ನಿಮ್ಮ ಜೀವನದ ಗುಣಮಟ್ಟವನ್ನು ಉತ್ತಮಗೊಳಿಸಲಿಕ್ಕಾಗಿ ಐದು ಮಾರ್ಗಗಳು
ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ನ ಎಚ್ಚರ! ಸುದ್ದಿಗಾರರಿಂದ
ಹಣದುಬ್ಬರ, ಅಸ್ವಸ್ಥತೆ, ನ್ಯೂನಪೋಷಣೆ, ಬಡತನ—ಈ ಸಮಸ್ಯೆಗಳು ಅಭಿವೃದ್ಧಿಶೀಲ ದೇಶಗಳಲ್ಲಿ ವ್ಯಾಪಕವಾಗಿವೆ. ಮತ್ತು ಕಡಿಮೆಪಕ್ಷ ಮಾನವ ದೃಷ್ಟಿಕೋನದಿಂದಾದರೊ ತತ್ಕ್ಷಣದ ಪರಿಹಾರವು ಕಂಡು ಬರುತ್ತಿಲ್ಲ. ನೀವು ಅಭಿವೃದ್ಧಿಶೀಲ ದೇಶವೊಂದರಲ್ಲಿ ವಾಸಿಸುತ್ತಿರುವಲ್ಲಿ, ನಿಮ್ಮ ಜೀವನದ ಗುಣಮಟ್ಟವನ್ನು ಉತ್ತಮಗೊಳಿಸಲು ನೀವು ಏನಾದರೂ ಮಾಡಸಾಧ್ಯವಿದೆಯೊ? ಹೌದು, ಮಾಡಸಾಧ್ಯವಿದೆ! ನೀವು ಸಹಾಯಕಾರಿ ಮತ್ತು ಪ್ರಾಯೋಗಿಕವಾಗಿರುವುದಾಗಿ ಕಂಡುಕೊಳ್ಳಬಹುದಾದ ಐದು ಸಲಹೆಗಳು ಈ ಕೆಳಗಿನಂತಿವೆ.
ನಂಬ್ರ 1: ಒಂದು ತೋಟವನ್ನು ನೆಡಿರಿ
“ದುಡಿದು ಹೊಲಗೇಯುವವನಿಗೆ ಹೊಟ್ಟೆತುಂಬಾ ಅನ್ನ” ಎಂದು ಬೈಬಲು, ಜ್ಞಾನೋಕ್ತಿ 28:19ರಲ್ಲಿ ಹೇಳುತ್ತದೆ. ತೀರ ಚಿಕ್ಕದ್ದಾದ ಜಮೀನಿನಲ್ಲಿ, ಎಷ್ಟೊಂದನ್ನು ಉತ್ಪಾದಿಸಸಾಧ್ಯವಿದೆ ಎಂಬುದನ್ನು ನೋಡುವುದು ನಿಮ್ಮನ್ನು ಆಶ್ಚರ್ಯಪಡಿಸಬಹುದು. 50ರಿಂದ 100 ಚದರ ಮೀಟರುಗಳಷ್ಟು ಅಳತೆಯ ಜಮೀನು, ಆರು ಮಂದಿಯುಳ್ಳ ಒಂದು ಕುಟುಂಬವನ್ನು ಉಣಿಸಲು ಸಾಕಾಗುವಷ್ಟು ತರಕಾರಿಗಳನ್ನು ಉತ್ಪಾದಿಸಸಾಧ್ಯವಿದೆ ಎಂದು, ಲಸಾರ್ಡ ಪಾಟಾಸೆ ಸೊ ಲೇ ಟ್ರಾಪೀಕ್ (ಉಷ್ಣವಲಯಗಳಲ್ಲಿ ತರಕಾರಿ ತೋಟ) ಎಂಬ ತಮ್ಮ ಪುಸ್ತಕದಲ್ಲಿ, ಲೇಖಕ ಹೆಂಕ್ ವಾಯೆನ್ಬರ್ಕ್ ಹೇಳುತ್ತಾರೆ!
ನೀವೇ ಬೆಳೆಸಸಾಧ್ಯವಿರುವ ವಿಷಯಗಳನ್ನು ಖರೀದಿಸಲಿಕ್ಕಾಗಿ ಏಕೆ ಹಣ ಖರ್ಚುಮಾಡಬೇಕು? ಮಣ್ಣು ಮತ್ತು ಹವಾಮಾನದ ಮೇಲೆ ಅವಲಂಬಿಸುತ್ತಾ, ನಿಮ್ಮ ಮನೆಯ ಪಕ್ಕದಲ್ಲೇ, ಬೆಂಡೆಕಾಯಿ, ಕ್ಯಾಪ್ಸಿಕಮ್ ಮೆಣಸು, ಬಸಲೆ ಸೊಪ್ಪು, ಪಾರ್ಸ್ಲಿ, ಲೆಮನ್ಗ್ರಾಸ್, ಹಸಿರು ಈರುಳ್ಳಿಗಳು, ಕಸಾವಾ, ಕುಂಬಳಕಾಯಿಗಳು, ಗೆಣಸು, ಕಬ್ಬು, ಟೊಮೆಟೋಗಳು, ಸೌತೆಕಾಯಿಗಳು, ಮತ್ತು ಜೋಳವನ್ನು ಬೆಳೆಸಲು ಸಾಧ್ಯವಿರಬಹುದು. ಕಡಿಮೆ ಪಕ್ಷ, ಅಂತಹ ಒಂದು ತೋಟವು ನಿಮ್ಮ ಕುಟುಂಬದ ಆಹಾರಪಥ್ಯಕ್ಕೆ ಪೂರಕವಾಗಿರಬಲ್ಲದು, ಮತ್ತು ನೀವು ಮಾರಾಟಮಾಡಸಾಧ್ಯವಿರುವ ಅಧಿಕ ಉತ್ಪನ್ನವೂ ನಿಮಗಿರಬಹುದು.
ನಿಮಗೆ ಸಾಕಷ್ಟು ಜಮೀನು ಇರುವಲ್ಲಿ, ವಿಭಿನ್ನ ಹಣ್ಣಿನ ಮರಗಳನ್ನು ನೆಡುವುದನ್ನೂ ನೀವು ಪರಿಗಣಿಸಬಹುದು. ಕೆಲವೊಂದು ವಿದ್ಯಮಾನಗಳಲ್ಲಿ, ಒಂದೇ ಒಂದು ಹಣ್ಣಿನ ಮರವು, ನೀವು ಮತ್ತು ನಿಮ್ಮ ಕುಟುಂಬವು ತಿನ್ನಸಾಧ್ಯವಿರುವುದಕ್ಕಿಂತಲೂ ಹೆಚ್ಚು ಹಣ್ಣನ್ನು ಉತ್ಪಾದಿಸಸಾಧ್ಯವಿದೆ. ಮಿಶ್ರಗೊಬ್ಬರವನ್ನು—ಸತ್ತ ಜೈವಿಕ ಪದಾರ್ಥವನ್ನು ಪುನರುಪಯೋಗ ಮಾಡಿ, ಗೊಬ್ಬರವಾಗಿ ಅದನ್ನು ಬಳಸುವ ಕಾರ್ಯಗತಿ—ಮಾಡುವುದರ ಕುರಿತು ಕಲಿಯುವುದು, ನಿಮ್ಮ ಆಹಾರದ ಉತ್ಪಾದನೆಯನ್ನು ಉತ್ತಮಗೊಳಿಸಲು ನಿಮಗೆ ಸಹಾಯಮಾಡುವುದು. ಮರಗಳು, ನಿಮ್ಮ ಕುಟುಂಬಕ್ಕೆ ಆಹಾರ ಮತ್ತು ಹೆಚ್ಚಿನ ವರಮಾನವನ್ನು ಉತ್ಪಾದಿಸುವುದಕ್ಕಿಂತಲೂ ಹೆಚ್ಚನ್ನು ಮಾಡಬಲ್ಲವು. ಸರಿಯಾದ ಸ್ಥಳಗಳಲ್ಲಿ ನೆಡಲ್ಪಟ್ಟ ಮರಗಳು, ನೆರಳನ್ನೂ ಕೊಡಬಲ್ಲವು, ಗಾಳಿಯನ್ನು ಶುದ್ಧಗೊಳಿಸಬಲ್ಲವು, ಮತ್ತು ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಹೆಚ್ಚು ಸುಂದರ ಮತ್ತು ಹಿತಕರವನ್ನಾಗಿ ಮಾಡಬಲ್ಲವು.
ಆದರೆ ತೋಟಗಾರಿಕೆಯ ಕುರಿತು ನಿಮಗೆ ಸ್ವಲ್ಪವೇ ತಿಳಿದಿರುವಲ್ಲಿ ಆಗೇನು? ಈ ಸಂಬಂಧದಲ್ಲಿ ಅನುಭವಿವರುವ ಸ್ನೇಹಿತರು, ನೆರೆಹೊರೆಯವರು ಅಥವಾ ಪರಿಚಯಸ್ಥರು ನಿಮಗಿದ್ದಾರೊ? ಹಾಗಿರುವಲ್ಲಿ, ಅವರಿಂದ ಸಹಾಯ ಅಥವಾ ಸಲಹೆಯನ್ನು ಏಕೆ ಕೇಳಬಾರದು? ತೋಟಗಾರಿಕೆಯ ವಿಷಯದಲ್ಲಿ ನೀವು ಕೆಲವೊಂದು ಪುಸ್ತಕಗಳನ್ನು ಖರೀದಿಸಬಹುದು ಅಥವಾ ಎರವಲೂ ಪಡೆದುಕೊಳ್ಳಬಹುದು.—ಎಚ್ಚರ! ಪತ್ರಿಕೆಯ ಮೇ 22, 1974ರ (ಇಂಗ್ಲಿಷ್) ಸಂಚಿಕೆಯಲ್ಲಿ, “ಒಂದು ತರಕಾರಿ ತೋಟವನ್ನು ಏಕೆ ಬೆಳೆಸಬಾರದು?” ಎಂಬ ಲೇಖನವನ್ನು ನೋಡಿ.
ನಂಬ್ರ 2: ಭಾರೀ ಮೊತ್ತದಲ್ಲಿ ಖರೀದಿಸಿರಿ
ಹಿಟ್ಟು, ಅಕ್ಕಿ ಮತ್ತು ಎಣ್ಣೆಯಂತಹ ಅತ್ಯಾವಶ್ಯಕ ಐಟಮ್ಗಳನ್ನು ನೀವು ಕಡಿಮೆ ಪ್ರಮಾಣಗಳಲ್ಲಿ ಖರೀದಿಸುತ್ತೀರೊ? ಹಾಗಿರುವಲ್ಲಿ, ನೀವು ತುಂಬ ಹಣವನ್ನು ಹಾಳುಮಾಡುತ್ತಿರಬಹುದು. ಅದಕ್ಕೆ ಬದಲಾಗಿ, ಸಾಧ್ಯವಿರುವಲ್ಲಿ, ಅಂತಹ ಆಹಾರದ ಐಟಮ್ಗಳನ್ನು ಭಾರೀ ಮೊತ್ತದಲ್ಲಿ ಖರೀದಿಸುವುದನ್ನು ಪ್ರಯತ್ನಿಸುತ್ತಾ, ವೆಚ್ಚವನ್ನು ಎರಡು, ಮೂರು ಅಥವಾ ಹೆಚ್ಚು ಕುಟುಂಬಗಳೊಂದಿಗೆ ಹಂಚಿಕೊಳ್ಳಿರಿ. ನಿರ್ದಿಷ್ಟ ಹಣ್ಣುಗಳು ಅಥವಾ ತರಕಾರಿಗಳು ಸಮೃದ್ಧಿಯಾಗಿ ದೊರೆಯುವ ಸಮಯದಲ್ಲಿ, ಭಾರೀ ಮೊತ್ತಗಳಲ್ಲಿ ಖರೀದಿಸುವುದೂ ನಿಮ್ಮ ಹಣವನ್ನು ಉಳಿಸುವುದು. ಕೆಲವೊಂದು ವಿದ್ಯಮಾನಗಳಲ್ಲಿ, ನೀವು ವಸ್ತುಗಳನ್ನು ಹೋಲ್ಸೇಲ್ ಆಗಿಯೂ ಖರೀದಿಸಲು ಶಕ್ತರಾಗಿರಬಹುದು.
ನಂಬ್ರ 3: ಆಹಾರ ಸಂರಕ್ಷಣೆಯ ಕಲೆಯನ್ನು ಕಲಿತುಕೊಳ್ಳಿರಿ
ಭಾರೀ ಮೊತ್ತದಲ್ಲಿ ಖರೀದಿಸುವುದು, ಕೆಟ್ಟುಹೋಗುವ ಐಟಮ್ಗಳನ್ನು ಹೇಗೆ ಶೇಖರಿಸಿಡುವುದು ಎಂಬ ಪ್ರಶ್ನೆಯನ್ನು ಎಬ್ಬಿಸುತ್ತದೆ. ಆಹಾರವನ್ನು ಒಣಗಿಸುವುದು, ಒಂದು ಜನಪ್ರಿಯ ಮತ್ತು ಪ್ರಾಯೋಗಿಕ ವಿಧಾನವಾಗಿದೆ. ಆಫ್ರಿಕದಲ್ಲಿನ ಅನೇಕ ಸ್ತ್ರೀಯರು, ಹಣ್ಣುಗಳು, ಬೆಂಡೆಕಾಯಿ, ಆವರೆಕಾಯಿ, ಕುಂಬಳ, ಕುಂಬಳಕಾಯಿ ಬೀಜಗಳು, ಮತ್ತು ಸಸ್ಯಗಳನ್ನು ಒಣಗಿಸುವ ಮೂಲಕ ಜೀವನ ನಡೆಸುತ್ತಾರೆ. ಒಣಗಿಸಲಿಕ್ಕಾಗಿ ಯಾವುದೇ ವಿಶೇಷ ಉಪಕರಣದ ಆವಶ್ಯಕತೆಯಿಲ್ಲ. ನೊಣಗಳಿಂದ ರಕ್ಷಿಸಲು ಆ ಐಟಮ್ ಅನ್ನು ಒಂದು ತೆಳು ಬಟ್ಟೆಯಿಂದ ಮುಚ್ಚುತ್ತಾ, ಒಂದು ಸ್ವಚ್ಛವಾದ ಮೇಲ್ಮೈಯ ಮೇಲೆ ಇಡಬಹುದು ಅಥವಾ ತೂಗಹಾಕಬಹುದು. ಬಾಕಿ ಕೆಲಸವನ್ನು ಗಾಳಿ ಮತ್ತು ಸೂರ್ಯ ಮಾಡುವವು.—ಎಚ್ಚರ! ಪತ್ರಿಕೆಯ ಆಗಸ್ಟ್ 8, 1975ರ (ಇಂಗ್ಲಿಷ್) ಸಂಚಿಕೆಯಲ್ಲಿ, “ನೀವು ಕಡಿಮೆ ಖರ್ಚಿನೊಂದಿಗೆ ಜೀವನ ನಡಿಸಬಹುದೊ?” ಎಂಬ ಲೇಖನವನ್ನು ನೋಡಿರಿ.
ನಂಬ್ರ 4: ಚಿಕ್ಕ ಪ್ರಮಾಣದ ಸಾಕಣೆಯನ್ನು ಪ್ರಯತ್ನಿಸಿರಿ
ನಿಮ್ಮ ಸ್ವಂತ ಕೋಳಿಮರಿಗಳನ್ನು, ಆಡುಗಳನ್ನು, ಪಾರಿವಾಳಗಳನ್ನು ಅಥವಾ ಇತರ ಪ್ರಾಣಿಗಳನ್ನು ನೀವು ಸಾಕಬಹುದೊ? ಅನೇಕ ಸ್ಥಳಗಳಲ್ಲಿ ಮಾಂಸವು ಒಂದು ಭೋಗದ ವಸ್ತುವಾಗಿ ಪರಿಣಮಿಸಿದೆ. ಆದರೆ ಇತರರಿಂದ ಸ್ವಲ್ಪ ಸಹಾಯವನ್ನು ಪಡೆದುಕೊಳ್ಳುತ್ತಾ, ಪ್ರಾಣಿಗಳ ಒಂದು ಚಿಕ್ಕ ಹಿಂಡನ್ನು ಸಾಕುವ ವಿಧವನ್ನು ನೀವು ಕಲಿತುಕೊಳ್ಳಬಹುದು. ನಿಮಗೆ ಮೀನು ತಿನ್ನುವುದು ಇಷ್ಟವೊ? ಹಾಗಾದರೆ, ಒಂದು ಚಿಕ್ಕ ಮೀನಿನ ಕೊಳವನ್ನು ಮಾಡುವ ವಿಧವನ್ನು ನೀವು ಕಲಿತುಕೊಳ್ಳಲು ಪ್ರಯತ್ನಿಸಬಹುದು. ಮಾಂಸ, ಮೊಟ್ಟೆಗಳು, ಮತ್ತು ಮೀನಿನಲ್ಲಿ, ಕಬ್ಬಿಣ, ಕ್ಯಾಲ್ಸಿಯಂ, ಜೀವಸ್ವತಗಳು, ಖನಿಜಗಳು, ಮತ್ತು ಪ್ರೋಟೀನ್ಗಳಿದ್ದು—ಇವು ನಿಮ್ಮ ಕುಟುಂಬದ ಆರೋಗ್ಯಕ್ಕೆ ಅತ್ಯಾವಶ್ಯಕವಾಗಿವೆ.
ನಂಬ್ರ 5: ಯೋಗ್ಯವಾದ ನೈರ್ಮಲ್ಯವನ್ನು ಕಾಪಾಡಿಕೊಳ್ಳಿರಿ
ನೈರ್ಮಲ್ಯವೂ ನಿಮ್ಮ ಕುಟುಂಬದ ಆರೋಗ್ಯಕ್ಕೆ ಪ್ರಾಮುಖ್ಯವಾಗಿದೆ. ಸ್ವಚ್ಛವಲ್ಲದ ಪರಿಸ್ಥಿತಿಗಳು, ಇಲಿಗಳು, ನೊಣಗಳು ಮತ್ತು ಜಿರಳೆಗಳನ್ನು—ಎಲ್ಲ ರೀತಿಯ ಅಸ್ವಸ್ಥತೆಗಳ ಕಾರಣ—ಆಕರ್ಷಿಸುತ್ತವೆ. ಯೋಗ್ಯವಾದ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದಕ್ಕೆ ನಿಮಗೆ ಸಮಯ ಮತ್ತು ಪ್ರಯತ್ನವು ವ್ಯಯವಾಗುವುದು. ಆದರೆ ಸ್ವಚ್ಛತೆಯ ಬೆಲೆಯು, ಔಷಧ ಮತ್ತು ಡಾಕ್ಟರರ ಬಿಲ್ಲುಗಳ ವೆಚ್ಚಕ್ಕಿಂತ ಕಡಿಮೆಯಾಗಿದೆ. ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಯ ಮತ್ತು ಒಂದು ದೇಶದಿಂದ ಇನ್ನೊಂದು ದೇಶದ ಸ್ವಚ್ಛತೆಯ ಮಟ್ಟಗಳಲ್ಲಿ ಸ್ವಲ್ಪ ಮಟ್ಟಿಗಿನ ವ್ಯತ್ಯಾಸವಿರಬಹುದು. ಆದರೆ, ಎಲ್ಲಡೆಯೂ ಅನ್ವಯವಾಗುವ ಕೆಲವೊಂದು ಸಾಮಾನ್ಯ ತತ್ವಗಳಿವೆ.
ಉದಾಹರಣೆಗಾಗಿ, ಪಾಯಿಖಾನೆ ಸೌಕರ್ಯಗಳನ್ನು ತೆಗೆದುಕೊಳ್ಳಿರಿ. ಗ್ರಾಮೀಣ ಕ್ಷೇತ್ರಗಳಲ್ಲಿ ಅನೇಕವೇಳೆ ಇವುಗಳನ್ನು ಹೊಲಸಾಗಿ ಮತ್ತು ಹಾಳುಬಿದ್ದವುಗಳಾಗಿ ಬಿಡಲಾಗುತ್ತದೆ ಮತ್ತು ಈ ಕಾರಣದಿಂದ ಅವು ಕಾಯಿಲೆ ಮತ್ತು ರೋಗದ ಒಂದು ಪ್ರಮುಖ ಮೂಲವಾಗಿವೆ. ಸ್ಥಳಿಕ ಆರೋಗ್ಯ ಕಾರ್ಮಿಕರು, ನಿಮಗೆ ಒಂದು ನಿರ್ಮಲ ಪಾಯಿಖಾನೆಯನ್ನು ತೀರ ಕಡಿಮೆ ವೆಚ್ಚದಲ್ಲಿ ಕಟ್ಟುವ ವಿಧದ ಕುರಿತಾಗಿ ಸೂಚನೆಗಳನ್ನು ಒದಗಿಸಲು ಶಕ್ತರಾಗಿರಬಹುದು.
ನಿಮ್ಮ ಮನೆಯ ಕುರಿತಾಗಿ ಏನು? ಅದು ನೀಟಾಗಿಯೂ, ವ್ಯವಸ್ಥಿತವಾಗಿಯೂ ಇದೆಯೊ? ಸ್ವಚ್ಛವಾದ ಪರಿಮಳ ಬರುತ್ತದೊ? ನಿಮ್ಮ ಅಡಿಗೆಕೋಣೆಯ ಕುರಿತಾಗಿ ಏನು? ಅದು ಚೊಕ್ಕಟವೂ, ಸ್ವಚ್ಛವೂ ಆಗಿದೆಯೊ? ಆರೋಗ್ಯದಿಂದಿರಲು, ಆಹಾರವು ಸ್ವಚ್ಛವಾಗಿರಬೇಕು ಮತ್ತು ಸರಿಯಾಗಿ ಬೇಯಿಸಲ್ಪಟ್ಟಿರಬೇಕು. ಮಲಿನವಾದ ನೀರಿನಲ್ಲಿ, ಕೀಟಗಳು ಮತ್ತು ಪರೋಪಜೀವಿಗಳು ತುಂಬಿತುಳುಕುತ್ತವೆ. ಆದುದರಿಂದ ನೀರನ್ನು ಉಪಯೋಗಿಸುವ ಮುಂಚೆ ಅದನ್ನು ಫಿಲ್ಟರ್ ಮಾಡಿ ಅಥವಾ ಕುದಿಸಿರಿ. ತಿನ್ನುವುದಕ್ಕಾಗಿ ಉಪಯೋಗಿಸುವ ಪಾತ್ರೆಗಳನ್ನು ಕುದಿಯುವ ನೀರಿನಿಂದ ತೊಳೆಯಿರಿ, ಮತ್ತು ಆಹಾರವನ್ನು ಕೈಯಲ್ಲಿ ತೆಗೆದುಕೊಳ್ಳುವ ಮುಂಚೆ ನಿಮ್ಮ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಿರಿ. ನೀರನ್ನು ಸ್ವಚ್ಛವಾದ, ಮುಚ್ಚಿಡಲ್ಪಟ್ಟ ಪಾತ್ರೆಗಳಲ್ಲಿ ಶೇಖರಿಸಿಡಿರಿ.
ನೈರ್ಮಲ್ಯದ ಸ್ಥಿತಿಗಳನ್ನು ನೀವು ಕಾಪಾಡಿಕೊಳ್ಳಲು ಬಯಸುವುದಾದರೆ, ನಾಯಿಗಳು, ಬೆಕ್ಕುಗಳು, ಕೋಳಿಗಳು ಮತ್ತು ಆಡುಗಳನ್ನು ಅಡುಗೆಕೋಣೆಯಲ್ಲಿ ತಿರುಗಾಡಲು ಬಿಡಬಾರದು. ನಿಮ್ಮ ಆಹಾರವನ್ನು ಕಲುಷಿತಗೊಳಿಸುತ್ತಾ, ಇಲಿಗಳು ಮತ್ತು ಮೂಷಕಗಳು, ಬಿಂದಿಗೆಗಳು ಮತ್ತು ಹರಿವಾಣಗಳ ಮೇಲೆಲ್ಲಾ ಓಡಾಡುವಂತೆ ಬಿಡಬೇಡಿ. ಒಂದು ಸರಳವಾದ ಇಲಿಬೋನು ಈ ಸಮಸ್ಯೆಯನ್ನು ನಿರ್ಮೂಲಗೊಳಿಸಬಹುದು.—ಎಚ್ಚರ! ಪತ್ರಿಕೆಯ ಸೆಪ್ಟೆಂಬರ್ 22, 1988ರ (ಇಂಗ್ಲಿಷ್) ಸಂಚಿಕೆಯಲ್ಲಿ, “ಶುಚಿತ್ವದ ಪಂಥಾಹ್ವಾನವನ್ನು ಎದುರಿಸುವುದು” ಎಂಬ ಲೇಖನವನ್ನು ನೋಡಿರಿ.
ಕಟ್ಟಕಡೆಗೆ, ಕೇವಲ ದೇವರ ರಾಜ್ಯವು ಮಾನವಕುಲದ ಸಮಸ್ಯೆಗಳನ್ನು ಪೂರ್ಣವಾಗಿ ಬಗೆಹರಿಸುವುದು. (ಮತ್ತಾಯ 6:9, 10) ಅಷ್ಟರ ವರೆಗಾದರೊ, ಈ ಸರಳವಾದ ಸಲಹೆಗಳು, ನಿಮ್ಮ ಜೀವನದ ಗುಣಮಟ್ಟವನ್ನು ಉತ್ತಮಗೊಳಿಸಲು ಸಹಾಯಮಾಡಬಹುದು.
[ಪುಟ 18 ರಲ್ಲಿರುವ ಚಿತ್ರ]
ಒಂದು ತೋಟವನ್ನು ನೆಡಿರಿ
[ಪುಟ 19 ರಲ್ಲಿರುವ ಚಿತ್ರ]
ಭಾರೀ ಮೊತ್ತದಲ್ಲಿ ಖರೀದಿಸಿರಿ
[ಪುಟ 19 ರಲ್ಲಿರುವ ಚಿತ್ರ]
ಆಹಾರ ಸಂರಕ್ಷಣೆಯ ಕಲೆಯನ್ನು ಕಲಿತುಕೊಳ್ಳಿರಿ
[ಪುಟ 20 ರಲ್ಲಿರುವ ಚಿತ್ರ]
ಚಿಕ್ಕ ಪ್ರಮಾಣದ ಸಾಕಣೆಯನ್ನು ಪ್ರಯತ್ನಿಸಿರಿ
[ಪುಟ 20 ರಲ್ಲಿರುವ ಚಿತ್ರ]
ಯೋಗ್ಯವಾದ ನೈರ್ಮಲ್ಯವನ್ನು ಕಾಪಾಡಿಕೊಳ್ಳಿರಿ