801 ಫ್ಲೈಟ್—ದುರಂತದಿಂದ ನಾನು ಬಚಾವಾದೆ
ನಾನು ಕಿಟಕಿಯಿಂದ ಹೊರಗೆ ನೋಡಿದಾಗ, ನಮ್ಮ ವಿಮಾನವು ಗ್ವಾಮ್ನಲ್ಲಿ ನಿಲ್ಲಲಿಕ್ಕಾಗಿ ಕೆಳಗಿಳಿಯುತ್ತಿತ್ತು. ‘ವಿಚಿತ್ರ’ ಎಂದು ನಾನು ಯೋಚಿಸಿದೆ. ‘ತೀರ ಕತ್ತಲೆಯಿರುವಂತೆ ತೋರುತ್ತದೆ.’ ನಿಜ, ಆಗ ಮಧ್ಯರಾತ್ರಿಯಾಗಿತ್ತು, ಮತ್ತು ಭಾರಿ ಮಳೆಯು ದೃಶ್ಯತೆಯನ್ನು ಮಬ್ಬುಗೊಳಿಸಿತು. ಆದರೆ ಆ ದ್ವೀಪದ ಚಿರಪರಿಚಿತ ದೀಪಗಳು ಹಾಗೂ ವಿಮಾನ ನಿಲ್ದಾಣದ ಹೊಳೆಯುವ ರನ್ವೇಗಳು ಎಲ್ಲಿದ್ದವು? ನಾನು ನೋಡಸಾಧ್ಯವಿದ್ದದ್ದು, ನಮ್ಮ ಜಂಬೋ ಜೆಟ್ನ ರೆಕ್ಕೆಗಳ ಮಿಣುಕು ದೀಪಗಳಷ್ಟೇ ಆಗಿತ್ತು.
ವಿಮಾನದ ಸಹಚರರಲ್ಲಿ ಒಬ್ಬನು, ವಿಮಾನದ ಕೆಳಗಿಳಿಯುವಿಕೆಗಾಗಿರುವ ಸಿದ್ಧತೆಯಲ್ಲಿ ಸಾಮಾನ್ಯವಾಗಿ ನೀಡಲ್ಪಡುವ ಪ್ರಕಟನೆಗಳನ್ನು ಮಾಡಿದ್ದನು ಮತ್ತು ವಿಮಾನದ ಇಳಿಯುವ ಗೇರ್ ತನ್ನ ಸ್ಥಾನದಲ್ಲಿ ಗಟ್ಟಿಯಾಗಿ ಸಿಕ್ಕಿಹಾಕಿಕೊಂಡ ಶಬ್ದವನ್ನು ನಾನು ಕೇಳಿಸಿಕೊಂಡೆ. ಹಠಾತ್ತನೆ ನಮ್ಮ ವಿಮಾನವು ನೆಲವನ್ನು ಉಜ್ಜಿಕೊಂಡು ಹೋದಂತೆ ದೊಡ್ಡ ಶಬ್ದವು ಉಂಟಾಯಿತು. ವಿಮಾನವು ನಿಯಂತ್ರಣವಿಲ್ಲದೆ ಓಲಾಡುತ್ತಾ ಹೋಯಿತು ಮತ್ತು ಪ್ರಯಾಣಿಕರು ತಮ್ಮ ಕುರ್ಚಿಯ ಹಿಡಿಗಳನ್ನು ಭದ್ರವಾಗಿ ಹಿಡಿದುಕೊಂಡು, “ಇಲ್ಲಿ ಏನಾಗುತ್ತಿದೆ?” ಎಂದು ಕಿರುಚಾಡಿದರು.
ಕೆಲವೊಂದು ಕ್ಷಣಗಳ ತರುವಾಯ, ವಿಮಾನ ನಿಲ್ದಾಣಕ್ಕೆ ಇನ್ನೂ ಐದು ಕಿಲೊಮೀಟರುಗಳಿದ್ದಾಗ, ನಮ್ಮ ಬೋಯಿಂಗ್ 747 ಒಂದು ಪರ್ವತದ ಪಾರ್ಶ್ವಕ್ಕೆ ರಪ್ಪನೆ ಅಪ್ಪಳಿಸಿತು. ನಮ್ಮ ವಿಮಾನಚಾಲಕನ ತಪ್ಪೆಣಿಕೆಯ ಕಾರಣದಿಂದಲೇ ಇದಾಯಿತೆಂಬುದು ಸುವ್ಯಕ್ತ. 1997, ಆಗಸ್ಟ್ 6ರಂದು ನಡೆದ ಆ ವಿಮಾನ ದುರಂತದ ಫಲಿತಾಂಶವಾಗಿ, ಒಟ್ಟು 228 ಮಂದಿ ಪ್ರಯಾಣಿಕರು ಹಾಗೂ ವಿಮಾನ ತಂಡದ ಸದಸ್ಯರು ಮೃತಪಟ್ಟರು. ಬಚಾವಾಗಿದ್ದ ಕೇವಲ 26 ಮಂದಿಯಲ್ಲಿ ನಾನೂ ಒಬ್ಬನಾಗಿದ್ದೆ.
ಕೊರಿಯದ ಸೋಲ್ನಲ್ಲಿ ನಾನು ವಿಮಾನವನ್ನು ಹತ್ತುವುದಕ್ಕೆ ಮೊದಲು, ವಿಮಾನದ ಪ್ರತಿನಿಧಿಯೊಬ್ಬನು ನನ್ನ ಕೋಚ್ ಸೀಟನ್ನು ಉತ್ತಮ ದರ್ಜೆಯ ಸೀಟಿಗೆ ಬದಲಾಯಿಸಿದನು. ಅಂದರೆ ಫಸ್ಟ್ ಕ್ಲಾಸ್ನಲ್ಲಿ ಕೊನೆಯದಾಗಿ ಉಳಿದಿದ್ದ ಸೀಟನ್ನು ನನಗೆ ಕೊಟ್ಟನು. ನಾನು ಎಷ್ಟು ಸಂತೋಷಗೊಂಡೆನೆಂದರೆ, ಗ್ವಾಮ್ನ ವಿಮಾನ ನಿಲ್ದಾಣದಲ್ಲಿ ನನ್ನನ್ನು ಸಂಧಿಸಲಿಕ್ಕಿದ್ದ ನನ್ನ ಹೆಂಡತಿಯಾದ ಸೂನ್ ಡಕ್ಗೆ ನಾನು ಫೋನ್ ಮಾಡಿದೆ. ಆ ಸೀಟ್ನ ಬದಲಾವಣೆಯು, ನಾನು ಎಂದೂ ಊಹಿಸಿಕೊಳ್ಳಲು ಸಾಧ್ಯವಿಲ್ಲದಂತಹ ರೀತಿಯಲ್ಲಿ ಪ್ರಯೋಜನಕರವಾಗಿ ಪರಿಣಮಿಸಿತು.
ದುರಂತ ಮತ್ತು ತದನಂತರದ ದೃಶ್ಯ
ಪರಿಮಿತವಾದ ದೃಶ್ಯತೆಯ ಕಾರಣದಿಂದ, ಸನ್ನಿಹಿತವಾಗುತ್ತಿದ್ದ ಯಾವುದೇ ಅಪಾಯದ ಕುರಿತು ನಾವಿಕ ತಂಡವು ಅರಿವಿಲ್ಲದವರಾಗಿದ್ದಿರಬಹುದು. ಪ್ರತಿಯೊಂದೂ ಎಷ್ಟು ತ್ವರಿತಗತಿಯಿಂದ ನಡೆದುಹೋಯಿತು! ಒಂದು ಕ್ಷಣ, ನಾನು ನನ್ನನ್ನು ಅತ್ಯಂತ ಕೆಟ್ಟ ಪರಿಸ್ಥಿತಿಗಾಗಿ ಸಿದ್ಧಪಡಿಸಿಕೊಳ್ಳುತ್ತಿದ್ದೆ, ಮತ್ತು ತದನಂತರ ನನಗೆ ಗೊತ್ತಾದ ವಿಷಯವೇನೆಂದರೆ, ನಾನು ವಿಮಾನದ ಹೊರಗೆ ನೆಲದ ಮೇಲೆ ಬಿದ್ದಿದ್ದೆ—ನನ್ನ ಸೀಟಿಗೆ ಇನ್ನೂ ಬಿಗಿಯಾಗಿ ಬಂಧಿತನಾಗಿದ್ದೆ. ನಾನು ಪ್ರಜ್ಞೆಯನ್ನು ಕಳೆದುಕೊಂಡಿದ್ದೆನೊ ಇಲ್ಲವೊ ಎಂಬುದು ನನಗೆ ನಿಶ್ಚಯವಾಗಿ ಗೊತ್ತಿಲ್ಲ.
‘ಇದು ಒಂದು ಕನಸೊ?’ ಎಂದು ನಾನು ಆಶ್ಚರ್ಯಪಟ್ಟೆ. ಅದು ಕನಸಾಗಿರಲಿಲ್ಲ ಎಂಬುದನ್ನು ನಾನು ಗ್ರಹಿಸಿದಾಗ, ನನ್ನ ಮೊದಲ ಆಲೋಚನೆಗಳು, ಈ ದುರಂತದ ಕುರಿತಾಗಿ ನನ್ನ ಪತ್ನಿಯು ಕೇಳಿಸಿಕೊಂಡಾಗ, ಅವಳು ಹೇಗೆ ಪ್ರತಿಕ್ರಿಯೆ ತೋರಿಸುವಳು ಎಂಬುವಾಗಿದ್ದವು. ಸಮಯಾನಂತರ, ತಾನು ಎಂದೂ ನಿರೀಕ್ಷೆಯನ್ನು ಬಿಟ್ಟುಬಿಡಲಿಲ್ಲವೆಂದು ಅವಳು ನನಗೆ ಹೇಳಿದಳು. ವಿಮಾನ ನಿಲ್ದಾಣದಲ್ಲಿ ಯಾರೋ ಒಬ್ಬರು, ಕೇವಲ ಏಳೇ ಮಂದಿ ಪ್ರಯಾಣಿಕರು ಬಚಾವಾದರು ಎಂದು ಹೇಳಿದ್ದನ್ನು ಕೇಳಿಸಿಕೊಂಡಾಗಲೂ, ನಾನು ಆ ಏಳು ಮಂದಿಯಲ್ಲಿ ಒಬ್ಬನಾಗಿದ್ದೆನೆಂದು ಅವಳು ನಂಬಿದಳು.
ನಮ್ಮ ವಿಮಾನವು ನಾಲ್ಕು ಭಾಗಗಳಾಗಿ ಒಡೆದಿತ್ತು. ಆ ಭಾಗಗಳು ಹಳ್ಳದಿಣ್ಣೆಗಳುಳ್ಳ ಕಗ್ಗಾಡಿನ ಭೂಪ್ರದೇಶದುದ್ದಕ್ಕೂ ಚೆಲ್ಲಾಪಿಲ್ಲಿಯಾಗಿದ್ದವು. ದೇಹಗಳು ಎಲ್ಲ ಕಡೆಗಳಲ್ಲಿ ಚದುರಿದ್ದವು. ವಿಮಾನದ ಭಾಗಗಳಿಗೆ ಬೆಂಕಿ ಹತ್ತಿಕೊಂಡಿತ್ತು. ಮತ್ತು ನಾನು ಸ್ಫೋಟನಗಳನ್ನು ಹಾಗೂ ಅದರೊಂದಿಗೆ ಭೀಕರ ನರಳಾಟ ಹಾಗೂ ಗೋಳಾಟವನ್ನು ಕೇಳಿಸಿಕೊಂಡೆ. “ಕಾಪಾಡಿ! ಕಾಪಾಡಿ!” ಎಂದು ಧ್ವನಿಗಳು ಬೇಡುತ್ತಿದ್ದವು. 1.8 ಮೀಟರುಗಳಷ್ಟು ಎತ್ತರದ ಜಂಬು ಹುಲ್ಲಿನ ಮೆದೆಯಲ್ಲಿ ಬೆಂಕಿಯ ಭಯಾನಕ ಬೆಳಕಿನಲ್ಲಿ ನನ್ನ ಸೀಟು ಬಂದು ಬಿದ್ದಿತ್ತು. ಸಮೀಪದಲ್ಲಿ ನಾನು ಒಂದು ಕಡಿದಾದ ಬೆಟ್ಟವನ್ನು ನೋಡಸಾಧ್ಯವಿತ್ತು. ಆಗ ಸಮಯ ಸುಮಾರು 2:00 ಗಂಟೆ—ಮಧ್ಯರಾತ್ರಿ—ಯಾಗಿತ್ತು, ಮತ್ತು ಮಳೆ ಸುರಿಯುತ್ತಾ ಇತ್ತು.
ನಾನು ಎಷ್ಟು ಸ್ತಬ್ಧನಾಗಿದ್ದೆನೆಂದರೆ, ಒಬ್ಬ ಎಳೆಯ ಹುಡುಗಿಯ ನೆತ್ತಿಯು ಅವಳ ತಲೆಯ ಹಿಂದೆ ಜೋತುಬಿದ್ದಿರುವುದನ್ನು ನಾನು ಗಮನಿಸುವ ತನಕ, ನಾನು ಗಾಯಗೊಂಡಿರಬಹುದೆಂದು ಸಹ ನೆನಸಿರಲಿಲ್ಲ. ತತ್ಕ್ಷಣವೇ ನಾನು ನನ್ನ ತಲೆಯ ಬಳಿ ಕೈಯಾಡಿಸಿ, ನನ್ನ ಎಡಗಣ್ಣಿನ ಮೇಲಾದ ಒಂದು ಗಾಯದಿಂದ ರಕ್ತಬರುತ್ತಿರುವುದನ್ನು ಕಂಡುಕೊಂಡೆ. ನನ್ನ ದೇಹದ ಉಳಿದ ಭಾಗವನ್ನು ನಾನು ಪರೀಕ್ಷಿಸತೊಡಗಿದೆ, ಮತ್ತು ಇನ್ನೂ ಅನೇಕ ಸಣ್ಣಪುಟ್ಟ ಗಾಯಗಳನ್ನು ಕಂಡುಕೊಂಡೆ. ಆದರೆ, ಕೃತಜ್ಞತಾಪೂರ್ವಕವಾಗಿ ಯಾವ ಗಾಯಗಳೂ ಗಂಭೀರವಾಗಿ ತೋರಲಿಲ್ಲ. ಆದರೆ, ನನ್ನ ಕಾಲುಗಳಿಗೆ ಲಕ್ವಹೊಡೆದಂತಹ ನೋವು ಇತ್ತು. ಇದು ನನಗೆ ಚಲಿಸುವದನ್ನು ಅಸಾಧ್ಯವನ್ನಾಗಿ ಮಾಡಿತು. ಕಾಲುಗಳೆರಡೂ ಮುರಿದುಹೋಗಿದ್ದವು.
ತದನಂತರ, ನಾನು ಆಸ್ಪತ್ರೆಯನ್ನು ತಲಪಿದಾಗ, ವೈದ್ಯರು ನನ್ನ ಗಾಯಗಳನ್ನು “ಚಿಕ್ಕ”ವುಗಳೆಂದು ಹೇಳಿದರು. ಮತ್ತು ಬಚಾವಾದ ಇತರರ ಗಾಯಗಳೊಂದಿಗೆ ಹೋಲಿಸುವಾಗ, ನಿಜವಾಗಿಯೂ ಅವು ಚಿಕ್ಕವುಗಳಾಗಿದ್ದವು. ಒಬ್ಬ ಪುರುಷನನ್ನು ಭಗ್ನಾವಶೇಷದಿಂದ ಹೊರಗೆಳೆಯಲಾಯಿತು; ಆದರೆ ಅವನ ಕಾಲುಗಳೇ ಇಲ್ಲವಾಗಿದ್ದವು. ಇತರರು ಗುರುತರವಾದ ಸುಟ್ಟಗಾಯಗಳಿಂದ ಕಷ್ಟಾನುಭವಿಸಿದರು. ದುರಂತದಲ್ಲಿ ಬದುಕಿ ಉಳಿದಿದ್ದ ಮೂವರು, ವಾರಗಟ್ಟಲೆ ಅತಿಯಾದ ಯಾತನೆಯನ್ನು ಅನುಭವಿಸಿ, ತದನಂತರ ಮೃತಪಟ್ಟರು.
ಜ್ವಾಲೆಗಳ ಕಾರಣ ಚಿಂತೆಗೊಳಗಾದದ್ದು
ನನ್ನ ಗಾಯಗಳ ವಿಷಯದಲ್ಲಿಯೇ ಆಲೋಚನೆಮಾಡುತ್ತಿರುವುದಕ್ಕೆ ಬದಲಾಗಿ, ರಕ್ಷಣಾ ತಂಡದವರು ಸಕಾಲದಲ್ಲಿ ನನ್ನ ಬಳಿಗೆ ತಲಪುತ್ತಾರೋ ಎಂಬುದರ ಕುರಿತು ನಾನು ಚಿಂತಿತನಾಗಿದ್ದೆ. ನನ್ನ ಕೋಚ್ ಸೀಟ್ ಎಲ್ಲಿತ್ತೋ ಆ ವಿಮಾನದ ಮಧ್ಯ ಭಾಗಗಳು, ಬಹುಮಟ್ಟಿಗೆ ಸಂಪೂರ್ಣವಾಗಿ ಧ್ವಂಸಗೊಳಿಸಲ್ಪಟ್ಟಿದ್ದವು. ಏನು ಉಳಿದಿತ್ತೋ ಅದಕ್ಕೆ ಬೆಂಕಿಹೊತ್ತಿಕೊಂಡಿತ್ತು, ಮತ್ತು ಒಳಗೆ ಸಿಕ್ಕಿಹಾಕಿಕೊಂಡ ಪ್ರಯಾಣಿಕರು ಯಾತನಾಮಯ ಮರಣವನ್ನು ಅನುಭವಿಸಿದರು. ಸಹಾಯಕ್ಕಾಗಿದ್ದ ಅವರ ಕಿರಿಚಾಟಗಳನ್ನು ನಾನೆಂದೂ ಮರೆಯಲಾರೆ.
ನನ್ನ ಸೀಟು ವಿಮಾನದ ಮುಂಭಾಗದ ಬಳಿ ಇತ್ತು. ನಾನು ಭಗ್ನಾವಶೇಷದಿಂದ ಕೈಗೆಟುಕುವಷ್ಟೇ ದೂರದಲ್ಲಿದ್ದೆ. ನನ್ನ ಕತ್ತನ್ನು ಹಿಂದೆ ತಿರುಗಿಸಿದಾಗ ನಾನು ಜ್ವಾಲೆಗಳನ್ನು ನೋಡಸಾಧ್ಯವಿತ್ತು. ಅತಿ ಬೇಗನೆ ಜ್ವಾಲೆಗಳು ನನ್ನ ಬಳಿಗೆ ತಲಪುತ್ತವೆಂದು ನಾನು ಭಯಭೀತನಾಗಿದ್ದೆ, ಆದರೆ ಅವು ಹತ್ತಿರ ಬರದಿದ್ದುದಕ್ಕೆ ಕೃತಜ್ಞನು.
ಕೊನೆಗೂ ಕಾಪಾಡಲ್ಪಟ್ಟದ್ದು!
ನಿಮಿಷಗಳು ನಿಧಾನವಾಗಿ ಕಳೆಯುತ್ತಿದ್ದವು. ಒಂದು ತಾಸಿಗಿಂತಲೂ ಹೆಚ್ಚಿನ ಸಮಯವು ಕಳೆಯಿತು. ಕೊನೆಗೆ, ರಾತ್ರಿ ಸುಮಾರು 3:00 ಗಂಟೆಗೆ, ರಕ್ಷಣಾ ತಂಡದ ಕೆಲವರು ದುರಂತ ನಡೆದ ಸ್ಥಳವನ್ನು ಕಂಡುಕೊಂಡರು. ಬೆಟ್ಟದ ತುದಿಯಲ್ಲಿ ಅವರು ಮಾತಾಡುತ್ತಿದ್ದುದನ್ನು ನಾನು ಕೇಳಿಸಿಕೊಳ್ಳಸಾಧ್ಯವಿತ್ತು. ತಾವು ಕಂಡ ದೃಶ್ಯವನ್ನು ನೋಡಿ ಅವರು ಸೋಜಿಗವನ್ನು ವ್ಯಕ್ತಪಡಿಸುತ್ತಿದ್ದರು. ಅವರಲ್ಲಿ ಒಬ್ಬನು ಕೂಗಿ ಕೇಳಿದ್ದು: “ಅಲ್ಲಿ ಯಾರಾದರೂ ಇದ್ದೀರಾ?”
“ನಾನು ಇಲ್ಲಿದ್ದೇನೆ” ಎಂದು ನಾನು ಗಟ್ಟಿಯಾಗಿ ಕೂಗಿ ಹೇಳಿದೆ. “ಕಾಪಾಡಿ!” ಎಂದು ಇತರ ಪ್ರಯಾಣಿಕರು ಸಹ ಪ್ರತಿಕ್ರಿಯಿಸಿದರು. ರಕ್ಷಣಾ ತಂಡದವನೊಬ್ಬನು ಇನ್ನೊಬ್ಬನಿಗೆ “ಟೆಡ್” ಎಂದು ಸಂಬೋಧಿಸಿದನು. ಆದುದರಿಂದ “ಟೆಡ್, ನಾನು ಇಲ್ಲಿದ್ದೇನೆ!” ಮತ್ತು “ಟೆಡ್, ಬಂದು ನಮಗೆ ಸಹಾಯ ಮಾಡು!” ಎಂದು ನಾನು ಕಿರಿಚಲಾರಂಭಿಸಿದೆ.
“ನಾವು ಕೆಳಗೆ ಬರುತ್ತಿದ್ದೇವೆ! ಸ್ವಲ್ಪ ತಾಳು” ಎಂಬುದು ಪ್ರತ್ಯುತ್ತರವಾಗಿತ್ತು.
ಧಾರಾಕಾರವಾಗಿ ಸುರಿಯುತ್ತಿರುವ ಮಳೆಯು ಜ್ವಾಲೆಗಳಿಂದ ಅನೇಕರನ್ನು ಸಂರಕ್ಷಿಸಿತಾದರೂ, ಅದೇ ಮಳೆಯು ಜಾರುವಂತಹ ಇಳಿಜಾರುಗಳಿಂದ ಕೆಳಗೆ ಇಳಿಯುವುದಕ್ಕೆ ತಡೆಯನ್ನು ಉಂಟುಮಾಡಿತು. ಇದರಿಂದಾಗಿ, ರಕ್ಷಣಾ ತಂಡದವರು ಬದುಕಿ ಉಳಿದವರ ಬಳಿಗೆ ತಲಪುವಷ್ಟರಲ್ಲಿ ಇನ್ನೊಂದು ದೀರ್ಘವಾದ ತಾಸು ಕಳೆದಿತ್ತು. ನನ್ನನ್ನು ಕಂಡುಕೊಳ್ಳಲಿಕ್ಕಾಗಿ ಅವರು ತೆಗೆದುಕೊಂಡಂತಹ ಸಮಯವು ನನಗೆ ನಿತ್ಯತೆಯಂತೆ ತೋರಿತು.
“ನಾವು ಇಲ್ಲಿದ್ದೇವೆ, ಹೆದರಬೇಡಿ” ಎಂದು, ಫ್ಲ್ಯಾಷ್ಲೈಟುಗಳೊಂದಿಗಿದ್ದ ರಕ್ಷಣಾ ತಂಡದ ಇಬ್ಬರು ಹೇಳಿದರು. ಕೂಡಲೆ ಅವರೊಂದಿಗೆ ರಕ್ಷಣಾ ತಂಡದ ಇನ್ನಿಬ್ಬರು ಜೊತೆಗೂಡಿದರು, ಮತ್ತು ಅವರು ಒಟ್ಟಿಗೆ ನನ್ನನ್ನು ಅಲ್ಲಿಂದ ಸಾಗಿಸಲು ಪ್ರಯತ್ನಿಸಿದರು. ಇಬ್ಬರು ನನ್ನ ತೋಳುಗಳನ್ನು ಹಿಡಿದುಕೊಂಡರು, ಮತ್ತು ಇನ್ನಿಬ್ಬರು ನನ್ನ ಕಾಲುಗಳನ್ನು ಹಿಡಿದುಕೊಂಡರು. ವಿಶೇಷವಾಗಿ ಅವರು ಕೆಸರಿನಲ್ಲಿ ಜಾರುತ್ತಾ ಇದ್ದುದರಿಂದ, ಆ ರೀತಿಯಲ್ಲಿ ಹೊತ್ತುಕೊಂಡುಹೋಗುವುದು ಅತ್ಯಂತ ವೇದನಾಮಯವಾಗಿತ್ತು. ಸ್ವಲ್ಪ ದೂರ ಹೋದ ಬಳಿಕ, ಅವರು ನನ್ನನ್ನು ಕೆಳಗಿಳಿಸಿದರು. ಅವರಲ್ಲಿ ಒಬ್ಬನು ಒಂದು ಸ್ಟ್ರೆಚರನ್ನು ತರಲಿಕ್ಕಾಗಿ ಹೋದನು, ಮತ್ತು ಬೆಟ್ಟದ ತುದಿಯಲ್ಲಿರುವ ಆ್ಯಂಬ್ಯುಲೆನ್ಸ್ನಲ್ಲಿ ನನ್ನನ್ನು ರವಾನಿಸಸಾಧ್ಯವಾಗುವಂತೆ, ಒಂದು ಮಿಲಿಟರಿ ಹೆಲಿಕಾಫ್ಟರ್ ಎಲ್ಲಿತ್ತೋ ಅಲ್ಲಿಗೆ ನನ್ನನ್ನು ಸಾಗಿಸಲಾಯಿತು.
ಕಟ್ಟಕಡೆಗೆ ನನ್ನ ಹೆಂಡತಿಯನ್ನು ನೋಡುವುದು!
ಬೆಳಗ್ಗೆ ಸುಮಾರು 5:30ರಷ್ಟಕ್ಕೆ ನಾನು ತುರ್ತುಚಿಕಿತ್ಸಾ ಕೊಠಡಿಯನ್ನು ತಲಪಿದೆ. ನನ್ನ ಗಾಯಗಳ ಗಂಭೀರ ಸ್ಥಿತಿಯ ಕಾರಣದಿಂದ, ಒಂದು ಫೋನ್ ಕರೆಯನ್ನು ಮಾಡಲು ವೈದ್ಯರು ನನಗೆ ಅನುಮತಿ ಕೊಡಲಿಲ್ಲ. ಆದುದರಿಂದ, ನಾನು ದುರಂತದಿಂದ ಬಚಾವಾಗಿದ್ದೇನೆ ಎಂಬುದನ್ನು, ಬೆಳಗ್ಗೆ 10:30ರ—ವಿಮಾನವು ಕೆಳಗೆ ಬಿದ್ದು ಸುಮಾರು ಒಂಬತ್ತು ತಾಸುಗಳ ಬಳಿಕ—ತನಕವೂ ನನ್ನ ಹೆಂಡತಿಯು ಕಂಡುಕೊಳ್ಳಲಿಲ್ಲ. ಬಚಾವಾದವರ ಪಟ್ಟಿಯಲ್ಲಿ ನನ್ನ ಹೆಸರನ್ನು ನೋಡಿದ್ದ ಒಬ್ಬ ಗೆಳತಿಯಿಂದ ಆ ವಿಷಯವು ಅವಳಿಗೆ ತಿಳಿಯಪಡಿಸಲ್ಪಟ್ಟಿತು.
ಕೊನೆಗೂ, ಸಾಯಂಕಾಲ ಸುಮಾರು 4:00 ಗಂಟೆಗೆ, ನನ್ನನ್ನು ನೋಡುವಂತೆ ನನ್ನ ಹೆಂಡತಿಗೆ ಅನುಮತಿಯು ಕೊಡಲ್ಪಟ್ಟಾಗ, ಆ ಕೂಡಲೆ ನಾನು ಅವಳನ್ನು ಗುರುತಿಸಲಿಲ್ಲ. ನೋವು ನಿವಾರಕ ಔಷಧದಿಂದ ನನ್ನ ಪ್ರಜ್ಞಾವಸ್ಥೆಯು ಮಂಕುಗೊಳಿಸಲ್ಪಟ್ಟಿತ್ತು. “ನೀವು ಬದುಕಿರುವುದಕ್ಕೆ ಉಪಕಾರ” ಎಂಬುವೇ ಅವಳ ಪ್ರಪ್ರಥಮ ನುಡಿಗಳಾಗಿದ್ದವು. ಆ ಸಂಭಾಷಣೆ ನನಗೆ ನೆನಪಿಲ್ಲವಾದರೂ, ನನಗೆ ತದನಂತರ ಹೇಳಲ್ಪಟ್ಟದ್ದೇನೆಂದರೆ, “ನನಗೆ ಉಪಕಾರ ಹೇಳಬೇಡ. ಯೆಹೋವನಿಗೆ ಉಪಕಾರ ಹೇಳು” ಎಂದು ನಾನು ಪ್ರತ್ಯುತ್ತರಿಸಿದೆನಂತೆ.
ಆದ್ಯತೆಗಳನ್ನು ಕ್ರಮಾನುಗತವಾಗಿ ಇಡುವುದು
ನಾನು ಆಸ್ಪತ್ರೆಯಲ್ಲಿ ಗುಣಹೊಂದುತ್ತಿರುವಾಗ, ನನಗಾದ ನೋವು ನನಗೆ ತೀರ ಚಿರಪರಿಚಿತವಾಗಿತ್ತು. 1987ರಲ್ಲಿ, ಕೊರಿಯದಿಂದ ಗ್ವಾಮ್ಗೆ ಬಂದು ಒಂದು ವರ್ಷವೂ ಆಗಿರಲಿಲ್ಲ, ಆಗಲೇ ನಿರ್ಮಾಣ ಕೆಲಸವೊಂದರಲ್ಲಿನ ಅಪಘಾತದಲ್ಲಿ ನಾನು ನಾಲ್ಕು ಮಹಡಿಯ ಮರದ ಅಟ್ಟಣೆಯಿಂದ ಬಿದ್ದು, ನನ್ನ ಎರಡೂ ಕಾಲುಗಳನ್ನು ಮುರಿದುಕೊಂಡೆ. ಅದು ನನ್ನ ಜೀವಿತದಲ್ಲಿ ಒಂದು ತಿರುವಾಗಿ ಪರಿಣಮಿಸಿತು. ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಾಗಿದ್ದ ನನ್ನ ಅಕ್ಕ, ಬೈಬಲನ್ನು ಅಭ್ಯಾಸಿಸುವಂತೆ ನನ್ನನ್ನು ಪ್ರಚೋದಿಸುತ್ತಿದ್ದಳು. ಚೇತರಿಸಿಕೊಳ್ಳಲಿಕ್ಕಾಗಿದ್ದ ನನ್ನ ಆರು ತಿಂಗಳ ಕಾಲಾವಧಿಯು, ಇದನ್ನು ಮಾಡಲು ನನಗೆ ಅವಕಾಶವನ್ನು ಒದಗಿಸಿತು. ಫಲಿತಾಂಶವಾಗಿ, ಅದೇ ವರ್ಷ ನಾನು ನನ್ನ ಜೀವಿತವನ್ನು ಯೆಹೋವ ದೇವರಿಗೆ ಸಮರ್ಪಿಸಿಕೊಂಡೆ ಮತ್ತು ನೀರಿನ ದೀಕ್ಷಾಸ್ನಾನದ ಮೂಲಕ ಇದನ್ನು ಸಂಕೇತಿಸಿದೆ.
ವಿಮಾನ ದುರಂತವು ನಡೆದಂದಿನಿಂದ, “ನೀವು ಮೊದಲು ದೇವರ ರಾಜ್ಯಕ್ಕಾಗಿಯೂ [ಆತನ] ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು” ಎಂದು ಹೇಳುವ, ನನ್ನ ಅಚ್ಚುಮೆಚ್ಚಿನ ಶಾಸ್ತ್ರವಚನದ ಕುರಿತು ನಾನು ಆಲೋಚಿಸುತ್ತಾ ಇದ್ದೇನೆ. (ಮತ್ತಾಯ 6:33) ವಿಮಾನ ದುರಂತದಿಂದ ಚೇತರಿಸಿಕೊಳ್ಳುತ್ತಿರುವಾಗ, ನನ್ನ ಜೀವಿತವನ್ನು ಪುನಃ ಪರ್ಯಾಲೋಚಿಸಲು ನನಗೆ ಅವಕಾಶವಿತ್ತು.
ಹೆಚ್ಚು ಪ್ರಬಲವಾದ ಒಂದು ವಿಧದಲ್ಲಿ, ಫ್ಲೈಟ್ 801ರ ದುರಂತವು, ಜೀವಿತವು ಎಷ್ಟು ಅಮೂಲ್ಯವಾದದ್ದಾಗಿದೆ ಎಂಬ ವಿಷಯದಲ್ಲಿ ನನ್ನ ಮೇಲೆ ಪ್ರಭಾವಬೀರಿದೆ. ನಾನು ಎಷ್ಟು ಸುಲಭವಾಗಿ ಕೊಲ್ಲಲ್ಪಡಸಾಧ್ಯವಿತ್ತು! (ಪ್ರಸಂಗಿ 9:11) ಅಷ್ಟಲ್ಲದೆ, ನನ್ನ ದೇಹವನ್ನು ಗುಣಪಡಿಸಲಿಕ್ಕಾಗಿ ನನಗೆ ಅನೇಕ ಆಪರೇಷನ್ಗಳ ಅಗತ್ಯವಿತ್ತು, ಮತ್ತು ನಾನು ಒಂದು ತಿಂಗಳಿಗಿಂತಲೂ ಹೆಚ್ಚು ಸಮಯವನ್ನು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಾ ಕಳೆದೆ.
ಮಾನವರಿಗಾಗಿ ಭೂಪ್ರಮೋದವನದಲ್ಲಿ ನಿತ್ಯಜೀವವನ್ನು ಅನುಭವಿಸುವ ಆತನ ಒದಗಿಸುವಿಕೆಯನ್ನೂ ಒಳಗೊಂಡು, ಆತನು ಜೀವಿತದ ಅದ್ಭುತಕರವಾದ ವರದಾನವನ್ನು ಕೊಟ್ಟಿರುವುದನ್ನು ನಾನು ನಿಜವಾಗಿಯೂ ಗಣ್ಯಮಾಡುತ್ತೇನೆಂಬುದನ್ನು, ಈಗ ನಾನು ನಮ್ಮ ಮಹಾನ್ ಸೃಷ್ಟಿಕರ್ತನಿಗೆ ತೋರಿಸಲು ಬಯಸುತ್ತೇನೆ. (ಕೀರ್ತನೆ 37:9-11, 29; ಪ್ರಕಟನೆ 21:3, 4) ಅಂತಹ ಗಣ್ಯತೆಯನ್ನು ತೋರಿಸುವ ಅತ್ಯುತ್ತಮ ವಿಧವು, ನನ್ನ ಜೀವಿತದಲ್ಲಿ ರಾಜ್ಯಾಭಿರುಚಿಗಳನ್ನು ಪ್ರಥಮವಾಗಿಡುತ್ತಾ ಮುಂದುವರಿಯುವ ಮೂಲಕವೇ ಆಗಿದೆ ಎಂಬುದನ್ನು ನಾನು ಗ್ರಹಿಸುತ್ತೇನೆ.—ದತ್ತಲೇಖನ.
[ಪುಟ 22 ರಲ್ಲಿರುವ ಚಿತ್ರ ಕೃಪೆ]
US Navy/Sipa Press