ಯುವ ಜನರು ಪ್ರಶ್ನಿಸುವುದು . . .
ತುಂಬ ದೂರ ವಾಸಿಸುತ್ತಿರುವಲ್ಲಿ ಪ್ರಣಯಾಚರಣೆಯನ್ನು ಹೇಗೆ ನಡೆಸಸಾಧ್ಯವಿದೆ?
“ಯೆಹೋವನ ಸಾಕ್ಷಿಗಳ ಅಂತಾರಾಷ್ಟ್ರೀಯ ಅಧಿವೇಶನಕ್ಕೆ ಬಂದಿದ್ದ ಸಂದರ್ಶಕರ ಒಂದು ಗುಂಪನ್ನು, ಅವರು ಉಳಿದುಕೊಂಡಿದ್ದ ಹೋಟೆಲಿಗೆ ತಲಪಿಸಲಿಕ್ಕಾಗಿ ಆಗ ತಾನೇ ನಾನು ಅವರ ಜೊತೆ ಬಂದಿದ್ದೆ. ಇನ್ನೇನು ನಾನು ಮನೆಗೆ ಹೋಗಲಿಕ್ಕಿದ್ದಾಗ, ಸಂದರ್ಶಕರ ಇನ್ನೊಂದು ಗುಂಪು ಅಲ್ಲಿಂದ ಒಳಗೆ ಪ್ರವೇಶಿಸುತ್ತಿತ್ತು. ಆದುದರಿಂದ ನಾನು ಅವರೊಂದಿಗೆ ಮಾತಾಡಲು ನಿಂತೆ, ಆಗ ನನಗೆ ಓಡೆಟಳ ಪರಿಚಯವಾಯಿತು. ಆ ವಾರದಲ್ಲೇ ನಾವು ಪುನಃ ಒಮ್ಮೆ ಭೇಟಿಯಾದೆವು. ನಾವಿಬ್ಬರೂ ಪರಸ್ಪರ ಪತ್ರಗಳನ್ನು ಬರೆಯಲು ನಿರ್ಧರಿಸಿದೆವು ಮತ್ತು ಎರಡು ವರ್ಷಗಳ ವರೆಗೆ ಪತ್ರದ ಮೂಲಕ ನಮ್ಮ ಪರಿಚಯ ಹೆಚ್ಚಿದ ಬಳಿಕ, ನಾವು ಪ್ರಣಯಾಚರಣೆಯನ್ನು ಆರಂಭಿಸಿದೆವು.”—ಟೋನೀ.
ಪ್ರಪಂಚವು ತುಂಬ ಚಿಕ್ಕದಾಗಿದೆ. ಇತ್ತೀಚಿನ ದಶಕಗಳಲ್ಲಿ ವಿಮಾನ ಪ್ರಯಾಣವು ತುಂಬ ಕಡಿಮೆ ವೆಚ್ಚದಲ್ಲಿ ಸಾಧ್ಯವಿದೆ, ಲೋಕವ್ಯಾಪಕವಾಗಿ ಟೆಲಿಫೋನ್ ನೆಟ್ವರ್ಕ್ ಇದೆ, ಸ್ಪೀಡ್ ಪೋಸ್ಟ್ ವ್ಯವಸ್ಥೆಯಿದೆ, ಮತ್ತು ಇಂಟರ್ನೆಟ್ ಸಹ ಪ್ರೇಮ ಲೋಕದಲ್ಲಿ ಹೊಸ ಸಾಧ್ಯತೆಗಳನ್ನು ತೆರೆದಿದೆ. ಮತ್ತು ವಿಶೇಷವಾಗಿ ನಿಮ್ಮ ಸ್ವದೇಶದಲ್ಲಿ ವೈವಾಹಿಕ ಪ್ರತೀಕ್ಷೆಗಳು ತುಂಬ ಕಡಿಮೆಯಿರುವಲ್ಲಿ, ಸಾವಿರಾರು ಕಿಲೊಮೀಟರ್ಗಳಷ್ಟು ದೂರದಲ್ಲಿ ವಾಸಿಸುತ್ತಿರುವುದಾದರೂ, ಬೇರೆ ಬೇರೆ ಮಾಧ್ಯಮದ ಮೂಲಕ ಪ್ರಣಯಾಚರಣೆ ನಡೆಸುವುದು ಮನಸ್ಸಿಗೆ ಆಕರ್ಷಕವಾಗಿರುತ್ತದೆ.
ಕೆಲವು ವಿವಾಹ ಜೋಡಿಗಳಿಗಾದರೋ ದೂರದ ಪ್ರಣಯಾಚರಣೆಯು ಒಂದು ಆಶೀರ್ವಾದವಾಗಿ ಪರಿಣಮಿಸಿದೆ. “ನಾವು ವಿವಾಹವಾಗಿ ಸಂತೋಷದಿಂದ ಜೀವಿಸಲು ಆರಂಭಿಸಿ 16 ವರ್ಷಗಳಾದವು” ಎಂದು ಟೋನೀ ಹೇಳುತ್ತಾನೆ. ದೂರದ ಪ್ರಣಯಾಚರಣೆಯಿಂದ ಒಂದು ಪ್ರಯೋಜನವಿದೆ, ಅದೇನೆಂದರೆ ವಿವಾಹ ಜೋಡಿಯನ್ನು ಕುರುಡುಗೊಳಿಸುವ ಶಾರೀರಿಕ ಆಕರ್ಷಣೆಯಿಲ್ಲದೆ ಒಬ್ಬರು ಇನ್ನೊಬ್ಬರನ್ನು ಅರಿತುಕೊಳ್ಳಸಾಧ್ಯವಿದೆ ಎಂದು ಸಹ ಕೆಲವರು ವಾದಿಸಬಹುದು. ಅದರ ಪ್ರಯೋಜನಗಳು ಏನೇ ಇರಲಿ, ದೂರದ ಪ್ರಣಯಾಚರಣೆಯು ಕೆಲವು ಅಪೂರ್ವ ಪಂಥಾಹ್ವಾನಗಳನ್ನು ತಂದೊಡ್ಡುತ್ತದೆ.
ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವುದು
ನೀವು ಯಾರನ್ನು ವಿವಾಹವಾಗಲು ಇಷ್ಟಪಡುತ್ತೀರೋ ಅವರ ಕುರಿತು ಸಾಧ್ಯವಿರುವಷ್ಟು ಹೆಚ್ಚು ವಿಷಯಗಳನ್ನು ತಿಳಿದುಕೊಳ್ಳುವುದು ಅತ್ಯುತ್ತಮವಾದದ್ದಾಗಿದೆ. ಆದರೆ, ಫ್ರ್ಯಾಂಕ್ ಎಂಬ ಹೆಸರಿನ ಒಬ್ಬ ಪತಿಯು ತನ್ನ ಸ್ವಂತ ಅನುಭವದಿಂದ ಹೇಳುವಂತೆ, ನಿಜವಾದ ವ್ಯಕ್ತಿಯನ್ನು, ಅಂದರೆ ‘ಹೃದಯದ ಆಂತರಿಕ ವ್ಯಕ್ತಿತ್ವ’ವನ್ನು (NW) ಅರ್ಥಮಾಡಿಕೊಳ್ಳುವುದು ಸುಲಭವೇನಲ್ಲ. (1 ಪೇತ್ರ 3:4) ಡಗ್ ಎಂಬ ಹೆಸರಿನ ಇನ್ನೊಬ್ಬ ಕ್ರೈಸ್ತನು ಸಹ ದೂರದಿಂದ ಪ್ರಣಯಾಚರಣೆಯನ್ನು ನಡೆಸಿದ್ದನು. ಅವನು ಒಪ್ಪಿಕೊಳ್ಳುವುದು: “ಕಳೆದುಹೋಗಿರುವ ಸಮಯದ ಕುರಿತು ಯೋಚಿಸುವಾಗ, ನಾವು ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥಮಾಡಿಕೊಂಡಿರಲಿಲ್ಲ ಎಂದು ನನಗನಿಸುತ್ತದೆ.”
ವ್ಯಕ್ತಿಯೊಬ್ಬನು ಸಾವಿರಾರು ಕಿಲೊಮೀಟರುಗಳಷ್ಟು ದೂರದಲ್ಲಿ ವಾಸಿಸುತ್ತಿರುವಲ್ಲಿ, ನಾವು ನಿಜವಾಗಿಯೂ ಅವನ ಬಗ್ಗೆ ತಿಳಿದುಕೊಳ್ಳಸಾಧ್ಯವಿದೆಯೊ? ಹೌದು, ಆದರೆ ಇದಕ್ಕಾಗಿ ಅತ್ಯಧಿಕ ಪ್ರಯತ್ನವನ್ನು ಮಾಡುವ ಅಗತ್ಯವಿದೆ. “ಫೋನ್ಮಾಡಲಿಕ್ಕಾಗಿ ನಮ್ಮ ಬಳಿ ಹಣವಿರಲಿಲ್ಲ, ಆದುದರಿಂದ ನಾವು ವಾರಕ್ಕೆ ಒಂದು ಪತ್ರವನ್ನು ಬರೆಯುತ್ತಿದ್ದೆವು” ಎಂದು ಡಗ್ ಹೇಳುತ್ತಾನೆ. ಆದರೆ ಪತ್ರ ಬರೆಯುವುದು ಮಾತ್ರ ಸಾಕಾಗುವುದಿಲ್ಲ ಎಂಬುದು ಜೊಯೆನ್ ಹಾಗೂ ಫ್ರ್ಯಾಂಕ್ರ ಅಭಿಪ್ರಾಯ. “ಮೊದಮೊದಲು ನಾವು ಪತ್ರಗಳನ್ನು ಬರೆಯುತ್ತಿದ್ದೆವು ಮತ್ತು ಫೋನ್ಮಾಡಲು ಪ್ರಯತ್ನಿಸುತ್ತಿದ್ದೆವು” ಎಂದು ಜೊಯೆನ್ ಹೇಳುತ್ತಾಳೆ. “ತದನಂತರ ಫ್ರ್ಯಾಂಕ್ ನನಗೆ ಒಂದು ಟೇಪ್ರೆಕಾರ್ಡರನ್ನು ಕಳುಹಿಸಿದನು. ಪ್ರತಿ ವಾರ ನಾವು ಹೊಸ ಟೇಪ್ನಲ್ಲಿ ಮಾತುಕತೆಯನ್ನು ರೆಕಾರ್ಡ್ ಮಾಡುತ್ತಿದ್ದೆವು.”
ಪ್ರಾಮಾಣಿಕತೆ—ಏಕಮಾತ್ರ ಮಾರ್ಗ
ನೀವು ಯಾವುದೇ ರೀತಿಯ ಸಂಪರ್ಕಮಾಧ್ಯಮವನ್ನು ಉಪಯೋಗಿಸಿ, ಆದರೆ ಪ್ರಾಮಾಣಿಕತೆಯು ಅತಿ ಪ್ರಾಮುಖ್ಯವಾಗಿದೆ. “ಒಂದುವೇಳೆ ನೀವು ಸುಳ್ಳು ಹೇಳುವಲ್ಲಿ, ತದನಂತರ ಅದು ಬಯಲಾಗುತ್ತದೆ ಮತ್ತು ನಿಮ್ಮ ಸಂಬಂಧದ ಮೇಲೆ ಪ್ರಭಾವ ಬೀರುತ್ತದೆ” ಎಂದು ಎಸ್ತೆರ್ ಎಂಬ ಹೆಸರಿನ ಕ್ರೈಸ್ತ ಪತ್ನಿಯು ಹೇಳುತ್ತಾಳೆ. “ಪರಸ್ಪರ ಪ್ರಾಮಾಣಿಕರಾಗಿರಿ. ಸ್ವತಃ ಪ್ರಾಮಾಣಿಕರಾಗಿರಿ. ನಿಮಗೆ ಯಾವ ವಿಷಯವು ಸರಿಕಾಣುವುದಿಲ್ಲವೋ ಅದನ್ನು ಅಲಕ್ಷಿಸಬೇಡಿ. ಅದರ ಬಗ್ಗೆ ಚರ್ಚಿಸಿರಿ.” ಅಪೊಸ್ತಲ ಪೌಲನು ಒಂದು ಒಳ್ಳೆಯ ಸಲಹೆಯನ್ನು ಕೊಡುತ್ತಾನೆ: “ಪ್ರತಿಯೊಬ್ಬನು ತನ್ನ ನೆರೆಯವನ ಸಂಗಡ ಸತ್ಯವನ್ನೇ ಆಡಲಿ; ಯಾಕಂದರೆ ನಾವು ಒಬ್ಬರಿಗೊಬ್ಬರು ಅಂಗಗಳಾಗಿದ್ದೇವಲ್ಲಾ.”—ಎಫೆಸ 4:25; ಹೋಲಿಸಿರಿ ಇಬ್ರಿಯ 13:18.
ನೀವು ಖಂಡಿತವಾಗಿಯೂ ಚರ್ಚಿಸಬೇಕಾದ ಕೆಲವು ಸಂಗತಿಗಳು ಯಾವುವು? ಪ್ರಣಯಾಚರಣೆ ನಡೆಸುತ್ತಿರುವ ಎಲ್ಲ ಜೋಡಿಗಳು, ಗುರಿಗಳು, ಮಕ್ಕಳು, ಆರ್ಥಿಕ ವಿಚಾರಗಳು, ಮತ್ತು ಆರೋಗ್ಯದಂತಹ ವಿಷಯಗಳ ಬಗ್ಗೆ ಚರ್ಚಿಸುವ ಅಗತ್ಯವಿದೆ. ಆದರೂ ವಿಶೇಷವಾದ ಗಮನವನ್ನು ಕೊಡಲೇಬೇಕಾದ ವಿಷಯಗಳೂ ಇವೆ. ಉದಾಹರಣೆಗಾಗಿ, ನೀವು ವಿವಾಹವಾಗುವಲ್ಲಿ, ನಿಮ್ಮಲ್ಲಿ ಒಬ್ಬರು—ಅಥವಾ ಇಬ್ಬರೂ—ಪರಸ್ಥಳಕ್ಕೆ ಸ್ಥಳಾಂತರಿಸಬೇಕಾಗುವುದು. ಹಾಗೆ ಸ್ಥಳಾಂತರಿಸಲಿಕ್ಕಾಗಿ ನೀವು ಮಾನಸಿಕವಾಗಿಯೂ ಭಾವನಾತ್ಮಕವಾಗಿಯೂ ಸಿದ್ಧರಿದ್ದೀರೊ ಮತ್ತು ಹಾಗೆ ಮಾಡಶಕ್ತರೊ? ಇದು ನಿಮಗೆ ಹೇಗೆ ಗೊತ್ತು? ನೀವು ಎಂದಾದರೂ ಬೇರೆ ಕಡೆ ಹೋಗಿ ಉಳಿದಿದ್ದೀರೊ ಅಥವಾ ತುಂಬ ದೀರ್ಘ ಸಮಯದ ವರೆಗೆ ನಿಮ್ಮ ಕುಟುಂಬವನ್ನು ಬಿಟ್ಟು ಉಳಿದಿದ್ದೀರೊ? ಈ ಪತ್ರಿಕೆಯ ಪ್ರಕಾಶಕರಾಗಿರುವ ವಾಚ್ ಟವರ್ ಸೊಸೈಟಿಯ ಮುಖ್ಯಕಾರ್ಯಾಲಯದಲ್ಲಿ ಸ್ವಯಂಸೇವಕರಾಗಿ ಕೆಲಸಮಾಡಬೇಕು ಎಂದು ಜೊಯೆನಳ ಭಾವಿ ಪತಿಯು ಬಯಸಿದ್ದನು. “ಒಂದು ಚಿಕ್ಕ ಕೋಣೆಯಲ್ಲಿ ವಾಸಿಸಿ, ಅತಿ ಸ್ವಲ್ಪ ಹಣದಲ್ಲಿ ಸಂಸಾರವನ್ನು ನಡೆಸಲು ಸಾಧ್ಯವಿದೆಯೊ ಎಂದು ಅವನು ನನ್ನನ್ನು ಕೇಳಿದನು” ಎಂದು ಜೊಯೆನ್ ಜ್ಞಾಪಿಸಿಕೊಳ್ಳುತ್ತಾಳೆ. “ನಾವು ಇದರ ಬಗ್ಗೆ ಮುಚ್ಚುಮರೆಯಿಲ್ಲದೆ ಚರ್ಚೆ ಮಾಡಬೇಕಾಯಿತು.”
ಬೇರೆ ದೇಶದ ಒಬ್ಬ ವ್ಯಕ್ತಿಯೊಂದಿಗೆ ಪ್ರಣಯಾಚರಣೆ ನಡೆಸಬೇಕಾಗಿರುವಲ್ಲಿ, ಅಲ್ಲಿನ ಭಿನ್ನವಾದ ಸಂಸ್ಕೃತಿಗೆ ಹೊಂದಿಕೊಳ್ಳಲು ನಿಮಗೆ ಮನಸ್ಸಿದೆಯೊ? “ನಿನ್ನ ದೈನಂದಿನ ಜೀವನದಲ್ಲಿ ಈಗಿನಿಂದಲೇ ನೀನು ಬೇರೊಬ್ಬರ ಸಂಸ್ಕೃತಿಯ ಸವಿಯನ್ನು ಅನುಭವಿಸುತ್ತಿದ್ದೀಯಾ?” ಎಂದು ಫ್ರ್ಯಾಂಕ್ ಕೇಳುತ್ತಾನೆ. “ನಿಮ್ಮ ಸಂಬಂಧದ ಆರಂಭದಲ್ಲಿಯೇ ಈ ಪ್ರಮುಖ ವಿಷಯಗಳ ಬಗ್ಗೆ ಮನಬಿಚ್ಚಿ ಮಾತಾಡಿರಿ. ಎಷ್ಟು ಬೇಗ ನೀವು ಅದನ್ನು ಕಂಡುಕೊಳ್ಳುತ್ತೀರೋ ಅದರಿಂದ ಅಷ್ಟೇ ಒಳಿತಿದೆ—ಅಂದರೆ ನೀವು ಭಾವನಾತ್ಮಕವಾಗಿ ನಿಕಟವಾಗುವ ಮುಂಚೆ ಅಥವಾ ನಿಮ್ಮ ಹಣವು ಖರ್ಚಾಗುವ ಮುಂಚೆ ಇದೆಲ್ಲ ನಿಮಗೆ ಗೊತ್ತಾಗಬೇಕು.” ಹೌದು, ಕೆಲವೇ ದಿನ ಪ್ರವಾಸಿಗರಂತೆ ಹೋಗಿಬರುವುದಕ್ಕೂ, ಇನ್ನೊಬ್ಬರ ಸಂಸ್ಕೃತಿಯಲ್ಲೇ ದಿನಾಲೂ ಜೀವಿಸುವುದಕ್ಕೂ ತುಂಬ ವ್ಯತ್ಯಾಸವಿದೆ. ನೀವು ಇನ್ನೊಂದು ಭಾಷೆಯನ್ನು ಕಲಿಯಬೇಕಾಗಿದೆಯೆ? ಜೀವಿಸುವ ಪರಿಸ್ಥಿತಿಗಳ ನಡುವಿನ ದೊಡ್ಡ ಭಿನ್ನತೆಗಳಿಗೆ ನೀವು ಹೊಂದಿಕೊಳ್ಳಲು ಶಕ್ತರಾಗುವಿರೊ? ಅದೇ ಸಮಯದಲ್ಲಿ ಈ ರೀತಿಯ ಸನ್ನಿವೇಶವು ಇರಬಹುದು, ಏನೆಂದರೆ ನೀವು ಆ ವ್ಯಕ್ತಿಗಿಂತಲೂ ಹೆಚ್ಚಾಗಿ ಅವನ ಸಂಸ್ಕೃತಿಯ ಮೋಡಿಗೆ ಒಳಗಾಗಿರಸಾಧ್ಯವಿದೆಯೊ? ಅಂತಹ ಮೋಡಿಯು ಸ್ವಲ ದಿನಗಳ ಬಳಿಕ ಮಾಯವಾಗುತ್ತದೆ. ಆದರೆ ವಿವಾಹವು ಇಬ್ಬರು ವ್ಯಕ್ತಿಗಳನ್ನು ಶಾಶ್ವತವಾಗಿ ಒಟ್ಟುಗೂಡಿಸುತ್ತದೆ.—ಮತ್ತಾಯ 19:6.
ಟೋನೀ ಹೀಗೆ ವಿವರಿಸುತ್ತಾನೆ: “ನನಗೆ ಪರಿಚಯವಿದ್ದ ಹುಡುಗಿಯೊಬ್ಬಳು, ಲೋಕದ ಇನ್ನೊಂದು ಭಾಗದಲ್ಲಿ ವಾಸಿಸುತ್ತಿದ್ದಳು, ಮತ್ತು ಅವಳು ಕೆರಿಬಿಯನ್ ದ್ವೀಪದ ಒಬ್ಬ ಹುಡುಗನನ್ನು ವಿವಾಹವಾದಳು. ಆದರೆ ಆ ದ್ವೀಪದ ಜೀವನವು ಅವಳಿಗೆ ತುಂಬ ಕಷ್ಟಕರವಾಗಿ ತೋರಿತು. ಅಲ್ಲಿ ವಿಪರೀತ ಉಷ್ಣತೆಯಿರುತ್ತಿತ್ತು, ಮತ್ತು ಅವಳು ಅಸ್ವಸ್ಥಳಾದಳು. ಆಹಾರವು ಬೇರೆಯಾಗಿತ್ತು, ಮತ್ತು ಅವಳಿಗೆ ತನ್ನ ಕುಟುಂಬದ ನೆನಪಾಗುತ್ತಿತ್ತು. ಆದುದರಿಂದ ಅವರು ಆ ಹುಡುಗಿಯ ಸ್ವದೇಶದಲ್ಲಿ ವಾಸಿಸಲು ಪ್ರಯತ್ನಿಸಿದರು. ಆದರೆ ಅಲ್ಲಿನ ಜೀವನ ಶೈಲಿಯು ಪ್ರಾಪಂಚಿಕತೆಯಿಂದ ತುಂಬಿತ್ತು, ಮತ್ತು ಕುಟುಂಬ ಹಾಗೂ ನೆರೆಯವರ ನಡುವೆ ತಾನು ಅನುಭವಿಸುತ್ತಿದ್ದ ಆಪ್ತಭಾವನೆ ಇಲ್ಲಿ ಇಲ್ಲ ಎಂಬ ಅನಿಸಿಕೆ ಅವಳ ಗಂಡನಿಗೆ ಉಂಟಾಯಿತು. ಈಗ ಅವರು ಬೇರೆಯಾಗಿದ್ದಾರೆ; ಅವನು ತನ್ನ ದೇಶದಲ್ಲಿ ಮತ್ತು ಅವಳು ತನ್ನ ದೇಶದಲ್ಲಿ ವಾಸಿಸುತ್ತಿದ್ದಾರೆ. ಅವರ ಇಬ್ಬರು ಮಕ್ಕಳಿಗೆ, ಇಬ್ಬರೂ ಹೆತ್ತವರ ಪ್ರೀತಿ ಹಾಗೂ ಮಮತೆಯು ಸರಿಯಾಗಿ ಸಿಗುತ್ತಿಲ್ಲ.”
ಬಹಳ ದೂರದಲ್ಲಿರುವ, ಬಹುಶಃ ಇನ್ನೊಂದು ಸಂಸ್ಕೃತಿಯವನಾದ ಒಬ್ಬ ವ್ಯಕ್ತಿಯನ್ನು ವಿವಾಹವಾಗುವುದು, ಇನ್ನಿತರ ಪಂಥಾಹ್ವಾನಗಳನ್ನು ತಂದೊಡ್ಡುತ್ತದೆ. ಪ್ರಯಾಣ ಹಾಗೂ ಸಂಚಾರದ ಹೆಚ್ಚು ಖರ್ಚನ್ನು ನಿಭಾಯಿಸಲು ನೀವು ತಯಾರಿದ್ದೀರೊ? ಲಿಡಿಯ ಹೀಗೆ ಜ್ಞಾಪಿಸಿಕೊಳ್ಳುತ್ತಾಳೆ: “ನನ್ನ ಫೋನ್ ಬಿಲ್ ತುಂಬ ಜಾಸ್ತಿಯಾಗುತ್ತಿದೆ, ನಾವು ಬೇಗ ಮದುವೆಯಾಗಬೇಕು ಎಂದು ಫಿಲ್ ಯಾವಾಗಲೂ ತಮಾಷೆ ಮಾಡುತ್ತಿದ್ದನು. ಆದರೆ ಈಗ ನಾವು, ನನ್ನ ತಾಯಿಗೆ ಮಾಡುವ ಫೋನ್ ಕರೆಗಳ ಬಿಲ್ಲನ್ನು ಕಟ್ಟಬೇಕು!” ಮಕ್ಕಳು ಹುಟ್ಟುವಲ್ಲಿ ಆಗೇನು? ಕೆಲವು ಮಕ್ಕಳು ದೊಡ್ಡವರಾಗುವಾಗ ಅವರಿಗೆ ತಮ್ಮ ಸ್ವಂತ ಸಂಬಂಧಿಗಳ ಕುರಿತು ಗೊತ್ತೇ ಇರುವುದಿಲ್ಲ; ಅವರು ಫೋನ್ನಲ್ಲಿ ಸಹ ಮಾತಾಡಲು ಸಾಧ್ಯವಿರುವುದಿಲ್ಲ, ಏಕೆಂದರೆ ಭಾಷೆಯ ಸಮಸ್ಯೆಯು ಅವರನ್ನು ತಡೆಯುತ್ತದೆ! ಇಂತಹ ಸಮಸ್ಯೆಗಳನ್ನು ನಿಭಾಯಿಸುವುದು ಸಾಧ್ಯವಿಲ್ಲ ಎಂಬುದು ಇದರ ಅರ್ಥವಲ್ಲ. ಆದರೆ ಇಂತಹ ಒಂದು ವಿವಾಹವನ್ನು ಪ್ರವೇಶಿಸುವ ಮೊದಲು ಒಬ್ಬನು ಅದರ ಖರ್ಚನ್ನು ಲೆಕ್ಕಿಸಿನೋಡಬೇಕಾಗಿದೆ.—ಹೋಲಿಸಿರಿ ಲೂಕ 14:28.
ವಾಸ್ತವದಲ್ಲಿ ಅವನು (ಅಥವಾ) ಅವಳು ಎಂತಹ ವ್ಯಕ್ತಿಯಾಗಿದ್ದಾರೆ?
ನಿಮ್ಮ ಗೆಳೆಯನು ನಿಜವಾಗಿಯೂ ನಿಷ್ಕಪಟಿಯಾಗಿದ್ದಾನೆ ಮತ್ತು ಸತ್ಯವನ್ನು ಹೇಳುತ್ತಿದ್ದಾನೆ ಎಂದು ನೀವು ಹೇಗೆ ಹೇಳಸಾಧ್ಯವಿದೆ? “ಒಳ್ಳೇ ಮರಗಳೆಲ್ಲಾ ಒಳ್ಳೇ ಫಲವನ್ನು ಕೊಡುವವು” ಎಂದು ಮತ್ತಾಯ 7:17 ಹೇಳುತ್ತದೆ. ಅವನ ಚಟುವಟಿಕೆಗಳು ಹೇಗಿವೆ? ಅವನು ಏನು ಹೇಳುತ್ತಾನೋ ಅದನ್ನು ಕಾರ್ಯರೂಪಕ್ಕೆ ತರುತ್ತಾನೊ? ಅವನ ಗತ ಕೆಲಸಗಳು, ಭವಿಷ್ಯತ್ತಿನ ಅವನ ಗುರಿಗಳಿಗೆ ಬೆಂಬಲ ನೀಡುವಂತಿವೆಯೊ? “ನಾವು ಮೊತ್ತಮೊದಲಾಗಿ ನಮ್ಮ ಆತ್ಮಿಕ ಗುರಿಗಳ ಬಗ್ಗೆ ವಿಚಾರಿಸಿ ತಿಳಿದುಕೊಂಡೆವು” ಎಂದು ಎಸ್ತೆರ್ ವಿವರಿಸುತ್ತಾಳೆ. “ಅವನು ಸುಮಾರು ಎಂಟು ವರ್ಷಗಳಿಂದ ಪೂರ್ಣ ಸಮಯದ ಸೌವಾರ್ತಿಕನಾಗಿ ಸೇವೆಮಾಡುತ್ತಿದ್ದನು, ಮತ್ತು ಮುಂದೆ ನಮ್ಮ ಸೇವೆಯನ್ನು ಮುಂದುವರಿಸುವ ವಿಷಯದಲ್ಲಿ ಅವನು ಸತ್ಯವನ್ನೇ ಹೇಳುತ್ತಿದ್ದಾನೆ ಎಂದು ನಂಬಲು ಇದು ಆಧಾರವನ್ನು ಒದಗಿಸಿತು.”
ಆದರೆ ನೀವು ಯಾರೊಂದಿಗೆ ಪ್ರಣಯಾಚರಣೆ ನಡೆಸುತ್ತಿದ್ದೀರೋ ಆ ವ್ಯಕ್ತಿ ತನ್ನ ಮಾತನ್ನು ಹೊರಳಿಸುತ್ತಾನೆ ಎಂದಿಟ್ಟುಕೊಳ್ಳಿ. ವಿಷಯವನ್ನು ಅಲಕ್ಷಿಸಿ, ಎಲ್ಲವೂ ಸರಿಹೋಗುತ್ತದೆ ಎಂದು ಸುಮ್ಮನಿರಬೇಡಿ. ಒಳಹೊಕ್ಕು ಪರೀಕ್ಷಿಸಿ! ಏಕೆ? ಎಂದು ಪ್ರಶ್ನಿಸಿಕೊಳ್ಳಿ. ಒಂದು ಜ್ಞಾನೋಕ್ತಿಯು ಹೇಳುತ್ತದೆ: “ಮನುಷ್ಯನ ಹೃದಯಸಂಕಲ್ಪವು ಆಳವಾದ ಬಾವಿಯ ನೀರು. ಆದರೆ ವಿವೇಕಿಯು ಅದನ್ನು ಸೇದಬಲ್ಲನು.” (ಜ್ಞಾನೋಕ್ತಿ 20:5) “ಮೂಢನು ಯಾವ ಮಾತನ್ನಾದರೂ ನಂಬುವನು; ಜಾಣನು ತನ್ನ ನಡತೆಯನ್ನು ಚೆನ್ನಾಗಿ ಗಮನಿಸುವನು.”—ಜ್ಞಾನೋಕ್ತಿ 14:15.
ಮುಖಾಮುಖಿಯಾಗಿ
ಆದರೂ ನೀವು ಒಬ್ಬ ವ್ಯಕ್ತಿಯ ಕುರಿತು ಪತ್ರದ ಮೂಲಕ ಅಥವಾ ಫೋನಿನ ಮೂಲಕ ಸ್ವಲ್ಪ ವಿಷಯವನ್ನು ಮಾತ್ರ ತಿಳಿದುಕೊಳ್ಳಸಾಧ್ಯವಿದೆ. ಆಸಕ್ತಿಕರವಾದ ವಿಷಯವೇನೆಂದರೆ, ಅಪೊಸ್ತಲ ಯೋಹಾನನು ತನ್ನ ಕ್ರೈಸ್ತ ಸಹೋದರರಿಗೆ ಅನೇಕ ಪತ್ರಗಳನ್ನು ಬರೆದನು. ಅವರ ನಡುವಿನ ಮಮತೆಯ ಬಂಧವನ್ನು ಬಲಗೊಳಿಸಲು ಈ ಪತ್ರಗಳು ಸಹಾಯ ಮಾಡಿದವಾದರೂ, ಯೋಹಾನನು ಹೇಳಿದ್ದು: “ನಿಮಗೆ ಬರೆಯುವದಕ್ಕೆ ನನಗೆ ಅನೇಕ ಸಂಗತಿಗಳಿದ್ದರೂ ಅವುಗಳನ್ನು ಮಸಿಯಿಂದ ಕಾಗದದ ಮೇಲೆ ಬರೆದು ತಿಳಿಸುವದಕ್ಕೆ ನನಗೆ ಮನಸ್ಸಿಲ್ಲ. ನಾನು ನಿಮ್ಮ ಬಳಿಗೆ ಬಂದು ನಿಮ್ಮ ಸಂಗಡ ಮುಖಾಮುಖಿಯಾಗಿ ಮಾತಾಡುವೆನೆಂದು ನಿರೀಕ್ಷಿಸುತ್ತೇನೆ.” (2 ಯೋಹಾನ 12) ಅದೇ ರೀತಿಯಲ್ಲಿ, ಒಬ್ಬ ವ್ಯಕ್ತಿಯೊಂದಿಗೆ ಮುಖಾಮುಖಿಯಾಗಿ ಸಮಯವನ್ನು ಕಳೆಯುವುದು ಅತ್ಯುತ್ತಮವಾದ ವಿಧವಾಗಿದೆ. ನೀವು ಪರಸ್ಪರ ನಿಕಟರಾಗಿರಲು ಸಾಧ್ಯವಾಗುವಂತೆ, ನಿಮ್ಮಲ್ಲಿ ಒಬ್ಬರು ಸ್ವಲ್ಪ ಕಾಲದ ವರೆಗೆ ಸ್ಥಳಾಂತರಿಸುವುದು ಒಂದುವೇಳೆ ಪ್ರಾಯೋಗಿಕವಾಗಿರಬಹುದು. ಯಾರು ಸ್ಥಳಾಂತರಿಸುತ್ತಾರೋ ಅವರಿಗೆ, ಮುಂದೆ ಭವಿಷ್ಯತ್ತಿನಲ್ಲಿ ಅವನ ಅಥವಾ ಅವಳ ಹೊಸ ಮನೆಯಾಗಿ ಪರಿಣಮಿಸಬಹುದಾದ ಸ್ಥಳದ ಹವಾಮಾನ ಮತ್ತು ಜೀವಿಸುವ ಪರಿಸ್ಥಿತಿಗಳ ಅನುಭವವನ್ನು ಪಡೆಯುವಂತೆ ಇದು ಮಾಡುತ್ತದೆ.
ನೀವು ಜೊತೆಯಲ್ಲಿರುವಂತಹ ಆ ಸಮಯವನ್ನು ಹೇಗೆ ಸದುಪಯೋಗಿಸಸಾಧ್ಯವಿದೆ? ನಿಮ್ಮಿಬ್ಬರ ಗುಣಗಳನ್ನು ಬಹಿರಂಗಪಡಿಸುವಂತಹ ಕೆಲಸಗಳನ್ನು ಒಟ್ಟಿಗೆ ಮಾಡಿರಿ. ದೇವರ ವಾಕ್ಯವನ್ನು ಜೊತೆಯಾಗಿ ಅಭ್ಯಾಸಿಸಿರಿ. ಸಭಾ ಕೂಟಗಳಲ್ಲಿ ಮತ್ತು ಶುಶ್ರೂಷೆಯಲ್ಲಿ ಭಾಗವಹಿಸುವ ಮೂಲಕ ಪರಸ್ಪರ ಗಮನಿಸಿರಿ. ಸ್ವಚ್ಛಗೊಳಿಸುವುದು ಹಾಗೂ ಖರೀದಿಮಾಡುವಂತಹ ಕ್ರಮವಾದ ಮನೆವಾರ್ತೆಯ ಕೆಲಸಗಳನ್ನು ಒಟ್ಟಿಗೆ ಮಾಡಿರಿ. ಒಂದು ಕಾರ್ಯಮಗ್ನ ಕಾಲತಖ್ತೆಯ ಒತ್ತಡದ ಕೆಳಗಿರುವಾಗ ಇನ್ನೊಬ್ಬ ವ್ಯಕ್ತಿಯು ಹೇಗೆ ವರ್ತಿಸುತ್ತಾನೆ ಎಂಬುದನ್ನು ನೋಡುವುದು, ತುಂಬ ವಿಷಯಗಳನ್ನು ತಿಳಿಯಪಡಿಸಸಾಧ್ಯವಿದೆ.a
ಭಾವೀ ಅತ್ತೆಮಾವಂದಿರೊಂದಿಗೂ ಸಮಯವನ್ನು ಕಳೆಯತಕ್ಕದ್ದು. ಅವರೊಂದಿಗೆ ಒಂದು ಒಳ್ಳೆಯ ಸಂಬಂಧವನ್ನು ಇಟ್ಟಕೊಳ್ಳಲು ಪ್ರಯತ್ನಿಸಿರಿ. ಒಂದುವೇಳೆ ನೀವು ವಿವಾಹಮಾಡಿಕೊಳ್ಳುವಲ್ಲಿ, ಅವರೇ ನಿಮ್ಮ ಕುಟುಂಬವಾಗಿ ಪರಿಣಮಿಸುತ್ತಾರೆ. ನಿಮಗೆ ಅವರ ಪರಿಚಯವಿದೆಯೆ? ನೀವು ಅವರೊಂದಿಗೆ ಹೊಂದಿಕೊಂಡು ಹೋಗುತ್ತೀರೊ? ಜೊಯೆನ್ ಸಲಹೆ ನೀಡುವುದು: “ಸಾಧ್ಯವಿರುವಲ್ಲಿ, ಎರಡೂ ಕುಟುಂಬಗಳು ಭೇಟಿಯಾಗುವುದು ಒಳಿತಾಗಿದೆ.” ಟೋನೀ ಇನ್ನೂ ಮುಂದುವರಿಸುತ್ತಾ ಹೇಳಿದ್ದು: “ನಿಮ್ಮ ಗೆಳತಿಯು ಅವಳ ಸ್ವಂತ ಕುಟುಂಬದೊಂದಿಗೆ ಹೇಗೆ ವ್ಯವಹರಿಸುತ್ತಾಳೋ ಅದೇ ರೀತಿ ನಿಮ್ಮೊಂದಿಗೂ ವ್ಯವಹರಿಸುವಳು.”
ನೀವು ಮುಖಾಮುಖಿಯಾಗಿ ಪ್ರಣಯಾಚರಣೆ ನಡೆಸಲಿ ಅಥವಾ ಫೋನ್ ಹಾಗೂ ಪತ್ರದ ಮೂಲಕ ನಡೆಸಲಿ, ಗಡಿಬಿಡಿಯಿಂದ ನಿರ್ಣಯಗಳನ್ನು ಮಾಡಬೇಡಿ. (ಜ್ಞಾನೋಕ್ತಿ 21:5) ನೀವಿಬ್ಬರೂ ವಿವಾಹವಾಗುವ ಯೋಜನೆಯು ಸಫಲವಾಗುವುದಿಲ್ಲ ಎಂದು ನಿಮಗೆ ಸ್ಪಷ್ಟವಾಗಿ ಗೊತ್ತಾಗುವಲ್ಲಿ, ಪ್ರಣಯಾಚರಣೆಯನ್ನು ನಿಲ್ಲಿಸುವುದರ ಬಗ್ಗೆ ಮಾತಾಡುವುದು ವಿವೇಕಯುತವಾದ ಮಾರ್ಗವಾಗಿರುವುದು. (ಜ್ಞಾನೋಕ್ತಿ 22:3) ಆದರೂ, ಬಿಚ್ಚುಮನಸ್ಸಿನ, ಪ್ರಾಮಾಣಿಕ ಸಂವಾದವನ್ನು ನಡೆಸಲು ತುಂಬ ಹೆಚ್ಚು ಸಮಯವು ಹಿಡಿಯಬಹುದು.
ದೂರದಿಂದ ಪ್ರಣಯಾಚರಣೆ ನಡೆಸುವುದು ತುಂಬ ಕಷ್ಟಕರವಾಗಿರಸಾಧ್ಯವಿದೆ, ಆದರೆ ಅದು ಪ್ರತಿಫಲದಾಯಕವೂ ಆಗಿರಬಹುದು. ಏನೇ ಆಗಲಿ ಇದು ಒಂದು ಗಂಭೀರವಾದ ವಿಷಯವಾಗಿದೆ. ನಿಮ್ಮ ಸನ್ನಿವೇಶಕ್ಕನುಗುಣವಾಗಿ ಕಾರ್ಯನಡಿಸಿರಿ. ಪರಸ್ಪರ ಅರ್ಥಮಾಡಿಕೊಳ್ಳಿರಿ. ತದನಂತರ, ಒಂದುವೇಳೆ ನೀವು ವಿವಾಹವಾಗಲು ನಿರ್ಧರಿಸುವಲ್ಲಿ, ನಿಮ್ಮ ಪ್ರಣಯಾಚರಣೆಯು ವಿಷಾದಪಡುವ ಒಂದು ಸಮಯವಾಗಿರುವುದಿಲ್ಲ, ಬದಲಿಗೆ ನೀವು ಅಮೂಲ್ಯವಾಗಿ ಪರಿಗಣಿಸುವ ಒಂದು ಸಮಯವಾಗಿರುವುದು.
[ಅಧ್ಯಯನ ಪ್ರಶ್ನೆಗಳು]
a ಪ್ರಣಯಾಚರಣೆಯ ಕುರಿತಾದ ಇನ್ನೂ ಹೆಚ್ಚಿನ ಮಾಹಿತಿಗಾಗಿ, ಯುವ ಜನರ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳು ಎಂಬ ಪುಸ್ತಕದ 255-60ನೆಯ ಪುಟಗಳನ್ನು ನೋಡಿರಿ. ಇದು ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟಿದೆ.
[ಪುಟ 36 ರಲ್ಲಿರುವ ಚಿತ್ರ]
ನೀವು ಸಂಬಂಧವನ್ನು ಆರಂಭಿಸುವ ಮೊದಲೇ, ವಿವಾಹ ಸಂಗಾತಿಯ ಗುರಿಗಳು, ಮಕ್ಕಳು, ಮತ್ತು ಆರ್ಥಿಕ ವಿಚಾರಗಳ ಬಗ್ಗೆ ಚರ್ಚಿಸಲು ಮರೆಯದಿರಿ