ಯುವ ಜನರು ಪ್ರಶ್ನಿಸುತ್ತಾರೆ . . .
ನನ್ನ ಹೆತ್ತವರಿಲ್ಲದೆ ನಾನು ಹೇಗೆ ಜೀವಿಸಬಲ್ಲೆ?
“ನಾನು ಮೂರು ವರ್ಷ ವಯಸ್ಸಿನವನಾಗಿದ್ದಾಗ ಮತ್ತು ನನ್ನ ಅಕ್ಕ ನಾಲ್ಕು ವರ್ಷದವಳಾಗಿದ್ದಾಗ ನನ್ನ ಹೆತ್ತವರು ವಿವಾಹ ವಿಚ್ಛೇದನ ಮಾಡಿಕೊಂಡರು. ನಮ್ಮ ಪಾಲನೆಗಾಗಿ ಅವರು ಕೋರ್ಟಿನಲ್ಲಿ ಹೋರಾಡಿದರು ಮತ್ತು ಕೊನೆಗೆ ನಾವು ನಮ್ಮ ತಾಯಿಯೊಂದಿಗಿರುವಂತೆ ಕೋರ್ಟು ತೀರ್ಪು ನೀಡಿತು. ಆದರೆ ನಾನು ಏಳು ವರ್ಷದವನಾಗಿದ್ದಾಗ, ಅಕ್ಕ ಮತ್ತು ನಾನು ತಂದೆಯೊಂದಿಗಿರಲು ನಿರ್ಧರಿಸಿದೆವು.”—ಓರಾಸ್ಯೋ.
ಕೆಲವು ವರ್ಷಗಳಾದ ಮೇಲೆ, ಓರಾಸ್ಯೋನ ತಂದೆ ಮತ್ತು ಅವರೊಂದಿಗೆ ವಿವಾಹವಾಗದೇ ಕೂಡುಬಾಳ್ವೆ ನಡೆಸುತ್ತಿದ್ದ ಗೆಳತಿಯು, ಓರಾಸ್ಯೋ ಮತ್ತು ಅವನ ಅಕ್ಕನನ್ನು ಬಿಟ್ಟು ಹೊರಟುಹೋದರು. “ಹೀಗೆ ನನ್ನ 19 ವರ್ಷ ಪ್ರಾಯದ ಅಕ್ಕ ಮತ್ತು ನಮ್ಮೊಂದಿಗೆ ವಾಸಿಸಲು ನಿರ್ಧರಿಸಿದ ನನ್ನ 12 ವರ್ಷ ಪ್ರಾಯದ ಮಲತಂಗಿಯಿದ್ದ ಕುಟುಂಬಕ್ಕೆ ನಾನು 18 ವರ್ಷ ವಯಸ್ಸಿನಲ್ಲಿಯೇ ಮುಖ್ಯಸ್ಥನಾದೆ” ಎಂದು ಓರಾಸ್ಯೋ ಜ್ಞಾಪಿಸಿಕೊಳ್ಳುತ್ತಾನೆ.
ಹಿಂದಿನ ಲೇಖನವು ತೋರಿಸಿದಂತೆ, ಲೋಕದಲ್ಲಿ ಕೋಟ್ಯಂತರ ಯುವ ಜನರು ಹೆತ್ತವರಿಲ್ಲದೆ ಜೀವಿಸುತ್ತಾರೆ.a ಓರಾಸ್ಯೋವಿಗಾದಂತೆ, ಕೆಲವು ಯುವಕರನ್ನು ಅವರ ಹೆತ್ತವರು ಬಿಟ್ಟು ಹೋಗುತ್ತಾರೆ. ಇನ್ನಿತರರಾದರೋ ತಮ್ಮ ಹೆತ್ತವರನ್ನು ಮರಣದಲ್ಲಿ ಕಳೆದುಕೊಂಡಿದ್ದಾರೆ ಇಲ್ಲವೇ ಯುದ್ಧಗಳು ಅಥವಾ ನೈಸರ್ಗಿಕ ವಿಪತ್ತುಗಳು ಅವರನ್ನು ಅಗಲಿಸಿವೆ. ಪರಿಸ್ಥಿತಿಯು ಏನೇ ಆಗಿರಲಿ, ಹೆತ್ತವರಿಲ್ಲದ ಬಾಳು ನಿಜವಾಗಿಯೂ ಕಷ್ಟಕರವಾಗಿರಸಾಧ್ಯವಿದೆ. ಮತ್ತು ಇದು ಹೃದಯವೇದನೆಯನ್ನು ತರಸಾಧ್ಯವಿದೆ. ಮತ್ತು ಇದು ನಿಮ್ಮ ಮೇಲೆ ತುಂಬ ಜವಾಬ್ದಾರಿಗಳನ್ನು ಹೊರಿಸುತ್ತದೆ.
‘ನನ್ನನ್ನು ಯಾರು ನೋಡಿಕೊಳ್ಳುವರು?’
ನೀವು ವಿಷಯಗಳನ್ನು ಎಷ್ಟರ ಮಟ್ಟಿಗೆ ಸಂಭಾಳಿಸುತ್ತೀರಿ ಎಂಬುದು ನಿಮ್ಮ ವಯಸ್ಸು ಮತ್ತು ಪರಿಸ್ಥಿತಿಗಳ ಮೇಲೆ ಅವಲಂಬಿಸಿರುತ್ತದೆ. ಆದರೆ ನೀವು ಬಾಲ್ಯಾವಸ್ಥೆಯಲ್ಲಿರುವಾಗ ಅಥವಾ ಹದಿವಯಸ್ಸಿಗೆ ಕಾಲಿಡುವಾಗ ಪರಿಸ್ಥಿತಿಯು ತುಂಬ ಕಷ್ಟಕರವಾಗಿರುತ್ತದೆ ನಿಜ. ಹಾಗಿದ್ದರೂ, ನಿಮ್ಮನ್ನು ಅನಾಥರಂತೆ ಬಿಟ್ಟುಬಿಡದಿರಬಹುದು. ಒಂದು ಪಕ್ಷ ನಿಮ್ಮ ಮಾವನೋ, ಅತ್ತೆಯೋ ಇಲ್ಲವೇ ಅಕ್ಕಅಣ್ಣಂದಿರು ನಿಮ್ಮನ್ನು ತಮ್ಮ ಮನೆಗೆ ಸೇರಿಸಿಕೊಳ್ಳಬಹುದು.
ಯೆಹೋವನ ಸಾಕ್ಷಿಗಳ ಮಧ್ಯದಲ್ಲಿಯಾದರೋ, ಅನಾಥರನ್ನು ಮತ್ತು ವಿಧವೆಯರನ್ನು ನೋಡಿಕೊಳ್ಳುವುದು ಆರಾಧನೆಯ ಒಂದು ಭಾಗವಾಗಿರುತ್ತದೆ. (ಯಾಕೋಬ 1:27; 2:15-17) ಮತ್ತು ಅನೇಕ ಬಾರಿ, ಸಭೆಯಲ್ಲಿರುವ ಇತರ ವ್ಯಕ್ತಿಗಳು ಕೂಡ ಸಹಾಯಮಾಡುವರು. ಉದಾಹರಣೆಗೆ, ಓರಾಸ್ಯೋ ಮತ್ತು ಅವನ ಅಕ್ಕ ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಾಸಿಸಿದ್ದರು ಮತ್ತು ಅವರು ಕೂಟಗಳಿಗೆ ಹಾಜರಾಗುತ್ತಿದ್ದರು. ಅಲ್ಲಿ ಅವರು ಒಂದು ಕ್ರೈಸ್ತ ಕುಟುಂಬವನ್ನು ಭೇಟಿಯಾದರು, ಹೀಗೆ ಆ ಕುಟುಂಬವು ಇವರಿಗೆ ಸಹಾಯಮಾಡಲು ಪ್ರಾರಂಭಿಸಿತು. “ಯೆಹೋವನ ಮಾರ್ಗದರ್ಶನಕ್ಕೆ ಮತ್ತು ಆತನು ಪ್ರತಿನಿತ್ಯವೂ ತೋರಿಸುತ್ತಿರುವ ಪ್ರೀತಿಪೂರ್ಣ ಆರೈಕೆಗೆ ನಾನೆಷ್ಟು ಆಭಾರಿಯಾಗಿದ್ದೇನೆ! ಸಭೆಯಲ್ಲಿ ನಮ್ಮ ಸಮಪ್ರಾಯದ ಮಕ್ಕಳಿದ್ದ ಒಂದು ಕುಟುಂಬವಿತ್ತು. ಅದು ತುಂಬ ಆತ್ಮಿಕವಾಗಿದ್ದ ಕುಟುಂಬವಾಗಿದ್ದು, ಅವರ ಸಹಾಯವನ್ನು ಪಡೆದುಕೊಳ್ಳುವುದು ನಮಗೆ ನಿಜವಾಗಿಯೂ ಆಶೀರ್ವಾದವಾಗಿತ್ತು. ಅವರು ನಿಜವಾಗಿಯೂ ನಮ್ಮನ್ನು ದತ್ತುತೆಗೆದುಕೊಂಡರು ಮತ್ತು ನಾವು ಬೇರೆ, ಅವರು ಬೇರೆ ಎಂದು ನಮಗೆ ಅನಿಸಲೇ ಇಲ್ಲ, ಬದಲಾಗಿ ನಾವು ಯಾವಾಗಲೂ ಅವರ ಮೇಲೆ ಆತುಕೊಳ್ಳಬಹುದು ಎಂದೆನೆಸಿತು” ಎಂದು ಓರಾಸ್ಯೋ ಹೇಳುತ್ತಾನೆ.
ಎಲ್ಲ ಯುವಕರಿಗೂ ಇಂತಹ ಒಂದು ಒಳ್ಳೆಯ ಅವಕಾಶ ಸಿಗುವುದಿಲ್ಲವೆಂಬುದು ಖಂಡಿತ. ವಿಶ್ವಸಂಸ್ಥೆಯ ಮಕ್ಕಳ ನಿಧಿಯ ವರದಿಯು ಹೇಳುವುದು: “ಹೆತ್ತವರಿಲ್ಲದ ಮಕ್ಕಳನ್ನು ಕೆಲವು ಕುಟುಂಬಗಳು ಸೇರಿಸಿಕೊಳ್ಳುತ್ತವೆ, ಕೆಲವೊಮ್ಮೆ ಅವರು ಮಕ್ಕಳನ್ನು ಶಾರೀರಿಕವಾಗಿ ದುರುಪಯೋಗಿಸುತ್ತಾರೆ, ಸಂಭಾವನೆಯಿಲ್ಲದೆ ಅಥವಾ ಪ್ರಗತಿಗೆ ಅವಕಾಶವನ್ನೇ ನೀಡದೆ ಅವರನ್ನು ದುಡಿಸುತ್ತಾರೆ, ವೇಶ್ಯಾವಾಟಿಕೆಗೆ ನೂಕುತ್ತಾರೆ, ಅಷ್ಟುಮಾತ್ರವಲ್ಲದೆ ಕೆಲವೊಮ್ಮೆ ಅವರನ್ನು ಗುಲಾಮರಂತೆಯೂ ನಡೆಸಿಕೊಳ್ಳುತ್ತಾರೆ.” ವಿಷಯವು ಹೀಗಿರುವುದರಿಂದ, ನಿಮ್ಮನ್ನು ಯಾರಾದರೂ ಚೆನ್ನಾಗಿ ನೋಡಿಕೊಳ್ಳುತ್ತಿರುವುದಾದರೆ ನೀವು ಅದಕ್ಕಾಗಿ ನಿಜವಾಗಿಯೂ ಕೃತಜ್ಞರಾಗಿರಬೇಕು.
ಹೆತ್ತವರಿಲ್ಲದೇ ಜೀವಿಸುವುದು ಹೃದಯವನ್ನು ಇರಿಯುವಂತಹದ್ದಾಗಿರುವುದು ನಿಜ. ನಿಮ್ಮ ಆರೈಕೆಯನ್ನು ಮಾಡಲು ಅವರಿಲ್ಲದೇ ಇರುವುದರಿಂದ ನಿಮಗೆ ಅಸಮಾಧಾನವಾಗುವುದು ಸಹಜವೇ. ಒಬ್ಬ ಸಂಬಂಧಿಕ ಇಲ್ಲವೇ ಅಕ್ಕ ಹಾಗೂ ಅಣ್ಣಂದಿರು ನಿಮ್ಮನ್ನು ಏನಾದರೂ ಮಾಡಲು ಹೇಳುವುದಾದರೆ, ಅದು ನಿಮ್ಮ ಕೋಪವನ್ನು ಇನ್ನೂ ಹೆಚ್ಚಿಸಬಲ್ಲದು. ನಿಮ್ಮನ್ನು ನೋಡಿಕೊಳ್ಳಲು ಪ್ರಯತ್ನಿಸುತ್ತಿರುವವರ ಮೇಲೆ ಕೋಪ ತೋರಿಸಬೇಡಿರಿ. ಬೈಬಲು ಹೇಳುವುದು: “ಸಿಟ್ಟು ಮತ್ಸರದ [ಕ್ರಿಯೆಗಳನ್ನು] ನಡೆಸಲು ಮರುಳುಗೊಳಿಸದಂತೆ ನೋಡಿಕೊಳ್ಳಿರಿ . . . ನೀವು ಹಾನಿಕಾರಕ ವಿಷಯವನ್ನು ಮಾಡದಂತೆ ಜಾಗ್ರತೆವಹಿಸಿರಿ.” (ಯೋಬ 36:18, 21, NW) ಬೈಬಲಿನಲ್ಲಿ ಉಲ್ಲೇಖಿಸಲ್ಪಟ್ಟಿರುವ ತರುಣಿಯಾದ ಎಸ್ತೇರಳನ್ನು ಜ್ಞಾಪಿಸಿಕೊಳ್ಳಿರಿ. ಅವಳು ಒಬ್ಬ ಅನಾಥೆಯಾಗಿದ್ದುದರಿಂದ, ವಯಸ್ಸಿನಲ್ಲಿ ಹಿರಿಯವನಾದ ಸೋದರಸಂಬಂಧಿ ಮೊರ್ದೆಕೈ ಅವಳನ್ನು ಸಾಕಿದನು. ಅವನು ಅವಳ ಸ್ವಂತ ತಂದೆಯಾಗಿರಲಿಲ್ಲವಾದರೂ, ಮೊರ್ದೆಕೈ ‘ಅವಳಿಗೆ ಆಜ್ಞೆಗಳನ್ನು ಮಾಡಿದನು’ ಮತ್ತು ಅವಳು ಅದಕ್ಕೆ ವಿಧೇಯಳಾದಳು. ಮತ್ತು ಅವಳು ಆ ವಿಧೇಯತೆಯನ್ನು ಒಬ್ಬ ವಯಸ್ಕಳಾದಾಗಲೂ ತೋರಿಸಿದಳು! (ಎಸ್ತೇರ 2:7, 15, 20) ನೀವು ವಿಧೇಯರೂ ಸಹಕಾರ ಮನೋಭಾವವನ್ನು ತೋರಿಸುವವರೂ ಆಗಿರಲು ಪ್ರಯತ್ನಿಸಿರಿ. ಇದು ಉದ್ರಿಕ್ತ ಪರಿಸ್ಥಿತಿಗಳನ್ನು ಶಮನಗೊಳಿಸುವುದಲ್ಲದೆ, ಸಂಬಂಧಪಟ್ಟ ಪ್ರತಿಯೊಬ್ಬರ ಜೀವಿತವನ್ನು ಸುಗಮಗೊಳಿಸುವುದು.
ಕುಟುಂಬದ ಜವಾಬ್ದಾರಿ
ವಯಸ್ಸಿನಲ್ಲಿ ಹಿರಿಯ ಒಡಹುಟ್ಟಿದವರೊಬ್ಬರು ನಿಮಗಿರುವುದಾದರೆ—ಇಲ್ಲವೇ ನೀವೇ ಸಾಕಷ್ಟು ದೊಡ್ಡವರಾಗಿದ್ದಲ್ಲಿ—ನೀವು ಮತ್ತು ನಿಮ್ಮ ಒಡಹುಟ್ಟಿದವರಿಗೆ ಯಾರ ಸಹಾಯವೂ ಇಲ್ಲದೆ ಜೀವಿಸುವ ಸಾಧ್ಯತೆಯಿರಬಹುದು. ಕುಟುಂಬದ ಮುಖ್ಯಸ್ಥನ ಸ್ಥಾನವನ್ನೂ ತೆಗೆದುಕೊಳ್ಳುವ ಅಗತ್ಯವಿರಬಹುದು. ಇದು ನಿಜವಾಗಿಯೂ ತುಂಬ ದೊಡ್ಡ ಜವಾಬ್ದಾರಿಯೇ ಸರಿ! ಆದರೂ, ಅಂಥ ಸಂದರ್ಭಗಳಲ್ಲಿ ಅನೇಕ ಯುವ ಜನರು ತಮ್ಮ ಒಡಹುಟ್ಟಿದವರ ಪಾಲನೆ ಮಾಡುವುದರಲ್ಲಿ ಮೆಚ್ಚುವಂತಹ ರೀತಿಯಲ್ಲಿ ಕೆಲಸವನ್ನು ಮಾಡಿದ್ದಾರೆ.
ನಿಮಗೆ ತುಸು ಅಸಮಾಧಾನವಾಗುವ ಸಾಧ್ಯತೆಯಿರಬಹುದು ನಿಜ. ನಿಮ್ಮ ಸಹೋದರ ಸಹೋದರಿಯರನ್ನು ನೀವು ಪ್ರೀತಿಸುತ್ತೀರಿ ಮತ್ತು ನೋಡಿಕೊಳ್ಳುತ್ತೀರಿ ಎಂಬುದರ ಮೇಲೆ ಚಿಂತನೆಮಾಡುವುದು, ಹೆಚ್ಚು ಸಕಾರಾತ್ಮಕ ದೃಷ್ಟಿಕೋನವನ್ನು ಹೊಂದಿರಲು ನಿಮಗೆ ಸಹಾಯಮಾಡಬಹುದು. ಮತ್ತು ಅವರನ್ನು ನೋಡಿಕೊಳ್ಳುವುದು ದೇವರಿಂದ ನೇಮಿಸಲ್ಪಟ್ಟ ಕೆಲಸವೆಂದು ವೀಕ್ಷಿಸುವಾಗ ಇದು ಇನ್ನೂ ಹೆಚ್ಚು ಸಹಾಯಕಾರಿಯಾಗಿರಬಹುದು. ಅಷ್ಟುಮಾತ್ರವಲ್ಲದೆ, ಕ್ರೈಸ್ತರಿಗೆ ತಮ್ಮ ಕುಟುಂಬದವರನ್ನು ಪರಾಮರಿಸುವಂತೆ ಆಜ್ಞೆ ಕೊಡಲಾಗಿದೆ. (1 ತಿಮೊಥೆಯ 5:8) ಒಬ್ಬ ತಂದೆ ಅಥವಾ ತಾಯಿಯೋಪಾದಿ ನೀವು ಎಷ್ಟೇ ಕಷ್ಟಪಟ್ಟರೂ, ನೀವು ಎಂದಿಗೂ ನಿಜವಾದ ಹೆತ್ತವರಾಗಸಾಧ್ಯವಿಲ್ಲ.
ನಿಮ್ಮ ಒಡಹುಟ್ಟಿದವರು ಹೆತ್ತವರಿಗೆ ಪ್ರತಿಕ್ರಿಯಿಸಿದಂತಹ ರೀತಿಯಲ್ಲೇ ನಿಮಗೂ ಪ್ರತಿಕ್ರಿಯಿಸಬೇಕು ಎಂಬುದನ್ನು ನಿರೀಕ್ಷಿಸುವುದು ವಾಸ್ತವಿಕವಾಗಿರುವುದಿಲ್ಲ. ಅವರಿಗೆ ನಿಮ್ಮೊಂದಿಗೆ ಹೊಂದಿಕೊಂಡು ಹೋಗಲು ಮತ್ತು ನಿಮ್ಮನ್ನು ಒಬ್ಬ ಮುಖ್ಯಸ್ಥನೋಪಾದಿ ಸ್ವೀಕರಿಸಲಿಕ್ಕೆ ಸಮಯವು ಹಿಡಿಯಬಹುದು. ಆದುದರಿಂದ ಈ ಮಧ್ಯೆ ಆಶಾಭಂಗಗೊಳ್ಳದಿರಿ. “ದ್ವೇಷ ಕೋಪ ಕ್ರೋಧ ಕಲಹ ದೂಷಣೆ”ಯಿಂದ ದೂರವಿರಿ. ನಿಮ್ಮ ಮಾದರಿಯಿಂದ, “ಒಬ್ಬರಿಗೊಬ್ಬರು ಉಪಕಾರಿಗಳಾಗಿಯೂ ಕರುಣೆಯುಳ್ಳವರಾಗಿಯೂ ಕ್ಷಮಿಸುವವರಾಗಿಯೂ” ಇರುವಂತೆ ನಿಮ್ಮ ಒಡಹುಟ್ಟಿದವರಿಗೆ ಕಲಿಸಿರಿ.—ಎಫೆಸ 4:31, 32.
“ಕೆಲವೊಮ್ಮೆ ನಾನು ನನ್ನ ಒಡಹುಟ್ಟಿದವರೊಂದಿಗೆ ತುಂಬ ಕಟ್ಟುನಿಟ್ಟಿನವನಾಗಿರುತ್ತಿದ್ದೆ. ಆದರೆ ಅದು ಸ್ವಲ್ಪ ಮಟ್ಟಿಗೆ, ರಕ್ಷಣೆಯಾಗಿತ್ತು, ಏಕೆಂದರೆ ನಾವು ಯೆಹೋವನ ದೃಷ್ಟಿಯಲ್ಲಿ ಸರಿಯಾದ ನಡವಳಿಕೆಯನ್ನು ಕಾಪಾಡಿಕೊಂಡೆವು” ಎಂದು ಹೇಳುವ ಮೂಲಕ ತಾನು ಮಾಡಿದ ತಪ್ಪುಗಳನ್ನು ಓರಾಸ್ಯೋ ಒಪ್ಪಿಕೊಳ್ಳುತ್ತಾನೆ.
ಸ್ವಂತ ಕಾಲಿನ ಮೇಲೆ ನಿಂತುಕೊಳ್ಳುವುದು
ನಿಮ್ಮನ್ನು ನೋಡಿಕೊಳ್ಳಲು ನಿಮ್ಮ ಹೆತ್ತವರು ಇಲ್ಲದಿರುವಲ್ಲಿ, ನಿಮಗೆ ಜೀವನೋಪಾಯವನ್ನು ನಡೆಸುವುದು ಒಂದು ದೊಡ್ಡ ಚಿಂತೆಯಾಗಿರುವುದರಲ್ಲಿ ಸಂದೇಹವೇ ಇಲ್ಲ. ನಿಮಗೆ ಮತ್ತು ಒಡಹುಟ್ಟಿದವರಿದ್ದಲ್ಲಿ ಅವರಿಗಾಗಿ ಅಡಿಗೆ ಮಾಡುವುದು, ಸ್ವಚ್ಛಗೊಳಿಸುವುದು ಮತ್ತು ಈಗ ನೀವು ಮಾಡಲೇಬೇಕಾಗಿರುವ ಇತರ ಸಣ್ಣಪುಟ್ಟ ಕೆಲಸಗಳನ್ನು ಹೇಗೆ ಮಾಡಬೇಕೆಂಬುದರಲ್ಲಿ ಕ್ರೈಸ್ತ ಸಭೆಯ ಕೆಲವು ವಯಸ್ಕ ಸದಸ್ಯರು ಸಹಾಯಮಾಡಸಾಧ್ಯವಿದೆ. ಆದರೆ ಹಣಕ್ಕಾಗಿ ಏನು ಮಾಡುವಿರಿ? ಅದಕ್ಕಾಗಿ ನೀವು ಕೆಲಸಮಾಡಲೇಬೇಕಾಗಬಹುದು.
ಕಡಿಮೆ ಶಿಕ್ಷಣ, ಅನುಭವ ಅಥವಾ ಉದ್ಯೋಗದ ಕೌಶಲಗಳಿರುವ ಯುವಕರಿಗೆ ಕೆಲಸ ಸಿಗುವುದು ಕಷ್ಟ. ಆದುದರಿಂದ ಏನೇ ಆಗಲಿ ನಿಮ್ಮ ಮೂಲಭೂತ ಶಿಕ್ಷಣವನ್ನು ಮುಗಿಸಲು—ಇಲ್ಲವೇ ಯಾವುದಾದರೂ ಹೆಚ್ಚಿನ ಉದ್ಯೋಗ ತರಬೇತಿಯನ್ನು ಪಡೆದುಕೊಳ್ಳಲು ಸಹ—ಆದಷ್ಟು ಪ್ರಯತ್ನಿಸಿರಿ. “ನನ್ನ ಅಕ್ಕ ಮತ್ತು ನಾನು ಕೆಲಸಮಾಡಿದೆವು. ಇದು ನನ್ನ ಮತ್ತು ನನ್ನ ಮಲತಂಗಿಯ ಶಿಕ್ಷಣಕ್ಕೆ ಸಹಾಯಮಾಡಿತು” ಎಂದು ಓರಾಸ್ಯೋ ಜ್ಞಾಪಿಸಿಕೊಳ್ಳುತ್ತಾನೆ. ನೀವು ಮುಂದುವರಿಯುತ್ತಿರುವ ದೇಶದಲ್ಲಿ ವಾಸಿಸುವುದಾದರೆ, ಕೆಲಸವನ್ನು ಕಂಡುಕೊಳ್ಳಲಿಕ್ಕಾಗಿ ನಿಮ್ಮ ಜಾಣ್ಮೆಯನ್ನು ಉಪಯೋಗಿಸಬೇಕಾಗಿರಬಹುದು.—ನವೆಂಬರ್ 8, 1994ರ ಎಚ್ಚರ! ಪತ್ರಿಕೆಯಲ್ಲಿರುವ “ವರ್ಧಿಷ್ಣು ದೇಶಗಳಲ್ಲಿ ಕೆಲಸಗಳನ್ನು ಸೃಷ್ಟಿಸುವುದು” ಎಂಬ ಲೇಖನವನ್ನು ನೋಡಿರಿ.
ಆರ್ಥಿಕವಾಗಿ ಹೆಚ್ಚು ಪ್ರಗತಿಹೊಂದಿರುವ ದೇಶಗಳಲ್ಲಿ, ಸರಕಾರದಿಂದ ಹಣಕಾಸಿನ ನೆರವನ್ನು ಪಡೆದುಕೊಳ್ಳಸಾಧ್ಯವಿರಬಹುದು. ಅನೇಕ ಬಾರಿ, ಹೆತ್ತವರಿಲ್ಲದ ಅಥವಾ ತೊರೆಯಲ್ಪಟ್ಟ ಮಕ್ಕಳನ್ನು ನೋಡಿಕೊಳ್ಳಲಿಕ್ಕಾಗಿಯೇ ತನ್ನನ್ನು ಮೀಸಲಾಗಿರಿಸಿರುವ ಸರಕಾರಿ ಅಥವಾ ಖಾಸಗಿ ಏಜೆನ್ಸಿಗಳಿವೆ. ಉದಾಹರಣೆಗೆ, ಕೆಲವು ಏಜೆನ್ಸಿಗಳು ಆಹಾರವನ್ನು ಖರೀದಿಸಲು ಅಥವಾ ವಾಸಿಸಲಿಕ್ಕಾಗಿ ಸ್ಥಳವೊಂದನ್ನು ಕಂಡುಕೊಳ್ಳಲು ಸಹಾಯ ಮಾಡಬಹುದು. ನೀವು ಪಡೆದುಕೊಳ್ಳುವ ಯಾವುದೇ ಹಣಕಾಸಿನ ನೆರವನ್ನು ವಿವೇಕಯುತವಾಗಿ ಉಪಯೋಗಿಸಬೇಕೆಂಬುದು ಖಂಡಿತ. ‘ಧನವು ಆಶ್ರಯ’ ಎಂದು ಬೈಬಲು ಹೇಳುತ್ತದೆ. (ಪ್ರಸಂಗಿ 7:12) ಖರ್ಚಿನ ಅಂದಾಜುಪಟ್ಟಿಯನ್ನು ಮಾಡುವುದರಲ್ಲಿ ಮತ್ತು ಅದನ್ನು ಖರ್ಚುಮಾಡುವುದರಲ್ಲಿ ನೀವು ಜಾಗರೂಕರಾಗಿಲ್ಲದಿರುವಲ್ಲಿ, ಹಣವು ಬೇಗನೇ “ರೆಕ್ಕೆಗಳನ್ನು ಕಟ್ಟಿಕೊಂಡು ಹಾರಿಹೋಗುವುದು.”—ಜ್ಞಾನೋಕ್ತಿ 23:4, 5, NW.
ಒಬ್ಬ ವಯಸ್ಕನು ನಿಮ್ಮನ್ನು ನೋಡಿಕೊಳ್ಳುತ್ತಿರುವುದಾದರೆ ಅಂಥ ಸಂದರ್ಭದಲ್ಲಿ ಭೌತಿಕ ವಿಷಯವು ಅಷ್ಟೇನೂ ಚಿಂತಾಗ್ರಸ್ತ ಸಂಗತಿಯಾಗಿರುವುದಿಲ್ಲ. ಆದರೆ ಭವಿಷ್ಯತ್ತಿನಲ್ಲಿ ನೀವು ಸ್ವಂತ ಕಾಲಿನ ಮೇಲೆ ನಿಂತುಕೊಳ್ಳಬೇಕಾಗಿರುವುದು. ವಿದ್ಯಾಭ್ಯಾಸದ ವಿಷಯದಲ್ಲಿ ನಿಮ್ಮನ್ನು ಪ್ರೋತ್ಸಾಹಿಸಲು ನಿಮಗೆ ಹೆತ್ತವರಿಲ್ಲದ ಕಾರಣ, ಓದುವುದರಲ್ಲಿ ಏಕಾಗ್ರತೆಯನ್ನು ಕೊಡುವುದಕ್ಕೆ ನಿಜವಾಗಿಯೂ ಪ್ರಯತ್ನವನ್ನು ಮಾಡಬೇಕಾಗಬಹುದು. ಆತ್ಮಿಕ ಪ್ರಗತಿಯ ವಿಷಯಕ್ಕೆ ಬರುವಾಗ, ಕ್ರೈಸ್ತ ಅಪೊಸ್ತಲ ಪೌಲನು ತಿಮೊಥೆಯನಿಗೆ ನೀಡಿದ ಬುದ್ಧಿವಾದವನ್ನು ನಿಮ್ಮ ಶಾಲಾ ವ್ಯಾಸಂಗಗಳಿಗೂ ಅನ್ವಯಿಸಸಾಧ್ಯವಿದೆ: “ಈ ಕಾರ್ಯಗಳನ್ನು ಸಾಧಿಸಿಕೊಳ್ಳುವದರಲ್ಲಿ ಆಸಕ್ತನಾಗಿರು. ಇದರಿಂದ ನಿನ್ನ ಅಭಿವೃದ್ಧಿಯು ಎಲ್ಲರಿಗೂ ಪ್ರಸಿದ್ಧವಾಗುವದು.” (1 ತಿಮೊಥೆಯ 4:15) ಈ ರೀತಿಯಲ್ಲಿ ನೀವು ನಡೆದುಕೊಳ್ಳುವಾಗ, ಎಲ್ಲರಿಗೂ ಒಂದು ಉತ್ತಮ ಮಾದರಿಯನ್ನಿಡುವಿರಿ. ಮತ್ತು ಇದು ನಿಮಗೆ ಸಹ ಪ್ರಯೋಜನವನ್ನು ತರುತ್ತದೆ.
ಎಲ್ಲದಕ್ಕಿಂತಲೂ ಹೆಚ್ಚು ಪ್ರಾಮುಖ್ಯವಾದ ವಿಷಯವು, ಆತ್ಮಿಕವಾಗಿ ನಿಮ್ಮನ್ನು ನೀವು ಪೋಷಿಸಿಕೊಳ್ಳುವುದೇ ಆಗಿದೆ. ಆತ್ಮಿಕ ಕಾರ್ಯಕಲಾಪಗಳ ಒಂದು ಸಮತೂಕ ನಿಯತಕ್ರಮವನ್ನು ಇಡಲು ಪ್ರಯತ್ನಿಸಿರಿ. (ಫಿಲಿಪ್ಪಿ 3:16) ಉದಾಹರಣೆಗೆ, ಯೆಹೋವನ ಸಾಕ್ಷಿಗಳು ಪ್ರತಿದಿನ ಬೈಬಲಿನ ವಚನವನ್ನು ಕುಟುಂಬವಾಗಿ ಚರ್ಚೆಮಾಡುವುದನ್ನು ರೂಢಿಯನ್ನಾಗಿ ಮಾಡಿಕೊಂಡಿದ್ದಾರೆ. ಇದನ್ನು ನಿಯತಕ್ರಮವಾಗಿ ನೀವೇಕೆ ಮಾಡಿಕೊಳ್ಳಬಾರದು? ನಿತ್ಯವೂ ಬೈಬಲನ್ನು ಓದುವುದು ಮತ್ತು ಕ್ರೈಸ್ತ ಕೂಟಗಳಿಗೆ ಕ್ರಮವಾಗಿ ಹಾಜರಾಗುವುದು, ನೀವು ಆತ್ಮಿಕವಾಗಿ ದೃಢರಾಗಿ ಉಳಿಯುವಂತೆ ಕೂಡ ಸಹಾಯಮಾಡುವುದು.—ಇಬ್ರಿಯ 10:24, 25.
ಈಸಿರಿ ಇದ್ದು ಜಯಿಸಿರಿ
ಹೆತ್ತವರಿಲ್ಲದೆ ಜೀವಿಸುವುದು ಕಷ್ಟಕರವೇ, ಆದರೆ ಇದು ಗೋಳಿನ ಮತ್ತು ದುರ್ಗತಿಯ ಒಂದು ಜೀವನವಾಗಿರುವುದಿಲ್ಲ. ಇಪ್ಪತ್ತು ವರ್ಷದ ಪಾವೋಲಾಳ ತಾಯಿ ಮೃತರಾದಾಗ ಅವಳಿಗೆ ಕೇವಲ ಆರು ವರ್ಷವಾಗಿತ್ತಷ್ಟೇ. ಅವಳು ಹತ್ತು ವರ್ಷದವಳಾಗಿದ್ದಾಗ ಅವಳ ತಂದೆ ಮೃತರಾದರು. ಅವಳಿಗೆ ಮತ್ತು ಅವಳ ನಾಲ್ಕು ಮಂದಿ ಅಕ್ಕತಂಗಿಯರಿಗೆ ಒಬ್ಬ ಕರುಣಾಮಯಿ ಸ್ತ್ರೀಯು ತನ್ನ ಮನೆಯಲ್ಲಿ ಉಳಿಯಲಿಕ್ಕೆ ಸ್ಥಳಕೊಟ್ಟಳು. ಅವಳ ಜೀವಿತವೂ ತುಂಬ ಹೀನವಾಗಿತ್ತೋ? ಖಂಡಿತವಾಗಿಯೂ ಇಲ್ಲ. ಪಾವೋಲಾ ಹೇಳುವುದು: “ನಾವು ಒಂದೇ ಕುಟುಂಬದವರು ಆಗಿಲ್ಲದಿರಬಹುದು ನಿಜ, ಆದರೆ ನಮ್ಮ ಜೀವನವು ಇತರರಂತೆಯೇ ಇದೆ. ನಿಜ ಹೇಳಬೇಕೆಂದರೆ, ಬೇರೆ ಕುಟುಂಬಗಳಿಗೆ ಹೋಲಿಸುವಾಗ, ನಮ್ಮಲ್ಲಿರುವ ಪ್ರೀತಿಯು ಅವರಿಗಿಂತ ಮೂರು ಪಟ್ಟು ಹೆಚ್ಚೇ ಇದೆ.”
ಪಾವೋಲಾಳ ಅಕ್ಕ ಈರೆನೆ ಕೂಡಿಸುವುದು: “ನಮಗೆ ತಂದೆತಾಯಿಗಳಿಲ್ಲದಿದ್ದರೂ ನಾವು ಬೇರೆ ಯುವ ಜನರಂತೆ ಇದ್ದೇವೆ.” ಇಂತಹದ್ದೇ ಸ್ಥಿತಿಯಲ್ಲಿರುವ ಇತರರಿಗೆ ಅವಳು ಕೊಡುವ ಬುದ್ಧಿವಾದವೇನು? “ನೀವು ಅನುಕೂಲಕರವಲ್ಲದ ಸ್ಥಿತಿಯಲ್ಲಿದ್ದೀರೆಂದು ಎಂದೂ ನೆನಸದಿರಿ.” ಓರಾಸ್ಯೋ ಸಹ ಅದೇ ರೀತಿಯಲ್ಲಿ ಹೇಳುವುದು: “ಈ ಪರಿಸ್ಥಿತಿಯು ನಾನು ಬೇಗನೇ ಒಬ್ಬ ಪ್ರೌಢ ವ್ಯಕ್ತಿಯಾಗುವಂತೆ ಮಾಡಿತು.”
ಒಬ್ಬರು ತಮ್ಮ ಹೆತ್ತವರನ್ನು ಕಳೆದುಕೊಳ್ಳುವುದು ಹೃದಯ ವೇದನೆಯಾಗಿರುವುದು ನಿಜ. ಆದರೆ ಒಂದು ವಿಷಯವನ್ನು ಮಾತ್ರ ಜ್ಞಾಪಕದಲ್ಲಿಡಿರಿ, ಯೆಹೋವನ ಸಹಾಯದಿಂದ ನೀವು ಖಂಡಿತವಾಗಿಯೂ ಅದನ್ನು ನಿಭಾಯಿಸಬಲ್ಲಿರಿ ಮತ್ತು ಆತನ ಆಶೀರ್ವಾದವು ನಿಮ್ಮ ಮೇಲೆ ಇರುವುದು.
[ಅಧ್ಯಯನ ಪ್ರಶ್ನೆಗಳು]
a ಡಿಸೆಂಬರ್ 8, 1998ರ ಎಚ್ಚರ! ಪತ್ರಿಕೆಯಲ್ಲಿರುವ “ಯುವ ಜನರು ಪ್ರಶ್ನಿಸುವುದು . . . ನಾನೇಕೆ ನನ್ನ ಹೆತ್ತವರಿಲ್ಲದೆ ಬದುಕಬೇಕು?” ಎಂಬ ಲೇಖನವನ್ನು ನೋಡಿರಿ.
[ಪುಟ 31 ರಲ್ಲಿರುವ ಚಿತ್ರ]
ಕ್ರೈಸ್ತ ಹಿರಿಯರಿಂದ ನೀವು ಸಹಾಯವನ್ನು ಪಡೆದುಕೊಳ್ಳಬಲ್ಲಿರಿ