‘ನಾವು ಇನ್ನು ಮೇಲೆ ನಮಗಾಗಿ ಜೀವಿಸುವುದಿಲ್ಲ’
ಜ್ಯಾಕ್ ಯೋಹಾನ್ಸನ್ ಹೇಳಿದಂತೆ
ಆಫ್ರಿಕದ ಮಲಾವಿಯ ಸೈನಿಕನೊಬ್ಬನು, ಲ್ಯಾಂಡ್ ರೋವರ್ ಗಾಡಿಯ ಹೆಡ್ಲೈಟ್ಗಳ ಮುಂದೆ, ನದಿಯ ದಡದಲ್ಲಿ ನಿಲ್ಲುವಂತೆ ನನಗೆ ಆಜ್ಞಾಪಿಸಿದನು. ಅವನು ತನ್ನ ಬಂದೂಕನ್ನು ಹೆಗಲಿಗೇರಿಸುತ್ತಿದ್ದಾಗ, ಲಾಯ್ಡ್ ಲೈಕ್ವೈಡ್ ಎಂಬ ವ್ಯಕ್ತಿಯು ನದೀತೀರಕ್ಕೆ ಮುನ್ನುಗ್ಗಿ, ನನಗೆ ಅಡ್ಡವಾಗಿ ನಿಂತನು. ಅವನು ಕಳಕಳಿಯಿಂದ ಬೇಡಿಕೊಂಡದ್ದು: “ಇವರಿಗೆ ಗುಂಡುಹಾರಿಸಬೇಡಿ! ಅವರಿಗೆ ಬದಲಾಗಿ ನನಗೇ ಗುಂಡುಹಾರಿಸಿ! ಈ ವಿದೇಶೀಯನು ಯಾವ ತಪ್ಪನ್ನೂ ಮಾಡಿಲ್ಲ!” ಆಫ್ರಿಕದವನೊಬ್ಬನು, ಐರೋಪ್ಯನಾದ ನನಗೋಸ್ಕರ ತನ್ನ ಪ್ರಾಣವನ್ನೇ ಬಲಿಕೊಡಲು ಏಕೆ ಸಿದ್ಧನಾಗಿದ್ದನು? ಸುಮಾರು 40 ವರ್ಷಗಳ ಹಿಂದೆ ನಾನು ಹೇಗೆ ಒಬ್ಬ ಮಿಷನೆರಿಯೋಪಾದಿ ಆಫ್ರಿಕಕ್ಕೆ ಬಂದೆ ಎಂಬುದನ್ನು ನಾನು ವಿವರಿಸುತ್ತೇನೆ.
ಇಸವಿ 1942ರಲ್ಲಿ, ನಾನು ಕೇವಲ ಒಂಬತ್ತು ವರ್ಷದವನಾಗಿದ್ದಾಗ, ನನ್ನ ತಂದೆಯನ್ನೂ ಐದು ಮಂದಿ ಮಕ್ಕಳನ್ನೂ ಬಿಟ್ಟು, ನನ್ನ ತಾಯಿ ಮೃತಪಟ್ಟರು. ನಾನೇ ಅವರಲ್ಲಿ ಕಿರಿಯ ಮಗನಾಗಿದ್ದೆ. ಫಿನ್ಲೆಂಡ್ನಲ್ಲಿದ್ದ ಮೊಟ್ಟಮೊದಲ ಯೆಹೋವನ ಸಾಕ್ಷಿಗಳಲ್ಲಿ ನನ್ನ ತಂದೆಯವರು ಒಬ್ಬರಾಗಿದ್ದರು. ನಾಲ್ಕು ತಿಂಗಳುಗಳ ಬಳಿಕ, ಅವರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದರು. ಅನಂತರ, ನನ್ನ ಹಿರಿಯ ಅಕ್ಕ ಮಾಯಾ ನಮ್ಮ ಕುಟುಂಬವನ್ನು ನೋಡಿಕೊಳ್ಳುತ್ತಿದ್ದಳು. ನಮ್ಮ ಬಳಿ ಜಮೀನು ಸಹ ಇತ್ತು. ಆತ್ಮಿಕ ವಿಷಯಗಳಲ್ಲಿ ಮಾಯಾ ತುಂಬ ಮುಂದಿದ್ದಳು. ಮತ್ತು ತಂದೆಯವರು ಸತ್ತ ಒಂದು ವರ್ಷದೊಳಗೆ, ಅವಳು ಹಾಗೂ ನನ್ನ ಅಣ್ಣಂದಿರಲ್ಲಿ ಒಬ್ಬರು, ಯೆಹೋವ ದೇವರಿಗೆ ತಮ್ಮ ಸಮರ್ಪಣೆಯನ್ನು ಮಾಡಿಕೊಂಡು, ದೀಕ್ಷಾಸ್ನಾನ ಪಡೆದುಕೊಂಡರು. ಒಂದು ವರ್ಷದ ಬಳಿಕ, ಅಂದರೆ 11ರ ಪ್ರಾಯದಲ್ಲಿ ನಾನು ದೀಕ್ಷಾಸ್ನಾನ ಪಡೆದುಕೊಂಡೆ.
ಒಂದು ನಿರ್ಣಾಯಕ ತೀರ್ಮಾನ
ಇಸವಿ 1951ರಲ್ಲಿ, ವಾಣಿಜ್ಯ ಕಾಲೇಜಿನ ನನ್ನ ವ್ಯಾಸಂಗವನ್ನು ಮುಗಿಸಿದ ಬಳಿಕ, ನಾನು ಫಿನ್ಲೆಂಡ್ನಲ್ಲಿರುವ ಫೋರ್ಡ್ ಮೋಟಾರ್ ಕಂಪೆನಿಯಲ್ಲಿ ಕೆಲಸಮಾಡತೊಡಗಿದೆ. ಆರು ತಿಂಗಳುಗಳ ಬಳಿಕ, ಯೆಹೋವನ ಸಾಕ್ಷಿಗಳ ಒಬ್ಬ ಬುದ್ಧಿಶಾಲಿ ಸಂಚರಣ ಮೇಲ್ವಿಚಾರಕರಿಂದ ನನಗೆ ಒಂದು ಆಶ್ಚರ್ಯಕರ ಸುದ್ದಿ ಸಿಕ್ಕಿತು. ಒಂದು ಸಮ್ಮೇಳನದಲ್ಲಿ, ಪಯನೀಯರ್ ಸೇವೆ ಅಥವಾ ಪೂರ್ಣ ಸಮಯದ ಶುಶ್ರೂಷೆಯ ಆಶೀರ್ವಾದಗಳ ಕುರಿತು ಒಂದು ಭಾಷಣವನ್ನು ಕೊಡುವಂತೆ ಅವರು ನನಗೆ ಹೇಳಿದರು. ನನಗೆ ಚಿಂತೆಯಾಯಿತು, ಏಕೆಂದರೆ ನಾನು ಐಹಿಕ ಕೆಲಸಮಾಡುತ್ತಿದ್ದೆ. ಅಷ್ಟುಮಾತ್ರವಲ್ಲ, ನಾನು ಎಂದೂ ದೃಢನಿಶ್ಚಯದಿಂದ ಮಾತಾಡಲಾರೆ ಎಂಬ ಅನಿಸಿಕೆ ನನಗಾಯಿತು. ಈ ವಿಷಯದಲ್ಲಿ ನಾನು ಯೆಹೋವನಿಗೆ ಪ್ರಾರ್ಥಿಸಿದೆ. ಕ್ರೈಸ್ತರು “ಇನ್ನು ಮೇಲೆ ತಮಗಾಗಿ ಜೀವಿಸದೆ ತಮಗೋಸ್ಕರ ಸತ್ತು ಎದ್ದು ಬಂದಾತನಿಗಾಗಿ ಜೀವಿಸ”ಬೇಕು ಎಂಬುದನ್ನು ನಾನು ಅರ್ಥಮಾಡಿಕೊಂಡೆ. ಆದುದರಿಂದ, ಒಬ್ಬ ಪಯನೀಯರನೋಪಾದಿ ಸೇವೆಮಾಡಲು ಸಾಧ್ಯವಾಗುವಂತೆ ನಾನು ನನ್ನ ಆದ್ಯತೆಗಳನ್ನು ಬದಲಾಯಿಸಲು ನಿರ್ಧರಿಸಿದೆ.—2 ಕೊರಿಂಥ 5:15.
ಇದೇ ಕಂಪೆನಿಯಲ್ಲಿ ಉಳಿದರೆ, ನಿನಗೆ ಎರಡರಷ್ಟು ಸಂಬಳವನ್ನು ಕೊಡುತ್ತೇನೆಂದು ನನ್ನ ಬಾಸ್ ಮಾತುಕೊಟ್ಟರು. ಆದರೆ ನಾನು ಕೆಲಸವನ್ನು ಬಿಟ್ಟುಬಿಡಲು ಮನಸ್ಸುಮಾಡಿದ್ದೇನೆಂಬುದನ್ನು ಗ್ರಹಿಸಿದ ಬಳಿಕ, ಅವರು ಹೇಳಿದ್ದು: “ನೀನು ಯೋಗ್ಯವಾದ ತೀರ್ಮಾನವನ್ನು ಮಾಡಿದ್ದೀ. ನನ್ನ ಇಡೀ ಜೀವಮಾನವನ್ನು ನಾನು ಇದೇ ಆಫೀಸಿನಲ್ಲಿ ಕಳೆದಿದ್ದೇನೆ, ಆದರೆ ನಾನು ನಿಜವಾಗಿಯೂ ಎಷ್ಟು ಜನರಿಗೆ ಸಹಾಯ ಮಾಡಿದ್ದೇನೆ?” ಹೀಗೆ, 1952ರ ಮೇ ತಿಂಗಳಿನಲ್ಲಿ ನಾನು ಪಯನೀಯರನಾದೆ. ಕೆಲವು ವಾರಗಳ ಬಳಿಕ, ನನಗೆ ಪಯನೀಯರ್ ಶುಶ್ರೂಷೆಯ ಕುರಿತು ದೃಢವಿಶ್ವಾಸದಿಂದ ಭಾಷಣ ಕೊಡಲು ಸಾಧ್ಯವಾಯಿತು.
ಕೆಲವು ತಿಂಗಳುಗಳ ವರೆಗೆ ನಾನು ಪಯನೀಯರಾಗಿ ಸೇವೆಮಾಡಿದೆ. ತದನಂತರ, ನನ್ನ ಕ್ರೈಸ್ತ ತಾಟಸ್ಥ್ಯದ ಕಾರಣದಿಂದ ನನ್ನನ್ನು ಆರು ತಿಂಗಳುಗಳ ವರೆಗೆ ಸೆರೆಮನೆಯಲ್ಲಿ ಹಾಕಲಾಯಿತು. ಬಳಿಕ ಗಲ್ಫ್ ಆಫ್ ಫಿನ್ಲೆಂಡ್ನಲ್ಲಿರುವ ಹಾಸ್ಟೂ-ಬೂಸೂ ಎಂಬ ದ್ವೀಪದ ಇತರ ಯುವ ಸಾಕ್ಷಿಗಳೊಂದಿಗೆ ನನ್ನನ್ನು ಎಂಟು ತಿಂಗಳುಗಳ ವರೆಗೆ ಬಂಧನದಲ್ಲಿ ಇರಿಸಲಾಯಿತು. ಈ ದ್ವೀಪವನ್ನು ನಾವು ಚಿಕ್ಕ ಗಿಲ್ಯಡ್ ಎಂದು ಕರೆಯುತ್ತಿದ್ದೆವು. ಏಕೆಂದರೆ, ನಮ್ಮ ನಡುವೆ ನಾವು ಗಹನವಾದ ಬೈಬಲ್ ಅಭ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಿಕೊಂಡಿದ್ದೆವು. ಏನೇ ಆಗಲಿ, ನಿಜವಾದ ಗಿಲ್ಯಡ್ಗೆ, ಅಂದರೆ ನ್ಯೂ ಯಾರ್ಕಿನ ಸೌತ್ ಲ್ಯಾನ್ಸಿಂಗ್ನಲ್ಲಿರುವ ವಾಚ್ಟವರ್ ಸ್ಕೂಲ್ ಆಫ್ ಗಿಲ್ಯಡ್ಗೆ ಹೋಗುವುದೇ ನನ್ನ ಗುರಿಯಾಗಿತ್ತು.
ನಾನು ಆ ದ್ವೀಪದಲ್ಲಿ ಇನ್ನೂ ಸೆರೆಯಲ್ಲಿದ್ದಾಗಲೇ, ವಾಚ್ ಟವರ್ ಸೊಸೈಟಿಯ ಬ್ರಾಂಚ್ ಆಫೀಸಿನಿಂದ ನನಗೆ ಒಂದು ಪತ್ರ ಬಂತು; ಅದರಲ್ಲಿ, ಯೆಹೋವನ ಸಾಕ್ಷಿಗಳ ಸಂಚರಣ ಮೇಲ್ವಿಚಾರಕನಾಗಿ ಸೇವೆಮಾಡುವಂತೆ ನನಗೆ ಆಮಂತ್ರಣವು ಕೊಡಲ್ಪಟ್ಟಿತು. ನನಗೆ ಬಿಡುಗಡೆಯಾದ ಬಳಿಕ, ಫಿನ್ಲೆಂಡ್ನಲ್ಲಿ ಸ್ವೀಡಿಷ್ ಭಾಷೆಯನ್ನು ಮಾತಾಡುವ ವಿಭಾಗದಲ್ಲಿರುವ ಸಭೆಗಳನ್ನು ನಾನು ಸಂದರ್ಶಿಸಬೇಕಾಗಿತ್ತು. ಆಗ ನಾನು ಕೇವಲ 20 ವರ್ಷದವನಾಗಿದ್ದೆ. ಆದುದರಿಂದ ನಾನು ಅದಕ್ಕೆ ಅನರ್ಹನೆಂದು ನೆನಸಿದೆ. ಆದರೂ ನಾನು ಯೆಹೋವನ ಮೇಲೆ ಭರವಸೆಯಿಟ್ಟೆ. (ಫಿಲಿಪ್ಪಿ 4:13) ನಾನು ಸಂದರ್ಶಿಸುತ್ತಿದ್ದ ಸಭೆಗಳಲ್ಲಿನ ಸಾಕ್ಷಿಗಳು ತುಂಬ ಒಳ್ಳೆಯವರಾಗಿದ್ದರು. ನಾನು ಒಬ್ಬ “ಬಾಲಕ”ನೆಂದು ಅವರು ನನ್ನನ್ನು ಕಡೆಗಣಿಸಲಿಲ್ಲ.—ಯೆರೆಮೀಯ 1:7.
ಮುಂದಿನ ವರ್ಷ ಸಭೆಗಳನ್ನು ಸಂದರ್ಶಿಸುತ್ತಿದ್ದಾಗ, ನಾನು ಲಿಂಡಳನ್ನು ಭೇಟಿಮಾಡಿದೆ. ಅವಳು ಅಮೆರಿಕದಿಂದ ಫಿನ್ಲೆಂಡ್ಗೆ ರಜೆಯಲ್ಲಿ ಬಂದಿದ್ದಳು. ಅವಳು ಅಮೆರಿಕಕ್ಕೆ ಹಿಂದಿರುಗಿದ ಬಳಿಕ, ಬೇಗನೆ ಆತ್ಮಿಕ ಪ್ರಗತಿಯನ್ನು ಮಾಡಿದಳು. ಸ್ವಲ್ಪ ಸಮಯಾನಂತರ ದೀಕ್ಷಾಸ್ನಾನ ಪಡೆದುಕೊಂಡಳು. 1957ರ ಜೂನ್ ತಿಂಗಳಿನಲ್ಲಿ ನಾವು ವಿವಾಹವಾದೆವು. ತದನಂತರ, 1958ರ ಸೆಪ್ಟೆಂಬರ್ ತಿಂಗಳಿನಲ್ಲಿ, ಗಿಲ್ಯಡ್ ಸ್ಕೂಲ್ನ 32ನೆಯ ಕ್ಲಾಸಿಗೆ ನಮ್ಮನ್ನು ಕರೆಯಲಾಯಿತು. ನಾವು ಪದವಿ ಪಡೆದುಕೊಂಡ ಬಳಿಕ, ಫೆಬ್ರವರಿ ತಿಂಗಳಿನಲ್ಲಿ ನಮಗೆ ನ್ಯಾಸಾಲೆಂಡ್ಗೆ ಹೋಗುವ ನೇಮಕ ದೊರೆಯಿತು. ಆಗ್ನೇಯ ಆಫ್ರಿಕದಲ್ಲಿರುವ ನ್ಯಾಸಾಲೆಂಡನ್ನು ಈಗ ಮಲಾವಿಯೆಂದು ಕರೆಯಲಾಗುತ್ತದೆ.
ಆಫ್ರಿಕದಲ್ಲಿನ ನಮ್ಮ ಶುಶ್ರೂಷೆ
ನಮ್ಮ ಆಫ್ರಿಕನ್ ಸಹೋದರರೊಂದಿಗೆ ಸಾರ್ವಜನಿಕ ಶುಶ್ರೂಷೆಯಲ್ಲಿ ಭಾಗವಹಿಸುವುದನ್ನು ನಾವು ತುಂಬ ಇಷ್ಟಪಡುತ್ತಿದ್ದೆವು. ಆಗ ನ್ಯಾಸಾಲೆಂಡ್ನಲ್ಲಿ 14,000ಕ್ಕಿಂತಲೂ ಹೆಚ್ಚು ಪ್ರಚಾರಕರಿದ್ದರು. ಕೆಲವೊಮ್ಮೆ ನಾವು ಲ್ಯಾಂಡ್ ರೋವರ್ ವಾಹನದಲ್ಲಿ ಪ್ರಯಾಣಿಸಿ, ನಮಗೆ ಅಗತ್ಯವಿದ್ದ ಎಲ್ಲ ವಸ್ತುಗಳನ್ನು ಕೊಂಡೊಯ್ದೆವು. ಒಬ್ಬ ಬಿಳಿಯನು ಎಂದೂ ಭೇಟಿಮಾಡದಿದ್ದಂತಹ ಹಳ್ಳಿಗಳಲ್ಲಿ ನಾವು ಉಳಿದುಕೊಂಡೆವು. ಮತ್ತು ಅವರು ಯಾವಾಗಲೂ ನಮ್ಮನ್ನು ಸ್ವಾಗತಿಸುತ್ತಿದ್ದರು. ನಾವು ಬಂದಾಗ, ನಮ್ಮನ್ನು ನೋಡಲಿಕ್ಕಾಗಿ ಇಡೀ ಹಳ್ಳಿಯೇ ಒಟ್ಟುಗೂಡುತ್ತಿತ್ತು. ವಿನಯದಿಂದ ಅಭಿವಂದಿಸಿದ ಬಳಿಕ, ಅವರು ಮೌನವಾಗಿ ನೆಲದ ಮೇಲೆ ಕುಳಿತುಕೊಂಡು, ನಮ್ಮನ್ನು ಗಮನಿಸುತ್ತಾ ಇರುತ್ತಿದ್ದರು.
ಕೆಲವೊಮ್ಮೆ ಹಳ್ಳಿಯವರು ನಮಗೋಸ್ಕರ ಗುಡಿಸಿಲನ್ನು ಕಟ್ಟುತ್ತಿದ್ದರು. ಆ ಗುಡಿಸಿಲನ್ನು ಮಣ್ಣಿನಿಂದ ಅಥವಾ ಉದ್ದವಾದ ಹುಲ್ಲಿನಿಂದ ಕಟ್ಟುತ್ತಿದ್ದರು. ಮತ್ತು ಅದು ಒಂದೇ ಒಂದು ಹಾಸಿಗೆಯನ್ನು ಹಾಸುವಷ್ಟು ದೊಡ್ಡದಿರುತ್ತಿತ್ತು. ರಾತ್ರಿಯಲ್ಲಿ ಕತ್ತೆಕಿರುಬಗಳು ನಮ್ಮ ಗುಡಿಸಿಲಿನ ಬಳಿಯೇ ಓಡಾಡುತ್ತಾ, ನಮ್ಮ ತಲೆಗಳ ಹತ್ತಿರವೇ ಭೀಕರವಾಗಿ ಊಳಿಡುತ್ತಿದ್ದವು. ಆದರೆ, ಸ್ವಲ್ಪದರಲ್ಲೇ ನ್ಯಾಸಾಲೆಂಡ್ನಲ್ಲಿರುವ ಸಾಕ್ಷಿಗಳು, ಕಾಡುಪ್ರಾಣಿಗಳಿಗಿಂತಲೂ ಹೆಚ್ಚು ಅಪಾಯಕರ ಶಕ್ತಿಗಳನ್ನು ಎದುರಿಸಲಿಕ್ಕಿದ್ದರು.
ರಾಷ್ಟ್ರೀಯತೆಯು ಒಂದು ವಿವಾದವಾಗಿ ಪರಿಣಮಿಸುತ್ತದೆ
ಆಫ್ರಿಕದಾದ್ಯಂತ, ಸ್ವಾತಂತ್ರ್ಯ ಚಳುವಳಿಗಳು ಮೇಲೇಳುತ್ತಿದ್ದವು. ನ್ಯಾಸಾಲೆಂಡ್ನಲ್ಲಿರುವ ಪ್ರತಿಯೊಬ್ಬರನ್ನೂ ಒಂದು ರಾಜಕೀಯ ಪಕ್ಷಕ್ಕೆ ಸೇರುವಂತೆ ಕೇಳಿಕೊಳ್ಳಲಾಗಿತ್ತು. ಇದ್ದಕ್ಕಿದ್ದಂತೆ, ನಮ್ಮ ತಾಟಸ್ಥ್ಯವು ತೀವ್ರ ಚರ್ಚೆಗೊಳಗಾಯಿತು. ಆಗ ನಮ್ಮ ಬ್ರಾಂಚ್ ಮೇಲ್ವಿಚಾರಕರಾದ ಮಾಲ್ಕಮ್ ವೈಗೊ ಅವರು ಇರಲಿಲ್ಲವಾದ್ದರಿಂದ, ನಾನು ಬ್ರಾಂಚ್ ಆಫೀಸ್ ಕೆಲಸವನ್ನು ನೋಡಿಕೊಳ್ಳುತ್ತಿದ್ದೆ. ಆಗ ನ್ಯಾಸಾಲೆಂಡ್ನ ಪ್ರಧಾನ ಮಂತ್ರಿಯಾಗಿದ್ದ ಹೇಸ್ಟಿಂಗ್ಸ್ ಕಾಮೂಸೂ ಬಾಂಡಾರನ್ನು ಭೇಟಿಮಾಡಲಿಕ್ಕಾಗಿ ನಾನು ಯೋಜನೆಗಳನ್ನು ಮಾಡಿದೆ. ಇಬ್ಬರು ಕ್ರೈಸ್ತ ಹಿರಿಯರು ಹಾಗೂ ನಾನು, ಅವರಿಗೆ ನಮ್ಮ ತಾಟಸ್ಥ್ಯದ ಕುರಿತು ವಿವರಿಸಿದೆವು. ಆ ಭೇಟಿಯು ಸ್ನೇಹಭಾವದಿಂದ ಮುಕ್ತಾಯವಾಯಿತು. ಇಷ್ಟೆಲ್ಲ ಏರ್ಪಾಡುಗಳು ಮಾಡಲ್ಪಟ್ಟರೂ, ಸುಮಾರು ಒಂದು ತಿಂಗಳಿನ ಬಳಿಕ, 1964ರ ಫೆಬ್ರವರಿ ತಿಂಗಳಲ್ಲಿ, ಎಲಟನ್ ವಾಚಾಂಡ ಎಂಬ ಸಾಕ್ಷಿಯು ಪ್ರಪ್ರಥಮವಾಗಿ ಹಿಂಸೆಯ ದುರ್ಘಟನೆಗೆ ಬಲಿಯಾದನು. ಕುಪಿತಗೊಂಡ ಒಂದು ದೊಂಬಿಯು ಅವನನ್ನು ಈಟಿಯಿಂದ ತಿವಿದು ಕೊಂದುಹಾಕಿತು. ಅವನ ಹಳ್ಳಿಯಲ್ಲಿದ್ದ ಇತರ ಸಾಕ್ಷಿಗಳನ್ನು ಸಹ ಅವರು ಓಡಿಸಿಬಿಟ್ಟರು.
ಆಗ ನಾವು ಡಾ. ಬಾಂಡಾರಿಗೆ ಒಂದು ಟೆಲಿಗ್ರಾಮನ್ನು ಕಳುಹಿಸಿದೆವು. ಅಂತಹ ಹಿಂಸಾಚಾರವನ್ನು ನಿಲ್ಲಿಸಲಿಕ್ಕಾಗಿ, ನಿಮ್ಮ ಅಧಿಕಾರವನ್ನು ಉಪಯೋಗಿಸಿ ಎಂದು ಆ ಟೆಲಿಗ್ರಾಮಿನಲ್ಲಿ ನಾವು ಮನವಿಮಾಡಿಕೊಂಡಿದ್ದೆವು. ಸ್ವಲ್ಪ ಸಮಯಾನಂತರ ನನಗೆ ಪ್ರಧಾನ ಮಂತ್ರಿಗಳ ಆಫೀಸಿನಿಂದ ಫೋನ್ ಕರೆ ಬಂತು. ಅಲ್ಲಿಗೆ ಬರುವಂತೆ ನನಗೆ ತಿಳಿಸಲಾಯಿತು. ಹೆರಲ್ಡ್ ಗೈ ಎಂಬ ಇನ್ನೊಬ್ಬ ಮಿಷನೆರಿಯನ್ನೂ ಆ್ಯಲೆಕ್ಸಾಂಡರ್ ಮಾಫಾಂಬಾನಾ ಎಂಬ ಸ್ಥಳಿಕ ಸಾಕ್ಷಿಯನ್ನೂ ಕರೆದುಕೊಂಡು, ನಾನು ಡಾ. ಬಾಂಡಾರನ್ನು ಭೇಟಿಯಾಗಲು ಹೋದೆ. ಅಲ್ಲಿ ಇಬ್ಬರು ಸರಕಾರಿ ಮಂತ್ರಿಗಳು ಸಹ ಕುಳಿತಿದ್ದರು.
ನಾವು ಹೋಗಿ ಕುಳಿತುಕೊಂಡ ಕೂಡಲೆ, ಡಾ. ಬಾಂಡಾ ಏನನ್ನೂ ಮಾತಾಡದೆ, ಆ ಟೆಲಿಗ್ರಾಮನ್ನು ಸುಮ್ಮನೆ ಅಲ್ಲಾಡಿಸತೊಡಗಿದರು. ಕೊನೆಗೂ ಅವರು ಮೌನವನ್ನು ಮುರಿದು, “ಯೋಹಾನ್ಸನ್, ನೀವು ಕಳುಹಿಸಿದ ಟೆಲಿಗ್ರಾಮ್ನ ಅರ್ಥವೇನು?” ಎಂದು ಕೇಳಿದರು. ಪುನಃ ನಾವು ಅವರಿಗೆ ನಮ್ಮ ರಾಜಕೀಯ ತಾಟಸ್ಥ್ಯದ ಕುರಿತು ವಿವರಿಸಿದೆವು. ಮತ್ತು ನಾನು ಅವರಿಗೆ ಹೀಗೆ ಹೇಳಿದೆ: “ಎಲಟನ್ ವಾಚಾಂಡನ ಕೊಲೆಯಾದ ವಿಷಯ ನಿಮಗೆ ಗೊತ್ತಿದೆ; ಈ ಸಂಕಷ್ಟದಲ್ಲಿ ನೀವು ಮಾತ್ರ ನಮಗೆ ಸಹಾಯ ಮಾಡಬಲ್ಲಿರಿ.” ಈ ಮಾತುಗಳು ಡಾ. ಬಾಂಡಾರಿಗೆ ಹಿಡಿಸಿದಂತೆ ತೋರಿತು, ಮತ್ತು ಅವರು ಸ್ವಲ್ಪ ಶಾಂತಚಿತ್ತರಾದರು.
ಆದರೆ ಅಲ್ಲಿ ಕುಳಿತಿದ್ದ ಸರಕಾರಿ ಮಂತ್ರಿಗಳಲ್ಲಿ ಒಬ್ಬರು, ದೂರದ ಹಳ್ಳಿಯೊಂದರಲ್ಲಿ ವಾಸಿಸುತ್ತಿರುವ ಸಾಕ್ಷಿಗಳು, ಸ್ಥಳಿಕ ಅಧಿಕಾರಿಗಳೊಂದಿಗೆ ಸಹಕರಿಸುತ್ತಿರಲಿಲ್ಲ ಎಂದು ಪ್ರತಿಪಾದಿಸಿದರು. ಇನ್ನೊಬ್ಬ ಮಂತ್ರಿಯು ಇನ್ನೊಂದು ಹಳ್ಳಿಯ ಹೆಸರನ್ನು ಹೇಳಿ, ಅಲ್ಲಿರುವ ಸಾಕ್ಷಿಗಳು ಡಾ. ಬಾಂಡಾರ ಕುರಿತು ಅಗೌರವದಿಂದ ಮಾತಾಡಿದ್ದರು ಎಂದು ಅಪವಾದ ಹೊರಿಸಿದನು. ಆದರೂ, ಆ ರೀತಿ ವರ್ತಿಸಿದ್ದ ವ್ಯಕ್ತಿಗಳ ಹೆಸರನ್ನು ನಮಗೆ ತಿಳಿಯಪಡಿಸಲು ಅವರು ಅಸಮರ್ಥರಾಗಿದ್ದರು. ಯಾವಾಗಲೂ ಸರಕಾರಿ ಅಧಿಕಾರಿಗಳಿಗೆ ಗೌರವವನ್ನು ತೋರಿಸಬೇಕೆಂದು ಯೆಹೋವನ ಸಾಕ್ಷಿಗಳಿಗೆ ಕಲಿಸಲಾಗಿದೆ ಎಂಬುದನ್ನು ನಾವು ಅವರಿಗೆ ವಿವರಿಸಿದೆವು. ಆದರೂ, ಡಾ. ಬಾಂಡಾ ಹಾಗೂ ಅವರ ಮಂತ್ರಿಗಳ ಸುಳ್ಳು ಅಭಿಪ್ರಾಯಗಳನ್ನು ಸರಿಪಡಿಸಲಿಕ್ಕಾಗಿ ನಾವು ಮಾಡಿದ ಪ್ರಯತ್ನಗಳು ಸಫಲವಾಗಲಿಲ್ಲ.
ನಮ್ಮ ಜೀವಗಳು ಅಪಾಯದಲ್ಲಿದ್ದವು
ಇಸವಿ 1964ರಲ್ಲಿ, ನ್ಯಾಸಾಲೆಂಡ್ಗೆ ಸ್ವಾತಂತ್ರ್ಯ ಸಿಕ್ಕಿತು, ಮತ್ತು ಅದು ರಿಪಬ್ಲಿಕ್ ಆಫ್ ಮಲಾವಿಯಾಯಿತು. ನಮ್ಮ ಸಾರುವ ಕೆಲಸವು ಸ್ವಲ್ಪ ಮಟ್ಟಿಗೆ ಸಹಜವಾಗಿ ಮುಂದುವರಿಯುತ್ತಿತ್ತು. ಆದರೆ ಒತ್ತಡವು ಹೆಚ್ಚಾಗುತ್ತಿತ್ತು. ಅದೇ ಸಮಯದಲ್ಲಿ ದೇಶದ ದಕ್ಷಿಣ ಭಾಗದಲ್ಲಿದ್ದ ಸಾಕ್ಷಿಗಳು, ಅಲ್ಲಿ ರಾಜಕೀಯ ದಂಗೆಯೆದ್ದಿದೆ ಎಂದು ಫೋನ್ ಮಾಡಿ ತಿಳಿಸಿದರು. ಅಲ್ಲಿರುವ ಸಾಕ್ಷಿಗಳ ಪರಿಸ್ಥಿತಿಯನ್ನು ತಿಳಿದುಕೊಂಡು, ಅವರಿಗೆ ನೈತಿಕ ಬೆಂಬಲವನ್ನು ನೀಡಲಿಕ್ಕಾಗಿ, ನಮ್ಮಲ್ಲಿ ಒಬ್ಬರು ಒಡನೆಯೇ ಅಲ್ಲಿಗೆ ಹೋಗಬೇಕಾಗಿತ್ತು. ಈ ಮುಂಚೆ ನಾನೊಬ್ಬನೇ ಅಲ್ಲಿನ ಪೊದೆಗಾಡುಗಳಿಗೆ ಪ್ರಯಾಣಿಸಿದ್ದೆ, ಮತ್ತು ಆ ಪ್ರಯಾಣಗಳಿಗೆ ನನ್ನನ್ನು ಹೋಗಗೊಡಲು ಲಿಂಡ ಧೈರ್ಯದಿಂದ ಒಪ್ಪಿಕೊಂಡಿದ್ದಳು. ಈ ಬಾರಿ ಅವಳು ಅದಕ್ಕೆ ಒಪ್ಪಿಕೊಳ್ಳಲಿಲ್ಲ. ನನ್ನೊಂದಿಗೆ ಲಾಯ್ಡ್ ಲೈಕ್ವೈಡ್ ಎಂಬ ಸ್ಥಳಿಕ ಯುವ ಸಾಕ್ಷಿಯೊಬ್ಬನನ್ನು ಕರೆದುಕೊಂಡು ಹೋಗುವಂತೆ ಬೇಡಿಕೊಂಡಳು. ‘ಅವನನ್ನು ಕರೆದುಕೊಂಡು ಹೋಗುವುದು ಒಳ್ಳೇದೆಂದು ಅವಳು ನೆನಸುವಲ್ಲಿ, ನಾನು ಹಾಗೆಯೇ ಮಾಡುವೆ’ ಎಂದು ನನ್ನಷ್ಟಕ್ಕೇ ಆಲೋಚಿಸಿ, ಕೊನೆಗೂ ನಾನು ಸಮ್ಮತಿಸಿದೆ.
ಬೆಳಗ್ಗೆ 6 ಗಂಟೆಯಿಂದಲೇ ಕರ್ಫ್ಯೂ ಆಜ್ಞೆ ಜಾರಿಯಲ್ಲಿತ್ತು, ಅದಕ್ಕೆ ಮುಂಚೆ ನಾವು ದೋಣಿಯಲ್ಲಿ ಒಂದು ನದಿಯನ್ನು ದಾಟಬೇಕು ಎಂದು ನಮಗೆ ಹೇಳಲಾಯಿತು. ಆ ಸಮಯದೊಳಗೆ ದೋಣಿಯನ್ನು ಹತ್ತಲು ನಾವು ಬಹಳಷ್ಟು ಪ್ರಯತ್ನವನ್ನು ಮಾಡಿದೆವು. ಆದರೆ ರಸ್ತೆಗಳು ಸರಿಯಾಗಿರಲಿಲ್ಲವಾದ್ದರಿಂದ ಅಲ್ಲಿಗೆ ತಲಪುವುದು ತಡವಾಯಿತು. ಆರು ಗಂಟೆಯ ಬಳಿಕ ನಾವಿದ್ದ ನದಿಯ ದಡದಲ್ಲಿ ಇರುವ ಯಾರನ್ನೇ ಆಗಲಿ ಕೊಲ್ಲಬೇಕು ಎಂಬ ಆಜ್ಞೆಯು ಹೊರಡಿಸಲ್ಪಟ್ಟಿತ್ತು ಎಂಬುದು ನಮಗೆ ಆಮೇಲೆ ಗೊತ್ತಾಯಿತು. ನಾವು ನದಿಯ ಸಮೀಪಕ್ಕೆ ಬಂದಾಗ, ಈಗಾಗಲೇ ದೋಣಿಯು ಆಚೆಯ ದಡವನ್ನು ತಲಪಿದುದನ್ನು ನಾವು ನೋಡಿದೆವು. ಸಹೋದರ ಲೈಕ್ವೈಡ್, ನಮ್ಮನ್ನು ಕರೆದೊಯ್ಯಲಿಕ್ಕಾಗಿ ಬರುವಂತೆ ದೋಣಿಯವನನ್ನು ಕರೆದರು. ಆಗ ದೋಣಿ ಬಂತು, ಆದರೆ ಅದರಲ್ಲಿದ್ದ ಒಬ್ಬ ಸೈನಿಕನು ಕೂಗಿ ಹೇಳಿದ್ದು: “ನಾನು ಈ ಬಿಳಿಯನಿಗೆ ಗುಂಡುಹಾರಿಸಬೇಕು!”
ತತ್ಕ್ಷಣ ನಾನು ಅದನ್ನು ಪೊಳ್ಳು ಬೆದರಿಕೆಯೆಂದು ನೆನಸಿದೆ. ಆದರೆ ಆ ದೋಣಿಯು ನಮ್ಮ ಸಮೀಪಕ್ಕೆ ಬಂದಾಗ, ಅದರಲ್ಲಿದ್ದ ಸೈನಿಕನು, ನನ್ನ ವಾಹನದ ಬೆಳಕಿನ ಮುಂದೆ ನಿಂತುಕೊಳ್ಳುವಂತೆ ನನಗೆ ಆಜ್ಞೆಯನ್ನಿತ್ತನು. ಕೂಡಲೇ ನನ್ನ ಆಫ್ರಿಕನ್ ಸ್ನೇಹಿತನು ನಮ್ಮಿಬ್ಬರ ಮಧ್ಯೆ ನುಗ್ಗಿ, ಅವರಿಗೆ ಬದಲಾಗಿ ನನಗೇ ಗುಂಡುಹಾರಿಸಿ ಎಂದು ಸೈನಿಕನ ಬಳಿ ಬೇಡಿಕೊಂಡನು. ನನಗೋಸ್ಕರ ಈ ಆಫ್ರಿಕನ್ ಸ್ನೇಹಿತನು ಸಾಯಲು ಸಿದ್ಧನಾಗಿರುವುದನ್ನು ನೋಡಿದ ಆ ಸೈನಿಕನು ಪ್ರಚೋದಿತನಾಗಿ, ತನ್ನ ಬಂದೂಕನ್ನು ಕೆಳಗಿಳಿಸಿದನು. ನಾನು ಯೇಸುವಿನ ಮಾತುಗಳನ್ನು ಜ್ಞಾಪಿಸಿಕೊಂಡೆ: “ಪ್ರಾಣವನ್ನೇ ಸ್ನೇಹಿತರಿಗೋಸ್ಕರ ಕೊಡುವ ಪ್ರೀತಿಗಿಂತ ಹೆಚ್ಚಿನ ಪ್ರೀತಿಯು ಯಾವದೂ ಇಲ್ಲ.” (ಯೋಹಾನ 15:13) ಆ ಆತ್ಮೀಯ ಸಹೋದರನನ್ನು ನನ್ನ ಜೊತೆಗೆ ಕರೆದುಕೊಂಡು ಹೋಗುವಂತೆ ಲಿಂಡಳು ಸಲಹೆ ಕೊಟ್ಟಾಗ, ನಾನು ಅವಳ ಸಲಹೆಗೆ ಕಿವಿಗೊಟ್ಟದ್ದಕ್ಕೆ ನಾನೆಷ್ಟು ಸಂತೋಷಪಟ್ಟೆ!
ಮರುದಿನ ಬ್ಲಾಂಟೈರ್ಗೆ ಹಿಂದಿರುಗುತ್ತಿದ್ದಾಗ, ಯೌವನಸ್ಥರು ಆ ರಸ್ತೆಯನ್ನು ಅಡ್ಡಗಟ್ಟಿದ್ದರು. ಮತ್ತು ಅವರು ಸಹೋದರ ಲೈಕ್ವೈಡ್ನ ಪಾರ್ಟಿ ಮೆಂಬರ್ಶಿಪ್ನ ಕಾರ್ಡನ್ನು ನೋಡಬೇಕೆಂದು ಪಟ್ಟುಹಿಡಿದಿದ್ದರು. ಈಗ ಅಲ್ಲಿಂದ ಪಾರಾಗಲು ಒಂದೇ ಒಂದು ಮಾರ್ಗವಿತ್ತು. ಆ ಗುಂಪಿನ ಮಧ್ಯದಿಂದ ತಪ್ಪಿಸಿಕೊಂಡು ಹೋಗುವುದು, ಅದೂ ವೇಗವಾಗಿ! ನಾನು ಕಾರಿನ ಗೇರನ್ನು ಗಟ್ಟಿಯಾಗಿ ಒತ್ತಿದೆ, ಮತ್ತು ಗಾಡಿಯು ಜೋರಾಗಿ ಮುನ್ನುಗ್ಗಿತು. ಇದರಿಂದ ಆ ಗುಂಪು ಬೆಚ್ಚಿಬಿದ್ದಾಗ, ನಾವು ದಾರಿಮಾಡಿಕೊಂಡು ಅಲ್ಲಿಂದ ಹೊರಬಂದೆವು. ಆ ಗುಂಪು ಸಹೋದರ ಲೈಕ್ವೈಡ್ನನ್ನು ಹಿಡಿದಿದ್ದರೆ, ಆ ದಿನವೇ ಅವರ ಸಾವು ಸಂಭವಿಸಸಾಧ್ಯವಿತ್ತು. ನಾವು ಬ್ರಾಂಚ್ ಆಫೀಸಿಗೆ ಬಂದು ತಲಪಿದಾಗ, ನಾವಿಬ್ಬರೂ ತೀವ್ರ ಆಘಾತಕ್ಕೊಳಗಾಗಿದ್ದೆವು. ಆದರೆ ಯೆಹೋವನು ನಮ್ಮನ್ನು ಸಂರಕ್ಷಿಸಿದ್ದಕ್ಕಾಗಿ ನಾವು ಆತನಿಗೆ ಆಭಾರಿಗಳಾಗಿದ್ದೆವು.
ತಮ್ಮ ನಂಬಿಕೆಯ ಕಾರಣದಿಂದ ಅವರು ಸೆರೆಮನೆಗೆ ಹಾಕಲ್ಪಟ್ಟರು
ಇಸವಿ 1967ರಲ್ಲಿ, ಮಲಾವಿಯಲ್ಲಿನ ನಮ್ಮ ಕೆಲಸದ ಮೇಲೆ ಅಧಿಕೃತವಾಗಿ ನಿಷೇಧ ಹಾಕಲಾಯಿತು. ಆಗ ಆ ದೇಶದಲ್ಲಿ ಸುಮಾರು 18,000 ಸಾಕ್ಷಿಗಳಿದ್ದರು. ಎರಡು ವಾರಗಳ ತರುವಾಯ, ಅಲ್ಲಿನ ರಾಜಧಾನಿಯಾದ ಲಿಲಾಂಗ್ವೆಯಲ್ಲಿ 3,000 ಸಾಕ್ಷಿಗಳು ಬಂಧಿಸಲ್ಪಟ್ಟಿದ್ದರು ಎಂಬುದು ನಮಗೆ ಗೊತ್ತಾಯಿತು. ನಾವು ಕೇವಲ ನೈತಿಕ ಬೆಂಬಲವನ್ನು ಒದಗಿಸಲಿಕ್ಕಾಗಿ, ಅದೇ ರಾತ್ರಿ ಅಲ್ಲಿಗೆ ಹೋಗಲು ತೀರ್ಮಾನಿಸಿದೆವು. ಅದು ಸುಮಾರು 300 ಕಿಲೊಮೀಟರ್ಗಳಷ್ಟು ದೂರವಿತ್ತು. ನಾವು ಲ್ಯಾಂಡ್ ರೋವರ್ನಲ್ಲಿ ಕಾವಲಿನಬುರುಜು ಪ್ರಕಾಶನಗಳನ್ನು ತುಂಬಿದೆವು. ಯೆಹೋವನ ಸಹಾಯದಿಂದ, ಅನೇಕ ರಸ್ತೆತಡೆಗಟ್ಟುಗಳನ್ನು ದಾಟಿದೆವು. ಎಲ್ಲಿಯೂ ನಮ್ಮನ್ನು ತಪಾಸಣೆಮಾಡಲಿಲ್ಲ. ರಸ್ತೆಯುದ್ದಕ್ಕೂ, ಒಂದರ ಬಳಿಕ ಇನ್ನೊಂದು ಸಭೆಗೆ ಸಮಯಕ್ಕೆ ಸರಿಯಾಗಿ ಅಗತ್ಯವಿದ್ದ ಆತ್ಮಿಕ ಆಹಾರದ ಪೆಟ್ಟಿಗೆಗಳನ್ನು ನಾವು ಇಳಿಸಿದೆವು.
ಬೆಳಗ್ಗೆ ನಾವು ಸೆರೆಮನೆಯ ಕಡೆಗೆ ಹೊರಟೆವು. ಎಂತಹ ಒಂದು ದೃಶ್ಯ! ಇಡೀ ರಾತ್ರಿ ಮಳೆ ಬಂದಿತ್ತು. ಮತ್ತು ನಮ್ಮ ಕ್ರೈಸ್ತ ಸಹೋದರ ಸಹೋದರಿಯರನ್ನು, ಸೆರೆಯ ಹೊರಗೆ ಹಾಕಿದ್ದ ಬೇಲಿಯೊಳಗೆ ಇರಿಸಲಾಗಿತ್ತು. ಅವರು ಸಂಪೂರ್ಣವಾಗಿ ತೋಯ್ದುಹೋಗಿದ್ದರು, ಮತ್ತು ಕೆಲವರು ತಮ್ಮ ಹೊದಿಕೆಗಳನ್ನು ಬೇಲಿಯ ಮೇಲೆ ಒಣಗಿಸಲು ಪ್ರಯತ್ನಿಸುತ್ತಿದ್ದರು. ಬೇಲಿಯ ಹೊರಗಿನಿಂದ ನಾವು ಅವರಲ್ಲಿ ಕೆಲವರ ಬಳಿ ಮಾತಾಡಲು ಸಾಧ್ಯವಾಯಿತು.
ಅವರ ಕೋರ್ಟ್ ಮೊಕದ್ದಮೆಯು ಮಧ್ಯಾಹ್ನ ನಡೆಯಿತು. ಸಾಕ್ಷಿಗಳೆಂದು ಹೇಳಿಕೊಂಡ ಅನೇಕ ಜನರು ಕಟಕಟೆಯಲ್ಲಿ ಬಂದು ನಿಂತರು. ಅಂತಹವರೊಂದಿಗೆ ನಾವು ಸಂಪರ್ಕವನ್ನು ಮಾಡಲು ಪ್ರಯತ್ನಿಸಿದೆವಾದರೂ, ಅವರು ಮಾತ್ರ ಭಾವಶೂನ್ಯರಾಗಿದ್ದರು. ನಮಗೆ ಗಾಬರಿಯಾಯಿತು, ಏಕೆಂದರೆ ಕಟಕಟೆಯಲ್ಲಿದ್ದವರೆಲ್ಲರೂ ತಮ್ಮ ನಂಬಿಕೆಯನ್ನು ಬಹಿರಂಗವಾಗಿ ಖಂಡಿಸಿದರು! ಆದರೂ, ನಾವು ಯೆಹೋವನ ಸಾಕ್ಷಿಗಳಲ್ಲ ಎಂದು ಬಹಿರಂಗವಾಗಿ ತಿಳಿಸಿದ್ದವರಲ್ಲಿ, ಯಾರೊಬ್ಬರೂ ಸ್ಥಳಿಕ ಸಾಕ್ಷಿಗಳಿಗೆ ಪರಿಚಯವಿರಲಿಲ್ಲ ಎಂಬುದು ನನಗೆ ಗೊತ್ತಾಯಿತು. ಖಂಡಿತವಾಗಿಯೂ ಇದು ನಿಜ ಕ್ರೈಸ್ತರನ್ನು ನಿರುತ್ಸಾಹಗೊಳಿಸಲಿಕ್ಕಾಗಿ ಮಾಡಲ್ಪಟ್ಟ ಒಂದು ಪ್ರಯತ್ನವಾಗಿತ್ತು.
ಈ ಮಧ್ಯೆ, ನಮ್ಮನ್ನು ಗಡೀಪಾರುಮಾಡಿರುವ ಆಜ್ಞೆಯು ಬಂತು. ಬ್ಲಾಂಟೈರ್ನಲ್ಲಿರುವ ನಮ್ಮ ಬ್ರಾಂಚ್ ಆಫೀಸು ಸರಕಾರದಿಂದ ವಶಪಡಿಸಿಕೊಳ್ಳಲ್ಪಟ್ಟಿತ್ತು, ಮತ್ತು ಮಿಷನೆರಿಗಳು 24 ತಾಸುಗಳೊಳಗೆ ದೇಶವನ್ನು ಬಿಟ್ಟುಹೋಗಬೇಕಾಗಿತ್ತು. ನಾವು ಮನೆಗೆ ಹಿಂದಿರುಗಿದಾಗ, ಒಬ್ಬ ಪೊಲೀಸ್ ಅಧಿಕಾರಿಯು ನಮಗೋಸ್ಕರ ಗೇಟನ್ನು ತೆರೆಯುತ್ತಿರುವುದನ್ನು ನೋಡುವುದು ಎಷ್ಟೊಂದು ವಿಚಿತ್ರವಾಗಿತ್ತು. ಮರುದಿನ ಮಧ್ಯಾಹ್ನ ಒಬ್ಬ ಪೊಲೀಸ್ ಅಧಿಕಾರಿಯು ಬಂದು, ನಮ್ಮ ಬಗ್ಗೆ ಸ್ವಲ್ಪ ಮರುಕ ತೋರಿಸಿ, ನಮ್ಮನ್ನು ಬಂಧಿಸಿ, ವಿಮಾನ ನಿಲ್ದಾಣಕ್ಕೆ ಕರೆದುಕೊಂಡುಹೋದನು.
ಇಸವಿ 1967ರ ನವೆಂಬರ್ 8ರಂದು ನಾವು ಮಲಾವಿಯಿಂದ ಹೊರಟೆವು. ಅಲ್ಲಿದ್ದ ನಮ್ಮ ಕ್ರೈಸ್ತ ಸಹೋದರರು ತೀಕ್ಷ್ಣವಾದ ಪರೀಕ್ಷೆಯನ್ನು ಅನುಭವಿಸಲಿದ್ದರು ಎಂಬುದು ನಮಗೆ ಗೊತ್ತಿತ್ತು. ನಮ್ಮ ಹೃದಯಗಳು ಅವರಿಗಾಗಿ ರೋದಿಸಿದವು. ಅನೇಕರು ತಮ್ಮ ಜೀವಗಳನ್ನು ಕಳೆದುಕೊಂಡರು; ನೂರಾರು ಮಂದಿ ಕ್ರೂರ ಹಿಂಸೆಗಳಿಂದ ಕಷ್ಟಾನುಭವಿಸಿದರು; ಮತ್ತು ಸಾವಿರಾರು ಮಂದಿ ತಮ್ಮ ಉದ್ಯೋಗಗಳನ್ನು, ಮನೆಗಳನ್ನು, ಹಾಗೂ ಸ್ವತ್ತುಗಳನ್ನು ಕಳೆದುಕೊಂಡರು. ಆದರೂ, ಅವರಲ್ಲಿ ಅಧಿಕಾಂಶ ಮಂದಿ ತಮ್ಮ ಯಥಾರ್ಥತೆಯನ್ನು ಕಾಪಾಡಿಕೊಂಡರು.
ಹೊಸ ನೇಮಕಗಳನ್ನು ಪಡೆದುಕೊಂಡದ್ದು
ಇಷ್ಟೆಲ್ಲ ಕಷ್ಟಗಳಿದ್ದರೂ, ನಾವು ಎಂದೂ ಮಿಷನೆರಿ ಸೇವೆಯನ್ನು ಬಿಟ್ಟುಬಿಡಲು ಮನಸ್ಸುಮಾಡಲಿಲ್ಲ. ಬದಲಾಗಿ, ನಾವು ಒಂದು ಹೊಸ ನೇಮಕವನ್ನು ಸ್ವೀಕರಿಸಿದೆವು. ಆ ನೇಮಕವು, ಮನೋಹರವಾದ ದೃಶ್ಯಗಳು ಹಾಗೂ ವಿವಿಧ ರೀತಿಯ ಜನರಿದ್ದ ಕೆನ್ಯ ದೇಶವಾಗಿತ್ತು. ಮಸಾಯ್ ಜನರನ್ನು ನೋಡಿ ಲಿಂಡ ತುಂಬ ಆಶ್ಚರ್ಯಪಟ್ಟಳು. ಆ ಸಮಯದಲ್ಲಿ, ಮಸಾಯ್ ಜನರಲ್ಲಿ ಯಾರೂ ಯೆಹೋವನ ಸಾಕ್ಷಿಗಳಾಗಿರಲಿಲ್ಲ. ಆ ಬಳಿಕ ಒಬ್ಬ ಮಸಾಯ್ ಸ್ತ್ರೀಯಾಗಿದ್ದ ದೊರ್ಕಳನ್ನು ಲಿಂಡ ಭೇಟಿ ಮಾಡಿ, ಅವಳೊಂದಿಗೆ ಬೈಬಲನ್ನು ಅಭ್ಯಾಸಿಸತೊಡಗಿದಳು.
ದೇವರನ್ನು ಪ್ರಸನ್ನಗೊಳಿಸಬೇಕಾದರೆ, ತನ್ನ ವಿವಾಹವನ್ನು ಕಾನೂನುಬದ್ಧವಾಗಿ ಮಾಡಬೇಕು ಎಂಬುದು ದೊರ್ಕಾಸ್ಳಿಗೆ ಗೊತ್ತಿತ್ತು. ಅವಳ ಇಬ್ಬರು ಮಕ್ಕಳ ತಂದೆಯು ಅದನ್ನು ನಿರಾಕರಿಸಿದನು. ಆದುದರಿಂದ, ಸ್ವತಃ ದೊರ್ಕಾಸ್ ತನ್ನ ಮಕ್ಕಳ ಜವಾಬ್ದಾರಿಯನ್ನು ಹೊರಲು ಪ್ರಯತ್ನಿಸಿದಳು. ಆ ವ್ಯಕ್ತಿಯು ಸಾಕ್ಷಿಗಳ ಮೇಲೆ ಕೋಪೋದ್ರಿಕ್ತನಾದನು. ಆದರೂ ತನ್ನ ಕುಟುಂಬದಿಂದ ಪ್ರತ್ಯೇಕವಾಗಿರುವುದು ಅವನಿಗೆ ಅಸಂತೋಷವನ್ನು ಉಂಟುಮಾಡಿತ್ತು. ಕಟ್ಟಕಡೆಗೆ, ದೊರ್ಕಾಸ್ ಒತ್ತಾಯ ಮಾಡಿದ್ದರಿಂದ, ಅವನು ಸಹ ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಾಸಿಸತೊಡಗಿದನು. ತನ್ನ ಜೀವನ ಶೈಲಿಯನ್ನು ಸರಿಪಡಿಸಿಕೊಂಡು, ಅವನು ಒಬ್ಬ ಸಾಕ್ಷಿಯಾದನು ಮತ್ತು ತದನಂತರ ದೊರ್ಕಾಸ್ಳನ್ನು ವಿವಾಹವಾದನು. ಅವಳು ಪಯನೀಯರಳಾದಳು, ಮತ್ತು ಅವಳ ಗಂಡನೂ ಅವರ ದೊಡ್ಡ ಮಗನೂ ಈಗ ಸಭೆಯಲ್ಲಿ ಹಿರಿಯರಾಗಿದ್ದಾರೆ.
ಇದ್ದಕ್ಕಿದ್ದಂತೆ, 1973ರಲ್ಲಿ, ಕೆನ್ಯದಲ್ಲಿನ ಯೆಹೋವನ ಸಾಕ್ಷಿಗಳ ಕೆಲಸದ ಮೇಲೆ ನಿಷೇಧ ಹಾಕಲಾಯಿತು, ಮತ್ತು ನಾವು ಅಲ್ಲಿಂದ ಹೊರಡಬೇಕಾಯಿತು. ಕೆಲವೇ ತಿಂಗಳುಗಳ ಬಳಿಕ ಬ್ಯಾನನ್ನು ತೆಗೆದುಹಾಕಲಾಯಿತು. ಆದರೆ ಅಷ್ಟರಲ್ಲಾಗಲೇ ನಮಗೆ ಮೂರನೆಯ ನೇಮಕವು ಕೊಡಲ್ಪಟ್ಟಿತ್ತು—ಅದು ಕಾಂಗೊ (ಬ್ರೆಸಾವಿಲ್). 1974ರ ಏಪ್ರಿಲ್ ತಿಂಗಳಿನಲ್ಲಿ ನಾವು ಇಲ್ಲಿಗೆ ಆಗಮಿಸಿದೆವು. ಸುಮಾರು ಮೂರು ವರ್ಷಗಳ ಬಳಿಕ, ಮಿಷನೆರಿಗಳಾದ ನಮ್ಮ ಮೇಲೆ ಗೂಢಚಾರರೆಂದು ದೋಷಾರೋಪ ಹೊರಿಸಿ, ನಮ್ಮ ಕೆಲಸದ ಮೇಲೆ ನಿಷೇಧ ಹಾಕಲಾಯಿತು. ಅಷ್ಟುಮಾತ್ರವಲ್ಲ, ಆ ದೇಶದ ರಾಷ್ಟ್ರಪತಿಯು ಹತಿಸಲ್ಪಟ್ಟ ಬಳಿಕ ಬ್ರೆಸಾವಿಲ್ನಲ್ಲಿ ಕಾದಾಟವು ಆರಂಭವಾಯಿತು. ಇನ್ನಿತರ ಮಿಷನೆರಿಗಳನ್ನು ಬೇರೆ ಬೇರೆ ದೇಶಗಳಿಗೆ ಕಳುಹಿಸಲಾಯಿತು. ಆದರೆ ಸಾಧ್ಯವಿರುವಷ್ಟು ಸಮಯ ಅಲ್ಲಿಯೇ ಉಳಿಯುವಂತೆ ನಮಗೆ ಹೇಳಲಾಯಿತು. ಅನೇಕ ವಾರಗಳ ವರೆಗೆ ನಾವು, ನಾಳೆ ಏನಾಗುವುದೋ ಎಂಬ ಭಯದಿಂದ ಹಾಸಿಗೆಗೆ ತೆರಳುತ್ತಿದ್ದೆವು. ಆದರೆ ಯೆಹೋವನ ಪರಾಮರಿಕೆಯಿಂದ ನಾವು ಚೆನ್ನಾಗಿ ನಿದ್ರಿಸುತ್ತಿದ್ದೆವು. ನಾವಿಬ್ಬರೇ ಬ್ರಾಂಚ್ ಆಫೀಸಿನಲ್ಲಿ ಕಳೆದ ಆ ಕೆಲವು ತಿಂಗಳುಗಳನ್ನು ನಾವು ಮರೆಯಲಾರೆವು. ಏಕೆಂದರೆ ನಮ್ಮ ಇಡೀ ಮಿಷನೆರಿ ಸೇವೆಯಲ್ಲಿ ಅವು ಬಹಳಮಟ್ಟಿಗೆ ನಮ್ಮ ನಂಬಿಕೆಯನ್ನು ಪರೀಕ್ಷಿಸಿದ ಹಾಗೂ ನಂಬಿಕೆಯನ್ನು ಬಲಪಡಿಸಿದ ಸಮಯಗಳಾಗಿದ್ದವು.
ಇಸವಿ 1977ರ ಏಪ್ರಿಲ್ ತಿಂಗಳಿನಲ್ಲಿ ನಾವು ಬ್ರೆಸಾವಿಲ್ ಅನ್ನು ಬಿಟ್ಟುಹೋಗಬೇಕಾಯಿತು. ತದನಂತರ ನಮಗೆ ನಿಜವಾದ ಒಂದು ಆಶ್ಚರ್ಯವು ಕಾದಿತ್ತು, ಅದೇನೆಂದರೆ, ನಮ್ಮ ನೇಮಕವು ಇರಾನ್ಗೆ ಹೋಗುವುದೇ ಆಗಿತ್ತು. ಅಲ್ಲಿ ನಾವು ಒಂದು ಹೊಸ ಬ್ರಾಂಚ್ ಆಫೀಸನ್ನು ಸ್ಥಾಪಿಸಬೇಕಾಗಿತ್ತು. ನಮ್ಮ ಮೊಟ್ಟಮೊದಲ ಪಂಥಾಹ್ವಾನವು, ಪರ್ಷಿಯನರ ಫಾರ್ಸಿ ಭಾಷೆಯನ್ನು ಕಲಿಯಲು ಪ್ರಯತ್ನಿಸುವುದಾಗಿತ್ತು. ಒಂದು ಹೊಸ ಭಾಷೆಯನ್ನು ಕಲಿಯುವುದರಿಂದ, ಸಭಾ ಕೂಟಗಳಲ್ಲಿ ನಾವು ತುಂಬ ಸರಳವಾದ ಉತ್ತರಗಳನ್ನು, ಅಂದರೆ ಚಿಕ್ಕ ಮಕ್ಕಳು ಕೊಡುವಂತಹ ಉತ್ತರಗಳನ್ನೇ ಕೊಡುವ ಸ್ಥಿತಿಗೆ ಇಳಿದೆವು! 1978ರಲ್ಲಿ ಇರಾನ್ನಲ್ಲಿ ಒಂದು ಕ್ರಾಂತಿಯು ತಲೆದೋರಿತು. ಕಾದಾಟದ ಅತ್ಯಂತ ಕಠಿನ ಪರಿಸ್ಥಿತಿಯ ಮಧ್ಯೆಯೂ ನಾವು ಅಲ್ಲಿ ಉಳಿದೆವು, ಆದರೆ 1980ರ ಜುಲೈ ತಿಂಗಳಿನಲ್ಲಿ ಎಲ್ಲ ಮಿಷನೆರಿಗಳು ಅಲ್ಲಿಂದ ಗಡೀಪಾರುಮಾಡಲ್ಪಟ್ಟರು.
ನಮ್ಮ ಐದನೆಯ ನೇಮಕವು ನಮ್ಮನ್ನು ಪುನಃ ಮಧ್ಯ ಆಫ್ರಿಕದ ಸಾಎರ್ಗೆ ಕರೆದೊಯ್ಯಿತು. ಈಗ ಅದನ್ನು ಡೆಮೊಕ್ರ್ಯಾಟಿಕ್ ರಿಪಬ್ಲಿಕ್ ಆಫ್ ಕಾಂಗೊ ಎಂದು ಕರೆಯಲಾಗುತ್ತದೆ. ನಾವು ಸುಮಾರು 15 ವರ್ಷಗಳ ವರೆಗೆ ಸಾಎರ್ನಲ್ಲಿ ಸೇವೆಮಾಡಿದೆವು. ಸ್ವಲ್ಪ ಕಾಲದ ವರೆಗೆ ಅಲ್ಲಿ ನಿಷೇಧವಿತ್ತು. ನಾವು ಅಲ್ಲಿಗೆ ಹೋದಾಗ, ಆ ದೇಶದಲ್ಲಿ ಸುಮಾರು 22,000 ಸಾಕ್ಷಿಗಳಿದ್ದರು; ಈಗ ಅಲ್ಲಿ 1,00,000ಕ್ಕಿಂತಲೂ ಹೆಚ್ಚು ಸಾಕ್ಷಿಗಳಿದ್ದಾರೆ!
ಪುನಃ ಹಿಂದಿನ ನೇಮಕಕ್ಕೆ
ಇಸವಿ 1993ರ ಆಗಸ್ಟ್ 12ರಂದು, ಮಲಾವಿಯಲ್ಲಿನ ಯೆಹೋವನ ಸಾಕ್ಷಿಗಳ ಮೇಲಿನ ಬ್ಯಾನನ್ನು ತೆಗೆದುಹಾಕಲಾಯಿತು. ಎರಡು ವರ್ಷಗಳ ಬಳಿಕ ಲಿಂಡಳನ್ನೂ ನನ್ನನ್ನೂ ಪುನಃ ನಮ್ಮ ಮೊದಲ ನೇಮಕಕ್ಕೆ, ಅಂದರೆ ಮಲಾವಿಗೆ ಕಳುಹಿಸಲಾಯಿತು. ಆಫ್ರಿಕದ ಆದರಣೀಯ ಹೃದಯವೆಂದು ಪ್ರಸಿದ್ಧವಾಗಿರುವ ಮಲಾವಿಯು, ಸುಂದರವಾದ, ಸ್ನೇಹಪರ ದೇಶವಾಗಿದೆ. 1996ರ ಜನವರಿ ತಿಂಗಳಿನಿಂದ, ಮಲಾವಿಯ ಸಂತೋಷಭರಿತ, ಶಾಂತಚಿತ್ತ ಜನರ ನಡುವೆ ಕೆಲಸಮಾಡುವ ಆನಂದ ನಮಗೆ ದೊರೆತಿದೆ. ಮಲಾವಿಯ ನಂಬಿಗಸ್ತ ಸಹೋದರರೊಂದಿಗೆ ಪುನಃ ಸೇವೆಮಾಡುವುದನ್ನು ನಾವು ಅಮೂಲ್ಯವಾಗಿ ಪರಿಗಣಿಸುತ್ತೇವೆ. ಅವರಲ್ಲಿ ಅನೇಕರು ಮೂರು ದಶಕಗಳ ವರೆಗೆ ಹಿಂಸೆಯನ್ನು ತಾಳಿಕೊಂಡವರಾಗಿದ್ದಾರೆ. ನಮ್ಮ ಆಫ್ರಿಕನ್ ಸಹೋದರರು ನಮಗೆ ಪ್ರೇರಣೆಯ ಮೂಲವಾಗಿದ್ದಾರೆ ಮತ್ತು ನಾವು ಅವರನ್ನು ತುಂಬ ಪ್ರೀತಿಸುತ್ತೇವೆ. ಖಂಡಿತವಾಗಿಯೂ, ಅವರು ಪೌಲನ ಕೆಳಗಿನ ಮಾತುಗಳಿಗನುಸಾರ ಜೀವಿಸಿದ್ದಾರೆ: “ನಾವು ಬಹು ಸಂಕಟಗಳನ್ನು ತಾಳಿ ದೇವರ ರಾಜ್ಯದೊಳಗೆ ಸೇರಬೇಕು.” (ಅ. ಕೃತ್ಯಗಳು 14:22) ಈಗ ಮಲಾವಿಯಲ್ಲಿ ಸುಮಾರು 41,000 ಸಾಕ್ಷಿಗಳು, ಬಹಿರಂಗವಾಗಿ ಸಾರಲು ಹಾಗೂ ದೊಡ್ಡ ದೊಡ್ಡ ಅಧಿವೇಶನಗಳನ್ನು ನಡೆಸಲು ಸ್ವತಂತ್ರರಾಗಿದ್ದಾರೆ.
ನಮ್ಮ ಎಲ್ಲ ನೇಮಕಗಳಲ್ಲಿ ನಾವು ಅತ್ಯಧಿಕ ಆನಂದವನ್ನು ಪಡೆದುಕೊಂಡಿದ್ದೇವೆ. ಯಾವುದೇ ಅನುಭವವು ಎಷ್ಟೇ ಕಷ್ಟಕರವಾಗಿರಲಿ, ಅದು ನಮ್ಮನ್ನು ಹೆಚ್ಚು ಒಳ್ಳೆಯ ವ್ಯಕ್ತಿಗಳನ್ನಾಗಿ ಮಾಡಬಲ್ಲದು, ಮತ್ತು “ಯೆಹೋವನ ಆನಂದ”ವನ್ನು ಕಾಪಾಡುವಂತೆ ಮಾಡಬಲ್ಲದು ಎಂಬುದನ್ನು ಲಿಂಡ ಹಾಗೂ ನಾನು ಕಲಿತುಕೊಂಡಿದ್ದೇವೆ. (ನೆಹೆಮೀಯ 8:10) ನಾವು ನಮ್ಮ ನೇಮಕಗಳನ್ನು ಬಿಟ್ಟುಹೋಗಬೇಕಾಗಿದ್ದಾಗ, ಅದಕ್ಕೆ ಹೊಂದಿಕೊಳ್ಳುವುದು ನನಗೆ ಸ್ವಲ್ಪ ಕಷ್ಟಕರವಾಗಿತ್ತು. ಆದರೆ ಲಿಂಡಳ ಹೊಂದಿಕೊಳ್ಳುವ ಸ್ವಭಾವ, ಮತ್ತು ವಿಶೇಷವಾಗಿ ಯೆಹೋವನಲ್ಲಿ ಅವಳಿಗಿರುವ ಬಲವಾದ ನಂಬಿಕೆಯು ನನಗೆ ಸಹಾಯ ಮಾಡಿದೆ; ಇದಲ್ಲದೆ “ಒಬ್ಬ ಒಳ್ಳೆಯ ಪತ್ನಿ”ಯನ್ನು (NW) ಪಡೆದಿರುವ ಆಶೀರ್ವಾದವನ್ನು ಗಣ್ಯಮಾಡುವಂತೆ ಮಾಡಿದೆ.—ಜ್ಞಾನೋಕ್ತಿ 18:22.
ಎಂತಹ ಸಂತೋಷಭರಿತ ಹಾಗೂ ರೋಮಾಂಚಕ ಜೀವಿತವನ್ನು ನಾವಿಬ್ಬರೂ ಜೀವಿಸಿದ್ದೇವೆ! ಯೆಹೋವನು ಯಾವಾಗಲೂ ರಕ್ಷಣೆಯನ್ನು ನೀಡಿದ್ದಕ್ಕಾಗಿ ನಾವು ಆತನಿಗೆ ಅನೇಕಾವರ್ತಿ ಕೃತಜ್ಞತೆ ಸಲ್ಲಿಸಿದ್ದೇವೆ. (ರೋಮಾಪುರ 8:31) ಪೂರ್ಣ ಸಮಯದ ಶುಶ್ರೂಷೆಯ ಆಶೀರ್ವಾದಗಳ ಕುರಿತಾದ ಆ ಭಾಷಣವನ್ನು ಕೊಟ್ಟು ಸುಮಾರು ನಾಲ್ಕು ದಶಕಗಳಿಗಿಂತಲೂ ಹೆಚ್ಚು ಸಮಯವು ಕಳೆದಿದೆ. ‘ಯೆಹೋವನನ್ನು ಪರೀಕ್ಷಿಸಿ, ಆತನ ಒಳ್ಳೆಯತನವನ್ನು ಕಂಡುಕೊಂಡಿ’ರುವುದಕ್ಕಾಗಿ (NW) ನಾವು ಸಂತೋಷಪಡುತ್ತೇವೆ. (ಕೀರ್ತನೆ 34:8; ಮಲಾಕಿಯ 3:10) ‘ನಾವು ಇನ್ನು ಮೇಲೆ ನಮಗಾಗಿ ಜೀವಿಸದಿರುವುದು,’ ಸಾಧ್ಯವಿರುವ ಅತ್ಯುತ್ತಮ ಜೀವಿತವಾಗಿದೆ ಎಂಬುದನ್ನು ನಾವು ಚೆನ್ನಾಗಿ ಮನಗಂಡಿದ್ದೇವೆ.
[ಪುಟ 24ರಲ್ಲಿರುವಚಿತ್ರ]
ನಾವು ಸೇವೆಮಾಡಿರುವ ದೇಶಗಳು
ಇರಾನ್
ರಿಪಬ್ಲಿಕ್ ಆಫ್ ಕಾಂಗೊ
ಡೆಮೊಕ್ರ್ಯಾಟಿಕ್ ರಿಪಬ್ಲಿಕ್ ಆಫ್ ಕಾಂಗೊ
ಕೆನ್ಯ
ಮಲಾವಿ
[ಪುಟ 20 ರಲ್ಲಿರುವ ಚಿತ್ರ]
ದಕ್ಷಿಣ ಆಫ್ರಿಕದ ಕೇಪ್ ಟೌನ್ ಮಾರ್ಗವಾಗಿ ನಾವು ಮಲಾವಿಗೆ ಹೋಗುತ್ತಿರುವಾಗ
[ಪುಟ 22 ರಲ್ಲಿರುವ ಚಿತ್ರ]
ಮಲಾವಿಯಲ್ಲಿ ನಮ್ಮನ್ನು ಬಂಧಿಸಿ, ಗಡೀಪಾರುಮಾಡುತ್ತಿರುವಾಗ
[ಪುಟ 24 ರಲ್ಲಿರುವ ಚಿತ್ರ]
ಒಬ್ಬ ಮಸಾಯ್ ಸ್ತ್ರೀಯಾಗಿದ್ದ ದೊರ್ಕಾಸ್, ಹಾಗೂ ಅವಳ ಗಂಡ