ಅನೇಕರು ಏಕೆ ರಕ್ತದಾನವನ್ನು ನಿರಾಕರಿಸುತ್ತಿದ್ದಾರೆ
ಒಂದೇ ರಕ್ತದಾನಿಯ, ಸೋಂಕಿತ ರಕ್ತವನ್ನು ಪಡೆದುಕೊಂಡ ಇಬ್ಬರು ವ್ಯಕ್ತಿಗಳು ಎಚ್ಐವಿಯಿಂದ ಸೋಂಕಿತರಾದರು. ಇದಕ್ಕಾಗಿ ಕೆನಡದ ರೆಡ್ ಕ್ರಾಸ್ ಜವಾಬ್ದಾರಿಯಾಗಿದೆ ಎಂದು ಆಂಟೆರೀಯೋದ ನ್ಯಾಯಾಲಯವು ಹೇಳಿತು. ಇದನ್ನು ಒಂದು ತಿರುಗುಬಿಂದು ನಿರ್ಣಯವೆಂದು ಕರೆಯಲಾಯಿತು. “ರಕ್ತವನ್ನು ಪಡೆದುಕೊಂಡವರ ಜೀವಗಳಿಗೆ ಬೆದರಿಕೆಯನ್ನೊಡ್ಡುವ ಕಲುಷಿತ ರಕ್ತದಂಥ ಯಾವುದಾದರೂ ದುರಂತವು ಸಂಭವಿಸುವಾಗ, ತುರ್ತು ಕ್ರಮವನ್ನು ತೆಗೆದುಕೊಳ್ಳುವ ಅಗತ್ಯವಿದೆ” ಎಂದು ನ್ಯಾಯಾಧೀಶರಾದ ಸ್ಟೀಫನ್ ಬಾರೆನ್ಸ್ ಹೇಳಿದರು.
1980ಗಳಲ್ಲಿ ಕೆನಡದ ಸುಮಾರು 1,200 ಜನರು ಎಚ್ಐವಿ ಮತ್ತು ಇನ್ನೂ 12,000 ಜನರು ಹೆಪಿಟೈಟಿಸ್ ಸಿ ರೋಗದಿಂದ ಸೋಂಕಿತರಾದರು. ಇವೆಲ್ಲವೂ ಸೋಂಕಿತ ರಕ್ತ ಮತ್ತು ರಕ್ತಸಂಯುಕ್ತಗಳಿಂದಲೇ. ಸೋಂಕುಗಳನ್ನು ಕಡಿಮೆಮಾಡಲಿಕ್ಕಾಗಿ, ದಾನಿಗಳನ್ನು ಹೆಚ್ಚು ಜಾಗರೂಕವಾಗಿ ಪರೀಕ್ಷಿಸಲಾಗುತ್ತಿದೆ. ಆದರೆ ಎಲ್ಲ ದಾನಿಗಳು ತಮ್ಮ ಲೈಂಗಿಕ ಇತಿಹಾಸದ ಕುರಿತಾಗಿ ಪ್ರಾಮಾಣಿಕರಾಗಿರುವುದಿಲ್ಲ. ಉದಾಹರಣೆಗೆ, ಅಮೆರಿಕದಲ್ಲಿ ಮಾಡಲ್ಪಟ್ಟ ಸಮೀಕ್ಷೆಯೊಂದರಲ್ಲಿ, 50 ದಾನಿಗಳಲ್ಲಿ ಒಬ್ಬನು, ಸಲಿಂಗಿಕಾಮ ಅಥವಾ ವೇಶ್ಯೆಯೊಬ್ಬಳೊಂದಿಗೆ ಇರುವ ಲೈಂಗಿಕ ಸಂಬಂಧದಿಂದಾದ ಅಪಾಯಕಾರಿ ಅಂಶಗಳನ್ನು ತಿಳಿಸಲು ತಪ್ಪಿಹೋದನು.
ರಕ್ತ ಪರೀಕ್ಷೆಯು ಸರಿಯಾದ ಖಾತರಿಯನ್ನು ನೀಡುವುದಿಲ್ಲವಾದ ಕಾರಣ, ಅದು ಈ ಸಂಕಷ್ಟಕ್ಕೆ ಇನ್ನೂ ಹೆಚ್ಚನ್ನು ಕೂಡಿಸುತ್ತದೆ. ನ್ಯೂ ಸೈಎಂಟಿಸ್ಟ್ ಪತ್ರಿಕೆಗನುಸಾರ, “ಎಚ್ಐವಿಯಿಂದ ಸೋಂಕುಗೊಂಡ ವ್ಯಕ್ತಿ, ಮೂರು ವಾರಗಳ ಒಳಗೆ ರಕ್ತವನ್ನು ದಾನಮಾಡಿದರೆ, ಆಗ ಮಾಡುವ ಪರೀಕ್ಷೆಗಳು ವೈರಸ್ಗಳನ್ನು ಕಂಡುಹಿಡಿಯಲು ತಪ್ಪಿಹೋಗುತ್ತವೆ. ಹೆಪಿಟೈಟಿಸ್ ಸಿ ವಿಷಯದಲ್ಲಿ ಸೋಂಕುಗೊಂಡ ಎರಡು ತಿಂಗಳುಗಳ ಅನಂತರವೂ ರಕ್ತ ಪರೀಕ್ಷೆಗಳು ಅದನ್ನು ಕಂಡುಹಿಡಿಯುವುದಿಲ್ಲ.”
ಇತ್ತೀಚಿನ ವರ್ಷಗಳಲ್ಲಿ, ರಕ್ತದಾನ ಮಾಡುವುದರಲ್ಲಿ ಇಲ್ಲವೇ ತೆಗೆದುಕೊಳ್ಳುವುದರಲ್ಲಿನ ಸಂಖ್ಯೆಯು ಕೆನಡದ ನಿವಾಸಿಗಳಲ್ಲಿ ಗಮನಾರ್ಹವಾಗಿ ಕಡಿಮೆಯಾಗಿದೆ. ಅಂಕಣಕಾರ ಪಾಲ್ ಶ್ರಾಟ್ಸ್ ಬರೆಯುವುದು: “ದಾನಮಾಡುವುದರಲ್ಲಿ ಆಸಕ್ತಿಯು ಕಡಿಮೆಯಾಗುತ್ತಿದೆ ಮತ್ತು ದಾನಮಾಡಸಾಧ್ಯವಿಲ್ಲದವರ ಸಂಖ್ಯೆಯು ಹೆಚ್ಚಾಗುತ್ತಿದೆ. ಆದರೆ ಯೆಹೋವನ ಸಾಕ್ಷಿಗಳು ರಕ್ತ ಬದಲಿಗಳಲ್ಲಿ ಸಂಶೋಧನೆಮಾಡುವ ಮೂಲಕ ದಾರಿತೋರಿಸುತ್ತಿರುವುದರಿಂದ ದೇವರಿಗೆ ಉಪಕಾರ ಹೇಳಬೇಕು.”
ಆಸಕ್ತಿಕರವಾದ ವಿಷಯವೇನೆಂದರೆ, ಈಚೀಚೆಗೆ ಒಂದು ವರ್ಷದಲ್ಲಿ, ಸುಮಾರು 40 ಜನರು “ತಾವು ಯೆಹೋವನ ಸಾಕ್ಷಿಗಳೆಂದು ಸುಳ್ಳುಹೇಳಿ ಕೆನೆಡದ ಆಸ್ಪತ್ರೆಗೆ ದಾಖಲಾದರು. ಏಕೆಂದರೆ ಅವರಿಗೆ ರಕ್ತಪೂರಣಗಳು ಇಷ್ಟವಿರಲಿಲ್ಲ” ಎಂದು ದ ಟೊರಾಂಟೊ ಸ್ಟಾರ್ ವರದಿಸಿತು. ಕೆನಡದಲ್ಲಿರುವವರಲ್ಲಿ ಶೇಕಡ 90ರಷ್ಟು ಜನರು ರಕ್ತವನ್ನು ಪಡೆದುಕೊಳ್ಳುವ ಬದಲು, ಕೆಲವು ಬದಲಿಗಳನ್ನು ತೆಗೆದುಕೊಳ್ಳಲು ಇಷ್ಟಪಡುತ್ತಾರೆ. ಆದುದರಿಂದ ರಕ್ತದ ಉಪಯೋಗವು ಇನ್ನು ಮುಂದೆ ಕೇವಲ ಒಂದು ಧಾರ್ಮಿಕ ವಿವಾದವಾಗಿರುವುದಿಲ್ಲ.