ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g98 11/8 ಪು. 7-10
  • ಶಾಶ್ವತ ಭದ್ರತೆಯ ಒಂದು ಜೀವಿತ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಶಾಶ್ವತ ಭದ್ರತೆಯ ಒಂದು ಜೀವಿತ
  • ಎಚ್ಚರ!—1998
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಭದ್ರವಾದ ಆರಂಭವನ್ನು ತೊಡೆದುಹಾಕಲಾಯಿತು
  • ಆತ್ಮಿಕ ವಿಷಯಗಳಿಗೆ ಆದ್ಯತೆಯನ್ನು ಕೊಡಿರಿ
  • “ನಿಮ್ಮ ದೇವರಾದ ಯೆಹೋವನಿಗೆ ಪ್ರಾರ್ಥಿಸಿರಿ”
  • ಸಮಾಧಾನ, ನೆಮ್ಮದಿ, ಮತ್ತು ನಿರ್ಭಯ
  • ನಿಜ ಭದ್ರತೆ ಈಗ ಮತ್ತು ಸದಾಕಾಲ
    ಕಾವಲಿನಬುರುಜು—1996
  • ಒಂದು ಭದ್ರವಾದ ಜೀವಿತದ ಅನ್ವೇಷಣೆಯಲ್ಲಿ
    ಎಚ್ಚರ!—1998
  • ಅಸುರಕ್ಷಿತ ಭಾವನೆಯನ್ನು ಹೊಡೆದೋಡಿಸುವುದು ಹೇಗೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2016
  • ಈಗ ಭದ್ರತೆಯಿಂದಿರುವುದು ಸದಾಕಾಲಕ್ಕೂ ಭದ್ರತೆಯನ್ನು ಅನುಭವಿಸುವುದು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2002
ಇನ್ನಷ್ಟು
ಎಚ್ಚರ!—1998
g98 11/8 ಪು. 7-10

ಶಾಶ್ವತ ಭದ್ರತೆಯ ಒಂದು ಜೀವಿತ

ನಿಮಗೆ ಅತಿಯಾದ ಜ್ವರವಿರುವಲ್ಲಿ, ಬಹುಶಃ ತಲೆನೋವನ್ನು ಕಡಿಮೆಮಾಡಲು ನೀವು ಒಂದು ಮಾತ್ರೆಯನ್ನು ಸೇವಿಸುತ್ತೀರಿ ಮತ್ತು ದೇಹದ ತಾಪವನ್ನು ಕಡಿಮೆಮಾಡಲು ಐಸ್‌ ಚೀಲವನ್ನು ಉಪಯೋಗಿಸುತ್ತೀರಿ. ರೋಗಲಕ್ಷಣಗಳನ್ನು ಸಹಿಸಿಕೊಳ್ಳುವಂತೆ ಮಾತ್ರೆಯೂ ಐಸ್‌ ಚೀಲವೂ ನಿಮಗೆ ಸಹಾಯಮಾಡಿದರೂ, ಅವು ನಿಮ್ಮ ಜ್ವರದ ಮೂಲಕಾರಣವನ್ನು ಪತ್ತೇಹಚ್ಚಿ ಗುಣಪಡಿಸುವುದಿಲ್ಲ. ಮತ್ತು ನಿಮ್ಮ ಕಾಯಿಲೆಯು ಗಂಭೀರವಾಗುತ್ತಾ ಹೋಗುವಲ್ಲಿ, ನೀವು ಒಬ್ಬ ಅನುಭವಸ್ಥ ವೈದ್ಯನಿಂದ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕಾಗುವುದು.

ಮಾನವಕುಲವು ಅಭದ್ರತೆಯೆಂಬ ಪಟ್ಟುಬಿಡದ ಜ್ವರದಿಂದ ನರಳುತ್ತಿದೆ. ಅಹಿತಕರವಾದ ರೋಗಲಕ್ಷಣಗಳನ್ನು ಶಮನಮಾಡಲು, ನಾವು ಅಲ್ಪಕಾಲದ ಕ್ರಮಗಳನ್ನು ಕೈಗೊಳ್ಳುವುದು ಸೂಕ್ತವಾಗಿದ್ದರೂ, ನಮ್ಮ ಸನ್ನಿವೇಶದ ಕುರಿತು ಸಮಗ್ರವಾದ ರೋಗನಿರ್ಣಯವನ್ನು ಮಾಡಬಲ್ಲಾತನಿಂದಲೇ ಒಂದು ಪರಿಹಾರವು ಬರಸಾಧ್ಯವಿದೆ. ಮತ್ತು ಮಾನವಕುಲದ ಬಗ್ಗೆ ಬೇರೆ ಯಾವುದೇ ವ್ಯಕ್ತಿಗಿಂತಲೂ ನಮ್ಮ ಸೃಷ್ಟಿಕರ್ತನಾದ ಯೆಹೋವ ದೇವರಿಗೇ ಚೆನ್ನಾಗಿ ತಿಳಿದಿರುತ್ತದೆ. ನಾವು ನಮ್ಮ ಮೇಲೆ ತಂದುಕೊಂಡಿರುವ ಸಮಸ್ಯೆಗಳ ಕಾರಣದಿಂದಲೇ, ಜೀವಿತವು ಅಭದ್ರವಾಗಿದೆಯೆಂದು ಆತನು ಬಲ್ಲವನಾಗಿದ್ದಾನೆ.

ಭದ್ರವಾದ ಆರಂಭವನ್ನು ತೊಡೆದುಹಾಕಲಾಯಿತು

ಯೆಹೋವನು ಪ್ರಥಮ ಮಾನವ ಜೋಡಿಯನ್ನು ಪರಿಪೂರ್ಣವಾಗಿ ಸೃಷ್ಟಿಸಿ, ಅವರನ್ನು ಭದ್ರವಾದ ಪರಿಸರದಲ್ಲಿ ಇರಿಸಿದನೆಂದು ದೇವರ ವಾಕ್ಯವು ವಿವರಿಸುತ್ತದೆ. ಅವರು ಕಳವಳಮುಕ್ತರಾಗಿದ್ದರು. ಮಾನವರು ಪ್ರಮೋದವನದಲ್ಲಿ, ಸಂಪೂರ್ಣ ಭದ್ರತೆಯಲ್ಲಿ ಸದಾ ಜೀವಿಸಬೇಕೆಂಬುದು ದೇವರ ಉದ್ದೇಶವಾಗಿತ್ತು. ಮತ್ತು ಮಾನವಕುಲದ ಆದಿ ಪರಿಸರದಲ್ಲಿ, “ನೋಟಕ್ಕೆ ರಮ್ಯವಾಗಿಯೂ ಊಟಕ್ಕೆ ಅನುಕೂಲವಾಗಿಯೂ ಇರುವ ಎಲ್ಲಾ ತರದ ಮರ”ಗಳಿದ್ದವು. ಅವರ ಶಾರೀರಿಕ ಅಗತ್ಯಗಳು ಪೂರೈಸಲ್ಪಟ್ಟವು ಎಂಬುದನ್ನು ಗಮನಿಸಿರಿ. ಮತ್ತು ಪರಿಸರವು “ನೋಟಕ್ಕೆ ರಮ್ಯವಾಗಿ”ರುವುದಾಗಿ ವರ್ಣಿಸಲ್ಪಟ್ಟ ಕಾರಣ, ಅವರ ಭಾವನಾತ್ಮಕ ಅಗತ್ಯಗಳು ಕೂಡ ಪೂರೈಸಲ್ಪಟ್ಟವು. ಹೀಗೆ, ಪ್ರಥಮ ಜೋಡಿಯು, ಅವರಿಗೆ ಭದ್ರವಾದ ಮತ್ತು ತೊಂದರೆಮುಕ್ತ ಜೀವಿತದ ಆಶ್ವಾಸನೆಯನ್ನು ನೀಡಿದ ವಾತಾವರಣದಲ್ಲಿ ಇರಿಸಲ್ಪಟ್ಟಿದ್ದರೆಂಬುದರಲ್ಲಿ ಯಾವ ಸಂದೇಹವೂ ಇಲ್ಲ.—ಆದಿಕಾಂಡ 2:9.

ಆದಾಮಹವ್ವರು ದೇವರ ಪ್ರೀತಿಪೂರ್ಣ ಪರಮಾಧಿಕಾರವನ್ನು ತ್ಯಜಿಸಿಬಿಟ್ಟರು. ಹೀಗೆ ಮಾಡಿದ ಕಾರಣ, ಅವರು ತಮ್ಮ ಜೀವಿತಗಳಲ್ಲಿ ಸಂದೇಹ, ಭಯ, ಅವಮಾನ, ದೋಷಿಭಾವನೆ, ಮತ್ತು ಅಭದ್ರತೆಯ ಅನಿಸಿಕೆಗಳನ್ನು ಬರಮಾಡಿಕೊಂಡರು. ದೇವರನ್ನು ತಿರಸ್ಕರಿಸಿದ ಬಳಿಕ, ತಾನು “ಹೆದರಿ” ಬಿಟ್ಟೆನೆಂದು ಆದಾಮನು ಒಪ್ಪಿಕೊಂಡನು. ಈ ಪ್ರಥಮ ಮಾನವರು, ಯಾರೊಂದಿಗೆ ಆರಂಭದಲ್ಲಿ ನಿಕಟವೂ ಪ್ರಯೋಜನಕಾರಿಯೂ ಆದ ಸಂಬಂಧವನ್ನು ಹೊಂದಿದ್ದರೊ, ಆ ಪ್ರೀತಿಪೂರ್ಣ ಸೃಷ್ಟಿಕರ್ತನಿಗೆ ಕಾಣದಂತೆ ಅಡಗಿಕೊಂಡರು.—ಆದಿಕಾಂಡ 3:1-5, 8-10.

ಯೆಹೋವನ ಮೂಲ ಉದ್ದೇಶವು ಬದಲಾಗದೆ ಉಳಿದಿದೆ. ನಮ್ಮ ಸೃಷ್ಟಿಕರ್ತನು ಪ್ರೀತಿಪೂರ್ಣ ದೇವರಾಗಿದ್ದಾನೆಂದು ಬೈಬಲು ತಿಳಿಸುತ್ತದೆ. ಆತನು ಈ ಭೂಮಿಯನ್ನು ಪ್ರಮೋದವನದ ಪರಿಸ್ಥಿತಿಗೆ ಪುನಃಸ್ಥಾಪಿಸಿ, ವಿಧೇಯ ಮಾನವಕುಲವು ಸದಾಕಾಲ ಭದ್ರತೆಯಲ್ಲಿ ಜೀವಿಸುವಂತೆ ಬೇಗನೆ ಸಾಧ್ಯಗೊಳಿಸುವನು. ಪ್ರವಾದಿಯಾದ ಯೆಶಾಯನ ಮೂಲಕ ಕೊಡಲ್ಪಟ್ಟ ವಾಗ್ದಾನವು ಹೀಗಿದೆ: “ಇಗೋ, ನೂತನಾಕಾಶಮಂಡಲವನ್ನೂ ನೂತನ ಭೂಮಂಡಲವನ್ನೂ ಸೃಷ್ಟಿಸುವೆನು; . . . ನಾನು ಮಾಡುವ ಸೃಷ್ಟಿ ಕಾರ್ಯದಲ್ಲಿಯೇ ಹರ್ಷಗೊಂಡು ಸದಾ ಉಲ್ಲಾಸಿಸಿರಿ.” (ಯೆಶಾಯ 65:17, 18) ಈ ನೂತನ ಆಕಾಶಮಂಡಲ ಮತ್ತು ನೂತನ ಭೂಮಂಡಲದ ಕುರಿತು ಅಪೊಸ್ತಲ ಪೇತ್ರನು ಹೇಳುವುದು: “ಅವುಗಳಲ್ಲಿ ನೀತಿಯು ವಾಸವಾಗಿರುವದು.”—2 ಪೇತ್ರ 3:13.

ಇದು ಹೇಗೆ ನೆರವೇರುವುದು? ಯೆಹೋವನು ಸ್ಥಾಪಿಸಲಿರುವ ಸರಕಾರದ ಮೂಲಕವೇ. ಈ ರಾಜ್ಯಕ್ಕಾಗಿ ಪ್ರಾರ್ಥಿಸುವಂತೆ ಯೇಸು ಕ್ರಿಸ್ತನು ತನ್ನ ಹಿಂಬಾಲಕರಿಗೆ ಕಲಿಸಿದನು: “ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ. ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ.”—ಮತ್ತಾಯ 6:9, 10.

ಮಾನವ ಸರಕಾರಗಳನ್ನು ದೇವರ ರಾಜ್ಯವು ಸ್ಥಾನಪಲ್ಲಟಗೊಳಿಸಿ, ದೇವರ ಉದ್ದೇಶವನ್ನು ಲೋಕದಾದ್ಯಂತ ಕಾರ್ಯರೂಪಕ್ಕೆ ತರುವುದು. (ದಾನಿಯೇಲ 2:44) ಆದಾಮನ ದಿನಗಳಂದಿನಿಂದ ಮಾನವಕುಲವನ್ನು ಬಾಧಿಸಿರುವ ಸಂದೇಹ, ಭಯ, ಅವಮಾನ, ದೋಷಿಭಾವನೆ, ಮತ್ತು ಅಭದ್ರತೆಯು ಇಲ್ಲದೆ ಹೋಗುವುದು. ಬೈಬಲಿಗನುಸಾರ, ಆ ರಾಜ್ಯವು ಬಹಳ ಹತ್ತಿರವಿದೆ. ಈಗಲೂ, ನಮ್ಮ ಅನಿಶ್ಚಿತ ಲೋಕದಲ್ಲೂ, ದೇವರ ರಾಜ್ಯಕ್ಕಾಗಿ ಹಾತೊರೆಯುವ ಜನರಿಗೆ ಒಂದಿಷ್ಟು ಭದ್ರತೆಯು ಸಿಗುತ್ತದೆ.

ಆತ್ಮಿಕ ವಿಷಯಗಳಿಗೆ ಆದ್ಯತೆಯನ್ನು ಕೊಡಿರಿ

ಭಯದಲ್ಲಿಯೂ ಸಂಕಟದಲ್ಲಿಯೂ ಇರುವುದರ ಅರ್ಥವನ್ನು ದೇವರ ಸೇವಕನಾಗಿದ್ದ ದಾವೀದನು ಬಲ್ಲವನಾಗಿದ್ದನು. ಆದರೂ, ಕೀರ್ತನೆ 4:8ರಲ್ಲಿ ದಾಖಲಿಸಲ್ಪಟ್ಟಿರುವ ಮಾತುಗಳನ್ನು ದಾವೀದನು ಬರೆದನು: “ನಾನು ನಿರ್ಭಯವಾಗಿರುವದರಿಂದ ಮಲಗಿಕೊಂಡು ಕೂಡಲೆ ನಿದ್ದೆಮಾಡುವೆನು; ಯಾಕಂದರೆ ಯೆಹೋವನೇ, ನಾನು ಯಾವ ಅಪಾಯವೂ ಇಲ್ಲದೆ ಸುರಕ್ಷಿತನಾಗಿರುವಂತೆ ನೀನು ಕಾಪಾಡುತ್ತೀ.” ದಾವೀದನು ಕೆಲವೊಮ್ಮೆ ಸಮಸ್ಯೆಗಳಿಂದ ಸುತ್ತುವರಿಯಲ್ಪಟ್ಟಿದ್ದರೂ, ಯೆಹೋವನು ಅವನಿಗೆ ಭದ್ರತೆಯ ಅನಿಸಿಕೆಯನ್ನು ದಯಪಾಲಿಸಿದ್ದನು. ಇದರಿಂದ ನಾವು ಏನನ್ನು ಕಲಿತುಕೊಳ್ಳಬಲ್ಲೆವೊ? ಅಭದ್ರವಾದ ಲೋಕದಲ್ಲೂ ಒಂದಿಷ್ಟು ಭದ್ರತೆಯನ್ನು ನಾವು ಹೇಗೆ ಪಡೆದುಕೊಳ್ಳಸಾಧ್ಯವಿದೆ?

ಆದಾಮಹವ್ವರ ಕುರಿತು ಆದಿಕಾಂಡದಲ್ಲಿರುವ ವೃತ್ತಾಂತವನ್ನು ಪರಿಗಣಿಸಿರಿ. ಅವರು ಈ ಭದ್ರತೆಯ ಅನಿಸಿಕೆಯನ್ನು ಯಾವಾಗ ಕಳೆದುಕೊಂಡರು? ಸೃಷ್ಟಿಕರ್ತನೊಂದಿಗೆ ತಮಗಿದ್ದ ವೈಯಕ್ತಿಕ ಸಂಬಂಧವನ್ನು ತೊರೆದು, ಮಾನವಕುಲಕ್ಕಾಗಿ ಆತನಿಗಿದ್ದ ಉದ್ದೇಶಕ್ಕನುಸಾರವಾಗಿ ಜೀವಿಸಲು ನಿರಾಕರಿಸಿದ ಗಳಿಗೆಯಲ್ಲೇ. ಆದಕಾರಣ, ಯೆಹೋವನೊಂದಿಗೆ ಒಂದು ನಿಕಟವಾದ ವೈಯಕ್ತಿಕ ಸಂಬಂಧವನ್ನು ನಾವು ಬೆಳೆಸಿಕೊಂಡು, ಆತನ ಚಿತ್ತಕ್ಕನುಸಾರವಾಗಿ ಜೀವಿಸಲು ಪ್ರಯತ್ನಿಸುವುದಾದರೆ, ಈಗಲೂ ನಾವು ಅಸಾಧ್ಯವಾದದ್ದೆಂದು ತೋರುವ ಭದ್ರವಾದ ಜೀವಿತವನ್ನು ಅನುಭವಿಸಸಾಧ್ಯವಿದೆ.

ಬೈಬಲಿನ ಅಧ್ಯಯನದ ಮೂಲಕ ಯೆಹೋವನನ್ನು ತಿಳಿದುಕೊಳ್ಳುವುದು, ಜೀವಿತದ ಅರ್ಥವನ್ನು ಗ್ರಹಿಸಿಕೊಳ್ಳಲು ನಮಗೆ ಸಹಾಯಮಾಡುತ್ತದೆ. ಆಗ ಮಾತ್ರ, ನಾವು ಯಾರು ಮತ್ತು ಇಲ್ಲಿರುವುದೇಕೆ ಎಂಬ ವಿಷಯಗಳನ್ನು ತಿಳಿದುಕೊಳ್ಳುವೆವು. ನಾವು ದೇವರನ್ನು ಪ್ರೀತಿಸಿ, ಮಾನವಕುಲಕ್ಕಾಗಿರುವ ಆತನ ಉದ್ದೇಶವನ್ನು ಅರಿತು, ಅದರಲ್ಲಿ ನಮ್ಮ ಸ್ಥಾನವನ್ನು ಗ್ರಹಿಸಿಕೊಂಡಾಗಲೇ, ಒಂದು ಭದ್ರವಾದ ಜೀವಿತವು ಶಕ್ಯವಾಗಿದೆ. ಹಲವಾರು ವರ್ಷಗಳ ಹಿಂದೆ, ಪೌಲನೆಂಬ ವ್ಯಕ್ತಿಯು ಆ ಭದ್ರತೆಯನ್ನು ಕಂಡುಕೊಂಡನು.

ಜರ್ಮನಿಯ ತೀರದ ಸ್ವಲ್ಪ ದೂರದಲ್ಲಿರುವ ದ್ವೀಪಗಳಲ್ಲೊಂದರಲ್ಲಿ ಪೌಲನು ಹುಟ್ಟಿ ಬೆಳೆದನು. ಎರಡನೆಯ ಜಾಗತಿಕ ಯುದ್ಧದ ಸಮಯದಲ್ಲಿ ಅವನ ಹೆತ್ತವರು ಬಹಳಷ್ಟು ಸಂಕಟವನ್ನು ಅನುಭವಿಸಿದ್ದ ಕಾರಣ, ಅವನ ಕುಟುಂಬಕ್ಕೆ ಧರ್ಮದಲ್ಲಿ ಯಾವ ಆಸಕ್ತಿಯೂ ಇರಲಿಲ್ಲ. ತಾನು ಯುವಕನಾಗಿದ್ದಾಗ ಹೇಗಿದ್ದೆನೆಂಬುದನ್ನು ಪೌಲನೇ ಹೀಗೆ ಹೇಳುತ್ತಾನೆ: “ನಾನು ಯಾವುದನ್ನೂ ನಂಬಲಿಲ್ಲ ಮತ್ತು ಯಾರನ್ನೂ ಗೌರವಿಸಲಿಲ್ಲ. ನನ್ನ ದುಃಖಗಳನ್ನು ಮರೆಯಲಿಕ್ಕಾಗಿ ಮದ್ಯಪಾನಮಾಡಿ, ವಾರಕ್ಕೆ ಎರಡು ಇಲ್ಲವೆ ಮೂರು ಬಾರಿ ಮಿತಿಮೀರಿ ಕುಡಿದು ಮತ್ತನಾಗುತ್ತಿದ್ದೆ. ನನ್ನ ಜೀವಿತದಲ್ಲಿ ಭದ್ರತೆಯೆಂಬುದೇ ಇರಲಿಲ್ಲ.”

ತದನಂತರ, ಪೌಲನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬರೊಂದಿಗೆ ಮಾತಾಡಿದನು. ಪೌಲನು ಬಹಳ ವಾದಿಸಿದನಾದರೂ, ಸಾಕ್ಷಿಯು ಹೇಳಿದ ಒಂದು ಮಾತು, ಅವನನ್ನು ಆಲೋಚಿಸುವಂತೆ ಪ್ರೇರಿಸಿತು: “ಶೂನ್ಯತೆಯಿಂದ, ಶೂನ್ಯತೆಯಲ್ಲದೆ ಮತ್ತೇನೂ ಬರಸಾಧ್ಯವಿಲ್ಲ.” ಬೇರೆ ಮಾತುಗಳಲ್ಲಿ ಹೇಳುವುದಾದರೆ, ನಿಸರ್ಗದಲ್ಲಿ ನಾವು ನೋಡುವ ಪ್ರತಿಯೊಂದು ವಸ್ತುವಿಗೂ ಒಬ್ಬ ಸೃಷ್ಟಿಕರ್ತನಿರಲೇಬೇಕು.

“ನಾನು ಅದರ ಕುರಿತು ಪದೇ ಪದೇ ಯೋಚಿಸಿ, ಕೊನೆಗೆ ಅದನ್ನು ಒಪ್ಪಿಕೊಳ್ಳಲೇಬೇಕಾಯಿತು.” ಹೀಗೆ ಪೌಲನು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನನ್ನು ಅಭ್ಯಸಿಸಿ, ಯೆಹೋವನ ಕುರಿತು ತಿಳಿದುಕೊಂಡನು. ಅವನು ಒಪ್ಪಿಕೊಳ್ಳುವುದು: “ನನ್ನ ಹೆತ್ತವರಲ್ಲದೆ, ಜೀವಿತದಲ್ಲಿ ನನಗೆ ಹಿತವನ್ನು ತಂದಿದ್ದ ಪ್ರಪ್ರಥಮ ವ್ಯಕ್ತಿಯು ಯೆಹೋವನಾಗಿದ್ದನು.” 1977ರಲ್ಲಿ ಪೌಲನು ಒಬ್ಬ ಸಾಕ್ಷಿಯಾಗಿ ದೀಕ್ಷಾಸ್ನಾನ ಪಡೆದುಕೊಂಡನು ಮತ್ತು ಈಗ ಅವನು ಹೇಳುವುದು: “ಜೀವಿತದ ಉದ್ದೇಶವು ನಿಜವಾಗಿಯೂ ಏನಾಗಿದೆಯೆಂದು ಈಗ ನನಗೆ ಗೊತ್ತಿದೆ. ಯೆಹೋವನ ಚಿತ್ತಕ್ಕನುಸಾರ ಜೀವಿಸುವುದರಲ್ಲಿ ನಾನು ಆನಂದಿಸುತ್ತೇನೆ. ಮತ್ತು ಭವಿಷ್ಯತ್ತಿನಲ್ಲಿ ನನಗಾಗಲಿ ನನ್ನ ಕುಟುಂಬಕ್ಕಾಗಲಿ ಏನೇ ಸಂಭವಿಸಿದರೂ ಅದನ್ನು ಸರಿಪಡಿಸುವವನು ಯೆಹೋವನೇ ಆಗಿರುವುದರಿಂದ, ನಾನು ಭದ್ರತೆಯನ್ನು ಅನುಭವಿಸುತ್ತಿದ್ದೇನೆ.”

ಈ ಅನುಭವದಿಂದ ನಾವು ಏನನ್ನು ಕಲಿತುಕೊಳ್ಳಸಾಧ್ಯವಿದೆ? ಒಂದು ಭಾವನಾತ್ಮಕ ಹೊರೆಯಾಗಿದ್ದ ತನ್ನ ಅಭದ್ರತೆಯನ್ನು ಪೌಲನು, ಪ್ರಾಪಂಚಿಕ ಸಂಪತ್ತಿನ ಮೇಲಲ್ಲ, ಬದಲಾಗಿ ಆತ್ಮಿಕ ವಿಷಯಗಳ ಮೇಲೆ ಮನಸ್ಸಿಡುವ ಮೂಲಕ ಜಯಿಸಿದನು. ಸೃಷ್ಟಿಕರ್ತನೊಂದಿಗೆ ಅವನು ಗಾಢವಾದ ಸಂಬಂಧವನ್ನು ಬೆಳೆಸಿಕೊಂಡನು. ಲಕ್ಷಾಂತರ ಯೆಹೋವನ ಸಾಕ್ಷಿಗಳು ಅಂತಹ ಸಂಬಂಧದಲ್ಲಿ ಆನಂದಿಸುತ್ತಾರೆ. ಇದು ಅವರಿಗೆ ಆಂತರಿಕ ಬಲವನ್ನು ನೀಡಿ, ಇತರರೊಂದಿಗಿನ ತಮ್ಮ ವ್ಯವಹಾರಗಳಲ್ಲಿ ಸ್ವತ್ಯಾಗಿಗಳಾಗಿರುವಂತೆ ಸಹಾಯಮಾಡುತ್ತದೆ. ಯೆಹೋವನ ಸಾಕ್ಷಿಗಳು ತಮ್ಮ ಸಮಯವನ್ನು ಉಪಯೋಗಿಸುತ್ತಾ, ಜನರನ್ನು ಮನೆಗಳಲ್ಲಿ ಸಂದರ್ಶಿಸಿ, ಆತ್ಮಿಕ ವಿಷಯಗಳ ಮೇಲೆ ಅವರು ಮನಸ್ಸನ್ನಿಡುವ ಮೂಲಕ ತಮ್ಮ ಜೀವಿತಗಳನ್ನು ಹೆಚ್ಚು ಭದ್ರಪಡಿಸಿಕೊಳ್ಳುವಂತೆ ಸಹಾಯಮಾಡುತ್ತಾರೆ. ಆದರೆ ಸಾಕ್ಷಿಗಳು ಸಾರುವುದಕ್ಕಿಂತ ಹೆಚ್ಚಿನದ್ದನ್ನು ಮಾಡುತ್ತಾರೆ.

“ನಿಮ್ಮ ದೇವರಾದ ಯೆಹೋವನಿಗೆ ಪ್ರಾರ್ಥಿಸಿರಿ”

ಜುಲೈ 1997ರಲ್ಲಿ, ಒಡರ್‌ ನದಿಯು ಉತ್ತರ ಯೂರೋಪಿನ ದೊಡ್ಡ ಕ್ಷೇತ್ರಗಳನ್ನು ನೀರಿನಿಂದ ಮುಳುಗಿಸಿದಾಗ, ಜರ್ಮನಿಯಲ್ಲಿರುವ ಯೆಹೋವನ ಸಾಕ್ಷಿಗಳು ಹತ್ತಿರದ ಪೋಲೆಂಡ್‌ನಲ್ಲಿರುವ ಜನರ ಸ್ಥಿತಿಯ ಕುರಿತು ತಿಳಿದುಕೊಂಡರು. ಅವರು ಏನು ಮಾಡಸಾಧ್ಯವಿತ್ತು? ಬರ್ಲಿನ್‌ನ ಸುತ್ತಲೂ ಇರುವ ಸಾಕ್ಷಿಗಳು, ಕೆಲವೇ ದಿನಗಳೊಳಗೆ 46.4 ಲಕ್ಷದಷ್ಟು ಹಣವನ್ನು ಸ್ವಇಚ್ಛೆಯಿಂದ ದಾನದ ರೂಪದಲ್ಲಿ ನೀಡಿದಾಗ, ತಮ್ಮ ಅಪಾರ ಉದಾರಭಾವವನ್ನು ತೋರ್ಪಡಿಸಿದರು.

ನಿರ್ಮಾಣಕಾರ್ಯದಲ್ಲಿ ಅನುಭವ ಪಡೆದಿದ್ದ ಸಾಕ್ಷಿಗಳು, ತಮ್ಮ ಸ್ವಂತ ಖರ್ಚಿನಲ್ಲಿ ಆರು ತಾಸುಗಳ ಪ್ರಯಾಣವನ್ನು ಬೆಳಸಿ, ಬರ್ಲಿನ್‌ನಿಂದ ಪೋಲೆಂಡ್‌ನ ವ್ರಾಟ್‌ಸ್ಲಾವ್‌ ಪ್ರಾಂತಕ್ಕೆ ಬಂದರು. ಒಂದು ಚಿಕ್ಕ ಪಟ್ಟಣದಲ್ಲಿ, ಅನೇಕ ಮನೆಗಳು ವಿಪರೀತವಾಗಿ ಹಾನಿಗೊಂಡಿದ್ದವು. ಒಂದು ಸಾಕ್ಷಿ ಕುಟುಂಬಕ್ಕೆ ಸೇರಿದ್ದ ಮನೆಯು, ಆರು ಮೀಟರುಗಳಿಗಿಂತ ಹೆಚ್ಚು ನೀರಿನಿಂದ ತುಂಬಿಹೋಗಿತ್ತು. ಆ ಕುಟುಂಬದಲ್ಲಿದ್ದ ಮಗಳು, ಮುಂದಿನ ತಿಂಗಳು ವಿವಾಹವಾಗಿ ಅಲ್ಲಿ ತನ್ನ ಪತಿಯೊಂದಿಗೆ ಜೀವಿಸಲು ಯೋಜಿಸಿದ್ದಳು. ಆದರೆ ಎಲ್ಲವನ್ನೂ ಕಳೆದುಕೊಂಡಿದ್ದ ಆ ಕುಟುಂಬಕ್ಕೆ ಸಹಾಯಮಾಡಿ, ಮನೆಯನ್ನು ದುರಸ್ತುಗೊಳಿಸಲು ಏನನ್ನು ಮಾಡಸಾಧ್ಯವಿತ್ತು?

ನೀರು ಇಳಿದಾದ ಮೇಲೆ, ನೆರೆಯವನೊಬ್ಬನು ಗೇಲಿಮಾಡುತ್ತಾ ಕೇಳಿದ್ದು: “ನಿಮ್ಮ ದೇವರಾದ ಯೆಹೋವನಿಗೆ ಪ್ರಾರ್ಥಿನೆಮಾಡಿ, ಆತನು ನಿಮಗೆ ಸಹಾಯ ಮಾಡುತ್ತಾನೊ ಇಲ್ಲವೊ ಎಂದು ನೀವು ನೋಡಬಾರದೇಕೆ?” ಮರುದಿನ ಜರ್ಮನಿಯಿಂದ ಅನೇಕ ವಾಹನಗಳು ಆ ಸಾಕ್ಷಿ ಕುಟುಂಬದ ಮನೆಯ ಮುಂದೆ ಬಂದು ನಿಂತಾಗ, ಆ ನೆರೆಯವನಿಗಾದ ಆಶ್ಚರ್ಯವನ್ನು ತುಸು ಯೋಚಿಸಿರಿ! ಅಪರಿಚಿತರ ಒಂದು ಗುಂಪು ಆ ವಾಹನಗಳಿಂದ ಇಳಿದು, ಮನೆಯನ್ನು ದುರಸ್ತುಗೊಳಿಸತೊಡಗಿತು. “ಇವರು ಯಾರು? ಸಾಮಗ್ರಿಗಳಿಗೆ ಹಣವನ್ನು ಯಾರು ಕೊಡುತ್ತಿದ್ದಾರೆ?” ಎಂದು ಆ ನೆರೆಯವನು ಕೇಳಿದನು. ಇವರು ನಮ್ಮ ಆತ್ಮಿಕ ಸಹೋದರರಾಗಿದ್ದು, ಸಾಮಗ್ರಿಗಳಿಗೆ ಅವರೇ ಹಣ ನೀಡುತ್ತಿದ್ದಾರೆಂದು ಆ ಸಾಕ್ಷಿ ಕುಟುಂಬವು ವಿವರಿಸಿತು. ಆ ಮನೆಯನ್ನು ನವೀಕರಿಸಿದಂತೆ, ಪಟ್ಟಣದ ನಿವಾಸಿಗಳು ಆಶ್ಚರ್ಯಚಕಿತರಾಗಿ ನೋಡುತ್ತಾ ನಿಂತರು. ಆ ಸಹೋದರಿಯ ವಿವಾಹವು, ಯೋಜಿಸಿದಂತೆಯೇ ನಡೆಯಿತು.

ಯೆಹೋವನ ಸಾಕ್ಷಿಗಳ ಅಂತಾರಾಷ್ಟ್ರೀಯ ಸಹೋದರತ್ವದ ಭಾಗವಾಗಿರುವುದು, ಆತ್ಮಿಕ ಪ್ರಯೋಜನಗಳನ್ನು ಮಾತ್ರವಲ್ಲ, ಈ ಅಭದ್ರ ಲೋಕದಲ್ಲಿ ಒಂದಿಷ್ಟು ಭದ್ರತೆಯನ್ನೂ ತರುತ್ತದೆ ಎಂದು ಈ ಕುಟುಂಬವು ಕಂಡುಕೊಂಡಿತು. ಇಂತಹ ಅನುಭವವು ಅನೇಕರಿಗೆ ಆಯಿತು. ಪೀಡಿತ ಕ್ಷೇತ್ರದಲ್ಲಿದ್ದ ಯೆಹೋವನ ಸಾಕ್ಷಿಗಳ ಮನೆಗಳು ಮತ್ತು ರಾಜ್ಯ ಸಭಾಗೃಹಗಳು ದುರಸ್ತುಗೊಳಿಸಲ್ಪಟ್ಟವು. ಮತ್ತು ಸಾಕ್ಷಿಯಲ್ಲದ ನೆರೆಯವರಿಗೂ ಸಹಾಯವು ನೀಡಲ್ಪಟ್ಟಿತು. ಅವರ ಮನೆಗಳೂ ದುರಸ್ತುಗೊಳಿಸಲ್ಪಟ್ಟವು. ಅವರು ಇದನ್ನು ಬಹಳವಾಗಿ ಗಣ್ಯಮಾಡಿದರು.

ಸಮಾಧಾನ, ನೆಮ್ಮದಿ, ಮತ್ತು ನಿರ್ಭಯ

ಅತಿಯಾದ ಜ್ವರವು ಕೊನೆಗೆ ಹೋಗಿ, ಪುನಃ ಆರೋಗ್ಯವಂತರಾದಾಗ, ನಮಗೆ ಸಹಾಯಮಾಡಿದ ವೈದ್ಯನಿಗೆ ನಾವೆಷ್ಟು ಕೃತಜ್ಞರಾಗಿರುತ್ತೇವೆ! ದೇವರ ರಾಜ್ಯದ ಮೂಲಕ, ಮಾನವಕುಲವನ್ನು ಪೂರ್ತಿಯಾಗಿ ಆವರಿಸಿರುವ ಅಭದ್ರತೆಯೆಂಬ ಜ್ವರವು ಇಲ್ಲದೆ ಹೋಗುವಾಗ, ನಮ್ಮ ಸೃಷ್ಟಿಕರ್ತನಿಗೆ ನಾವೆಷ್ಟು ಕೃತಜ್ಞರಾಗಿರುವೆವು! ಹೌದು, ‘ನಿತ್ಯಕ್ಕೂ ಸಮಾಧಾನ, ನೆಮ್ಮದಿ ಮತ್ತು ನಿರ್ಭಯ’ದಲ್ಲಿ ಜೀವಿತವನ್ನು ಕೊಡುತ್ತೇನೆಂದು ವಾಗ್ದಾನಿಸುವವನು ಆತನೇ ಆಗಿದ್ದಾನೆ. ಎಂತಹ ಅದ್ಭುತಕರ ಪ್ರತೀಕ್ಷೆಯಾಗಿದೆ!—ಯೆಶಾಯ 32:17.

[ಪುಟ 21 ರಲ್ಲಿರುವ ಸಂಕ್ಷಿಪ್ತ ವಿವರಣೆ]

ಪ್ರಾಪಂಚಿಕ ಸಂಪತ್ತಿನ ಮೇಲಲ್ಲ, ಆತ್ಮಿಕ ವಿಷಯಗಳ ಮೇಲೆ ಮನಸ್ಸಿಡುವ ಮೂಲಕ, ನಾವು ಒಂದು ಭಾವನಾತ್ಮಕ ಹೊರೆಯನ್ನು ಕಡಮೆಮಾಡಸಾಧ್ಯವಿದೆ

[ಪುಟ 9 ರಲ್ಲಿರುವ ಚಿತ್ರ]

ಎಲ್ಲರೂ ಶಾಶ್ವತವಾದ ಭದ್ರತೆಯಲ್ಲಿ ಜೀವಿಸಲಿರುವ ನೂತನ ಲೋಕವನ್ನು ದೇವರು ವಾಗ್ದಾನಿಸುತ್ತಾನೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ