ಹವಾಮಾನದ ಕುರಿತ ಮಾತುಕತೆ
ನೀವು ಯಾರೇ ಆಗಿರಲಿ, ಎಲ್ಲಿಯೇ ಜೀವಿಸುತ್ತಿರಲಿ, ಹವಾಮಾನವು ನಿಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ. ದಿನವು ಬೆಚ್ಚಗಾಗಿಯೂ ಪ್ರಕಾಶಮಾನವಾಗಿಯೂ ಇರವುದಾದರೆ, ನೀವು ಹಗುರವಾದ ಉಡುಪನ್ನು ಧರಿಸುತ್ತೀರಿ. ಚಳಿಯಾಗಿರುವಲ್ಲಿ ಸ್ವೆಟರ್ ಮತ್ತು ಮಫ್ಲರ್ ಅನ್ನು ಧರಿಸುತ್ತೀರಿ. ಮಳೆಯಾದರೆ? ಕೊಡೆ ಹಿಡಿದುಕೊಳ್ಳುತ್ತೀರಿ.
ಕೆಲವೊಮ್ಮೆ, ಹವಾಮಾನವು ನಮ್ಮನ್ನು ಹರ್ಷಗೊಳಿಸುತ್ತದೆ; ಬೇರೆ ಸಮಯಗಳಲ್ಲಿ ಅದು ನಮ್ಮನ್ನು ನಿರಾಶೆಗೊಳಿಸುತ್ತದೆ. ಒಮ್ಮೊಮ್ಮೆ ಅದು, ಬಿರುಗಾಳಿಗಳು, ತುಫಾನುಗಳು, ಅನಾವೃಷ್ಟಿಗಳು, ಹಿಮಪಾತಗಳು ಅಥವಾ ಭಾರೀಮಳೆಯಾಗಿ ಹಂತಕರೂಪವನ್ನು ತಾಳುತ್ತದೆ. ನೀವು ಅದನ್ನು ಪ್ರೀತಿಸಿರಿ ಇಲ್ಲವೆ ದ್ವೇಷಿಸಿರಿ, ದೂಷಿಸಿರಿ ಇಲ್ಲವೇ ಅಲಕ್ಷಿಸಿರಿ, ಹವಾಮಾನವು, ನಾವು ಹುಟ್ಟಿದ ದಿನದಿಂದ ಹಿಡಿದು ಸಾಯುವ ದಿನದ ತನಕ ನಮ್ಮ ಜೀವಿತಗಳ ಮೇಲೆ ಪ್ರಭಾವ ಬೀರುತ್ತಾ, ಸದಾ ಅಸ್ತಿತ್ವದಲ್ಲಿರುತ್ತದೆ.
ಒಮ್ಮೆ ಯಾವನೊ ಒಬ್ಬನು ಹೇಳಿದ್ದು: “ಎಲ್ಲರೂ ಹವಾಮಾನದ ಕುರಿತು ಮಾತಾಡುತ್ತಾರೆ ನಿಜ, ಆದರೆ ಅದನ್ನು ಉತ್ತಮಗೊಳಿಸಲು ಏನನ್ನೂ ಮಾಡುವುದಿಲ್ಲ.” ಹೌದು, ಹವಾಮಾನವನ್ನು ಯಾವುದೇ ರೀತಿಯಲ್ಲಿ ಬದಲಾಯಿಸುವುದು, ನಮ್ಮ ಶಕ್ತಿಗೆ ಮೀರಿದ ವಿಷಯದಂತೆ ಯಾವಾಗಲೂ ಕಂಡುಬಂದಿದೆ. ಆದರೂ ಹೆಚ್ಚೆಚ್ಚಾಗಿ, ಅನೇಕ ಮಂದಿ ವಿಜ್ಞಾನಿಗಳು ಆ ವಿಷಯವನ್ನು ಈಗ ನಂಬುವುದಿಲ್ಲ. ಕಾರ್ಬನ್ ಡೈಆಕ್ಸೈಡ್ ಮತ್ತು ಇತರ ಅನಿಲಗಳು ನಮ್ಮ ವಾತಾವರಣದೊಳಗೆ ಚಿಮ್ಮಲ್ಪಡುವುದು, ನಮ್ಮ ದೀರ್ಘಾವಧಿಯ ಹವಾಮಾನ ನಮೂನೆಗಳಲ್ಲಿ—ನಮ್ಮ ವಾಯುಗುಣದಲ್ಲಿ ಬದಲಾವಣೆಯನ್ನು ತರುತ್ತಿದೆಯೆಂಬುದು ಅವರ ಹೇಳಿಕೆಯಾಗಿದೆ.
ಪರಿಣತರಿಗನುಸಾರ, ಬರಲಿರುವ ಈ ಬದಲಾವಣೆಯ ಲಕ್ಷಣವೇನು? ಪ್ರಾಯಶಃ ಇದಕ್ಕೆ ಅತಿ ಅಧಿಕೃತ ಉತ್ತರವು, ಹವಾಮಾನ ಬದಲಾವಣೆಯ ಕುರಿತ ಅಂತರಸರಕಾರೀ ಮಂಡಲಿ (ಐಪಿಸಿಸಿ)ಯಿಂದ ಬರುತ್ತದೆ. ಈ ಮಂಡಲಿಯು, 80 ದೇಶಗಳಿಂದ ಬಂದ 2,500ಕ್ಕಿಂತಲೂ ಹೆಚ್ಚು ಮಂದಿ ವಾಯುಗುಣ ಶಾಸ್ತ್ರಜ್ಞರು, ಅರ್ಥಶಾಸ್ತ್ರಜ್ಞರು ಮತ್ತು ಅಪಾಯ ವಿಶ್ಲೇಷಣಾ ವಿಶೇಷಜ್ಞರ ಪರಿಣತಿಯ ಅನುಭವವನ್ನು ಸಂಗ್ರಹಿಸಿತು. ಅವರ 1995ರ ವರದಿಯಲ್ಲಿ, ಭೂಮಿಯ ಹವಾಮಾನವು ಹೆಚ್ಚು ಬೆಚ್ಚಗಾಗುತ್ತಿದೆಯೆಂದು ಐಪಿಸಿಸಿ ತೀರ್ಮಾನಿಸಿತು. ಮುಂದಿನ ಶತಮಾನದಲ್ಲಿ, ಸಂಗತಿಗಳು ಈಗಿರುವಂತೆಯೇ ಮುಂದುವರಿಯುವಲ್ಲಿ, ತಾಪಮಾನವು 3.5 ಡಿಗ್ರಿ ಸೆಲ್ಸಿಯಸ್‌ನಷ್ಟೂ ಹೆಚ್ಚಾಗುವ ಸಾಧ್ಯತೆಯಿದೆ.
ಕೆಲವು ಡಿಗ್ರಿಗಳ ಹೆಚ್ಚಾಗುವಿಕೆಯು ಹೆಚ್ಚು ಚಿಂತೆಗೆ ಕಾರಣವೆಂಬಂತೆ ಧ್ವನಿಸದಿರಬಹುದಾದರೂ, ಲೋಕದ ವಾಯುಗುಣ ತಾಪಮಾನದಲ್ಲಿನ ಅಲ್ಪ ಬದಲಾವಣೆಯೂ ವಿಪತ್ಕಾರಕವಾಗಿರಬಲ್ಲದು. ಮುಂದಿನ ಶತಮಾನದಲ್ಲಿ ಈ ಕೆಳಗಿನ ಸಂಗತಿಗಳನ್ನು ಅನೇಕರು ಮುನ್ನೋಡುತ್ತಾರೆ.
ಹವಾಮಾನದಲ್ಲಿ ಪ್ರಾದೇಶಿಕ ವೈಪರೀತ್ಯಗಳು. ಕೆಲವು ಪ್ರದೇಶಗಳಲ್ಲಿ ಅನಾವೃಷ್ಟಿಗಳು ಹೆಚ್ಚು ದೀರ್ಘಕಾಲ ಮುಂದುವರಿಯಸಾಧ್ಯವಿರುವಾಗ, ಇತರ ಪ್ರದೇಶಗಳಲ್ಲಿ ಭಾರೀ ಮಳೆಯಾಗಸಾಧ್ಯವಿದೆ. ಚಂಡಮಾರುತ ಮತ್ತು ನೆರೆಗಳು ಹೆಚ್ಚು ತೀಕ್ಷ್ಣವಾಗಬಲ್ಲವು; ಬಿರುಗಾಳಿಗಳು ಹೆಚ್ಚು ಹಾನಿಕರವಾಗಬಲ್ಲವು. ನೆರೆಗಳು ಮತ್ತು ಬರದಿಂದಾಗಿ ಆಗಲೇ ಲಕ್ಷಗಟ್ಟಲೆ ಜನರು ಸಾಯುತ್ತಾರಾದರೂ, ಭೌಗೋಳಿಕ ಕಾವೇರುವಿಕೆಯು ಮರಣಸಂಖ್ಯೆಯನ್ನು ಹೆಚ್ಚಾಗಿಸಸಾಧ್ಯವಿದೆ.
ಹೆಚ್ಚಿನ ಆರೋಗ್ಯಾಪಾಯ. ಉಷ್ಣಸಂಬಂಧಿತ ಕಾಯಿಲೆ ಮತ್ತು ಮರಣವು ಹೆಚ್ಚಾಗಸಾಧ್ಯವಿದೆ. ಲೋಕಾರೋಗ್ಯ ಸಂಸ್ಥೆಗನುಸಾರ, ಭೌಗೋಳಿಕ ಕಾವೇರುವಿಕೆಯು, ಮಲೇರಿಯ ಮತ್ತು ಡೆಂಗಿ ಜ್ವರದಂತಹ ಉಷ್ಣವಲಯದ ರೋಗವಾಹಕ ಕೀಟಗಳ ವ್ಯಾಪ್ತಿಯನ್ನೂ ವಿಸ್ತರಿಸಸಾಧ್ಯವಿದೆ. ಇದಕ್ಕೆ ಸೇರಿಸಿ, ಪ್ರಾದೇಶಿಕ ಮಳೆ ಮತ್ತು ಮಂಜುಸುರಿತದಲ್ಲಿನ ಬದಲಾವಣೆಗಳ ಕಾರಣ, ಸಿಹಿನೀರಿನ ನ್ಯೂನ ಸರಬರಾಯಿಯು ಕೆಲವು ಜಲರವಾನಿತ ಮತ್ತು ಆಹಾರರವಾನಿತ ರೋಗಗಳಲ್ಲಿ ಮತ್ತು ಪರೋಪಜೀವಿಗಳಲ್ಲಿ ಹೆಚ್ಚಳವನ್ನು ಉಂಟುಮಾಡೀತು.
ನೈಸರ್ಗಿಕ ವಾಸಸ್ಥಾನಗಳು ಅಪಾಯಕ್ಕೀಡಾಗಿವೆ. ನಮ್ಮ ಗಾಳಿ ಮತ್ತು ನೀರನ್ನು ಸೋಸುವ ಕಾಡುಗಳು ಮತ್ತು ತರಿ ಜಮೀನುಗಳು, ಹೆಚ್ಚು ಬೆಚ್ಚಗಿನ ತಾಪಮಾನಗಳು ಮತ್ತು ಮಳೆಯಲ್ಲಿನ ಬದಲಾವಣೆಗಳ ಕಾರಣ ಅಪಾಯಕ್ಕೊಳಗಾಗಬಲ್ಲವು. ಕಾಡ್ಗಿಚ್ಚುಗಳು ಹೆಚ್ಚು ಬಾರಿ ಮತ್ತು ಹೆಚ್ಚು ತೀಕ್ಷ್ಣವಾಗಿ ಉಂಟಾಗಬಲ್ಲವು.
ಏರುತ್ತಿರುವ ಸಮುದ್ರ ಮಟ್ಟಗಳು. ಸಮುದ್ರವನ್ನು ತಡೆಗಟ್ಟಲು ದುಬಾರಿಯಾದ ಯೋಜನೆಗಳನ್ನು ಕೈಕೊಳ್ಳದಿರುವಲ್ಲಿ, ತಗ್ಗಾದ ಕರಾವಳಿ ಪ್ರದೇಶಗಳಲ್ಲಿರುವವರು ಸ್ಥಳ ಬದಲಾಯಿಸಬೇಕಾದೀತು. ಕೆಲವು ದ್ವೀಪಗಳು ಪೂರ್ತಿ ಮುಳುಗಿಹೋದಾವು.
ಇಂತಹ ಗಾಬರಿಗಳು ನ್ಯಾಯಸಮ್ಮತವಾಗಿವೆಯೊ? ಭೂಮಿಯ ಹವಾಮಾನವು ಹೆಚ್ಚು ಬೆಚ್ಚಗಾಗುತ್ತಿದೆಯೆ? ಹಾಗಿರುವಲ್ಲಿ, ಮಾನವರು ದೂಷಣಾರ್ಹರಾಗಿದ್ದಾರೊ? ಇಷ್ಟೆಲ್ಲ ವಿಷಯಗಳು ಒಳಗೊಂಡಿರುವಾಗ, ಪರಿಣತರು ಈ ಪ್ರಶ್ನೆಗಳನ್ನು ತೀಕ್ಷ್ಣವಾಗಿ ಚರ್ಚಿಸುವುದು ಆಶ್ಚರ್ಯಕರವಲ್ಲ. ಮುಂದಿನ ಎರಡು ಲೇಖನಗಳು, ಒಳಗೊಂಡಿರುವ ವಿವಾದಾಂಶಗಳಲ್ಲಿ ಕೆಲವನ್ನು ಪರೀಕ್ಷಿಸಿ, ನಮ್ಮ ಭೂಗ್ರಹದ ಭವಿಷ್ಯತ್ತಿನ ಬಗ್ಗೆ ನಾವು ಚಿಂತಿಸಬೇಕೊ ಎಂಬ ಪ್ರಶ್ನೆಯನ್ನು ಸಂಬೋಧಿಸುವುವು.