷ್ಯವನ್ನು ಕೊಡುವುದನ್ನು ಖಚಿತಪಡಿಸಿಕೊಳ್ಳುತ್ತೇನೆ. ಅದಕ್ಕೆ ತಕ್ಕ ವಾತಾವರಣವನ್ನು ಸೃಷ್ಟಿಸಲಿಕ್ಕಾಗಿ ನಾನು ಕಿಂಗ್ಡಮ್ ಮೆಲೊಡೀಸ್ ಟೇಪ್ಗಳನ್ನು ಹಾಕುತ್ತೇನೆ. ತದನಂತರ, ಪ್ರಾರ್ಥನೆಯೊಂದಿಗೆ ಆರಂಭಿಸಿದ ಬಳಿಕ, ನಾವು ಸಾಮಾನ್ಯವಾಗಿ ಕಾವಲಿನಬುರುಜು ಪತ್ರಿಕೆಯನ್ನು ಅಭ್ಯಾಸಿಸುತ್ತೇವೆ. ಆದರೆ ವಿಶೇಷ ಅಗತ್ಯವೇನಾದರೂ ಇರುವಲ್ಲಿ, ಯುವ ಜನರ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳು ಎಂಬ ಪುಸ್ತಕದಂತಹ ಪ್ರಕಾಶನಗಳನ್ನು ನಾನು ಉಪಯೋಗಿಸಸಾಧ್ಯವಿದೆ.”b ಬಾರ್ಬ್ರಳಿಗನುಸಾರ, ಬೈಬಲನ್ನು ಅಭ್ಯಾಸಿಸುವುದು, ಅವಳ ಮಕ್ಕಳಿಗೆ “ವಿಷಯಗಳ ಕುರಿತಾದ ಯೆಹೋವನ ನೋಟವನ್ನು ಪಡೆದುಕೊಳ್ಳಲು” ಸಹಾಯ ಮಾಡುತ್ತದೆ.
ಹೌದು, ಒಂದು ಮಗುವಿಗೆ ದೇವರ ವಾಕ್ಯವಾದ ಬೈಬಲಿನ ಜ್ಞಾನ ಮತ್ತು ತಿಳುವಳಿಕೆಗಿಂತಲೂ ದೊಡ್ಡದಾದ ಯಾವುದೇ ಉಡುಗೊರೆಯನ್ನು ಕೊಡಲು ಸಾಧ್ಯವಿಲ್ಲ. ಅದು “ಮೂಢರಿಗೆ ಜಾಣತನವನ್ನೂ ಯೌವನಸ್ಥರಿಗೆ ತಿಳುವಳಿಕೆಯನ್ನೂ ಬುದ್ಧಿಯನ್ನೂ ಉಂಟುಮಾಡು”ವುದು. (ಜ್ಞಾನೋಕ್ತಿ 1:4) ಹೀಗೆ ಸಜ್ಜಿತನಾದ ಯುವ ವ್ಯಕ್ತಿಯೊಬ್ಬನು, ಹೊಸ ಒತ್ತಡಗಳು ಹಾಗೂ ಸನ್ನಿವೇಶಗಳನ್ನು ಎದುರಿಸಲು ಸಮರ್ಥನಾದವನೋಪಾದಿ ಪ್ರೌಢಾವಸ್ಥೆಯನ್ನು ಪ್ರವೇಶಿಸುತ್ತಾನೆ.
ಹಾಗಿದ್ದರೂ, ಮಕ್ಕಳು ಮನೆ ಬಿಟ್ಟು ಹೋಗುವಾಗ, ಅದು ಅಧಿಕಾಂಶ ಹೆತ್ತವರ ಜೀವನ ಶೈಲಿಯಲ್ಲಿ ಒಂದು ದೊಡ್ಡ ಬದಲಾವಣೆಯನ್ನು ಉಂಟುಮಾಡುತ್ತದೆ. ಖಾಲಿಯಾದ ಗೂಡನ್ನು ಅವರು ಯಶಸ್ವಿಕರವಾಗಿ ಹೇಗೆ ನಿಭಾಯಿಸಸಾಧ್ಯವಿದೆ ಎಂಬ ವಿಷಯವನ್ನು, ನಮ್ಮ ಮುಂದಿನ ಲೇಖನದಲ್ಲಿ ಚರ್ಚಿಸಲಾಗಿದೆ.
[ಅಧ್ಯಯನ ಪ್ರಶ್ನೆಗಳು]
a ಎಚ್ಚರ! ಪತ್ರಿಕೆಯ, ಸೆಪ್ಟಂಬರ್ 8, 1988ರ (ಇಂಗ್ಲಿಷ್) ಸಂಚಿಕೆಯಲ್ಲಿನ “ಹೆತ್ತವರೇ—ನಿಮಗೂ ಮನೆಕೆಲಸವಿದೆ!” ಎಂಬ ಲೇಖನಮಾಲೆಯನ್ನು ನೋಡಿರಿ.
b ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತ.
[ಪುಟ 6 ರಲ್ಲಿರುವ ಸಂಕ್ಷಿಪ್ತ ವಿವರಣೆ]
“ಭಾವನಾರಹಿತರಾದ ಅಥವಾ ಒರಟಾದ ಹೆತ್ತವರ ಮಕ್ಕಳು, ಸಹಾಯಕರವಾದ ಕೆಲಸಗಳನ್ನೂ ಒಳಗೊಂಡು, ಯಾವುದೇ ರೀತಿಯ ಸ್ವಯಂಪ್ರೇರಿತ ಕ್ರಿಯೆಯನ್ನು ಕೈಕೊಳ್ಳಲು ಕಾರ್ಯತಃ ಭಯಪಡುತ್ತಾರೆ. ಏಕೆಂದರೆ ಹೆತ್ತವರು ನಾವು ಮಾಡಿರುವ ಕೆಲಸದಲ್ಲಿ ಯಾವದೋ ತಪ್ಪನ್ನು ಕಂಡುಹಿಡಿದು, ನಮ್ಮನ್ನು ಟೀಕಿಸುತ್ತಾರೆ ಅಥವಾ ನಮಗೆ ಶಿಕ್ಷೆಕೊಡುತ್ತಾರೆಂದು ಅವರು ಭಯಪಡುತ್ತಾರೆ.”—ನೈತಿಕತೆಯುಳ್ಳ ಒಂದು ಮಗುವನ್ನು ಬೆಳೆಸುವುದು (ಇಂಗ್ಲಿಷ್), ಮೈಕಲ್ ಶೂಲ್ಮನ್ ಹಾಗೂ ಈವ ಮೆಕ್ಲರ್ರಿಂದ.
[ಪುಟ 6 ರಲ್ಲಿರುವ ಚೌಕ]
ಏಕ ಹೆತ್ತವರು—ಹೋಗಲು ಬಿಡುವುದರ ಪಂಥಾಹ್ವಾನ
ರೆಬೆಕ ಎಂಬ ಹೆಸರಿನ ಏಕ ಹೆತ್ತವಳೊಬ್ಬಳು ಗಮನಿಸುವುದು: “ತಮ್ಮ ಮಕ್ಕಳನ್ನು ಹೋಗಲು ಬಿಡುವುದು ಏಕ ಹೆತ್ತವರಿಗೆ ತುಂಬ ಕಷ್ಟಕರವಾದದ್ದಾಗಿದೆ. ನಾವು ನಮ್ಮ ವಿಷಯದಲ್ಲಿ ಜಾಗರೂಕರಾಗಿರದಿದ್ದಲ್ಲಿ, ನಾವು ಅವರನ್ನು ವಿಪರೀತವಾಗಿ ಸಂರಕ್ಷಿಸಿ, ಅವರನ್ನು ನಿಗ್ರಹಿಸುವ ಪ್ರವೃತ್ತಿಯವರಾಗುತ್ತೇವೆ.” ಕುಟುಂಬ ಸಂತೋಷದ ರಹಸ್ಯ* ಎಂಬ ಪುಸ್ತಕವು 107-8ನೆಯ ಪುಟಗಳಲ್ಲಿ, ಈ ಸಹಾಯಕರ ಹೇಳಿಕೆಗಳನ್ನು ಕೊಡುತ್ತದೆ:
“ಒಂಟಿ ಹೆತ್ತವರು ತಮ್ಮ ಮಕ್ಕಳಿಗೆ ವಿಶೇಷವಾಗಿ ಆಪ್ತ ಸಂಬಂಧದಲ್ಲಿರುವುದು ಸ್ವಾಭಾವಿಕ, ಆದರೂ ಹೆತ್ತವರು ಮತ್ತು ಮಕ್ಕಳ ನಡುವಣ ದೈವನೇಮಿತ ಮೇರೆಗಳು ಮುರಿಯಲ್ಪಡದಂತೆ ಜಾಗ್ರತೆವಹಿಸಬೇಕು. ಉದಾಹರಣೆಗಾಗಿ, ಒಂಟಿ ತಾಯಿಯು ತನ್ನ ಮಗನು, ಕುಟುಂಬದ ತಲೆಯ ಜವಾಬ್ದಾರಿಗಳನ್ನು ವಹಿಸುವಂತೆ ಅಪೇಕ್ಷಿಸುವಲ್ಲಿ ಅಥವಾ ತನ್ನ ಮಗಳನ್ನು ಭರವಸಾರ್ಹ ಸ್ನೇಹಿತೆಯಂತೆ ನೋಡಿ ಆಂತರ್ಯದ ಸಮಸ್ಯೆಗಳಿಂದ ಹುಡುಗಿಯ ಮೇಲೆ ಭಾರಹೊರಿಸುವಲ್ಲಿ, ಗಂಭೀರವಾದ ಸಮಸ್ಯೆಗಳು ಏಳಬಲ್ಲವು. ಹಾಗೆ ಮಾಡುವುದು ಅಯುಕ್ತವೂ, ಒತ್ತಡಭರಿತವೂ ಆಗಿದೆ, ಮತ್ತು ಪ್ರಾಯಶಃ ಅದು ಮಗುವನ್ನು ಕಂಗೆಡಿಸೀತು. “ಹೆತ್ತವರೋಪಾದಿ, ನೀವು ನಿಮ್ಮ ಮಕ್ಕಳನ್ನು ಪರಾಮರಿಸುವಿರಿ—ವಿಪರ್ಯಯವಾಗಿ ಅಲ್ಲ ಎಂಬ ಆಶ್ವಾಸನೆಯನ್ನು ನಿಮ್ಮ ಮಕ್ಕಳಿಗೆ ಕೊಡಿರಿ. (ಹೋಲಿಸಿ 2 ಕೊರಿಂಥ 12:14.) ಕೆಲವೊಮ್ಮೆ, ಸ್ವಲ್ಪ ಬುದ್ಧಿವಾದ ಅಥವಾ ಬೆಂಬಲವು ನಿಮಗೆ ಬೇಕಾದೀತು. ಅದನ್ನು ಕ್ರೈಸ್ತ ಹಿರಿಯರಿಂದ ಅಥವಾ ಪಕ್ವತೆಯುಳ್ಳ ಕ್ರೈಸ್ತ ಸ್ತ್ರೀಯರಿಂದ ಕೋರಿರಿ, ನಿಮ್ಮ ಚಿಕ್ಕ ಮಕ್ಕಳಿಂದಲ್ಲ.—ತೀತ 2:3.” ಏಕ ಹೆತ್ತವರು ಸೂಕ್ತವಾದ ಗಡಿರೇಖೆಗಳನ್ನು ಸ್ಥಾಪಿಸಿ, ತಮ್ಮ ಮಕ್ಕಳೊಂದಿಗೆ ಹಿತಕರವಾದ ಸಂಬಂಧವನ್ನು ಕಾಪಾಡಿಕೊಳ್ಳುವಾಗ, ಸಾಮಾನ್ಯವಾಗಿ ಅವರನ್ನು ಹೋಗಲು ಬಿಡುವುದು ಹೆಚ್ಚು ಸುಲಭವಾಗಿರುತ್ತದೆ.
*ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತ.
[ಪುಟ 7 ರಲ್ಲಿರುವ ಚಿತ್ರ]
ಪ್ರಾಯೋಗಿಕ ತರಬೇತಿಯು ಮಕ್ಕಳಿಗೆ, ಹೆಚ್ಚು ಜವಾಬ್ದಾರಿಯುಳ್ಳ ವಯಸ್ಕರಾಗಲು ಸಹಾಯ ಮಾಡಸಾಧ್ಯವಿದೆ
[ಪುಟ 8 ರಲ್ಲಿರುವ ಚಿತ್ರ]
ಒಂದು ಕುಟುಂಬ ಬೈಬಲ್ ಅಭ್ಯಾಸವು, ವಯಸ್ಕ ಜೀವಿತವನ್ನು ನಿಭಾಯಿಸಲು ಅಗತ್ಯವಾದ ವಿವೇಕವನ್ನು ಮಕ್ಕಳಿಗೆ ಕೊಡಬಲ್ಲದು