ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g98 6/8 ಪು. 15-17
  • ದೊಡ್ಡ ಬಿಳಿ ಪಕ್ಷಿಯ ಮರಳುವಿಕೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೊಡ್ಡ ಬಿಳಿ ಪಕ್ಷಿಯ ಮರಳುವಿಕೆ
  • ಎಚ್ಚರ!—1998
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಲೋಭದ ಒಂದು ದುರಂತಮಯ ಫಲಿತಾಂಶ
  • ಮರಳುವಿಕೆ ಆರಂಭವಾಗುತ್ತದೆ
  • ಭವಿಷ್ಯತ್ತಿನ ಕುರಿತಾಗಿ ಏನು?
  • ವನ್ಯಜೀವಿಗಳನ್ನು ನಿಕಟವಾಗಿ ಪರೀಕ್ಷಿಸುವುದು
    ಎಚ್ಚರ!—2002
  • ಕಟ್ಟಡಕ್ಕೆ ಹಕ್ಕಿ ಡಿಕ್ಕಿಹೊಡೆಯುವಾಗ
    ಎಚ್ಚರ!—2009
  • ವಲಸೆ ಹೋಗುವಿಕೆಯ ರಹಸ್ಯಗಳನ್ನು ಪರೀಕ್ಷಿಸುವುದು
    ಎಚ್ಚರ!—1995
  • ಹಕ್ಕಿಯು ಒಬ್ಬ ಕೈದಿಗೆ ಏನನ್ನು ಕಲಿಸಬಲ್ಲದು?
    ಎಚ್ಚರ!—2000
ಎಚ್ಚರ!—1998
g98 6/8 ಪು. 15-17

ದೊಡ್ಡ ಬಿಳಿ ಪಕ್ಷಿಯ ಮರಳುವಿಕೆ

ಜಪಾನಿನ ಎಚ್ಚರ! ಸುದ್ದಿಗಾರರಿಂದ

ಕೈಯಲ್ಲಿ ದೊಣ್ಣೆ ಹಿಡಿದು, ಆ ಪುರುಷರು ಸುಂದರ ಬಿಳಿ ಪಕ್ಷಿಗಳನ್ನು ಒಂದೊಂದಾಗಿ ಹೊಡೆದು ಕೊಲ್ಲಲಾರಂಭಿಸಿದರು. ಆ ಪಕ್ಷಿಗಳು, ಆ್ಯಲ್ಬಟ್ರಾಸ್‌ (ಕಡಲುಕೋಳಿ) ಪಕ್ಷಿಗಳಾಗಿದ್ದವು. ಆ ಪುರುಷರು: ಹಾನೆಮೋನ್‌ ಟಾಮೊಓಕೀ ಮತ್ತು ಅವನ ಸಂಗಡಿಗರು. ಸ್ಥಳ: ಟೋಕ್ಯೊದ ದಕ್ಷಿಣಕ್ಕೆ ಸುಮಾರು 600 ಕಿಲೊಮೀಟರ್‌ಗಳಷ್ಟು ದೂರದಲ್ಲಿರುವ ಒಂದು ದ್ವೀಪವಾದ ಟೊರೀಶೀಮಾ. ಅದು ಇಸವಿ 1887 ಆಗಿತ್ತು.

ಇದನ್ನು ಟಾಮೊಓಕೀ ಅನೇಕ ವರ್ಷಗಳಿಂದ ಯೋಜಿಸಿದ್ದನು. ಹಾಸಿಗೆಗಳಿಗಾಗಿ ಮೆತುವಾದ ಗರಿಗಳು ಸ್ವದೇಶದಲ್ಲೂ ವಿದೇಶದಲ್ಲೂ ತುಂಬ ಬೇಡಿಕೆಯಲ್ಲಿದ್ದವು. ಟೊರೀಶೀಮಾ, ಒಂದು ದೂರದ ದ್ವೀಪವಾಗಿದ್ದು, ಅದರ ಏಕಮಾತ್ರ ನಿವಾಸಿಗಳು, ಅಲ್ಲಿ ಕ್ರಮವಾಗಿ ಮೊಟ್ಟೆ ಇಡಲು ಆಗಮಿಸುತ್ತಿದ್ದ ಸಾವಿರಾರು ಆ್ಯಲ್ಬಟ್ರಾಸ್‌ ಪಕ್ಷಿಗಳಾಗಿದ್ದವು. ಅವುಗಳಲ್ಲಿ, ಪುಟ್ಟ ಬಾಲವುಳ್ಳ ಆ್ಯಲ್ಬಟ್ರಾಸ್‌ ಪಕ್ಷಿಗಳು ಟಾಮೊಓಕೀಗೆ ವಿಶೇಷವಾಗಿ ಆಕರ್ಷಕವಾಗಿದ್ದವು. ಅದು ಉತ್ತರ ಗೋಳಾರ್ಧದಲ್ಲಿಯೇ ಅತಿ ದೊಡ್ಡದಾದ ಕಡಲುಪಕ್ಷಿಯಾಗಿತ್ತು. ಎಂಟು ಕಿಲೊ ತೂಕದ ಮತ್ತು ಎರಡೂವರೆಗಿಂತಲೂ ಹೆಚ್ಚು ಮೀಟರುಗಳ ರೆಕ್ಕೆವ್ಯಾಪ್ತಿಯುಳ್ಳ ಒಂದು ದುಂಡುದುಂಡಾದ ದೇಹವನ್ನು ಎಷ್ಟೊಂದು ಗರಿಗಳು ಮುಚ್ಚಿದ್ದವೆಂಬುದನ್ನು ಊಹಿಸಿಕೊಳ್ಳಿರಿ! ಇನ್ನೂ ಹೆಚ್ಚಾಗಿ, ಈ ಪಕ್ಷಿಯು ಸಾಧು ಸ್ವಭಾವದ್ದಾಗಿದ್ದು, ಅಪಾಯಕ್ಕೊಡ್ಡಲ್ಪಟ್ಟಾಗಲೂ ಓಡಿಹೋಗಲು ಯಾವ ಪ್ರಯತ್ನವನ್ನೂ ಮಾಡಲಿಲ್ಲ.

ಪಕ್ಷಿಗಳನ್ನು ಕೊಂದು, ಗರಿಗಳನ್ನು ಕೀಳಲು ಸಹಾಯಕ್ಕಾಗಿ, ಟಾಮೊಓಕೀ 300ರಷ್ಟು ಕಾರ್ಮಿಕರನ್ನು ದ್ವೀಪಕ್ಕೆ ಕರಕೊಂಡು ಬಂದನು. ಅವರು ಒಂದು ಹಳ್ಳಿಯನ್ನು ಕಟ್ಟಿದರು ಮತ್ತು ಸತ್ತ ಪಕ್ಷಿಗಳನ್ನು ಸಾಗಿಸಲು ಒಂದು ಚಿಕ್ಕ ರೈಲುಮಾರ್ಗವನ್ನು ನಿರ್ಮಿಸಿದರು. ಆ ಕಾರ್ಯಾಚರಣೆಯು ಎಷ್ಟು ಪರಿಣಾಮಕಾರಿಯಾಗಿತ್ತು ಎಂದರೆ, ಸುಮಾರು 50 ಲಕ್ಷದಷ್ಟು ಪಕ್ಷಿಗಳನ್ನು ಕೊಲ್ಲುತ್ತಾ, ಸ್ವಲ್ಪ ಸಮಯದೊಳಗೆ ಟಾಮೊಓಕೀ ತುಂಬ ಧನಿಕನಾದನು. ಆ ಧ್ವಂಸವು ಎಷ್ಟು ಭಾರಿಯಾಗಿತ್ತೆಂದರೆ, ಆ ದ್ವೀಪದ ಜ್ವಾಲಾಮುಖಿಯು 1902ರಲ್ಲಿ ಸ್ಫೋಟಿಸಿ, ಆ ಹಳ್ಳಿ ಮತ್ತು ಅದರ ಎಲ್ಲ ನಿವಾಸಿಗಳನ್ನು ನಾಶಮಾಡಿದಾಗ, ಕೆಲವರು ಅದನ್ನು “ಆ್ಯಲ್ಬಟ್ರಾಸ್‌ ಪಕ್ಷಿಯನ್ನು ಕೊಂದದ್ದಕ್ಕಾಗಿ ಶಾಪ”ವಾಗಿ ವೀಕ್ಷಿಸಿದರು. ಹಾಗಿದ್ದರೂ, ಮುಂದಿನ ವರ್ಷ ಉಳಿದಿರುವ ಪಕ್ಷಿಗಳ ಶೋಧದಲ್ಲಿ ಮನುಷ್ಯರು ಪುನಃ ಬಂದರು.

ಸುಮಾರು 1500 ಕಿಲೋಮೀಟರ್‌ಗಳಷ್ಟು ದೂರದ, ಪೂರ್ವ ಚೀನಾ ಸಮುದ್ರದ ಪ್ರದೇಶದಲ್ಲಿ, ಟೈವಾನ್‌ ಮತ್ತು ಓಕಿನಾವಾದ ನಡುವಿನ ನಿರ್ಜನವಾದ, ಬಂಡೆಗಳುಳ್ಳ ದ್ವೀಪಸಮೂಹಗಳಲ್ಲಿ, ಟಾಟ್ಸುಶೀರೋ ಕೋಗಾ ಎಂಬ ಹೆಸರಿನ ಒಬ್ಬ ಪುರುಷನು ಅದೇ ಲಾಭದಾಯಕ ವ್ಯಾಪಾರವನ್ನು ನಡಿಸುತ್ತಾ ಇದ್ದನು. ಟಾಮೊಓಕೀಯಂತೆ, ಪಕ್ಷಿಗಳ ತನ್ನ ಸರಬರಾಯಿಯು ಕ್ಷಿಪ್ರವಾಗಿ ಕಡಿಮೆಯಾಗುತ್ತಿರುವುದನ್ನು ಕೋಗಾ ಕಂಡುಕೊಂಡನು. ಕೊನೆಗೆ, 1900ರಲ್ಲಿ ಅವನು ದ್ವೀಪವನ್ನು ಬಿಟ್ಟುಹೋದನು. ಆದರೆ ಅವನು ಅಷ್ಟರೊಳಗೆ ಸುಮಾರು ಹತ್ತು ಲಕ್ಷ ಆ್ಯಲ್ಬಟ್ರಾಸ್‌ ಪಕ್ಷಿಗಳನ್ನು ಕೊಂದುಹಾಕಿದ್ದನು.

ಲೋಭದ ಒಂದು ದುರಂತಮಯ ಫಲಿತಾಂಶ

ಪಕ್ಷಿಗಳ ಆ ದೊಡ್ಡ ಪ್ರಮಾಣದ ನಾಶನವು, ವಿಪತ್ಕಾರಕ ಫಲಿತಾಂಶಗಳುಳ್ಳ ಒಂದು ದುರಂತವಾಗಿತ್ತು. ಆ್ಯಲ್ಬಟ್ರಾಸ್‌ ಪಕ್ಷಿಯ ವಿವಿಧ ಜಾತಿಗಳಲ್ಲಿ ಮೂರು ಜಾತಿಗಳು, ಉತ್ತರ ಶಾಂತಸಾಗರದ ಪ್ರದೇಶದಲ್ಲಿ ವಾಸಿಸುತ್ತವೆ. ಟಾಮೊಓಕೀ ಮತ್ತು ಕೋಗಾ ಅವರಿಂದ ಸೂರೆಮಾಡಲ್ಪಟ್ಟ ದ್ವೀಪಗಳಲ್ಲಿಯೇ ಮರಿಹಾಕುವ ಪ್ರಮುಖ ಪ್ರದೇಶಗಳಿವೆ. ಅವುಗಳಲ್ಲೊಂದಾದ ಪುಟ್ಟ ಬಾಲವುಳ್ಳ ಆ್ಯಲ್ಬಟ್ರಾಸ್‌ (ಡಿಯೊಮೆಡ್ಯಾ ಆಲ್ಬಟ್ರಸ್‌) ಪಕ್ಷಿಗೆ, ಲೋಕದಲ್ಲಿ ಬೇರೆ ಯಾವುದೇ ಜ್ಞಾತ ಮರಿಹಾಕುವ ಪ್ರದೇಶವಿರಲಿಲ್ಲವೆಂಬುದು ಸುವ್ಯಕ್ತ.

ಆ್ಯಲ್ಬಟ್ರಾಸ್‌ ಪಕ್ಷಿಯನ್ನು ಒಂದು ಕಾಲದಲ್ಲಿ, ಸಮುದ್ರಗಳಲ್ಲಿ ಬಹುದೂರದಲ್ಲಿರುತ್ತಿದ್ದ ನಾವಿಕರು ಭಯಭಕ್ತಿಯಿಂದ ನೋಡುತ್ತಿದ್ದರು. ಸಮುದ್ರದ ಕುರಿತಾದ ಪುರಾಣ ಕಥೆಗಳು ಮತ್ತು ಸಾಂಪ್ರದಾಯಿಕ ನಂಬಿಕೆಯು ಅದನ್ನು, ಮಾರುತಗಳು, ಇಬ್ಬನಿ ಮತ್ತು ಮಂಜಿನ ಮುನ್ಸೂಚಕವಾಗಿ ಚಿತ್ರಿಸುತ್ತದೆ. ಆದರೆ, ಈ ದೊಡ್ಡ ಬಿಳಿ ಪಕ್ಷಿಯ ಅಸಾಮಾನ್ಯವಾದ ಉದ್ದ ರೆಕ್ಕೆಗಳು, ಅದನ್ನು ಕೆಲವೇ ದಿನಗಳಲ್ಲಿ ಸಾಗರದಾಚೆಗೆ ಎತ್ತರದಲ್ಲಿ ಹಾರಿಹೋಗುವಂತೆ ಶಕ್ತಮಾಡುವುದು ಒಂದು ಪುರಾಣ ಕಥೆಯಲ್ಲ. ಆಗ ಅದು ಹೆಚ್ಚಿನ ಸಮಯ ತನ್ನ ರೆಕ್ಕೆಗಳನ್ನು ಬಹುಮಟ್ಟಿಗೆ ಚಲಿಸದೆ, ಗಾಳಿಯಲ್ಲಿ ಪ್ರಯಾಣಿಸುತ್ತಿರುತ್ತದೆ. ದೀರ್ಘ ಸಮಯಾವಧಿಗಳ ವರೆಗೆ ತೇಲಿಕೊಂಡು ಹೋಗುವ ಮತ್ತು ಸಮುದ್ರದಲ್ಲಿ ಉಳಿಯುವ ಅದರ ಸಾಮರ್ಥ್ಯವು ಸರಿಸಾಟಿಯಿಲ್ಲದ್ದಾಗಿದೆ.

ಆ್ಯಲ್ಬಟ್ರಾಸ್‌ ಪಕ್ಷಿಯು ಗಾಳಿಯಲ್ಲಿ ಲಾಲಿತ್ಯದಿಂದ ತೇಲಸಾಧ್ಯವಿರುವುದಾದರೂ, ನೆಲದಲ್ಲಿ ಅದರ ಚಲನೆಯು ನಿಧಾನವೂ, ಎಡವಟ್ಟಾದದ್ದೂ ಆಗಿರುತ್ತದೆ. ಅದರ ಉದ್ದ ರೆಕ್ಕೆಗಳು ಮತ್ತು ಸಾಧಾರಣವಾಗಿ ದುಂಡುದುಂಡಾಗಿರುವ ದೇಹವು, ಬೇಗನೆ ಹಾರಿಹೋಗುವುದರಿಂದ ಅದನ್ನು ತಡೆಗಟ್ಟುತ್ತದೆ. ಇದರೊಂದಿಗೆ, ಮನುಷ್ಯರ ಭಯವನ್ನು ವಿಕಸಿಸಿಕೊಳ್ಳದೆ ಇದದರಿಂದ, ಆ ಪಕ್ಷಿಯು ಸುಲಭವಾದ ಭೇಟೆಯಾಯಿತು. ಆ ಕಾರಣದಿಂದ, ಜನರು ಅದಕ್ಕೆ ಇಂಗ್ಲಿಷ್‌ ಭಾಷೆಯಲ್ಲಿ, ಗೂನೀ ಪಕ್ಷಿ ಅಥವಾ ಮಾಲೀಮಾಕ್‌ ಎಂಬಂತಹ ಅಡ್ಡಹೆಸರುಗಳನ್ನು ಕೊಟ್ಟರು.a

ಸತ್ತ ಆ್ಯಲ್ಬಟ್ರಾಸ್‌ ಹಣವನ್ನು ಉತ್ಪಾದಿಸುತ್ತದೆ ಎಂಬ ಅರಿವಿನಿಂದ ಉತ್ತೇಜಿಸಲ್ಪಟ್ಟ ಬೇಜವಾಬ್ದಾರಿ ಜನರು, ಹಿರಿಹಿಗ್ಗುತ್ತಾ ನಿರ್ನಾಮವನ್ನು ಮುಂದುವರಿಸಿದರು. 1933ರೊಳಗೆ, ಟೊರೀಶೀಮದಲ್ಲಿ 600ಕ್ಕಿಂತಲೂ ಕಡಿಮೆ ಪಕ್ಷಿಗಳಿದ್ದವೆಂದು ಒಂದು ಸಮೀಕ್ಷೆಯು ಪ್ರಕಟಪಡಿಸಿತು. ಹತಾಶೆಯಿಂದ, ಜಪಾನಿ ಸರಕಾರವು, ಆ ದ್ವೀಪದಲ್ಲಿ ಮನುಷ್ಯರ ಪ್ರವೇಶವು ನಿಷಿದ್ಧವೆಂದು ಘೋಷಿಸಿತು. ಆದರೆ ನೀತಿನಿಷ್ಠೆಗಳಿಲ್ಲದ ಮನುಷ್ಯರು, ಆ ನಿಷೇಧವು ಜಾರಿಗೆ ಬರುವ ಮುಂಚೆ, ತಮ್ಮಿಂದ ಸಾಧ್ಯವಾಗುವಷ್ಟು ಪಕ್ಷಿಗಳನ್ನು ಕೊಲ್ಲಲಿಕ್ಕಾಗಿ ದ್ವೀಪಕ್ಕೆ ಧಾವಿಸಿದರು. ಒಬ್ಬ ಪರಿಣತನಿಗನುಸಾರ, 1935ರಷ್ಟಕ್ಕೆ ಕೇವಲ 50 ಪಕ್ಷಿಗಳು ಉಳಿದಿದ್ದವು. ಕೊನೆಗೆ, ಪುಟ್ಟ ಬಾಲವುಳ್ಳ ಆ್ಯಲ್ಬಟ್ರಾಸ್‌ ಪಕ್ಷಿಯನ್ನು ಅಳಿದುಹೋದ ಪಕ್ಷಿಜಾತಿಯಾಗಿ ಘೋಷಿಸಬೇಕಾಯಿತು. ಮಾನವ ಲೋಭದ ಎಂತಹ ಒಂದು ದುರಂತಕರ ಫಲಿತಾಂಶ! ಆದರೆ ಒಂದು ದೊಡ್ಡ ಆಶ್ಚರ್ಯವು ಕಾದಿತ್ತು.

ಮರಳುವಿಕೆ ಆರಂಭವಾಗುತ್ತದೆ

ಒಂದು ಸಂಜೆ, 1951ರ ಜನವರಿ ತಿಂಗಳಿನಲ್ಲಿ, ಟೊರೀಶೀಮದ ಬಂಡೆಗಳನ್ನು ಹತ್ತುತ್ತಿದ್ದ ಒಬ್ಬ ಪುರುಷನು, ಥಟ್ಟನೆಯ ಕವಗುಡುವಿಕೆಯಿಂದ ಚಕಿತಗೊಂಡನು. ಅವನ ಮುಂದೆಯೇ ಒಂದು ಆ್ಯಲ್ಬಟ್ರಾಸ್‌ ಪಕ್ಷಿಯಿತ್ತು! ಆ ಪುಟ್ಟ ಬಾಲವುಳ್ಳ ಆ್ಯಲ್ಬಟ್ರಾಸ್‌ ಪಕ್ಷಿಯು ಹೇಗೋ ಪಾರಾಗಿ ಉಳಿದಿತ್ತು ಮತ್ತು ಪುನಃ ಟೊರೀಶೀಮದಲ್ಲಿ ಮರಿಹಾಕುತ್ತಿತ್ತು. ಈ ಸಲವಾದರೊ, ಆ ಪಕ್ಷಿಗಳು, ಮನುಷ್ಯನಿಗೆ ಬಹುಮಟ್ಟಿಗೆ ಎಟುಕಿಸಲಾಗದ ಇಳಿಜಾರಿನ ನೆಲದಲ್ಲಿ ಮೊಟ್ಟೆಗಳನ್ನು ಇಡುತ್ತಿದ್ದವು. ಮತ್ತು ಅವುಗಳಿಗೆ ಮನುಷ್ಯನ ಕುರಿತು ನವೀನವಾದ ಎಚ್ಚರಿಕೆಯಿದ್ದಂತೆ ತೋರುತ್ತಿತ್ತು. ನಿಸರ್ಗ ಪ್ರೇಮಿಗಳು ಎಷ್ಟೊಂದು ಹರ್ಷಿಸಿದ್ದಿರಬೇಕು!

ಜಪಾನಿ ಸರಕಾರವು ತ್ವರಿತಗತಿಯಲ್ಲಿ ಕಾರ್ಯವೆಸಗಿತು. ಅವರು, ಗೂಡುಗಳನ್ನು ಕಟ್ಟಲಿಕ್ಕಾಗಿ ನೆಲವನ್ನು ಹೆಚ್ಚು ಭದ್ರಗೊಳಿಸಲು ಪಾಂಪಾಸ್‌ ಹುಲ್ಲನ್ನು ನೆಟ್ಟರು ಮತ್ತು ಟೊರೀಶೀಮಾಕ್ಕೆ ಮನುಷ್ಯರ ಪ್ರವೇಶವನ್ನು ನಿಷೇಧಿಸಿದರು. ಆ್ಯಲ್ಬಟ್ರಾಸ್‌ ಪಕ್ಷಿಯನ್ನು ರಾಷ್ಟ್ರೀಯ ನಿಧಿಯಾಗಿ ಘೋಷಿಸಲಾಯಿತು ಮತ್ತು ಅದು ಅಂತಾರಾಷ್ಟ್ರೀಯವಾಗಿ ಸಂರಕ್ಷಿಸಲ್ಪಟ್ಟ ಪಕ್ಷಿಯಾಗಿ ಪರಿಣಮಿಸಿತು.

1976ರಂದಿನಿಂದ, ಜಪಾನಿನ ಟೊಹೊ ವಿಶ್ವವಿದ್ಯಾನಿಲಯದ ಹೀರೋಶೀ ಹಾಸೆಗಾವಾ ಅವರು, ಆ ಪಕ್ಷಿಗಳ ಅಧ್ಯಯನ ನಡಿಸುತ್ತಿದ್ದಾರೆ, ಮತ್ತು ಅವುಗಳ ಸಮೀಕ್ಷೆಯನ್ನು ನಡಿಸಲು ವರ್ಷಕ್ಕೆ ಮೂರು ಬಾರಿ ಆ ದ್ವೀಪಕ್ಕೆ ಭೇಟಿಯನ್ನೀಯುತ್ತಾರೆ. ಪ್ರತಿ ವರ್ಷ ಆ ಪಕ್ಷಿಗಳ ಕಾಲುಗಳಿಗೆ ಭಿನ್ನವಾದ ಬಣ್ಣದ ಉಂಗುರಗಳನ್ನು ಹಾಕುವ ಮೂಲಕ, ಪುಟ್ಟ ಬಾಲವುಳ್ಳ ಆ್ಯಲ್ಬಟ್ರಾಸ್‌ ಪಕ್ಷಿಗಳು, ತಮ್ಮ ಜನ್ಮ ಸ್ಥಳದಲ್ಲಿ ಮೊಟ್ಟೆ ಇಡಲು, ಮೂರು ಅಥವಾ ನಾಲ್ಕು ವರ್ಷಗಳಿಗೊಮ್ಮೆ ಮಾತ್ರ ಹಿಂದಿರುಗುತ್ತವೆಂಬುದನ್ನು ಅವರು ಕಂಡುಕೊಂಡಿದ್ದಾರೆಂದು ಅವರು ಎಚ್ಚರ! ಪತ್ರಿಕೆಗೆ ಹೇಳಿದರು. ಅವು ಪ್ರಥಮ ಬಾರಿ, ಆರು ವರ್ಷ ಪ್ರಾಯದಲ್ಲಿ ಮೊಟ್ಟೆಯನ್ನಿಡುತ್ತವೆ ಮತ್ತು ಪ್ರತಿ ಬಾರಿ ಕೇವಲ ಒಂದು ಮೊಟ್ಟೆಯನ್ನಿಡುತ್ತವೆ. ಆದುದರಿಂದ, ಸರಾಸರಿ 20 ವರ್ಷಗಳ ಜೀವನಾಯಸ್ಸು ಇರುವುದಾದರೂ, ಅವುಗಳ ಸಂಖ್ಯೆಗಳು ವೃದ್ಧಿಯಾಗಲು ದೀರ್ಘ ಸಮಯ ತಗಲುತ್ತದೆ. 1996/97ರ ಚಳಿಗಾಲದಲ್ಲಿ ಟೊರೀಶೀಮದಲ್ಲಿ ಇಡಲ್ಪಟ್ಟಿರುವ 176 ಮೊಟ್ಟೆಗಳಲ್ಲಿ, ಕೇವಲ 90 ಮೊಟ್ಟೆಗಳು ಮರಿಯನ್ನಿತ್ತವು.

ಉಳಿದ ಸಮಯದಲ್ಲಿ ಆ್ಯಲ್ಬಟ್ರಾಸ್‌ ಪಕ್ಷಿಗಳು ಏನನ್ನು ಮಾಡುತ್ತವೆ? ಇದರ ಕುರಿತಾಗಿ ಹೆಚ್ಚು ತಿಳಿದಿಲ್ಲವೆಂದು ಹಾಸೆಗಾವಾ ಹೇಳುತ್ತಾರೆ. ಅವು ಖಂಡಿತವಾಗಿಯೂ ಭೂಮಿ ಮತ್ತು ಜನರಿಂದ ದೂರವಿರುತ್ತವೆ. ಆ್ಯಲ್ಬಟ್ರಾಸ್‌ ಪಕ್ಷಿಗಳು ಹಡಗುಗಳನ್ನು ಹಿಂಬಾಲಿಸಿ, ಅವುಗಳಲ್ಲಿ ಬಂದಿಳಿಯುತ್ತವೊ? ಹಾಸೆಗಾವಾಕ್ಕನುಸಾರ, ಆಧಾರಕೊಡಲು ಯಾವುದೇ ಪುರಾವೆಯಿಲ್ಲದ ಬರಿಯ ಪುರಾಣ ಕಥೆ ಅದಾಗಿದೆ. “ಜಪಾನೀ ಆ್ಯಲ್ಬಟ್ರಾಸ್‌ ಪಕ್ಷಿಗಳು ಹಡಗುಗಳಲ್ಲಿ ಬಂದಿಳಿಯುವುದಿಲ್ಲ” ಎಂದು ತನಗೆ ನಿಶ್ಚಯವಾಗಿ ಗೊತ್ತಿದೆಯೆಂದು ಅವರು ಹೇಳುತ್ತಾರೆ. ಆದರೆ ಲೋಕದ ಬೇರೆ ಕಡೆಗಳಲ್ಲಿ, “ಕೆಲವು ಪಕ್ಷಿಗಳಿಗೆ ಏನಾದರೂ ತಿನ್ನಲು ಕೊಡಲ್ಪಡುವಲ್ಲಿ ಅವು ಸ್ವಲ್ಪ ಸಮಯದ ಮಟ್ಟಿಗೆ ಹಡಗುಗಳಲ್ಲಿ ಉಳಿಯಬಹುದು” ಎಂದು ಅವರು ಕೂಡಿಸುತ್ತಾರೆ. ಹೆಚ್ಚಿನ ಸಮಯ, ತಾವು ಅತ್ಯುತ್ತಮವಾಗಿ ಮಾಡುವಂತಹ ವಿಷಯವನ್ನು ಅವು ಮಾಡುತ್ತವೆ—ಅನುಕೂಲಕರವಾದ ವಾಯು ಪ್ರವಾಹಗಳನ್ನು ಏರಿ, ವಿಸ್ತಾರವಾದ ಸಾಗರದಲ್ಲಿ ಸುತ್ತಾಡುತ್ತವೆ. ಅವುಗಳಿಗೆ ದಣಿವಾದಾಗ, ಅವು ಸಮುದ್ರದಲ್ಲಿ ತೇಲುತ್ತಾ ಮಲಗುತ್ತವೆ. ಅವು ಸ್ಕ್ವಿಡ್‌ ಮೀನು, ಹಾರುಮೀನು, ಏಡಿ ಮತ್ತು ಸೀಗಡಿಗಳನ್ನು ತಿನ್ನುತ್ತವೆ. ಹಾಸೆಗಾವಾ ಅವರು ಉಂಗುರಗಳನ್ನು ಹಾಕಿಸಿರುವ ಪಕ್ಷಿಗಳನ್ನು, ಬೇರಿಂಗ್‌ ಸಮುದ್ರ ಮತ್ತು ಆಲಾಸ್ಕದ ಕೊಲ್ಲಿಯಲ್ಲಿ ಕ್ರಮವಾಗಿ ನೋಡಸಾಧ್ಯವಿದೆ. ಮತ್ತು 1985ರಲ್ಲಿ ಕ್ಯಾಲಿಫೋರ್ನಿಯದ ಕರಾವಳಿಯಾಚೆ ಪುಟ್ಟ ಬಾಲವುಳ್ಳ ಆ್ಯಲ್ಬಟ್ರಾಸ್‌ ಪಕ್ಷಿಯ ನೋಟವು—ಬಹುಮಟ್ಟಿಗೆ ಒಂದು ಶತಮಾನದಲ್ಲಿ ಪ್ರಥಮ ಸಲ—ಅಲ್ಲಿರುವ ಪಕ್ಷಿವೀಕ್ಷಕರ ನಡುವೆ ಸಂಭ್ರಮವನ್ನು ಉಂಟುಮಾಡಿತು.

ಭವಿಷ್ಯತ್ತಿನ ಕುರಿತಾಗಿ ಏನು?

ಸಕಾರಾತ್ಮಕ ಪಕ್ಕದಲ್ಲಿ, ಪುಟ್ಟ ಬಾಲವುಳ್ಳ ಆ್ಯಲ್ಬಟ್ರಾಸ್‌ ಪಕ್ಷಿಗಳು ಒಂದೇ ಸಮನೆ ಸಂಖ್ಯೆಯಲ್ಲಿ ವೃದ್ಧಿಯಾಗುತ್ತಾ ಇವೆ. “ಮರಿಗಳನ್ನೊಳಗೊಂಡು 900ಕ್ಕಿಂತಲೂ ಹೆಚ್ಚು” ಪಕ್ಷಿಗಳು ಇವೆ ಎಂಬುದನ್ನು ಕಳೆದ ಮೇ ತಿಂಗಳಿನಲ್ಲಿ ಹಾಸೆಗಾವಾ ಅಂದಾಜುಮಾಡಿದರು. ಅವರು ಕೂಡಿಸಿದ್ದು: “ಇಸವಿ 2000ದೊಳಗೆ, ಪ್ರತಿ ವರ್ಷ 100ಕ್ಕಿಂತಲೂ ಹೆಚ್ಚು ಮರಿಗಳ ಜನನದೊಂದಿಗೆ ನಮಗೆ ಟೊರೀಶೀಮಾದಲ್ಲೇ 1,000ಕ್ಕಿಂತಲೂ ಹೆಚ್ಚು ಪಕ್ಷಿಗಳಿರಬೇಕು.” 88 ವರ್ಷಗಳ ಬಳಿಕ, 1988ರಲ್ಲಿ ಅವು ಪೂರ್ವ ಚೀನಾ ಸಮುದ್ರ ಪ್ರದೇಶದಲ್ಲಿ ಪುನಃ ಮೊಟ್ಟೆಹಾಕುವುದನ್ನು ನೋಡುವ ವಾಸ್ತವಾಂಶವೂ ರೋಮಾಂಚಕಾರಿಯಾಗಿದೆ. ಆ ಪಕ್ಷಿಗಳು ವಾದಾಸ್ಪದ ಕ್ಷೇತ್ರದಲ್ಲಿನ ಬಂಡೆಭರಿತ ಪ್ರದೇಶವನ್ನು ಆಯ್ದುಕೊಂಡಿವೆ. ಇದು, ಸ್ವಲ್ಪ ಸಮಯದ ವರೆಗೆ ಅವುಗಳಿಗೆ ಮಾನವ ಹಸ್ತಕ್ಷೇಪದಿಂದ ಸುರಕ್ಷೆಯನ್ನು ಒದಗಿಸುವುದು.

ನೂರು ವರ್ಷಗಳ ಹಿಂದೆ ಮಾಡಲ್ಪಟ್ಟ ತಪ್ಪುಗಳು ಕ್ರಮೇಣವಾಗಿ ಸರಿಪಡಿಸಲಾಗುತ್ತಿವೆ. ಅಥವಾ ಕೇವಲ ಹಾಗೆ ತೋರುತ್ತದೊ? ಆ ಪಕ್ಷಿಗಳಿಗೆ ಉಂಗುರಗಳನ್ನು ಹಾಕಲಿಕ್ಕಾಗಿ ಅವುಗಳನ್ನು ಹಿಡಿಯುವಾಗ, ಅವು ಗಾಬರಿಗೊಂಡು, ವಾಂತಿಮಾಡುವದನ್ನು ಸಂಶೋಧಕರು ಅನೇಕವೇಳೆ ಕಂಡುಕೊಳ್ಳುತ್ತಾರೆ. ಅವುಗಳ ಹೊಟ್ಟೆಗಳಿಂದ, ಅವುಗಳ ಉಣ್ಣುವ ಪ್ರದೇಶವಾದ ಸಾಗರದಲ್ಲಿ ಜನರು ಅಜಾಗರೂಕತೆಯಿಂದ ದಬ್ಬುವ, ಪ್ಲಾಸ್ಟಿಕ್‌ ತುಂಡುಗಳು, ಬಿಸಾಡುವಂತಹ ಸಿಗರೇಟ್‌ ಲೈಟರ್‌ಗಳು, ಮತ್ತು ಇತರ ಕಸ ಹೊರಬರುತ್ತವೆ.

ಮಾನವ ಮೂರ್ಖತನವು, ಆ ದೊಡ್ಡ ಬಿಳಿ ಪಕ್ಷಿಯನ್ನು ಪುನಃ ಒಮ್ಮೆ ವಿನಾಶದ ಅಂಚಿಗೆ ತಳ್ಳುವುದೊ?

[ಪಾದಟಿಪ್ಪಣಿ]

a “‘ಗೂನೀ’ ಮೂಲತಃ, ಒಬ್ಬ ಮೂರ್ಖ ವ್ಯಕ್ತಿಗಾಗಿರುವ ಹಳೆ ಇಂಗ್ಲಿಷ್‌ ಪದವಾದ ‘ಗೊನಿ’ ಆಗಿತ್ತು . . . ‘ಮಾಲೀಮಾಕ್‌’ ಹಾಗೂ ‘ಮಾಲೀಹಾಕ್‌’ ಅಥವಾ ಕೇವಲ ‘ಮಾಲೀ’ ಎಂಬ ಪದವು, ಮೂರ್ಖ ಗಲ್‌ ಹಕ್ಕಿ ಎಂಬ ಅರ್ಥವುಳ್ಳ ‘ಮಾಲೀಮಾಕ್‌’ ಎಂಬ ಡಚ್‌ ಪದದಿಂದ ಬರುತ್ತದೆ.” (ಆಲಿವರ್‌ ಎಲ್‌. ಆಸ್ಟಿನ್‌ ಜೂನ್ಯರ್‌ರಿಂದ, ಲೋಕದ ಪಕ್ಷಿಗಳು [ಇಂಗ್ಲಿಷ್‌]) ಜಪಾನೀ ಭಾಷೆಯಲ್ಲಿ “ಮೂರ್ಖ ಪಕ್ಷಿ” ಎಂಬ ಅರ್ಥವುಳ್ಳ ಅಹೊಡೊರಿ ಎಂಬ ಪದವು, “ದೊಡ್ಡ ಬಿಳಿ ಪಕ್ಷಿ” ಎಂಬ ಅರ್ಥವುಳ್ಳ ಹಳೆಯ ಹೆಸರನ್ನು ಸ್ಥಾನಪಲ್ಲಟಗೊಳಿಸಿತು.

[ಪುಟ 16 ರಲ್ಲಿರುವ ಚಿತ್ರ]

ಪುಟ್ಟ ಬಾಲವುಳ್ಳ ಆ್ಯಲ್ಬಟ್ರಾಸ್‌ನ ಬೀಡಾಗಿರುವ, ಟೊರೀಶೀಮ

[ಪುಟ 16 ರಲ್ಲಿರುವ ಚಿತ್ರ]

ಆ್ಯಲ್ಬಟ್ರಾಸ್‌ ಪಕ್ಷಿಯ ಉದ್ದ, ತೆಳ್ಳನೆಯ ರೆಕ್ಕೆಗಳು, ಅದನ್ನು ಲೋಕದ ನಿಪುಣ ತೇಲುಗನಾಗಿರಲು ಶಕ್ತವನ್ನಾಗಿ ಮಾಡುತ್ತದೆ

[ಪುಟ 17 ರಲ್ಲಿರುವ ಚಿತ್ರ]

ಪುಟ್ಟ ಬಾಲವುಳ್ಳ ಆ್ಯಲ್ಬಟ್ರಾಸ್‌ ಪಕ್ಷಿಗಳು ಟೊರೀಶೀಮಕ್ಕೆ ಪುನರಾಗಮಿಸಿವೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ